ಅಧಿಕಾರಕ್ಕೆ ಹರ್ಷಪೂರ್ಣ ಅಧೀನತೆ
“ನೀವು ಮನಃಪೂರ್ವಕವಾಗಿ [ಹೃದಯಪೂರ್ವಕವಾಗಿ, NW] ಅಧೀನರಾದಿರಿ.”—ರೋಮಾಪುರ 6:17.
1, 2. (ಎ) ಲೋಕದಲ್ಲಿ ಇಂದು ಯಾವ ಆತ್ಮವು ಪ್ರತ್ಯಕ್ಷವಾಗಿರುತ್ತದೆ, ಮತ್ತು ಅದರ ಮೂಲ ಮತ್ತು ಅದರ ಪರಿಣಾಮ ಏನಾಗಿರುತ್ತವೆ? (ಬಿ) ಯೆಹೋವನ ಸಮರ್ಪಿತ ಸೇವಕರು ತಾವು ಭಿನ್ನರಾಗಿದ್ದೇವೆಂದು ತೋರಿಸುವುದು ಹೇಗೆ?
“ಅವಿಧೇಯ ಪುತ್ರರಲ್ಲಿ ಈಗ ಕಾರ್ಯನಡಿಸುವ ಆತ್ಮವು” ತಲ್ಲಣಗೊಳಿಸುವ ರೀತಿಯಲ್ಲಿ ಇಂದು ಪ್ರತ್ಯಕ್ಷವಾಗಿರುತ್ತದೆ. ಅದು “ವಾಯಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿ” ಸೈತಾನನಿಂದ ಹೊರಹೊರಡುವ ಅಂಕೆಯಿಲ್ಲದ ಸ್ವತಂತ್ರತೆಯ ಆತ್ಮವಾಗಿದೆ. ಈ ಆತ್ಮ, ಈ “ವಾಯು,” ಅಥವಾ ಸ್ವಾರ್ಥ ಮತ್ತು ಅವಿಧೇಯತೆಯ ಪ್ರಧಾನ ಮನೋಭಾವವು, ಮಾನವಕುಲದವರಲ್ಲಿ ಹೆಚ್ಚಿನವರ ಮೇಲೆ “ಅಧಿಕಾರ,” ಅಥವಾ ಬಲವನ್ನು ಪ್ರಯೋಗಿಸುತ್ತದೆ. ಇಂದು ಲೋಕವು, ಯಾವುದು ಒಂದು ಅಧಿಕಾರದ ಬಿಕ್ಕಟ್ಟು ಎಂದು ಕರೆಯಲ್ಪಟ್ಟಿದೆಯೆ ಅದನ್ನು ಅನುಭವಿಸುತ್ತಿರುವುದೇಕೆ ಎಂಬದಕ್ಕೆ ಇದು ಒಂದು ಕಾರಣ.—ಎಫೆಸ 2:2, NW.
2 ಸಂತೋಷಕರವಾಗಿ, ಇಂದು ಯೆಹೋವನ ಸಮರ್ಪಿತ ಸೇವಕರು ತಮ್ಮ ಆತ್ಮಿಕ ಶ್ವಾಸಕೋಶಗಳನ್ನು ಈ ಮಲಿನಗೊಂಡ “ವಾಯು,” ಅಥವಾ ಪ್ರತಿಭಟನೆಯ ಆತ್ಮದಿಂದ ತುಂಬಿಸುವುದಿಲ್ಲ. “ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ” ಎಂದು ಅವರಿಗೆ ಗೊತ್ತಿದೆ. ಅಪೊಸ್ತಲ ಪೌಲನು ಕೂಡಿಸಿದ್ದು: “ನೀವು ಅವರೊಂದಿಗೆ ಪಾಲುಗಾರರಾಗಬೇಡಿರಿ.” (ಎಫೆಸ 5:6, 7) ಬದಲಿಗೆ, ನಿಜ ಕ್ರೈಸ್ತರು “[ಯೆಹೋವನ] ಪವಿತ್ರಾತ್ಮಭರಿತರಾಗಿ” ರಲು ಪ್ರಯಾಸಪಡುತ್ತಾರೆ ಮತ್ತು “ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿವೇಚನೆಯುಳ್ಳದ್ದು, ವಿಧೇಯರಾಗಲು ಸಿದ್ಧವಿರುವಂಥದ್ದು” ಆದ “ಮೇಲಣಿಂದ ಬರುವ ಜ್ಞಾನ” ವನ್ನು ಸೇವಿಸುತ್ತಾರೆ.—ಎಫೆಸ 5:17, 18; ಯಾಕೋಬ 3:17, NW.
ಯೆಹೋವನ ಪರಮಾಧಿಕಾರಕ್ಕೆ ಇಚ್ಛಾಪೂರ್ವಕ ಅಧೀನತೆ
3. ಇಚ್ಛಾಪೂರ್ವಕ ಅಧೀನತೆಗೆ ಕೀಲಿ ಕೈ ಯಾವುದು, ಮತ್ತು ಇತಿಹಾಸವು ನಮಗೆ ಯಾವ ಮಹಾ ಪಾಠವನ್ನು ಕಲಿಸುತ್ತದೆ?
3 ಇಚ್ಛಾಪೂರ್ವಕ ಅಧೀನತೆಗೆ ನ್ಯಾಯಬದ್ಧ ಅಧೀನತೆಯ ಅಂಗೀಕಾರವು ಕೀಲಿ ಕೈಯಾಗಿರುತ್ತದೆ. ಯೆಹೋವನ ಪರಮಾಧಿಕಾರದ ತಿರಸ್ಕಾರವು ಸಂತೋಷವನ್ನು ತರುವುದಿಲ್ಲವೆಂದು ಮಾನವಕುಲದ ಇತಿಹಾಸವು ತೋರಿಸುತ್ತದೆ. ಅಂಥ ತಿರಸ್ಕಾರವು ಆದಾಮ ಮತ್ತು ಹವ್ವರಿಗಾಗಲಿ ಅವರ ದಂಗೆಗೆ ಪ್ರೇರೇಪಕನಾದ ಪಿಶಾಚನಾದ ಸೈತಾನನಿಗಾಗಲಿ ಸಂತೋಷವನ್ನು ತರಲಿಲ್ಲ. (ಆದಿಕಾಂಡ 3:16-19) ತನ್ನ ಪ್ರಚಲಿತ ಕೆಳಮಟ್ಟದ ಪರಿಸ್ಥಿತಿಯಲ್ಲಿ, ಸೈತಾನನು “ಮಹಾ ರೌದ್ರ” ಉಳ್ಳವನಾಗಿದ್ದಾನೆ ಯಾಕಂದರೆ ತನಗಿರುವ ಕಾಲವು ಸ್ವಲ್ಪವೆಂದು ಅವನಿಗೆ ಗೊತ್ತಿದೆ. (ಪ್ರಕಟನೆ 12:12) ಮಾನವಕುಲದ, ಹೌದು, ಇಡೀ ವಿಶ್ವದ ಶಾಂತಿ ಮತ್ತು ಸಂತೋಷವು, ಯೆಹೋವನ ನೀತಿಯುಳ್ಳ ಪರಮಾಧಿಕಾರದ ಸಾರ್ವತ್ರಿಕ ಅಂಗೀಕಾರದ ಮೇಲೆ ಆಧಾರಿಸಿರುತ್ತದೆ.—ಕೀರ್ತನೆ 103:19-22.
4. (ಎ) ಯಾವ ವಿಧದ ಅಧೀನತೆಯನ್ನು ಮತ್ತು ವಿಧೇಯತೆಯನ್ನು ತನ್ನ ಸೇವಕರು ತೋರಿಸುವಂತೆ ಯೆಹೋವನು ಬಯಸುತ್ತಾನೆ? (ಬಿ) ಯಾವ ವಿಷಯದಲ್ಲಿ ನಾವು ಖಾತ್ರಿಯುಳ್ಳವರಾಗಿರಬೇಕು, ಮತ್ತು ಕೀರ್ತನೆಗಾರನು ಇದನ್ನು ಹೇಗೆ ವ್ಯಕ್ತಪಡಿಸುತ್ತಾನೆ?
4 ಆದರೂ, ವಿಸ್ಮಯಕರವಾಗಿ ಸಮತೋಲನೆಯಲ್ಲಿರುವ ಆತನ ಗುಣಗಳಿಂದಾಗಿ, ಯೆಹೋವನು ನೀರಸ ವಿಧೇಯತೆಯಿಂದ ತೃಪ್ತನಾಗಿರುವುದಿಲ್ಲ. ಆತನು ಶಕ್ತಿಶಾಲಿ, ನಿಜವಾಗಿ ಹೌದು! ಆದರೆ ಅವನು ನಿರಂಕುಶ ಪ್ರಭುವಲ್ಲ. ಆತನು ಪ್ರೀತಿಯುಳ್ಳ ದೇವರು, ಮತ್ತು ಬುದ್ಧಿಶಕ್ತಿಯುಳ್ಳ ಆತನ ಸೃಷ್ಟಿಜೀವಿಗಳು ಇಚ್ಛಾಪೂರ್ವಕವಾಗಿ, ಪ್ರೀತಿಯಿಂದ ತನಗೆ ವಿಧೇಯರಾಗುವಂತೆ ಆತನು ಬಯಸುತ್ತಾನೆ. ಆತನಿಗೆ ಸದಾಕಾಲ ವಿಧೇಯರಾಗುವುದಕ್ಕಿಂತ ಉತ್ತಮವಾದದ್ದು ಬೇರೇನೂ ತಮಗೆ ಇರಸಾಧ್ಯವಿಲ್ಲ ಎಂದು ಮನಗಂಡವರಾಗಿ, ಅವರು ತಮ್ಮನ್ನು ಆತನ ನೀತಿಯುಳ್ಳ ಮತ್ತು ನ್ಯಾಯಬದ್ಧ ಅಧಿಕಾರದ ಕೆಳಗೆ ಇಟ್ಟುಕೊಳ್ಳಲು ಹೃದಯಪೂರ್ವಕವಾಗಿ ಆರಿಸಿಕೊಳ್ಳುವ ಕಾರಣದಿಂದ ಅವನ ಪರಮಾಧಿಕಾರಕ್ಕೆ ಅಧೀನರಾಗುವಂತೆ ಅವನು ಬಯಸುತ್ತಾನೆ. ತನ್ನ ವಿಶ್ವದಲ್ಲಿ ಯೆಹೋವನು ಇರಬಯಸುವಂಥ ವ್ಯಕ್ತಿಗಳು ಕೀರ್ತನೆಗಾರನು ಬರೆದ ಈ ಅನಿಸಿಕೆಗಳಲ್ಲಿ ಪಾಲಿಗರಾಗುತ್ತಾರೆ: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು [ಹೃದಯವನ್ನು, NW] ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ. ಯೆಹೋವನ ಭಯ ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದೇ. ಯೆಹೋವನ ವಿಧಿಗಳು ಯಥಾರ್ಥವಾದವುಗಳು; ಅವು ಕೇವಲ ನ್ಯಾಯವಾಗಿವೆ.” (ಕೀರ್ತನೆ 19:7-9) ಯೆಹೋವನ ಹೊಸ ಲೋಕದಲ್ಲಿ ನಾವು ಜೀವಿಸಬಯಸುವುದಾದರೆ, ಯೆಹೋವನ ಪರಮಾಧಿಕಾರದ ನ್ಯಾಯಪರತೆ ಮತ್ತು ನೀತಿಯುಕ್ತತೆಯಲ್ಲಿ ದೃಢ ಭರವಸೆ—ಇದು ನಮ್ಮ ಮನೋಭಾವನೆ ಆಗಿರಬೇಕು.
ನಮ್ಮ ಅರಸನಿಗೆ ಹರ್ಷಪೂರ್ಣ ಅಧೀನತೆ
5. ಅವನ ವಿಧೇಯತೆಗಾಗಿ ಯೇಸು ಹೇಗೆ ಬಹುಮಾನ ಪಡೆದನು, ಮತ್ತು ನಾವು ಯಾವುದನ್ನು ಇಚ್ಛಾಪೂರ್ವಕವಾಗಿ ಅಂಗೀಕರಿಸುತ್ತೇವೆ?
5 ಕ್ರಿಸ್ತ ಯೇಸುವು ತಾನೇ ತನ್ನ ಸ್ವರ್ಗೀಯ ತಂದೆಗೆ ಅಧೀನತೆಯ ಒಂದು ಅಪ್ಪಟ ಮಾದರಿಯಾಗಿದ್ದಾನೆ. ಅವನು “ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ಪೌಲನು ಕೂಡಿಸುವುದು: “ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡಬ್ಡಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” (ಫಿಲಿಪ್ಪಿ 2:8-11) ಹೌದು, ನಮ್ಮ ನಾಯಕನಾದ ಮತ್ತು ಆಳುವ ಅರಸನಾದ ಕ್ರಿಸ್ತ ಯೇಸುವಿನ ಮುಂದೆ ನಾವು ಹರ್ಷಭರಿತರಾಗಿ ಅಡ್ಡಬೀಳುತ್ತೇವೆ.—ಮತ್ತಾಯ 23:10.
6. ಯೇಸು ಒಬ್ಬ ಸಾಕ್ಷಿಯಾಗಿಯೂ ಮತ್ತು ರಾಷ್ಟ್ರೀಯ ಗುಂಪುಗಳ ನಾಯಕನಾಗಿಯೂ ಹೇಗೆ ಪರಿಣಮಿಸಿದ್ದಾನೆ, ಮತ್ತು ಅವನ “ರಾಜಯೋಗ್ಯ ಆಡಳಿತವು” ಮಹಾ ಸಂಕಟದ ಬಳಿಕ ಹೇಗೆ ಮುಂದರಿಯುವುದು?
6 ನಮ್ಮ ನಾಯಕನಾದ ಕ್ರಿಸ್ತನ ಕುರಿತು ಯೆಹೋವನು ಪ್ರವಾದಿಸಿದ್ದು: “ಇಗೋ, ನಾನು ಅವನನ್ನು ಜನಾಂಗಗಳಿಗೆ ಸಾಕ್ಷಿಯನ್ನಾಗಿಯೂ ನಾಯಕನನ್ನಾಗಿಯೂ ಅಧಿಪತಿಯನ್ನಾಗಿಯೂ ನೇಮಿಸಿದೆನು.” (ಯೆಶಾಯ 55:4) ತನ್ನ ಐಹಿಕ ಶುಶ್ರೂಷೆಯ ಮೂಲಕ ಮತ್ತು ತನ್ನ ಮರಣ ಮತ್ತು ಪುನರುತ್ಥಾನದ ಬಳಿಕ ಸಾರುವ ಕಾರ್ಯವನ್ನು ಸ್ವರ್ಗದಿಂದ ಮಾರ್ಗದರ್ಶಿಸುವ ಮೂಲಕ, ಯೇಸು ತನ್ನನ್ನು ಜನಾಂಗಗಳ ಎಲ್ಲಾ ಜನರ ಕಡೆಗೆ ತನ್ನ ತಂದೆಯ “ನಂಬತಕ್ಕ ಸತ್ಯಸಾಕ್ಷಿ” ಆಗಿ ತೋರಿಸಿಕೊಂಡನು. (ಪ್ರಕಟನೆ 3:14; ಮತ್ತಾಯ 28:18-20) ಅಂಥ ರಾಷ್ಟ್ರೀಯ ಗುಂಪುಗಳು ಕ್ರಿಸ್ತನ ನಾಯಕತ್ವದ ಕೆಳಗೆ “ಮಹಾ ಸಂಕಟ” ವನ್ನು ಪಾರಾಗುವ “ಮಹಾ ಸಮೂಹ” ದಿಂದ ಅಧಿಕಾಧಿಕ ಸಂಖ್ಯೆಯಲ್ಲಿ ಈಗ ಪ್ರತಿನಿಧಿಸಲ್ಪಡುತ್ತಿವೆ. (ಪ್ರಕಟನೆ 7:9, 14) ಆದರೆ ಯೇಸುವಿನ ನಾಯಕತ್ವವು ಅಲ್ಲಿಗೆ ಅಂತ್ಯಗೊಳ್ಳುವುದಿಲ್ಲ. ಆತನ “ಸಿಂಹಾಸನದ [ರಾಜಯೋಗ್ಯ, NW] ಆಡಳಿತವು” ಒಂದು ಸಾವಿರ ವರ್ಷಕಾಲ ಬಾಳುವುದು. ವಿಧೇಯ ಮಾನವರಿಗಾಗಿ, ಆತನು ತನ್ನ ನಾಮಕ್ಕೆ ಅನುಸಾರವಾಗಿ “ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು” ವಾಗಿ ಬಾಳುವನು.—ಯೆಶಾಯ 9:6, 7; ಪ್ರಕಟನೆ 20:6.
7. ಕ್ರಿಸ್ತ ಯೇಸುವು ನಮ್ಮನ್ನು “ಜೀವಜಲದ ಒರತೆಗಳಿಗೆ” ನಡಿಸುವಂತೆ ನಾವು ಬಯಸುವುದಾದರೆ, ವಿಳಂಬವಿಲ್ಲದೆ ನಾವೇನು ಮಾಡಬೇಕು, ಮತ್ತು ನಾವು ಯೇಸು ಮತ್ತು ಯೆಹೋವನಿಂದ ಪ್ರೀತಿಸಲ್ಪಡುವಂತೆ ಯಾವುದು ಮಾಡುವುದು?
7 ಕುರಿಮರಿಯಾದ ಕ್ರಿಸ್ತ ಯೇಸುವು ಸುಹೃದಯದ ಮಾನವರನ್ನು ಯಾವುದಕ್ಕೆ ನಡಿಸುತ್ತಾನೋ ಆ “ಜೀವಜಲದ ಒರತೆ” ಗಳಿಂದ ನಾವು ಪ್ರಯೋಜನ ಪಡೆಯಲು ಅಪೇಕ್ಷಿಸುವುದಾದರೆ, ಅರಸನಾದ ಆತನ ಅಧಿಕಾರಕ್ಕೆ ನಾವು ಹರ್ಷದಿಂದ ಅಧೀನರಾಗುತ್ತೇವೆಂಬುದನ್ನು ನಮ್ಮ ವರ್ತನಾ ರೀತಿಯ ಮೂಲಕ ವಿಳಂಬವಿಲ್ಲದೆ ರುಜುಪಡಿಸತಕ್ಕದ್ದು. (ಪ್ರಕಟನೆ 7:17; 22:1, 2; ಹೋಲಿಸಿ ಕೀರ್ತನೆ 2:12.) ಯೇಸುವಂದದ್ದು: “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ. ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ತಂದೆಗೆ ಪ್ರಿಯನಾಗಿರುವನು; ನಾನೂ ಅವನನ್ನು ಪ್ರೀತಿಸುವೆನು.” (ಯೋಹಾನ 14:15, 21) ಯೇಸುವಿನಿಂದ ಮತ್ತು ಆತನ ತಂದೆಯಿಂದ ಪ್ರೀತಿಸಲ್ಪಡಲು ನೀವು ಬಯಸುತ್ತೀರೋ? ಹಾಗಾದರೆ ಅವರ ಅಧಿಕಾರಕ್ಕೆ ಅಧೀನರಾಗಿರ್ರಿ.
ಮೇಲ್ವಿಚಾರಕರು ಹರ್ಷದಿಂದ ಅಧೀನರಾಗುತ್ತಾರೆ
8, 9. (ಎ) ಸಭೆಯ ಭಕ್ತಿವೃದ್ಧಿಗಾಗಿ ಕ್ರಿಸ್ತನು ಏನನ್ನು ಒದಗಿಸಿದ್ದಾನೆ, ಮತ್ತು ಯಾವ ವಿಷಯದಲ್ಲಿ ಈ ಮನುಷ್ಯರು ಮಂದೆಗೆ ಮಾದರಿಗಳಾಗಿರತಕ್ಕದ್ದು? (ಬಿ) ಕ್ರೈಸ್ತ ಮೇಲ್ವಿಚಾರಕರ ಅಧೀನತೆಯು ಪ್ರಕಟನೆ ಪುಸ್ತಕದಲ್ಲಿ ಹೇಗೆ ಸೂಚಿಸಲ್ಪಟ್ಟಿದೆ, ಮತ್ತು ಅವರು ನ್ಯಾಯ ನಿರ್ಣಾಯಕ ವಿಷಯಗಳನ್ನು ನಿರ್ವಹಿಸುವಾಗ ಒಂದು “ವಿಧೇಯ ಹೃದಯವನ್ನು” ಹೇಗೆ ಕೋರಬೇಕು?
8 “ಸಭೆಯು ಕ್ರಿಸ್ತನಿಗೆ ಅಧೀನವಾಗಿದೆ.” ಅದರ ಮೇಲ್ವಿಚಾರಕನೋಪಾದಿ, ಆತನು ಸಭೆಯನ್ನು “ಯೋಗ್ಯಸ್ಥಿತಿಗೆ ತರುವ” ಕೆಲಸಕ್ಕಾಗಿ “ಮನುಷ್ಯರಲ್ಲಿ ದಾನಗಳನ್ನು” ಮಾಡಿದನು. (ಎಫೆಸ 4:8, 11, 12, NW; 5:24) ಈ ಆತ್ಮಿಕ ಹಿರೀ ಪುರುಷರು ‘ಅವರ ಜೋಕೆಯಲ್ಲಿರುವ ದೇವರ ಮಂದೆಯನ್ನು,’ “ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿ” ಪಾಲಿಸುವಂತೆ ಹೇಳಲ್ಪಡುತ್ತಾರೆ. (1 ಪೇತ್ರ 5:1-3) ಮಂದೆಯು ಯೆಹೋವನದ್ದು, ಮತ್ತು ಕ್ರಿಸ್ತನು ಅದರ “ಒಳ್ಳೇ ಕುರುಬನು” ಆಗಿದ್ದಾನೆ. (ಯೋಹಾನ 10:14) ಯೆಹೋವ ಮತ್ತು ಕ್ರಿಸ್ತನು ಅವರ ಪರಾಮರಿಕೆಗೆ ವಶಮಾಡಿರುವ ಕುರಿಗಳಿಂದ ಇಚ್ಛಾಪೂರ್ವಕ ಸಹಕಾರವನ್ನು ಮೇಲ್ವಿಚಾರಕರು ಯೋಗ್ಯವಾಗಿ ಅಪೇಕ್ಷಿಸುತ್ತಾರಾದರ್ದಿಂದ, ಅವರು ಸ್ವತಃ ಅಧೀನತೆಯ ಉತ್ತಮ ಮಾದರಿಗಳಾಗಿರತಕ್ಕದ್ದು.—ಅ. ಕೃತ್ಯಗಳು 20:28.
9 ಒಂದನೆಯ ಶತಮಾನದಲ್ಲಿ, ಅಭಿಷಿಕ್ತ ಮೇಲ್ವಿಚಾರಕರು ಕ್ರಿಸ್ತನ ಬಲಗೈ“ಯಲ್ಲಿ” ಅಥವಾ ಬಲಗೈಯ “ಮೇಲೆ” ಇರುವುದಾಗಿ ಸಾಂಕೇತಿಕವಾಗಿ ಪ್ರತಿನಿಧಿಸಲ್ಪಟ್ಟದ್ದು, ಸಭೆಯ ತಲೆಯಾದ ಆತನಿಗೆ ಅವರ ಅಧೀನತೆಯನ್ನು ಸೂಚಿಸಿತ್ತು. (ಪ್ರಕಟನೆ 1:16, 20; 2:1) ಇಂದೇನೂ ಕಡಿಮೆಯಿಲ್ಲದೆ, ಯೆಹೋವನ ಸಾಕ್ಷಿಗಳ ಸಭೆಗಳೊಳಗಿನ ಮೇಲ್ವಿಚಾರಕರು ಕ್ರಿಸ್ತನ ಮಾರ್ಗದರ್ಶನಕ್ಕೆ ಅಧೀನರಾಗಬೇಕು ಮತ್ತು ‘ದೇವರ ತ್ರಾಣವುಳ್ಳ ಹಸ್ತದ ಕೆಳಗೆ ತಮ್ಮನ್ನು ತಗ್ಗಿಸಿಕೊಳ್ಳಬೇಕು.’ (1 ಪೇತ್ರ 5:6) ನ್ಯಾಯನಿರ್ಣಾಯಕ ವಿಷಯಗಳನ್ನು ನಿರ್ವಹಿಸಲು ಕೇಳಿಕೊಳ್ಳಲ್ಪಡುವಾಗ, ಸೊಲೊಮೋನನು ತನ್ನ ನಂಬಿಗಸ್ತ ವರ್ಷಗಳಲ್ಲಿ ಇದ್ದ ಹಾಗೆ, ಅವರು ಯೆಹೋವನಿಗೆ ಪ್ರಾರ್ಥಿಸಬೇಕು: “ಅದನ್ನು [ಜನರನ್ನು] ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು [ವಿಧೇಯ ಹೃದಯವನ್ನು, NW] ದಯಪಾಲಿಸು.” (1 ಅರಸುಗಳು 3:9) ಭೂಮಿಯಲ್ಲಿ ಮಾಡಲ್ಪಟ್ಟ ನಿರ್ಣಯವು ಸಾಧ್ಯವಾದಷ್ಟು ನಿಕಟವಾಗಿ ಪರಲೋಕದಲ್ಲಿ ಮಾಡಲ್ಪಟ್ಟದ್ದನ್ನು ಹೋಲುವಂತಾಗುವಂತೆ, ಯೆಹೋವನು ಮತ್ತು ಕ್ರಿಸ್ತನು ವಿಷಯಗಳನ್ನು ನೋಡುವ ರೀತಿಯಲ್ಲಿ ಅವುಗಳನ್ನು ನೋಡುವಂತೆ ಪ್ರಯತ್ನಿಸಲು ಒಂದು ವಿಧೇಯ ಹೃದಯವು ಹಿರಿಯನೊಬ್ಬನನ್ನು ಪ್ರೇರಿಸುವುದು.—ಮತ್ತಾಯ 18:18-20.
10. ಯೇಸು ಕುರಿಗಳನ್ನು ಉಪಚರಿಸಿದ ವಿಧಾನದಲ್ಲಿ ಅವನನ್ನು ಅನುಕರಿಸಲು ಮೇಲ್ವಿಚಾರಕರೆಲ್ಲರು ಹೇಗೆ ಪ್ರಯತ್ನಪಡಬೇಕು?
10 ತದ್ರೀತಿ ಸಂಚಾರ ಮೇಲ್ವಿಚಾರಕರು ಮತ್ತು ಸಭಾ ಹಿರಿಯರು ಕ್ರಿಸ್ತನು ಕುರಿಗಳನ್ನು ಉಪಚರಿಸಿದ ರೀತಿಯಲ್ಲಿ ಆತನನ್ನು ಅನುಕರಿಸಲು ಪ್ರಯಾಸಪಡುವರು. ಫರಿಸಾಯರ ಹಾಗೆ, ಅನುಸರಿಸಲು ಕಷ್ಟಕರವಾದ ಅನೇಕಾನೇಕ ನಿಯಮಗಳನ್ನು ಯೇಸು ಹೊರಿಸಲಿಲ್ಲ. (ಮತ್ತಾಯ 23:2-11) ಅವನು ಕುರಿಸದೃಶರಿಗೆ ಹೇಳಿದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:28-30) ಪ್ರತಿಯೊಬ್ಬ ಕ್ರೈಸ್ತನು ತನ್ನ “ಹೊರೆಯನ್ನು ಹೊತ್ತುಕೊಳ್ಳಬೇಕು” ಎಂಬುದು ನಿಜವಾದರೂ, ಮೇಲ್ವಿಚಾರಕರು ಯೇಸುವಿನ ಮಾದರಿಯನ್ನು ನೆನಪಿಸಬೇಕು ಮತ್ತು ತಮ್ಮ ಸಹೋದರರಿಗೆ ಅವರ ಕ್ರೈಸ್ತ ಜವಾಬ್ದಾರಿಯ ಹೊರೆಯು “ಮೃದುವಾದದ್ದೂ,” “ಹೌರವಾದದ್ದೂ,” ಮತ್ತು ನಿರ್ವಹಿಸಲು ಹರ್ಷಕರವಾದದ್ದೂ ಆಗಿ ಅನಿಸುವಂತೆ ಸಹಾಯಮಾಡಬೇಕು.—ಗಲಾತ್ಯ 6:5.
ದೇವಪ್ರಭುತ್ವಾತ್ಮಕ ಅಧೀನತೆ
11. (ಎ) ಒಬ್ಬ ವ್ಯಕ್ತಿಯು ತಲೆತನವನ್ನು ಗೌರವಿಸಬಹುದಾದರೂ, ನಿಜವಾಗಿ ದೇವಪ್ರಭುತ್ವವಾದಿಯಾಗಿರದೆ ಇರಬಹುದು ಹೇಗೆ? ದೃಷ್ಟಾಂತ ಕೊಡಿರಿ. (ಬಿ) ನಿಜವಾಗಿ ದೇವಪ್ರಭುತ್ವವಾದಿಯಾಗಿರುವುದು ಎಂಬುದರ ಅರ್ಥವೇನು?
11 ದೇವಪ್ರಭುತ್ವವು ದೇವರಿಂದ ಆಳಿಕೆಯಾಗಿದೆ. ಅದು 1 ಕೊರಿಂಥ 11:3 ರಲ್ಲಿ ವ್ಯಕ್ತಪಡಿಸಲಾದ ತಲೆತನದ ಮೂಲ ತತ್ವವನ್ನು ಒಳಗೊಂಡಿದೆ. ಆದರೆ ಅದಕ್ಕಿಂತಲೂ ಹೆಚ್ಚಿನ ಅರ್ಥವು ಅದಕ್ಕಿದೆ. ಒಬ್ಬ ವ್ಯಕ್ತಿಯು ತಲೆತನಕ್ಕೆ ಗೌರವವನ್ನು ತೋರಿಸುವವನಾಗಿ ತೋರಬಹುದು, ಆದರೂ ಶಬ್ದದ ಪೂರ್ಣಾರ್ಥದಲ್ಲಿ ದೇವಪ್ರಭುತ್ವವಾದಿ ಆಗಿರದಿರಬಹುದು. ದೃಷ್ಟಾಂತಕ್ಕಾಗಿ, ಪ್ರಜಾಪ್ರಭುತ್ವವು ಜನರಿಂದ ನಡಿಸಲ್ಪಡುವ ಸರಕಾರವಾಗಿದೆ, ಮತ್ತು ಪ್ರಜಾಪ್ರಭುತ್ವವಾದಿಯನ್ನು “ಪ್ರಜಾಪ್ರಭುತ್ವದ ಆದರ್ಶ ಧ್ಯೇಯಗಳಲ್ಲಿ ನಂಬಿಕೆಯನ್ನಿಡುವ ವ್ಯಕ್ತಿ” ಯಾಗಿ ನಿರೂಪಿಸಲಾಗಿದೆ. ವ್ಯಕ್ತಿಯೊಬ್ಬನು ತಾನು ಪ್ರಜಾಪ್ರಭುತ್ವವಾದಿಯೆಂದು ಹೇಳಿಕೊಳ್ಳಬಹುದು, ಚುನಾವಣೆಗಳಲ್ಲಿ ಭಾಗವಹಿಸಬಹುದು, ಒಬ್ಬ ಕ್ರಿಯಾಶೀಲ ರಾಜಕಾರಣಿಯೂ ಆಗಿರಬಹುದು. ಆದರೆ ಅವನ ಸಾಮಾನ್ಯ ನಡೆವಳಿಯಲ್ಲಿ, ಪ್ರಜಾಪ್ರಭುತ್ವದ ಆತ್ಮವನ್ನು ಮತ್ತು ಅದು ಒಳಗೊಂಡಿರುವ ಎಲ್ಲಾ ತತ್ವಗಳನ್ನು ಅವನು ತಿರಸ್ಕರಿಸುವುದಾದರೆ, ಅವನು ನಿಜವಾಗಿಯೂ ಒಬ್ಬ ಪ್ರಜಾಪ್ರಭುತ್ವವಾದಿಯೆಂದು ಹೇಳಸಾಧ್ಯವೊ? ತದ್ರೀತಿಯಲ್ಲಿ, ನಿಜವಾಗಿಯೂ ದೇವಪ್ರಭುತ್ವವಾದಿಯಾಗಬೇಕಾದರೆ, ವ್ಯಕ್ತಿಯೊಬ್ಬನು ತಲೆತನಕ್ಕೆ ಒಂದು ನಾಮಮಾತ್ರಕ್ಕೆ ಅಧೀನನಾಗುವುದಕ್ಕಿಂತ ಹೆಚ್ಚನ್ನು ಮಾಡಬೇಕಾಗಿದೆ. ಅವನು ಯೆಹೋವನ ಮಾರ್ಗಗಳನ್ನು ಮತ್ತು ಗುಣಗಳನ್ನು ಅನುಕರಿಸಬೇಕು. ಪ್ರತಿಯೊಂದು ರೀತಿಯಲ್ಲಿ ಅವನು ನಿಜವಾಗಿ ಯೆಹೋವನಿಂದ ಆಳಲ್ಪಡಬೇಕು. ಮತ್ತು ಯೆಹೋವನು ತನ್ನ ಕುಮಾರನಿಗೆ ಪೂರ್ಣಾಧಿಕಾರವನ್ನು ವಹಿಸಿದ್ದಾನಾದ್ದರಿಂದ, ದೇವಪ್ರಭುತ್ವವಾದಿಯಾಗಿರುವುದೆಂದರೆ ಯೇಸುವನ್ನು ಸಹ ಅನುಕರಿಸುವುದು ಎಂದರ್ಥವಾಗುತ್ತದೆ.
12, 13. (ಎ) ದೇವಪ್ರಭುತ್ವವಾದಿಯಾಗಿರುವುದರಲ್ಲಿ ವಿಶಿಷ್ಟವಾಗಿ ಏನು ಒಳಗೊಂಡಿರುತ್ತದೆ? (ಬಿ) ದೇವಪ್ರಭುತ್ವ ಅಧೀನತೆಯು ಅನೇಕಾನೇಕ ನಿಯಮಗಳ ಪಾಲನೆಯಲ್ಲಿ ಒಳಗೂಡಿದೆಯೆ? ದೃಷ್ಟಾಂತ ಕೊಡಿರಿ.
12 ನೆನಪಿಡಿರಿ, ಪ್ರೀತಿಯಿಂದ ಪ್ರೇರೇಪಿಸಲ್ಪಡುವ ಇಚ್ಛಾಪೂರ್ವಕ ಅಧೀನತೆಯನ್ನು ಯೆಹೋವನು ಬಯಸುತ್ತಾನೆ. ವಿಶ್ವವನ್ನು ಆಳುವ ಆತನ ವಿಧಾನವು ಅದಾಗಿದೆ. ಆತನು ಪ್ರೀತಿಯ ಸಾಕ್ಷತ್ ವ್ಯಕ್ತೀಕರಣವಾಗಿದ್ದಾನೆ. (1 ಯೋಹಾನ 4:8) ಕ್ರಿಸ್ತ ಯೇಸುವು “ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ಆಗಿದ್ದಾನೆ.” (ಇಬ್ರಿಯ 1:3) ಅವನ ನಿಜ ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಅವನು ಅವಶ್ಯಪಡಿಸುತ್ತಾನೆ. (ಯೋಹಾನ 15:17) ಹೀಗೆ ದೇವಪ್ರಭುತ್ವವಾದಿಯಾಗಿರುವುದರಲ್ಲಿ ಕೇವಲ ಅಧೀನನಾಗಿರುವುದು ಮಾತ್ರವಲ್ಲ ಪ್ರೀತಿಸುವವನಾಗಿರುವುದು ಸಹ ಒಳಗೊಂಡಿದೆ. ವಿಷಯವನ್ನು ಹೀಗೆ ಸಾರಾಂಶಿಸಬಹುದಾಗಿದೆ: ದೇವಪ್ರಭುತ್ವವು ದೇವರಿಂದ ಆಳಿಕೆಯಾಗಿದೆ; ದೇವರು ಪ್ರೀತಿಯಾಗಿದ್ದಾನೆ; ಆದುದರಿಂದ ದೇವಪ್ರಭುತ್ವವು ಪ್ರೀತಿಯಿಂದ ಆಳಿಕೆಯಾಗಿದೆ.
13 ದೇವಪ್ರಭುತ್ವವಾದಿಗಳಾಗಿರಬೇಕಾದರೆ ಸಹೋದರರು ಎಲ್ಲಾ ವಿಧದ ನಿಯಮಗಳಿಗೆ ಅಧೀನರಾಗಬೇಕೆಂದು ಒಬ್ಬ ಹಿರಿಯನು ನೆನಸಸಾಧ್ಯವಿದೆ. ಕೆಲವು ಹಿರಿಯರು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ” ನಿಂದ ಸಮಯಾನುಸಾರ ಕೊಡಲ್ಪಟ್ಟ ಸಲಹೆಗಳಿಂದ ನಿಯಮಗಳನ್ನು ಮಾಡಿರುತ್ತಾರೆ. (ಮತ್ತಾಯ 24:45) ಉದಾಹರಣೆಗೆ, ಸಭೆಯಲ್ಲಿರುವ ಸಹೋದರರನ್ನು ಹೆಚ್ಚು ಸುಲಭವಾಗಿ ಪರಿಚಯಿಸಲಿಕ್ಕೋಸ್ಕರ, ರಾಜ್ಯ ಸಭಾಗೃಹದಲ್ಲಿ ಯಾವಾಗಲೂ ಅದೇ ಸೀಟಿನಲ್ಲಿ ಕೂತುಕೊಳ್ಳದೆ ಇರುವುದೊಳ್ಳೆಯದೆಂದು ಒಮ್ಮೆ ಸೂಚಿಸಲಾಗಿತ್ತು. ಇದು ಒಂದು ಪ್ರಾಯೋಗಿಕ ಸಲಹೆಯಾಗಿ ಯೋಜಿಸಲ್ಪಟ್ಟಿತ್ತು, ಕಟ್ಟುನಿಟ್ಟಿನ ನಿಯಮವಾಗಿ ಅಲ್ಲ. ಆದರೆ ಕೆಲವು ಹಿರಿಯರು ಅದನ್ನು ಒಂದು ನಿಯಮವಾಗಿ ಪರಿವರ್ತಿಸುವ ಮತ್ತು ಅದನ್ನು ಪಾಲಿಸದೆ ಇರುವವರು ದೇವಪ್ರಭುತ್ವವಾದಿಗಳಲ್ಲ ಎಂದು ಭಾವಿಸುವ ಪ್ರವೃತ್ತಿಯವರಾಗಬಹುದು. ಆದರೂ, ಒಬ್ಬ ಸಹೋದರ ಅಥವಾ ಸಹೋದರಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೂತುಕೊಳ್ಳಲು ಯಾಕೆ ಇಷ್ಟಪಡುತ್ತಾರೆ ಎಂಬುದಕ್ಕೆ ಅನೇಕ ಸಕಾರಣಗಳು ಇರಬಹುದು. ಹಿರಿಯನೊಬ್ಬನು ಅಂಥ ವಿಷಯಗಳನ್ನು ಪ್ರೀತಿಪೂರ್ವಕವಾಗಿ ಎಣಿಕೆಗೆ ತಾರದಿದ್ದರೆ, ಅವನು ಸ್ವತಃ ನಿಜವಾಗಿ ದೇವಪ್ರಭುತ್ವವಾದಿ ಆಗಿರುತ್ತಾನೊ? ದೇವಪ್ರಭುತ್ವವಾದಿಗಳಾಗಿರುವುದಕ್ಕಾಗಿ, “ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.”—1 ಕೊರಿಂಥ 16:14.
ಹರ್ಷದಿಂದ ಸೇವೆಮಾಡುವುದು
14, 15. (ಎ) ಯೆಹೋವನ ಸೇವೆಯಲ್ಲಿ ನಿರ್ದಿಷ್ಟ ಸಹೋದರರ ಮತ್ತು ಸಹೋದರಿಯರ ಸಂತೋಷವನ್ನು ಒಬ್ಬ ಹಿರಿಯನು ಹೇಗೆ ಅಪಹರಿಸಬಹುದು, ಮತ್ತು ಇದು ದೇವಪ್ರಭುತ್ವ ಆಗಿರುವುದಿಲ್ಲವೇಕೆ? (ಬಿ) ನಮ್ಮ ಸೇವೆಯಿಂದ ವ್ಯಕ್ತಪಡಿಸಲ್ಪಡುವ ಪ್ರೀತಿಯನ್ನು ಆತನು ಗಣ್ಯಮಾಡುತ್ತಾನೆ, ಒಟ್ಟುಮೊತ್ತವನ್ನಲ್ಲವೆಂದು ಯೇಸು ಹೇಗೆ ತೋರಿಸಿದನು? (ಸಿ) ಹಿರಿಯರು ಏನನ್ನು ಗಣನೆಗೆ ತೆಗೆದುಕೊಳ್ಳಬೇಕು?
14 ದೇವಪ್ರಭುತ್ವವಾದಿಗಳಾಗಿರುವುದೆಂದರೆ ಯೆಹೋವನನ್ನು ಹರ್ಷದಿಂದ ಸೇವಿಸುವುದೂ ಆಗಿದೆ. ಯೆಹೋವನು “ಸಂತೋಷವುಳ್ಳ ದೇವರು.” (1 ತಿಮೊಥೆಯ 1:11, NW) ಅವನ ಆರಾಧಕರು ಆತನನ್ನು ಆನಂದದಿಂದ ಸೇವಿಸುವಂತೆ ಆತನು ಬಯಸುತ್ತಾನೆ. ಯಾರು ನಿಯಮಗಳ ಛಲವಾದಿಗಳೊ ಅವರು ಏನು ನೆನಪಿಡಬೇಕೆಂದರೆ ಇಸ್ರಾಯೇಲು ಜಾಗ್ರತೆಯಿಂದ “ಅನುಸರಿಸಬೇಕಾದ” ವಿಧಿಗಳಲ್ಲಿ ಈ ಕೆಳಗಿನದ್ದೂ ಸೇರಿತ್ತು: “ನೀವು ನಿಮ್ಮ ದೇವರಾದ ಯೆಹೋವನ ಮುಂದೆ ನಿಮ್ಮ ಎಲ್ಲಾ ಕಾರ್ಯ ನಿರ್ವಹಣೆಯಲ್ಲಿ ಸಂತೋಷಿಸಬೇಕು.” (ಧರ್ಮೋಪದೇಶಕಾಂಡ 12:1, 18, NW) ಯೆಹೋವನ ಸೇವೆಯಲ್ಲಿ ನಾವು ನಿರ್ವಹಿಸುವ ಯಾವುದೇ ವಿಷಯವು ಒಂದು ಸಂತೋಷವಾಗಿರಬೇಕು, ಹೊರೆಯಲ್ಲ. ಯೆಹೋವನನ್ನು ಸೇವಿಸುವುದರಲ್ಲಿ ತಮ್ಮಿಂದಾದದ್ದನ್ನು ಮಾಡಲು ಸಹೋದರರು ಹರ್ಷಪಡುವಂತೆ ಹಿರಿಯರು ಹೆಚ್ಚನ್ನು ಮಾಡಬಲ್ಲರು. ವಿಪರ್ಯಸ್ತವಾಗಿ, ಹಿರಿಯರು ಜಾಗರೂಕರಾಗಿರದಿದ್ದಲ್ಲಿ, ಕೆಲವು ಸಹೋದರರ ಸಂತೋಷವನ್ನು ಅವರು ಅಪಹರಿಸಬಲ್ಲರು. ಉದಾಹರಣೆಗೆ, ಸಾಕ್ಷಿಕಾರ್ಯದ ತಾಸುಗಳಲ್ಲಿ ಸಭಾ ಸರಾಸರಿಯನ್ನು ಮುಟ್ಟಿರುವವರನ್ನು ಯಾ ಮೀರಿರುವವರನ್ನು ಪ್ರಶಂಸಿಸುವ ಮತ್ತು ಅದನ್ನು ತಲಪದಿರುವವರನ್ನು ಸೂಚಿತಾರ್ಥದಲ್ಲಿ ಟೀಕಿಸುವ ಭಾವದಿಂದ ತುಲನೆಯನ್ನು ಮಾಡುವುದಾದರೆ, ಬಹಳ ಕಡಿಮೆ ಸಮಯವನ್ನು ವರದಿಸುವುದಕ್ಕೆ ಒಂದು ಯೋಗ್ಯವಾದ ಕಾರಣವಿದ್ದವರಿಗೆ ಹೇಗೆ ಅನಿಸೀತು? ಇದು ಅವರಲ್ಲಿ ಅನಾವಶ್ಯಕವಾಗಿ ದೋಷಿಗಳೆಂಬ ಭಾವನೆಯನ್ನುಂಟುಮಾಡಿ, ಅವರ ಸಂತೋಷವನ್ನು ಅಪಹರಿಸಲಾರದೆ?
15 ಎಳೆಯ ಪ್ರಾಯ, ಒಳ್ಳೇ ಆರೋಗ್ಯ ಮತ್ತು ಇತರ ಪರಿಸ್ಥಿತಿಗಳ ನೋಟದಲ್ಲಿ, ಇತರರು ಸಾರುವುದರಲ್ಲಿ ಕಳೆಯುವ ಅನೇಕ ತಾಸುಗಳಿಗಿಂತ, ಬಹಿರಂಗ ಸಾಕ್ಷಿಗಾಗಿ ಕೆಲವರು ಮೀಸಲಾಗಿಡಬಲ್ಲ ಕೆಲವೇ ತಾಸುಗಳು ಒಂದು ಹೆಚ್ಚಿನ ಪ್ರಯತ್ನವನ್ನು ಪ್ರತಿನಿಧಿಸಬಹುದು. ಈ ವಿಷಯದಲ್ಲಿ ಹಿರಿಯರು ಅವರನ್ನು ತೀರ್ಪುಮಾಡಬಾರದು. ನಿಶ್ಚಯವಾಗಿ, “ತೀರ್ಪುಮಾಡುವ ಅಧಿಕಾರವನ್ನು” ತಂದೆಯು ಯೇಸುವಿಗೆ ಕೊಟ್ಟಿರುತ್ತಾನೆ. (ಯೋಹಾನ 5:27) ಬಡ ವಿಧವೆಯ ಕಾಣಿಕೆಯು ಸಾಧಾರಣಕ್ಕಿಂತ ಕಡಿಮೆಯಾಗಿದ್ದ ಕಾರಣ ಯೇಸು ಆಕೆಯನ್ನು ಟೀಕಿಸಿದನೊ? ಇಲ್ಲ, ಆ ಎರಡು ಕಾಸುಗಳು ನಿಜವಾಗಿ ಆಕೆಗೆಷ್ಟು ಅಮೂಲ್ಯವಾಗಿತ್ತೆಂಬ ವಿಷಯಕ್ಕೆ ಅವನು ಶೀಘ್ರವೇದಿಯಾಗಿದ್ದನು. ಅವಳು “ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು.” ಯೆಹೋವನಿಗಾಗಿ ಎಂತಹ ಆಳವಾದ ಪ್ರೀತಿಯನ್ನು ಅವು ಪ್ರತಿನಿಧಿಸಿದವು! (ಮಾರ್ಕ 12:41-44) ಸಂಖ್ಯಾತ್ಮಕವಾಗಿ ಯಾರದ್ದು ಎಲ್ಲವೂ “ಸರಾಸರಿ” ಗಿಂತ ಕೆಳಗಿದೆಯೆ ಅವರ ಪ್ರೀತಿಯುಳ್ಳ ಪ್ರಯತ್ನಗಳಿಗೆ ಹಿರಿಯರು ಕಡಿಮೆ ಶೀಘ್ರವೇದಿಗಳಾಗಿರಬೇಕೆ? ಯೆಹೋವನಿಗೆ ಪ್ರೀತಿಯ ಪರಿಭಾಷೆಗಳಲ್ಲಿ ಅಂಥ ಪ್ರಯತ್ನಗಳು ಸರಾಸರಿಗಿಂತ ಬಹಳ ಮೇಲಿರಲೂಬಹುದು!
16. (ಎ) ಮೇಲ್ವಿಚಾರಕರು ತಮ್ಮ ಭಾಷಣಗಳಲ್ಲಿ ಅಂಕೆಗಳನ್ನು ಉಪಯೋಗಿಸುವುದಾದರೆ, ವಿವೇಚನೆ ಮತ್ತು ಒಳ್ಳೇ ಸಮತೆಯು ಅವರಿಗೆ ಅಗತ್ಯವಿದೆಯೇಕೆ? (ಬಿ) ಅವರ ಸೇವೆಯನ್ನು ವೃದ್ಧಿಗೊಳಿಸಲು ಉತ್ತಮ ಸಹಾಯವನ್ನು ಸಹೋದರರಿಗೆ ಹೇಗೆ ಕೊಡಸಾಧ್ಯವಿದೆ?
16 ಈ ಹೇಳಿಕೆಗಳನ್ನೀಗ ಪರಿವರ್ತಿಸಿ, ಅಂಕಿಗಳನ್ನು—ಸರಾಸರಿಗಳನ್ನು ಸಹ ತಿಳಿಸಲೇಬಾರದೆಂಬ ಒಂದು ಹೊಸ “ನಿಯಮ” ವನ್ನಾಗಿ ಮಾಡಬೇಕೊ? ಇಲ್ಲವೇ ಇಲ್ಲ! ವಿಷಯವೇನಂದರೆ ಸಹೋದರರು ತಮ್ಮ ಶುಶ್ರೂಷೆಯನ್ನು ವಿಸ್ತರಿಸುವಂತೆ ಉತ್ತೇಜನಕೊಡುವುದರ ಮತ್ತು ಅವರು ಏನನ್ನು ಮಾಡಶಕ್ತರೋ ಅದನ್ನು ಸಂತೋಷದಿಂದ ಮಾಡುವಂತೆ ಸಹಾಯಕೊಡುವುದರ ನಡುವೆ ಒಂದು ಸಮತೆಯನ್ನು ಹಿರಿಯರು ತೋರಿಸಬೇಕು. (ಗಲಾತ್ಯ 6:4) ತಲಾಂತುಗಳ ಯೇಸುವಿನ ಸಾಮ್ಯದಲ್ಲಿ ಯಜಮಾನನು ಅವನ ಆಸ್ತಿಯನ್ನು ತನ್ನ ಆಳುಗಳಿಗೆ “ಅವನವನ ಸಾಮರ್ಥ್ಯದ ಪ್ರಕಾರ” ವಹಿಸಿಕೊಟ್ಟನು. (ಮತ್ತಾಯ 25:14, 15) ಹಿರಿಯರು ತದ್ರೀತಿಯಲ್ಲಿ ಪ್ರತಿಯೊಬ್ಬ ರಾಜ್ಯ ಪ್ರಚಾರಕನ ಶಕ್ಯತೆಗಳನ್ನು ಗಣನೆಗೆ ತರಬೇಕು. ಇದು ವಿವೇಚನೆಯನ್ನು ಅವಶ್ಯಪಡಿಸುತ್ತದೆ. ಕೆಲವರಿಗೆ ಹೆಚ್ಚನ್ನು ಮಾಡಲು ಕಾರ್ಯಥ ಉತ್ತೇಜನದ ಅಗತ್ಯವಿರಬಹುದು. ಅವರ ಚಟುವಟಿಕೆಗಳನ್ನು ಉತ್ತಮವಾಗಿ ವ್ಯವಸ್ಥೆಗೊಳಿಸಲು ಕೊಡುವ ಸಹಾಯವನ್ನು ಅವರು ಗಣ್ಯಮಾಡಬಹುದು. ಹೇಗಿದ್ದರೂ, ಅವರೇನನ್ನು ಮಾಡಶಕ್ತರೋ ಅದನ್ನು ಸಂತೋಷದಿಂದ ಮಾಡುವಂತೆ ಅವರಿಗೆ ಸಹಾಯ ನೀಡ ಸಾಧ್ಯವಾದರೆ, ಆ ಸಂತೋಷವು ಅವರ ಚಟುವಟಿಕೆಯನ್ನು ಶಕ್ಯವಾದಲ್ಲಿ ವಿಸ್ತರಿಸಲು ಅವರನ್ನು ಬಲಗೊಳಿಸುವುದು.—ನೆಹೆಮೀಯ 8:10; ಕೀರ್ತನೆ 59:16; ಯೆರೆಮೀಯ 20:9.
ಹರ್ಷಪೂರ್ಣ ಅಧೀನತೆಯಿಂದ ಬರುವ ಸಮಾಧಾನ
17, 18. (ಎ) ಹರ್ಷಪೂರ್ಣ ಅಧೀನತೆಯು ನಮಗೆ ಸಮಾಧಾನವನ್ನೂ ನೀತಿಯನ್ನೂ ತರುವುದು ಹೇಗೆ? (ಬಿ) ದೇವರ ಆಜೆಗ್ಞಳಿಗೆ ನಾವು ನಿಜವಾಗಿ ಗಮನ ಕೊಡುವುದಾದರೆ ಯಾವುದು ನಮ್ಮದಾಗಬಲ್ಲದು?
17 ಯೆಹೋವನ ನ್ಯಾಯಬದ್ಧ ಅಧಿಕಾರಕ್ಕೆ ಹರ್ಷಪೂರ್ಣ ಅಧೀನತೆಯು ನಮಗೆ ಮಹಾ ಸಮಾಧಾನವನ್ನು ತರುತ್ತದೆ. ಕೀರ್ತನೆಗಾರನು ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳಿದ್ದು: “ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದೇನ್ದೂ ಇರುವದಿಲ್ಲ.” (ಕೀರ್ತನೆ 119:165) ದೇವರ ನಿಯಮಗಳಿಗೆ ವಿಧೇಯರಾಗುವ ಮೂಲಕ ನಾವು ನಮಗೆ ಪ್ರಯೋಜನ ತಂದುಕೊಳ್ಳುತ್ತೇವೆ. ಯೆಹೋವನು ಇಸ್ರಾಯೇಲಿಗೆ ಹೇಳಿದ್ದು: “ನಿನ್ನ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾಮಿಯೂ ಆದ ಯೆಹೋವನು ಹೀಗನ್ನುತ್ತಾನೆ—ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ಮಾರ್ಗದಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು [ಗಮನಕೊಟ್ಟು, NW] ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.
18 ಕ್ರಿಸ್ತನ ವಿಮೋಚನಾ ಯಜ್ಞವು ನಮಗೆ ದೇವರೊಂದಿಗೆ ಸಮಾಧಾನವನ್ನು ತರುತ್ತದೆ. (2 ಕೊರಿಂಥ 5:18, 19) ಕ್ರಿಸ್ತನ ವಿಮೋಚನಾ ರಕ್ತದಲ್ಲಿ ನಮಗೆ ನಂಬಿಕೆ ಇದ್ದರೆ ಮತ್ತು ಮನಸ್ಸಾಕ್ಷಿಪೂರ್ವಕವಾಗಿ ನಮ್ಮ ಬಲಹೀನತೆಗಳನ್ನು ಹೋರಾಡಲು ಪ್ರಯತ್ನಿಸಿ, ದೇವರ ಚಿತ್ತವನ್ನು ಮಾಡುವುದಾದರೆ, ದೋಷಿಭಾವನೆಗಳಿಂದ ನಾವು ಪರಿಹಾರವನ್ನು ಕಂಡುಕೊಳ್ಳುತ್ತೇವೆ. (1 ಯೋಹಾನ 3:19-23) ಅಂಥ ನಂಬಿಕೆಯು, ಕ್ರಿಯೆಗಳಿಂದ ಬೆಂಬಲಿಸಲ್ಪಟ್ಟು, ಯೆಹೋವನ ಮುಂದೆ ಒಂದು ನೀತಿಯ ನಿಲುವನ್ನು ಮತ್ತು “ಮಹಾ ಸಂಕಟ” ವನ್ನು ಪಾರಾಗಿ ಯೆಹೋವನ ಹೊಸ ಲೋಕದಲ್ಲಿ ಸದಾಕಾಲ ಜೀವಿಸುವ ಆಶ್ಚರ್ಯಕರ ನಿರೀಕ್ಷೆಯನ್ನು ಕೊಡುತ್ತದೆ. (ಪ್ರಕಟನೆ 7:14-17; ಯೋಹಾನ 3:36; ಯಾಕೋಬ 2:22, 23) ‘ದೇವರ ಆಜ್ಞೆಗಳನ್ನು ನಾವು ಗಮನಕೊಟ್ಟು ಕೇಳುವುದಾದರೆ ಮಾತ್ರ’ ಇದೆಲ್ಲವು ನಮ್ಮದಾಗಬಲ್ಲವು.
19. ನಮ್ಮ ಈಗಿನ ಸಂತೋಷ ಮತ್ತು ನಿತ್ಯಜೀವದ ನಮ್ಮ ನಿರೀಕ್ಷೆಯು ಯಾವುದರ ಮೇಲೆ ಆಧಾರಿಸಿದೆ, ಮತ್ತು ನಮ್ಮ ಹೃದಯಪೂರ್ವಕ ದೃಢ ನಿಶ್ಚಯವನ್ನು ದಾವೀದನು ಹೇಗೆ ವ್ಯಕ್ತಪಡಿಸಿದ್ದಾನೆ?
19 ಹೌದು, ನಮ್ಮ ಈಗಿನ ಸಂತೋಷ ಮತ್ತು ಪ್ರಮೋದವನ ಭೂಮಿಯಲ್ಲಿ ನಮ್ಮ ನಿತ್ಯಜೀವದ ನಿರೀಕ್ಷೆಯು ವಿಶ್ವದ ಪರಮಾಧಿಕಾರಿ ಕರ್ತನಾದ ಯೆಹೋವನ ಅಧಿಕಾರಕ್ಕೆ ಸಂತೋಷವುಳ್ಳ ಅಧೀನತೆಯ ಸುತ್ತಲೂ ಆವರ್ತಿಸುತ್ತದೆ. ದಾವೀದನು ಹೇಳಿದ ಈ ಭಾವನೆಗಳಲ್ಲಿ ನಾವು ಸದಾ ಪಾಲಿಗರಾಗುವಂತಾಗಲಿ: “ಯೆಹೋವಾ, ಮಹಿಮಪ್ರತಾಪವೈಭವಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ. ಆದದರಿಂದ ನಮ್ಮ ದೇವರೇ, ನಾವು ನಿನಗೆ ಕೃತಜ್ಞತಾಸ್ತುತಿಮಾಡುತ್ತಾ ನಿನ್ನ ಪ್ರಭಾವವುಳ್ಳ ನಾಮವನ್ನು ಕೀರ್ತಿಸುತ್ತೇವೆ.”—1 ಪೂರ್ವಕಾಲವೃತ್ತಾಂತ 29:11, 13.
ನೆನಪಿಗೆ ತಂದುಕೊಳ್ಳಲು ವಿಷಯಗಳು
▫ ಯಾವ ವಿಧದ ಅಧೀನತೆ ಮತ್ತು ವಿಧೇಯತೆಯನ್ನು ತನ್ನ ಸೇವಕರು ತೋರಿಸುವಂತೆ ಯೆಹೋವನು ಅಪೇಕ್ಷಿಸುತ್ತಾನೆ?
▫ ಅವನ ವಿಧೇಯತೆಗಾಗಿ ಯೇಸು ಹೇಗೆ ಬಹುಮಾನಿಸಲ್ಪಟ್ಟನು, ಮತ್ತು ನಮ್ಮ ವರ್ತನಾ ರೀತಿಯಿಂದ ನಾವು ಏನನ್ನು ರುಜುಪಡಿಸಬೇಕು?
▫ ಯೇಸು ಕುರಿಗಳನ್ನು ಉಪಚರಿಸಿದ ವಿಧಾನದಲ್ಲಿ ಅವನನ್ನು ಮೇಲ್ವಿಚಾರಕರೆಲ್ಲರು ಹೇಗೆ ಅನುಕರಿಸಬೇಕು?
▫ ದೇವಪ್ರಭುತ್ವವಾದಿಗಳಾಗಿರುವುದರಲ್ಲಿ ಏನು ಒಳಗೊಂಡಿದೆ?
▫ ಹರ್ಷಪೂರ್ಣ ಅಧೀನತೆಯು ಯಾವ ಆಶೀರ್ವಾದಗಳನ್ನು ನಮಗೆ ತರುತ್ತದೆ?
[ಪುಟ 24 ರಲ್ಲಿರುವ ಚಿತ್ರ]
ಮಾಡಸಾಧ್ಯವಿರುವ ಏನನ್ನಾದರೂ ಸಂತೋಷದಿಂದ ಮಾಡುವಂತೆ ಹಿರಿಯರು ಮಂದೆಯನ್ನು ಪ್ರೋತ್ಸಾಹಿಸುತ್ತಾರೆ
[ಪುಟ 26 ರಲ್ಲಿರುವ ಚಿತ್ರ]
ಯಾರು ಆತನಿಗೆ ಹೃದಯಪೂರ್ವಕವಾಗಿ ವಿಧೇಯರಾಗುತ್ತಾರೊ ಅವರಲ್ಲಿ ಯೆಹೋವನು ಸಂತೋಷವನ್ನು ತಾಳುತ್ತಾನೆ