“ಈ ಶುಶ್ರೂಷೆಯನ್ನು ನಾವು ಪಡೆದಿರುವುದರಿಂದ . . . , ನಾವು ಬಿಟ್ಟುಕೊಡುವುದಿಲ್ಲ”
ರಾನಲ್ಡ್ ಟೇಲರ್ ಅವರಿಂದ ಹೇಳಲ್ಪಟ್ಟಂತೆ
1963ರ ಬೇಸಗೆ ಕಾಲದಲ್ಲಿ, ನನ್ನ ಜೀವಕ್ಕಾಗಿ ನಾನು ಹೋರಾಡುತ್ತಿದ್ದೇನೆಂದು ಕಂಡುಕೊಂಡೆ. ತೀರದ ಉದ್ದಕ್ಕೂ ನಾನು ನೀರಿನಲ್ಲಿ ನಡೆಯುತ್ತಿದ್ದಾಗ, ಒಂದು ಮೋಸಕರ ಹಳ್ಳದೊಳಗೆ ಕಾಲಿಡಲಾಗಿ, ತಕ್ಷಣ ಬಹಳ ಆಳವಾದ ನೀರಿನೊಳಗೆ ಎಸೆಯಲ್ಪಟ್ಟೆ. ಈಜು ಬಾರದವನಾದ ನಾನು, ತೀರದಿಂದ ಕೇವಲ ಕೆಲವು ಮೀಟರುಗಳ ಅಂತರದಲ್ಲಿ ಮುಳುಗಿ ಸಾಯುವುದರಲ್ಲಿದ್ದೆ. ನಾನು ಈಗಾಗಲೇ ಮೂರು ಬಾರಿ ಕೆಳಗೆ ಹೋಗಿದ್ದೆ ಮತ್ತು ಬಹಳಷ್ಟು ಪ್ರಮಾಣದಲ್ಲಿ ಸಮುದ್ರದ ನೀರನ್ನು ನುಂಗಿದ್ದೆ. ಆಗ ಒಬ್ಬ ಮಿತ್ರನು ನನ್ನ ಅವಸ್ಥೆಯನ್ನು ಗಮನಿಸಿ, ನನ್ನನ್ನು ತೀರಕ್ಕೆ ಎಳೆದನು. ಒಡನೆಯೇ ನೀಡಿದ ಕೃತಕ ಉಸಿರಾಟದ ಫಲವಾಗಿ ನಾನು ಬದುಕಿ ಉಳಿದೆ.
ವಿಷಯಗಳು ಆಶಾರಹಿತವಾಗಿ ಕಂಡರೂ, ಎಂದಿಗೂ ಬಿಟ್ಟುಕೊಡದೆ ಇರುವುದರ ಮಹತ್ವವನ್ನು ನಾನು ಗಣ್ಯಮಾಡಿದ್ದು, ಇದೇ ಪ್ರಥಮ ಬಾರಿಯಾಗಿರಲಿಲ್ಲ. ಬಹಳ ಸಣ್ಣ ಪ್ರಾಯದಿಂದ, ನನ್ನ ಆತ್ಮಿಕ ಜೀವಿತಕ್ಕಾಗಿ ನಾನು ಹೋರಾಡಬೇಕಿತ್ತು.
ನಾನು ಪ್ರಥಮ ಬಾರಿಗೆ ಕ್ರೈಸ್ತ ಸತ್ಯದ ಸಂಪರ್ಕದಲ್ಲಿ ಬಂದದ್ದು, ಎರಡನೆಯ ಲೋಕ ಯುದ್ಧದ ಮಬ್ಬುಕವಿದ ದಿನಗಳಲ್ಲಿ. ಬಾಂಬಿನ ದಾಳಿಗಳ ಅಪಾಯಗಳಿಂದ ಪಾರಾಗಲು, ಲಂಡನ್ನಿಂದ ಹೊರಡಿಸಲ್ಪಟ್ಟ ಸಾವಿರಾರು ಮಕ್ಕಳಲ್ಲಿ ನಾನು ಒಬ್ಬನಾಗಿದ್ದೆ. ನಾನು ಕೇವಲ 12 ವರ್ಷ ಪ್ರಾಯದವನಾಗಿದ್ದ ಕಾರಣ, ಯುದ್ಧವು ನನಗೆ ವಿಶೇಷ ಅರ್ಥವುಳ್ಳದ್ದಾಗಿ ತೋರಲಿಲ್ಲ; ಅದು ಬಹುಮಟ್ಟಿಗೆ ಒಂದು ಸಾಹಸಕಾರ್ಯದಂತಿತ್ತು.
ನೈರುತ್ಯ ಇಂಗ್ಲೆಂಡ್ನ ವೆಸ್ಟನ್ ಸೂಪರ್ ಮ್ಯಾರ್ನಲ್ಲಿದ್ದ ವೃದ್ಧ ದಂಪತಿಗಳು, ನನ್ನನ್ನು ನೋಡಿಕೊಂಡರು. ಆ ದಂಪತಿಗಳ ಮನೆಯನ್ನು ನಾನು ಬಂದು ಸೇರಿದ ಕೂಡಲೆ, ಕೆಲವು ಪಯನೀಯರ್ ಶುಶ್ರೂಷಕರು ನಮ್ಮನ್ನು ಭೇಟಿಯಾಗಲು ಆರಂಭಿಸಿದರು. ಅದು ಹಾರ್ಗ್ರೀವ್ಸ್ ಕುಟುಂಬವಾಗಿತ್ತು; ರೆಜ್, ಮ್ಯಬ್ಸ್, ಪ್ಯಾಮಲ, ಮತ್ತು ವ್ಯಾಲರಿ, ನಾಲ್ವರೂ ವಿಶೇಷ ಪಯನೀಯರರಾಗಿದ್ದರು. ನನ್ನ ಸಾಕು ಹೆತ್ತವರು ಸತ್ಯವನ್ನು ಸ್ವೀಕರಿಸಿದರು, ಮತ್ತು ದ ಹಾರ್ಪ್ ಆಫ್ ಗಾಡ್ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕವನ್ನು ಅಭ್ಯಸಿಸಿದ ತರುವಾಯ, ನಾನು ಸಹ ಯೆಹೋವನನ್ನು ಸೇವಿಸುವ ನಿರ್ಣಯವನ್ನು ಮಾಡಿದೆ. ಕೇವಲ ಆರು ವಾರಗಳ ನಂತರ, ಸಾರುವ ಕಾರ್ಯದಲ್ಲಿ ಭಾಗವಹಿಸಲು ನಾನು ಆಮಂತ್ರಿಸಲ್ಪಟ್ಟೆ.
ಕ್ಷೇತ್ರ ಸೇವೆಯಲ್ಲಿನ ಆ ಪ್ರಥಮ ದಿನವನ್ನು ನಾನು ಇನ್ನೂ ಜ್ಞಾಪಿಸಿಕೊಳ್ಳಬಲ್ಲೆ. ಯಾವುದೇ ಸಿದ್ಧತೆಯಿಲ್ಲದೆ, ನನಗೆ ಕೆಲವು ಪುಸ್ತಿಕೆಗಳನ್ನು ಕೊಟ್ಟು, ಹೀಗೆ ಹೇಳಲಾಯಿತು: “ರಸ್ತೆಯ ಆ ಬದಿಯಲ್ಲಿ ನೀನು ಕೆಲಸಮಾಡು.” ಹೀಗೆ ನಾನು ನನ್ನ ಸಾರುವ ಕಾರ್ಯದ ಪ್ರಥಮ ದಿನವನ್ನು ಕಳೆದೆ. ಆ ಸಮಯದಲ್ಲಿ, ಶಕ್ತಿಶಾಲಿ ಪ್ರಸಂಗಗಳನ್ನೊಳಗೊಂಡ ಫೋನೊಗ್ರಾಫ್ ರೆಕಾರ್ಡ್ಗಳನ್ನು ಬಳಸುವ ಮೂಲಕ ನಾವು ಅನೇಕ ವೇಳೆ ಸಾರಿದೆವು. ನನ್ನ ಅತ್ಯಂತ ಸಂತೋಷಕರ ಗಳಿಗೆಗಳು, ನಾನು ಫೋನೊಗ್ರಾಫನ್ನು ಮನೆಯಿಂದ ಮನೆಗೆ ತೆಗೆದುಕೊಂಡು ಹೋಗಿ, ರೆಕಾರ್ಡ್ ಮಾಡಲಾದ ಉಪನ್ಯಾಸಗಳನ್ನು ನುಡಿಸುವ ಸಮಯಗಳಾಗಿದ್ದವು. ಆ ವಿಧದಲ್ಲಿ ಬಳಸಲ್ಪಡುವುದನ್ನು ನಿಜವಾದ ಸುಯೋಗವೆಂದು ನಾನು ಪರಿಗಣಿಸಿದೆ.
ಶಾಲೆಯಲ್ಲಿ ಬಹಳಷ್ಟು ಸಾಕ್ಷಿಕಾರ್ಯವನ್ನು ನಾನು ಮಾಡಿದೆ, ಮತ್ತು ಮುಖ್ಯೋಪಾಧ್ಯಾಯರಲ್ಲಿ ಬೈಬಲ್ ಶೀರ್ಷಿಕೆಗಳ ಕುರಿತು ಒಂದು ಕಟ್ಟು ಪುಸ್ತಕಗಳನ್ನು ನೀಡುವುದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. 13ರ ಪ್ರಾಯದಲ್ಲಿ, ಹತ್ತಿರದ ಬಾತ್ನಲ್ಲಿ ನಡೆದ ಸಮ್ಮೇಳನದಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ನಾನು ಎಂದಿಗೂ ಮರೆಯಲಾರದ ಇನ್ನೊಂದು ಯುದ್ಧಸಮಯದ ಅಧಿವೇಶನವು, 1941 ರಲ್ಲಿ ಲೆಸರ್ಟ್ನ ಡ ಮಾಂಟ್ಫೋರ್ಟ್ ಹಾಲ್ನಲ್ಲಿ ನಡೆದ ಅಧಿವೇಶನವಾಗಿತ್ತು. ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಸಹೋದರ ರಥರ್ಫರ್ಡ್ರಿಂದ ಒಂದು ವೈಯಕ್ತಿಕ ಸಂದೇಶವಿದ್ದ ಮಕ್ಕಳು (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕದ ನನ್ನ ಪ್ರತಿಯನ್ನು ಪಡೆಯಲು ನಾನು ವೇದಿಕೆಯ ಬಳಿ ಹೋದೆ. ಹಾಜರಿದ್ದ ಎಲ್ಲ ಎಳೆಯರಿಗೆ ಕೊಡಲ್ಪಟ್ಟ ಹುರಿದುಂಬಿಸುವ ಭಾಷಣವು, ಯೆಹೋವನನ್ನು ಸದಾಕಾಲ ಸೇವಿಸಲಿಕ್ಕಾಗಿದ್ದ ನನ್ನ ಬಯಕೆಯನ್ನು ಬಲಪಡಿಸಿತು.
ಹೀಗೆ ಸತ್ಯದಲ್ಲಿ ಬೆಳೆಯುತ್ತಾ ನನ್ನ ಸಾಕು ಹೆತ್ತವರೊಂದಿಗೆ ಸಂತೋಷದ ಎರಡು ವರ್ಷಗಳನ್ನು ಕಳೆದೆ. ಆದರೆ 14 ನೆಯ ವಯಸ್ಸಿನಲ್ಲಿ ನಾನು ಲಂಡನ್ಗೆ ಹಿಂದಿರುಗಬೇಕಿತ್ತು ಮತ್ತು ನನ್ನ ಜೀವನೋಪಾಯಕ್ಕಾಗಿ ಕೆಲಸಮಾಡಲು ತೊಡಗಬೇಕಿತ್ತು. ನನ್ನ ಕುಟುಂಬದೊಂದಿಗೆ ನಾನು ಮತ್ತೆ ಸೇರಿದೆನಾದರೂ, ಆತ್ಮಿಕವಾಗಿ ನನ್ನ ಸ್ವಂತ ಕಾಲಿನ ಮೇಲೆ ನಾನು ಈಗ ನಿಲ್ಲಬೇಕಿತ್ತು, ಯಾಕೆಂದರೆ ಮನೆಯಲ್ಲಿ ಯಾರೊಬ್ಬರೂ ನನ್ನ ವಿಶ್ವಾಸಗಳಲ್ಲಿ ಭಾಗಿಯಾಗಲಿಲ್ಲ. ನನಗೆ ಬೇಕಾಗಿದ್ದ ಸಹಾಯವನ್ನು ಯೆಹೋವನು ಬೇಗನೆ ಒದಗಿಸಿದನು. ಲಂಡನ್ಗೆ ನಾನು ಬಂದು ತಲಪಿದ ಕೇವಲ ಮೂರು ವಾರಗಳ ಬಳಿಕ, ನನ್ನನ್ನು ಸ್ಥಳಿಕ ರಾಜ್ಯ ಸಭಾಗೃಹಕ್ಕೆ ಕರೆದುಕೊಂಡು ಹೋಗಲು ನನ್ನ ತಂದೆಯ ಪರವಾನೆಯನ್ನು ಕೇಳಲಿಕ್ಕಾಗಿ ಒಬ್ಬ ಸಹೋದರರು ನನ್ನ ಮನೆಗೆ ಭೇಟಿನೀಡಿದರು. ಆ ಸಹೋದರರು, ಈಗ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಜಾನ್ ಬಾರ್ ಆಗಿದ್ದರು. ಆ ಕಠಿನ ಹದಿವಯಸ್ಕ ವರ್ಷಗಳಲ್ಲಿ ನನ್ನ ಆತ್ಮಿಕ “ತಂದೆಗಳಲ್ಲಿ” ಅವರು ಒಬ್ಬರಾದರು.—ಮತ್ತಾಯ 19:29.
ಲಂಡನ್ ಬೆತೆಲ್ ಗೃಹದ ಪಕ್ಕದಲ್ಲಿದ್ದ ಕ್ರೇವನ್ ಟೆರಸ್ನಲ್ಲಿ ಕೂಡಿಬಂದ ಪ್ಯಾಡಿಂಗ್ಟನ್ ಸಭೆಯನ್ನು ನಾನು ಹಾಜರಾಗತೊಡಗಿದೆ. ನಾನು ಆತ್ಮಿಕ ಅನಾಥನಾಗಿದ್ದ ಕಾರಣ, ಒಬ್ಬ ವೃದ್ಧ ಅಭಿಷಿಕ್ತ ಸಹೋದರರಾದ “ಪಾಪ್” ಹಂಫ್ರೀಸ್, ನನ್ನಲ್ಲಿ ವಿಶೇಷ ಆಸಕ್ತಿಯನ್ನು ತೆಗೆದುಕೊಳ್ಳಲು ನೇಮಿಸಲ್ಪಟ್ಟರು. ಆ ಸಭೆಯಲ್ಲಿ ಸೇವೆ ಸಲ್ಲಿಸಿದ ಅನೇಕ ಅಭಿಷಿಕ್ತ ಸಹೋದರ ಸಹೋದರಿಯರೊಂದಿಗೆ ಸಹವಸಿಸಲು ಸಾಧ್ಯವಾದದ್ದು ನಿಜವಾಗಿಯೂ ಒಂದು ಮಹಾ ಆಶೀರ್ವಾದವಾಗಿತ್ತು. ನಮ್ಮಲ್ಲಿ ಯೋನಾದಾಬರು ಎಂದು ಕರೆಯಲ್ಪಟ್ಟ, ಭೂನಿರೀಕ್ಷೆಯಿದ್ದವರು ಅಲ್ಪಸಂಖ್ಯೆಯಲ್ಲಿದ್ದೆವು. ವಾಸ್ತವವಾಗಿ, ನಾನು ಹಾಜರಾದ ಸಭಾ ಪುಸ್ತಕ ಅಭ್ಯಾಸದಲ್ಲಿ, ನಾನು ಏಕೈಕ “ಯೋನಾದಾಬ” ನಾಗಿದ್ದೆ. ನನ್ನ ಸ್ವಂತ ಪ್ರಾಯದವರೊಂದಿಗೆ ಹೆಚ್ಚಿನ ಸಹವಾಸವು ನನಗಿರದಿದ್ದರೂ, ಪ್ರೌಢ ಸಹೋದರರೊಂದಿಗಿನ ಆ ಅಮೂಲ್ಯ ಸಾಹಚರ್ಯವು ನನಗೆ ಅನೇಕ ಉಪಯೋಗಕಾರಿ ಪಾಠಗಳನ್ನು ಕಲಿಸಿತು. ಬಹುಶಃ ಅವುಗಳಲ್ಲಿ ಅತ್ಯಂತ ಮಹತ್ವವಾದದ್ದು, ಎಂದಿಗೂ ಯೆಹೋವನ ಸೇವೆಯನ್ನು ತೊರೆಯದಿರುವಂತಹದ್ದೇ.
ಆ ದಿನಗಳಲ್ಲಿ, ಇಡೀ ವಾರಾಂತ್ಯವನ್ನು ನಾವು ಸಾರುವ ಚಟುವಟಿಕೆಗೆ ಮೀಸಲಾಗಿಡುತ್ತಿದ್ದೆವು. “ಸೌಂಡ್ ಕಾರ್” ಅನ್ನು ನೋಡಿಕೊಳ್ಳುವಂತೆ ನಾನು ನೇಮಿಸಲ್ಪಟ್ಟಿದ್ದೆ. ಅದು ವಾಸ್ತವದಲ್ಲಿ ಧ್ವನಿವರ್ಧಕ ಸಜ್ಜನ್ನು ಮತ್ತು ಕಾರ್ ಬ್ಯಾಟರಿಯೊಂದನ್ನು ಇಟ್ಟುಕೊಳ್ಳುವಂತೆ ಮಾರ್ಪಡಿಸಲ್ಪಟ್ಟ ಮೂರು ಗಾಲಿಯ ಗಾಡಿಯಾಗಿತ್ತು. ಪ್ರತಿ ಶನಿವಾರ, ನಾನು ಮೂರು ಗಾಲಿಯ ಗಾಡಿಯ ಮೇಲೆ ವಿಭಿನ್ನ ರಸ್ತೆಗಳ ಮೂಲೆಗಳಿಗೆ ಪ್ರಯಾಣಿಸಿದೆ. ಅಲ್ಲಿ ನಾವು ಕೆಲವು ಸಂಗೀತದ ರೆಕಾರ್ಡ್ಗಳನ್ನು ನುಡಿಸಿ, ಆಮೇಲೆ ಸಹೋದರ ರಥರ್ಫರ್ಡರ ಭಾಷಣಗಳಲ್ಲಿ ಒಂದನ್ನು ನುಡಿಸಿದೆವು. ನಮ್ಮ ಪತ್ರಿಕೆಯ ಬ್ಯಾಗ್ಗಳೊಂದಿಗೆ ರಸ್ತೆಯ ಕಾರ್ಯವನ್ನು ಮಾಡಲೂ ಶನಿವಾರಗಳು ಬಳಸಲ್ಪಟ್ಟವು. ಪುಸ್ತಿಕೆಗಳನ್ನು ಮತ್ತು ಬೌಂಡ್ ಪುಸ್ತಕಗಳನ್ನು ನೀಡುತ್ತಾ, ಆದಿತ್ಯವಾರಗಳನ್ನು ನಾವು ಮನೆ ಮನೆಯ ಕಾರ್ಯಕ್ಕೆ ಮೀಸಲಾಗಿಟ್ಟೆವು.
ಹುರುಪುಳ್ಳ ವೃದ್ಧ ಸಹೋದರರೊಂದಿಗಿನ ನನ್ನ ಸಹವಾಸವು ನನ್ನಲ್ಲಿ ಪಯನೀಯರ್ ಸೇವೆ ಮಾಡುವ ಬಯಕೆಯನ್ನು ಕೆರಳಿಸಿತು. ಈ ಬಯಕೆಯು ಜಿಲ್ಲಾ ಅಧಿವೇಶನಗಳಲ್ಲಿ ಪಯನೀಯರ್ ಭಾಷಣಗಳನ್ನು ನಾನು ಆಲಿಸಿದಾಗ ಬಲಗೊಳಿಸಲ್ಪಟ್ಟಿತು. ನನ್ನ ಜೀವಿತದ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿದ ಒಂದು ಅಧಿವೇಶನವು, 1947 ರಲ್ಲಿ ಲಂಡನ್ನ ಅರ್ಲ್ಸ್ ಕೋರ್ಟ್ನಲ್ಲಿ ನಡೆದ ಅಧಿವೇಶನವಾಗಿತ್ತು. ಎರಡು ತಿಂಗಳುಗಳ ತರುವಾಯ, ಪಯನೀಯರ್ ಸೇವೆಯಲ್ಲಿ ನನ್ನ ಹೆಸರನ್ನು ನಾನು ನಮೂದಿಸಿಕೊಂಡೆ, ಮತ್ತು ಆಗಿನಿಂದ ಪಯನೀಯರ್ ಆತ್ಮವನ್ನು ಕಾಪಾಡಿಕೊಳ್ಳಲು ನಾನು ಶ್ರಮಿಸಿದ್ದೇನೆ. ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದರಿಂದ ನಾನು ಪಡೆದ ಆನಂದವು, ಇದು ಸರಿಯಾದ ನಿರ್ಣಯವಾಗಿತ್ತು ಎಂಬುದನ್ನು ದೃಢಪಡಿಸಲು ಸಹಾಯ ಮಾಡಿತು.
ಸ್ಪೇನ್ನ ವಧು ಮತ್ತು ಸ್ಪೇನ್ನ ನೇಮಕ
ಇಸವಿ 1957 ರಲ್ಲಿ, ನಾನಿನ್ನೂ ಪ್ಯಾಡಿಂಗ್ಟನ್ ಸಭೆಯಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದಾಗ, ರಾಫಾಎಲಾ ಎಂಬ ಹೆಸರಿನ ಒಬ್ಬಾಕೆ ಸುಂದರ ಸ್ಪ್ಯಾನಿಷ್ ಸಹೋದರಿಯನ್ನು ಭೇಟಿಯಾದೆ. ಕೆಲವು ತಿಂಗಳುಗಳ ಬಳಿಕ, ನಾವು ವಿವಾಹವಾದೆವು. ನಮ್ಮ ಗುರಿಯು ಒಟ್ಟಿಗೆ ಪಯನೀಯರ್ ಸೇವೆ ಮಾಡುವುದಾಗಿತ್ತು, ಆದರೆ ರಾಫಾಎಲಾಳ ಹೆತ್ತವರನ್ನು ನಾನು ಭೇಟಿಯಾಗುವ ಕಾರಣದಿಂದ ನಾವು ಮೊದಲು ಮ್ಯಡ್ರಿಡ್ಗೆ ಹೋದೆವು. ಅದು ನನ್ನ ಜೀವಿತವನ್ನು ಬದಲಾಯಿಸಿದ ಒಂದು ಭೇಟಿಯಾಗಿತ್ತು. ನಾವು ಮ್ಯಡ್ರಿಡ್ನಲ್ಲಿದ್ದಾಗ, ಸ್ಪೇನ್ನ ಬ್ರಾಂಚ್ ಮೇಲ್ವಿಚಾರಕರಾಗಿದ್ದ ಸಹೋದರ ರೇ ಡೂಜಿನ್ಬೆರಿ, ಸ್ಪೇನ್ನಲ್ಲಿ ಸೇವೆ ಸಲ್ಲಿಸುವುದನ್ನು ನಾವು ಪರಿಗಣಿಸುವೆವೊ ಎಂದು ನನ್ನನ್ನು ಕೇಳಿದರು. ಅಲ್ಲಿ ಅನುಭವಸ್ಥ ಸಹೋದರರ ಮಹತ್ತರವಾದ ಅಗತ್ಯವಿತ್ತು.
ಅಂತಹ ಆಮಂತ್ರಣವೊಂದನ್ನು ನಾವು ಹೇಗೆ ತಿರಸ್ಕರಿಸಸಾಧ್ಯವಿತ್ತು? ಹೀಗೆ, 1958 ರಲ್ಲಿ ಸ್ಪೇನ್ನಲ್ಲಿ ನಾವು ನಮ್ಮ ಪೂರ್ಣ ಸಮಯದ ಸೇವೆಯನ್ನು ಒಟ್ಟಿಗೆ ಆರಂಭಿಸಿದೆವು. ಆ ಸಮಯದಲ್ಲಿ ದೇಶವು ಫ್ರ್ಯಾಂಕೊವಿನ ಆಳಿಕೆಯ ಕೆಳಗಿತ್ತು, ಮತ್ತು ನಮ್ಮ ಚಟುವಟಿಕೆಯು ನ್ಯಾಯಬದ್ಧವಾದ ಮನ್ನಣೆಯನ್ನು ಪಡೆದಿರಲಿಲ್ಲ, ಇದು ಸಾರುವ ಕಾರ್ಯವನ್ನು ಬಹಳ ಕಠಿನಗೊಳಿಸಿತು. ಇನ್ನೂ ಹೆಚ್ಚಾಗಿ, ಮೊದಲ ಒಂದೆರಡು ವರ್ಷಗಳ ಕಾಲ ನಾನು ಸ್ಪ್ಯಾನಿಷ್ ಭಾಷೆಯೊಂದಿಗೆ ಹೋರಾಡಬೇಕಿತ್ತು. ಸಭೆಯಲ್ಲಿರುವ ಸಹೋದರರೊಂದಿಗೆ ಸಂಸರ್ಗ ಮಾಡಲು ಅಶಕ್ತನಾದ ಕಾರಣ ಬರಿಯ ಆಶಾಭಂಗದ ನಿಮಿತ್ತ ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ನಾನು ಅತೆನ್ತಾದರೂ, ಮತ್ತೊಮ್ಮೆ ಅದು ಬಿಟ್ಟುಕೊಡದಿರುವುದರ ಒಂದು ವಿದ್ಯಮಾನವಾಗಿತ್ತು.
ಮೇಲ್ವಿಚಾರಕರ ಅಗತ್ಯವು ಎಷ್ಟು ಮಹತ್ತರವಾಗಿತ್ತೆಂದರೆ, ಸ್ಪ್ಯಾನಿಷ್ ಭಾಷೆಯಲ್ಲಿ ಮಾತಾಡಲು ನನಗೆ ಕಿಂಚಿತ್ತೂ ಬಾರದಿದ್ದರೂ, ಒಂದು ತಿಂಗಳೊಳಗೆ ನಾನೊಂದು ಸಣ್ಣ ಗುಂಪನ್ನು ನೋಡಿಕೊಳ್ಳುತ್ತಿದ್ದೆ. ನಮ್ಮ ಕೆಲಸದ ಗೋಪ್ಯವಾದ ಸ್ವರೂಪದಿಂದಾಗಿ, ನಾವು 15 ರಿಂದ 20 ಪ್ರಚಾರಕರನ್ನೊಳಗೊಂಡ ಸಣ್ಣ ಗುಂಪುಗಳಾಗಿ ಸಂಘಟಿಸಲ್ಪಟ್ಟಿದ್ದೆವು, ಇವು ಹೆಚ್ಚು ಕಡಿಮೆ ಸಣ್ಣ ಸಭೆಗಳೋಪಾದಿ ಕಾರ್ಯಮಾಡಿದವು. ಮೊದಲಿಗೆ, ಕೂಟಗಳನ್ನು ನಡೆಸುವುದು ಬಹಳ ಕಠಿನವಾಗಿತ್ತು, ಯಾಕೆಂದರೆ ಸಭಿಕರಿಂದ ಬರುವ ಉತ್ತರಗಳು ನನಗೆ ಯಾವಾಗಲೂ ಅರ್ಥವಾಗುತ್ತಿರಲಿಲ್ಲ. ಹಾಗಿದ್ದರೂ, ನನ್ನ ಹೆಂಡತಿ ಹಿಂದೆ ಕುಳಿತುಕೊಳ್ಳುತ್ತಿದ್ದಳು, ಮತ್ತು ನಾನು ಗಲಿಬಿಲಿಗೊಂಡಿರುವೆನೆಂದು ಆಕೆ ಗಮನಿಸಿದರೆ, ಉತ್ತರವು ಸರಿಯಾಗಿತ್ತು ಎಂಬುದನ್ನು ದೃಢಪಡಿಸಲು ವಿವೇಚನೆಯಿಂದ ತಲೆ ಆಡಿಸಿ ಸೂಚಿಸುತ್ತಿದ್ದಳು.
ನನಗೆ ಭಾಷೆಗಳನ್ನು ಕಲಿಯುವ ಸಹಜ ಒಲವು ಇಲ್ಲ, ಮತ್ತು ಅನೇಕ ಬಾರಿ ಇಂಗ್ಲೆಂಡ್ಗೆ ಹಿಂದಿರುಗಬೇಕೆಂದು ನನಗನಿಸಿತು. ಅಲ್ಲಿ ನಾನು ಎಲ್ಲವನ್ನೂ ಹೆಚ್ಚು ಸರಳವಾಗಿ ಮಾಡಸಾಧ್ಯವಿತ್ತು. ಆದರೂ, ಮೊದಲಿನಿಂದಲೂ, ನಮ್ಮ ಪ್ರಿಯ ಸ್ಪ್ಯಾನಿಷ್ ಸಹೋದರ ಸಹೋದರಿಯರ ಪ್ರೀತಿ ಮತ್ತು ಗೆಳತನವು, ಭಾಷೆಯೊಂದಿಗಿನ ನನ್ನ ಆಶಾಭಂಗಗಳನ್ನು ಸರಿದೂಗಿಸಿತು. ಮತ್ತು ಎಲ್ಲವನ್ನು ಸಾರ್ಥಕವೆಂದು ತೋರುವಂತೆ ಮಾಡಿದ ವಿಶೇಷ ಸುಯೋಗಗಳಿಂದ ಯೆಹೋವನು ನನ್ನನ್ನು ಆಶೀರ್ವದಿಸಿದನು. 1958 ರಲ್ಲಿ, ಸ್ಪೇನ್ನ ಒಬ್ಬ ಪ್ರತಿನಿಧಿಯಂತೆ ನ್ಯೂ ಯಾರ್ಕ್ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗುವಂತೆ ನಾನು ಆಮಂತ್ರಿಸಲ್ಪಟ್ಟೆ. ಆಮೇಲೆ 1962 ರಲ್ಲಿ, ಮರಾಕೊವಿನ ಟ್ಯಾಂಜಿರ್ನಲ್ಲಿ ನಮಗಾಗಿ ಏರ್ಪಡಿಸಲಾದ ರಾಜ್ಯ ಶುಶ್ರೂಷಾ ಶಾಲೆಯಲ್ಲಿ ಬಹುಮೂಲ್ಯ ತರಬೇತಿಯನ್ನು ನಾನು ಪಡೆದೆ.
ಭಾಷೆಯನ್ನು ಹೊರತುಪಡಿಸಿ, ನಾನು ಎದುರಿಸಿದ ಇನ್ನೊಂದು ಸಮಸ್ಯೆಯು, ಪೋಲಿಸರಿಂದ ಹಿಡಿಯಲ್ಪಡುವ ಸತತವಾದ ಚಿಂತೆಯಾಗಿತ್ತು. ವಿದೇಶಿಯೋಪಾದಿ ದಸ್ತಗಿರಿಯಾಗುವುದು ಅನಿವಾರ್ಯವಾಗಿ ಹೊರಗಟ್ಟುವುದನ್ನು ಅರ್ಥೈಸುವುದೆಂದು ನನಗೆ ಗೊತ್ತಿತ್ತು. ಗಂಡಾಂತರವನ್ನು ಕಡಿಮೆಗೊಳಿಸಲು, ನಾವು ಜೊತೆಯಾಗಿ ಕೆಲಸಮಾಡಿದೆವು. ಒಬ್ಬನು ಸಾಕ್ಷಿನೀಡುತಿದ್ತಾಗ್ದ, ಇನ್ನೊಬ್ಬನು ಅಪಾಯದ ಯಾವುದೇ ಸೂಚನೆಗಳಿಗಾಗಿ ಕಿವಿಗೊಡುತ್ತಿದ್ದನು. ಅನೇಕ ವೇಳೆ ವಾಸದ ಕೊಠಡಿಗಳಿರುವ ಕಟ್ಟಡದಲ್ಲಿನ ಮೇಲಿನ ಒಂದು ಯಾ ಎರಡು ಮನೆಗಳನ್ನು ಸಂದರ್ಶಿಸಿದ ತರುವಾಯ, ಎರಡು ಯಾ ಮೂರು ಬ್ಲಾಕುಗಳಾಚೆ ಹೋಗಿ ಬೇರೊಂದು ಎರಡು ಯಾ ಮೂರು ಮನೆಗಳಲ್ಲಿ ಭೇಟಿನೀಡುತ್ತಿದ್ದೆವು. ಬೈಬಲನ್ನು ವಿಸ್ತಾರವಾಗಿ ಉಪಯೋಗಿಸಿದೆವು, ಮತ್ತು ಆಸಕ್ತ ಜನರಿಗೆ ನೀಡಲು ನಮ್ಮ ಮೇಲಂಗಿಗಳಲ್ಲಿ ತುರುಕಿಸಲ್ಪಟ್ಟ ಕೆಲವು ಪುಸ್ತಿಕೆಗಳನ್ನು ಮಾತ್ರ ನಾವು ಕೊಂಡೊಯ್ದೆವು.
ಮ್ಯಡ್ರಿಡ್ನಲ್ಲಿ ಒಂದು ವರ್ಷದ ತರುವಾಯ, ನಾವು ವಾಯವ್ಯ ಸ್ಪೇನ್ನ ಒಂದು ದೊಡ್ಡ ನಗರವಾದ ವೀಗೊವಿಗೆ ನೇಮಿಸಲ್ಪಟ್ಟೆವು. ಅಲ್ಲಿ ಸಾಕ್ಷಿಗಳೇ ಇರಲಿಲ್ಲ. ಮೊದಲ ಒಂದೆರಡು ತಿಂಗಳುಗಳಲ್ಲಿ, ನಾವು ಪ್ರವಾಸಿಗರೋಪಾದಿ ಭೇಟಿನೀಡುತ್ತಿದ್ದೇವೆಂಬ ಅಭಿಪ್ರಾಯವನ್ನು ಕೊಡುವ ಉದ್ದೇಶದಿಂದ, ನನ್ನ ಹೆಂಡತಿಯು ಸಾಕ್ಷಿಕಾರ್ಯದಲ್ಲಿ ಹೆಚ್ಚಿನ ಭಾಗವನ್ನು ಮಾಡುವಂತೆ ಸೊಸೈಟಿಯು ಶಿಫಾರಸ್ಸು ಮಾಡಿತು. ಅನಾಡಂಬರದ ವಿಧಾನದ ಹೊರತೂ, ನಮ್ಮ ಸಾರುವಿಕೆಯು ಗಮನವನ್ನು ಸೆಳೆಯಿತು. ಒಂದು ತಿಂಗಳೊಳಗೆ, ಕ್ಯಾತೊಲಿಕ್ ಪಾದ್ರಿಗಳು ನಮ್ಮನ್ನು ರೇಡಿಯೊದಲ್ಲಿ ದೂಷಿಸಲಾರಂಭಿಸಿದರು. ಆ ಸಮಯದಲ್ಲಿ ಬಹುಮಟ್ಟಿಗೆ ಬಹಿಷ್ಕೃತ ಪುಸ್ತಕವಾಗಿದ್ದ ಬೈಬಲಿನ ಕುರಿತು ಮಾತಾಡುತ್ತಾ, ಒಬ್ಬ ವಿವಾಹಿತ ದಂಪತಿಗಳು ಮನೆಯಿಂದ ಮನೆಗೆ ಹೋಗುತ್ತಿದ್ದರೆಂದು ತಮ್ಮ ಪ್ರಾಂತದ ನಿವಾಸಿಗಳಿಗೆ ಅವರು ಎಚ್ಚರಿಕೆಯನ್ನು ನೀಡಿದರು. ಪೋಲಿಸರಿಗೆ “ಬೇಕಾದ ದಂಪತಿ” ಗಳಲ್ಲಿ ಒಬ್ಬ ವಿದೇಶಿಯನು ಮತ್ತು ಅವನ ಸ್ಪ್ಯಾನಿಷ್ ಹೆಂಡತಿ ಇದ್ದರು. ಬಹುಮಟ್ಟಿಗೆ ಎಲ್ಲ ಮಾತುಕತೆಯನ್ನು ಆಕೆಯೆ ನಡೆಸುತ್ತಿದ್ದಳು!
ಈ ಅಪಾಯಕಾರಿ ದಂಪತಿಗಳೊಂದಿಗೆ ಕೇವಲ ಮಾತಾಡುವುದೆ ಒಂದು ಪಾಪವಾಗಿತ್ತೆಂದು ಮತ್ತು ಕೂಡಲೇ ಪಾದ್ರಿಯ ಬಳಿ ನಿವೇದಿಸಿಕೊಂಡರೆ ಮಾತ್ರ ಅದು ಕ್ಷಮಿಸಲ್ಪಡುವುದೆಂದು ಪಾದ್ರಿಗಳು ವಿಧಿಸಿದರು. ಒಬ್ಬಾಕೆ ಸ್ತ್ರೀಯೊಂದಿಗೆ ನಡೆಸಿದ ಆನಂದದಾಯಕ ಸಂಭಾಷಣೆಯ ಅಂತ್ಯದಲ್ಲಿ, ನಾವು ಅಪೇಕ್ಷಿಸಿದಂತೆ, ಆಕೆ ಹೋಗಿ ಪಾಪ ನಿವೇದಿಸಬೇಕೆಂದು ನಮ್ಮಲ್ಲಿ ಕ್ಷಮೆಬೇಡುವವಳಂತೆ ಹೇಳಿಕೊಂಡಳು. ನಾವು ಆಕೆಯ ಮನೆಯನ್ನು ಬಿಟ್ಟು ಬರುವಾಗ, ಚರ್ಚಿನ ಕಡೆಗೆ ಆಕೆ ಧಾವಿಸುತ್ತಿರುವುದನ್ನು ನೋಡಿದೆವು.
ಹೊರದೂಡುವಿಕೆ
ವೀಗೊವಿನಲ್ಲಿ ನಮ್ಮ ಆಗಮನದ ಕೇವಲ ಎರಡು ತಿಂಗಳಿನ ತರುವಾಯ, ಪೋಲಿಸರು ದಾಳಿಮಾಡಿದರು. ನಮ್ಮನ್ನು ಸೆರೆಹಿಡಿದ ಪೋಲಿಸು ದಳದವನು ಸಹಾನುಭೂತಿಯುಳ್ಳವನಾಗಿದ್ದನು ಮತ್ತು ಪೋಲಿಸ್ ಠಾಣೆಗೆ ಕೈಕೊಂಡ ಸಂಚಾರಕ್ಕೆ ನಮಗೆ ಬೇಡಿ ತೊಡಿಸಲಿಲ್ಲ. ಠಾಣೆಯಲ್ಲಿ ಒಂದು ಪರಿಚಿತ ಮುಖವನ್ನು ನಾವು ನೋಡಿದೆವು, ನಾವು ಇತ್ತೀಚೆಗೆ ಸಾಕ್ಷಿನೀಡಿದ್ದ ಒಬ್ಬಾಕೆ ಟೈಪಿಸ್ಟ್. ನಮ್ಮೊಂದಿಗೆ ಅಪರಾಧಿಗಳ ಹಾಗೆ ವರ್ತಿಸುತ್ತಿದ್ದುದನ್ನು ನೋಡಿ ಆಕೆ ಸ್ಪಷ್ಟವಾಗಿಗಿ ಪೇಚಾಡಿದಳು ಮತ್ತು ಆಕೆ ನಮ್ಮ ಮೇಲೆ ತಪ್ಪು ಹೊರಿಸಿರಲಿಲ್ಲವೆಂದು ದೃಢಪಡಿಸಲು ಆತುರಪಟ್ಟಳು. ಆದರೂ, “ಸ್ಪೇನ್ನ ಆತ್ಮಿಕ ಐಕ್ಯವನ್ನು” ವಿಪತ್ತಿಗೆ ತರುವುದರ ಕುರಿತು ನಮ್ಮ ಮೇಲೆ ಆರೋಪ ಹಾಕಲಾಯಿತು, ಮತ್ತು ಆರು ವಾರಗಳ ನಂತರ ನಮಗೆ ಗಡೀಪಾರಾಯಿತು.
ಅದೊಂದು ಪ್ರತಿಬಂಧವಾಗಿತ್ತು, ಆದರೆ ಬಿಟ್ಟುಕೊಡುವುದರ ಯಾವ ಉದ್ದೇಶವೂ ನಮಗಿರಲಿಲ್ಲ. ಐಬೀರಿಯನ್ ದ್ವೀಪಕಲ್ಪದಲ್ಲಿ ಮಾಡಲು ಇನ್ನೂ ಬಹಳಷ್ಟು ಕೆಲಸವಿತ್ತು. ಮೂರು ತಿಂಗಳು ಟ್ಯಾಂಜಿರ್ನಲ್ಲಿದ್ದ ಬಳಿಕ, ನಾವು ಮತ್ತೊಂದು ಕೆಲಸಮಾಡಿರದ ಟೆರಿಟೊರಿಯಾದ ಜಿಬ್ರಾಲ್ಟರ್ಗೆ ನೇಮಿಸಲ್ಪಟ್ಟೆವು. ಅಪೊಸ್ತಲ ಪೌಲನು ಹೇಳುವಂತೆ, ನಮ್ಮ ಶುಶ್ರೂಷೆಯನ್ನು ನಾವು ಮೌಲ್ಯದ್ದೆಂದೆಣಿಸಿದರೆ, ಕೆಲಸಮಾಡುವುದನ್ನು ನಾವು ಮುಂದುವರಿಸುವೆವು ಮತ್ತು ಬಹುಮಾನಿಸಲ್ಪಡುವೆವು. (2 ಕೊರಿಂಥ 4:1, 7, 8) ಇದು ನಮ್ಮ ವಿಷಯದಲ್ಲಿ ಸತ್ಯವಾಗಿ ಪರಿಣಮಿಸಿತು. ಜಿಬ್ರಾಲ್ಟರ್ನಲ್ಲಿ ನಾವು ಸಂದರ್ಶಿಸಿದ ಪ್ರಥಮ ಮನೆಯಲ್ಲಿಯೇ, ಇಡೀ ಕುಟುಂಬದೊಂದಿಗೆ ನಾವು ಬೈಬಲ್ ಅಧ್ಯಯನವನ್ನು ಆರಂಭಿಸಿದೆವು. ಬೇಗನೆ ನಮ್ಮಲ್ಲಿ ಪ್ರತಿಯೊಬ್ಬರೂ 17 ಅಭ್ಯಾಸಗಳನ್ನು ನಡೆಸುತ್ತಿದ್ದೆವು. ನಾವು ಯಾರೊಂದಿಗೆ ಅಭ್ಯಸಿಸಿದೆವೊ ಅವರಲ್ಲಿ ಅನೇಕ ವ್ಯಕ್ತಿಗಳು ಸಾಕ್ಷಿಗಳಾದರು, ಮತ್ತು ಎರಡು ವರ್ಷಗಳಲ್ಲಿ 25 ಪ್ರಚಾರಕರ ಒಂದು ಸಭೆ ಅಲ್ಲಿತ್ತು.
ಆದರೆ, ವೀಗೊವಿನಲ್ಲಿ ಮಾಡಿದಂತೆ, ಪಾದ್ರಿಗಳು ನಮ್ಮ ವಿರುದ್ಧ ಚಳವಳಿ ಪ್ರಾರಂಭಿಸಿದರು. ನಾವು “ಒಪ್ಪಿಗೆಗೆ ಅಪಾತ್ರರು” ಎಂದು ಜಿಬ್ರಾಲ್ಟರ್ನ ಆ್ಯಂಗ್ಲಿಕನ್ ಬಿಷಪ್ ಪೋಲಿಸರ ಮುಖ್ಯಸ್ಥನಿಗೆ ಎಚ್ಚರಿಕೆ ನೀಡಿದನು, ಮತ್ತು ಅವನ ಪ್ರಭಾವ ಬೀರುವಿಕೆಯು ಕಟ್ಟಕಡೆಗೆ ಪ್ರತಿಫಲಗಳನ್ನು ತಂದಿತು. ಜನವರಿ 1962 ರಲ್ಲಿ ನಾವು ಜಿಬ್ರಾಲ್ಟರ್ನಿಂದ ಹೊರದೂಡಲ್ಪಟ್ಟೆವು. ಮುಂದೆ ನಾವು ಎಲ್ಲಿಗೆ ಹೋಗುವೆವು? ಸ್ಪೇನ್ನಲ್ಲಿ ಅಗತ್ಯವು ಇನ್ನೂ ಮಹತ್ತರವಾಗಿತ್ತು, ಆದುದರಿಂದ ನಮ್ಮ ಹಿಂದಿನ ಪೋಲಿಸ್ ದಾಖಲೆಯು ಎಲ್ಲಿಯೊ ಮರೆಯಾಗಿ ಹೋಗಿರಬಹುದೆಂದು ನಿರೀಕ್ಷಿಸುತ್ತಾ, ನಾವು ಸ್ಪೇನ್ಗೆ ಹಿಂದಿರುಗಿದೆವು.
ಪ್ರಕಾಶಮಾನ ನಗರವಾದ ಸೆವಿಲ್ ನಮ್ಮ ಹೊಸ ಮನೆಯಾಯಿತು. ಅಲ್ಲಿ ನಮಗೆ ಮತ್ತೊಬ್ಬ ಪಯನೀಯರ್ ದಂಪತಿಗಳಾದ ರೇ ಮತ್ತು ಪ್ಯಾಟ್ ಕರ್ಕ್ಅಪ್ ಅವರೊಂದಿಗೆ ನಿಕಟವಾಗಿ ಕೆಲಸಮಾಡುವ ಆನಂದವಿತ್ತು. ಸೆವಿಲ್ ಐದು ಲಕ್ಷ ನಿವಾಸಿಗಳ ಪಟ್ಟಣವಾಗಿದ್ದರೂ, ಕೇವಲ 21 ಪ್ರಚಾರಕರಿದ್ದರು, ಆದುದರಿಂದ ಮಾಡಲು ಬಹಳಷ್ಟು ಕೆಲಸವಿತ್ತು. ಈಗ 1,500 ಪ್ರಚಾರಕರಿರುವ 15 ಸಭೆಗಳು ಅಲ್ಲಿವೆ. ಒಂದು ವರ್ಷದ ನಂತರ, ನಮಗೊಂದು ಹಿತಕರವಾದ ಆಶ್ಚರ್ಯವು ಕಾದಿತ್ತು; ಬಾರ್ಸಲೋನಾ ಕ್ಷೇತ್ರದಲ್ಲಿ ಸಂಚರಣ ಕೆಲಸದಲ್ಲಿ ಸೇವೆ ಸಲ್ಲಿಸಲು ನಾವು ಆಮಂತ್ರಿಸಲ್ಪಟ್ಟೆವು.
ನಮ್ಮ ಕೆಲಸವು ನ್ಯಾಯಬದ್ಧವಾದ ಮನ್ನಣೆಯನ್ನು ಪಡೆಯದಿರುವ ದೇಶದಲ್ಲಿನ ಸರ್ಕಿಟ್ ಕೆಲಸವು ಸ್ವಲ್ಪಮಟ್ಟಿಗೆ ಭಿನ್ನವಾಗಿತ್ತು. ಪ್ರತಿವಾರ ನಾವು ಸಣ್ಣ ಗುಂಪುಗಳನ್ನು ಭೇಟಿಯಾದೆವು, ಅವುಗಳಲ್ಲಿ ಹೆಚ್ಚಿನ ಗುಂಪುಗಳು ಬಹಳ ಕೊಂಚ ಸಮರ್ಥ ಸಹೋದರರನ್ನು ಪಡೆದಿದ್ದವು. ನಮಗೆ ಕೊಡಲು ಸಾಧ್ಯವಿದ್ದ ಎಲ್ಲ ತರಬೇತಿ ಮತ್ತು ಬೆಂಬಲದ ಅಗತ್ಯ ಈ ಕಷ್ಟಪಟ್ಟು ಕೆಲಸಮಾಡುವ ಸಹೋದರರಿಗೆ ಇತ್ತು. ಈ ನೇಮಕವನ್ನು ನಾವು ಇಷ್ಟಪಟ್ಟೆವು! ಕೊಂಚವೇ ಸಾಕ್ಷಿಗಳಿದ್ದ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳನ್ನು ವ್ಯಯಿಸಿದ ತರುವಾಯ, ಅನೇಕ ವಿಭಿನ್ನ ಸಹೋದರ ಸಹೋದರಿಯರನ್ನು ಸಂದರ್ಶಿಸಲು ನಾವು ಹರ್ಷಿಸಿದೆವು. ಇನ್ನೂ ಹೆಚ್ಚಾಗಿ, ಬಾರ್ಸಲೋನಾದಲ್ಲಿ ಸಾರುವ ಕೆಲಸವು ಸುಲಭವಾಗಿತ್ತು, ಮತ್ತು ಅನೇಕ ಜನರು ಬೈಬಲನ್ನು ಅಭ್ಯಸಿಸಲು ಬಯಸಿದರು.
ಖಿನ್ನತೆಯನ್ನು ಜಯಿಸುವುದು
ಆದರೆ, ಕೇವಲ ಆರು ತಿಂಗಳುಗಳ ಬಳಿಕ, ನನ್ನ ಜೀವಿತವು ನಾಟಕೀಯವಾಗಿ ಬದಲಾಯಿತು. ಸಮುದ್ರಪಕ್ಕದಲ್ಲಿನ ನಮ್ಮ ಪ್ರಥಮ ರಜೆಯು, ಆರಂಭದಲ್ಲಿ ವರ್ಣಿಸಲಾದ ಅಪಘಾತಕ್ಕೆ ನಾನು ಈಡಾದಾಗ ಬಹುಮಟ್ಟಿಗೆ ಒಂದು ದುರಂತವಾಗಿ ಪರಿಣಮಿಸಿತು. ಬಹುಮಟ್ಟಿಗೆ ಮುಳುಗಿ ಸಾಯುವುದರ ಧಕ್ಕೆಯಿಂದ ನಾನು ಶಾರೀರಿಕವಾಗಿ ಬಹಳ ಬೇಗನೆ ಚೇತರಿಸಿಕೊಂಡೆ, ಆದರೂ ಆ ಘಟನೆಯು ನನ್ನ ನರವ್ಯೂಹದ ಮೇಲೆ ಅಳಿಸಲಾರದ ಗುರುತನ್ನು ಬಿಟ್ಟುಹೋಯಿತು.
ಕೆಲವು ತಿಂಗಳುಗಳ ಕಾಲ ಸರ್ಕಿಟ್ ಕೆಲಸದಲ್ಲಿ ಮುಂದುವರಿಯಲು ನಾನು ಹೆಣಗಾಡಿದೆ, ಆದರೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ನಾನು ಅಂತಿಮವಾಗಿ ಇಂಗ್ಲೆಂಡ್ಗೆ ಹಿಂದಿರುಗಬೇಕಾಯಿತು. ಎರಡು ವರ್ಷಗಳ ತರುವಾಯ ಸ್ಪೇನ್ಗೆ ಹಿಂದಿರುಗಲು ಸಾಧ್ಯವಾಗುವಷ್ಟು ನಾನು ಚೇತರಿಸಿಕೊಂಡೆ. ಅಲ್ಲಿ ನಾವು ಮತ್ತೊಮ್ಮೆ ಸರ್ಕಿಟ್ ಕೆಲಸವನ್ನು ಆರಂಭಿಸಿದೆವು. ಆದರೂ, ಅದು ಸ್ವಲ್ಪ ಸಮಯಕ್ಕಾಗಿ ಮಾತ್ರ ಇತ್ತು. ನನ್ನ ಹೆಂಡತಿಯ ಹೆತ್ತವರು ಗಂಭೀರವಾಗಿ ಅಸ್ವಸ್ಥರಾದರು ಮತ್ತು ಅವರನ್ನು ನೋಡಿಕೊಳ್ಳಲು ನಾವು ಪೂರ್ಣ ಸಮಯದ ಸೇವೆಯನ್ನು ಬಿಟ್ಟೆವು.
1968 ರಲ್ಲಿ ನಾನು ಸಂಪೂರ್ಣ ನರವ್ಯೂಹದ ಕುಸಿತವನ್ನು ಅನುಭವಿಸಿದಾಗ, ಜೀವಿತವು ಹೆಚ್ಚು ಕಷ್ಟಕರವಾಯಿತು. ನಾನು ಎಂದೂ ಚೇತರಿಸೆನು ಎಂದು ರಾಫಾಎಲಾ ಮತ್ತು ನಾನು, ಇಬ್ಬರೂ ನೆನಸಿದ ಸಮಯಗಳಿದ್ದವು. ಅದು ನಾನು ಪುನಃ, ಭಿನ್ನವಾದೊಂದು ವಿಧದಲ್ಲಿ ಮುಳುಗಿ ಸಾಯುವಂತಿತ್ತು! ನಕಾರಾತ್ಮಕ ಅನಿಸಿಕೆಗಳ ಮೂಲಕ ಪರವಶನಾಗುವಂತೆ ಮಾಡುವುದನ್ನು ಹೊರತುಪಡಿಸಿ, ಖಿನ್ನತೆಯು ನನ್ನ ಎಲ್ಲ ಬಲವನ್ನು ನನ್ನಿಂದ ಕಸಿದುಕೊಂಡಿತು. ಅತಿರೇಕ ಆಯಾಸದ ಸರದಿಗಳನ್ನು ನಾನು ಅನುಭವಿಸಿದೆ, ಇದು ಬಹುಮಟ್ಟಿಗೆ ಸತತವಾಗಿ ವಿಶ್ರಾಂತಿಸುವಂತೆ ನನ್ನನ್ನು ಒತ್ತಯಾಪಡಿಸಿತು. ಆ ಸಮಯದಲ್ಲಿ ಈ ರೀತಿಯ ಸಮಸ್ಯೆಯನ್ನು ಎಲ್ಲ ಸಹೋದರರು ಅರ್ಥಮಾಡಿಕೊಳ್ಳಲಿಲ್ಲ; ಆದರೆ ಯೆಹೋವನು ಅರ್ಥಮಾಡಿಕೊಳ್ಳುತ್ತಾನೆಂದು ನನಗೆ ಗೊತ್ತಿತ್ತು. ಖಿನ್ನರಾಗಿರುವವರಿಗೆ ಬಹಳಷ್ಟು ಸಹಾನುಭೂತಿ ತೋರಿಸುವ ಮತ್ತು ಸಹಾಯಕಾರಿಯಾಗಿರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿನ ಅದ್ಭುತಕರ ಲೇಖನಗಳನ್ನು ಓದುವುದು, ನನಗೆ ಮಹಾ ಸಂತೃಪ್ತಿಯನ್ನು ಒದಗಿಸಿದೆ.
ಈ ಕಠಿನ ಸಮಯದ ಉದ್ದಕ್ಕೂ, ನನ್ನ ಹೆಂಡತಿ ಉತ್ತೇಜನದ ನಿರಂತರ ಮೂಲವಾಗಿದ್ದಳು. ಸಮಸ್ಯೆಗಳನ್ನು ಒಟ್ಟಿಗೆ ನಿಭಾಯಿಸುವುದು ನಿಜವಾಗಿಯೂ ವಿವಾಹ ಬಂಧವನ್ನು ಬಲಪಡಿಸುತ್ತದೆ. ರಾಫಾಎಲಾಳ ಹೆತ್ತವರು ಮರಣ ಹೊಂದಿದರು, ಮತ್ತು 12 ವರ್ಷಗಳ ತರುವಾಯ, ಪೂರ್ಣ ಸಮಯದ ಸೇವೆಗೆ ನಾವು ಹಿಂದಿರುಗಬಹುದೆಂದು ನಮಗನಿಸುವ ಮಟ್ಟಕ್ಕೆ ನನ್ನ ಆರೋಗ್ಯವು ಉತ್ತಮಗೊಂಡಿತು. 1981 ರಲ್ಲಿ, ನಮಗೆ ಆಶ್ಚರ್ಯ ಹಾಗೂ ಹರ್ಷವಾಗುವಂತೆ, ಪುನಃ ಸರ್ಕಿಟ್ ಕೆಲಸದಲ್ಲಿ ಸೇವಿಸುವಂತೆ ನಾವು ಆಮಂತ್ರಿಸಲ್ಪಟ್ಟೆವು.
ಸಂಚರಣಾ ಶುಶ್ರೂಷೆಯಲ್ಲಿ ನಮ್ಮ ಹಿಂದಿನ ಅನುಭವದ ಸಮಯದಂದಿನಿಂದ ಸ್ಪೇನ್ನಲ್ಲಿ ಮಹತ್ತರವಾದ ದೇವಪ್ರಭುತ್ವ ಬದಲಾವಣೆಗಳು ಆಗಿದ್ದವು. ಸಾರುವಿಕೆಗೆ ಈಗ ಸ್ವಾತಂತ್ರ್ಯವಿತ್ತು, ಆದುದರಿಂದ ಹೊಸ ಪರಿಸ್ಥಿತಿಗಳೊಂದಿಗೆ ನಾನು ಪರಿಚಿತನಾಗಬೇಕಿತ್ತು. ಆದರೂ, ಮತ್ತೊಮ್ಮೆ ಸರ್ಕಿಟ್ ಮೇಲ್ವಿಚಾರಕನೋಪಾದಿ ಸೇವೆ ಸಲ್ಲಿಸುವುದು ಒಂದು ಮಹಾ ಸುಯೋಗವಾಗಿತ್ತು. ಕಠಿನ ಪರಿಸ್ಥಿತಿಗಳ ಹೊರತೂ ಪಯನೀಯರ್ ಸೇವೆಮಾಡಿದ್ದು, ಸಮಸ್ಯೆಗಳಿದ್ದ ಪಯನೀಯರರನ್ನು ಉತ್ತೇಜಿಸಲು ನಮ್ಮನ್ನು ಶಕ್ತರನ್ನಾಗಿ ಮಾಡಿತು. ಮತ್ತು ಪಯನೀಯರ್ ಪಂಕ್ತಿಗಳನ್ನು ಇತರರು ಸೇರುವಂತೆ ಸಹಾಯ ಮಾಡಲು ನಾವು ಅನೇಕ ವೇಳೆ ಶಕ್ತರಾಗಿದ್ದೆವು.
ಮ್ಯಡ್ರಿಡ್ ಮತ್ತು ಬಾರ್ಸಲೋನಾದಲ್ಲಿ 11 ವರ್ಷಗಳ ಸಂಚರಣ ಕೆಲಸದ ತರುವಾಯ, ಮತ್ತೊಮ್ಮೆ ನ್ಯೂನ ಆರೋಗ್ಯವು ನೇಮಕಗಳನ್ನು ಬದಲಾಯಿಸುವುದನ್ನು ಅವಶ್ಯಪಡಿಸಿತು. ನಾನು ಎಲ್ಲಿ ಒಬ್ಬ ಹಿರಿಯನೋಪಾದಿ ಸಹಾಯಕಾರಿಯಾಗಿರಸಾಧ್ಯವಿತ್ತೊ ಆ ಸ್ಯಾಲಮನ್ಕದ ನಗರಕ್ಕೆ ನಾವು ವಿಶೇಷ ಪಯನೀಯರರೋಪಾದಿ ನೇಮಿಸಲ್ಪಟ್ಟೆವು. ಸ್ಯಾಲಮನ್ಕದ ಸಹೋದರರು ನಮ್ಮನ್ನು ಕೂಡಲೇ ಸ್ವಾಗತಿಸಿದರು. ಒಂದು ವರ್ಷದ ತರುವಾಯ ಇನ್ನೊಂದು ಸಂದಿಗ್ಧ ಸಮಯವು ನಮ್ಮ ತಾಳ್ಮೆಯನ್ನು ಪರೀಕೆಗ್ಷೆ ಹಾಕಲಿತ್ತು.
ರಾಫಾಎಲಾ ವಿವರಿಸಲಾಗದಂತಹ ರೀತಿಯಲ್ಲಿ ಬಹಳ ರಕ್ತಹೀನಳಾದಳು, ಮತ್ತು ಆಕೆಗೆ ದೊಡ್ಡ ಕರುಳಿನ ಕ್ಯಾನ್ಸರ್ ಇದೆಯೆಂದು ಪರೀಕ್ಷೆಗಳು ಪ್ರಕಟಿಸಿದವು. ಈಗ ನಾನು ಪ್ರಬಲನಾಗಿ, ನನ್ನ ಹೆಂಡತಿಗೆ ನನ್ನಿಂದ ಸಾಧ್ಯವಾದ ಎಲ್ಲ ಬೆಂಬಲವನ್ನು ಕೊಡಬೇಕಾಗಿತ್ತು. ನಮ್ಮ ಪ್ರಥಮ ಪ್ರತಿಕ್ರಿಯೆಯು ಅವಿಶ್ವಾಸವಾಗಿತ್ತು, ಅದನ್ನು ಭಯವು ಹಿಂಬಾಲಿಸಿತು. ರಾಫಾಎಲಾ ಇದರಿಂದ ಬದುಕಿ ಉಳಿಯುವಳೊ? ಈ ರೀತಿಯ ಸಮಯಗಳಲ್ಲಿ, ಮುಂದುವರಿಯುವಂತೆ ಸಹಾಯಮಾಡುವಂತಹದ್ದು, ಯೆಹೋವನಲ್ಲಿ ಸಂಪೂರ್ಣ ಭರವಸೆಯೇ. ರಾಫಾಎಲಾಳ ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆಯಿತು ಎಂದು ಹೇಳಲು ನಾನು ಸಂತೋಷಿಸುತ್ತೇನೆ, ಮತ್ತು ಕ್ಯಾನ್ಸರ್ ಪುನಃ ಮರಳುವುದಿಲ್ಲವೆಂದು ನಾವು ನಿರೀಕ್ಷಿಸುತ್ತೇವೆ.
ನಾವು ಸ್ಪೇನ್ನಲ್ಲಿ ಕಳೆದ 36 ವರ್ಷಗಳ ಸಮಯದಲ್ಲಿ ಏರು ಬೀಳುಗಳನ್ನು ಅನುಭವಿಸಿದ್ದರೂ, ಆತ್ಮಿಕ ಬೆಳವಣಿಗೆಯ ಈ ಸಮಯದಲ್ಲಿ ಜೀವಿಸುವುದು ಹುರಿದುಂಬಿಸುವಂಥದ್ದಾಗಿದೆ. 1958 ರಲ್ಲಿನ ಸುಮಾರು 800 ಪ್ರಚಾರಕರ ಆ ಸಣ್ಣ ಗುಂಪು ಇಂದಿನ 1,00,000 ಕ್ಕಿಂತಲೂ ಅಧಿಕ ಪ್ರಚಾರಕರ ಸೇನೆಯಾಗಿ ಬೆಳೆಯುವುದನ್ನು ನಾವು ನೋಡಿದ್ದೇವೆ. ನಮ್ಮ ಕಷ್ಟಗಳು ನಮ್ಮ ಅನೇಕ ಆನಂದಗಳಿಂದ ಅತಿಶಯಿಸಲ್ಪಟ್ಟಿವೆ—ಇತರರು ಸತ್ಯವನ್ನು ಸ್ವೀಕರಿಸುವಂತೆ ಮತ್ತು ಆತ್ಮಿಕವಾಗಿ ಪ್ರೌಢರಾಗುವಂತೆ ಸಹಾಯಮಾಡುವುದು, ಗಂಡ ಹೆಂಡತಿಯರೋಪಾದಿ ಜೊತೆಗೆ ಕೆಲಸಮಾಡುವುದು, ಮತ್ತು ಸಾಧ್ಯವಾದ ಅತ್ಯುತ್ತಮ ವಿಧಾನದಲ್ಲಿ ನಮ್ಮ ಜೀವಿತಗಳನ್ನು ನಾವು ಉಪಯೋಗಿಸಿದ್ದೇವೆಂಬ ಅನಿಸಿಕೆಯನ್ನು ಹೊಂದಿರುವುದು.
ಕೊರಿಂಥದವರಿಗೆ ಬರೆದ ತನ್ನ ಎರಡನೆಯ ಪತ್ರದಲ್ಲಿ ಪೌಲನು ಹೇಳುವುದು: “ನಮಗೆ ತೋರಿಸಲಾದ ಕರುಣೆಗನುಸಾರ ಈ ಶುಶ್ರೂಷೆಯನ್ನು ನಾವು ಪಡೆದಿರುವುದರಿಂದ, ನಾವು ಬಿಟ್ಟುಕೊಡುವುದಿಲ್ಲ.” (2 ಕೊರಿಂಥ 4:1, NW) ಹಿಂದಿರುಗಿ ನೋಡುವಾಗ, ಬಿಟ್ಟುಕೊಡುವುದರಿಂದ ನನ್ನನ್ನು ತಡೆದಂತಹ ಹಲವಾರು ಅಂಶಗಳು ನನ್ನ ಜೀವಿತದಲ್ಲಿ ಇದ್ದವೆಂದು ನಾನು ನಂಬುತ್ತೇನೆ. ನನ್ನ ರೂಪುಗೊಳ್ಳುವ ವರ್ಷಗಳಲ್ಲಿ ನನ್ನಲ್ಲಿ ಆಸಕ್ತಿವಹಿಸಿದ ನಂಬಿಗಸ್ತ ಅಭಿಷಿಕ್ತ ಸಹೋದರರ ಉದಾಹರಣೆಯು, ಒಂದು ಉತ್ತಮ ಅಡಿಪಾಯವನ್ನು ಒದಗಿಸಿತು. ಅದೇ ಆತ್ಮಿಕ ಗುರಿಗಳನ್ನು ಹಂಚಿಕೊಳ್ಳುವ ಸಂಗಾತಿ ಇರುವುದು ಅದ್ಭುತಕರವಾದ ಸಹಾಯವಾಗಿದೆ; ನಾನು ಖಿನ್ನನಾದಾಗ, ರಾಫಾಎಲಾ ನನ್ನನ್ನು ಉತ್ತೇಜಿಸುತ್ತಿದ್ದಳು, ಮತ್ತು ನಾನು ಆಕೆಗೆ ಅದನ್ನೇ ಮಾಡಿದ್ದೇನೆ. ಹಾಸ್ಯ ಪ್ರಜ್ಞೆಯು ಕೂಡ ಮಹಾ ಸ್ವತಾಗ್ತಿದೆ. ಸಹೋದರರೊಂದಿಗೆ ನಗಲು ಮತ್ತು ನಮ್ಮ ವಿಷಯದಲ್ಲಿಯೇ ನಗಲು ಶಕ್ತರಾಗಿರುವುದು ಯಾವುದೊ ರೀತಿಯಲ್ಲಿ ಸಮಸ್ಯೆಗಳನ್ನು ಕಡಿಮೆ ಪರವಶಗೊಳಿಸುವಂಥವುಗಳಾಗಿ ತೋರುವಂತೆ ಮಾಡುತ್ತದೆ.
ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಪರೀಕ್ಷೆಗಳ ಎದುರಿನಲ್ಲಿ ತಾಳ್ಮೆಯು ಯೆಹೋವನ ಬಲವನ್ನು ಕೇಳಿಕೊಳ್ಳುತ್ತದೆ. ನಾನು ಯಾವಾಗಲೂ ಪೌಲನ ಮಾತುಗಳನ್ನು ಜ್ಞಾಪಿಸಿಕೊಳ್ಳುತ್ತೇನೆ: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” ನಮ್ಮ ಪಕ್ಷದಲ್ಲಿ ಯೆಹೋವನು ಇರುವುದರಿಂದ, ನಮಗೆ ಎಂದಿಗೂ ಬಿಟ್ಟುಕೊಡುವುದರ ಅಗತ್ಯವಿರುವುದಿಲ್ಲ.—ಫಿಲಿಪ್ಪಿ 4:13.
[ಪುಟ 23 ರಲ್ಲಿರುವ ಚಿತ್ರಗಳು]
1958 ರಲ್ಲಿ ರಾನಲ್ಡ್ ಮತ್ತು ರಾಫಾಎಲಾ ಟೇಲರ್
[ಪುಟ 24,25 ರಲ್ಲಿರುವ ಚಿತ್ರಗಳು]
ನಿಷೇಧದ ಕೆಳಗೆ ಸ್ಪೇನ್ನಲ್ಲಿ ಕೂಡಿಬರುವುದು (1969)