ಜಸ್ಟಿನ್—ತತ್ವಜ್ಞಾನಿ, ಸಮರ್ಥಕ ಮತ್ತು ಹುತಾತ್ಮ
“ಕ್ರೈಸ್ತರ ವಿರುದ್ಧ ಮಾಡಲ್ಪಟ್ಟ ಆರೋಪಗಳ ತನಿಖೆ ನಡಿಸಬೇಕೆಂದು, ಮತ್ತು ಇವುಗಳು ರುಜುವಾಗುವಲ್ಲಿ ಅವರಿಗೆ ತಕ್ಕದ್ದಾಗಿ ದಂಡಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ. . . . ಆದರೆ ಯಾರೊಬ್ಬನೂ ನಮ್ಮನ್ನು ಯಾವ ವಿಷಯದಲ್ಲೂ ತಪ್ಪು ಹೊರಿಸಲಾಗದಿದ್ದರೆ, ನಿಜ ವಿವೇಚನಾ ಶಕ್ತಿಯು ನಿಮ್ಮನ್ನು, ಒಂದು ದುಷ್ಟ ವದಂತಿಯಿಂದಾಗಿ ನಿರ್ದೋಷಿ ಮನುಷ್ಯರಿಗೆ ಹಾನಿಮಾಡುವುದರಿಂದ ನಿಷೇಧಿಸುತ್ತದೆ. ಏಕೆಂದರೆ, ಒಂದು ವೇಳೆ ನೀವು ಸತ್ಯವನ್ನು ಕಲಿತು ಕೂಡ, ನ್ಯಾಯವಾದದ್ದನ್ನು ನೀವು ಮಾಡದಿದ್ದರೆ, ನೀವು ದೇವರ ಮುಂದೆ ಯಾವ ನೆವನವಿಲ್ಲದೆ ಇರುವಿರಿ.”
ಈ ಮಾತುಗಳೊಂದಿಗೆ, ಜಸ್ಟಿನ್ ಮಾರ್ಟರ್, ಸಾ. ಶ. ಎರಡನೆಯ ಶತಮಾನದ ಒಬ್ಬ ಕ್ರೈಸ್ತನೆಂದು ಹೇಳಿಕೊಳ್ಳುವವನು, ರೋಮೀಯ ಸಾಮ್ರಾಟನಾದ ಆಂಟೊನಿನಸ್ ಪಿಯುಸ್ನಿಗೆ ಅಪ್ಪೀಲು ಮಾಡಿದ್ದನು. ಕ್ರೈಸ್ತರೆಂದು ಹೇಳಿಕೊಳ್ಳುವವರ ಜೀವಿತಗಳ ಮತ್ತು ನಂಬಿಕೆಗಳೊಳಗೆ ಒಂದು ಗಂಭೀರವಾದ ವಿಮರ್ಶಾತ್ಮಕ ತನಿಖೆಗಾಗಿ ಜಸ್ಟಿನ್ ವಿನಂತಿಸಿದನು. ತುಂಬಾ ಆಸಕ್ತಿಕರವಾದ ಒಂದು ಹಿನ್ನೆಲೆ ಮತ್ತು ತತ್ವಜ್ಞಾನವಿದ್ದ ಒಬ್ಬ ಮನುಷ್ಯನಿಂದ ನ್ಯಾಯಕ್ಕಾಗಿ ಈ ತಗಾದೆ ಮಾಡಲ್ಪಟ್ಟಿತ್ತು.
ಆರಂಭದ ಜೀವನ ಮತ್ತು ತರಬೇತಿ
ಸುಮಾರು ಸಾ. ಶ. 110 ರಲ್ಲಿ ಆಧುನಿಕ ನಾಬ್ಲಸ್, ಸಮಾರ್ಯದಲ್ಲಿರುವ ಪಟ್ಟಣವಾದ ಫ್ಲಾವಿಯಾ ನಿಯೊಪೊಲಿಸ್ ಎಂಬಲ್ಲಿ ಜನಿಸಿದ ಜಸ್ಟಿನ್ ಒಬ್ಬ ಅನ್ಯನಾಗಿದ್ದನು. ಅವನ ತಂದೆ ಅಥವಾ ಅಜ್ಜನು ರೋಮನ್ ಯಾ ಗ್ರೀಕ್ನಾಗಿದ್ದರೂ, ಅವನು ತನ್ನನ್ನೇ ಒಬ್ಬ ಸಮಾರ್ಯದವನು ಎಂದು ಕರೆಯಿಸಿಕೊಂಡನು. ಅನ್ಯಧರ್ಮೀಯ ಪದ್ಧತಿಗಳಲ್ಲಿ ಅವನ ಶಿಕ್ಷಣದೊಂದಿಗೆ, ಸತ್ಯಕ್ಕಾಗಿ ಅವನ ಬಾಯಾರಿಕೆ, ತತ್ವಜ್ಞಾನದ ಶೃದ್ಧಾಭರಿತ ಅಧ್ಯಯನಕ್ಕೆ ನಡಿಸಿತು. ಸ್ಟೊಯಿಕರಲ್ಲಿ, ಪೆರಿಪಟೆಟಿಕ್ರಲ್ಲಿ ಮತ್ತು ಪೈಥಾಗೊರಿಯನರಲ್ಲಿ ಅವನ ಹುಡುಕುವಿಕೆಯು ಅತೃಪ್ತಿಗೆ ನಡಿಸಿದ್ದರಿಂದ, ಅವನು ಪ್ಲೇಟೊವಿನ ಕಲ್ಪನೆಗಳನ್ನು ಬೆನ್ನಟ್ಟಿದನು.
ಅವನ ಕೃತಿಗಳಲ್ಲೊಂದರಲ್ಲಿ, ತತ್ವಜ್ಞಾನಿಗಳೊಂದಿಗೆ ಸಂಭಾಷಿಸಲು ಅವನಿಗಿದ್ದ ಆಶೆಯ ಕುರಿತು ಜಸ್ಟಿನ್ ತಿಳಿಸುತ್ತಾನೆ ಮತ್ತು ಹೀಗನ್ನುತ್ತಾನೆ: “ಒಬ್ಬಾನೊಬ್ಬ ಸ್ಟೊಯಿಕನಿಗೆ ನನ್ನನ್ನು ಒಪ್ಪಿಸಿಕೊಟ್ಟೆನು ಮತ್ತು ಅವನೊಂದಿಗೆ ಗಣನೀಯ ಸಮಯವನ್ನು ಕಳೆದ ನಂತರವೂ, ನಾನು ದೇವರ ಜ್ಞಾನದಲ್ಲಿ ಹೆಚ್ಚನ್ನು ಸಂಪಾದಿಸಲಿಲ್ಲವಾದುದರಿಂದ (ಏಕೆಂದರೆ ಅವನು ತನ್ನನ್ನೇ ತಿಳಿದು ಕೊಂಡಿರಲಿಲ್ಲ) . . . ನಾನು ಅವನನ್ನು ಬಿಟ್ಟೆನು ಮತ್ತು ಇನ್ನೊಬ್ಬನನ್ನು ಅನುಸರಿಸಿದೆನು.”—ಡೈಯಾಲೊಗ್ ಆಫ್ ಜಸ್ಟಿನ್, ಫಿಲೊಸೊಫರ್ ಆ್ಯಂಡ್ ಮಾರ್ಟರ್, ವಿದ್ ಟ್ರೈಫೊ, ಎ ಜ್ಯೂ.
ಅನಂತರ ಜಸ್ಟಿನ್ ಸತ್ಯಕ್ಕಿಂತ ಹಣದಲ್ಲಿ ಹೆಚ್ಚು ಆಸಕ್ತನಾಗಿದ್ದ, ಒಬ್ಬ ಪೆರಿಪಟೆಟಿಕ್ ಮನುಷ್ಯನ ಬಳಿ ಹೋದನು. “ಈ ಮನುಷ್ಯನು, ನನ್ನನ್ನು ಮೊದಲ ಕೆಲವು ದಿನಗಳಿಗೆ ಸ್ವೀಕರಿಸಿದ ನಂತರ” ಅನ್ನುತ್ತಾನೆ ಜಸ್ಟಿನ್, “ನಮ್ಮ ವ್ಯವಹಾರವು ಲಾಭಕರವಲ್ಲದ್ದಾಗಿರಬಾರದೆಂದು ಅವನ ತೆರವನ್ನು [ಫೀಸ್] ಇತ್ಯರ್ಥಗೊಳಿಸಲು ನನಗೆ ಹೇಳಿದನು. ಅವನನ್ನು ಸಹ, ನಾನು ಈ ಕಾರಣಕ್ಕಾಗಿ ತೊರೆದೆನು, ಅವನು ಒಬ್ಬ ತತ್ವಜ್ಞಾನಿಯೇ ಆಗಿಲ್ಲ ಎಂದು ನಂಬಿದ್ದರಿಂದಲೇ.”
“ಅತ್ಯುತ್ತಮವಾದ ತತ್ವಜ್ಞಾನವನ್ನು” ಕೇಳಲು ತವಕಿಸುತ್ತಾ, ಜಸ್ಟಿನ್ “ಬಹಳ ಪ್ರಖ್ಯಾತನಾಗಿದ್ದ—ತನ್ನ ಸ್ವಂತ ವಿವೇಕದ ಕುರಿತು ಅಧಿಕವಾಗಿ ಯೋಚಿಸುತ್ತಿದ್ದ ಒಬ್ಬ ಮನುಷ್ಯನು, ಒಬ್ಬ ಪೈಥಾಗೊರಿಯನ್ ಬಳಿಗೆ ಬಂದನು.” ಜಸ್ಟಿನ್ ಹೇಳುವುದು: “ನನಗೆ ಅವನೊಂದಿಗೆ ಒಂದು ಸಂದರ್ಶನವಾದಾಗ, ಅವನನ್ನು ಆಲಿಸಲು ಮತ್ತು ಶಿಷ್ಯನಾಗಲು ಸಿದ್ಧನಾದಾಗ, ಅವನಂದದ್ದು, ‘ಮತ್ತೇನು? ನಿನಗೆ ಸಂಗೀತ, ಜ್ಯೋತಿಶ್ಶಾಸ್ತ್ರ ಮತ್ತು ರೇಖಾಗಣಿತದ ಪರಿಚಯವಿದೆಯೇ? ನಿನಗೆ ಮೊದಲು [ಈ] ವಿಷಯಗಳಲ್ಲಿ ಶಿಕ್ಷಣವಿಲ್ಲದಿದ್ದರೆ, ಒಂದು ಸಂತೋಷದ ಜೀವಿತಕ್ಕೆ ನೆರವಾಗುವ ಆ [ದೈವಿಕ] ವಿಷಯಗಳನ್ನು ನೀನು ತಿಳಿಯಲು ನಿರೀಕ್ಷಿಸುತ್ತಿಯೋ? . . . ನನ್ನ ಅಜ್ಞಾನವನ್ನು ಅವನಿಗೆ ಅರಿಕೆಮಾಡಿಕೊಂಡಾಗ ಅವನು ನನ್ನನ್ನು ಅಲ್ಲಿಂದ ಕಳುಹಿಸಿಬಿಟ್ಟನು.”
ನಿರಾಶೆಗೊಂಡರೂ, ಜಸ್ಟಿನ್ ಸತ್ಯಕ್ಕಾಗಿ ಹುಡುಕುವದನ್ನು ಸುಪ್ರಸಿದ್ಧ ಪ್ಲೇಟೊ ತತ್ವವಾದಿಗಳ ಕಡೆಗೆ ತಿರುಗುವ ಮೂಲಕ ಮುಂದರಿಸಿದನು. ಅವನು ತಿಳಿಸುವುದು: “ಇತ್ತೀಚೆಗೆ ನಮ್ಮ ಶಹರದಲ್ಲಿ ನೆಲೆಸಿದ ಒಬ್ಬ—ಮಹಾಜ್ಞಾನಿ, ಪ್ಲೇಟೊವಿನ ತತ್ವವಾದಿಗಳಲ್ಲಿ ಒಂದು ಉಚ್ಛಸ್ಥಾನದಲ್ಲಿದ್ದವನೊಂದಿಗೆ ನನಗೆ ಸಾಧ್ಯವಿದ್ದಷ್ಟು ಸಮಯವನ್ನು ನಾನು ಕಳೆದೆನು—ಮತ್ತು ನಾನು ಪ್ರಗತಿಮಾಡಿದೆನು. ಮತ್ತು ಸ್ವಲ್ಪ ಕಾಲದಲ್ಲಿಯೇ ನಾನು ಇಷ್ಟು ವಿವೇಕಿಯಾಗಿದ್ದೇನೆಂದು ನೆನಸಿದೆನು; ಮತ್ತು ನನ್ನ ಮೂಢತನ ಅಷ್ಟಾಗಿತ್ತು” ಎನ್ನುತ್ತಾ ಅಂತ್ಯಗೊಳಿಸುತ್ತಾನೆ ಜಸ್ಟಿನ್.
ತತ್ವಜ್ಞಾನಿಗಳೊಂದಿಗಿನ ಸಂಪರ್ಕಗಳ ಮೂಲಕ ಸತ್ಯಕ್ಕಾಗಿ ಜಸ್ಟಿನ್ನ ಶೋಧನೆಯು ವ್ಯರ್ಥವಾಗಿತ್ತು. ಆದರೆ ಅವನು ಸಮುದ್ರದ ಕಿನಾರೆಯಲ್ಲಿ ಧ್ಯಾನಿಸುತ್ತಿದ್ದಾಗ, ಅವನು ಒಬ್ಬ ವೃದ್ಧನಾಗಿದ್ದ ಕ್ರೈಸ್ತನನ್ನು ಭೇಟಿಯಾದನು, “ಒಬ್ಬಾನೊಬ್ಬ ಪ್ರಾಯಸ್ಥನಾದ ಮನುಷ್ಯನು, ತೋರಿಕೆಯಲ್ಲಿ ಖಂಡಿತವಾಗಿ ತುಚ್ಛನಾಗಿರಲಿಲ್ಲ, ನಮ್ರ, ಗೌರವಾರ್ಹವಾದ ನಡಾವಳಿಯನ್ನು ಪ್ರದರ್ಶಿಸುತ್ತಿದ್ದನು.” ಆರಂಭಿಸಲ್ಪಟ್ಟ ಸಂಭಾಷಣೆಯು ದೇವರ ಕುರಿತಾದ ನಿಷ್ಕೃಷ್ಟ ಜ್ಞಾನದ ಮೇಲೆ ಕೇಂದ್ರೀಕರಿಸುವ ಮೂಲ ಬೈಬಲ್ ಬೋಧನೆಗಳ ಕಡೆಗೆ ಅವನ ಗಮನವನ್ನು ಮಾರ್ಗದರ್ಶಿಸಿತು.—ರೋಮಾಪುರ 10:2, 3.
ಆ ಹೆಸರಿಸಲ್ಪಡದ ಕ್ರೈಸ್ತನು ಜಸ್ಟಿನ್ನಿಗೆ ಹೇಳಿದ್ದು: “ಈ ಸಮಯಕ್ಕಿಂತ ತುಂಬಾ ಹಿಂದೆ, ಎಲ್ಲಾ ಗಣ್ಯ ತತ್ವಜ್ಞಾನಿಗಳಿಗಿಂತ ಹೆಚ್ಚು ಪುರಾತನದಲ್ಲಿ ಕೆಲವು ನಿರ್ದಿಷ್ಟ ಮನುಷ್ಯರು ಅಸ್ತಿತ್ವದಲಿದ್ದರು. ಅವರು ನೀತಿವಂತರೂ, ದೇವರಿಗೆ ಪ್ರಿಯರೂ ಆಗಿದ್ದು, . . . ನಡೆಯಲಿರುವ ಘಟನೆಗಳನ್ನು ಮುಂತಿಳಿಸಿದ್ದರು, ಮತ್ತು ಅವು ಈಗ ನಡೆಯುತ್ತಲಿವೆ. ಅವರನ್ನು ಪ್ರವಾದಿಗಳೆಂದು ಕರೆಯಲಾಗುತ್ತಿತ್ತು. ಪವಿತ್ರಾತ್ಮಭರಿತರಾಗಿ . . . ಇವರು ಮಾತ್ರ ಸತ್ಯವನ್ನು ನೋಡಿದರು ಮತ್ತು ಮನುಷ್ಯರಿಗೆ ಪ್ರಕಟಪಡಿಸಿದರು.” ಜಸ್ಟಿನ್ನ ಒಲವನ್ನು ಇನ್ನೂ ಕೆರಳಿಸುತ್ತಾ, ಆ ಕ್ರೈಸ್ತನು ಹೇಳಿದ್ದು: “ಅವರ ಬರಹಗಳು ಇನ್ನೂ ಚಾಲ್ತಿಯಲ್ಲಿವೆ ಮತ್ತು ಅವುಗಳನ್ನು ಯಾರು ಓದಿದ್ದಾನೋ, ಅವನಿಗೆ ವಿಷಯಗಳ ಆದಿ ಮತ್ತು ಅಂತ್ಯದ ಕುರಿತಾದ ಅವನ ಜ್ಞಾನದಲ್ಲಿ ತುಂಬಾ ಸಹಾಯ ದೊರಕಿದೆ..” (ಮತ್ತಾಯ 5:6; ಅ. ಕೃತ್ಯಗಳು 3:18) ಆ ದಯಾಪೂರ್ಣ ಸ್ವದಂಶದವನು ಪ್ರೇರೇಪಿಸಿದಂತೆ, ಜಸ್ಟಿನ್ ಶಾಸ್ತ್ರವಚನಗಳನ್ನು ಶೃದ್ಧಾಪೂರ್ವಕವಾಗಿ ಪರೀಕ್ಷಿಸಿದನು ಮತ್ತು ಅವನ ಬರಹಗಳಲ್ಲಿ ನೋಡಲಾಗುವಂತೆ, ಅವುಗಳೆಡೆಗೆ ಮತ್ತು ಬೈಬಲ್ ಪ್ರವಾದನೆಗಳ ಕಡೆಗೆ ಗಣ್ಯತೆಯ ಒಂದು ಪರಿಮಾಣವನ್ನು ಅವನು ಗಳಿಸಿದ್ದನೆಂದು ಭಾಸವಾಗುತ್ತದೆ.
ಅವನ ಕೃತಿಗಳ ಕಡೆಗೆ ಸಾಮೀಪ್ಯ ಅವಲೋಕನೆ
ಮರಣದ ಎದುರಿನಲ್ಲಿ ಕ್ರೈಸ್ತರ ನಿರ್ಭೀತಿಯು ಜಸ್ಟಿನ್ನ ಮೇಲೆ ಪ್ರಭಾವ ಬೀರಿತು. ಹಿಬ್ರೂ ಶಾಸ್ತ್ರವಚನಗಳ ಸತ್ಯಭರಿತ ಬೋಧನೆಗಳನ್ನು ಸಹ ಅವನು ಗಣ್ಯಮಾಡಿದನು. ಡೈಯಾಲೊಗ್ ವಿದ್ ಟ್ರೈಫೊ ಪುಸ್ತಕದಲ್ಲಿ ತರ್ಕಗಳನ್ನು ಬೆಂಬಲಿಸಲು ಜಸ್ಟಿನ್ನು ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಧರ್ಮೋಪದೇಶಕಾಂಡ, 2 ಸಮುವೇಲ, 1 ಅರಸುಗಳು, ಕೀರ್ತನೆಗಳು, ಯೆಶಾಯ, ಯೆರೆಮೀಯ, ಯೆಹೆಜ್ಕೇಲ, ದಾನಿಯೇಲ, ಹೋಶೇಯ, ಯೋವೇಲ, ಆಮೋಸ, ಯೋನ, ಮೀಕ, ಜೆಕರ್ಯ ಮತ್ತು ಮಲಾಕಿಯ ಹಾಗೂ ಸುವಾರ್ತೆ ಪುಸ್ತಕಗಳಿಂದ ಉಲ್ಲೇಖಿಸಿದ್ದನು. ಈ ಬೈಬಲ್ ಪುಸ್ತಕಗಳ ಕಡೆಗೆ ಅವನಿಗಿದ್ದ ಗಣ್ಯತೆಯು ಟ್ರೈಫೊವಿನೊಡನೆ ಅವನು ನಡಿಸಿದ ಸಂವಾದದಲ್ಲಿ ಕಾಣಬಹುದು, ಅದರಲ್ಲಿ ಮೆಸ್ಸೀಯನನ್ನು ನಂಬಿದ ಯೂದಾಯ ಮತದೊಂದಿಗೆ ಜಸ್ಟಿನ್ನು ವ್ಯವಹರಿಸುತ್ತಾನೆ.
ಪ್ರತಿಯೊಂದು ಸಂದರ್ಭದಲ್ಲಿ ಸುವಾರ್ತೆಯನ್ನು ಘೋಷಿಸುತ್ತಾ, ಜಸ್ಟಿನ್ನು ಒಬ್ಬ ಸುವಾರ್ತಿಕನಾಗಿದ್ದನೆಂದು ವರದಿಸಲಾಗಿದೆ. ಬಹುಮಟ್ಟಿಗೆ, ಅವನು ವಿಸ್ತಾರವಾಗಿ ಪ್ರಯಾಣವನ್ನು ಮಾಡಿದ್ದನು. ಅವನು ಸ್ವಲ್ಪ ಸಮಯ ಎಫೆಸದಲ್ಲಿ ಕಳೆದನು ಮತ್ತು ಪ್ರಾಯಶಃ ಅವನು ಒಂದು ಗಣನೀಯ ಅವಧಿಯ ತನಕ ರೋಮಿನಲ್ಲಿ ವಾಸಿಸಿದನು.
ಜಸ್ಟಿನ್ನ ಸಾಹಿತ್ಯ ಕೃತಿಗಳು, ಕ್ರೈಸ್ತತ್ವದ ಸಮರ್ಥನೆಗಾಗಿ ಬರೆದಂತಹ ಸಮರ್ಥನವಾದಗಳನ್ನು [ಆಪೊಲೊಜಿಸ್] ಕೂಡಿರುತ್ತವೆ. ಅವನ ಫಸ್ಟ್ ಆಪೊಲೊಜಿ ಪುಸ್ತಕದಲ್ಲಿ, ಶಾಸ್ತ್ರವಚನಗಳಿಂದ ಬರುವ ಬೆಳಕಿನ ಮೂಲಕ ವಿಧರ್ಮಿ ತತ್ವಜ್ಞಾನದ ದಟ್ಟ ಕತ್ತಲೆಯನ್ನು ತೊಲಗಿಸಲು ಪ್ರಯತ್ನಿಸುತ್ತಾನೆ. ಕ್ರಿಸ್ತನ ಬಲವತ್ತಾದ ಮಾತುಗಳ ಮತ್ತು ಕಾರ್ಯಗಳ ವ್ಯತಿರಿಕ್ತವಾಗಿ ತತ್ವಜ್ಞಾನಿಗಳ ವಿವೇಕವು ಸುಳ್ಳು ಮತ್ತು ಅರ್ಥರಹಿತವಾಗಿದೆಯೆಂದು ಅವನು ಘೋಷಿಸುತ್ತಾನೆ. (ಕೊಲೊಸ್ಸೆಯ 2:8 ನ್ನು ಹೋಲಿಸಿರಿ,) ಯಾರೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾನೋ, ಆ ಹೀನೈಸಲ್ಪಟ್ಟ ಕ್ರೈಸ್ತರಿಗಾಗಿ ಜಸ್ಟಿನ್ನು ವಾದಿಸುತ್ತಾನೆ. ಅವನ ಮತಾಂತರದ ನಂತರವೂ ಅವನು ಮಾತ್ರ ಸತ್ಯ ತತ್ವಜ್ಞಾನವನ್ನು ಗಳಿಸಿದ್ದಾನೆಂದು ಹೇಳುತ್ತಾ, ಅವನು ಒಬ್ಬ ತತ್ವಜ್ಞಾನಿಯ ಉಡುಪುಗಳನ್ನು ತೊಡುತ್ತಿದ್ದನು.
ವಿಧರ್ಮಿ ದೇವರುಗಳನ್ನು ಆರಾಧಿಸಲು ನಿರಾಕರಿಸುತ್ತಿದ್ದರಿಂದ, ಎರಡನೆಯ ಶತಮಾನದ ಕ್ರೈಸ್ತರನ್ನು ನಾಸ್ತಿಕರೆಂದು ಪರಿಗಣಿಸಲಾಗುತ್ತಿತ್ತು. “ನಾವು ನಾಸ್ತಿಕರಲ್ಲ” ಪ್ರತಿವಾದ ಮಾಡಿದನು ಜಸ್ಟಿನ್ನು, “ವಿಶ್ವದ ನಿರ್ಮಾಣಿಕನನ್ನು ಆರಾಧಿಸುತ್ತೇವೆ . . . ಈ ವಿಷಯಗಳಲ್ಲಿ ನಮ್ಮ ಬೋಧಕನು ಯೇಸು ಕ್ರಿಸ್ತನಾಗಿದ್ದಾನೆ . . . ಅವನು ಸತ್ಯ ದೇವರ ಪುತ್ರನಾಗಿದ್ದಾನೆ.” ವಿಗ್ರಹಾರಾಧನೆಯ ಕುರಿತಾಗಿ ಜಸ್ಟಿನ್ ಹೇಳಿದ್ದು: “ಅವರು ಯಾವುದನ್ನು ದೇವರೆಂದು ಕರೆಯುತ್ತಾರೋ ಅದನ್ನು ಮಾಡುತ್ತಾರೆ; ಅದನ್ನು ನಾವು ಕೇವಲ ಅವಿವೇಕತನವೆಂದು ಮಾತ್ರವಲ್ಲ, ದೇವರಿಗೆ ಅಪಮಾನವೆಂದು ಪರಿಗಣಿಸುತ್ತೇವೆ . . . ಎಂಥ ಮೂರ್ಖತನ! ಏನಂದರೆ ನಿಮ್ಮ ಆರಾಧನೆಗಾಗಿ ದುರ್ವ್ಯಸನಿ ಮನುಷ್ಯರು ದೇವರುಗಳನ್ನು ರೂಪಿಸಿ ಮಾಡಿಕೊಳ್ಳುವದು.”—ಯೆಶಾಯ 44:14-20.
ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಅನೇಕ ಉಲ್ಲೇಖಗಳೊಂದಿಗೆ ಜಸ್ಟಿನ್ ಪುನರುತ್ಥಾನ, ಕ್ರಿಸ್ತೀಯ ನೈತಿಕತೆ, ದೀಕ್ಷಾಸ್ನಾನ, ಬೈಬಲ್ ಪ್ರವಾದನೆ (ವಿಶೇಷವಾಗಿ ಕ್ರಿಸ್ತನ ಕುರಿತಾಗಿ) ಮತ್ತು ಯೇಸುವಿನ ಬೋಧನೆಗಳಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸುತ್ತಾನೆ. ಯೇಸುವಿನ ಕುರಿತಾಗಿ, ಜಸ್ಟಿನ್ನು ಯೆಶಾಯನನ್ನು ಉಲ್ಲೇಖಿಸುತ್ತಾ, ತಿಳಿಸಿದ್ದು: “ಸರಕಾರವು [ಕ್ರಿಸ್ತನ] ಭುಜಗಳ ಮೇಲೆ ಇರುವುದು.” ಜಸ್ಟಿನ್ ಇದನ್ನೂ ಸಹ ಹೇಳುವುದು: “ನಾವು ಒಂದು ಮಾನವ ರಾಜ್ಯಕ್ಕಾಗಿ ನೋಡುವುದಾದರೆ, ನಾವು ನಮ್ಮ ಕ್ರಿಸ್ತನನ್ನು ನಿರಾಕರಿಸುತ್ತೇವೆ.” ಅವನು ಕ್ರೈಸ್ತರ ಕಷ್ಟಗಳನ್ನು ಮತ್ತು ಹಂಗುಗಳನ್ನು ಚರ್ಚಿಸುತ್ತಾನೆ, ದೇವರಿಗೆ ತಕ್ಕದ್ದಾದ ಸೇವೆಯು ಅವನ ಚಿತ್ತವನ್ನು ಮಾಡುವವರಾಗಿರುವದನ್ನು ಜರೂರಿಯದ್ದಾಗಿ ಮಾಡುತ್ತದೆಂದು ಸಮರ್ಥಿಸುತ್ತಾನೆ, ಮತ್ತು ಮುಂದೆ ಹೇಳುತ್ತಾನೆಂದರೆ “ಈ ವಿಷಯಗಳನ್ನು ಪ್ರಕಟಿಸಲು ಪ್ರತಿಯೊಂದು ರಾಷ್ಟ್ರದೊಳಗೆ ಆತನಿಂದ ವ್ಯಕ್ತಿಗಳು ಕಳುಹಿಸಲ್ಪಡಬೇಕು.”
ದ ಸೆಕಂಡ್ ಆಪೊಲೊಜಿ ಆಫ್ ಜಸ್ಟಿನ್ (ಮೊದಲನೆಯದರ್ದ ಮುಂದರಿಸುವಿಕೆಯೆಂದು ನಂಬಲಾಗಿದೆ) ರೋಮನ್ ಶಾಸನ ಸಭೆಗೆ ಉದ್ದೇಶಿಸಲ್ಪಟ್ಟಿದೆ. ಯೇಸು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದ ನಂತರ ಹಿಂಸಿಸಲ್ಪಟ್ಟ ಕ್ರೈಸ್ತರ ಅನುಭವಗಳನ್ನು ವಿವರಿಸುವ ಮೂಲಕ ಜಸ್ಟಿನ್ ರೋಮನರಿಗೆ ಅಪ್ಪೀಲು ಮಾಡುತ್ತಾನೆ. ಕ್ರಿಸ್ತೀಯ ಪ್ರಜೆಗಳ ನಡತೆಯಲ್ಲಿ ಪ್ರತಿಬಿಂಬಿಸಲ್ಪಟ್ಟ ಯೇಸುವಿನ ಬೋಧನೆಗಳ ನೈತಿಕ ಶ್ರೇಷ್ಠತೆಯು, ರೋಮನ್ ಅಧಿಕಾರಿಗಳಿಗೆ ಕಡಿಮೆ ಮೌಲ್ಯದ್ದಾಗಿ ತೋರುತ್ತಿತ್ತು. ನಿಜವಾಗಿ, ಕೇವಲ ಶಿಷ್ಯತನವನ್ನು ಒಪ್ಪಿಕೊಳ್ಳುವುದು ಮಾರಕ ಪರಿಣಾಮಗಳನ್ನು ತರಸಾಧ್ಯವಿತ್ತು. ಕ್ರಿಸ್ತೀಯ ಬೋಧನೆಗಳಲ್ಲಿ ಹಿಂದೆ ಒಬ್ಬ ಬೋಧಕನಾಗಿದವ್ದನ ವಿಷಯದಲ್ಲಿ, ಜಸ್ಟಿನ್ ಲೂಸ್ಯಸ್ ಎಂದು ಹೆಸರಿಸಲ್ಪಟ್ಟ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸುತ್ತಾನೆ, ಅವನು ಹೀಗೆ ಪ್ರಶ್ನಿಸಿದ್ದನು: “ನೀವು ಈ ಮನುಷ್ಯನನ್ನು, ಒಬ್ಬ ವ್ಯಭಿಚಾರಿಯಾಗಿ, ಹಾದರಮಾಡುತ್ತಿರುವವನಾಗಿ, ಕೊಲೆಪಾತಕನಾಗಿ, ಕಳ್ಳನಾಗಿ, ಯಾವುದೇ ಇತರ ದುಷ್ಕೃತ್ಯಕ್ಕಾಗಿ ಆಪಾದಿಸಲ್ಪಟ್ಟದ್ದಕ್ಕಾಗಿ ಅಲ್ಲ, ಬದಲಿಗೆ ಅವನು ಕ್ರೈಸ್ತನೆಂಬ ಹೆಸರಿನಿಂದ ಕರೆಯಲ್ಪಟ್ಟಿದ್ದಾನೆಂದು ಕೇವಲ ಒಪ್ಪಿಕೊಂಡದ್ದಕ್ಕಾಗಿ ಯಾಕೆ ಶಿಕ್ಷಿಸುತ್ತೀರಿ?”
ಆ ಸಮಯದಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವವರ ವಿರುದ್ಧ ಇದ್ದಂತಹ ದುರಭಿಪ್ರಾಯದ ವಿಸ್ತಾರ್ಯವು, ಜಸ್ಟಿನ್ನ ಹೇಳಿಕೆಯಿಂದ ಸೂಚಿಸಲ್ಪಟ್ಟಿರುತ್ತದೆ: “ಆದುದರಿಂದ ನಾನು ಸಹ, ನಾನು ಹೆಸರಿಸಿದ ಕೆಲವರಿಂದ ಅಥವಾ ಪ್ರಾಯಶಃ ಎದೆಗಾರಿಕೆ ಮತ್ತು ಬಡಾಯಿಕೊಚ್ಚುವಿಕೆಯ ಪ್ರೇಮಿಯಾಗಿರುವ ಆ ಕ್ರೆಸೆನ್ಸ್ನಿಂದ ಒಳಸಂಚಿಗೆ ಗುರಿಮಾಡಲ್ಪಟ್ಟು, ಕಂಭಕ್ಕೆ ಬಂಧಿಸಲ್ಪಡುವದನ್ನು ನಿರೀಕ್ಷಿಸುತ್ತೇನೆ; ಏಕೆಂದರೆ ಅವನಿಗೆ ಅರ್ಥವಾಗದ ವಿಷಯಗಳಲ್ಲಿ ಬಹಿರಂಗವಾಗಿ ನಮ್ಮ ವಿರುದ್ಧ ಸಾಕ್ಷಿ ಕೊಡುವ, ಕ್ರೈಸ್ತರು ನಾಸ್ತಿಕರು ಮತ್ತು ಅಧಾರ್ಮಿಕರು ಎಂದು ಹೇಳುತ್ತಾ ಮತ್ತು ಇದನ್ನು ಜನಜಂಗುಳಿಯೊಂದಿಗೆ ಮೆಚ್ಚಿಕೆಯನ್ನು ಪಡೆಯಲು ಮತ್ತು ಅವರನ್ನು ಮೆಚ್ಚಿಸಲು ಹೀಗೆ ಮಾಡುವ ಆ ಮನುಷ್ಯನು ತತ್ವಜ್ಞಾನಿಯೆಂಬ ಹೆಸರಿಗೆ ತಕ್ಕವನಲ್ಲ. ಏಕೆಂದರೆ ಅವನು ಕ್ರಿಸ್ತನ ಬೋಧನೆಗಳನ್ನು ಓದದೇ ಆತನು ನಮ್ಮನ್ನು ಆಕ್ರಮಣ ಮಾಡುವದಾದರೆ, ಅವನು ಸಂಪೂರ್ಣವಾಗಿ ಭೃಷ್ಟನಾಗಿರುತ್ತಾನೆ ಮತ್ತು ಶಿಕ್ಷಣವಿಲ್ಲದವರಿಗಿಂತ ಕಡೆಯವನಾಗಿರುತ್ತಾನೆ, ಅವರಾದರೋ ಹೆಚ್ಚಾಗಿ ಅವರಿಗೆ ಅರ್ಥವಾಗದ ವಿಷಯಗಳನ್ನು ಚರ್ಚಿಸುವುದರಿಂದ ಅಥವಾ ಸುಳ್ಳು ಸಾಕ್ಷಿಯನ್ನು ಕೊಡುವುದರಿಂದ ದೂರವಿರುತ್ತಾರೆ.”
ಅವನ ಮರಣ
ಕ್ರೆಸೆನ್ಸ್ ಅಥವಾ ಇತರ ಸಿನಿಕ್ ತತ್ವಾನುಯಾಯಿಗಳ ಕೈಗಳಲ್ಲಿಯೋ, ಜಸ್ಟಿನ್ ಒಬ್ಬ ಒಳಸಂಚು ನಡಿಸುವವನೋಪಾದಿ ರೋಮನ್ ಅಧಿಕಾರಿಗಳ ಮುಂದೆ ಆಪಾದಿಸಲ್ಪಟ್ಟನು ಮತ್ತು ಮರಣ ದಂಡನೆಗೆ ಒಪ್ಪಿಸಲ್ಪಟ್ಟನು. ಸಾಧಾರಣ ಸಾ. ಶ. 165 ರಲ್ಲಿ ರೋಮಿನಲ್ಲಿ ಅವನ ಶಿರಚ್ಛೇದವನ್ನು ಗೈಯಲಾಯಿತು ಮತ್ತು ಒಬ್ಬ “ಹುತಾತ್ಮ” (ಅಂದರೆ “ಸಾಕ್ಷಿ”) ನಾದನು. ಹೀಗಿರುವುದರಿಂದ, ಅವನನ್ನು ಜಸ್ಟಿನ್ ಮಾರ್ಟರ್ ಎಂದು ಕರೆಯಲಾಗಿದೆ.
ಜಸ್ಟಿನ್ನ ಬರವಣಿಗೆಯ ಶೈಲಿಯಲ್ಲಿ, ಅವನ ದಿನದ ಇತರ ವಿದ್ಯಾವಂತ ಮನುಷ್ಯರ ತೇಜಸ್ಸು ಮತ್ತು ನಯನಾಜೂಕತನದ ಕೊರತೆಯಿರಬಹುದು, ಆದರೆ ಸತ್ಯಕ್ಕಾಗಿ ಮತ್ತು ನೀತಿಗಾಗಿ ಅವನ ಹುರುಪು ಯಥಾರ್ಥವಾಗಿತ್ತು ಎಂದು ವ್ಯಕ್ತವಾಗುತ್ತದೆ. ಎಷ್ಟರ ಮಟ್ಟಿಗೆ ಅವನು ಶಾಸ್ತ್ರಗಳ ಮತ್ತು ಯೇಸುವಿನ ಬೋಧನೆಗಳ ಹೊಂದಿಕೆಯಲ್ಲಿ ಜೀವಿಸಿದ್ದನೆಂದು ಸ್ಪಷ್ಟವಾಗಿಗಿ ಹೇಳಲಾಗುವುದಿಲ್ಲ. ಆದರೂ, ಅವುಗಳ ಐತಿಹಾಸಿಕ ಒಳನೋಟವು ಮತ್ತು ಹಲವಾರು ಶಾಸ್ತ್ರೀಯ ಉಲ್ಲೇಖಗಳಿಗಾಗಿ ಅದು ಮೌಲ್ಯದ್ದಾಗಿ ಎಣಿಸಲ್ಪಟ್ಟಿದೆ. ಎರಡನೆಯ ಶತಮಾನದ ಕ್ರೈಸ್ತರೆಂದು ಹೇಳಿಕೊಳ್ಳುವವರ ಜೀವಿತಗಳ ಮತ್ತು ಅನುಭವಗಳ ಒಳನೋಟವನ್ನು ಅವು ಕೊಡುತ್ತವೆ.
ಕ್ರೈಸ್ತರ ವಿರುದ್ಧ ನಡಿಸಲ್ಪಟ್ಟ ಹಿಂಸೆಯ ಅನ್ಯಾಯವನ್ನು ಸಾಮ್ರಾಟನಿಗೆ ತೋರಿಸಲು ಜಸ್ಟಿನ್ನು ಮಾಡಿದ ಪ್ರಯತ್ನಗಳು ಗಮನಾರ್ಹವಾಗಿವೆ. ಅನ್ಯ ಧರ್ಮ ಮತ್ತು ತತ್ವಜ್ಞಾನವನ್ನು ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನದ ಪರವಾಗಿ ತ್ಯಜಿಸುವಿಕೆಯು, ಅಪೊಸ್ತಲ ಪೌಲನು ಏಥೆನ್ಸಿನಲ್ಲಿ ಎಪಿಕ್ಯೂರಿಯನ್ ಮತ್ತು ಸ್ತೋಯಿಕ್ ತತ್ವಜ್ಞಾನಿಗಳಿಗೆ ಧೈರ್ಯದಿಂದ ಸತ್ಯ ದೇವರು ಮತ್ತು ಪುನರುತ್ಥಾನಗೊಳಿಸಲ್ಪಟ್ಟ ಯೇಸು ಕ್ರಿಸ್ತನ ಕುರಿತಾಗಿ ಮಾತಾಡಿದ್ದನ್ನು ನಮ್ಮ ನೆನಪಿಗೆ ತರುತ್ತದೆ.—ಅ. ಕೃತ್ಯಗಳು 17:18-34.
ಸಹಸ್ರ ವರ್ಷಗಳ ಕಾಲದಲ್ಲಿ ಸತ್ತವರ ಪುನರುತ್ಥಾನದ ಸ್ವಲ್ಪ ಜ್ಞಾನವು ಜಸ್ಟಿನ್ಗೆ ಇತ್ತು ಮತ್ತು ಬೈಬಲಿನ ಪುನರುತ್ಥಾನದ ನಿರೀಕ್ಷೆಯು ನಂಬಿಕೆಯನ್ನು ಎಷ್ಟು ಬಲಪಡಿಸುತ್ತದೆ! ಹಿಂಸೆಯ ಎದುರಿನಲ್ಲಿ ಅದು ಕ್ರೈಸ್ತರನ್ನು ಪೋಷಿಸಿದೆ ಮತ್ತು ಮಹಾ ಸಂಕಷ್ಟಗಳನ್ನು, ಮರಣವನ್ನು ಸಹಿಸಲು ಅವರಿಗೆ ಶಕ್ತರನ್ನಾಗಿ ಮಾಡಿದೆ.—ಯೋಹಾನ 5:28, 29; 1 ಕೊರಿಂಥ 15:16-19; ಪ್ರಕಟನೆ 2:10; 20:4, 12, 13; 21:2-4.
ಹಾಗಾದರೆ, ಆಗ ಜಸ್ಟಿನ್ ಸತ್ಯವನ್ನು ಆರಿಸಿದನು ಮತ್ತು ಗ್ರೀಕ್ ತತ್ವಜ್ಞಾನವನ್ನು ತಿರಸ್ಕರಿಸಿದನು. ಒಬ್ಬ ಕ್ರೈಸ್ತ ಸಮರ್ಥಕನಾಗಿ, ಅವನು ಕ್ರೈಸ್ತರೆಂದು ಹೇಳಿಕೊಳ್ಳುವವರ ಬೋಧನೆಗಳನ್ನು ಮತ್ತು ಆಚರಣೆಗಳನ್ನು ಸಮರ್ಥಿಸಿದನು. ಮತ್ತು ತಾನೇ ಕ್ರೈಸ್ತತ್ವವನ್ನು ಹೇಳಿಕೊಂಡದ್ದಕ್ಕಾಗಿ, ಅವನು ಮರಣವನ್ನು ಅನುಭವಿಸಿದನು. ಹಿಂಸೆಯ ಎದುರಿನಲ್ಲಿ ಸತ್ಯಕ್ಕಾಗಿರುವ ಜಸ್ಟಿನ್ನ ಗಣ್ಯತೆ ಮತ್ತು ಅವನ ಧೈರ್ಯಶಾಲಿ ಸಾರುವಿಕೆ ವಿಶೇಷವಾಗಿ ಗಮನಾರ್ಹವಾಗಿವೆ, ಏಕೆಂದರೆ ಇಂಥ ಗುಣಗಳು ಇಂದು ಯೇಸುವಿನ ಯಥಾರ್ಥ ಹಿಂಬಾಲಕರಲ್ಲಿ ಕಂಡುಕೊಳ್ಳಲ್ಪಟ್ಟಿವೆ.—ಜ್ಞಾನೋಕ್ತಿ 2:4-6; ಯೋಹಾನ 10:1-4; ಅ. ಕೃತ್ಯಗಳು 4:29; 3 ಯೋಹಾನ 4. (w92 3/15)