ದಾನಿಯೇಲನ ಪ್ರವಾದನಾ ದಿನಗಳು ಮತ್ತು ನಮ್ಮ ನಂಬಿಕೆ
“ಕಾದುಕೊಂಡು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯ ಮಟ್ಟಿಗೆ ತಾಳಿರುವವನು ಧನ್ಯನು (ಸಂತೋಷಿತನು, NW).”—ದಾನಿಯೇಲ 12:12.
1. ಅನೇಕರು ನಿಜ ಸಂತೋಷವನ್ನು ಕಂಡುಕೊಳ್ಳಲು ತಪ್ಪುವುದೇಕೆ ಮತ್ತು ನಿಜ ಸಂತೋಷವು ಯಾವುದಕ್ಕೆ ಜೋಡಿಸಲ್ಪಟ್ಟಿದೆ?
ಪ್ರತಿಯೊಬ್ಬನು ಸಂತೋಷವಾಗಿರಲು ಬಯಸುತ್ತಾನೆ. ಇಂದಾದರೋ ಸಂತೋಷವಾಗಿರುವವರು ಅತಿ ಕೊಂಚ. ಯಾಕೆ? ಅಂಶಿಕವಾಗಿ ಯಾಕಂದರೆ ಹೆಚ್ಚಿನವರು ಸಂತೋಷಕ್ಕಾಗಿ ತಪ್ಪು ಸ್ಥಳಗಳಲ್ಲಿ ಹುಡುಕುತ್ತಾರೆ. ವಿದ್ಯೆ, ಐಶ್ವರ್ಯ, ಜೀವನೋದ್ಯೋಗ ಅಥವಾ ಅಧಿಕಾರದ ಬೆನ್ನಟ್ಟುವಿಕೆಯೇ ಮುಂತಾದ ವಿಷಯಗಳಲ್ಲಿ ಸಂತೋಷವು ಹುಡುಕಲ್ಪಡುತ್ತದೆ. ಯೇಸುವಾದರೋ ಪರ್ವತದ ಮೇಲಿನ ಅವನ ಪ್ರಸಂಗದ ಆರಂಭದಲ್ಲಿ ಸಂತೋಷವನ್ನು, ಆತ್ಮಿಕ ಆವಶ್ಯಕತೆಗಾಗಿ ಒಬ್ಬನಿಗಿರುವ ಅರುಹು, ಕರುಣೆ, ಹೃದಯ ನೈರ್ಮಲ್ಯ, ಮತ್ತು ತದ್ರೀತಿಯ ಗುಣಗಳೊಂದಿಗೆ ಜೋಡಿಸಿದನು. (ಮತ್ತಾಯ 5:3-10) ಯೇಸು ತಿಳಿಸಿದ ಸಂತೋಷದ ಬಗೆಯು ನೈಜವೂ, ಶಾಶ್ವತವೂ ಆಗಿದೆ.
2. ಪ್ರವಾದನೆಗನುಸಾರ, ಅಂತ್ಯ ಕಾಲದಲ್ಲಿ ಯಾವುದು ಸಂತೋಷಕ್ಕೆ ನಡಿಸುವುದು, ಮತ್ತು ಇದರ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?
2 ಅಂತ್ಯ ಕಾಲದಲ್ಲಿರುವ ಅಭಿಷಿಕ್ತ ಉಳಿಕೆಯವರಿಗೆ ಸಂತೋಷವು ಬೇರೊಂದು ಹೆಚ್ಚಿನ ಸಂಗತಿಯೊಂದಿಗೆ ಜೋಡಿಸಲ್ಪಟ್ಟಿದೆ. ದಾನಿಯೇಲನ ಪುಸ್ತಕದಲ್ಲಿ ನಾವು ಓದುವುದು: “ದಾನಿಯೇಲನೇ, ಈ ಮಾತುಗಳು ಅಂತ್ಯಕಾಲದ ವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ, ಹೋಗು; ಕಾದುಕೊಂಡು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯ ಮಟ್ಟಿಗೆ ತಾಳಿರುವವನು ಧನ್ಯನು (ಸಂತೋಷಿತನು, NW)” (ದಾನಿಯೇಲ 12:9, 12) ಈ 1,335 ದಿನಗಳು ಯಾವ ಕಾಲಾವಧಿಯನ್ನು ಆವರಿಸಿದವು? ಅವುಗಳಲ್ಲಿ ಜೀವಿಸಿದ ಜನರು ಸಂತೋಷಿತರಾಗಿದ್ದರೇಕೆ? ಇಂದಿನ ನಮ್ಮ ನಂಬಿಕೆಯೊಂದಿಗೆ ಇದಕ್ಕೇನಾದರೂ ಸಂಬಂಧವಿದೆಯೇ? ದಾನಿಯೇಲನು ಈ ಮಾತುಗಳನ್ನು ಬರೆದ ಕಾಲಕ್ಕೆ ನಾವು ಹಿನ್ನೋಡುವುದಾದರೆ, ಈ ಪ್ರಶ್ನೆಗಳನ್ನುತ್ತರಿಸಲು ನಾವು ಸಹಾಯ ಮಾಡಲ್ಪಡುತ್ತೇವೆ, ಅದು ಬಬಿಲೋನಿನ ಬಂದಿವಾಸದಿಂದ ಇಸ್ರಾಯೇಲ್ಯರು ಬಿಡುಗಡೆಯಾದ ಅನಂತರ ಸ್ವಲ್ಪ ಸಮಯದಲ್ಲಿ ಮತ್ತು ಪಾರಸಿಯ ಅರಸ ಕೋರೆಷನ ಮೂರನೆಯ ವರ್ಷದಲ್ಲಿ ಬರೆಯಲ್ಪಟ್ಟಿತು.—ದಾನಿಯೇಲ 10:1.
ಪುನರ್ಸ್ಥಾಪನೆಯು ಸಂತೋಷವನ್ನು ತರುತ್ತದೆ
3. ರಾಜ ಕೋರೇಷನ ಯಾವ ಕೃತ್ಯವು ನಂಬಿಗಸ್ತ ಯೆಹೂದ್ಯರಿಗೆ ಸಾ.ಶ.ಪೂ. 537 ರಲ್ಲಿ ಸಂತೋಷವನ್ನು ತಂದಿತು, ಆದರೆ ಯಾವ ಸುಯೋಗವನ್ನು ಕೋರೇಷನು ಯೆಹೂದ್ಯರಿಗೆ ಕೊಡಲಿಲ್ಲ?
3 ಯೆಹೂದ್ಯರಿಗೆ ಬಬಿಲೋನಿನಿಂದ ಬಿಡುಗಡೆಯು ನಿಜ ಹರ್ಷೋಲ್ಲಾಸದ ಸಂದರ್ಭವಾಗಿತ್ತು. ಬಹುತರ 70 ವರ್ಷಗಳ ಬಂದಿವಾಸವನ್ನು ಯೆಹೂದ್ಯರು ತಾಳಿಕೊಂಡ ಅನಂತರ, ಅವರು ಯೆಹೋವನ ಆಲಯವನ್ನು ಪುನಃ ಕಟ್ಟಲು ಯೆರೂಸಲೇಮಿಗೆ ಹಿಂತಿರುಗುವಂತೆ ಮಹಾ ಕೋರೇಷನು ಅವರನ್ನು ಆಮಂತ್ರಿಸಿದನು. (ಎಜ್ರ 1:1, 2) ಯಾರು ಪ್ರತಿಕ್ರಿಯೆ ತೋರಿಸಿದರೋ ಅವರು ಮಹಾ ನಿರೀಕ್ಷಣೆಗಳೊಂದಿಗೆ ಹೊರಟು, ಸಾ.ಶ.ಪೂ. 537 ರಲ್ಲಿ ಸ್ವದೇಶಕ್ಕೆ ಆಗಮಿಸಿದರು. ಆದರೂ, ರಾಜ ದಾವೀದನ ವಂಶಜನೊಬ್ಬನ ಕೆಳಗೆ ಒಂದು ರಾಜ್ಯವನ್ನು ಪುನರ್ಸ್ಥಾಪಿಸುವಂತೆ ಕೋರೇಷನು ಅವರನ್ನು ಆಮಂತ್ರಿಸಲಿಲ್ಲ.
4, 5. (ಎ) ದಾವೀದನ ರಾಜ್ಯವು ದೊಬ್ಬಲ್ಪಟ್ಟದ್ದು ಯಾವಾಗ? ಯಾಕೆ? (ಬಿ) ದಾವೀದನ ರಾಜಪದವು ಪುನರ್ಸ್ಥಾಪಿಸಲ್ಪಡುವದೆಂಬದಕ್ಕೆ ಯಾವ ಆಶ್ವಾಸನೆಯನ್ನು ಯೆಹೋವನು ಕೊಟ್ಟನು?
4 ಅದು ಅರ್ಥಗರ್ಭಿತವಾಗಿತ್ತು. ಸುಮಾರು ಐದು ಶತಮಾನಗಳ ಮುಂಚಿತವಾಗಿ ಯೆಹೋವನು ದಾವೀದನಿಗೆ, “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು” ಎಂದು ವಾಗ್ದಾನಿಸಿದ್ದನು. (2 ಸಮುವೇಲ 7:16) ಅಸಂತೋಷಕರವಾಗಿಯೇ, ದಾವೀದನ ರಾಜ ಮನೆತನದ ವಂಶಜರಲ್ಲಿ ಹೆಚ್ಚಿನವರು ದಂಗೆಖೋರರಾಗಿ ಪರಿಣಮಿಸಿದರು, ಮತ್ತು ಜನಾಂಗದ ರಕ್ತಾಪರಾಧವು ಎಷ್ಟು ಹೆಚ್ಚಾಗಿತ್ತೆಂದರೆ ಸಾ.ಶ.ಪೂ. 607 ರಲ್ಲಿ ದಾವೀದನ ರಾಜಪದವು ದೊಬ್ಬಲ್ಪಡುವಂತೆ ಯೆಹೋವನು ಅನುಮತಿಸಿದನು. ಮಕ್ಕಾಬಿಯರ ಕೈಕೆಳಗಿನ ಕೊಂಚ ಅವಧಿಯನ್ನು ಬಿಟ್ಟು, ಯೆರೂಸಲೇಮು ಅಂದಿನಿಂದ ಹಿಡಿದು ಸಾ.ಶ. 70ರ ಅದರ ಎರಡನೆಯ ನಾಶನದ ತನಕ ವಿದೇಶೀ ಪ್ರಭುತ್ವದ ಕೆಳಗಿತ್ತು. ಹೀಗೆ ಸಾ.ಶ.ಪೂ. 537 ರಲ್ಲಿ, ದಾವೀದನ ಯಾವ ಕುವರನೂ ರಾಜನಾಗಿ ಆಳದೆ ಇರುವ ಕಾಲಾವಧಿಯು, “ಅನ್ಯದೇಶದವರ [ಅನ್ಯಜನಾಂಗಗಳ ನಿಯಮಿತ, NW] ಸಮಯಗಳು” ಮುಂದುವರಿದವು.—ಲೂಕ 21:24.
5 ಆದರೂ, ದಾವೀದನಿಗೆ ಕೊಟ್ಟ ತನ್ನ ವಾಗ್ದಾನವನ್ನು ಯೆಹೋವನು ಮರೆಯಲಿಲ್ಲ. ಬಬಿಲೋನಿನ ಲೋಕ ಪ್ರಭುತ್ವದ ಕಾಲದಿಂದ ಹಿಡಿದು, ಯೆಹೋವನ ಜನರ ಒಂದು ರಾಜ್ಯದಲ್ಲಿ ದಾವೀದನ ಕುಲದ ಒಬ್ಬ ರಾಜನು ಪುನಃ ಆಳುವ ಸಮಯದ ವರೆಗಿನ ಶತಮಾನಗಳಲ್ಲಿ ವ್ಯಾಪಿಸುವ ಭವಿಷ್ಯತ್ಕಾಲದ ಲೋಕ ಘಟನೆಗಳ ವಿವರಗಳನ್ನು ತನ್ನ ಪ್ರವಾದಿಯಾದ ದಾನಿಯೇಲನ ಮುಖಾಂತರವಾಗಿ, ದರ್ಶನಗಳ ಮತ್ತು ಸ್ವಪ್ನಗಳ ಸರಣಿಗಳ ಮೂಲಕ ಆತನು ಪ್ರಕಟಪಡಿಸಿದನು. ದಾನಿಯೇಲ 2, 7, 8, ಮತ್ತು 10-12 ನೆಯ ಅಧ್ಯಾಯಗಳಲ್ಲಿ ದಾಖಲೆಯಾಗಿರುವ ಈ ಪ್ರವಾದನೆಗಳು, ದಾವೀದನ ಸಿಂಹಾಸನವು ಕಟ್ಟಕಡೆಗೆ ನಿಜವಾಗಿ “ಶಾಶ್ವತವಾಗಿರುವದು” ಎಂಬ ಆಶ್ವಾಸನೆಯನ್ನು ನಂಬಿಗಸ್ತ ಯೆಹೂದ್ಯರಿಗೆ ಕೊಟ್ಟವು. ಸಾ.ಶ.ಪೂ. 537 ರಲ್ಲಿ ತಮ್ಮ ಸ್ವದೇಶಕ್ಕೆ ಹಿಂತಿರುಗಿ ಬಂದ ಆ ಯೆಹೂದ್ಯರಿಗೆ ಅಂಥ ಪ್ರಕಟಿತ ಸತ್ಯವು ಸಂತೋಷವನ್ನು ತಂದಿತ್ತೆಂಬದು ನಿಶ್ಚಯ!
6. ದಾನಿಯೇಲನ ಕೆಲವು ಪ್ರವಾದನೆಗಳು ನಮ್ಮ ಸಮಯದಲ್ಲಿ ನೆರವೇರಲಿಕ್ಕಿದ್ದವೆಂದು ನಮಗೆ ತಿಳಿದಿರುವುದು ಹೇಗೆ?
6 ದಾನಿಯೇಲನ ಭವಿಷ್ಯವಾಣಿಗಳು ಬಹುತರ ತಮ್ಮ ಪೂರ್ಣತೆಯಲ್ಲಿ ಯೇಸು ಕ್ರಿಸ್ತನ ಜನನಕ್ಕೆ ಮುಂಚೆಯೇ ನೆರೆವೇರಿದ್ದವೆಂದು ಹೆಚ್ಚಿನ ಬೈಬಲ್ ವ್ಯಾಖ್ಯಾನಗಾರರು ವಾದಿಸುತ್ತಾರೆ. ಆದರೆ ವಿಷಯವು ಹೀಗಿಲ್ಲವೆಂಬದು ಸ್ಪಷ್ಟ. ದಾನಿಯೇಲ 12:4 ರಲ್ಲಿ, ದೇವದೂತನೊಬ್ಬನು ದಾನಿಯೇಲನಿಗೆ ಹೇಳುವುದು: “ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು; ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತು ತಿರುಗುವರು, ತಿಳುವಳಿಕೆಯು [ನಿಜ ಜ್ಞಾನವು, NW] ಹೆಚ್ಚುವದು.” ದಾನಿಯೇಲನ ಪುಸ್ತಕದ ಮುದ್ರೆಯೊಡೆಯುವಿಕೆಯು—ಅದರ ಅರ್ಥದ ಪೂರ್ಣ ಪ್ರಕಟನೆಯು—ಅಂತ್ಯಕಾಲದಲ್ಲಿ ಮಾತ್ರವೇ ಆಗಲಿಕ್ಕಿತ್ತು ಎಂದಾದರೆ, ನಿಶ್ಚಯವಾಗಿಯೂ ಅದರ ಪ್ರವಾದನೆಗಳಲ್ಲಿ ಕನಿಷ್ಠ ಪಕ್ಷ ಕೆಲವಾದರೂ ಆ ಕಾಲಾವಧಿಗೆ ಅನ್ವಯಿಸಲೇಬೇಕು.—ನೋಡಿರಿ ದಾನಿಯೇಲ 2:28; 8:17; 10:14.
7. (ಎ) ಅನ್ಯ ಜನಾಂಗಗಳ ನಿಯಮಿತ ಸಮಯವು ಯಾವಾಗ ಅಂತ್ಯಗೊಂಡಿತು, ಮತ್ತು ಆಗ ಯಾವ ಜರೂರಿನ ಪ್ರಶ್ನೆಯು ಉತ್ತರಿಸಲ್ಪಡಬೇಕಾಗಿತ್ತು? (ಬಿ) ಯಾರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿರಲಿಲ್ಲ?
7 ಅನ್ಯಜನಾಂಗಗಳ ನಿಯಮಿತ ಸಮಯಗಳು 1914 ರಲ್ಲಿ ಕೊನೆಗೊಂಡವು, ಮತ್ತು ಈ ಲೋಕದ ಅಂತ್ಯ ಕಾಲವು ಪ್ರಾರಂಭವಾಯಿತು. ದಾವೀದನ ರಾಜ್ಯವು ಐಹಿಕ ಯೊರೂಸಲೇಮಿನಲ್ಲಲ್ಲ, “ಆಕಾಶದ ಮೇಘ” ಗಳಲ್ಲಿ ಅದೃಶ್ಯವಾಗಿ, ಪುನರ್ಸ್ಥಾಪನೆಗೊಂಡಿತು. (ದಾನಿಯೇಲ 7:13, 14) ಆ ಸಮಯದಲ್ಲಿ, ಖೋಟಾ ಕ್ರೈಸ್ತತ್ವದ “ಹಣಜಿ”ಯು ಸಮೃದ್ಧವಾಗಿ ಬೆಳೆಯುತ್ತಿದ್ದುದರಿಂದ, ನಿಜ ಕ್ರೈಸ್ತತ್ವದ ಸನ್ನಿವೇಶವು—ಕಡಿಮೆ ಪಕ್ಷ ಮಾನವ ನೇತ್ರಗಳಿಗೆ—ಸ್ಪಷ್ಟವಾಗಿಗಿರಲಿಲ್ಲ. ಆದರೂ, ಒಂದು ಪ್ರಾಮುಖ್ಯವಾದ ಪ್ರಶ್ನೆಯು ಉತ್ತರಿಸಲ್ಪಡಬೇಕಿತ್ತು: “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರು? (ಮತ್ತಾಯ 13:24-30; 24:45) ಪುನರ್ಸ್ಥಾಪನೆಗೊಂಡ ದಾವೀದನ ರಾಜ್ಯವನ್ನು ಭೂಮಿಯ ಮೇಲೆ ಪ್ರತಿನಿಧಿಸುವವರಾರು? ದಾನಿಯೇಲನ ಮಾಂಸಿಕ ಸಹೋದರರಾದ ಯೆಹೂದ್ಯರಲ್ಲ. ಅವರು ತಿರಸ್ಕರಿಸಲ್ಪಟ್ಟಿದ್ದರು ಯಾಕಂದರೆ ಅವರು ನ್ಯೂನ ನಂಬಿಕೆಯವರಾಗಿದ್ದರು ಮತ್ತು ಮೆಸ್ಸೀಯನ ವಿಷಯದಲ್ಲಿ ಮುಗ್ಗರಿಸಿಬಿದ್ದರು. (ರೋಮಾಪುರ 9:31-33) ನಂಬಿಗಸ್ತ ಆಳು ಕ್ರೈಸ್ತಪ್ರಪಂಚದ ಸಂಘಟನೆಗಳಲ್ಲಿ ಕಂಡುಬರುವ ಯಾವ ಮಾರ್ಗವೂ ಇರಲಿಲ್ಲ! ಅವರ ದುಷ್ಕೃತ್ಯಗಳು ಯೇಸು ಅವರನ್ನು ತಿಳಿದಿರಲಿಲ್ಲವೆಂಬದನ್ನು ರುಜುಪಡಿಸಿದವು. (ಮತ್ತಾಯ 7:21-23) ಹಾಗಾದರೆ, ಅವರು ಯಾರಾಗಿದ್ದರು?
8. ಅಂತ್ಯಕಾಲದಲ್ಲಿ ಯಾರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಗಿ ರುಜುವಾಗಿರುತ್ತಾರೆ? ನಮಗೆ ತಿಳಿದಿರುವುದು ಹೇಗೆ?
8 ಯಾವುದೇ ಸಂಶಯರಹಿತವಾಗಿ, ಯಾರು 1914 ರಲ್ಲಿ ಬೈಬಲ್ ಸ್ಟೂಡೆಂಟ್ಸ್ ಎಂದು ಜ್ಞಾತರಾಗಿದ್ದರೋ, ಆದರೆ 1931 ರಿಂದ ಯೆಹೋವನ ಸಾಕ್ಷಿಗಳಾಗಿ ಗುರುತಿಸಲ್ಪಟ್ಟಿರುವ, ಯೇಸುವಿನ ಆ ಅಭಿಷಿಕ್ತ ಸಹೋದರರ ಒಂದು ಚಿಕ್ಕ ಮಂಡಲಿಯು ಅದಾಗಿತ್ತು. (ಯೆಶಾಯ 43:10) ಅವರು ಮಾತ್ರವೇ ದಾವೀದನ ಕುಲದಲ್ಲಿನ ರಾಜ್ಯದ ಪುನರ್ಸ್ಥಾಪನೆಯನ್ನು ಪ್ರಚುರ ಪಡಿಸಿದವರಾಗಿರುತ್ತಾರೆ. (ಮತ್ತಾಯ 24:14) ಅವರು ಮಾತ್ರವೇ ಲೋಕದಿಂದ ಪ್ರತ್ಯೇಕವಾಗಿ ಉಳಿದುಕೊಂಡು, ಯೆಹೋವನ ನಾಮವನ್ನು ಉತ್ಪ್ರೇಕ್ಷಿಸಿದವರಾಗಿದ್ದಾರೆ. (ಯೋಹಾನ 17:6, 14) ಮತ್ತು ಕೇವಲ ಅವರಲ್ಲಿಯೇ ದೇವರ ಜನರಿಗೆ ಸಂಬಂಧಿಸಿದ ಬೈಬಲ್ ಪ್ರವಾದನೆಗಳು ಈ ಕಡೇ ದಿನಗಳಲ್ಲಿ ನೆರವೇರಿವೆ. ಈ ಪ್ರವಾದನೆಗಳಲ್ಲಿ, ಸಂತೋಷವನ್ನು ತರಲಿರುವ ಆ 1,335 ದಿನಗಳು ಕೂಡಿದ ದಾನಿಯೇಲ 12 ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟ ಪ್ರವಾದನಾ ಅವಧಿಗಳ ಸರಣಿಯು ಇದೆ.
1,260 ದಿನಗಳು
9, 10. ದಾನಿಯೇಲ 7:25ರ “ಒಂದುಕಾಲ ಎರಡುಕಾಲ ಅರ್ಧಕಾಲ”ಕ್ಕೆ ಯಾವ ಫಟನೆಗಳು ವೈಶಿಷ್ಟ್ಯ ಕೊಟ್ಟವು, ಮತ್ತು ಬೇರೆ ಯಾವ ಶಾಸ್ತ್ರವಚನಗಳಲ್ಲಿ ಒಂದು ಸಾದೃಶ್ಯ ಕಾಲಾವಧಿಯು ತಿಳಿಸಲ್ಪಟ್ಟಿದೆ?
9 ದಾನಿಯೇಲ 12:7 ರಲ್ಲಿ, ಮೊದಲನೆಯ ಪ್ರವಾದನಾ ಅವಧಿಯ ಕುರಿತು ನಾವು ಓದುತ್ತೇವೆ: “ಒಂದುಕಾಲ ಎರಡುಕಾಲ ಅರ್ಧಕಾಲ ಕಳೆಯಬೇಕು; ದೇವರ ಜನರ ಬಲವನ್ನು ಸಂಪೂರ್ಣವಾಗಿ ಮುರಿದುಬಿಟ್ಟ ಮೇಲೆ ಈ ಕಾರ್ಯಗಳೆಲ್ಲಾ ಮುಕ್ತಾಯವಾಗುವವು.”a ಇದೇ ಕಾಲಾವಧಿಯು ಪ್ರಕಟನೆ 11:3-6 ರಲ್ಲಿ ತಿಳಿಸಲ್ಪಟ್ಟಿದೆ, ದೇವರ ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು ಮೂರುವರೆ ವರ್ಷಗಳ ತನಕ ಸಾರುವರು ಮತ್ತು ಅನಂತರ ಕೊಲ್ಲಲ್ಪಡುವರು ಎಂದು ಅದು ಹೇಳುತ್ತದೆ. ಪುನಃ, ದಾನಿಯೇಲ 7:25 ರಲ್ಲಿ ನಾವು ಓದುವುದು: “ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನ ಭಕ್ತರನ್ನು ಸವೆಯಿಸಿ ಕಟ್ಟಳೆಯ ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸುಮಾಡುವನು; ಆ ಭಕ್ತರು [ಪವಿತ್ರ ಜನರು, NW] ಒಂದುಕಾಲ ಎರಡುಕಾಲ ಅರ್ಧಕಾಲ ಅವನ ಕೈವಶವಾಗಿರುವರು.”
10 ಇದರ ಅನಂತರದ ಪ್ರವಾದನೆಯಲ್ಲಿ “ಅವನು” ಅಂದರೆ ಬಬಿಲೋನಿನಿಂದ ಹಿಡಿದು ಲೆಕ್ಕಿಸುವಲ್ಲಿ, ಐದನೆಯ ಲೋಕಾಧಿಕಾರವಾಗಿದೆ. ಯಾರ ಅಧಿಕಾರದ ಸಮಯದಲ್ಲಿ ಮನುಷ್ಯ ಕುಮಾರನಿಗೆ “ದೊರೆತನವೂ ಘನತೆಯೂ ರಾಜ್ಯವೂ” ಕೊಡೋಣವಾದವೋ ಆ “ಚಿಕ್ಕ ಕೊಂಬು” ಅದಾಗಿದೆ. (ದಾನಿಯೇಲ 7:8, 14) ಮೂಲತಃ ಬ್ರಿಟಿಷ್ ಸಾಮ್ರಾಜ್ಯವಾಗಿರುವ ಈ ಸಾಂಕೇತಿಕ ಕೊಂಬು, ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಆ್ಯಂಗ್ಲೊ-ಅಮೆರಿಕನ್ ಉಭಯ ಲೋಕಾಧಿಕಾರವಾಗಿ ವಿಕಸನಗೊಂಡು, ಈಗ ಅಮೆರಿಕದ ಪ್ರಭುತ್ವದ ಕೆಳಗಿದೆ. ಮೂರುವರೆ ಕಾಲಗಳ ಅಥವಾ ವರ್ಷಗಳ ತನಕ, ಈ ಅಧಿಕಾರವು ಪವಿತ್ರ ಜನರನ್ನು ಪೀಡಿಸಲಿರುವುದು ಮತ್ತು ಕಾಲಗಳನ್ನೂ ಧರ್ಮವಿಧಿಗಳನ್ನೂ ಬದಲಾಯಿಸಲು ಪ್ರಯತ್ನಿಸಲಿರುವುದು. ಕೊನೆಗೆ ಪವಿತ್ರ ಜನರು ಅದರ ಕೈವಶಕ್ಕೆ ಕೊಡಲ್ಪಡಲಿರುವರು.—ಪ್ರಕಟನೆ 13:5, 7 ಸಹ ನೋಡಿರಿ.
11, 12. ಯಾವ ಫಟನೆಗಳು 1,260 ಪ್ರವಾದನಾ ದಿನಗಳ ಪ್ರಾರಂಭಕ್ಕೆ ನಡಿಸಿದವು?
11 ಈ ಎಲ್ಲಾ ಸಾದೃಶ್ಯ ಪ್ರವಾದನೆಗಳು ನೆರವೇರಿದ್ದು ಹೇಗೆ? ಒಂದನೆಯ ಲೋಕ ಯುದ್ಧಕ್ಕೆ ವರ್ಷಗಳು ಮುಂಚಿತವಾಗಿ, 1914 ನೆಯ ವರ್ಷವು ಅನ್ಯ ಜನಾಂಗಗಳ ನಿಯಮಿತ ಸಮಯಗಳ ಅಂತ್ಯವನ್ನು ಕಾಣುವದೆಂದು ಯೇಸುವಿನ ಅಭಿಷಿಕ್ತ ಸಹೋದರರು ಬಹಿರಂಗವಾಗಿ ಎಚ್ಚರಿಕೆಕೊಟ್ಟರು. ಯುದ್ಧವು ಹೊರಹೊಮ್ಮಿದಾಗ, ಎಚ್ಚರಿಕೆಯು ದುರ್ಲಕ್ಷಿಸಲ್ಪಟ್ಟಿತ್ತೆಂಬದು ಪ್ರತ್ಯಕ್ಷವಾಯಿತು. “ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿ” ಸುವ ಅಂದರೆ ದೇವರ ರಾಜ್ಯವು ಆಡಳಿತ ನಡೆಸಲಿರುವ ಸಮಯವನ್ನು ಮುಂದೆ ಹಾಕುವ ಪ್ರಯತ್ನದಲ್ಲಿ, ಸೈತಾನನು ತನ್ನ “ಮೃಗ” ವನ್ನು ಅಂದರೆ ಆಗ ಬ್ರಿಟಿಷ್ ಸಾಮ್ರಾಜ್ಯದ ಕೈಕೆಳಗಿದ್ದ ಜಾಗತಿಕ ರಾಜಕೀಯ ಸಂಸ್ಥೆಯನ್ನು ಉಪಯೋಗಿಸಿದನು. (ಪ್ರಕಟನೆ 13:1, 2) ಅವನು ವೈಫಲ್ಯಗೊಂಡನು. ಮಾನವ ನಿಲುಕಿಗೆ ತೀರ ದೂರದ ಸ್ವರ್ಗದಲ್ಲಿ ದೇವರ ರಾಜ್ಯವು ಸ್ಥಾಪನೆಗೊಂಡಿತು.—ಪ್ರಕಟನೆ 12:1-3.
12 ಬೈಬಲ್ ವಿದ್ಯಾರ್ಥಿಗಳಿಗಾದರೋ ಯುದ್ಧವು ಒಂದು ಪರೀಕ್ಷೆಯ ಸಮಯದ ಅರ್ಥದಲ್ಲಿತ್ತು. ಜನವರಿ 1914 ರಿಂದ ಅವರು, ದಾನಿಯೇಲನ ಪ್ರವಾದನೆಗಳಿಗೆ ಗಮನ ಸೆಳೆದ ಬೈಬಲಿನ ಒಂದು ಪ್ರದರ್ಶನವಾದ ಫೋಟೊ-ಡ್ರಾಮ ಆಫ್ ಕ್ರಿಯೇಷನ್ಅನ್ನು ತೋರಿಸುತ್ತಿದ್ದರು. ಆ ವರ್ಷದ ಬೇಸಗೆಯಲ್ಲಿ ಉತ್ತರಾರ್ಧ ಭೂಖಂಡದಲ್ಲಿ ಯುದ್ಧವು ಹೊರಹೊಮ್ಮಿತು. ಅಕ್ಟೋಬರದಲ್ಲಿ, ಅನ್ಯಜನಾಂಗಗಳ ನಿಯಮಿತ ಸಮಯಗಳು ಕೊನೆಗೊಂಡವು. ವರ್ಷದ ಅಂತ್ಯದೊಳಗೆ, ಅಭಿಷಿಕ್ತ ಉಳಿಕೆಯವರು ಹಿಂಸೆಯನ್ನು ನಿರೀಕ್ಷಿಸುತ್ತಲಿದ್ದರೆಂಬದು, “ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ?” ಎಂಬ ಮತ್ತಾಯ 20:22, ಕಿಂಗ್ ಜೇಮ್ಸ್ ವರ್ಷನ್ ನಲ್ಲಿ ಆಧಾರಿತವಾಗಿದ್ದ ತನ್ನ ಶಿಷ್ಯರಿಗೆ ಯೇಸುವಿನ ಪ್ರಶ್ನೆಯು, 1915 ಕ್ಕಾಗಿ ವರ್ಷವಚನವಾಗಿ ಆರಿಸಲ್ಪಟ್ಟ ನಿಜತ್ವದಿಂದ ತೋರಿಬಂತು.
13. ಆ 1,260 ದಿನಗಳಲ್ಲಿ ಬೈಬಲ್ ವಿದ್ಯಾರ್ಥಿಗಳು ಗೋಣೀತಟ್ಟುಗಳಲ್ಲಿ ಸಾರಿದ್ದು ಹೇಗೆ, ಮತ್ತು ಆ ಕಾಲಾವಧಿಯ ಅಂತ್ಯದಲ್ಲಿ ಏನು ಸಂಭವಿಸಿತು?
13 ಆದಕಾರಣ, ದಶಂಬರ 1914 ರಿಂದ, ಸಾಕ್ಷಿಗಳ ಈ ಚಿಕ್ಕ ತಂಡವು ಯೆಹೋವನ ತೀರ್ಪುಗಳನ್ನು ಪ್ರಕಟಿಸುವಾಗ ದೈನ್ಯದಿಂದ ತಾಳಿಕೊಳ್ಳುತ್ತಾ, ‘ಗೋಣೀತಟ್ಟುಗಳಲ್ಲಿ ಸಾರಿದರು.’ ಇಸವಿ 1916 ರಲ್ಲಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಮೊದಲನೆಯ ಅಧ್ಯಕ್ಷರಾದ ಸಿ.ಟಿ. ರಸ್ಸಲರ ಮರಣವು ಅನೇಕರಿಗೆ ಧಕ್ಕೆಬರಿಸಿತು. ಯುದ್ಧದ ಬೇಗುದಿಯು ಹರಡಿದಂತೆ, ಸಾಕ್ಷಿಗಳು ತೀವ್ರತೆಗೇರುತ್ತಿದ್ದ ವಿರೋಧವನ್ನು ಎದುರಿಸಿದರು. ಕೆಲವರು ಸೆರೆಮನೆಗೆ ಹಾಕಲ್ಪಟ್ಟರು. ಇಂಗ್ಲೆಂಡಿನಲ್ಲಿ ಫ್ರಾಂಕ್ ಪ್ಲಾಟ್ ಮತ್ತು ಕೆನಡದಲ್ಲಿ ರಾಬರ್ಟ್ ಕ್ಲೆಗ್ರಂತಹ ವ್ಯಕ್ತಿಗಳು ಕ್ರೂರ ಅಧಿಕಾರಿಗಳಿಂದ ಚಿತ್ರಹಿಂಸೆಗೆ ಗುರಿಯಾದರು. ಕಟ್ಟಕಡೆಗೆ ಜೂನ್ 21, 1918 ರಲ್ಲಿ, ಹೊಸ ಅಧ್ಯಕ್ಷ ಜೆ.ಎಫ್. ರಥರ್ಫರ್ಡರಿಗೆ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಡೈರೆಕ್ಟರುಗಳೊಂದಿಗೆ, ಸುಳ್ಳು ಆರೋಪಗಳ ಮೇಲೆ ದೀರ್ಘಾವಧಿಯ ಸೆರೆಮನೆಯ ಶಿಕ್ಷೆವಿಧಿಸಲ್ಪಟ್ಟಿತು. ಹೀಗೆ ಪ್ರವಾದನಾ ಕಾಲದ ಅಂತ್ಯದಲ್ಲಿ “ಚಿಕ್ಕ ಕೊಂಬು” ಸಂಘಟಿತ ಬಹಿರಂಗ ಸಾರುವ ಕಾರ್ಯವನ್ನು ಸಾಯಿಸಿತು.—ದಾನಿಯೇಲ 7:8, ಕಿಂಗ್ ಜೇಮ್ಸ್ ವರ್ಷನ್.
14. ಅಭಿಷಿಕ್ತ ಉಳಿಕೆಯವರಿಗೆ 1919 ರಲ್ಲಿ ಮತ್ತು ತದನಂತರ ವಿಷಯಗಳು ಹೇಗೆ ಬದಲಾದವು?
14 ಪ್ರಕಟನೆ ಪುಸ್ತಕವು ಮುಂದೇನಾಯಿತೆಂಬದನ್ನು ಪ್ರವಾದಿಸುತ್ತದೆ. ಬೀದಿಯಲ್ಲಿ ಶವವಾಗಿ ಮೂರುವರೆ ದಿನಗಳ ತನಕ ಬಿದ್ದಿರುವುದಾಗಿ ಮುಂತಿಳಿಸಲ್ಪಟ್ಟ—ಒಂದು ನಿಷ್ಕ್ರಿಯೆಯ ಕೊಂಚ ಅವಧಿಯ ಬಳಿಕ—ಅಭಿಷಿಕ್ತ ಉಳಿಕೆಯವರು ಪುನಃ ಸಜೀವಭರಿತರೂ ಕ್ರಿಯಾಶೀಲರೂ ಆದರು. (ಪ್ರಕಟನೆ 11:11-13) ಮಾರ್ಚ್ 26, 1919 ರಂದು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರು ಮತ್ತು ಡೈರೆಕ್ಟರು ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟರು, ಮತ್ತು ಅನಂತರ ಅವರ ವಿರುದ್ಧವಾದ ಸುಳ್ಳಾರೋಪಗಳಿಂದ ಪೂರ್ಣವಾಗಿ ದೋಷಮುಕ್ತರಾಗಿ ಮಾಡಲ್ಪಟ್ಟರು. ಅವರ ಬಿಡುಗಡೆಯ ಅನಂತರ ಕೂಡಲೆ, ಅಧಿಕ ಚಟುವಟಿಕೆಗಾಗಿ ಪುನಃ ಸಂಘಟನೆಯನ್ನು ಅಭಿಷಿಕ್ತ ಉಳಿಕೆಯವರು ಆರಂಭಿಸಿದರು. ಹೀಗೆ, ಪ್ರಕಟನೆಯ ಮೊದಲನೆಯ ಉಪದ್ರವದ ನೆರವೇರಿಕೆಯಲ್ಲಿ, ಸುಳ್ಳು ಧರ್ಮಕ್ಕೆ ಮಬ್ಬಾದ ಭವಿಷ್ಯತ್ತಿನ ಸೂಚನೆಕೊಡುತ್ತಾ, ದಟ್ಟವಾದ ಹೊಗೆಯಿಂದ ಕೂಡಿದವರಾಗಿ ಅವರು ಆತ್ಮಿಕ ಮಿಡಿತೆಗಳೋಪಾದಿ ನಿಷ್ಕ್ರಿಯೆಯ ಅಧೋಲೋಕದಿಂದ ಹೊರಬಂದರು. (ಪ್ರಕಟನೆ 9:1-11) ಮುಂದಿನ ಕೆಲವು ವರ್ಷಗಳಲ್ಲಿ, ಮುಂದೇನು ಕಾದಿತ್ತೋ ಅದಕ್ಕಾಗಿ ಅವರು ಆತ್ಮಿಕವಾಗಿ ಪೋಷಿಸಲ್ಪಟ್ಟರು ಮತ್ತು ತಯಾರಿಸಲ್ಪಟ್ಟರು. ಹೊಸಬರು ಮತ್ತು ಮಕ್ಕಳು ಬೈಬಲಿನ ಮೂಲಭೂತ ಸತ್ಯಗಳನ್ನು ಕಲಿಯುವಂತೆ ಸಹಾಯ ಮಾಡಲು ರಚಿಸಲಾದ, ದ ಹಾರ್ಪ್ ಆಫ್ ಗಾಡ್ ಎಂಬ ಒಂದು ಹೊಸ ಪುಸ್ತಕವನ್ನು 1921 ರಲ್ಲಿ ಅವರು ಪ್ರಕಾಶಿಸಿದರು. (ಪ್ರಕಟನೆ 12:6, 14) ಈ ಎಲ್ಲಾ ವಿಷಯಗಳು ಇನ್ನೊಂದು ಗಮನಾರ್ಹ ಕಾಲಾವಧಿಯಲ್ಲಿ ಸಂಭವಿಸಿದವು.
1,290 ದಿನಗಳು
15. ಯಾವ ವಿಧದಲ್ಲಿ ನಾವು 1,290 ದಿನಗಳ ಪ್ರಾರಂಭವನ್ನು ಲೆಕ್ಕಿಸಬಲ್ಲೆವು? ಈ ಅವಧಿಯು ಕೊನೆಗೊಂಡದ್ದು ಯಾವಾಗ?
15 ದೇವದೂತನು ದಾನಿಯೇಲನಿಗೆ ಹೇಳಿದ್ದು: “ನಿತ್ಯಹೋಮವು [“ನಿತ್ಯ ಯಜ್ಞ,” ಪಾದಟಿಪ್ಪಣಿ] ನೀಗಿಸಲ್ಪಟ್ಟು ಹಾಳುಮಾಡುವ ಅಸಹ್ಯವಸ್ತುವು ಪ್ರತಿಷ್ಠಿತವಾದ ಮೇಲೆ ಸಾವಿರದ ಇನ್ನೂರತ್ತೊಂಭತ್ತು ದಿನಗಳು ಕಳೆಯಬೇಕು.” (ದಾನಿಯೇಲ 12:11) ಮೋಶೆಯ ನಿಯಮದ ಕೆಳಗೆ, “ನಿತ್ಯ ಹೋಮವು” ಯೆರೂಸಲೇಮಿನ ಆಲಯದ ಬಲಿಪೀಠದ ಮೇಲೆ ಸುಡಲ್ಪಡುತ್ತಿತ್ತು. ಕ್ರೈಸ್ತರು ಹೋಮಗಳನ್ನು ಅರ್ಪಿಸುವುದಿಲ್ಲ, ಆದರೆ ಆತ್ಮಿಕವಾದ ಒಂದು ನಿತ್ಯ ಯಜ್ಞವನ್ನು ಅರ್ಪಿಸುತ್ತಾರೆ ನಿಜ. ಪೌಲನು ಹೀಗೆ ಅಂದಾಗ ಇದಕ್ಕೆ ಸೂಚಿಸುತ್ತಿದ್ದನು: “ನಾವು ಯಾವಾಗಲೂ ದೇವರಿಗೆ ಸ್ತುತಿಯಜ್ಞವನ್ನು ಅಂದರೆ ಆತನ ನಾಮಕ್ಕೆ ಬಹಿರಂಗ ಘೋಷಣೆಯನ್ನು ಮಾಡುವ ತುಟೀಫಲವನ್ನು ಅರ್ಪಿಸೋಣ.” (ಇಬ್ರಿಯರಿಗೆ 13:15; ಹೋಲಿಸಿರಿ ಹೋಶೇಯ 14:2.) ಈ ನಿತ್ಯ ಯಜ್ಞವು ಜೂನ್ 1918 ರಲ್ಲಿ ನೀಗಿಸಲ್ಪಟ್ಟಿತು. ಹಾಗಾದರೆ, ಮುನ್ನೋಡಲಿಕ್ಕಿದ್ದ ದ್ವಿತೀಯ ವೈಶಿಷ್ಟ್ಯ ಸೂಚಕ ಭಾಗವಾದ—“ಅಸಹ್ಯ ವಸ್ತು”—ಯಾವುದಾಗಿತ್ತು? ಒಂದನೆಯ ಲೋಕ ಯುದ್ಧದ ಅಂತ್ಯದಲ್ಲಿ ವಿಜಯಿ ಜನಾಂಗಗಳಿಂದ ಪ್ರವರ್ಧಿಸಲ್ಪಟ್ಟ ಜನಾಂಗ ಸಂಘವೇ ಅದಾಗಿತ್ತು.b ಅದು ಅಸಹ್ಯ ವಸ್ತುವಾಗಿತ್ತು ಯಾಕಂದರೆ ಕ್ರೈಸ್ತಪ್ರಪಂಚದ ಮುಖಂಡರು ಸಂಘವನ್ನು ಶಾಂತಿಗಾಗಿ ಮಾನವರಿಗಿರುವ ಏಕಮಾತ್ರ ನಿರೀಕ್ಷೆಯಾಗಿ ಪ್ರತಿನಿಧಿಸುತ್ತಾ, ಅದನ್ನು ದೇವರ ರಾಜ್ಯದ ಸ್ಥಾನದಲ್ಲಿ ಇರಿಸಿದ್ದರು. ಆ ಸಂಘವನ್ನು ಜನವರಿ 1919 ರಲ್ಲಿ ಪರ್ಯಾಲೋಚನೆಗಾಗಿ ಮುಂದಿಡಲಾಯಿತು. ಆ ಸಮಯದಿಂದ 1,290 ದಿನಗಳನ್ನು (ಮೂರು ವರ್ಷ, ಏಳು ತಿಂಗಳುಗಳು) ನಾವು ಲೆಕ್ಕಿಸುವುದಾದರೆ, ಸಪ್ಟಂಬರ 1922ಕ್ಕೆ ನಾವು ಆಗಮಿಸುತ್ತೇವೆ.
16. ಆ 1,290 ದಿನಗಳ ಅಂತ್ಯದಲ್ಲಿ, ಅಭಿಷಿಕ್ತ ಉಳಿಕೆಯವರು ಕಾರ್ಯಕ್ಕಾಗಿ ಸಿದ್ಧರಾಗಿದ್ದರೆಂದು ಹೇಗೆ ವ್ಯಕ್ತವಾಗಿತ್ತು?
16 ಆಗೇನು ಸಂಭವಿಸಿತು? ಒಳ್ಳೇದು, ಬೈಬಲ್ ವಿದ್ಯಾರ್ಥಿಗಳೀಗ ಮಹಾ ಬಾಬೆಲಿನೊಳಗಿಂದ ಮುಕ್ತರಾಗಿ, ಚೈತನ್ಯ ಪಡೆದವರಾಗಿದ್ದರು ಮತ್ತು ಕಾರ್ಯೊನ್ಮಖರಾಗಲು ಸಿದ್ಧರಾಗಿದ್ದರು. (ಪ್ರಕಟನೆ 18:4) ಅಮೆರಿಕದ ಸೀಡರ್ ಪೊಯಿಂಟ್ ಒಹಾಯೋದಲ್ಲಿ ಸಪ್ಟಂಬರ 1922 ರಲ್ಲಿ ನಡೆದ ಅಧಿವೇಶನದಲ್ಲಿ, ಕ್ರೈಸ್ತಪ್ರಪಂಚದ ಮೇಲೆ ದೇವರ ತೀರ್ಪುಗಳನ್ನು ಅವರು ನಿರ್ಭೀತರಾಗಿ ಸಾರಲು ಪ್ರಾರಂಭಿಸಿದರು. (ಪ್ರಕಟನೆ 8:7-12) ಮಿಡಿತೆಗಳ ಕುಟುಕುಗಳು ನಿಜವಾಗಿ ಯಾತನೆಯನ್ನು ಕೊಡಲಾರಂಭಿಸಿದವು! ಹೆಚ್ಚೇನಾಗಿತ್ತೆಂದರೆ, ಪ್ರಕಟನೆಯ ಎರಡನೆಯ ಉಪದ್ರವವು ಆರಂಭಿಸಿತು. ಪ್ರಾರಂಭದಲ್ಲಿ ಅಭಿಷಿಕ್ತ ಉಳಿಕೆಯವರನ್ನು ಒಳಗೊಂಡಿದ್ದು ಮತ್ತು ಅನಂತರ ಮಹಾ ಸಮೂಹದಿಂದ ವೃದ್ಧಿಗೊಂಡ—ಕ್ರೈಸ್ತ ಕುದುರೇ ದಂಡಿನ ಬಹುಸಂಖ್ಯೆಯು—ಭೂಮಿಯಲ್ಲೆಲ್ಲೂ ರಭಸದಿಂದ ನುಗ್ಗಿತು. (ಪ್ರಕಟನೆ 7:9; 9:13-19) ಹೌದು, 1,290 ದಿನಗಳ ಅಂತ್ಯವು ದೇವರ ಜನರಿಗೆ ಸಂತೋಷವನ್ನು ತಂದಿತು.c ಆದರೆ ಮುಂದಕ್ಕೆ ಹೆಚ್ಚು ಕಾದಿತ್ತು.
1,335 ದಿನಗಳು
17. ಆ 1,335 ದಿನಗಳು ಆರಂಭಿಸಿದ್ದು ಮತ್ತು ಅಂತ್ಯಗೊಂಡದ್ದು ಯಾವಾಗ?
17 ದಾನಿಯೇಲ 12:12 ಹೇಳುವುದು: “ಕಾದುಕೊಂಡು ಸಾವಿರದ ಮುನ್ನೂರ ಮೂವತ್ತೈದು ದಿನಗಳ ಕೊನೆಯ ಮಟ್ಟಿಗೆ ತಾಳಿರುವವನು ಧನ್ಯನು.” ಈ 1,335 ದಿನಗಳು, ಅಥವಾ ಮೂರು ವರ್ಷ ಎಂಟೂವರೆ ತಿಂಗಳುಗಳು, ಪ್ರತ್ಯಕ್ಷವಾಗಿ ಹಿಂದಿನ ಕಾಲಾವಧಿಯ ಅಂತ್ಯದಿಂದ ಪ್ರಾರಂಭಿಸಿದವು. ಸಪ್ಟಂಬರ 1922 ರಿಂದ ಲೆಕ್ಕಿಸುವಾಗ, ಇದು ನಮ್ಮನ್ನು 1926ರ (ಉತ್ತರ ಗೋಲಾರ್ಧ) ವಸಂತಕಾಲದ ಕೊನೆಗೆ ತರುತ್ತದೆ. ಆ 1,335 ದಿನಗಳಲ್ಲಿ ಏನು ಸಂಭವಿಸಿತು?
18. ಪ್ರಗತಿಯನ್ನು ಇನ್ನೂ ಮಾಡಲಿಕ್ಕಿತ್ತೆಂದು ಹಿಂದೆ 1922 ರಲ್ಲಿ ಯಾವ ನಿಜತ್ವಗಳು ಸೂಚಿಸಿದವು?
18 ಇಸವಿ 1922ರ ಘಟನೆಗಳ ಎದ್ದುಕಾಣುವ ಸ್ವರೂಪದ ಮಧ್ಯೆಯೂ, ಕೆಲವರಿನ್ನೂ ಗತಕಾಲಕ್ಕಾಗಿ ಹಂಬಲಿಕೆಯಿಂದ ನೋಡಿದರೆಂಬದು ವ್ಯಕ್ತವಾಗುತ್ತದೆ. ಸಿ.ಟಿ. ರಸ್ಸಲರಿಂದ ಬರೆಯಲ್ಪಟ್ಟ ದ ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ಇನ್ನೂ ಮೂಲಭೂತ ಅಭ್ಯಾಸದ ವಿಷಯವಾಗಿತ್ತು. ಅದಲ್ಲದೆ, ವ್ಯಾಪಕವಾಗಿ ಹಂಚಲ್ಪಟ್ಟ ಮಿಲ್ಯನ್ಸ್ ನೌ ಲಿವಿಂಗ್ ವಿಲ್ ನೆವರ್ ಡೈ ಎಂಬ ಕಿರುಪುಸ್ತಕವು, ಭೂಮಿಯನ್ನು ಪ್ರಮೋದವನವಾಗಿ ಪುನರ್ಸಾಪ್ಧಿಸುವ ಕುರಿತ ದೇವರ ಉದ್ದೇಶಗಳು ಮತ್ತು ಪುರಾತನ ನಂಬಿಗಸ್ತ ಜನರ ಪುನರುತ್ಥಾನವು 1925 ರಲ್ಲಿ ನೆರವೇರಲು ತೊಡಗುವುದು ಎಂಬ ವೀಕ್ಷಣೆಯನ್ನು ನೀಡಿತ್ತು. ಅಭಿಷಿಕ್ತರ ತಾಳ್ಮೆಯು ಬಹಳಮಟ್ಟಿಗೆ ಪೂರ್ತಿಗೊಂಡಂತೆ ತೋರಿಬಂತು. ಆದರೂ, ಬೈಬಲ್ ವಿದ್ಯಾರ್ಥಿಗಳೊಂದಿಗೆ ಜತೆಗೂಡಿದ್ದ ಕೆಲವರು ಸುವಾರ್ತೆಯನ್ನು ಇತರರಿಗೆ ಸಾರುವುದಕ್ಕೆ ಪ್ರಚೋದಿಸಲ್ಪಡದೆ ಇದ್ದರು.
19, 20. (ಎ) ಆ 1,335 ದಿನಗಳ ಅವಧಿಯಲ್ಲಿ ದೇವರ ಜನರಿಗಾಗಿ ಅನೇಕ ವಿಷಯಗಳು ಬದಲಾದದ್ದು ಹೇಗೆ? (ಬಿ) ಯಾವ ಫಟನೆಗಳು 1,335-ದಿನದ ಅವಧಿಯ ಅಂತ್ಯವನ್ನು ಗುರುತಿಸಿದವು, ಮತ್ತು ಯೆಹೋವನ ಜನರ ಸಂಬಂಧದಲ್ಲಿ ಅವು ಏನನ್ನು ಸೂಚಿಸಿದವು?
19 ಆ 1,335 ದಿನಗಳು ಮುಂದುವರಿದಂತೆ, ಇವೆಲ್ಲವೂ ಬದಲಾದವು. ಸಹೋದರರನ್ನು ಬಲಗೊಳಿಸುವುದಕ್ಕಾಗಿ ದ ವಾಚ್ ಟವರ್ನ ಕ್ರಮದ ಗುಂಪು ಅಭ್ಯಾಸಗಳು ಸಂಸ್ಥಾಪಿಸಲ್ಪಟ್ಟವು. ಕ್ಷೇತ್ರ ಸೇವೆಯನ್ನು ಒತ್ತಿಹೇಳಲಾಯಿತು. ಮೇ 1923 ರಿಂದ ಪ್ರಾರಂಭಿಸಿ, ಪ್ರತಿಯೊಬ್ಬರನ್ನು ಪ್ರತಿತಿಂಗಳ ಮೊದಲನೆಯ ಮಂಗಳವಾರ ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗಲು ಆಮಂತ್ರಿಸಲಾಯಿತು, ಮತ್ತು ಈ ಕಾರ್ಯದಲ್ಲಿ ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ ವಾರಮಧ್ಯದ ಸಭಾ ಕೂಟದ ವೇಳೆ ಸಮಯವನ್ನು ಬದಿಗಿಡಲಾಯಿತು. ಅಮೆರಿಕದ ಲಾಸ್ ಆ್ಯಂಜಲಿಸ್, ಕ್ಯಾಲಿಫೋರ್ನಿಯದಲ್ಲಿ ಆಗಸ್ಟ್ 1923 ರಲ್ಲಿ ನಡೆದ ಸಮ್ಮೇಳನವೊಂದರಲ್ಲಿ, ಯೇಸು ಕ್ರಿಸ್ತನ ಕುರಿಗಳ ಮತ್ತು ಆಡುಗಳ ಸಾಮ್ಯವು ಸಹಸ್ರ ವರ್ಷದಾಳಿಕೆಯ ಮುಂಚಿತವಾಗಿ ನೆರವೇರಲಿರುವದೆಂದು ತೋರಿಸಲಾಯಿತು. (ಮತ್ತಾಯ 25:31-40) ವರ್ಷ 1924, ವಾಯುತರಂಗಗಳ ಮೇಲೆ ಸುವಾರ್ತೆ ಪ್ರಸಾರಕ್ಕಾಗಿ ಉಪಯೋಗಿಸಲ್ಪಟ್ಟ WBBR ರೇಡಿಯೊ ಸೇಷ್ಟನಿನ ಉದ್ಘಾಟನೆಯನ್ನು ಕಂಡಿತು. ಮಾರ್ಚ್ 1, 1925ರ ದ ವಾಚ್ ಟವರ್ ಸಂಚಿಕೆಯಲ್ಲಿ ಬಂದ “ಬರ್ಥ್ ಆಫ್ ದ ನೇಷನ್” ಲೇಖನವು, ಪ್ರಕಟನೆ 12 ನೆಯ ಅಧ್ಯಾಯದ ಒಂದು ಸರಿಹೊಂದಿಸಿದ ತಿಳಿವಳಿಕೆಯನ್ನು ಕೊಟ್ಟಿತು. ಕಟ್ಟಕಡೆಗೆ 1914-19ರ ಕೋಲಾಹಲದ ಘಟನೆಗಳನ್ನು ನಂಬಿಗಸ್ತ ಕ್ರೈಸ್ತರು ಯೋಗ್ಯವಾಗಿ ತಿಳಿದುಕೊಳ್ಳ ಶಕ್ತರಾದರು.
20 ವರ್ಷ 1925 ತನ್ನ ಸಮಾಪ್ತಿಗೆ ಬಂತು, ಆದರೆ ಅಂತ್ಯವು ಇನ್ನೂ ಇಲ್ಲ! 1870 ರುಗಳಿಂದಲೂ, ಬೈಬಲ್ ವಿದ್ಯಾರ್ಥಿಗಳು—ಮೊದಲು 1914, ಮತ್ತು ಅನಂತರ 1925—ತಾರೀಖನ್ನು ಮನಸ್ಸಲ್ಲಿಟ್ಟು ಸೇವೆಮಾಡುತ್ತಿದ್ದರು. ಈಗ ಅವರಿಗೆ ಗ್ರಹಿಕೆಯಾಯಿತೇನಂದರೆ ಎಷ್ಟರ ತನಕ ಯೆಹೋವನು ಬಯಸುತ್ತಾನೋ ಆ ತನಕ ಅವರು ಸೇವೆಮಾಡಲೇಬೇಕು. ಜನವರಿ 1, 1926ರ ದ ವಾಚ್ಟವರ್ ಸಂಚಿಕೆಯು, ಹಿಂದೆಂದಿಗಿಂತಲೂ ಹೆಚ್ಚಾಗಿ ದೇವರ ನಾಮದ ಪ್ರಾಧಾನ್ಯತೆಯನ್ನು ಒತ್ತಿಹೇಳಿದ “ಯೆಹೋವನನ್ನು ಯಾರು ಘನಪಡಿಸುವರು?” ಎಂಬ ಹೆಗ್ಗುರುತಿನ ಲೇಖನವನ್ನು ಪ್ರಕಟಿಸಿತು. ಮತ್ತು ಕೊನೆಗೆ, ಮೇ 1926 ರಲ್ಲಿ ನಡೆದ ಲಂಡನ್, ಇಂಗ್ಲೆಂಡ್ ಅಧಿವೇಶನದಲ್ಲಿ, “ಅ ಟೆಸ್ಟಿಮನಿ ಟು ದ ರೂಲರ್ಸ್ ಆಫ್ ದ ವರ್ಲ್ಡ್” ಶೀರ್ಷಿಕೆಯ ಒಂದು ಠರಾವನ್ನು ಅಂಗೀಕರಿಸಲಾಯಿತು. ಇದು ದೇವರ ರಾಜ್ಯದ ಕುರಿತ ಸತ್ಯವನ್ನು ಮತ್ತು ಬರಲಿರುವ ಸೈತಾನನ ಲೋಕದ ನಾಶನವನ್ನು ಮುಚ್ಚುಮರೆಯಿಲ್ಲದೆ ಘೋಷಿಸಿತು. ಅದೇ ಅಧಿವೇಶನದಲ್ಲಿ, ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ನ್ನು ಸ್ಥಾನಪಲ್ಲಟ ಮಾಡಿದ ಸರಣಿಯಲ್ಲಿ ಮೊದಲನೆಯದಾದ ಬಡಿದೆಬ್ಬಿಸುವ ಪುಸ್ತಕ ಡಿಲಿವರೆನ್ಸ್ ಹೊರಡಿಸಲ್ಪಟ್ಟಿತು. ದೇವರ ಜನರೀಗ ಮುನ್ನೋಡುವವರಾಗಿದ್ದರು, ಹಿಮ್ಮುಖವಾಗಿ ಅಲ್ಲ. ಆ 1,335 ದಿನಗಳು ಸಮಾಪ್ತಿಗೊಂಡವು.
21. ಆ 1,335-ದಿನದ ಅವಧಿಯಲ್ಲಿ ತಾಳ್ಮೆಯು ದೇವರ ಜನರಿಗೆ ಯಾವ ಅರ್ಥದಲ್ಲಿತ್ತು, ಮತ್ತು ಈ ಕಾಲಾವಧಿಯ ಸಂಬಂಧದಲ್ಲಿ ಪ್ರವಾದನೆಯ ನೆರವೇರಿಕೆಯು ನಮಗೆ ಯಾವ ಅರ್ಥದಲ್ಲಿದೆ?
21 ಕೆಲವರು ಈ ವಿಕಸನಗಳಿಗೆ ಅಳವಡಿಸಿಕೊಳ್ಳಲು ಮನಸ್ಸಿಲ್ಲದವರಾಗಿದ್ದರು, ಆದರೆ ತಾಳಿಕೊಂಡವರು ನಿಜವಾಗಿಯೂ ಸಂತೋಷಿತರಾಗಿದ್ದರು. ಅದಲ್ಲದೆ, ಈ ಪ್ರವಾದನಾ ಕಾಲಾವಧಿಗಳ ನೆರವೇರಿಕೆಯನ್ನು ನಾವು ಹಿನ್ನೋಡುವಲ್ಲಿ ನಾವು ಸಹ ಸಂತೋಷಿತರು ಯಾಕಂದರೆ ಆ ಕಾಲದೊಳಗೆ ಜೀವಿಸಿದ್ದ ಅಭಿಷಿಕ್ತ ಕ್ರೈಸ್ತರ ಚಿಕ್ಕ ಮಂಡಲಿಯು ನಿಜವಾಗಿಯೂ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಎಂಬ ನಮ್ಮ ಭರವಸೆಯು ಬಲಗೊಳಿಸಲ್ಪಟ್ಟಿದೆ. ಅಂದಿನಿಂದ ಮುಂದಿನ ವರ್ಷಗಳಲ್ಲಿ, ಯೆಹೋವನ ಸಂಸ್ಥೆಯು ಬಹು ದೊಡ್ಡದಾಗಿ ಬೆಳೆದಿದೆ, ಆದರೆ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಇನ್ನೂ ಅದರ ಕೇಂದ್ರದಲ್ಲಿದ್ದು ಅದನ್ನು ಮಾರ್ಗದರ್ಶಿಸುತ್ತಾ ಇದೆ. ಹೀಗಿರಲಾಗಿ, ಇನ್ನೂ ಹೆಚ್ಚಿನ ಸಂತೋಷವು ತಮಗಾಗಿ ಕಾದಿರುವುದನ್ನು ತಿಳಿಯುವುದು, ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳಿಗೆ ಅದೆಷ್ಟು ರೋಮಾಂಚಕಾರಿಯು! ದಾನಿಯೇಲನ ಪ್ರವಾದನೆಗಳಲ್ಲಿ ಇನ್ನೊಂದನ್ನು ನಾವು ಪರಿಗಣಿಸುವಾಗ ಇದು ಕಂಡುಬರುವುದು.
[ಅಧ್ಯಯನ ಪ್ರಶ್ನೆಗಳು]
a ಈ ಪ್ರವಾದನಾ ಕಾಲಗಳನ್ನು ಲೆಕ್ಕಿಸುವುದು ಹೇಗೆಂಬದರ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಅವರ್ ಇನ್ಕಮಿಂಗ್ ವ ಗವರ್ನ್ಮೆಂಟ್—ಗಾಡ್ಸ್ ಕಿಂಗ್ಡಂ, ಅಧ್ಯಾಯ 8 ನೋಡಿರಿ.
b ಎಪ್ರಿಲ್ 1, 1986ರ ಕಾವಲಿನಬುರುಜು ಸಂಚಿಕೆ ಪುಟ 13-23ನ್ನು ನೋಡಿರಿ.
c ಎಪ್ರಿಲ್ 1, 1991ರ ಕಾವಲಿನಬುರುಜು ಸಂಚಿಕೆಯ ಪುಟ 21, 22, ಮತ್ತು ಯೆಹೋವನ ಸಾಕ್ಷಿಗಳ 1975ರ ವರ್ಷಪುಸ್ತಕ, ಪುಟ 132ನ್ನು ನೋಡಿರಿ.
ನೀವು ವಿವರಿಸಬಲ್ಲಿರೋ?
▫ ದಾನಿಯೇಲ ಪುಸ್ತಕದಲ್ಲಿನ ಕೆಲವು ಪ್ರವಾದನೆಗಳು ನಮ್ಮ ಕಾಲದಲ್ಲಿ ನೆರವೇರಲಿಕ್ಕಿದ್ದವೆಂದು ನಮಗೆ ತಿಳಿದಿರುವುದು ಹೇಗೆ?
▫ ಅಭಿಷಿಕ್ತ ಉಳಿಕೆಯವರೇ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬ ಭರವಸೆಯು ನಮಗಿರ ಸಾಧ್ಯವಿದೆ ಏಕೆ?
▫ ಯಾವಾಗ 1,260 ದಿನಗಳು ಪ್ರಾರಂಭಿಸಿದವು ಮತ್ತು ಕೊನೆಗೊಂಡವು?
▫ ಅಭಿಷಿಕ್ತ ಉಳಿಕೆಯವರಿಗೆ 1,290 ದಿನಗಳು ಯಾವ ಚೈತನ್ಯ ಮತ್ತು ಪುನರ್ಸ್ಥಾಪನೆಯನ್ನು ತಂದವು?
▫ ಆ 1,335 ದಿನಗಳ ಅಂತ್ಯದ ತನಕ ತಾಳಿಕೊಂಡವರು ಸಂತೋಷಿತರಾಗಿದ್ದರೇಕೆ?
[ಪುಟ 8 ರಲ್ಲಿರುವ ಚಿತ್ರ]
ಅಭಿಷಿಕ್ತ ಉಳಿಕೆಯವರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬದು 1919 ರಿಂದ ಸ್ಪಷ್ಟವಾಗಿಯಿತು
[ಪುಟ 10 ರಲ್ಲಿರುವ ಚಿತ್ರ]
ಜಿನೀವ, ಸ್ವಿಟ್ಸರ್ಲೆಂಡ್ನಲ್ಲಿ ಜನಾಂಗ ಸಂಘದ ಮುಖ್ಯ ಕಾರ್ಯಾಲಯ
[ಕೃಪೆ]
UN photo
[ಪುಟ 11 ರಲ್ಲಿರುವ ಚೌಕ]
ದಾನಿಯೇಲನ ಪ್ರವಾದನಾ ಕಾಲಾವಧಿಗಳು
1,260 ದಿನಗಳು:
ದಶಂಬರ 1914 ರಿಂದ ಜೂನ್ 1918ರ ವರೆಗೆ
1,290 ದಿನಗಳು:
ಜನವರಿ 1919 ರಿಂದ ಸಪ್ಟಂಬರ 1922ರ ವರೆಗೆ
1,335 ದಿನಗಳು:
ಸಪ್ಟಂಬರ 1922 ರಿಂದ ಮೇ 1926 ರ ವರೆಗೆ