ಬೈಬಲ್ ಪುಸ್ತಕ ನಂಬರ್ 50—ಫಿಲಿಪ್ಪಿ
ಲೇಖಕ: ಪೌಲ
ಬರೆಯಲ್ಪಟ್ಟ ಸ್ಥಳ: ರೋಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ. 60-61
ಸುವಾರ್ತೆಯನ್ನು ಮಕೆದೋನ್ಯಕ್ಕೆ ಒಯ್ಯಬೇಕೆಂಬ ಕರೆಯನ್ನು ಅಪೊಸ್ತಲ ಪೌಲನು ದರ್ಶನದಲ್ಲಿ ಪಡೆದಾಗ, ಅವನೂ ಅವನ ಸಂಗಾತಿಗಳಾಗಿದ್ದ ಲೂಕ, ಸೀಲ ಮತ್ತು ಯುವ ತಿಮೊಥೆಯನೂ ಕೂಡಲೆ ಅದಕ್ಕೆ ವಿಧೇಯರಾದರು. ಏಷ್ಯಾ ಮೈನರ್ನ ತ್ರೋವದಿಂದ ಅವರು ನೆಯಾಪೊಲಿಗೆ ನೌಕಾಯಾನ ಮಾಡಿ, ಅಲ್ಲಿಂದ ಕಣಿವೆಯ ಮಾರ್ಗವಾಗಿ 15 ಕಿಲೊಮೀಟರ್ ಒಳನಾಡಿನಲ್ಲಿದ್ದ ಫಿಲಿಪ್ಪಿಗೆ ಕೂಡಲೇ ಹೊರಟರು. ಆ ಪಟ್ಟಣವನ್ನು ಲೂಕನು “ಮಕೆದೋನ್ಯದಲ್ಲಿ ಪ್ರಧಾನಪಟ್ಟಣ” ಎಂದು ವರ್ಣಿಸಿದ್ದಾನೆ. (ಅ.ಕೃ. 16:12) ಮಕೆದೋನ್ಯದ ರಾಜನಾಗಿದ್ದ IIನೆಯ ಫಿಲಿಪ್ (ಮಹಾ ಅಲೆಗ್ಸಾಂಡರ್ನ ತಂದೆ) ಎಂಬವನು ಸಾ.ಶ.ಪೂ. 356ರಲ್ಲಿ ಅದನ್ನು ವಶಪಡಿಸಿಕೊಂಡದ್ದರಿಂದ ಇದಕ್ಕೆ ಫಿಲಿಪ್ಪಿ ಎಂಬ ಹೆಸರು ಬಂತು. ತರುವಾಯ ಅದು ರೋಮನರ ವಶವಾಯಿತು. ಸಾ.ಶ.ಪೂ. 42ರಲ್ಲಿ, ಆಕ್ಟೇವಿಯನ್ನ (ತದನಂತರ ಕೈಸರ್ ಔಗುಸ್ತನಾದನು) ಸ್ಥಾನವನ್ನು ಬಲಪಡಿಸಲು ಸಹಾಯ ಮಾಡಿದ ನಿರ್ಣಾಯಕ ಕದನಗಳ ನಿವೇಶನವೇ ಇದಾಗಿತ್ತು. ಈ ವಿಜಯದ ಸ್ಮರಣಾರ್ಥವಾಗಿ ಅವನು ಫಿಲಿಪ್ಪಿಯನ್ನು ರೋಮನ್ ವಸಾಹತನ್ನಾಗಿ ಮಾಡಿದನು.
2 ಯಾವುದೇ ಹೊಸ ಪಟ್ಟಣವನ್ನು ತಲುಪಿದಾಗ ಯೆಹೂದ್ಯರಿಗೆ ಮೊದಲಾಗಿ ಸಾರುವುದು ಪೌಲನ ಪದ್ಧತಿಯಾಗಿತ್ತು. ಆದರೂ, ಸುಮಾರು ಸಾ.ಶ. 50ರಲ್ಲಿ ಅವನು ಪ್ರಥಮ ಬಾರಿ ಫಿಲಿಪ್ಪಿಗೆ ಬಂದಿದ್ದಾಗ, ಅಲ್ಲಿ ಯೆಹೂದ್ಯರ ಸಂಖ್ಯೆ ಕೊಂಚವಾಗಿತ್ತೆಂದೂ ಅವರಿಗೆ ಸಭಾಮಂದಿರವೂ ಇರಲಿಲ್ಲವೆಂದು ಅವನು ಕಂಡನು. ಆದ್ದರಿಂದ ಅವರು ಪ್ರಾರ್ಥನೆಗಾಗಿ ಪಟ್ಟಣದ ಹೊರಗಿನ ನದಿತೀರದಲ್ಲಿ ಕೂಡಿಬರುತ್ತಿದ್ದರು. ಆದರೆ ಪೌಲನ ಸಾರೋಣವು ಕೂಡಲೇ ಫಲವನ್ನು ಫಲಿಸಿತು. ಈ ಪರಿವರ್ತಿತರಲ್ಲಿ, ವ್ಯಾಪಾರಸ್ಥೆಯೂ ಯೆಹೂದಿ ಮತಾವಲಂಬಿಯೂ ಆದ ಲುದ್ಯಳು ಒಬ್ಬಳಾಗಿದ್ದಳು. ಆಕೆ ಸಿದ್ಧಮನಸ್ಸಿನಿಂದ ಕ್ರಿಸ್ತನ ಕುರಿತ ಸತ್ಯವನ್ನು ಅಂಗೀಕರಿಸಿ, ಆ ಸಂಚಾರಿಗಳು ತನ್ನ ಮನೆಯಲ್ಲಿ ತಂಗಬೇಕೆಂದು ಪಟ್ಟುಹಿಡಿದಳು. “ನಮ್ಮನ್ನು ಬಲವಂತ ಮಾಡಿದಳು” ಎಂದು ಹೇಳುತ್ತಾನೆ ಲೂಕನು. ಆದರೂ, ಬೇಗನೆ ವಿರೋಧವು ಏಳಲಾಗಿ, ಪೌಲ ಮತ್ತು ಸೀಲರಿಗೆ ದೊಣ್ಣೆಗಳಿಂದ ಹೊಡೆದು, ಸೆರೆಮನೆಗೆ ಹಾಕಲಾಯಿತು. ಅವರು ಸೆರೆಮನೆಯಲ್ಲಿದ್ದಾಗ ಒಂದು ಭೂಕಂಪವಾಯಿತು. ತದನಂತರ, ಪೌಲ ಸೀಲರಿಗೆ ಕಿವಿಗೊಟ್ಟ ಸೆರೆಮನೆಯ ಅಧಿಕಾರಿ ಮತ್ತು ಅವನ ಕುಟುಂಬ ವಿಶ್ವಾಸಿಗಳಾದರು. ಮರುದಿನ, ಪೌಲ ಮತ್ತು ಸೀಲರಿಗೆ ಬಿಡುಗಡೆಯಾಗಲಾಗಿ ಅವರು ಲುದ್ಯಳ ಮನೆಯಲ್ಲಿದ್ದ ಸಹೋದರರನ್ನು ಭೇಟಿಮಾಡಿ, ನಗರವನ್ನು ಬಿಟ್ಟುಹೋಗುವ ಮೊದಲು ಅವರನ್ನು ಪ್ರೋತ್ಸಾಹಿಸಿದರು. ಫಿಲಿಪ್ಪಿಯ ಹೊಸ ಸಭೆಯ ಆರಂಭವನ್ನು ಆವರಿಸಿದ್ದ ಸಂಕಷ್ಟಗಳ ಸ್ಪಷ್ಟ ಸ್ಮರಣೆಗಳನ್ನು ಪೌಲನು ತನ್ನೊಂದಿಗೆ ಒಯ್ದನು.—ಅ.ಕೃ. 16:9-40.
3 ಕೆಲವು ವರುಷಗಳ ಬಳಿಕ, ತನ್ನ ಮೂರನೆಯ ಮಿಷನೆರಿ ಪ್ರಯಾಣದ ಸಮಯದಲ್ಲಿ, ಪೌಲನು ಪುನಃ ಫಿಲಿಪ್ಪಿ ಸಭೆಗೆ ಭೇಟಿ ನೀಡಲು ಶಕ್ತನಾದನು. ಸಭೆಯನ್ನು ಪ್ರಥಮವಾಗಿ ಸ್ಥಾಪಿಸಿ ಸುಮಾರು ಹತ್ತು ವರುಷಗಳ ಬಳಿಕ, ಫಿಲಿಪ್ಪಿಯ ಸಹೋದರರ ಪ್ರೀತಿಯ ಹೃದಯಸ್ಪರ್ಶಿ ಕೊಡುಗೆಯು, ಆ ಪ್ರಿಯ ಸಭೆಗೆ ಪ್ರೇರಿತ ಪತ್ರವನ್ನು ಬರೆಯುವಂತೆ ಪೌಲನನ್ನು ಪ್ರಚೋದಿಸಿತು. ಆ ಪತ್ರವು ಈಗಲೂ ಪವಿತ್ರ ಶಾಸ್ತ್ರದಲ್ಲಿ ಇದೆ.
4 ಅದರ ಒಂದನೆಯ ವಚನದಲ್ಲಿ ಹೇಳಿರುವಂತೆ, ಪೌಲನು ಆ ಪತ್ರವನ್ನು ಬರೆದನೆಂಬುದನ್ನು ಬೈಬಲ್ ವ್ಯಾಖ್ಯಾನಕಾರರು ಸಾಮಾನ್ಯವಾಗಿ ಒಪ್ಪುವುದು ಸಕಾರಣದಿಂದಲೇ. ಪಾಲಿಕಾರ್ಪ್ (ಸಾ.ಶ. 69?-155?) ಎಂಬವನು ಫಿಲಿಪ್ಪಿಯವರಿಗೆ ಬರೆದ ಸ್ವಂತ ಪತ್ರದಲ್ಲಿ ಪೌಲನು ಇದನ್ನು ಅವರಿಗೆ ಬರೆದಿದ್ದನೆಂದು ಹೇಳುತ್ತಾನೆ. ಇಗ್ನೇಷಸ್, ಐರನೇಯಸ್, ಟೆರ್ಟಲಿಯನ್ ಮತ್ತು ಅಲೆಗ್ಸಾಂಡ್ರಿಯದ ಕ್ಲೆಮೆಂಟ್ರಂಥ ಆದಿ ಬೈಬಲ್ ವ್ಯಾಖ್ಯಾನಕಾರರು ಈ ಪತ್ರವು ಪೌಲನದ್ದೆಂದು ಉದ್ಧರಿಸಿರುತ್ತಾರೆ. ಸಾ.ಶ. ಎರಡನೆಯ ಶತಮಾನದ ಮ್ಯುರಟೋರಿಯನ್ ಅವಶಿಷ್ಟ ಭಾಗದಲ್ಲಿ ಮತ್ತು ಇತರ ಎಲ್ಲ ಆದಿ ಅಂಗೀಕೃತ ಗ್ರಂಥಪಟ್ಟಿಗಳಲ್ಲಿ ಅದನ್ನು ಉಲ್ಲೇಖಿಸಲಾಗಿದೆ. ಮತ್ತು ಸಾ.ಶ. 200ರದ್ದೆಂದು ಅಭಿಪ್ರಯಿಸಲಾಗುವ ಚೆಸ್ಟರ್ ಬೀಟೀ ಪಪೈರಸ್ ನಂ. 2 (P46)ರಲ್ಲಿ ಇದು ಪೌಲನ ಬೇರೆ ಎಂಟು ಪತ್ರಗಳೊಂದಿಗೆ ಕಂಡುಬರುತ್ತದೆ.
5 ಇದನ್ನು ಬರೆದ ಸ್ಥಳ ಮತ್ತು ಸಮಯವನ್ನು ಸಾಧಾರಣಮಟ್ಟಿಗೆ ನಿಶ್ಚಿತತೆಯಿಂದ ಸ್ಥಾಪಿಸಸಾಧ್ಯವಿದೆ. ಬರೆವಣಿಗೆಯ ಸಮಯದಲ್ಲಿ, ಪೌಲನು ರೋಮನ್ ಚಕ್ರವರ್ತಿಯ ಅಂಗರಕ್ಷಕ ದಳದ ವಶದಲ್ಲಿದ್ದನು ಮತ್ತು ಅವನ ಸುತ್ತಲೂ ಬಹಳಷ್ಟು ಕ್ರೈಸ್ತ ಚಟುವಟಿಕೆ ನಡೆಯುತ್ತಿತ್ತು. ಅವನು ತನ್ನ ಪತ್ರವನ್ನು ಕೈಸರನ ಮನೆವಾರ್ತೆಯಲ್ಲಿದ್ದ ನಂಬಿಗಸ್ತರ ವಂದನೆಗಳೊಂದಿಗೆ ಮುಗಿಸಿದನು. ಈ ಎಲ್ಲ ನಿಜತ್ವಗಳು, ಈ ಪತ್ರವನ್ನು ರೋಮ್ನಿಂದ ಕಳುಹಿಸಲಾಗಿತ್ತೆಂದು ಸೂಚಿಸುತ್ತವೆ.—ಫಿಲಿ. 1:7, 13, 14; 4:22; ಅ.ಕೃ. 28:30, 31.
6 ಆದರೆ ಈ ಪತ್ರವನ್ನು ಯಾವಾಗ ಬರೆಯಲಾಯಿತು? ಕ್ರೈಸ್ತನಾಗಿದ್ದ ಪೌಲನು ಸೆರೆಯಲ್ಲಿದ್ದಾನೆಂಬ ಸುದ್ದಿ ಮತ್ತು ಕಾರಣಗಳು ಚಕ್ರವರ್ತಿಯ ಅಂಗರಕ್ಷಕ ದಳ [ಪ್ರೀಟೋರಿಯನ್ ಗಾರ್ಡ್] ಮತ್ತು ಇನ್ನಿತರರಿಗೆ ಹಬ್ಬಿರುವುದರಿಂದ ಇದರರ್ಥ ಪೌಲನು ಈವಾಗಲೇ ರೋಮ್ನಲ್ಲಿ ಸಾಕಷ್ಟು ಸಮಯ ಇದ್ದಿರಬೇಕೆಂದು ತೋರಿಬರುತ್ತದೆ. ಅಲ್ಲದೆ, ಎಪಫ್ರೊದೀತನು ಫಿಲಿಪ್ಪಿಯಿಂದ (1,000 ಕಿಲೊಮೀಟರ್ ದೂರ) ಪೌಲನಿಗಾಗಿ ಕೊಡುಗೆ ತರಲು, ಮತ್ತು ಅವನು ರೋಮ್ನಲ್ಲಿ ಅಸ್ವಸ್ಥನಾದ ಸುದ್ದಿ ಫಿಲಿಪ್ಪಿಗೆ ಮುಟ್ಟಲು ಹಾಗೂ ಇದರ ಕುರಿತ ಸಂತಾಪದ ಅಭಿವ್ಯಕ್ತಿಗಳು ಫಿಲಿಪ್ಪಿಯಿಂದ ರೋಮ್ಗೆ ಮುಟ್ಟಲು ಸಾಕಷ್ಟು ಸಮಯ ಅಲ್ಲಿತ್ತು. (ಫಿಲಿ. 2:25-30; 4:18) ರೋಮ್ನಲ್ಲಿ ಪೌಲನ ಪ್ರಥಮ ಸೆರೆವಾಸವು ಸಾ.ಶ. 59-61ರಲ್ಲಿ ಸಂಭವಿಸಿದ್ದರಿಂದ, ರೋಮ್ಗೆ ಪ್ರಥಮ ಬಾರಿ ಬಂದು ಒಂದು ವರ್ಷವೊ, ಸ್ವಲ್ಪ ಹೆಚ್ಚು ಸಮಯವೊ ಕಳೆದ ಮೇಲೆ ಅಂದರೆ ಸುಮಾರು ಸಾ.ಶ. 60 ಅಥವಾ 61ರಲ್ಲಿ ಅವನು ಈ ಪತ್ರ ಬರೆದಿರುವುದು ಅತಿ ಸಂಭಾವ್ಯ.
7 ಫಿಲಿಪ್ಪಿಯಲ್ಲಿ ಸತ್ಯ ವಾಕ್ಯದ ಮೂಲಕ ಈ ಮಕ್ಕಳನ್ನು ಪಡೆಯಲು ಪೌಲನು ಪಟ್ಟ ಪ್ರಸವವೇದನೆಯಷ್ಟು ಪ್ರಯಾಸ, ಅವನ ಅನೇಕ ಪ್ರಯಾಣ ಮತ್ತು ಸಂಕಟಗಳನ್ನು ಅನುಸರಿಸಿ ಫಿಲಿಪ್ಪಿಯವರು ತೋರಿಸಿದ ಪ್ರೀತಿ ಹಾಗೂ ಅಗತ್ಯ ವಸ್ತುಗಳ ದಾನ ಕೊಡುವುದರಲ್ಲಿ ತೋರಿಬಂದ ಉದಾರಭಾವ, ಈ ಆರಂಭಿಕ ಮಿಷನೆರಿ ಪ್ರಯಾಣದಲ್ಲಿ ಮಕೆದೋನ್ಯದಲ್ಲಿ ದೊರೆತ ಯೆಹೋವನ ಮಹತ್ವದ ಆಶೀರ್ವಾದ—ಇದೆಲ್ಲ ಒಟ್ಟುಸೇರಿ ಪೌಲ ಮತ್ತು ಫಿಲಿಪ್ಪಿಯ ಸಹೋದರರ ಮಧ್ಯೆ ಪರಸ್ಪರ ಪ್ರೀತಿಯ ಬಲವಾದ ಬಂಧವನ್ನು ಬೆಸೆಯಿತು. ಈಗ ಅವರ ದಯಾಪೂರಿತ ದಾನ ಮತ್ತು ಎಪಫ್ರೊದೀತನ ಬಗ್ಗೆ ಅವರ ಕಾತರದ ಕೇಳಿಕೆ ಮತ್ತು ರೋಮ್ನಲ್ಲಿ ಆಗುತ್ತಿದ್ದ ಸುವಾರ್ತೆಯ ಪ್ರಗತಿ—ಇವೆಲ್ಲ ಪೌಲನು ಅವರಿಗೆ ಭಕ್ತಿವರ್ಧಕ ಪ್ರೋತ್ಸಾಹನೆ ಸೇರಿದ ಹೃದಯೋಲ್ಲಾಸಕರ ಮತ್ತು ಮಮತೆಯ ಪತ್ರವನ್ನು ಬರೆಯುವಂತೆ ಹುರಿದುಂಬಿಸಿತು.
ಪ್ರಯೋಜನಕರವೇಕೆ?
12 ಈ ಫಿಲಿಪ್ಪಿಯವರಿಗೆ ಬರೆದ ಪತ್ರವು ನಮಗೆ ಎಷ್ಟೊಂದು ಪ್ರಯೋಜನಕರವಾಗಿದೆ! ಯೆಹೋವನ ಒಪ್ಪಿಗೆಯನ್ನು ಮತ್ತು ಫಿಲಿಪ್ಪಿಯ ಸಭೆ ಪೌಲನಿಂದ ಪಡೆದಂಥದ್ದೇ ರೀತಿಯ ಪ್ರಶಂಸೆಯನ್ನು ಕ್ರೈಸ್ತ ಮೇಲ್ವಿಚಾರಕರಿಂದ ಪಡೆಯಲು ನಾವು ನಿಶ್ಚಯವಾಗಿಯೂ ಬಯಸುತ್ತೇವೆ. ಇದನ್ನು ನಮ್ಮದಾಗಿಸಬೇಕಾದರೆ ನಾವು ಫಿಲಿಪ್ಪಿಯವರ ಉತ್ತಮ ಮಾದರಿಯನ್ನು ಮತ್ತು ಪೌಲನ ಪ್ರೀತಿಯ ಸಲಹೆಯನ್ನು ಅನುಸರಿಸಬೇಕು. ಫಿಲಿಪ್ಪಿಯವರಂತೆ ನಾವು ಸಹ ಉದಾರಭಾವವನ್ನು, ನಮ್ಮ ಸಹೋದರರು ಕಷ್ಟದಲ್ಲಿರುವಾಗ ಅವರಿಗೆ ಸಹಾಯಮಾಡುವ ಚಿಂತಾಭಾವವನ್ನು ಮತ್ತು ಸುವಾರ್ತೆಯನ್ನು ಸಮರ್ಥಿಸಿ ಕಾನೂನುಬದ್ಧವಾಗಿ ಸ್ಥಾಪಿಸುವುದರಲ್ಲಿ ಭಾಗಿಗಳಾಗುವ ಭಾವವನ್ನು ಪ್ರದರ್ಶಿಸಬೇಕು. (1:3-7) ನಾವು “ಒಂದೇ ಆತ್ಮದಲ್ಲಿ ದೃಢವಾಗಿ ನಿಂತು ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ” ಹೋರಾಡಿ, ವಕ್ರಬುದ್ಧಿಯುಳ್ಳ ಮೂರ್ಖ ಸಂತತಿಯ ಮಧ್ಯದಲ್ಲಿ “ಜ್ಯೋತಿರ್ಮಂಡಲಗಳಂತೆ” ಹೊಳೆಯಬೇಕು. ಇವನ್ನು ಮಾಡಿ, ಮಾನ್ಯವಾದ ಅಂದರೆ ಗಂಭೀರ ವಿಷಯಗಳನ್ನು ಪರಿಗಣಿಸುವಾಗ ನಾವು ನಮ್ಮ ಸಹೋದರರಿಗೆ, ಫಿಲಿಪ್ಪಿಯವರು ಅಪೊಸ್ತಲ ಪೌಲನಿಗೆ ಅತ್ಯುತ್ಕೃಷ್ಟ ಆನಂದವಾಗಿ ಪರಿಣಮಿಸಿದಂತೆಯೇ ಆಗುವ ಸಂಭವವಿದೆ.—1:27; 2:15; 4:1, 8.
13 “ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ,” ಎನ್ನುತ್ತಾನೆ ಪೌಲನು. ಅವನನ್ನು ಯಾವ ವಿಧದಲ್ಲಿ ಅನುಸರಿಸಬೇಕು? ಇದನ್ನು ಮಾಡುವ ಒಂದು ವಿಧವು ಎಲ್ಲ ಪರಿಸ್ಥಿತಿಗಳಲ್ಲಿ ಸ್ವಸಂತುಷ್ಟರಾಗುವುದೇ. ದೇವರ ಸೇವೆಯಲ್ಲಿ ಹುರುಪಿನಿಂದ ಮತ್ತು ಉಲ್ಲಾಸದಿಂದ ಮುಂದುವರಿಯುವಂತೆ ಪೌಲನು ಸಮೃದ್ಧಿಯಲ್ಲಿದ್ದಿರಲಿ, ಕೊರತೆಯಲ್ಲಿದ್ದಿರಲಿ, ಗುಣುಗುಟ್ಟದೆ ಎಲ್ಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಕಲಿತನು. ನಂಬಿಗಸ್ತ ಸಹೋದರರಿಗೆ ಕೋಮಲ ಮಮತೆಯನ್ನು ತೋರಿಸುವುದರಲ್ಲೂ ಎಲ್ಲರೂ ಪೌಲನಂತಿರಬೇಕು. ಅವನು ತಿಮೊಥೆಯ ಮತ್ತು ಎಪಫ್ರೊದೀತರ ಶುಶ್ರೂಷೆಯ ಕುರಿತು ಎಷ್ಟು ಮಮತೆ ಹಾಗೂ ಆನಂದದಿಂದ ಮಾತಾಡಿದನು! ಮತ್ತು ತನ್ನ ಫಿಲಿಪ್ಪಿಯ ಸಹೋದರರನ್ನು, “ಪ್ರಿಯರೂ ಇಷ್ಟರೂ . . . ನನಗೆ ಸಂತೋಷವೂ ಜಯಮಾಲೆಯೂ” ಎಂದು ಸಂಬೋಧಿಸುತ್ತ ಅವರಿಗೆ ಎಷ್ಟು ಆಪ್ತತೆಯಿಂದಿದ್ದನು!—3:17; 4:1, 11, 12; 2:19-30.
14 ಪೌಲನನ್ನು ಇನ್ನಾವ ರೀತಿಯಲ್ಲಿ ಅನುಕರಿಸಬಹುದು? “ಬಿರುದನ್ನು ಗುರಿಮಾಡಿಕೊಂಡು” ಓಡುವ ಮೂಲಕವೇ! ತಮ್ಮ ಮನಸ್ಸುಗಳನ್ನು ‘ಗಂಭೀರವಾದ ವಿಷಯಗಳ’ (NW) ಮೇಲಿಟ್ಟಿರುವ ಎಲ್ಲರಿಗೂ ಸ್ವರ್ಗ ಮತ್ತು ಭೂಮಿಯಲ್ಲಿ ಯೆಹೋವನಿಗಿರುವ ಉದ್ದೇಶದ ಬಗ್ಗೆ ಅತ್ಯಾಸಕ್ತಿಯಿದೆ. ಏಕೆಂದರೆ ಅಲ್ಲಿ ಎಲ್ಲರೂ “ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” ಫಿಲಿಪ್ಪಿಯವರಿಗೆ ಬರೆದ ಉತ್ತಮ ಸಲಹೆಯು ದೇವರ ರಾಜ್ಯದ ಸಂಬಂಧದಲ್ಲಿ ನಿತ್ಯಜೀವದ ನಿರೀಕ್ಷೆಯಿರುವ ಎಲ್ಲರು ಆ ಗುರಿಯ ಕಡೆಗೆ ಮುನ್ನಡೆಯುವಂತೆ ಪ್ರೋತ್ಸಾಹಿಸುತ್ತದೆ. ಆದರೂ, ಫಿಲಿಪ್ಪಿಯವರಿಗೆ ಬರೆದ ಪತ್ರವನ್ನು ಮುಖ್ಯವಾಗಿ, “ಪರಲೋಕಸಂಸ್ಥಾನದವ”ರಿಗಾಗಿ ಮತ್ತು ಯಾರು ತಮ್ಮ ದೇಹವು “ಪ್ರಭಾವವುಳ್ಳ [ಕ್ರಿಸ್ತನ] ದೇಹದ ಸಾರೂಪ್ಯವಾಗುವಂತೆ” ತವಕದಿಂದ ಎದುರುನೋಡುತ್ತಿದ್ದಾರೊ ಅವರಿಗೆ ಸಂಬೋಧಿಸಲಾಗಿದೆ. ಹೀಗೆ ಇವರೆಲ್ಲರೂ “ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ” ‘ಇವರನ್ನು ಮೇಲಕ್ಕೆ ಕರೆದು ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತ’ ಅಪೊಸ್ತಲ ಪೌಲನನ್ನು ಅನುಕರಿಸಲಿ!—4:8; 2:10, 11; 3:13, 14, 20, 21.