ಉತ್ಕೃಷ್ಟ ಮೌಲ್ಯದ ನಿಧಿಯು ನನಗೆ ಸಿಕ್ಕಿತು
ಫ್ಲಾರೆನ್ಸ್ ವಿಡೋಸನ್ರಿಂದ ಹೇಳಲ್ಪಟ್ಟಂತೆ
ಮುಂಗತ್ತಲೆಯು ಗೋಚರವಾದಂತೆ, ನಾವು ಲಗೂನ್ನ ಹತ್ತಿರ ಡೇರೆ ಹೂಡಲು ನಿರ್ಣಯಿಸಿದೆವು. ಇಬ್ಬರು ಸ್ತ್ರೀಯರಿಗೆ ಇಳುಕೊಳ್ಳಲು ಅದು ಯುಕ್ತ ಸ್ಥಳವಾಗಿರಲಿಲ್ಲ ಆದರೆ, ಒಂದು ರಾತ್ರಿಗಾಗಿ ಅದು ಸುರಕ್ಷಿತವೆಂದು ನಾವೆಣಿಸಿದೆವು. ನಾನು ಡೇರೆ ಹೊಡೆಯುವುದರಲ್ಲಿ ಕಾರ್ಯ ಮಗ್ನಳಿದ್ದಾಗ, ಮಾರ್ಜರಿ ನಮ್ಮ ಸಂಜೆಯೂಟವನ್ನು ತಯಾರಿಸುತ್ತಿದ್ದಳು.
ಡೇರೆಯ ಕೊನೆಯ ಗೂಟ ಹೊಡೆಯುವುದನ್ನು ನಾನಾಗಲೇ ಮುಗಿಸುತ್ತಲಿದ್ದಾಗ, ಒಂದು ಕಪ್ಪನೆಯ ಮರದ ಮೋಟಿನ ಬಳಿ ಒಂದು ಚಲನೆಯು ನನ್ನ ಕಣ್ಣಿಗೆ ಬಿತ್ತು. “ಆ ಮರದ ಮೋಟು ಚಲಿಸುವುದನ್ನು ನೀನು ಕಂಡಿಯಾ?” ಮಾರ್ಜರಿಯನ್ನು ಕರೆದು ಕೇಳಿದೆ ನಾನು.
“ಇಲ್ಲ,” ಎಂದಳು ಮಾರ್ಜರಿ ಪ್ರತ್ಯುತ್ತರ ನೀಡುತ್ತಾ, ತುಸು ಬೆಚ್ಚಿದವಳಾಗಿ.
“ಒಳ್ಳೇದು, ಅದು ನಿಶ್ಚಯವಾಗಿಯೂ ಚಲಿಸಿತು,” ಎಂದು ನಾನು ಚೀರಿದೆ. “ಕೆಟಲ್ ಇತ್ತ ಕೊಡು!”
ಅದನ್ನು ತೆಗೆದುಕೊಂಡು, ಹೆಗಲಮೇಲೆ ಒಂದು ಕೊಡಲಿಯೊಂದಿಗೆ, ನಾನು ಲಗೂನ್ನ ಕಡೆಗೆ ನಡೆದೆ. ನಾನು ಬಹುಮಟ್ಟಿಗೆ ಮೋಟಿಗೆ ಸರಿಯೆದೆಯಾದಾಗ, ಅದರ ಹಿಂದಿನಿಂದ ಒಬ್ಬ ಮನುಷ್ಯನು ಮುಂದೆ ಹೆಜ್ಜೆಯಿಟ್ಟ!
“ಲಗೂನ್ನ ನೀರು ಕುಡಿಯಲು ಯೋಗ್ಯವೋ?” ಎಂದು ಕೇಳಿಬಿಟ್ಟೆ ನಾನು ಚಟಪಟಿಸುತ್ತಾ.
“ಇಲ್ಲ, ಅದು ಯೋಗ್ಯವಲ್ಲ,” ಎಂದನವನು ಒರಟಾಗಿ. “ಆದರೆ ಕುಡಿಯುವ ನೀರು ನಿನಗೆ ಬೇಕಿದ್ದರೆ, ನಾನು ಸ್ವಲ್ಪ ತಂದುಕೊಡುವೆ.”
ನಾನು ತರ್ವೆಯಾಗಿ ಅವನ ನೀಡಿಕೆಯನ್ನು ನಿರಾಕರಿಸಿದೆ, ಮತ್ತು ನನ್ನ ಮಹಾ ಉಪಶಮನಕ್ಕಾಗಿ, ಅವನು ಥಟ್ಟನೆ ತಿರುಗಿ ಹೋಗಿಬಿಟ್ಟ. ನಡುಗುತ್ತಾ, ನಾನು ಹಿಂದೆ ಧಾವಿಸಿ ಬಂದು ಸಂಭವಿಸಿದನ್ನು ಮಾರ್ಜರಿಗೆ ತಿಳಿಸಿದೆ. ನಾವು ತಡವಿಲ್ಲದೆ ಡೇರೆಯನ್ನು ಕಿತ್ತು ಹಾಕಿ, ಮಡಚಿ, ಹೊರಟುಬಿಟ್ಟೆವು. ಆ ಮನುಷ್ಯನು ಆವಾಗಲೇ ಜೈಲಿನಿಂದ ಹೊರಬಂದವನೆಂದು ನಮಗೆ ಅನಂತರ ತಿಳಿದುಬಂತು.
ಅಲ್ಲಿ ಆಸ್ಟ್ರೇಲಿಯದ ಚಿನ್ನದ ಗಣಿ ಪ್ರದೇಶದಲ್ಲಿ ಹಿಂದೆ 1937 ರಲ್ಲಿ ಪ್ರತೀಕ್ಷಕರು ಆಗಿಂದಾಗ್ಗೆ ಡೇರೆ ಹೂಡುತ್ತಿದ್ದರಾದರೂ, ನಾವು ಬೇರೊಂದು ತೆರದ ಪ್ರತೀಕ್ಷಕರಾಗಿದೆವ್ದು. ದೇವರಿಗೆ ಅಮೂಲ್ಯರಾದ ಜನರಿಗಾಗಿ ನಾವು ಹುಡುಕುತ್ತಿದ್ದೆವು.
ನನ್ನ ಕುಟುಂಬ ಹಿನ್ನೆಲೆ
ಒಂದು ನೂರು ವರ್ಷಗಳ ಹಿಂದೆ ನನ್ನ ತಂದೆ ವಿಕ್ಟೋರಿಯ ರಾಜ್ಯದ ಒಂದು ಚಿಕ್ಕ ಹಳ್ಳಿಯಾದ ಪೊರ್ಪನ್ಕದಲ್ಲಿ ಕಮ್ಮಾರರಾಗಿದ್ದರು. ನಾನು 1895 ರಲ್ಲಿ ಅಲ್ಲಿ ಹುಟ್ಟಿದೆ, ಮತ್ತು ಮೌಂಟ್ ಬಫೆಲೊದ ಬುಡದಲ್ಲಿ ಆವನ್ಸ್ ನದಿಯ ಸಮೀಪ ನಾಲ್ಕು ಅಣ್ಣಂದಿರೊಂದಿಗೆ ನಾನು ಬೆಳೆದೆ. ನನ್ನ ಹೆತ್ತವರು ಯೂನಿಯನ್ ಚರ್ಚನ್ನು ಕ್ರಮವಾಗಿ ಹಾಜರಾಗುತ್ತಿದ್ದರು, ಮತ್ತು ಎಲ್ಲಿ ನನ್ನ ತಂದೆ ಮೇಲ್ವಿಚಾರಣೆ ನಡಿಸುತ್ತಿದ್ದರೋ ಆ ಸಂಡೇ ಸ್ಕೂಲಿಗೆ ನಾನು ಹೋಗುತ್ತಿದ್ದೆ.
ಇಸವಿ 1909 ರಲ್ಲಿ ತಾಯಿ, ಒಂದು ಉಗ್ರ ಬಿರುಗಾಳಿಯ ಸಮಯದಲ್ಲಿ ಹೃದಯಾಘಾತದಿಂದ ಬಾಧಿತರಾಗಿ, ನನ್ನ ತಂದೆಯ ತೋಳತೆಕ್ಕೆಯಲ್ಲಿ ತೀರಿಕೊಂಡರು. ಅನಂತರ, 1914 ರ ಆರಂಭದಲ್ಲಿ ನನ್ನ ಅಣ್ಣಂದಿರಲ್ಲಿ ಒಬ್ಬನು ಮನೆಬಿಟ್ಟು ಹೋದನು, ಮತ್ತು ಕೆಲವೇ ತಾಸುಗಳ ತರುವಾಯ, ಹಿಂದೆ ತರಲ್ಪಟ್ಟನು—ಮೃತನಾಗಿ. ಅವನು ಆತ್ಮಹತ್ಯ ಮಾಡಿಕೊಂಡಿದ್ದನು. ಅವನಿಗಾಗಿ ನರಕವು ಕಾದಿದೆ ಎಂಬ ಚರ್ಚ್ ಬೋಧನೆಯಿಂದಾಗಿ ನಮ್ಮ ದುಃಖವು ಆಳಗೊಂಡಿತು ಯಾಕಂದರೆ ಆತ್ಮಹತ್ಯವು ಅಕ್ಷಮ್ಯ ಪಾಪವೆಂದು ಹೇಳಲ್ಪಡುತ್ತಿತ್ತು.
ತರುವಾಯ ಆ ವರ್ಷದಲ್ಲಿ ಮೊದಲನೆಯ ಲೋಕ ಯುದ್ಧವು ತಲೆದೋರಿತು, ಮತ್ತು ನನ್ನ ಇಬ್ಬರು ಅಣ್ಣಂದಿರು ಪರದೇಶದ ಸೈನಿಕ ವೃತ್ತಿಗೆ ಸೇರಿಸಲ್ಪಟ್ಟರು. ರಕ್ತಪಾತ ಮತ್ತು ಕಷ್ಟಾನುಭದ ಭೀಕರ ವಾರ್ತೆಯು ನಾವು ಆರು ಮಂದಿ ಯುವತಿಯರನ್ನು ಮತ್ತು ನಮ್ಮ ತಂದೆಯನ್ನು ಸಹ, ಬೈಬಲ್ನ ಯೋಹಾನ ಪುಸ್ತಕದ ಒಂದು ಅಧ್ಯಯನ ಪ್ರಾರಂಭಿಸಲು ಪ್ರಚೋದಿಸಿತು.
ನಿಜ ನಿಧಿಯು ಸಿಕ್ಕಿದ್ದು
ಏಲನ್ ಹಡ್ಸನ್ಳೊಂದಿಗೆ ಚಾರ್ಲ್ಸ್ ಟೇಜ್ ರಸ್ಸೆಲ್ರ ದ ಟೈಮ್ ಇಜ್ ಅಟ್ ಹ್ಯಾಂಡ್ ಎಂಬ ಪುಸ್ತಕದ ಒಂದು ಪ್ರತಿ ಇತ್ತು. ಅದಕ್ಕಾಗಿ ಅವಳಲ್ಲಿದ್ದ ಉತ್ಸಾಹವು ಗುಂಪಿನಲ್ಲಿ ಉಳಿದ ನಮ್ಮ ಮೇಲೆ ಪ್ರಭಾವ ಬೀರಿತು. ಇದು ಸಡ್ಟೀಸ್ ಇನ್ ದ ಸ್ಕ್ರಿಪ್ಚರ್ಸ್ ಶೀರ್ಷಿಕೆಯ ಆರು ಸಂಪುಟಗಳ ಶ್ರೇಣಿಯಲ್ಲಿನ ಒಂದು ಪುಸ್ತಕ ಮಾತ್ರವೆಂದು ಅವಳು ಗಮನಿಸಿದಾಗ, ಅವಳು ಮೆಲ್ಬರ್ನ್ನ ಇಂಟರ್ನ್ಯಾಷನಲ್ ಬೈಬಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ಗೆ ಪತ್ರ ಬರೆದು, ಉಳಿದ ಶ್ರೇಣಿಗಳಿಗಾಗಿ ವಿನಂತಿಸಿದಳು. ಮೊದಲನೆಯ ಸಂಪುಟವಾದ ದ ಡಿವೈನ್ ಪ್ಲ್ಯಾನ್ ಆಫ್ ದ ಏಜಸ್ ಇದನ್ನು ನಮ್ಮ ಸಾಪ್ತಾಹಿಕ ಅಭ್ಯಾಸಗಳಲ್ಲಿ ಉಪಯೋಗಿಸಲು ನಾವು ಒಪ್ಪಿದೆವು.
ಅಗ್ನಿ ನರಕವು ಇಲ್ಲ ಎಂದು ಕಂಡುಕೊಂಡಾಗ ನನ್ನ ತಂದೆಯ ಮತ್ತು ನನ್ನ ಸಂತೋಷವನ್ನು ಊಹಿಸಿಕೊಳ್ಳಿರಿ! ನನ್ನ ಅಣ್ಣನು ನರಕಾಗ್ನಿಯಲ್ಲಿ ಬಂಧಿತನೆಂಬ ಭಯವು ತೆಗೆಯಲ್ಪಟ್ಟಿತು. ಮೃತರು ನಿದ್ರೆಯಲ್ಲಿದ್ದಂತೆ ಪ್ರಜ್ಞಾಹೀನರಾಗಿದ್ದಾರೆ, ಯಾತನೆಯನ್ನು ಅನುಭವಿಸುತ್ತಾ ಬೇರೆಲಿಯ್ಲಾದರೂ ಜೀವಿಸುವುದಿಲ್ಲ ಎಂಬ ಸತ್ಯವನ್ನು ನಾವು ಕಲಿತೆವು. (ಪ್ರಸಂಗಿ 9:5, 10; ಯೋಹಾನ 11:11-14) ನಮ್ಮ ನೆರೆಯವರಲಿಗ್ಲೆ ಹೋಗಿ ನಾವು ಕಲಿಯುತ್ತಿದ್ದ ಸತ್ಯವನ್ನು ಸಾರಲು ನಮ್ಮ ಬೈಬಲಭ್ಯಾಸದ ಗುಂಪಿನ ಕೆಲವರು ನಿಶ್ಚಯಿಸಿದರು. ಸಮೀಪದ ಮನೆಗಳಿಗೆ ನಾವು ನಡೆದು ಹೋದೆವು, ಆದರೆ ಗ್ರಾಮೀಣಗಳಲ್ಲಿರುವವರನ್ನು ತಲಪಲು, ಸೈಕಲುಗಳನ್ನು ಮತ್ತು ಒಂದು-ಕುದುರೆ ಎರಡು-ಚಕ್ರಗಳ ಗಾಡಿಯನ್ನು ನಾವು ಉಪಯೋಗಿಸಿದೆವು.
ಮನೆಯಿಂದ ಮನೆಗೆ ಸಾಕ್ಷಿಕೊಡುವ ಮೊದಲನೆಯ ರುಚಿಯು ನನಗಾದದ್ದು ನವಂಬರ 11, 1918ರ ಯುದ್ಧ ವಿಶ್ರಾಂತಿ ದಿನದಲ್ಲಿ. ನಮ್ಮ ಅಭ್ಯಾಸದ ಗುಂಪಿನ ಮೂವರು ಪೀಪ್ಲ್ಸ್ ಪುಲ್ಪಿಟ್ ಎಂಬ ಕಿರುಹೊತ್ತಗೆಯನ್ನು ಹಂಚಲಿಕ್ಕಾಗಿ ವಾಂಗರ್ಯಾಟ ಪಟ್ಟಣಕ್ಕೆ 80 ಕಿಲೊಮೀಟರ್ ಪ್ರಯಾಣ ಬೆಳೆಸಿದೆವು. ವರ್ಷಗಳ ಅನಂತರ, ಒಳನಾಡಿನ ಕ್ಷೇತ್ರಗಳಲ್ಲೊಂದರಲ್ಲಿ ಸಾರುವ ನೇಮಕದಲ್ಲಿದ್ದಾಗ, ಆರಂಭದಲ್ಲಿ ತಿಳಿಸಿದ ಅನುಭವವು ನನಗಾಯಿತು.
ಇಸವಿ 1919 ರಲ್ಲಿ ಬೈಬಲ್ ವಿದ್ಯಾರ್ಥಿಗಳ ಒಂದು ಅಧಿವೇಶನವನ್ನು ನಾನು ಮೆಲ್ಬರ್ನ್ನಲ್ಲಿ ಹಾಜರಾದೆ. ಅಲ್ಲಿ, ಎಪ್ರಿಲ್ 22, 1919 ರಲ್ಲಿ ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸೂಚಿಸಿದೆನು. ಆ ಆತ್ಮಿಕ ಔತಣವು ಪರಲೋಕ ರಾಜ್ಯದ ಆತ್ಮಿಕ ನಿಕ್ಷೇಪಕ್ಕಾಗಿ ಮತ್ತು ಯೆಹೋವನ ಐಹಿಕ ಸಂಸ್ಥೆಗಾಗಿ ನನ್ನ ಗಣ್ಯತೆಯನ್ನು ಆಳಗೊಳಿಸಿತು.—ಮತ್ತಾಯ 13:44.
ಅಧಿವೇಶನದ ಅನಂತರ ನಾನು ಮನೆಗೆ ಹಿಂತಿರುಗಲಿಲ್ಲ ಬದಲಿಗೆ ಪೂರ್ಣ-ಸಮಯದ ಸಾರುವವಳಾದ ಜೇನ್ ನಿಕಲ್ಸನ್ನೊಂದಿಗೆ ಒಂದು ತಿಂಗಳ ಸಾಕ್ಷಿಕಾರ್ಯಕ್ಕಾಗಿ ಜತೆಗೂಡುವ ಆಮಂತ್ರಣವನ್ನು ಸ್ವೀಕರಿಸಿದೆ. ನಮ್ಮ ನೇಮಕವು ಕಿಂಗ್ ನದಿಯ ಉದ್ದಕ್ಕೂ ಇದ್ದ ವ್ಯವಸಾಯ ಮತ್ತು ಪಶುಪಾಲಕ ಸಮಾಜಗಳಾಗಿದ್ದವು. ಕೇವಲ ಕೆಲವೇ ವರ್ಷಗಳ ಹಿಂದೆ, ಈ ಪರ್ವತ ಪ್ರದೇಶವು ದ ಮ್ಯಾನ್ ಮ್ ಸ್ನೋಯಿ ರಿವರ್ ಚಲನ ಚಿತ್ರದ ಹಿನ್ನೆಲೆ ದೃಶ್ಯವಾಗಿತ್ತು.
ಉತ್ತಮ ಬೈಬಲಧ್ಯಯನ ಸಹಾಯಕವಾದ ದ ಹಾರ್ಪ್ ಆಫ್ ಗಾಡ್ ನ್ನು ನಾವು 1921 ರಲ್ಲಿ ಪಡೆದೆವು. ತಂದೆ ತಮ್ಮ ಸಂಡೇ-ಸ್ಕೂಲಿಗಾಗಿ ಅದನ್ನು ಪಠ್ಯಪುಸ್ತಕವಾಗಿ ಉಪಯೋಗಿಸಲು ತೊಡಗಿದಾಗ, ಅನೇಕ ಹೆತ್ತವರು ಆಕ್ಷೇಪವೆತ್ತಿದರು ಮತ್ತು ಅವರ ರಾಜೀನಾಮೆಗಾಗಿ ಕೇಳಿದರು. ಅವರು ತಡವಿಲ್ಲದೆ ಅದನ್ನು ಕೊಟ್ಟರು. ತದನಂತರ ಹೆಲ್ ಕಿರುಪುಸ್ತಕ, ಅದರ ಕುತೂಹಲ ಕೆರಳಿಸುವ ಮುಖಪುಟ ಪ್ರಶ್ನೆಗಳಾದ “ಅದು ಏನಾಗಿದೆ? ಅಲ್ಲಿ ಯಾರಿದ್ದಾರೆ? ಅವರು ಹೊರಗೆ ಬರಶಕ್ತರೋ?” ಎಂಬದರೊಂದಿಗೆ ನಮಗೆ ಸಿಕ್ಕಿತು. ಆ ವಿಷಯದ ಮೇಲೆ ನೀಡಲಾದ ಸ್ಪಷ್ಟ ಬೈಬಲ್ ಪುರಾವೆಯಿಂದ ತಂದೆಯವರು ಎಷ್ಟು ಪುಳಕಿತಗೊಂಡರೆಂದರೆ ಅವರು ಕೂಡಲೆ ಪ್ರತಿಗಳನ್ನು ಮನೆಯಿಂದ ಮನೆಗೆ ಹಂಚತೊಡಗಿದರು. ನಮ್ಮ ಹಳ್ಳಿಯಲ್ಲಿ ಮತ್ತು ಸಮೀಪದ ಗ್ರಾಮೀಣಗಳಲ್ಲಿ ಅವುಗಳ ನೂರಾರು ಪ್ರತಿಗಳನ್ನು ಅವರು ನೀಡಿದರು.
ತಂದೆಯವರೊಂದಿಗೆ ಸಾರುವ ಯಾತ್ರೆಗಳು
ರಾಜ್ಯದ ಸಂದೇಶದೊಂದಿಗೆ ಬೇರೆ ಕ್ಷೇತ್ರಗಳ ಜನರನ್ನು ತಲಪಲು ಕಟ್ಟಕಡೆಗೆ ತಂದೆಯವರು ಒಂದು ವಾಹನವನ್ನು ಖರೀದಿಸಿದರು. ಕಮ್ಮಾರನೋಪಾದಿ ಅವರು ಕುದುರೆಗಳಿಗೆ ಹೆಚ್ಚು ರೂಢಿಯಾಗಿದ್ದರು, ಆದುದರಿಂದ ನಾನು ಕಾರ್ ಡ್ರೈವರಳಾದೆ. ಮೊದಮೊದಲು, ನಾವು ರಾತ್ರಿ ಹೋಟೆಲುಗಳಲ್ಲಿ ಉಳಿದುಕೊಂಡೆವು. ಬೇಗನೆ ಇದು ತೀರ ಹೆಚ್ಚು ಖರ್ಚಿನದಾಗಿ ಪರಿಣಮಿಸಿತು, ಮತ್ತು ನಾವು ಹೊರಗೆ ಬಿಡಾರ ಮಾಡತೊಡಗಿದೆವು.
ಕಾರಿನ ಎದುರು-ಸೀಟು ಚಪ್ಪಟೆಯಾಗಿ ಬೀಳುವಂತೆ ತಂದೆಯವರು ಅದನ್ನು ಅಳವಡಿಸಿದರು ಮತ್ತು ನಾನು ಕಾರಲ್ಲಿ ಮಲಗಲು ಶಕ್ತಳಾದೆ. ತಂದೆಗೆ ಮಲಗಲಿಕ್ಕಾಗಿ ನಾವು ಒಂದು ಚಿಕ್ಕ ಡೇರೆಯನ್ನು ಹೊಡೆದೆವು. ಹಲವಾರು ವಾರಗಳ ತನಕ ಹೊರಗೆ ಬಿಡಾರ ಮಾಡಿದ ಮೇಲೆ, ಎಲ್ಲಿ ತಂದೆ ತನ್ನ ಕಮ್ಮಾರ ಅಂಗಡಿಯನ್ನು ಮತ್ತೆ ತೆರೆಯುತ್ತಿದ್ದರೋ ಆ ಪೊರ್ಪನ್ಕಕ್ಕೆ ನಾವು ಹಿಂದಿರುಗುತ್ತಿದ್ದೆವು. ನಮ್ಮ ಮುಂದಿನ ಸಾರುವ ಪರ್ಯಟನದ ಖರ್ಚನ್ನು ನಿಭಾಯಿಸಲಿಕ್ಕಾಗಿ ಅಲ್ಲಿ ಯಾವಾಗಲೂ ಹಣ ಸಲ್ಲಿಸುವ ಯಥೇಷ್ಟ ಗಿರಾಕಿಗಳಿದ್ದ ಬಗೆಗೆ ನಾವು ಆಶ್ಚರ್ಯ ಪಡುವುದನ್ನೆಂದೂ ನಿಲ್ಲಿಸಲಿಲ್ಲ.
ಯೋಗ್ಯ ಪ್ರವೃತ್ತಿಯ ಅನೇಕ ಜನರು ನಮ್ಮ ಸಂದರ್ಶನಗಳಿಗೆ ಒಳ್ಳೆಯ ಪ್ರತಿವರ್ತನೆ ತೋರಿಸಿದರು ಮತ್ತು ಕ್ರಮೇಣ ಮನೆ ಬೈಬಲಭ್ಯಾಸಗಳನ್ನು ಸ್ವೀಕರಿಸಿದರು. ಪೊರ್ಪನ್ಕದ ನಮ್ಮ ಚಿಕ್ಕ ಗುಂಪಿನಿಂದ ಆರಂಭದಲ್ಲಿ ಸೇವೆ ಮಾಡಲ್ಪಟ್ಟ ಕ್ಷೇತ್ರದಲ್ಲಿ ಈಗ ಅವರ ಸ್ವಂತ ರಾಜ್ಯ ಸಭಾಗೃಹಗಳಿರುವ ಏಳು ಸಭೆಗಳಿವೆ. ನಿಶ್ಚಯವಾಗಿಯೂ, “ಅಲ್ಪಕಾರ್ಯಗಳ ದಿನವನ್ನು” ಯಾರು ತಿರಸ್ಕರಿಸಬಲ್ಲರು?—ಜೆಕರ್ಯ 4:10.
ಇಸವಿ 1931 ರಲ್ಲಿ ನಾನು ಮತ್ತು ತಂದೆಯವರು, ಎಲ್ಲಿ ನಾವು ನಮ್ಮ ಹೊಸ ಹೆಸರಾದ “ಯೆಹೋವನ ಸಾಕ್ಷಿಗಳು” ಎಂಬದನ್ನು ಸ್ವೀಕರಿಸಿದೆವೋ ಆ ವಿಶೇಷ ಕೂಟಕ್ಕೆ ಹಾಜರಾಗಲು ಸುಮಾರು 300 ಕಿಲೊಮೀಟರ್ ದೂರದ ಭೀಕರ ದಾರಿಗಳ ಮೇಲೆ ಪಯಣಿಸಿದೆವು. ಈ ಅಸದೃಶವಾದ, ಶಾಸ್ತ್ರೀಯ ಹೆಸರಿನಿಂದ ನಾವಿಬ್ಬರೂ ಉಲ್ಲಾಸಗೊಂಡೆವು. (ಯೆಶಾಯ 43:10-12) ಯಾವುದರಿಂದ ನಾವು ಆ ತನಕ ಖ್ಯಾತರಾಗಿದ್ದೆವೋ ಆ ಕಡಿಮೆ ವೈಶಿಷ್ಟ್ಯ ಸೂಚಕ ಹೆಸರಾದ “ಇಂಟರ್ನ್ಯಾಷನಲ್ ಬೈಬಲ್ ಸ್ಟೂಡೆಂಟ್ಸ್” ಗಿಂತ ಇದು ನಮ್ಮನ್ನು ಎಷ್ಟೋ ಹೆಚ್ಚು ಸ್ಪಷ್ಟವಾಗಿಗಿ ಗುರುತಿಸಿತು.
ಬೆತನ್ಗ ಪಟ್ಟಣದಲ್ಲಿ ಒಮ್ಮೆ ಸಾಕ್ಷಿಕೊಡುತ್ತಿದ್ದಾಗ, ಚರ್ಚ್ ಆಫ್ ಇಂಗ್ಲೆಂಡ್ನ ಸ್ಥಳಿಕ ಪಾದ್ರಿ ನನಗೆ ಭೇಟಿಯಾದನು. ಅವನು ಕುಪಿತನಾಗಿ, ನಮ್ಮ ಅನೇಕ ಪುಸ್ತಕ ನೀಡುವಿಕೆಗಳನ್ನು ಹುಡುಕಲು ಆರಂಭಿಸಿ, ಜನರು ಅವರ ಪುಸ್ತಕಗಳನ್ನು ತನಗೆ ಕೊಡುವಂತೆ ನಿರ್ಬಂಧಿಸಿದನು. ಅನಂತರ ಅವನು ಊರಿನ ಮಧ್ಯೆ ಒಂದು ಬಹಿರಂಗ ಪುಸ್ತಕ ಸುಡುವಿಕೆಯನ್ನು ನಡಿಸಿದನು. ಆದರೆ ಅವನ ಹೇಯ ಕೃತ್ಯವು ಮುನ್ ಸಿಡಿಯಿತು.
ಸಂಭವಿಸಿದ ಸಂಗತಿಯನ್ನು ನಾನು ಸೊಸೈಟಿಗೆ ತಿಳಿಸಿದ ಅನಂತರ, ವೈದಿಕನು ಮಾಡಿದ ವಿಷಯವನ್ನು ಖಂಡಿಸಿದ ಒಂದು ಬಹಿರಂಗ ಪತ್ರವು ಮುದ್ರಿಸಲ್ಪಟ್ಟಿತು. ಅಲ್ಲದೆ, ಜಿಲ್ಲೆಯಲ್ಲೆಲ್ಲಾ ಆ ಪತ್ರವನ್ನು ಹಂಚುವಂತೆ ಕಾರು ತುಂಬಾ ಸಾಕ್ಷಿಗಳನ್ನು ತರಲು ಏರ್ಪಾಡುಗಳನ್ನು ಮಾಡಲಾಯಿತು. ತಂದೆ ಮತ್ತು ನಾವು ತದನಂತರ ಪಟ್ಟಣವನ್ನು ಪುನಃ ಸಂದರ್ಶಿಸಿದಾಗ, ಹಿಂದಿಗಿಂತಲೂ ಹೆಚ್ಚು ಪುಸ್ತಕಗಳನ್ನು ನಾವು ನೀಡಿದೆವು. “ನಿಷೇಧಿತ” ಸಾಹಿತ್ಯದಲ್ಲಿ ಏನು ಅಡಕವಾಗಿದೆ ಎಂಬದರ ಕುರಿತು ಊರಿನ ಜನರು ಕುತೂಹಲದಿಂದಿದ್ದರು!
ನಮ್ಮ ಸಾರುವಿಕೆಯ ಪರಿಣಾಮವಾಗಿ ಈಶಾನ್ಯ ವಿಕ್ಟೋರಿಯದಲ್ಲಿ ಬೈಬಲ್ ಸತ್ಯವನ್ನು ಸ್ವೀಕರಿಸಿದ ಮೊದಲನೆಯ ವ್ಯಕ್ತಿಯು ಮಿಲ್ಟನ್ ಗಿಬ್ ಆಗಿದ್ದನು. ನಮ್ಮ ಸಂದರ್ಶನಗಳ ನಡುವೆ, ನಾವು ಅವನೊಂದಿಗೆ ಬಿಟ್ಟುಹೋದ ಸೊಸೈಟಿಯ ಪ್ರಕಾಶನಗಳೆಲ್ಲವನ್ನು ಅವನು ಪೂರ್ಣವಾಗಿ ಅಭ್ಯಾಸಿಸಿದನು. ನಮ್ಮ ಪುನಃ ಸಂದರ್ಶನಗಳೊಂದರಲ್ಲಿ, “ನಾನೀಗ ನಿಮ್ಮ ಶಿಷ್ಯರಲ್ಲಿ ಒಬ್ಬನು” ಎಂದು ಹೇಳುವ ಮೂಲಕ ಅವನು ನಮ್ಮನ್ನು ಆಶ್ಚರ್ಯಪಡಿಸಿದನು.
ಅವನ ನಿರ್ಣಯದಿಂದ ಸಂತೋಷಗೊಂಡರೂ, ನಾನು ವಿವರಿಸಿದ್ದು: “ಇಲ್ಲ, ಮಿಲ್ಟನ್, ನೀನು ನನ್ನ ಶಿಷ್ಯರಲಿ ಒಬ್ಬನಾಗಲಾರಿ.”
“ಒಳ್ಳೇದು, ಹಾಗಾದರೆ, ನಾನು ರಥರ್ಫರ್ಡ್ [ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರು] ರ ಶಿಷ್ಯರಲ್ಲೊಬ್ಬನು.”
ಪುನಃ ನಾನು ಸ್ಪಷ್ಟಪಡಿಸಿದೆ: “ಇಲ್ಲ, ರಥರ್ಫರ್ಡ್ರ ಶಿಷ್ಯರಲ್ಲೊಬ್ಬನೂ ಆಗಲಾರಿ, ಆದರೆ ಕ್ರಿಸ್ತನ ಶಿಷ್ಯರಲ್ಲೊಬ್ಬನೆಂದು ನಾನು ನಿರೀಕ್ಷಿಸುತ್ತೇನೆ.”
ಯಾರಿಗಾಗಿ ನಾನು ಎಷ್ಟೋ ಹೆಚ್ಚು ವರುಷಗಳನ್ನು ಪ್ರತೀಕ್ಷೆಯಲ್ಲಿ ಕಳೆದೆನೋ ಆ ಅನೇಕ ಅಮೂಲ್ಯ ನಿಧಿಗಳಲ್ಲಿ ಮಿಲ್ಟನ್ ಗಿಬ್ ಒಬ್ಬನಾಗಿ ಪರಿಣಮಿಸಿದನು. ಅವನು ಮತ್ತು ಅವನ ಗಂಡು ಮಕ್ಕಳಲ್ಲಿ ಇಬ್ಬರು ಕ್ರೈಸ್ತ ಹಿರಿಯರಾಗಿದ್ದಾರೆ ಮತ್ತು ಅವನ ಕುಟುಂಬದ ಇತರ ಸದಸ್ಯರು ಸಭೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.
ವಿವಿಧ ಸಂಕಟಗಳನ್ನು ಎದುರಿಸುವುದು
ಜನವರಿ 1941 ರಲ್ಲಿ ಆಸ್ಟ್ರೇಲಿಯದಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯದ ಮೇಲೆ ನಿಷೇಧವು ಹಾಕಲ್ಪಟ್ಟಾಗ್ಯೂ, ನಾವು ಬೈಬಲನ್ನು ಮಾತ್ರವೇ ಉಪಯೋಗಿಸುತ್ತಾ ಸಾರುವುದನ್ನು ಮುಂದುವರಿಸಿದೆವು. ಆನಂತರ, ವಿಷಮ ಕಾಯಿಲೆಯಲ್ಲಿ ಬಿದ್ದ ನನ್ನ ತಂದೆಯ ಆರೈಕೆಗಾಗಿ ನಾನು ಕರೆಯಲ್ಪಟ್ಟಾಗ, ನನ್ನ ಪಯನೀಯರ ಸೇವೆ ಯಾ ಪೂರ್ಣ-ಸಮಯದ ಶುಶ್ರೂಷೆಯು ಭಂಗಗೊಳಿಸಲ್ಪಟ್ಟಿತು. ತದನಂತರ ನಾನೂ ಅಸ್ವಸ್ಥ ಬಿದ್ದೆ ಮತ್ತು ಒಂದು ಗುರುತರವಾದ ಶಸ್ತ್ರಕ್ರಿಯೆ ಆವಶ್ಯಕವಾಯಿತು. ನಾನು ಸ್ವಸ್ಥಳಾಗಲು ಸ್ವಲ್ಪ ಸಮಯ ತಗಲಿತು, ಆದರೆ ದೇವರ ವಾಗ್ದಾನದ ಸತ್ಯವನ್ನು ನಾನು ಅನುಭವಿಸಿದೆನು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಒಬ್ಬ ಕ್ರೈಸ್ತ ಸಹೋದರಿ ಆಶ್ವಾಸನೆ ಕೊಡುತ್ತಾ ಅಂದದ್ದು: “ನೆನಪಿಡು, ಫ್ಲಾ, ನೀನು ಎಂದೂ ಒಂಟಿಗಳಲ್ಲ. ಮತ್ತು ನೀನು ಮತ್ತು ಯೆಹೋವ ಯಾವಾಗಲೂ ಬಹುಮತವಾಗುತ್ತೀರಿ.”
ಅನಂತರ ನನ್ನ ಪ್ರಿಯ ತಂದೆಯ 13 ವಾರಗಳ ಕೊನೆಯ ಕಾಯಿಲೆ ಬಂತು. ಜುಲೈ 26, 1946 ರಲ್ಲಿ ಅವರು ಮರಣದಲ್ಲಿ ತಮ್ಮ ಕಣ್ಣುಗಳನ್ನು ಮುಚ್ಚಿದರು. ಅವರು ಒಂದು ಪೂರ್ಣ ಜೀವಿತದಲ್ಲಿ ಆನಂದಿಸಿದ್ದರು, ಮತ್ತು ಅವರ ನಿರೀಕ್ಷೆಯು ಸ್ವರ್ಗೀಯವಾಗಿತ್ತು. (ಫಿಲಿಪ್ಪಿ 3:14) ಹೀಗೆ, ನನ್ನ ಆರಂಭದ ವರ್ಷಗಳ ಹೆಚ್ಚಿನಾಂಶ ಅಪ್ಪನೊಂದಿಗಿದ್ದ ನಾನು 51 ನೆಯ ವಯಸ್ಸಿನಲ್ಲಿ ಒಂಟಿಗಳಾದೆನು. ಅನಂತರ ನಾನು ನನ್ನ ಭವಿಷ್ಯತ್ತಿನ ಪತಿಯನ್ನು ಸಂಧಿಸಿದೆನು. ನಾವು 1947 ರಲ್ಲಿ ಮದುವೆಯಾದೆವು ಮತ್ತು ಒಟ್ಟುಗೂಡಿ ಪಯನೀಯರ ಸೇವೆ ಪ್ರಾರಂಭಿಸಿದೆವು. ಆದರೆ 1953 ರಲ್ಲಿ ಅವರಿಗೆ ಲಕ್ವಾ ಹೊಡೆದದರಿಂದ ಅವರು ಬಲಗುಂದಿದವರಾದರು.
ನನ್ನ ಪತಿಯ ವಾಕ್ಶಕ್ತಿಯು ಬಹಳವಾಗಿ ಬಾಧಿತವಾಗಿತ್ತು, ಮತ್ತು ಅವರೊಂದಿಗೆ ಮಾತಾಡುವದು ಬಹುಮಟ್ಟಿಗೆ ಅಶಕ್ಯವೇ ಆಗಿತ್ತು. ಅದು ಅವರ ಆರೈಕೆಯ ಅತಿ ಕಷ್ಟದ ಭಾಗವಾಗಿತ್ತು. ಅವರು ಏನನ್ನು ಹೇಳಲು ಪ್ರಯಾಸಪಡುತ್ತಿದ್ದರೋ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುವ ಮಾನಸಿಕ ಶ್ರಮವು ನಿಶ್ಚಯವಾಗಿಯೂ ಬಹು ತೀವ್ರವಾಗಿತ್ತು. ಸಮೀಪ ಯಾವ ಸಭೆಯೂ ಇಲ್ಲದ ಒಂದು ಏಕಾಂತ ಕ್ಷೇತ್ರದಲ್ಲಿ ನಾವು ಜೀವಿಸುತ್ತಿದ್ದರೂ, ಆ ಕಷ್ಟಕರ ವರ್ಷಗಳಲ್ಲಿ ಯೆಹೋವನು ನಮ್ಮನ್ನು ತೊರೆಯಲಿಲ್ಲ. ಸಂಸ್ಥಾಪನೆಯ ಎಲ್ಲಾ ಹೊಚ್ಚ ಹೊಸ ಮಾಹಿತಿಯೊಂದಿಗೆ ಹಾಗೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಆತ್ಮಿಕ ಆಹಾರದ ಸತತವಾದ ಸಂಗ್ರಹದೊಂದಿಗೆ ನಾನು ಸದ್ಯೋಚಿತಳಾಗಿದ್ದೆನು. ದಶಂಬರ 29, 1957 ರಲ್ಲಿ ನನ್ನ ಪ್ರಿಯ ಪತಿಯು ತೀರಿಕೊಂಡರು.
ಎಡ್ಲೇಡ್ನಲ್ಲಿ ಶುಶ್ರೂಷೆ
ಮತ್ತೊಮ್ಮೆ ನಾನು ಒಂಟಿಗಳಾದೆ. ಈಗ ಮಾಡುವುದೇನು? ಸುಮಾರು ಐದು ವರ್ಷಗಳ ವಿರಾಮದ ಅನಂತರ ಪೂರ್ಣ-ಸಮಯದ ಶುಶ್ರೂಷಕಳಾಗಿ ನಾನು ಪುನಃ ಸ್ವೀಕರಿಸಲ್ಪಡುವೆನೋ? ಸ್ವೀಕರಿಸಲ್ಪಟ್ಟೆ, ಹೀಗೆ ನಾನು ನನ್ನ ಮನೆಯನ್ನು ಮಾರಿ, ದಕ್ಷಿಣ ಆಸ್ಟ್ರೇಲಿಯದ ಮುಖ್ಯ ಪಟ್ಟಣವಾದ ಎಡ್ಲೇಡ್ನಲ್ಲಿ ಪಯನೀಯರ ಸೇವೆಯ ಒಂದು ಹೊಸ ಪ್ರಾರಂಭವನ್ನು ಮಾಡಿದೆ. ಆ ಸಮಯದಲ್ಲಿ ಅಲ್ಲಿ ಪಯನೀಯರರು ಬೇಕಾಗಿದ್ದರು, ಮತ್ತು ನಾನು ಪ್ರಾಸ್ಪೆಕ್ಟ್ ಸಭೆಗೆ ನೇಮಿತಳಾದೆ.
ನಗರದ ವಾಹನಗಳ ನಡುವೆ ಕಾರು ನಡಿಸುವ ವಿಷಯದಲ್ಲಿ ನಾನು ಶಂಕೆಪಟ್ಟದ್ದರಿಂದ ನನ್ನ ಕಾರನ್ನು ಮಾರಿಬಿಟ್ಟೆ ಮತ್ತು ಪುನಃ ಸೈಕಲನ್ನು ಉಪಯೋಗಿಸತೊಡಗಿದೆ. “ನೀಲ ಸೈಕಲ್ ಮೇಲಿನ ಆ ಚಿಕ್ಕ ಮಹಿಳೆ” ಎಂದು ಆ ಕ್ಷೇತ್ರದಲ್ಲಿ ಖ್ಯಾತಳಾಗುತ್ತಾ, ಅದನ್ನು ನಾನು ನನ್ನ 86 ವರ್ಷ ವಯಸ್ಸಿನ ತನಕ ಉಪಯೋಗಿಸಿದೆ. ಕಾಲಾನಂತರ ವಾಹನಗಳ ನಡುವೆ ಹೋಗಲು ನಾನು ಅಧಿಕಾಧಿಕ ಪುಕ್ಕಲಾಗುತ್ತಾ ಬಂದೆ; ನನ್ನ ಸೈಕಲಿನ ಮುಂದಿನ ಚಕ್ರವು ಸಂತತವಾಗಿ ನಡುಗುವಂತೆ ತೋರುತ್ತಿತ್ತು. ಒಂದು ಅಪರಾಹ್ಣ ನಾನು ಒಂದು ಬೇಲಿಯೊಳಗೆ ಉರುಳಿ ಬಿದ್ದುಬಿಟ್ಟಾಗ ಆ ಕಡೇನಚ್ಚು ಬಂತು. ‘ಇದೇ ಕಡೇ ಸಲ,’ ಎಂದುಕೊಂಡೆ ನನಗೆ ನಾನೇ, ಹೀಗೆ ನನ್ನ ಎರಡು ಕಾಲುಗಳ ಬಳಕೆಗೆ ನಾನು ಪುನಃ ಹಿಂತಿರುಗಿದೆ.
ಕೆಲವು ವರ್ಷಗಳ ಹಿಂದೆ, ಒಂದು ಜಿಲ್ಲಾ ಅಧಿವೇಶನವನ್ನು ಹಾಜರಾಗುತ್ತಿದ್ದಾಗ, ನನ್ನ ಕಾಲುಗಳು ಕುಸಿಯ ತೊಡಗಿದವು ಮತ್ತು ತದನಂತರ ನನ್ನ ಟೊಂಕ ಕೀಲುಗಳ ಮೇಲೆ ಎರಡು ಶಸ್ತ್ರಕ್ರಿಯೆಗಳಾದವು. ಶಸ್ತ್ರಕ್ರಿಯೆಯ ಅನಂತರ ಒಂದು ದೊಡ್ಡ ನಾಯಿ ನನ್ನನ್ನು ಕೆಳಗೆ ಉರುಳಿಸಿ ಬಿಡುವ ತನಕ ನಾನು ಒಳ್ಳೇದಿದ್ದೆ. ಇದು ಅಧಿಕ ಔಷಧೋಪಚಾರವನ್ನು ಆವಶ್ಯಪಡಿಸಿತು, ಅಂದಿನಿಂದ ಸುತ್ತಾಡಲು ಸಹಾಯಕ್ಕೆ ನನಗೆ ವಾಕರ್ ಬೇಕಾಗಿದೆ. ನನ್ನ ಮನಸ್ಸು ಇನ್ನೂ ತಕ್ಕಮಟ್ಟಿಗೆ ಸಕ್ರಿಯವಾಗಿದೆ. ಅದು ನನ್ನೊಬ್ಬ ಮಿತ್ರನು ಹೇಳಿದ ಹಾಗಿದೆ: “ನಿನ್ನ ಮುದೀ ದೇಹವು ನಿನ್ನ ಯುವ ಮನಸ್ಸಿನೊಂದಿಗೆ ಏಕರೀತಿಯಿಂದಿರಲಾರದಂತೆ ತೋರುತ್ತದೆ.”
ವರ್ಷಗಳಲ್ಲಿ, ಎಡ್ಲೇಡ್ನಲ್ಲಿ ಸಭೆಗಳು ಬೆಳೆದು, ವೃದ್ಧಿಯಾಗಿ, ವಿಭಾಗಿಸಲ್ಪಡುವುದನ್ನು ನಾನು ಕಂಡಿರುವೆ. ಅನಂತರ, 1983 ರಲ್ಲಿ, ನನ್ನ 88ರ ವಯಸ್ಸಿನಲ್ಲಿ, ವಿಕ್ಟೋರಿಯ ರಾಜ್ಯದ ಕೈಯಬ್ರೆಮ್ ಪಟ್ಟಣದ ಒಂದು ಕುಟುಂಬದೊಂದಿಗೆ ನಾನು ವಾಸಿಸಲು ಹೋದೆ, ಅಲ್ಲಿ ಹತ್ತು ಸಂತೋಷದ ವರ್ಷಗಳನ್ನು ನಾನು ಕಳೆದಿದ್ದೇನೆ. ನಾನಿನ್ನೂ ಹೇಗೂ ಮಾಡಿ ಕ್ಷೇತ್ರ ಸೇವೆಗೆ ಹೋಗುತ್ತಿದ್ದೇನೆ; ನನ್ನಿಂದ ಕ್ರಮವಾಗಿ ಪತ್ರಿಕೆ ತೆಗೆದುಕ್ಕೊಳ್ಳುವವರನ್ನು ನಾನು ಸಂದರ್ಶಿಸುವಂತೆ ಸಭೆಯಲ್ಲಿರುವ ಸ್ನೇಹಿತರು ನನ್ನನ್ನು ಕಾರಲ್ಲಿ ಒಯ್ಯುತ್ತಾರೆ. ಈ ಜನರು, ನಾನು ಅವರೊಂದಿಗೆ ಮಾತಾಡಲು ಸಾಧ್ಯವಾಗುವಂತೆ ದಯೆಯಿಂದ ಕಾರಿನ ಬಳಿಗೆ ಬರುತ್ತಾರೆ.
ನನ್ನ 98 ವರ್ಷಗಳ ಜೀವಿತದ ಮೇಲೆ ಮರು ಪ್ರತಿಫಲನೆ ಮಾಡುವಾಗ, ನನ್ನೊಂದಿಗೆ ಯೆಹೋವನನ್ನು ಸ್ತುತಿಸಿದವರಾದ ನಿಷ್ಠಾವಂತರೂ ನಂಬಿಗಸ್ತರೂ ಆದ ಅನೇಕರನ್ನು, ವಿಶೇಷವಾಗಿ ನನ್ನ ಅಚ್ಚುಮೆಚ್ಚಿನ ತಂದೆಯವರನ್ನು, ನಾನು ಅಕ್ಕರೆಯಿಂದ ನೆನಪಿಸುತ್ತೇನೆ. ಪಯನೀಯರ ಸೇವೆಯಲ್ಲಿ ನನ್ನ ಜೊತೆಗಾರರಾಗಿದ್ದ ನಂಬಿಗಸ್ತರೆಲ್ಲರ ಜೀವಾವಧಿಗಿಂತ ನಾನು ಹೆಚ್ಚು ಕಾಲ ಬದುಕಿದ್ದೇನೆಂದು ತೋರುತ್ತದೆ. ಆದರೆ, ದೇವರ ಸ್ವರ್ಗೀಯ ರಾಜ್ಯದಲ್ಲಿ ಜೀವದ ಬಹುಮಾನದ ನಿರೀಕ್ಷೆಯಲ್ಲಿ ಪಾಲಿಗರಾಗುವವರೊಂದಿಗೆ ಪುನಃ ಐಕ್ಯವಾಗುವಾಗ ನನಗಾಗಿ ಕಾದಿರುವಂಥ ಸಂತೋಷವು, ನಿಜವಾಗಿಯೂ ಉತ್ಕೃಷ್ಟ ಮೌಲ್ಯದ ಒಂದು ನಿಧಿಯಾಗಿರುತ್ತದೆ!
[ಪುಟ 28 ರಲ್ಲಿರುವ ಚಿತ್ರ]
ಎಪ್ರಿಲ್ 22, 1919 ರಲ್ಲಿ ನನಗೆ ದೀಕ್ಷಾಸ್ನಾನವಾಯಿತು
[ಪುಟ 31 ರಲ್ಲಿರುವ ಚಿತ್ರ]
ನಾನು 100 ವರುಷಗಳನ್ನು ಸಮೀಪಿಸುವಾಗ, ಯೆಹೋವನನ್ನು ಸೇವಿಸುತ್ತಿರುವುದರಲ್ಲಿ ಇನ್ನೂ ಸಂತೋಷಿಸುತ್ತೇನೆ