ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • es25 ಪು. 126-138
  • ನವೆಂಬರ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌
  • ದಿನದ ವಚನ ಓದಿ ಚರ್ಚಿಸೋಣ—2025
  • ಉಪಶೀರ್ಷಿಕೆಗಳು
  • ಶನಿವಾರ, ನವೆಂಬರ್‌ 1
  • ಭಾನುವಾರ, ನವೆಂಬರ್‌ 2
  • ಸೋಮವಾರ, ನವೆಂಬರ್‌ 3
  • ಮಂಗಳವಾರ, ನವೆಂಬರ್‌ 4
  • ಬುಧವಾರ, ನವೆಂಬರ್‌ 5
  • ಗುರುವಾರ, ನವೆಂಬರ್‌ 6
  • ಶುಕ್ರವಾರ, ನವೆಂಬರ್‌ 7
  • ಶನಿವಾರ, ನವೆಂಬರ್‌ 8
  • ಭಾನುವಾರ, ನವೆಂಬರ್‌ 9
  • ಸೋಮವಾರ, ನವೆಂಬರ್‌ 10
  • ಮಂಗಳವಾರ, ನವೆಂಬರ್‌ 11
  • ಬುಧವಾರ, ನವೆಂಬರ್‌ 12
  • ಗುರುವಾರ, ನವೆಂಬರ್‌ 13
  • ಶುಕ್ರವಾರ, ನವೆಂಬರ್‌ 14
  • ಶನಿವಾರ, ನವೆಂಬರ್‌ 15
  • ಭಾನುವಾರ, ನವೆಂಬರ್‌ 16
  • ಸೋಮವಾರ, ನವೆಂಬರ್‌ 17
  • ಮಂಗಳವಾರ, ನವೆಂಬರ್‌ 18
  • ಬುಧವಾರ, ನವೆಂಬರ್‌ 19
  • ಗುರುವಾರ, ನವೆಂಬರ್‌ 20
  • ಶುಕ್ರವಾರ, ನವೆಂಬರ್‌ 21
  • ಶನಿವಾರ, ನವೆಂಬರ್‌ 22
  • ಭಾನುವಾರ, ನವೆಂಬರ್‌ 23
  • ಸೋಮವಾರ, ನವೆಂಬರ್‌ 24
  • ಮಂಗಳವಾರ, ನವೆಂಬರ್‌ 25
  • ಬುಧವಾರ, ನವೆಂಬರ್‌ 26
  • ಗುರುವಾರ, ನವೆಂಬರ್‌ 27
  • ಶುಕ್ರವಾರ, ನವೆಂಬರ್‌ 28
  • ಶನಿವಾರ, ನವೆಂಬರ್‌ 29
  • ಭಾನುವಾರ, ನವೆಂಬರ್‌ 30
ದಿನದ ವಚನ ಓದಿ ಚರ್ಚಿಸೋಣ—2025
es25 ಪು. 126-138

ನವೆಂಬರ್‌

ಶನಿವಾರ, ನವೆಂಬರ್‌ 1

ಚಿಕ್ಕಮಕ್ಕಳು ಪುಟಾಣಿಗಳು ನಿನ್ನನ್ನ ಹೊಗಳೋ ಹಾಗೆ ಮಾಡಿದ್ದೀಯ.—ಮತ್ತಾ. 21:16.

ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ಚೆನ್ನಾಗಿ ಅರ್ಥ ಮಾಡ್ಕೊಂಡು ಉತ್ರ ಹೇಳೋ ತರ ಮನೆಯಲ್ಲೇ ತಯಾರಿ ಮಾಡಿಸಿ. ಕೆಲವೊಮ್ಮೆ ದೊಡ್ಡವರಿಗಂತಾನೇ ಕೆಲವು ಲೇಖನಗಳು ಬರುತ್ತೆ. ಅದ್ರಲ್ಲಿ ಗಂಡ-ಹೆಂಡತಿಯರ ಮಧ್ಯ ಆಗೋ ಸಮಸ್ಯೆಗಳ ಬಗ್ಗೆ, ನೈತಿಕತೆ ಬಗ್ಗೆ ಇರುತ್ತೆ. ಅದ್ರಲ್ಲೂ ಮಕ್ಕಳು ಉತ್ರ ಕೊಡೋ ತರ ಒಂದೆರಡು ಪ್ಯಾರಗಳು ಇರಬಹುದು. ಅದನ್ನ ಅವ್ರಿಗೆ ತಯಾರಿ ಮಾಡಿಸಿ. ಮಕ್ಕಳಿಗೆ ಇನ್ನೊಂದು ವಿಷ್ಯನೂ ಹೇಳಿಕೊಡಿ. ಅವರು ಕೈ ಎತ್ತಿದಾಗ ಕೆಲವೊಮ್ಮೆ ಯಾಕೆ ಅವ್ರಿಗೆ ಅವಕಾಶ ಸಿಗಲ್ಲ ಅನ್ನೋದನ್ನ ಅರ್ಥ ಮಾಡಿಸಿ. ಆಗ ಅವ್ರಿಗೆ ಅವಕಾಶ ಸಿಗಲಿಲ್ಲಾಂದ್ರೆ ಬೇಜಾರ್‌ ಮಾಡ್ಕೊಳಲ್ಲ. (1 ತಿಮೊ. 6:18) ನಾವು ಯೆಹೋವನಿಗೆ ಹೊಗಳಿಕೆ ಸಿಗೋ ತರ ಮತ್ತು ನಮ್ಮ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡೋ ತರ ಉತ್ರಗಳನ್ನ ಹೇಳೋಣ. (ಜ್ಞಾನೋ. 25:11) ಕೆಲವೊಮ್ಮೆ ಉತ್ರ ಕೊಡುವಾಗ ನಮ್ಮ ಅನುಭವಗಳನ್ನ ಹೇಳಬಹುದು. ಆದ್ರೆ ಆಗ ನಮ್ಮ ಬಗ್ಗೆನೇ ತುಂಬ ಮಾತಾಡಬಾರದು. (ಜ್ಞಾನೋ. 27:2; 2 ಕೊರಿಂ. 10:18) ಬದಲಿಗೆ ಜನ್ರ ಗಮನ ಯೆಹೋವನ ಮೇಲೆ, ಆತನ ವಾಕ್ಯದ ಮೇಲೆ, ಆತನ ಜನ್ರ ಮೇಲೆ ಹೋಗೋ ತರ ಉತ್ರ ಹೇಳಬೇಕು.—ಪ್ರಕ. 4:11. w23.04 24-25 ¶17-18

ಭಾನುವಾರ, ನವೆಂಬರ್‌ 2

ನಾವು ಬೇರೆಯವ್ರ ತರ ನಿದ್ದೆ ಮಾಡೋದು ಬೇಡ, ಎಚ್ಚರವಾಗಿ ಇರೋಣ.—1 ಥೆಸ. 5:6.

ನಮ್ಮಲ್ಲಿ ಪ್ರೀತಿ ಇದ್ರೆ ನಾವು ಯಾವಾಗ್ಲೂ ಎಚ್ಚರವಾಗಿ ಇರ್ತೀವಿ ಮತ್ತು ಸರಿಯಾಗಿ ಇರೋದನ್ನೇ ಮಾಡ್ತೀವಿ. (ಮತ್ತಾ. 22:37-39) ಯೆಹೋವ ದೇವರ ಮೇಲೆ ನಮಗೆ ಪ್ರೀತಿ ಇರೋದ್ರಿಂದ ಏನೇ ಕಷ್ಟ ಬಂದ್ರೂ ನಾವು ಸಾರೋದನ್ನ ನಿಲ್ಲಿಸಲ್ಲ. (2 ತಿಮೊ. 1:7, 8) ಯೆಹೋವ ದೇವರನ್ನ ಆರಾಧನೆ ಮಾಡದಿರೋ ಜನ್ರನ್ನೂ ನಾವು ಪ್ರೀತಿಸ್ತೀವಿ. ಪತ್ರ ಬರೆದು ಅಥವಾ ಫೋನ್‌ ಮಾಡಿಯಾದ್ರೂ ಸಿಹಿಸುದ್ದಿ ಸಾರ್ತೀವಿ. ಒಂದಲ್ಲ ಒಂದಿನ ಅವರು ಬದಲಾಗಿ ಸರಿಯಾಗಿ ಇರೋದನ್ನ ಮಾಡ್ತಾರೆ ಅಂತ ನಂಬ್ತೀವಿ. (ಯೆಹೆ. 18:27, 28) ಜನ್ರನ್ನ ಪ್ರೀತಿಸೋದ್ರ ಜೊತೆಗೆ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು. ಹೇಗೆ? ನಾವು “ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ” ಇರಬೇಕು. (1 ಥೆಸ. 5:11) ಸೈನಿಕರು ಯುದ್ಧದಲ್ಲಿ ಒಬ್ರಿಗೊಬ್ರು ಸಹಾಯ ಮಾಡೋ ತರ ಸಹೋದರ ಸಹೋದರಿಯರು ಒಬ್ಬರಿಗೊಬ್ರು ಸಹಾಯ ಮಾಡಬೇಕು. ಆದ್ರೂ ಕೆಲವೊಮ್ಮೆ ಅವ್ರು ಗೊತ್ತಿಲ್ಲದೇ ನಮಗೆ ನೋವು ಮಾಡಿಬಿಡಬಹುದು. ಹಾಗಂತ ನಾವು ಅದನ್ನೇ ಮನಸ್ಸಲ್ಲಿಟ್ಟು ಅವ್ರಿಗೆ ಸೇಡು ತೀರಿಸೋಕೆ ಹೋಗಬಾರದು. (1 ಥೆಸ. 5:13, 15) ಅಷ್ಟೇ ಅಲ್ಲ, ನಾವು ಸಭೆಯನ್ನ ನೋಡ್ಕೊಳ್ಳೋ ಸಹೋದರರನ್ನೂ ಪ್ರೀತಿಸಬೇಕು ಮತ್ತು ಗೌರವಿಸಬೇಕು.—1 ಥೆಸ. 5:12. w23.06 10 ¶6; 11 ¶10-11

ಸೋಮವಾರ, ನವೆಂಬರ್‌ 3

[ಯೆಹೋವ] ತಾನು ಹೇಳಿದ ಹಾಗೇ ನಡೀತಾನೆ.—ಅರ. 23:19.

ನಮ್ಮ ನಂಬಿಕೆನ ಇನ್ನೂ ಜಾಸ್ತಿ ಮಾಡ್ಕೊಬೇಕಂದ್ರೆ ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಯೆಹೋವ ಯಾಕೆ ಈ ಬಿಡುಗಡೆ ಬೆಲೆ ಕೊಟ್ಟನು ಮತ್ತು ಇದಕ್ಕೋಸ್ಕರ ಏನೆಲ್ಲ ತ್ಯಾಗ ಮಾಡಿದನು ಅಂತ ಅರ್ಥ ಮಾಡ್ಕೊಬೇಕು. ಆಗ ಯೆಹೋವ ಕೊಟ್ಟಿರೋ ಮಾತೆಲ್ಲಾ ಖಂಡಿತ ನಡೆದೇ ನಡೆಯುತ್ತೆ ಅನ್ನೋ ಗ್ಯಾರಂಟಿ ಸಿಗುತ್ತೆ. ಹೊಸಲೋಕದಲ್ಲಿ ನಮಗೆ ಶಾಶ್ವತ ಜೀವ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆನೂ ಜಾಸ್ತಿ ಆಗುತ್ತೆ. ಹೇಗೆ? ಯೆಹೋವ ದೇವರು ಎಷ್ಟು ತ್ಯಾಗ ಮಾಡಿದ್ದಾರೆ ಅಂತ ಸ್ವಲ್ಪ ಯೋಚ್ನೆ ಮಾಡಿ. ತನ್ನ ಒಬ್ಬನೇ ಮಗನನ್ನ, ತನ್ನ ಬೆಸ್ಟ್‌ ಫ್ರೆಂಡನ್ನ ನಮಗೋಸ್ಕರ ಭೂಮಿಗೆ ಕಳಿಸ್ಕೊಟ್ಟನು. ಭೂಮೀಲಿ ಯೇಸು ಎಲ್ಲಾ ತರದ ಕಷ್ಟ ಅನುಭವಿಸಿದನು. ಕೊನೆಗೆ ಚಿತ್ರಹಿಂಸೆ ಅನುಭವಿಸಿ ಪ್ರಾಣ ಬಿಟ್ಟನು. ಯೆಹೋವ ತನ್ನ ಮಗನನ್ನ ಇಷ್ಟೆಲ್ಲ ಕಷ್ಟಪಟ್ಟು ಸಾಯೋಕೆ ಬಿಟ್ಟಿದ್ದು ನಾವೆಲ್ಲ ಸ್ವಲ್ಪ ದಿನ ಚೆನ್ನಾಗಿದ್ದು ಸಾಯಲಿ ಅಂತಾನಾ? ಖಂಡಿತ ಇಲ್ಲ. ನಾವೆಲ್ರೂ ಶಾಶ್ವತವಾಗಿ ಜೀವಿಸಬೇಕು ಅಂತ ಅಲ್ವಾ? (ಯೋಹಾ. 3:16; 1 ಪೇತ್ರ 1:18, 19) ಇಷ್ಟು ದೊಡ್ಡ ಬೆಲೆ ಕೊಟ್ಟ ಮೇಲೆ ಯೆಹೋವ ದೇವರು ಹೊಸಲೋಕ ಬರೋ ತರ ಮಾಡೇ ಮಾಡ್ತಾನೆ ಅಲ್ವಾ? w23.04 27 ¶8-9

ಮಂಗಳವಾರ, ನವೆಂಬರ್‌ 4

ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ ಹೋಯ್ತು?—ಹೋಶೇ. 13:14.

ತೀರಿಹೋದವ್ರನ್ನ ಮತ್ತೆ ಬದುಕಿಸಬೇಕು ಅನ್ನೋ ಆಸೆ ಯೆಹೋವನಿಗಿದೆಯಾ? ಖಂಡಿತ ಇದೆ. ಅದಕ್ಕೆ ತಾನು ಕೊಟ್ಟಿರೋ ಮಾತನ್ನ ಬೈಬಲಲ್ಲಿ ತುಂಬ ಕಡೆ ಬರೆಸಿಟ್ಟಿದ್ದಾನೆ. (ಯೆಶಾ. 26:19; ಪ್ರಕ. 20:11-13) ಯೆಹೋವ ದೇವರು ಒಂದು ಸಲ ಮಾತು ಕೊಟ್ಟ ಮೇಲೆ ಅದನ್ನ ಖಂಡಿತ ಮಾಡೇ ಮಾಡ್ತಾನೆ. (ಯೆಹೋ. 23:14) ಅಷ್ಟೇ ಅಲ್ಲ, ಅದನ್ನ ಮಾಡೋಕೆ ಆತನು ಕಾಯ್ತಾ ಇದ್ದಾನೆ. ಯೋಬನ ಉದಾಹರಣೆ ನೋಡಿ. ತಾನು ಸತ್ತು ಹೋದ್ರೂ ತನ್ನನ್ನ ಮತ್ತೆ ನೋಡೋಕೆ ಯೆಹೋವ ಆಸೆ ಪಡ್ತಾನೆ ಅಂತ ಯೋಬನಿಗೆ ಚೆನ್ನಾಗಿ ಗೊತ್ತಿತ್ತು. (ಯೋಬ 14:14, 15, ಪಾದಟಿಪ್ಪಣಿ) ಯೆಹೋವನನ್ನ ಆರಾಧನೆ ಮಾಡ್ತಿದ್ದ ಎಷ್ಟೋ ಜನ ಸತ್ತು ಹೋಗಿದ್ದಾರೆ. ಅವರನ್ನೆಲ್ಲಾ ಮತ್ತೆ ನೋಡಬೇಕು ಅಂತ ಯೆಹೋವ ಹಂಬಲಿಸ್ತಾನೆ. ಅವರೆಲ್ಲಾ ಆರೋಗ್ಯವಾಗಿ ಖುಷಿಖುಷಿಯಾಗಿ ಇರ್ಬೇಕು ಅಂತ ಆತನು ಇಷ್ಟ ಪಡ್ತಾನೆ. ಕೋಟಿಗಟ್ಟಲೆ ಜನ್ರು ಆತನ ಬಗ್ಗೆ ಕಲಿಯೋಕೆ ಅವಕಾಶನೇ ಸಿಗದೆ ತೀರಿಹೋಗಿದ್ದಾರೆ. ಅವರನ್ನೂ ಕೂಡ ಮತ್ತೆ ಜೀವಂತವಾಗಿ ನೋಡೋಕೆ ಯೆಹೋವ ಆಸೆ ಪಡ್ತಾನೆ. (ಅ. ಕಾ. 24:15) ಅವರಿಗೆಲ್ಲಾ ಶಾಶ್ವತವಾಗಿ ಜೀವಿಸೋಕೆ ಮತ್ತು ತನ್ನ ಜೊತೆ ಫ್ರೆಂಡ್‌ ಆಗೋಕೆ ಒಂದು ಅವಕಾಶ ಕೊಡ್ತಾನೆ.—ಯೋಹಾ. 3:16 w23.04 9 ¶5-6

ಬುಧವಾರ, ನವೆಂಬರ್‌ 5

ದೇವರಿಂದ ನಾವು ಬಲ ಪಡ್ಕೊತೀವಿ.—ಕೀರ್ತ. 108:13.

ಯೆಹೋವ ಕೊಡೋ ಆಶೀರ್ವಾದಗಳ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಪರದೈಸಲ್ಲಿ ನಮ್ಮ ಜೀವನ ಹೇಗಿರುತ್ತೆ ಅಂತ ಕಲ್ಪಿಸ್ಕೊಬೇಕು. ಇದ್ರ ಬಗ್ಗೆ ಬೈಬಲಲ್ಲಿ ಓದಬೇಕು ಮತ್ತು ಯೋಚ್ನೆ ಮಾಡಬೇಕು. (ಯೆಶಾ. 25:8; 32:16-18) ನೀವೀಗ ಹೊಸಲೋಕದಲ್ಲಿ ಇದ್ದೀರ ಅಂದ್ಕೊಳ್ಳಿ. ಹೊಸಲೋಕವನ್ನ ಮನಸ್ಸಲ್ಲಿ ಇಟ್ರೆ, ಈಗ ನಾವು ಅನುಭವಿಸ್ತಿರೋ ಕಷ್ಟಗಳು “ಸ್ವಲ್ಪ ಕಾಲಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು” ಅಂತ ಅನಿಸುತ್ತೆ. (2 ಕೊರಿಂ. 4:17) ಯೆಹೋವ ಕೊಡೋ ಆಶೀರ್ವಾದಗಳನ್ನ ನೆನಸ್ಕೊಂಡಾಗ ಈ ಕಷ್ಟಗಳನ್ನೆಲ್ಲ ತಾಳ್ಕೊಳ್ಳೋಕೆ ನಮಗೆ ಶಕ್ತಿ ಸಿಗುತ್ತೆ. ನಾವು ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಳ್ಳೋಕೆ ಏನು ಮಾಡಬೇಕು ಅಂತ ಆತನು ಈಗಾಗ್ಲೇ ತಿಳಿಸಿದ್ದಾನೆ. ಹಾಗಾಗಿ ಒಂದು ನೇಮಕ ಮಾಡೋಕೆ ಕಷ್ಟ ಆದ್ರೆ, ಬರೋ ಸಮಸ್ಯೆಗಳನ್ನ ಸಹಿಸ್ಕೊಳ್ಳೋಕೆ ಆಗದೇ ಇದ್ರೆ, ಖುಷಿಯನ್ನ ಕಳ್ಕೊಳ್ತಿದ್ದೀವಿ ಅಂತ ಅನಿಸ್ತಿದ್ರೆ ಪ್ರಾರ್ಥಿಸಿ, ಬೈಬಲ್‌ ಓದಿ ಮತ್ತು ಓದಿದ ವಿಷ್ಯದ ಬಗ್ಗೆ ಯೋಚಿಸಿ. ಸಹೋದರ ಸಹೋದರಿಯರು ಕೊಡೋ ಪ್ರೋತ್ಸಾಹವನ್ನ ಪಡ್ಕೊಳ್ಳಿ ಮತ್ತು ಆಶೀರ್ವಾದಗಳ ಬಗ್ಗೆ ಆಗಾಗ ಕಲ್ಪಿಸ್ಕೊಳ್ಳಿ. ನೀವು ಹೀಗೆ ಮಾಡಿದ್ರೆ “ಮಹಿಮೆಯಿಂದ ತುಂಬಿರೋ ದೇವರ ಶಕ್ತಿ ನಿಮಗೆ ಎಲ್ಲವನ್ನ ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿ” ಕೊಡುತ್ತೆ.—ಕೊಲೊ. 1:11. w23.10 17 ¶19-20

ಗುರುವಾರ, ನವೆಂಬರ್‌ 6

ಎಲ್ಲದಕ್ಕೂ ಧನ್ಯವಾದ ಹೇಳಿ.—1 ಥೆಸ. 5:18.

ಯೆಹೋವನಿಗೆ ಥ್ಯಾಂಕ್ಸ್‌ ಹೇಳೋಕೆ ಒಂದಲ್ಲ, ಎರಡಲ್ಲ ಸಾವಿರಾರು ಕಾರಣಗಳಿವೆ. ನಮ್ಮ ಹತ್ರ ಇರೋ ಒಳ್ಳೇದನ್ನೆಲ್ಲಾ ಯೆಹೋವನೇ ಕೊಟ್ಟಿರೋದು. ಆ ಗಿಫ್ಟ್‌ಗಳನ್ನ ಕೊಟ್ಟಿರೋದಕ್ಕೆ ನಾವು ಥ್ಯಾಂಕ್ಸ್‌ ಹೇಳಬೇಕು. (ಯಾಕೋ. 1:17) ಆತನು ನಮಗೆ ಏನೆಲ್ಲ ಕೊಟ್ಟಿದ್ದಾನೆ ಅಂತ ಸ್ವಲ್ಪ ಯೋಚ್ನೆ ಮಾಡಿ. ಸುಂದರವಾದ ಭೂಮಿ ಕೊಟ್ಟಿದ್ದಾನೆ. ಅದ್ರಲ್ಲಿ ನಮಗೆ ಬೇಕಾಗಿರೋದನ್ನೆಲ್ಲ ಸೃಷ್ಟಿ ಮಾಡಿದ್ದಾನೆ. ನಮಗೆ ಜೀವ ಕೊಟ್ಟಿದ್ದಾನೆ, ಒಳ್ಳೇ ಕುಟುಂಬ ಕೊಟ್ಟಿದ್ದಾನೆ, ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರನ್ನ ಕೊಟ್ಟಿದ್ದಾನೆ. ಮುಂದೆ ಹೊಸ ಲೋಕ ತರ್ತೀನಿ ಅಂತಾನೂ ಹೇಳಿದ್ದಾನೆ. ಆತನ ಜೊತೆ ಫ್ರೆಂಡ್‌ ಆಗೋ ಅವಕಾಶನೂ ಕೊಟ್ಟಿದ್ದಾನೆ. ಇದಕ್ಕೆಲ್ಲ ನಾವು ಆತನಿಗೆ ಥ್ಯಾಂಕ್ಸ್‌ ಹೇಳಲೇಬೇಕಲ್ವಾ? ಸ್ವಲ್ಪ ಸಮಯ ಮಾಡ್ಕೊಂಡು ನಮಗೋಸ್ಕರ ಯೆಹೋವ ಏನೆಲ್ಲಾ ಮಾಡಿದ್ದಾನೆ ಅಂತ ಆಗಾಗ ಯೋಚ್ನೆ ಮಾಡಬೇಕು. ಅದು ತುಂಬ ಮುಖ್ಯ. ಯಾಕಂದ್ರೆ ನಮ್ಮ ಸುತ್ತಮುತ್ತ ಇರೋ ಜನ್ರು ತಮ್ಮ ಹತ್ರ ಏನಿದ್ಯೋ ಅದ್ರಲ್ಲಿ ಸಂತೋಷ ಪಡಲ್ಲ. ಅದು ಬೇಕು ಇದು ಬೇಕು ಅಂತಾನೇ ಯೋಚ್ನೆ ಮಾಡ್ತಾ ಇರ್ತಾರೆ. ನಾವು ಹುಷಾರಾಗಿ ಇಲ್ಲಾಂದ್ರೆ ನಾವೂ ಅವ್ರ ತರ ಆಗಿಬಿಡ್ತೀವಿ. ಆಮೇಲೆ ಯೆಹೋವನ ಹತ್ರ ‘ನನಗೆ ಅದು ಕೊಡು, ಇದು ಕೊಡು’ ಅಂತ ಬರೀ ಕೇಳ್ತಾನೇ ಇರ್ತೀವಿ. ಹಾಗಾಗಿ ಯೆಹೋವ ನಮಗಾಗಿ ಏನೆಲ್ಲ ಮಾಡಿದ್ದಾನೋ ಅದಕ್ಕೆ ಯಾವಾಗ್ಲೂ ಥ್ಯಾಂಕ್ಸ್‌ ಹೇಳೋ ಮನಸ್ಸನ್ನ ಬೆಳೆಸ್ಕೊಬೇಕು.—ಲೂಕ 6:45. w23.05 4 ¶8-9

ಶುಕ್ರವಾರ, ನವೆಂಬರ್‌ 7

ಕೇಳುವಾಗ ಒಂಚೂರೂ ಸಂಶಯಪಡದೆ ನಂಬಿಕೆಯಿಂದ ಕೇಳಬೇಕು.—ಯಾಕೋ. 1:6.

ಯೆಹೋವ ನಮ್ಮನ್ನ ತುಂಬ ಪ್ರೀತಿಸೋ ಅಪ್ಪ. ಹಾಗಾಗಿ ನಾವು ಕಷ್ಟ ಪಡೋದನ್ನ, ನೋವು ಅನುಭವಿಸೋದನ್ನ ಆತನಿಗೆ ನೋಡೋಕೆ ಆಗಲ್ಲ. (ಯೆಶಾ. 63:9) ಹಾಗಂತ ನದಿ ತರ, ಬೆಂಕಿ ತರ ಇರೋ ಕಷ್ಟಗಳನ್ನ ಆತನು ತೆಗೆದು ಹಾಕಲ್ಲ. (ಯೆಶಾ. 43:2.) ಆದ್ರೆ ಅದನ್ನ ‘ದಾಟಿ ಹೋಗೋಕೆ’ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಎಷ್ಟೇ ಕಷ್ಟಗಳಿದ್ರೂ ಆತನ ಜೊತೆ ಇರೋ ಫ್ರೆಂಡ್‌ಶಿಪ್‌ ಇನ್ನೂ ಗಟ್ಟಿಯಾಗೋಕೆ ಸಹಾಯ ಮಾಡ್ತಾನೆ ಮತ್ತು ಅದನ್ನ ಸಹಿಸ್ಕೊಳ್ಳೋಕೆ ತನ್ನ ಪವಿತ್ರಶಕ್ತಿನೂ ಕೊಡ್ತಾನೆ. (ಲೂಕ 11:13; ಫಿಲಿ. 4:13) ಹಾಗಾಗಿ ನಮಗೆ ಏನೇ ಕಷ್ಟಗಳು ಬಂದ್ರೂ ಅದನ್ನ ತಾಳ್ಕೊಳ್ಳೋಕೆ ಅಥವಾ ಸಹಿಸ್ಕೊಳ್ಳೋಕೆ ಮತ್ತು ಕೊನೇ ತನಕ ಆತನಿಗೆ ನಿಯತ್ತಾಗಿ ಇರೋಕೆ ಆತನು ಸಹಾಯ ಮಾಡೇ ಮಾಡ್ತಾನೆ ಅಂತ ನಾವು ನಂಬಬಹುದು. ನಾವು ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂತ ಆತನು ಇಷ್ಟ ಪಡ್ತಾನೆ. (ಇಬ್ರಿ. 11:6) ಕೆಲವೊಮ್ಮೆ ನಮಗೆ ಕಷ್ಟಗಳು ಬಂದಾಗ ಆಕಾಶನೇ ತಲೆ ಮೇಲೆ ಬಿದ್ದಂಗೆ ಅನಿಸಿ ಬಿಡುತ್ತೆ. ಆಗ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನಿಸುತ್ತೆ. ಆದ್ರೆ ನಾವು ದೇವರ ಬಲದಿಂದ ‘ಗೋಡೆಯನ್ನೂ ಜಿಗಿಯೋಕೆ’ ಆಗುತ್ತೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 18:29) ಹಾಗಾಗಿ ಯೆಹೋವ ನಮಗೆ ಸಹಾಯ ಮಾಡ್ತಾನಾ ಇಲ್ವಾ ಅಂತ ಅನುಮಾನ ಪಡೋ ಬದ್ಲು, ಯೆಹೋವ ನನ್ನ ಪ್ರಾರ್ಥನೆ ಕೇಳಿಸ್ಕೊಳ್ತಾನೆ, ನನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆಯಿಂದ ಪ್ರಾರ್ಥಿಸಿ.—ಯಾಕೋ. 1:6, 7. w23.11 22 ¶8-9

ಶನಿವಾರ, ನವೆಂಬರ್‌ 8

[ನಿಜವಾದ ಪ್ರೀತಿ] ಧಗಧಗಿಸೋ ಜ್ವಾಲೆ, ಅದು ಯಾಹುವಿನ ಜ್ವಾಲೆ. ಮುನ್ನುಗ್ಗಿ ಬರೋ ಪ್ರವಾಹ ಕೂಡ ಪ್ರೀತಿಯನ್ನ ನಂದಿಸಲಾರದು, ಹರಿದು ಬರೋ ನದಿಗಳು ಕೂಡ ಅದನ್ನ ಕೊಚ್ಚಿಕೊಂಡು ಹೋಗಲಾರವು.—ಪರಮ. 8:6, 7.

ಗಂಡ-ಹೆಂಡತಿ ತಮ್ಮ ಮಧ್ಯ ಇರೋ ಪ್ರೀತಿಯನ್ನ ಬಾಡಿಹೋಗದೆ ಇರೋ ತರ ನೋಡ್ಕೊಳ್ಳೋಕೆ ಆಗುತ್ತಾ? ಆಗುತ್ತೆ. ಗಂಡ-ಹೆಂಡತಿ ತಮ್ಮ ಉಸಿರು ಇರೋ ತನಕ ಒಬ್ರನ್ನೊಬ್ರು ಪ್ರೀತಿಸೋದು ಅವ್ರ ಕೈಯಲ್ಲೇ ಇದೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಬೆಂಕಿ ಯಾವಾಗ್ಲೂ ಉರೀತಾ ಇರಬೇಕಂದ್ರೆ ಅದಕ್ಕೆ ಕಟ್ಟಿಗೆ ಬೇಕು. ಇಲ್ಲಾಂದ್ರೆ ಬೆಂಕಿ ಆರಿಹೋಗಿ ಬಿಡುತ್ತೆ. ಅದೇ ತರ ಗಂಡ-ಹೆಂಡತಿ ಮಧ್ಯ ಇರೋ ಪ್ರೀತಿ ಶಾಶ್ವತವಾಗಿ ಇರಬೇಕಂದ್ರೆ ತಮ್ಮ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಇಬ್ರೂ ಪ್ರಯತ್ನ ಹಾಕ್ತಾ ಇರಬೇಕು. ಇಲ್ಲಾಂದ್ರೆ ಸಮಯ ಹೋಗ್ತಾ ಹೋಗ್ತಾ ಆ ಪ್ರೀತಿ ಕಮ್ಮಿ ಆಗಿಬಿಡಬಹುದು. ಅದ್ರಲ್ಲೂ ಹಣಕಾಸಿನ ತೊಂದ್ರೆ ಬಂದಾಗ, ಹುಷಾರಿಲ್ಲದೆ ಆದಾಗ ಅಥವಾ ಮಕ್ಕಳನ್ನ ಬೆಳೆಸೋಕೆ ಕಷ್ಟ ಆದಾಗ ಆ ಪ್ರೀತಿ ಆರಿಹೋಗಿ ಬಿಡಬಹುದು. “ಯಾಹುವಿನ ಜ್ವಾಲೆ” ಯಾವಾಗ್ಲೂ ಉರೀತಾ ಇರೋಕೆ ಗಂಡ-ಹೆಂಡತಿ ಇಬ್ರೂ ಯೆಹೋವನ ಜೊತೆ ನಿಮಗಿರೋ ಸ್ನೇಹನ ಜಾಸ್ತಿ ಮಾಡ್ಕೊಳ್ತಾ ಇರಿ. w23.05 20-21 ¶1-3

ಭಾನುವಾರ, ನವೆಂಬರ್‌ 9

ಧೈರ್ಯವಾಗಿರು.—ದಾನಿ. 10:19.

ನಮ್ಮ ಅಪ್ಪಅಮ್ಮ ಧೈರ್ಯವಾಗಿ ಇದ್ದಾರೆ ಅಂದ ತಕ್ಷಣ ನಮಗೂ ಆ ಧೈರ್ಯ ತನ್ನಿಂದ ತಾನೇ ಬಂದುಬಿಡಲ್ಲ. ಅದನ್ನ ನಾವು ಬೆಳೆಸ್ಕೊಬೇಕು. ಹೇಗೆ? ಧೈರ್ಯ ಅನ್ನೋದು ಒಂದು ಕೌಶಲ ಇದ್ದ ಹಾಗೆ. ಒಬ್ಬ ವ್ಯಕ್ತಿ ಒಂದು ಕೌಶಲವನ್ನ ಕಲಿಬೇಕಂದ್ರೆ ಟೀಚರ್‌ ಹೇಳ್ಕೊಡೋ ವಿಷ್ಯವನ್ನ ಸೂಕ್ಷ್ಮವಾಗಿ ಗಮನಿಸ್ತಾನೆ. ಟೀಚರ್‌ ತರಾನೇ ಮಾಡೋಕೆ ಪ್ರಯತ್ನ ಮಾಡ್ತಾನೆ. ಆಗ ಆ ಕೌಶಲವನ್ನ ಬೆಳೆಸ್ಕೊಳ್ಳೋಕೆ ಆಗುತ್ತೆ. ಅದೇ ತರ ನಾವು ಕೂಡ ದೇವಜನ್ರು ಹೇಗೆಲ್ಲ ಧೈರ್ಯ ತೋರಿಸಿದ್ದಾರೆ ಅಂತ ತಿಳ್ಕೊಬೇಕು. ಅವ್ರ ತರಾನೇ ನಾವೂ ಧೈರ್ಯ ತೋರಿಸಬೇಕು. ದಾನಿಯೇಲನ ತರ ದೇವರ ವಾಕ್ಯವನ್ನ ಓದಿ ಚೆನ್ನಾಗಿ ಅರ್ಥ ಮಾಡ್ಕೊಬೇಕು. ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ದೇವರಿಗೆ ಹೇಳ್ಕೊಳ್ತಾ ಆತನಿಗೆ ಹತ್ರ ಆಗಬೇಕು. ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ಪೂರ್ತಿಯಾಗಿ ನಂಬಬೇಕು. ಹೀಗೆ ಮಾಡಿದಾಗ ಎಂಥ ಪರಿಸ್ಥಿತಿ ಬಂದ್ರೂ ನಾವು ಧೈರ್ಯ ಕಳ್ಕೊಳ್ಳಲ್ಲ. ನಾವು ಧೈರ್ಯ ತೋರಿಸಿದ್ರೆ ಬೇರೆಯವರು ನಮಗೆ ಗೌರವ ಕೊಡ್ತಾರೆ. ಅಷ್ಟೇ ಅಲ್ಲ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಬಗ್ಗೆ ಕಲಿಯೋಕೆ ಆಸೆ ಪಡ್ತಾರೆ. w23.08 2 ¶2; 4 ¶8-9

ಸೋಮವಾರ, ನವೆಂಬರ್‌ 10

ಎಲ್ಲವನ್ನ ಪರೀಕ್ಷಿಸಿ.—1 ಥೆಸ. 5:21.

ಇಲ್ಲಿ “ಪರೀಕ್ಷಿಸಿ” ಅನ್ನೋದಕ್ಕೆ ಬಳಸಿರೋ ಗ್ರೀಕ್‌ ಪದ ಬೆಳ್ಳಿ ಬಂಗಾರವನ್ನ ಪರೀಕ್ಷಿಸೋದಕ್ಕೆ ಸೂಚಿಸುತ್ತೆ. ಹಾಗಾಗಿ ನಾವು ಒಂದು ಸುದ್ದಿ ಕೇಳಿದ ತಕ್ಷಣ ಅಥವಾ ಓದಿದ ತಕ್ಷಣ ಅದು ನಿಜಾನಾ ಅಂತ ಮೊದ್ಲು ಪರೀಕ್ಷಿಸಬೇಕು. ಮುಂದೆ ಇದನ್ನ ನಾವು ಜಾಸ್ತಿ ಮಾಡಬೇಕು. ಯಾಕಂದ್ರೆ ಮಹಾ ಸಂಕಟ ತುಂಬ ಹತ್ರ ಇದೆ. ಹಾಗಾಗಿ ಯಾರಾದ್ರೂ ಏನಾದ್ರೂ ಹೇಳಿದ್ರೆ ಅದನ್ನ ಕಣ್ಮುಚ್ಚಿ ನಂಬಿಬಿಡಬಾರದು. ಬದಲಿಗೆ ಬೈಬಲ್‌ ಅದ್ರ ಬಗ್ಗೆ ಏನು ಹೇಳುತ್ತೆ, ಸಂಘಟನೆ ಏನು ಹೇಳುತ್ತೆ ಅಂತ ಪರೀಕ್ಷಿಸಿ ನೋಡಬೇಕು. ಹೀಗೆ ಮಾಡಿದ್ರೆ ಕೆಟ್ಟ ದೇವದೂತರು ಏನೇ ಸುಳ್ಳು ಸುದ್ದಿ ಹಬ್ಬಿಸಿದ್ರೂ ನಾವು ಮೋಸಹೋಗಲ್ಲ. (ಜ್ಞಾನೋ. 14:15; 1 ತಿಮೊ. 4:1) ಯೆಹೋವನ ಜನ್ರು ಒಂದು ಗುಂಪಾಗಿ ಮಹಾ ಸಂಕಟವನ್ನ ಪಾರಾಗ್ತಾರೆ. ಆಗ ನಾವು ಬದುಕಿರಬಹುದು ಅಥವಾ ಸತ್ತುಹೋಗಿರಬಹುದು. ಯಾಕಂದ್ರೆ ನಾಳೆ ಏನಾಗುತ್ತೋ ನಮಗೆ ಗೊತ್ತಿಲ್ಲ. (ಯಾಕೋ. 4:14) ಆದ್ರೆ ಕೊನೇ ತನಕ ಯೆಹೋವನಿಗೆ ನಿಯತ್ತಾಗಿದ್ರೆ ನಾವೆಲ್ರೂ ಶಾಶ್ವತವಾಗಿ ಜೀವಿಸ್ತೀವಿ. ಈ ಅದ್ಭುತ ನಿರೀಕ್ಷೆಯನ್ನ ಯಾವಾಗ್ಲೂ ಮನಸ್ಸಲ್ಲಿ ಇಡೋಣ. ಯೆಹೋವನ ದಿನಕ್ಕಾಗಿ ಸದಾ ಸಿದ್ಧರಾಗಿ ಇರೋಣ! w23.06 13 ¶15-16

ಮಂಗಳವಾರ, ನವೆಂಬರ್‌ 11

ಆತನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯ ತಿಳಿಸದೆ ಏನೂ ಮಾಡಲ್ಲ. —ಆಮೋ. 3:7.

ನಮಗೆ ಕೆಲವು ಭವಿಷ್ಯವಾಣಿಗಳು ಹೇಗೆ ನಿಜ ಆಗುತ್ತೆ ಅಂತ ಗೊತ್ತಿಲ್ಲ. (ದಾನಿ. 12:8, 9) ಹಾಗಂತ ಆ ಭವಿಷ್ಯವಾಣಿಗಳು ನಿಜ ಆಗಲ್ಲ ಅಂತ ನಾವು ಅಂದ್ಕೊಬಾರದು. ಈ ಮುಂಚೆ ಯೆಹೋವ ದೇವರು ತನ್ನ ಜನ್ರಿಗೆ ಭವಿಷ್ಯವಾಣಿಗಳ ಅರ್ಥವನ್ನ ಸರಿಯಾದ ಸಮಯಕ್ಕೆ ತಿಳಿಸಿದ್ದಾನೆ. ನಮಗೂ ಸರಿಯಾದ ಸಮಯಕ್ಕೆ ತಿಳಿಸ್ತಾನೆ ಅಂತ ನಾವು ನಂಬಬೇಕು. ಆದಷ್ಟು ಬೇಗ “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆ ನಮಗೆ ಕೇಳಿಸುತ್ತೆ. (1 ಥೆಸ. 5:3) ಆಗ ಈ ಲೋಕದ ರಾಜಕೀಯ ಶಕ್ತಿಗಳು ಸುಳ್ಳು ಧರ್ಮಗಳ ಮೇಲೆ ದಾಳಿ ಮಾಡಿ ಅದನ್ನೆಲ್ಲ ತೆಗೆದುಹಾಕಿಬಿಡುತ್ತೆ. (ಪ್ರಕ. 17:16, 17) ಆಮೇಲೆ ದೇವಜನ್ರ ಮೇಲೆ ದಾಳಿ ಮಾಡುತ್ತೆ. (ಯೆಹೆ. 38:18, 19) ಇದೆಲ್ಲ ಆದ್ಮೇಲೆ ಕೊನೇ ಕದನವಾದ ಅರ್ಮಗೆದೋನ್‌ ಶುರು ಆಗುತ್ತೆ. (ಪ್ರಕ. 16:14, 16) ಅಲ್ಲಿ ತನಕ ಈ ಭವಿಷ್ಯವಾಣಿಗಳಿಗೆ ನಾವು ಗಮನ ಕೊಡ್ತಾ ಇರೋಣ. ಅದನ್ನ ಅರ್ಥ ಮಾಡ್ಕೊಳ್ಳೋಕೆ ಬೇರೆಯವ್ರಿಗೂ ಸಹಾಯ ಮಾಡೋಣ. ಹೀಗೆ ಯೆಹೋವನಿಗೆ ಋಣಿಗಳಾಗಿ ಇರೋಣ. w23.08 13 ¶19-20

ಬುಧವಾರ, ನವೆಂಬರ್‌ 12

ನಾವು ಒಬ್ರನ್ನೊಬ್ರು ಪ್ರೀತಿಸ್ತಾ ಇರೋಣ. ಯಾಕಂದ್ರೆ ಪ್ರೀತಿ ದೇವರಿಂದ ಬಂದಿದೆ.—1 ಯೋಹಾ. 4:7.

ಅಪೊಸ್ತಲ ಪೌಲ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಬಗ್ಗೆ ಮಾತಾಡುವಾಗ “ಪ್ರೀತಿನೇ ದೊಡ್ಡದು” ಅಂತ ಹೇಳಿದ. (1 ಕೊರಿಂ. 13:13) ಯಾಕೆ? ಹೊಸ ಲೋಕ ಬಂದಾಗ ಯೆಹೋವ ಕೊಟ್ಟ ಮಾತುಗಳೆಲ್ಲ ನಿಜ ಆಗಿರುತ್ತೆ. ನಾವು ಇಟ್ಕೊಂಡಿರೋ ನಿರೀಕ್ಷೆನೂ ನಡೆದು ಹೋಗಿರುತ್ತೆ. ಹಾಗಾಗಿ ಆಗ ನಮಗೆ ಅದ್ರ ಬಗ್ಗೆ ನಂಬಿಕೆ ಮತ್ತು ನಿರೀಕ್ಷೆ ಇಟ್ಕೊಬೇಕಾಗಿಲ್ಲ. ಆದ್ರೆ ಪ್ರೀತಿ ಬೇಕೇಬೇಕು. ಯೆಹೋವನ ಮೇಲೆ ಮತ್ತು ಜನ್ರ ಮೇಲೆ ನಮಗಿರೋ ಪ್ರೀತಿ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಾ ಇರ್ಬೇಕು. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ನಾವು ನಿಜವಾದ ಕ್ರೈಸ್ತರು ಅಂತ ತೋರಿಸ್ತೀವಿ. ಯಾಕಂದ್ರೆ ಯೇಸು “ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ” ಅಂತ ಹೇಳಿದ್ದಾನೆ. (ಯೋಹಾ. 13:35) ಅಷ್ಟೇ ಅಲ್ಲ, ನಾವು ಪ್ರೀತಿ ತೋರಿಸೋದ್ರಿಂದ ಎಲ್ರೂ ಒಗ್ಗಟ್ಟಾಗಿ ಇರ್ತೀವಿ. ಅದಕ್ಕೇ ಪೌಲ “ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ” ಅಂತ ಹೇಳಿದ. (ಕೊಲೊ. 3:14) “ದೇವರನ್ನ ಪ್ರೀತಿ ಮಾಡೋ ವ್ಯಕ್ತಿ ತನ್ನ ಸಹೋದರನನ್ನೂ ಪ್ರೀತಿಸಬೇಕು” ಅಂತ ಅಪೊಸ್ತಲ ಯೋಹಾನ ಹೇಳಿದ. (1 ಯೋಹಾ. 4:21) ಅಂದ್ರೆ ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿದ್ರೆ ಯೆಹೋವನನ್ನೂ ಪ್ರೀತಿಸ್ತಿದ್ದೀವಿ ಅಂತ ತೋರಿಸಿ ಕೊಡ್ತೀವಿ. w23.11 8 ¶1, 3

ಗುರುವಾರ, ನವೆಂಬರ್‌ 13

ಭಾರವಾದ ಎಲ್ಲವನ್ನ . . . ತೆಗೆದುಹಾಕೋಣ. —ಇಬ್ರಿ. 12:1.

ಕ್ರೈಸ್ತರಾಗಿ ನಾವು ಮಾಡ್ತಿರೋ ಜೀವನವನ್ನ ಬೈಬಲ್‌ ಒಂದು ಓಟಕ್ಕೆ ಹೋಲಿಸುತ್ತೆ. ಈ ಓಟದಲ್ಲಿ ಗುರಿ ಮುಟ್ಟಿದ್ರೆ ನಮಗೆ ಶಾಶ್ವತ ಜೀವ ಸಿಗುತ್ತೆ. (2 ತಿಮೊ. 4:7, 8) ಆ ಗುರಿ ತುಂಬ ಹತ್ರ ಇರೋದ್ರಿಂದ ನಿಲ್ಲಿಸದೆ ಓಡಬೇಕು. ನಾವು ಗೆಲ್ಲಬೇಕಂದ್ರೆ ಏನು ಮಾಡಬೇಕು ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. ಅದೇನಂದ್ರೆ ‘ನಾವು ಭಾರವಾದ ಎಲ್ಲವನ್ನ ತೆಗೆದುಹಾಕಬೇಕು ಮತ್ತು ಓಡಬೇಕಾದ ಓಟವನ್ನ ತಾಳ್ಮೆಯಿಂದ ಓಡಬೇಕು.’ ಈ ಮಾತಿನ ಅರ್ಥ ನಾವು ಯಾವ ಹೊರೆಯನ್ನೂ ಹೊತ್ಕೊಬಾರದು ಅಂತಾನಾ? ಇಲ್ಲ, ಅದ್ರ ಅರ್ಥ ಹಾಗಲ್ಲ. ಪೌಲ ಇಲ್ಲಿ ಏನು ಹೇಳ್ತಿದ್ದಾನೆ ಅಂದ್ರೆ ಬೇಡದಿರೋ ಭಾರನ ಬಿಸಾಕಿ ಓಡೋಕೆ ಹೇಳ್ತಿದ್ದಾನೆ. ಇಲ್ಲಾಂದ್ರೆ ನಾವು ಸ್ವಲ್ಪ ದೂರ ಓಡಿ ಸುಸ್ತಾಗಿಬಿಡ್ತೀವಿ. ಹಾಗಾಗಿ ಬೇಡದಿರೋ ಭಾರ ಯಾವುದು ಅಂತ ಗುರುತಿಸಿ ಅದನ್ನೆಲ್ಲ ಬಿಸಾಕಬೇಕು. ಆಗ ನಮಗೆ ತಾಳ್ಮೆಯಿಂದ ಓಡಕ್ಕಾಗುತ್ತೆ. ಹಾಗಂತ ನಾವು ಹೊತ್ಕೊಳ್ಳಬೇಕಾದ ಹೊರೆಯನ್ನೂ ಬಿಸಾಕಬೇಕು ಅಂತಲ್ಲ. ಅದನ್ನ ಬಿಸಾಕಿದ್ರೆ ನಾವು ಓಡೋ ಅರ್ಹತೆನೇ ಕಳ್ಕೊಂಡುಬಿಡ್ತೀವಿ.—2 ತಿಮೊ. 2:5. w23.08 26 ¶1-2

ಶುಕ್ರವಾರ, ನವೆಂಬರ್‌ 14

ನೀವು, ಮೇಲೆ ಕಾಣಿಸೋ ಅಲಂಕಾರಕ್ಕೆ . . . ಗಮನ ಕೊಡಬಾರದು.—1 ಪೇತ್ರ 3:3.

‘ನಾನು ಹೇಳಿದ್ದೇ ನಡಿಬೇಕು’ ಅನ್ನೋ ಸ್ವಭಾವ ನಮ್ಮಲ್ಲಿ ಇಲ್ಲಾಂದ್ರೆ ಬೇರೆಯವ್ರಿಗೆ ಏನಿಷ್ಟನೋ ಅದನ್ನ ಮಾಡೋಕೆ ಬಿಟ್ಕೊಡ್ತೀವಿ. ಉದಾಹರಣೆಗೆ, ಕೆಲವು ಸಹೋದರಿಯರಿಗೆ ಮೇಕಪ್‌ ಹಾಕೋಕೆ ಇಷ್ಟ ಆಗುತ್ತೆ. ಆದ್ರೆ ಇನ್ನು ಕೆಲವ್ರಿಗೆ ಇಷ್ಟ ಆಗಲ್ಲ. ಕೆಲವು ಕ್ರೈಸ್ತರಿಗೆ ಸ್ವಲ್ಪ ಕುಡಿಯೋದ್ರಲ್ಲಿ ತಪ್ಪೇನಿಲ್ಲ ಅಂತ ಅನಿಸುತ್ತೆ. ಇನ್ನು ಕೆಲವ್ರಿಗೆ ಕುಡಿಯೋದು ತಪ್ಪು ಅಂತ ಅನಿಸುತ್ತೆ. ಅಷ್ಟೇ ಅಲ್ಲ, ಒಬ್ಬೊಬ್ರು ಒಂದೊಂದು ತರ ಚಿಕಿತ್ಸೆ ಪಡ್ಕೊಳ್ಳೋಕೆ ಇಷ್ಟಪಡ್ತಾರೆ. ಇಂಥ ಸಂದರ್ಭದಲ್ಲಿ ಬೇರೆಯವರು ನಮಗಿಷ್ಟ ಆಗಿದ್ದನ್ನೇ ಮಾಡಬೇಕು ಅಂತ ಒತ್ತಾಯ ಮಾಡಬಾರದು. ಹಾಗೆ ಮಾಡಿದ್ರೆ ಅವ್ರನ್ನ ಎಡವಿಸ್ತೀವಿ. ಸಭೇಲಿರೋ ಒಗ್ಗಟ್ಟೂ ಹಾಳಾಗುತ್ತೆ. (1 ಕೊರಿಂ. 8:9; 10:23, 24) ನಾವು ಯಾವ ಬಟ್ಟೆ ಹಾಕಬೇಕು, ಹಾಕಬಾರದು ಅಂತ ಯೆಹೋವ ಬೈಬಲಲ್ಲಿ ಹೇಳಿಲ್ಲ. ಆದ್ರೆ ಅದಕ್ಕೆ ತತ್ವಗಳನ್ನ ಕೊಟ್ಟಿದ್ದಾನೆ. ನಾವು ಹಾಕೋ ಬಟ್ಟೆ ಆತನಿಗೆ ಗೌರವ ತರೋ ಹಾಗೆ ಇರಬೇಕು. ನಾವು ಶೋಕಿ ಮಾಡ್ತಿದ್ದೀವಿ ಅಂತ ಬೇರೆಯವ್ರಿಗೆ ಅನಿಸಬಾರದು. ನಮಗೆ “ಬುದ್ಧಿ ಇದೆ,” ಬೇರೆಯವ್ರಿಗೋಸ್ಕರ ನಾವು ಮಣೀತೀವಿ ಅಂತ ನಾವು ತೋರಿಸಬೇಕು. (1 ತಿಮೊ. 2:9, 10) ಹಾಗಾಗಿ ಎಲ್ಲರ ಗಮನ ನಮ್ಮ ಮೇಲೆ ಬರೋ ತರ ನಾವು ಬಟ್ಟೆ ಹಾಕಲ್ಲ. ಬೇರೆಯವರು ಯಾವ ತರ ಬಟ್ಟೆ ಹಾಕಬೇಕು, ಹೇರ್‌ಸ್ಟೈಲ್‌ ಮಾಡಬೇಕು ಅನ್ನೋ ವಿಷ್ಯದಲ್ಲಿ ಹಿರಿಯರು ರೂಲ್ಸ್‌ ಮಾಡದೇ ಇರೋಕೂ ಈ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ. w23.07 23-24 ¶13-14

ಶನಿವಾರ, ನವೆಂಬರ್‌ 15

ನಾನು ಹೇಳೋದನ್ನ ಶ್ರದ್ಧೆಯಿಂದ ಕೇಳಿಸ್ಕೊಳ್ಳಿ, ಒಳ್ಳೇ ಆಹಾರ ತಿನ್ನಿ, ಆಗ ನೀವು ನಿಜವಾದ ಪೌಷ್ಠಿಕ ಆಹಾರ ತಿಂದು ಅತ್ಯಾನಂದ ಪಡ್ತೀರ.—ಯೆಶಾ. 55:2.

ಯೆಹೋವ ದೇವರಿಗೆ ನಮ್ಮ ಭವಿಷ್ಯ ಚೆನ್ನಾಗಿರಬೇಕು ಅಂತ ಇಷ್ಟ. “ಬುದ್ಧಿ ಇಲ್ಲದ ಸ್ತ್ರೀ” ಜೋರಾಗಿ ಕರೆದಾಗ ಅವಳ ಮನೆಗೆ ಹೋಗೋರು ಕದ್ದುಮುಚ್ಚಿ ಮಾಡೋ ಕೆಟ್ಟ ಕೆಲಸಗಳಿಂದ ಖುಷಿ ಸಿಗುತ್ತೆ ಅಂತ ಅಂದ್ಕೊಂಡಿದ್ದಾರೆ. ಅದನ್ನ “ಸಿಹಿ” ಅಂತ ಅಂದ್ಕೊಂಡಿದ್ದಾರೆ. ಆದ್ರೆ ನಿಜ ಹೇಳಬೇಕಂದ್ರೆ ಅವರು ಬರೀ ಆ ಕ್ಷಣದ ಬಗ್ಗೆ ಮಾತ್ರ ಯೋಚ್ನೆ ಮಾಡ್ತಿದ್ದಾರೆ. ಮುಂದೆ ಏನಾಗುತ್ತೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡ್ತಿಲ್ಲ. ಇದ್ರಿಂದ ಅವರು ಗ್ಯಾರಂಟಿ ‘ಸ್ಮಶಾನ ಸೇರ್ತಾರೆ.’ (ಜ್ಞಾನೋ. 9:13, 17, 18) “ನಿಜ ವಿವೇಕ” ಅನ್ನೋ ಸ್ತ್ರೀಯ ಮನೆಗೆ ಹೋದ್ರೆ ನಮ್ಮ ಭವಿಷ್ಯ ತುಂಬ ಚೆನ್ನಾಗಿರುತ್ತೆ. (ಜ್ಞಾನೋ. 9:1, 2) ಹಾಗಾಗಿ ನಾವು, ಯೆಹೋವ ಏನನ್ನ ಇಷ್ಟಪಡ್ತಾನೋ ಅದನ್ನ ಪ್ರೀತಿಸೋಕೆ ಮತ್ತು ಏನನ್ನ ಇಷ್ಟಪಡಲ್ವೋ ಅದನ್ನ ದ್ವೇಷಿಸೋಕೆ ಕಲೀತಾ ಇದ್ದೀವಿ. (ಕೀರ್ತ. 97:10) ಅಷ್ಟೇ ಅಲ್ಲ, “ನಿಜ ವಿವೇಕ” ಹೇಳೋ ಮಾತನ್ನ ಕೇಳಿ ಅಂತ ಬೇರೆಯವ್ರನ್ನೂ ಪ್ರೋತ್ಸಾಹಿಸ್ತಾ ಇದ್ದೀವಿ. ಇದು ಹೇಗಿದೆ ಅಂದ್ರೆ “ಅನುಭವ ಇಲ್ಲದವರು ಇಲ್ಲಿಗೆ ಬರಲಿ” ಅಂತ ‘ಪಟ್ಟಣದಲ್ಲಿ ಎತ್ತರವಾದ ಜಾಗದಲ್ಲಿ’ ನಿಂತ್ಕೊಂಡು ಜನ್ರನ್ನ ಕರೆದ ಹಾಗಿದೆ. ಇದನ್ನ ಕೇಳಿಸ್ಕೊಂಡು ಬಂದವ್ರಿಗೂ ನಮಗೂ ತುಂಬ ಪ್ರಯೋಜನ ಇದೆ. ಅಷ್ಟೇ ಅಲ್ಲ, ನಾವು “ವಿವೇಚನೆಯ ದಾರಿಯಲ್ಲಿ ಮುಂದಕ್ಕೆ” ಹೋಗ್ತಾ ಇದ್ರೆ ಶಾಶ್ವತ ‘ಜೀವನೂ’ ಸಿಗುತ್ತೆ—ಜ್ಞಾನೋ. 9:3, 4, 6. w23.06 24 ¶17-18

ಭಾನುವಾರ, ನವೆಂಬರ್‌ 16

ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು ಶೂರ ಸೈನಿಕನಿಗಿಂತ ಶಕ್ತಿಶಾಲಿ, ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.—ಜ್ಞಾನೋ. 16:32.

ನೀವು ನಂಬೋ ವಿಷ್ಯಗಳ ಬಗ್ಗೆ ಸ್ಕೂಲಲ್ಲಿ ಅಥವಾ ಕೆಲಸದ ಜಾಗದಲ್ಲಿ ಯಾರಾದ್ರೂ ಪ್ರಶ್ನೆ ಕೇಳಿದಾಗ ನಿಮಗೆ ಭಯ ಆಗುತ್ತಾ? ನಮ್ಮಲ್ಲಿ ಹೆಚ್ಚಿನವ್ರಿಗೆ ಭಯ ಆಗೋದಂತೂ ನಿಜಾನೇ. ಆದ್ರೆ ಆ ತರ ಪ್ರಶ್ನೆ ಕೇಳಿದಾಗ ಅವ್ರ ಮನಸ್ಸಲ್ಲಿ ಏನಿದೆ, ಅವರು ಯಾವ ವಿಷ್ಯನ ನಂಬ್ತಾರೆ ಅಂತ ನಮಗೆ ಗೊತ್ತಾಗುತ್ತೆ. ಆಗ ಸಿಹಿಸುದ್ದಿ ಸಾರೋಕೆ ನಮಗೆ ಅವಕಾಶನೂ ಸಿಗುತ್ತೆ. ಆದ್ರೆ ಕೆಲವರು ನಮ್ಮ ಹತ್ರ ವಾದ ಮಾಡೋಕೆ ಅಂತಾನೇ ಪ್ರಶ್ನೆ ಕೇಳ್ತಾರೆ. ಅದಕ್ಕೆ ಕಾರಣ ಏನಂದ್ರೆ ನಾವು ನಂಬೋ ವಿಷ್ಯಗಳ ಬಗ್ಗೆ ಅವ್ರಿಗೆ ಯಾರಾದ್ರೂ ತಪ್ಪಾಗಿ ಹೇಳ್ಕೊಟ್ಟಿರ್ತಾರೆ. (ಅ. ಕಾ. 28:22) ಅದೂ ಅಲ್ಲದೆ “ಕೊನೇ ದಿನಗಳಲ್ಲಿ” “ಯಾವುದಕ್ಕೂ ಒಪ್ಪದವರು” ಇರ್ತಾರೆ ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ “ಉಗ್ರರು” ಅಂದ್ರೆ ಕೋಪಿಷ್ಟರು ಇರ್ತಾರೆ ಅಂತಾನೂ ಹೇಳುತ್ತೆ. (2 ತಿಮೊ. 3:1, 3) ನಾವು ನಂಬೋ ವಿಷ್ಯಗಳ ಬಗ್ಗೆ ಯಾರಾದ್ರೂ ವಾದ ಮಾಡೋಕೆ ಬಂದಾಗ ನಾವು ನಯ-ವಿನಯದಿಂದ ನಡ್ಕೊಳ್ಳೋದು ಹೇಗೆ? ಈ ರೀತಿ ಉತ್ರ ಕೊಡಬೇಕಂದ್ರೆ ನಮ್ಮಲ್ಲಿ ಮೃದು ಸ್ವಭಾವ ಇರಬೇಕು. ಈ ಗುಣ ಇದ್ರೆ ನಾವು ಬೇಗ ಕೋಪ ಮಾಡ್ಕೊಳ್ಳಲ್ಲ. ನಮಗೆ ಕಿರಿಕಿರಿ ಆಗೋ ತರ ಯಾರಾದ್ರೂ ಮಾತಾಡಿದ್ರೆ ಅಥವಾ ಬೇರೆಯವರು ಪ್ರಶ್ನೆ ಕೇಳಿದಾಗ ಉತ್ರ ಗೊತ್ತಾಗದಿದ್ರೆ ನಾವು ಗಾಬರಿ ಆಗಲ್ಲ. ಸಮಾಧಾನವಾಗಿ ಇರ್ತೀವಿ. w23.09 14 ¶1-2

ಸೋಮವಾರ, ನವೆಂಬರ್‌ 17

ನೀನು ಅವ್ರನ್ನ ಭೂಮಿಯಲ್ಲೆಲ್ಲ ಅಧಿಕಾರಿಗಳಾಗಿ ನೇಮಿಸ್ತೀಯ.—ಕೀರ್ತ. 45:16.

ಸಂಘಟನೆ ಕೊಡೋ ನಿರ್ದೇಶನಗಳು ನಮ್ಮನ್ನ ಕಾಪಾಡುತ್ತೆ. ಉದಾಹರಣೆಗೆ, ಹಣದ ಹಿಂದೆ ಹೋಗಬಾರದು, ಯೆಹೋವನ ನಿಯಮ ಮುರಿಯುವಂಥ ಯಾವ ಕೆಲಸನೂ ಮಾಡಬಾರದು ಅಂತ ನಮ್ಮನ್ನ ಎಚ್ಚರಿಸುತ್ತೆ. ಆ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೇ ಒಳ್ಳೇದು. (ಯೆಶಾ. 48:17, 18; 1 ತಿಮೊ. 6:9, 10) ಯೆಹೋವ ಈಗಷ್ಟೇ ಅಲ್ಲ, ಮಹಾ ಸಂಕಟದಲ್ಲೂ ಮತ್ತು ಯೇಸುವಿನ ಸಾವಿರ ವರ್ಷದ ಆಳ್ವಿಕೆಯಲ್ಲೂ ನಮ್ಮನ್ನ ಮನುಷ್ಯರಿಂದಾನೇ ಮಾರ್ಗದರ್ಶಿಸ್ತಾ ಇರ್ತಾನೆ. ಆಗ ನಾವು ಅವ್ರ ಮಾತನ್ನ ಕೇಳ್ತಿವಾ? ನಾವು ಈಗ್ಲಿಂದಾನೇ ಅವ್ರ ಮಾತನ್ನ ಕೇಳೋಕೆ ಕಲಿತ್ರೆ ಮುಂದೆ ನಿರ್ದೇಶನಗಳನ್ನ ಪಾಲಿಸೋಕೆ ಸುಲಭ ಆಗುತ್ತೆ. ಹಾಗಾಗಿ ನಾವು ಯೆಹೋವ ಕೊಡೋ ನಿರ್ದೇಶನಗಳನ್ನ ಮತ್ತು ಆತನು ನೇಮಿಸಿರೋ ಮೇಲ್ವಿಚಾರಕರು ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇರೋಣ. (ಯೆಶಾ. 32:1, 2; ಇಬ್ರಿ. 13:17) ಹೀಗೆ ಯೆಹೋವನೇ ಮುಂದೆ ನಿಂತು ನಮ್ಮನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ನಂಬೋಣ. ಯಾಕಂದ್ರೆ ಆತನ ಜೊತೆಗಿರೋ ನಮ್ಮ ಫ್ರೆಂಡ್‌ಶಿಪ್‌ಗೆ ಏನೇ ಅಪಾಯ ಬಂದ್ರೂ ಅದ್ರಿಂದ ಕಾಪಾಡೋಕೆ ಮತ್ತು ನಮ್ಮನ್ನ ಶಾಶ್ವತ ಜೀವಕ್ಕೆ ನಡಿಸೋಕೆ ಯೆಹೋವನಿಗೆ ಮಾತ್ರನೇ ಆಗೋದು! w24.02 25 ¶17-18

ಮಂಗಳವಾರ, ನವೆಂಬರ್‌ 18

ದೇವರು ಅಪಾರ ಕೃಪೆಯಿಂದ ನಿಮ್ಮನ್ನ ರಕ್ಷಿಸಿದನು.—ಎಫೆ. 2:5.

ಅಪೊಸ್ತಲ ಪೌಲ ಯೆಹೋವನ ಸೇವೆನ ಖುಷಿಯಾಗಿ ಮಾಡ್ತಿದ್ದ. ಜೊತೆಗೆ ಕಷ್ಟಗಳನ್ನೂ ಅನುಭವಿಸಿದ. ಅವನು ತುಂಬ ದೂರ-ದೂರ ಪ್ರಯಾಣ ಮಾಡಬೇಕಿತ್ತು. ಆಗಿನ ಕಾಲದಲ್ಲಿ ಅಷ್ಟು ದೂರ ಪ್ರಯಾಣ ಮಾಡೋದು ಸುಲಭ ಆಗಿರಲಿಲ್ಲ. ಅವನಿಗೆ “ನದಿಗಳಿಂದ, ದರೋಡೆಕೋರರಿಂದ” ಅಪಾಯಗಳು ಬಂದ್ವು. ಅವನ ಶತ್ರುಗಳು ಎಷ್ಟೋ ಸಲ ಅವನಿಗೆ ತುಂಬ ಹೊಡೆದ್ರು. (2 ಕೊರಿಂ. 11:23-27) ಅಷ್ಟೇ ಅಲ್ಲ, ಸಹೋದರ ಸಹೋದರಿಯರು ಕೂಡ ಅವನು ತೋರಿಸಿದ ಪ್ರೀತಿಗೆ ಕೆಲವೊಮ್ಮೆ ಬೆಲೆ ಕೊಡಲಿಲ್ಲ. (2 ಕೊರಿಂ. 10:10; ಫಿಲಿ. 4:15) ಎಷ್ಟೇ ಕಷ್ಟ ಆದ್ರೂ ಪೌಲ ಯೆಹೋವನ ಸೇವೆಯನ್ನ ಮಾಡ್ತಾ ಇದ್ದ. ಯಾಕಂದ್ರೆ ಪವಿತ್ರಗ್ರಂಥದಿಂದ ಮತ್ತು ಯೆಹೋವ ತನ್ನ ಜೊತೆ ನಡ್ಕೊಂಡ ರೀತಿಯಿಂದ ಆತನಲ್ಲಿರೋ ಒಳ್ಳೇ ಗುಣಗಳ ಬಗ್ಗೆ ತಿಳ್ಕೊಂಡ. ಆಗ ತನ್ನನ್ನ ಯೆಹೋವ ದೇವರು ಎಷ್ಟು ಪ್ರೀತಿಸ್ತಾನೆ ಅಂತ ಅವನಿಗೆ ಗೊತ್ತಾಯ್ತು. (ರೋಮ. 8:38, 39; ಎಫೆ. 2:4, 5) ಅದೇ ತರ ಅವನೂ ಯೆಹೋವನನ್ನ ಪ್ರೀತಿಸಿದ. ಆ ಪ್ರೀತಿನ ‘ಪವಿತ್ರ ಜನ್ರ ಸೇವೆ ಮಾಡಿ’ ತೋರಿಸಿದ.—ಇಬ್ರಿ. 6:10. w23.07 9 ¶5-6

ಬುಧವಾರ, ನವೆಂಬರ್‌ 19

ಅಧಿಕಾರಿಗಳ ಮಾತು ಕೇಳಬೇಕು.—ರೋಮ. 13:1.

ತುಂಬ ಜನ ಅಧಿಕಾರಿಗಳಿಟ್ಟಿರೋ ನಿಯಮಗಳಲ್ಲಿ ಕೆಲವೊಂದನ್ನಾದ್ರೂ ಪಾಲಿಸಬೇಕು ಅಂತ ಒಪ್ಕೊಳ್ತಾರೆ. ಆದ್ರೆ ಅವ್ರಿಗೆ ಯಾವುದಾದ್ರೂ ನಿಯಮ ಇಷ್ಟ ಆಗದಿದ್ರೆ ಅಥವಾ ಅನ್ಯಾಯ ಅಂತ ಅನಿಸಿದ್ರೆ ಅದನ್ನ ಪಾಲಿಸೋಕೆ ಹಿಂದೆ ಮುಂದೆ ನೋಡ್ತಾರೆ. ಭೂಮಿ ಮೇಲಿರೋ ಎಲ್ಲ ಸರ್ಕಾರಗಳು ಸೈತಾನನ ಕೈ ಗೊಂಬೆ ಆಗಿದೆ. ಈ ಸರ್ಕಾರಗಳಿಂದ ಮನುಷ್ಯರಿಗೆ ತುಂಬ ನಷ್ಟ ಆಗಿದೆ. ಹಾಗಾಗಿ ಯೆಹೋವ ದೇವರು ಇದನ್ನೆಲ್ಲ ನಾಶ ಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 110:5, 6; ಪ್ರಸಂ. 8:9; ಲೂಕ 4:5, 6) ಬೈಬಲಿನಲ್ಲಿ ಇನ್ನೊಂದು ಮಾತು ಕೂಡ ಇದೆ. ಅದೇನಂದ್ರೆ “ಅಧಿಕಾರಿಗಳನ್ನ ವಿರೋಧಿಸುವವನು ದೇವರು ಮಾಡಿರೋ ಏರ್ಪಾಡನ್ನ ವಿರೋಧಿಸ್ತಾನೆ.” ಅಧಿಕಾರಿಗಳು ಇಲ್ಲ ಅಂದ್ರೆ ಜನ್ರು ಮನಸ್ಸಿಗೆ ಬಂದ ಹಾಗೆ ನಡ್ಕೊಂಡು ಇಲ್ಲದೇ ಇರೋ ತೊಂದ್ರೆಗಳನ್ನೆಲ್ಲಾ ಮೈಮೇಲೆ ಎಳ್ಕೊತಾರೆ ಅಂತ ಯೆಹೋವನಿಗೆ ಗೊತ್ತು. ಅದಕ್ಕೆ ಯೆಹೋವ ಸದ್ಯಕ್ಕೆ ಸ್ವಲ್ಪ ಸಮಯದ ವರೆಗೆ ಸರ್ಕಾರಗಳನ್ನ ಇರೋಕೆ ಬಿಟ್ಟಿದ್ದಾನೆ. ಹಾಗಾಗಿ “ಯಾರಿಗೆ ಏನೇನು ಕೊಡಬೇಕೋ ಅದನ್ನ ಕೊಡಿ.” ಅಂದ್ರೆ ತೆರಿಗೆ ಕಟ್ಟಿ, ಅವ್ರನ್ನ ಗೌರವಿಸಿ, ಅವರು ಹೇಳೋ ಮಾತು ಕೇಳಿ. (ರೋಮ. 13:1-7) ಕೆಲವೊಂದು ನಿಯಮಗಳು ಸರಿ ಇಲ್ಲ, ಇದ್ರಿಂದ ನಮಗೆ ಅನ್ಯಾಯ ಆಗ್ತಿದೆ ಅಂತ ಅನಿಸಬಹುದು. ಆದ್ರೂ ನಾವು ಅಧಿಕಾರಿಗಳು ಕೊಟ್ಟಿರೋ ನಿಯಮಗಳನ್ನ ಪಾಲಿಸಬೇಕು. ಯಾಕಂದ್ರೆ ಅವರನ್ನ ಆ ಜಾಗದಲ್ಲಿ ಇಟ್ಟಿರೋದೇ ಯೆಹೋವ ದೇವರು. ಆದ್ರೆ ಅವರು ಯೆಹೋವ ದೇವರ ಮಾತನ್ನ ಮೀರೋಕೆ ಹೇಳಿದಾಗ ನಾವು ಅದನ್ನ ಪಾಲಿಸಲ್ಲ.—ಅ. ಕಾ. 5:29. w23.10 8 ¶9-10

ಗುರುವಾರ, ನವೆಂಬರ್‌ 20

ಯೆಹೋವನ ಪವಿತ್ರಶಕ್ತಿ ಅವನಲ್ಲಿ ಬಲ ತುಂಬ್ತು.—ನ್ಯಾಯ. 15:14.

ಸಂಸೋನ ಹುಟ್ಟಿದಾಗ ಫಿಲಿಷ್ಟಿಯರು ಇಸ್ರಾಯೇಲ್ಯರನ್ನ ಆಳ್ತಿದ್ರು, ಅವ್ರ ಮೇಲೆ ದಬ್ಬಾಳಿಕೆ ಮಾಡ್ತಿದ್ರು. (ನ್ಯಾಯ. 13:1) ಇದ್ರಿಂದ ಇಸ್ರಾಯೇಲ್ಯರಿಗೆ ತುಂಬ ಕಷ್ಟ ಆಗ್ತಿತ್ತು. ಹಾಗಾಗಿ “ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ” ಯೆಹೋವ ಸಂಸೋನನನ್ನ ಆರಿಸ್ಕೊಂಡನು. (ನ್ಯಾಯ. 13:5) ಈ ಕೆಲಸನ ಚೆನ್ನಾಗಿ ಮಾಡೋಕೆ ಯೆಹೋವ ಸಹಾಯ ಮಾಡ್ತಾನೆ ಅಂತ ಸಂಸೋನ ನಂಬಬೇಕಿತ್ತು. ಒಮ್ಮೆ ಫಿಲಿಷ್ಟಿಯ ಸೈನಿಕರು ಸಂಸೋನನನ್ನ ಹಿಡಿಯೋಕೆ ಲೆಹೀ ಅನ್ನೋ ಊರಿಗೆ ಬಂದ್ರು. ಇದು ಯೆಹೂದದಲ್ಲಿ ಇದ್ದಿರಬೇಕು. ಯೆಹೂದದ ಜನ್ರು ಫಿಲಿಷ್ಟಿಯರನ್ನ ನೋಡಿ ತುಂಬ ಭಯ ಪಟ್ಕೊಂಡ್ರು. ಅದಕ್ಕೆ ಅವರು ಸಂಸೋನನನ್ನ ಹಿಡ್ಕೊಡಬೇಕು ಅಂದ್ಕೊಂಡ್ರು. ಹೀಗೆ ಅವನ ಜನ್ರೇ ಹೊಸ ಹಗ್ಗಗಳನ್ನ ತಗೊಂಡು ಸಂಸೋನನನ್ನ ಕಟ್ಟಿ ಫಿಲಿಷ್ಟಿಯರ ಹತ್ರ ಕರ್ಕೊಂಡು ಬಂದ್ರು. (ನ್ಯಾಯ. 15:9-13) ಆಗ “ಯೆಹೋವನ ಪವಿತ್ರಶಕ್ತಿ ಅವನಲ್ಲಿ ಬಲ ತುಂಬ್ತು.” ಅವನು ಆ ಹಗ್ಗಗಳಿಂದ ಬಿಡಿಸ್ಕೊಂಡ. ಅಲ್ಲೇ ಪಕ್ಕದಲ್ಲಿದ್ದ “ಕತ್ತೆಯ ದವಡೆಯ ಹಸಿ ಮೂಳೆ ಅವನ ಕಣ್ಣಿಗೆ ಬಿತ್ತು.” ಅವನು ಅದನ್ನ ತಗೊಂಡು 1,000 ಫಿಲಿಷ್ಟಿಯರನ್ನ ಕೊಂದು ಹಾಕಿದ.—ನ್ಯಾಯ. 15:14-16. w23.09 2 ¶3-4

ಶುಕ್ರವಾರ, ನವೆಂಬರ್‌ 21

ಇದು, ಕ್ರಿಸ್ತನಾದ ನಮ್ಮ ಪ್ರಭು ಯೇಸುಗೆ ಸಂಬಂಧಿಸಿ ದೇವರು ಅಂದ್ಕೊಂಡ ಶಾಶ್ವತ ಉದ್ದೇಶಕ್ಕೆ ತಕ್ಕ ಹಾಗೆ ಇದೆ.—ಎಫೆ. 3:11.

ಯೆಹೋವನಿಗೆ ಒಂದು “ಶಾಶ್ವತ ಉದ್ದೇಶ” ಇದೆ, ಅದನ್ನ ನಮಗೆ ಒಂದೊಂದಾಗಿ ಹೇಳ್ತಾ ಬಂದಿದ್ದಾನೆ. ಆ ಉದ್ದೇಶನ ಸಾಧಿಸೋಕೆ ಯೆಹೋವ ಒಂದಿಲ್ಲ ಅಂದ್ರೆ ಇನ್ನೊಂದು ದಾರಿ ಆರಿಸ್ಕೊಳ್ತಾನೆ. ಯಾಕಂದ್ರೆ ತಾನು ಕೊಟ್ಟ “ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ.” (ಜ್ಞಾನೋ. 16:4) ಆ ಉದ್ದೇಶ ನೆರವೇರಿದಾಗ ಸಿಗೋ ಆಶೀರ್ವಾದ ಶಾಶ್ವತವಾಗಿ ಇರುತ್ತೆ. ಹಾಗಾದ್ರೆ ಯೆಹೋವನ ಉದ್ದೇಶ ಏನು? ಅದನ್ನ ಸಾಧಿಸೋಕೆ ಒಂದು ದಾರಿ ಮುಚ್ಚಿ ಹೋದಾಗ ಇನ್ನೊಂದು ದಾರಿನ ಹೇಗೆ ಆರಿಸ್ಕೊಂಡನು? ದೇವರು ಮನುಷ್ಯರಿಗಾಗಿ ತನ್ನ ಉದ್ದೇಶ ಏನು ಅಂತ ಆದಾಮ ಹವ್ವಗೆ ಹೇಳಿದನು. ಆತನು ಅವ್ರಿಗೆ “ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬ್ಕೊಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ . . . ಎಲ್ಲ ಜೀವಿಗಳು ನಿಮ್ಮ ಕೈಕೆಳಗಿರಲಿ” ಅಂದನು. (ಆದಿ. 1:28) ಆದಾಮ ಹವ್ವ ಯೆಹೋವನ ಮಾತನ್ನ ಕೇಳದೇ ಆತನ ಉದ್ದೇಶನ ಹಾಳುಮಾಡಿದ್ರು. ಇದ್ರಿಂದ ಭೂಮಿಲಿರೋ ಎಲ್ರಿಗೂ ಪಾಪ, ಮರಣ ಬಂತು. ಹಾಗಂತ ಯೆಹೋವ ತನ್ನ ಉದ್ದೇಶನ ಕೈ ಬಿಟ್ಟುಬಿಟ್ನಾ? ಇಲ್ಲ. ಯೆಹೋವ ಇನ್ನೊಂದು ದಾರಿಯನ್ನ ಹುಡುಕಿದನು. ಸ್ವರ್ಗದಲ್ಲಿ ತನ್ನ ಆಳ್ವಿಕೆ ಶುರುಮಾಡೋಕೆ ಆತನು ತಕ್ಷಣ ತೀರ್ಮಾನಿಸಿದನು.—ಮತ್ತಾ. 25:34. w23.10 20 ¶6-7

ಶನಿವಾರ, ನವೆಂಬರ್‌ 22

ಯೆಹೋವ ನನ್ನ ಸಹಾಯಕನಾಗಿ ಇರದಿದ್ರೆ, ನಾನು ಬೇಗ ನಾಶವಾಗಿ ಹೋಗ್ತಿದ್ದೆ.—ಕೀರ್ತ. 94:17.

ಯೆಹೋವ ನಿಮಗೆ ಸಹಾಯ ಮಾಡ್ತಾನೆ. ಯಾವುದೋ ಒಂದು ವಿಷ್ಯ ಅಥವಾ ನಿಮ್ಮಲ್ಲಿರೋ ಒಂದು ಸ್ವಭಾವ ತಪ್ಪು ಅಂತ ನಿಮಗೆ ಗೊತ್ತಿರುತ್ತೆ. ಅದನ್ನ ಬಿಟ್ಟುಬಿಡಬೇಕು ಅಂತ ತುಂಬ ವರ್ಷಗಳಿಂದ ನೀವು ಪ್ರಯತ್ನ ಮಾಡ್ತಾ ಇರಬಹುದು. ಆದ್ರೆ ಕೆಲವೊಮ್ಮೆ ನೀವು ಎಡವಿ ಬಿಡಬಹುದು. ಆಗ ‘ಪೇತ್ರನಿಗಿಂತ ನನಗೆ ಬಂದಿರೋ ಕಷ್ಟ ದೊಡ್ಡದು’ ಅಂತ ಅನಿಸಬಹುದು. ಚಿಂತೆ ಮಾಡಬೇಡಿ. ನೀವು ಪ್ರಯತ್ನ ಮಾಡ್ತಾ ಇರೋಕೆ ಯೆಹೋವ ಸಹಾಯ ಮಾಡ್ತಾನೆ. (ಕೀರ್ತ. 94:18, 19) ಒಂದು ಉದಾಹರಣೆ ನೋಡಿ. ಒಬ್ಬ ಸಹೋದರ ಯೆಹೋವನ ಸಾಕ್ಷಿ ಆಗೋಕೆ ಮುಂಚೆ ಸುಮಾರು ವರ್ಷ ಸಲಿಂಗಿಯಾಗಿ ಜೀವನ ಮಾಡ್ತಿದ್ದ. ಆದ್ರೆ ಆಮೇಲೆ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಶುರುಮಾಡಿದ. ಈಗ್ಲೂ ಅವನಿಗೆ ಕೆಲವೊಮ್ಮೆ ಆ ಕೆಟ್ಟ ಆಸೆಗಳು ಬರ್ತಾ ಇರುತ್ತೆ. ಆದ್ರೂ ಅವನು ಅದನ್ನೆಲ್ಲ ಬಿಟ್ಟು ಸರಿಯಾಗಿ ಇರೋದನ್ನ ಮಾಡೋಕೆ ಪ್ರಯತ್ನ ಮಾಡ್ತಾನೆ. ಅದಕ್ಕೆ ಅವನಿಗೆ ಯಾವುದು ಸಹಾಯ ಮಾಡ್ತಿದೆ? ಅವನು ಹೇಳೋದು: “ಯೆಹೋವ ನನಗೆ ಶಕ್ತಿ ಕೊಡ್ತಿದ್ದಾನೆ. ಪವಿತ್ರಶಕ್ತಿಯ ಸಹಾಯದಿಂದ . . . ನನಗೆ ಸತ್ಯದ ದಾರೀಲಿ ನಡೀತಾ ಇರೋಕೆ ಆಗ್ತಿದೆ . . . ಕೆಲವೊಮ್ಮೆ ಕೆಟ್ಟ ಆಸೆಗಳು ನನ್ನ ಮನಸ್ಸನ್ನ ಎಳೆದ್ರೂ ಯೆಹೋವ ಶಕ್ತಿ ಕೊಡ್ತಾನೇ ಇದ್ದಾನೆ. ಆತನ ಸೇವೆ ಮಾಡೋಕೆ ಅವಕಾಶ ಕೊಡ್ತಾ ಇದ್ದಾನೆ.” w23.09 23 ¶12

ಭಾನುವಾರ, ನವೆಂಬರ್‌ 23

ದೀನತೆ, ಯೆಹೋವನ ಭಯ ಇದ್ರೆ, ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.—ಜ್ಞಾನೋ. 22:4.

ಯುವ ಸಹೋದರರೇ, ನೀವು ಬೆಳಿತಾ ಹೋದ ಹಾಗೆ ಪ್ರೌಢ ಕ್ರೈಸ್ತರಾಗಿಬಿಡಲ್ಲ, ಅದಕ್ಕೆ ಪ್ರಯತ್ನ ಮಾಡಬೇಕು. ಹಾಗಾಗಿ ನೀವು ಒಳ್ಳೆ ಮಾದರಿ ಇಟ್ಟಿರೋರನ್ನ ಅನುಕರಿಸಿ. ಚೆನ್ನಾಗಿ ಯೋಚಿಸೋ ಸಾಮರ್ಥ್ಯ ಬೆಳೆಸ್ಕೊಳಿ, ಬೇರೆಯವ್ರ ನಂಬಿಕೆ ಗಳಿಸಿ, ಕೌಶಲಗಳನ್ನ ಕಲೀರಿ ಮತ್ತು ಮುಂದೆ ಬರೋ ಜವಾಬ್ದಾರಿಗಳನ್ನ ಮಾಡೋಕೆ ಈಗ್ಲೇ ತಯಾರಾಗಿ. ಯುವ ಜನ್ರೇ, ‘ಇಷ್ಟೆಲ್ಲ ಮಾಡಬೇಕಾ, ಇದನ್ನೆಲ್ಲಾ ಕಲಿಬೇಕಾ’ ಅಂತ ನೆನಸಿ ಗಾಬರಿ ಆಗಬೇಡಿ. ನಿಮಗೆ ಸಹಾಯ ಮಾಡೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. (ಯೆಶಾ. 41:10, 13) ಅಷ್ಟೇ ಅಲ್ಲ ಸಭೆಯಲ್ಲಿರೋ ಸಹೋದರ ಸಹೋದರಿಯರು ನಿಮಗೆ ಸಹಾಯ ಮಾಡ್ತಾರೆ. ನೀವು ಪ್ರೌಢ ಕ್ರೈಸ್ತರಾದಾಗ ನಿಮ್ಮ ಜೀವನ ಚೆನ್ನಾಗಿರುತ್ತೆ, ಖುಷಿಯಾಗೂ ಇರ್ತೀರ. ಯುವ ಸಹೋದರರೇ, ನೀವಂದ್ರೆ ನಮಗೆ ತುಂಬ ಇಷ್ಟ. ಪ್ರೌಢ ಕ್ರೈಸ್ತರಾಗೋಕೆ ನೀವು ಹಾಕೋ ಎಲ್ಲ ಪ್ರಯತ್ನನ ಯೆಹೋವ ಆಶೀರ್ವದಿಸಲಿ ಅಂತ ನಾವು ಆತನ ಹತ್ರ ಬೇಡ್ಕೊಳ್ತೀವಿ. w23.12 29 ¶19-20

ಸೋಮವಾರ, ನವೆಂಬರ್‌ 24

ಮತ್ತೊಬ್ರ ತಪ್ಪನ್ನ ಗಮನಿಸದೆ ಇರಿ.—ಜ್ಞಾನೋ. 19:11.

ನಾವು ಸಹೋದರ ಸಹೋದರಿಯರು ಮಾಡೋ ತಪ್ಪುಗಳನ್ನಲ್ಲ, ಅವರು ಇಲ್ಲಿ ತನಕ ಏನೆಲ್ಲಾ ಒಳ್ಳೇದನ್ನ ಮಾಡಿದ್ದಾರೋ ಅದನ್ನ ನೆನಪಿಸ್ಕೊಬೇಕು. ಒಂದು ಉದಾಹರಣೆ ನೋಡಿ. ನೀವು ಮತ್ತು ಸಹೋದರ ಸಹೋದರಿಯರೆಲ್ಲಾ ಚೆನ್ನಾಗಿ ಸಮಯ ಕಳಿತೀರ, ಆಮೇಲೆ ಮನೆಗೆ ಹೋಗೋಕೆ ಮುಂಚೆ ಫೋಟೋ ತಗೊಳ್ತೀರ. ಆಗ ನೀವು ಒಂದಲ್ಲ, ಎರಡು ಮೂರು ಫೋಟೋ ತಗೊಳ್ತೀರ. ಆದ್ರೆ ಒಂದು ಫೋಟೋದಲ್ಲಿ ಒಬ್ಬ ಸಹೋದರನ ಮುಖ ಚೆನ್ನಾಗಿ ಬಂದಿಲ್ಲಾ ಅಂದ್ರೆ ಆ ಫೋಟೋ ಡಿಲೀಟ್‌ ಮಾಡಿ ಚೆನ್ನಾಗಿರೋದನ್ನ ಇಟ್ಕೊಳ್ತೀರ ಅಲ್ವಾ? ಅದೇ ತರ ಸಹೋದರ ಸಹೋದರಿಯರ ಜೊತೆ ನಾವು ಕಳೆದಿರೋ ಒಳ್ಳೇ ಕ್ಷಣಗಳನ್ನ ನೆನಪಲ್ಲಿ ಇಟ್ಕೊಂಡಿರ್ತೀವಿ. ಆದ್ರೆ ಅವರು ಕೆಲವೊಮ್ಮೆ ನಮಗೆ ಬೇಜಾರಾಗೋ ತರ ಮಾತಾಡಿ ಬಿಡಬಹುದು ಅಥವಾ ನಡ್ಕೊಂಡು ಬಿಡಬಹುದು. ಆಗ ನಾವೇನು ಮಾಡಬೇಕು? (ಎಫೆ. 4:32) ಅವ್ರ ಜೊತೆ ಕಳೆದಿರೋ ಒಳ್ಳೇ ಕ್ಷಣಗಳನ್ನ ಜೋಪಾನವಾಗಿ ಇಟ್ಕೊಬೇಕು, ಅವರು ಮಾಡಿರೋ ಚಿಕ್ಕಪುಟ್ಟ ತಪ್ಪುಗಳನ್ನ ಡಿಲೀಟ್‌ ಮಾಡಿಬಿಡಬೇಕು. w23.11 12-13 ¶16-17

ಮಂಗಳವಾರ, ನವೆಂಬರ್‌ 25

ಸ್ತ್ರೀಯರು ಗೌರವ ತರುವಂಥ ಬಟ್ಟೆ ಹಾಕಬೇಕು . . . ದೇವರ ಮೇಲೆ ಭಕ್ತಿಯಿರೋ ಸ್ತ್ರೀಯರು ಈ ತರಾನೇ ಇರಬೇಕು.—1 ತಿಮೊ. 2:9, 10.

ಇದನ್ನ ಹೇಳೋಕೆ ಪೌಲ ಬಳಸಿರೋ ಗ್ರೀಕ್‌ ಪದಗಳು ಏನರ್ಥ ಕೊಡುತ್ತಂದ್ರೆ ನಾವು ಹಾಕೋ ಬಟ್ಟೆ ಯೆಹೋವನಿಗೆ ಗೌರವ ತರೋ ಹಾಗೆ ಇರಬೇಕು, ನಮ್ಮ ಬಟ್ಟೆ ನೋಡಿದಾಗ ಬೇರೆಯವ್ರಿಗೆ ಹೇಗನಿಸುತ್ತೆ ಅಂತನೂ ಯೋಚಿಸಬೇಕು. ಈ ವಚನ ಹೇಳೋ ತರ ನಡ್ಕೊಳ್ತಿರೋ ನಮ್ಮ ಸಹೋದರಿಯರನ್ನ ನಾವು ಮೆಚ್ಕೊಳ್ತೀವಿ. ಸಹೋದರಿಯರಿಗೆ ಪ್ರೌಢರಾಗೋಕೆ ಸಹಾಯ ಮಾಡೋ ಇನ್ನೊಂದು ಗುಣನೇ ವಿವೇಚನೆ. ವಿವೇಚನೆ ಅಂದ್ರೇನು? ಸರಿ ಯಾವುದು, ತಪ್ಪು ಯಾವುದು ಅಂತ ತಿಳ್ಕೊಂಡು ಸರಿಯಾಗಿರೋದನ್ನೇ ಮಾಡೋದು. ಇದಕ್ಕೆ ಅಬೀಗೈಲ್‌ ಒಳ್ಳೇ ಮಾದರಿ ಇಟ್ಟಿದ್ದಾಳೆ. ಅವಳ ಗಂಡ ಮೂರ್ಖತನದಿಂದ ಒಂದು ನಿರ್ಧಾರ ಮಾಡಿದ. ಅದ್ರಿಂದ ಅವನ ಕುಟುಂಬದವ್ರಿಗೆಲ್ಲ ಆಪತ್ತು ಬಂತು. ಆದ್ರೆ ಅಬೀಗೈಲ್‌ ಜಾಣೆಯಾಗಿದ್ದಳು. ಅವಳು ಬುದ್ಧಿವಂತಿಕೆಯಿಂದ ಮಾಡಿದ ತೀರ್ಮಾನದಿಂದ ಅವಳ ಕುಟುಂಬದವ್ರ ಪ್ರಾಣ ಉಳೀತು. (1 ಸಮು. 25:14-23, 32-35) ಯುವ ಸಹೋದರಿಯರೂ ಅಬೀಗೈಲ್‌ ತರ ಬುದ್ಧಿವಂತರಾಗಿರಬೇಕು. ಆಗ ಯಾವಾಗ ಮಾತಾಡಬೇಕು, ಯಾವಾಗ ಸುಮ್ಮನಿರಬೇಕು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಬೇರೆಯವ್ರಿಗೆ ಸಹಾಯ ಮಾಡುವಾಗ ಅವ್ರ ಸ್ವಂತ ವಿಷ್ಯಗಳಲ್ಲಿ ತಲೆಹಾಕಲ್ಲ.—1 ಥೆಸ. 4:11. w23.12 20 ¶8-9

ಬುಧವಾರ, ನವೆಂಬರ್‌ 26

ದೇವರಿಂದ ಮಹಿಮೆಯನ್ನ ಪಡಿಯೋ ನಿರೀಕ್ಷೆ ನಮಗೆ ಇರೋದ್ರಿಂದ ನಾವು ಖುಷಿಪಡೋಣ.—ರೋಮ. 5:2.

ಪೌಲ ಈ ಮಾತುಗಳನ್ನ ರೋಮ್‌ ಸಭೆಯವ್ರಿಗೆ ಹೇಳಿದನು. ಅಲ್ಲಿದ್ದ ಸಹೋದರ ಸಹೋದರಿಯರು ಯೆಹೋವ ದೇವರ ಬಗ್ಗೆ ಮತ್ತು ಯೇಸು ಬಗ್ಗೆ ಕಲಿತು ಅವ್ರ ಮೇಲೆ ನಂಬಿಕೆ ಇಟ್ಟು ಕ್ರೈಸ್ತರಾದ್ರು. ಅವ್ರಲ್ಲಿದ್ದ “ನಂಬಿಕೆಯಿಂದಾಗಿ ದೇವರು [ಅವ್ರನ್ನ] ನೀತಿವಂತರು” ಅಂತ ಕರೆದನು. ಪವಿತ್ರಶಕ್ತಿಯಿಂದ ಅವ್ರನ್ನ ಅಭಿಷೇಕ ಮಾಡಿದನು. (ರೋಮ. 5:1) ಇದ್ರಿಂದ ಅವ್ರಿಗೆ ಯಾವ ನಿರೀಕ್ಷೆ ಸಿಕ್ತು? ಪೌಲ ಎಫೆಸದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೂ ಈ ನಿರೀಕ್ಷೆ ಬಗ್ಗೆ ಹೇಳಿದ. “ಪವಿತ್ರ ಜನ್ರಿಗೆ ಆಸ್ತಿಯಾಗಿ ಕೊಡೋ ಮಹಿಮಾಭರಿತ ಆಶೀರ್ವಾದಗಳನ್ನ” ಅವರು ಪಡ್ಕೊಳ್ತಾರೆ ಅಂತ ಬರೆದ. (ಎಫೆ. 1:18) ಆ ನಿರೀಕ್ಷೆ ಎಲ್ಲಿ ಸಿಗುತ್ತೆ? ಅವನು ಕೊಲೊಸ್ಸೆಯಲ್ಲಿದ್ದ ಅಭಿಷಿಕ್ತರಿಗೆ “ಸ್ವರ್ಗದಲ್ಲಿ ಸಿಗೋ ಆಶೀರ್ವಾದಕ್ಕಾಗಿ” ನೀವು ಕಾಯ್ತಾ ಇದ್ದೀರ ಅಂತ ಬರೆದ. (ಕೊಲೊ. 1:4, 5) ಇದ್ರಿಂದ ನಮಗೇನು ಗೊತ್ತಾಗುತ್ತೆ? ಅಭಿಷಿಕ್ತರಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸೋ ಮತ್ತು ಕ್ರಿಸ್ತನ ಜೊತೆ ಆಳೋ ನಿರೀಕ್ಷೆ ಇದೆ ಅಂತ ಗೊತ್ತಾಗುತ್ತೆ.—1 ಥೆಸ. 4:13-17; ಪ್ರಕ. 20:6. w23.12 9 ¶4-5

ಗುರುವಾರ, ನವೆಂಬರ್‌ 27

ನಿಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ದೇವರು ನಿಮಗೆ ಕೊಡ್ತಾನೆ . . . ನಿಮ್ಮ ಹೃದಯನ, ಯೋಚ್ನೆನ ಕಾಯ್ತಾನೆ.—ಫಿಲಿ. 4:7.

ಆ ವಚನದಲ್ಲಿ ಯೆಹೋವ ನಮಗೆ ಶಾಂತಿ ಕೊಡ್ತಾನೆ ಅಂತಷ್ಟೇ ಹೇಳ್ತಿಲ್ಲ, ನಮ್ಮ “ಹೃದಯನ, ಯೋಚ್ನೆನ ಕಾಯ್ತಾನೆ” ಅಂತನೂ ಹೇಳುತ್ತೆ. ಹಿಂದಿನ ಕಾಲದಲ್ಲಿ “ಕಾಯೋದು” ಅನ್ನೋ ಪದದ ಮೂಲ ಪದವನ್ನ ಸೈನಿಕರು ಕಾವಲು ಕಾಯೋದನ್ನ ವರ್ಣಿಸೋಕೆ ಬಳಸ್ತಿದ್ರು. ತಮ್ಮ ದೇಶನ ಯಾರೂ ಆಕ್ರಮಣ ಮಾಡಬಾರದು ಅಂತ ಇಡೀ ರಾತ್ರಿ ಈ ಸೈನಿಕರು ಪಟ್ಟಣದ ಬಾಗಿಲ ಹತ್ರ ಕಾಯ್ತಿದ್ರು. ಇದ್ರಿಂದ ಜನ್ರೆಲ್ಲ ಹಾಯಾಗಿ, ನೆಮ್ಮದಿಯಾಗಿ ನಿದ್ರೆ ಮಾಡ್ತಿದ್ರು. ಅದೇ ತರ ಯೆಹೋವ ನಮ್ಮ ಹೃದಯನ, ಯೋಚ್ನೆನ ಕಾಯ್ತಾನೆ. ಆಗ ನಮಗೆ ಆತನು ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆನೂ ಬರುತ್ತೆ, ಸಮಾಧಾನನೂ ಆಗುತ್ತೆ. (ಕೀರ್ತ. 4:8) ಆದ್ರೆ ಕೆಲವು ಸಲ ನಾವು ಪ್ರಾರ್ಥನೆ ಮಾಡಿದ ತಕ್ಷಣ ನಮ್ಮ ಸಮಸ್ಯೆಗಳು ಹೋಗದೆ ಇರಬಹುದು. ಹಾಗಿದ್ರೂ ಹನ್ನಗೆ ಮನಶ್ಶಾಂತಿ ಸಿಕ್ಕಿದ ತರ ನಮಗೂ ಮನಶ್ಶಾಂತಿ ಸಿಗುತ್ತೆ. (1 ಸಮು. 1:16-18) ಆಗ ನಮಗೆ ಸರಿಯಾಗಿ ಯೋಚ್ನೆ ಮಾಡೋಕೆ ಮತ್ತು ಸರಿಯಾದ ತೀರ್ಮಾನ ತಗೊಳ್ಳೋಕೆ ಆಗುತ್ತೆ. ನಾವೇನು ಮಾಡಬೇಕು? ಆಪತ್ತು ಬಂದಾಗ ಜನ್ರು ಸೈನಿಕರನ್ನ ಕರೀತಿದ್ರು. ಅದೇ ತರ ಸಮಸ್ಯೆಗಳಾದಾಗ ನಾವೂ ಯೆಹೋವನನ್ನ ಕರೀಬೇಕು. ಅಂದ್ರೆ ಮನಶ್ಶಾಂತಿ ಸಿಗೋ ವರೆಗೂ ಆತನ ಹತ್ರ ಪ್ರಾರ್ಥನೆ ಮಾಡ್ತಾ ಇರಬೇಕು. (ಲೂಕ 11:9; 1 ಥೆಸ. 5:17) ನಿಮಗೂ ಕಷ್ಟಗಳು ಬಂದಾಗ ಯೆಹೋವ ನಿಮ್ಮ ಹೃದಯನ, ಯೋಚ್ನೆನ ಕಾಯಬೇಕಂದ್ರೆ, ಶಾಂತಿ ಕೊಡಬೇಕಂದ್ರೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಾ ಇರಿ.—ರೋಮ. 12:12. w24.01 21 ¶5-6

ಶುಕ್ರವಾರ, ನವೆಂಬರ್‌ 28

ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.—ಮತ್ತಾ. 6:9.

ಯೆಹೋವ ದೇವರ ಹೆಸ್ರಿಗೆ ಬಂದಿರೋ ಕಳಂಕ ತೆಗೆದು ಹಾಕೋಕೆ ಯೇಸು ತುಂಬ ಪ್ರಯತ್ನ ಮಾಡಿದನು. ಅದಕ್ಕೇ ಜನ ಎಷ್ಟೇ ಹಿಂಸೆ ಕೊಟ್ರೂ, ಅವಮಾನ ಮಾಡಿದ್ರೂ, ಸುಳ್ಳಾರೋಪ ಹಾಕಿದ್ರೂ ಅದನ್ನೆಲ್ಲ ಸಹಿಸ್ಕೊಂಡನು. ಎಲ್ಲ ವಿಷ್ಯದಲ್ಲೂ ತಾನು ಯೆಹೋವನ ಮಾತನ್ನ ಕೇಳಿದ್ದೀನಿ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಜನ ಅವಮಾನ ಮಾಡಿದಾಗ್ಲೂ ಆತನು ನಾಚಿಕೆ ಪಡ್ಲಿಲ್ಲ. (ಇಬ್ರಿ. 12:2) ಆ ಸಮಯದಲ್ಲಿ ಎಲ್ಲಾ ಕಷ್ಟನ ಸೈತಾನನೇ ತರ್ತಿದ್ದಾನೆ ಅಂತನೂ ಆತನಿಗೆ ಗೊತ್ತಿತ್ತು. (ಲೂಕ 22:2-4; 23:33, 34) ಆದ್ರೆ ಸೈತಾನ ಯೇಸುವಿನ ನಿಯತ್ತನ್ನ ಮುರಿಯೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಅದೆಲ್ಲ ಮಣ್ಣುಮುಕ್ತು. ಹೀಗೆ ಸೈತಾನ ಒಬ್ಬ ಸುಳ್ಳುಗಾರ ಅಂತ ಯೇಸು ತೋರಿಸಿಕೊಟ್ಟನು. ಅಷ್ಟೇ ಅಲ್ಲ, ಎಷ್ಟೇ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಿಂದ ಸೇವೆ ಮಾಡುವವರೂ ಇದ್ದಾರೆ ಅಂತ ಸಾಬೀತು ಮಾಡಿದನು. ನೀವು ನಿಮ್ಮ ರಾಜನಾದ ಯೇಸುವನ್ನ ಖುಷಿಪಡಿಸಬೇಕಾ? ಹಾಗಾದ್ರೆ ಯೆಹೋವನನ್ನ ಹೊಗಳ್ತಾ ಇರಿ. ಆತನು ಎಷ್ಟು ಒಳ್ಳೇ ದೇವರು ಅಂತ ಜನ್ರಿಗೆ ಅರ್ಥಮಾಡಿಸಿ. ನೀವು ಹೀಗೆ ಮಾಡಿದ್ರೆ ಯೇಸು ತರ ನಡ್ಕೊಳ್ತೀರ. (1 ಪೇತ್ರ 2:21) ಆತನ ತರ ಯೆಹೋವನ ಮನಸ್ಸನ್ನ ಖುಷಿಪಡಿಸ್ತೀರ ಮತ್ತು ಸೈತಾನ ಎಂಥ ನಾಚಿಕೆಗೆಟ್ಟ ಸುಳ್ಳುಗಾರ ಅಂತ ಸಾಬೀತು ಮಾಡ್ತೀರ! w24.02 11-12 ¶11-13

ಶನಿವಾರ, ನವೆಂಬರ್‌ 29

ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ ಆತನ ಋಣನ ನಾನು ಹೇಗೆ ತೀರಿಸಲಿ?—ಕೀರ್ತ. 116:12.

ಕಳೆದ ಐದು ವರ್ಷಗಳಿಂದ ಲಕ್ಷಾಂತರ ಜನ್ರು ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಗಳಾಗಿದ್ದಾರೆ. ನೀವು ಯೆಹೋವನಿಗೆ ಸಮರ್ಪಿಸ್ಕೊಂಡಾಗ, ಇನ್ಮುಂದೆ ಯೇಸುವಿನ ಶಿಷ್ಯರಾಗಿ ಇರ್ತಿರ, ಯೆಹೋವನಿಗೆ ಏನಿಷ್ಟಾನೋ ಅದನ್ನ ಮಾಡೋದೇ ನಿಮ್ಮ ಜೀವನದಲ್ಲಿ ಮುಖ್ಯ ಆಗಿರುತ್ತೆ. ಇದಿಷ್ಟೇ ಸಾಕಾ? ಯೇಸು ತನ್ನ ಶಿಷ್ಯರಿಗೆ, “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ ಹೊತ್ತು ನನ್ನ ಹಿಂದೆನೇ ಬರಲಿ” ಅಂತ ಹೇಳಿದನು. (ಮತ್ತಾ. 16:24) ಅಂದ್ರೆ ನಾವು ನಮ್ಮನ್ನ ಯೆಹೋವನಿಗೆ ಸಮರ್ಪಿಸ್ಕೊಂಡಾಗ, ಆತನಿಗೆ ಇಷ್ಟ ಆಗದೇ ಇರೋ ಯಾವ ಕೆಲಸನೂ ಮಾಡಬಾರದು. (2 ಕೊರಿಂ. 5:14, 15) ಲೈಂಗಿಕ ಅನೈತಿಕತೆಯಂಥ “ಪಾಪದಿಂದ ತುಂಬಿರೋ ದೇಹದ” ಕೆಲಸಗಳನ್ನೂ ಮಾಡಬಾರದು. (ಗಲಾ. 5:19-21; 1 ಕೊರಿಂ. 6:18) ಇದನ್ನೆಲ್ಲ ಪಾಲಿಸೋಕೆ ಕಷ್ಟ ಅಂತ ಅನಿಸುತ್ತಾ? ನಿಮಗೆ ಯೆಹೋವನ ಮೇಲೆ ಪ್ರೀತಿ ಇದ್ರೆ ಮತ್ತು ಆತನು ಕೊಡೋ ನಿಯಮಗಳು ನಿಮ್ಮ ಒಳ್ಳೇದಕ್ಕೇ ಅಂತ ನಂಬಿಕೆ ಇದ್ರೆ ಕಷ್ಟ ಅನಿಸಲ್ಲ.— ಕೀರ್ತ. 119:97; ಯೆಶಾ. 48:17, 18. w24.03 2 ¶1; 3 ¶4

ಭಾನುವಾರ, ನವೆಂಬರ್‌ 30

ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ.—ಲೂಕ 3:22.

ಯೆಹೋವ ಯಾರನ್ನ ಮೆಚ್ಕೊಂಡಿದ್ದಾನೋ ಅವ್ರಿಗೆ ಪವಿತ್ರಶಕ್ತಿ ಕೊಡ್ತಾನೆ. (ಮತ್ತಾ. 12:18) ಆದ್ರೆ ‘ಆ ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ನಾನು ನನ್ನ ಜೀವನದಲ್ಲಿ ತೋರಿಸ್ತಾ ಇದ್ದೀನಾ?’ ಅಂತ ನಾವು ಕೇಳ್ಕೊಬೇಕು. ಅಷ್ಟೇ ಅಲ್ಲ, ಯೆಹೋವನ ಬಗ್ಗೆ ತಿಳ್ಕೊಂಡ ಮೇಲೆ ಜಾಸ್ತಿ ತಾಳ್ಮೆ ತೋರಿಸೋಕೆ ಕಲ್ತಿದ್ದೀರಾ? ಅಂತ ಯೋಚಿಸಿ. ಹೀಗೆ ನೀವು ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ತೋರಿಸ್ತಾ ಇದ್ರೆ ಯೆಹೋವ ನಿಮ್ಮನ್ನ ಮೆಚ್ಕೊಂಡಿದ್ದಾನೆ ಅನ್ನೋ ನಂಬಿಕೆ ಜಾಸ್ತಿ ಆಗ್ತಾ ಹೋಗುತ್ತೆ. ಯೆಹೋವ ತಾನು ಮೆಚ್ಕೊಂಡವ್ರಿಗೆ ಬಿಡುಗಡೆ ಬೆಲೆಯಿಂದ ಪ್ರಯೋಜನ ಪಡ್ಕೊಳ್ಳೋ ಅವಕಾಶ ಕೊಡ್ತಾನೆ. (1 ತಿಮೊ. 2:5, 6) ಆದ್ರೆ ಯೇಸು ಕೊಟ್ಟ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ಟು ದೀಕ್ಷಾಸ್ನಾನ ತಗೊಂಡ್ರೂ ಕೆಲವು ಸಲ ನಮಗೆ ಯೆಹೋವ ನಮ್ಮನ್ನ ಮೆಚ್ಕೊಳ್ತಾನಾ ಅಂತ ಅನಿಸಬಹುದು. ಒಂದು ವಿಷ್ಯ ನೆನಪಿಡಿ, ನಾವು ನಮ್ಮ ಭಾವನೆಗಳನ್ನ ನಂಬಕ್ಕಾಗಲ್ಲ, ಆದ್ರೆ ಯೆಹೋವನನ್ನ ನಂಬಬಹುದು. ಅಷ್ಟೇ ಅಲ್ಲ, ಯಾರು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡ್ತಾರೋ ಅವ್ರನ್ನ ಯೆಹೋವ ನೀತಿವಂತರು ಅಂತ ನೋಡ್ತಾನೆ ಮತ್ತು ಅವ್ರನ್ನ ಆಶೀರ್ವದಿಸ್ತೀನಿ ಅಂತ ಮಾತುಕೊಟ್ಟಿದ್ದಾನೆ.—ಕೀರ್ತ. 5:12; ರೋಮ. 3:26. w24.03 30 ¶15; 31 ¶17

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ