ಸ್ವಾತಂತ್ರ್ಯಕ್ಕೆ ಇಕ್ಕಟ್ಟಾದ ಹಾದಿ
ವಿಶ್ವವು ನೈಸರ್ಗಿಕ ನಿಯಮಗಳಿಂದ ಆಳಲ್ಪಡುತ್ತಿದೆ ಎಂಬುದನ್ನು ಬುದ್ಧಿಶಕ್ತಿಯುಳ್ಳ ಕೆಲವು ಜನರು ಅಲ್ಲಗಳೆಯುತ್ತಾರೆ. ಸಣ್ಣ ಪರಮಾಣುಗಳಿಂದ ಹಿಡಿದು ಸಾವಿರಾರುಕೋಟಿಗಳಷ್ಟು ನಕ್ಷತ್ರಗಳನ್ನು ಒಳಗೊಂಡಿರುವ ಬಲಿಷ್ಠವಾದ ಆಕಾಶಗಂಗೆಗಳ ವರೆಗೆ ಎಲ್ಲವನ್ನೂ ಈ ನಿಯಮಗಳು ನಿಯಂತ್ರಿಸುತ್ತವೆ. ಅವುಗಳು ಇಲ್ಲದಿರುತ್ತಿದ್ದರೆ, ಯೋಜನೆ ಮಾಡುವುದಾಗಲಿ ತಿಳಿವಳಿಕೆಯಾಗಲಿ ಇರುತ್ತಿದ್ದಿಲ್ಲ; ಜೀವವೇ ಅಸ್ತಿತ್ವದಲ್ಲಿರುತ್ತಿರುಲಿಲ್ಲ. ನೈಸರ್ಗಿಕ ನಿಯಮಗಳನ್ನು ಗ್ರಹಿಸುವ ಮೂಲಕ ಮತ್ತು ಅವುಗಳೊಂದಿಗೆ ಕಾರ್ಯನಡಿಸುವ ಮೂಲಕ ಮನುಷ್ಯನು, ಚಂದ್ರನ ಮೇಲೆ ನಡೆದಾಡುವುದು ಮತ್ತು ಭೂಮಿಯ ಮೇಲಿನ ಯಾವುದೇ ಸ್ಥಳದಿಂದ ಅಥವಾ ಭೂಮಿಯ ವಾಯುಮಂಡಲದ ಹೊರಗಿನಿಂದಲೂ, ವರ್ಣ ಚಿತ್ರಗಳನ್ನು ನಮ್ಮ ಮನೆಗಳಲ್ಲಿರುವ ಟೆಲಿವಿಷನ್ ಪರದೆಗಳ ಮೇಲಕ್ಕೆ ಪ್ರಸರಣ ಮಾಡುವಂತಹ ದಿಗ್ಭಮ್ರೆಗೊಳಿಸುವ ಚಮತ್ಕಾರಗಳನ್ನು ನೆರವೇರಿಸಲು ಶಕ್ತನಾಗಿದ್ದಾನೆ.
ಆದರೆ ನೈತಿಕ ನಿಯಮಗಳ ಕುರಿತೇನು? ಅವುಗಳಿಗೆ ಅಂಟಿಕೊಳ್ಳುವುದು ಅದರಷ್ಟೇ ಪ್ರಯೋಜನಕರವೂ ಫಲಭರಿತವೂ ಆದದ್ದಾಗಿದೆಯೆ? ನೈತಿಕ ನಿಯಮಗಳಿಲ್ಲವೆಂದು ಅನೇಕರು ಭಾವಿಸುವಂತೆ ತೋರುತ್ತದೆ ಮತ್ತು ತಮ್ಮ ಸ್ವಂತ ಅಪೇಕ್ಷೆಗಳಿಗೆ ಸರಿಹೊಂದುವ ಧರ್ಮವನ್ನು ಅಥವಾ ಸ್ವಚ್ಛಂದತೆಯ ತತ್ವಜ್ಞಾನವನ್ನು ಆರಿಸಿಕೊಳ್ಳುತ್ತಾರೆ.
ಆದರೂ, ಇನ್ನೊಂದು ದಾರಿ, ಬೈಬಲಿನಲ್ಲಿ ರೇಖಿಸಲ್ಪಟ್ಟಿರುವಂತೆ ‘ಜೀವಕ್ಕೆ ನಡೆಸುವ ಇಕ್ಕಟ್ಟಾದ ದಾರಿ’ ಯನ್ನು ಆರಿಸಿಕೊಳ್ಳುವವರು ಕೆಲವರಿದ್ದಾರೆ. ಇಕ್ಕಟ್ಟಾದ ದಾರಿಯ ಕುರಿತಾಗಿ ಯೇಸು “ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ” ಎಂದು ಹೇಳಿರುವುದರಿಂದ, ಇದು ಕೇವಲ ಅಲ್ಪಸಂಖ್ಯಾತರ ಆಯ್ಕೆಯಾಗಿದೆಯೆಂದು ನಾವು ಆಶ್ಚರ್ಯಗೊಳ್ಳಬಾರದು. (ಮತ್ತಾಯ 7:14) ಕೇವಲ ಕೆಲವರೇಕೆ?
ಇಕ್ಕಟ್ಟಾದ ಮಾರ್ಗವು ದೇವರ ನಿಯಮಗಳು ಮತ್ತು ಮೂಲತತ್ವಗಳಿಂದ ನಿರ್ಬಂಧಿಸಲ್ಪಡುವ ಕಾರಣದಿಂದಲೇ. ತನ್ನ ಜೀವಿತವನ್ನು ದೇವರ ಮಟ್ಟಗಳಿಗೆ ಸರಿಹೊಂದಿಸಲು ಪ್ರಾಮಾಣಿಕವಾಗಿ ಬಯಸುತ್ತಿರುವ ಯಾರಾದರೊಬ್ಬರಿಗೆ ಮಾತ್ರವೇ ಇದು ಹಿಡಿಸುತ್ತದೆ. ಸ್ವಾತಂತ್ರ್ಯದ ಭ್ರಮೆಯನ್ನು ಕೊಡುವ, ಆದರೆ ವಾಸ್ತವವಾಗಿ ಅಡಿಯಾಳುಗಳನ್ನಾಗಿ ಮಾಡುವ ವಿಶಾಲ ಹಾದಿಗೆ ತೀರ ತದ್ವಿರುದ್ಧವಾಗಿ, ನಿರ್ಬಂಧಿತವಾಗಿ ತೋರುವ ಇಕ್ಕಟ್ಟಾದ ಹಾದಿಯು, ವ್ಯಕ್ತಿಯೊಬ್ಬನನ್ನು ಪ್ರಾಮುಖ್ಯವಾದ ಪ್ರತಿಯೊಂದು ವಿಷಯದಲ್ಲಿ ಸ್ವತಂತ್ರನನ್ನಾಗಿ ಮಾಡುತ್ತದೆ. “ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣ” ದಿಂದ ಅದರ ಗಡಿರೇಖೆಗಳು ಸ್ಥಾಪಿಸಲ್ಪಟ್ಟಿವೆ.—ಯಾಕೋಬ 1:25.
ಇಕ್ಕಟ್ಟಾದ ಹಾದಿಯು ಬಿಡುಗಡೆ ಮಾಡುವ ವಿಧ
ಇಕ್ಕಟ್ಟಾದ ಹಾದಿಯ ಮೇಲೆ ಉಳಿಯುವುದು ಯಾವಾಗಲೂ ಸುಲಭವಾಗಿಲ್ಲ ನಿಜ. ಬದುಕಿರುವ ಪ್ರತಿಯೊಬ್ಬ ಮಾನವನು ಅಪರಿಪೂರ್ಣನಾಗಿದ್ದಾನೆ ಮತ್ತು ತಪ್ಪುಮಾಡುವುದರ ಕಡೆಗೆ ವಂಶಾನುಕ್ರಮವಾಗಿ ಬಂದ ಪ್ರವೃತ್ತಿಯು ಅವನಲ್ಲಿದೆ. ಆದುದರಿಂದ ಒಬ್ಬ ವ್ಯಕ್ತಿಯು ಸ್ವಲ್ಪ ದಾರಿತಪ್ಪುವ ಪ್ರವೃತ್ತಿಯುಳ್ಳವನಾಗಿರಬಹುದು. ಆದರೆ, ‘ತಡೆಯನ್ನುಂಟುಮಾಡುವ ಹಾದಿ’ಗೆ ಅಂಟಿಕೊಳ್ಳುವುದರ ಪ್ರಯೋಜನಗಳು, ಅಗತ್ಯವಿರುವ ಯಾವುದೇ ಸಶ್ವಿಸ್ತು ಅಥವಾ ಸರಿಪಡಿಸುವಿಕೆಗಳಿಗೆ ಅರ್ಹವಾಗಿವೆ, ಏಕೆಂದರೆ ದೇವರು ‘ನಮಗೆ ವೃದ್ಧಿಮಾರ್ಗವನ್ನು ಬೋಧಿಸುತ್ತಾನೆ.’—ಯೆಶಾಯ 48:17; ರೋಮಾಪುರ 3:23.
ದೃಷ್ಟಾಂತಿಸಲಿಕ್ಕಾಗಿ: ಬುದ್ಧಿವಂತ ಹೆತ್ತವರು ತಮ್ಮ ಮಕ್ಕಳಿಗಾಗಿ ಆಹಾರಪಥ್ಯದ ಒಂದು ‘ತಡೆಯನ್ನುಂಟುಮಾಡುವ ಹಾದಿ’ ಯನ್ನು ರೇಖಿಸುತ್ತಾರೆ. ಇದು ಕೆಲವೊಮ್ಮೆ ಊಟದ ಸಮಯಗಳಲ್ಲಿ ಕಟ್ಟುನಿಟ್ಟಿನವರಾಗಿರುವುದನ್ನು ಅರ್ಥೈಸುತ್ತದೆ. ಆದರೆ ಮಕ್ಕಳು ಹೆಚ್ಚು ದೊಡ್ಡವರಾಗಿ ಬೆಳೆಯುವಾಗ, ಅವರು ತಮ್ಮ ಹೆತ್ತವರ ಪ್ರೀತಿಪೂರ್ಣ ಶಿಸ್ತನ್ನು ಗಣ್ಯಮಾಡುವರು. ವಯಸ್ಕರೋಪಾದಿ ಅವರು ಆರೋಗ್ಯಕರವಾದ ಆಹಾರಕ್ಕಾಗಿ ಅಭಿರುಚಿಯನ್ನು ಬೆಳೆಸಿಕೊಂಡಿರುವರು. ಮತ್ತು ಲಭ್ಯವಿರುವ ಪೌಷ್ಟಿಕ ಆಹಾರದ ಸಮಗ್ರ ವೈವಿಧ್ಯವು, ನಿರ್ಬಂಧಿತರೆಂಬ ಅವರ ಸರ್ವಸಾಮಾನ್ಯ ಭಾವನೆಯನ್ನು ಹೊರಹಾಕುವುದು.
ಒಂದು ಆತ್ಮಿಕ ರೀತಿಯಲ್ಲಿ, ಜೀವಕ್ಕೆ ನಡೆಸುವ ಇಕ್ಕಟ್ಟಾದ ಹಾದಿಯ ಮೇಲಿರುವವರೊಂದಿಗೆ ದೇವರು ತದ್ರೀತಿ ಕಾರ್ಯನಡಿಸುತ್ತಾನೆ. ಸಂತೋಷ ಮತ್ತು ನಿಜ ಸ್ವಾತಂತ್ರ್ಯಕ್ಕೆ ನಡೆಸುವ ಹಿತಕರವಾದ ಅಪೇಕ್ಷೆಗಳನ್ನು ಆತನು ದೀನ ಜನರೊಳಗೆ ಬೆಳೆಸುತ್ತಾನೆ. ತನ್ನ ವಾಕ್ಯವಾದ ಬೈಬಲನ್ನು ಒದಗಿಸುವ ಮೂಲಕ ಆತನು ಇದನ್ನು ಮಾಡುತ್ತಾನೆ. ಇದಕ್ಕೆ ಕೂಡಿಸಿ, ನಮಗೆ ಸಹಾಯ ಮಾಡಲಿಕ್ಕಾಗಿ ತನ್ನ ಆತ್ಮಕ್ಕಾಗಿ ಪ್ರಾರ್ಥಿಸುವಂತೆ ಆತನು ನಮ್ಮನ್ನು ಆಮಂತ್ರಿಸುತ್ತಾನೆ, ಮತ್ತು ಇಕ್ಕಟ್ಟಾದ ದಾರಿಯ ಮೇಲೆ ಉಳಿಯುವಂತೆ ನಮ್ಮನ್ನು ಉತ್ತೇಜಿಸಬಲ್ಲ ಜೊತೆಕ್ರೈಸ್ತರೊಂದಿಗೆ ಸಹವಾಸ ಮಾಡುವಂತೆ ಆತನು ನಮಗೆ ಆಜ್ಞಾಪಿಸುತ್ತಾನೆ. (ಇಬ್ರಿಯ 10:24, 25) ಹೌದು, ದೇವರು ಪ್ರೀತಿಸ್ವರೂಪಿಯಾಗಿದ್ದಾನೆ ಮತ್ತು ಈ ಶ್ರೇಷ್ಠ ಗುಣವು ಆತನ ಉದ್ದೇಶಗಳನ್ನು ಹಾಗೂ ಆತನ ಎಲ್ಲಾ ವಿಧಾನಗಳನ್ನು ಒತ್ತಿಹೇಳುತ್ತದೆ.—1 ಯೋಹಾನ 4:8.
ಪ್ರೀತಿ, ಶಾಂತಿ, ಸೌಶೀಲ್ಯ, ಸ್ವನಿಯಂತ್ರಣ, ಮತ್ತು ದೇವರಾತ್ಮದ ಇತರ ಫಲಗಳು ಬಳಕೆಯಲ್ಲಿರುವಾಗ, ಇಕ್ಕಟ್ಟಾದ ಹಾದಿಯು ನಿರ್ಬಂಧಿತವಾದದ್ದಾಗಿ ತೋರುವುದಿಲ್ಲ. ಶಾಸ್ತ್ರವಚನವು ಹೇಳುವಂತೆ, “ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.” (ಗಲಾತ್ಯ 5:22, 23) “ಕರ್ತ [“ಯೆಹೋವ,” NW]ನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.” (2 ಕೊರಿಂಥ 3:17) ಈಗಲೂ, ನಿಜ ಕ್ರೈಸ್ತರು ಈ ಸ್ವಾತಂತ್ರ್ಯದ ರುಚಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಭವಿಷ್ಯತ್ತಿನ ಭಯ ಮತ್ತು ಮರಣದ ಮೂಢ ಭಯಗಳಂತಹ, ಇಂದು ಜನರನ್ನು ಸಂಕಟಕ್ಕೀಡುಮಾಡುತ್ತಿರುವ ಭಯಗಳಲ್ಲಿ ಹೆಚ್ಚಿನವುಗಳಿಂದ ಅವರು ಸ್ವತಂತ್ರರಾಗಿದ್ದಾರೆ. “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರು” ವಾಗ, ಭವಿಷ್ಯತ್ತನ್ನು ನಿರೀಕ್ಷಿಸುವುದು ಎಷ್ಟು ರೋಮಾಂಚಕ! (ಯೆಶಾಯ 11:9) ಆಗ, ದುಷ್ಕೃತ್ಯದ ಭಯವು ಸಹ ಇನ್ನುಮುಂದೆ ಇರುವುದಿಲ್ಲ. ಬೀಗಗಳು ಮತ್ತು ಕಂಬಿಗಳು ನಿತ್ಯಕ್ಕೂ ಇಲ್ಲದೆ ಹೋಗುವವು. ಎಲ್ಲರಿಗೆ ಹಗಲು ಮತ್ತು ರಾತ್ರಿ, ಮನೆಯಲ್ಲಿ ಮತ್ತು ಮನೆಯ ಹೊರಗಡೆ, ಸ್ವತಂತ್ರ ಮತ್ತು ಸುರಕ್ಷಿತ ಅನಿಸಿಕೆಯಾಗುವುದು. ನಿಜವಾಗಿಯೂ ಅದು ಸ್ವತಂತ್ರವಾಗಿರುವುದು!
ದೇವರ ಸಹಾಯದ ಆಶ್ವಾಸನೆ ನಮಗಿದೆ
ದೇವರ ಮಟ್ಟಗಳಿಗನುಸಾರ ಜೀವಿಸುವುದು ಪ್ರಯತ್ನವನ್ನು ಕೇಳಿಕೊಳ್ಳುತ್ತದೆ ನಿಜ, ಆದರೂ ಅಪರಿಪೂರ್ಣ ಮಾನವರಿಗೆ ಸಹ “ಆತನ ಆಜ್ಞೆಗಳು ಭಾರವಾದವುಗಳಲ್ಲ.” (1 ಯೋಹಾನ 5:3) ನಾವು ಇಕ್ಕಟ್ಟಾದ ಹಾದಿಗೆ ಹೊಂದಿಕೊಂಡು, ಅದರ ಮೇಲೆ ನಡೆಯುವುದರ ಪ್ರಯೋಜನಗಳನ್ನು ಅನುಭವಿಸಿದಂತೆ, ವಿಶಾಲ ಹಾದಿಯ ಮೇಲಿರುವವರನ್ನು ಚಿತ್ರಿಸುವ ಕಾರ್ಯಚಟುವಟಿಕೆಗಳು ಮತ್ತು ಆಲೋಚನೆಗಾಗಿ ಬೆಳೆಯುತ್ತಿರುವ ದ್ವೇಷವನ್ನು ನಾವು ವಿಕಸಿಸಿಕೊಳ್ಳುತ್ತೇವೆ. (ಕೀರ್ತನೆ 97:10) ದೇವರ ಧರ್ಮಶಾಸ್ತ್ರಕ್ಕೆ ವಿಧೇಯರಾಗುವುದು ನಮ್ಮ ದೇವದತ್ತ ಮನಸ್ಸಾಕ್ಷಿಗೆ ಹಿಡಿಸುತ್ತದೆ. ಅನೇಕರ ವೈಲಕ್ಷಣ್ಯವಾಗಿರುವ “ಮನೋವ್ಯಥೆ” ಮತ್ತು “ಆತ್ಮಕ್ಲೇಶ”ಕ್ಕೆ ಬದಲಾಗಿ, ದೇವರು ವಾಗ್ದಾನಿಸುವುದು: “ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.” ಹೌದು, ಯೆಹೋವನಿಂದ ತರಬೇತುಗೊಳಿಸಲ್ಪಟ್ಟ ಒಂದು ಹೃದಯವು ಹರ್ಷಭರಿತವೂ ಸ್ವತಂತ್ರವೂ ಆಗಿರುತ್ತದೆ.—ಯೆಶಾಯ 65:14.
ನಮಗೆ ನಿಜ ಸ್ವಾತಂತ್ರ್ಯವು ಸಾಧ್ಯವಾಗುವಂತೆ ಮಾಡಲಿಕ್ಕಾಗಿ ಯೇಸು ಸತ್ತನು. ಬೈಬಲ್ ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಈಗ, ದೇವರ ಸ್ವರ್ಗೀಯ ರಾಜ್ಯದ ಅರಸನೋಪಾದಿ ಯೇಸು, ಆ ಯಜ್ಞದ ಪ್ರಯೋಜನಗಳನ್ನು ಜಾರಿಗೆ ತರುತ್ತಿದ್ದಾನೆ. ಶೀಘ್ರದಲ್ಲಿಯೇ, “ಮಹಾ ಹಿಂಸೆ”ಯ ಬಳಿಕ, ವಿಶಾಲ ಹಾದಿ ಮತ್ತು ಅದರ ಮೇಲಿರುವವರು ನಾಶಗೊಳಿಸಲ್ಪಡುವಾಗ, ಆತನು ವಿಧೇಯ ಮಾನವ ಕುಲವನ್ನು ಆ ಇಕ್ಕಟ್ಟಾದ ಹಾದಿಯಲ್ಲಿ ಉಳಿದಿರುವುದರಲ್ಲಿ ಅದರ ಅಂತ್ಯ—ಮಾನವ ಪರಿಪೂರ್ಣತೆ—ದ ತನಕ ತಾಳ್ಮೆಯಿಂದ ಮಾರ್ಗದರ್ಶಿಸಲಾರಂಭಿಸುವನು. (ಪ್ರಕಟನೆ 7:14-17; ಮತ್ತಾಯ 24:21, 29-31) ಕಟ್ಟಕಡೆಗೆ ನಾವು ಈ ಮಹಾ ವಾಗ್ದಾನದ ಕೈಗೂಡುವಿಕೆಯನ್ನು ಅನುಭೋಗಿಸುವೆವು: “ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” ಈ ದೇವದತ್ತ ಸ್ವಾತಂತ್ರ್ಯವು ಅತಿಶಯಿಸಲ್ಪಡಸಾಧ್ಯವಿಲ್ಲ. ಮರಣವು ಸಹ ತೆಗೆದುಹಾಕಲ್ಪಡುವುದು.—ರೋಮಾಪುರ 8:21; ಪ್ರಕಟನೆ 21:3, 4.
ಇಕ್ಕಟ್ಟಾದ ಹಾದಿಯು ಎಲ್ಲಿಗೆ ನಡೆಸುತ್ತದೆ ಎಂಬುದನ್ನು ಸ್ಪಷ್ಟವಾಗಿಗಿ ನೋಡುವ ಮತ್ತು ತಿಳಿದುಕೊಳ್ಳುವ ಮೂಲಕ, ಒಬ್ಬ ವ್ಯಕ್ತಿಯು ಈ ಮಾರ್ಗವನ್ನು ಆರಿಸಿಕೊಳ್ಳಲು ಮತ್ತು ಅದರುದ್ದಕ್ಕೂ ನಡೆಯುತ್ತಾ ಇರಲು ಹೆಚ್ಚು ಉತ್ತಮವಾಗಿ ಶಕ್ತನಾಗುತ್ತಾನೆ. ವಿಶೇಷವಾಗಿ ಎಳೆಯರು, ದೇವರ ಮಟ್ಟಗಳಿಂದ ಹೊರಿಸಲ್ಪಟ್ಟ ನಿರ್ಬಂಧಗಳೋಪಾದಿ ಯಾವುದನ್ನು ಅವರು ಪರಿಗಣಿಸುತ್ತಾರೋ, ಅದರ ಕುರಿತು ದೂರದೃಷ್ಟಿಯಿಲ್ಲದವರೂ ತಾಳ್ಮೆಗೆಡುವವರೂ ಆಗಿರದಂತೆ ಸಹಾಯ ಮಾಡಲ್ಪಡುತ್ತಾರೆ. ಇವುಗಳನ್ನು ದೇವರ ಪ್ರೀತಿಯ ರುಜುವಾತಿನೋಪಾದಿ ಮತ್ತು ವಿಶಾಲ ಹಾದಿಯ ಕೆಡುಕುಗಳ ವಿರುದ್ಧವಾದ ಒಂದು ಗುರಾಣಿಯೋಪಾದಿ ಅವಲೋಕಿಸಲು ಅವರು ಕಲಿಯುತ್ತಾರೆ. (ಇಬ್ರಿಯ 12:5, 6) ಒಂದು ಹಣ್ಣಿನ ಮರವು ಒಳ್ಳೆಯ ಫಲವನ್ನು ಉತ್ಪಾದಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುವಂತೆಯೇ, ದಿವ್ಯ ಗುಣಗಳನ್ನು ಮತ್ತು ಅಪೇಕ್ಷೆಗಳನ್ನು ಬೆಳೆಸಿಕೊಳ್ಳಲು ಸಮಯ ತಗಲುತ್ತದೆಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ಒಬ್ಬನು ತಾಳ್ಮೆಯಿಂದಿರುವ ಅಗತ್ಯವಿದೆ ನಿಶ್ಚಯ. ಆದರೆ ಮರವು ಸಾಗುವಳಿಮಾಡಲ್ಪಟ್ಟು ನೀರು ಹಾಯಿಸಲ್ಪಡುವಲ್ಲಿ ಫಲವನ್ನು ಉತ್ಪಾದಿಸುವುದು.
ಆದುದರಿಂದ ದೇವರ ವಾಕ್ಯವನ್ನು ಅಭ್ಯಾಸಿಸಿರಿ, ಇತರ ಕ್ರೈಸ್ತರೊಂದಿಗೆ ಸಹವಾಸ ಮಾಡಿರಿ, ಮತ್ತು ಪವಿತ್ರಾತ್ಮಕ್ಕಾಗಿ “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:17) “ನಿನ್ನ [“ನಿಮ್ಮ,” NW] ಮಾರ್ಗಗಳನ್ನು ಸರಾಗಮಾಡು” ವಂತೆ ನಿಮಗೆ ಸಹಾಯ ಮಾಡಲಿಕ್ಕಾಗಿ ದೇವರ ಮೇಲೆ ಭರವಸವಿಡಿರಿ. (ಜ್ಞಾನೋಕ್ತಿ 3:5, 6) ಆದರೆ ಇದೆಲ್ಲವೂ ಪ್ರಾಯೋಗಿಕವೊ? ಇದು ನಿಜವಾಗಿಯೂ ಕಾರ್ಯನಡಿಸುತ್ತದೊ? ಹೌದು, ಇದು ಹಿಂದಿನ ಲೇಖನದಲ್ಲಿ ಪ್ರಸ್ತಾಪಿಸಲ್ಪಟ್ಟಿದ್ದ ಟಾಮ್ ಹಾಗೂ ಮೇರಿಯರಿಗೆ ಸಹಾಯ ಮಾಡಿತು.
ವಿಶಾಲ ಹಾದಿಯ ಮೇಲೆ ನಡೆಯುವುದನ್ನು ಅವರು ನಿಲ್ಲಿಸಿದರು
ಟಾಮ್ ಬರೆಯುವುದು: “70 ಗಳ ಮಧ್ಯದಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ನಮ್ಮ ಮನೆಗೆ ಭೇಟಿ ನೀಡಿದಾಗ, ನಮಗೆ ಅವರೊಂದಿಗೆ ಸಂಪರ್ಕವಾಯಿತು. ಆ ಚರ್ಚೆಯು ಒಂದು ಬೈಬಲ್ ಅಧ್ಯಯನಕ್ಕೆ ನಡೆಸಿತು. ಹಂತಹಂತವಾಗಿ ನಾನು ನನ್ನ ಜೀವಿತವನ್ನು ಶುದ್ಧ ಮಾಡಿಕೊಳ್ಳಲಾರಂಭಿಸಿದೆ. 1982 ರಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ ಮತ್ತು ಈಗ ನಾನು ಸ್ಥಳಿಕ ಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈಗ ನಮ್ಮ ಮಗನೂ ದೀಕ್ಷಾಸ್ನಾನ ಪಡೆದುಕೊಂಡಿದ್ದಾನೆ. ನಾನು ಸತ್ಯವನ್ನು ಕಲಿಯುವುದಕ್ಕೆ ಮೊದಲಿನ ಆ ಎಲ್ಲಾ ವರ್ಷಗಳು ನನ್ನನ್ನು ಸಹಿಸಿಕೊಂಡದಕ್ಕಾಗಿ ನಾನು ನನ್ನ ಹೆಂಡತಿಗೆ ಉಪಕಾರ ಹೇಳುತ್ತೇನೆ. ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರು ನಮಗೆ ಕೊಟ್ಟಿರುವ ಎಲ್ಲ ವಿಷಯಗಳಿಗಾಗಿ ಮತ್ತು ಭವಿಷ್ಯತ್ತಿಗಾಗಿ ಈಗ ನಮಗಿರುವ ನಿರೀಕ್ಷೆಗಾಗಿ, ನಾನು ಯೆಹೋವನಿಗೆ ಮತ್ತು ಆತನ ಮಗನಾದ ಯೇಸು ಕ್ರಿಸ್ತನಿಗೆ ಉಪಕಾರ ಸಲ್ಲಿಸುತ್ತೇನೆ.”
ಮೇರಿಯ ಕುರಿತಾಗಿ ಏನು? ಸರಿ, ದೇವರು ತನ್ನನ್ನು ಎಂದಿಗೂ ಕ್ಷಮಿಸುವುದಿಲ್ಲವೆಂದು ಆಕೆ ಭಾವಿಸಿದಳಾದರೂ, ತನ್ನ ಮಕ್ಕಳಿಗೋಸ್ಕರ ಆತನ ಕುರಿತು ಕಲಿಯಲು ಆಕೆ ಬಯಸಿದಳು. ಯೆಹೋವನ ಸಾಕ್ಷಿಗಳು ಆಕೆಯ ನೆರೆಯವರಿಗೆ ಬೈಬಲನ್ನು ಕಲಿಸುತ್ತಿದ್ದರೆಂದು ಆಕೆಗೆ ಕೇಳಿಬಂದಾಗ, ಆಕೆ ಸಹ ಸಹಾಯಕ್ಕಾಗಿ ಕೇಳಿಕೊಂಡಳು. ಆದರೂ, ಆಳವಾಗಿ ಬೇರೂರಿದ್ದ ಆಕೆಯ ಕೆಟ್ಟ ಹವ್ಯಾಸಗಳು ಪ್ರಗತಿಯನ್ನು ಕಷ್ಟಕರವಾಗಿ ಮಾಡಿದವು. ಅಧ್ಯಯನವು ಪ್ರಗತಿಪರವಾದ ಹಾಗೂ ಇಳಿಮುಖವಾದ ಅವಧಿಗಳ ಮೂಲಕ ಸಾಗಿತು. ಆದರೂ, ಆಕೆಯ ಏಳು ವರ್ಷ ಪ್ರಾಯದ ಮಗಳು ಅವಳನ್ನು ಉತ್ತೇಜಿಸುತ್ತಿದ್ದಳು. “ಮುಂದುವರಿ ಮಮ್ಮಿ. ನೀನದನ್ನು ಮಾಡಬಲ್ಲೆ!” ಎಂದು ಅವಳನ್ನುತ್ತಿದ್ದಳು. ಆಗ ಮೇರಿ ಹೆಚ್ಚು ಕಠಿನವಾಗಿ ಪ್ರಯತ್ನಿಸುತ್ತಿದ್ದಳು.
ಯಾರು ಒಬ್ಬ ಅಮಲೌಷಧ ದುರುಪಯೋಗಿಯಾಗಿದ್ದನೊ, ಆಕೆಯ ಆ ರೂಢಿಪತಿಯು ಮನೆಗೆ ಹಿಂದಿರುಗಿದಾಗ, ಅವನು ಸಹ ಅಧ್ಯಯನದಲ್ಲಿ ಜೊತೆಗೂಡಿದನು. ಕ್ರಮೇಣವಾಗಿ ಇಬ್ಬರೂ ತಮ್ಮ ಕೆಟ್ಟ ಹವ್ಯಾಸಗಳನ್ನು ಜಯಿಸಿದರು. ತದನಂತರ, ತಮ್ಮ ವಿವಾಹವನ್ನು ನ್ಯಾಯಸಮ್ಮತಗೊಳಿಸಿ, ದೀಕ್ಷಾಸ್ನಾನಕ್ಕೆ ಅಧೀನಪಡಿಸಿಕೊಂಡ ಬಳಿಕ, ಅವರು ಭಾರಿ ಸಂತೋಷವನ್ನು ಅನುಭವಿಸಿದರು ಮತ್ತು ಪ್ರಥಮ ಬಾರಿಗೆ ಅವರಿಗೆ ನಿಜ ಕುಟುಂಬದ ಅನಿಸಿಕೆಯಾಯಿತು. ದುಃಖಕರವಾಗಿಯೆ, ಅಂತಿಮವಾಗಿ ಏಯ್ಡ್ಸ್ ಮೇರಿಯ ಜೀವವನ್ನು ತೆಗೆದುಕೊಂಡಿತಾದರೂ, ಪುನರುತ್ಥಾನ ಮತ್ತು ಪ್ರಾಣಾಪತ್ತಿನ ವಿಶಾಲ ಹಾದಿಯ ಪ್ರತಿಯೊಂದು ಜಾಡಿನಿಂದ ಶುದ್ಧ ಮಾಡಲ್ಪಟ್ಟಿರುವ ಪ್ರಮೋದವನ ಭೂಮಿಯ ಮೇಲೆ ಜೀವನದ ಕುರಿತಾದ ಬೈಬಲ್ ವಾಗ್ದಾನದ ಮೇಲೆ ತನ್ನ ಹೃದಯವನ್ನು ಕೇಂದ್ರೀಕರಿಸಿ ಆಕೆ ಸತ್ತಳು.
ಹೌದು, ನಾಶನಕ್ಕೆ ನಡೆಸುವ ವಿಶಾಲ ಮತ್ತು ವಿಸ್ತಾರವಾದ ಹಾದಿಯನ್ನು ತೊರೆಯುವುದು ಸಾಧ್ಯ. ಕ್ರಿಸ್ತ ಯೇಸುವು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹಾಗಾದರೆ, ಜೀವಕ್ಕೆ ನಡೆಸುವ ಇಕ್ಕಟ್ಟಾದ ಮಾರ್ಗದ ಮೇಲೆ ನಡೆಯಲು ನೀವು ಯಾಕೆ ನಿರ್ಧರಿಸಬಾರದು? ದೇವರ ವಾಕ್ಯದಿಂದ ನೀವು ಕಲಿಯುವ ವಿಷಯವನ್ನು ಹೃದಯಕ್ಕೆ ತೆಗೆದುಕೊಳ್ಳುವ ಮತ್ತು ಅನ್ವಯಿಸಿಕೊಳ್ಳುವ ಮೂಲಕ, ಬೈಬಲಿನ ಹೃದಯೋದ್ರೇಕಗೊಳಿಸುವ ವಾಗ್ದಾನವನ್ನು ನೀವು ವೈಯಕ್ತಿಕವಾಗಿ ಅನುಭವಿಸಬಹುದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.”—ಯೋಹಾನ 8:32.