ಮದುವೆಯು ಸಂತೋಷಕ್ಕೆ ಒಂದೇ ಕೀಲಿಕೈಯೋ?
“ಆಕೆಯು ಬೇಕಾದವನನ್ನು [ಕರ್ತನಲ್ಲಿ ಮಾತ್ರವೇ, NW] ಮದುವೆ ಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ. ಆದರೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖ.”—1 ಕೊರಿಂಥ 7:39, 40.
1. ಶಾಸ್ತ್ರವಚನಗಳು ಯೆಹೋವನನ್ನು ಹೇಗೆ ವರ್ಣಿಸುತ್ತವೆ, ಮತ್ತು ಆತನು ತನ್ನ ಸೃಷ್ಟಿಜೀವಿಗಳಿಗಾಗಿ ಏನನ್ನು ಮಾಡಿದ್ದಾನೆ?
ಯೆಹೋವನು “ಸಂತೋಷವುಳ್ಳ” ದೇವರು. (1 ತಿಮೊಥಿ 1:11) “ಎಲ್ಲಾ ಒಳ್ಳೇ ದಾನಗಳ ಕುಂದಿಲ್ಲದ ಎಲ್ಲಾ ವರಗಳ” ಸಮೃದ್ಧ ದಾತನಾದ ಆತನು, ತನ್ನೆಲ್ಲಾ ಬುದ್ಧಿ ಜೀವಿಗಳಿಗೆ—ಮನುಷ್ಯರಿಗೂ ದೇವದೂತರಿಗೂ—ತನ್ನ ಸೇವೆಯಲ್ಲಿ ಸಂತೋಷಿತರಾಗಿರಲು ಏನು ಬೇಕೋ ಅದನ್ನೇ ಒದಗಿಸಿದ್ದಾನೆ. (ಯಾಕೋಬ 1:17) ಆ ಸಂಬಂಧದಲ್ಲಿ, ಪೂರ್ಣ ಕಂಠದಿಂದ ಹಾಡುವ ಹಕ್ಕಿ, ನಲಿದಾಡುವ ನಾಯಿಮರಿ, ಅಥವಾ ಲೀಲೆಯಾಡುವ ಹಂದಿಮೀನು ಎಲ್ಲವು—ಪ್ರಾಣಿಗಳು ಸಹಾ ತಮ್ಮ ಸಹಜವಾದ ನೆಲೆಗಳಲ್ಲಿ ಸಂತೋಷಿಸುವಂತೆ ಯೆಹೋವನು ನಿರ್ಮಿಸಿದನೆಂಬದಕ್ಕೆ ರುಜುವಾತು ಕೊಡುತ್ತವೆ. ಕೀರ್ತನೆಗಾರನು ಕಾವ್ಯರೂಪದಲ್ಲಿ ಇದನ್ನು ಸಹ ಹೇಳಿರುತ್ತಾನೆ: “ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ. [ಸಂತೃಪ್ತಿಯಿದೆ, NW].”—ಕೀರ್ತನೆ 104:16.
2. (ಎ) ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಯೇಸು ಸಂತೋಷವನ್ನು ಕಂಡುಕೊಳ್ಳುತ್ತಾನೆ ಎಂದು ಯಾವುದು ತೋರಿಸುತ್ತದೆ? (ಬಿ) ಯೇಸುವಿನ ಶಿಷ್ಯರಿಗೆ ಸಂತೋಷಕ್ಕಾಗಿ ಯಾವ ಕಾರಣಗಳಿದ್ದವು?
2 ಯೇಸು ಕ್ರಿಸ್ತನು, ‘ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ಆಗಿರುತ್ತಾನೆ.’ (ಇಬ್ರಿಯ 1:3) ಆದ್ದರಿಂದ ಯೇಸುವನ್ನು “ಭಾಗ್ಯವಂತನಾದ (ಸಂತೋಷವುಳ್ಳ, NW) ಏಕಾಧಿಪತಿ” ಎಂದು ಕರೆಯುವುದೇನೂ ಆಶ್ಚರ್ಯವಲ್ಲ. (1 ತಿಮೊಥಿ 6:15) ಯೆಹೋವನ ಚಿತ್ತವನ್ನು ಮಾಡುವುದು ಆಹಾರಕ್ಕಿಂತಲೂ ಹೆಚ್ಚು ಹೇಗೆ ಸಂತೃಪ್ತಿಕರವಾಗಿರಬಲ್ಲದು, ಅತ್ಯುಲಾಸ್ಲವನ್ನುಂಟುಮಾಡಬಲ್ಲದು ಎನ್ನುವುದರ ಒಂದು ಆಶ್ಚರ್ಯಕರವಾದ ಮಾದರಿಯನ್ನು ಅವನು ನಮಗೆ ಕೊಟ್ಟಿದ್ದಾನೆ. ದೇವರ ಭಯದೊಂದಿಗೆ ಕ್ರಿಯೆಗೈಯುವಾಗ ಅಂದರೆ ಗಾಢ ಪೂಜ್ಯತೆಯೊಂದಿಗೆ ಮತ್ತು ಅವನನ್ನು ಅಪ್ರಸನ್ನಗೊಳಿಸುವ ಹಿತಕರವಾದ ಭಯದಲ್ಲಿ ಅತ್ಯಾನಂದ ದೊರಕಬಲ್ಲದು ಎಂದು ಸಹ ಯೇಸು ನಮಗೆ ತೋರಿಸುತ್ತಾನೆ. (ಕೀರ್ತನೆ 40:8; ಯೆಶಾಯ 11:3; ಯೋಹಾನ 4:34) ಅವನ 70 ಶಿಷ್ಯರು ರಾಜ್ಯ ಸಾರುವಿಕೆಯ ನಂತರ “ಸಂತೋಷವುಳ್ಳವರಾಗಿ” ಹಿಂದಿರುಗಿ ವರದಿಯನ್ನಿತ್ತಾಗ, ಯೇಸು ತಾನೇ “ಪವಿತ್ರಾತ್ಮನ ಪ್ರೇರಣೆಯಿಂದ ಉಲ್ಲಾಸಗೊಂಡನು.” ತನ್ನ ಸಂತೋಷವನ್ನು ತನ್ನ ತಂದೆಗೆ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದ ಮೇಲೆ, ಅವನು ತನ್ನ ಶಿಷ್ಯರ ಕಡೆಗೆ ತಿರುಗಿ, ಅಂದದ್ದು: “ನೀವು ನೋಡುತ್ತಿರುವ ಸಂಗತಿಗಳನ್ನು ನೋಡುವವರು ಧನ್ಯರು. (ಸಂತೋಷವುಳ್ಳವರು, NW) ಬಹು ಮಂದಿ ಪ್ರವಾದಿಗಳೂ ಅರಸರೂ ನೀವು ನೋಡುತ್ತಿರುವ ಸಂಗತಿಗಳನ್ನು ನೋಡಬೇಕೆಂದು ಅಪೇಕ್ಷಿಸಿದರೂ ನೋಡಲಿಲ್ಲ. ನೀವು ಕೇಳಬೇಕೆಂದು ಅಪೇಕ್ಷಿಸಿದ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಕೇಳಲಿಲ್ಲ.”—ಲೂಕ 10:17-24.
ಸಂತೋಷದಿಂದಿರಲು ಕಾರಣಗಳು
3. ಸಂತೋಷಕ್ಕಾಗಿ ಇರುವ ಕೆಲವು ಕಾರಣಗಳು ಯಾವುವು?
3 ಈ ಅಂತ್ಯಕಾಲದಲ್ಲಿ ಯೆಹೋವನ ವಾಕ್ಯ ಮತ್ತು ಉದ್ದೇಶಗಳ ನೆರವೇರಿಕೆಯಲ್ಲಿ ನಾವೀಗ ಕಾಣುತ್ತಿರುವ ಸಂಗತಿಗಳನ್ನು ನೋಡಲು ನಮ್ಮ ನೇತ್ರಗಳು ಸಂತೋಷಿಸಬಾರದೇ? ಪೂರ್ವದ ನಂಬಿಗಸ್ತ ಪ್ರವಾದಿಗಳೂ ಅರಸರೂ ಆಗಿದ್ದ ಯೆಶಾಯ, ದಾನಿಯೇಲ ಮತ್ತು ದಾವೀದ ಮೊದಲಾದವರು ತಿಳಿಯಲಾರದೆ ಹೋದ ಪ್ರವಾದನೆಗಳನ್ನು ನಾವು ತಿಳಿಯುವುದಕ್ಕಾಗಿ ಅತ್ಯಾನಂದ ಪಡಬೇಡವೇ? ಸಂತೋಷವುಳ್ಳ ಏಕಾಧಿಪತಿಯಾದ ನಮ್ಮ ರಾಜ ಕ್ರಿಸ್ತ ಯೇಸುವಿನ ಕ್ರಿಯಾಶೀಲ ನಾಯಕತ್ವದ ಕೆಳಗೆ, ಸಂತೋಷವುಳ್ಳ ದೇವರಾದ ಯೆಹೋವನನ್ನು ಸೇವಿಸಲು ನಾವು ಹರ್ಷಿಸುವುದಿಲ್ಲವೇ? ನಿಶ್ಚಯವಾಗಿಯೂ ಹರ್ಷಿಸುವೆವು!
4, 5. (ಎ) ಯೆಹೋವನ ಸೇವೆಯಲ್ಲಿ ಸಂತೋಷಿತರಾಗಿ ಉಳಿಯಲು, ನಾವೇನನ್ನು ವರ್ಜಿಸಬೇಕು? (ಬಿ) ಸಂತೋಷಕ್ಕೆ ನೆರವಾಗುವ ಕೆಲವು ವಿಷಯಗಳು ಯಾವುವು, ಮತ್ತು ಇದು ಯಾವ ಪ್ರಶ್ನೆಯನ್ನು ಎಬ್ಬಿಸುತ್ತದೆ?
4 ಆದರೆ ಯೆಹೋವನ ಸೇವೆಯಲ್ಲಿ ನಾವು ಸಂತೋಷಿತರಾಗಿ ಉಳಿಯಬೇಕಾದರೆ, ಸಂತೋಷಕ್ಕಾಗಿರುವ ನಮ್ಮ ಪೂರ್ವಾಪೇಕ್ಷಿತ ಶರ್ತಗಳನ್ನು ಲೌಕಿಕ ವಿಚಾರಗಳ ಮೇಲೆ ಆಧಾರವಾಗಿಡಬಾರದು. ಇವು ಸುಲಭವಾಗಿಯೇ ನಮ್ಮ ಆಲೋಚನೆಯನ್ನು ಮಂದ ಮಾಡ ಸಾಧ್ಯವಿದೆ ಯಾಕಂದರೆ ಇದರಲ್ಲಿ ಲೌಕಿಕ ಐಶ್ವರ್ಯ, ಥಳಕಿನ ಜೀವನ ಶೈಲಿ ಮುಂತಾದವುಗಳು ಸೇರಿವೆ. ಅಂಥ ವಿಷಯಗಳ ಮೇಲೆ ಕಂಡುಕೊಳ್ಳುವ ಯಾವುದೇ “ಸಂತೋಷವು” ಅಲ್ಪಕಾಲದ್ದು ಯಾಕಂದರೆ ಈ ಲೋಕವು ಗತಿಸಿಹೋಗಲಿದೆ.—1 ಯೋಹಾನ 2:15-17.
5 ಇಂಥ ಲೌಕಿಕ ಗುರಿಗಳನ್ನು ಹೊಂದುವದು ನಿಜ ಸಂತೋಷವನ್ನು ತರಲಾರದು ಎಂದು ಯೆಹೋವನ ಸಮರ್ಪಿತ ಸೇವಕರಲ್ಲಿ ಹೆಚ್ಚಿನವರು ತಿಳಿದಿದ್ದಾರೆ. ತನ್ನ ಸೇವಕರ ನಿಜ ಸಂತೋಷಕ್ಕೆ ನೆರವಾಗುವ ಆತ್ಮಿಕ ಮತ್ತು ಐಹಿಕ ವಿಷಯಗಳನ್ನು ನಮ್ಮ ಪರಲೋಕದ ತಂದೆಯು ಮಾತ್ರವೇ ಒದಗಿಸುವಾತನು. “ನಂಬಿಗಸ್ತನೂ ವಿವೇಕಿಯೂ ಆದ ಆಳಿನ” ಮೂಲಕ ಆತನು ನಮಗೆ ಕೊಡುವ ಆತ್ಮಿಕ ಆಹಾರಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! (ಮತ್ತಾಯ 24:45-47) ದೇವರ ಪ್ರೀತಿಯುಳ್ಳ ಹಸ್ತದಿಂದ ನಾವು ಪಡೆಯುವ ದೈಹಿಕ ಆಹಾರ ಮತ್ತು ಇತರ ಐಹಿಕ ವಸ್ತುಗಳಿಗಾಗಿ ಸಹ ನಾವು ಕೃತಜ್ಞರಾಗಿರುತ್ತೇವೆ. ಅದಲ್ಲದೆ, ಮದುವೆಯ ಆಶ್ಚರ್ಯಕರ ವರವು ಮತ್ತು ಕುಟುಂಬ ಜೀವನದ ಸಂಬಂಧಿತ ಸಂತೋಷಗಳು ಸಹ ಇರುತ್ತವೆ. ವಿಧವೆಯರಾದ ತನ್ನ ಸೊಸೆಯಂದಿರ ಕಡೆಗೆ ನವೂಮಿಯ ಹೃದಯಪೂರ್ವಕ ಅಪೇಕ್ಷೆಯು ಈ ಮಾತುಗಳಲ್ಲಿ ವ್ಯಕ್ತವಾದದೇನ್ದೂ ಆಶ್ಚರ್ಯವಲ್ಲ: “ನೀವಿಬ್ಬರೂ ಮದುವೆಯಾಗಿ ಗಂಡನ ಮನೆಯಲ್ಲಿ ವಿಶ್ರಾಂತಿಯಿಂದಿರುವಂತೆ ಯೆಹೋವನು [ವರವನ್ನು, NW] ಅನುಗ್ರಹಿಸಲಿ.” (ರೂತಳು 1:9) ಹೀಗೆ ಮದುವೆಯು ಮಹಾ ಸಂತೋಷಕ್ಕೆ ಬಾಗಲನ್ನು ತೆರೆಯಬಲ್ಲ ಒಂದು ಕೀಲಿಕೈ ಆಗಿರುತ್ತದೆ. ಆದರೆ ಒಂದು ಸಂತೋಷದ ಜೀವಿತಕ್ಕೆ ದ್ವಾರವನ್ನು ತೆರೆಯುವುದಕ್ಕೆ ಮದುವೆಯೊಂದೇ ಕೀಲಿಕೈಯೋ? ವಿಷಯವು ಹೀಗಿದೆಯೋ ಇಲ್ಲವೋ ಎಂಬದನ್ನು ವಿಶೇಷವಾಗಿ ಯುವಕರು ಗಂಭೀರವಾಗಿ ಪರೀಕ್ಷಿಸುವ ಅಗತ್ಯವಿದೆ.
6. ಆದಿಕಾಂಡಕ್ಕೆ ಅನುಸಾರವಾಗಿ, ಮದುವೆಯ ಏರ್ಪಾಡಿನ ಮುಖ್ಯ ಉದ್ದೇಶವು ಏನಾಗಿತ್ತು?
6 ಮದುವೆಯ ಮೂಲವನ್ನು ವಿವರಿಸುತ್ತಾ ಬೈಬಲ್ ಹೇಳುವುದು: “ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು. ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ—ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:27, 28) ಯೆಹೋವನ ಈ ಮದುವೆಯ ಏರ್ಪಾಡಿನ ಮೂಲಕ, ಹೆಚ್ಚು ಮಾನವ ಜೀವಿಗಳನ್ನು ಅಸ್ತಿತ್ವಕ್ಕೆ ತರುವಂತೆ ಆದಾಮನು ಉಪಯೋಗಿಸಲ್ಪಟ್ಟನು, ಹೀಗೆ ಮಾನವ ಕುಲವನ್ನು ವಿಸ್ತಾರ ಮಾಡುವಂಥಾಯಿತು. ಆದರೆ ಮದುವೆಯಲ್ಲಿ ಇದಕ್ಕಿಂತ ಎಷ್ಟೋ ಹೆಚ್ಚು ವಿಷಯಗಳು ಸೇರಿವೆ.
“ಕರ್ತನಲ್ಲಿ ಮಾತ್ರವೇ”
7. ಯಾವ ವಿವಾಹದವಶ್ಯಕತೆಯನ್ನು ನೆರವೇರಿಸಲು ಒಬ್ಬ ನಂಬಿಗಸ್ತ ಮೂಲಪಿತೃವು ಮಹಾ ಪ್ರಯತ್ನಗಳನ್ನು ಮಾಡಿದ್ದನು?
7 ಯೆಹೋವನು ವಿವಾಹದೇರ್ಪಾಡಿನ ಮೂಲಕರ್ತನು ಆಗಿರಲಾಗಿ, ತನ್ನ ಸೇವಕರಿಗೆ ಸಂತೋಷದಲ್ಲಿ ಪರಿಣಮಿಸುವ ದಾಂಪತ್ಯಕ್ಕಾಗಿ ಮಟ್ಟಗಳನ್ನು ಅವನೇ ಇಡುವಂತೆ ನಾವು ಅಪೇಕ್ಷಿಸುವೆವು. ಮೂಲಪಿತೃಗಳ ಕಾಲದಲ್ಲಿ, ಯೆಹೋವನ ಆರಾಧಕರಲ್ಲದ ಜನರನ್ನು ಮದುವೆಯಾಗುವುದು ಬಲವಾಗಿ ನಿರುತ್ತೇಜಿಸಲ್ಪಟ್ಟಿತ್ತು. ಮೂಲಪಿತೃವಿನ ಮಗನಾದ ಇಸಾಕನಿಗೋಸ್ಕರ ಕಾನಾನ್ಯರಿಂದ ಹೆಂಡತಿಯನ್ನು ತೆಗೆದುಕೊಳ್ಳುವದಿಲ್ಲವೆಂದು ಸೇವಕನಾದ ಎಲೀಯೆಜರನು ಯೆಹೋವನ ಮೇಲೆ ಪ್ರಮಾಣ ಮಾಡುವಂತೆ ಅಬ್ರಹಾಮನು ಹೇಳಿದ್ದನು. ಎಲೀಯೆಜರನು ಒಂದು ದೀರ್ಘ ಪ್ರಯಾಣವನ್ನು ಕೈಕೊಂಡನು ಮತ್ತು ‘ಯೆಹೋವನಿಂದ ತನ್ನ ಧಣಿಯ ಮಗನಿಗೆ ನೇಮಕವಾದ ಕನ್ನಿಕೆ’ ಯನ್ನು ಕಂಡು ಹಿಡಿಯುವದಕ್ಕೋಸ್ಕರ ಅಬ್ರಹಾಮನ ಸೂಚನೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿದನು. (ಆದಿಕಾಂಡ 24:3, 44) ಹೀಗೆ ಇಸಾಕನು ರೆಬೆಕ್ಕಳನ್ನು ಮದುವೆಯಾದನು. ಅವರ ಮಗನಾದ ಏಸಾವನು ವಿಧರ್ಮಿ ಹಿತ್ತೀಯರಿಂದ ಹೆಂಡತಿಯರನ್ನು ಆದುಕೊಂಡಾಗ, ಆ ಸ್ತ್ರೀಯರು “ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆಯ ಮೂಲವಾದರು.”—ಆದಿಕಾಂಡ 26:34, 35; 27:46; 28:1, 8.
8. ನಿಯಮದ ಒಡಂಬಡಿಕೆಯಿಂದ ಮದುವೆಯ ಮೇಲೆ ಯಾವ ನಿರ್ಬಂಧವು ಹಾಕಲ್ಪಟ್ಟಿತ್ತು, ಮತ್ತು ಯಾಕೆ?
8 ನಿಯಮದ ಒಡಂಬಡಿಕೆಯ ಕೆಳಗೆ, ನಮೂದಿತ ಕಾನಾನ್ಯ ಜನಾಂಗಗಳ ಪುರುಷ ಅಥವಾ ಸ್ತ್ರೀಯರನ್ನು ಮದುವೆಯಾಗುವುದು ನಿಷೇಧಿಸಲ್ಪಟ್ಟಿತ್ತು. ಯೆಹೋವನು ತನ್ನ ಜನರಿಗೆ ಸೂಚಿಸಿದ್ದು: “ಅವರೊಡನೆ ಬೀಗತನ ಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂ ಬಾರದು, ಅವರಿಂದ ತರಲೂ ಬಾರದು. ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸಲಿಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೇ ನಿಮ್ಮನ್ನು ನಾಶಮಾಡುವನು.”—ಧರ್ಮೋಪದೇಶಕಾಂಡ 7:3, 4.
9. ಬೈಬಲ್ ಕ್ರೈಸ್ತರಿಗೆ ಮದುವೆಯ ವಿಷಯದಲ್ಲಿ ಯಾವ ಸೂಚನೆಯನ್ನು ಕೊಡುತ್ತದೆ?
9 ತದ್ರೀತಿಯ ನಿರ್ಬಂಧಗಳು ಕ್ರೈಸ್ತ ಸಭೆಯೊಳಗೆ ಯೆಹೋವನ ಆರಾಧಕರಲ್ಲದವರನ್ನು ವಿವಾಹವಾಗುವದರ ಮೇಲೆ ಅನ್ವಯಿಸಬೇಕೆಂಬದೇನೂ ಆಶ್ಚರ್ಯವಲ್ಲ. ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳಿಗೆ ಬೋಧಿಸಿದ್ದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು?” (2 ಕೊರಿಂಥ 6:14, 15) ಈ ಸೂಚನೆಯು ಹಲವಾರು ವಿಧಗಳಲ್ಲಿ ಅನ್ವಯಿಸುತ್ತದೆ, ಮತ್ತು ಮದುವೆಗೆ ಖಂಡಿತವಾಗಿಯೂ ಅನ್ವಯಿಸಯುಕ್ತವು. ಯಾರನ್ನಾದರೂ ಮದುವೆಯಾಗಲು ಯೋಚಿಸುವಾಗ ಎಲ್ಲಾ ಸಮರ್ಪಿತ ಕ್ರೈಸ್ತರಿಗೆ ಪೌಲನ ಸ್ಪಷ್ಟವಾಗಿದ ಸೂಚನೆಯೇನಂದರೆ ಅವರು “ಕರ್ತನ ಐಕ್ಯತೆಯಲ್ಲಿ ಇದ್ದವರನ್ನು ಮಾತ್ರವೇ” ವಿವಾಹವಾಗಬೇಕು.—1 ಕೊರಿಂಥ 7:39, NW, ಪಾದಟಿಪ್ಪಣಿ.
“ಕರ್ತನಲ್ಲಿ” ಮದುವೆಯಾಗಲು ಶಕ್ತರಲ್ಲ
10. ಅನೇಕ ಅವಿವಾಹಿತ ಕ್ರೈಸ್ತರು ಏನು ಮಾಡುತ್ತಿದ್ದಾರೆ, ಮತ್ತು ಯಾವ ಪ್ರಶ್ನೆಯು ಏಳುತ್ತದೆ?
10 ಅನೇಕ ಅವಿವಾಹಿತ ಕ್ರೈಸ್ತರು ಒಂಟಿತನದ ವರವನ್ನು ಬೆಳೆಸಿಕೊಳ್ಳುವ ಮೂಲಕ ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸಲು ಆದುಕೊಂಡಿದ್ದಾರೆ. ಪ್ರಚಲಿತ ಸಮಯದಲ್ಲಿ ಒಬ್ಬ ದೇವ-ಭೀರು ಜೊತೆಯನ್ನು ಕಂಡುಕೊಳ್ಳಲು ಮತ್ತು ಹೀಗೆ “ಕರ್ತನಲ್ಲಿ” ಮದುವೆಯಾಗಲು ಅಶಕ್ತರಾದ ಅನೇಕ ನಿಷ್ಠೆಯುಳ್ಳ ಕ್ರೈಸ್ತರು ಯೆಹೋವನಲ್ಲಿ ತಮ್ಮ ಭರವಸೆಯನ್ನು ಇಟ್ಟಿರುತ್ತಾರೆ ಮತ್ತು ಅವಿಶ್ವಾಸಿಯನ್ನು ಮದುವೆಯಾಗುವ ಬದಲಿಗೆ ಅವಿವಾಹಿತರಾಗಿ ಉಳಿದಿದ್ದಾರೆ. ದೇವರಾತ್ಮವು ಅವರೊಳಗಿಂದ ಸಂತೋಷ, ಶಾಂತಿ, ನಂಬಿಕೆ ಮತ್ತು ಆತ್ಮ-ಸಂಯಮದಂಥ ಫಲಗಳನ್ನು ಹೊರತಂದು, ಶುದ್ಧವಾದ ಒಂಟಿತನವನ್ನು ಕಾಪಾಡಲು ಶಕ್ತರನ್ನಾಗಿ ಮಾಡಿದೆ. (ಗಲಾತ್ಯ 5:22, 23) ದೇವರಲ್ಲಿ ಭಕ್ತಿಯ ಈ ಪರೀಕ್ಷೆಯನ್ನು ಸಾಫಲ್ಯದಿಂದ ಎದುರಿಸುತ್ತಿರುವವರಲ್ಲಿ ನಮ್ಮ ಹಲವಾರು ಕ್ರೈಸ್ತ ಸಹೋದರಿಯರು ಸೇರಿರುತ್ತಾರೆ, ಅವರ ಕಡೆಗೆ ನಮಗೆ ಆಳವಾದ ಆದರವಿದೆ. ಹಲವಾರು ದೇಶಗಳಲ್ಲಿ ಅವರು ಸಹೋದರರಿಗಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರಾದರ್ದಿಂದ ಸಾರುವ ಕಾರ್ಯದಲ್ಲಿ ದೊಡ್ಡ ಪಾಲು ಅವರದ್ದಾಗಿದೆ. ನಿಶ್ಚಯವಾಗಿಯೂ, “ಯೆಹೋವನು ತಾನೇ ನುಡಿದನು; ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀಸಮೂಹವು ಎಷ್ಟೋ ದೊಡ್ಡದು.” (ಕೀರ್ತನೆ 68:11, NW) ಕಾರ್ಯತಃ, ಎರಡೂ ಲಿಂಗಗಳ ಅನೇಕ ಅವಿವಾಹಿತ ದೇವರ ಸೇವಕರು ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತಿದ್ದಾರೆ ಯಾಕಂದರೆ ಅವರು ‘ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಡುತ್ತಾರೆ ಮತ್ತು ಆತನೇ ಅವರ ಮಾರ್ಗಗಳನ್ನು ಸರಾಗ ಮಾಡುವನು.’ (ಜ್ಞಾನೋಕ್ತಿ 3:5, 6) ಅದರೆ ಸದ್ಯ “ಕರ್ತನಲ್ಲಿ” ವಿವಾಹವಾಗಲು ಶಕ್ತರಿಲ್ಲದವರು ನಿಶ್ಚಯವಾಗಿಯೂ ಅಸಂತೋಷಿತರಾಗಿದ್ದಾರೋ?
11. ಬೈಬಲ್ ತತ್ವಗಳಿಗೆ ಗೌರವದ ಕಾರಣ ಅವಿವಾಹಿತರಾಗಿ ಉಳಿಯುವ ಕ್ರೈಸ್ತರು ಯಾವ ಭರವಸೆಯಿಂದಿರಬಹುದು?
11 ನಾವು ಸಂತೋಷವುಳ್ಳ ಏಕಾಧಿಪತಿಯಾದ ಯೇಸು ಕ್ರಿಸ್ತನ ಕೆಳಗೆ ಸೇವೆಮಾಡುತ್ತಿರುವ ಸಂತೋಷವುಳ್ಳ ದೇವರಾದ ಯೆಹೋವನ ಸಾಕ್ಷಿಗಳು ಎಂಬದನ್ನು ಜ್ಞಾಪಕದಲ್ಲಿಡೋಣ. ಹಾಗಿದ್ದಲ್ಲಿ “ಕರ್ತನಲ್ಲಿ” ಒಬ್ಬ ವಿವಾಹ ಜೊತೆಯನ್ನು ಕಂಡುಕೊಳ್ಳಲು ಅಶಕ್ತರಾದ ಕಾರಣ, ಬೈಬಲ್ನಲ್ಲಿ ಸ್ಪಷ್ಟವಾಗಿಗಿ ಇಡಲ್ಪಟ್ಟ ನಿರ್ಬಂಧಗಳಿಗೆ ನಮ್ಮ ಗೌರವವು ನಮ್ಮನ್ನು ಒಂಟಿಗರಾಗಿ ಉಳಿಯುವಂತೆ ಪ್ರೇರಿಸುವುದಾದರೆ, ದೇವರು ಮತ್ತು ಕ್ರಿಸ್ತನು ನಮ್ಮನ್ನು ಅಸಂತೋಷದಲ್ಲಿ ಬಿಡುವರೆಂದು ನೆನಸುವುದು ನ್ಯಾಯಸಮ್ಮತವೋ? ಖಂಡಿತವಾಗಿಯೂ ಅಲ್ಲ. ಆದಕಾರಣ, ಕ್ರೈಸ್ತರೋಪಾದಿ ಅವಿವಾಹಿತ ಸ್ಥಿತಿಯಲ್ಲೂ ಸಂತೋಷಿತರಾಗಿರಲು ಶಕ್ಯವೆಂದು ನಾವು ತೀರ್ಮಾನಿಸತಕ್ಕದ್ದು. ನಾವು ವಿವಾಹಿತರಾಗಿರಲಿ, ಅವಿವಾಹಿತರಾಗಿರಲಿ, ಯೆಹೋವನು ನಮ್ಮನ್ನು ನಿಜವಾಗಿಯೂ ಸಂತೋಷಿತರಾಗಿ ಮಾಡಬಲ್ಲನು.
ನಿಜ ಸಂತೋಷಕ್ಕೆ ಕೀಲಿಕೈ
12. ವಿವಾಹದ ಸಂಬಂಧದಲ್ಲಿ ಅವಿಧೇಯ ದೇವದೂತರ ವಿಷಯವು ಏನನ್ನು ಸೂಚಿಸುತ್ತದೆ?
12 ದೇವರ ಸೇವಕರೆಲ್ಲರಿಗೆ ವಿವಾಹವು ಸಂತೋಷಕ್ಕಿರುವ ಒಂದೇ ಕೀಲಿಕೈಯಲ್ಲ. ಉದಾಹರಣೆಗಾಗಿ ದೇವದೂತರನ್ನು ತಕ್ಕೊಳ್ಳಿರಿ. ಜಲಪ್ರಲಯಕ್ಕೆ ಮುಂಚೆ, ಕೆಲವು ದೇವದೂತರು ಆತ್ಮ ಜೀವಿಗಳಿಗೆ ಅಸಹಜವಾದ ಅಪೇಕ್ಷೆಗಳನ್ನು ಬೆಳೆಸಿಕೊಂಡವರಾಗಿ, ತಾವು ವಿವಾಹವಾಗ ಶಕ್ತರಲ್ಲದ್ದಕ್ಕಾಗಿ ಅಸಂತುಷ್ಟಿಗೊಂಡವರಾದರು, ಮತ್ತು ಸ್ತ್ರೀಯರನ್ನು ಪತ್ನಿಯರಾಗಿ ತಕ್ಕೊಳ್ಳುವುದಕ್ಕಾಗಿ ತಮ್ಮನ್ನು ಮಾಂಸಿಕ ದೇಹಿಗಳಾಗಿ ರೂಪಾಂತರಿಸಿಕೊಂಡರು. ಹೀಗೆ ಈ ದೇವದೂತರು “ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟ” ಕಾರಣ ದೇವರು “ನಿತ್ಯವಾದ ಬೇಡಿಗಳನ್ನು [ಅವರಿಗೆ] ಹಾಕಿ ಮಹಾ ದಿನದಲ್ಲಿ ಆಗುವ ದಂಡನೆಯ ತೀರ್ಪಿಗಾಗಿ ಅವರನ್ನು ಕತ್ತಲೆಯೊಳಗೆ ಇಟ್ಟಿದ್ದಾನೆ.” (ಯೂದ 6; ಆದಿಕಾಂಡ 6:1, 2) ದೇವದೂತರು ಮದುವೆಯಾಗುವಂತೆ ದೇವರು ಎಂದೂ ಏರ್ಪಡಿಸಿರಲಿಲ್ಲ ಎಂಬದು ಸ್ಫುಟ. ಹೀಗೆ ಮದುವೆಯು ಅವರ ಸಂತೋಷಕ್ಕೆ ಕೀಲಿಕೈಯಾಗಿರ ಸಾಧ್ಯವಿರುವುದಿಲ್ಲ.
13. ಪವಿತ್ರ ದೇವದೂತರು ಸಂತೋಷದಿಂದಿದ್ದಾರೆ ಏಕೆ, ಮತ್ತು ಇದು ದೇವರ ಎಲ್ಲಾ ಸೇವಕರಿಗಾಗಿ ಏನನ್ನು ಸೂಚಿಸುತ್ತದೆ?
13 ಆದರೂ, ನಂಬಿಗಸ್ತ ದೇವದೂತರು ಸಂತೋಷವುಳ್ಳವರಾಗಿದ್ದಾರೆ. “ಮುಂಜಾನೆ ನಕ್ಷತ್ರಗಳ ಹರ್ಷಭರಿತ ಗಾನಮೇಳದೊಂದಿಗೆ ಮತ್ತು [ದಿವ್ಯ] ದೇವಕುಮಾರರ ಒಕ್ಕಟ್ಟಾದ ಆನಂದಘೋಷದೊಂದಿಗೆ” ಯೆಹೋವನು ಭೂಮಿಯ ಅಸ್ತಿವಾರಗಳನ್ನು ಹಾಕಿದನು. (ಯೋಬ 38:7, ದಿ ನ್ಯೂ ಜೆರೂಸಲೆಮ್ ಬೈಬಲ್) ಪವಿತ್ರ ದೇವದೂತರು ಸಂತೋಷ ಉಳ್ಳವರಾಗಿರುವುದೇಕೆ? ಏಕೆಂದರೆ ಅವರು ಸದಾ ಯೆಹೋವ ದೇವರ ಸೇವೆಯಲ್ಲಿ ಇದ್ದಾರೆ, ಅದನ್ನು ಪೂರೈಸುವುದಕ್ಕಾಗಿ “ಆತನ ಶಬ್ದಕ್ಕೆ ಕಿವಿಗೊಡುತ್ತಾರೆ.” “ಆತನ ಮೆಚ್ಚಿಗೆಯನ್ನು ನೆರವೇರಿಸುವುದರಲ್ಲಿ” ಅವರು ಆನಂದಿಸುತ್ತಾರೆ. (ಕೀರ್ತನೆ 103:20, 21, ಪಾದಟಿಪ್ಪಣಿ.) ಹೌದು, ಪವಿತ್ರ ದೇವದೂತರ ಸಂತೋಷವು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದರಿಂದ ಬರುತ್ತದೆ. ಅದು ಮಾನವರಿಗೆ ಸಹ ನಿಜ ಸಂತೋಷಕ್ಕೆ ಕೀಲಿಕೈಯಾಗಿದೆ. ಆ ವಿಷಯದಲ್ಲಿ, ಈಗ ಸಂತೋಷದಿಂದ ದೇವರನ್ನು ಸೇವಿಸುತ್ತಿರುವ ವಿವಾಹಿತ ಅಭಿಷಿಕ್ತ ಕ್ರೈಸ್ತರು ಸ್ವರ್ಗೀಯ ಜೀವನಕ್ಕಾಗಿ ಪುನರುತ್ಥಾನವಾದಾಗ ಮದುವೆಯಾಗಲಾರರು, ಆದರೆ ಆತ್ಮ ಜೀವಿಗಳೋಪಾದಿ ದೈವಿಕ ಚಿತ್ತವನ್ನು ಮಾಡುವುದರಲ್ಲಿ ಅವರು ಸಂತೋಷಪಡುವರು. ಹೀಗಿರಲಾಗಿ, ವಿವಾಹಿತರಿರಲಿ ಅಥವಾ ಒಂಟಿಗರಿರಲಿ, ಯೆಹೋವನ ನಿಷ್ಠೆಯುಳ್ಳ ಎಲ್ಲಾ ಸೇವಕರು ಸಂತೋಷದಲ್ಲಿರ ಸಾಧ್ಯವಿದೆ ಯಾಕಂದರೆ ಸಂತೋಷದ ನಿಜ ಮೂಲವು ನಿರ್ಮಾಣಿಕನಿಗೆ ನಂಬಿಗಸ್ತಿಕೆಯ ಸೇವೆಯೇ.
“ಗಂಡು ಹೆಣ್ಣು ಮಕ್ಕಳಿಗಿಂತ ಮೇಲಾದದ್ದು”
14. ಪುರಾತನ ಇಸ್ರಾಯೇಲಿನಲ್ಲಿ ದೇವಭೀರು ನಪುಂಸಕರಿಗೆ ಯಾವ ಪ್ರವಾದನಾ ವಾಗ್ದಾನವು ಕೊಡಲ್ಪಟ್ಟಿತ್ತು, ಮತ್ತು ಇದು ವಿಚಿತ್ರವಾಗಿ ತೋರಬಹುದೇಕೆ?
14 ನಿಷ್ಠೆಯುಳ್ಳ ಕ್ರೈಸ್ತನು ಒಂದುವೇಳೆ ಎಂದೂ ವಿವಾಹವಾಗದಿದ್ದರೂ, ದೇವರು ಅವನ ಸಂತೋಷಕ್ಕೆ ಭರವಸೆ ಕೊಡಬಲ್ಲನು. ಪುರಾತನ ಇಸ್ರಾಯೇಲಿನಲ್ಲಿದ್ದ ನಪುಂಸಕರಿಗೆ ಪ್ರವಾದನಾರೂಪವಾಗಿ ಉದ್ದೇಶಿಸಲ್ಪಟ್ಟ ಈ ಮಾತುಗಳಿಂದ ಆದರಣೆಯನ್ನು ಪಡೆಯ ಸಾಧ್ಯವಿದೆ: “ಯೆಹೋವನು ಹೀಗನ್ನುತ್ತಾನೆ—ಸಬ್ಬತ್ ದಿನಗಳನ್ನು ನನ್ನ ದಿನಗಳೆಂದು ಆಚರಿಸಿ ನನಗೆ ಮೆಚ್ಚಿಗೆಯಾದದ್ದನ್ನು ಕೈಕೊಂಡು ನನ್ನ ಒಡಂಬಡಿಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ನಪುಂಸಕರಿಗೆ ನನ್ನ ಪ್ರಾಕಾರಗಳೊಳಗೆ ಅವರ ಜ್ಞಾಪಕಾರ್ಥವಾಗಿ ಶಿಲೆಯನ್ನಿಟ್ಟು ಹೆಣ್ಣು ಗಂಡು ಮಕ್ಕಳಿಗಿಂತ ಮೇಲಾದ ಹೆಸರುವಾಸಿಯನ್ನು ದಯಪಾಲಿಸುವೆನು. ಹೌದು ಎಂದಿಗೂ ಅಳಿಯದ ಶಾಶ್ವತ ನಾಮವನ್ನು ಅನುಗ್ರಹಿಸುವೆನು.” (ಯೆಶಾಯ 56:4, 5) ಈ ವ್ಯಕ್ತಿಗಳಿಗೆ ಅವರ ಹೆಸರನ್ನು ಸದಾ ಉಳಿಸಲು ಒಬ್ಬಾಕೆ ಪತ್ನಿ ಮತ್ತು ಮಕ್ಕಳು ವಾಗ್ದಾನಿಸಲ್ಪಡುವರೆಂದು ಯಾವನಾದರೂ ನಿರೀಕ್ಷಿಸಿದಿರ್ದಬಹುದು. ಆದರೆ ಅವರಿಗೆ “ಹೆಣ್ಣು ಗಂಡು ಮಕ್ಕಳಿಗಿಂತ ಮೇಲಾದ” ದ್ದನ್ನು ಅಂದರೆ, ಯೆಹೋವನ ಆಲಯದೊಳಗೆ ಒಂದು ಶಾಶ್ವತ ನಾಮವನ್ನು ವಾಗ್ದಾನಿಸಲಾಗಿತ್ತು.
15. ಯೆಶಾಯ 56:4, 5 ರ ನೆರವೇರಿಕೆಯ ಕುರಿತು ಏನನ್ನು ಹೇಳಬಹುದು?
15 ಒಂದುವೇಳೆ ಈ ನಪುಂಸಕರು “ದೇವರ ಇಸ್ರಾಯೇಲನ್ನು” ಒಳಗೂಡುವ ಪ್ರವಾದನಾ ಚಿತ್ರವಾಗಿ ಪರಿಗಣಿಸಲ್ಪಡುವುದಾದರೆ, ಅವರು ದೇವರ ಆತ್ಮಿಕ ಆಲಯದಲ್ಲಿ ಅಥವಾ ಮಂದಿರದೊಳಗೆ ಒಂದು ಶಾಶ್ವತವಾದ ಸ್ಥಾನವನ್ನು ಪಡೆಯುವ ಅಭಿಷಿಕ್ತ ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ. (ಗಲಾತ್ಯ 6:16) ನಿಸ್ಸಂದೇಹವಾಗಿ ಈ ಪ್ರವಾದನೆಯು, ಪುನರುತ್ಥಾನವಾಗಿ ಬರಲಿರುವ ಪುರಾತನ ಇಸ್ರಾಯೇಲಿನ ದೇವಭೀರು ನಪುಂಸಕರಿಗೆ ಅಕ್ಷರಶಃವಾಗಿ ಅನ್ವಯಿಸಲಿರುವುದು. ಇವರು ಕ್ರಿಸ್ತನ ವಿಮೋಚನಾ ಯಜ್ಞವನ್ನು ಸ್ವೀಕರಿಸಿದರೆ ಮತ್ತು ಯೆಹೋವನಿಗೆ ಮೆಚ್ಚಿಗೆಯಾದದ್ದನ್ನು ಕೈಕೊಳ್ಳಲು ಆರಿಸಿದರೆ, ದೇವರ ಹೊಸ ಲೋಕದಲ್ಲಿ “ಒಂದು ಶಾಶ್ವತ ನಾಮವನ್ನು” ಪಡೆಯುವರು. ಇದು ಈ ಅಂತ್ಯಕಾಲದಲ್ಲಿ ಯೆಹೋವನ ಸೇವೆಗೆ ತಮ್ಮನ್ನು ಅಧಿಕ ಪೂರ್ಣವಾಗಿ ಮೀಸಲಾಗಿಡಲಿಕ್ಕಾಗಿ ಮದುವೆಯ ಮತ್ತು ತಂದೆತ್ತಾಯನದ ಸಂತೋಷಗಳನ್ನು ತ್ಯಾಗಮಾಡುವ, “ಬೇರೆ ಕುರಿ” ಗಳಿಗೂ ಅನ್ವಯಿಸಬಲ್ಲದು. (ಯೋಹಾನ 10:16) ಇವರಲ್ಲಿ ಕೆಲವರು ಅವಿವಾಹಿತರಾಗಿಯೇ ಮತ್ತು ಮಕ್ಕಳಿಲ್ಲದೆ ಸಾಯಲೂಬಹುದು. ಆದರೆ ಅವರು ನಂಬಿಗಸ್ತರಾಗಿ ಇದ್ದಲ್ಲಿ, ಪುನರುತ್ಥಾನದಲ್ಲಿ ಅವರು “ಗಂಡು ಹೆಣ್ಣು ಮಕ್ಕಳಿಗಿಂತ ಮೇಲಾದ” ಒಂದು ವಿಷಯವನ್ನು ಅಂದರೆ—ಹೊಸ ವಿಷಯ ವ್ಯವಸ್ಥೆಯಲ್ಲಿ “ಎಂದೂ ಅಳಿಯದ” ಒಂದು ಹೆಸರನ್ನು ಪಡೆಯಲಿರುವರು.
ಸಂತೋಷಕ್ಕೆ ಮದುವೆಯೊಂದೇ ಕೀಲಿಕೈಯಲ್ಲ
16. ಮದುವೆಯು ಯಾವಾಗಲೂ ಸಂತೋಷವನ್ನು ತರುವುದಿಲ್ಲ ಎಂದು ಹೇಳಬಹುದೇಕೆ?
16 ಸಂತೋಷವು ವಿವಾಹಕ್ಕೆ ಬೇರ್ಪಡಿಸಲಾರದ ರೀತಿಯಲ್ಲಿ ಸಂಬಂಧಿಸಿದೆ ಎಂದು ಕೆಲವು ಜನರು ಭಾವಿಸುತ್ತಾರೆ. ಆದರೂ, ಇಂದು ಯೆಹೋವನ ಸೇವಕರ ನಡುವೆಯೂ, ವಿವಾಹವು ಯಾವಾಗಲೂ ಸಂತೋಷವನ್ನು ತರುವದಿಲ್ಲ ಎಂಬದನ್ನು ನಾವು ಒಪ್ಪಲೇಬೇಕು. ಮದುವೆಯು ಕೆಲವು ಸಮಸ್ಯೆಗಳನ್ನು ಪರಿಹರಿಸುತ್ತದೆ, ಆದರೆ ಅವಿವಾಹಿತರಿಂದ ಅನುಭವಿಸಲ್ಪಟ್ಟದ್ದಕ್ಕಿಂತ ನಿಭಾಯಿಸಲು ಹೆಚ್ಚು ಕಷ್ಟಕರವಾದ ಬೇರೆ ಸಮಸ್ಯೆಗಳನ್ನು ಹೆಚ್ಚಾಗಿ ಉಂಟುಮಾಡುತ್ತದೆ. ಮದುವೆಯು ‘ಶರೀರ ಸಂಬಂಧವಾದ ಕಷ್ಟಗಳನ್ನು’ ತರುತ್ತದೆ ಎಂದು ಪೌಲನು ಹೇಳುತ್ತಾನೆ. (1 ಕೊರಿಂಥ 7:28) ವಿವಾಹಿತ ವ್ಯಕ್ತಿಯು “ಚಿಂತಿಸುವ,” “ವ್ಯತ್ಯಾಸ” ಇರುವವನಾಗಿರುವ ಸಂದರ್ಭಗಳೂ ಇವೆ. “ಭಿನ್ನಭಾವವಿಲ್ಲದೆ (ಅಪಕರ್ಷಣೆಯಿಲ್ಲದೆ, NW) ಕರ್ತನಿಗೆ ಪಾದಸೇವೆ ಸಲ್ಲಿಸುವದು” ತಮಗೆ ಕಷ್ಟವಾಗುವುದನ್ನು ಅವನು ಅಥವಾ ಅವಳು ಆಗಾಗ ಕಾಣುತ್ತಾರೆ.—1 ಕೊರಿಂಥ 7:33-35.
17, 18. (ಎ) ಕೆಲವು ಸಂಚರಣೆ ಮೇಲ್ವಿಚಾರಕರು ಏನು ವರದಿ ಮಾಡಿದ್ದಾರೆ? (ಬಿ) ಪೌಲನು ಯಾವ ಸೂಚನೆಯನ್ನು ಕೊಟ್ಟಿದ್ದಾನೆ, ಮತ್ತು ಅದನ್ನು ಅನ್ವಯಿಸುವುದು ಏಕೆ ಪ್ರಯೋಜನಕಾರಿಯು?
17 ಮದುವೆ ಮತ್ತು ಅವಿವಾಹಿತ ಸ್ಥಿತಿ ಎರಡೂ ದೇವರಿಂದ ಬಂದ ದಾನಗಳು. (ರೂತಳು 1:9; ಮತ್ತಾಯ 19:10-12) ಆದರೆ ಎರಡರಲ್ಲೊಂದರಲ್ಲಿ ಸಾಫಲ್ಯ ಹೊಂದಬೇಕಾದರೆ, ಪ್ರಾರ್ಥನಾಪೂರ್ವಕವಾದ ವಿಚಾರವು ಅತ್ಯಾವಶ್ಯಕ. ಅನೇಕ ಸಾಕ್ಷಿಗಳು ತೀರಾ ಎಳೆಯರಾಗಿರುವಾಗಲೇ ಮದುವೆಯಾಗುತ್ತಿದ್ದಾರೆ, ಬರುವ ಜವಾಬ್ದಾರಿಗಳನ್ನು ಹೊರಲು ಸಿದ್ಧರಾಗುವ ಮುಂಚೆಯೇ ಆಗಾಗ್ಯೆ ಹೆತ್ತವರಾಗುತ್ತಿದ್ದಾರೆ ಎಂದು ಸಂಚಾರ ಮೇಲ್ವಿಚಾರಕರು ವರದಿ ಮಾಡುತ್ತಾರೆ. ಈ ಮದುವೆಗಳಲ್ಲಿ ಕೆಲವು ಒಡೆದು ಹೋಗುತ್ತವೆ. ಇತರ ದಂಪತಿಗಳು ತಮ್ಮ ಸಮಸ್ಯೆಗಳೊಂದಿಗೆ ನಿಭಾಯಿಸುತ್ತಾರೆ, ಆದರೆ ಅವರ ಮದುವೆಯು ಅವರಿಗೆ ಸಂತೋಷವನ್ನು ತಂದಿರುವುದಿಲ್ಲ. ಆಂಗ್ಲ ನಾಟಕಕಾರ ವಿಲ್ಯಂ ಕಾಂಗ್ರಿವ್ ಬರೆದದ್ದೇನಂದರೆ ಯಾರು ಅವಸರದಲ್ಲಿ ಮದುವೆಯಾಗುತ್ತಾರೋ ಅವರು “ಪುರುಸೊತ್ತಿನಲ್ಲಿ ಪಶ್ಚಾತ್ತಾಪ ಪಡಬಹುದು.”
18 ಕೆಲವು ಯುವ ಸಹೋದರರು ಬೆತೆಲ್ ಸೇವೆಗೆ ಅಥವಾ ಮಿನಿಸ್ಟೀರಿಯಲ್ ಟ್ರೈಯ್ನಿಂಗ್ ಶಾಲೆಗೆ ಅರ್ಜಿಹಾಕುವದರಿಂದ ದೂರವಿರುವದು—ಕೆಲವು ವರ್ಷಗಳ ತನಕ ಅವಿವಾಹಿತರಾಗಿ ಉಳಿಯುವ ಅವಶ್ಯಕತೆಯು ಅವರಿಂದ ಕೇಳಲ್ಪಡುವದರಿಂದಲೇ ಎಂದು ಸರ್ಕಿಟ್ ಮೇಲ್ವಿಚಾರಕರು ವರದಿಸಿದ್ದಾರೆ. ಆದರೆ “ಯೌವನದ ಪರಿಪಕ್ವ ಸ್ಥಿತಿಗೆ ಮುಂಚೆ” ಮದುವೆಯಾಗದಂತೆ ಪೌಲನು ಸಲಹೆ ಕೊಟ್ಟಿದ್ದಾನೆ ಅಂದರೆ, ಪ್ರಾರಂಭದ ಲೈಂಗಿಕ ಒತ್ತರವು ತಣಿಯುವ ತನಕ ಕಾಯುವದು ಎಂದಾಗಿದೆ. (1 ಕೊರಿಂಥ 7:36-38) ಒಂಟಿಗ ಪ್ರಾಪ್ತ ವಯಸ್ಕನಾಗಿ ಜೀವಿಸುವುದರಲ್ಲಿ ಕಳೆದ ವರ್ಷಗಳು ಒಬ್ಬನಿಗೆ ಅಮೂಲ್ಯ ಅನುಭವ ಮತ್ತು ಒಳನೋಟವನ್ನು ಕೊಟ್ಟು, ವಿವಾಹಿತ ಜೊತೆಯನ್ನು ಆರಿಸಿಕೊಳ್ಳುವಂತೆ ಇಲ್ಲವೇ ಅವಿವಾಹಿತನಾಗಿ ಉಳಿಯಲು ಜಾಗ್ರತೆಯಿಂದ ಪರಿಗಣಿಸಿದ ನಿರ್ಣಯವನ್ನು ಮಾಡುವಂತೆ ಅವನನ್ನು ಅಥವಾ ಅವಳನ್ನು ಒಳ್ಳೇ ಸ್ಥಾನದಲ್ಲಿ ಹಾಕುತ್ತದೆ.
19. ದಾಂಪತ್ಯಕ್ಕಾಗಿ ನಮಗೆ ನಿಜವಾದ ಅಗತ್ಯವು ಇಲ್ಲವಾದರೆ, ವಿಷಯಗಳನ್ನು ನಾವು ಹೇಗೆ ನೋಡಬಹುದು?
19 ಲೈಂಗಿಕ ಪ್ರೀತಿಯ ಬಲವಾದ ಒತ್ತರವಿರುವ ಆ ಯೌವನದ ಪರಿಪಕ್ವ ಸ್ಥಿತಿಯನ್ನು ನಮ್ಮಲ್ಲಿ ಕೆಲವರು ದಾಟಿದ್ದೇವೆ. ಮದುವೆಯ ಆಶೀರ್ವಾದಗಳ ಕುರಿತು ನಾವು ಆಗಿಂದಾಗ್ಯೆ ಯೋಚಿಸಬಹುದಾದರೂ ಕಾರ್ಯತಃ ಅವಿವಾಹಿತತನದ ವರವು ನಮಗಿರಬಹುದು. ನಮ್ಮ ಅವಿವಾಹಿತ ಸ್ಥಿತಿಯಲ್ಲಿ ಆತನನ್ನು ನಾವು ಪರಿಣಾಮಕಾರಕವಾಗಿ ಸೇವಿಸಶಕ್ತರು ಮತ್ತು ಆತನ ಸೇವೆಯಲ್ಲಿ ನಿರ್ದಿಷ್ಟ ಸುಯೋಗಗಳನ್ನು ನಾವು ತ್ಯಜಿಸುವಂತೆ ಅವಶ್ಯಪಡಿಸುವ ದಾಂಪತ್ಯದ ನಿಜವಾದ ಅಗತ್ಯ ನಮಗಿಲ್ಲವೆಂದು ಯೆಹೋವನು ನೋಡಲೂಬಹುದು. ಮದುವೆಯು ಒಂದು ವೈಯಕ್ತಿಕ ಆವಶ್ಯಕತೆ ಅಲ್ಲವಾದರೆ ಮತ್ತು ನಮಗೆ ಒಬ್ಬ ಜೊತೆಯನ್ನು ಹೊಂದುವ ಆಶೀರ್ವಾದವು ಲಭಿಸದೆ ಇದ್ದರೆ, ದೇವರು ನಮಗಾಗಿ ಬೇರೇನನ್ನಾದರೂ ಕಾದಿರಿಸಿರಬಹುದು. ಆದುದರಿಂದ ನಮಗೆ ಏನು ಅಗತ್ಯವೋ ಅದನ್ನು ಆತನು ಒದಗಿಸುವನೆಂಬ ಭರವಸೆಯನ್ನು ನಾವು ಇಡೋಣ. ಅನ್ಯಜನರು ಜೀವವನ್ನು ಪಡೆಯುವಂತೆ ಅವರಿಗೆ ಮಾನಸಾಂತರವನ್ನು ದೇವರು ಅನುಗ್ರಹಿಸಿದ್ದಾನೆಂಬ ಮನವರಿಕೆಯಾದಾಗ ಯೆಹೂದಿ ಸಹೋದರರು ಸಹ ಹೇಗೆ ‘ದೇವರನ್ನು ಕೊಂಡಾಡಿದರೋ’ ಹಾಗೆಯೆ, ನಮಗಾಗಿ ದೇವರ ಚಿತ್ತವು ಏನೆಂದು ತೋರಿಬರುವುದೋ ಅದನ್ನು ದೈನ್ಯದಿಂದ ಸ್ವೀಕರಿಸುವುದರಿಂದ ಮಹತ್ತಾದ ಸಂತೋಷವು ಲಭಿಸುವುದು.—ಅ.ಕೃತ್ಯಗಳು 11:1-18.
20. (ಎ) ಯುವ ಕ್ರೈಸ್ತರಿಗೆ ಅವಿವಾಹಿತತನದ ಮೇಲೆ ಯಾವ ಸೂಚನೆ ಇಲ್ಲಿ ಕೊಡಲ್ಪಟ್ಟಿದೆ? (ಬಿ) ಸಂತೋಷದ ವಿಷಯದಲ್ಲಿ ಯಾವ ಮೂಲಭೂತ ವಿಷಯವು ಸತ್ಯವಾಗಿ ಉಳಿಯುತ್ತದೆ?
20 ಹೀಗಿರಲಾಗಿ, ಮದುವೆಯು ಸಂತೋಷಕ್ಕೆ ಒಂದು ಕೀಲಿ ಕೈಯಾಗಿರಬಲ್ಲದು, ಆದರೂ ಅದು ಸಮಸ್ಯೆಗಳಿಗೆ ಬಾಗಲನ್ನು ತೆರೆಯಲೂ ಬಹುದು. ಒಂದು ವಿಷಯ ಖಂಡಿತ: ಸಂತೋಷವನ್ನು ಕಂಡುಕೊಳ್ಳಲು ಮದುವೆಯು ಒಂದೇ ದಾರಿಯಲ್ಲ. ಆದ್ದರಿಂದ ಎಲ್ಲಾ ವಿಷಯಗಳನ್ನು ಪರಿಗಣಿಸುವಲ್ಲಿ, ವಿಶೇಷವಾಗಿ ಯುವ ಕ್ರೈಸ್ತರು ಹಲವಾರು ವರ್ಷಗಳ ಅವಿವಾಹಿತ ಸ್ಥಿತಿಗಾಗಿ ಸ್ಧಳಮಾಡ ಪ್ರಯತ್ನಿಸುವುದು ವಿವೇಕಪ್ರದವು. ಅಂಥ ವರ್ಷಗಳನ್ನು ಯೆಹೋವನ ಸೇವೆಯನ್ನು ಮಾಡಲು ಮತ್ತು ಆತ್ಮಿಕತೆಯಲ್ಲಿ ಪ್ರಗತಿಮಾಡಲು ಚೆನ್ನಾಗಿ ಬಳಸಸಾಧ್ಯವಿದೆ. ಆದರೆ ವಯಸ್ಸು ಮತ್ತು ಆತ್ಮಿಕ ಪ್ರಗತಿಯು ಎಷ್ಟೇ ಇರಲಿ, ದೇವರಿಗೆ ಸಂಪೂರ್ಣವಾದ ಸಮರ್ಪಣೆ ಮಾಡಿದವರೆಲ್ಲರಿಗೆ ಈ ಮೂಲಭೂತ ವಿಷಯವು ಸತ್ಯವಾಗಿ ಉಳಿಯುತ್ತದೆ: ಅದೇನಂದರೆ ನಿಜ ಸಂತೋಷವು ಲಭಿಸುವುದು ಯೆಹೋವನ ನಂಬಿಗಸ್ತ ಸೇವೆಯಲ್ಲಿಯೇ.
ನೀವು ಹೇಗೆ ಪ್ರತಿವರ್ತಿಸುವಿರಿ?
▫ ಯೆಹೋವನ ಸೇವಕರು ಸಂತೋಷವುಳ್ಳವರು ಏಕೆ?
▫ ಮಹತ್ತಾದ ಸಂತೋಷಕ್ಕೆ ವಿವಾಹವು ಕೀಲಿಕೈಯಲ್ಲವೇಕೆ?
▫ ವಿವಾಹದ ಜೊತೆಯ ಆಯ್ಕೆಯಲ್ಲಿ, ಯೆಹೋವನ ಜನರಿಂದ ಏನು ಆವಶ್ಯಪಡಿಸಲ್ಪಡುತ್ತದೆ?
▫ ಅವಿವಾಹಿತರಾಗಿ ಉಳಿಯುವ ಕ್ರೈಸ್ತರು ಸಂತೋಷಿತರಾಗಿರಬಲ್ಲರು ಎಂದು ನಂಬುವುದು ನ್ಯಾಯಸಮ್ಮತವೇಕೆ?
▫ ಮದುವೆ ಮತ್ತು ಸಂತೋಷದ ವಿಷಯದಲ್ಲಿ ಏನನ್ನು ಒಪ್ಪಿಕೊಳ್ಳಲೇಬೇಕು?