“ಲೋಭದ ಯುಗ”
ಸಾಮಾನ್ಯ ನೆಗಡಿಯನ್ನು ನಿರ್ಮೂಲಗೊಳಿಸುವುದು ಮನುಷ್ಯನಿಗೆ ಕಷ್ಟವಾಗುವುದಾದರೆ ಅದಕ್ಕಿಂತ ಎಷ್ಟೋ ಹೆಚ್ಚು ಜಟಿಲವಾದ, ಲೋಭದ ವ್ಯಾಧಿಯನ್ನು ಅವನು ಕಿತ್ತುಹಾಕುವ ಬಗೆಯಾದರೂ ಹೇಗೆ?
ಲೋಭ ಮತ್ತು ಸ್ವಾರ್ಥತೆಯನ್ನು ಕಲಿಯಬೇಕೆಂತಲೂ ಇಲ್ಲ—ಬಾಲ್ಯದಿಂದಲೇ ಅವು ಅಲ್ಲಿರುವುದೆಂಬದು ವ್ಯಕ್ತ . ದಟ್ಟಗಾಲಿನ ಇಬ್ಬರು ಮಕ್ಕಳು ತಮ್ಮ ಆಟಿಕೆಗಳೊಂದಿಗೆ ಆಡುವುದನ್ನು ನೋಡಿರಿ ಮತ್ತು ಅಲ್ಲಿ ನೀವದನ್ನು ಕಾಣುವಿರಿ.
ವ್ಯಕ್ತಿಪರ ಮಾನುಷ ಲೋಭ ಸಾಮಾನ್ಯವಾಗಿ ಬೇಕಾದಷ್ಟಿದೆ ಮತ್ತು ಸಾಕಾಗುವಷ್ಟು ಕೆಟ್ಟದ್ದಾಗಿಯೂ ಇದೆ. ಆದರೆ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಹಂತಕ್ಕೆ ಲೋಭವು ಬರುವಾಗ, ಲಕ್ಷಾಂತರ ಜನರಿಗೆ ಹಾನಿ ತಗಲುತ್ತದೆ. ಉದಾಹರಣೆಗೆ, ಅಂತರ್ರಾಷ್ಟ್ರೀಯ ಮಾದಕೌಷಧಿಯನ್ನು ತಕ್ಕೊಳ್ಳಿರಿ. ಇದು ಲೋಕದ ಅತ್ಯಂತ ದೊಡ್ಡ ದಂಧೆ—ಅದು ವರ್ಷಕ್ಕೆ 300 ಸಾವಿರ ಮಿಲಿಯ ಡಾಲರು (ಸುಮಾರು ರೂ.5400 ಕೋಟಿ) ಗಳಷ್ಟದ್ದೆಂದು ಒಂದು ಸ್ಪೇನಿಷ್ ಭಾಷೆಯ ಪತ್ರಿಕೆಯು ವಾದಿಸುತ್ತದೆ. ಲಕ್ಷಾಂತರ ಜನರ ಜೀವನಗಳು ಇದರಿಂದ ಧ್ವಂಸಗೊಂಡಿವೆ, ಮತ್ತು ಅಸಂಖ್ಯಾತ ಮರಣಗಳು ಮಾದಕೌಷಧಿಯ ದುರುಪಯೋಗದಿಂದಾಗಿ ಉಂಟಾಗಿವೆ. ಮಾದಕ ದ್ರವ್ಯದ ಈ ಧಕ್ಕೆಬರಿಸುವ ದಂಧೆಯ ಹಬ್ಬುವಿಕೆಗೆ ಮೂಲ ಕಾರಣ ಯಾವುದು? ನಿಸ್ಸಂಶಯವಾಗಿ, ಲೋಭವೇ.
ವರ್ಲ್ಡ್ ಪ್ರೆಸ್ಸ್ ರಿವ್ಯೂ ಈ ಲೋಭದ ಹೇತುವೇನೆಂದು ಎತ್ತಿಹೇಳುತ್ತದೆ. ಕ್ಯಾಂಬಿಯೋ 16 ಎಂಬ ಮ್ಯಾಡ್ರಿಡ್ ವಾರ್ತಾಪತ್ರಿಕೆಯನ್ನು ಉದ್ಧರಿಸುತ್ತಾ, ಅದು ಅಂದದ್ದು: “ಮಾದಕ ವಸ್ತುಗಳ ವಿಕ್ರಯದಿಂದ ಎಲ್ಲಾ ಲಾಭದ ಬರೇ 10ರಿಂದ 20 ಸೇಕಡಾವು ಉತ್ಪಾದಕ ದೇಶಗಳಿಗೆ ಹೋಗುತ್ತದೆ. ಇನ್ನೊಂದು 10 ಸೇಕಡಾ, ಪ್ರಯೋಗಶಾಲೆಗಳು, ವಾಹನಾದಿಗಳು ಮತ್ತು ಶಸ್ತ್ರಗಳಲ್ಲಿ ಹಣ ಹಾಕುವ ಮೂಲಕ ಸಾಗಣೆಯ ಜಾಲಬಂಧಕ್ಕಾಗಿ ಪುನಃ ಪ್ರಯೋಗಿಸಲ್ಪಡುತ್ತದೆ. . . . ಉಳಿದ ಹಣವು ಗ್ರಾಹಕ ದೇಶಗಳಲ್ಲಿ ಮತ್ತು ಲೋಕದ ಬ್ಯಾಂಕ್‌ಗಳ ತೆರಿಗೆಯಾಶ್ರಯದಲ್ಲಿ ಕೊನೆಮುಟ್ಟುತ್ತದೆ.”
ಕೊರತೆಯೇ ಲೋಭಕ್ಕೆ ಕಾರಣ, ಮತ್ತು ಲೋಭವು ಕೇವಲ ಬಡವರ ಅಥವಾ ಕಡಿಮೆ ಅನುಕೂಲಸ್ಥರ ಪ್ರವೃತ್ತಿ ಮಾತ್ರವೇ ಎಂಬ ನೋಟವನ್ನು ಇದು ಸುಳ್ಳು ಮಾಡುತ್ತದೆ. ಸ್ಫುಟವಾಗಿ, ಲೋಭವು ಇಡೀ ಸಮಾಜದ ಅನುಬಿಂಬವನ್ನು ಒಳಗೂಡಿಸುವ ಸರ್ವವ್ಯಾಪಕ ಮಾನವ ದೌರ್ಬಲ್ಯವಾಗಿದೆ, ನಿಜವಾಗಿ ಯಾವ ಕೊರತೆಯಿಲ್ಲದವರೂ ಇದರಲ್ಲಿ ಸೇರಿರುತ್ತಾರೆ. ಲೋಭದ ಒಂದು ಅತ್ಯಂತ ಸೋಜಿಗದ ಗುಣಲಕ್ಷಣವು ಯಾವುದೆಂದರೆ, ಅದೆಷ್ಟು ಅಗೋಚರವಾಗಿ ಕಾರ್ಯನಡಿಸುತ್ತದೆಂದರೆ—ಸಾಮಾನ್ಯವಾಗಿ ತಮ್ಮ ಜೀವನದ ಪಾಡಿನಲ್ಲಿ ಸಂತೃಪ್ತರಾಗಿರುವ ಜನರು ಸಹಾ, ಅನಿರೀಕ್ಷಿತವಾಗಿ ಸಂದರ್ಭ ಕೊಟ್ಟಲ್ಲಿ, ಲೋಭವನ್ನು ಪ್ರದರ್ಶಿಸುತ್ತಾರೆ.
ಅಂಕಣಗಾರ್ತಿ ಮೆಗ್ಗ್ ಗ್ರೀನ್‌ಫೀಲ್ಡ್ ಪ್ರಲಾಪಿಸಿದ್ದು: “ಯಾವುದೇ ನಿರ್ದಿಷ್ಟ ದಿನದಲ್ಲಿ ನೀವು ವರ್ತಮಾನ ಪತ್ರ ನೋಡಿದರೂ, ನ್ಯಾಯದರ್ಶಿ ಮಹಾ ಮಂಡಲಿಯ ಮತ್ತು ವಿಶೇಷ ಫಿರ್ಯಾದಿ ವಕೀಲರ ಸಂದೇಹಾಸ್ಪದ ಸವಾಲುಗಳು, ಗಡಿಬಿಡಿಗಳು, ಧೂರ್ತತೆಗಳು ಮತ್ತು ಕುತಂತ್ರಗಳ ಕುರಿತು ಓದದಿರಲಾರಿರಿ, ಮತ್ತು ಇವೆಲ್ಲಾ ಅತ್ಯಂತ ಎದೆಗುಂದಿಸುವ ಸಂಗತಿ. ಈ ಆರೋಪಗಳಲ್ಲಿ ಕೆಲವು ಆಧಾರವಿಲ್ಲದವುಗಳು ಮತ್ತು ಊದಲ್ಪಟ್ಟವುಗಳೆಂದು ಗ್ರಾಹ್ಯವಾದರೂ, ಆಗಿಂದಾಗ್ಯೆ ಜನರು ಮಾಡುವ ವಿಷಯಗಳು ಮತ್ತು ತಪ್ಪಿಸಿಕೊಳ್ಳಲು ಬಿಡಲ್ಪಡುವ ವಿಷಯಗಳು, ನನಗೆ ತೋಚುವ ಮೇರೆಗೆ, ಎಂದೂ ನಡೆಯುವಂತೆ ಬಿಡಲೇಬಾರದು. . . . ನಾವು ಬಂದಿರುವುದು ಇಷ್ಟೇ ದೂರ: ನಮ್ಮ ಪರೋಪಕಾರಿ ಬುದ್ಧಿ ಸಹಾ ಸ್ವ-ಪ್ರಯೋಜಕ, ದುರಾಶೆಯುಕ್ತ.”
ಎಷ್ಟು ಸರ್ವವ್ಯಾಪಿ?
ಲೋಭವು ಮಾನವ ಕುಲದಲ್ಲೇನೂ ಹೊಸದಲ್ಲ ಆದರೆ, ಈ 20ನೇ-ಶತಮಾನದ ಜೀವಿತ ಒತ್ತಡಗಳಿಂದಾಗಿ, ನಿಸ್ಸಂಶಯವಾಗಿ ಅದು ಬಹು ಹಬ್ಬಿಹೋಗಿದೆ. ಲೋಭವು ಎಷ್ಟು ಬಹುವ್ಯಾಪಕವಾಗಿ ಹರಡಿದೆಯೆಂದರೆ, ದ ಕ್ರಿಶ್ಚಿಯಾನಿಟಿ ಸೆಂಚುರಿ ಪತ್ರಿಕೆಯ ಸಂಪಾದಕೀಯವು 1980ರ ದಶಕಕ್ಕೆ, 1950ರ “ವ್ಯಾಕುಲತೆಯ ಯುಗ,” ಅಥವಾ 1970ರ “ನನ್ನದೆನ್ನುವ ದಶಕ” ಎಂಬ ಹೆಸರುಗಳಿಗೆ ಒಪ್ಪುವಂಥದೆಂದು ಅದು ನಂಬುವ ಹೆಸರನ್ನು ಕೊಟ್ಟಿದೆ. 1980ರ ದಶಕವನ್ನು “ಲೋಭದ ಯುಗ” ಎಂದು ಅದು ಕರೆದದೆ!
ಇಂದು ಲೋಭವು ಜನರು ಕೂಡಿಬರುವ ಪ್ರತಿಯೊಂದು ಕ್ಷೇತ್ರದಲ್ಲಿ—ಕೆಲಸದ ಸ್ಥಳಗಳಲ್ಲಿ, ಶಾಲೆಗಳಲ್ಲಿ, ಸಮಾಜದ ಜನಸಮುದಾಯಗಳಲ್ಲಿ ಅದು ಕಂಡು ಬರುತ್ತದೆ. ಅದು ತನ್ನ ಭ್ರಷ್ಟ ಪ್ರಭಾವಗಳನ್ನು ವಾಣಿಜ್ಯದೊಳಗೆ, ರಾಜಕೀಯದೊಳಗೆ ಮತ್ತು ಲೋಕದ ಪ್ರಮುಖ ಧರ್ಮಗಳೊಳಗೂ ಹಾಕಿರುತ್ತದೆ.
ಲೋಭವು ಎಷ್ಟೋ ಸಲ ವಿಧಿವಿರುದ್ಧ ಭ್ರಷ್ಟಾಚಾರ ಮತ್ತು ವಂಚನೆಗಳಾಗಿಯೂ ವಿಕಸನಗೊಳ್ಳುತ್ತದೆ. ದ ಕ್ಯಾನ್ಬೆರಾ ಟೈಮ್ಸ್, ಉದಾಹರಣೆಗಾಗಿ, ಕಾರ್-ಇನ್ಶೂರೆನ್ಸ್ ವಂಚನೆಯಲ್ಲಿ ಲೋಕದಲ್ಲೇ ಮೊದಲ ಸ್ಥಾನದ ಕುಖ್ಯಾತಿಯನ್ನು ಆಸ್ಟ್ರೇಲಿಯಕ್ಕೆ ಕೊಡಲಾಗಿದೆ. ಆಸ್ಟ್ರೇಲಿಯದ ಲಾ ಸೊಸೈಟಿ ಜರ್ನಲ್ ಇದನ್ನು ಬೆಂಬಲಿಸುವಂತೆ ತೋರುತ್ತಾ, ಅಂದದ್ದು: “ವಿಮೇದಾರ ವ್ಯಕ್ತಿಗಳಿಂದ ಮಾಡಲ್ಪಟ್ಟ ಮೋಸದ ಹಕ್ಕುಬಾಧ್ಯತೆ ⁄ ಹೇಳಿಕೆಗಳು ಇನ್ಶೂರೆನ್ಸ್ ಕಂಪೆನಿಗಳಿಗೆ, ಮತ್ತು ಅಪರೋಕ್ಷವಾಗಿ ವಿಮೇದಾರರಿಗೆ ಪ್ರತಿ ವರ್ಷ ಮಿಲ್ಯಾಂತರ ಡಾಲರುಗಳಷ್ಟು ವೆಚ್ಚವನ್ನು ಮಾಡಿಸುತ್ತದೆ.” ಪತ್ರಿಕೆಯು ಮತ್ತೂ ಹೇಳಿದ್ದು: “ಇದು ವೃದ್ಧಿಯಾಗುತ್ತಾ ಇರುವ ಒಂದು ಗಂಭೀರ ಸಮಸ್ಯೆಯು; ವಿಶಿಷ್ಟವಾಗಿ, ದುರುದ್ದೇಶದಿಂದ ಬೆಂಕಿ ಹಚ್ಚುವುದು, ಬಂದರಕಟ್ಟೆಯ ಲೂಟಿ, ವಾಹನ ಮತ್ತು ಮನೇ ಸಾಮಾನುಗಳ ವಿಮೆಯ ವಿಷಯದಲ್ಲಿ.”
ಆದ್ದರಿಂದ, ಲೋಭವು ಎಂದಾದರೂ ನಿರ್ಮೂಲಗೊಳ್ಳುವುದೋ ಎಂಬ ವಿಷಯದಲ್ಲಿ ಅನೇಕರು ಚೇಷ್ಟೆಮಾಡುವುದನ್ನು ನಾವು ಅರ್ಥೈಸುವುದು ಸುಲಭ. ಲೋಭವು ಯಾವಾಗಲೂ ನಮ್ಮೊಂದಿಗಿರುವುದು ಮತ್ತು ಲೋಭಮುಕ್ತ ಲೋಕವು ಕೇವಲ ಒಂದು ಅಸಾಧ್ಯ ಕನಸು ಎಂದೇ ಅವರ ಅನಿಸಿಕೆ.
ಲೋಭವು ನಿರ್ಮೂಲಿಸಲ್ಪಡಲಿದೆ
ಮೇಲಿನ ಅಸಂಭಾವ್ಯವಾಗಿ ತೋರುವ ಕಂಠೋಕ್ತಿಯನ್ನು ಮಾಡುವುದು ಯಾವ ಆಧಾರದ ಮೇಲೆ? ಲೋಭಮುಕ್ತ ಜೀವಿತವು ಈವಾಗಲೇ ಕಾರ್ಯಸಿದ್ಧಿಯಾಗಿದೆ ಎಂಬ ನಿಜತ್ವದ ಮೇಲೆಯೇ ಅದು ಆಧರಿಸಿದೆ. ಈ ಕಾರ್ಯಸಿದ್ಧಿಯು ಪರಿಪೂರ್ಣವಲ್ಲದೇ ಇದ್ದರೂ, ಯೋಗ್ಯ ಶಿಕ್ಷಣ ಮತ್ತು ಪ್ರೇರೇಪಣೆಯೊಂದಿಗೆ ಏನೆಲ್ಲಾ ಮಾಡ ಸಾಧ್ಯವಿದೆಂದು ಅದು ತೋರಿಸುತ್ತದೆ. ಲೋಭರಹಿತವಾದ ಒಂದು ಇಡೀ ಲೋಕವೇ ಹೇಗೆ ಇರಬಲ್ಲದೆಂಬದನ್ನು ನಮ್ಮ ಮುಂದಿನ ಲೇಖನವು ತೋರಿಸುವುದು. (g90 2/15)