ದ್ವೇಷವು ಎಂದಾದರೂ ಕೊನೆಗೊಳ್ಳುವುದೊ?
ನೀವು ಕೆಲವೇ ಟಿವಿ ವಾರ್ತಾ ಪ್ರಸಾರಗಳನ್ನು ವೀಕ್ಷಿಸಿದರೂ, ದ್ವೇಷಕ್ಕೆ ನೀವು ಅಪರಿಚಿತರಾಗಿರುವುದಿಲ್ಲ. ಈ ಲೋಕದಲ್ಲಿ ಬಹುಮಟ್ಟಿಗೆ ದಿನನಿತ್ಯ ಕ್ರೌರ್ಯದ ಜಾಡನ್ನು ಬಿಟ್ಟುಹೋಗುವಂತೆ ತೋರುವ ಕಗ್ಗೊಲೆಗಳಿಗೆ ಒತ್ತನ್ನೀಯುವ ಸಾಮಾನ್ಯ ವಿಶಿಷ್ಟ ಸ್ವಭಾವವು ದ್ವೇಷವಾಗಿದೆ. ಬೆಲ್ಫಾಸಿನ್ಟಿಂದ ಬಾಸ್ನಿಯದ ತನಕ, ಜೆರೂಸಲೇಮಿನಿಂದ ಜೊಹಾನೆಸ್ಬರ್ಗಿನ ತನಕ ನಿರ್ಭಾಗ್ಯ ಪ್ರೇಕ್ಷಕರು ಕೊಲೆಗೈಯಲ್ಪಡುತ್ತಾರೆ.
ಬಲಿಪಶುಗಳು ಸಾಮಾನ್ಯವಾಗಿ ತಮ್ಮ ಘಾತಕರಿಗೆ ಅಪರಿಚಿತರು. ಅವರ ಒಂದೆ “ಪಾತಕ” ಪ್ರಾಯಶಃ ಅವರು “ವಿರುದ್ಧ ಪಕ್ಷ”ಕ್ಕೆ ಸೇರಿದವರಾಗಿರುವುದೇ. ಒಂದು ಭೀಕರ ವಿನಿಮಯದಲ್ಲಿ ಅಂತಹ ಕೊಲೆಗಳು ಮುಂಚಿನ ಕೆಲವು ಘೋರಕೃತ್ಯಕ್ಕಾಗಿ ಪ್ರತೀಕಾರವಾಗಿದ್ದೀತು, ಇಲ್ಲವೆ “ಕುಲವರ್ಣೀಯರನ್ನು ತೊಡೆದುಹಾಕುವ” ಒಂದು ವಿಧಾನವಾಗಿ ಇರಬಹುದು. ಹಿಂಸಾಚಾರದ ಪ್ರತಿಯೊಂದು ಸರದಿಯು, ವಿರೋಧಿ ಗುಂಪುಗಳ ನಡುವಣ ದ್ವೇಷದ ಜ್ವಾಲೆಗಳನ್ನು ಕೆರಳಿಸುವ ಸಾಧನವಾಗುತ್ತದೆ.
ದ್ವೇಷದ ಈ ಭೀತಿಕಾರಕ ಆವರ್ತನೆಗಳು ವೃದ್ಧಿಯಾಗುತ್ತಾ ಬರುವಂತೆ ಕಾಣುತ್ತಿದೆ. ರಕ್ತಸಂಬಂಧಿ ಮನೆತನಗಳ ಕಲಹಗಳು ಕುಲಗಳ, ಜಾತಿಗಳ, ಮತ್ತು ವರ್ಣೀಯ ಅಥವಾ ಧಾರ್ಮಿಕ ಗುಂಪುಗಳ ನಡುವೆ ಹೊರಕಾರುತ್ತಾ ಇವೆ. ದ್ವೇಷವನ್ನೆಂದಾದರೂ ನಿರ್ಮೂಲಗೊಳಿಸಲು ಸಾಧ್ಯವೆ? ಇದನ್ನು ಉತ್ತರಿಸುವುದಕ್ಕೆ ದ್ವೇಷದ ಕಾರಣಗಳನ್ನು ತಿಳಿದುಕೊಳ್ಳುವ ಅಗತ್ಯ ನಮಗಿದೆ ಯಾಕಂದರೆ ನಾವು ಹಗೆಮಾಡುವ ಸಹಜ ಪ್ರವೃತ್ತಿಯೊಂದಿಗೆ ಜನಿಸಲಿಲ್ಲ.
ದ್ವೇಷದ ಬೀಜಗಳನ್ನು ಹಾಕುವುದು
ಸಾರಯೆವೊದ ಸಾಟ್ಲಾ ಫಿಲಿಪೋವಿಚ್ ಎಂಬ ಎಳೆಯ ಬಾಸ್ನಿಯದ ಹುಡುಗಿಯು ಇನ್ನೂ ದ್ವೇಷಿಸಲು ಕಲಿತಿರುವುದಿಲ್ಲ. ತನ್ನ ದಿನಚರಿ ಪಟ್ಟಿಯಲ್ಲಿ ಕುಲವರ್ಣೀಯ ಹಿಂಸಾಚಾರದ ಕುರಿತು ಆಕೆ ನಿರರ್ಗಳವಾಗಿ ಬರೆಯುತ್ತಾಳೆ: “ಯಾಕೆ? ಏತಕ್ಕಾಗಿ? ತಪ್ಪು ಯಾರದು? ಎಂದು ನಾನು ಕೇಳುತ್ತಾ ಇರುತ್ತೇನೆ. ಕೇಳುತ್ತೇನೆ ಆದರೆ ಯಾವ ಉತ್ತರವೂ ಇಲ್ಲ. . . . ನನ್ನ ಗೆಳತಿಯರಲ್ಲಿ, ನಮ್ಮ ಸ್ನೇಹಿತರಲ್ಲಿ, ನಮ್ಮ ಕುಟುಂಬದಲ್ಲಿ ಸರ್ಬರು, ಕ್ರೊಆ್ಯಟರು ಮತ್ತು ಮುಸ್ಲಿಮರು ಇದ್ದಾರೆ. . . . ನಾವು ಒಳ್ಳೆಯವರೊಂದಿಗೆ ಸಹವಾಸಿಸುತ್ತೇವೆ, ಕೆಟ್ಟವರೊಂದಿಗಲ್ಲ. ಮತ್ತು ಒಳ್ಳೆಯವರಲ್ಲಿ ಸರ್ಬರು, ಕ್ರೊಆ್ಯಟರು ಮತ್ತು ಮುಸ್ಲಿಮರು ಇರುವಂತೆಯೆ ಕೆಟ್ಟವರಲ್ಲೂ ಇದ್ದಾರೆ.”
ಇನ್ನೊಂದು ಕಡೆ, ಅನೇಕ ಪ್ರೌಢರಾದರೊ, ಬೇರೆ ರೀತಿಯಲ್ಲಿ ಯೋಚಿಸುತ್ತಾರೆ. ದ್ವೇಷಿಸಲು ತಮಗೆ ಹೇರಳ ಕಾರಣವಿದೆಯೆಂದು ಅವರು ನಂಬುತ್ತಾರೆ. ಯಾಕೆ?
ಅನ್ಯಾಯ. ಬಹುಶಃ ದ್ವೇಷದ ಪ್ರಧಾನ ಉದ್ದೀಪಕವು ಅನ್ಯಾಯ ಮತ್ತು ದಬ್ಬಾಳಿಕೆ. ಬೈಬಲು ಅನ್ನುವಂತೆ, “ಬರಿಯ ದಬ್ಬಾಳಿಕೆ ಜ್ಞಾನಿಯನ್ನು ಬುದ್ಧಿಗೇಡಿಯನ್ನಾಗಿ ಮಾಡೀತು.” (ಪ್ರಸಂಗಿ 7:7, NW) ಜನರು ಬಲಿಪಶುಗಳಾಗಿ ಅಥವಾ ಪಶುಪ್ರಾಯರಾಗಿ ಮಾಡಲ್ಪಡುವಾಗ, ಹಿಂಸಕರ ಕಡೆಗೆ ದ್ವೇಷವನ್ನು ವಿಕಸಿಸುವುದು ಅವರಿಗೆ ಸುಲಭ. ಮತ್ತು ಅದು ಅಸಮಂಜಸ ಅಥವಾ “ಬುದ್ಧಿಗೇಡಿ” ತನವಾಗಿರಬಹುದಾದರೂ ಅನೇಕ ಸಲ ಇಡೀ ಗುಂಪಿನ ವಿರುದ್ಧ ದ್ವೇಷವು ಕಾರಲ್ಪಡುತ್ತದೆ.
ವಾಸ್ತವಿಕ ಯಾ ಕಾಲ್ಪನಿಕ ಅನ್ಯಾಯವು ದ್ವೇಷಕ್ಕೆ ಮುಖ್ಯ ಕಾರಣವಾಗಿರಬಹುದಾದರೂ, ಕಾರಣ ಅದೊಂದೆ ಅಲ್ಲ. ಇನ್ನೊಂದು ಕಾರಣವು ದುರಭಿಪ್ರಾಯ.
ದುರಭಿಪ್ರಾಯ. ಒಂದು ನಿರ್ದಿಷ್ಟ ಕುಲವರ್ಣೀಯ ಅಥವಾ ಜನಾಂಗಿಕ ಗುಂಪಿನ ಕುರಿತ ಅಜ್ಞಾನದಿಂದ ಅನೇಕಸಲ ದುರಭಿಪ್ರಾಯವು ಉಂಟಾಗುತ್ತದೆ. ಗಾಳಿಸುದ್ದಿ, ಸಾಂಪ್ರದಾಯಿಕ ವೈಷಮ್ಯ, ಅಥವಾ ಒಬ್ಬಿಬ್ಬ ವ್ಯಕ್ತಿಗಳೊಂದಿಗಾದ ಕೆಟ್ಟ ಅನುಭವದಿಂದಾಗಿ ಇಡೀ ಕುಲಕ್ಕೆ ಅಥವಾ ಜನಾಂಗಕ್ಕೆ ಕೆಲವರು ನಕಾರಾತ್ಮಕ ಗುಣಗಳನ್ನು ಆರೋಪಿಸಬಹುದು. ದುರಭಿಪ್ರಾಯವು ಒಮ್ಮೆ ಬೇರೂರಿತೆಂದರೆ, ಅದು ಜನರನ್ನು ನಿಜ ಸಂಗತಿಯೆಡೆಗೆ ಅಂಧರನ್ನಾಗಿ ಮಾಡಬಲ್ಲದು. “ಕೆಲವರನ್ನು ನಾವು ದ್ವೇಷಿಸುತ್ತೇವೆ ಯಾಕಂದರೆ ಅವರನ್ನು ನಾವು ತಿಳಿದಿರುವುದಿಲ್ಲ; ಮತ್ತು ತಿಳಿಯಲು ಪ್ರಯತ್ನಿಸೆವು ಯಾಕಂದರೆ ನಾವು ಅವರನ್ನು ದ್ವೇಷಿಸುತ್ತೇವೆ” ಎಂದು ಗಮನಿಸಿದರು ಆಂಗ್ಲ ಲೇಖಕ ಚಾರ್ಲ್ಸ್ ಕೇಲಬ್ ಕೋಲ್ಟನ್.
ಇನ್ನೊಂದು ಕಡೆ, ರಾಜಕಾರಣಿಗಳು ಮತ್ತು ಇತಿಹಾಸಕಾರರು, ರಾಜಕೀಯ ಅಥವಾ ರಾಷ್ಟ್ರೀಯತೆಯ ಧ್ಯೇಯಗಳಿಗಾಗಿ ದುರಭಿಪ್ರಾಯವನ್ನು ಬುದ್ಧಿಪೂರ್ವಕವಾಗಿ ಪ್ರವರ್ಧಿಸಬಹುದು. ಒಂದು ಮುಖ್ಯ ಉದಾಹರಣೆ ಹಿಟ್ಲರ್. ಹಿಟ್ಲರನ ಯುವ ಪಡೆಯ ಒಬ್ಬ ಮಾಜಿ ಸದಸ್ಯ ಗೇಯೊರ್ಗ್ ಅಂದದ್ದು: “ನಾಸಿ ಅಪಪ್ರಚಾರವು ಮೊದಲಾಗಿ ನಮಗೆ ಯೆಹೂದ್ಯರನ್ನು, ಅನಂತರ ರಷ್ಯಾದವರನ್ನು, ಬಳಿಕ ‘ನಾಸಿ ಆಡಳಿತ (ರೈಖ್)ದ ವೈರಿಗಳೆಲ್ಲರನ್ನು’ ಹಗೆಮಾಡಲು ಕಲಿಸಿತು. ಹದಿಹರೆಯದವನೋಪಾದಿ ನಾನು ನನಗೆ ಹೇಳಲ್ಪಟ್ಟದ್ದನ್ನು ನಂಬಿದೆ. ನಾನು ವಂಚಿಸಲ್ಪಟ್ಟಿದ್ದೇನೆಂದು ತದನಂತರ ನನಗೆ ತಿಳಿದುಬಂತು.” ನಾಸಿ ಜರ್ಮನಿ ಮತ್ತು ಇತರ ಕಡೆಗಳಂತೆ ಜಾತೀಯ ಮತ್ತು ಕುಲವರ್ಣೀಯ ದುರಭಿಪ್ರಾಯಗಳನ್ನು, ದ್ವೇಷದ ಇನ್ನೊಂದು ಮೂಲವಾದ ರಾಷ್ಟ್ರೀಯತೆಗೆ ರಂಜಿಸುವುದರ ಮೂಲಕ ಸಮರ್ಥನೆ ಮಾಡಲಾಗುತ್ತದೆ.
ರಾಷ್ಟ್ರೀಯತೆ. ಗೋತ್ರೀಯತೆ, ಮತ್ತು ಜಾತೀಯತೆ. ದ್ವೇಷದ ಸಾಗುವಳಿ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಇತಿಹಾಸಗಾರ ಪೀಟರ್ ಗೇ, ಮೊದಲನೆಯ ಜಾಗತಿಕ ಯುದ್ಧದ ಪ್ರಾರಂಭದಲ್ಲಿ ಏನು ಸಂಭವಿಸಿತೆಂದು ವರ್ಣಿಸುತ್ತಾರೆ: “ರಾಜನಿಷ್ಠೆಗಳ ಹೋರಾಟಗಳಲ್ಲಿ ರಾಷ್ಟ್ರೀಯತೆಯು ಬೇರೆ ಎಲ್ಲಾ ನಿಷ್ಠೆಗಳಿಗಿಂತ ಪ್ರಬಲವಾದದ್ದಾಗಿ ಪರಿಣಮಿಸಿತು. ಸದ್ವೇಶ ಪ್ರೇಮ ಮತ್ತು ಅದರ ವೈರಿಗಳ ದ್ವೇಷವು, ಆಕ್ರಮಣಕ್ಕಾಗಿ ಹತ್ತೊಂಬತ್ತನೆಯ ಸುದೀರ್ಘ ಶತಮಾನವು ಉತ್ಪಾದಿಸಿದ ಅತ್ಯಂತ ಸಮರ್ಥ ತರ್ಕವಾಗಿ ಕಂಡುಬಂತು.” ಜರ್ಮನ್ ರಾಷ್ಟ್ರೀಯತೆಯ ಭಾವಾತಿರೇಕವು “ದ್ವೇಷ ಗೀತ” ಎಂಬ ಸಮರ ಗಾನವನ್ನು ಜನಪ್ರಿಯಗೊಳಿಸಿತು. ಬ್ರಿಟನ್ ಮತ್ತು ಫ್ರಾನ್ಸಿನ ದ್ವೇಷ-ದಲಾಲಿಗಳು, ಜರ್ಮನ್ ಸೈನಿಕರು ಸ್ತ್ರೀಯರನ್ನು ಬಲಾತ್ಕಾರವಾಗಿ ಸಂಭೋಗಿಸುವ ಮತ್ತು ಕೂಸುಗಳನ್ನು ಕೊಲ್ಲುವ ಕುರಿತ ಕಥೆಗಳನ್ನು ಕಟ್ಟಿದರು ಎಂದು ಗೇ ವಿವರಿಸುತ್ತಾರೆ. ಸಿಗ್ಫ್ರೆಡ್ ಸ್ಯಾಸೂನ್ ಎಂಬ ಬ್ರಿಟಿಷ್ ಸೈನಿಕನು, ಬ್ರಿಟಿಷ್ ಯುದ್ಧ ಪ್ರಚಾರಕಾರ್ಯದ ಸಾರಾಂಶವನ್ನು ವರ್ಣಿಸುತ್ತಾನೆ: “ಮನುಷ್ಯನು ಜರ್ಮನರನ್ನು ಕೊಲಲ್ಲಿಕ್ಕಾಗಿಯೆ ನಿರ್ಮಿಸಲ್ಪಟ್ಟಿದ್ದನೆಂದು ತೋರಿತು.”
ರಾಷ್ಟ್ರೀಯತೆಯಂತೆ, ಕುಲವರ್ಣೀಯ ಅಥವಾ ಜಾತಿಯ ಗುಂಪಿನ ಒಂದು ಅತಿರೇಕ ಉತ್ಕರ್ಷವು, ಇತರ ಕುಲವರ್ಣೀಯ ಗುಂಪುಗಳ ಮತ್ತು ಜಾತಿಗಳ ದ್ವೇಷವನ್ನು ಕೆರಳಿಸಲು ಕಾರ್ಯನಡಿಸಬಲ್ಲದು. ಗೋತ್ರೀಯತೆಯು ಅನೇಕ ಆಫ್ರಿಕನ್ ದೇಶಗಳಲ್ಲಿ ಹಿಂಸಾಚಾರದ ಕಿಚ್ಚನ್ನು ಹೊತ್ತಿಸುತ್ತಾ ಇರುವಾಗ, ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿ ಜಾತೀಯತೆಯು ಇನ್ನೂ ಬಾಧಿಸುತ್ತಾ ಇದೆ. ರಾಷ್ಟ್ರೀಯತೆಯೊಂದಿಗೆ ಬೆರೆಯಬಹುದಾದ ಇನ್ನೊಂದು ವಿಭಾಜಕ ಕಾರಣಾಂಶ, ಧರ್ಮ.
ಧರ್ಮ. ಬಗೆಹರಿಸಲು ಅತಿ ಕಷ್ಟಕರವಾದ ಜಗತ್ತಿನ ಯುದ್ಧಗಳಲ್ಲಿ ಹೆಚ್ಚಿನವುಗಳಿಗೆ ಒಂದು ಪ್ರಬಲವಾದ ಧಾರ್ಮಿಕ ಮೂಲಾಂಶವಿದೆ. ಉತ್ತರ ಐರ್ಲೆಂಡ್, ಮಧ್ಯಪೂರ್ವ ಮತ್ತು ಬೇರೆ ದೇಶಗಳಲ್ಲಿ ಜನರು ದ್ವೇಷಿಸಲ್ಪಡುವುದು ಅವರು ಅವಲಂಬಿಸುವ ಧರ್ಮಕ್ಕಾಗಿ. ಸುಮಾರು ಎರಡು ಶತಮಾನಗಳ ಹಿಂದೆ, ಆಂಗ್ಲ ಕರ್ತೃ ಜೋನತನ್ ಸ್ವಿಫ್ಟ್ ಗಮನಿಸಿದ್ದು: “ನಮ್ಮನ್ನು ದ್ವೇಷಿಸುವಂತೆ ಮಾಡಲು ನಮಗೆ ಸಾಕಷ್ಟು ಧರ್ಮವಿದೆ, ಆದರೆ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮಾಡಲು ಸಾಕಷ್ಟಿಲ್ಲ.”
ಹಿಟ್ಲರನು 1933 ರಲ್ಲಿ ಓಸ್ನಬ್ರೂಕ್ನ ಬಿಷಪರಿಗೆ ತಿಳಿಸಿದ್ದು: ‘ಯೆಹೂದ್ಯರ ವಿಷಯದಲ್ಲಾದರೊ, ಕ್ಯಾತೊಲಿಕ್ ಚರ್ಚು 1,500 ವರ್ಷಗಳ ತನಕ ಆಯ್ದುಕೊಂಡ ಅದೇ ರಾಜನೀತಿಯನ್ನು ನಾನು ಮುಂದುವರಿಸುತ್ತಿದ್ದೇನೆ ಅಷ್ಟೆ.’ ಅವನ ದ್ವೇಷಮಯ ಯೆಹೂದ್ಯ ಸಂಹಾರಗಳು ಹೆಚ್ಚಿನ ಜರ್ಮನ್ ಚರ್ಚ್ ಮುಖಂಡರಿಂದ ಎಂದೂ ಖಂಡಿಸಲ್ಪಡಲಿಲ್ಲ. ಕ್ರೈಸ್ತತ್ವದ ಒಂದು ಇತಿಹಾಸ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಪಾಟ್ ಜಾನ್ಸನ್ ಗಮನಿಸುವುದೇನಂದರೆ, “ತಮ್ಮ ಶವವನ್ನು ದಹನಮಾಡುವಂತೆ ತಾವು ಬಯಸುತ್ತೇವೆಂದು ತಮ್ಮ ಉಯಿಲುಗಳಲ್ಲಿ ತಿಳಿಸಿದ ಕ್ಯಾತೊಲಿಕರನ್ನು ಚರ್ಚು ಬಹಿಷ್ಕಾರ ಮಾಡಿತು, . . . ಆದರೆ ಕೂಟ ಶಿಬಿರ ಯಾ ಮೃತ್ಯು ಶಿಬಿರಗಳಲ್ಲಿ ಅವರು ಕೆಲಸಮಾಡುವುದನ್ನು ಅದು ನಿಷೇಧಿಸಲಿಲ್ಲ.”
ಕೆಲವು ಧಾರ್ಮಿಕ ಮುಖಂಡರಾದರೊ ದ್ವೇಷವನ್ನು ಮನ್ನಿಸುವುದಕ್ಕಿಂತಲೂ ವಿಪರೀತಕ್ಕೆ ಹೋಗಿದ್ದಾರೆ—ಅವರದನ್ನು ಪವಿತ್ರೀಕರಿಸಿದ್ದಾರೆ. 1936 ರಲ್ಲಿ ಸ್ಪ್ಯಾನಿಷ್ ಅಂತರ್ಯುದ್ಧವು ಆರಂಭವಾದಾಗ, XI ನೆಯ ಪೋಪ್ ಪೈಅಸ್ನು ಅದನ್ನು ಪ್ರಜಾಪ್ರಭುತ್ವ ಪಕ್ಷದಲ್ಲಿ ಕ್ಯಾತೊಲಿಕ್ ಪಾದ್ರಿಗಳಿದ್ದಾಗ್ಯೂ ಕೂಡ, ಪ್ರಜಾಪ್ರಭುತ್ವವಾದಿಗಳ ‘ದೇವರೆಡೆಗಿನ ನಿಜ ಪೈಶಾಚಿಕ ದ್ವೇಷ’ ಎಂದು ಖಂಡಿಸಿದನು. ತದ್ರೀತಿಯಲ್ಲಿ, ಒಳಯುದ್ಧದ ಸಮಯದಲ್ಲಿ ಸ್ಪೆಯ್ನ್ನ ಆರ್ಚ್ಬಿಷಪರಾದ ಕಾರ್ಡಿನಲ್ ಗೋಮಾ, ‘ಶಸ್ತ್ರಸಮರದ ಹೊರತು ಶಾಂತಿಯೊಪ್ಪಂದ ಅಶಕ್ಯವೆಂದು’ ವಾದಿಸಿದರು.
ಧಾರ್ಮಿಕ ದ್ವೇಷವು ಕಡಿಮೆಯಾಗುವ ಸೂಚನೆ ತೋರಿಸುವುದಿಲ್ಲ. 1992 ರಲ್ಲಿ, ಸರಹದ್ದುರಹಿತ ಮಾನವ ಹಕ್ಕುಗಳು (ಇಂಗ್ಲಿಷ್) ಎಂಬ ಪತ್ರಿಕೆಯು, ಗ್ರೀಕ್ ಆರ್ತೊಡಾಕ್ಸ್ ಚರ್ಚಿನ ಅಧಿಕಾರಿಗಳು ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಹಗೆಯನ್ನು ಉದ್ರೇಕಿಸುತ್ತಿರುವ ವಿಧವನ್ನು ಖಂಡಿಸಿತು. ಅನೇಕ ಉದಾಹರಣೆಗಳಲ್ಲಿ, 14 ವರ್ಷ ಪ್ರಾಯದ ಇಬ್ಬರು ಸಾಕ್ಷಿಗಳ ವಿರುದ್ಧ ಒಬ್ಬ ಗ್ರೀಕ್ ಪಾದ್ರಿಯು ಹೊರಿಸಿದ ಆರೋಪಗಳ ಕುರಿತು ಅದು ತಿಳಿಸಿತು. ಆರೋಪವೇನು? ‘ತನ್ನ ಧರ್ಮವನ್ನು ಬದಲಾಯಿಸುವಂತೆ ಅವರು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರನ್ನು ದೂರಿದನು.
ದ್ವೇಷದ ಪರಿಣಾಮಗಳು
ಅನ್ಯಾಯ, ದುರಭಿಪ್ರಾಯ, ರಾಷ್ಟ್ರೀಯತೆ, ಮತ್ತು ಧರ್ಮದ ಮೂಲಕವಾಗಿ ಜಗದ್ವ್ಯಾಪಕವಾಗಿ ದ್ವೇಷದ ಬೀಜಗಳು ಹಾಕಲ್ಪಡುತ್ತಿವೆ ಮತ್ತು ನೀರುಹೊಯ್ಯಲ್ಪಡುತ್ತಿವೆ. ಕ್ರೋಧ, ಆಕ್ರಮಣ, ಯುದ್ಧ ಮತ್ತು ನಾಶನವೆ ಅದರ ಅನಿವಾರ್ಯ ಫಲ. ಇದರ ಗುರುತರವನ್ನು ಕಾಣಲು 1 ಯೋಹಾನ 3:15ರ ಬೈಬಲ್ ಹೇಳಿಕೆಯು ನಮಗೆ ನೆರವಾಗುತ್ತದೆ: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ.” ಎಲ್ಲಿ ದ್ವೇಷವು ವರ್ಧಿಸುತ್ತದೊ ಅಲ್ಲಿ—ಶಾಂತಿ ಒಂದುವೇಳೆ ಇದ್ದರೂ—ಅದು ಅನಿಶ್ಚಿತವೆಂಬುದು ಖಂಡಿತ.
ನೊಬೆಲ್ ಪಾರಿತೋಷಕ ವಿಜೇತರೂ ಯೆಹೂದ್ಯ ಸಂಹಾರವನ್ನು ಪಾರಾಗಿ ಉಳಿದವರೂ ಆದ ಏಲಿ ವೀಸೆಲ್ ಬರೆಯುವುದು: “ಪಾರಾಗಿ ಉಳಿದವನ ಕರ್ತವ್ಯವು ನಡೆದ ಸಂಗತಿಗೆ ಸಾಕ್ಷ್ಯಕೊಡುವುದಾಗಿದೆ. . . . ಈ ಸಂಗತಿಗಳು ಸಂಭವಿಸಬಲ್ಲವು, ಕೇಡು ಅಂಕೆತಪ್ಪಿ ಹೋಗಬಲ್ಲದು ಎಂದು ಜನರನ್ನು ನಾವು ಎಚ್ಚರಿಸಲೇಬೇಕು. ಜಾತೀಯ ದ್ವೇಷ, ಹಿಂಸಾಚಾರ, ಮೂರ್ತಿಪೂಜೆಗಳು ಇನ್ನೂ ವೃದ್ಧಿಸುತ್ತಿವೆ.” ದ್ವೇಷವು ತನ್ನನ್ನು ತಾನೇ ಸುಟುಕ್ಟೊಂಡು ಕ್ರಮೇಣ ನಂದಿಹೋಗುವ ಬೆಂಕಿಯಲ್ಲವೆಂಬುದಕ್ಕೆ ಈ 20 ನೆಯ ಶತಮಾನದ ಇತಿಹಾಸವು ಪುರಾವೆಯನ್ನು ಕೊಡುತ್ತದೆ.
ಮನುಷ್ಯರ ಹೃದಯದಿಂದ ದ್ವೇಷವು ಎಂದಾದರೂ ಕಿತ್ತುಹಾಕಲ್ಪಡಲಿದೆಯೆ? ದ್ವೇಷವು ಯಾವಾಗಲೂ ನಾಶಕಾರಕವೇ, ಇಲ್ಲವೆ, ಅದಕ್ಕೆ ಸಕಾರಾತ್ಮಕವಾದ ಪಕ್ಕವೊಂದಿದೆಯೆ? ನಾವು ನೋಡೋಣ.