ಸಂತೋಷವಾಗಿ ಕೊಡುವವರನ್ನುಯೆಹೋವನು ಪ್ರೀತಿಸುತ್ತಾನೆ
“ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ಅನಿಚ್ಛೆಯಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂಥ 97.
1. ದೇವರು ಮತ್ತು ಕ್ರಿಸ್ತನು ಹೇಗೆ ಸಂತೋಷವಾಗಿ ಕೊಡುವವರಾಗಿದ್ದರು?
ಸಂತೋಷವಾಗಿ ಕೊಟ್ಟವರಲ್ಲಿ ಯೆಹೋವನು ಮೊದಲಿಗನು. ಆತನು ಸಂತೋಷದಿಂದ ತನ್ನ ಏಕ-ಜಾತ ಪುತ್ರನಿಗೆ ಜೀವವನ್ನು ಕೊಟ್ಟನು ಮತ್ತು ದೇವದೂತರನ್ನು ಮತ್ತು ಮಾನವರನ್ನು ಅಸ್ತಿತ್ವಕ್ಕೆ ತರಲು ಆತನನ್ನು ಉಪಯೋಗಿಸಿದನು. (ಜ್ಞಾನೋಕ್ತಿ 8:30, 31; ಕೊಲೊಸ್ಸೆ 1:13-17) ದೇವರು ನಮಗೆ ಜೀವ, ಶ್ವಾಸ ಮತ್ತು ಸಕಲವನ್ನು ಕೊಟ್ಟಿದ್ದಾನೆ, ಆಕಾಶದಿಂದ ಮಳೆಯನ್ನೂ ಫಲಸಂಪನ್ನ ಋತುಗಳನ್ನೂ ಒದಗಿಸಿ ನಮ್ಮ ಹೃದಯಗಳನ್ನು ಆನಂದಪಡಿಸಿದ್ದಾನೆ. (ಅಪೊಸ್ತಲರ ಕೃತ್ಯಗಳು 14:17; 17:25) ನಿಶ್ಚಯವಾಗಿ, ದೇವರು ಮತ್ತು ಆತನ ಪುತ್ರನು ಇಬ್ಬರೂ ಸಂತೋಷವಾಗಿ ಕೊಡುವವರು. ನಿಸ್ವಾರ್ಥ ಭಾವದೊಂದಿಗೆ ಆನಂದದಿಂದ ಅವರು ಕೊಡುತ್ತಾರೆ. ಯೆಹೋವನು ಮಾನವ ಕುಲದ ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು “ತನ್ನ ಏಕಜಾತ ಪುತ್ರನನ್ನು ಕೊಟ್ಟನು ಯಾಕಂದರೆ ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯುವಂತೆಯೇ.” ಮತ್ತು ಯೇಸು ಇಷ್ಟಾಪೂರ್ವಕವಾಗಿ ‘ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಟ್ಟನು.’—ಯೋಹಾನ 3:16; ಮತ್ತಾಯ 20:28.
2. ಪೌಲನಿಗೆ ಅನುಸಾರವಾಗಿ, ಯಾವ ರೀತಿಯ ದಾನಿಯನ್ನು ದೇವರು ಪ್ರೀತಿಸುತ್ತಾನೆ?
2 ಆದುದರಿಂದ, ದೇವರ ಮತ್ತು ಕ್ರಿಸ್ತನ ಸೇವಕರು ಸಂತೋಷವಾಗಿ ಕೊಡುವವರಾಗಿರಬೇಕು. ಅಂಥ ಕೊಡುವಿಕೆಯು ಅಪೊಸ್ತಲ ಪೌಲನು ಕೊರಿಂಥದ ಕ್ರೈಸ್ತರಿಗೆ ಬರೆದ ಎರಡನೆಯ ಪತ್ರದಲ್ಲಿ ಪ್ರೋತ್ಸಾಹಿಸಲ್ಪಟ್ಟಿದೆ, ಅದು ಸಾ.ಶ. 55ರ ಸುಮಾರಿಗೆ ಬರೆಯಲ್ಪಟ್ಟಿತ್ತು. ಯೆರೂಸಲೇಮ್ ಮತ್ತು ಯೂದಾಯದ ಬಡ ಕ್ರೈಸ್ತರಿಗೆ ವಿಶೇಷವಾಗಿ ಸಹಾಯ ನೀಡಲು ಮಾಡಲ್ಪಟ್ಟ ಸ್ವಯಂಪ್ರೇರಿತ ಮತ್ತು ಖಾಸಗೀ ದಾನಗಳಿಗೆ ವ್ಯಕ್ತವಾಗಿ ನಿರ್ದೇಶಿಸುತ್ತಾ, ಪೌಲನು ಅಂದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ಅನಿಚ್ಛೆಯಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” (2 ಕೊರಿಂಥ 9:7, NW; ರೋಮಾಪುರ 15:26; 1 ಕೊರಿಂಥ 16:1, 2; ಗಲಾತ್ಯ 2:10) ಕೊಡುವ ಸಂದರ್ಭಗಳಿಗೆ ದೇವ ಜನರು ಹೇಗೆ ಪ್ರತಿಕ್ರಿಯೆ ತೋರಿಸಿದ್ದಾರೆ? ಮತ್ತು ಕೊಡುವ ವಿಷಯವಾಗಿ ಪೌಲನು ಕೊಟ್ಟ ಸೂಚನೆಯಿಂದ ನಾವೇನನ್ನು ಕಲಿಯಬಲ್ಲೆವು?
ಸಿದ್ಧಹೃದಯದಿಂದ ಪ್ರಚೋದಿಸಲ್ಪಟ್ಟು
3. ಯೆಹೋವನ ಆರಾಧನೆಗಾಗಿ ಗುಡಾರ ಕಟ್ಟುವಿಕೆಯನ್ನು ಇಸ್ರಾಯೇಲ್ಯರು ಎಷ್ಟರ ಮಟ್ಟಿಗೆ ಬೆಂಬಲಿಸಿದ್ದರು?
3 ದೈವಿಕ ಉದ್ದೇಶಕ್ಕಾಗಿ ಬೆಂಬಲದಲ್ಲಿ ತಮ್ಮನ್ನೂ ತಮ್ಮ ಸಾಧನ ಸಂಪತ್ತನ್ನೂ ಕೊಡುವಂತೆ ದೇವರ ಜನರನ್ನು ಅವರ ಸಿದ್ಧ ಹೃದಯಗಳು ಪ್ರಚೋದಿಸುತ್ತವೆ. ದೃಷ್ಟಾಂತಕ್ಕಾಗಿ, ಮೋಶೆಯ ದಿನಗಳ ಇಸ್ರಾಯೇಲ್ಯರು ಯೆಹೋವನ ಆರಾಧನೆಗಾಗಿ ಗುಡಾರ ಕಟ್ಟುವಿಕೆಯನ್ನು ಸಂತೋಷದಿಂದ ಬೆಂಬಲಿಸಿದರು. ಕೆಲವು ಹೆಂಗಸರ ಹೃದಯಗಳು ಆಡಿನ ಕೂದಲುಗಳನ್ನು ನೂತು ತಂದುಕೊಡುವಂತೆ ಅವರನ್ನು ಪ್ರೇರಿಸಿದಾಗ, ಇತರ ಗಂಡಸರಾದರೋ ಕುಶಲಕರ್ಮಿಗಳಾಗಿ ಕೆಲಸ ಮಾಡಿದ್ದರು. ಜನರು ಸಂತೋಷದಿಂದ ಚಿನ್ನ, ಬೆಳ್ಳಿ, ಮರ ಮತ್ತು ನಾರುಬಟ್ಟೆಗೆಳನ್ನು ಮತ್ತು ಇತರ ವಸ್ತುಗಳನ್ನು “ಯೆಹೋವನಿಗೆ ಕಾಣಿಕೆಯಾಗಿ” ಸ್ವಯಂಪ್ರೇರಿತರಾಗಿ ತಂದರು. (ವಿಮೋಚನಕಾಂಡ 35:4-35) ಅವರೆಷ್ಟು ಔದಾರ್ಯದಿಂದ ಕೊಟ್ಟರೆಂದರೆ “ಕೆಲಸವನ್ನೆಲ್ಲಾ ಮಾಡುವದಕ್ಕೆ ಸಾಕಾಗುವದಕ್ಕಿಂತ ಹೆಚ್ಚಾದ” ಸಾಮಗ್ರಿಗಳು ಒಟ್ಟಾದವು.—ವಿಮೋಚನಕಾಂಡ 36:4-7.
4. ದಾವೀದನು ಮತ್ತು ಇತರರು ಯಾವ ಮನೋಭಾವದಿಂದ ಆಲಯಕ್ಕಾಗಿ ಕಾಣಿಕೆಕೊಟ್ಟರು?
4 ಶತಮಾನಗಳ ಅನಂತರ ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಂದ ಕಟ್ಟಲ್ಪಡಲಿದ್ದ ಆಲಯಕ್ಕಾಗಿ ಬಹಳಷ್ಟು ದಾನವನ್ನು ಮಾಡಿದ್ದನು. ದಾವೀದನು ‘ದೇವರ ಆಲಯದಲ್ಲಿ ಆನಂದ’ ಪಟ್ಟನಾದ್ದರಿಂದ ಅವನು ತನ್ನ “ಸ್ವಂತ ಸೊತ್ತಿನಿಂದ” ಬಂಗಾರ ಮತ್ತು ಬೆಳ್ಳಿಯನ್ನು ಕೊಟ್ಟನು. ಅಧಿಪತಿಗಳು, ಪ್ರಧಾನರು ಮತ್ತು ಇತರರು ‘ಉದಾರಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನು’ ಅರ್ಪಿಸಿದರು. ಯಾವ ಫಲಿತಾಂಶದೊಂದಿಗೆ? “ಅವರು ಪೂರ್ಣ ಹೃದಯದಿಂದಲೂ ಸ್ವೇಚ್ಛೆಯಿಂದಲೂ ಯೆಹೋವನಿಗೆ ಕಾಣಿಕೆ ಕೊಟ್ಟದ್ದಕ್ಕಾಗಿ ಜನರೆಲ್ಲರೂ ಸಂತೋಷಪಟ್ಟರು.” (1 ಪೂರ್ವಕಾಲ 29:3-9) ಅವರು ಸಂತೋಷವಾಗಿ ಕೊಟ್ಟವರಾಗಿದ್ದರು.
5. ಇಸ್ರಾಯೇಲ್ಯರು ಶತಮಾನಗಳಿಂದ ಸತ್ಯಾರಾಧನೆಯನ್ನು ಬೆಂಬಲಿಸಿದ್ದು ಹೇಗೆ?
5 ಶತಮಾನಗಳಿಂದ ಇಸ್ರಾಯೇಲ್ಯರಿಗೆ ಗುಡಾರವನ್ನು, ಅನಂತರ ಆಲಯಗಳನ್ನು ಮತ್ತು ಅಲ್ಲಿನ ಯಾಜಕ ಸೇವೆ ಮತ್ತು ಲೇವ್ಯ ಸೇವೆಗಳನ್ನು ಬೆಂಬಲಿಸುವ ಸುಯೋಗವು ಇತ್ತು. ದೃಷ್ಟಾಂತಕ್ಕಾಗಿ, ನೆಹೆಮೀಯನ ದಿನಗಳಲ್ಲಿ ಯೆಹೂದ್ಯರು ಶುದ್ಧಾರಾಧನೆಯನ್ನು ಕಾಪಾಡಿಕೊಳ್ಳಲು ಕಾಣಿಕೆಗಳನ್ನು ಕೊಡುವ ನಿರ್ಧಾರವನ್ನು ಮಾಡಿದ್ದರು, ದೇವರ ಆಲಯವನ್ನು ಅಲಕ್ಷಿಸಬಾರದು ಎಂಬ ಅರಿವು ಅವರಿಗಿತ್ತು. (ನೆಹೆಮೀಯ 10:32-39) ಅದೇ ರೀತಿ ಇಂದು, ಕೂಟದ ಸ್ಥಳಗಳನ್ನು ಕಟ್ಟಲು ಮತ್ತು ದುರುಸ್ತಿಯಲಿಡ್ಲಲು ಮತ್ತು ಸತ್ಯಾರಾಧನೆಗೆ ಬೆಂಬಲ ಕೊಡಲು ಯೆಹೋವನ ಸಾಕ್ಷಿಗಳು ಸಂತೋಷದಿಂದ ಸ್ವಯಂಪ್ರೇರಿತ ದಾನಗಳನ್ನು ಕೊಡುತ್ತಾರೆ.
6. ಕ್ರೈಸ್ತರಿಂದ ಸಂತೋಷವಾಗಿ ಕೊಡುವಿಕೆಯ ಉದಾಹರಣೆಗಳನ್ನು ತಿಳಿಸಿರಿ.
6 ಆರಂಭದ ಕ್ರೈಸ್ತರು ಸಂತೋಷದಿಂದ ಕೊಡುವವರಾಗಿದ್ದರು. ದೃಷ್ಟಾಂತಕ್ಕಾಗಿ, ಗಾಯನು ರಾಜ್ಯದ ಅಭಿರುಚಿಗಳಿಗಾಗಿ ಸಂಚಾರ ಮಾಡುತ್ತಿದ್ದವರಿಗೆ ಸತ್ಕಾರವನ್ನು ಮಾಡುವದರಲ್ಲಿ “ನಂಬುವವನಿಗೆ ಯೋಗ್ಯವಾಗಿ” ನಡೆದಿದ್ದನು, ಇಂದು ವಾಚ್ ಟವರ್ ಬೈಬಲ್ ಮತ್ತು ಟ್ರ್ಯಾಕ್ಟ್ ಸೊಸೈಟಿಯಿಂದ ಕಳುಹಿಸಲ್ಪಡುವ ಸಂಚಾರ ಮೇಲ್ವಿಚಾರಕರಿಗೆ ಯೆಹೋವನ ಸಾಕ್ಷಿಗಳು ಅತಿಥಿಸತ್ಕಾರವನ್ನು ತೋರಿಸುವ ಹಾಗೆಯೇ. (3 ಯೋಹಾನ 5-8) ಈ ಸಹೋದರರಿಗೆ ಸಭೆಗಳಿಗೆ ಪ್ರಯಾಣಿಸಲು ಮತ್ತು ಅವರಿಗೆ ಅತಿಥಿಸತ್ಕಾರವನ್ನು ನೀಡಲು ಏನಾದರೂ ಖರ್ಚು ಮಾಡಲಿದೆ, ಆದರೆ ಇದು ಆತ್ಮಿಕವಾಗಿ ಎಷ್ಟು ಪ್ರಯೋಜನಕಾರಿಯು!—ರೋಮಾಪುರ 1:11, 12.
7. ಫಿಲಿಪ್ಪಿಯವರು ತಮ್ಮ ಭೌತಿಕ ಸಂಪತ್ತುಗಳನ್ನು ಹೇಗೆ ಉಪಯೋಗಿಸಿದರು?
7 ರಾಜ್ಯದ ಅಭಿರುಚಿಗಳ ಪ್ರವರ್ಧನೆಗಾಗಿ ಇಡೀ ಸಭೆಗಳು ತಮ್ಮ ಸಾಧನ ಸಂಪತ್ತನ್ನು ಉಪಯೋಗಿಸಿವೆ. ಉದಾಹರಣೆಗೆ, ಪೌಲನು ಫಿಲಿಪ್ಪಿಯ ವಿಶ್ವಾಸಿಗಳಿಗೆ ಅಂದದ್ದು: “ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಕೊಟ್ಟುಕಳುಹಿಸಿದಿರಲ್ಲಾ. ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವದಿಲ್ಲ; ನಿಮ್ಮ ಆತ್ಮಕ್ಕೆ ಆದಾಯವಾಗುವಂಥ ಪ್ರೀತಿಫಲವನ್ನೇ ಅಪೇಕ್ಷಿಸುತ್ತೇನೆ.” (ಫಿಲಿಪ್ಪಿ 4:15-17) ಫಿಲಿಪ್ಪಿಯವರು ಸಂತೋಷದಿಂದ ಕೊಟ್ಟರು, ಅದರೆ ಅಂಥಾ ಸಂತೋಷವಾಗಿ ಕೊಡುವುದನ್ನು ಯಾವ ವಿಷಯಗಳು ಪ್ರೇರೇಪಿಸುತ್ತವೆ?
ಸಂತೋಷವಾಗಿ ಕೊಡುವುದನ್ನು ಪ್ರೇರೇಪಿಸುವುದು ಯಾವುದು?
8. ಸಂತೋಷವಾಗಿ ಕೊಡುವವರಾಗುವಂತೆ ದೇವರ ಆತ್ಮವು ಆತನ ಜನರನ್ನು ಪ್ರೇರೇಪಿಸುತ್ತದೆಂಬದನ್ನು ನೀವು ಹೇಗೆ ರುಜುಪಡಿಸುವಿರಿ?
8 ಯೆಹೋವನ ಪವಿತ್ರ ಆತ್ಮ ಅಥವಾ ಕ್ರಿಯಾಶೀಲ ಶಕ್ತಿಯು, ದೇವ ಜನರನ್ನು ಸಂತೋಷದಿಂದ ಕೊಡುವಂತೆ ಪ್ರೇರೇಪಿಸುತ್ತದೆ. ಯೂದಾಯದ ಕ್ರೈಸ್ತರು ಕೊರತೆಯಲ್ಲಿದ್ದಾಗ, ಅವರಿಗೆ ಐಹಿಕ ಸಹಾಯವನ್ನು ಕೊಡುವಂತೆ ದೇವರ ಆತ್ಮವು ಇತರ ವಿಶ್ವಾಸಿಗಳನ್ನು ಪ್ರೇರೇಪಿಸಿತು. ಅಂಥ ದಾನಗಳನ್ನು ಮಾಡುವುದಕ್ಕೆ ತಮ್ಮ ಕೈಲಾದದ್ದನ್ನು ಮಾಡುವಂತೆ ಕೊರಿಂಥದ ಕ್ರೈಸ್ತರನ್ನು ಉತ್ತೇಜಿಸಲು ಮಕೆದೋನ್ಯ ಸಭೆಗಳ ಒಂದು ದೃಷ್ಟಾಂತವನ್ನು ಪೌಲನು ಕೊಟ್ಟನು. ಮಕೆದೋನ್ಯದ ವಿಶ್ವಾಸಿಗಳು ಹಿಂಸೆ ಮತ್ತು ಬಡತನವನ್ನು ಅನುಭವಿಸುತ್ತಿದ್ದರೂ, ಅವರು ನಿಜ ಶಕ್ತಿಗೆ ಮೀರಿ ಕೊಟ್ಟದ್ದರ ಮೂಲಕ ತಮ್ಮ ಸಹೋದರ ಪ್ರೀತಿಯನ್ನು ತೋರಿಸಿದ್ದರು. ಕೊಡುವ ಸುಯೋಗಕ್ಕಾಗಿ ಅವರು ಬೇಡಿಕೊಂಡರು ಸಹಾ! (2 ಕೊರಿಂಥ 8:1-5) ಧನಿಕರ ದಾನಗಳ ಮೇಲೆ ಮಾತ್ರವೇ ದೇವರ ಕಾರ್ಯವು ಆತುಕೊಂಡಿರುವುದಿಲ್ಲ. (ಯಾಕೋಬ 2:5) ಐಹಿಕವಾಗಿ ಬಡವರಾದ ಆತನ ಸಮರ್ಪಿತ ಸೇವಕರು ರಾಜ್ಯ-ಸಾರುವಿಕೆಯ ಕಾರ್ಯಕ್ಕೆ ಆರ್ಥಿಕ ಸಹಾಯದಲ್ಲಿ ಯಾವಾಗಲೂ ಮುಖ್ಯಾಧಾರವಾಗಿದ್ದವರು. (ಮತ್ತಾಯ 24:14) ಆದರೂ, ತಮ್ಮ ಔದಾರ್ಯದ ನಿಮಿತ್ತವಾಗಿ ಅವರು ಬಾಧೆಪಡುವುದಿಲ್ಲ, ಯಾಕಂದರೆ ದೇವರು ಈ ಕಾರ್ಯಗಳಲ್ಲಿ ತನ್ನ ಜನರ ಕೊರತೆಗಳನ್ನು ತಪ್ಪದೆ ಒದಗಿಸಿಕೊಡುತ್ತಾನೆ, ಮತ್ತು ಅದರ ನಿರಂತರತೆ ಮತ್ತು ಅಭಿವೃದ್ಧಿಯ ಹಿಂದಿರುವ ಶಕ್ತಿಯು ಆತನ ಆತ್ಮವೇ.
9. ಸಂತೋಷವಾಗಿ ಕೊಡುವುದಕ್ಕೆ ನಂಬಿಕೆ, ಜ್ಞಾನ ಮತ್ತು ಪ್ರೀತಿಯು ಹೇಗೆ ಸಂಬಂಧಿತವಾಗಿದೆ?
9 ಸಂತೋಷವಾಗಿ ಕೊಡುವಿಕೆಯು ನಂಬಿಕೆ, ಜ್ಞಾನ ಮತ್ತು ಪ್ರೀತಿಯಿಂದ ಪ್ರೇರೇಪಿಸಲ್ಪಡುತ್ತದೆ. ಪೌಲನು ಅಂದದ್ದು: “ನೀವು [ಕೊರಿಂಥದವರು] ದೇವರ ಮೇಲಣ ನಂಬಿಕೆ ವಾಕ್ಜಾತುರ್ಯ ಜ್ಞಾನ ಸಕಲವಿಧವಾದ ಆಸಕ್ತಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿ ಇವೇ ಮೊದಲಾದ ಎಲ್ಲಾ ವಿಷಯಗಳಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯ (ಕೊಡುವಿಕೆ, NW) ದಲ್ಲಿಯೂ ಸಮೃದ್ಧರಾಗಿರ್ರಿ.” (2 ಕೊರಿಂಥ 8:7, 8) ಯೆಹೋವನ ಕಾರ್ಯಕ್ಕಾಗಿ ದಾನ ಕೊಡುವುದು, ವಿಶೇಷವಾಗಿ ದಾನಿಗೆ ಸೀಮಿತ ಅನುಕೂಲತೆ ಇರುವಾಗ ಕೊಡುವಿಕೆಯು, ಯೆಹೋವನ ಭವಿಷ್ಯತ್ತಿನ ಒದಗಿಸುವಿಕೆಗಳಲ್ಲಿ ನಂಬಿಕೆಯನ್ನು ಆವಶ್ಯಪಡಿಸುತ್ತದೆ. ಜ್ಞಾನದಲ್ಲಿ ಸಮೃದ್ಧರಾದ ಕ್ರೈಸ್ತರು ಯೆಹೋವನ ಉದ್ದೇಶವನ್ನು ಸೇವಿಸ ಬಯಸುತ್ತಾರೆ, ಮತ್ತು ಯಾರು ಆತನಿಗಾಗಿ ಮತ್ತು ಆತನ ಜನರಿಗಾಗಿ ಪ್ರೀತಿಯಲ್ಲಿ ಸಮೃದ್ಧರೋ ಅವರು ತಮ್ಮ ಸಾಧನ ಸಂಪತ್ತುಗಳನ್ನು ಆತನ ಕಾರ್ಯದ ವೃದ್ಧಿಗಾಗಿ ಸಂತೋಷದಿಂದ ಉಪಯೋಗಿಸುತ್ತಾರೆ.
10. ಯೇಸುವಿನ ಮಾದರಿಯು ಕ್ರೈಸ್ತರನ್ನು ಸಂತೋಷವಾಗಿ ಕೊಡುವಂತೆ ಪ್ರೇರೇಪಿಸುತ್ತದೆಂದು ಏಕೆ ಹೇಳಬಹುದು?
10 ಯೇಸುವಿನ ಮಾದರಿಯು ಸಂತೋಷವಾಗಿ ಕೊಡುವಂತೆ ಕ್ರೈಸ್ತರನ್ನು ಪ್ರೇರೇಪಿಸುತ್ತದೆ. ಪ್ರೀತಿಯಿಂದ ಕೊಡುವಂತೆ ಕ್ರೈಸ್ತರನ್ನು ಹುರಿದುಂಬಿಸಿದ ಬಳಿಕ, ಪೌಲನು ಅಂದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವುದರಿಂದ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು.” (2 ಕೊರಿಂಥ 8:9) ಪರಲೋಕದಲ್ಲಿ ಬೇರೆ ಯಾವುದೇ ದೇವ ಪುತ್ರನಿಗಿಂತ ಅಧಿಕ ಐಶ್ವರ್ಯವಂತನಾಗಿದ್ದ ಯೇಸುವು, ಅವೆಲ್ಲವನ್ನು ತನ್ನಿಂದ ಬರಿದು ಮಾಡಿಸಿಕೊಂಡು ಮಾನವ ಜೀವನವನ್ನು ತಕ್ಕೊಂಡನು. (ಫಿಲಿಪ್ಪಿ 2:5-8) ಈ ನಿಸ್ವಾರ್ಥ ರೀತಿಯಲ್ಲಿ ಬಡವನಾದ ಮೂಲಕ ಯೇಸುವು ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ಸಹಾಯ ಮಾಡಿದನು ಮತ್ತು ತನ್ನ ಜೀವವನ್ನು ವಿಮೋಚನಾ ಯಜ್ಞವಾಗಿ ಅರ್ಪಿಸಿ, ಅದನ್ನು ಸ್ವೀಕರಿಸುವವರೆಲ್ಲರ ಪ್ರಯೋಜನಾರ್ಥವಾಗಿ ಕೊಟ್ಟನು. ಯೇಸುವಿನ ಈ ಮಾದರಿಯಲ್ಲಿ, ನಾವೂ ಸಂತೋಷದಿಂದ ಇತರರ ಸಹಾಯಕ್ಕಾಗಿ ದಾನ ಮಾಡಬಾರದೇ ಮತ್ತು ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ನೆರವಾಗಬಾರದೇ?
11, 12. ಒಳ್ಳೇ ಯೋಜನೆ ಮಾಡುವಿಕೆಯು ನಮ್ಮನ್ನು ಸಂತೋಷದಿಂದ ಕೊಡುವವರಾಗಿ ಮಾಡಬಲ್ಲದು ಹೇಗೆ?
11 ಒಳ್ಳೇ ಯೋಜನೆಯು ಸಂತೋಷವಾಗಿ ಕೊಡುವುದನ್ನು ಶಕ್ಯವಾಗಿ ಮಾಡುತ್ತದೆ. ಪೌಲನು ಕೊರಿಂಥದವರಿಗೆ ಹೇಳಿದ್ದು: “ನಾನು ಬಂದಾಗ ಹಣ ವಸೂಲು ಮಾಡಬೇಕಾದ ಅವಶ್ಯವಾಗದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು.” (1 ಕೊರಿಂಥ 16:1, 2) ಹೀಗೆ ಒಂದು ಖಾಸಗಿ ಮತ್ತು ಸ್ವಯಂಪ್ರೇರಿತ ರೀತಿಯಲ್ಲಿ, ರಾಜ್ಯ ಕಾರ್ಯದ ವರ್ಧನೆಗಾಗಿ ಇಂದು ದಾನಕೊಡಲಿಚ್ಛಿಸುವವರು ತಮ್ಮ ಸಂಪಾದನೆಯಲ್ಲಿ ಸ್ವಲ್ಪವನ್ನು ಆ ಉದ್ದೇಶಕ್ಕಾಗಿ ಬದಿಗಿಡುವುದು ಒಳ್ಳೆಯದು. ಅಂಥ ಒಳ್ಳೇ ಯೋಜನೆಯಿಂದಾಗಿ, ಸಾಕ್ಷಿಗಳು ವೈಯಕ್ತಿಕವಾಗಿ, ಕುಟುಂಬವಾಗಿ ಮತ್ತು ಸಭೆಗಳಾಗಿ ಸತ್ಯಾರಾಧನೆಯ ಪ್ರವರ್ಧನೆಗಾಗಿ ದಾನಗಳನ್ನು ನೀಡಬಲ್ಲರು.
12 ದಾನಕೊಡಲು ಯೋಜನೆಗಳನ್ನು ನಡೆಸುವುದು ನಮ್ಮನ್ನು ಸಂತೋಷಿತರನ್ನಾಗಿ ಮಾಡುವುದು. ಯೇಸುವಂದಂತೆ, “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅಪೊಸ್ತಲರ ಕೃತ್ಯಗಳು 20:35) ಹೀಗೆ ಕೊರಿಂಥದವರು ಯೆರೂಸಲೇಮಿಗೆ ಹಣಸಹಾಯ ಕಳುಹಿಸುವ ತಮ್ಮ ವಾರ್ಷಿಕ-ಯೋಜನೆಯನ್ನು ನಿರ್ವಹಿಸಲು ಪೌಲನ ಸೂಚನೆಯನ್ನು ಪಾಲಿಸುವ ಮೂಲಕ ಸಂತೋಷವನ್ನು ಹೆಚ್ಚಿಸ ಸಾಧ್ಯವಿತ್ತು. “ಅವನು ತನ್ನಲ್ಲಿ ಇರುವುದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು,” ಎಂದನವನು. ಒಬ್ಬನು ತನ್ನಲ್ಲಿ ಇರುವುದಕ್ಕೆ ಅನುಸಾರವಾಗಿ ಕೊಟ್ಟರೆ, ಅದನ್ನು ಬಹು ಬೆಲೆಯುಳ್ಳದ್ದಾಗಿ ಎಣಿಸಬೇಕು. ನಾವು ದೇವರಲ್ಲಿ ಭರವಸವಿಟ್ಟಲ್ಲಿ, ಯಾರಲ್ಲಿ ಹೆಚ್ಚಿದೆಯೇ ಅವರು ದುಂದುಮಾಡದೆ ಅಧಿಕ ಔದಾರ್ಯವುಳ್ಳವರಾಗುವಂತೆ, ಮತ್ತು ಯಾರಲ್ಲಿ ಕೊಂಚವೇ ಇದೆಯೇ ಅವರು ಆತನ ಸೇವೆಯಲ್ಲಿ ತಮ್ಮ ಬಲವನ್ನು ಮತ್ತು ಸಾಮರ್ಥ್ಯವನ್ನು ಕಡಿಮೆಗೊಳಿಸುವ ಕೊರತೆಗಳಿಗೆ ಗುರಿಯಾಗದಂತೆ ಆತನು ವಿಷಯಗಳನ್ನು ಸಮೀಕರಿಸುವನು.—2 ಕೊರಿಂಥ 8:10-15.
ಕೊಡುವಿಕೆಯ ಜೋಕೆಯ ನಿರ್ವಹಣೆ
13. ದಾನಗಳ ಮೇಲೆ ಪೌಲನ ಮೇಲ್ವಿಚಾರಣೆಯಲ್ಲಿ ಕೊರಿಂಥದವರಿಗೆ ಭರವಸವಿರ ಸಾಧ್ಯವಿತೇಕ್ತೆ?
13 ಕೊರತೆಯುಳ್ಳ ವಿಶ್ವಾಸಿಗಳು ಐಹಿಕ ಪರಿಹಾರವನ್ನು ಆನಂದಿಸುವಂತೆ ಮತ್ತು ಸಾರುವ ಕಾರ್ಯದಲ್ಲಿ ಅಧಿಕ ಉತ್ಸಾಹದಿಂದ ಭಾಗವಹಿಸುವಂತೆ ಹಣದಾನದ ಏರ್ಪಾಡಿನ ಮೇಲ್ವಿಚಾರವನ್ನು ಪೌಲನು ನಡಿಸಿದ್ದರೂ, ಅವನಾಗಲಿ ಬೇರೆಯವರಾಗಲಿ ತಮ್ಮ ಸೇವೆಗಳಿಗಾಗಿ ಆ ವಂತಿಗೆಗಳಲ್ಲಿ ಏನನ್ನೂ ಬಳಸಲಿಲ್ಲ. (2 ಕೊರಿಂಥ 8:16-24; 12:17, 18) ಯಾವುದೇ ಸಭೆಯ ಮೇಲೆ ಆರ್ಥಿಕ ಭಾರವನ್ನು ಹೊರಿಸುವ ಬದಲಾಗಿ ಪೌಲನು ತನ್ನ ಸ್ವಂತ ಐಹಿಕ ಅಗತ್ಯತೆಗಳನ್ನು ನಿರ್ವಹಿಸಲು ಸ್ವತಃ ಕೆಲಸ ಮಾಡಿದ್ದನು. (1 ಕೊರಿಂಥ 4:12; 2 ಥೆಸಲೊನೀಕ 3:8) ಆದುದರಿಂದ, ತಮ್ಮ ದಾನಗಳನ್ನು ಅವನಿಗೆ ವಹಿಸಿಕೊಟ್ಟದ್ದರಲ್ಲಿ, ಕೊರಿಂಥದವರು ಒಬ್ಬ ನಂಬಲರ್ಹನಾದ, ಪರಿಶ್ರಮಿ ದೇವರ ಸೇವಕನ ಹೊಣೆಯಲ್ಲಿ ಅವನ್ನು ಒಪ್ಪಿಸಿಕೊಟ್ಟಿದ್ದರು.
14. ದಾನಗಳ ಉಪಯೋಗದ ವಿಷಯದಲ್ಲಿ, ವಾಚ್ ಟವರ್ ಸೊಸೈಟಿಗೆ ಯಾವ ದಾಖಲೆಯು ಇದೆ?
14 ಯೆಹೋವನ ರಾಜ್ಯ ಕಾರ್ಯದ ಪರವಾಗಿ ಕೊಟ್ಟ ಎಲ್ಲಾ ದಾನಗಳು, 1884ರಲ್ಲಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಸಂಘಟಿತವಾದಂದಿನಿಂದ, ಒಂದು ಭರವಸಯೋಗ್ಯವಾದ ಮೇಲ್ವಿಚಾರದ ಕೆಳಗಿದೆಯೆಂದು ದಾನಿಗಳಿಗೆ ರುಜವಾತಾಗಿದೆ. ಸೊಸೈಟಿಯ ಶಾಸನಕ್ಕನುಸಾರ, ಅದು ಜನರೆಲ್ಲರ ಅತ್ಯಂತ ಮಹತ್ತಾದ ಅಗತ್ಯತೆಯನ್ನು ಪೂರೈಸಲು, ಆತ್ಮಿಕ ಆವಶ್ಯಕತೆಯನ್ನು ಪೂರೈಸಲು ಪ್ರಯಾಸಪಡುತ್ತಿದೆ. ರಕ್ಷಣೆಯನ್ನು ಹೊಂದುವ ವಿಧಾನವನ್ನು ಬೈಬಲ್ ಸಾಹಿತ್ಯಗಳ ಮತ್ತು ಉಪದೇಶಗಳ ರೂಪದಲ್ಲಿ ತೋರಿಸುವ ಮೂಲಕ ಇದು ನಿರ್ವಹಿಸಲ್ಪಡುತ್ತದೆ. ಇಂದು ವಿಸ್ತರಿಸುತ್ತಾ ಇರುವ ತನ್ನ ಸಂಸ್ಥೆಯೊಳಗೆ ಯೆಹೋವನು ಕುರಿಸದೃಶರನ್ನು ಒಟ್ಟುಗೂಡಿಸುವುದನ್ನು ತ್ವರಿತಗೊಳಿಸುತ್ತಿದ್ದಾನೆ, ಮತ್ತು ರಾಜ್ಯ-ಸಾರುವಿಕೆಯ ಕೆಲಸದಲ್ಲಿ ದಾನಗಳ ಸುಜ್ಞ ಉಪಯೋಗದ ಮೇಲೆ ಆತನ ಆಶೀರ್ವಾದವು ದೈವಿಕ ಅನುಗ್ರಹದ ಸ್ಪಷ್ಟ ರುಜುವಾತಾಗಿದೆ. (ಯೆಶಾಯ 60:8, 22) ಸಂತೋಷವಾಗಿ ಕೊಡುವವರ ಹೃದಯಗಳನ್ನು ಆತನು ಪ್ರೇರೇಪಿಸುತ್ತಾ ಮುಂದರಿಯುವನೆಂಬ ಆತ್ಮವಿಶ್ವಾಸವು ನಮಗಿದೆ.
15. ಈ ಪತ್ರಿಕೆಯು ಆಗಿಂದಾಗ್ಯೆ ದಾನಗಳ ಕುರಿತು ತಿಳಿಸುವುದೇಕೆ?
15 ಜಗದ್ವ್ಯಾಪಕ ರಾಜ್ಯ-ಸಾರುವಿಕೆಗಾಗಿ ಸ್ವಯಂಪ್ರೇರಿತ ದಾನಗಳನ್ನು ಮಾಡುವ ಸುಯೋಗಕ್ಕೆ ವಾಚಕರನ್ನು ಎಚ್ಚರಿಸಲು ಸೊಸೈಟಿಯು ಆಗಿಂದಾಗ್ಯೆ ಈ ಪತ್ರಿಕೆಯ ಅಂಕಣಗಳನ್ನು ಉಪಯೋಗಿಸುತ್ತದೆ. ಇದು ದಾನಕ್ಕಾಗಿ ಬೇಡಿಕೊಳ್ಳುವಿಕೆಯಲ್ಲ, ಬದಲಾಗಿ “ಸುವಾರ್ತೆಯ ಪವಿತ್ರ ಸೇವೆಯನ್ನು” ಬೆಂಬಲಿಸಲು ಅಪೇಕ್ಷಿಸುವವರೆಲರ್ಲಿಗೆ, ದೇವರು ಅವರನ್ನು ಸಮೃದ್ಧಿಗೊಳಿಸಿದ ಹಾಗೆ ಮರುಜ್ಞಾಪಕವನ್ನು ಕೊಡುವುದಾಗಿದೆ. (ರೋಮಾಪುರ 15:16; 3 ಯೋಹಾನ 2) ದಾನಮಾಡಲ್ಪಟ್ಟ ಎಲ್ಲಾ ಹಣವನ್ನು ಯೆಹೋವನ ನಾಮವನ್ನು ಮತ್ತು ರಾಜ್ಯವನ್ನು ಪ್ರಸಿದ್ಧಪಡಿಸಲಿಕ್ಕಾಗಿ ಅತ್ಯಂತ ಮಿತವ್ಯಯದಿಂದ ಉಪಯೋಗಿಸಲಾಗುತ್ತದೆ. ಎಲ್ಲಾ ಕಾಣಿಕೆಗಳು ಕೃತಜ್ಞತೆಯಿಂದ ಸ್ವೀಕರಿಸಲ್ಪಡುತ್ತವೆ, ಅಂಗೀಕರಿಸಲ್ಪಡುತ್ತವೆ, ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವುದಕ್ಕಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಇವುಗಳ ಮೂಲಕವಾಗಿಯೇ ಅನೇಕ ದೇಶಗಳ ಮಿಶನೆರಿ ಚಟುವಟಿಕೆಗಳು ಪೋಷಿಸಲ್ಪಡುತ್ತವೆ, ಮತ್ತು ಬೈಬಲ್ ಜ್ಞಾನವನ್ನು ಹಂಚುವುದಕ್ಕೆ ಅತ್ಯಾವಶ್ಯಕವಾದ ಮುದ್ರಣ ಸೌಕರ್ಯಗಳು ದುರುಸ್ತಿಯಲಿಡ್ಲಲ್ಪಡುತ್ತವೆ ಮತ್ತು ವಿಸ್ತರಿಸಲ್ಪಡುತ್ತವೆ. ಅದಲ್ಲದೆ, ಜಗದ್ವ್ಯಾಪಕವಾಗಿ ನೀಡಲ್ಪಡುವ ದಾನಗಳು ಬೈಬಲ್ಗಳನ್ನು ಮತ್ತು ಬೈಬಲ್-ಮೂಲದ ಸಾಹಿತ್ಯಗಳನ್ನು ಹಾಗೂ ಆಡಿಯೋ ಕ್ಯಾಸೆಟ್ ಮತ್ತು ವೀಡಿಯೋ ಕ್ಯಾಸೆಟ್ ಇವುಗಳ ಉತ್ಪಾದನೆಯಲ್ಲಿ ಉಂಟಾಗುವ ಖರ್ಚಿನ ಉಬ್ಬರವನ್ನು ಆವರಿಸಲು ಬಳಸಲಾಗುತ್ತವೆ. ಈ ರೀತಿಗಳಲ್ಲಿ ರಾಜ್ಯದ ಅಭಿರುಚಿಗಳು ಸಂತೋಷವಾಗಿ ಕೊಡುವವರಿಂದ ಪ್ರವರ್ಧಿಸಲ್ಪಡುತ್ತವೆ.
ಬಲಾತ್ಕಾರದಿಂದಲ್ಲ
16. ಯೆಹೋವನ ಸಾಕ್ಷಿಗಳಲ್ಲಿ ಭೌತಿಕ ಐಶ್ವರ್ಯವಂತರು ಕೊಂಚ ಜನರಾದರೂ, ಅವರ ಕಾಣಿಕೆಗಳು ಏಕೆ ಗಣ್ಯಮಾಡಲ್ಪಡುತ್ತವೆ?
16 ಯೆಹೋವನ ಸಾಕ್ಷಿಗಳಲ್ಲಿ ಪ್ರಾಪಂಚಿಕವಾಗಿ ಐಶ್ವರ್ಯವಂತರಾಗಿರುವವರು ಕೊಂಚಜನ. ರಾಜ್ಯದಭಿರುಚಿಗಳನ್ನು ವರ್ಧಿಸಲು ಅವರು ಕೊಡುವ ಹಣಕಾಸು ಮಿತವಾಗಿದ್ದರೂ, ಅವರ ದಾನಗಳು ಮಹತ್ವದ್ದಾಗಿವೆ. ಆಲಯದ ಹಣದ ಪೆಟ್ಟಿಗೆಯಲ್ಲಿ ಒಬ್ಬ ಬಡ ವಿಧವೆಯು ಅಲ್ಪ ಬೆಲೆಯ ಎರಡು ನಾಣ್ಯಗಳನ್ನು ಹಾಕುವುದನ್ನು ಯೇಸು ಕಂಡಾಗ, ಅವನಂದದ್ದು: “ಈ ಬಡ ವಿಧವೆ ಎಲ್ಲರಿಗಿಂತ ಹೆಚ್ಚು ಕಾಸು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದರ್ದಲ್ಲಿ ಕಾಣಿಕೆ ಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟು ಬಿಟಳ್ಟು.” (ಲೂಕ 21:1-4) ಆಕೆಯ ಕಾಣಿಕೆಯು ಅಲ್ಪವಾಗಿದ್ದರೂ, ಆಕೆ ಸಂತೋಷವಾಗಿ ಕೊಟ್ಟವಳು—ಮತ್ತು ಅವಳ ಕಾಣಿಕೆಯು ಗಣ್ಯಮಾಡಲ್ಪಟ್ಟಿತು.
17, 18. 2 ಕೊರಿಂಥ 9:7ರ ಪೌಲನ ಮಾತುಗಳ ಸಾರವೇನು ಮತ್ತು “ಸಂತೋಷವಾಗಿ” ಎಂದು ತರ್ಜುಮೆಯಾದ ಗ್ರೀಕ್ ಪದದಿಂದ ಏನು ಸೂಚಿಸಲ್ಪಟ್ಟಿದೆ?
17 ಯೂದಾಯದ ಕ್ರೈಸ್ತರ ಪರಿಹಾರ ಕಾರ್ಯದ ಸಂಬಂಧದಲ್ಲಿ, ಪೌಲನು ಅಂದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ಅನಿಚ್ಛೆಯಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” (2 ಕೊರಿಂಥ 9:7) ಅಪೊಸ್ತಲನು ಜ್ಞಾನೋಕ್ತಿ 22:8ರ ಸೆಪ್ಟ್ಯುಅಜಿಂಟ್ ತರ್ಜುಮೆಯ ಒಂದು ಅಂಶಕ್ಕೆ ಇಲ್ಲಿ ಅಪ್ರತ್ಯಕ್ಷವಾಗಿ ಸೂಚಿಸಿರಬೇಕು, ಅದನ್ನುವುದು: “ಸಂತೋಷವಾಗಿ ಕೊಡುವವನನ್ನು ದೇವರು ಆಶೀರ್ವದಿಸುತ್ತಾನೆ; ಅವನ ಕಾರ್ಯಗಳ ಕೊರತೆಗಾಗಿ ಒದಗಿಸಿಕೊಡುತ್ತಾನೆ.” (ಚಾರ್ಲ್ಸ್ ಥಾಮ್ಸನ್ ಭಾಷಾಂತರಿಸಿದ ದಿ ಸೆಪ್ಟ್ಯುಅಜಿಂಟ್ ಬೈಬಲ್) ಇಲ್ಲಿ “ಆಶೀರ್ವದಿಸುತ್ತಾನೆ” ಶಬ್ದದ ಬದಲಿಗೆ “ಪ್ರೀತಿಸುತ್ತಾನೆ” ಎಂಬ ಪದವನ್ನು ಪೌಲನು ಹಾಕಿದ್ದಾನೆ, ಆದರೆ ಅದರಲ್ಲಿ ಸಂಬಂಧವಿದೆ, ಹೇಗಂದರೆ ದೇವರ ಪ್ರೀತಿಯ ಫಲಿತಾಂಶವಾಗಿಯೇ ಆಶೀರ್ವಾದದ ಕೊಯ್ಲು ಉಂಟಾಗುತ್ತದೆ.
18 ಸಂತೋಷವಾಗಿ ಕೊಡುವವನು ಕೊಡುವುದರಲ್ಲಿ ನಿಜವಾಗಿ ಆನಂದಿಸುತ್ತಾನೆ. 2 ಕೊರಿಂಥ 9:7ರಲ್ಲಿ “ಸಂತೋಷವಾಗಿ” ಎಂದು ತರ್ಜುಮೆಯಾದ ಗ್ರೀಕ್ ಪದದಿಂದ “ಉಲ್ಲಾಸದಿಂದ” ಎಂಬ ಪದವು ಬಂದಿದೆ! ಇದನ್ನು ಸೂಚಿಸಿದ ನಂತರ, ಪಂಡಿತ ಆರ್.ಸಿ.ಎಚ್. ಲೆನ್ಸ್ಕೀ ಅಂದದ್ದು: “ಗೆಲವಿನಿಂದ, ಹರ್ಷದಿಂದ, ಆನಂದದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ. . . . ಕೊಡುವ ಇನ್ನೊಂದು ಸಂದರ್ಭವು ಅವನಿಗೆ ಎದುರಾದಾಗ [ಅವನ] ನಂಬಿಕೆಯು ಮುಗುಳುನಗೆಯನ್ನು ಸೂಸುತ್ತಿರುವುದು.” ಅಂಥ ಸಂತೋಷಯುಕ್ತ ಆತ್ಮವುಳ್ಳ ಒಬ್ಬ ವ್ಯಕ್ತಿಯು ಅನಿಚ್ಛೆಯಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದಿಲ್ಲ ಬದಲಿಗೆ ಹೃದಯಪೂರ್ವಕವಾಗಿ ಕೊಡುತ್ತಾನೆ. ರಾಜ್ಯ ಅಭಿರುಚಿಗಳ ಬೆಂಬಲಕ್ಕಾಗಿ ಕೊಡುವ ವಿಷಯದಲ್ಲಿ ನೀವು ಅಷ್ಟು ಸಂತೋಷಯುಕ್ತರೋ?
19. ಆರಂಭದ ಕ್ರೈಸ್ತರು ಕಾಣಿಕೆಗಳನ್ನು ಕೊಟ್ಟದ್ದು ಹೇಗೆ?
19 ಆರಂಭದ ಕ್ರೈಸ್ತರು ಧಾರ್ಮಿಕ ಉದ್ದೇಶಗಳಿಗಾಗಿ ಕೊಡುವಾಗ ಕಾಣಿಕೆ ಪೆಟ್ಟಿಗೆಗಳನ್ನು ದಾಟಿಸಲಿಲ್ಲ ಅಥವಾ ತಮ್ಮ ಆದಾಯದ ಹತ್ತನೆ ಒಂದಂಶವನ್ನು ದಾನಮಾಡುವ ಮೂಲಕ ದಶಮಾಂಶವನ್ನು ಕೊಟ್ಟಿರಲಿಲ್ಲ. ಬದಲಿಗೆ, ಅವರ ಕಾಣಿಕೆಗಳು ಸಂಪೂರ್ಣ ಸ್ವಯಂಪ್ರೇರಿತವಾಗಿದ್ದವು. ಸಾ.ಶ. 190ರ ಸುಮಾರಿಗೆ ಕ್ರೈಸ್ತತ್ವಕ್ಕೆ ಮತಾಂತರವಾದ ಟೆರ್ಟುಲ್ಯನ್, ಬರೆದದ್ದು: “ನಮಗೆ ನಮ್ಮ ಹಣದ-ಪೆಟ್ಟಿಗೆ ಇದ್ದರೂ, ಒಂದು ಧರ್ಮಕ್ಕೆ ಇಂತಿಷ್ಟು ಬೆಲೆ ಇದೆ ಎಂಬಂತೆ, ರಕ್ಷಣೆಯನ್ನು ಖರೀದಿಸುವ ಹಣ ಅದರಲ್ಲಿ ಕೂಡಿರುವುದಿಲ್ಲ. ತಿಂಗಳ ಒಂದು ದಿನದಲ್ಲಿ [ತಿಂಗಳಿಗೊಮ್ಮೆ ಇರಬಹುದು] ಅವನು ಇಚ್ಛೈಸಿದರೆ ಒಂದು ಚಿಕ್ಕ ದಾನವನ್ನು ಅದರೊಳಗೆ ಹಾಕುತ್ತಾನೆ, ಆದರೆ ಅವನದನ್ನು ಸಂತೋಷದಿಂದ ಮಾಡುವುದಾದರೆ ಮಾತ್ರವೇ, ಮತ್ತು ಅದನ್ನು ಕೊಡಲು ಶಕ್ತನಿದ್ದರೆ ಮಾತ್ರವೇ, ಯಾಕಂದರೆ ಅಲ್ಲಿ ಯಾವ ಒತ್ತಾಯವೂ ಇಲ್ಲ; ಎಲ್ಲವೂ ಸ್ವಯಂಪ್ರೇರಿತ.”—ಅಪಾಲಜಿ, ಅಧ್ಯಾಯ XXXIX.
20, 21. (ಎ) ದೇವರ ಕಾರ್ಯವನ್ನು ಆರ್ಥಿಕವಾಗಿ ಬೆಂಬಲಿಸುವ ಸುಯೋಗದ ಕುರಿತು ಈ ಪತ್ರಿಕೆಯ ಆರಂಭದ ಸಂಚಿಕೆಯೊಂದು ಏನಂದಿತ್ತು, ಮತ್ತು ಅದು ಇಂದು ಕೂಡಾ ಹೇಗೆ ಅನ್ವಯಿಸುತ್ತದೆ? (ಬಿ) ನಮ್ಮ ಬೆಲೆಯುಳ್ಳ ವಸ್ತುಗಳಿಂದ ಯೆಹೋವನನ್ನು ನಾವು ಸನ್ಮಾನಿಸುವಾಗ ಏನು ಸಂಭವಿಸುತ್ತದೆ?
20 ಸ್ವಯಂಪ್ರೇರಿತ ದಾನವು ಯೆಹೋವನ ಆಧುನಿಕ ಸಾಕ್ಷಿಗಳಲ್ಲಿ ಯಾವಾಗಲೂ ವಾಡಿಕೆಯಾಗಿ ಇದೆ. ಆದರೂ ಕೆಲವೊಮ್ಮೆ, ದಾನ ಕೊಡುವ ಮೂಲಕ ದೇವರ ಕಾರ್ಯವನ್ನು ಬೆಂಬಲಿಸುವ ತಮ್ಮ ಸುಯೋಗವನ್ನು ಕೆಲವರು ಪೂರ್ಣ ಸದುಪಯೋಗ ಮಾಡಿರುವುದಿಲ್ಲ. ದೃಷ್ಟಾಂತಕ್ಕಾಗಿ, ಫೆಬ್ರವರಿ 1883ರಲ್ಲಿ, ಈ ಪತ್ರಿಕೆಯು ಹೇಳಿದ್ದು: “ಕೆಲವರು ಬೇರೆಯವರಿಗಾಗಿ ಎಷ್ಟೊಂದು ಆರ್ಥಿಕ ಹೊರೆಯನ್ನು ಹೊರುತ್ತಾರೆಂದರೆ, ಅತಿರೇಕ-ಕೆಲಸ ಮತ್ತು ಆಯಾಸದಿಂದಾಗಿ, ಆರ್ಥಿಕ ಸಹಾಯವನ್ನು ಕೊಡುವ ಅವರ ಶಕ್ತಿಯು ಕುಂದುತ್ತಾ ಇದೆ, ಮತ್ತು ಹೀಗೆ ಅವರ ಉಪಯುಕ್ತತೆಯು ಕ್ಷೀಣಗೊಂಡಿದೆ. ಅದು ಮಾತ್ರವೇ ಅಲ್ಲ, ಯಾರು . . . ಈ ಪರಿಸ್ಥಿತಿಯನ್ನು ಪೂರ್ಣವಾಗಿ ಗ್ರಹಿಸದೆ ಹೋಗಿದ್ದಾರೋ ಅವರು ಆರ್ಥಿಕವಾಗಿ ದಾನಕೊಡುವ ಈ ಔದಾರ್ಯದ ಕೊರತೆಯ ಕಾರಣ ಆಶೀರ್ವಾದ ನಷ್ಟವನ್ನು ಪಡೆದಿದ್ದಾರೆ.”
21 ಇಂದು ಯೆಹೋವನ ಸಂಸ್ಥೆಯೊಳಗೆ ಮಹಾ ಸಮೂಹವು ಪ್ರವಾಹವಾಗಿ ಒಳಸೇರುತ್ತಿರುವಾಗ, ಮತ್ತು ಹಿಂದೆ ನಿರ್ಬಂಧಗಳಿದ್ದ ಪೂರ್ವ ಯೂರೋಪ್ ಮತ್ತು ಇತರ ಕ್ಷೇತ್ರಗಳಲ್ಲಿ ದೇವರ ಕಾರ್ಯವು ವಿಸ್ತರಿಸುತ್ತಾ ಹೋಗುವಾಗ, ಮುದ್ರಣಾ ಯಂತ್ರಗಳ ಮತ್ತು ಇತರ ಸೌಕರ್ಯಗಳ ವಿಸ್ತರಣೆಗಾಗಿ ಅಧಿಕ ಅಗತ್ಯತೆಯು ತೋರಿಬರುತ್ತಲಿದೆ. ಹೆಚ್ಚು ಬೈಬಲ್ಗಳನ್ನು ಮತ್ತು ಇತರ ಸಾಹಿತ್ಯಗಳನ್ನು ಮುದ್ರಿಸಬೇಕಾಗುತ್ತಿದೆ. ಅನೇಕ ದೇವಪ್ರಭುತ್ವ ಯೋಜನೆಗಳು ಕೈಕೊಳ್ಳಲ್ಪಟ್ಟಿವೆ, ಸಾಕಷ್ಟು ಹಣವಿದ್ದರೆ ಕೆಲವನ್ನು ಹೆಚ್ಚು ತೀವ್ರವಾಗಿ ಮುಗಿಸಬಹುದಿತ್ತು. ಏನು ಬೇಕೋ ಅದನ್ನು ದೇವರು ಒದಗಿಸುವನೆಂಬ ನಂಬಿಕೆ ನಮಗಿದೆ ನಿಶ್ಚಯ, ಮತ್ತು ತಮ್ಮ ‘ಬೆಲೆಯುಳ್ಳ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸುವವರು’ ಆಶೀರ್ವದಿಸಲ್ಪಡುವರೆಂದೂ ನಮಗೆ ಗೊತ್ತಿದೆ. (ಜ್ಞಾನೋಕ್ತಿ 3:9, 10) “ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು” ಎಂಬದೂ ಖಂಡಿತ. ಯೆಹೋವನು ‘ನಮ್ಮ ಪ್ರತಿಯೊಂದು ಉದಾರ ಸಹಾಯಕ್ಕಾಗಿ ನಮ್ಮನ್ನು ಸಮೃದ್ಧಿಗೊಳಿಸುವನು’ ಮತ್ತು ನಮ್ಮ ಸಂತೋಷಯುಕ್ತ ಕೊಡುವಿಕೆಯು ಅನೇಕರನ್ನು ಆತನಿಗೆ ಕೃತಜ್ಞತೆ ಮತ್ತು ಸ್ತುತಿಯನ್ನು ಸಲ್ಲಿಸುವಂತೆ ನಡಿಸುವುದು.—2 ಕೊರಿಂಥ 9:6-14.
ದೇವರ ದಾನಗಳಿಗಾಗಿ ನಿಮ್ಮ ಕೃತಜ್ಞತೆ ತೋರಿಸಿರಿ
22, 23. (ಎ) ದೇವರ ವರ್ಣಿಸಲಸಾಧ್ಯವಾದ ಉಚಿತ ವರದಾನವು ಯಾವುದು? (ಬಿ) ನಾವು ಯೆಹೋವನ ದಾನಗಳನ್ನು ಗಣ್ಯ ಮಾಡುತ್ತೇವಾದ್ದರಿಂದ, ನಾವೇನನ್ನು ಮಾಡಬೇಕು?
22 ಆಳವಾದ ಗಣ್ಯತೆಯಿಂದ ಪ್ರೇರೇಪಿಸಲ್ಪಟ್ಟು, ಪೌಲನು ತಾನೇ ಅಂದದ್ದು: “ವರ್ಣಿಸಲಶಕ್ಯವಾದ ದೇವರ ಉಚಿತ ವರಕ್ಕಾಗಿ ಆತನಿಗೆ ಸ್ತೋತ್ರ.” (2 ಕೊರಿಂಥ 9:15) ಅಭಿಷಿಕ್ತ ಕ್ರೈಸ್ತರ ಪಾಪಗಳಿಗಾಗಿ ಮತ್ತು ಲೋಕದ ಪಾಪಗಳಿಗಾಗಿ ‘ಪ್ರಾಯಶ್ಚಿತ್ತ ಯಜ್ಞವಾದ’ ಯೇಸುವು, ಯೆಹೋವನ ಈ ಅವರ್ಣನೀಯ ಉಚಿತ ವರದಾನದ ಮೂಲಾಧಾರ ಮತ್ತು ಕಾಲುವೆಯಾಗಿದ್ದಾನೆ. (1 ಯೋಹಾನ 2:1, 2) ಆ ವರದಾನವು ಯೇಸು ಕ್ರಿಸ್ತನ ಮೂಲಕ ದೇವರು ಲೋಕದ ಮಾನವರಿಗೆ ತೋರಿಸಿದ ‘ದೇವರ ಅತಿಶಯವಾದ ಕೃಪೆಯೇ,’ ಮತ್ತು ಅದು ಅವರ ರಕ್ಷಣೆಗಾಗಿ ಮತ್ತು ಯೆಹೋವನ ಮಹಿಮೆ ಮತ್ತು ನಿರ್ದೋಷೀಕರಣಕ್ಕಾಗಿ ಹೆಚ್ಚುತ್ತಾ ಹೋಗುವುದು.—2 ಕೊರಿಂಥ 9:14.
23 ವರ್ಣಿಸಲಸಾಧ್ಯವಾದ ಯೆಹೋವನ ಈ ಉದಾರ ದಾನಕ್ಕಾಗಿ ಮತ್ತು ತನ್ನ ಜನರಿಗೆ ಆತನು ಕೊಟ್ಟ ಅನೇಕಾನೇಕ ಆತ್ಮಿಕ ಮತ್ತು ಭೌತಿಕ ದಾನಗಳಿಗಾಗಿ ನಮ್ಮ ಆಳವಾದ ಕೃತಜ್ಞತೆಯು ಆತನಿಗೆ ಸಲ್ಲುತ್ತದೆ. ನಮ್ಮ ಸ್ವರ್ಗೀಯ ತಂದೆಯು ನಮಗಾಗಿ ಮಾಡಿರುವ ಒಳ್ಳೇತನವು ಎಷ್ಟು ಆಶ್ಚರ್ಯಕರವೆಂದರೆ ಅದು ಮಾನವ ಅಭಿವ್ಯಂಜಕ ಶಕ್ತಿಗೆ ಮೀರಿರುತ್ತದೆ! ಮತ್ತು ನಿಶ್ಚಯವಾಗಿಯೂ ಅದು ನಮ್ಮನ್ನು ಸಂತೋಷಯುಕ್ತ ಕೊಡುವವರಾಗುವಂತೆ ಪ್ರೇರೇಪಿಸಬೇಕು. ಹಾಗಾದರೆ, ನಾವೆಲ್ಲರೂ ಹೃದಯಪೂರ್ವಕವಾದ ಗಣ್ಯತೆಯೊಂದಿಗೆ, ನಮ್ಮ ಉದಾರ ದೇವರೂ, ಸಂತೋಷವಾಗಿ ಕೊಡುವವರಲ್ಲಿ ಪ್ರಥಮನೂ ಅಗ್ರಗಣ್ಯನೂ ಆದ ಯೆಹೋವನ ಕಾರ್ಯದ ಅಭಿವೃದ್ಧಿಗಾಗಿ ನಮ್ಮ ಕೈಲಾದದ್ದನ್ನು ಮಾಡೋಣ. (w92 1/15)
ನಿಮಗೆ ನೆನಪಿದೆಯೇ?
▫ ಸಿದ್ಧ ಹೃದಯಗಳು ಯೆಹೋವನ ಜನರನ್ನು ಏನು ಮಾಡುವಂತೆ ಪ್ರೇರೇಪಿಸಿವೆ?
▫ ಸಂತೋಷವಾಗಿ ಕೊಡುವುದನ್ನು ಪ್ರೇರೇಪಿಸುವುದು ಯಾವುದು?
▫ ವಾಚ್ ಟವರ್ ಸೊಸೈಟಿ ತನಗೆ ಸಿಗುವ ಎಲ್ಲಾ ದಾನಗಳನ್ನು ಹೇಗೆ ಉಪಯೋಗಿಸುತ್ತದೆ?
▫ ಯಾವ ರೀತಿಯ ದಾನಿಯನ್ನು ದೇವರು ಪ್ರೀತಿಸುತ್ತಾನೆ, ಮತ್ತು ಆತನ ಅನೇಕ ದಾನಗಳಿಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬೇಕು?
[ಪುಟ 15 ರಲ್ಲಿರುವ ಚಿತ್ರ]
ಗುಡಾರವನ್ನು ಕಟ್ಟುತ್ತಿರುವಾಗ, ಇಸ್ರಾಯೇಲ್ಯರು ಉದ್ಯೋಗಶೀಲರಾಗಿ ದುಡಿದರು ಮತ್ತು ಯೆಹೋವನಿಗಾಗಿ ಉದಾರವಾಗಿ ದಾನಕೊಟ್ಟರು
[ಪುಟ 18 ರಲ್ಲಿರುವ ಚಿತ್ರ]
ಆ ಬಡ ವಿಧವೆಯು ಕೊಟ್ಟಂಥ ಕಾಣಿಕೆಗಳು ಗಣ್ಯಮಾಡಲ್ಪಡುತ್ತವೆ ಮತ್ತು ಅವು ಮಹತ್ವವುಳ್ಳವುಗಳು