ಬೈಬಲ್ ಪುಸ್ತಕ ನಂಬರ್ 19—ಕೀರ್ತನೆಗಳು
ಲೇಖಕರು: ದಾವೀದ ಮತ್ತು ಇತರರು
ಬರೆಯಲ್ಪಟ್ಟ ಸ್ಥಳ: ಅನಿಶ್ಚಿತ
ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 460
ಕೀರ್ತನೆಗಳು ಪುಸ್ತಕವು ಪುರಾತನ ಕಾಲದಲ್ಲಿ ಯೆಹೋವನ ಸತ್ಯಾರಾಧಕರಿಗಿದ್ದ ಪ್ರೇರಿತ ಗೀತಪುಸ್ತಕವಾಗಿತ್ತು. ಈ ಪುಸ್ತಕವು 150 ಪವಿತ್ರ ಗೀತೆಗಳು ಇಲ್ಲವೆ ಕೀರ್ತನೆಗಳ ಸಂಗ್ರಹವಾಗಿದೆ. ಅವು ಸ್ವರಪ್ರಸ್ತಾರಕ್ಕನುಗುಣವಾಗಿ ರಚಿಸಲ್ಪಟ್ಟು, ಯೆರೂಸಲೇಮಿನಲ್ಲಿದ್ದ ಆಲಯದಲ್ಲಿ ಯೆಹೋವ ದೇವರ ಸಾರ್ವಜನಿಕಾರಾಧನೆಗಾಗಿ ಏರ್ಪಡಿಸಲ್ಪಟ್ಟಿದ್ದವು. ಈ ಕೀರ್ತನೆಗಳು ಯೆಹೋವನಿಗೆ ಹಾಡಲ್ಪಡುತ್ತಿದ್ದ ಸ್ತುತಿಗೀತೆಗಳಾಗಿವೆ ಮಾತ್ರವಲ್ಲ, ಅವುಗಳಲ್ಲಿ ಕರುಣೆ ಮತ್ತು ಸಹಾಯಕ್ಕಾಗಿರುವ ಪ್ರಾರ್ಥನಾ ಕೋರಿಕೆಗಳೂ ಹಾಗೂ ಭರವಸೆ ಮತ್ತು ನೆಚ್ಚಿಕೆಯ ಅಭಿವ್ಯಕ್ತಿಗಳೂ ಒಳಗೂಡಿವೆ. ಅವು ಉಪಕಾರಸ್ತುತಿ, ಶ್ಲಾಘನೆ ಮತ್ತು ಮಹಾ ಇಲ್ಲವೆ ಪರಮಹರ್ಷದ ಉದ್ಗಾರಗಳಿಂದ ತುಂಬಿತುಳುಕುತ್ತವೆ. ಕೆಲವು ಕೀರ್ತನೆಗಳು, ಯೆಹೋವನ ಪ್ರೀತಿಪೂರ್ವಕ ದಯೆ ಮತ್ತು ಮಹಾಕಾರ್ಯಗಳನ್ನು ಪರಿಗಣಿಸುವ ಚರಿತ್ರೆಯ ಮರುಸಮೀಕ್ಷೆಗಳಾಗಿವೆ. ಅವುಗಳಲ್ಲಿ ಪ್ರವಾದನೆಗಳು ತುಂಬಿಕೊಂಡಿದ್ದು, ಅನೇಕ ಪ್ರವಾದನೆಗಳು ಗಮನಾರ್ಹ ರೀತಿಯಲ್ಲಿ ನೆರವೇರಿವೆ. ಅವುಗಳಲ್ಲಿ ಪ್ರಯೋಜನಕರವೂ ಭಕ್ತಿವರ್ಧಕವೂ ಆದ ಹೆಚ್ಚು ಸೂಚನೆಗಳಿವೆ ಹಾಗೂ ಓದುಗರನ್ನು ಹೃದಯಾಂತರಾಳದಿಂದ ಹುರಿದುಂಬಿಸುವ ಭವ್ಯ ಭಾಷೆ ಮತ್ತು ಆಲಂಕಾರಿಕ ಚಿತ್ರಣಗಳಿಂದ ಅವು ರಚಿತವಾಗಿವೆ. ಕೀರ್ತನೆಗಳು ಸೊಗಸಾಗಿ ಸಿದ್ಧಮಾಡಿ, ನಮ್ಮ ಮುಂದೆ ಮನಸೆಳೆಯುವಂತೆ ಅಣಿಗೊಳಿಸಲಾಗಿರುವ ಆಧ್ಯಾತ್ಮಿಕ ಭೂರಿ ಭೋಜನವಾಗಿದೆ.
2 ಈ ಪುಸ್ತಕದ ಶೀರ್ಷಿಕೆಯ ಮಹತ್ವಾರ್ಥವೇನು ಮತ್ತು ಅದನ್ನು ಯಾರು ಬರೆದರು? ಹೀಬ್ರು ಬೈಬಲಿನಲ್ಲಿ ಈ ಪುಸ್ತಕವನ್ನು ಸೀಫರ್ ಟೆಹಿಲಿಮ್ ಅಂದರೆ “ಸ್ತುತಿಗಳ ಪುಸ್ತಕ” ಅಥವಾ ಕೇವಲ ಟೆಹಿಲಿಮ್ ಅಂದರೆ “ಸ್ತುತಿಗಳು” ಎಂದು ಕರೆಯಲಾಗಿದೆ. ಇದು 145ನೆಯ ಕೀರ್ತನೆಯ ಶಿರೋನಾಮೆಯಲ್ಲಿ ಕಂಡುಬರುವ ಟೆಹಿಲಾ, ಅಂದರೆ “ಸ್ತುತಿ” ಅಥವಾ “ಸ್ತುತಿಗೀತೆ” ಎಂಬುದರ ಬಹುವಚನವಾಗಿದೆ. ಈ ಪುಸ್ತಕವು ಯೆಹೋವನ ಸ್ತುತಿಯನ್ನು ಎತ್ತಿತೋರಿಸುವುದರಿಂದಾಗಿ ಈ “ಸ್ತುತಿಗಳು” ಎಂಬ ಹೆಸರು ಅತಿ ಸೂಕ್ತವಾದುದಾಗಿದೆ. ಇಂಗ್ಲಿಷ್ ಶೀರ್ಷಿಕೆಯಾದ “ಸಾಮ್ಸ್” (ಕೀರ್ತನೆಗಳು) ಎಂಬುದು, ಗ್ರೀಕ್ ಸೆಪ್ಟ್ಯುಅಜಿಂಟ್ ಉಪಯೋಗಿಸಿದ ಸಾಲ್ಮಾಯ್ ಎಂಬ ಪದದಿಂದ ಬರುತ್ತದೆ. ಈ ಪದವು, ವಾದ್ಯೋಪಕರಣಗಳ ಜೊತೆಯಾಗಿ ಹಾಡಲ್ಪಡುವ ಗೀತೆಗಳನ್ನು ಸೂಚಿಸುತ್ತದೆ. ಈ ಪದವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಲೂಕ 20:42 ಮತ್ತು ಅಪೊಸ್ತಲರ ಕೃತ್ಯಗಳು 1:20 ಈ ಮೊದಲಾದ ಅನೇಕ ಕಡೆಗಳಲ್ಲಿ ಕಾಣುತ್ತೇವೆ. ಒಂದು ಕೀರ್ತನೆಯು, ದೇವರ ಸ್ತುತಿ ಮತ್ತು ಆರಾಧನೆಗಾಗಿ ಉಪಯೋಗಿಸಲ್ಪಡುವ ಒಂದು ಪವಿತ್ರ ಗೀತೆ ಅಥವಾ ಕವಿತೆಯಾಗಿದೆ.
3 ಅನೇಕ ಕೀರ್ತನೆಗಳಿಗೆ ಶೀರ್ಷಿಕೆ ಅಥವಾ ಶಿರೋನಾಮೆಗಳಿವೆ. ಅನೇಕವೇಳೆ ಇವು ಲೇಖಕನ ಹೆಸರನ್ನು ತಿಳಿಸುತ್ತವೆ. ಎಪ್ಪತ್ತಮೂರು ಶೀರ್ಷಿಕೆಗಳು ‘ಇಸ್ರಾಯೇಲಿನ ರಮ್ಯವಾದ ಕೀರ್ತನೆಗಾರನಾದ’ ದಾವೀದನ ಹೆಸರನ್ನು ಹೊಂದಿವೆ. (2 ಸಮು. 23:1, NIBV) ಕೀರ್ತನೆ 2, 72 ಮತ್ತು 95 ಸಹ ದಾವೀದನು ಬರೆದಿರುವುದರಲ್ಲಿ ಸಂದೇಹವಿಲ್ಲ. (ಅ. ಕೃತ್ಯಗಳು 4:25; ಕೀರ್ತನೆ 72:20 ಮತ್ತು ಇಬ್ರಿಯ 4:7ನ್ನು ನೋಡಿ.) ಇದಲ್ಲದೆ, ಕೀರ್ತನೆಗಳು 10 ಮತ್ತು 71, ಅನುಕ್ರಮವಾಗಿ ಕೀರ್ತನೆಗಳು 9 ಮತ್ತು 70ನ್ನು ಮುಂದುವರಿಸುವಂತೆ ಕಾಣುವುದರಿಂದ ಅವನ್ನೂ ದಾವೀದನು ಬರೆದನೆಂದು ಹೇಳಬಹುದು. ಹನ್ನೆರಡು ಕೀರ್ತನೆಗಳು ಆಸಾಫನವು ಎನ್ನಲಾಗುತ್ತದೆ. ಇವು ಆಸಾಫನ ಮನೆತನವನ್ನು ಸೂಚಿಸುತ್ತದೆಂಬುದು ವ್ಯಕ್ತ, ಏಕೆಂದರೆ ಇವುಗಳಲ್ಲಿ ಕೆಲವು ಆಸಾಫನ ದಿನಗಳ ತರುವಾಯ ನಡೆದ ಘಟನೆಗಳ ಕುರಿತು ಹೇಳುತ್ತವೆ. (ಕೀರ್ತ. 79; 80; 1 ಪೂರ್ವ. 16:4, 5, 7; ಎಜ್ರ 2:41) ಹನ್ನೊಂದು ಕೀರ್ತನೆಗಳು ಕೋರಹನ ಪುತ್ರರದ್ದು ಎಂದು ನೇರವಾಗಿ ಹೇಳಲಾಗಿದೆ. (1 ಪೂರ್ವ. 6:31-38) 43ನೇ ಕೀರ್ತನೆಯು 42ನೇ ಕೀರ್ತನೆಯನ್ನು ಮುಂದುವರಿಸುತ್ತಿರುವಂತೆ ಕಂಡುಬರುವುದರಿಂದ ಅದನ್ನೂ ಕೋರಹನ ಪುತ್ರರು ಬರೆದರು ಎಂದು ಹೇಳಬಹುದು. ಕೀರ್ತನೆ 88ರ ಶಿರೋನಾಮೆಯು, ‘ಕೋರಹೀಯರು’ ಅಂದರೆ ಕೋರಹನ ಪುತ್ರರು ಬರೆದ ಕೀರ್ತನೆ ಎಂದು ಹೇಳುವುದಲ್ಲದೆ, ಹೇಮಾನನ ಪದ್ಯವೆಂದೂ ಹೇಳುತ್ತದೆ ಮತ್ತು ಕೀರ್ತನೆ 89 ಏತಾನನನ್ನು ಲೇಖಕನನ್ನಾಗಿ ಹೆಸರಿಸುತ್ತದೆ. ಕೀರ್ತನೆ 90 ಮೋಶೆಯದ್ದು ಎಂದು ಹೇಳಲಾಗಿದೆ ಮತ್ತು ಕೀರ್ತನೆ 91 ಸಹ ಅವನದ್ದೇ ಆಗಿರಬಹುದು. ಕೀರ್ತನೆ 127 ಸೊಲೊಮೋನನದ್ದು. ಹೀಗೆ, ಕೀರ್ತನೆಗಳಲ್ಲಿ ಮೂರರಲ್ಲಿ ಎರಡಕ್ಕೂ ಹೆಚ್ಚು ಭಾಗಗಳು ವಿವಿಧ ಲೇಖಕರಿಂದ ಬರೆಯಲ್ಪಟ್ಟವು ಎಂದು ಹೇಳಲಾಗುತ್ತದೆ.
4 ಕೀರ್ತನೆಗಳ ಪುಸ್ತಕವು ಬೈಬಲಿನ ಪುಸ್ತಕಗಳಲ್ಲಿ ಅತಿ ದೊಡ್ಡ ಪುಸ್ತಕ. ಕೀರ್ತನೆಗಳು 90, 126 ಮತ್ತು 137 ತೋರಿಸುವಂತೆ ಅದು ದೀರ್ಘಕಾಲದಿಂದ, ಅಂದರೆ ಕಡಮೆಪಕ್ಷ ಮೋಶೆ ಬರೆದ ಸಮಯದಿಂದ (ಸಾ.ಶ.ಪೂ. 1513-1473) ಹಿಡಿದು ಯೆಹೂದ್ಯರು ಬಾಬೆಲಿನಿಂದ ಬಿಡುಗಡೆಯಾಗಿ ಪುನಸ್ಸ್ಥಾಪನೆಯಾದ ಬಳಿಕದ ವರೆಗೆ ಮತ್ತು ಪ್ರಾಯಶಃ ಎಜ್ರನ ದಿನಗಳ (ಸಾ.ಶ.ಪೂ. 537-ಸುಮಾರು 460) ವರೆಗೆ ಬರವಣಿಗೆಯಲ್ಲಿತ್ತು. ಹೀಗೆ, ಸುಮಾರು ಒಂದು ಸಾವಿರ ವರುಷಗಳಷ್ಟು ದೀರ್ಘಕಾಲವನ್ನು ಈ ಬರವಣಿಗೆ ಆವರಿಸಿತೆಂದು ತಿಳಿದುಬರುತ್ತದೆ. ಆದರೆ ಈ ಪುಸ್ತಕದಲ್ಲಿ ಅಡಕವಾಗಿರುವ ವಿಷಯಗಳು ಆವರಿಸುವ ಸಮಯ ಇನ್ನೂ ಹೆಚ್ಚು ಅಧಿಕ. ಅದು ಸೃಷ್ಟಿಯ ಸಮಯದಿಂದ ಆರಂಭಗೊಂಡು ಕೊನೆಯ ಕೀರ್ತನೆ ರಚಿಸಲ್ಪಡುವ ವರೆಗೆ ಯೆಹೋವನು ತನ್ನ ಸೇವಕರೊಂದಿಗೆ ವ್ಯವಹರಿಸಿದ್ದರ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನಿರೂಪಿಸುತ್ತದೆ.
5 ಕೀರ್ತನೆಗಳ ಪುಸ್ತಕವು ವ್ಯವಸ್ಥಿತ ಕ್ರಮವನ್ನು ಪ್ರತಿಬಿಂಬಿಸುತ್ತದೆ. ದಾವೀದನು ತಾನೇ ಹೀಗೆ ಹೇಳಿದನು: “ನನ್ನ ಅರಸನಾದ ದೇವರು ತನ್ನ ಪರಿಶುದ್ಧಾಲಯಕ್ಕೆ ಮೆರವಣಿಗೆಯಾಗಿ ಚಿತ್ತೈಸುತ್ತಾನೆ. ಮುಂಗಡೆಯಲ್ಲಿ ಹಾಡುವವರೂ ಹಿಂಗಡೆಯಲ್ಲಿ ವಾದ್ಯಬಾರಿಸುವವರೂ ಸುತ್ತಲು ದಮ್ಮಡಿಬಡಿಯುವ ಸ್ತ್ರೀಯರೂ ಹೋಗುತ್ತಾ—ಇಸ್ರಾಯೇಲ್ಸಂಭವರೇ, ಸಮ್ಮೇಳವಾಗಿ ದೇವನಾದ [ಯೆಹೋವನನ್ನು] ಕೊಂಡಾಡಿರಿ ಎಂದು ಹಾಡುತ್ತಾರೆ.” (ಕೀರ್ತ. 68:24-26) ಇದು, ಶಿರೋನಾಮೆಗಳಲ್ಲಿ ‘ಪ್ರಧಾನಗಾಯಕನಿಗೆ’ ಎಂದು ಪದೇ ಪದೇ ಬರುವ ಪದವು ಹಾಗೂ ಅನೇಕ ಕಾವ್ಯಸಂಬಂಧವಾದ ಮತ್ತು ಸಂಗೀತಸಂಬಂಧವಾದ ಪದಗಳು ಏಕೆ ಕಂಡುಬರುತ್ತವೆಂಬುದಕ್ಕೆ ಕಾರಣವನ್ನು ಕೊಡುತ್ತದೆ. ಕೆಲವು ಶಿರೋನಾಮೆಗಳು ಆ ಕೀರ್ತನೆಯ ಉಪಯೋಗ ಅಥವಾ ಉದ್ದೇಶವನ್ನು ತಿಳಿಸುತ್ತವೆ ಇಲ್ಲವೆ ಸಾಂಗೀತಕ ಮಾಹಿತಿಯನ್ನು ಒದಗಿಸುತ್ತವೆ. (ಕೀರ್ತನೆಗಳು 6, 30, 38, 60, 88, 102 ಮತ್ತು 120ರ ಶಿರೋನಾಮೆಗಳನ್ನು ನೋಡಿ.) ದಾವೀದನ ಕೀರ್ತನೆಗಳಲ್ಲಿ, 18 ಮತ್ತು 51ರಂತಹ ಕಡಮೆಪಕ್ಷ 13 ಕೀರ್ತನೆಗಳಲ್ಲಿ, ಅವುಗಳ ರಚನೆಯನ್ನು ಪ್ರಚೋದಿಸಿದಂತಹ ಘಟನೆಗಳನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ. ಕೀರ್ತನೆಗಳಲ್ಲಿ ಮೂವತ್ತನಾಲ್ಕು ಕೀರ್ತನೆಗಳು ಶಿರೋನಾಮೆರಹಿತವಾಗಿವೆ. ಮುಖ್ಯ ಗ್ರಂಥಪಾಠದಲ್ಲಿ 71 ಬಾರಿ ಬರುವ “ಸೆಲಾ” ಎಂಬ ಚಿಕ್ಕ ಪದವು ಸಾಮಾನ್ಯವಾಗಿ ಸಂಗೀತ ಅಥವಾ ಪಠನಕ್ಕಿರುವ ತಾಂತ್ರಿಕ ಪದವೆಂದು ಅಭಿಪ್ರಯಿಸಲಾಗುತ್ತದೆ. ಆದರೂ ಅದರ ನಿಜಾರ್ಥವು ಅಜ್ಞಾತವಾಗಿದೆ. ಇದು, ಹಾಡುವಾಗ ಅಥವಾ ಹಾಡು ಮತ್ತು ವಾದ್ಯೋಪಕರಣ ಸಂಗೀತ ಇವೆರಡರಲ್ಲಿಯೂ ಮೌನ ಧ್ಯಾನಕ್ಕಾಗಿರುವ ವಿರಾಮವನ್ನು ಸೂಚಿಸುತ್ತದೆಂದು ಕೆಲವರು ಅಭಿಪ್ರಯಿಸುತ್ತಾರೆ. ಈ ಕಾರಣದಿಂದ, ಓದುವಾಗ ಇದನ್ನು ಉಚ್ಚರಿಸಬೇಕೆಂದಿಲ್ಲ.
6 ಪುರಾತನ ಕಾಲಗಳಿಂದ ಕೀರ್ತನೆಗಳ ಪುಸ್ತಕವನ್ನು ಈ ಕೆಳಗಿನಂತೆ 5 ಪುಸ್ತಕಗಳು ಇಲ್ಲವೆ ಸಂಪುಟಗಳಾಗಿ ವಿಭಾಗಿಸಲಾಗಿದೆ: (1) ಕೀರ್ತನೆಗಳು 1-41; (2) ಕೀರ್ತನೆಗಳು 42-72; (3) ಕೀರ್ತನೆಗಳು 73-89; (4) ಕೀರ್ತನೆಗಳು 90-106; (5) ಕೀರ್ತನೆಗಳು 107-150. ಈ ಗೀತೆಗಳ ಪ್ರಥಮ ಸಂಗ್ರಹವನ್ನು ದಾವೀದನು ಮಾಡಿರುವಂತೆ ಕಾಣುತ್ತದೆ. ಮತ್ತು ಯಾಜಕನೂ ‘ಮೋಶೆಯ ಧರ್ಮಶಾಸ್ತ್ರದಲ್ಲಿ ಪಾರಂಗತ ಶಾಸ್ತ್ರಿಯೂ’ ಆಗಿದ್ದ ಎಜ್ರನು ಕೀರ್ತನೆಗಳ ಪುಸ್ತಕವನ್ನು ಅದರ ಅಂತಿಮ ರೂಪದಲ್ಲಿ ಏರ್ಪಡಿಸಲು ಯೆಹೋವನಿಂದ ಉಪಯೋಗಿಸಲ್ಪಟ್ಟನೆಂದು ವ್ಯಕ್ತವಾಗುತ್ತದೆ.—ಎಜ್ರ 7:6.
7 ಈ ಸಂಗ್ರಹದ ಪ್ರಗತಿಪರ ಬೆಳವಣಿಗೆಯು, ವಿವಿಧ ವಿಭಾಗಗಳಲ್ಲಿ ಕೆಲವು ಕೀರ್ತನೆಗಳು ಏಕೆ ತಿರುಗಿತಿರುಗಿ ಬರುತ್ತವೆ ಎಂಬುದನ್ನು ವಿವರಿಸಬಹುದು. ಉದಾಹರಣೆಗೆ, ಕೀರ್ತನೆಗಳು 14 ಮತ್ತು 53; 40:13-17 ಮತ್ತು 70; 57:7-11 ಮತ್ತು 108:1-5. ಕೀರ್ತನೆಗಳ ಐದು ವಿಭಾಗಗಳಲ್ಲಿ ಪ್ರತಿಯೊಂದು ವಿಭಾಗವು ಯೆಹೋವನಿಗಾಗಿರುವ ಸ್ತುತಿವಾಕ್ಯದೊಂದಿಗೆ ಅಂತ್ಯಗೊಳ್ಳುತ್ತದೆ. ಈ ವಿಭಾಗಗಳ ನಾಲ್ಕು ಸ್ತುತಿವಾಕ್ಯಗಳು ಜನರು ಪ್ರತಿಕ್ರಿಯೆಯಲ್ಲಿ ಹೇಳುವ ಮಾತುಗಳಾಗಿವೆ ಮತ್ತು ಕೊನೆಯದ್ದು ಇಡೀ 150ನೆಯ ಕೀರ್ತನೆ ಆಗಿದೆ.—ಕೀರ್ತ. 41:13, NW ಪಾದಟಿಪ್ಪಣಿ.
8 ಒಂಬತ್ತು ಕೀರ್ತನೆಗಳಲ್ಲಿ ಸಂಗೀತರಚನೆಯ ಒಂದು ಅತಿ ವಿಶೇಷ ಶೈಲಿಯನ್ನು ಬಳಸಲಾಗಿದೆ; ಅದರ ರಚನಾಕ್ರಮವು ಅಕ್ಷರಮಾಲೆಯ ಕ್ರಮಾನುಸಾರವಾಗಿ ಇರುವುದರಿಂದ ಅದನ್ನು ಪದ್ಯಬಂಧವೆಂದು ಕರೆಯಲಾಗುತ್ತದೆ. (ಕೀರ್ತನೆ 9, 10, 25, 34, 37, 111, 112, 119 ಮತ್ತು 145) ಈ ರಚನೆಯಲ್ಲಿ ಪ್ರಥಮ ಶ್ಲೋಕದ ಪ್ರಥಮ ಸಾಲು ಅಥವಾ ಸಾಲುಗಳು ಹೀಬ್ರು ಅಕ್ಷರಮಾಲೆಯ ಪ್ರಥಮಾಕ್ಷರವಾದ ಆಲೆಫ್ (א), ಮುಂದಿನ ಸಾಲು(ಗಳು) ಎರಡನೆಯ ಅಕ್ಷರವಾದ ಬೆಹ್ತ್ (ב), ಹೀಗೆ ಹೀಬ್ರು ಅಕ್ಷರಮಾಲೆಯ ಎಲ್ಲ ಅಥವಾ ಹೆಚ್ಚುಕಡಮೆ ಎಲ್ಲ ಅಕ್ಷರಗಳಿಂದ ಆರಂಭಗೊಳ್ಳುತ್ತದೆ. ಇದು ಜ್ಞಾಪಿಸಿಕೊಳ್ಳಲಿಕ್ಕಾಗಿ ಒಂದು ಸಹಾಯಕವಾಗಿದ್ದಿರಬಹುದು. ಏಕೆಂದರೆ ಯೋಚಿಸಿರಿ, ಆಲಯದ ಗಾಯಕರಿಗೆ ಕೀರ್ತನೆ 119ರಷ್ಟು ಉದ್ದದ ಗೀತೆಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಅಗತ್ಯವಿತ್ತು! ಆಸಕ್ತಿಕರವಾಗಿ, ಯೆಹೋವನ ಹೆಸರಿನ ಒಂದು ಪದ್ಯಬಂಧವು ಕೀರ್ತನೆ 96:11ರಲ್ಲಿ ಕಂಡುಬರುತ್ತದೆ. ಹೀಬ್ರುವಿನಲ್ಲಿ ಈ ಸಾಲಿನ ಪ್ರಥಮಾಂಶದಲ್ಲಿ ನಾಲ್ಕು ಪದಗಳಿವೆ ಮತ್ತು ಈ ಪದಗಳ ಮೊದಲ ಅಕ್ಷರಗಳು, ಬಲದಿಂದ ಎಡಕ್ಕೆ ಓದುವಾಗ, ಚತುರಕ್ಷರಿಯ (ಟೆಟ್ರಗ್ರ್ಯಾಮಟಾನ್ನ) ನಾಲ್ಕು ಹೀಬ್ರು ಸ್ವರಾಕ್ಷರಗಳು YHWH (יהוה) ಆಗುತ್ತವೆ.
9 ಈ ಪವಿತ್ರ ಭಾವಗೀತಾ ಕವಿತೆಗಳು ಪ್ರಾಸವಿಲ್ಲದ ಹೀಬ್ರು ಪದ್ಯಪಂಕ್ತಿಯಲ್ಲಿ ಬರೆಯಲ್ಪಟ್ಟಿದ್ದು, ಅತಿಶಯಿಸಲಾಗದ ಸುಂದರ ಶೈಲಿಯನ್ನೂ ಛಂದೋಗತಿಯ ಯೋಚನಾಪ್ರವಾಹವನ್ನೂ ತೋರಿಸುತ್ತವೆ. ಅವು ನೇರವಾಗಿ ಮನಸ್ಸು ಮತ್ತು ಹೃದಯಗಳೊಂದಿಗೆ ಮಾತಾಡುತ್ತವೆ. ಅವು ಮನಸ್ಸಿನಲ್ಲಿ ಸುವ್ಯಕ್ತ ಚಿತ್ರಗಳನ್ನು ಮೂಡಿಸುತ್ತವೆ. ಅಲ್ಲಿರುವ ವಿಷಯ ಮತ್ತು ವ್ಯಕ್ತಪಡಿಸಿರುವ ಬಲವಾದ ಭಾವಾತಿರೇಕ—ಇವೆರಡರಲ್ಲಿಯೂ ಕಂಡುಬರುವ ಆಶ್ಚರ್ಯಕರವಾದ ವೈಶಾಲ್ಯ ಮತ್ತು ಗಹನತೆಗಳಿಗೆ ಭಾಗಶಃ ದಾವೀದನ ಅಸಾಮಾನ್ಯವಾದ ಜೀವನಾನುಭವಗಳು ಕಾರಣವಾಗಿದ್ದವು. ಈ ಅನುಭವಗಳೇ ಅನೇಕ ಕೀರ್ತನೆಗಳಿಗೆ ಹಿನ್ನೆಲೆಗಳಾಗಿದ್ದವು. ಒಬ್ಬ ಬಾಲಕ ಕುರುಬನಾಗಿ, ಗೊಲ್ಯಾತನ ಎದುರು ನಿಂತ ಒಂಟಿ ಯುದ್ಧವೀರನಾಗಿ, ಆಸ್ಥಾನ ಸಂಗೀತಗಾರನಾಗಿ, ನಿಷ್ಠರಾದ ಮಿತ್ರರ ಮತ್ತು ದ್ರೋಹಿಗಳ ಮಧ್ಯೆ ದೇಶಭ್ರಷ್ಟನಾಗಿ, ಅರಸನು ಮತ್ತು ವಿಜೇತನಾಗಿ, ಸ್ವಂತ ಕುಟುಂಬದಲ್ಲಿಯೇ ಒಡಕನ್ನು ಕಂಡ ಪ್ರೀತಿಯ ತಂದೆಯಾಗಿ, ಎರಡು ಬಾರಿ ಘೋರಪಾಪದ ದೆಸೆಯಿಂದಾದ ವೈಷಮ್ಯವನ್ನು ಅನುಭವಿಸಿದರೂ ಯೆಹೋವನ ಉತ್ಸಾಹಿ ಆರಾಧಕನೂ ಆತನ ಧರ್ಮಶಾಸ್ತ್ರವನ್ನು ಪ್ರೀತಿಸಿದವನೂ ಆಗಿ ಅವನಿಗಿದ್ದಷ್ಟು ವೈವಿಧ್ಯಭರಿತ ಜೀವನವನ್ನು ನಡೆಸಿದವರು ಕೆಲವರೇ ಸರಿ. ಇಂತಹ ಹಿನ್ನೆಲೆಯಿರುವಾಗ, ಕೀರ್ತನೆಗಳು ಪುಸ್ತಕದಲ್ಲಿ ಮಾನವ ಭಾವಗಳ ಪೂರ್ಣ ಶ್ರೇಣಿಯು ಕಂಡುಬರುವುದು ಆಶ್ಚರ್ಯವಲ್ಲ! ಇದರ ಶಕ್ತಿ ಮತ್ತು ಸೌಂದರ್ಯಕ್ಕೆ, ಹೀಬ್ರು ಕವಿತೆಗಳ ವೈಶಿಷ್ಟ್ಯವಾಗಿರುವ ಕಾವ್ಯಾತ್ಮಕ ಸಮಾಂತರತೆ ಮತ್ತು ವೈದೃಶ್ಯಗಳು ಇಂಬುಕೊಡುತ್ತವೆ.—ಕೀರ್ತ. 1:6; 22:20; 42:1; 121:3, 4.
10 ಯೆಹೋವನನ್ನು ಸ್ತುತಿಸುವ ಈ ಅತಿ ಹಳೆಯ ಗಾಯನಗಳ ವಿಶ್ವಾಸಾರ್ಹತೆಗೆ, ಅವು ಶಾಸ್ತ್ರಗಳ ಮಿಕ್ಕ ಭಾಗದೊಂದಿಗೆ ಪೂರ್ಣ ಸಾಮರಸ್ಯದಿಂದಿರುವುದು ದೊಡ್ಡ ರುಜುವಾತಾಗಿದೆ. ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಲೇಖಕರು ಅನೇಕಸಲ ಕೀರ್ತನೆ ಪುಸ್ತಕದಿಂದ ಉದ್ಧರಿಸಿದ್ದಾರೆ. (ಕೀರ್ತ. 5:9 [ರೋಮಾ. 3:13]; ಕೀರ್ತ. 10:7 [ರೋಮಾ. 3:14]; ಕೀರ್ತ. 24:1 [1 ಕೊರಿಂ. 10:26]; ಕೀರ್ತ. 50:14 [ಮತ್ತಾ. 5:33]; ಕೀರ್ತ. 78:24 [ಯೋಹಾ. 6:31]; ಕೀರ್ತ. 102:25-27 [ಇಬ್ರಿ. 1:10-12]; ಕೀರ್ತ. 112:9 [2 ಕೊರಿಂ. 9:9]) ದಾವೀದನು ತಾನೇ ತನ್ನ ಕೊನೆಯ ಕೀರ್ತನೆಯಲ್ಲಿ ಹೇಳಿದ್ದು: “ಯೆಹೋವನ ಆತ್ಮವು ನನ್ನಲ್ಲಿ ಉಸುರಿತು; ಆತನ ವಾಕ್ಯವು ನನ್ನ ಬಾಯಲ್ಲಿತ್ತು.” ಸಮುವೇಲನು ದಾವೀದನನ್ನು ಅಭಿಷೇಕಿಸಿದ ದಿನದಿಂದ ಇದೇ ಆತ್ಮವು ಅವನಲ್ಲಿ ಕಾರ್ಯನಡೆಸಿತ್ತು. (2 ಸಮು. 23:2; 1 ಸಮು. 16:13) ಇದಕ್ಕೆ ಸೇರಿಸಿ, ಅಪೊಸ್ತಲರೂ ಕೀರ್ತನೆಗಳಿಂದ ಉಲ್ಲೇಖಿಸಿದರು. ‘ಪವಿತ್ರಾತ್ಮ ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನದ’ ಬಗ್ಗೆ ಪೇತ್ರನು ಸೂಚಿಸಿ ಮಾತಾಡಿದನು ಮತ್ತು ಇಬ್ರಿಯ ಪುಸ್ತಕದ ಲೇಖಕನು ಅನೇಕಾವರ್ತಿ ಕೀರ್ತನೆಗಳಿಂದ ಉದ್ಧರಿಸಿ, ಅವು ದೇವರು ನುಡಿದ ಹೇಳಿಕೆಗಳೆಂದು ಸೂಚಿಸಿ ಮಾತಾಡಿದನು ಇಲ್ಲವೆ “ಪವಿತ್ರಾತ್ಮ ಹೇಳುವ ಪ್ರಕಾರ” ಎಂದು ಹೇಳುತ್ತಾ ಅವುಗಳನ್ನು ಪರಿಚಯಿಸಿದನು.—ಅ. ಕೃ. 1:16; 4:25; ಇಬ್ರಿ. 1:5-14; 3:7; 5:5, 6.
11 ವಿಶ್ವಾಸಾರ್ಹತೆಯ ಅತಿ ಬಲಾಢ್ಯವಾದ ಪುರಾವೆಗಾಗಿ, ಸತ್ತವರೊಳಗಿಂದ ಎದ್ದುಬಂದ ಕರ್ತನಾದ ಯೇಸು ತನ್ನ ಶಿಷ್ಯರಿಗೆ ಹೀಗೆ ಹೇಳಿದ್ದನ್ನು ನಾವು ಉಲ್ಲೇಖಿಸುತ್ತೇವೆ: “ನಾನು ಇನ್ನೂ ನಿಮ್ಮ ಸಂಗಡ ಇದ್ದಾಗ ಇದೆಲ್ಲಾ ನಿಮಗೆ ತಿಳಿಸಲಿಲ್ಲವೇ? . . . ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಕೀರ್ತನೆಗಳಲ್ಲಿಯೂ ಬರೆದಿರುವದೆಲ್ಲಾ ನೆರವೇರುವದು ಅಗತ್ಯವೆಂದು ನಿಮಗೆ ಹೇಳಲಿಲ್ಲವೇ.” ಯೇಸು ಅಲ್ಲಿ ಇಡೀ ಹೀಬ್ರು ಶಾಸ್ತ್ರವನ್ನು ಯೆಹೂದ್ಯರು ಆಯ್ದುಕೊಂಡಿದ್ದ ಮತ್ತು ಅವರಿಗೆ ಸುಜ್ಞಾತವಾಗಿದ್ದ ರೀತಿಯಲ್ಲಿ ವರ್ಗೀಕರಿಸಿದನು. ಅವನು ಕೀರ್ತನೆಗಳ ಬಗ್ಗೆ ತಿಳಿಸಿದಾಗ, ಅದು ಶಾಸ್ತ್ರಗಳ ಇಡೀ ಮೂರನೆಯ ಗುಂಪನ್ನು ಒಳಗೂಡಿಸಿತು ಮತ್ತು ಈ ಮೂರನೆಯ ಗುಂಪನ್ನು ಹ್ಯಾಗಿಯೋಗ್ರಫ (ಅಥವಾ ಪವಿತ್ರ ಬರಹಗಳು) ಎಂದು ಕರೆಯಲಾಗುತ್ತಿತ್ತು ಮತ್ತು ಅದರಲ್ಲಿ ಕೀರ್ತನೆಗಳು ಪ್ರಥಮ ಪುಸ್ತಕವಾಗಿತ್ತು. ಈ ಸಂಗತಿಯು, ಕೆಲವು ತಾಸುಗಳ ಮೊದಲು ಅವನು ಎಮ್ಮಾಹುವಿಗೆ ಹೋಗುತ್ತಿದ್ದ ಇಬ್ಬರಿಗೆ “ಸಮಸ್ತ ಗ್ರಂಥಗಳಲ್ಲಿ ತನ್ನ ವಿಷಯವಾಗಿರುವ ಸೂಚನೆಗಳ” ಬಗ್ಗೆ ವಿವರಿಸಿ ಹೇಳಿದ್ದರಿಂದ ದೃಢೀಕರಿಸಲ್ಪಡುತ್ತದೆ.—ಲೂಕ 24:27, 44.
ಪ್ರಯೋಜನಕರವೇಕೆ?
23 ಅವುಗಳ ಸೌಂದರ್ಯ ಮತ್ತು ಶೈಲಿಯ ಪರಿಪೂರ್ಣತೆಯ ಕಾರಣ ಬೈಬಲಿನ ಕೀರ್ತನೆಗಳನ್ನು ಯಾವುದೇ ಭಾಷೆಯ ಅತ್ಯಂತ ಮಹಾ ಸಾಹಿತ್ಯಕೃತಿಗಳ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿದೆ. ಆದರೂ, ಅವು ಕೇವಲ ಸಾಹಿತ್ಯ ಮಾತ್ರ ಆಗಿರುವುದಿಲ್ಲ. ಅವು ಸಕಲ ವಿಶ್ವದ ಪರಮಾಧಿಕಾರಿಯಾಗಿರುವ ಯೆಹೋವ ದೇವರು ತಾನೇ ಕೊಟ್ಟಿರುವ ಜೀವಂತ ಸಂದೇಶವಾಗಿವೆ. ಅವು ಬೈಬಲಿನ ಮೂಲ ಬೋಧನೆಗಳ ವಿಷಯದಲ್ಲಿ ಗಹನವಾದ ಒಳನೋಟವನ್ನು ಕೊಡುತ್ತಾ, ಪ್ರಪ್ರಥಮವಾಗಿ ಮತ್ತು ಪ್ರಧಾನವಾಗಿ ಬೈಬಲಿನ ಗ್ರಂಥಕರ್ತನಾದ ಯೆಹೋವನ ಕುರಿತು ಮಾತಾಡುತ್ತವೆ. ಆತನೇ ವಿಶ್ವ ಮತ್ತು ಅದರಲ್ಲಿರುವ ಸಮಸ್ತ ವಿಷಯಗಳ ಸೃಷ್ಟಿಕರ್ತನೆಂದು ಅವು ಸ್ಪಷ್ಟವಾಗಿ ತೋರಿಸುತ್ತವೆ. (8:3-9; 90:1, 2; 100:3; 104:1-5, 24; 139:14) ಕೀರ್ತನೆಗಳು ಪುಸ್ತಕದ ಮೂಲ ಬರಹಗಳಲ್ಲಿ ಯೆಹೋವನ ನಾಮವು 700 ಬಾರಿ ತೋರಿಬರುವುದರಿಂದ, ಅದು ಆ ನಾಮವನ್ನು ನಿಶ್ಚಯವಾಗಿಯೂ ಘನತೆಗೇರಿಸುತ್ತದೆ. ಇದಕ್ಕೆ ಕೂಡಿಕೆಯಾಗಿ, “ಯಾಹು” ಎಂಬ ಸಂಕ್ಷೇಪ ರೂಪವು 43 ಬಾರಿ ಕಂಡುಬರುತ್ತದೆ. ಹೀಗೆ ಒಟ್ಟಿಗೆ, ಯೆಹೋವನ ನಾಮವು ಪ್ರತಿ ಕೀರ್ತನೆಯಲ್ಲಿ ಸರಾಸರಿಯಾಗಿ ಸುಮಾರು 5 ಬಾರಿ ಹೇಳಲ್ಪಟ್ಟಿದೆ. ಇದಲ್ಲದೆ, ಸುಮಾರು 350 ಬಾರಿ, ಯೆಹೋವನನ್ನು ಎಲೋಹಿಮ್ ಅಥವಾ ದೇವರು ಎಂದು ಕರೆಯಲಾಗಿದೆ. ಅನೇಕ ಕೀರ್ತನೆಗಳಲ್ಲಿ ಯೆಹೋವನನ್ನು ‘ಪರಮಾಧಿಕಾರಿ ಪ್ರಭು’ ಎಂದು ಸೂಚಿಸುತ್ತಾ ಆತನ ಪರಮಪ್ರಧಾನ ಆಳ್ವಿಕೆಯನ್ನು ತೋರಿಸಲಾಗಿದೆ. (68:20; 69:6; 71:5; 73:28; 140:7; 141:8, NW) ಈ ವಚನಗಳಲ್ಲಿ ಕೆಲವೊಂದರಲ್ಲಿ ಕನ್ನಡ ಬೈಬಲ್ ಕೇವಲ ‘ಕರ್ತನು’ ಎಂಬ ಪದವನ್ನು ಕೊಟ್ಟಿದೆ.
24 ಕೀರ್ತನೆಗಳ ಪುಸ್ತಕದಲ್ಲಿ, ನಿತ್ಯನಾದ ದೇವರಿಗೆ ವೈದೃಶ್ಯವಾಗಿ, ಮರ್ತ್ಯ ಮಾನವನನ್ನು ಪಾಪದಲ್ಲಿ ಹುಟ್ಟಿದವನೂ ವಿಮೋಚಕನೊಬ್ಬನ ಅಗತ್ಯವುಳ್ಳವನೂ ಆಗಿ ಚಿತ್ರಿಸಲಾಗಿದೆ ಮತ್ತು ಅವನು ಸತ್ತು “ಮಣ್ಣಿಗೆ,” ಮಾನವಕುಲದ ಸಾಮಾನ್ಯ ಸಮಾಧಿಯಾದ ಷೀಓಲ್ಗೆ ಇಳಿದು ಹೋಗುತ್ತಾನೆಂದು ತೋರಿಸಲಾಗಿದೆ. (6:4, 5; 49:7-20; 51:5, 7; 89:48; 90:1-5; 115:17; 146:4) ಕೀರ್ತನೆಗಳ ಪುಸ್ತಕವು ಯೆಹೋವನ ಧರ್ಮಶಾಸ್ತ್ರಕ್ಕೆ ಕಿವಿಗೊಡುವ ಮತ್ತು ಆತನಲ್ಲಿ ಭರವಸೆಯಿಡುವ ಅಗತ್ಯವನ್ನು ಒತ್ತಿಹೇಳುತ್ತದೆ. (1:1, 2; 62:8; 65:5; 77:12; 115:11; 118:8; 119:97, 105, 165) ದುರಹಂಕಾರದ ಮತ್ತು “ಮರೆಯಾದ” ಪಾಪಗಳ ವಿಷಯದಲ್ಲಿ ಅದು ಎಚ್ಚರಿಸುತ್ತದೆ (19:12-14; 131:1) ಮತ್ತು ಪ್ರಾಮಾಣಿಕ ಹಾಗೂ ಆರೋಗ್ಯಕರವಾದ ಸಹವಾಸಗಳನ್ನು ಹೊಂದಿರುವಂತೆ ಪ್ರೋತ್ಸಾಹಿಸುತ್ತದೆ. (15:1-5; 26:5; 101:5) ಸುನಡತೆ ಯೆಹೋವನ ಒಪ್ಪಿಗೆಯನ್ನು ತರುತ್ತದೆಂದು ಅದು ತೋರಿಸುತ್ತದೆ. (34:13-15; 97:10) “ರಕ್ಷಣೆಯು ಯೆಹೋವನಿಂದಲೇ” ಎಂದು ಮತ್ತು ಆತನಿಗೆ ಭಯಪಡುವವರ “ಪ್ರಾಣವನ್ನು [ಆತನು] ಮರಣದಿಂದ ತಪ್ಪಿಸುವನು” ಎಂದು ಹೇಳುತ್ತಾ ಅದು ಉಜ್ವಲ ನಿರೀಕ್ಷೆಯನ್ನು ಎತ್ತಿಹಿಡಿಯುತ್ತದೆ. (3:8; 33:19) ಇದು ನಮ್ಮನ್ನು ಈಗ ಈ ಪುಸ್ತಕದ ಪ್ರವಾದಾನಾತ್ಮಕ ಅಂಶಕ್ಕೆ ತರುತ್ತದೆ.
25 ಕೀರ್ತನೆಗಳ ಪುಸ್ತಕವು ಕಾರ್ಯತಃ ‘ದಾವೀದನ ವಂಶದವನಾದ’ ಯೇಸು ಕ್ರಿಸ್ತನ, ಮತ್ತು ಯೆಹೋವನ ಅಭಿಷಿಕ್ತನೂ ಅರಸನೂ ಆಗಿ ಅವನು ವಹಿಸುವ ಪಾತ್ರದ ಕುರಿತಾದ ಪ್ರವಾದನೆಗಳಿಂದ ತುಂಬಿಕೊಂಡಿದೆ.a (ಮತ್ತಾ. 1:1) ಸಾ.ಶ. 33ರ ಪಂಚಾಶತ್ತಮ ದಿನದಂದು ಕ್ರೈಸ್ತ ಸಭೆ ಜನ್ಮತಾಳಿದಾಗ, ಈ ಪ್ರವಾದನೆಗಳ ನೆರವೇರಿಕೆಯ ಸಂಬಂಧದಲ್ಲಿ ಪವಿತ್ರಾತ್ಮವು ಅಪೊಸ್ತಲರಿಗೆ ಜ್ಞಾನೋದಯವನ್ನುಂಟುಮಾಡಿತು. ಅದೇ ದಿನದಂದು, ಪೇತ್ರನು ತನ್ನ ಪ್ರಸಿದ್ಧ ಭಾಷಣದ ಮುಖ್ಯ ವಿಷಯವನ್ನು ವಿಕಸಿಸಿದಾಗ ಅವನು ಹೆಚ್ಚುಕಡಮೆ ಕೀರ್ತನೆಗಳಿಂದಲೇ ಪದೇಪದೇ ಉಲ್ಲೇಖಿಸಿದನು. ಇದು “ನಜರೇತಿನ ಯೇಸು” ಎಂಬ ವ್ಯಕ್ತಿಯ ವಿಷಯದಲ್ಲಿ. ಅವನ ವಾದದ ಎರಡನೇ ಭಾಗವು ಹೆಚ್ಚುಕಡಮೆ ಪೂರ್ಣವಾಗಿ, ಯೇಸು ಕ್ರಿಸ್ತನೇ ಮಹಾ ದಾವೀದನೆಂದೂ ಯೆಹೋವನು ಅವನ ಜೀವವನ್ನು ಹೇಡೀಸ್ನಲ್ಲಿ ಬಿಟ್ಟುಬಿಡದೆ ಅವನನ್ನು ಸತ್ತವರೊಳಗಿಂದ ಎಬ್ಬಿಸುವನೆಂದೂ ರುಜುಪಡಿಸುವ ಕೀರ್ತನೆಗಳ ಉಲ್ಲೇಖಗಳ ಮೇಲೆ ಆಧರಿತವಾಗಿತ್ತು. “ದಾವೀದನು ಆಕಾಶಕ್ಕೆ ಏರಿ ಹೋಗಲಿಲ್ಲ,” ಆದರೆ ಅವನು ಕೀರ್ತನೆ 110:1ರಲ್ಲಿ ಮುಂತಿಳಿಸಿದಂತೆ ಅವನ ಒಡೆಯನು ಹೋದನು. ದಾವೀದನ ಒಡೆಯನಾರು? ಪೇತ್ರನು ಭಾಷಣದ ಪರಮಾವಧಿಯನ್ನು ತಲಪುತ್ತಾ, “ನೀವು [ಯಾತನಾ ಕಂಬಕ್ಕೆ] ಹಾಕಿಸಿದ ಈ ಯೇಸು” ಎಂದು ಶಕ್ತಿವತ್ತಾಗಿ ಉತ್ತರ ಕೊಟ್ಟನು.—ಅ. ಕೃ. 2:14-36; ಕೀರ್ತ. 16:8-11; 132:11.
26 ಕೀರ್ತನೆಗಳ ಮೇಲೆ ಆಧರಿತವಾಗಿದ್ದ ಪೇತ್ರನ ಭಾಷಣ ಪ್ರಯೋಜನಕರವಾಗಿತ್ತೊ? ಅದೇ ದಿನ ಕ್ರೈಸ್ತ ಸಭೆಗೆ ಸೇರಿಸಲ್ಪಟ್ಟ ಸುಮಾರು 3,000 ಜನರ ದೀಕ್ಷಾಸ್ನಾನವು ಅದು ನಿಜವಾಗಿಯೂ ಪ್ರಯೋಜನಕರವಾಗಿತ್ತೆಂದು ರುಜುಪಡಿಸುತ್ತದೆ.—ಅ. ಕೃ. 2:41.
27 ತರುವಾಯ ಸ್ವಲ್ಪದರಲ್ಲಿ, ಒಂದು ವಿಶೇಷ ಸಮಾಗಮದಲ್ಲಿ ಶಿಷ್ಯರು ಯೆಹೋವನಿಗೆ ಪ್ರಾರ್ಥನೆಯಲ್ಲಿ ಕೀರ್ತನೆ 2:1, 2ನ್ನು ಉಲ್ಲೇಖಿಸಿದರು. ಈ ಪ್ರವಾದನೆಯು, ದೇವರು ‘ಅಭಿಷೇಕಿಸಿದ ಪವಿತ್ರ ಸೇವಕನಾದ ಯೇಸುವಿಗೆ’ ಅಧಿಕಾರಿಗಳು ಸಂಯುಕ್ತ ವಿರೋಧವನ್ನು ತೋರಿಸಿದಾಗ ನೆರವೇರಿತು ಎಂದು ಅವರು ಹೇಳಿದರು. ಆಗ “ಅವರೆಲ್ಲರು ಪವಿತ್ರಾತ್ಮಭರಿತ”ರಾದರು ಎನ್ನುತ್ತದೆ ಆ ವೃತ್ತಾಂತ.—ಅ. ಕೃ. 4:23-31.
28 ಈಗ ಇಬ್ರಿಯರಿಗೆ ಬರೆದ ಪತ್ರಿಕೆಯನ್ನು ನೋಡಿರಿ. ಆರಂಭದ ಎರಡು ಅಧ್ಯಾಯಗಳಲ್ಲಿ ನಾವು, ಸ್ವರ್ಗದಲ್ಲಿ ಸಿಂಹಾಸನಾಸೀನನಾದ ದೇವರ ಪುತ್ರನಾಗಿ ಯೇಸು ದೇವದೂತರಿಗಿಂತ ಶ್ರೇಷ್ಠನಾಗಿರುವುದು ಹೇಗೆಂಬುದರ ಕುರಿತಾದ ಕೀರ್ತನೆಯ ಅನೇಕ ಉಲ್ಲೇಖಗಳನ್ನು ನೋಡುತ್ತೇವೆ. ಕೀರ್ತನೆ 22:22 ಮತ್ತು ಬೇರೆ ವಚನಗಳಿಂದ ಪೌಲನು, ಅಬ್ರಹಾಮನ ಸಂತತಿಯ ಭಾಗವಾಗಿರುವ ಮತ್ತು ‘ಪರಲೋಕಸ್ವಾಸ್ತ್ಯಕ್ಕಾಗಿ ಕರೆಯಲ್ಪಟ್ಟ’ ‘ಸಹೋದರರ’ ಸಭೆಯೊಂದು ಯೇಸುವಿಗೆ ಇದೆ ಎಂದು ತೋರಿಸುತ್ತಾನೆ. (ಇಬ್ರಿ. 2:10-13, 16; 3:1) ಬಳಿಕ, ಇಬ್ರಿಯ 6:20ರಿಂದ ಪ್ರಾರಂಭಿಸಿ, 7ನೆಯ ಅಧ್ಯಾಯವನ್ನು ಆವರಿಸುತ್ತ, ಅಪೊಸ್ತಲನು “ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿ” ಯೇಸುವಿಗಿರುವ ಇನ್ನೊಂದು ಸ್ಥಾನವನ್ನು ವಿವರಿಸುತ್ತಾನೆ. ಇದು ಕೀರ್ತನೆ 110:4ರಲ್ಲಿ ದೇವರು ಆಣೆಯಿಟ್ಟು ಮಾಡಿರುವ ವಾಗ್ದಾನವನ್ನು ಸೂಚಿಸುತ್ತದೆ. ಪೌಲನು ಯೇಸುವಿನ ಯಾಜಕತ್ವವು ಆರೋನನ ಯಾಜಕತ್ವಕ್ಕಿಂತ ಶ್ರೇಷ್ಠವಾಗಿದೆ ಎಂದು ರುಜುಪಡಿಸಲು ಈ ವಚನಕ್ಕೆ ಪದೇ ಪದೇ ಸೂಚಿಸುತ್ತಾನೆ. ಯೆಹೋವನ ಆಣೆಯ ನಿಮಿತ್ತ ಯೇಸು ಭೂಮಿಯಲ್ಲಲ್ಲ ಬದಲಿಗೆ ಸ್ವರ್ಗದಲ್ಲಿ ‘ನಿರಂತರವಾಗಿ ಯಾಜಕನಾಗಿರುವನು,’ ಅಂದರೆ ಅವನ ಯಾಜಕ ಸೇವೆಯ ಪ್ರಯೋಜನಗಳು ನಿರಂತರವಾಗಿರುವವು ಎಂದು ಪೌಲನು ವಿವರಿಸುತ್ತಾನೆ.—ಇಬ್ರಿ. 7:3, 15-18, 23-28.
29 ಇದಲ್ಲದೆ ಇಬ್ರಿಯ 10:5-10ರಲ್ಲಿ, ಯಾವುದು ಯೇಸುವಿನ ಸಂಬಂಧದಲ್ಲಿ ದೇವರ ಚಿತ್ತವಾಗಿತ್ತೊ ಆ ಯಜ್ಞಸಂಬಂಧಿತ ಜೀವನಪಥಕ್ಕಾಗಿ ಯೇಸುವಿಗಿದ್ದ ಉತ್ತಮ ಮೆಚ್ಚಿಕೆ ಮತ್ತು ಆ ಚಿತ್ತವನ್ನು ನೆರವೇರಿಸಲು ಅವನಿಗಿದ್ದ ದೃಢನಿರ್ಧಾರದ ಕುರಿತು ನಮಗೆ ತಿಳಿಸಲಾಗುತ್ತದೆ. ಇದು ಕೀರ್ತನೆ 40:6-8ರಲ್ಲಿ ಹೇಳಲ್ಪಟ್ಟಿರುವ ದಾವೀದನ ಮಾತುಗಳ ಮೇಲೆ ಆಧರಿತವಾಗಿದೆ. ಈ ದೇವಭಕ್ತಿಯ ಆದರ್ಶ ಮನೋಭಾವವು, ದೇವರ ಮೆಚ್ಚಿಕೆಯನ್ನು ಪಡೆಯಲಿಕ್ಕಾಗಿ ಆಲೋಚಿಸಿ ಅನುಕರಿಸಲು ನಮಗೆಲ್ಲರಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ.—ಕೀರ್ತನೆ 116:14-19ನ್ನು ಸಹ ನೋಡಿರಿ.
30 ವಧಸ್ತಂಭದ ಮೇಲೆ ಭಯಂಕರ ಯಾತನೆಯಲ್ಲಿ ಅಂತ್ಯಗೊಂಡ ಯೇಸುವಿನ ಆ ಜೀವನಪಥದ ಕುರಿತು ಕೀರ್ತನೆಗಳ ಪುಸ್ತಕದಲ್ಲಿ ಗಮನಾರ್ಹವಾದ ವಿವರಗಳೊಂದಿಗೆ ಮುಂತಿಳಿಸಲಾಗಿದೆ. ಅವನಿಗೆ ಹುಳಿ ದ್ರಾಕ್ಷಾರಸವನ್ನು ಕೊಡಲಾಗುವುದು, ಅವನ ಮೇಲಂಗಿಗಳಿಗೆ ಚೀಟು ಹಾಕಲಾಗುವುದು, ಅವನ ಕೈಗಳಿಗೆ ಮತ್ತು ಪಾದಗಳಿಗಾಗುವ ಕ್ರೂರ ಪ್ರಕ್ರಿಯೆ, ಅಪಹಾಸ್ಯ ಮತ್ತು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂಬ ವೇದನೆಯ ಕೂಗಿನಲ್ಲಿದ್ದ ಹೆಚ್ಚು ಕಟುವಾದ ಮಾನಸಿಕ ಸಂಕಟದ ಕುರಿತಾದ ವಿಷಯಗಳು ಇದರಲ್ಲಿ ಸೇರಿತ್ತು. (ಮತ್ತಾ. 27:34, 35, 43, 46; ಕೀರ್ತ. 22:1, 7, 8, 14-18; 69:20, 21) ಯೋಹಾನ 19:23-30 ಸೂಚಿಸುವಂತೆ, ಆ ಸಮಯದಲ್ಲಿಯೂ ಯೇಸು, ಈ ಶಾಸ್ತ್ರವಚನಗಳ ಪ್ರತಿಯೊಂದು ವಿವರವೂ ನೆರವೇರಬೇಕೆಂದು ತಿಳಿದವನಾಗಿ, ಕೀರ್ತನೆಗಳಿಂದ ತುಂಬ ಸಾಂತ್ವನ ಮತ್ತು ಮಾರ್ಗದರ್ಶನವನ್ನು ಪಡೆದುಕೊಂಡಿದ್ದಿರಲೇಬೇಕು. ಕೀರ್ತನೆಗಳ ಪುಸ್ತಕವು ತನ್ನ ಪುನರುತ್ಥಾನ ಮತ್ತು ಘನತೆಗೇರಿಸುವಿಕೆಯ ಕುರಿತು ಹೇಳಿದೆಯೆಂದೂ ಯೇಸುವಿಗೆ ತಿಳಿದಿತ್ತು. ತನ್ನ ಮರಣಕ್ಕೆ ಮುಂಚಿನ ರಾತ್ರಿಯಲ್ಲಿ ಅವನು ತನ್ನ ಅಪೊಸ್ತಲರೊಂದಿಗೆ “ಕೀರ್ತನೆಯನ್ನು” ಹಾಡುವುದರಲ್ಲಿ ಪ್ರಧಾನ ಪಾತ್ರವನ್ನು ವಹಿಸಿದಾಗ ಅವನ ಮನಸ್ಸಿನಲ್ಲಿ ಇಂತಹ ವಿಷಯಗಳಿದ್ದವೆಂಬುದರಲ್ಲಿ ಸಂದೇಹವಿಲ್ಲ.—ಮತ್ತಾ. 26:30.
31 ಹೀಗೆ ಕೀರ್ತನೆಗಳು, ಸ್ವರ್ಗೀಯ ಚೀಯೋನಿನಲ್ಲಿ ಈಗ ಅರಸನೂ ಯಾಜಕನೂ ಆಗಿ ಘನತೆಗೇರಿಸಲ್ಪಟ್ಟಿರುವ “ದಾವೀದನ ಕುಮಾರನು” ಕ್ರಿಸ್ತ ಯೇಸುವೆಂದು ಸ್ಪಷ್ಟವಾಗಿ ಗುರುತಿಸುತ್ತವೆ. ಯೆಹೋವನ ಅಭಿಷಿಕ್ತನಲ್ಲಿ ನೆರವೇರಿದ್ದು, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಉದ್ಧರಿಸಲ್ಪಟ್ಟಿರುವ ಕೀರ್ತನೆಗಳ ಎಲ್ಲ ವಚನಗಳನ್ನು ವಿವರವಾಗಿ ವರ್ಣಿಸಲು ಇಲ್ಲಿ ಸ್ಥಳಾವಕಾಶವಿರುವುದಿಲ್ಲ. ಆದರೆ ಇಲ್ಲಿ ಮುಂದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ: ಕೀರ್ತ. 78:2—ಮತ್ತಾ. 13:31-35; ಕೀರ್ತ. 69:4—ಯೋಹಾ. 15:25; ಕೀರ್ತ. 118:22, 23—ಮಾರ್ಕ 12:10, 11 ಮತ್ತು ಅ. ಕೃತ್ಯಗಳು 4:11; ಕೀರ್ತ. 34:20—ಯೋಹಾ. 19:33, 36; ಕೀರ್ತ. 45:6, 7—ಇಬ್ರಿ. 1:8, 9. ಇದಲ್ಲದೆ, ಯೇಸುವಿನ ನಿಜ ಹಿಂಬಾಲಕರ ಸಭೆಯ ಬಗ್ಗೆ ಕೀರ್ತನೆಗಳಲ್ಲಿ, ಒಬ್ಬೊಬ್ಬರನ್ನಾಗಿ ಅಲ್ಲ, ಬದಲಾಗಿ ಯೆಹೋವನ ನಾಮವನ್ನು ಸ್ತುತಿಸುವ ಕೆಲಸದಲ್ಲಿ ಭಾಗವಹಿಸಲು ಸಕಲ ಜನಾಂಗಗಳಿಂದ ಆಯ್ಕೆಮಾಡಲ್ಪಟ್ಟಿರುವ ದೇವರ ಅನುಗ್ರಹಪಾತ್ರ ಸಮೂಹವಾಗಿ ಮುಂತಿಳಿಸಲಾಗಿದೆ.—ಕೀರ್ತ. 117:1—ರೋಮಾ. 15:11; ಕೀರ್ತ. 68:18—ಎಫೆ. 4:8-11; ಕೀರ್ತ. 95:7-11—ಇಬ್ರಿ. 3:7, 8; 4:7.
32 ಕೀರ್ತನೆಗಳ ನಮ್ಮ ಅಧ್ಯಯನವು, ಯೆಹೋವ ದೇವರು ತನ್ನ ಮಹಿಮೆ ಮತ್ತು ನಿರ್ದೋಷೀಕರಣಕ್ಕಾಗಿ ತನ್ನ ವಾಗ್ದತ್ತ ಸಂತಾನವೂ ರಾಜ್ಯದ ಬಾಧ್ಯಸ್ಥನೂ ಆದವನ ಮೂಲಕ ನಡೆಸುವ ರಾಜತ್ವಕ್ಕಾಗಿ ನಮಗಿರುವ ಕೃತಜ್ಞತೆಯನ್ನು ಇನ್ನೂ ಹೆಚ್ಚಿಸುತ್ತದೆ. “ದಾವೀದನ ಕೀರ್ತನೆ” ಎಂದು ಹೇಳಲಾಗಿರುವ ಕೀರ್ತನೆ 145ರಲ್ಲಿ ಯಾರ ಬಗ್ಗೆ ತಿಳಿಸಲಾಗಿದೆಯೊ ಮತ್ತು ಯಾರು ‘ಯೆಹೋವನ ಮಹಾ ಪ್ರಭಾವಯುಕ್ತವಾದ ಮಹಿಮೆಯನ್ನು’ ಕೊಂಡಾಡುತ್ತಾರೊ ಆ ನಿಷ್ಠರೊಂದಿಗೆ ನಾವು ಸದಾ ಇರುವಂತಾಗಲಿ: “ಅವರು ನಿನ್ನ ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು. ಹೀಗೆ ಮಾನವರು ನಿನ್ನ ಶೂರಕೃತ್ಯಗಳನ್ನೂ ನಿನ್ನ ರಾಜ್ಯದ ಮಹಾಪ್ರಭಾವವನ್ನೂ ಗ್ರಹಿಸಿಕೊಳ್ಳುವರು. ನಿನ್ನ ರಾಜ್ಯವು ಶಾಶ್ವತವಾಗಿದೆ; ನಿನ್ನ ಆಳಿಕೆಯು ತಲತಲಾಂತರಕ್ಕೂ ಇರುವದು.” (ಕೀರ್ತ. 145:5, 11-13) ಈ ಪ್ರವಾದನಾತ್ಮಕ ಕೀರ್ತನೆಗನುಸಾರ, ಕ್ರಿಸ್ತನು ರಾಜನಾಗಿರುವ ದೇವರ ಸ್ಥಾಪಿತ ರಾಜ್ಯದ ವೈಭವವನ್ನು ಈಗಲೂ ಎಲ್ಲ ಜನಾಂಗಗಳಲ್ಲಿರುವ ಮಾನವರಿಗೆ ಪ್ರಸಿದ್ಧಪಡಿಸಲಾಗುತ್ತಿದೆ. ನಾವು ಆ ರಾಜ್ಯಕ್ಕಾಗಿಯೂ ಅದರ ರಾಜನಿಗಾಗಿಯೂ ಎಷ್ಟು ಕೃತಜ್ಞರಾಗಿರಬೇಕು! ಆ ಕೀರ್ತನೆಯ ಅಂತಿಮ ಮಾತುಗಳೆಷ್ಟೋ ಸೂಕ್ತವಾಗಿವೆ: “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!”—150:6.
[ಪಾದಟಿಪ್ಪಣಿ]
a ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 710-11.