ನೀವು ನಿಮ್ಮ ಆರಾಧನಾ ಸ್ಥಳವನ್ನು ಗೌರವಿಸುತ್ತೀರೊ?
“ಸುವಾರ್ತೆಯ ಅತಿ ಶೈಶವದಿಂದಲೇ, ಕ್ರೈಸ್ತರಿಗೆ ಅವರ ದೈವಿಕ ಆರಾಧನೆಯ ನೆಲೆಗೊಂಡ ಮತ್ತು ನಿರ್ಧರಿತ ಸ್ಥಳ ಯಾವಾಗಲೂ ಇತ್ತು.”—“ಪ್ರಿಮಿಟಿವ್ ಕ್ರಿಶ್ಚಿಆ್ಯನಿಟಿ,” ವಿಲ್ಯಂ ಕೇವರಿಂದ.
ದೇವರ ಜನರು ಆರಾಧನೆಗಾಗಿ ಒಟ್ಟುಗೂಡುವುದರಲ್ಲಿ ಯಾವಾಗಲೂ ಆನಂದವನ್ನು ಪಡಕೊಂಡಿರುತ್ತಾರೆ. ಇದು ಈಗ ಇರುವಂತೆಯೇ ಮೊದಲನೇ ಶತಮಾನದಲ್ಲಿಯೂ ನಿಜವಾಗಿತ್ತು. ಕ್ರೈಸ್ತರಿಗೆ ಆರಾಧನೆಗಾಗಿ ಕ್ರಮವಾಗಿ ಕೂಡಿಬರುವ ನಿರ್ದಿಷ್ಟ ಸ್ಥಳಗಳು ಇದ್ದವೆಂದು ಲೂಶನ್, ಕೆಮ್ಲೆಂಟ್, ಜಸ್ಟಿನ್ ಮಾರ್ಟರ್, ಮತ್ತು ಟೆರ್ಟಲ್ಲಿಯನ್ರಂಥ ಆದಿಯ ಗ್ರಂಥಕರ್ತರುಗಳು ಮತ್ತು ದೇವತಾಶಾಸ್ತ್ರಜ್ಞರೆಲ್ಲರು ಒಪ್ಪುತ್ತಾರೆ.
ಕ್ರೈಸ್ತರ ಗುಂಪುಗಳಿಂದ ನಡೆಸಲಾದ ಕ್ರಮವಾದ ಕೂಟಗಳ ಅನೇಕ ಉಲ್ಲೇಖಗಳನ್ನು ಮಾಡುವುದರ ಮೂಲಕ, ಅದೇ ವಿಷಯವನ್ನು ಬೈಬಲು ಸ್ಥಿರಪಡಿಸುತ್ತದೆ. ಈ ಗುಂಪುಗಳನ್ನು ಸಭೆಗಳೆಂದು ತಿಳಿದುಕೊಳ್ಳಲಾಗಿತ್ತು. ಇದು ತಕ್ಕದ್ದಾಗಿತ್ತು ಏಕೆಂದರೆ ಬೈಬಲಿನ ಮೂಲ ಭಾಷೆಗಳಲ್ಲಿ “ಸಭೆ” ಎಂಬ ಮೂಲ ಪದವು ಒಂದು ವಿಶಿಷ್ಟ ಉದ್ದೇಶಕ್ಕಾಗಿ ಯಾ ಕಾರ್ಯಕ್ಕಾಗಿ ಒಟ್ಟುಗೂಡಿದ ಜನರ ಒಂದು ಗುಂಪು ಎಂದು ಸೂಚಿಸುತ್ತದೆ.
ಕ್ರೈಸ್ತ ಆರಾಧನೆಯ ಪ್ರಥಮ ಸ್ಥಳಗಳು
ಮೊದಲನೇ ಶತಮಾನದ ಕ್ರೈಸ್ತರು ಒಟ್ಟುಗೂಡಿ ಬಂದಾಗ ಏನು ಮಾಡಿದರು? ಬೈಬಲು ಅಂಥ ಅನೇಕ ಕೂಟಗಳನ್ನು ವಿವರಿಸುತ್ತದೆ ಮತ್ತು ಕಲಿಸುವಿಕೆಯು ಒಂದು ಪ್ರಾಮುಖ್ಯ ಭಾಗವಾಗಿತ್ತೆಂದು ತೋರಿಸುತ್ತದೆ. (ಅ. ಕೃತ್ಯಗಳು 2:42; 11:26; 1 ಕೊರಿಂಥ 14:19, 26) ಭಾಷಣಗಳು, ಪ್ರೋತ್ಸಾಹಕರವಾದ ಅನುಭವಗಳನ್ನು ಹೇಳುವುದು, ಯೆರೂಸಲೇಮಿನಲ್ಲಿದ್ದ ಆಡಳಿತಾ ಮಂಡಳಿಯಿಂದ ಯಾ ಒಬ್ಬ ಅಪೊಸ್ತಲನಿಂದ ಬಂದ ಪತ್ರಗಳನ್ನು ಜಾಗರೂಕತೆಯಿಂದ ಪರಿಗಣಿಸುವುದು—ಇವುಗಳು ಸೇರಿದ ಶೈಕ್ಷಣಿಕ ಕಾರ್ಯಕ್ರಮಗಳು ಏರ್ಪಡಿಸಲ್ಪಡುತಿದ್ತವ್ದು.
ಅಪೊಸ್ತಲರ ಕೃತ್ಯಗಳು 15:22-35 ರಲ್ಲಿ, ಅಂತಿಯೋಕ್ಯದಲ್ಲಿನ ಕ್ರೈಸ್ತರ ಗುಂಪಿಗೆ ಅಂಥ ಒಂದು ಪತ್ರವನ್ನು ಓದಿಯಾದ ನಂತರ, ಯೂದ ಮತ್ತು ಸೀಲರು “ಸಹೋದರರನ್ನು ಅನೇಕ ಮಾತುಗಳಿಂದ ಪ್ರಬೋಧಿಸಿ ದೃಢಪಡಿಸಿದರು” ಎಂದು ನಾವು ಓದುತ್ತೇವೆ. ಪೌಲ ಬಾರ್ನಬರು ಅಂತಿಯೋಕ್ಯಕ್ಕೆ ತಲುಪಿದಾಗ “ಅಲ್ಲಿ ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ . . . ವಿವರವಾಗಿ ಹೇಳಿದರು” ಎಂದು ಇನ್ನೊಂದು ದಾಖಲೆಯು ತಿಳಿಸುತ್ತದೆ. ಯೆಹೋವನಿಗೆ ಪ್ರಾರ್ಥಿಸುವುದು ಕೂಡ ಕ್ರೈಸ್ತ ಕೂಟಗಳ ಒಂದು ಪ್ರಾಮುಖ್ಯ ಭಾಗವಾಗಿತ್ತು.—ಅ. ಕೃತ್ಯಗಳು 14:27.
ಮೊದಲನೆಯ ಶತಮಾನದ ಆರಾಧನೆಗಾಗಿ ಕೂಡಿದ ಸಭೆಗಳ ಸ್ಥಳಗಳು ಇಂದಿನ ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳಂತೆ ಪರಿಷ್ಕರಿಸಿದ ಕಟ್ಟಡಗಳಂತಿರಲಿಲ್ಲ. ಹೆಚ್ಚಿನಾಂಶ, ಆದಿ ಕ್ರೈಸ್ತರು ಖಾಸಗಿ ಮನೆಗಳಲ್ಲಿ ಕೂಡಿ ಬಂದರು. (ರೋಮಾಪುರ 16:5; 1 ಕೊರಿಂಥ 16:19; ಕೊಲೊಸ್ಸೆ 4:15; ಫಿಲೆಮೋನ 2) ಅನೇಕ ಬಾರಿ ಮೇಲಂತಸ್ತನ್ನು ಯಾ ಖಾಸಗಿ ಮನೆಯ ಮೇಲಂತಸ್ತಿನ ಕೊಠಡಿಯನ್ನು ಉಪಯೋಗಿಸಲಾಯಿತು. ಕರ್ತನ ಸಂಧ್ಯಾಭೋಜನ ನಡೆದದ್ದು ಮೇಲಂತಸ್ತಿನಲ್ಲಿಯೇ. ಪಂಚಾಶತ್ತಮದಲ್ಲಿ 120 ಮಂದಿ ಶಿಷ್ಯರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟದ್ದು ಕೂಡ ಒಂದು ಮೇಲಂತಸ್ತಿನಲಿಯ್ಲೆ ಆಗಿತ್ತು.—ಲೂಕ 22:11, 12, 19, 20; ಅ. ಕೃತ್ಯಗಳು 1:13, 14; 2:1-4; 20:7, 9.
ಅಪೊಸ್ತಲರಿಂದ ಸ್ಥಾಪಿಸಲ್ಪಟ್ಟ ನಮೂನೆಯನ್ನೇ ಇಂದು ಯೆಹೋವನ ಸಾಕ್ಷಿಗಳು ಅನುಸರಿಸುತ್ತಾರೆ. ರಾಜ್ಯ ಸಭಾಗೃಹಗಳೆಂದು ತಿಳಿಯಲಾದ ಕೂಟದ ಸ್ಥಳವನ್ನು ಅವರು ಬಳಸುತ್ತಾರೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವವರಾಗಿ ಅವರು ಅಲ್ಲಿ ತರಬೇತಿಯನ್ನು ಹೊಂದುತ್ತಾರೆ. (ಮತ್ತಾಯ 24:14) ಇನ್ನು, ಅವರು ರಾಜ್ಯ ಸಭಾಗೃಹಗಳಲ್ಲಿ ಶಾಸ್ತ್ರವಚನಗಳನ್ನು ಅಭ್ಯಾಸಿಸುತ್ತಾರೆ, ಪ್ರಾರ್ಥಿಸುತ್ತಾರೆ, ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾರೆ. ಇದು ಇಬ್ರಿಯ 10:24, 25 ರಲ್ಲಿನ ಬೈಬಲ್ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿದೆ: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವುದರಿಂದ ಇದನ್ನು ಮತ್ತಷ್ಟು ಮಾಡಿರಿ.”
ಆರಾಧನೆಯ ನಮ್ಮ ಸ್ಥಳಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವುದು
“ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ” ಮತ್ತು “ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂಬ ಅಪೊಸ್ತಲ ಪೌಲನ ಮಾತುಗಳು ನಿಮ್ಮ ಜ್ಞಾಪಕಕ್ಕೆ ಬರುತ್ತವೆಯೆ? ಈ ಮಾತುಗಳ ಪೂರ್ವಾಪರಗಳನ್ನು ನೀವು ಪರಿಶೀಲಿಸುವಲ್ಲಿ, ಕ್ರೈಸ್ತ ಕೂಟಗಳು ಯಾವ ವಿಧಾನದಲ್ಲಿ ನಡೆಸಲ್ಪಡಬೇಕೆಂದು ಪೌಲನು ಚರ್ಚಿಸುವುದನ್ನು ನೀವು ಕಂಡುಕೊಳ್ಳುವಿರಿ. ಅಪೊಸ್ತಲಿಕ ಯುಗದಲ್ಲಿದ್ದಂತೆಯೆ, ಕ್ರೈಸ್ತರು ಇಂದು ಅವರ ಕೂಟಗಳು ಕ್ರಮಬದ್ಧವಾಗಿಯೂ ಮತ್ತು ಉತ್ತಮವಾಗಿ ಸಂಘಟಿಸಲ್ಪಟ್ಟದ್ದಾಗಿಯೂ ಇರುವುದಾಗಿ ಖಚಿತಮಾಡಿಕೊಳ್ಳುತ್ತಾರೆ.—1 ಕೊರಿಂಥ 14:26-40.
ಅಕ್ಟೋಬರ್ 15, 1969 ರ ವಾಚ್ಟವರ್ ಸಂಚಿಕೆಯು ನಮೂದಿಸಿದ್ದು: “ರಾಜ್ಯ ಸಭಾಗೃಹದ ಆತ್ಮಿಕ ವಾತಾವರಣವು ಯಥಾರ್ಥವಾದದ್ದಾಗಿದೆ, ಸತ್ಯ ಆರಾಧನೆ ಮತ್ತು ಬೈಬಲಿನ ಬೋಧನೆಗಳಲ್ಲಿನ ನಿಜ ಅಭಿರುಚಿಯಿಂದ ಚಿಮ್ಮುವಂಥದ್ದಾಗಿದೆ. ಮತ್ತು ಸಭಾಗೃಹದ ಲಘುವಾದ, ಸ್ವಾಭಾವಿಕ ಪರಿಸರಗಳು ಹಾಜರಿರುವವರನ್ನು ಪ್ರತಿಕ್ರಿಯಾತ್ಮಕವಾಗಿರಲು ಮತ್ತು ಮಿತ್ರಭಾವದಿಂದಿರಲು ಉತ್ತೇಜಿಸುತ್ತವೆ ವಿನಃ ರಹಸ್ಯಾತ್ಮಕವಾಗಿ ವಿಧಿಸಲ್ಪಟ್ಟ ಗಾಂಭೀರ್ಯದಿಂದ ಪ್ರತಿಬಂಧಿಸಲ್ಪಡುವುದಿಲ್ಲ.” ನಿಶ್ಚಯವಾಗಿಯೂ, ರಾಜ್ಯ ಸಭಾಗೃಹದ ಉಪಯೋಗವು ಯಾವಾಗಲೂ ಗೌರವವನ್ನು ಮತ್ತು ಗಾಂಭೀರ್ಯವನ್ನು ಪ್ರತಿಬಿಂಬಿಸುವಂತೆ ಜಾಗ್ರತೆಯನ್ನೂ ತಕ್ಕೊಳ್ಳಲಾಗುತ್ತದೆ.
ಈ ಕ್ಷೇತ್ರದಲ್ಲಿಯಾದರೊ ಕ್ರೈಸ್ತ ಪ್ರಪಂಚವು ಘೋರ ಅಗೌರವವನ್ನು ತೋರಿಸಿದೆ. ಕೆಲವು ಧಾರ್ಮಿಕ ಸಂಸ್ಥೆಗಳು ಅವುಗಳ ಆರಾಧನಾ ಸ್ಥಳಗಳನ್ನು ಮನೋರಂಜನೆಗಾಗಿ ಸಮಾಜ ಕೇಂದ್ರಗಳನ್ನಾಗಿ ಉಪಯೋಗಿಸುತ್ತಾರೆ. ಧಾರ್ಮಿಕ ರಾಕ್ ಸಂಗೀತದ ಸಜೀವ ಗಾನ ಗೋಷ್ಠಿಗಳು, ವೆಯ್ಟ್ ಲಿಫ್ಟಿಂಗ್ಗಾಗಿ ಕೋಣೆಗಳು, ಬಿಲ್ಯರ್ಡ್ಸ್ಗಾಗಿ ಮೇಜುಗಳು, ಕೂಸುಕೋಣೆಗಳು, ಮತ್ತು ಮನೆಯೊಳಗಿನ ಸಿನಿಮಾಗಳು, ಅವರಲ್ಲಿವೆ. ಒಂದು ಚರ್ಚ್ನಲ್ಲಿ ಅದರ ಕಾರ್ಯಕ್ರಮದ ಭಾಗವಾಗಿ ಕುಸ್ತಿ ಪಂದ್ಯವಿತ್ತು. ಇದು ಅಪೊಸ್ತಲರ ಮೂಲಕ ಇಟ್ಟಂಥ ನಮೂನೆಯೊಂದಿಗೆ ಹೊಂದಿಕೆಯಲ್ಲಿರುವುದು ಕಷ್ಟವೆ.
ಮೊದಲ ಶತಮಾನದ ಯಾವುದೇ ಸಭೆಯು ಅಯೋಗ್ಯವಾಗಿ ವರ್ತಿಸಿದಲ್ಲಿ, ಕ್ರಮಪಡಿಸುವಿಕೆಯು ತಕ್ಕದ್ದಾಗಿತ್ತು. ಉದಾಹರಣೆಗಾಗಿ, ಕೊರಿಂಥದ ಕ್ರೈಸ್ತ ಸಭೆಯಲ್ಲಿನ ಕೆಲವರು ಕರ್ತನ ಸಂಜಾ ಭೋಜನದ ಆಚರಣೆಯನ್ನು ತಿನ್ನುವ ಮತ್ತು ಕುಡಿಯುವ ಒಂದು ಅವಕಾಶವನ್ನಾಗಿ ಬಳಸುತ್ತಿದ್ದರು. ಕೂಟದ ಮುಂಚೆ ಯಾ ಕೂಟದ ಸಮಯದಲ್ಲಿ ತಿನ್ನಲು ಅವರೊಂದಿಗೆ ರಾತ್ರಿಯೂಟವನ್ನು ತರುತ್ತಿದ್ದರು, ಮತ್ತು, ಕೆಲವರು ಅತಿಯಾಗಿ ತಿನ್ನುತ್ತಿದ್ದರು ಮತ್ತು ಅತಿಯಾಗಿ ಕುಡಿಯುತ್ತಿದ್ದರು. ಇದು ನಿಜಕ್ಕೂ ತಕ್ಕದ್ದಾಗಿರಲಿಲ್ಲ. ಅಪೊಸ್ತಲ ಪೌಲನು ಅವರಿಗೆ ಬರೆದದ್ದು: “ಏನು, ಉಣ್ಣುವದಕ್ಕೂ ಕುಡಿಯುವದಕ್ಕೂ ಮನೆಗಳಿಲ್ಲದೆ ಇದ್ದೀರಾ?”—1 ಕೊರಿಂಥ 11:20-29.
ಪೌಲನ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ವೈಯಕ್ತಿಕ ವಿಷಯಗಳ ಉಸ್ತುವಾರಿಯನ್ನು ರಾಜ್ಯ ಸಭಾಗೃಹದ ಬದಲಿಗೆ ಮನೆಯಲ್ಲಿ ಯಾ ಬೇರೆಲಿಯ್ಲಾದರೂ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಮ್ಮ ಕ್ರಮದ ಕೂಟಗಳು ಒಂದೇ ಸಮಯದಲ್ಲಿ ಅನೇಕ ಸ್ನೇಹಿತರನ್ನು ಕಾಣುವಂತೆ ಅನುಕೂಲ ಸಂದರ್ಭಗಳನ್ನು ಒದಗಿಸುತ್ತವೆಂಬುದು ನಿಜ. ಆದಾಗ್ಯೂ, ರಾಜ್ಯ ಸಭಾಗೃಹವು ಯೆಹೋವನಿಗೆ ಸಮರ್ಪಿಸಲ್ಪಟ್ಟದ್ದಾಗಿದೆ, ಹೀಗೆ ಅದನ್ನು ಸಂಪೂರ್ಣವಾಗಿ ಆತನ ಆರಾಧನೆಗೆ ಉಪಯೋಗಿಸಬೇಕಾಗಿದೆ. ನಮ್ಮ ಲೌಕಿಕ ವ್ಯಾಪಾರದ ಯಾ ವೈಯಕ್ತಿಕ ಹಣಕಾಸಿನ ಕಾರ್ಯಕಲಾಪಗಳ ಉಸ್ತುವಾರಿಯನ್ನು ವಹಿಸಲು ಅಲ್ಲಿ ನಮ್ಮ ಉಪಸ್ಥಿತಿಯ ಪ್ರಯೋಜನವನ್ನು ನಾವು ತಕ್ಕೊಳ್ಳುವುದಿಲ್ಲ.
ಇನ್ನೂ, ವಿನೋದಾವಳಿಯ ಕಾರ್ಯಕ್ರಮಗಳಿಗಾಗಿ, ನಿಧಿ ಸಂಗ್ರಹಿಸುವ ಚಟುವಟಿಕೆಗಳಿಗಾಗಿ, ಯಾ ಮಕ್ಕಳಾರೋಗ್ಯದಂಥ, ಸಮಾಜ ಸೇವೆಗಳಿಗಾಗಿ ಸಭೆಗಳಿಂದ ರಾಜ್ಯ ಸಭಾಗೃಹಗಳು ಬಳಸಲ್ಪಡುವುದಿಲ್ಲ. ಅಂಥ ವೈಯಕ್ತಿಕ ಮತ್ತು ವ್ಯಾಪಾರದ ವಿಷಯಗಳ ಜಾಗ್ರತೆಯನ್ನು ವಹಿಸಲು ಒಬ್ಬನಿಗೆ ಇತರ ಸ್ಥಳಗಳು ಇವೆ.
ಸಭೆಯ ಸದಸ್ಯರು ಕೂಟಗಳಲ್ಲಿ ವಸ್ತುಗಳನ್ನು ಎರವು ತೆಗೆದುಕೊಳ್ಳುವುದು ಮತ್ತು ಅವನ್ನು ಹಿಂತಿರುಗಿಸುವುದರ ಚಟವನ್ನು ಬೆಳೆಸುತ್ತಿದ್ದುದ್ದನ್ನು ಒಂದು ರಾಜ್ಯ ಸಭಾಗೃಹದಲ್ಲಿನ ಹಿರಿಯರು ಗಮನಿಸಿದರು. ಮತ್ತು, ಅವರು ರಾಜ್ಯ ಸಭಾಗೃಹದಲ್ಲಿ ವಿಡಿಯೊ ಕ್ಯಾಸೆಟ್ ಚಲನ ಚಿತ್ರಗಳನ್ನು ರೂಢಿಯಾಗಿ ಅದಲುಬದಲು ಮಾಡುತ್ತಿದ್ದರು. ಈ ಚಟುವಟಿಕೆಯು ಸ್ವಭಾವದಲ್ಲಿ ವ್ಯಾಪಾರದ್ದಾಗಿದ್ದಿಲ್ಲವಾದರೂ, ಅವರು ಈ ವಿಷಯಗಳನ್ನು ಸಾಧ್ಯವಾದಾಗಲ್ಲೆಲ್ಲಾ ಮನೆಯಲ್ಲಿ ನಿರ್ವಹಿಸುವುದರ ವಿವೇಕವನ್ನು ಕಾಣುವಂತೆ ಹಿರಿಯರು ಅವರಿಗೆ ಸಹಾಯ ಮಾಡಿದರು.
ತಪ್ಪಭಿಪ್ರಾಯಗಳನ್ನು ಕೊಡಬಹುದಾದಂಥ ಸಂದರ್ಭಗಳನ್ನು ತಪ್ಪಿಸಲು ಮತ್ತು ರಾಜ್ಯ ಸಭಾಗೃಹವು ಯೋಗ್ಯವಾಗಿ ಬಳಸಲ್ಪಡುವುದನ್ನು ಖಚಿತಪಡಿಸಲು, ಪ್ರತಿಯೊಬ್ಬರು ತಮ್ಮನ್ನೇ ಕೇಳಿಕೊಳ್ಳಬೇಕೇನಂದರೆ: “ಮನೆಯಲ್ಲಿ ಜಾಗ್ರತೆವಹಿಸಬೇಕಾದಂಥ ಯಾವುದೇ ವೈಯಕ್ತಿಕ ವಿಷಯಗಳನ್ನು ರಾಜ್ಯ ಸಭಾಗೃಹದಲ್ಲಿ ನಾನು ನೋಡಿಕೊಳ್ಳುವುದಿದೆಯೊ?” ಉದಾಹರಣೆಗಾಗಿ, ವಿಹಾರಗಳನ್ನು ಯಾ ಸಾಮಾಜಿಕ ಒಕ್ಕೂಟಗಳನ್ನು ಸಂಘಟಿಸುವಾಗ, ಅಂಥ ಏರ್ಪಾಡುಗಳನ್ನು ಮನೆಯಲ್ಲಿ ಚರ್ಚಿಸಿದರೆ ಒಳ್ಳೇದಾಗಿರುವುದಿಲ್ಲವೊ? ನಾವು ಯಾರನ್ನು ಸಂಪರ್ಕಿಸ ಬಯಸುತ್ತೇವೊ ಅವರನ್ನು ಸಂಪರ್ಕಿಸಲು ದೂರವಾಣಿಯನ್ನು ಉಪಯೋಗಿಸಬಹುದೊ ಯಾ ಮನೆಗಳಿಗೆ ಭೇಟಿ ಕೊಡಬಹುದೊ? ಪೌಲನ ಮಾತುಗಳನ್ನು ಎರವು ತಕ್ಕೊಂಡು, ನಾವು ಹೀಗೆ ಹೇಳಬಹುದು: ‘ಅಂಥ ವಿಷಯಗಳನ್ನು ನಿರ್ವಹಿಸುವುದಕ್ಕಾಗಿ ನಮಗೆ ನಿಶ್ಚಯವಾಗಿಯೂ ಮನೆಗಳು ಇವೆ, ಹೌದಲ್ಲವೇ?’
ಯೆಹೋವನನ್ನು ಆರಾಧಿಸಲು ಒಂದು ನೇಮಿತ ಸಮಯ ಮತ್ತು ಸ್ಥಳ
ಪ್ರಸಂಗಿ 3:1 ರಲ್ಲಿ ಬೈಬಲನ್ನುವುದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವಾಗ, ಕ್ರೈಸ್ತ ಶುಶ್ರೂಷೆಗೆ ಸಂಬಂಧಪಟ್ಟಂಥ ಚಟುವಟಿಕೆಗಳಲ್ಲಿ ನಾವು ನಮ್ಮನ್ನೇ ಪೂರ್ಣವಾಗಿ ಮಗ್ನಗೊಳಿಸಿಕೊಳ್ಳಬಹುದು. ಯೆಹೋವನನ್ನು ಆರಾಧಿಸಲು ಅದೊಂದು ನೇಮಿತ ಸಮಯವಾಗಿದೆ.
ಕ್ರೈಸ್ತ ಸಭೆಯೊಳಗೆ ಸ್ವಪಕ್ಷಪಾತ ತೋರಿಸುವುದರ ವಿರುದ್ಧ ಯೇಸುವಿನ ಮಲತಮ್ಮನಾದ ಯಾಕೋಬನು ಸಲಹೆಯನ್ನಿತ್ತನು. (ಯಾಕೋಬ 2:1-9) ನಾವು ಈ ಸಲಹೆಯನ್ನು ರಾಜ್ಯ ಸಭಾಗೃಹಗಳಲ್ಲಿ ಹೇಗೆ ಅನ್ವಯಿಸಬಹುದು? ಸಾಮಾಜಿಕ ಘಟನೆಗಳಿಗೆ ಲಿಖಿತ ಆಮಂತ್ರಣಗಳನ್ನು ಗಮನಸೆಳೆಯುವಂತೆ ದಾಟಿಸುವಾಗ ಅಲ್ಲಿ ಸ್ವಪಕ್ಷಪಾತದ ತೋರಿಕೆಯನ್ನು ಕೊಡಬಹುದು. ಒಂದು ಸಭೆಯಲ್ಲಿ ಅಂಥ ಆಮಂತ್ರಣಗಳನ್ನು ಹಾಜರಾಗಿರುವವರ ಪುಸ್ತಕ ಚೀಲಗಳಲ್ಲಿ ಯಾ ಬೈಬಲುಗಳಲ್ಲಿ ಇಡುವ ವಾಡಿಕೆ ಇತ್ತು. ಆಮಂತ್ರಣಗಳನ್ನು ಅಂಚೆಯ ಮೂಲಕ ಯಾ ಪ್ರತಿಯೊಂದು ಮನೆಗೆ ಅವುಗಳನ್ನು ತಲುಪಿಸುವುದಕ್ಕಿಂತ ಇದು ಹೆಚ್ಚು ಅನುಕೂಲಕರವೆಂಬುದು ನಿಜ. ಆದಾಗ್ಯೂ, ಇತರ ವ್ಯಕ್ತಿಗಳಿಗೆ ಆಮಂತ್ರಣಗಳು ದಾಟಿಸಲ್ಪಟ್ಟಿವೆ ಎಂಬುದನ್ನು ಗಮನಿಸಿದವರಿಗೆ ಆಮಂತ್ರಣವು ಸಿಕ್ಕದೇ ಇರುವಾಗ ಹೇಗನಿಸಬಹುದು? ಇದು ಸ್ವಪಕ್ಷಪಾತದ ತೋರಿಕೆಯನ್ನು ಕೊಡಬಲ್ಲದೆ?
ನಿಶ್ಚಯವಾಗಿಯೂ, ರಾಜ್ಯ ಸಭಾಗೃಹದಲ್ಲಿರುವಾಗ ವೈಯಕ್ತಿಕ ಸಂದೇಶ ಯಾ ಸಾಮಾನನ್ನು ಯಾರೂ ಮತ್ತೊಬ್ಬರಿಗೆ ಕೊಡಬಾರದೆಂದು ಹೇಳುವ ಕಟ್ಟುನಿಟ್ಟಾದ ನಿಯಮವು ಇರಬೇಕಾದ ಅಗತ್ಯ ಇಲ್ಲ; ರಾಜ್ಯ ಸಭಾಗೃಹದಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಯಾ ಘಟನೆಗಳನ್ನು ಮಾತಾಡುವುದು, ಯಾರನ್ನಾದರೂ ನಿಮ್ಮ ಮನೆಗೆ ಆಮಂತ್ರಿಸುವುದು, ಯಾ ಯಾವುದೆ ಮನೋರಂಜನೆಯಲ್ಲಿ ನಿಮ್ಮೊಂದಿಗೆ ಜತೆಗೂಡಲು ಯಾರನ್ನಾದರು ಕೇಳಿಕೊಳ್ಳುವುದು ಕೂಡ ತಪ್ಪಲ್ಲ. ಆದರೆ ಇವುಗಳು ಪ್ರಾಸಂಗಿಕವಾಗಿರಬೇಕು ಮತ್ತು ವಿವೇಚನೆಯುಳ್ಳ ಮತ್ತು ಗದ್ದಲವಿಲ್ಲದ ವಿಧಾನದಲ್ಲಿ ಮಾಡಲ್ಪಡಬೇಕು. ಆತ್ಮಿಕ ಉನ್ನತಿಗಾಗಿ, ಎನ್ನುವ, ರಾಜ್ಯ ಸಭಾಗೃಹದಲ್ಲಿ ನಮ್ಮ ಒಟ್ಟುಗೂಡುವಿಕೆಯ ನಿಜ ಉದ್ದೇಶದಿಂದ, ವೈಯಕ್ತಿಕ ಏರ್ಪಾಡುಗಳು ಎಂದಿಗೂ ಅಪಕರ್ಷಿಸಬಾರದು.—ಮತ್ತಾಯ 6:33; ಫಿಲಿಪ್ಪಿ 1:10.
ಮಾದರಿಯನ್ನಿಡುವ ಪುರುಷರು
ರಾಜ್ಯ ಸಭಾಗೃಹಕ್ಕೆ ಗೌರವವನ್ನು ತೋರಿಸುವಲ್ಲಿ ಹಿರಿಯರು ಮತ್ತು ಸಹಾಯಕ ಸೇವಕರು ಹುರುಪಿನ ಮಾದರಿಯನ್ನಿಡುತ್ತಾರೆ. ರಾಜ್ಯ ಸಭಾಗೃಹವನ್ನು ದುರಸ್ತಾಗಿ ಇಡುವದಕ್ಕೆ ಸಂಬಂಧಪಟ್ಟ ವಿಷಯಗಳನ್ನು ಸಂಘಟಿಸುವದಕ್ಕೆ ಸಾಮಾನ್ಯವಾಗಿ ಒಬ್ಬ ಅಥವಾ ಇಬ್ಬರು ಹಿರಿಯರನ್ನು ಮತ್ತು ಸಹಾಯಕ ಸೇವಕರುಗಳನ್ನು ನೇಮಿಸಲಾಗುತ್ತದೆ. ಅದೇ ಸಭಾಗೃಹವನ್ನು ಒಂದಕ್ಕಿಂತ ಹೆಚ್ಚಿನ ಸಭೆಗಳು ಉಪಯೋಗಿಸುವಾಗ, ಹಿರಿಯರ ಕಮಿಟಿಯು ಈ ವಿಷಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ.
ಅಂಥ ಕೆಲಸಗಳನ್ನು ನೋಡಿಕೊಳ್ಳುವಂತೆ ಕೆಲವೊಬ್ಬರು ನಿರ್ದಿಷ್ಟವಾಗಿ ನೇಮಿಸಲ್ಪಟ್ಟಿರುವುದಾದರೂ, ಎಲ್ಲಾ ಸಹಾಯಕ ಸೇವಕರು ಮತ್ತು ಹಿರಿಯರು ಸಭಾಗೃಹದಲ್ಲಿ ಸಾಚಾ ಅಭಿರುಚಿಯನ್ನು ಪ್ರದರ್ಶಿಸಬೇಕು. ರಾಜ್ಯ ಸಭಾಗೃಹವು ಯೆಹೋವನಿಗೆ ಸಮರ್ಪಿಸಲ್ಪಟ್ಟಿದೆ ಮತ್ತು ಆತನ ಆರಾಧನೆಗಾಗಿ ಉಪಯೋಗಿಸಲ್ಪಡುತ್ತದೆ ಎಂದು ಅವರು ಮನಗಾಣುತ್ತಾರೆ.
ರಿಪೇರಿ ಕೆಲಸಗಳ ಅಗತ್ಯ ಇರುವಾಗ ಹಿರಿಯರು ತಡಮಾಡಬಾರದು. (2 ಪೂರ್ವಕಾಲವೃತ್ತಾಂತ 24:5, 13; 29:3; 34:8; ನೆಹೆಮೀಯ 10:39; 13:11) ಕೆಲವು ಸಭೆಗಳಲ್ಲಿ ರಾಜ್ಯ ಸಭಾಗೃಹದ ಯಾವುದೇ ಅವಶ್ಯವಿರುವ ರಿಪೇರಿಗಳ ತ್ವರಿತ ಜಾಗರೂಕತೆಯನ್ನು ವಹಿಸಲು ಕ್ರಮದ ತಪಾಸಣೆಯು ಮಾಡಲ್ಪಡುತ್ತದೆ. ಅವಶ್ಯವಿರುವ ಸರಬರಾಯಿಯು ಕೈಯಲ್ಲಿದೆ ಮತ್ತು ಸುಗಮ್ಯವಾಗಿದೆ ಎಂದು ಖಚಿತಪಡಿಸಲು ತಪಶೀಲು ಪಟ್ಟಿಗಳು ಇಡಲ್ಪಡುತ್ತವೆ. ಉಪಕರಣ ಮತ್ತು ಶುಚಿ ಮಾಡುವ ಸಾಮಗ್ರಿ, ದಾಸ್ತಾನು ಸರಬರಾಯಿಗಳಿಗೆ ಒಂದು ಗೊತ್ತುಮಾಡಿರುವ ಕ್ಷೇತ್ರವಿರುವಲ್ಲಿ, ಎಲ್ಲಾ ಹಿರಿಯರು ಮತ್ತು ಸಹಾಯಕ ಸೇವಕರು, ಅದು ಅಚ್ಚುಕಟ್ಟಾಗಿ ಇಡಲ್ಪಟ್ಟಿರುವುದನ್ನು ಖಚಿತಮಾಡಿಕೊಂಡು, ಅದರ ಸ್ಥಿತಿಯ ಬಗ್ಗೆ ಅಭಿರುಚಿಯನ್ನು ಪ್ರದರ್ಶಿಸಬೇಕು. ಲಿಟೆರಚರ್ ಮತ್ತು ಮ್ಯಾಗಜಿನ್ ಕೌಂಟರ್ಗಳಲ್ಲಿ ಕೆಲಸ ಮಾಡುವವರು ಖಾಲಿ ರಟ್ಟುಪೆಟ್ಟಿಗೆಗಳು ಸಭಾಗೃಹದಲ್ಲಿ ಕಸದಂತೆ ಚೆಲ್ಲಲ್ಪಟ್ಟಿರದಂತೆ ಒಡನೆಯೇ ನೋಡಿಕೊಳ್ಳುವುದರ ಮೂಲಕ ಅವರ ಅಭಿರುಚಿಯನ್ನು ತೋರಿಸಬೇಕು.
ಮಾದರಿಯನ್ನು ಇಡುವುದರ ಮೂಲಕ, ಹಿರಿಯರು ಮತ್ತು ಸಹಾಯಕ ಸೇವಕರು ರಾಜ್ಯ ಸಭಾಗೃಹಕ್ಕಾಗಿ ಉತ್ಸಾಹವನ್ನು ವ್ಯಕ್ತಪಡಿಸಲು ಸಭೆಯ ಇತರರಿಗೆ ಸಹಾಯ ಮಾಡಬಲ್ಲರು. (ಇಬ್ರಿಯ 13:7) ಸಭಾಗೃಹವನ್ನು ಶುಚಿಗೊಳಿಸುವುದರಲ್ಲಿ ಭಾಗವಹಿಸುವುದರ ಮೂಲಕ ಮತ್ತು ಅದರ ಪೂರ್ತಿ ತೋರಿಕೆಯಲ್ಲಿ ಸಾಚಾ ಅಭಿರುಚಿಯನ್ನು ತೋರಿಸುವುದರ ಮೂಲಕ ಎಲ್ಲರೂ ಯೋಗ್ಯ ಗೌರವವನ್ನು ತೋರಿಸಬಲ್ಲರು.
ಮತ್ತಾಯ 18:20 ರಲ್ಲಿ ಯೇಸು ಅಂದದ್ದು: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” ಹೌದು, ಯೆಹೋವನನ್ನು ಆರಾಧಿಸಲು ಕೂಡಿ ಬಂದಾಗ ನಾವೇನನ್ನು ಮಾಡುತ್ತೇವೊ ಅದರಲ್ಲಿ ಯೇಸುವು ಅಭಿರುಚಿಯುಳ್ಳವನಾಗಿದ್ದಾನೆ. ಖಾಸಗಿ ಮನೆಯಲ್ಲಿ ಜರಗುವ ಯಾವುದೇ ಕೂಟಗಳನ್ನು ಮತ್ತು ಅಧಿವೇಶನ ಯಾ ಸಮ್ಮೇಳನದಂಥ ದೊಡ್ಡ ಕೂಟಗಳನ್ನು ಇದು ಒಳಗೂಡಿಸುತ್ತದೆ.
ಲಕ್ಷಾಂತರ ಯೆಹೋವನ ಸಾಕ್ಷಿಗಳಿಗೆ, ಕ್ರಮದ ಆರಾಧನೆಯ ಸ್ಥಳವಾದ ರಾಜ್ಯ ಸಭಾಗೃಹಕ್ಕಿಂತ, ಅವರ ಹೃದಯಕ್ಕೆ ಹತ್ತಿರವಾಗಿರುವ ಇನ್ನೊಂದು ಸ್ಥಳವಿರುವುದಿಲ್ಲ. ಅವರು ಆ ಸ್ಥಳಕ್ಕೆ ಯೋಗ್ಯ ಗೌರವವನ್ನು ತೋರಿಸುತ್ತಾರೆ. ಅವರು ಅದರ ಜಾಗ್ರತೆಯನ್ನು ವಹಿಸುವುದರಲ್ಲಿ ಉದ್ಯೋಗಶೀಲತೆಯನ್ನು ವ್ಯಕ್ತಪಡಿಸುತ್ತಾರೆ, ಮತ್ತು ಅವರು ಅದನ್ನು ಯಾವಾಗಲು ಯೋಗ್ಯವಾಗಿ ಬಳಸಲು ಪ್ರಯಾಸಪಡುತ್ತಾರೆ. ಯೆಹೋವನು ತಾನೇ ಕೊಡುವ ಬುದ್ಧಿವಾದವನ್ನು ನೀವು ಕೂಡ ಪಾಲಿಸಬಲ್ಲಿರಿ: “ದೇವಸ್ಥಾನಕ್ಕೆ ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು.”—ಪ್ರಸಂಗಿ 5:1.