ಯೆಹೋವನ ದಿನಕ್ಕಾಗಿ ಸಿದ್ಧರಾಗಿರ್ರಿ!
1 ಥೆಸಲೊನೀಕದವರಿಗೆ ಪತ್ರಿಕೆಯ ಮುಖ್ಯಾಂಶಗಳು
ಯೆಹೋವನ ದಿನ! ಅದು ತೀರಾ ಸಮೀಪವಾಗಿತ್ತೆಂದು ಪುರಾತನ ಥೆಸಲೊನೀಕದ ಕ್ರೈಸ್ತರು ನೆನಸಿದ್ದರು. ಅವರು ನೆನಸಿದ್ದು ಸರಿಯೋ? ಅದು ಯಾವಾಗ ಬರಲಿತ್ತು? ಅಪೊಸ್ತಲ ಪೌಲನು ಥೆಸಲೊನೀಕದವರಿಗೆ ಬರೆದ ಮೊದಲ ಪತ್ರದಲ್ಲಿ ಅದೊಂದು ಪ್ರಾಮುಖ್ಯ ವಿಷಯವಾಗಿತ್ತು. ಆ ಪತ್ರವನ್ನು ನಮ್ಮ ಸಾಮಾನ್ಯ ಶಕದ ಸುಮಾರು 50 ನೇ ವರ್ಷದಲ್ಲಿ ಕೊರಿಂಥದಿಂದ ಕಳುಹಿಸಲಾಯಿತು.
ಥೆಸಲೊನೀಕದ ಸಭೆಯನ್ನು ಸ್ಥಾಪಿಸಿದವರು ಪೌಲ ಮತ್ತು ಸೀಲರು, ರೋಮೀಯ ಪ್ರಾಂತ್ಯವಾದ ಮಕೆದೋನ್ಯದ ಮೇಲ್ವಿಚಾರಕ ಪೀಠವು ಅದಾಗಿತ್ತು. (ಅಪೊಸ್ತಲರ ಕೃತ್ಯ 17:1-4) ತದನಂತರ, ಥೆಸಲೊನೀಕದವರಿಗೆ ತನ್ನ ಮೊದಲ ಪತ್ರದಲ್ಲಿ ಪೌಲನು ಪ್ರಶಂಸೆಯನ್ನು ನೀಡಿದನು, ಉಪದೇಶವನ್ನು ಕೊಟ್ಟನು ಮತ್ತು ಯೆಹೋವನ ದಿನವನ್ನು ಚರ್ಚಿಸಿದನು. ನಾವು ಸಹಾ ಈ ಪತ್ರದಿಂದ ಪ್ರಯೋಜನ ಪಡೆಯಬಹುದು, ವಿಶೇಷವಾಗಿ ಯೆಹೋವನ ದಿನವು ಇಷ್ಟು ಹತ್ತಿರವಿರಲಾಗಿ.
ಪ್ರಶಂಸಿಸು ಮತ್ತು ಪ್ರೋತ್ಸಾಹಿಸು
ಪೌಲನು ಮೊದಲಾಗಿ, ಥೆಸಲೊನೀಕದವರನ್ನು ಪ್ರಶಂಸಿಸಿದನು. (1:1-10) ಅವರ ನಂಬಿಗಸ್ತ ಕೆಲಸಕ್ಕಾಗಿ ಮತ್ತು ತಾಳ್ಮೆಗಾಗಿ ಪ್ರಶಂಸೆಯು ಸಲ್ಲಬೇಕಿತ್ತು. ಅವರು “ಬಹಳ ಹಿಂಸೆಯನ್ನು ಅನುಭವಿಸ ಬೇಕಾಗಿದ್ದರೂ ಪವಿತ್ರಾತ್ಮನಿಂದ ಉಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿದ್ದು” ಸಹಾ ಪ್ರಶಂಸನೀಯವೇ ಆಗಿತ್ತು. ಪೌಲನು ಮಾಡಿದಂತೆ, ನೀವೂ ಇತರರನ್ನು ಪ್ರಶಂಸಿಸುತ್ತೀರೋ?
ಅಪೊಸ್ತಲನು ಒಂದು ಒಳ್ಳೇ ಮಾದರಿಯನ್ನಿಟ್ಟಿದ್ದನು. (2:1-12) ಫಿಲಿಪ್ಪಿಯಲ್ಲಿ ದೊರೆತ ಅವಮಾನಕರ ಉಪಚಾರದ ನಡುವೆಯೂ ಪೌಲನು, ‘ದೇವರ ಮೂಲಕ ಧೈರ್ಯಗೊಂಡು ಸುವಾರ್ತೆಯನ್ನು’ ಥೆಸಲೊನೀಕದವರಿಗೆ ಕೊಟ್ಟಿದ್ದನು. ಮುಖಸ್ತುತಿ, ದ್ರವ್ಯಾಶೆ ಮತ್ತು ಮನುಷ್ಯರು ಕೊಡುವ ಮಾನವನ್ನು ಅವನು ವಿಸರ್ಜಿಸಿದ್ದನು. ಬಹು ವೆಚ್ಚದ ಹೊರೆಯಾಗಿರದೆ, ತಾಯಿ ತನ್ನ ಮೊಲೆಗೂಸಿನೊಂದಿಗೆ ಹೇಗೋ ಹಾಗೆಯೇ ಅವರೊಂದಿಗೆ ವಾತ್ಸಲ್ಯದಿಂದ ನಡೆದಿದ್ದನು. ಇದು ಇಂದಿನ ಹಿರಿಯರಿಗೆ ಎಂತಹ ಉತ್ತಮ ಮಾದರಿಯು!
ಪೌಲನ ಮುಂದಿನ ಮಾತುಗಳು ಹಿಂಸೆಯಲ್ಲಿ ದೃಢರಾಗಿ ನಿಲ್ಲುವಂತೆ ಥೆಸಲೊನೀಕದವರನ್ನು ಪ್ರೋತ್ಸಾಹಿಸಿತ್ತು. (2:13–3:13) ತಮ್ಮ ಸ್ವದೇಶದವರಿಂದ ಅವರು ಹಿಂಸೆಯನ್ನು ತಾಳಿ ಕೊಂಡಿದ್ದರು, ಮತ್ತು ಅವರ ಆತ್ಮಿಕ ಪರಿಸ್ಥಿತಿಯ ಒಳ್ಳೇ ವರದಿಯನ್ನು ತಿಮೊಥಿಯು ಪೌಲನಿಗೆ ತಿಳಿಸಿದ್ದನು. ಅವರು ಪ್ರೀತಿಯಲ್ಲಿ ಅತ್ಯಧಿಕವಾಗುವಂತೆಯೂ ಹೃದಯಗಳನ್ನು ದೃಢ ಪಡಿಸುವಂತೆಯೂ ಅಪೊಸ್ತಲನು ಪ್ರಾರ್ಥಿಸಿದ್ದನು. ತದ್ರೀತಿಯಲ್ಲಿ ಇಂದು ಯೆಹೋವನ ಸಾಕ್ಷಿಗಳು ಹಿಂಸೆಗೊಳಗಾದ ತಮ್ಮ ಜೊತೆ ವಿಶ್ವಾಸಿಗಳಿಗಾಗಿ ಪ್ರಾರ್ಥಿಸುತ್ತಾರೆ, ಸಾಧ್ಯವಾದಲ್ಲಿ ಪ್ರೋತ್ಸಾಹನೆ ಕೊಡುತ್ತಾರೆ ಮತ್ತು ಅವರ ನಂಬಿಗಸ್ತಿಕೆಯ ವರದಿಗಳಲ್ಲಿ ಆನಂದಿಸುತ್ತಾರೆ.
ಆತ್ಮಿಕವಾಗಿ ಎಚ್ಚರವಾಗಿರುವುದು
ಅನಂತರ ಥೆಸಲೊನೀಕದವರಿಗೆ ಸೂಚನೆಯು ದೊರೆಯುತ್ತದೆ. (4:1-18) ಅವರು ದೇವರಿಗೆ ಮೆಚ್ಚಿಕೆಯಾದ ಮಾರ್ಗದಲ್ಲಿ ಹೆಚ್ಚು ಪೂರ್ಣವಾಗಿ ನಡೆಯಬೇಕಿತ್ತು, ಹೆಚ್ಚು ಸಹೋದರ ಪ್ರೀತಿಯನ್ನು ತೋರಿಸಬೇಕಿತ್ತು, ಕೈಯಾರೆ ಕೆಲಸ ಮಾಡಿ ತಮ್ಮನ್ನು ಪೋಷಿಸಿಕೊಳ್ಳಬೇಕಿತ್ತು. ಅದಲ್ಲದೆ, ಆತ್ಮಾಭಿಷಿಕ್ತರಲ್ಲಿ ಮೃತರಾಗಿದ್ದವರು ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಮೊದಲಾಗಿ ಎದ್ದು ಬಂದು ಅತನೊಂದಿಗೆ ಐಕ್ಯವಾಗುವರೆಂಬ ನಿರೀಕ್ಷೆಯಿಂದ ಅವರು ಒಬ್ಬರನ್ನೊಬ್ಬರು ಸಂತೈಸಬೇಕಿತ್ತು. ತದನಂತರ, ಉಳಿದಿರುವ ಅಭಿಷಿಕ್ತ ಜನರು ತಮ್ಮ ಮರಣ ಮತ್ತು ಪುನರುತ್ಥಾನದ ಸಮಯದಲ್ಲಿ, ಕ್ರಿಸ್ತನೊಂದಿಗೆ ಮತ್ತು ಸ್ವರ್ಗೀಯ ಜೀವಿತಕ್ಕೆ ಈ ಮೊದಲೇ ಉತಾನ್ಥವಾದವರೊಂದಿಗೆ ಜತೆಗೂಡಲಿದ್ದರು.
ಅನಂತರ ಪೌಲನು, ಯೆಹೋವನ ದಿನವನ್ನು ಚರ್ಚಿಸುತ್ತಾನೆ ಮತ್ತು ಅಧಿಕ ಸೂಚನೆಯನ್ನು ಕೊಡುತ್ತಾನೆ. (5:1-28) ಯೆಹೋವನ ದಿನವು ಕಳ್ಳನಂತೆ ಬರುವುದು, “ಸಮಾಧಾನ ಮತ್ತು ನಿರ್ಭಯ” ಎಂಬ ಘೋಷಣೆಯಾಗುವಾಗಲೇ ನಿಶ್ಚಿತ ನಾಶನವು ಫಕ್ಕನೇ ಬರುವದು ! ಆದ್ದರಿಂದ ಥೆಸಲೊನೀಕದವರು ಆತ್ಮಿಕವಾಗಿ ಎಚ್ಚರವಾಗಿ ಇರಬೇಕಿತ್ತು, ವಿಶ್ವಾಸ ಪ್ರೀತಿಗಳೆಂಬ ಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನು ಭದ್ರತೆಗಾಗಿ ಧರಿಸ ಬೇಕಿತ್ತು. ತಮ್ಮ ಸಭೆಯಲ್ಲಿ ಮುಖ್ಯಸ್ಥರಾಗಿ ಇರುವವರಿಗೆ ಆಳವಾದ ಗೌರವವನ್ನು ತೋರಿಸ ಬೇಕಿತ್ತು ಮತ್ತು ಕೆಟ್ಟತನವನ್ನು ವಿಸರ್ಜಿಸ ಬೇಕಿತ್ತು, ನಾವು ಸಹಾ ಹಾಗೆ ಮಾಡಲೇ ಬೇಕು.
ಥೆಸಲೊನೀಕದವರಿಗೆ ಪೌಲನು ಬರೆದ ಮೊದಲನೆಯ ಪತ್ರಿಕೆಯು ನಮ್ಮ ಜೊತೆ ಕ್ರೈಸ್ತರಿಗೆ ಪ್ರಶಂಸೆ ಮತ್ತು ಪ್ರೋತ್ಸಾಹನೆ ಕೊಡುವಂತೆ ನಮ್ಮನ್ನು ಪ್ರೇರೇಪಿಸ ಬೇಕು. ನಡವಳಿಕೆ ಮತ್ತು ಮನೋಭಾವದಲ್ಲೂ ಆದರ್ಶರಾಗಿರುವಂತೆ ಅದು ನಮ್ಮನ್ನು ಪ್ರಚೋದಿಸ ಬೇಕು. ಮತ್ತು ನಿಶ್ಚಯವಾಗಿಯೂ ಅದರ ಸೂಚನೆಯು ಯೆಹೋವನ ದಿನಕ್ಕಾಗಿ ಸಿದ್ಧರಾಗಿ ಇರುವಂತೆ ನಮಗೆ ಸಹಾಯ ಮಾಡಬಲ್ಲದು. (w91 1/15)
[ಪುಟ 31 ರಲ್ಲಿರುವ ಚೌಕ/ಚಿತ್ರಗಳು]
ಕವಚ ಮತ್ತು ಶಿರಸ್ತ್ರಾಣ: ಆತ್ಮಿಕ ಎಚ್ಚರವನ್ನು ಪ್ರೇರಿಸುತ್ತಾ ಪೌಲನು ಬರೆದದ್ದು: “ವಿಶ್ವಾಸ ಪ್ರೀತಿಗಳೆಂಬ ಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.” (1 ಥೆಸಲೊನೀಕದವರಿಗೆ 5:8) ಕವಚವು ಯೋಧನ ಎದೆಯನ್ನು ರಕ್ಷಿಸುವ ಆಯುಧ. ಪಟ್ಟಿಗಳು, ಸರಪಣಿಗಳು ಅಥವಾ ಪೂರ್ತಿ ಲೋಹದಿಂದ ಅದು ಕೂಡಿರುತ್ತದೆ. ತದ್ರೀತಿಯಲ್ಲಿ ನಂಬಿಕೆಯ ಕವಚವು, ನಮ್ಮನ್ನು ಆತ್ಮಿಕವಾಗಿ ರಕ್ಷಿಸುತ್ತದೆ. ಮತ್ತು ಪುರಾತನ ಶಿರಸ್ತ್ರಾಣದ ಕುರಿತೇನು? ಹೆಚ್ಚಾಗಿ ಲೋಹದಿಂದ ಮಾಡಲ್ಪಟ್ಟಿದ್ದು ಯುದ್ಧದ ಸಮಯದಲ್ಲಿ ಸೈನಿಕನನ್ನು ರಕ್ಷಿಸುವುದಕ್ಕಾಗಿರುವ ಮಿಲಿಟರಿ ಟೋಪಿಯದು. ಶಿರಸ್ತ್ರಾಣವು ಯೋಧನ ತಲೆಯನ್ನು ರಕ್ಷಿಸುತ್ತದೆ. ಹಾಗೆಯೇ ರಕ್ಷಣೆಯ ನಿರೀಕ್ಷೆಯು ಮಾನಸಿಕ ಶಕ್ತಿಯನ್ನು ಕಾಪಾಡಿ, ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಕ್ರೈಸ್ತನಿಗೆ ನೆರವಾಗುತ್ತದೆ. ಯೆಹೋವನ ಜನರು ಇಂಥಾ ಆತ್ಮಿಕ ಶಸ್ತ್ರಗಳನ್ನು ಧರಿಸುವದೆಷ್ಟು ಆವಶ್ಯವು!—ಎಫೆಸದವರಿಗೆ 6:11-17.