ಬೈಬಲ್ ಪುಸ್ತಕ ನಂಬರ್ 44—ಅಪೊಸ್ತಲರ ಕೃತ್ಯಗಳು
ಲೇಖಕ: ಲೂಕ
ಬರೆಯಲ್ಪಟ್ಟ ಸ್ಥಳ: ರೋಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ. 61
ಆವರಿಸಲ್ಪಟ್ಟ ಕಾಲ: ಸಾ.ಶ. 33-ಸುಮಾರು ಸಾ.ಶ. 61
ಪ್ರೇರಿತ ಶಾಸ್ತ್ರಗಳ 42ನೆಯ ಪುಸ್ತಕದಲ್ಲಿ ಲೂಕನು, ಯೇಸು ಮತ್ತು ಆತನ ಶಿಷ್ಯರ ಜೀವನ, ಕಾರ್ಯಕಲಾಪಗಳು ಮತ್ತು ಶುಶ್ರೂಷೆಯನ್ನು ಆವರಿಸುತ್ತಾ ಆತನ ಸ್ವರ್ಗಾರೋಹಣದ ವರೆಗಿನ ವೃತ್ತಾಂತವನ್ನು ಕೊಡುತ್ತಾನೆ. ಅಪೊಸ್ತಲರ ಕೃತ್ಯಗಳು ಎಂಬ 44ನೆಯ ಪುಸ್ತಕದ ಐತಿಹಾಸಿಕ ದಾಖಲೆಯು, ಪವಿತ್ರಾತ್ಮದ ಕಾರ್ಯದಿಂದಾಗಿ ಆದ ಸಭೆಯ ಸ್ಥಾಪನೆಯನ್ನು ವರ್ಣಿಸುವ ಮೂಲಕ ಆದಿಕ್ರೈಸ್ತತ್ವದ ಇತಿಹಾಸವನ್ನು ಮುಂದುವರಿಸುತ್ತದೆ. ಸಾಕ್ಷಿಕಾರ್ಯವು ಪ್ರಥಮವಾಗಿ ಯೆಹೂದ್ಯರ ನಡುವೆ ಮತ್ತು ಆ ಬಳಿಕ ಎಲ್ಲ ಜನಾಂಗಗಳ ಮಧ್ಯೆ ವ್ಯಾಪಿಸುವುದನ್ನು ಅದು ವರ್ಣಿಸುತ್ತದೆ. ಮೊದಲ 12 ಅಧ್ಯಾಯಗಳಲ್ಲಿ ಹೆಚ್ಚಿನ ಭಾಗವು ಪೇತ್ರನ ಕಾರ್ಯಕಲಾಪಗಳನ್ನೂ, ಉಳಿದ 16 ಅಧ್ಯಾಯಗಳು ಪೌಲನ ಚಟುವಟಿಕೆಗಳನ್ನೂ ಆವರಿಸುತ್ತವೆ. ಲೂಕನು ಪೌಲನ ಜೊತೆಯಲ್ಲಿ ಅವನ ಅನೇಕ ಸಂಚಾರಗಳಲ್ಲಿ ಆಪ್ತ ಒಡನಾಡಿಯಾಗಿದ್ದನು.
2 ಈ ಪುಸ್ತಕವನ್ನು ಥೆಯೊಫಿಲನಿಗೆ ಸಂಬೋಧಿಸಲಾಗಿದೆ. ಅವನನ್ನು “ಶ್ರೀಮತ್” ಎಂದು ಸೂಚಿಸಿರುವುದರಿಂದ, ಅವನು ಯಾವುದೊ ಅಧಿಕಾರದ ಸ್ಥಾನದಲ್ಲಿದ್ದಿರುವ ಸಾಧ್ಯತೆಯಿದೆ, ಅಥವಾ ಅದು ಕೇವಲ ಗೌರವದ ಒಂದು ಅಭಿವ್ಯಕ್ತಿ ಆಗಿದ್ದಿರಬಹುದು. (ಲೂಕ 1:3) ಈ ವೃತ್ತಾಂತವು ಕ್ರೈಸ್ತ ಸಭೆಯ ಸ್ಥಾಪನೆ ಮತ್ತು ಬೆಳವಣಿಗೆಯ ಒಂದು ನಿಷ್ಕೃಷ್ಟ ಐತಿಹಾಸಿಕ ದಾಖಲೆಯನ್ನು ಒದಗಿಸುತ್ತದೆ. ಯೇಸು ತನ್ನ ಪುನರುತ್ಥಾನಾನಂತರ ತನ್ನ ಶಿಷ್ಯರಿಗೆ ಕಾಣಿಸಿಕೊಂಡ ಸಂದರ್ಭಗಳಿಂದ ಆರಂಭಗೊಂಡು, ಬಳಿಕ ಬಹುಮಟ್ಟಿಗೆ 28 ವರುಷಗಳನ್ನು ಆವರಿಸಿರುವ ಸಾ.ಶ. 33ರಿಂದ ಸುಮಾರು ಸಾ.ಶ. 61ರ ಅವಧಿಯ ಪ್ರಮುಖ ಘಟನೆಗಳನ್ನು ದಾಖಲೆಮಾಡುತ್ತದೆ.
3 ಹಿಂದಿನ ಕಾಲಗಳಿಂದಲೂ ಲೂಕನ ಸುವಾರ್ತಾ ಪುಸ್ತಕದ ಲೇಖಕನು ಈ ಅಪೊಸ್ತಲರ ಕೃತ್ಯಗಳ ಲೇಖಕನೂ ಆಗಿದ್ದಾನೆಂಬ ಕೀರ್ತಿಯನ್ನು ಪಡೆದಿದ್ದಾನೆ. ಎರಡು ಪುಸ್ತಕಗಳೂ ಥೆಯೊಫಿಲನಿಗೆ ಸಂಬೋಧಿಸಿ ಬರೆಯಲಾಗಿವೆ. ತನ್ನ ಸುವಾರ್ತಾ ಪುಸ್ತಕದ ಅಂತಿಮ ಸಂಭವಗಳನ್ನು ಅಪೊಸ್ತಲರ ಕೃತ್ಯಗಳ ಆರಂಭದ ವಚನಗಳಲ್ಲಿ ಪುನರಾವರ್ತಿಸಿ ಹೇಳುವ ಮೂಲಕ ಲೂಕನು ಈ ಎರಡು ವೃತ್ತಾಂತಗಳನ್ನೂ ಒಬ್ಬನೇ ಲೇಖಕನ ಕೃತಿಯಾಗಿ ಜೋಡಿಸುತ್ತಾನೆ. ಲೂಕನು ಈ ಪುಸ್ತಕವನ್ನು, ತಾನು ಅಪೊಸ್ತಲ ಪೌಲನೊಂದಿಗೆ ರೋಮ್ನಲ್ಲಿ ಕಳೆದ ಎರಡು ವರುಷಗಳ ಅಂತ್ಯದಲ್ಲಿ ಪ್ರಾಯಶಃ ಸಾ.ಶ. 61ರಲ್ಲಿ ಬರೆದು ಮುಗಿಸಿದನೆಂದು ತೋರಿಬರುತ್ತದೆ. ಆ ವರ್ಷದ ಕೊನೆಯ ತನಕದ ಘಟನೆಗಳನ್ನು ಅದು ದಾಖಲಿಸುವುದರಿಂದ, ಅದಕ್ಕಿಂತ ಮೊದಲು ಅದನ್ನು ಮುಗಿಸಲು ಸಾಧ್ಯವಿರಲಿಲ್ಲ. ಅಲ್ಲದೆ ಪೌಲನು ಕೈಸರನಿಗೆ ಮಾಡಿದ ಅಪೀಲಿನ ತೀರ್ಪನ್ನು ಅದು ತಿಳಿಸದೇ ಇರುವುದರಿಂದ, ಅದನ್ನು ಅದೇ ವರುಷದಲ್ಲಿ ಬರೆದು ಮುಗಿಸಲಾಯಿತೆಂದು ಸೂಚಿಸುತ್ತದೆ.
4 ಅತಿ ಪೂರ್ವಕಾಲದಿಂದಲೂ, ಅಪೊಸ್ತಲರ ಕೃತ್ಯಗಳ ಈ ಪುಸ್ತಕವನ್ನು ಅಧಿಕೃತ ಪಟ್ಟಿಯದ್ದೆಂದು ಬೈಬಲ್ ವಿದ್ವಾಂಸರು ಅಂಗೀಕರಿಸಿದ್ದಾರೆ. ಈ ಪುಸ್ತಕದ ಭಾಗಗಳು ಗ್ರೀಕ್ ಶಾಸ್ತ್ರಗ್ರಂಥದ ಕೆಲವು ಅತಿ ಹಳೆಯ ಚಾಲ್ತಿ ಪಪೈರಸ್ ಹಸ್ತಪ್ರತಿಗಳಲ್ಲಿ ಕಾಣಸಿಗುತ್ತವೆ. ಅವು ಮುಖ್ಯವಾಗಿ, ಸಾ.ಶ. ಮೂರು ಅಥವಾ ನಾಲ್ಕನೆಯ ಶತಮಾನದ ಮಿಷಿಗನ್ ನಂ. 1571 (P38) ಮತ್ತು ಮೂರನೆಯ ಶತಮಾನದ ಚೆಸ್ಟರ್ ಬೀಟೀ ನಂ. 1 (P45) ಎಂಬ ಹಸ್ತಪ್ರತಿಗಳಲ್ಲಿವೆ. ಹೀಗೆ ಅಪೊಸ್ತಲರ ಕೃತ್ಯಗಳು ಪುಸ್ತಕವು ಪ್ರೇರಿತ ಶಾಸ್ತ್ರದ ಬೇರೆ ಪುಸ್ತಕಗಳೊಂದಿಗೆ ಚಲಾವಣೆಯಲ್ಲಿತ್ತೆಂದೂ ಮತ್ತು ಹೀಗೆ ಆರಂಭದಿಂದಲೂ ಗ್ರಂಥಪಟ್ಟಿಯ ಭಾಗವಾಗಿತ್ತೆಂದೂ ಇವೆರಡೂ ಹಸ್ತಪ್ರತಿಗಳು ಸೂಚಿಸುತ್ತವೆ. ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಲೂಕನ ಬರಹವು ಅವನ ಸುವಾರ್ತಾ ಪುಸ್ತಕದಲ್ಲಿ ನಾವು ಆಗಲೇ ನೋಡಿರುವ ಗಮನಾರ್ಹ ನಿಷ್ಕೃಷ್ಟತೆಯನ್ನು ಪ್ರತಿಬಿಂಬಿಸುತ್ತದೆ. ಸರ್ ವಿಲ್ಯಮ್ ಎಮ್. ರಾಮ್ಸೀ, ಅಪೊಸ್ತಲರ ಕೃತ್ಯಗಳ ಲೇಖಕನನ್ನು, “ಪ್ರಥಮ ದರ್ಜೆಯ ಇತಿಹಾಸಕಾರರಲ್ಲಿ” ಒಬ್ಬನೆಂದು ಪರಿಗಣಿಸುತ್ತಾರೆ. ಇದರ ಅರ್ಥವನ್ನು ಅವರು ಹೀಗೆ ವಿವರಿಸುತ್ತಾರೆ: “ಮಹಾ ಇತಿಹಾಸಕಾರನಲ್ಲಿರಬೇಕಾದ ಪ್ರಥಮ ಹಾಗೂ ಆವಶ್ಯಕ ಗುಣವು ಸತ್ಯ ಹೇಳುವುದೇ. ಅವನು ಹೇಳುವುದೆಲ್ಲವೂ ವಿಶ್ವಾಸಾರ್ಹವಾಗಿರಬೇಕು.”a
5 ಲೂಕನ ಬರಹಗಳಲ್ಲಿರುವ ನಿಷ್ಕೃಷ್ಟ ವರದಿಯ ವೈಶಿಷ್ಟ್ಯವನ್ನು ದೃಷ್ಟಾಂತಿಸಲಿಕ್ಕಾಗಿ, ಒಂದನೇ ಜಾಗತಿಕ ಯುದ್ಧದ ಸಮಯದಲ್ಲಿ ಭೂಮಧ್ಯ ಸಮುದ್ರದ ಯುದ್ಧನೌಕೆಗಳ ಕಮಾಂಡರ್ ಎಡ್ವಿನ್ ಸ್ಮಿತ್ ಎಂಬವರನ್ನು ನಾವು ಉಲ್ಲೇಖಿಸುತ್ತೇವೆ. ಮಾರ್ಚ್ 1947ರ ದ ರಡರ್ ಪತ್ರಿಕೆಯಲ್ಲಿ ಅವರು ಬರೆದುದು: “ಪೂರ್ವಕಾಲದ ನೌಕೆಗಳು ಇಂದಿನವುಗಳಂತೆ ಹಿಂಗಂಬಕ್ಕೆ ಕಟ್ಟಿದ ಒಂದು ಚುಕ್ಕಾಣಿಯಿಂದ ನಡೆಸಲ್ಪಡುತ್ತಿರಲಿಲ್ಲ; ಬದಲಿಗೆ ಅದರ ಹಿಂಭಾಗದಲ್ಲಿ ಎರಡೂ ಪಕ್ಕಗಳಲ್ಲಿ ಒಂದೊಂದರಂತಿದ್ದ ಎರಡು ದೊಡ್ಡ ಹುಟ್ಟುಗಳಿಂದ ಅಥವಾ ಹುಟ್ಟುಗೋಲುಗಳಿಂದ ನಡೆಸಲ್ಪಡುತ್ತಿತ್ತು. ಈ ಕಾರಣದಿಂದಲೇ ಸಂತ ಲೂಕನು ಹುಟ್ಟುಗೋಲುಗಳನ್ನು [‘ಚುಕ್ಕಾಣಿಗಳು,’ ಕನ್ನಡ ಬೈಬಲ್] ಬಹುಸಂಖ್ಯೆಯಲ್ಲಿ ತಿಳಿಸುತ್ತಾನೆ. [ಅ.ಕೃ. 27:40] . . . ಆ ನೌಕೆಯು ಚಂದರೇವು ಎಂಬ ಸ್ಥಳ ಬಿಟ್ಟು ಮೆಲೀತೆಯ ಕಡಲಕರೆಗೆ ಬಂದು ಮುಟ್ಟುವ ತನಕ ಆ ನೌಕೆಯ ಚಲನೆಯ ವಿಷಯದಲ್ಲಿ ಸಂತ ಲೂಕನು ಹೇಳಿರುವ ಪ್ರತಿಯೊಂದು ಹೇಳಿಕೆಯು ಅತಿ ನಿಖರವೂ ತೃಪ್ತಿದಾಯಕವೂ ಆಗಿದೆ. ಇದನ್ನು ನಾವು ಪರೀಕ್ಷಿಸಿರುವ ಬಾಹ್ಯ ಹಾಗೂ ಸ್ವತಂತ್ರ ಸಾಕ್ಷ್ಯಗಳಿಂದ ಕಂಡುಕೊಂಡಿದ್ದೇವೆ; ಆ ಹಡಗು ಸಮುದ್ರದಲ್ಲಿದ್ದ ಸಮಯವು ಅದು ಚಲಿಸಿದ ದೂರಕ್ಕೆ ಹೊಂದಿಕೆಯಾಗಿದೆ ಮತ್ತು ಅಂತಿಮವಾಗಿ, ಅದು ಬಂದು ಸೇರಿದ ಸ್ಥಳದ ವರ್ಣನೆಯು ಇಂದಿನ ಸ್ಥಳಕ್ಕೆ ಹೊಂದಿಕೆಯಾಗಿದೆ. ಹೀಗೆ ವರ್ಣಿಸಿರುವ ಸಮುದ್ರಯಾನವನ್ನು ಲೂಕನು ನಿಜವಾಗಿಯೂ ಮಾಡಿದ್ದು ಮಾತ್ರವಲ್ಲ, ಅವನ ಅವಲೋಕನಗಳೂ ಹೇಳಿಕೆಗಳೂ ಅತಿ ಶ್ರೇಷ್ಠ ಪ್ರಮಾಣದಲ್ಲಿ ಭರವಸಾರ್ಹವೂ ವಿಶ್ವಾಸಯೋಗ್ಯವೂ ಆಗಿವೆಯೆಂದು ಹೇಳಬಹುದು.”b
6 ಪ್ರಾಕ್ತನಶಾಸ್ತ್ರದ ಕಂಡುಹಿಡಿತಗಳೂ ಲೂಕನ ವೃತ್ತಾಂತದ ನಿಷ್ಕೃಷ್ಟತೆಯನ್ನು ದೃಢೀಕರಿಸುತ್ತವೆ. ದೃಷ್ಟಾಂತಕ್ಕೆ, ಎಫೆಸದಲ್ಲಿ ನಡೆದ ಭೂಶೋಧನೆಗಳು ಅರ್ತೆಮೀ ದೇವತೆಯ ದೇವಸ್ಥಾನ ಹಾಗೂ ಎಫೆಸದವರು ಅಪೊಸ್ತಲ ಪೌಲನ ಎದುರಾಗಿ ದಂಗೆಯೆದ್ದ ಹಳೆಯ ನಾಟಕಶಾಲೆಯನ್ನು ಕಂಡುಹಿಡಿದಿವೆ. (ಅ.ಕೃ. 19:27-41) ಲೂಕನು ಸರಿಯಾಗಿಯೇ ಬಳಸಿದ, ‘ಊರಿನ ಅಧಿಕಾರಿಗಳು’ ಎಂಬ ಬಿರುದು ಥೆಸಲೊನೀಕದ ಅಧಿಕಾರಿಗಳಿಗೆ ಅನ್ವಯಿಸುತ್ತವೆಂಬುದನ್ನು ದೃಢೀಕರಿಸುವ ಕೆತ್ತನೆಯ ಬರಹಗಳನ್ನು ಕಂಡುಹಿಡಿಯಲಾಗಿದೆ. (17:6, 8) ಪೊಪ್ಲಿಯನನ್ನು ಮೆಲೀತೆಯ “ಮುಖ್ಯಸ್ಥ”ನಾಗಿ ಸೂಚಿಸಿದ್ದು ಸರಿ ಎಂಬುದನ್ನು ಮೆಲೀತೆಯ ಎರಡು ಶಿಲಾಶಾಸನಗಳು ತೋರಿಸುತ್ತವೆ.—28:7.c
7 ಇದಲ್ಲದೆ ಪೇತ್ರ, ಸ್ತೆಫನ, ಕೊರ್ನೇಲ್ಯ, ತೆರ್ತುಲ್ಲ, ಪೌಲ ಮತ್ತು ಬೇರೆಯವರು ಮಾಡಿದ ಭಾಷಣಗಳು, ಲೂಕನು ದಾಖಲೆ ಮಾಡಿರುವಂತೆ, ವಿಭಿನ್ನ ಶೈಲಿ ಮತ್ತು ರಚನೆಗಳಲ್ಲಿವೆ. ವಿಭಿನ್ನ ಜನಗುಂಪುಗಳ ಮುಂದೆ ಪೌಲನು ಮಾಡಿದ ಭಾಷಣಗಳ ಶೈಲಿಯೂ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗೊಂಡಿದೆ. ಲೂಕನು ತಾನೇ ಕೇಳಿರುವುದನ್ನು ಅಥವಾ ಬೇರೆ ಪ್ರತ್ಯಕ್ಷಸಾಕ್ಷಿಗಳು ಅವನಿಗೆ ಹೇಳಿರುವುದನ್ನು ಮಾತ್ರ ದಾಖಲೆ ಮಾಡಿರುವುದನ್ನು ಇದು ಸೂಚಿಸುತ್ತದೆ. ಲೂಕನು ಕಲ್ಪಿತಕಥೆಗಳನ್ನು ಬರೆಯಲಿಲ್ಲ.
8 ಲೂಕನ ವೈಯಕ್ತಿಕ ಜೀವನದ ಬಗ್ಗೆ ತೀರ ಕೊಂಚ ತಿಳಿದು ಬರುತ್ತದೆ. ಲೂಕನು ತಾನೇ ಅಪೊಸ್ತಲನಾಗಿರದಿದ್ದರೂ, ಅಪೊಸ್ತಲರೊಂದಿಗೆ ಅವನಿಗೆ ಒಡನಾಟವಿತ್ತು. (ಲೂಕ 1:1-4) ಅಪೊಸ್ತಲ ಪೌಲನು ಮೂರು ಬಾರಿ ಲೂಕನನ್ನು ಹೆಸರಿಸುತ್ತಾನೆ. (ಕೊಲೊ. 4:10, 14; 2 ತಿಮೊ. 4:10; ಫಿಲೆ. 24) ಕೆಲವು ವರುಷಗಳ ವರೆಗೆ ಅವನು ಪೌಲನ ಸತತ ಸಂಗಾತಿಯಾಗಿದ್ದು “ಪ್ರಿಯ ವೈದ್ಯ”ನೆಂದು ಕರೆಯಲ್ಪಟ್ಟನು. ಈ ವೃತ್ತಾಂತವು ಕೆಲವೊಮ್ಮೆ “ಅವರು” ಮತ್ತು ಕೆಲವೊಮ್ಮೆ “ನಾವು” ಎಂಬ ಪದಗಳನ್ನು ಬಳಸುವುದು, ಲೂಕನು ಪೌಲನ ಎರಡನೆಯ ಮಿಷನೆರಿ ಪ್ರಯಾಣದಲ್ಲಿ ತ್ರೋವದಲ್ಲಿ ಅವನೊಂದಿಗಿದ್ದನೆಂದು ಸೂಚಿಸುತ್ತದೆ. ಪೌಲನು ಕೆಲವು ವರುಷಗಳ ತರುವಾಯ ಹಿಂದಿರುಗಿ ಬರುವ ವರೆಗೆ ಲೂಕನು ಫಿಲಿಪ್ಪಿಯಲ್ಲಿ ಉಳಿದಿರಬಹುದೆಂದು, ಹಾಗೂ ಆ ಬಳಿಕ ಪೌಲನು ನ್ಯಾಯವಿಚಾರಣೆಗಾಗಿ ರೋಮ್ಗೆ ಹೋದಾಗ ಅವನೊಂದಿಗೆ ಪುನಃ ಸೇರಿಕೊಂಡನೆಂದು ಸೂಚಿಸುತ್ತದೆ.—ಅ.ಕೃ. 16:8, 10; 17:1; 20:4-6; 28:16.
ಪ್ರಯೋಜನಕರವೇಕೆ?
32 ಅಪೊಸ್ತಲರ ಕೃತ್ಯಗಳು ಎಂಬ ಈ ಪುಸ್ತಕವು ಹೀಬ್ರು ಶಾಸ್ತ್ರಗಳ ವಿಶ್ವಾಸಾರ್ಹತೆ ಮತ್ತು ಪ್ರೇರಣೆಯನ್ನು ಸ್ಥಿರೀಕರಿಸಲು ಸುವಾರ್ತಾ ವೃತ್ತಾಂತಗಳಿಗೆ ರುಜುವಾತನ್ನು ಕೂಡಿಸುತ್ತದೆ. ಪಂಚಾಶತ್ತಮ ಸಮೀಪಿಸಿದಂತೆ, ‘ಯೂದನ ವಿಷಯವಾಗಿ ಪವಿತ್ರಾತ್ಮವು ದಾವೀದನ ಬಾಯಿಂದ’ ಹೇಳಿಸಿದ ಎರಡು ಪ್ರವಾದನೆಗಳ ನೆರವೇರಿಕೆಯನ್ನು ಪೇತ್ರನು ಉದ್ಧರಿಸಿದನು. (ಅ.ಕೃ. 1:16, 20; ಕೀರ್ತ. 69:25; 109:8) ಪೇತ್ರನು ಆ ಪಂಚಾಶತ್ತಮದಲ್ಲಿ ಆಶ್ಚರ್ಯಪಟ್ಟಿದ್ದ ಜನರ ಗುಂಪಿಗೆ ಅವರು ನಿಜವಾಗಿ ಪ್ರವಾದನೆಯ ನೆರವೇರಿಕೆಯನ್ನು ನೋಡುತ್ತಿದ್ದಾರೆಂದೂ ಹೇಳಿದನು: “ಇದು ಪ್ರವಾದಿಯಾದ ಯೋವೇಲನ ಮೂಲಕವಾಗಿ ಹೇಳಿಸಿದ ಸಂಗತಿ.”—ಅ.ಕೃ. 2:16-21; ಯೋವೇ. 2:28-32; ಅಲ್ಲದೆ ಅ.ಕೃ. 2:25-28, 34, 35ನ್ನು ಕೀರ್ತನೆ 16:8-11 ಮತ್ತು 110:1ರೊಂದಿಗೆ ಹೋಲಿಸಿ.
33 ದೇವಾಲಯದ ಹೊರಗಿದ್ದ ಜನರ ಇನ್ನೊಂದು ಗುಂಪಿಗೆ ಮನವರಿಕೆ ಮಾಡಿಸಲು, ಪೇತ್ರನು ಪುನಃ ಹೀಬ್ರು ಶಾಸ್ತ್ರವನ್ನು ಸೂಚಿಸಿ, ಪ್ರಥಮವಾಗಿ ಮೋಶೆಯನ್ನು ಉಲ್ಲೇಖಿಸಿ ಬಳಿಕ ಹೇಳಿದ್ದು: “ಇದಲ್ಲದೆ ಸಮುವೇಲನೂ ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳ ವಿಷಯದಲ್ಲಿ ತಿಳಿಸಿದರು.” ತರುವಾಯ ಸನ್ಹೆದ್ರಿನ್ನ ಮುಂದೆ, ಪೇತ್ರನು ಕೀರ್ತನೆ 118:22ನ್ನು ಉಲ್ಲೇಖಿಸಿ, ಅವರು ಹೀನೈಸಿದ ಕ್ರಿಸ್ತನೆಂಬ ಕಲ್ಲು “ಮುಖ್ಯವಾದ ಮೂಲೆಗಲ್ಲಾದನು” ಎಂದು ತೋರಿಸಿದನು. (ಅ.ಕೃ. 3:22-24; 4:11) ಫಿಲಿಪ್ಪನು ಇಥಿಯೋಪ್ಯದ ಕಂಚುಕಿಗೆ ಯೆಶಾಯ 53:7, 8, ಹೇಗೆ ನೆರವೇರಿದೆಯೆಂದು ವಿವರಿಸಿದಾಗ, ಅದರ ಅರ್ಥವನ್ನು ತಿಳಿದ ಕಂಚುಕಿಯು ತನಗೆ ದೀಕ್ಷಾಸ್ನಾನ ಮಾಡಿಸುವಂತೆ ದೈನ್ಯದಿಂದ ಕೇಳಿಕೊಂಡನು. (ಅ.ಕೃ. 8:28-35) ಅದೇ ರೀತಿ, ಯೇಸುವಿನ ಕುರಿತು ಕೊರ್ನೇಲ್ಯನೊಂದಿಗೆ ಮಾತಾಡಿದಾಗ, “ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿಹೇಳಿದ್ದಾರೆ” ಎಂದು ಪೇತ್ರನು ದೃಢವಾಗಿ ತಿಳಿಸಿದನು. (10:43) ಸುನ್ನತಿಯ ಸಂಬಂಧದಲ್ಲಿ ಚರ್ಚೆ ನಡೆಯುತ್ತಿದ್ದಾಗ ಯಾಕೋಬನು, “ಇದಕ್ಕೆ ಪ್ರವಾದಿಗಳ ಮಾತುಗಳೂ ಒಪ್ಪುತ್ತವೆ” ಎಂದು ಹೇಳುತ್ತಾ ತನ್ನ ನಿರ್ಣಯವನ್ನು ಸಮರ್ಥಿಸಿದನು. (15:15-18) ಅಪೊಸ್ತಲ ಪೌಲನು ಇದೇ ಪ್ರಮಾಣಗ್ರಂಥದ ಮೇಲೆ ಭರವಸೆಯಿಟ್ಟಿದ್ದನು. (26:22; 28:23, 25-27) ಶಿಷ್ಯರು ಮತ್ತು ಅವರಿಗೆ ಕಿವಿಗೊಟ್ಟವರು, ಹೀಬ್ರು ಶಾಸ್ತ್ರಗಳು ದೇವರ ವಾಕ್ಯದ ಭಾಗವೆಂದು ಸಿದ್ಧಮನಸ್ಸಿನಿಂದ ಅಂಗೀಕರಿಸಿದ ಸಂಗತಿಯು ಅವುಗಳ ಮೇಲೆ ಪ್ರೇರಿತ ಒಪ್ಪಿಗೆಯ ಮುದ್ರೆಯನ್ನೊತ್ತುತ್ತದೆ.
34 ಕ್ರೈಸ್ತ ಸಭೆ ಹೇಗೆ ಸ್ಥಾಪಿಸಲ್ಪಟ್ಟಿತು ಮತ್ತು ಪವಿತ್ರಾತ್ಮದ ಶಕ್ತಿಯಿಂದ ಅದು ಹೇಗೆ ವೃದ್ಧಿಯಾಯಿತೆಂದು ತೋರಿಸಲು ಅಪೊಸ್ತಲರ ಕೃತ್ಯಗಳ ಈ ಪುಸ್ತಕವು ಅತಿ ಪ್ರಯೋಜನಕಾರಿಯಾಗಿದೆ. ಈ ನಾಟಕೀಯ ವೃತ್ತಾಂತದಾದ್ಯಂತ, ಕ್ರೈಸ್ತ ಸಭೆಯ ವಿಸ್ತರಣೆಯನ್ನು ದೇವರು ಆಶೀರ್ವದಿಸುವುದನ್ನು, ಆದಿಕ್ರೈಸ್ತರ ಧೈರ್ಯ ಮತ್ತು ಹರ್ಷವನ್ನು, ಹಿಂಸೆಯ ಮಧ್ಯದಲ್ಲೂ ಅವರ ರಾಜಿಯಾಗದ ನಿಲುವನ್ನು, ಮತ್ತು ವಿದೇಶದ ಸೇವೆಯ ಕರೆಗೆ ಪೌಲನು ಓಗೊಟ್ಟು ಮಕೆದೋನ್ಯಕ್ಕೆ ಹೋದಂತೆ, ಅವರಲ್ಲೂ ಸೇವೆಮಾಡಲು ಇದ್ದ ಸ್ವಇಷ್ಟವನ್ನು ನಾವು ಅವಲೋಕಿಸುತ್ತೇವೆ. (4:13, 31; 15:3; 5:28, 29; 8:4; 13:2-4; 16:9, 10) ಈ ಸಂಬಂಧದಲ್ಲಿ ಇಂದಿನ ಕ್ರೈಸ್ತ ಸಭೆ ಭಿನ್ನವಾಗಿಲ್ಲ, ಏಕೆಂದರೆ ಅದು “ದೇವರ ಮಹತ್ತುಗಳ ವಿಷಯವಾಗಿ” ಪವಿತ್ರಾತ್ಮದ ಮಾರ್ಗದರ್ಶನೆಯ ಕೆಳಗೆ ಮಾತಾಡುವಾಗ ಪ್ರೀತಿ, ಐಕ್ಯ ಮತ್ತು ಸಾಮಾನ್ಯ ಅಭಿರುಚಿಯಿಂದ ಒಟ್ಟಾಗಿ ಕಟ್ಟಲ್ಪಡುತ್ತದೆ.—2:11, 17, 45; 4:34, 35; 11:27-30; 12:25.
35 ಅಪೊಸ್ತಲರ ಕೃತ್ಯಗಳ ಈ ಪುಸ್ತಕವು ದೇವರ ರಾಜ್ಯವನ್ನು ಘೋಷಿಸುವ ಕ್ರೈಸ್ತ ಚಟುವಟಿಕೆಯನ್ನು ಹೇಗೆ ನಿರ್ವಹಿಸಬೇಕೆಂದು ತೋರಿಸುತ್ತದೆ. ಪೌಲನು ತಾನೇ ಇದಕ್ಕೆ ಆದರ್ಶವಾಗಿರುತ್ತ ಹೇಳಿದ್ದು: “ನಿಮಗೆ ಹಿತಕರವಾದುದ್ದೆಲ್ಲವನ್ನೂ ಬೋಧಿಸಲು ನಾನು ಹಿಂಜರಿಯಲಿಲ್ಲ. ಬಹಿರಂಗವಾಗಿಯೂ ಮನೆಮನೆಗಳಲ್ಲಿಯೂ ನಾನು ನಿಮಗೆ ಬೋಧಿಸಿದ್ದೇನೆ.” ಬಳಿಕ ಅವನು ಹೇಳುವುದು: “ನಾನು ಸಮಗ್ರವಾಗಿ ಸಾಕ್ಷಿ ನೀಡಿದೆನು” (NW). ‘ಸಮಗ್ರ ಸಾಕ್ಷಿ ನೀಡುವಿಕೆ’ ಎಂಬ ಮುಖ್ಯ ವಿಷಯವು ಈ ಪುಸ್ತಕದಾದ್ಯಂತ ನಮ್ಮ ಗಮನ ಸೆಳೆಯುತ್ತ, ಅಂತಿಮ ಪರಿಚ್ಛೇದಗಳಲ್ಲಿ ಆಕರ್ಷಕವಾಗಿ ಎತ್ತಿತೋರಿಸಲ್ಪಡುತ್ತದೆ. ಸೆರೆವಾಸಿಯಾಗಿದ್ದಾಗಲೂ ಸಾರುವಿಕೆ ಮತ್ತು ಬೋಧಿಸುವಿಕೆಗೆ ಪೌಲನಿಗಿದ್ದ ಪೂರ್ಣ ಹೃದಯದ ಧರ್ಮನಿಷ್ಠೆಯು ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ: “ಅವನು ಬೆಳಗಿನಿಂದ ಸಾಯಂಕಾಲದ ವರೆಗೂ ದೇವರ ರಾಜ್ಯವನ್ನು ಕುರಿತು ಪ್ರಮಾಣವಾಗಿ [“ಸಮಗ್ರವಾಗಿ,” NW] ಸಾಕ್ಷಿಹೇಳುತ್ತಾ ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಆಧಾರಮಾಡಿಕೊಂಡು ಯೇಸುವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಇದ್ದನು.” ನಾವು ಯಾವಾಗಲೂ ರಾಜ್ಯ ಚಟುವಟಿಕೆಯಲ್ಲಿ ಅಷ್ಟೇ ಏಕನಿಷ್ಠರಾಗಿರೋಣ!—20:20, 21; 28:23; 2:40; 5:42; 26:22.
36 ಎಫೆಸದಿಂದ ಬಂದಿದ್ದ ಮೇಲ್ವಿಚಾರಕರಿಗೆ ಪೌಲನು ಕೊಟ್ಟ ಭಾಷಣದಲ್ಲಿ ಇಂದಿನ ಮೇಲ್ವಿಚಾರಕರಿಗೆ ಬಹಳಷ್ಟು ಪ್ರಾಯೋಗಿಕ ಬುದ್ಧಿವಾದವಿದೆ. ಇವರ ನೇಮಕವು ಪವಿತ್ರಾತ್ಮದಿಂದ ಆಗಿರುವುದರಿಂದ ಅವರು ‘ತಮಗೂ ಎಲ್ಲ ಹಿಂಡಿಗೂ ಗಮನ ಕೊಡುವುದು’ ಅತಿ ಪ್ರಾಮುಖ್ಯ. ಅವರು ಆ ಹಿಂಡನ್ನು ಕೋಮಲವಾಗಿ ಪಾಲನೆಮಾಡಿ, ಅದನ್ನು ನಾಶಮಾಡಲು ಪ್ರಯತ್ನಿಸುವ ಕ್ರೂರ ತೋಳಗಳಿಂದ ರಕ್ಷಿಸುತ್ತಾರೆ. ಇದು ಲಘುವಾದ ಜವಾಬ್ದಾರಿಯಲ್ಲ! ಮೇಲ್ವಿಚಾರಕರು ಎಚ್ಚರವಾಗಿದ್ದು ದೇವರ ಅಪಾರ ದಯೆಯ ವಾಕ್ಯದಿಂದ ತಮ್ಮ ಭಕ್ತಿವೃದ್ಧಿಯನ್ನು ಮಾಡಿಕೊಳ್ಳುವುದು ಆವಶ್ಯಕ. ಬಲಹೀನರಿಗೆ ನೆರವಾಗುವುದರಲ್ಲಿ ಅವರು ಶ್ರಮಿಸುವಾಗ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯವೆಂಬದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡಿರಬೇಕು.”—20:17-35.
37 ಪೌಲನು ಕೊಟ್ಟ ಬೇರೆ ಭಾಷಣಗಳು ಸಹ ಬೈಬಲ್ ಮೂಲತತ್ತ್ವಗಳ ಸ್ಪಷ್ಟ ನಿರೂಪಣೆಯಿಂದ ಹೊಳೆಯುತ್ತವೆ. ದೃಷ್ಟಾಂತಕ್ಕೆ, ಅವನು ಅರಿಯೋಪಾಗದಲ್ಲಿ ಸ್ಟಾಯಿಕ್ ಮತ್ತು ಎಪಿಕ್ಯೂರಿಯನ್ ಜನರಿಗೆ ಕೊಟ್ಟ ಭಾಷಣದಲ್ಲಿ ಉತ್ಕೃಷ್ಟ ದರ್ಜೆಯ ವಾದವು ಕಂಡುಬರುತ್ತದೆ. ಅವನು ಪ್ರಥಮವಾಗಿ ಯಜ್ಞವೇದಿಯ ಮೇಲಿದ್ದ, “ತಿಳಿಯದ ದೇವರಿಗೆ” ಎಂಬ ಲಿಪಿಯನ್ನು ಉದ್ಧರಿಸುತ್ತಾನೆ. ಮತ್ತು ಇದನ್ನು ಕಾರಣವಾಗಿ ಬಳಸುತ್ತಾ, ಒಬ್ಬನಿಂದಲೇ ಪ್ರತಿಯೊಂದು ರಾಷ್ಟ್ರದ ಜನರನ್ನು ನಿರ್ಮಿಸಿರುವ ಭೂಮ್ಯಾಕಾಶಗಳ ಒಡೆಯನಾದ ಒಬ್ಬನೇ ಸತ್ಯದೇವರು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂಬುದನ್ನು ವಿವರಿಸುತ್ತಾನೆ. ಬಳಿಕ ಅವನು, “ನಾವು ಆತನ ಸಂತಾನದವರೇ” ಎಂಬ ಅವರ ಕವಿಗಳ ಮಾತುಗಳನ್ನು ಉದ್ಧರಿಸುತ್ತ, ಬೆಳ್ಳಿ, ಬಂಗಾರ ಅಥವಾ ಕಲ್ಲುಗಳಿಂದ ಮಾಡಲ್ಪಟ್ಟ ನಿರ್ಜೀವ ವಿಗ್ರಹಗಳಿಂದ ಅವರು ಬಂದಿದ್ದಾರೆಂದು ನೆನಸುವುದು ಎಷ್ಟೊಂದು ಅವಿವೇಕದ ವಿಷಯವೆಂದು ತೋರಿಸುತ್ತಾನೆ. ಹೀಗೆ ಪೌಲನು ಜೀವಸ್ವರೂಪನಾದ ದೇವರ ಪರಮಾಧಿಕಾರವನ್ನು ಸಮಯೋಚಿತ ನಯದಿಂದ ಸ್ಥಾಪಿಸುತ್ತಾನೆ. ಮತ್ತು ಪುನರುತ್ಥಾನದ ಪ್ರಶ್ನೆಯನ್ನು ಅವನು ತನ್ನ ಕೊನೆಯ ಮಾತುಗಳಲ್ಲಿ ಎತ್ತುತ್ತಾನಾದರೂ, ಆಗಲೂ ಅವನು ಕ್ರಿಸ್ತನನ್ನು ಹೆಸರಿಸುವುದಿಲ್ಲ. ಅವನು ಒಬ್ಬನೇ ಸತ್ಯ ದೇವರ ಪರಮಾಧಿಕಾರದ ತನ್ನ ಮುಖ್ಯ ವಿಷಯವನ್ನು ಅವರಿಗೆ ಮನವರಿಕೆ ಮಾಡಿದನು. ಇದರ ಪರಿಣಾಮವಾಗಿ ಕೆಲವರು ವಿಶ್ವಾಸಿಗಳಾದರು.—17:22-34.
38 ಅಪೊಸ್ತಲರ ಕೃತ್ಯಗಳು ಎಂಬ ಈ ಪುಸ್ತಕವು “ಶಾಸ್ತ್ರ”ವೆಲ್ಲದರ ಪ್ರಗತಿಶೀಲ, ಶ್ರದ್ಧಾಪೂರ್ವಕ ಅಧ್ಯಯನವನ್ನು ಪ್ರೋತ್ಸಾಹಿಸುತ್ತದೆ. ಪೌಲನು ಪ್ರಥಮವಾಗಿ ಬೆರೋಯದಲ್ಲಿ ಸಾರಿದಾಗ, ಅಲ್ಲಿದ್ದ ಯೆಹೂದ್ಯರು, “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” ಇದರಿಂದಾಗಿ ಅವರನ್ನು ‘ಸದ್ಗುಣವುಳ್ಳವರು’ ಎಂದು ಪ್ರಶಂಸಿಸಲಾಯಿತು. (17:11) ಆಗಿನಂತೆಯೇ, ಇಂದು ಸಹ, ಯೆಹೋವನ ಆತ್ಮಭರಿತ ಸಭೆಯೊಂದಿಗೆ ಇಂಥ ಅತ್ಯಾಸಕ್ತಿಯ ಶಾಸ್ತ್ರಾನ್ವೇಷಣೆಯು ನಿಶ್ಚಿತಾಭಿಪ್ರಾಯ ಮತ್ತು ಬಲವಾದ ನಂಬಿಕೆಯ ಆಶೀರ್ವಾದಗಳನ್ನು ಫಲಿಸುವುದು. ಇಂಥ ಅಧ್ಯಯನದ ಮೂಲಕವೇ ಒಬ್ಬನು ದೈವಿಕ ಮೂಲತತ್ತ್ವಗಳ ಕುರಿತ ಸ್ಪಷ್ಟ ಗ್ರಹಿಕೆಯನ್ನು ಪಡೆಯಸಾಧ್ಯವಿದೆ. ಕೆಲವೊಂದು ಮೂಲತತ್ತ್ವಗಳು ಅಪೊಸ್ತಲರ ಕೃತ್ಯಗಳು 15:29ರಲ್ಲಿ ಒಂದು ಉತ್ತಮ ಹೇಳಿಕೆಯ ರೂಪದಲ್ಲಿ ದಾಖಲೆಯಾಗಿದೆ. ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರೀ ಸಹೋದರರ ಆಡಳಿತ ಮಂಡಳಿಯು ಇಲ್ಲಿ, ಆಧ್ಯಾತ್ಮಿಕ ಇಸ್ರಾಯೇಲ್ಯರಿಗೆ ಸುನ್ನತಿಯು ಆವಶ್ಯಕವಾಗಿಲ್ಲದಿದ್ದರೂ, ವಿಗ್ರಹಾರಾಧನೆ, ರಕ್ತ ಮತ್ತು ಹಾದರ ಇವುಗಳ ವಿಷಯದಲ್ಲಿ ನಿಶ್ಚಿತ ನಿಷೇಧವಿದೆ ಎಂಬುದನ್ನು ತಿಳಿಯಪಡಿಸಿತು.
39 ಆ ಆದಿಶಿಷ್ಯರು ಪ್ರೇರಿತ ಶಾಸ್ತ್ರವನ್ನು ನಿಜವಾಗಿಯೂ ಅಧ್ಯಯನ ಮಾಡಿ, ಅಗತ್ಯ ಬಿದ್ದಂತೆ ಅವನ್ನು ಉದ್ಧರಿಸಿ ಅನ್ವಯಿಸಶಕ್ತರಾಗಿದ್ದರು. ನಿಷ್ಕೃಷ್ಟ ಜ್ಞಾನ ಮತ್ತು ದೇವರಾತ್ಮದ ಮೂಲಕ ಅವರು ಭಯಂಕರ ಹಿಂಸೆಯನ್ನು ಎದುರಿಸಲು ಬಲಗೊಳಿಸಲ್ಪಟ್ಟರು. ಪೇತ್ರ ಯೋಹಾನರು, ವಿರೋಧಿಸುತ್ತಿದ್ದ ಅಧಿಕಾರಿಗಳಿಗೆ, “ದೇವರ ಮಾತನ್ನು ಕೇಳುವದಕ್ಕಿಂತಲೂ ನಿಮ್ಮ ಮಾತನ್ನು ಕೇಳುವದು ದೇವರ ಮುಂದೆ ನ್ಯಾಯವೋ ಏನು? ನೀವೇ ತೀರ್ಪುಮಾಡಿಕೊಳ್ಳಿರಿ; ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು,” ಎಂದು ಧೈರ್ಯದಿಂದ ಹೇಳುತ್ತ, ಎಲ್ಲ ನಂಬಿಗಸ್ತ ಕ್ರೈಸ್ತರಿಗೆ ಮಾದರಿಯನ್ನಿಟ್ಟರು. ಮತ್ತು ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು “ಖಂಡಿತವಾಗಿ ಅಪ್ಪಣೆ” ಕೊಟ್ಟಿದ್ದ ಸನ್ಹೆದ್ರಿನ್ನ ಎದುರು ಪುನಃ ತರಲ್ಪಟ್ಟಾಗ, ನಾವು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಖಡಾಖಂಡಿತವಾಗಿ ಹೇಳಿದರು. ಈ ನಿರ್ಭೀತ ಮಾತು ಆ ಅಧಿಕಾರಿಗಳಿಗೆ ಉತ್ತಮ ಸಾಕ್ಷಿಯನ್ನು ಕೊಟ್ಟಿತು ಮತ್ತು ಪ್ರಸಿದ್ಧ ನ್ಯಾಯಶಾಸ್ತ್ರಿ ಗಮಲಿಯೇಲನು ಆರಾಧನಾ ಸ್ವಾತಂತ್ರ್ಯದ ವಿಷಯದಲ್ಲಿ ತನ್ನ ಪ್ರಖ್ಯಾತ ಹೇಳಿಕೆಯನ್ನು ಕೊಡುವಂತೆ ನಡೆಸಲಾಗಿ ಆ ಅಪೊಸ್ತಲರು ಬಿಡುಗಡೆ ಹೊಂದಿದರು.—4:19, 20; 5:28, 29, 34, 35, 38, 39.
40 ಬೈಬಲ್ನಾದ್ಯಂತ ಸುವರ್ಣ ದಾರದಂತೆ ಹಾದುಹೋಗುತ್ತಿರುವ ರಾಜ್ಯದ ಸಂಬಂಧವಾದ ಯೆಹೋವನ ಮಹಿಮಾನ್ವಿತ ಉದ್ದೇಶವು, ಅಪೊಸ್ತಲರ ಕೃತ್ಯಗಳ ಈ ಪುಸ್ತಕದಲ್ಲಿ ಅತಿ ಪ್ರಮುಖವಾಗಿ ಎದ್ದುಕಾಣುತ್ತದೆ. ಪ್ರಾರಂಭದಲ್ಲಿ ಯೇಸು ತನ್ನ ಸ್ವರ್ಗಾರೋಹಣಕ್ಕೆ ಮುಂಚಿನ 40 ದಿನಗಳಲ್ಲಿ “ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು” ತಿಳಿಸುವವನಾಗಿ ತೋರಿಬರುತ್ತಾನೆ. ಶಿಷ್ಯರು ರಾಜ್ಯ ಪುನಸ್ಸ್ಥಾಪನೆಯ ಸಂಬಂಧದಲ್ಲಿ ಪ್ರಶ್ನಿಸಿದಾಗ, ಮೊದಲಾಗಿ ಅವರು ಭೂಮಿಯ ಕಟ್ಟಕಡೆಯ ವರೆಗೆ ತನಗೆ ಸಾಕ್ಷಿಗಳಾಗಿರಬೇಕೆಂದು ಯೇಸು ಅವರಿಗೆ ಹೇಳಿದನು. (1:3, 6, 8) ಯೆರೂಸಲೇಮಿನಿಂದ ಆರಂಭಿಸಿ, ಆ ಶಿಷ್ಯರು ಹಿಂಜರಿಯದೆ ಧೈರ್ಯದಿಂದ ರಾಜ್ಯವನ್ನು ಘೋಷಿಸಿದರು. ಹಿಂಸೆಯ ಪರಿಣಾಮವಾಗಿ ವಿರೋಧಿಗಳು ಸ್ತೆಫನನನ್ನು ಕಲ್ಲೆಸೆದು ಕೊಂದರು ಮತ್ತು ಶಿಷ್ಯರು ಹೊಸ ಪ್ರದೇಶಗಳಿಗೆ ಚದರಿಹೋದರು. (7:59, 60) ಫಿಲಿಪ್ಪನು ‘ದೇವರ ರಾಜ್ಯದ ಶುಭವರ್ತಮಾನವನ್ನು’ ಹೆಚ್ಚು ಕಾರ್ಯಸಿದ್ಧಿಯಿಂದ ಸಮಾರ್ಯದಲ್ಲಿ ಸಾರಿದನೆಂದೂ, ಪೌಲ ಮತ್ತು ಅವನ ಸಂಗಾತಿಗಳು “ರಾಜ್ಯ”ವನ್ನು ಏಷಿಯ, ಕೊರಿಂಥ, ಎಫೆಸ ಮತ್ತು ರೋಮ್ನಲ್ಲಿ ಸಾರಿ ಹೇಳಿದರೆಂದೂ ದಾಖಲೆಯು ತಿಳಿಸುತ್ತದೆ. ಈ ಆದಿ ಕ್ರೈಸ್ತರೆಲ್ಲರು ಯೆಹೋವನ ಮತ್ತು ಬೆಂಬಲ ಕೊಡುವ ಆತನ ಆತ್ಮದ ಮೇಲೆ ಅವಿಚಲಿತ ಭರವಸೆಯನ್ನು ಇಡುವುದರಲ್ಲಿ ಅಪ್ಪಟ ಮಾದರಿಗಳಾಗಿದ್ದಾರೆ. (8:5, 12; 14:5-7, 21, 22; 18:1, 4; 19:1, 8; 20:25; 28:30, 31) ಅವರ ಅದಮ್ಯ ಹುರುಪು ಮತ್ತು ಧೈರ್ಯವನ್ನು ವೀಕ್ಷಿಸುವ ಮೂಲಕ ಮತ್ತು ಯೆಹೋವನು ಅವರ ಪ್ರಯತ್ನಗಳನ್ನು ಎಷ್ಟು ಹೇರಳವಾಗಿ ಆಶೀರ್ವದಿಸಿದನೆಂಬುದನ್ನು ಗಮನಿಸುವ ಮೂಲಕ ‘ದೇವರ ರಾಜ್ಯದ ಕುರಿತು ಸಮಗ್ರವಾಗಿ ಸಾಕ್ಷಿಹೇಳುವುದರಲ್ಲಿ’ ನಂಬಿಗಸ್ತರಾಗಿರಲು ನಮಗೂ ಆಶ್ಚರ್ಯಕರವಾದ ಉತ್ತೇಜನವಿದೆ.—28:23.
[ಪಾದಟಿಪ್ಪಣಿಗಳು]
a ಸಂಚಾರಿಯಾದ ಸಂತ ಪೌಲ (ಇಂಗ್ಲಿಷ್), 1895, ಪುಟ 4.
b ಜುಲೈ 22, 1947ರ ಅವೇಕ್! ಪತ್ರಿಕೆಯ ಪುಟಗಳು 22-23ರಲ್ಲಿ ತಿಳಿಸಿರುವಂತೆ; ಅವೇಕ್!, ಏಪ್ರಿಲ್ 8, 1971, ಪುಟಗಳು 27-8 ಸಹ ನೋಡಿ.
c ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂ. 1, ಪುಟಗಳು 153-4, 734-5; ಸಂ. 2, ಪುಟ 748.