“ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೂಳ್ಳಬೇಡಿರಿ”
2 ಥೆಸಲೊನೀಕದವರಿಗೆ ಪತ್ರದಿಂದ ಮುಖ್ಯಾಂಶಗಳು
ಮಕೆದೋನ್ಯ ಪಟ್ಟಣವಾದ ಥೆಸಲೊನೀಕದಲ್ಲಿದ್ದ ಕ್ರೈಸ್ತರೆಡೆಗೆ ಅಪೊಸ್ತಲ ಪೌಲನಿಗಿದ್ದ ಚಿಂತೆಯು ತನ್ನ ಎರಡನೆಯ ಪತ್ರವನ್ನು ಸಾ. ಶ. 51 ರ ಸುಮಾರಿಗೆ ಅವರಿಗೆ ಬರೆಯುವಂತೆ ಪ್ರೇರೇಪಿಸಿತು. ಸಭೆಯಲ್ಲಿನ ಕೆಲವರು ಯೇಸು ಕ್ರಿಸ್ತನ ಸಾನಿಧ್ಯವು ಆಗಲೇ ಹತ್ತಿರವಿದೆಯೆಂದು ತಪ್ಪಾಗಿ ಹೇಳುತ್ತಿದ್ದರು. ಪೌಲನಿಗೆ ತಪ್ಪಾಗಿ ನಿರ್ದೇಶಿಸಲ್ಪಟ್ಟ ಒಂದು ಪತ್ರಕ್ಕೂ ಪ್ರಾಯಶಃ ಸೂಚಿಸಿ, “ಯೆಹೋವನ ದಿನವು ಈಗಲೇ ಹತ್ತಿರವಾಯಿತು” ಎಂದವರು ತಪ್ಪರ್ಥಮಾಡಿರಬಹುದು.—2 ಥೆಸಲೊನೀಕದವರಿಗೆ 2:1, 2.
ಆದುದರಿಂದ, ಥೆಸಲೊನೀಕದವರಲ್ಲಿ ಕೆಲವರ ವಿಚಾರಗಳನ್ನು ಸರಿಹೊಂದಿಸಿ ಕೊಳ್ಳುವ ಅಗತ್ಯವಿತ್ತು. ಎರಡನೆಯ ಪತ್ರದಲ್ಲಿ ಪೌಲನು ಅವರ ನಂಬಿಕೆಯ ಅಭಿವೃದ್ಧಿಗಾಗಿ, ಪ್ರೀತಿಯ ಹೆಚ್ಚುವಿಕೆಗಾಗಿ ಮತ್ತು ನಂಬಿಗಸ್ತ ತಾಳ್ಮೆಗಾಗಿ ಹೊಗಳುತ್ತಾನೆ. ಆದರೆ ಕ್ರಿಸ್ತನ ಸಾನಿಧ್ಯಕ್ಕೆ ಮುಂಚಿತವಾಗಿ ಮತಭ್ರಷ್ಟತೆಯು ಬರುವದೆಂದೂ ಅವನು ತೋರಿಸಿದನು. ಆದ್ದರಿಂದ, ಕಷ್ಟದ ಸಮಯಗಳು ಮುಂದಿದ್ದವು ಮತ್ತು ಅಪೊಸ್ತಲನ ಪತ್ರವು ಆತನ ಈ ಉಪದೇಶವನ್ನು ಪಾಲಿಸುವಂತೆ ಅವರಿಗೆ ಸಹಾಯ ಮಾಡುವುದು: “ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.” (2 ಥೆಸಲೊನೀಕದವರಿಗೆ 3:13) ಅದೇ ರೀತಿಯಲ್ಲಿ ಪೌಲನ ಪತ್ರವು ನಮಗೂ ಸಹಾಯ ಮಾಡಬಲ್ಲದು.
ಕ್ರಿಸ್ತನ ಪ್ರಕಟನೆ ಮತ್ತು ಸಾನಿಧ್ಯ
ಆ ಸಂಕಟಕ್ಕೆ ದೊರೆಯುವ ಉಪಶಮನದ ಕುರಿತು ಪೌಲನು ಮೊದಲು ಮಾತಾಡುತ್ತಾನೆ. (1:1-12) ಇದು, ‘ಯೇಸು ಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಪ್ರತ್ಯಕ್ಷನಾಗುವ ಕಾಲದಲ್ಲಿ’ ಬರುವುದು. ಸುವಾರ್ತೆಗೆ ಒಳಪಡದವರ ಮೇಲೆ ಆಗ ನಿತ್ಯ ನಾಶನವನ್ನು ತರಲಾಗುವುದು. ಹಿಂಸಕರ ಕೈಯಿಂದ ಸಂಕಟವನ್ನು ಅನುಭವಿಸುವಾಗ ನಾವು ಇದನ್ನು ಜ್ಞಾಪಿಸುವುದು ಸಾಂತ್ವನಕರವಾಗಿದೆ.
ಅನಂತರ ಪೌಲನು, ಕ್ರಿಸ್ತನ ಸಾನಿಧ್ಯಕ್ಕೆ ಮುಂಚೆ “ಅಧರ್ಮ ಸ್ವರೂಪನು” ಬೈಲಿಗೆ ಬರುವನು ಎಂದು ಹೇಳುತ್ತಾನೆ. (2:1-17) “ಯೆಹೋವನ ದಿನವು ಈಗಲೇ ಹತ್ತಿರವಾಯಿತು” ಎಂದು ಸೂಚಿಸುವ ಯಾವುದೇ ಸಂದೇಶದಿಂದ ಥೆಸಲೊನೀಕದವರು ಕಳವಳಗೊಳ್ಳಬಾರದಿತ್ತು. ಮೊದಲು, ಮತಭ್ರಷ್ಟತೆಯು ಉಂಟಾಗುವುದು ಮತ್ತು ಆ ಮೇಲೆ ಅಧರ್ಮ ಪುರುಷನು ಬೈಲಿಗೆ ಬರುವನು. ತದನಂತರ, ಯೇಸು ತನ್ನ ಪ್ರತ್ಯಕ್ಷತೆಯ ಸಮಯದಲ್ಲಿ ಅವನನ್ನು ತೆಗೆದು ಹಾಕುವನು. ಆ ನಡುವೆ ದೇವರು ಮತ್ತು ಕ್ರಿಸ್ತನು ಥೆಸಲೊನೀಕದವರ ಹೃದಯಗಳನ್ನು ಸಂತೈಸಿ ‘ಸಕಲ ಸತ್ಕಾರ್ಯದಲ್ಲಿ ಮತ್ತು ಸ್ವದ್ಯಾಕದಲ್ಲಿ ದೃಢ ಪಡಿಸುವಂತೆ’ ಪೌಲನು ಪ್ರಾರ್ಥಿಸುತ್ತಾನೆ.
ಅಕ್ರಮವಾಗಿರುವವರೊಂದಿಗೆ ವ್ಯವಹರಿಸುವುದು
ಪೌಲನ ಮುಂದಿನ ಮಾತುಗಳಲ್ಲಿ, ಅಕ್ರಮವಾಗಿ ನಡೆಯುವವರನ್ನು ಕ್ರಮಪಡಿಸುವ ಸೂಚನೆಗಳು ಒಳಗೂಡಿವೆ. (3:1-18) ಕರ್ತನು ಥೆಸಲೊನೀಕರನ್ನು ಬಲಪಡಿಸುವನು, ಕೆಡುಕನಾದ ಪಿಶಾಚ ಸೈತಾನನ ಕೈಗೆ ಸಿಕ್ಕದಂತೆ ಕಾಪಾಡುವನು ಎಂಬ ಭರವಸವನ್ನು ಪೌಲನು ವ್ಯಕ್ತಪಡಿಸುತ್ತಾನೆ. ಆದರೆ ಅವರು ತಮ್ಮ ಸ್ವಂತ ಆತ್ಮಿಕ ಪ್ರಯೋಜನಕ್ಕಾಗಿ ಕಾರ್ಯನಡಿಸಬೇಕಿತ್ತು. ಅಕ್ರಮವಾಗಿ ನಡೆಯುವವರೊಂದಿಗೆ, ಇತರರ ಕೆಲಸದಲ್ಲಿ ತಲೆಹಾಕುವವರೊಂದಿಗೆ ಮತ್ತು ಕೆಲಸ ಮಾಡಲೊಲ್ಲದವರೊಂದಿಗೆ ಸೇರದೆ ದೂರವಿರಬೇಕಿತ್ತು. “ಕೆಲಸ ಮಾಡಲೊಲ್ಲದವನು ಊಟ ಮಾಡಲೂ ಬಾರದು” ಎಂದನು ಪೌಲನು. ಅಂಥವರ ಗುರುತು ಇಟ್ಟು ಕೊಳ್ಳಬೇಕಿತ್ತು, ಅವರಿಗೆ ಸಹೋದರರೆಂಬ ಭಾವದಿಂದ ಬುದ್ಧಿ ಹೇಳಬೇಕಾದಾಗ್ಯೂ ಅವರೊಂದಿಗೆ ಯಾವ ಸಹವಾಸವನ್ನೂ ಮಾಡಬಾರದಿತ್ತು. ನಂಬಿಗಸ್ತ ಥೆಸಲೊನೀಕದವರು ಒಳ್ಳೇದನ್ನು ಮಾಡುವುದನ್ನು ಬಿಡಬಾರದಿತ್ತು, ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಯು ಅವರೆಲ್ಲರ ಸಂಗಡ ಇರುವಂತೆ ಪೌಲನು ಯಾಚಿಸಿದನು.
ಪೌಲನು ಥೆಸಲೊನೀಕದವರಿಗೆ ಬರೆದ ಎರಡನೆಯ ಪತ್ರವು ಯೆಹೋವನ ಸಾಕ್ಷಿಗಳಿಗೆ ಆಶ್ವಾಸನೆ ಕೊಡುತ್ತದೆ ಏನಂದರೆ ಅವರ ಸಂಕಟಗಳಿಗೆ ಉಪಶಮನವು, ಕ್ರಿಸ್ತನು ತನ್ನ ದೇವದೂತರೊಂದಿಗೆ ಸುವಾರ್ತೆಗೆ ಒಳಗಾಗದವರಿಗೆ ಪ್ರತೀಕಾರವನ್ನು ಸಲ್ಲಿಸಲು ಬರುವಾಗ ದೊರೆಯಲಿದೆ ಎಂಬದಾಗಿ. “ಅಧರ್ಮ ಪುರುಷನು” (ಕ್ರೈಸ್ತ ಪ್ರಪಂಚದ ಪಾದ್ರಿ ವರ್ಗ) ಮತ್ತು ಎಲ್ಲಾ ಸುಳ್ಳು ಧರ್ಮ ಬೇಗನೇ ಅಂತ್ಯಗೊಳ್ಳುವದೆಂದು ತಿಳಿಯುವದೂ ನಮ್ಮ ನಂಬಿಕೆಯನ್ನು ಬಲ ಪಡಿಸುತ್ತದೆ. ಈ ಮಧ್ಯೆ, ನಾವು ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರುವಂತೆ ಪೌಲನು ಕೊಟ್ಟ ಉಪದೇಶವನ್ನು ಪಾಲಿಸುತ್ತಾ ಇರೋಣ. (w91 1/15)
[ಪುಟ 32 ರಲ್ಲಿರುವ ಚೌಕ/ಚಿತ್ರಗಳು]
ಯೆಹೋವನ ವಾಕ್ಯವು ಬೇಗನೇ ಹಬ್ಬುವುದು: “ನಮಗೋಸ್ಕರ ಪ್ರಾರ್ಥನೆ ಮಾಡಿರಿ. ಯೆಹೋವನ ವಾಕ್ಯವು ನಿಮ್ಮಲ್ಲಿ ಹಬ್ಬಿದ ಪ್ರಕಾರ ಎಲ್ಲೆಲ್ಲಿಯೂ ಬೇಗನೇ ಹಬ್ಬಿ [ಅಥವಾ “ಓಡುವಂತೆ”] ಮತ್ತು ಮಹಿಮೆ ಹೊಂದುವ ಹಾಗೆ ಪ್ರಾರ್ಥಿಸಿರಿ.” ಎಂದು ಪೌಲನು ಬರೆದನು.( 2 ಥೆಸಲೊನೀಕದವರಿಗೆ 3:1; ಕಿಂಗ್ಡಂ ಇಂಟರ್ಲಿನಿಯರ್) ಇಲ್ಲಿ ಅಪೊಸ್ತಲನು ಓಟದಲ್ಲಿ ಓಡುವವರು ವೇಗವಾಗಿ ಚಲಿಸುವುದರ ಕುರಿತು ಹೇಳುತ್ತಾನೆಂದು ಕೆಲವು ಪಂಡಿತರು ಸೂಚಿಸುತ್ತಾರೆ. ಅದು ಅನಿಶ್ಚಿತವಾಗಿದ್ದರೂ, ಥೆಸಲೊನೀಕದ ಕ್ರೈಸ್ತರ ಪ್ರಾರ್ಥನೆಗಾಗಿ ಪೌಲನು ವಿನಂತಿಸಿದ್ದು ತಾನೂ ತನ್ನ ಜತೆ ಸೇವಕರೂ ಸತ್ಯವಾಕ್ಯವನ್ನು ಜರೂರಿಯಿಂದ ಮತ್ತು ತಡೆಯಿಲ್ಲದೆ ಹಬ್ಬಿಸುವಂತೆಯೇ. ದೇವರು ಅಂಥ ಪ್ರಾರ್ಥನೆಯನ್ನು ಲಾಲಿಸುತ್ತಾನಾದ್ದರಿಂದ, ಈ ಕಡೇ ದಿನಗಳಲ್ಲಿ ಸುವಾರ್ತೆಯಾಗಿ ಜರೂರಿಯಿಂದ ಸಾರಲ್ಪಡುತ್ತಿರುವ ಆತನ ವಾಕ್ಯವು “ಬೇಗನೇ ಹಬ್ಬುತ್ತಾ” ಇದೆ. ಯೆಹೋವನ ವಾಕ್ಯವು “ಮಹಿಮೆ ಹೊಂದು”ತ್ತಲೂ ಇದೆ ಹೇಗಂದರೆ “ರಕ್ಷಣೆಗಾಗಿ ದೇವರ ಬಲಸ್ವರೂಪ”ವಾಗಿರುವ ಅದು, ವಿಶ್ವಾಸಿಗಳಿಂದ ಗೌರವಿಸಲ್ಪಡುತ್ತದೆ, ಅದನ್ನು ಸ್ವೀಕರಿಸಿದ್ದ ಥೆಸಲೊನೀಕದವರು ಮಾಡಿದ ಹಾಗೆಯೇ. (ರೋಮಾಪುರದವರಿಗೆ 1:16; 1 ಥೆಸಲೊನೀಕದವರಿಗೆ 2:13) ದೇವರು ರಾಜ್ಯ ಘೋಷಕರನ್ನು ಆಶೀರ್ವದಿಸಿ ತನ್ನ ಆರಾಧಕರ ಸಾಲನ್ನು ವೇಗವಾಗಿ ವೃದ್ಧಿಸುತ್ತಿರುವುದಕ್ಕಾಗಿ ನಾವೆಷ್ಟು ಸಂತೋಷಿತರು !—ಯೆಶಾಯ 60:22.