ಧರ್ಮವು ನಿಮ್ಮ ಅಗತ್ಯಗಳನ್ನು ಪೂರೈಸುತ್ತಿದೆಯೊ?
ಗಾಳಿ, ನೀರು, ಆಹಾರ, ಆಶ್ರಯ—ಇವು ಸಾರ್ವತ್ರಿಕವಾಗಿ ಮಾನವ ಅಗತ್ಯಗಳೆಂಬುದಾಗಿ ಗುರುತಿಸಲ್ಪಟ್ಟಿವೆ. ಅವುಗಳಿಲ್ಲದೆ ನೀವು ಅಭಾವವನ್ನೂ ಮರಣವನ್ನೂ ಎದುರಿಸುತ್ತೀರಿ. ಹಾಗಿದ್ದರೂ, ಬಹಳ ಹಿಂದೆಯೇ, ಇಸ್ರಾಯೇಲ್ಯ ನಾಯಕನಾದ ಮೋಶೆಯು, ಆಹಾರ ಯಾ ನೀರಿಗಿಂತಲೂ ಅಧಿಕ ಪ್ರಾಮುಖ್ಯವಾದ ಇನ್ನೊಂದು ಮಾನವ ಅಗತ್ಯದ ಕಡೆಗೆ ಗಮನವನ್ನು ಸೆಳೆದನು. ಮೋಶೆಯು ಹೇಳಿದ್ದು: “ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ.”—ಧರ್ಮೋಪದೇಶಕಾಂಡ 8:3.
ಈ ಗಾಢವಾದ ಮಾತುಗಳಿಂದ, ಮೋಶೆಯು ನಮ್ಮ ಧಾರ್ಮಿಕ ಅಥವಾ ಆತ್ಮಿಕ ಅಗತ್ಯಗಳನ್ನು ತುಂಬಿಸುವ ಪ್ರಾಧಾನ್ಯವನ್ನು ತೋರಿಸಿದನು. ಅವುಗಳನ್ನು ಪೂರೈಸುವುದರ ಮೇಲೆಯೆ ನಮ್ಮ ಜೀವಗಳು ಅವಲಂಬಿಸಿವೆ ಎಂದು ಅವನು ಸೂಚಿಸಿದನು! ತಮ್ಮ 40 ವರ್ಷ ಅರಣ್ಯ ಪ್ರಯಾಣದ ಸಮಯದಲ್ಲಿ, ‘ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನ’ ಮೂಲಕ ಇಸ್ರಾಯೇಲ್ಯರು ಅಕ್ಷರಾರ್ಥಕವಾಗಿ ಜೀವಿಸಿದರು. ಒಂದು ಮಾರಕ ಅನುಭವವಾಗಿ ಪರಿಣಮಿಸಬಹುದಾಗಿದ್ದ ಸನ್ನಿವೇಶವನ್ನು ಅವರು ಪಾರಾದರು. ದೇವರ ಆಜ್ಞೆಯ ಮೇರೆಗೆ, ಮನ್ನ ಎಂದು ಹೆಸರಿಸಲ್ಪಟ್ಟ ಒಂದು ಆಹಾರವು ಅದ್ಭುತಕರವಾಗಿ ಆಕಾಶಗಳಿಂದ ಬಿತ್ತು. ಅವರ ದಾಹವನ್ನು ಶಮನಗೊಳಿಸಲು ಬಂಡೆಗಳಿಂದ ನೀರು ಹೊರಬಂದಿತು. ಆದರೆ ಅವರ ಶಾರೀರಿಕ ಅಗತ್ಯಗಳ ಪರಾಮರಿಕೆಗಿಂತಲೂ ಹೆಚ್ಚಿನದನ್ನು ದೇವರು ಮಾಡಿದನು. ಮೋಶೆಯು ಹೇಳಿದ್ದು: “ತಂದೆ ಮಗನನ್ನು ಹೇಗೋ ಹಾಗೆಯೇ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಶಿಕ್ಷಿಸುತ್ತಾ” ಬಂದನು.—ಧರ್ಮೋಪದೇಶಕಾಂಡ 8:4, 5; ವಿಮೋಚನಕಾಂಡ 16:31, 32; 17:5, 6.
ನೈತಿಕವಾಗಿ ಅಥವಾ ಧಾರ್ಮಿಕವಾಗಿ ಯಾವುದು ಸರಿ ಯಾ ತಪ್ಪು ಎಂಬುದನ್ನು ಗಣನೆ ಮಾಡಲು ಯಾವುದೇ ಸಹಾಯವಿಲ್ಲದೆ ಮುಂದುವರಿಯುವಂತೆ ಇಸ್ರಾಯೇಲ್ಯರು ಬಿಡಲ್ಪಟ್ಟಿರಲಿಲ್ಲ. ಸ್ವತಃ ದೇವರಿಂದ ಅವರು ಮಾರ್ಗದರ್ಶನೆಯನ್ನು ಪಡೆದರು. ಆರೋಗ್ಯಕರವಾದ ಪಥ್ಯ, ಒಂದು ಕಟ್ಟುನಿಟ್ಟಿನ ನೈರ್ಮಲ್ಯ ನಿಯಮಾವಳಿ, ಮತ್ತು ಸ್ವಸ್ಥ ನೈತಿಕ ಹಾಗೂ ಧಾರ್ಮಿಕ ತತ್ವಗಳನ್ನು ರೇಖಿಸಿದ ಒಂದು ಗಮನಾರ್ಹವಾದ ನ್ಯಾಯಬದ್ಧ ನಿಯಮಾವಳಿಯಾದ ಮೋಶೆಯ ಧರ್ಮಶಾಸ್ತ್ರವನ್ನು ಆತನು ಅವರಿಗೆ ಕೊಟ್ಟನು. ಆದುದರಿಂದ ದೇವರು ಇಸ್ರಾಯೇಲಿನ ಆರೋಗ್ಯ ಮತ್ತು ಆತ್ಮಿಕ ಕ್ಷೇಮವನ್ನು ಪ್ರವರ್ತಿಸಿದನು. ಅವರು ‘ಯೆಹೋವನ ಬಾಯಿಯ ಮಾತುಗಳಿಂದ’ ಜೀವಿಸಿದರು.
ಹೀಗೆ, ಇಸ್ರಾಯೇಲ್ ದೇಶವು ಇತರ ಜನಾಂಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಮೋಶೆಯ ದಿನದಲ್ಲಿ, ಐಗುಪ್ತವು ಪ್ರಧಾನ ಲೋಕ ಶಕ್ತಿಯಾಗಿ ಆಳಿಕೆ ನಡೆಸಿತು. ಅದು ಬಹಳ ಧಾರ್ಮಿಕವಾದ ದೇಶವಾಗಿತ್ತು. ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ನಿಸರ್ಗದ ಪ್ರತಿಯೊಂದು ಸ್ಥಿತಿಯನ್ನು ಮತ್ತು ಪ್ರತಿಯೊಂದು ಮಾನವ ಚಟುವಟಿಕೆಯನ್ನು ಹಲವಾರು ದೇವತೆಗಳು (ದೇವದೇವಿಗಳು) ಪ್ರಭಾವಿಸಿದರೆಂದು ಪ್ರಾಚೀನ ಐಗುಪ್ತ್ಯರು ನಂಬಿದರು. ಆದುದರಿಂದ ಅವರು ಅನೇಕ ದೇವತೆಗಳನ್ನು ಆರಾಧಿಸಿದರು. . . . ಐಗುಪ್ತದ ಪ್ರತಿಯೊಂದು ನಗರ ಹಾಗೂ ಊರಿನಲ್ಲಿ, ಪ್ರಧಾನ ದೇವತೆಗಳ ಜೊತೆಗೆ ಜನರು ತಮ್ಮ ಸ್ವಂತ ವಿಶೇಷ ದೇವನನ್ನು ಆರಾಧಿಸಿದರು.”
ಈ ಬಹುದೇವತಾರಾಧನೆಯು ಐಗುಪ್ತ್ಯರ ಆತ್ಮಿಕ ಅಗತ್ಯಗಳನ್ನು ಪೂರೈಸಿತೊ? ಇಲ್ಲ. ಐಗುಪ್ತವು ಮೂಢನಂಬಿಕೆ ಮತ್ತು ಕೀಳುಮಾಡುವ ಅವಮಾನಕರ ಲೈಂಗಿಕ ಆಚರಣೆಗಳಲ್ಲಿ ಮಗ್ನವಾದ ದೇಶವಾಯಿತು. ಜೀವ ಮತ್ತು ಆರೋಗ್ಯವನ್ನು ಪ್ರವರ್ತಿಸುವುದಕ್ಕೆ ಪ್ರತಿಯಾಗಿ, ಐಗುಪ್ತದ ಜೀವನ ರೀತಿಯು “ಕ್ರೂರವ್ಯಾಧಿ” ಗಳಿಗೆ ನಡೆಸಿತು. (ಧರ್ಮೋಪದೇಶಕಾಂಡ 7:15) ಐಗುಪ್ತದ ದೇವರುಗಳ ಕುರಿತು ಬೈಬಲ್ ತಾತ್ಸಾರದಿಂದ, ಅವುಗಳನ್ನು “ವಿಗ್ರಹಗಳೆಂದು” ಕರೆಯುತ್ತಾ ಮಾತಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.—ಯೆಹೆಜ್ಕೇಲ 20:7, 8.
ತದ್ರೀತಿಯ ಒಂದು ಸನ್ನಿವೇಶವು ಇಂದು ಇರುತ್ತದೆ. ಹೆಚ್ಚಿನ ಜನರು ಕಡಿಮೆ ಪಕ್ಷ ಕೆಲವೊಂದು ರೀತಿಯ ಧಾರ್ಮಿಕ ನಂಬಿಕೆಯನ್ನಾದರೂ ಹೊಂದಿರುತ್ತಾರೆ; ಕೊಂಚ ಜನರು ತಮ್ಮನ್ನು ನಾಸ್ತಿಕರೆಂದು ಕರೆದುಕೊಳ್ಳುವರು. ಆದರೂ, ಸಾಧಾರಣವಾಗಿ ಧರ್ಮವು ಮಾನವಕುಲದ ಆತ್ಮಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟ. ಜನರು “ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ” ನಿಜವಾಗಿಯೂ ಜೀವಿಸುತ್ತಿದ್ದರೆ, ಯುದ್ಧ, ಕುಲವಾದ, ಹೊಟ್ಟೆಗಿಲ್ಲದಿರುವಿಕೆ, ಮತ್ತು ನಿಷ್ಠುರ ಬಡತನದ ಸಮಸ್ಯೆಗಳು ಇಂದು ಇರುತ್ತಿದ್ದವೊ? ನಿಶ್ಚಯವಾಗಿಯೂ ಇಲ್ಲ! ಹಾಗಿದ್ದರೂ ಕೂಡ, ತಮ್ಮ ಧರ್ಮವನ್ನು ಬದಲಾಯಿಸುವುದರ ಕುರಿತು ಪರಿಗಣಿಸುವವರು ಸ್ವಲ್ಪ ಜನ. ಕೆಲವರು ಧರ್ಮವನ್ನು ಚರ್ಚಿಸಲೂ ಯಾ ಹೊಸ ಧಾರ್ಮಿಕ ವಿಚಾರಗಳಿಗೆ ಗಮನವನ್ನು ಕೊಡಲೂ ಸಿದ್ಧರಾಗಿರುವುದಿಲ್ಲ!
ಉದಾಹರಣೆಗೆ, ಪಶ್ಚಿಮ ಆಫ್ರಿಕದ ಘಾನಾದಲ್ಲಿರುವ ಒಬ್ಬ ಮನುಷ್ಯನು, ಒಬ್ಬ ಕ್ರೈಸ್ತ ಶುಶ್ರೂಷಕನಿಗೆ ಹೇಳಿದ್ದು: “ತಮ್ಮ ಪ್ರವಾದಿಗಳ ಮುಖಾಂತರ ಯೆಹೂದ್ಯರಿಗೆ ತನ್ನನ್ನು ಪ್ರಕಟಿಸಿಕೊಂಡಂತೆ, ಆಫ್ರಿಕದವರಾದ ನಮಗೆ ನಮ್ಮ ಶಕ್ತಿಶಾಲಿ ಪುರೋಹಿತ ಮತ್ತು ಪುರೋಹಿತೆಯರ ಮುಖಾಂತರ ದೇವರು ತನ್ನನ್ನು ಪ್ರಕಟಿಸಿಕೊಂಡಿದ್ದಾನೆಂದು ನಾನು ನಂಬುತ್ತೇನೆ. ಆಫ್ರಿಕದವರಾದ ನಮ್ಮಲ್ಲಿ ಕೆಲವರು ನಮ್ಮ ಸ್ವಂತ ಪುರೋಹಿತರನ್ನು ಗುರುತಿಸುವಲ್ಲಿ ತಪ್ಪುವುದು, ಬದಲಿಗೆ ಯೇಸು, ಮಹಮ್ಮದ್, ಮತ್ತು ಇತರರ ಕುರಿತು ಮಾತಾಡುವುದು ಶೋಚನೀಯವಾಗಿದೆ.”
ಅನೇಕ ಸಾಂಪ್ರದಾಯಿಕ ಆಫ್ರಿಕನ್ ಸಮಾಜಗಳಲ್ಲಿ, ಕ್ರೈಸ್ತತ್ವವನ್ನು ಬಿಳಿ ಮನುಷ್ಯನ ಧರ್ಮ—ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದ ಆಮದು ಮಾಡಲಾದ ವ್ಯವಸ್ಥೆ ಎಂಬಂತೆ ನೋಡಲಾಗುತ್ತದೆ. ನಿಮ್ಮ ಆತ್ಮಿಕ ಅಗತ್ಯಗಳು ಪೂರೈಸಲ್ಪಡುವಂತೆ ನೀವು ಮಾಡುವ ಪ್ರಯತ್ನಗಳನ್ನು ಮುಚ್ಚಿದ ಮನಸ್ಸಿನ ಭಾವವು ಸಹಾಯ ಮಾಡುವುದೊ ಯಾ ತಡೆಮಾಡುವುದೊ? ಒಂದು ಆಫ್ರಿಕನ್ ನಾಣ್ಣುಡಿಯು ಹೇಳುವುದು: “ಕೇವಲ ಹಸಿದಿದ್ದೀರಿ ಎಂಬ ಕಾರಣದಿಂದ ನೀವು ಎರಡೂ ಕೈಗಳನ್ನು ಊಟದ ಪಾತ್ರೆಯಲ್ಲಿ ಅದುವ್ದುದಿಲ್ಲ.” ಅಂತಹ ತಿನ್ನುವ ಅಭ್ಯಾಸವು—ವಿಶೇಷವಾಗಿ ನಿಮಗೆ ಪಾತ್ರೆಯಲ್ಲಿರುವುದರ ಅರಿವು ಇಲ್ಲದಿದ್ದರೆ—ಅಸಭ್ಯವೂ ಹಾನಿಕಾರಕವೂ ಆಗಿದೆ! ಆದರೂ, ಅನೇಕರು ತಮ್ಮ ಧರ್ಮವನ್ನು ಆಲೋಚನಾಪರ ಪರೀಕ್ಷೆಯ ಆಧಾರದ ಮೇಲಲ್ಲ, ರಸಭಾವ ಯಾ ಕುಟುಂಬ ಸಂಪ್ರದಾಯದ ಆಧಾರದ ಮೇಲೆ ಆರಿಸುತ್ತಾರೆ.
ನಿಮ್ಮ ಆತ್ಮಿಕ ಅಗತ್ಯಗಳನ್ನು ಪೂರೈಸುವ ಆರಾಧನೆಯು, “ನಿಮ್ಮ ವಿವೇಚನಾ ಶಕ್ತಿ ಯೊಂದಿಗೆ ಕೂಡಿದ ಪವಿತ್ರ ಸೇವೆ” ಯಾಗಿರಬೇಕು. (ರೋಮಾಪುರ 12:1, NW) ಅದೊಂದು ತಿಳಿವಳಿಕೆಯುಳ್ಳ, ಬುದ್ಧಿಮತ ಆಯ್ಕೆಯಾಗಿರಬೇಕು. ಆದುದರಿಂದ ನಾವು ಒಬ್ಬನ ಧರ್ಮದ ಆರಿಸುವಿಕೆಯ ವಿವಾದಾಂಶವನ್ನು ಆಫ್ರಿಕನ್ ಯಥಾದೃಷ್ಟಿಯಿಂದ ಪರೀಕ್ಷಿಸೋಣ. ಹಾಗಿದ್ದರೂ, ಅನುಸರಿಸಿ ಬರುವ ವಿಷಯವು ಎಲ್ಲೆಡೆಯೂ ಇರುವ ಓದುಗರಿಗೆ ಆಸಕ್ತಿಯ ವಿಷಯವಾಗಿರುವುದು.
[ಪುಟ 3 ರಲ್ಲಿರುವ ಚಿತ್ರ]
ನಮ್ಮ ಆತ್ಮಿಕ ಅಗತ್ಯವನ್ನು ತುಂಬುವ ಪ್ರಾಧಾನ್ಯವನ್ನು ಮೋಶೆಯು ತೋರಿಸಿದನು
[ಪುಟ 4 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚದ ಮಿಷನೆರಿಗಳೊಂದಿಗೆ ಆಫ್ರಿಕದ ಅನುಭವವು ಬೈಬಲಿನ ಕಡೆಗೆ ಕೆಲವರ ಮನಸ್ಸುಗಳನ್ನು ಮುಚ್ಚಿದೆ