ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಭಾರತ
ಭಾರತ! ಈ ವಿಶಾಲವಾದ ಉಪಖಂಡವು, ಈ ಭೂಗ್ರಹದಲ್ಲಿರುವ ಪ್ರತಿ 6 ಮಾನವರಲ್ಲಿ ಒಬ್ಬನಿಗೆ ಬೀಡಾಗಿರುತ್ತದೆ. ವಿವಿಧ ಜನರೂ ಭಾಷೆಗಳೂ ಇರುವ ಈ ದೇಶದಲ್ಲಿ ಒಟ್ಟಿಗೆ 1,000 ಕ್ಕಿಂತಲೂ ಹೆಚ್ಚು ಭಾಷೆಗಳು ಮತ್ತು ಭಾಷಾರೂಪಗಳು ಆಡಲ್ಪಡುತ್ತವೆ. ಜನರಲ್ಲಿ ಅಧಿಕಾಂಶ, 83 ಪ್ರತಿಶತ ಹಿಂದೂಗಳಾಗಿರುವಾಗ, 11 ಪ್ರತಿಶತ ಮುಸ್ಲಿಮರಾಗಿದ್ದಾರೆ; ಉಳಿದುದರಲ್ಲಿ ಸಿಕ್ಖರು, ಬೌದ್ಧರು, ಜೈನರು, ಮತ್ತು ನಾಮಾಂಕಿತ ಕ್ರೈಸ್ತರು ಕೂಡಿರುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಯೆಹೋವನ ಸಾಕ್ಷಿಗಳು ಭಾರತದಲ್ಲಿ ಎದ್ದುಕಾಣುವ ಸಾಫಲ್ಯವನ್ನು ಅನುಭವಿಸುತ್ತಿದ್ದಾರೆ. ಎಲ್ಲ ತರದ ಒತ್ತಡಗಳು ಮತ್ತು ವಿರೋಧಗಳಿದ್ದರೂ, ಯೆಹೋವನ ರಾಜ್ಯದ ಪಕ್ಷದಲ್ಲಿ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳಲು ಇಚ್ಛೈಸುವ ಕುರಿಸದೃಶ ಜನರನ್ನು ಅವರು ಕಂಡುಕೊಂಡಿದ್ದಾರೆ.
ದೃಷ್ಟಾಂತಕ್ಕಾಗಿ, ಸಾಂಪ್ರದಾಯಿಕ ಹಿಂದೂ ಕುಟುಂಬದ ಒಬ್ಬ ಹುಡುಗಿ ಬಾಲ್ಯದಿಂದಲೇ ಪೋಲಿಯೋದಿಂದ ಕುಂಟಿಯಾಗಿದ್ದಳು. ಆಕೆ ಅನುಭವಿಸಿದ ಕಷ್ಟಾನುಭವವು, ದೇವರ ಮತ್ತು ಜೀವಿತದ ಉದ್ದೇಶದ ಕುರಿತು ಅವಳು ಯೋಚಿಸುವಂತೆ ಮಾಡಿತು. ಉತ್ತರಕ್ಕಾಗಿ ಅವಳು ಅನೇಕ ಧರ್ಮಗಳನ್ನು ಪರೀಕ್ಷಿಸಿದಳು ಆದರೆ ಯಾವ ಸಮಾಧಾನವೂ ದೊರೆಯಲಿಲ್ಲ. ಪರಿಣಾಮವಾಗಿ, ದೇವರಲ್ಲಿ ಅಲ್ಲವಾದರೂ ಧರ್ಮದಲ್ಲಿ ಅವಳು ತನ್ನ ನಂಬಿಕೆಯನ್ನು ಕಳೆದುಕೊಂಡಳು.
ಇದೇ ಸಮಯದ ಸುಮಾರಿಗೆ ಇಬ್ಬರು ಸಾಕ್ಷಿಗಳು ತಮ್ಮ ಮನೆ ಮನೆಯ ಶುಶ್ರೂಷೆಯಲ್ಲಿ ಇವಳನ್ನು ಭೇಟಿಯಾದರು. “ಅವರು ಪ್ರಕಟನೆ 21:4ನ್ನು ಓದುವುದನ್ನು ನಾನು ಕೇಳಿದಾಗ ನನಗೆ ಕಣ್ಣೀರು ಬಂತು,” ಎಂದು ಅವಳು ನೆನಪಿಸಿಕೊಳ್ಳುತ್ತಾಳೆ. ವಾಚ್ ಟವರ್ ಸೊಸೈಟಿಯ ಅನೇಕ ಪ್ರಕಾಶನಗಳನ್ನು ಅವಳು ಸ್ವೀಕರಿಸಿದಳು ಮತ್ತು ತಾಯಿಯ ವಿರೋಧವಿದ್ದರೂ ಒಂದು ಗೃಹ ಬೈಬಲಧ್ಯಯನಕ್ಕೆ ಒಪ್ಪಿಕೊಂಡಳು. ಆ ಹುಡುಗಿ ತನ್ನ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದಳು, ಸಂಬಂಧಿಕರ ವಿರೋಧವನ್ನು ಧೈರ್ಯದಿಂದ ಎದುರಿಸಿದಳು, ಮತ್ತು ಸ್ನಾನಿತ ಸಾಕ್ಷಿಯಾದಳು. ಅವಳನ್ನುವುದು: “ನಾನು ಬಹಳ ಪ್ರಗತಿ ಮಾಡಿದ್ದೇನೆ, ಮತ್ತು ಕಾರ್ಯಗತಿಯು ಅತಿ ಕಷ್ಟಕರವಾಗಿತ್ತು. ಆದರೆ ಯೆಹೋವನು ಯಾವಾಗಲೂ ನನ್ನೊಂದಿಗಿರುತ್ತಾ ನನಗೆ ಮಹಾ ಸಮಾಧಾನವನ್ನೂ ಸಂತೋಷವನ್ನೂ ಕೊಟ್ಟಿದ್ದಾನೆ.”
ಶಾಲೆಯಲ್ಲಿ ಶುದ್ಧಾರಾಧನೆಗಾಗಿ ದೃಢತೆ
ತನ್ನ ತರಗತಿಯ ಇತರರೊಂದಿಗೆ ಒಂದು ಕ್ಯಾಥೊಲಿಕ್ ಚರ್ಚಿಗೆ ಹೋಗುವಂತೆ ಒಬ್ಬ ಎಳೆಯ ಸಹೋದರಿಗೆ ಅವಳ ಅಧ್ಯಾಪಕಿ ಹೇಳಿದಳು. ತಾನೊಬ್ಬ ಯೆಹೋವನ ಸಾಕ್ಷಿಯೆಂದೂ, ಯೆಹೋವನನ್ನು ಹೊರತು ಬೇರೆ ಯಾರನ್ನೂ ಅಥವಾ ಏನನ್ನೂ ಆರಾಧಿಸುವುದಿಲ್ಲವೆಂದೂ ಹೇಳುತ್ತಾ, ಸಹೋದರಿ ವಿನಯದಿಂದ ನಿರಾಕರಿಸಿದಳು. ಬೇರೆಲ್ಲರು ಚರ್ಚಿಗೆ ಹೋದಾಗ ಅವಳೂ ಹೋಗಬೇಕೆಂದು ಅಧ್ಯಾಪಕಿ ಹೇಳಿದಳು. ಆದರೆ ಸಹೋದರಿ ದೃಢವಾಗಿ ನಿಂತಳು, ಮತ್ತು ಚರ್ಚಿಗೆ ಹೋಗುವವರು ಯೆಹೋವನಿಗೆ ಪ್ರಾರ್ಥಿಸುವುದಿಲ್ಲವಾದುದರಿಂದ ತಾನಲ್ಲಿ ಉಪಸ್ಥಿತಳಾಗಸಾಧ್ಯವಿಲ್ಲವೆಂದು ಆಕೆ ಹೇಳಿದಳು.
ಹುಡುಗಿಯ ದೃಢ ನಿಲುವಿನ ಕಾರಣ ಅಧ್ಯಾಪಕಿ ಅವಳ ನಂಬಿಕೆಯ ಕುರಿತು ಹೆಚ್ಚನ್ನು ತಿಳಿಯಬಯಸಿದಳು. ಆದುದರಿಂದ ಸಹೋದರಿ ಮರುದಿನ ಅವಳಿಗೆ ಯೆಹೋವನ ಆರಾಧನೆಯ ಕುರಿತ ಒಂದು ಕಾವಲಿನಬುರುಜು ಲೇಖನವನ್ನು ಕೊಟ್ಟಳು. ಅಧ್ಯಾಪಕಿ ತಾನು ಓದಿದ ವಿಷಯಗಳಿಂದ ಪ್ರಭಾವಿತಳಾಗಿ, ಶಾಲೆಯ ಎಲ್ಲ ಧಾರ್ಮಿಕ ಚಟುವಟಿಕೆಗಳಿಂದ ಹುಡುಗಿಗೆ ವಿನಾಯಿತಿ ಕೊಟ್ಟಳು. ಅವಳಿಗೆ ಮತ್ತು ಇತರ ಅಧ್ಯಾಪಕರಿಗೆ ಆ ಸಹೋದರಿ ಹತ್ತು ಪತ್ರಿಕೆಗಳನ್ನು ನೀಡಶಕ್ತಳಾದಳು.
ರಕ್ತದ ಕುರಿತ ದೇವರ ನಿಯಮಕ್ಕೆ ವಿಧೇಯತೆಯು ಬಹುಮಾನಿಸಲ್ಪಟ್ಟದ್ದು
ಇತ್ತೀಚೆಗೆ ಒಂದು ವಿಷ ಜ್ವರವು ಸೋಂಕುರೋಗದ ರೂಪದಲ್ಲಿ ಕೇರಳ ರಾಜ್ಯದ ಕೆಲವು ಭಾಗಗಳಲ್ಲಿ ಉದ್ಭವಿಸಿತು. ಈ ರೋಗವು ಮೂತ್ರಪಿಂಡಕ್ಕೆ ತೀವ್ರಹಾನಿಯನ್ನು ಮಾಡಿ ಡಯಾಲಿಸಿಸ್ನ ಅಗತ್ಯಕ್ಕೆ ನಡಿಸುತ್ತದೆ. ರಕ್ತಪೂರಣಗಳು ಸಾಮಾನ್ಯವಾಗಿ ನೀಡಲ್ಪಡುತ್ತವೆ. ಒಂದು ಪಟ್ಟಣದಲ್ಲಿ ಈ ರೋಗದಿಂದ ಪೀಡಿತರಾದ 14 ಜನರನ್ನು ಆಸ್ಪತ್ರೆಗೆ ಸೇರಿಸಲಾಯಿತು. ರೋಗಿಗಳಲ್ಲಿ ಒಬ್ಬನು ಸ್ಥಳಿಕ ಸಭೆಯ ಹಿರಿಯನಾದ ಒಬ್ಬ ಸಾಕ್ಷಿ. ದೊರೆಯುವ ಚಿಕಿತ್ಸೆ ರಕ್ತಪೂರಣ ಮಾತ್ರವೆಂದು ಅವನಿಗೆ ಹೇಳಲಾಯಿತು. ಹಿರಿಯನು ತನ್ನ ಶಾಸ್ತ್ರೀಯ ನಂಬಿಕೆಗಳನ್ನು ವಿವರಿಸಿ, ರಕ್ತವನ್ನು ದೃಢವಾಗಿ ನಿರಾಕರಿಸಿದನು. (ಅ. ಕೃತ್ಯಗಳು 15:28, 29) ಬಹಳ ವಾದವಿವಾದವಾದ ಬಳಿಕ, ರಕ್ತಪೂರಣವನ್ನು ನಿರಾಕರಿಸಿದ ಕಾರಣ ಅವನು ಸಾಯುವನೆಂದು ವೈದ್ಯರು ಹೇಳಿದರು.
ಬೇರೆ 13 ರೋಗಿಗಳು ರಕ್ತವನ್ನು ತೆಗೆದುಕೊಂಡರು. ದುಃಖಕರವಾಗಿ, ಕೆಲವೇ ದಿನಗಳಲ್ಲಿ ಅವರೆಲ್ಲರೂ ಸತ್ತರು. ಪಾರಾದವನು ಸಹೋದರನೊಬ್ಬನೇ! ಆಸ್ಪತ್ರೆಯ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಸಭೆಯ ಸದಸ್ಯರಿಂದ ಮಾಡಲ್ಪಟ್ಟ ಕ್ರಮವಾದ ಸಂದರ್ಶನಗಳಿಂದ ವೈದ್ಯಕೀಯ ಸಿಬ್ಬಂದಿಯು ಬಹಳವಾಗಿ ಪ್ರಭಾವಿತವಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ, ಸಹೋದರನು ವೈದ್ಯರಿಗೆ ಉಪಕಾರ ಹೇಳಲು ಹೋದನು, ಆದರೆ ಅವರಂದದ್ದು: “ನಮಗೇಕೆ ಉಪಕಾರ ಹೇಳುತ್ತೀ? ನಿನ್ನ ದೇವರಾದ ಯೆಹೋವನಿಗೆ ಉಪಕಾರ ಹೇಳು. ನಿನ್ನನ್ನು ಕಾಪಾಡಿದವನು ಆತನೇ. ದಯವಿಟ್ಟು ನಮಗಾಗಿಯೂ ನಿನ್ನ ಯೆಹೋವ ದೇವರಿಗೆ ಪ್ರಾರ್ಥಿಸು.”
[ಪುಟ 24 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ
1994ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 14,271
ಪ್ರಮಾಣ: 1 ಸಾಕ್ಷಿಗೆ 65,266
ಜ್ಞಾಪಕದ ಹಾಜರಿ: 38,192
ಸರಾಸರಿ ಪಯನೀಯರ್ ಪ್ರಚಾರಕರು: 1,780
ಸರಾಸರಿ ಬೈಬಲ್ ಅಧ್ಯಯನಗಳು: 12,453
ದೀಕ್ಷಾಸ್ನಾನ ಪಡೆದವರ ಸಂಖ್ಯೆ: 1,312
ಸಭೆಗಳ ಸಂಖ್ಯೆ: 410
ಶಾಖಾ ಆಫೀಸ್: ಲೊನಾವ್ಲ
[ಪುಟ 25 ರಲ್ಲಿರುವ ಚಿತ್ರ]
ಶಾಖಾ ಆಫೀಸ್, ಲೊನಾವ್ಲ
[ಪುಟ 25 ರಲ್ಲಿರುವ ಚಿತ್ರ]
1963 ರಲ್ಲಿ “ನಿತ್ಯವಾದ ಸುವಾರ್ತೆ” ಎಂಬ ಅಧಿವೇಶನದ ಕುರಿತಾಗಿ ಸಾಕ್ಷಿನೀಡುತ್ತಿರುವುದು
[ಪುಟ 25 ರಲ್ಲಿರುವ ಚಿತ್ರ]
ದೆಹಲಿಯಲ್ಲಿ ಕೆಂಪು ಕೋಟೆಯ ಹೊರಗೆ ಒಬ್ಬ ಮಾರಾಟಗಾರನಿಗೆ ಸಾರುತ್ತಿರುವುದು