ಬೈಬಲ್ ಪುಸ್ತಕ ನಂಬರ್ 51—ಕೊಲೊಸ್ಸೆ
ಲೇಖಕ: ಪೌಲ
ಬರೆಯಲ್ಪಟ್ಟ ಸ್ಥಳ: ರೋಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ. 60-61
ಎಫೆಸವನ್ನು ಹಿಂದೆ ಬಿಟ್ಟು, ಇಬ್ಬರು ಪುರುಷರು ಏಷ್ಯಾ ಮೈನರ್ ಮಾರ್ಗವಾಗಿ ಮೀಅಂಡರ್ (ಮೆಂಡರಸ್) ನದೀಮಾರ್ಗವಾಗಿ ಸಂಚರಿಸಿದರು. ಫ್ರಿಜೀಅ ದೇಶದ ಲೈಕಸ್ ಉಪನದಿಯನ್ನು ಮುಟ್ಟಿದಾಗ ಅವರು ನದೀಮಾರ್ಗವಾಗಿ ಆಗ್ನೇಯಕ್ಕೆ ಬೆಟ್ಟಾವರಿತ ಕಣಿವೆಯ ಮೂಲಕ ನಡೆದುಹೋದರು. ಅವರ ಎದುರಿನಲ್ಲಿ ಒಂದು ಸೊಗಸಾದ ನೋಟವಿತ್ತು: ದೊಡ್ಡ ಕುರಿಹಿಂಡುಗಳಿದ್ದ ಫಲವತ್ತಾದ ಹಸುರು ಹುಲ್ಲುಗಾವಲು. (ಉಣ್ಣೆಯ ಉತ್ಪನ್ನಗಳು ಈ ಪ್ರದೇಶದ ಒಂದು ಪ್ರಧಾನ ಆದಾಯ-ಮೂಲ.a) ಈ ಕಣಿವೆಯಲ್ಲಿ ಮುಂದುವರಿದಾಗ, ಈ ಪ್ರಯಾಣಿಕರು ತಮ್ಮ ಬಲಭಾಗದಲ್ಲಿ ಆ ಜಿಲ್ಲೆಯ ರೋಮನ್ ಆಡಳಿತ ಕೇಂದ್ರವಾಗಿದ್ದ ಲವೊದಿಕೀಯ ಎಂಬ ಶ್ರೀಮಂತ ಪಟ್ಟಣವನ್ನು ದಾಟಿಹೋದರು. ಅವರ ಎಡಬದಿಯಲ್ಲಿ ನದಿಯಾಚೆ, ದೇವಸ್ಥಾನಗಳಿಗೆ ಮತ್ತು ಬಿಸಿನೀರಿನ ಊಟೆಗಳಿಗೆ ಪ್ರಸಿದ್ಧವಾಗಿದ್ದ ಹಯರಾಪೊಲಿಸ್ ಪಟ್ಟಣ ಕಾಣಿಸುತ್ತಿತ್ತು. ಈ ಎರಡು ಪಟ್ಟಣಗಳಲ್ಲಿಯೂ ಮತ್ತು ಕಣಿವೆಯಲ್ಲಿ ಸುಮಾರು 16 ಕಿಲೊಮೀಟರ್ ದೂರದಲ್ಲಿ ಸಣ್ಣ ಪಟ್ಟಣವಾಗಿದ್ದ ಕೊಲೊಸ್ಸೆಯಲ್ಲಿಯೂ ಕ್ರೈಸ್ತ ಸಭೆಗಳಿದ್ದವು.
2 ಈ ಪ್ರಯಾಣಿಕರ ಗಮ್ಯಸ್ಥಾನ ಕೊಲೊಸ್ಸೆಯಾಗಿತ್ತು. ಅವರಿಬ್ಬರೂ ಕ್ರೈಸ್ತರಾಗಿದ್ದರು. ಅವರಲ್ಲಿ ಒಬ್ಬನಿಗಾದರೂ, ಅವನು ಕೊಲೊಸ್ಸೆಯವನಾಗಿದ್ದುದರಿಂದ ಈ ಪ್ರದೇಶದ ಪರಿಚಯ ಚೆನ್ನಾಗಿತ್ತು. ಅವನ ಹೆಸರು ಒನೇಸಿಮ. ಅವನು ದಾಸನಾಗಿದ್ದು, ಅಲ್ಲಿಯ ಸಭೆಯ ಸದಸ್ಯನಾಗಿದ್ದ ಅವನ ಯಜಮಾನನ ಬಳಿಗೆ ಹಿಂದಿರುಗಿ ಬರುತ್ತಿದ್ದನು. ಒನೇಸಿಮನ ಸಂಗಾತಿಯು ಸ್ವತಂತ್ರನಾಗಿದ್ದ ತುಖಿಕನಾಗಿದ್ದನು. ಇವರಿಬ್ಬರೂ ಪೌಲನ ಪ್ರತಿನಿಧಿಗಳಾಗಿ, “ಕೊಲೊಸ್ಸೆಯಲ್ಲಿರುವ . . . ಕ್ರಿಸ್ತನಲ್ಲಿರುವ ನಂಬಿಗಸ್ತರಾದ ಸಹೋದರರಿಗೆ” ಸಂಬೋಧಿಸಿದ ಒಂದು ಪತ್ರವನ್ನು ತರುತ್ತಿದ್ದರು. ನಮಗೆ ಗೊತ್ತಿರುವ ಮಟ್ಟಿಗೆ ಪೌಲನು ಕೊಲೊಸ್ಸೆಯನ್ನು ಭೇಟಿಮಾಡಿರಲಿಲ್ಲ. ಯೆಹೂದ್ಯೇತರರೇ ಹೆಚ್ಚಾಗಿದ್ದ ಈ ಸಭೆಯನ್ನು ಪ್ರಾಯಶಃ ಎಪಫ್ರನು ಸ್ಥಾಪಿಸಿದ್ದಿರಬೇಕು. ಅವನು ಅಲ್ಲಿ ಪ್ರಯಾಸದ ಕೆಲಸಮಾಡಿದ್ದನು, ಆದರೆ ಈಗ ಅವನು ಪೌಲನೊಂದಿಗೆ ರೋಮ್ನಲ್ಲಿದ್ದನು.—ಕೊಲೊ. 1:2, 7; 4:12.
3 ಈ ಪತ್ರದ ಆದಿ ಮತ್ತು ಅಂತ್ಯದ ಮಾತುಗಳು ಹೇಳುವಂತೆ ಅದನ್ನು ಬರೆದವನು ಅಪೊಸ್ತಲ ಪೌಲನೇ. (1:1; 4:18) ಅವನು ಸೆರೆಮನೆಯಿಂದ ಬರೆದನೆಂಬುದನ್ನೂ ಅವನ ಪತ್ರದ ಅಂತ್ಯಭಾಗ ಹೇಳುತ್ತದೆ. ಅವನು ರೋಮ್ನಲ್ಲಿ ಪ್ರಥಮವಾಗಿ ಸೆರೆಮನೆಯಲ್ಲಿದ್ದ ಸಾ.ಶ. 59-61ರಲ್ಲಿ ಇದನ್ನು ಬರೆದನು. ಆಗ ಅವನು ಅನೇಕ ಪ್ರೋತ್ಸಾಹನೀಯ ಪತ್ರಗಳನ್ನು ಬರೆದನು. ಕೊಲೊಸ್ಸೆಯವರಿಗೆ ಬರೆದ ಈ ಪತ್ರವನ್ನು ಫಿಲೆಮೋನನಿಗೆ ಬರೆದ ಪತ್ರದೊಂದಿಗೆ ಕಳುಹಿಸಲಾಗಿತ್ತು. (ಕೊಲೊ. 4:7-9; ಫಿಲೆ. 10, 23) ಈ ಪತ್ರವು ಎಫೆಸದವರಿಗೆ ಬರೆದ ಪತ್ರದ ಸಮಯವೇ ಬರೆಯಲ್ಪಟ್ಟಿತೆಂದು ತೋರಿಬರುತ್ತದೆ ಏಕೆಂದರೆ ಈ ಎರಡೂ ಪತ್ರಗಳಲ್ಲಿನ ಅನೇಕ ವಿಚಾರಗಳೂ ವಾಕ್ಸರಣಿಗಳೂ ಒಂದೇ ರೀತಿಯದ್ದಾಗಿವೆ.
4 ಕೊಲೊಸ್ಸೆಯವರಿಗೆ ಬರೆದ ಪತ್ರದ ವಿಶ್ವಾಸಾರ್ಹತೆಯನ್ನು ಸಂದೇಹಿಸಲು ಆಧಾರವೇ ಇಲ್ಲ. ಸುಮಾರು ಸಾ.ಶ. 200ರ ಚೆಸ್ಟರ್ ಬೀಟೀ ಪಪೈರಸ್ ನಂ. 2 (P46)ರೊಂದಿಗೆ ಈ ಪತ್ರವು ಕಂಡುಬರುವ ನಿಜತ್ವವು, ಆದಿಕ್ರೈಸ್ತರು ಅದನ್ನು ಪೌಲನ ಪತ್ರಗಳಲ್ಲಿ ಒಂದಾಗಿ ಅಂಗೀಕರಿಸಿದ್ದರೆಂದು ತೋರಿಸುತ್ತದೆ. ಪೌಲನ ಬೇರೆ ಪತ್ರಗಳ ವಿಶ್ವಾಸಾರ್ಹತೆಗೆ ಸಾಕ್ಷಿನೀಡಿದ ಆದಿ ವಿದ್ವಾಂಸರೇ ಇದರ ಸತ್ಯತೆಗೂ ಸಾಕ್ಷಿ ನೀಡಿದ್ದರು.
5 ಪೌಲನು ಕೊಲೊಸ್ಸೆಯವರಿಗೆ ಪತ್ರ ಬರೆಯುವಂತೆ ಪ್ರಚೋದಿಸಿದ್ದು ಯಾವುದು? ಒಂದನೆಯದಾಗಿ, ಒನೇಸಿಮನು ಕೊಲೊಸ್ಸೆಗೆ ಹಿಂದಿರುಗುತ್ತಿದ್ದ ವಿಷಯವೇ. ಎರಡನೆಯದಾಗಿ, ಎಪಫ್ರನು ಪೌಲನನ್ನು ಇತ್ತೀಚೆಗೆ ಜೊತೆಗೂಡಿದ್ದನು ಮತ್ತು ಕೊಲೊಸ್ಸೆ ಸಭೆಯ ಪರಿಸ್ಥಿತಿಗಳ ಬಗ್ಗೆ ಅವನ ವರದಿಯು ಈ ಪತ್ರ ಬರೆಯಲು ಪೌಲನಿಗೆ ಕಾರಣ ಕೊಟ್ಟಿದ್ದಿರಬೇಕು. (ಕೊಲೊ. 1:7, 8; 4:12) ಅಲ್ಲಿಯ ಕ್ರೈಸ್ತ ಸಭೆಗೆ ಒಂದು ಅಪಾಯದ ಬೆದರಿಕೆಯಿತ್ತು. ಆ ದಿನಗಳ ಧರ್ಮಗಳು ವಿಭಜನೆಹೊಂದುವ ಸ್ಥಿತಿಯಲ್ಲಿದ್ದವು. ಹಳೆಯ ಧರ್ಮಗಳ ಭಾಗಗಳನ್ನು ಬೆಸೆದು ಹೊಸ ಧರ್ಮಗಳನ್ನು ಸತತವಾಗಿ ರಚಿಸಲಾಗುತ್ತಿತ್ತು. ಸನ್ಯಾಸ ತತ್ವ, ಪ್ರೇತವ್ಯವಹಾರ ಮತ್ತು ವಿಗ್ರಹಾರಾಧನೆಯ ಅಂಧವಿಶ್ವಾಸ ಒಳಗೂಡಿದ್ದ ವಿಧರ್ಮಿ ತತ್ವಜ್ಞಾನಗಳು ಹಾಗೂ ಯೆಹೂದ್ಯರು ವರ್ಜಿಸಬೇಕಾಗಿದ್ದ ಆಹಾರಗಳು ಮತ್ತು ದಿನಾಚರಣೆಗಳು ಸಭೆಯಲ್ಲಿ ಕೆಲವರನ್ನು ಪ್ರಭಾವಿಸಿದ್ದಿರಬಹುದು. ಸಮಸ್ಯೆ ಯಾವುದೇ ಆಗಿದ್ದಿರಲಿ, ಎಪಫ್ರನು ಪೌಲನನ್ನು ನೋಡಲು ದೀರ್ಘ ಪ್ರಯಾಣ ಮಾಡಿ ರೋಮ್ಗೆ ಬರಲು ಇದು ಸಾಕಷ್ಟು ಕಾರಣವನ್ನು ಒದಗಿಸಿತು. ಆದರೂ ಆ ಸಭೆಯು ಒಟ್ಟಿನಲ್ಲಿ, ಆ ಕೂಡಲೇ ಅಪಾಯದ ಸ್ಥಿತಿಯಲ್ಲಿರಲಿಲ್ಲವೆಂದು ಎಪಫ್ರನು ಆ ಸಭೆಯ ಪ್ರೀತಿ ಮತ್ತು ದೃಢತೆಯ ಬಗ್ಗೆ ಕೊಟ್ಟ ವರದಿಯು ಸೂಚಿಸುತ್ತದೆ. ಈ ವರದಿಯನ್ನು ಕೇಳಿದ ಪೌಲನು ಕೊಲೊಸ್ಸೆ ಸಭೆಗೆ ಈ ಪತ್ರವನ್ನು ಬರೆಯುವ ಮೂಲಕ ನಿಷ್ಕೃಷ್ಟ ಜ್ಞಾನ ಮತ್ತು ಶುದ್ಧಾರಾಧನೆಯನ್ನು ಬಲವಾಗಿ ಸಮರ್ಥಿಸಿದನು. ವಿಧರ್ಮಿ ತತ್ವಜ್ಞಾನ, ದೇವದೂತರ ಆರಾಧನೆ ಮತ್ತು ಯೆಹೂದಿ ಸಂಪ್ರದಾಯಗಳ ಎದುರಿನಲ್ಲಿ ಕ್ರಿಸ್ತನ ದೇವದತ್ತ ಶ್ರೇಷ್ಠತೆಗೆ ಅದು ಒತ್ತನ್ನು ನೀಡಿತು.
ಪ್ರಯೋಜನಕರವೇಕೆ?
12 ಇಬ್ಬರು ಸಹೋದರರು ರೋಮ್ನಿಂದ ಬಂದಿದ್ದಾರೆಂಬ ಸುದ್ದಿ ಕೊಲೊಸ್ಸೆಯ ಸಹೋದರರ ಮಧ್ಯೆ ಎಷ್ಟು ಬೇಗನೇ ಹಬ್ಬಿರಬೇಕೆಂಬುದನ್ನು ನಾವು ಭಾವಿಸಬಲ್ಲೆವು. ಅವರು ಅತ್ಯಾತುರದಿಂದ, ಬಹುಶಃ ಫಿಲೆಮೋನನ ಮನೆಯಲ್ಲಿ, ಪೌಲನ ಪತ್ರದ ವಾಚನವನ್ನು ಕೇಳಲು ಕೂಡಿಬಂದಿರಬೇಕು. (ಫಿಲೆ. 2) ಕ್ರಿಸ್ತನ ನಿಖರವಾದ ಸ್ಥಾನ ಮತ್ತು ನಿಷ್ಕೃಷ್ಟ ಜ್ಞಾನದ ಅಗತ್ಯದ ಬಗ್ಗೆ ಅದು ಎಷ್ಟು ಚೈತನ್ಯದಾಯಕ ಸತ್ಯವನ್ನು ಒದಗಿಸಿತು! ಮಾನವ ತತ್ವಜ್ಞಾನಗಳು ಮತ್ತು ಯೆಹೂದಿ ಸಂಪ್ರದಾಯಗಳ ಅಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ತೋರಿಸಿ, ಶಾಂತಿಯನ್ನು ಮತ್ತು ಕ್ರಿಸ್ತನ ವಾಕ್ಯವನ್ನು ಎತ್ತಿಹಿಡಿಯಿತು! ಇಡೀ ಸಭೆಯಲ್ಲಿದ್ದ ಮೇಲ್ವಿಚಾರಕರು, ಪತಿಪತ್ನಿಯರು, ತಂದೆಗಳು, ಮಕ್ಕಳು, ಯಜಮಾನರು ಮತ್ತು ದಾಸರು—ಇವರೆಲ್ಲರ ಮನಸ್ಸು ಮತ್ತು ಹೃದಯಕ್ಕೆ ಬೇಕಾದ ಪೋಷಕ ಆಹಾರ ಅದರಲ್ಲಿತ್ತು. ಫಿಲೆಮೋನ ಮತ್ತು ಒನೇಸಿಮರು ಪುನಃ ಒಮ್ಮೆ ಯಜಮಾನ-ದಾಸರಾದಾಗ ಅವರಿಗೆ ನಿಶ್ಚಯವಾಗಿಯೂ ಈ ಪತ್ರದಲ್ಲಿ ಸುಸಲಹೆಯಿತ್ತು. ಹಿಂಡು ಪುನಃ ಸ್ವಸ್ಥ ಬೋಧನೆಯನ್ನು ಅನುಸರಿಸುವಂತೆ ಮಾಡಲು ಮೇಲ್ವಿಚಾರಕರಿಗೆ ಎಂತಹ ಉತ್ತಮ ಮಾರ್ಗದರ್ಶನ ಕೊಡಲ್ಪಟ್ಟಿತು! ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವ ಸದವಕಾಶಕ್ಕೆ ಕೊಲೊಸ್ಸೆಯವರ ಕೃತಜ್ಞತೆಯನ್ನು ಅದೆಷ್ಟು ಹೆಚ್ಚಿಸಿತು! ಲೋಕದ ದಾಸ್ಯಕ್ಕೊಳಪಡಿಸುವ ಯೋಚನೆಗಳು ಮತ್ತು ಪದ್ಧತಿಗಳಿಂದ ಮುಕ್ತರಾಗಲು ಕೊಲೊಸ್ಸೆಯವರಿಗೆ ಕೊಡಲಾದ ಭಕ್ತಿವರ್ಧಕ ಸಲಹೆಯು ಇಂದಿನ ಸಭೆಗೆ ಸಜೀವ ಸಂದೇಶವಾಗಿ ಉಳಿದಿರುತ್ತದೆ.—ಕೊಲೊ. 1:9-11, 17, 18; 2:8; 3:15, 16, 18-25; 4:1.
13 ಕ್ರೈಸ್ತ ಶುಶ್ರೂಷಕನಿಗೆ ಅವಶ್ಯವಿರುವ ಶ್ರೇಷ್ಠ ಸಲಹೆ ಕೊಲೊಸ್ಸೆ 4:6ರಲ್ಲಿದೆ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳಿದುಕೊಳ್ಳುವಿರಿ.” ಸತ್ಯದ ಸೌಜನ್ಯಶೀಲ ನುಡಿಗಳು ಪ್ರಾಮಾಣಿಕ ಹೃದಯದ ಜನರಿಗೆ ರುಚಿಕರವಾಗಿ ಪರಿಣಮಿಸಿ ಅವರ ಶಾಶ್ವತ ಪ್ರಯೋಜನಕ್ಕಾಗಿ ಕಾರ್ಯನಡಿಸುವವು. ಅಲ್ಲದೆ, ಕ್ರೈಸ್ತನು ಪೂರ್ತಿ ಎಚ್ಚೆತ್ತು, ಕೃತಜ್ಞತೆಯ ಹೃದಯದಿಂದ ಮಾಡುವ ಪ್ರಾರ್ಥನೆಯು ಯೆಹೋವನಿಂದ ಹೇರಳವಾದ ಆಶೀರ್ವಾದವನ್ನು ತರುವುದು: “ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.” ಅಲ್ಲದೆ, ಕ್ರೈಸ್ತ ಸಹವಾಸದಲ್ಲಿ ಎಷ್ಟು ಸಂತೋಷ ಹಾಗೂ ಚೈತನ್ಯ ದೊರೆಯಬಲ್ಲದು! “ಒಬ್ಬರಿಗೊಬ್ಬರು ಉಪದೇಶಮಾಡಿಕೊಳ್ಳಿರಿ, ಬುದ್ಧಿಹೇಳಿಕೊಳ್ಳಿರಿ” ಎಂದೂ, “ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ” ಎಂದೂ ಪೌಲನು ಹೇಳುತ್ತಾನೆ. (4:2; 3:16) ಕೊಲೊಸ್ಸೆಯವರಿಗೆ ಬರೆದ ಪತ್ರವನ್ನು ಪರೀಕ್ಷಿಸುವಾಗ ನೀವು ಇನ್ನೂ ಅನೇಕ ಸ್ವಸ್ಥವಾದ, ವ್ಯಾವಹಾರಿಕ ರತ್ನಮಣಿಗಳನ್ನು ಕಂಡುಕೊಳ್ಳುವಿರಿ.
14 ಧರ್ಮಶಾಸ್ತ್ರದ ಆಚರಣೆಗಳ ಕುರಿತು ಈ ಪತ್ರವು ಹೇಳುವುದು: “ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ.” (2:17) ಕೊಲೊಸ್ಸೆ ಪುಸ್ತಕದಲ್ಲಿ ಎತ್ತಿ ಹೇಳಲ್ಪಟ್ಟಿರುವುದು ಕ್ರಿಸ್ತನ ಈ ನಿಜಸ್ವರೂಪವೇ. ಕ್ರಿಸ್ತನೊಂದಿಗೆ ಐಕ್ಯದಲ್ಲಿರುವವರಿಗೆ ಸ್ವರ್ಗದಲ್ಲಿ ಕಾದಿರಿಸಲಾಗಿರುವ ಮಹಿಮಾಭರಿತ ನಿರೀಕ್ಷೆಯ ಕುರಿತು ಈ ಪತ್ರವು ಪದೇ ಪದೇ ಹೇಳುತ್ತದೆ. (1:5, 27; 3:4) ಇಂಥವರು ತಂದೆಯು ತಮ್ಮನ್ನು ಈಗಾಗಲೇ ಅಂಧಕಾರದ ದೊರೆತನದಿಂದ ಬಿಡಿಸಿ “ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ” ಸೇರಿಸಿರುವುದಕ್ಕಾಗಿ ಅಪಾರ ಕೃತಜ್ಞತೆಯನ್ನು ತೋರಿಸಬಲ್ಲರು. ಈ ಕಾರಣಕ್ಕಾಗಿಯೇ ಅವರು, “ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ” ಆಗಿರುವವನಿಗೆ, ಯಾರಿಗೆ “ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ . . . ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ” ಸೃಷ್ಟಿಸಲ್ಪಟ್ಟಿತೊ ಅವನಿಗೆ ಅಧೀನರಾಗಿದ್ದಾರೆ. ನೀತಿಯಿಂದ ಆಳಲು ಇವನು ದೇವರ ರಾಜ್ಯದಲ್ಲಿ ಅತ್ಯರ್ಹನಾಗಿದ್ದಾನೆ. ಆದಕಾರಣ, ಪೌಲನು ಅಭಿಷಿಕ್ತ ಕ್ರೈಸ್ತರಿಗೆ, “ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನೇ ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ” ಎಂದು ಬುದ್ಧಿಹೇಳುತ್ತಾನೆ.—1:12-16; 3:1.
[ಪಾದಟಿಪ್ಪಣಿ]
a ದ ನ್ಯೂ ವೆಸ್ಟ್ಮಿನ್ಸ್ಟರ್ ಡಿಕ್ಷನೆರಿ ಆಫ್ ದ ಬೈಬಲ್, 1970, ಪುಟ 181.