ಲೋಭರಹಿತ ಲೋಕವನ್ನು ಕಲ್ಪಿಸಿಕೊಳ್ಳಿರಿ
ಸ್ಪರ್ಧಿಸುವುದಕ್ಕಿಂತ ಸಹಕರಿಸುವ ಜನರಿರುವ ಒಂದು ಲೋಕವನ್ನು ನೀವು ಊಹಿಸಬಲ್ಲಿರೋ? ಎಲ್ಲಿ ಮಾನವರು ಸ್ವತಃ ತಾವು ಹೇಗೆ ಸತ್ಕರಿಸಲ್ಪಡ ಬಯಸುತ್ತಾರೋ ಅದೇ ರೀತಿ ಇತರರನ್ನು ಸತ್ಕರಿಸುವುದನ್ನು ಕಲ್ಪಿಸಿಕೊಳ್ಳಬಲ್ಲಿರೋ? ಲೋಭರಹಿತ ಲೋಕದ ಗುಣಲಕ್ಷಣಗಳು ಇವೇ. ಎಂತಹ ಲೋಕವು ಅದಾಗಿರುವುದು! ಅದೆಂದಾದರೂ ಬರಲಿದೆಯೇ? ಹೌದು, ಬರಲಿದೆ. ಆದರೆ ಲೋಭವು—ಮಾನವ ಕುಲದಲ್ಲಿ ಅಷ್ಟು ಆಳವಾಗಿ ಬೇರೂರಿರುವಾಗ—ನಿರ್ಮೂಲಗೊಳಿಸಲ್ಪಡುವುದು ಹೇಗೆ?
ಉತ್ತರವನ್ನು ಪಡೆಯಬೇಕಾದರೆ, ಮೊದಲಾಗಿ ನಾವು ಲೋಭದ ಮೂಲವನ್ನು ತಿಳುಕೊಳ್ಳಬೇಕು. ಅದು ಯಾವಾಗಲೂ ಮಾನವ ಜಾತಿಯ ಗುಣಲಕ್ಷಣವಾಗಿರಲಿಲ್ಲ ಎಂದು ಬೈಬಲು ಸೂಚಿಸುತ್ತದೆ. ಲೋಭದಂಥ ಯಾವುದೇ ನ್ಯೂನತೆಯು, ಲೋಭರಹಿತ ನಿರ್ಮಾಣಿಕನ ಪರಿಪೂರ್ಣ ಸೃಷ್ಟಿಯಾದ ಮೊದಲನೆಯ ಮನುಷ್ಯನಲ್ಲಿ ಆರಂಭದಲ್ಲಿ ಕಂಡು ಬರಲಿಲ್ಲವೆಂದು ಮೋಶೆಯು ನಮಗೆ ಜ್ಞಾಪಕ ಕೊಡುತ್ತಾನೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” ಹೀಗಿರಲಾಗಿ, ಲೋಭವು ಬಂದದೆಲ್ಲಿಂದ? ಪ್ರಥಮ ಮಾನವ ಜೊತೆಯು ಸ್ವತಃ ತಮ್ಮಲ್ಲಿ ಅದು ಬೆಳೆಯುವಂತೆ ಮಾಡಿದರು—ಹವ್ವಳು , ದೇವರು ನಿಷೇಧಿಸಿದ ಹಣ್ಣನ್ನು ತಿನ್ನುವುದರಿಂದ ತನಗೇನು ಸಿಗುವುದೋ ಎಂಬ ಅತ್ಯಾಶೆಯ ಮುನ್ನೋಟದಿಂದ, ಮತ್ತು ಆದಾಮನು, ತನ್ನ ಸುಂದರಿಯಾದ ಪತ್ನಿಯನ್ನು ಕಳಕೊಳ್ಳಬಾರದೆಂಬ ದುರಾಶೆಯಿಂದ. ಮೋಶೆಯು ಹೇಳಿದ ಈ ಮಾತುಗಳೂ ಆದಾಮ ಮತ್ತು ಹವ್ವರ ವಿಷಯದಲ್ಲಿ ಸತ್ಯವಾಗಿದ್ದವು: “ಆದರೆ ಅವರು ದ್ರೋಹಿಗಳೇ, ಮಕ್ಕಳಲ್ಲ; ಇದು ಅವರ ದೋಷವು.”—ಧರ್ಮೋಪದೇಶಕಾಂಡ 32:4, 5; 1 ತಿಮೊಥಿ 2:14.
ನೋಹನ ದಿನದ ಲೋಕವ್ಯಾಪಕ ಜಲಪ್ರಲಯದ ಸಮಯದೊಳಗೆ ಲೋಭ ಮತ್ತು ಅತಿಭೋಗವು ಎಷ್ಟರ ಮಟ್ಟಿಗೆ ವೃದ್ಧಿಯಾಗಿತ್ತೆಂದರೆ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿ ಅವರು ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಬರೇ ಕೆಟ್ಟದ್ದಾಗಿತ್ತು.”—ಆದಿಕಾಂಡ 6:5.
ಲೋಭದ ಈ ಪ್ರಧಾನ ಗುಣವು ಮನುಷ್ಯನಲ್ಲಿ ಈ ತನಕವೂ ಮುಂದರಿಯುತ್ತಾ ಬಂದು, ಇಂದಿನ ಕೃತಘ್ನ ಮತ್ತು ದುರಾಶೆಯ ಸಮಾಜದಲ್ಲಿ ತನ್ನ ಶಿಖರವನ್ನೇ ಮುಟ್ಟುವಂತೆ ತೋರುತ್ತಿದೆ.
ಶಿಕ್ಷಣದ ಮೂಲಕ ಲೋಭದ ನಿರ್ಮೂಲನೆ
ಲೋಭವು ಮಾನವರ ನಡುವೆ ಹೇಗೆ ಬೆಳೆದು ಬಂದಿದೆಯೋ ಹಾಗೆ ಅದನ್ನು ವಿಪರ್ಯಸ್ತಗೊಳಿಸಲೂ ಶಕ್ಯವಿದೆ. ದುರಾಶೆಯನ್ನು ಪರಿಹರಿಸ ಸಾಧ್ಯವಿದೆ. ಆದರೂ ಇದು ಸಂಭವಿಸಲು, ಕಟ್ಟುನಿಟ್ಟಿನ ನಿಯಂತ್ರಣಗಳು ಅಥವಾ ನಡಾವಳಿಯ ನಿಯಮಗಳೊಂದಿಗೆ, ಯೋಗ್ಯ ಶಿಕ್ಷಣ ಮತ್ತು ತರಬೇತಿನ ಪಾಲನೆ ಅತ್ಯಾವಶ್ಯಕ. ಇದು ನ್ಯಾಯಸಮ್ಮತವಾಗಿ ತೋರಬಹುದು ಆದರೆ, ಆ ರೀತಿಯ ಶಿಕ್ಷಣವನ್ನು ಒದಗಿಸ ಶಕ್ತರು ಯಾರು ಮತ್ತು ಕಲಿತ ವಿಷಯಗಳನ್ನು ಆಚರಣೆಗೆ ತರಲು—ಅವಶ್ಯವಿದ್ದಲ್ಲಿ ಆಚರಿಸಲೇಬೇಕೆಂದು ವಿಧಿಸಲು ಸಹಾ ಯಾರು ಶಕ್ತರು?
ಅಂಥ ಶಿಕ್ಷಣವು ಸ್ವತಃ ಲೋಭವಿಮುಕ್ತವಾದ ಒಂದು ಮೂಲದಿಂದ ಹೊರಟು ಬರಬೇಕು. ಅಂಥ ತರಬೇತಿಗೆ ಯಾವುದೇ ಗುಪ್ತ ಹೇತುಗಳು ಇಲ್ಲವೇ ಏನಾದರೂ ಪ್ರತಿಫಲದ ಆಶೆಯು ಇರಬಾರದು. ಅಷ್ಟಲ್ಲದೆ, ನಿಸ್ವಾರ್ಥತೆಯ ಮೂಲ್ಯತೆ ಮತ್ತು ವ್ಯಾವಹಾರ್ಯತೆ ಕಲಿಸಲ್ಪಡಬೇಕು ಮತ್ತು ಪ್ರದರ್ಶಿಸಲ್ಪಡಬೇಕು. ಅಂಥ ಜೀವನ ಮಾರ್ಗವು ಶಕ್ಯ ಮಾತ್ರವೇ ಅಲ್ಲ, ಮೆಚ್ಚಿಕೆಯ ಮಾರ್ಗವೂ ಆಗಿದ್ದು ತನಗೂ ಮತ್ತು ತನ್ನ ಸುತ್ತಲಿರುವವರಿಗೂ ಪ್ರಯೋಜನಕರವೂ ಆಗಿದೆಂಬದನ್ನು ಕಲಿಯುವವನಿಗೆ ಮನವರಿಕೆ ಮಾಡಿಕೊಳ್ಳುವ ಅಗತ್ಯವಿದೆ.
ಈ ರೀತಿಯ ಶಿಕ್ಷಣವನ್ನು ಪರಲೋಕದ ದೇವರು ಮಾತ್ರವೇ ಒದಗಿಸಶಕ್ತನು ಯಾಕಂದರೆ ಭೂಮಿಯ ಯಾವ ಮನುಷ್ಯನಿಗೆ ಅಥವಾ ಸಂಸ್ಥೆಗೆ ಯೋಗ್ಯತೆಗಳು ಮತ್ತು ಹಿನ್ನೆಲೆಯು ಇದೆ? ಬೈಬಲಿನ ಈ ಸತ್ಯತೆಯ ಆಧಾರದ ಮೇಲೆ ಮನುಷ್ಯರೆಲ್ಲರೂ ಅದಕ್ಕೆ ಅಯೋಗ್ಯ ರಾಗಿರುತ್ತಾರೆ: “ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.”—ರೋಮಾಪುರ 3:23.
ಸಂತೋಷಕರವಾಗಿಯೇ, ಪರಲೋಕದ ದೇವರಾದ ಯೆಹೋವನು ಅಂಥಾ ಶಿಕ್ಷಣವನ್ನು, ತನ್ನ ಲಿಖಿತ ಪಠ್ಯಪುಸ್ತಕ ಅಥವಾ ಗ್ರಂಥವಾದ ಬೈಬಲಲ್ಲಿ ಒದಗಿಸಿದ್ದಾನೆ. ಆತನ ಪುತ್ರನಾದ ಯೇಸು ಕ್ರಿಸ್ತನು ಭೂಮಿಯಲ್ಲಿ ಮನುಷ್ಯನಾಗಿದ್ದಾಗ ಈ ರೀತಿಯ ಕಲಿಸುವಿಕೆಯ ಪಕ್ಷದಲ್ಲಿ ಸಮರ್ಥನೆ ಮಾಡಿದ್ದನು. ಯೇಸುವಿನ ಪ್ರಖ್ಯಾತ ಪರ್ವತ ಪ್ರಸಂಗದ ನಡುವೆ ಆತನು, ಆಲೈಸುವ ಹೆಚ್ಚಿನವರಿಗೆ ಅಪೂರ್ವವಾಗಿ ಕಂಡ ಒಂದು ಜೀವಿತಕ್ರಮದ ಕುರಿತು ಮಾತಾಡಿದನು ಹೇಗಂದರೆ, ಒಬ್ಬನ ಶತ್ರುಗಳ ಅಥವಾ ವಿರೋಧಕರ ಕಡೆಗೆ ಸಹಾ ನಿಸ್ವಾರ್ಥಭಾವವನ್ನು ಅದು ಸ್ವೀಕರಿಸಿತ್ತು. ಯೇಸು ಅಂದದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ. ನಿಮಗೆ ಪ್ರೀತಿ ತೋರಿಸಿದವರನ್ನೇ ನೀವು ಪ್ರೀತಿಸಿದರೆ ಫಲವೇನು? ಸುಂಕದವರೂ ಹಾಗೆ ಮಾಡುವುದಿಲ್ಲವೇ?”—ಮತ್ತಾಯ 5:44-46.
ಭೂಮಿಯಲ್ಲಿ ಯೇಸುವಿನ ನಿಯೋಗದ ಒಂದು ಅಂಶವು ನಿಸ್ವಾರ್ಥಿಗಳಾದ ಬೋಧಕರನ್ನು ತರಬೇತು ಮಾಡುವುದಾಗಿತ್ತು, ಇದರಿಂದ ಅವರು ಇತರರಿಗೆ ಈ ಲೋಭಮುಕ್ತ ಜೀವನ ಕ್ರಮದಲ್ಲಿ ಶಿಕ್ಷಣವನ್ನು ಕೊಡುವಂತೆ ಸಾಧ್ಯವಾಗುತ್ತಿತ್ತು. ಯೇಸುವಿನ ಮರಣ ಮತ್ತು ಪುನರುತ್ಥಾನದ ಕೆಲವು ಸಮಯದ ನಂತರ ಅಪೊಸ್ತಲ ಪೌಲನು ಅಂಥ ಒಬ್ಬ ಬೋಧಕನಾದನು. ತನ್ನ ಕೆಲವಾರು ಪ್ರೇರಿತ ಬರಹಗಳಲ್ಲಿ ಪೌಲನು, ಲೋಭದ ನಿರ್ಮೂಲನೆಯನ್ನು ಒತ್ತಿ ಹೇಳಿದ್ದನು. ಉದಾಹರಣೆಗೆ ಅವನು, ಎಫೆಸದವರಿಗೆ ಬರೆದದ್ದು: “ಜಾರತ್ವ, ಯಾವ ವಿಧವಾದ ಬಂಡುತನ, ಧನಲೋಭ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು. ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.”—ಎಫೆಸ್ಯ 5:3.
ತದ್ರೀತಿಯಲ್ಲಿ ಇಂದು, ಯೆಹೋವನ ಸಾಕ್ಷಿಗಳು ಲೋಭದ ಪ್ರವೃತ್ತಿಗಳನ್ನು ನಿಯಂತ್ರಿಸುವಂತೆ ಪುರುಷ ಮತ್ತು ಸ್ತ್ರೀಯರಿಗೆ ಕಲಿಸುತ್ತಾ ಇದ್ದಾರೆ. ತಕ್ಕ ಸಮಯದಲ್ಲಿ ಇವರು ಸಹಾ ಹೊರಟು ಹೋಗಿ, ಇತರರಿಗೆ ದೇವರ ಮಾರ್ಗಗಳನ್ನು ಕಲಿಸಲಿಕ್ಕೆ ಯೋಗ್ಯತೆ ಪಡೆಯುತ್ತಾರೆ.
ಬೈಬಲ್ ಸತ್ಯಗಳು ಕ್ರಿಯೆಯಲ್ಲಿ
ಆದರೆ ನೀವು ಕೇಳಬಹುದು: ‘ಅಸಂಪೂರ್ಣ ಜನರು, ಲೋಭದಿಂದ ಬೇರೂರಿರಲಾಗಿ, ತಮ್ಮ ವ್ಯಕ್ತಿತ್ವದಿಂದ ಅದನ್ನು ನಿಜವಾಗಿ ಕಿತ್ತುಹಾಕಶಕ್ತರೋ?’ ಹೌದು, ಶಕ್ತರು. ಸಂಪೂರ್ಣವಾಗಿ ಅಲ್ಲ, ನಿಶ್ಚಯ, ಆದರೆ ಬಹಳಷ್ಟು ಗಮನಾರ್ಹವಾದ ಮಟ್ಟಿಗೆ. ಇದರ ಒಂದು ಉದಾಹರಣೆಯನ್ನು ನಾವು ಗಮನಿಸೋಣ.
ಒಬ್ಬ ಪಕ್ಕಾ ಕಳ್ಳನು ಸ್ಪೈನ್ನಲ್ಲಿ ಜೀವಿಸಿದ್ದನು. ಅವನ ಮನೆ ತುಂಬಾ ಕಳ್ಳ ಸರಕುಗಳಿಂದ ತುಂಬಿತ್ತು. ಅನಂತರ, ಬೈಬಲಭ್ಯಾಸವನ್ನು ಅವನು ಯೆಹೋವನ ಸಾಕ್ಷಿಗಳೊಂದಿಗೆ ಮಾಡತೊಡಗಿದನು. ಫಲಿತಾಂಶವಾಗಿ, ಅವನ ಮನಸ್ಸಾಕ್ಷಿ ಅವನನ್ನು ಕಾಡತೊಡಗಿತು. ಆದ್ದರಿಂದ, ಕದ್ದ ಮಾಲನ್ನು ಅದರ ಮಾಲಿಕರಿಗೆ ಹಿಂತಿರುಗಿಸಲು ಅವನು ನಿರ್ಧರಿಸಿದನು. ಅವನು ತನ್ನ ಮಾಜೀ ಮಾಲಿಕನನ್ನು ಗೋಚರಿಸಿ, ಅವನಿಂದ ಒಂದು ಹೊಸ ವಾಶಿಂಗ್ ಮೆಶಿನ್ ಕದ್ದದ್ದನ್ನು ಅರಿಕೆ ಮಾಡಿಕೊಂಡನು. ಮಾಲಿಕನು ಅವನ ಬದಲಾದ ಸ್ವಭಾವದಿಂದ ಎಷ್ಟು ಪ್ರಭಾವಿತನಾದನೆಂದರೆ, ಪೊಲೀಸರಿಗೆ ತಿಳಿಸದೇ ಇರಲು ನಿರ್ಧರಿಸಿದನು ಮತ್ತು ಮಾಜೀ ಕಳ್ಳ ಬರೇ ವಾಶಿಂಗ್ ಮೆಶಿನ್ನ ಬೆಲೆಯನ್ನು ತೆರುವಂತೆ ಬಿಟ್ಟುಕೊಟ್ಟನು.
ಆ ಮೇಲೆ ಈ ಸುಧಾರಿತ ಕಳ್ಳನು, ತಾನು ಯಾರಿಂದ ಕದ್ದಿದ್ದನೆಂದು ನೆನಪಿತ್ತೋ ಅವರಲ್ಲಿ ಪ್ರತಿಯೊಬ್ಬನನ್ನು ಸಂದರ್ಶಿಸಿ ಕದ್ದ ಮಾಲನ್ನು ಹಿಂದಿರುಗಿಸಲು ನಿಶ್ಚೈಸಿದನು. ಅವನು ಸಂದರ್ಶಿಸಿದ ಪ್ರತಿಯೊಬ್ಬನು, ಬೈಬಲಿನ ತತ್ವವನ್ನು ಅವನು ಅನ್ವಯಿಸಿದ ಕಾರಣದಿಂದ ಅವನಲ್ಲಿ ಆದ ಈ ಮಹಾ ಪರಿವರ್ತನೆಗಾಗಿ ಆಶ್ಚರ್ಯ ವ್ಯಕ್ತ ಪಡಿಸಿದರು.
ಈಗ ಒಂದು ನಿಜವಾದ ತೊಂದರೆಯು ಅವನಿಗೆ ಎದುರಾಯಿತು. ಅವನಲ್ಲಿ ಇನ್ನೂ ಉಳಿದಿದ್ದ ಅನೇಕ ಕಳ್ಳ ಮಾಲುಗಳ ಮಾಲಿಕರು ಯಾರೆಂದು ಅವನಿಗೆ ನೆನಪಿರಲಿಲ್ಲ. ಹೀಗೆ, ಯೆಹೋವನನ್ನು ಪ್ರಾರ್ಥಿಸಿದ ಬಳಿಕ, ಪೊಲೀಸ್ ಮುಖ್ಯ ಕಾರ್ಯಾಲಯಕ್ಕೆ ಅವನು ಹೋಗಿ, ಕಾರುಗಳಿಂದ ತಾನು ಕದ್ದ ಆರು ಸ್ಟೀರಿಯೋ ರೇಡಿಯೋಗಳನ್ನು ಕೊಟ್ಟುಬಿಟ್ಟನು. ಪೊಲೀಸರಿಗೂ ಆಶ್ಚರ್ಯ ಯಾಕಂದರೆ ಅವರಲ್ಲಿದ್ದ ಅವನ ಹಿಂದಣ ಚರಿತ್ರೆ ಕಲೆಯಿಲ್ಲದ್ದಾಗಿತ್ತು. ಅವನು ಬರೇ ಒಂದು ದಂಡವನ್ನು ಕೊಟ್ಟು, ಚಿಕ್ಕ ಅವಧಿಯ ಜೈಲುವಾಸವನ್ನು ಅನುಭವಿಸುವಂತೆ ಅವರು ನಿರ್ಧರಿಸಿದರು.
ಈ ಮಾಜೀ ಕಳ್ಳನು ಈಗ ಶುದ್ಧ ಮನಸ್ಸಾಕ್ಷಿಯವನಾಗಿದ್ದಾನೆ, ದುಷ್ಕರ್ಮ ಮತ್ತು ಲೋಭದ ತನ್ನ ಜೀವಿತವನ್ನು ತ್ಯಜಿಸಿದವನಾಗಿ ಅವನೀಗ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಭೆಯ ಒಂದು ಭಾಗವಾಗಿದ್ದಾನೆ.
ಇಂತಹ ಸಾವಿರಾರು ಉದಾಹರಣೆಗಳನ್ನು ಸುಲಭವಾಗಿಯೇ ಕೊಡ ಸಾಧ್ಯವಿದೆ. ತಮ್ಮ ಜೀವಿತದಲ್ಲಿ ಅಂಥಾ ಬದಲಾವಣೆಗಳನ್ನು ಮಾಡಿದವರು ಭೂನಿವಾಸಿಗಳಲ್ಲಿ ಅಲ್ಪಸಂಖ್ಯಾತರಾಗಿರುವುದಾದರೂ, ಹಾಗೆ ಅನೇಕರು ಮಾಡಿರುವ ನಿಜತ್ವವು ಬೈಬಲ್ ತತ್ವಗಳನ್ನು ತಿಳಿಯುವುದರಿಂದ ಮತ್ತು ಅನ್ವಯಿಸುವುದರಿಂದ ಬರುವ ಸತ್ಕ್ರಿಯಾ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಪ್ರತೀ ವರ್ಷವು ದಾಟಿದಷ್ಟಕ್ಕೆ ಅಧಿಕಾಧಿಕ ಜನರು ಈ ಜೀವಿತ ಮಾರ್ಗವನ್ನು ಅವಲಂಬಿಸುತ್ತಿದ್ದಾರೆ. ಭೂಲೋಕದಲೆಲ್ಲಾ ಈ ಬೈಬಲಿನ ಶಿಕ್ಷಣವು ಯೆಹೋವನ ಸಾಕ್ಷಿಗಳ 60,000ಕ್ಕಿಂತಲೂ ಹೆಚ್ಚು ಸಭೆಗಳಲ್ಲಿ ಕೊಡಲ್ಪಡುತ್ತಾ ಇದೆ. ಸಾಕ್ಷಿಗಳು ಈ ಸಮಯದಲ್ಲಿ ಇಡೀ ಲೋಕವನ್ನೇ ಬದಲಾಯಿಸಲು, ಅದರಲ್ಲಿ ಜೀವಿಸುವ ಕೋಟ್ಯಾಂತರ ಜನರಿಂದ ಲೋಭವನ್ನು ನಿರ್ಮೂಲ ಮಾಡಲು ಅಪೇಕ್ಷಿಸುವುದಿಲ್ಲ. ಆದರೂ, ಈಗ ಬಲು ಬೇಗನೇ, ಲೋಭವಿಮುಕ್ತ ಜೀವನ ಮಾರ್ಗವು ಭೂಮಿಯಾದ್ಯಂತ ನೆಲೆಸಲಿದೆ ಎಂದು ಬೈಬಲ್ ಪ್ರವಾದನೆಯು ಸೂಚಿಸುತ್ತದೆ!
ಲೋಭ-ಮುಕ್ತ ಹೊಸ ಲೋಕ
ಬರಲಿರುವ ಹೊಸ ಲೋಕದಲ್ಲಿ ಲೋಭ ಮತ್ತು ಸ್ವಾರ್ಥತೆಗೆ ಯಾವ ಸ್ಥಳವೂ ಇರಲಾರದು. ನೀತಿಯು, “ನೂತನಾಕಾಶಮಂಡಲ”ದ ಚೊಕ್ಕ ಮುದ್ರೆ ಮಾತ್ರವಲ್ಲ “ನೂತನ ಭೂಮಂಡಲ”ದ್ದೂ ಆಗಿರುವುದೆಂದು ಅಪೊಸ್ತಲ ಪೇತ್ರನು ನಮಗೆ ಆಶ್ವಾಸನೆ ಕೊಡುತ್ತಾನೆ. (2 ಪೇತ್ರ 3:13) ಇಲ್ಲದೆ ಹೋಗುವ “ಮೊದಲಿದ್ದದ್ದೆಲ್ಲವುಗಳಲ್ಲಿ” ಲೋಭವೂ ಕೂಡಿರುವುದು, ಅದರೊಂದಿಗೆ ಅಸೌಖ್ಯ, ದುಃಖ ಮತ್ತು ಮರಣವು ಸಹಾ.—ಪ್ರಕಟನೆ 21:4.
ಆದ ಕಾರಣ, ನಮ್ಮ ಸುತ್ತಲೂ ಕಂಡು ಬರುವ ಲೋಭ ಮತ್ತು ಸ್ವಾರ್ಥಪರ ಜೀವನ ಮಾರ್ಗದ ವೃದ್ಧಿಯಿಂದಾಗಿ ನೀವು ಖೇದಗೊಂಡಿದ್ದರೆ, ಧೈರ್ಯ ತಕ್ಕೊಳ್ಳಿರಿ! ಶೀಘ್ರದಲ್ಲೇ ನಿಜತ್ವವಾಗಲಿರುವ ಹೊಸ ಲೋಕಕ್ಕಾಗಿ ಈಗಲೇ ಜೀವಿಸಲಾರಂಭಿಸಿರಿ. ದೇವರ ಸಹಾಯದಿಂದ, ನಿಮ್ಮ ಸ್ವಂತ ಜೀವಿತದಿಂದ ಲೋಭವನ್ನು ಕಿತ್ತುಹಾಕಲು ಪ್ರಯಾಸಪಡಿರಿ. ಕ್ರೈಸ್ತ ಜೀವನದಿಂದ ಈಗಲೂ ಆನಂದಿಸಲ್ಪಡ ಬಲ್ಲ ಪ್ರಯೋಜನವನ್ನು ಕಾಣಲು ಇತರರಿಗೆ ಸಹಾಯ ಮಾಡುವುದರಲ್ಲಿ ಭಾಗಿಗಳಾಗಿರಿ. ಅತಿ ಶೀಘ್ರದಲ್ಲೇ ಬೇರೆಷ್ಟೋ ಅಹಿತಕಾರಿ ವಿಷಯಗಳೊಂದಿಗೆ ಲೋಭವನ್ನೂ ‘ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು’ ಎಂಬ ಯೆಹೋವ ದೇವರ ವಾಗ್ದಾನದಲ್ಲಿ ನಿಮ್ಮ ನಂಬಿಕೆಯನ್ನು ಮತ್ತು ಭರವಸವನ್ನು ಇಡಿರಿ. (w90 2/15)
[ಪುಟ 5 ರಲ್ಲಿರುವ ಚಿತ್ರ]
ಲೋಭವನ್ನಲ್ಲ, ಬದಲು ನಿಸ್ವಾರ್ಥತೆಯನ್ನು ಪ್ರವರ್ಧಿಸುವ ಒಂದು ಜೀವಿತಕ್ರಮದ ಕುರಿತು ಯೇಸುವು ಮಾತಾಡಿದನು
[ಪುಟ 7 ರಲ್ಲಿರುವ ಚಿತ್ರ]
ಬಲುಬೇಗನೇ—ಲೋಭಮುಕ್ತತೆಯ ಲೋಕ