ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 6/15 ಪು. 5-8
  • ದ್ವೇಷಕ್ಕೆ ಜಗದ್ವ್ಯಾಪಕ ಅಂತ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದ್ವೇಷಕ್ಕೆ ಜಗದ್ವ್ಯಾಪಕ ಅಂತ್ಯ
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕೂಟಶಿಬಿರವೊಂದರಲ್ಲಿ ದ್ವೇಷವನ್ನು ಜಯಿಸುವುದು
  • ದ್ವೇಷಿಸುವ ಸಮಯ
  • ದ್ವೇಷರಹಿತವಾದ ಒಂದು ಲೋಕ
  • ದ್ವೇಷವು ಎಂದಾದರೂ ಕೊನೆಗೊಳ್ಳುವುದೊ?
    ಕಾವಲಿನಬುರುಜು—1995
  • ಇಷ್ಟೊಂದು ದ್ವೇಷ ಯಾಕಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷ ಶಾಶ್ವತವಾಗಿ ಕಣ್ಮರೆಯಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
  • ದ್ವೇಷವನ್ನು ಜಯಿಸಲು ನಮ್ಮಿಂದಾಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2022
ಇನ್ನಷ್ಟು
ಕಾವಲಿನಬುರುಜು—1995
w95 6/15 ಪು. 5-8

ದ್ವೇಷಕ್ಕೆ ಜಗದ್ವ್ಯಾಪಕ ಅಂತ್ಯ

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ಒಂದು ಕನಿಷ್ಠ ಗುಂಪು ದ್ವೇಷದ ಬಲಿಪಶುವಾಯಿತು. ಆದಿ ಕ್ರೈಸ್ತರ ಕಡೆಗೆ ನೆಲೆಸಿದ್ದ ರೋಮನ್‌ ಮನೋಭಾವವನ್ನು ಟೆರ್ಟಲ್ಯನ್‌ ವಿವರಿಸುತ್ತಾನೆ: “ಆಕಾಶವು ಮಳೆಗರೆಯದಿದ್ದರೆ, ಒಂದು ಭೂಕಂಪವಾದರೆ, ಬರವಾಗಲಿ ಅಂಟುರೋಗವಾಗಲಿ ಸಂಭವಿಸಿದರೆ, ಕೂಡಲೆ ‘ಕ್ರೈಸ್ತರನ್ನು ಸಿಂಹಗಳಿಗೆ ಹಾಕಿ ಕೊಲಿರ್ಲಿ’ ಎಂಬ ಗುಲ್ಲು ಏಳುತ್ತದೆ!”

ದ್ವೇಷಕ್ಕೆ ಗುರಿಯಾದಾಗ್ಯೂ ಆದಿ ಕ್ರೈಸ್ತರು ಅನ್ಯಾಯಕ್ಕೆ ಪ್ರತೀಕಾರವನ್ನೀಯುವ ಶೋಧನೆಯನ್ನು ವರ್ಜಿಸಿದರು. ತನ್ನ ಪ್ರಖ್ಯಾತ ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನಂದದ್ದು: “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿದೆ ಎಂಬದಾಗಿ ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.”—ಮತ್ತಾಯ 5:43, 44.

‘ವೈರಿಯನ್ನು ಹಗೆಮಾಡುವುದು’ ಯೋಗ್ಯ ಸಂಗತಿಯೆಂದು ನಂಬುವುದು ಯೆಹೂದ್ಯರ ವಾಚಿಕ ಸಂಪ್ರದಾಯವಾಗಿತ್ತು. ಆದರೂ ನಾವು ನಮ್ಮ ಮಿತ್ರನನ್ನು ಮಾತ್ರವಲ್ಲ, ನಮ್ಮ ವೈರಿಯನ್ನೂ ಪ್ರೀತಿಸಬೇಕೆಂದು ಯೇಸುವಂದನು. ಇದು ಕಷ್ಟವಾಗಿದೆ, ಆದರೆ ಅಶಕ್ಯವಲ್ಲ. ವೈರಿಯನ್ನು ಪ್ರೀತಿಸುವುದೆಂದರೆ ಅವನ ಎಲ್ಲ ಮಾರ್ಗಗಳನ್ನು ಯಾ ಕೃತ್ಯಗಳನ್ನು ಇಷ್ಟೈಸುವುದೆಂದು ಅರ್ಥವಲ್ಲ. ಮತ್ತಾಯನ ವೃತ್ತಾಂತದಲ್ಲಿ ಕಂಡುಬರುವ ಗ್ರೀಕ್‌ ಪದವು ಅಗಾಪೆ ಯಿಂದ ಬಂದದ್ದಾಗಿದ್ದು, ನೀತಿತತ್ವಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುವ ಒಂದು ಪ್ರೀತಿಯನ್ನು ವರ್ಣಿಸುತ್ತದೆ. ತತಾಧ್ವಾರಿತ ಪ್ರೀತಿಯಾದ ಅಗಾಪೆ ಯನ್ನು ಪ್ರದರ್ಶಿಸುವ ಒಬ್ಬ ವ್ಯಕ್ತಿಯು ತನ್ನನ್ನು ದ್ವೇಷಿಸುವ ಮತ್ತು ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವ ವೈರಿಗೆ ಕೂಡ ಒಳ್ಳೆಯದನ್ನು ಮಾಡುತ್ತಾನೆ. ಯಾಕೆ? ಯಾಕಂದರೆ ಅದು ಕ್ರಿಸ್ತನನ್ನು ಅನುಕರಿಸುವ ರೀತಿಯಾಗಿದೆ, ಮತ್ತು ದ್ವೇಷವನ್ನು ಜಯಿಸುವ ಮಾರ್ಗವಾಗಿದೆ. ಒಬ್ಬ ಗ್ರೀಕ್‌ ವೇದಶಾಸ್ತ್ರಿಯು ಗಮನಿಸಿದ್ದು: “ಕೋಪಿಸುವ ಮತ್ತು ದ್ವೇಷಿಸುವ ನಮ್ಮ ಸ್ವಾಭಾವಿಕ ಪ್ರವೃತ್ತಿಯನ್ನು ಜಯಿಸಲು [ಅಗಾಪೆ] ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.” ಆದರೆ ಇಂದಿನ ದ್ವೇಷಭರಿತ ಜಗತ್ತಿನಲ್ಲಿ ಇದು ಕಾರ್ಯಸಾಧಕವೊ?

ಆದರೆ ಕ್ರೈಸ್ತರೆಂದು ಹೇಳಿಕೊಳ್ಳುವವರೆಲ್ಲರು ಕ್ರಿಸ್ತನ ಮಾದರಿಯನ್ನು ಅನುಸರಿಸಲು ನಿರ್ಧರಿಸುವುದಿಲ್ಲ ಎಂಬುದು ಗ್ರಾಹ್ಯ. ರುವಾಂಡದಲ್ಲಿ ಇತ್ತೀಚಿನ ಅತ್ಯಾಚಾರಗಳು ಕ್ರೈಸ್ತರೆನಿಸಿಕೊಳ್ಳುವ ಅನೇಕ ಸದಸ್ಯರಿರುವ ಕುಲವರ್ಣೀಯ ಗುಂಪುಗಳಿಂದ ನಡಿಸಲ್ಪಟ್ಟವು. ರುವಾಂಡದಲ್ಲಿ 20 ವರ್ಷಗಳಿಂದ ಕೆಲಸ ಮಾಡಿದ ಒಬ್ಬ ರೋಮನ್‌ ಕ್ಯಾತೊಲಿಕ್‌ ನನ್‌ (ಸಂನ್ಯಾಸಿನಿ) ಪೀಲಾರ್‌ ಡೀಎಸ್‌ ಎಸ್ಪೆಲೋಸೀನ್‌, ಒಂದು ಮನತಟ್ಟುವ ಘಟನೆಯನ್ನು ತಿಳಿಸಿದಳು. ಒಬ್ಬ ಮನುಷ್ಯನು ತಾನು ಬಳಸಿದ್ದಿರುವಂತೆ ಕಂಡುಬಂದ ಒಂದು ಭಲ್ಲೆಯನ್ನು ಚಲಾಯಿಸುತ್ತಾ ಅವಳ ಚರ್ಚನ್ನು ಸಮೀಪಿಸಿದನು. ನನ್‌ ಅವನನ್ನು ಕೇಳಿದ್ದು: “ಸುತ್ತಲೂ ಹೋಗಿ ಜನರನ್ನು ಕೊಲ್ಲುತ್ತಾ ನೀನು ಇದೇನು ಮಾಡುತ್ತಿದ್ದೀ? ಕ್ರಿಸ್ತನ ಕುರಿತು ನೀನು ಯೋಚಿಸುವುದಿಲ್ಲವೊ?” ತಾನು ಯೋಚಿಸುತ್ತಿದ್ದೇನೆ ಎಂದು ಹೇಳುತ್ತಾ ಅವನು ಚರ್ಚನ್ನು ಪ್ರವೇಶಿಸಿ, ಮೊಣಕಾಲೂರಿ, ರೋಸರಿ (ಜಪಮಾಲೆ) ಯನ್ನು ಉದ್ರಿಕ್ತನಾಗಿ ಪಠಿಸತೊಡಗಿದನು. ಆದರೆ ಅವನು ಅದನ್ನು ಮುಗಿಸಿದಾಗ ಎದ್ದು ಕೊಲ್ಲುವುದನ್ನು ಮುಂದುವರಿಸಲು ಹೊರಟುಹೋದನು. “ನಾವು ಸುವಾರ್ತೆಯನ್ನು ಸರಿಯಾಗಿ ಕಲಿಸುವುದಿಲ್ಲವೆಂದು ಇದು ತೋರಿಸುತ್ತದೆ,” ಎಂದು ಒಪ್ಪಿಕೊಂಡಳು ನನ್‌. ಆದರೂ ಅಂತಹ ತಪ್ಪುವಿಕೆಗಳು ಯೇಸುವಿನ ಸಂದೇಶದಲ್ಲಿ ಲೋಪವಿದೆಯೆಂದು ಅರ್ಥೈಸುವುದಿಲ್ಲ. ಯಾರು ನಿಜ ಕ್ರೈಸ್ತತ್ವವನ್ನು ಅಭ್ಯಾಸಿಸುತ್ತಾರೊ ಅವರಿಂದ ದ್ವೇಷವು ಜಯಿಸಲ್ಪಡಸಾಧ್ಯವಿದೆ.

ಕೂಟಶಿಬಿರವೊಂದರಲ್ಲಿ ದ್ವೇಷವನ್ನು ಜಯಿಸುವುದು

ಮಾಕ್ಸ್‌ ಲೀಬ್‌ಸ್ಟರ್‌, ಯೆಹೂದ್ಯರ ಸಂಹಾರವನ್ನು ಪಾರಾಗಿ ಬದುಕಿ ಉಳಿದ ಒಬ್ಬ ಮಾಂಸಿಕ ಯೆಹೂದ್ಯನು. ಅವನ ಉಪನಾಮದ ಅರ್ಥವು “ಅತಿಪ್ರಿಯ” ಎಂದಾದರೂ ಅವನು ತನ್ನ ಪಾಲಿಗಿಂತಲೂ ಹೆಚ್ಚಿನ ದ್ವೇಷವನ್ನು ನೋಡಿದ್ದಾನೆ. ಪ್ರೀತಿ ಮತ್ತು ಹಗೆಯ ಕುರಿತು ನಾಸಿ ಜರ್ಮನಿಯಲ್ಲಿ ಅವನು ಏನನ್ನು ಕಲಿತನೊ ಅದನ್ನು ಅವನು ವರ್ಣಿಸುತ್ತಾನೆ.

“ಜರ್ಮನಿಯ ಮ್ಯಾನ್‌ಹೈಮ್‌ನ ಸಮೀಪ 1930 ಗಳಲ್ಲಿ ನಾನು ಬೆಳೆಸಲ್ಪಟ್ಟೆ. ಯೆಹೂದ್ಯರೆಲ್ಲರೂ ಜರ್ಮನರನ್ನು ಸ್ವಪ್ರಯೇಜನಕ್ಕಾಗಿ ದುಡಿಸಿಕೊಂಡು ಲಾಭಗಳಿಸಿರುವ ಧನಿಕರೆಂದು ಹಿಟ್ಲರನು ವಾದಿಸಿದನು. ಆದರೆ ನಿಜ ಸಂಗತಿಯೇನಂದರೆ ನನ್ನ ತಂದೆಯು ಕೇವಲ ಒಬ್ಬ ಬಡ ಚಮ್ಮಾರನಾಗಿದ್ದನು. ಆದಾಗ್ಯೂ ನಾಸಿ ಅಪಪ್ರಚಾರದ ಪ್ರಭಾವದಿಂದ ನೆರೆಯವರು ನಮ್ಮ ವಿರುದ್ಧವಾಗಿ ಏಳತೊಡಗಿದರು. ನಾನು ಹದಿವಯಸ್ಸಿನವನಾಗಿದ್ದಾಗ, ಒಬ್ಬ ಹಳ್ಳಿಗನು ಹಂದಿಯ ರಕ್ತವನ್ನು ನನ್ನ ಹಣೆಯ ಮೇಲೆ ಬಲವಂತದಿಂದ ಲೇಪಿಸಿದನು. ಈ ಘೋರ ಅವಮಾನವು ಮುಂದೆ ಬರಲಿದ್ದ ಸಂಗತಿಗಳ ಕೇವಲ ಮುನ್‌ರುಚಿಯಾಗಿತ್ತು. 1939 ರಲ್ಲಿ ಗುಪ್ತ ಪೊಲೀಸರು ನನ್ನನ್ನು ದಸ್ತಗಿರಿ ಮಾಡಿ ನನ್ನೆಲ್ಲಾ ಸೊತ್ತುಗಳನ್ನು ವಶಪಡಿಸಿಕೊಂಡರು.

“ಜನವರಿ 1940 ರಿಂದ ಮೇ 1945ರ ತನಕ ನಾನು ಐದು ವಿವಿಧ ಕೂಟ ಶಿಬಿರಗಳಲ್ಲಿ ಪಾರಾಗಿ ಉಳಿಯಲು ಹೋರಾಟ ನಡಿಸಿದೆ: ಸಾಕ್ಸನ್‌ಹಾಸನ್‌, ನಾಯೆನ್‌ಗಾಮೆ, ಆಶ್‌ವಿಸ್ಟ್‌, ಬೂನ, ಮತ್ತು ಬೂಕನ್‌ವಾಲ್ಡ್‌. ಸಾಕ್ಸನ್‌ಹಾಸನ್‌ಗೂ ಕಳುಹಿಸಲ್ಪಟ್ಟ ನನ್ನ ತಂದೆ 1940ರ ಭೀಕರ ಚಳಿಗಾಲದಲ್ಲಿ ತೀರಿಕೊಂಡರು. ಅವರ ಮೃತದೇಹವನ್ನು ಎಲ್ಲಿ ಶವಗಳ ಒಂದು ರಾಶಿಯು ದಹಿಸಲ್ಪಡಲು ಕಾಯುತ್ತಿತ್ತೊ ಆ ಸುಡುಗಾಡಿಗೆ ನಾನು ಸ್ವತಃ ಒಯ್ದೆ. ಒಟ್ಟಿಗೆ ನನ್ನ ಕುಟುಂಬದ ಎಂಟು ಮಂದಿ ಶಿಬಿರಗಳಲ್ಲಿ ಸತ್ತರು.

“ಕೈದಿಗಳಲ್ಲಿ, ಕಾಪೋಗಳು ಎಸ್‌ಎಸ್‌ (ಪೊಲೀಸ್‌) ಗಾರ್ಡ್‌ಗಳಿಗಿಂತಲೂ ಅಧಿಕವಾಗಿ ದ್ವೇಷಿಸಲ್ಪಟ್ಟರು. ಕಾಪೋಗಳು ಪೊಲೀಸರೊಂದಿಗೆ ಸಹಕರಿಸಿದ ಕೈದಿಗಳಾದುದರಿಂದ ನಿರ್ದಿಷ್ಟ ಸೌಲಭ್ಯಗಳನ್ನು ಅನುಭವಿಸಿದರು. ಆಹಾರ ವಿತರಣೆಯ ಮೇಲ್ವಿಚಾರವನ್ನು ಅವರಿಗೆ ಕೊಡಲಾಗಿತ್ತು, ಮತ್ತು ಇತರ ಕೈದಿಗಳನ್ನು ಕ್ರೂರವಾಗಿ ಹೊಡೆಯುತ್ತಿದ್ದರು ಸಹ. ಅನೇಕಾವರ್ತಿ ಅವರು ಅನ್ಯಾಯವಾಗಿ ಮತ್ತು ಸ್ವೇಚ್ಛಾನುಸಾರ ವರ್ತಿಸಿದರು. ಎಸ್‌ಎಸ್‌ ಪೊಲೀಸರನ್ನು ಮತ್ತು ಕಾಪೋಗಳನ್ನು ಇವರಿಬ್ಬರನ್ನೂ ದ್ವೇಷಿಸಲು ನನಗೆ ಹೇರಳವಾದ ಕಾರಣವಿತ್ತೆಂದು ನಾನು ನೆನಸುತ್ತೇನೆ, ಆದರೆ ನನ್ನ ಸೆರೆವಾಸದ ಸಮಯದಲ್ಲಿ, ಪ್ರೀತಿಯು ದ್ವೇಷಕ್ಕಿಂತ ಹೆಚ್ಚು ಪ್ರಬಲವಾದುದೆಂದು ನಾನು ಕಲಿತುಕೊಂಡೆ.

“ಯೆಹೋವನ ಸಾಕ್ಷಿಗಳಾಗಿದ್ದ ಕೈದಿಗಳ ಸ್ಥೈರ್ಯವು, ಅವರ ನಂಬಿಕೆಯು ಶಾಸ್ತ್ರದ ಮೇಲೆ ಆಧಾರಿತವಾಗಿತ್ತೆಂಬುದನ್ನು ನನಗೆ ದೃಢಪಡಿಸಿತು—ಮತ್ತು ನಾನು ಸ್ವತಃ ಸಾಕ್ಷಿಯಾದೆ. ನಾಯೆನ್‌ಗಾಮೆ ಕೂಟ ಶಿಬಿರದಲ್ಲಿ ನಾನು ಭೇಟಿಯಾದ ಅರ್ನ್‌ಸ್ಟ್‌ ವಾವರ್‌, ಕ್ರಿಸ್ತನ ಮನೋಭಾವವನ್ನು ಬೆಳೆಸಿಕೊಳ್ಳಲು ನನ್ನನ್ನು ಉತ್ತೇಜಿಸಿದರು. ‘ಬೈಯುವವರನ್ನು ಅವನು ಪ್ರತಿಯಾಗಿ ಬೈಯಲಿಲ್ಲ. ಆತನು ಬಾಧೆಯನ್ನು ಅನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು’ ಎಂದು ಬೈಬಲು ಹೇಳುತ್ತದೆ. (1 ಪೇತ್ರ 2:23) ನಾನು ಅದನ್ನೆ ಮಾಡಲು, ಎಲ್ಲರ ನ್ಯಾಯಾಧಿಪತಿಯಾದ ದೇವರ ಕೈಯಲ್ಲಿ ಪ್ರತೀಕಾರ ಸಲ್ಲಿಸುವುದನ್ನು ತ್ಯಜಿಸಲು ಪ್ರಯತ್ನಿಸಿದೆ.

“ಜನರು ದುಷ್ಕೃತ್ಯಗಳನ್ನು ಹೆಚ್ಚಾಗಿ ಅಜ್ಞಾನದಿಂದಲೆ ಮಾಡುತ್ತಾರೆಂದು ಶಿಬಿರಗಳಲ್ಲಿ ನಾನು ಕಳೆದ ವರ್ಷಗಳು ನನಗೆ ಕಲಿಸಿದವು. ಎಸ್‌ಎಸ್‌ ಗಾರ್ಡ್‌ಗಳಲ್ಲಿ ಕೂಡ ಎಲ್ಲರೂ ಕೆಟ್ಟವರಾಗಿರಲಿಲ್ಲ—ನನ್ನ ಜೀವವನ್ನು ಉಳಿಸಿದ ಒಬ್ಬನು ಅಲ್ಲಿದ್ದನು. ಒಮ್ಮೆ ನಾನು ತೀವ್ರ ಅತಿಬೇಧಿಯಿಂದ ಬಾಧಿತನಾದೆ ಮತ್ತು ನನ್ನ ಕೆಲಸದಿಂದ ಶಿಬಿರಕ್ಕೆ ನಡೆಯಲು ಸಹ ತೀರ ಬಲಹೀನನಾದೆ. ಮಾರನೆಯ ದಿನ ಬೆಳಗ್ಗೆ ಆಶ್‌ವಿಸ್‌ನ್ಟ ಗ್ಯಾಸ್‌ ಚೇಂಬರ್‌ಗೆ ನಾನು ಕಳುಹಿಸಲ್ಪಡಬೇಕಿತ್ತು, ಆದರೆ ನನ್ನಂತೆ ಜರ್ಮನಿಯ ಅದೇ ಪ್ರದೇಶದಿಂದ ಬಂದ ಒಬ್ಬ ಎಸ್‌ಎಸ್‌ ಗಾರ್ಡ್‌ ನನ್ನ ಪರವಾಗಿ ಅಡ್ಡಬಂದನು. ಎಸ್‌ಎಸ್‌ ಉಪಾಹಾರ ಗೃಹದಲ್ಲಿ ನಾನು ಕೆಲಸ ಮಾಡುವಂತೆ ಏರ್ಪಡಿಸಿದನು, ನಾನು ಗುಣಹೊಂದುವ ತನಕ ಅಲ್ಲಿ ತುಸು ವಿಶ್ರಾಂತಿ ಪಡೆಯಲು ಶಕ್ತನಾದೆ. ಒಂದು ದಿನ ಅವನು ನನ್ನೊಂದಿಗೆ ಒಪ್ಪಿಕೊಂಡದ್ದು: ‘ತೀವ್ರ ವೇಗದಿಂದ ಧಾವಿಸುತ್ತಿರುವ ಹಾಗೂ ಅಂಕೆತಪ್ಪಿದ ರೈಲಿನಲ್ಲಿ ನಾನು ಪಯಣಿಸುತ್ತಿದ್ದೇನೆಂದು ನನಗೆ ಭಾಸವಾಗುತ್ತದೆ, ಮಾಕ್ಸ್‌. ಹೊರಗೆ ಹಾರಿದರೆ ನಾನು ಕೊಲ್ಲಲ್ಪಡುವೆ. ಒಳಗೆ ಇದ್ದುಬಿಟ್ಟರೆ ಅಪ್ಪಳಿಸಲ್ಪಟ್ಟು ಸಾಯುವೆ!’

“ನನಗೆ ಬೇಕಾದಷ್ಟೆ ಪ್ರೀತಿಯ ಆಗತ್ಯ ಈ ಜನರಿಗಿತ್ತು. ವಾಸ್ತವದಲ್ಲಿ, ದೇವರಲ್ಲಿ ನಂಬಿಕೆಯ ಜೊತೆಯಲ್ಲಿ ಪ್ರೀತಿ ಮತ್ತು ಅನುಕಂಪವು ಆ ತುಚ್ಛ ಪರಿಸ್ಥಿತಿಗಳನ್ನು ಮತ್ತು ನಿತ್ಯ ಸಾವಿನ ಬೆದರಿಕೆಯನ್ನು ನಿಭಾಯಿಸುವಂತೆ ನನ್ನನ್ನು ಸಾಧ್ಯಗೊಳಿಸಿತು. ನಿರಪಾಯನಾಗಿ ಪಾರಾದೆನೆಂದು ನಾನು ಹೇಳಲಾರೆನಾದರೂ ನನ್ನ ಮಾನಸಿಕ ಗಾಯದ ಕಲೆಗಳು ಕೊಂಚವೆ ಎನ್ನಬೇಕು.”

ಮಾಕ್ಸ್‌ 50 ವರ್ಷಗಳ ಬಳಿಕ ಇನ್ನೂ ಹೊರಸೂಸುವ ಹೃತ್ಪೂರ್ವಕತೆಯು, ಅವನ ಮಾತುಗಳ ಸತ್ಯತೆಗೆ ನಿರರ್ಗಳ ಸಾಕ್ಷಿಯನ್ನು ಕೊಡುತ್ತದೆ. ಮಾಕ್ಸ್‌ನ ಸನ್ನಿವೇಶವು ಅಸದೃಶವಲ್ಲ. ದ್ವೇಷವನ್ನು ಜಯಿಸಲು ಅವನಿಗೆ ದೃಢವಾದ ಕಾರಣವಿತ್ತು—ಕ್ರಿಸ್ತನನ್ನು ಅನುಕರಿಸಲು ಅವನು ಬಯಸಿದನು. ಯಾರ ಜೀವನಗಳು ಪವಿತ್ರ ಶಾಸ್ತ್ರದಿಂದ ಮಾರ್ಗದರ್ಶಿಸಲ್ಪಟ್ಟಿವೆಯೊ ಅವರು ಸಹ ಅದೇ ರೀತಿ ಕ್ರಿಯೆಗೈದರು. ಫ್ರಾನ್ಸಿನ ಒಬ್ಬ ಯೆಹೋವನ ಸಾಕ್ಷಿಯಾದ ಸಿಮೋನ್‌, ನಿಸ್ವಾರ್ಥ ಪ್ರೀತಿಯೆಂದರೆ ನಿಜವಾಗಿ ಏನೆಂಬುದನ್ನು ತಾನು ಹೇಗೆ ಕಲಿತೆನೆಂದು ವಿವರಿಸುತ್ತಾಳೆ.

“ಎರಡನೆಯ ಜಾಗತಿಕ ಯುದ್ಧಕ್ಕೆ ತುಸು ಮುಂಚೆ ಸಾಕ್ಷಿಯಾದ ನನ್ನ ತಾಯಿ ಎಮ, ಜನರು ಹೆಚ್ಚಾಗಿ ಕೆಟ್ಟ ಸಂಗತಿಗಳನ್ನು ತಮ್ಮ ಅಜ್ಞಾನದಿಂದಾಗಿ ಮಾಡುತ್ತಾರೆಂದು ನನಗೆ ಕಲಿಸಿದರು. ಪ್ರತಿಯಾಗಿ ನಾವು ಅವರನ್ನು ಹಗೆಮಾಡುವಲ್ಲಿ ನಾವು ನಿಜ ಕ್ರೈಸ್ತರಲ್ಲವೆಂದುಅವರು ನನಗೆ ವಿವರಿಸಿದರು, ಯಾಕಂದರೆ ನಮ್ಮ ವೈರಿಗಳನ್ನು ನಾವು ಪ್ರೀತಿಸಬೇಕೆಂದೂ ನಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸಬೇಕೆಂದೂ ಯೇಸು ಹೇಳಿದ್ದಾನೆ.—ಮತ್ತಾಯ 5:44.

“ಈ ದೃಢ ನಿಶ್ಚಯವನ್ನು ಪರೀಕೆಗ್ಷೆ ಹಾಕಿದ ಒಂದು ಅತಿ ಕಠಿನ ಪರಿಸ್ಥಿತಿಯು ನನ್ನ ನೆನಪಿಗೆ ಬರುತ್ತದೆ. ಫ್ರಾನ್ಸ್‌ ದೇಶವು ನಾಸಿ ಸ್ವಾಧೀನವಾದಾಗ, ನಮ್ಮ ಕಟ್ಟಡದ ಒಬ್ಬ ನೆರೆಯವಳಿಂದಾಗಿ ನನ್ನ ತಾಯಿ ಬಹಳ ಕಷ್ಟ ಅನುಭವಿಸಿದರು. ತಾಯಿಯ ವಿರುದ್ಧ ಜರ್ಮನ್‌ ಪೊಲೀಸರಿಗೆ ಅವಳು ದೂರು ಕೊಟ್ಟದ್ದರಿಂದಾಗಿ ನನ್ನ ತಾಯಿ ಎರಡು ವರ್ಷ ಜರ್ಮನ್‌ ಕೂಟ ಶಿಬಿರಗಳಲ್ಲಿ ಕಳೆದರು, ಅಲ್ಲಿ ಅವರು ಬಹುಮಟ್ಟಿಗೆ ಸಾಯುವುದಕ್ಕಿದ್ದರು. ಯುದ್ಧಾನಂತರ, ಆ ಸ್ತ್ರೀಯು ಜರ್ಮನ್‌ ಸಹೋದ್ಯಮಿಯೆಂದು ತಪ್ಪುಹೊರಿಸುವ ಕಾಗದಕ್ಕೆ ನನ್ನ ತಾಯಿ ಸಹಿ ಹಾಕುವಂತೆ ಫ್ರೆಂಚ್‌ ಪೊಲೀಸರು ಬಯಸಿದರು. ಆದರೆ ನನ್ನ ತಾಯಿ ನಿರಾಕರಿಸುತ್ತಾ ‘ಒಳ್ಳೆದು ಮತ್ತು ಕೆಟ್ಟದರ ತೀರ್ಪುಮಾಡುವವನೂ ಪ್ರತಿಫಲಗಾರನೂ ದೇವರೇ’ ಎಂದರು. ಕೆಲವು ವರ್ಷಗಳ ಬಳಿಕ ಇದೇ ನೆರೆಯವಳು ಮಾರಕ ಕ್ಯಾನ್ಸರ್‌ ರೋಗಕ್ಕೆ ಗುರಿಯಾದಳು. ಅವಳ ದುರ್ಭಾಗ್ಯಕ್ಕಾಗಿ ಹಿಗ್ಗುವ ಬದಲಾಗಿ ಅವಳ ಜೀವಿತದ ಅಂತಿಮ ತಿಂಗಳುಗಳನ್ನು ಸಾಧ್ಯವಾದಷ್ಟು ಆರಾಮಕರವಾಗಿ ಮಾಡುವಂತೆ ನನ್ನ ತಾಯಿ ಅನೇಕ ತಾಸುಗಳನ್ನು ಕಳೆದರು. ದ್ವೇಷದ ಮೇಲಣ ಈ ವಿಜಯವನ್ನು ನಾನೆಂದೂ ಮರೆಯೆನು.”

ಅನ್ಯಾಯದ ಎದುರಿನಲ್ಲಿ ತತಾಧ್ವಾರಿತ ಪ್ರೀತಿಯ ಶಕ್ತಿಯನ್ನು ಈ ಎರಡು ಉದಾಹರಣೆಗಳು ಚಿತ್ರಿಸುತ್ತವೆ. ಆದರೂ, ಬೈಬಲು ತಾನೆ “ಪ್ರೀತಿಸುವ ಸಮಯ, ದ್ವೇಷಿಸುವ ಸಮಯ” ಇದೆಯೆಂದು ಹೇಳುತ್ತದಲ್ಲಾ. (ಪ್ರಸಂಗಿ 3:1, 8) ಅದು ಹೇಗೆ?

ದ್ವೇಷಿಸುವ ಸಮಯ

ಎಲ್ಲ ವಿಧದ ದ್ವೇಷವನ್ನು ದೇವರು ಖಂಡಿಸುವುದಿಲ್ಲ. ಯೇಸು ಕ್ರಿಸ್ತನ ಕುರಿತು ಬೈಬಲು ಹೇಳುವುದು: “ನೀನು ಧರ್ಮವನ್ನು ಪ್ರೀತಿಸಿದಿ, ಅಧರ್ಮವನ್ನು ದ್ವೇಷಿಸಿದಿ.” (ಇಬ್ರಿಯ 1:9) ಆದರೂ, ಕೆಟ್ಟದ್ದನ್ನು ದ್ವೇಷಿಸುವುದು ಮತ್ತು ಕೆಟ್ಟದ್ದನ್ನು ಮಾಡುವವನನ್ನು ದ್ವೇಷಿಸುವುದರ ನಡುವೆ ಒಂದು ವ್ಯತ್ಯಾಸವಿದೆ.

ಪ್ರೀತಿ ಮತ್ತು ದ್ವೇಷದ ನಡುವೆ ಯೋಗ್ಯ ಸಮತೆಯನ್ನು ಯೇಸು ಉದಾಹರಿಸಿದನು. ಕಪಟತನವನ್ನು ಅವನು ದ್ವೇಷಿಸಿದನು, ಆದರೆ ಕಪಟಿಗಳು ತಮ್ಮ ಯೋಚನಾ ರೀತಿಯನ್ನು ಬದಲಾಯಿಸುವಂತೆ ಆತನು ಪ್ರಯತ್ನಿಸಿದನು. (ಮತ್ತಾಯ 23:27, 28; ಲೂಕ 7:36-50) ಹಿಂಸಾಚಾರವನ್ನು ಅವನು ಖಂಡಿಸಿದನು, ಆದರೆ ತನ್ನನ್ನು ಕೊಂದವರಿಗೋಸ್ಕರ ಪ್ರಾರ್ಥಿಸಿದನು. (ಮತ್ತಾಯ 26:52; ಲೂಕ 23:34) ಮತ್ತು ಲೋಕವು ಅವನನ್ನು ನಿಷ್ಕಾರಣವಾಗಿ ದ್ವೇಷಮಾಡಿದರೂ, ಲೋಕಕ್ಕೆ ಜೀವಕೊಡುವುದಕ್ಕಾಗಿ ಅವನು ತನ್ನ ಸ್ವಂತ ಜೀವವನ್ನು ಅರ್ಪಿಸಿದನು. (ಯೋಹಾನ 6:33, 51; 15:18, 25) ತತಾಧ್ವಾರಿತ ಪ್ರೀತಿ ಮತ್ತು ದಿವ್ಯ ದ್ವೇಷದ ಒಂದು ಪರಿಪೂರ್ಣ ಮಾದರಿಯನ್ನು ಆತನು ನಮಗಾಗಿ ಬಿಟ್ಟುಹೋದನು.

ಅದು ಯೇಸುವಿನಲ್ಲಿ ಎಬ್ಬಿಸಿದ ಹಾಗೆ, ಅನ್ಯಾಯವು ನಮ್ಮಲ್ಲಿ ಧರ್ಮಕ್ರೋಧವನ್ನು ಎಬ್ಬಿಸಬಹುದು. (ಲೂಕ 19:45, 46) ಆದರೂ ಕ್ರೈಸ್ತರು ತಾವೆ ಪ್ರತೀಕಾರವನ್ನು ಸಲ್ಲಿಸುವ ಅಧಿಕಾರವನ್ನು ಹೊಂದಿಲ್ಲ. “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ” ಎಂದು ಪೌಲನು ರೋಮಿನ ಕ್ರೈಸ್ತರಿಗೆ ಸಲಹೆ ಕೊಟ್ಟನು. “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. . . . ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ . . . ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.” (ರೋಮಾಪುರ 12:17-21) ದ್ವೇಷಕ್ಕೆ ಎಡೆಗೊಡಲು ಅಥವಾ ಕೆಟ್ಟತನಕ್ಕೆ ಸೇಡು ತೀರಿಸಲು ನಾವು ವ್ಯಕ್ತಿಪರವಾಗಿ ನಿರಾಕರಿಸುವಾಗ, ಪ್ರೀತಿಯು ಜಯಶಾಲಿಯಾಗುತ್ತದೆ.

ದ್ವೇಷರಹಿತವಾದ ಒಂದು ಲೋಕ

ದ್ವೇಷವು ಜಗದ್ವ್ಯಾಪಕ ಪ್ರಮಾಣದಲ್ಲಿ ಇಲ್ಲದೆ ಹೋಗುವುದಕ್ಕೆ, ಲಕ್ಷಾಂತರ ಜನರಲ್ಲಿ ಬೇರುಬಿಟ್ಟಿರುವ ಮನೋಭಾವಗಳು ಮಾರ್ಪಡಲೇಬೇಕು. ಇದನ್ನು ಹೇಗೆ ಗಳಿಸಸಾಧ್ಯವಿದೆ? ಪ್ರೊಫೆಸರ್‌ ಅರ್ವಿನ್‌ ಸ್ಟಾಬ್‌ ಕೆಳಗಿನ ಶಿಫಾರಸ್ಸನ್ನು ಮಾಡುತ್ತಾರೆ: “ನಾವು ಯಾರಿಗೆ ಹಾನಿ ಮಾಡುತ್ತೇವೊ ಅವರಿಗೆ ಅನಾದರ ತೋರಿಸುತ್ತೇವೆ, ಯಾರಿಗೆ ನೆರವಾಗುತ್ತೇವೊ ಅವರನ್ನು ಆದರಿಸುತ್ತೇವೆ. ನಾವು ನೆರವಾಗುವ ಜನರನ್ನು ಅಧಿಕ ಹೆಚ್ಚಾಗಿ ಆದರಿಸಲು ತೊಡಗುವಾಗ ಮತ್ತು ಸಹಾಯ ಕೊಡುವುದರಲ್ಲಿ ಅಂತರ್ಗತವಾಗಿರುವ ಸಂತೃಪ್ತಿಗಳನ್ನು ಅನುಭವಿಸುವಾಗ, ಅಧಿಕ ಹಿತಚಿಂತಕರೂ ಸಹಾಯಶೀಲರೂ ಆಗಿಯೂ ನಮ್ಮನ್ನು ಕಾಣುವೆವು. ಇತರರಿಗೆ ನೆರವಾಗುವ ಅತ್ಯಂತ ಹೆಚ್ಚು ವಿಸ್ತಾರದ ಪಾಲುಗಾರಿಕೆ ಯಾವುದರಲ್ಲಿದೆಯೊ ಆ ಸಮಾಜಗಳನ್ನು ನಿರ್ಮಿಸುವುದು ನಮ್ಮ ಧ್ಯೇಯಗಳಲ್ಲಿ ಒಂದಾಗಿರಬೇಕು.”—ಕೆಡುಕಿನ ಬೇರುಗಳು. (ಇಂಗ್ಲಿಷ್‌)

ಬೇರೊಂದು ಮಾತಿನಲ್ಲಿ ಹೇಳುವುದಾದರೆ, ದ್ವೇಷದ ನಿರ್ಮೂಲನೆಗಾಗಿ, ಯಾವುದರಲ್ಲಿ ಜನರು ಒಬ್ಬರಿಗೊಬ್ಬರು ನೆರವಾಗುವ ಮೂಲಕ ಪ್ರೀತಿಸಲು ಕಲಿಯುತ್ತಾರೊ ಅಂತಹ ಒಂದು ಸಮಾಜದ, ಹಾಗೂ ಎಲ್ಲಿ ಜನರು ದುರಭಿಪ್ರಾಯ, ರಾಷ್ಟ್ರೀಯತೆ, ಜಾತೀಯತೆ, ಮತ್ತು ಗೋತ್ರೀಯತೆಯಿಂದ ಉಂಟಾಗುವ ವೈಷಮ್ಯಗಳೆಲ್ಲವನ್ನು ಮರೆತುಬಿಡುತ್ತಾರೊ ಆ ಸಮಾಜದ ಆವಶ್ಯಕತೆ ಇದೆ. ಅಂತಹ ಒಂದು ಸಮಾಜವು ಅಸ್ತಿತ್ವದಲ್ಲಿದೆಯೆ? ಚೀನಾ ದೇಶದ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ವೈಯಕ್ತಿವಾಗಿ ದ್ವೇಷವನ್ನು ಅನುಭವಿಸಿದ ಒಬ್ಬ ಮನುಷ್ಯನ ಅನುಭವವನ್ನು ಪರಿಗಣಿಸಿರಿ.

“ಸಾಂಸ್ಕೃತಿಕ ಕ್ರಾಂತಿಯು ಪ್ರಾರಂಭವಾದಾಗ, ‘ಸಮಾಜ ಅಂತಸ್ತಿನ ಹೋರಾಟಗಳ’ಲ್ಲಿ ರಾಜಿಸಂಧಾನಕ್ಕೆ ಯಾವ ಅವಕಾಶವೂ ಇಲ್ಲವೆಂದು ನಮಗೆ ಕಲಿಸಲಾಯಿತು. ದ್ವೇಷವು ನೆಲೆನಿಲ್ಲುವ ಪ್ರವೃತ್ತಿಯಾಗಿತ್ತು. ನಾನು ಮಾವೊ ಪಕ್ಷದ ಯುವ ಸೇನೆ (ರೆಡ್‌ ಗಾರ್ಡ್‌)ಯ ಸದಸ್ಯನಾದೆ ಮತ್ತು ‘ಅಂತಸ್ತು ವೈರಿ’ ಗಳಿಗಾಗಿ—ನನ್ನ ಸ್ವಂತ ಕುಟುಂಬದವರಲ್ಲಿ ಸಹ—ಹುಡುಕತೊಡಗಿದೆ. ಆಗ ಕೇವಲ ಹದಿಪ್ರಾಯದವನಾಗಿದ್ದಗ್ಯೂ, ‘ಪ್ರಗತಿ ವಿರೋಧಿ ಪ್ರವೃತ್ತಿಗಳ’ ಪುರಾವೆಗಾಗಿ ಹುಡುಕಾಡುತ್ತಾ ಮನೆ ಮನೆಯ ತಲಾಷುಗಳಲ್ಲಿ ನಾನು ಭಾಗವಹಿಸಿದೆ. ‘ಕ್ರಾಂತಿ ವಿರೋಧಿ’ ವ್ಯಕ್ತಿಯೊಬ್ಬನನ್ನು ಖಂಡಿಸಿದ ಒಂದು ಸಾರ್ವಜನಿಕ ಕೂಟವನ್ನೂ ನಾನು ನಡೆಸಿದೆ. ನಿಶ್ಚಯವಾಗಿ ಕೆಲವೊಮ್ಮೆ ಈ ಆರೋಪಗಳು ರಾಜಕೀಯ ಪರಿಗಣನೆಗಳಿಗಿಂತ ಹೆಚ್ಚಾಗಿ ವ್ಯಕ್ತಿಪರ ದ್ವೇಷದ ಮೇಲೆ ಆಧಾರಿಸಿದ್ದವು.

“ಅನೇಕಾನೇಕ ಜನರಿಗೆ—ಯುವಕರು, ವೃದ್ಧರು, ಪುರುಷರು ಮತ್ತು ಸ್ತ್ರೀಯರು—ಅಧಿಕಾಧಿಕ ಕ್ರೂರವಾದ ದೈಹಿಕ ದಂಡನೆ ಕೊಡಲ್ಪಟ್ಟದ್ದನ್ನು ನಾನು ಕಂಡೆ. ನನ್ನ ಶಾಲಾ ಅಧ್ಯಾಪಕರಲ್ಲಿ ಒಬ್ಬರನ್ನು—ಸುಸನ್ಮಾನಿತರು—ಪಾತಕಿಯೊ ಎನ್ನುವಂತೆ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಎರಡು ತಿಂಗಳುಗಳ ಬಳಿಕ ನನ್ನ ಶಾಲೆಯ ಇನ್ನೊಬ್ಬ ಸನ್ಮಾನ್ಯ ಅಧ್ಯಾಪಕರ ಶವವು, ಸೂಚೌ ನದಿಯಲ್ಲಿ ಕಾಣಸಿಕ್ಕಿತು ಮತ್ತು ನನ್ನ ಇಂಗ್ಲಿಷ್‌ ಅಧ್ಯಾಪಕರು ನೇಣುಹಾಕಿ ಸಾಯುವಂತೆ ಬಲಾತ್ಕರಿಸಲ್ಪಟ್ಟರು. ನನಗೆ ಧಕ್ಕೆ ತಗಲಿತು, ನಾನು ತಬ್ಬಿಬ್ಬಾದೆ. ಇವರು ದಯಾಪರರಾದ ಜನರಾಗಿದ್ದರು. ಅವರನ್ನು ಈ ರೀತಿ ಸತ್ಕರಿಸುವುದು ತಪ್ಪಾಗಿತ್ತು! ಆದುದರಿಂದ ರೆಡ್‌ ಗಾರ್ಡ್‌ಗಳೊಂದಿಗಿನ ನನ್ನೆಲ್ಲ ಸಂಬಂಧಗಳನ್ನು ನಾನು ಕಡಿದುಬಿಟ್ಟೆ.

“ಚೀನಾವನ್ನು ಅಲ್ಪಕಾಲಿಕವಾಗಿ ಧುಮುಕಿಸಿದ ಈ ದ್ವೇಷಾವಧಿಯು, ಈ ತರದ ಏಕಮಾತ್ರ ಘಟನೆಯೆಂದು ನಾನೆಣಿಸುವುದಿಲ್ಲ. ಈ ಶತಮಾನವು ದ್ವೇಷದ ಎಷ್ಟೊ ಸ್ಫೋಟನೆಗಳನ್ನು ಕಂಡಿದೆ. ಆದರೂ ಪ್ರೀತಿಯು ದ್ವೇಷವನ್ನು ಜಯಿಸಬಲ್ಲದೆಂಬ ಮನವರಿಕೆ ನನಗಾಗಿದೆ. ಅದು ನಾನು ಸ್ವತಃ ಕಂಡಿರುವ ವಿಷಯ. ಯೆಹೋವನ ಸಾಕ್ಷಿಗಳೊಂದಿಗೆ ನಾನು ಸಹವಾಸಿಸಲಾರಂಭಿಸಿದಾಗ, ವಿವಿಧ ಕುಲಗಳ ಮತ್ತು ಹಿನ್ನೆಲೆಗಳ ಜನರೆಡೆಗೆ ಅವರು ತೋರಿಸಿದ ನೈಜ ಪ್ರೀತಿಯಿಂದ ನಾನು ಪ್ರಭಾವಿತನಾದೆ. ಬೈಬಲು ವಾಗ್ದಾನಿಸುವ ಪ್ರಕಾರ, ಎಲ್ಲಾ ಜನರು ಒಬ್ಬರನ್ನೊಬ್ಬರು ಪ್ರೀತಿಸಲು ಕಲಿಯಲಿರುವ ಆ ಸಮಯಕ್ಕಾಗಿ ನಾನು ಎದುರುನೋಡುತ್ತೇನೆ.”

ಹೌದು, ದ್ವೇಷವು ಅಳಿಸಲ್ಪಡಬಲ್ಲದೆಂಬುದಕ್ಕೆ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮಾಜವು ಸಜೀವ ಪುರಾವೆಯಾಗಿದೆ. ಅವರ ಹಿನ್ನೆಲೆಯು ಯಾವುದೆ ಇರಲಿ, ಸಾಕ್ಷಿಗಳು ದುರಭಿಪ್ರಾಯವನ್ನು ಪರಸ್ಪರ ಆದರದಿಂದ ಸ್ಥಾನಪಲ್ಲಟಮಾಡಲು ಮತ್ತು ಕುಲದ, ಜಾತೀಯ, ಯಾ ರಾಷ್ಟ್ರೀಯತೆಗೆ ಸಂಬಂಧಿಸಿದ ಯಾವುದೆ ಸುಳಿವನ್ನು ತೊಡೆದುಹಾಕಲು ಪ್ರಯಾಸಪಡುತ್ತಿದ್ದಾರೆ. ಅವರ ಸಾಫಲ್ಯಕ್ಕೆ ಒಂದು ಆಧಾರವು ತತಾಧ್ವಾರಿತ ಪ್ರೀತಿಯನ್ನು ಪ್ರದರ್ಶಿಸುವುದರಲ್ಲಿ ಯೇಸು ಕ್ರಿಸ್ತನನ್ನು ಅನುಕರಿಸಿರುವ ಅವರ ದೃಢ ನಿಶ್ಚಯವೆ. ಇನ್ನೊಂದು ಮೂಲಾಧಾರವು, ತಾವು ಅನುಭವಿಸುತ್ತಿರುವ ಯಾವುದೆ ಅನ್ಯಾಯಕ್ಕೆ ಅಂತ್ಯವನ್ನು ತರಲು ದೇವರ ರಾಜ್ಯಕ್ಕಾಗಿ ಅವರು ಕಾಯುವುದೆ.

ದ್ವೇಷರಹಿತ ಲೋಕವನ್ನು, ದ್ವೇಷಿಸಲಿಕ್ಕಾಗಿ ಕೆಟ್ಟದ್ದು ಕೂಡ ಇರದ ಒಂದು ಜಗತ್ತನ್ನು ಗಳಿಸಿಕೊಳ್ಳಲು ದೇವರ ರಾಜ್ಯವು ನಿಶ್ಚಿತವಾದ ಪರಿಹಾರ ಮಾರ್ಗವಾಗಿದೆ. “ನೂತನಾಕಾಶಮಂಡಲ” ಎಂದು ಬೈಬಲಿನಲ್ಲಿ ವರ್ಣಿಸಲ್ಪಟ್ಟ ಈ ಸ್ವರ್ಗೀಯ ಸರಕಾರವು ಅನ್ಯಾಯ ಮುಕ್ತ ಜಗತ್ತಿನ ಖಾತ್ರಿಯನ್ನು ಕೊಡುತ್ತದೆ. ಅದು ಒಂದು “ನೂತನಭೂಮಂಡಲ”ದ ಮೇಲೆ ಅಥವಾ ಒಬ್ಬರನ್ನೊಬ್ಬರು ಪ್ರೀತಿಸಲು ಶಿಕ್ಷಣ ಹೊಂದಲ್ಪಡುವ ಜನರ ಹೊಸ ಸಮಾಜದ ಮೇಲೆ ಆಡಳಿತ ಮಾಡುವುದು. (2 ಪೇತ್ರ 3:13; ಯೆಶಾಯ 54:13) ಮಾಕ್ಸ್‌, ಸಿಮೋನ್‌ ಮತ್ತು ಇತರ ಅನೇಕರು ಸಾಕ್ಷ್ಯಕೊಡುವ ಪ್ರಕಾರ ಈ ಶಿಕ್ಷಣವು ಈಗಾಗಲೆ ಪ್ರಗತಿ ಹೊಂದುತ್ತಿದೆ. ದ್ವೇಷವನ್ನು ಮತ್ತು ಅದರ ಕಾರಣಗಳನ್ನು ತೊಡೆದುಹಾಕಲು ಒಂದು ಜಗದ್ವ್ಯಾಪಕ ಕಾರ್ಯಕ್ರಮದ ಒಂದು ಕ್ಷಣದರ್ಶನವು ಇದಾಗಿದೆ.

ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಪರಿಣಾಮವನ್ನು ವಿವರಿಸುತ್ತಾನೆ: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ದೇವರು ತಾನೆ ದ್ವೇಷವನ್ನು ನಿಲ್ಲಿಸಿಬಿಡುವ ಘೋಷಣೆ ಮಾಡಿರುವನು. ಅದು ನಿಜವಾಗಿಯೂ ಪ್ರೀತಿಸುವ ಸಮಯವಾಗಿರುವುದು.

[ಪುಟ 7 ರಲ್ಲಿರುವ ಚಿತ್ರಗಳು]

ನಾಸಿಗಳು ಮಾಕ್ಸ್‌ ಲೀಬ್‌ಸ್ಟರ್‌ನ ಎಡ ತೋಳಿನ ಮೇಲೆ ಒಂದು ಸೆರೆ ನಂಬ್ರವನ್ನು ಹಚ್ಚೆ ಚುಚ್ಚಿದರು

[ಪುಟ 8 ರಲ್ಲಿರುವ ಚಿತ್ರ]

ದ್ವೇಷವು ಬೇಗನೆ ಒಂದು ಗತ ಕಾಲದ ವಿಷಯವಾಗುವುದು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ