ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es25 ಪು. 113-126
  • ಅಕ್ಟೋಬರ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌
  • ದಿನದ ವಚನ ಓದಿ ಚರ್ಚಿಸೋಣ—2025
  • ಉಪಶೀರ್ಷಿಕೆಗಳು
  • ಬುಧವಾರ, ಅಕ್ಟೋಬರ್‌ 1
  • ಗುರುವಾರ, ಅಕ್ಟೋಬರ್‌ 2
  • ಶುಕ್ರವಾರ, ಅಕ್ಟೋಬರ್‌ 3
  • ಶನಿವಾರ, ಅಕ್ಟೋಬರ್‌ 4
  • ಭಾನುವಾರ, ಅಕ್ಟೋಬರ್‌ 5
  • ಸೋಮವಾರ, ಅಕ್ಟೋಬರ್‌ 6
  • ಮಂಗಳವಾರ, ಅಕ್ಟೋಬರ್‌ 7
  • ಬುಧವಾರ, ಅಕ್ಟೋಬರ್‌ 8
  • ಗುರುವಾರ, ಅಕ್ಟೋಬರ್‌ 9
  • ಶುಕ್ರವಾರ, ಅಕ್ಟೋಬರ್‌ 10
  • ಶನಿವಾರ, ಅಕ್ಟೋಬರ್‌ 11
  • ಭಾನುವಾರ, ಅಕ್ಟೋಬರ್‌ 12
  • ಸೋಮವಾರ, ಅಕ್ಟೋಬರ್‌ 13
  • ಮಂಗಳವಾರ, ಅಕ್ಟೋಬರ್‌ 14
  • ಬುಧವಾರ, ಅಕ್ಟೋಬರ್‌ 15
  • ಗುರುವಾರ, ಅಕ್ಟೋಬರ್‌ 16
  • ಶುಕ್ರವಾರ, ಅಕ್ಟೋಬರ್‌ 17
  • ಶನಿವಾರ, ಅಕ್ಟೋಬರ್‌ 18
  • ಭಾನುವಾರ, ಅಕ್ಟೋಬರ್‌ 19
  • ಸೋಮವಾರ, ಅಕ್ಟೋಬರ್‌ 20
  • ಮಂಗಳವಾರ, ಅಕ್ಟೋಬರ್‌ 21
  • ಬುಧವಾರ, ಅಕ್ಟೋಬರ್‌ 22
  • ಗುರುವಾರ, ಅಕ್ಟೋಬರ್‌ 23
  • ಶುಕ್ರವಾರ, ಅಕ್ಟೋಬರ್‌ 24
  • ಶನಿವಾರ, ಅಕ್ಟೋಬರ್‌ 25
  • ಭಾನುವಾರ, ಅಕ್ಟೋಬರ್‌ 26
  • ಸೋಮವಾರ, ಅಕ್ಟೋಬರ್‌ 27
  • ಮಂಗಳವಾರ, ಅಕ್ಟೋಬರ್‌ 28
  • ಬುಧವಾರ, ಅಕ್ಟೋಬರ್‌ 29
  • ಗುರುವಾರ, ಅಕ್ಟೋಬರ್‌ 30
  • ಶುಕ್ರವಾರ, ಅಕ್ಟೋಬರ್‌ 31
ದಿನದ ವಚನ ಓದಿ ಚರ್ಚಿಸೋಣ—2025
es25 ಪು. 113-126

ಅಕ್ಟೋಬರ್‌

ಬುಧವಾರ, ಅಕ್ಟೋಬರ್‌ 1

ಸ್ವರ್ಗದಿಂದ ಬರೋ ವಿವೇಕ . . . ಮಾತು ಕೇಳೋ ಮನಸ್ಸನ್ನ ಕೊಡುತ್ತೆ.—ಯಾಕೋ. 3:17.

“ನಿನ್ನ ಮಾತನ್ನ ಪಾಲಿಸಬೇಕು ಅನ್ನೋ ಆಸೆಯನ್ನ ನನ್ನಲ್ಲಿ ಎಬ್ಬಿಸು” ಅಂತ ರಾಜ ದಾವೀದ ಪ್ರಾರ್ಥನೆ ಮಾಡಿದ. (ಕೀರ್ತ. 51:12) ಅವನು ಯಾಕೆ ಹಾಗೆ ಹೇಳಿದ? ಯಾಕಂದ್ರೆ ಯೆಹೋವನ ಮೇಲೆ ಪ್ರೀತಿ ಇದ್ರೂ ಕೆಲವೊಮ್ಮೆ ಆತನ ಮಾತು ಕೇಳೋಕೆ ಅವನಿಗೆ ಕಷ್ಟ ಆಗ್ತಿತ್ತು. ನಮಗೂ ಕೆಲವೊಮ್ಮೆ ಕಷ್ಟ ಆಗುತ್ತೆ. ಅದಕ್ಕೆ ಮೂರು ಕಾರಣ ಇದೆ. ಒಂದು, ನಾವು ಅಪರಿಪೂರ್ಣರು. ಹಾಗಾಗಿ ನಮಗೆ ಯಾರಾದ್ರೂ ಏನಾದ್ರೂ ಹೇಳಿದ್ರೆ ‘ಅವ್ರ ಮಾತನ್ನ ನಾನ್ಯಾಕೆ ಕೇಳಬೇಕು’ ಅನ್ನೋ ಸ್ವಭಾವ ಇದೆ. ಎರಡು, ನಾವು ಸೈತಾನನ ತರ ಆಗಬೇಕು ಅನ್ನೋದು ಅವನ ಆಸೆ. ಅದಕ್ಕೆ ನಾವು ಯೆಹೋವ ದೇವರ ವಿರುದ್ಧ ಹೋಗೋ ತರ ಅವನು ಮಾಡ್ತಾನೆ. (2 ಕೊರಿಂ. 11:3) ಮೂರು, ಅವನ “ಮನೋಭಾವ ಗಾಳಿ ತರ ಎಲ್ಲ ಕಡೆ ಇದೆ. ಅದು ಮಾತು ಕೇಳದ ಜನ್ರನ್ನ ಹಾಳು ಮಾಡ್ತಾ ಇದೆ.” ಅಂಥ ಜನ್ರು ನಮ್ಮ ಸುತ್ತಮುತ್ತ ಇದ್ದಾರೆ. (ಎಫೆ. 2:2) ನಮ್ಮಲ್ಲಿ ಅಪರಿಪೂರ್ಣತೆ ಇರೋದ್ರಿಂದ, ಸೈತಾನನಿಂದ ಮತ್ತು ನಮ್ಮ ಸುತ್ತಮುತ್ತ ಇರೋ ಜನ್ರು ಹೀಗಿರೋದ್ರಿಂದ ಯೆಹೋವನ ಮಾತು ಕೇಳೋಕೆ ನಮಗೆ ಕೆಲವೊಮ್ಮೆ ತುಂಬ ಕಷ್ಟ ಆಗುತ್ತೆ. ಹಾಗಾಗಿ ಯೆಹೋವ ಮತ್ತು ಆತನು ನೇಮಿಸಿರೋ ವ್ಯಕ್ತಿಗಳ ಮಾತನ್ನ ಕೇಳೋಕೆ ನಾವು ತುಂಬ ಪ್ರಯತ್ನ ಹಾಕಬೇಕು. w23.10 6 ¶1

ಗುರುವಾರ, ಅಕ್ಟೋಬರ್‌ 2

ಆದ್ರೆ ನೀನು ಚೆನ್ನಾಗಿರೋ ದ್ರಾಕ್ಷಾಮದ್ಯವನ್ನೇ ಕೊನೆ ತನಕ ಕೊಡ್ತಾ ಇದ್ದೀಯಲ್ಲಾ?—ಯೋಹಾ. 2:10.

ಯೇಸು ಮಾಡಿದ ಈ ಅದ್ಭುತದಿಂದ ಆತನ ಬಗ್ಗೆ ನಾವೇನು ಕಲಿಬಹುದು? ಯೇಸು ತುಂಬ ದೀನ ವ್ಯಕ್ತಿ ಆಗಿದ್ದ. ತಾನು ಮಾಡಿದ ಅದ್ಭುತದ ಬಗ್ಗೆ ಕೊಚ್ಕೊಳ್ಳಲಿಲ್ಲ. ತನ್ನ ಸಾಧನೆಗಳ ಬಗ್ಗೆ ಯಾವತ್ತೂ ಜನ್ರ ಹತ್ರ ಹೋಗಿ ಹೇಳ್ಕೊಳ್ಳಲಿಲ್ಲ. ಬದಲಿಗೆ ಇದನ್ನೆಲ್ಲ ಮಾಡಿದ್ದು ತನ್ನ ಅಪ್ಪನ ಸಹಾಯದಿಂದಾನೇ ಅಂತ ಹೇಳಿದನು. ಯೆಹೋವ ದೇವರಿಗೆ ಹೊಗಳಿಕೆ ಸಿಗೋ ತರ ಮಾಡಿದನು. (ಯೋಹಾ. 5:19, 30; 8:28) ನಾವು ಕೂಡ ಯೇಸು ತರಾನೇ ಇರಬೇಕು. ನಮ್ಮ ಸಾಧನೆಗಳ ಬಗ್ಗೆ ಬೇರೆಯವ್ರ ಹತ್ರ ಕೊಚ್ಕೊಬಾರದು. ಅದು ನಮ್ಮಿಂದ ಅಲ್ಲ, ಯೆಹೋವನ ಸಹಾಯದಿಂದ ಮಾತ್ರ ಮಾಡಕ್ಕಾಗೋದು. (ಯೆರೆ. 9:23, 24) ಹಾಗಾಗಿ ಆ ಹೊಗಳಿಕೆಯೆಲ್ಲಾ ಯೆಹೋವನಿಗೇ ಸಿಗಬೇಕು. ಯೆಹೋವನ ಸಹಾಯ ಇಲ್ಲದೇ ನಾವೇನಾದ್ರೂ ಮಾಡಕ್ಕಾಗುತ್ತಾ ಹೇಳಿ? (1 ಕೊರಿಂ. 1:26-31) ನಾವು ದೀನರಾಗಿದ್ರೆ ಬೇರೆಯವ್ರಿಗೆ ನಮ್ಮಿಂದ ಏನೇ ಒಳ್ಳೇದಾದ್ರೂ ಅದ್ರ ಬಗ್ಗೆ ನಾವು ಕೊಚ್ಕೊಳಲ್ಲ. ನಾವು ಮಾಡೋ ಎಲ್ಲಾ ಒಳ್ಳೇ ಕೆಲಸಗಳನ್ನ ಯೆಹೋವ ನೋಡ್ತಾನೆ ಮತ್ತು ನಮ್ಮನ್ನ ಆಶೀರ್ವದಿಸ್ತಾನೆ ಅಂತ ನಮಗೆ ಗೊತ್ತಿರುತ್ತೆ. (ಮತ್ತಾಯ 6:2-4 ಹೋಲಿಸಿ; ಇಬ್ರಿ. 13:16) ಯೇಸು ತರ ನಾವೂ ದೀನತೆ ತೋರಿಸಿದ್ರೆ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ.—1 ಪೇತ್ರ 5:6. w23.04 4 ¶9; 5 ¶11-12

ಶುಕ್ರವಾರ, ಅಕ್ಟೋಬರ್‌ 3

ನಿಮ್ಮ ಬಗ್ಗೆ ಮಾತ್ರ ಯೋಚಿಸದೆ, ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಿ.—ಫಿಲಿ. 2:4.

ಅಪೊಸ್ತಲ ಪೌಲ ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ತಮ್ಮ ಬಗ್ಗೆ ಮಾತ್ರ ಅಲ್ಲ ಬೇರೆಯವ್ರ ಬಗ್ಗೆನೂ ಯೋಚ್ನೆ ಮಾಡಬೇಕು ಅಂತ ಹೇಳಿದ. ಪೌಲ ಹೇಳಿದ ತರ ನಾವು ಕೂಟಗಳಲ್ಲಿ ಹೇಗೆ ನಡ್ಕೊಬಹುದು? ಉತ್ರ ಹೇಳೋಕೆ ಬೇರೆಯವ್ರಿಗೂ ಆಸೆ ಇರುತ್ತೆ ಅನ್ನೋದನ್ನ ನೆನಪಲ್ಲಿ ಇಟ್ಕೊಬೇಕು. ಹಾಗಾಗಿ ಉತ್ರ ಹೇಳೋಕೆ ಅವ್ರಿಗೂ ಅವಕಾಶ ಮಾಡ್ಕೊಡಬೇಕು. ನೆನಸಿ, ನೀವು ಮತ್ತೆ ನಿಮ್ಮ ಸ್ನೇಹಿತರೆಲ್ಲ ಕೂತ್ಕೊಂಡು ಮಾತಾಡ್ತಾ ಇದ್ದೀರ. ಆಗ ಬರೀ ನೀವೇ ಮಾತಾಡ್ತಾ ಇದ್ರೆ ಚೆನ್ನಾಗಿರುತ್ತಾ? ಇಲ್ಲ ಅಲ್ವಾ. ಅವ್ರಿಗೂ ಮಾತಾಡೋಕೆ ಅವಕಾಶ ಕೊಡ್ತೀರ ತಾನೇ?. ಅದೇ ತರ ನಮ್ಮ ಸಹೋದರ ಸಹೋದರಿಯರು ಕೂಟಗಳಲ್ಲಿ ಉತ್ರ ಹೇಳೋಕೆ ನಾವು ಅವಕಾಶ ಮಾಡ್ಕೊಡಬೇಕು. (1 ಕೊರಿಂ. 10:24) ನಿಮ್ಮ ಉತ್ರ ಚಿಕ್ಕದಾಗಿರಬೇಕು. ಹೀಗೆ ಮಾಡಿದ್ರೆ ಬೇರೆ ಸಹೋದರ ಸಹೋದರಿಯರಿಗೂ ಉತ್ರ ಕೊಡೋಕೆ ಅವಕಾಶ ಸಿಗುತ್ತೆ. ಉತ್ರ ಕೊಡುವಾಗ ಪ್ಯಾರದಲ್ಲಿರೋ ಒಂದು ಅಂಶ ಮಾತ್ರ ಹೇಳಿ. ಆಗ ಉಳಿದಿರೋ ವಿಷ್ಯಗಳನ್ನ ಹೇಳೋಕೆ ಬೇರೆಯವ್ರಿಗೂ ಅವಕಾಶ ಸಿಗುತ್ತೆ. w23.04 22-23 ¶11-13

ಶನಿವಾರ, ಅಕ್ಟೋಬರ್‌ 4

ಸಿಹಿಸುದ್ದಿಗಾಗಿ ಮತ್ತು ಅದನ್ನ ಬೇರೆಯವ್ರಿಗೆ ಸಾರೋದಕ್ಕಾಗಿ ನಾನು ಎಲ್ಲ ಮಾಡ್ತೀನಿ.—1 ಕೊರಿಂ. 9:23.

ಪರಿಸ್ಥಿತಿ ಬದಲಾದಾಗ ನಾವು ಬೇರೆಯವ್ರಿಗೆ ಸಹಾಯ ಮಾಡೋಕೆ ಗಮನಕೊಡಬೇಕು. ಅದ್ರಲ್ಲೂ ಸಿಹಿಸುದ್ದಿ ಸಾರಬೇಕು. ನಾವು ಸಿಹಿಸುದ್ದಿ ಸಾರುವಾಗ ಬೇರೆಬೇರೆ ತರದ ಜನ್ರು ಸಿಗ್ತಾರೆ. ಅವ್ರ ಸ್ವಭಾವ, ಅವರು ನಂಬೋ ವಿಚಾರಗಳು ಬೇರೆ ಬೇರೆಯಾಗಿರುತ್ತೆ. ಹಾಗಾಗಿ ಅವ್ರಿಗೆ ತಕ್ಕ ಹಾಗೆ ನಾವು ಮಾತಾಡಬೇಕು. ಇದನ್ನೇ ಅಪೊಸ್ತಲ ಪೌಲ ಮಾಡಿದ. ಅವನನ್ನ ಯೇಸು “ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ” ನೇಮಿಸಿದನು. (ರೋಮ. 11:13) ಈ ಜವಾಬ್ದಾರಿ ಸಿಕ್ಕಿದಾಗ ಪೌಲ ಯೆಹೂದ್ಯರಿಗೆ, ಗ್ರೀಕರಿಗೆ, ವಿಧ್ಯಾವಂತರಿಗೆ, ಹಳ್ಳಿ ಜನ್ರಿಗೆ, ಸರ್ಕಾರಿ ಅಧಿಕಾರಿಗಳಿಗೆ ಮತ್ತು ರಾಜರಿಗೆ ಸಾರಿದ. ಇವ್ರ ಮನಸ್ಸು ಮುಟ್ಟೋಕೆ ಅವನು “ಎಲ್ಲ ತರದ ಜನ್ರಿಗೆ ಎಲ್ಲ” ಆದ. (1 ಕೊರಿಂ. 9:19-22) ಅದಕ್ಕೋಸ್ಕರ ಅವನು ಜನ್ರ ಸಂಸ್ಕೃತಿ, ಹಿನ್ನೆಲೆ, ನಂಬಿಕೆಗಳೇನು ಅಂತ ಚೆನ್ನಾಗಿ ತಿಳ್ಕೊಂಡ. ಆಮೇಲೆ ಅದಕ್ಕೆ ತಕ್ಕ ಹಾಗೆ ಸಿಹಿಸುದ್ದಿ ಸಾರಿದ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಜನ್ರ ಹಿನ್ನೆಲೆ ಏನು ಅಂತ ನಾವು ಮೊದ್ಲು ತಿಳ್ಕೊಬೇಕು. ಆಮೇಲೆ ಅದಕ್ಕೆ ತಕ್ಕ ಹಾಗೆ ಅವ್ರ ಹತ್ರ ಮಾತಾಡಬೇಕು. ಆಗ ನಾವು ಅವ್ರ ಮನಸ್ಸು ಮುಟ್ಟೋಕೆ ಆಗುತ್ತೆ. w23.07 23 ¶11-12

ಭಾನುವಾರ, ಅಕ್ಟೋಬರ್‌ 5

ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ ನಡ್ಕೊಬೇಕು.—2 ತಿಮೊ. 2:24.

ಮೃದು ಸ್ವಭಾವ ಇರೋರು ಹೇಡಿಗಳು ಅಂತ ಜನ ಅಂದ್ಕೊಳ್ತಾರೆ. ಆದ್ರೆ ಆ ಗುಣ ತೋರಿಸೋಕೆ ಧೈರ್ಯ, ಗುಂಡಿಗೆ ಬೇಕು. ಯಾಕಂದ್ರೆ ತುಂಬ ಕಷ್ಟದ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಸಮಾಧಾನವಾಗಿ ಇರಬೇಕಂದ್ರೆ ಅದು ಹೇಳಿದಷ್ಟು ಸುಲಭ ಅಲ್ಲ. ಮೃದು ಸ್ವಭಾವ ಅಥವಾ ಸೌಮ್ಯತೆ “ಪವಿತ್ರಶಕ್ತಿಯಿಂದ ಬರೋ ಗುಣ” ಅಂತ ಬೈಬಲ್‌ ಹೇಳುತ್ತೆ. (ಗಲಾ. 5:22, 23) ಕೆಲವೊಮ್ಮೆ ಗ್ರೀಕಲ್ಲಿ ಈ ಪದನ ಚೆನ್ನಾಗಿ ಪಳಗಿಸಿರೋ ಕುದುರೆ ಬಗ್ಗೆ ವಿವರಿಸುವಾಗ ಬಳಸಿದ್ದಾರೆ. ಒರಟೊರಟಾಗಿ ನಡ್ಕೊಳ್ಳೋ ಕುದುರೆನ ನೀವು ಪಳಗಿಸ್ತೀರ ಅಂತ ಅಂದ್ಕೊಳ್ಳಿ. ಆಮೇಲೆ ಅದು ಮೃದುವಾಗಿ ನಡ್ಕೊಳ್ಳುತ್ತೆ. ಹಾಗಂತ ಅದಕ್ಕಿರೋ ಶಕ್ತಿಯೆಲ್ಲಾ ಹೋಗಿಬಿಡುತ್ತಾ? ಇಲ್ಲ. ಅದೇ ತರ ಒಬ್ಬ ವ್ಯಕ್ತಿ ಮೃದು ಸ್ವಭಾವದವನು ಅಂದ ತಕ್ಷಣ ಅವನು ಹೇಡಿ ಅಲ್ಲ. ಹಾಗಾದ್ರೆ ಈ ಗುಣನ ಬೆಳೆಸ್ಕೊಳ್ಳೋದು ಹೇಗೆ? ಇದನ್ನ ನಮಗೆ ನಾವೇ ಬೆಳೆಸ್ಕೊಳ್ಳೋಕೆ ಆಗಲ್ಲ. ಇದು ಪವಿತ್ರಶಕ್ತಿಯಿಂದ ಬರೋ ಗುಣ ಆಗಿರೋದ್ರಿಂದ ಇದನ್ನ ಬೆಳೆಸ್ಕೊಳ್ಳೋಕೆ ಯೆಹೋವ ದೇವರ ಹತ್ರ ಸಹಾಯ ಕೇಳಬೇಕು. ಎಷ್ಟೋ ಸಹೋದರರು ವಿರೋಧ ಬಂದಾಗ ಮೃದುವಾಗಿ ನಡ್ಕೊಂಡಿದ್ದಾರೆ. ಇದ್ರಿಂದಾಗಿ ತುಂಬ ಜನ್ರಿಗೆ ಯೆಹೋವನ ಸಾಕ್ಷಿಗಳ ಮೇಲೆ ಒಳ್ಳೇ ಅಭಿಪ್ರಾಯ ಬಂದಿದೆ.—2 ತಿಮೊತಿ 2:24, 25. w23.09 15 ¶3

ಸೋಮವಾರ, ಅಕ್ಟೋಬರ್‌ 6

ಯೆಹೋವ ನನ್ನ ಪ್ರಾರ್ಥನೆ ಕೇಳಿ ನನ್ನ ಮನಸ್ಸಿನ ಆಸೆ ನೆರವೇರಿಸಿದನು.—1 ಸಮು. 1:27.

ಅಪೊಸ್ತಲ ಯೋಹಾನ ಒಂದು ಅದ್ಭುತ ದರ್ಶನ ನೋಡಿದ. ಅದ್ರಲ್ಲಿ 24 ಹಿರಿಯರು ಯೆಹೋವನನ್ನ ಆರಾಧನೆ ಮಾಡ್ತಿದ್ರು. ಅವರು ಆತನಿಗೆ “ಗೌರವ, ಘನತೆ, ಶಕ್ತಿಯನ್ನ ಪಡ್ಕೊಳ್ಳೋಕೆ ನೀನೇ ಯೋಗ್ಯ” ಅಂತ ಹಾಡಿ ಹೊಗಳ್ತಾ ಇದ್ರು. (ಪ್ರಕ. 4:10, 11) ದೇವದೂತರಿಗೂ ಯೆಹೋವನನ್ನ ಹಾಡಿ ಹೊಗಳೋಕೆ ದಿನಾಲೂ ಎಷ್ಟೋ ಕಾರಣಗಳು ಸಿಗುತ್ತೆ. ಯಾಕಂದ್ರೆ ಅವರೂ ಆತನ ಜೊತೆ ಸ್ವರ್ಗದಲ್ಲಿ ಇದ್ದಾರೆ. ಆತನನ್ನ ಚೆನ್ನಾಗಿ ತಿಳ್ಕೊಂಡಿದ್ದಾರೆ. ಆತನು ಮಾಡೋ ಕೆಲಸಗಳನ್ನ ಕಣ್ಣಾರೆ ನೋಡ್ತಿದ್ದಾರೆ. ಹೀಗೆ ಆತನ ಒಳ್ಳೊಳ್ಳೆ ಗುಣಗಳನ್ನ ನೋಡಿದಾಗ ಆತನನ್ನ ಹಾಡಿ ಹೊಗಳಬೇಕು ಅಂತ ಅವ್ರಿಗೆ ಮನಸ್ಸಾಗುತ್ತೆ. (ಯೋಬ 38:4-7) ನಾವು ಪ್ರಾರ್ಥನೆ ಮಾಡುವಾಗ ಯೆಹೋವನನ್ನ ಮನಸ್ಸಾರೆ ಹಾಡಿ ಹೊಗಳಬೇಕು. ಬೈಬಲ್‌ ಓದುವಾಗ ನಿಮಗೆ ಆತನಲ್ಲಿರೋ ಯಾವ ಗುಣ ಇಷ್ಟ ಆಯ್ತು, ಯಾಕೆ ಇಷ್ಟ ಆಯ್ತು ಅಂತ ಯೋಚಿಸಿ. (ಯೋಬ 37:23; ರೋಮ. 11:33) ಅದನ್ನ ಆತನಿಗೆ ಹೇಳಿ. ಯೆಹೋವ ನಮ್ಮನ್ನ, ನಮ್ಮ ಸಹೋದರ ಸಹೋದರಿಯರನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತಾ ಇದ್ದಾನೆ. ಇದಕ್ಕೆಲ್ಲ ಆತನನ್ನ ಹಾಡಿ ಹೊಗಳಬೇಕು ಅಂತ ನಮಗೆ ಅನಿಸುತ್ತೆ ಅಲ್ವಾ?—1 ಸಮು. 2:1, 2. w23.05 3-4 ¶6-7

ಮಂಗಳವಾರ, ಅಕ್ಟೋಬರ್‌ 7

ಯೆಹೋವನನ್ನ ಆರಾಧಿಸುವವರು ಹೇಗಿರಬೇಕೋ ಹಾಗೆ ನೀವು ನಡ್ಕೊಳಿ.—ಕೊಲೊ. 1:10.

1919ರಲ್ಲಿ ದೇವಜನ್ರು ಮಹಾ ಬಾಬೆಲನ್ನ ಬಿಟ್ಟುಬಂದ್ರು. ಆ ವರ್ಷದಲ್ಲೇ “ಪವಿತ್ರ ದಾರಿ” ತೆರೀತು. ಅದೇ ವರ್ಷದಲ್ಲಿ ‘ನಂಬಿಗಸ್ತ, ವಿವೇಕಿ ಆದ ಆಳು’ ಕೆಲಸ ಶುರು ಮಾಡ್ತು. ‘ಪವಿತ್ರ ದಾರಿಯಲ್ಲಿ’ ಹೊಸದಾಗಿ ನಡಿಯೋಕೆ ಶುರು ಮಾಡಿದ್ದವ್ರಿಗೆ ಅವ್ರಿಂದ ಸಹಾಯ ಸಿಕ್ತು. (ಮತ್ತಾ. 24:45-47; ಯೆಶಾ. 35:8) ಆದ್ರೆ ಈ ‘ಪವಿತ್ರ ದಾರಿಯಲ್ಲಿ’ ನಡಿಯೋರು ಯೆಹೋವನಿಗೆ ಇಷ್ಟ ಆಗೋ ತರ ತಮ್ಮ ಜೀವನದಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅದನ್ನೆಲ್ಲ ಒಂದೇ ಸಲ ಮಾಡ್ಕೊಬೇಕು ಅಂತ ಯೆಹೋವ ಹೇಳಲಿಲ್ಲ. ನಿಧಾನವಾಗಿ ಒಂದೊಂದೇ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಯೆಹೋವನೇ ಅವ್ರಿಗೆ ಸಹಾಯ ಮಾಡಿದನು. ಇನ್ನು ಸ್ವಲ್ಪ ಸಮಯದಲ್ಲೇ ದೇವರ ಸರ್ಕಾರದಲ್ಲಿ ನಾವೆಲ್ರೂ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಇರ್ತೀವಿ. ಅದೆಷ್ಟು ಚೆನ್ನಾಗಿರುತ್ತೆ ಅಲ್ವಾ? ಒಂದು ರೋಡ್‌ ಚೆನ್ನಾಗಿ ಇರಬೇಕಂದ್ರೆ ಅದನ್ನ ಆಗಾಗ ರಿಪೇರಿ ಮಾಡ್ತಾ ಇರಬೇಕು. ಅದೇ ತರ 1919ರಿಂದ ‘ಪವಿತ್ರ ದಾರಿಯ’ ದುರಸ್ತಿ ಕೆಲಸ ನಡೀತಾ ಇದೆ. ಇದ್ರಿಂದ ಇನ್ನೂ ತುಂಬ ಜನ್ರಿಗೆ ಮಹಾ ಬಾಬೆಲನ್ನ ಬಿಟ್ಟು ಈ ದಾರಿಯಲ್ಲಿ ನಡಿಯೋಕೆ ಸಹಾಯ ಆಗಿದೆ. w23.05 17 ¶15; 19 ¶16

ಬುಧವಾರ, ಅಕ್ಟೋಬರ್‌ 8

ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ.—ಇಬ್ರಿ. 13:5.

ಆಡಳಿತ ಮಂಡಲಿಯ ಕಮಿಟಿಗಳಲ್ಲಿ ಸಹಾಯಕರಾಗಿರೋ ಸಹೋದರರಿಗೂ ಆಡಳಿತ ಮಂಡಲಿನೇ ತರಬೇತಿ ಕೊಡ್ತಿದೆ. ಈ ಸಹೋದರರು ಈಗಾಗ್ಲೇ ತುಂಬ ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸ್ತಿದ್ದಾರೆ. ಹಾಗಾಗಿ ಕ್ರಿಸ್ತನ ಕುರಿಗಳನ್ನ ಮುಂದೆ ಚೆನ್ನಾಗಿ ನೋಡ್ಕೊಳ್ಳೋಕೆ ಅವರು ತಯಾರಾಗಿದ್ದಾರೆ. ಎಲ್ಲಾ ಅಭಿಷಿಕ್ತರು ಸ್ವರ್ಗಕ್ಕೆ ಹೋದ್ಮೇಲೆ ಭೂಮಿಲಿ ಇರೋರಿಗೆ ಯೇಸು ಕ್ರಿಸ್ತ ನಾಯಕನಾಗಿ ಇರ್ತಾನೆ. ಹಾಗಾಗಿ ಬೇರೆ ಕುರಿಗಳು ಯೆಹೋವನನ್ನ ಆರಾಧಿಸ್ತಾನೇ ಇರ್ತಾರೆ. ಶುದ್ಧಾರಾಧನೆ ಯಾವತ್ತೂ ನಿಂತುಹೋಗಲ್ಲ. ಆ ಸಮಯದಲ್ಲಿ ಮಾಗೋಗಿನ ಗೋಗ ಅಂದ್ರೆ ಜನಾಂಗಗಳ ಗುಂಪು ನಮ್ಮ ಮೇಲೆ ಆಕ್ರಮಣ ಮಾಡುತ್ತೆ, ನಿಜ. (ಯೆಹೆ. 38:18-20) ಆದ್ರೆ ಆ ಗೋಗನಿಗೆ ಯೆಹೋವನ ಆರಾಧನೆಯನ್ನ ನಿಲ್ಲಿಸೋಕಾಗಲ್ಲ. ಅವನು ಸೋಲೋದಂತೂ ಗ್ಯಾರಂಟಿ. ಯಾಕಂದ್ರೆ ಯೆಹೋವ ಬೇರೆ ಕುರಿಗಳನ್ನ ಕಾಪಾಡ್ತಾನೆ. ನಾವು ಹಾಗೆ ಹೇಳೋಕೆ ಇನ್ನೊಂದು ಕಾರಣನೂ ಇದೆ. ಅಪೊಸ್ತಲ ಯೋಹಾನ ಒಂದು ದರ್ಶನದಲ್ಲಿ ಬೇರೆ ಕುರಿಗಳಿರೋ ಒಂದು ‘ದೊಡ್ಡ ಗುಂಪನ್ನ’ ನೋಡಿದ. “ಇವರು ಮಹಾ ಸಂಕಟವನ್ನ ಪಾರಾಗಿ ಬಂದಿದ್ದಾರೆ” ಅಂತ ಹೇಳೋದನ್ನ ಕೇಳಿಸ್ಕೊಂಡ. (ಪ್ರಕ. 7:9, 14) ಹಾಗಾಗಿ ಏನೇ ಆದ್ರೂ ಯೆಹೋವ ಬೇರೆ ಕುರಿಗಳನ್ನ ಕಾಪಾಡ್ತಾನೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ! w24.02 5-6 ¶13-14

ಗುರುವಾರ, ಅಕ್ಟೋಬರ್‌ 9

ಪವಿತ್ರಶಕ್ತಿ ಬೆಂಕಿ ತರ ನಿಮ್ಮಲ್ಲಿ ನಡಿಸೋ ಕೆಲಸಗಳನ್ನ ತಡಿಬೇಡಿ.—1 ಥೆಸ. 5:19.

ಪವಿತ್ರಶಕ್ತಿ ನಮಗೆ ಸಹಾಯ ಮಾಡಬೇಕಂದ್ರೆ ನಾವೇನು ಮಾಡಬೇಕು? ಪ್ರಾರ್ಥನೆ ಮಾಡಬೇಕು. ಬೈಬಲನ್ನ ಓದಿ ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ, ಪವಿತ್ರಶಕ್ತಿಯಿಂದ ನಡೀತಾ ಇರೋ ಈ ಸಂಘಟನೆ ಜೊತೆನೇ ನಾವು ಇರಬೇಕು. ಇದನ್ನೆಲ್ಲ ಮಾಡಿದ್ರೆ ‘ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ’ ನಾವು ಬೆಳೆಸ್ಕೊಳ್ತೀವಿ. (ಗಲಾ. 5:22, 23) ಯೆಹೋವನಿಗೆ ಏನಿಷ್ಟಾನೋ ಅದೇ ತರ ಯಾರು ಯೋಚಿಸ್ತಾರೋ, ನಡ್ಕೊಳ್ತಾರೋ ಅವ್ರಿಗೆ ಮಾತ್ರ ದೇವರು ಪವಿತ್ರಶಕ್ತಿ ಕೊಡ್ತಾನೆ. ಅಸಹ್ಯವಾದ ವಿಷ್ಯಗಳ ಬಗ್ಗೆ ಯಾರು ಯೋಚಿಸ್ತಾರೋ, ಅದನ್ನೇ ಮಾಡ್ತಾರೋ ಅಂಥ ಜನ್ರಿಗೆ ಪವಿತ್ರಶಕ್ತಿನ ಕೊಡಲ್ಲ. (1 ಥೆಸ. 4:7, 8) ನಮಗೆ ಪವಿತ್ರಶಕ್ತಿ ಸಿಕ್ತಾ ಇರಬೇಕಂದ್ರೆ ನಾವು ‘ಭವಿಷ್ಯವಾಣಿಗಳನ್ನ ತಳ್ಳಿಹಾಕಬಾರದು.’ (1 ಥೆಸ. 5:20) ‘ಭವಿಷ್ಯವಾಣಿಗಳು’ ಅಂದ್ರೆ ಯೆಹೋವ ದೇವರು ಪವಿತ್ರಶಕ್ತಿಯಿಂದ ಬೈಬಲಲ್ಲಿ ಬರೆಸಿರೋ ಸಂದೇಶಗಳು. ಅದ್ರಲ್ಲಿ ಆತನ ದಿನದ ಬಗ್ಗೆ, ಆ ದಿನ ಎಷ್ಟು ಹತ್ರ ಇದೆ ಅನ್ನೋದ್ರ ಬಗ್ಗೆ ಇರೋ ವಿಷ್ಯಗಳೂ ಸೇರಿದೆ. ಹಾಗಾಗಿ ನಾವು ‘ಆ ದಿನ ತುಂಬಾ ದೂರದಲ್ಲಿದೆ, ನಾನು ಬದುಕಿರುವಾಗ ಅರ್ಮಗೆದೋನ್‌ ಬರಲ್ಲ’ ಅಂತ ಅಂದ್ಕೊಬಾರದು. ಬದಲಿಗೆ ಅದು ತುಂಬ ಹತ್ರ ಇದೆ ಅಂತ ಮನಸ್ಸಲ್ಲಿಡಬೇಕು. ಯೆಹೋವನಿಗೆ ಇಷ್ಟ ಆಗೋ ತರಾನೇ ನಡ್ಕೊಬೇಕು. “ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡಬೇಕು.”—2 ಪೇತ್ರ 3:11, 12. w23.06 12 ¶13-14

ಶುಕ್ರವಾರ, ಅಕ್ಟೋಬರ್‌ 10

ಯೆಹೋವನ ಭಯನೇ ಜ್ಞಾನದ ಆರಂಭ.—ಜ್ಞಾನೋ. 9:10.

ಇಂಟರ್ನೆಟ್ಟಲ್ಲಿ ಅಶ್ಲೀಲ ಚಿತ್ರಗಳು ದಿಢೀರಂತ ಬಂದಾಗ ನಾವೇನು ಮಾಡಬೇಕು? ಅದನ್ನ ನೋಡ್ತಾ ಇರಬಾರದು. ತಕ್ಷಣ ಕಣ್ಮುಚ್ಚಿ ಬಿಡಬೇಕು. ಯೆಹೋವನ ಜೊತೆ ನಮಗಿರೋ ಸ್ನೇಹ ಒಂದು ದೊಡ್ಡ ಆಸ್ತಿ ಇದ್ದ ಹಾಗೆ, ಅದಕ್ಕೆ ಬೆಲೆ ಕಟ್ಟಕ್ಕಾಗಲ್ಲ. ಈ ವಿಷ್ಯನ ನಾವು ಮನಸ್ಸಲ್ಲಿಟ್ರೆ ಅಶ್ಲೀಲ ಚಿತ್ರಗಳಿಂದ ದೂರ ಇರೋಕೆ ಸುಲಭ ಆಗುತ್ತೆ. ಕೆಲವು ಚಿತ್ರಗಳು ಅಶ್ಲೀಲವಾಗಿ ಇಲ್ಲದಿದ್ರೂ ನಮ್ಮಲ್ಲಿರೋ ಲೈಂಗಿಕ ಆಸೆಗಳನ್ನ ಕೆರಳಿಸುತ್ತೆ. ಅಂಥದ್ದನ್ನೂ ನಾವು ನೋಡಬಾರದು. ಯಾಕೆ? ಯಾಕಂದ್ರೆ ಅನೈತಿಕ ವಿಷ್ಯಗಳನ್ನ ಮಾಡಬೇಕು ಅನ್ನೋ ಯೋಚ್ನೆ ನಮ್ಮ ಮನಸ್ಸಿನ ಒಂದು ಚಿಕ್ಕ ಮೂಲೆಯಲ್ಲೂ ಬರಬಾರದು. ಅದಕ್ಕೆ ನಾವದನ್ನ ನೋಡಬಾರದು. (ಮತ್ತಾ. 5:28, 29) ಥೈಲ್ಯಾಂಡ್‌ನಲ್ಲಿ ಹಿರಿಯರಾಗಿ ಸೇವೆ ಮಾಡ್ತಿರೋ ಡೇವಿಡ್‌ ಹೀಗೆ ಹೇಳ್ತಾರೆ: “‘ನಾನು ನೋಡ್ತಿರೋ ಚಿತ್ರ ಅಶ್ಲೀಲವಾಗಿ ಇಲ್ಲದೆ ಇದ್ರೂ ನಾನು ಅದನ್ನ ನೋಡ್ತಾನೇ ಇದ್ರೆ ಯೆಹೋವ ಇಷ್ಟಪಡ್ತಾನಾ’ ಅಂತ ನನ್ನನ್ನೇ ಕೇಳ್ಕೊಳ್ತೀನಿ. ಇದ್ರಿಂದ ನನಗೆ ತಕ್ಷಣ ಸರಿಯಾಗಿ ಇರೋದನ್ನ ಮಾಡೋಕೆ ಸಹಾಯ ಆಗಿದೆ.” ಯೆಹೋವನ ಮನಸ್ಸಿಗೆ ಎಲ್ಲಿ ನೋವು ಮಾಡಿಬಿಡ್ತೀವೋ ಅನ್ನೋ ಭಯ ನಮ್ಮಲ್ಲಿದ್ರೆ ನಾವು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀವಿ. ಯಾಕಂದ್ರೆ ಯೆಹೋವನ ಭಯನೇ “ಜ್ಞಾನದ ಆರಂಭ.” w23.06 23 ¶12-13

ಶನಿವಾರ, ಅಕ್ಟೋಬರ್‌ 11

ನನ್ನ ಜನ್ರೇ, ನಿಮ್ಮನಿಮ್ಮ ಒಳಗಿನ ಕೋಣೆಗಳಿಗೆ ಹೋಗಿ.—ಯೆಶಾ. 26:20.

ಇಲ್ಲಿ ಹೇಳ್ತಿರೋ ಒಳಗಿನ ಕೋಣೆಗಳು ಸಭೆಗಳನ್ನ ಸೂಚಿಸ್ತಾ ಇರಬಹುದು. ಮಹಾ ಸಂಕಟದ ಸಮಯದಲ್ಲಿ ನಾವು ಸಹೋದರ ಸಹೋದರಿಯರ ಜೊತೆ ಒಗ್ಗಟ್ಟಾಗಿದ್ದು ಯೆಹೋವನನ್ನ ಆರಾಧಿಸ್ತಾ ಇದ್ರೆ ಆತನು ನಮ್ಮನ್ನ ಕಾಪಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಹಾಗಾಗಿ ಈಗ ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಹೊಂದ್ಕೊಳ್ಳೋದು ಮಾತ್ರ ಅಲ್ಲ, ಅವ್ರನ್ನ ಪ್ರೀತಿಸೋಕೂ ಕಲಿಬೇಕು. ಆಗ ಮಾತ್ರ ನಮ್ಮ ಜೀವ ಉಳಿಯುತ್ತೆ. ‘ಯೆಹೋವನ ಮಹಾ ದಿನದಲ್ಲಿ’ ತುಂಬ ಕಷ್ಟಗಳು ಬರುತ್ತೆ. (ಚೆಫ. 1:14, 15) ಆಗ ಯೆಹೋವನ ಜನ್ರು ಕೂಡ ಕಷ್ಟಗಳನ್ನ ಅನುಭವಿಸಬೇಕಾಗುತ್ತೆ. ಅದಕ್ಕೆ ಈಗಿಂದಾನೇ ತಯಾರಾಗಿ ಇದ್ರೆ ಆ ದಿನ ಬಂದಾಗ ನಾವು ಗಾಬರಿ ಆಗಲ್ಲ. ಇವಾಗ ಬರೋ ಕಷ್ಟಗಳನ್ನ ಸಹಿಸ್ಕೊಂಡ್ರೆ ಆ ದಿನದಲ್ಲಿ ಬರೋ ಕಷ್ಟಗಳನ್ನೂ ನಾವು ತಾಳ್ಕೊಳ್ತೀವಿ. ಈಗ ನಾವು ಸಹೋದರ ಸಹೋದರಿಯರಿಗೆ ಅನುಕಂಪ ತೋರಿಸೋಕೆ ಕಲಿತ್ರೆ ಮುಂದೆ ಅವ್ರಿಗೆ ಕಷ್ಟ ಬಂದಾಗ ಸಹಾಯ ಮಾಡ್ತೀವಿ. ಈಗ ನಾವು ಅವ್ರಿಗೆ ಪ್ರೀತಿ ತೋರಿಸೋಕೆ ಕಲಿತ್ರೆ ಮುಂದೆ ಎಷ್ಟೇ ಕಷ್ಟ ಬಂದ್ರೂ ಅವ್ರ ಜೊತೆನೇ ಇರ್ತೀವಿ. ಇದನ್ನೆಲ್ಲ ನಾವು ಮಾಡಿದ್ರೆ ಕಷ್ಟ, ನೋವು ಇಲ್ಲದ ಲೋಕದಲ್ಲಿ ಯೆಹೋವ ನಮಗೆ ಶಾಶ್ವತ ಜೀವ ಕೊಡ್ತಾನೆ.—ಯೆಶಾ. 65:17. w23.07 7 ¶16-17

ಭಾನುವಾರ, ಅಕ್ಟೋಬರ್‌ 12

[ಯೆಹೋವ] ನಿಮ್ಮನ್ನ ಬಲಪಡಿಸ್ತಾನೆ, ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.—1 ಪೇತ್ರ 5:10.

ದೇವರಿಗೆ ನಿಯತ್ತಾಗಿದ್ದ ಜನ್ರನ್ನ ಬೈಬಲ್‌ ಧೈರ್ಯಶಾಲಿಗಳು, ಬಲಶಾಲಿಗಳು ಅಂತ ಕರಿಯುತ್ತೆ. ಆದ್ರೆ ಅಂಥ ಧೀರರೇ ಕೆಲವೊಮ್ಮೆ ಧೈರ್ಯಗೆಟ್ರು. ಉದಾಹರಣೆಗೆ ರಾಜ ದಾವೀದ ಕೆಲವೊಮ್ಮೆ ನನಗೆ “ಬೆಟ್ಟದಷ್ಟು ಬಲ” ಇದೆ ಅಂತ ಅಂದ್ಕೊಂಡ. ಆದ್ರೆ ಇನ್ನು ಕೆಲವೊಮ್ಮೆ ನಾನು “ನಡುಗಿಹೋದೆ” ಅಂತ ಹೇಳಿದ. (ಕೀರ್ತ. 30:7) ಸಂಸೋನನಿಗೂ ತುಂಬ ಶಕ್ತಿ ಇತ್ತು. ಅವನ ಕಾಲದಲ್ಲಿ ಅವನಿಗಿದ್ದಷ್ಟು ಶಕ್ತಿ ಬೇರೆ ಯಾರಿಗೂ ಇರಲಿಲ್ಲ. ಆದ್ರೆ ಯೆಹೋವ ಬಲ ಕೊಡದೇ ಇದ್ರೆ “ನನ್ನಲ್ಲಿರೋ ಶಕ್ತಿ ಹೋಗಿಬಿಡುತ್ತೆ. ಬೇರೆಯವರ ತರ ನಾನೂ ಮಾಮೂಲಿ ವ್ಯಕ್ತಿ ಆಗಿಬಿಡ್ತೀನಿ” ಅಂತ ಅವನು ಹೇಳಿದ. (ನ್ಯಾಯ. 14:5, 6; 16:17) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಇವ್ರೆಲ್ಲ ಬಲಶಾಲಿಗಳಾಗಿದ್ದು ಯೆಹೋವ ಶಕ್ತಿ ಕೊಟ್ಟಿದ್ರಿಂದಾನೇ. ಅಪೊಸ್ತಲ ಪೌಲನಿಗೆ ತನಗೂ ಯೆಹೋವನಿಂದ ಶಕ್ತಿ ಬೇಕು ಅಂತ ಚೆನ್ನಾಗಿ ಗೊತ್ತಿತ್ತು. (2 ಕೊರಿಂ. 12:9, 10) ಯಾಕಂದ್ರೆ ಅವನಿಗೂ ತುಂಬ ಆರೋಗ್ಯ ಸಮಸ್ಯೆಗಳಿತ್ತು. (ಗಲಾ. 4:13, 14) ಕೆಲವೊಮ್ಮೆ ಸರಿಯಾಗಿರೋದನ್ನ ಮಾಡೋಕೆ ತುಂಬ ಕಷ್ಟಪಡ್ತಿದ್ದ. (ರೋಮ. 7:18, 19) ಮುಂದೆ ತನಗೆ ಏನಾಗುತ್ತೋ ಅನ್ನೋ ಭಯ-ಚಿಂತೆ ಅವನಿಗೆ ಆಗಾಗ ಕಾಡ್ತಾ ಇತ್ತು. (2 ಕೊರಿಂ. 1:8, 9) ‘ಇನ್ನು ನನ್ನಿಂದ ಆಗಲ್ಲ, ನಾನು ಸೋತುಹೋಗಿಬಿಟ್ಟೆ’ ಅಂತ ಪೌಲನಿಗೆ ಅನಿಸಿದ್ರೂ ‘ಇದನ್ನೆಲ್ಲ ತಾಳ್ಕೊಳ್ಳೋಕೆ ನನ್ನಿಂದ ಆಗುತ್ತೆ’ ಅಂತ ಹೇಳಿದ. ಯಾಕೆ? ಯಾಕಂದ್ರೆ ಯೆಹೋವ ಅವನಿಗೆ ಶಕ್ತಿ ಕೊಟ್ಟನು. w23.10 12 ¶1-2

ಸೋಮವಾರ, ಅಕ್ಟೋಬರ್‌ 13

ಯೆಹೋವ ಹೃದಯದಲ್ಲಿ ಇರೋದನ್ನ ನೋಡ್ತಾನೆ.—1 ಸಮು. 16:7.

ನೀವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸಿದ್ರೆ ಯೆಹೋವ ನಿಮ್ಮನ್ನ ಸೆಳೆದಿದ್ದಾನೆ ಅನ್ನೋದನ್ನ ನೆನಪಿಡಿ. (ಯೋಹಾ. 6:44) ಆತನು ನಮ್ಮಲ್ಲಿ ಏನೋ ಒಂದು ಒಳ್ಳೇದನ್ನ ನೋಡಿದ್ದಾನೆ. ಅಷ್ಟೇ ಅಲ್ಲ ನಮ್ಮ ಬಗ್ಗೆ ನಮಗಿಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನು ನಮ್ಮ ಹೃದಯ ನೋಡ್ತಾನೆ. (2 ಪೂರ್ವ. 6:30) ಹಾಗಾಗಿ ಯೆಹೋವನೇ ನಮ್ಮನ್ನ ಅಮೂಲ್ಯವಾಗಿ ನೋಡ್ತಾನೆ ಅಂತ ಹೇಳುವಾಗ ಅದನ್ನ ಕಣ್ಮುಚ್ಚಿ ನಂಬಬಹುದು. (1 ಯೋಹಾ. 3:19, 20) ನಮ್ಮಲ್ಲಿ ಕೆಲವರು ಸತ್ಯ ಕಲಿಯೋಕೆ ಮುಂಚೆ ಮಾಡಿದ ತಪ್ಪನ್ನ ನೆನಸ್ಕೊಂಡು ಈಗ್ಲೂ ಕೊರಗ್ತಿದ್ದಾರೆ. (1 ಪೇತ್ರ 4:3) ಆದ್ರೆ ಒಂದು ವಿಷ್ಯ ನೆನಪಿಡಿ. ಎಷ್ಟೋ ವರ್ಷಗಳಿಂದ ಸತ್ಯದಲ್ಲಿರೋ ಸಹೋದರ ಸಹೋದರಿಯರು ತಪ್ಪಾದ ಆಸೆಗಳ ವಿರುದ್ಧ ಈಗ್ಲೂ ಹೋರಾಡ್ತಿದ್ದಾರೆ. ಒಂದುವೇಳೆ ನಿಮಗೆ ಯೆಹೋವ ನಿಮ್ಮನ್ನ ಕ್ಷಮಿಸ್ತಿಲ್ಲ ಅಂತ ಅನಿಸಿದ್ರೆ ಹಿಂದಿನ ಕಾಲದಲ್ಲಿದ್ದ ದೇವ ಸೇವಕರ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ಅಪೊಸ್ತಲ ಪೌಲ ತಾನು ಹಿಂದೆ ಮಾಡಿದ್ದ ತಪ್ಪನ್ನ ನೆನಸ್ಕೊಂಡು ತುಂಬ ಬೇಜಾರು ಮಾಡ್ಕೊಳ್ತಿದ್ದ. (ರೋಮ. 7:24) ಅವನು ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ತಗೊಂಡಿದ್ರೂ “ನಾನು ಅಪೊಸ್ತಲರಲ್ಲೇ ತುಂಬ ಕನಿಷ್ಠನು,” “ಪಾಪಿಗಳಲ್ಲಿ ದೊಡ್ಡ ಪಾಪಿ ನಾನೇ” ಅಂತ ಹೇಳಿದ.—1 ಕೊರಿಂ. 15:9; 1 ತಿಮೊ. 1:15. w24.03 27 ¶5-6

ಮಂಗಳವಾರ, ಅಕ್ಟೋಬರ್‌ 14

ಅವರು ತಮ್ಮ ಪೂರ್ವಜರ ದೇವರಾದ ಯೆಹೋವನ ಆಲಯವನ್ನ ಬಿಟ್ಟರು.—2 ಪೂರ್ವ. 24:18.

ರಾಜ ಯೆಹೋವಾಷ ಮಾಡಿದ ತಪ್ಪಾದ ತೀರ್ಮಾನದಿಂದ ನಾವೊಂದು ಪಾಠ ಕಲಿತೀವಿ. ಅದೇನಂದ್ರೆ, ನಮ್ಮ ಜೀವನ ಚೆನ್ನಾಗಿ ಇರಬೇಕಂದ್ರೆ ನಾವು ಎಂಥವರ ಸಹವಾಸ ಮಾಡ್ತೀವಿ ಅನ್ನೋದು ಮುಖ್ಯ. ಯೆಹೋವನನ್ನ ಪ್ರೀತಿಸುವವ್ರನ್ನ, ಆತನಿಗೆ ಇಷ್ಟ ಆಗೋದನ್ನೇ ಮಾಡುವವ್ರನ್ನ ನಾವು ಸ್ನೇಹಿತರಾಗಿ ಮಾಡ್ಕೊಬೇಕು. ಅವರು ನಮ್ಮ ವಯಸ್ಸಿನವರೇ ಆಗಿರಬೇಕು ಅಂತೇನಿಲ್ಲ. ಯೆಹೋಯಾದನಿಗೂ ಯೆಹೋವಾಷನಿಗೂ ವಯಸ್ಸಲ್ಲಿ ತುಂಬ ವ್ಯತ್ಯಾಸ ಇತ್ತು. ಹಾಗಿದ್ರೂ ಅವರಿಬ್ರು ಒಳ್ಳೇ ಸ್ನೇಹಿತರಾಗಿದ್ರು. ಒಬ್ಬ ವ್ಯಕ್ತಿನ ಫ್ರೆಂಡ್‌ ಮಾಡ್ಕೊಬೇಕಾ ಬೇಡ್ವಾ ಅಂತ ಯೋಚ್ನೆ ಮಾಡುವಾಗ ಈ ಪ್ರಶ್ನೆಗಳನ್ನ ನೆನಪಲ್ಲಿಡಿ: ‘ಅವರು ಯೆಹೋವ ದೇವರ ಮೇಲಿರೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಸಹಾಯ ಮಾಡ್ತಾರಾ? ಯೆಹೋವ ಕೊಟ್ಟಿರೋ ನೀತಿ-ನಿಯಮಗಳನ್ನ ಪಾಲಿಸೋಕೆ ನಂಗೆ ಪ್ರೋತ್ಸಾಹಿಸ್ತಾರಾ? ಯೆಹೋವನ ಬಗ್ಗೆ, ಬೈಬಲಲ್ಲಿ ಕಲ್ತಿರೋ ವಿಷ್ಯಗಳ ಬಗ್ಗೆ ಮಾತಾಡ್ತಾರಾ? ಅವ್ರಿಗೆ ಯೆಹೋವನ ನೀತಿ-ನಿಯಮಗಳ ಮೇಲೆ ಗೌರವ ಇದ್ಯಾ? ನಾನು ಏನಾದ್ರು ತಪ್ಪು ಮಾಡಿದಾಗ ಸುಮ್ನೆ ಇರ್ತಾರಾ ಅಥವಾ ತಿದ್ದುತ್ತಾರಾ?’ (ಜ್ಞಾನೋ. 27:5, 6, 17) ನೇರವಾಗಿ ಹೇಳೋದಾದ್ರೆ, ನಿಮ್ಮ ಸ್ನೇಹಿತರಿಗೆ ಯೆಹೋವ ದೇವರ ಮೇಲೆ ಪ್ರೀತಿ ಇಲ್ವಾ? ಅಂಥವ್ರನ್ನ ಬಿಟ್ಟುಬಿಡಿ. ಯೆಹೋವನನ್ನ ಪ್ರೀತಿಸೋರ ಜೊತೆನೇ ಇರಿ. ನಿಮಗೆ ಬೇಕಾಗಿರೋದು ಇಂಥವ್ರೇ!—ಜ್ಞಾನೋ. 13:20. w23.09 9-10 ¶6-7

ಬುಧವಾರ, ಅಕ್ಟೋಬರ್‌ 15

ನಾನೇ ಆಲ್ಫ, ನಾನೇ ಒಮೇಗ.—ಪ್ರಕ. 1:8.

ಗ್ರೀಕ್‌ ಅಕ್ಷರಮಾಲೆ ಶುರುವಾಗೋದು ಆಲ್ಫ ಅನ್ನೋ ಅಕ್ಷರದಿಂದ ಮತ್ತು ಕೊನೆ ಆಗೋದು ಒಮೇಗ ಅನ್ನೋ ಅಕ್ಷರದಿಂದ. ಹಾಗಾಗಿ ಯೆಹೋವ “ನಾನೇ ಆಲ್ಫ, ನಾನೇ ಒಮೇಗ” ಅಂತ ಹೇಳಿರೋದ್ರ ಅರ್ಥ, ಒಂದು ವಿಷ್ಯವನ್ನ ಆತನು ಶುರು ಮಾಡಿದ್ರೆ ಅದನ್ನ ಖಂಡಿತ ಕೊನೆ ಮಾಡೇ ಮಾಡ್ತಾನೆ. ಯೆಹೋವ ದೇವರು ಆದಾಮ, ಹವ್ವಳನ್ನ ಸೃಷ್ಟಿ ಮಾಡಿದ ಮೇಲೆ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ” ಅಂತ ಅವ್ರಿಗೆ ಹೇಳಿದನು. (ಆದಿ. 1:28) ಯೆಹೋವ ಈ ಉದ್ದೇಶದ ಬಗ್ಗೆ ತಿಳಿಸಿದಾಗ “ಆಲ್ಫ” ಅಂತ ಹೇಳಿದ ಹಾಗೆ ಇತ್ತು. ಯೆಹೋವ ಅಂದ್ಕೊಂಡ ಹಾಗೆ ಒಂದುವೇಳೆ ಆದಾಮ ಹವ್ವರ ಮಕ್ಕಳು ಇಡೀ ಭೂಮಿಯನ್ನ ತುಂಬ್ಕೊಂಡು ಅದನ್ನ ಪರದೈಸಾಗಿ ಮಾಡಿದ್ದಿದ್ರೆ ಆಗ ಯೆಹೋವ “ಒಮೇಗ” ಅಂತ ಹೇಳಿರ್ತಿದ್ದನು. ಅದು ನಮಗೆ ಹೇಗೆ ಗೊತ್ತು? “ಆಕಾಶ, ಭೂಮಿ, ಅವುಗಳಲ್ಲಿ ಇರೋ ಎಲ್ಲವನ್ನ” ಸೃಷ್ಟಿಸಿದ ಮೇಲೆ ಯೆಹೋವ ತಾನು ಅಂದ್ಕೊಂಡಿದ್ದು ನಡದೇ ನಡೆಯುತ್ತೆ ಅಂತ ನಂಬಿದನು. ಅದಕ್ಕೊಂದು ಗ್ಯಾರಂಟಿನೂ ಕೊಟ್ಟಿದ್ದನು. ಏಳನೇ ದಿನದ ಕೊನೆಯಲ್ಲಿ ತನ್ನ ಉದ್ದೇಶ ಖಂಡಿತ ನೆರವೇರುತ್ತೆ ಅನ್ನೋ ಗ್ಯಾರಂಟಿ ಆತನಿಗಿತ್ತು.—ಆದಿ. 2:1-3. w23.11 5 ¶13-14

ಗುರುವಾರ, ಅಕ್ಟೋಬರ್‌ 16

ಯೆಹೋವನ ಮಾರ್ಗ ಸಿದ್ಧಮಾಡಿ! ಮರುಭೂಮಿಯನ್ನ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ.—ಯೆಶಾ. 40:3.

ಬಾಬೆಲಿಂದ ಇಸ್ರಾಯೇಲಿಗೆ ಹೋಗೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅಲ್ಲಿಗೆ ಹೋಗೋಕೆ ಒಂದೆರಡು ದಿನ ಅಲ್ಲ, ನಾಲ್ಕು ತಿಂಗಳು ಪ್ರಯಾಣ ಮಾಡಬೇಕಿತ್ತು. ಆದ್ರೆ ಯೆಹೋವ ವಾಪಸ್‌ ಹೋಗೋಕೆ ‘ನಾನು ಸಹಾಯ ಮಾಡ್ತೀನಿ, ಏನೇ ಅಡೆತಡೆಗಳು ಬಂದ್ರೂ ಅದನ್ನ ತೆಗೆದು ಹಾಕ್ತೀನಿ’ ಅಂತ ಮಾತುಕೊಟ್ಟನು. ಬಾಬೆಲಲ್ಲಿದ್ದ ಯೆಹೂದ್ಯರು ಇಸ್ರಾಯೇಲ್‌ಗೆ ಹೋಗೋಕೆ ಕೆಲವು ತ್ಯಾಗಗಳನ್ನ ಮಾಡಬೇಕಿತ್ತು. ಆದ್ರೆ ಯೆಹೋವ ಕೊಡೋ ಆಶೀರ್ವಾದಗಳ ಮುಂದೆ ಆ ತ್ಯಾಗಗಳು ಏನೇನೂ ಅಲ್ಲ ಅಂತ ಅವ್ರಿಗೆ ಗೊತ್ತಿತ್ತು. ಅದ್ರಲ್ಲಿ ಒಂದು ಆಶೀರ್ವಾದ ಏನಂದ್ರೆ, ಅವರು ಅಲ್ಲಿ ಹೋಗಿ ಯೆಹೋವನನ್ನ ಸಂತೋಷವಾಗಿ ಆರಾಧನೆ ಮಾಡಬಹುದಿತ್ತು. ಆದ್ರೆ ಬಾಬೆಲಲ್ಲಿ ಯೆಹೋವ ದೇವರ ಆರಾಧನೆ ಮಾಡೋಕೆ ಆಲಯನೇ ಇರಲಿಲ್ಲ. ಮೋಶೆಯ ನಿಯಮ ಪುಸ್ತಕದಲ್ಲಿ ಹೇಳಿರೋ ತರ ಬಲಿಗಳನ್ನ ಕೊಡೋಕೆ ಯಜ್ಞವೇದಿ ಇರಲಿಲ್ಲ, ಪುರೋಹಿತರು ಇರಲಿಲ್ಲ. ಅವ್ರ ಸುತ್ತಮುತ್ತ ಬರೀ ಸುಳ್ಳು ದೇವರುಗಳ ದೇವಸ್ಥಾನಗಳೇ ಇತ್ತು ಮತ್ತು ಬಾಬೆಲಲ್ಲಿ ಸುಳ್ಳು ದೇವರುಗಳನ್ನ ಆರಾಧನೆ ಮಾಡ್ತಿದ್ದ ಜನ್ರೇ ತುಂಬ್ಕೊಂಡಿದ್ರು. ಆದ್ರೆ ಯೆಹೂದ್ಯರು ಇಸ್ರಾಯೇಲ್‌ಗೆ ಹೋದ್ರೆ ಶುದ್ಧಾರಾಧನೆಯನ್ನ ಮತ್ತೆ ಶುರು ಮಾಡಬಹುದಿತ್ತು. ಇದಕ್ಕೋಸ್ಕರ ಸಾವಿರಾರು ಯೆಹೂದ್ಯರು ಕಾಯ್ತಾ ಇದ್ರು. w23.05 14-15 ¶3-4

ಶುಕ್ರವಾರ, ಅಕ್ಟೋಬರ್‌ 17

ಯಾವಾಗ್ಲೂ ಬೆಳಕಿನ ಮಕ್ಕಳ ತರ ನಡ್ಕೊಳ್ಳಿ.—ಎಫೆ. 5:8.

ನಾವು “ಬೆಳಕಿನ ಮಕ್ಕಳ ತರ” ನಡ್ಕೊಳ್ತಾ ಇರಬೇಕಂದ್ರೆ ಪವಿತ್ರಶಕ್ತಿಯ ಸಹಾಯನೂ ಬೇಕು. ಯಾಕಂದ್ರೆ ಈ ಕೆಟ್ಟ ಲೋಕದಲ್ಲಿ ನಾವು ಪವಿತ್ರರಾಗಿರೋದು ಅಷ್ಟು ಸುಲಭ ಅಲ್ಲ. (1 ಥೆಸ. 4:3-5, 7, 8) ಈ ಲೋಕದ ಜನ್ರು ಯೆಹೋವ ದೇವರ ತರ ಯೋಚ್ನೆ ಮಾಡಲ್ಲ. ಹಾಗಾಗಿ ನಾವು ಅವ್ರ ತರ ಯೋಚ್ನೆ ಮಾಡಬಾರದಂದ್ರೆ ಪವಿತ್ರಶಕ್ತಿಯ ಸಹಾಯ ಬೇಕೇಬೇಕು. ಅಷ್ಟೇ ಅಲ್ಲ, ಈ ಪವಿತ್ರಶಕ್ತಿ ನಮಗೆ “ಎಲ್ಲ ತರದ ಒಳ್ಳೇತನ, ನೀತಿ” ಬೆಳೆಸ್ಕೊಳ್ಳೋಕೂ ಸಹಾಯ ಮಾಡುತ್ತೆ. (ಎಫೆ. 5:9) ಪವಿತ್ರಶಕ್ತಿ ಪಡ್ಕೊಳ್ಳೋಕೆ ನಾವೇನು ಮಾಡಬೇಕು? ಯೆಹೋವನ ಹತ್ರ ಪ್ರಾರ್ಥಿಸಬೇಕು. ಆಗ ಯೆಹೋವ “ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ” ಕೊಡ್ತಾನೆ ಅಂತ ಯೇಸು ಹೇಳಿದ್ದಾನೆ. (ಲೂಕ 11:13) ಇದಷ್ಟೇ ಅಲ್ಲ, ಕೂಟಗಳಲ್ಲಿ ನಾವು ಯೆಹೋವನನ್ನ ಹೊಗಳುವಾಗ್ಲೂ ನಮಗೆ ಪವಿತ್ರಶಕ್ತಿ ಸಿಗುತ್ತೆ. (ಎಫೆ. 5:19, 20) ಆಗ ಯೆಹೋವನಿಗೆ ಇಷ್ಟ ಆಗೋ ತರ ಜೀವಿಸೋಕೆ ಮತ್ತು ನಡ್ಕೊಳ್ಳೋಕಾಗುತ್ತೆ. w24.03 23-24 ¶13-15

ಶನಿವಾರ, ಅಕ್ಟೋಬರ್‌ 18

ಕೇಳ್ತಾ ಇರಿ, ದೇವರು ಕೊಡ್ತಾನೆ. ಹುಡುಕ್ತಾ ಇರಿ ಸಿಗುತ್ತೆ. ತಟ್ಟುತ್ತಾ ಇರಿ ತೆರಿಯುತ್ತೆ.—ಲೂಕ 11:9.

ನಿಮಗೆ ಜಾಸ್ತಿ ತಾಳ್ಮೆ ಬೇಕಾ? ಹಾಗಿದ್ರೆ, ಪ್ರಾರ್ಥನೆ ಮಾಡಿ. ತಾಳ್ಮೆ ಪವಿತ್ರಶಕ್ತಿಯಿಂದ ಬರೋ ಗುಣ. (ಗಲಾ. 5:22, 23) ಹಾಗಾಗಿ ‘ತಾಳ್ಮೆ ಬೆಳೆಸ್ಕೊಳ್ಳೋಕೆ ಪವಿತ್ರಶಕ್ತಿ ಕೊಡಪ್ಪಾ’ ಅಂತ ಯೆಹೋವ ದೇವರ ಹತ್ರ ಬೇಡ್ಕೊಬೇಕು. ತಾಳ್ಮೆ ಕಳ್ಕೊಳ್ಳೋ ಪರಿಸ್ಥಿತಿ ಬಂದುಬಿಟ್ರೆ ತಕ್ಷಣ ಪ್ರಾರ್ಥನೆ ಮಾಡಬೇಕು. ಪವಿತ್ರಶಕ್ತಿ ಕೊಡಪ್ಪಾ ಅಂತ ‘ಕೇಳ್ತಾನೇ’ ಇರಬೇಕು. (ಲೂಕ 11: 13) ಅಷ್ಟೇ ಅಲ್ಲ, ‘ಯೆಹೋವಾ, ನಿನ್ನ ತರ ಯೋಚ್ನೆ ಮಾಡೋಕೆ ಸಹಾಯ ಮಾಡಪ್ಪಾ’ ಅಂತ ಬೇಡ್ಕೊಬೇಕು. ಹೀಗೆ ನಾವು ದಿನಾಲೂ ಪ್ರಾರ್ಥನೆ ಮಾಡ್ತಾ ಇದ್ರೆ ಮತ್ತು ತಾಳ್ಮೆ ತೋರಿಸೋಕೆ ಬಿಡದೆ ಪ್ರಯತ್ನ ಮಾಡ್ತಾ ಇದ್ರೆ ಒಂದಲ್ಲ ಒಂದಿನ ನಮ್ಮ ಸ್ವಭಾವದಲ್ಲಿ ಈ ಗುಣ ಬೆರೆತು ಹೋಗಿಬಿಡುತ್ತೆ. ಅಷ್ಟೇ ಅಲ್ಲ ಈ ಗುಣವನ್ನ ತೋರಿಸಿದ ತುಂಬ ಜನ್ರ ಬಗ್ಗೆ ಬೈಬಲಲ್ಲಿದೆ. ಅವ್ರ ಬಗ್ಗೆ ಓದಿ ಚೆನ್ನಾಗಿ ಯೋಚ್ನೆ ಮಾಡಿದಾಗ ನಾವೂ ತಾಳ್ಮೆ ತೋರಿಸೋಕೆ ಕಲಿತೀವಿ. w23.08 22 ¶10-11

ಭಾನುವಾರ, ಅಕ್ಟೋಬರ್‌ 19

ಬಲೆ ಬೀಸಿ.—ಲೂಕ 5:4.

ಪೇತ್ರನ ಜೊತೆ ಯೆಹೋವ ದೇವರು ಯಾವಾಗ್ಲೂ ಇರ್ತಾನೆ ಅಂತ ಯೇಸು ಅವನಿಗೆ ಅರ್ಥ ಮಾಡಿಸಿದನು. ಆತನು ಮತ್ತೆ ಜೀವ ಪಡ್ಕೊಂಡು ಬಂದಾಗ ಪೇತ್ರ ಮತ್ತು ಇನ್ನೂ ಕೆಲವು ಅಪೊಸ್ತಲರು ಮೀನು ಹಿಡೀತಾ ಇದ್ದಿದ್ದನ್ನ ನೋಡಿದನು. ಆಗ ಆತನು ಇನ್ನೂ ಒಂದು ಸಲ ಅದ್ಭುತ ಮಾಡಿ ಅವ್ರಿಗೆ ಜಾಸ್ತಿ ಮೀನು ಸಿಗೋ ತರ ಮಾಡಿದನು. (ಯೋಹಾ. 21:4-6) ಆಗ ಪೇತ್ರನಿಗೆ “ದೇವರ ಆಳ್ವಿಕೆಗೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ” ಅಂತ ಯೇಸು ಹೇಳಿದ ಮಾತು ನೆನಪಿಗೆ ಬಂದಿರುತ್ತೆ. ತನ್ನನ್ನ ಯೆಹೋವ ದೇವರು ನೋಡ್ಕೊಳ್ತಾನೆ ಅಂತ ಅವನಿಗೆ ನಂಬಿಕೆ ಬಂದಿರುತ್ತೆ. (ಮತ್ತಾ. 6:33) ಆಗ ಅವನು ಮೀನು ಹಿಡಿಯೋದಕ್ಕಲ್ಲ ಸಿಹಿಸುದ್ದಿ ಸಾರೋಕೆ ತನ್ನ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟ. ಈ ಸಲ ಅವನು ಇಟ್ಟ ಹೆಜ್ಜೆನ ಹಿಂದೆ ಇಡಲಿಲ್ಲ. ಕ್ರಿಸ್ತ ಶಕ 33ರಲ್ಲಿ 50ನೇ ದಿನದ ಹಬ್ಬದ ಸಮಯದಲ್ಲಿ ಧೈರ್ಯವಾಗಿ ಸಿಹಿಸುದ್ದಿ ಸಾರಿದ. ಇದ್ರಿಂದ ಸಾವಿರಾರು ಜನ್ರು ಯೇಸುವಿನ ಶಿಷ್ಯರಾದ್ರು. (ಅ. ಕಾ. 2:14, 37-41) ಅಷ್ಟೇ ಅಲ್ಲ, ಸಮಾರ್ಯದವ್ರಿಗೆ ಮತ್ತು ಬೇರೆ ಜನಾಂಗದವ್ರಿಗೆ ಯೇಸುವಿನ ಶಿಷ್ಯರಾಗೋಕೆ ಸಹಾಯ ಮಾಡಿದ. (ಅ. ಕಾ. 8:14-17; 10:44-48) ಹೀಗೆ ಯೆಹೋವ ದೇವರು ಪೇತ್ರನಿಂದ ಎಲ್ಲಾ ತರದ ಜನ್ರು ಯೇಸುವಿನ ಶಿಷ್ಯರಾಗೋಕೆ ಸಹಾಯ ಮಾಡಿದನು. w23.09 20 ¶1; 23 ¶11

ಸೋಮವಾರ, ಅಕ್ಟೋಬರ್‌ 20

ನೀವು ನನ್ನ ಕನಸನ್ನ, ಅದ್ರ ಅರ್ಥವನ್ನ ಹೇಳದಿದ್ರೆ ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ.—ದಾನಿ. 2:5.

ಬಾಬೆಲಿನವರು ಯೆರೂಸಲೇಮನ್ನ ನಾಶ ಮಾಡಿ ಸುಮಾರು 2 ವರ್ಷ ಆಗಿತ್ತು. ಆಗ ರಾಜ ನೆಬೂಕದ್ನೆಚ್ಚರನಿಗೆ ಒಂದು ಕನಸು ಬಿತ್ತು. ಆ ಕನಸಲ್ಲಿ ಅವನು ದೊಡ್ಡ ಮೂರ್ತಿಯನ್ನ ನೋಡಿದ. ಆ ಕನಸನ್ನ ವಿವರಿಸೋಕೆ ತನ್ನ ಆಸ್ಥಾನದಲ್ಲಿದ್ದ ವಿವೇಕಿಗಳಿಗೆ ಹೇಳಿದ. ಅವರು ವಿವರಿಸದೇ ಹೋದ್ರೆ ಅವ್ರನ್ನ ತುಂಡುತುಂಡು ಮಾಡಿಬಿಡ್ತೀನಿ ಅಂತ ಹೇಳಿದ. (ದಾನಿ. 2:3-5) ದಾನಿಯೇಲ ತಕ್ಷಣ ಏನಾದ್ರೂ ಮಾಡಬೇಕಿತ್ತು. ಇಲ್ಲಾಂದ್ರೆ ತುಂಬ ಜನ ಜೀವ ಕಳ್ಕೊಳ್ತಿದ್ರು. ಅದಕ್ಕೆ ಅವನು “ರಾಜನ ಹತ್ರ ಹೋಗಿ ಕನಸಿನ ಅರ್ಥ ಹೇಳೋಕೆ ಸ್ವಲ್ಪ ಸಮಯ ಕೊಡು ಅಂತ ಕೇಳಿದ.” (ದಾನಿ. 2:16) ಇಲ್ಲಿ ವರೆಗೂ ದಾನಿಯೇಲ ಯಾವ ಕನಸಿನ ಅರ್ಥನೂ ಹೇಳಿರಲಿಲ್ಲ. ಅಂಥದ್ರಲ್ಲಿ ರಾಜನ ಹತ್ರ ಹೋಗಿ ಕೇಳಿದ್ದಾನೆ ಅಂದ್ರೆ ಅವನಿಗೆ ತುಂಬ ಧೈರ್ಯ ಇತ್ತು ಮತ್ತು ಯೆಹೋವನ ಮೇಲೆ ನಂಬಿಕೆ ಇತ್ತು ಅಂತ ಗೊತ್ತಾಗುತ್ತೆ. ಅವನು ತನ್ನ ಸ್ನೇಹಿತರ ಹತ್ರ ‘ಸ್ವರ್ಗದ ದೇವರು ನಮಗೆ ಕರುಣೆ ತೋರಿಸಿ ಈ ಗುಟ್ಟನ್ನ ತಿಳಿಸೋಕೆ ಪ್ರಾರ್ಥನೆ ಮಾಡಿ’ ಅಂತ ಹೇಳಿದ. (ದಾನಿ. 2:18) ಆ ಪ್ರಾರ್ಥನೆಗಳಿಗೆ ಯೆಹೋವ ಉತ್ರ ಕೊಟ್ಟನು. ದಾನಿಯೇಲ ಯೆಹೋವನ ಸಹಾಯದಿಂದ ನೆಬೂಕದ್ನೆಚ್ಚರನ ಕನಸಿನ ಅರ್ಥ ಹೇಳಿದ. ಹೀಗೆ ದಾನಿಯೇಲ ಮತ್ತು ಆತನ ಸ್ನೇಹಿತರ ಜೀವ ಉಳೀತು. w23.08 3 ¶4

ಮಂಗಳವಾರ, ಅಕ್ಟೋಬರ್‌ 21

ಆದ್ರೆ ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.—ಮತ್ತಾ. 24:13.

ತಾಳ್ಮೆಯಿಂದ ಇದ್ರೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. ನಾವು ಯಾವಾಗ್ಲೂ ಖುಷಿ ಖುಷಿಯಾಗಿ ಇರ್ತೀವಿ, ಮನಸ್ಸು ನಿರಾಳವಾಗಿ ಇರುತ್ತೆ, ಆರೋಗ್ಯನೂ ಚೆನ್ನಾಗಿರುತ್ತೆ. ಅಷ್ಟೇ ಅಲ್ಲ ಎಲ್ರ ಜೊತೆನೂ ಚೆನ್ನಾಗಿ ಇರ್ತೀವಿ, ಸಭೆಯಲ್ಲಿ ಒಗ್ಗಟ್ಟಾಗಿ ಇರ್ತೀವಿ. ಯಾರಾದ್ರೂ ಕೆಣಕಿದಾಗ ನಾವು ತಕ್ಷಣ ಕೋಪ ಮಾಡ್ಕೊಳ್ಳಲ್ಲ. ಆಗ ಸಮಸ್ಯೆ ಅಲ್ಲಿಂದ ಅಲ್ಲಿಗೇ ಬಗೆಹರಿಯುತ್ತೆ. (ಕೀರ್ತ. 37:8; ಜ್ಞಾನೋ. 14:29) ಅಷ್ಟೇ ಅಲ್ಲ ತಾಳ್ಮೆ ತೋರಿಸೋದ್ರಲ್ಲಿ ಯೆಹೋವ ದೇವರ ತರ ಇರ್ತೀವಿ. ಆತನಿಗೆ ಇನ್ನೂ ಹತ್ರ ಆಗ್ತೀವಿ. ತಾಳ್ಮೆ ಅನ್ನೋದು ಎಷ್ಟು ಒಳ್ಳೇ ಗುಣ ಅಲ್ವಾ? ಕೆಲವೊಮ್ಮೆ ನಮಗೆ ತಾಳ್ಮೆ ತೋರಿಸೋಕೆ ಕಷ್ಟ ಆಗಬಹುದು. ಆದ್ರೆ ಯೆಹೋವನ ಸಹಾಯ ಇದ್ರೆ ನಾವು ಯಾವಾಗ್ಲೂ ತಾಳ್ಮೆ ತೋರಿಸ್ತೀವಿ. ಹೊಸ ಲೋಕ ಬರೋ ತನಕ ನಾವು ಈ ತಾಳ್ಮೆಯನ್ನ ತೋರಿಸಬೇಕು. ಯಾಕಂದ್ರೆ ‘ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ, ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಟ್ಟು ಕಾಯ್ತಾ ಇರೋರ ಮೇಲಿದೆ’ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 33:18) ಹಾಗಾಗಿ ನಾವು ತಾಳ್ಮೆಯನ್ನ ಬಟ್ಟೆ ತರ ಯಾವಾಗ್ಲೂ ಹಾಕೊಂಡೇ ಇರೋಣ. w23.08 22 ¶7; 25 ¶16-17

ಬುಧವಾರ, ಅಕ್ಟೋಬರ್‌ 22

ನಿಮಗೆ ನಂಬಿಕೆ ಇದೆ ಅಂತ ಹೇಳಿ ಅದನ್ನ ಒಳ್ಳೇ ಕೆಲಸ ಮಾಡಿ ತೋರಿಸ್ದೆ ಇದ್ರೆ ನಂಬಿಕೆ ಇದ್ರೂ ಪ್ರಯೋಜನ ಇಲ್ಲ.—ಯಾಕೋ. 2:17.

ಒಬ್ಬ ವ್ಯಕ್ತಿಗೆ ನಂಬಿಕೆ ಇಲ್ಲ ಅನ್ನೋದು ಅವನು ಮಾಡ್ತಿರೋ ಕೆಲಸಗಳಿಂದ ಗೊತ್ತಾಗುತ್ತೆ. (ಯಾಕೋ. 2:1-5, 9) ಅವನ ಸಹೋದರ ಅಥವಾ ಸಹೋದರಿ ಹತ್ರ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂತ ಗೊತ್ತಾದಾಗ ಅವನು ಅವ್ರಿಗೆ ಸಹಾಯ ಮಾಡದೇ ಇದ್ರೆ ಅವನಿಗೆ ನಂಬಿಕೆ ಇದೆ ಅಂತ ಹೇಳಕ್ಕಾಗುತ್ತಾ? ಇಲ್ಲ. ಅವನಿಗೆ ನಂಬಿಕೆ ಇದ್ರೂ ಅದು ವ್ಯರ್ಥ ಆಗುತ್ತೆ. ಯಾಕಂದ್ರೆ ಅವನ ಕೆಲಸಗಳಲ್ಲಿ ಅದನ್ನ ತೋರಿಸ್ತಾ ಇಲ್ಲ. (ಯಾಕೋ. 2:14-16) ನಂಬಿಕೆ ಇದೆ ಅಂತ ತಮ್ಮ ಕೆಲಸದಲ್ಲಿ ತೋರಿಸಿದವ್ರಲ್ಲಿ ರಾಹಾಬ್‌ ಕೂಡ ಒಬ್ಬಳು ಅಂತ ಯಾಕೋಬ ಹೇಳಿದ. (ಯಾಕೋ. 2:25, 26) ಯೆಹೋವನ ಬಗ್ಗೆ, ಆತನು ಇಸ್ರಾಯೇಲ್ಯರನ್ನ ಹೇಗೆಲ್ಲಾ ಕಾಪಾಡಿದನು ಅನ್ನೋದ್ರ ಬಗ್ಗೆ ರಾಹಾಬ್‌ ಕೇಳಿಸ್ಕೊಂಡಿದ್ದಳು. (ಯೆಹೋ. 2:9-11) ಆಗ ಅವಳು ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದಷ್ಟೇ ಅಲ್ಲ, ಇಬ್ರು ಇಸ್ರಾಯೇಲ್ಯ ಗೂಢಾಚಾರರು ಬಂದಾಗ ಅವ್ರನ್ನ ಬಚ್ಚಿಟ್ಟು ಕಾಪಾಡಿದಳು. ಹೀಗೆ ನಂಬಿಕೆ ಇದೆ ಅಂತ ತನ್ನ ಕೆಲಸದಲ್ಲಿ ತೋರಿಸಿದಳು. ಇವಳು ಅಬ್ರಹಾಮನ ತರ ಅಪರಿಪೂರ್ಣಳಾಗಿದ್ದಳು ಮತ್ತು ಮೋಶೆ ನಿಯಮ ಪುಸ್ತಕನ ಪಾಲಿಸ್ತಿರಲಿಲ್ಲ. ಹಾಗಿದ್ರೂ ಯೆಹೋವ ಅವ್ರಿಬ್ರನ್ನ ನೀತಿವಂತರು ಅಂತ ಕರೆದನು. ಹಾಗಾಗಿ ನಂಬಿಕೆ ಇದ್ರೆ ಮಾತ್ರ ಸಾಕಾಗಲ್ಲ, ಅದನ್ನ ನಮ್ಮ ಕೆಲಸದಲ್ಲಿ ತೋರಿಸೋದು ತುಂಬ ಮುಖ್ಯ ಅಂತ ರಾಹಾಬಳಿಂದ ಗೊತ್ತಾಗುತ್ತೆ. w23.12 5-6 ¶12-13

ಗುರುವಾರ, ಅಕ್ಟೋಬರ್‌ 23

ನೀವು ಬಲವಾಗಿ ಬೇರೂರಿರಬೇಕು ಮತ್ತು ಅಡಿಪಾಯದ ಮೇಲೆ ಸ್ಥಿರವಾಗಿ ನಿಲ್ಲಬೇಕು.—ಎಫೆ. 3:17.

ಕ್ರೈಸ್ತರಾಗಿರೋ ನಾವು ಬೈಬಲಲ್ಲಿರೋ ಕೆಲವು ವಿಷ್ಯಗಳನ್ನ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ, ಯೆಹೋವನ ಬಗ್ಗೆ ಇರೋ “ಗಾಢವಾದ ವಿಷ್ಯಗಳನ್ನ” ತಿಳ್ಕೊಬೇಕು. ಅದಕ್ಕೆ ಆತನು ಕೊಡೋ ಪವಿತ್ರಶಕ್ತಿ ಸಹಾಯ ಮಾಡುತ್ತೆ. (1 ಕೊರಿಂ. 2:9, 10) ಅದನ್ನ ತಿಳ್ಕೊಳ್ಳೋಕೆ ಮತ್ತು ದೇವರಿಗೆ ಹತ್ರ ಆಗೋಕೆ ಬೈಬಲ್‌ ಪ್ರಾಜೆಕ್ಟ್‌ ಮಾಡಿ. ಉದಾಹರಣೆಗೆ, ಯೆಹೋವ ದೇವರು ಹಿಂದಿನ ಕಾಲದಲ್ಲಿ ತನ್ನ ಸೇವಕರಿಗೆ ಹೇಗೆಲ್ಲ ಪ್ರೀತಿ ತೋರಿಸಿದನು ಅಂತ ಹುಡುಕಿ. ಆಗ ಯೆಹೋವ ನಮ್ಮನ್ನ ಹೇಗೆ ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ ಅಥವಾ ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೇಗೆ ಆರಾಧನೆ ಮಾಡೋಕೆ ಹೇಳಿದ್ದನು ಅಂತ ಹುಡುಕಿ. ಆಗ ನಾವೂ ಅದೇ ತರ ಮಾಡ್ತಿದ್ದೀವಾ ಅಂತ ಗೊತ್ತಾಗುತ್ತೆ. ಇಲ್ಲಾಂದ್ರೆ ಯೇಸು ಭೂಮಿಗೆ ಬಂದ್ಮೇಲೆ ಆತನ ಬಗ್ಗೆ ಇರೋ ಭವಿಷ್ಯವಾಣಿಗಳು ಹೇಗೆಲ್ಲ ನಿಜ ಆಯ್ತು ಅಂತ ಅಧ್ಯಯನ ಮಾಡಿ. ಇಂಥ ವಿಷ್ಯಗಳ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋದ್ರಲ್ಲಿ ಹುಡುಕಿ ನೋಡಿ. ಈ ತರ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದ್ರೆ ಬೋರ್‌ ಆಗಲ್ಲ. ನಮ್ಮ ನಂಬಿಕೆನೂ ಗಟ್ಟಿಯಾಗುತ್ತೆ ಮತ್ತು ‘ದೇವರ ಬಗ್ಗೆ ಹೆಚ್ಚು ಕಲಿಯೋಕೂ’ ಆಗುತ್ತೆ.—ಜ್ಞಾನೋ. 2:4, 5 w23.10 18-19 ¶3-5

ಶುಕ್ರವಾರ, ಅಕ್ಟೋಬರ್‌ 24

ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು. ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.—1 ಪೇತ್ರ 4:8.

ಅಪೊಸ್ತಲ ಪೇತ್ರ ಉಪಯೋಗಿಸಿದ “ತುಂಬ” ಅನ್ನೋ ಪದದ ಅಕ್ಷರಾರ್ಥ “ಹಾಸೋದು”. ಆ ವಚನದ ಎರಡನೇ ಭಾಗದಲ್ಲಿ “ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ” ಅಂತ ಹೇಳುತ್ತೆ. ಅಂದ್ರೆ ಅವ್ರ ಪಾಪಗಳನ್ನ ಮುಚ್ಚುತ್ತಾನೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ನಿಮ್ಮ ಮನೇಲಿ ನೋಡೋಕೆ ತುಂಬ ಗಲೀಜಾಗಿರೋ ಒಂದು ಟೇಬಲ್‌ ಇದೆ ಅಂತ ಅಂದ್ಕೊಳ್ಳಿ. ಅದ್ರ ಮೇಲೆ ನೀವೊಂದು ಬಟ್ಟೆಯನ್ನ ಹಾಸಿದಾಗ ಅದ್ರಲ್ಲಿರೋ ಒಂದೆರಡಲ್ಲ, ಎಲ್ಲಾ ಗಲೀಜನ್ನ ಅಥವಾ ಕಲೆಯನ್ನ ಆ ಬಟ್ಟೆ ಮುಚ್ಚಿ ಬಿಡುತ್ತೆ. ಹಾಗೇನೇ ಸಹೋದರ ಸಹೋದರಿಯರ ಮೇಲೆ ನಮಗೆ “ತುಂಬ ಪ್ರೀತಿ” ಇದ್ರೆ ಅವ್ರು ಒಂದಲ್ಲಾ, ಎರಡಲ್ಲಾ ‘ಎಷ್ಟೇ ತಪ್ಪುಗಳನ್ನ’ ಮಾಡಿದ್ರೂ ಕ್ಷಮಿಸ್ತೀವಿ, ಅದೆಷ್ಟೇ ಕಷ್ಟ ಆದ್ರೂ ಕ್ಷಮಿಸ್ತೀವಿ. (ಕೊಲೊ. 3:13) ಹೀಗೆ ಮಾಡುವಾಗ ಅವ್ರ ಮೇಲೆ ನಮಗೆಷ್ಟು ಪ್ರೀತಿ ಇದೆ ಅಂತ ತೋರಿಸೋದಷ್ಟೇ ಅಲ್ಲ, ಯೆಹೋವನನ್ನ ಮೆಚ್ಚಿಸೋ ಆಸೆನೂ ಇದೆ ಅಂತ ತೋರಿಸ್ತೀವಿ. w23.11 11-12 ¶13-15

ಶನಿವಾರ, ಅಕ್ಟೋಬರ್‌ 25

ಶಾಫಾನ . . . ತನ್ನ ಹತ್ರ ಇದ್ದ ಆ ಪುಸ್ತಕವನ್ನ ರಾಜನ ಮುಂದೆ ಓದೋಕೆ ಶುರುಮಾಡಿದ.—2 ಪೂರ್ವ. 34:18.

ರಾಜ ಯೋಷೀಯನಿಗೆ 26 ವರ್ಷ ಆದಾಗ ದೇವಾಲಯದ ದುರಸ್ತಿ ಕೆಲಸನ ಶುರು ಮಾಡಿದ. ಆ ಕೆಲಸ ನಡಿತಿದ್ದಾಗ “ಮೋಶೆ ಮೂಲಕ ಕೊಟ್ಟ ಯೆಹೋವನ ನಿಯಮ ಪುಸ್ತಕ ಸಿಕ್ತು.” ಆ ನಿಯಮಗಳನ್ನ ಯೋಷೀಯ ಕೇಳಿಸ್ಕೊಂಡ ತಕ್ಷಣ ಬದಲಾವಣೆಗಳನ್ನ ಮಾಡ್ಕೊಂಡ. (2 ಪೂರ್ವ. 34:14, 19-21) ಮಕ್ಕಳೇ, ನೀವು ಬೈಬಲನ್ನ ದಿನಾ ಓದ್ತಾ ಇದ್ದೀರಾ? ಓದ್ತಾ ಇರೋ ವಿಷ್ಯಗಳು ನಿಮಗೆ ಇಷ್ಟ ಆಗ್ತಾ ಇದ್ಯಾ? ನಿಮಗೆ ಸಹಾಯ ಆಗೋ ವಚನಗಳನ್ನ ಗುರುತು ಹಾಕಿ ಇಟ್ಕೊಳ್ತಾ ಇದ್ದೀರಾ? ಎಲ್ಲಾದ್ರೂ ಬರೆದಿಟ್ಕೊಳ್ತಾ ಇದ್ದೀರಾ? ಯೋಷೀಯನಿಗೆ 39 ವರ್ಷ ಆದಾಗ ಒಂದು ದೊಡ್ಡ ತಪ್ಪು ಮಾಡಿದ. ಇದ್ರಿಂದ ತನ್ನ ಪ್ರಾಣನೇ ಕಳ್ಕೊಂಡ. ಏನು ಮಾಡಬೇಕು, ಏನು ಮಾಡಬಾರದು ಅಂತ ಯೆಹೋವನನ್ನ ಕೇಳೋ ಬದ್ಲು, ತನಗೆ ಸರಿ ಅನಿಸಿದ್ದನ್ನ ಮಾಡಿದ. (2 ಪೂರ್ವ. 35:20-25) ಅದಕ್ಕೇ ಹೀಗಾಯ್ತು. ಇದ್ರಿಂದ ನಮಗೇನು ಪಾಠ? ನಾವೆಷ್ಟೇ ದೊಡ್ಡವರಾಗಿರಲಿ, ತುಂಬ ವರ್ಷಗಳಿಂದ ಬೈಬಲ್‌ ಓದ್ತಾ ಇರಲಿ, ನಾವು ಯೆಹೋವನ ಮಾತನ್ನ ಕೇಳ್ತಾ ಇರಬೇಕು. ಅದು ಹೇಗಂದ್ರೆ, ನಾವು ಆತನಿಗೆ ಪ್ರಾರ್ಥನೆ ಮಾಡಬೇಕು, ಬೈಬಲನ್ನ ಓದಬೇಕು, ಅನುಭವ ಇರೋ ಸಹೋದರ ಸಹೋದರಿಯರಿಂದ ಸಲಹೆ ಪಡ್ಕೊಬೇಕು. ಆಗ ನಾವು ಜೀವನದಲ್ಲಿ ದೊಡ್ಡ ತಪ್ಪುಗಳನ್ನ ಮಾಡಲ್ಲ, ಖುಷಿಯಾಗಿ ಇರ್ತೀವಿ.—ಯಾಕೋ. 1:25. w23.09 12 ¶15-16

ಭಾನುವಾರ, ಅಕ್ಟೋಬರ್‌ 26

ದೇವರು ಅಹಂಕಾರಿಗಳನ್ನ ಇಷ್ಟಪಡಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.—ಯಾಕೋ. 4:6.

ಯೆಹೋವನನ್ನ ಪ್ರೀತಿಸಿ, ಆತನನ್ನ ಆರಾಧಿಸಿರೋ ಎಷ್ಟೋ ಸ್ತ್ರೀಯರ ಬಗ್ಗೆ ಬೈಬಲಲ್ಲಿದೆ. ಈ ಸ್ತ್ರೀಯರು “ಎಲ್ಲ ವಿಷ್ಯಗಳಲ್ಲಿ ಇತಿಮಿತಿ” ತೋರಿಸಿದ್ರು ಮತ್ತು “ನಂಬಿಗಸ್ತರಾಗಿ” ಇದ್ರು. (1 ತಿಮೊ. 3:11) ನೀವು ಇವ್ರಿಂದಷ್ಟೇ ಅಲ್ಲ, ನಿಮ್ಮ ಸಭೆಲಿರೋ ಪ್ರೌಢ ಸ್ತ್ರೀಯರಿಂದನೂ ತುಂಬ ವಿಷ್ಯಗಳನ್ನ ಕಲಿಬಹುದು. ಯುವ ಸಹೋದರಿಯರೇ, ಪ್ರೌಢ ಕ್ರೈಸ್ತರಾಗಿ ಮಾದರಿ ಇಟ್ಟಿರೋ ಸಹೋದರಿಯರು ನಿಮಗೆ ಗೊತ್ತಿದ್ದಾರಾ? ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನೀವು ಗಮನಿಸಿದ್ದೀರಾ? ಹಾಗಿದ್ರೆ ನೀವೂ ಆ ಗುಣಗಳನ್ನ ಹೇಗೆ ತೋರಿಸಬಹುದು ಅಂತ ಯೋಚ್ನೆ ಮಾಡಿ. ದೀನತೆ ಅನ್ನೋ ಗುಣ ಇದ್ರೆ ಒಬ್ಬ ಸಹೋದರಿ ಪ್ರೌಢಳಾಗೋಕೆ ಆಗುತ್ತೆ. ಈ ಗುಣ ಇದ್ರೆ ಅವಳಿಗೆ ಯೆಹೋವನ ಜೊತೆ ಒಳ್ಳೇ ಸ್ನೇಹ ಇರುತ್ತೆ ಮತ್ತು ಎಲ್ರ ಜೊತೆನೂ ಚೆನ್ನಾಗಿರ್ತಾಳೆ. ಉದಾಹರಣೆಗೆ, ಯೆಹೋವ ಮಾಡಿರೋ ತಲೆತನದ ಏರ್ಪಾಡಿಗೆ ಅಧೀನಳಾಗಿರೋಕೆ ಅವಳಿಗೆ ಆಗುತ್ತೆ. (1 ಕೊರಿಂ. 11:3, ಪಾದಟಿಪ್ಪಣಿ) ಸಭೆಲಿ ಮತ್ತು ಕುಟುಂಬದಲ್ಲಿ ಯೆಹೋವ ಜವಾಬ್ದಾರಿ ಕೊಟ್ಟಿರೋರಿಗೆ ಸಹಕಾರ ಕೊಡೋಕಾಗುತ್ತೆ. w23.12 18-19 ¶3-5

ಸೋಮವಾರ, ಅಕ್ಟೋಬರ್‌ 27

ಗಂಡಂದಿರು ತಮ್ಮ ದೇಹವನ್ನ ಪ್ರೀತಿಸೋ ಹಾಗೆ ತಮ್ಮ ಹೆಂಡತಿಯರನ್ನ ಪ್ರೀತಿಸಬೇಕು.—ಎಫೆ. 5:28.

ಒಬ್ಬ ಒಳ್ಳೆ ಗಂಡ, ತನ್ನ ಹೆಂಡತಿಯನ್ನ ಪ್ರೀತಿಸಬೇಕು. ಅವಳ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೋಬೇಕು ಮತ್ತು ಯೆಹೋವನಿಗೆ ಹತ್ರ ಆಗೋಕೆ ಅವಳಿಗೆ ಸಹಾಯ ಮಾಡಬೇಕು. ಗಂಡಂದಿರು ತಮ್ಮ ಹೆಂಡತಿಯರ ಜೊತೆ ಹೀಗೇ ಇರಬೇಕು ಅಂತ ಯೆಹೋವ ಬಯಸ್ತಾನೆ. ಚೆನ್ನಾಗಿ ಯೋಚಿಸುವ ಸಾಮರ್ಥ್ಯವನ್ನ, ಸ್ತ್ರೀಯರಿಗೆ ಗೌರವ ಕೊಡೋದನ್ನ ಮತ್ತು ನಂಬಿಕೆ ಉಳಿಸ್ಕೊಳ್ಳೋದನ್ನ ನೀವು ಕಲಿತ್ರೆ ನೀವೊಬ್ಬ ಒಳ್ಳೆ ಗಂಡ ಆಗ್ತೀರ. ನೀವು ಒಳ್ಳೇ ಅಪ್ಪ ಆಗೋಕೆ ಇಷ್ಟ ಪಟ್ರೆ ಯೆಹೋವ ದೇವರಿಂದ ತುಂಬ ವಿಷ್ಯಗಳನ್ನ ಕಲಿಬಹುದು. ಯಾಕಂದ್ರೆ ಯೆಹೋವ ಒಳ್ಳೆ ಅಪ್ಪ ಆಗಿದ್ದಾನೆ. (ಎಫೆ. 6:4) ಯೆಹೋವ ತನ್ನ ಮಗ ಯೇಸುಗೆ ‘ನಿನ್ನನ್ನ ಪ್ರೀತಿಸ್ತೀನಿ ನಿನ್ನನ್ನ ಮೆಚ್ಕೊಂಡಿದ್ದೀನಿ’ ಅಂತ ಹೇಳಿದನು. (ಮತ್ತಾ. 3:17) ಯೆಹೋವ ದೇವರ ತರ ನೀವೂ ನಿಮ್ಮ ಮಕ್ಕಳಿಗೆ, ಅವ್ರನ್ನ ತುಂಬ ಪ್ರೀತಿಸ್ತೀರ, ಅವರಂದ್ರೆ ನಿಮಗೆ ಇಷ್ಟ ಅಂತ ಹೇಳಿ. ಅವರೇನಾದ್ರೂ ಒಳ್ಳೇದನ್ನ ಮಾಡಿದಾಗ ಹೊಗಳಿ. ಹೀಗೆ ಮಾಡಿದ್ರೆ ನಿಮ್ಮ ಮಕ್ಕಳು ಮುಂದೆ ಪ್ರೌಢ ಕ್ರೈಸ್ತರಾಗ್ತಾರೆ. ಒಳ್ಳೇ ಅಪ್ಪ ಆಗೋಕೆ ಈಗಿಂದನೇ ತಯಾರಾಗಿ. ಹೇಗೆ? ನಿಮ್ಮ ಕುಟುಂಬದವರನ್ನ, ಸಭೆಯಲ್ಲಿರುವವ್ರನ್ನ ಪ್ರೀತಿಸಿ, ಅವ್ರನ್ನ ಚೆನ್ನಾಗಿ ನೋಡ್ಕೊಳ್ಳಿ. ಅವ್ರನ್ನ ನೀವು ಎಷ್ಟು ಪ್ರೀತಿಸ್ತೀರ ಅಂತ ಹೇಳಿ.—ಯೋಹಾ. 15:9 w23.12 28-29 ¶17-18

ಮಂಗಳವಾರ, ಅಕ್ಟೋಬರ್‌ 28

ಆ ದಿನಗಳಲ್ಲಿ ಸ್ಥಿರತೆಯನ್ನ ಕೊಡುವವನು [ಯೆಹೋವನೇ]. —ಯೆಶಾ. 33:6.

ಇವತ್ತು ನಮಗೂ ಎಲ್ಲಾ ಜನ್ರಿಗೆ ಬರೋ ಕಷ್ಟಗಳು ಬರುತ್ತೆ. ಅಷ್ಟೇ ಅಲ್ಲ, ಯೆಹೋವನ ಸೇವಕರಾಗಿರೋದ್ರಿಂದ ನಮಗೆ ಹಿಂಸೆ ವಿರೋಧಗಳೂ ಬರುತ್ತೆ. ಹಾಗಂತ ಯೆಹೋವ ನಮಗೆ ಬರೋ ಕಷ್ಟಗಳನ್ನ ತಡಿಯಲ್ಲ. ಆದ್ರೆ ಅಂಥ ಸಂದರ್ಭಗಳಲ್ಲಿ ನಾವು ಖುಷಿಯಾಗಿರೋಕೆ, ಸರಿಯಾದ ತೀರ್ಮಾನ ಮಾಡೋಕೆ ಮತ್ತು ಆತನಿಗೆ ನಿಯತ್ತಾಗಿರೋಕೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 41:10) ನಿಮ್ಮ ಮನಸ್ಸಿಗೆ “ಶಾಂತಿ” ಕೊಡ್ತೀನಿ ಅಂತ ಯೆಹೋವ ಮಾತುಕೊಟ್ಟಿದ್ದಾನೆ. (ಫಿಲಿ. 4:6, 7) ನಾವು ಯೆಹೋವನ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಂಡಾಗ ನಮಗೆ ಈ ಶಾಂತಿ ಸಿಗುತ್ತೆ ಅಥವಾ ಮನಸ್ಸಿಗೆ ಸಮಾಧಾನ ಆಗುತ್ತೆ. ಈ ಶಾಂತಿ ನಮ್ಮ ‘ತಿಳುವಳಿಕೆಗೂ ಮೀರಿದ್ದು’ ಅಂತ ಬೈಬಲ್‌ ಹೇಳುತ್ತೆ. ಅಂದ್ರೆ ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಶಾಂತಿ ಮತ್ತು ಸಮಾಧಾನ ಸಿಗುತ್ತೆ. ನೀವು ಯಾವುದಾದ್ರೂ ಒಂದು ವಿಷ್ಯಕ್ಕೋಸ್ಕರ ಯೆಹೋವನ ಹತ್ರ ತುಂಬ ಪ್ರಾರ್ಥನೆ ಮಾಡಿದ್ದೀರಾ? ಆಗ ನಿಮಗೆ ಹೇಗನಿಸ್ತು? ದೇವರು ನಿಮ್ಮ ಮನಸ್ಸಿಗೆ “ಶಾಂತಿ” ಕೊಟ್ನಲ್ವಾ? w24.01 20 ¶2; 21 ¶4

ಬುಧವಾರ, ಅಕ್ಟೋಬರ್‌ 29

ನನ್ನ ಮನ ಯೆಹೋವನನ್ನ ಹೊಗಳಲಿ, ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ.—ಕೀರ್ತ. 103:1.

ನಮಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಮನಸ್ಸಾರೆ ಆತನ ಹೆಸ್ರನ್ನ ಹೊಗಳ್ತೀವಿ. ಯೆಹೋವನ ಹೆಸ್ರನ್ನ ಹೊಗಳಿದ್ರೆ ಯೆಹೋವನನ್ನೇ ಹೊಗಳಿದಂಗೆ ಅಂತ ದಾವೀದ ಅರ್ಥಮಾಡ್ಕೊಂಡಿದ್ದ. ಯೆಹೋವನ ಹೆಸ್ರಿನ ಬಗ್ಗೆ ಯೋಚಿಸಿದಾಗ ಆತನಲ್ಲಿರೋ ಒಳ್ಳೇ ಗುಣಗಳು, ಆತನು ಹಿಂದೆ ಮಾಡಿರೋ ಅದ್ಭುತ ಕೆಲಸಗಳು ನೆನಪಾಗುತ್ತೆ. ದಾವೀದನಿಗೆ ಯೆಹೋವನ ಪವಿತ್ರ ಹೆಸ್ರನ್ನ ಗೌರವಿಸೋಕೆ, ಮನಸಾರೆ ಕೊಂಡಾಡೋಕೆ ತುಂಬ ಆಸೆ ಇತ್ತು. ಅದಕ್ಕೇ “ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ” ಅಂತ ಹೇಳಿದ. ಇವನ ತರಾನೇ ಲೇವಿಯರೂ ಯೆಹೋವನ ಹೆಸ್ರನ್ನ ಕೊಂಡಾಡಿದ್ರು. ಆತನ ಹೆಸ್ರನ್ನ ಎಷ್ಟು ಹೊಗಳಿದ್ರೂ, ಸ್ತುತಿಸಿದ್ರೂ ಅದು ಕಡಿಮೆನೇ ಅಂತ ಅವರು ನೆನಸಿದ್ರು. (ನೆಹೆ. 9:5) ಆದ್ರೆ ಇವ್ರೆಲ್ರೂ ಮನಸಾರೆ ತನ್ನ ಹೆಸ್ರನ್ನ ಹೊಗಳಿದಾಗ ಯೆಹೋವನಿಗೆ ಖುಷಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ! w24.02 9 ¶6

ಗುರುವಾರ, ಅಕ್ಟೋಬರ್‌ 30

ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.—ಫಿಲಿ. 3:16.

ಒಂದುವೇಳೆ ನಿಮ್ಮಿಂದ ಮುಟ್ಟೋಕೆ ಆಗದಿರೋ ಗುರಿಗಳನ್ನ ನೀವು ಇಟ್ಟಿದ್ದೀರ ಅಂತ ಗೊತ್ತಾದ್ರೆ ನಿಮ್ಮ ಗುರಿನ ಬದಲಾಯಿಸ್ಕೊಳ್ಳಿ. ಹೀಗೆ ಮಾಡಿದ್ರೆ ಯೆಹೋವ ದೇವರು ನೀವು ಸೋತುಹೋಗಿಬಿಟ್ರಿ ಅಂತ ಅಂದ್ಕೊಳ್ಳಲ್ಲ. ಯಾಕಂದ್ರೆ ನಿಮ್ಮಿಂದ ಮಾಡೋಕೆ ಆಗದೇ ಇರೋದನ್ನ ಯಾವತ್ತೂ ಕೇಳಲ್ಲ. (2 ಕೊರಿಂ. 8:12) ಎಲ್ಲಿ, ಏನು ಬದಲಾಯಿಸ್ಕೊಬೇಕು ಅಂತ ಯೋಚ್ನೆ ಮಾಡಿ. ಈಗಾಗ್ಲೇ ನೀವು ಯಾವೆಲ್ಲ ಗುರಿಗಳನ್ನ ಮುಟ್ಟಿದ್ದೀರ ಅಂತ ನೆನಪಿಸ್ಕೊಳ್ಳಿ. ಯೆಹೋವನಿಗೋಸ್ಕರ ‘ನೀವು ಮಾಡಿರೋ ಕೆಲಸನ ಆತನು ಮರಿಯಲ್ಲ. ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ’ ಅಂತ ಬೈಬಲ್‌ ಹೇಳುತ್ತೆ. (ಇಬ್ರಿ. 6:10) ಆತನಿಗೋಸ್ಕರ ನೀವು ಏನೆಲ್ಲಾ ಮಾಡಿದ್ದೀರ ಅನ್ನೋದನ್ನ ಆಗಾಗ ನೆನಪಿಸ್ಕೊಳ್ಳಿ. ಉದಾಹರಣೆಗೆ, ಆತನ ಜೊತೆ ಒಳ್ಳೇ ಸ್ನೇಹ ಬೆಳೆಸ್ಕೊಂಡ್ರಿ, ಆತನ ಬಗ್ಗೆ ಬೇರೆಯವ್ರ ಹತ್ರ ಹೇಳಿದ್ರಿ, ದೀಕ್ಷಾಸ್ನಾನ ತಗೊಂಡ್ರಿ. ಈ ಗುರಿಗಳನ್ನ ಮುಟ್ಟಿದ್ದೀರ ಅಂದ್ಮೇಲೆ ಈಗ ಇಟ್ಟಿರೋ ಗುರಿಯನ್ನೂ ಮುಟ್ಟಕ್ಕಾಗುತ್ತೆ. ಅದಕ್ಕೆ ಪ್ರಯತ್ನ ಮಾಡ್ತಾ ಇರಿ. ಯೆಹೋವ ದೇವರ ಸಹಾಯದಿಂದ ಏನೇ ಅಡೆತಡೆ ಬಂದ್ರೂ ನಮ್ಮ ಗುರಿನ ಮುಟ್ಟೋಕೆ ಆಗುತ್ತೆ. ನೀವು ನಿಮ್ಮ ಗುರಿನ ಮುಟ್ಟೋಕೆ ಪ್ರಯತ್ನ ಹಾಕುವಾಗ ಯೆಹೋವ ನಿಮಗೆ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ, ಹೇಗೆಲ್ಲ ಆಶೀರ್ವದಿಸ್ತಾ ಇದ್ದಾನೆ ಅನ್ನೋದಕ್ಕೆ ಗಮನ ಕೊಡಿ, ಖುಷಿ ಪಡಿ. (2 ಕೊರಿಂ. 4:7) ಏನೇ ಆದ್ರೂ ಪ್ರಯತ್ನ ಬಿಡಬೇಡಿ. ಆಗ ಯೆಹೋವ ನಿಮ್ಮನ್ನ ಇನ್ನೂ ಆಶೀರ್ವದಿಸ್ತಾನೆ.—ಗಲಾ. 6:9. w23.05 31 ¶16-18

ಶುಕ್ರವಾರ, ಅಕ್ಟೋಬರ್‌ 31

ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ. ಯಾಕಂದ್ರೆ ನೀವು ನನ್ನನ್ನ ಪ್ರೀತಿಸಿದ್ರಿ, ನಾನು ದೇವರ ಪ್ರತಿನಿಧಿ ಅಂತ ನಂಬಿದ್ರಿ.—ಯೋಹಾ. 16:27.

ಯೆಹೋವ ತನ್ನ ಸೇವಕರಾದ ನಮ್ಮನ್ನ ಪ್ರೀತಿಸ್ತಾನೆ, ಮೆಚ್ಕೊಳ್ತಾನೆ ಅಂತ ತೋರಿಸೋಕೆ ಇಷ್ಟಪಡ್ತಾನೆ. ತನ್ನ ಪ್ರೀತಿಯ ಮಗನಾದ ಯೇಸುವನ್ನೂ ಯೆಹೋವ ಮೆಚ್ಕೊಂಡನು. ಅಂಥ 2 ಸಂದರ್ಭದ ಬಗ್ಗೆ ಬೈಬಲ್‌ ಹೇಳುತ್ತೆ. (ಮತ್ತಾ. 3:17; 17:5) ಯೆಹೋವ ನಿಮ್ಮನ್ನೂ ಮೆಚ್ಕೊಂಡಿದ್ದೀನಿ ಅಂತ ಹೇಳೋದನ್ನ ಕೇಳಿಸ್ಕೊಳ್ಳೋಕೆ ನೀವು ಇಷ್ಟಪಡ್ತೀರಾ? ಆತನು ಯೇಸುಗೆ ಹೇಳಿದ ತರ ಸ್ವರ್ಗದಿಂದ ನೇರವಾಗಿ ನಿಮ್ಮ ಹತ್ರ ಹೇಳಲ್ಲ, ಆದ್ರೆ ಬೈಬಲಿಂದ ಹೇಳ್ತಾನೆ. ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳು ಬೈಬಲಲ್ಲಿದೆ. ಅದನ್ನ ಓದುವಾಗ ಯೆಹೋವ ನಮ್ಮನ್ನ ಮೆಚ್ಕೊಂಡಿದ್ದಾನೆ ಅಂತ ಹೇಳೋದನ್ನ “ಕೇಳಿಸ್ಕೊಳ್ಳೋಕೆ” ಆಗುತ್ತೆ. ತನ್ನ ಶಿಷ್ಯರು ಅಪರಿಪೂರ್ಣರಾಗಿದ್ರೂ ಯೆಹೋವನಿಗೆ ನಂಬಿಕೆಯಿಂದ ಸೇವೆ ಮಾಡೋದನ್ನ ನೋಡಿದಾಗ ಯೇಸು ಅವ್ರನ್ನ ಮೆಚ್ಕೊಂಡನು. ಯೆಹೋವನಲ್ಲಿರೋ ಈ ಗುಣನ ಯೇಸುನೂ ತೋರಿಸಿದ್ರಿಂದ ಯೆಹೋವ ನಮ್ಮನ್ನೂ ಮೆಚ್ಕೊಳ್ತಾನೆ ಅಂತ ಗೊತ್ತಾಗುತ್ತೆ. (ಯೋಹಾ. 15:9, 15) ಆದ್ರೆ ನಮಗೆ ಕಷ್ಟ ಬರ್ತಾ ಇದೆ ಅಂದ್ರೆ ಅದರರ್ಥ ಯೆಹೋವ ನಮ್ಮನ್ನ ಮೆಚ್ಕೊಂಡಿಲ್ಲ ಅಂತನಾ? ಅಲ್ಲ. ನಾವು ಯೆಹೋವ ದೇವ್ರನ್ನ ಎಷ್ಟು ಪ್ರೀತಿಸ್ತೀವಿ, ಆತನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೀವಿ ಅಂತ ತೋರಿಸೋಕೆ ಆಗ ನಮಗೊಂದು ಅವಕಾಶ ಸಿಗುತ್ತೆ.—ಯಾಕೋ. 1:12. w24.03 28 ¶10-11

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ