ಸಂಪ್ರದಾಯವು ಸತ್ಯದೊಂದಿಗೆ ಸಂಘರ್ಷಿಸಬೇಕೊ?
ಮಾರ್ಟಿನ್ ಲೂತರನಿಗೆ ತಾನು ಸರಿಯಾಗಿದ್ದೆನೆಂದು ಮಂದಟ್ಟಾಗಿತ್ತು. ಬೈಬಲ್ ತನ್ನನ್ನು ಬೆಂಬಲಿಸಿತೆಂದು ಅವನು ನಂಬಿದನು. ಇನ್ನೊಂದು ಕಡೆ, ಆ ಕಾಲದ ಸಾಂಪ್ರದಾಯಿಕ ನಂಬಿಕೆಯು ತಪ್ಪಾಗಿತ್ತೆಂದು ಪೋಲಿಷ್ ಖಗೋಳಜ್ಞ ಕೊಪರ್ನಿಕಸ್ ನೆನಸಿದನು.
ಯಾವ ನಂಬಿಕೆ? ಭೂಮಿಯು ವಿಶ್ವದ ಕೇಂದ್ರವಾಗಿದೆ ಮತ್ತು ಸಮಸ್ತವು ಅದರ ಸುತ್ತಲೂ ಆವರ್ತಿಸುತ್ತದೆ ಎಂಬುದೇ. ಭೂಮಿಯು ತಾನೇ ಸೂರ್ಯನ ಸುತ್ತಲೂ ಆವರ್ತಿಸುತ್ತದೆ ಎಂಬುದು ಸತ್ಯ ಎಂದನು ಕೊಪರ್ನಿಕಸ್. ಲೂತರನು ಇದನ್ನು ನಿರಾಕರಿಸುತ್ತಾ ಅಂದದ್ದು: “ಆಕಾಶ ಅಥವಾ ಅಂತರಿಕ್ಷ, ಇಲ್ಲವೇ ಸೂರ್ಯ ಮತ್ತು ಚಂದ್ರ ಆವರ್ತಿಸುವುದಿಲ್ಲ, ಭೂಮಿಯು ಆವರ್ತಿಸುತ್ತದೆಂದು ತೋರಿಸಲು ಹೆಣಗುವ ಒಬ್ಬ ಅಲ್ಪೋದ್ಧತ ಜ್ಯೋತಿಷಿಗೆ ಜನರು ಕಿವಿಗೊಡುತ್ತಾರೆ.”—ಹಿಸ್ಟರಿ ಆಫ್ ವೆಸ್ಟರ್ನ್ ಫಿಲಾಸೊಫಿ.
ಸಾಂಪ್ರದಾಯಿಕ ನಂಬಿಕೆಗಳು ಅನೇಕ ಸಲ ನಿಜತ್ವಗಳೊಂದಿಗೆ, ಸತ್ಯದೊಂದಿಗೆ ಸಂಘರ್ಷಿಸಿವೆ. ಜನರು ಅಪಾಯಕರವಾದ ವಿಷಯಗಳನ್ನು ಮಾಡುವಂತೆಯೂ ಅವು ಮಾಡಬಲ್ಲವು.
ಸಂಪ್ರದಾಯವು ಯಾವಾಗಲೂ ಸತ್ಯದೊಂದಿಗೆ ಸಂಘರ್ಷಿಸುತ್ತದೆ ಎಂದು ಇದರ ಅರ್ಥವಲ್ಲ ನಿಶ್ಚಯ. ವಾಸ್ತವಿಕವಾಗಿ, ಅಪೊಸ್ತಲ ಪೌಲನು ತಾನು ಅವರಿಗೆ ತಿಳಿಸಿಕೊಟ್ಟ ಸಂಪ್ರದಾಯಗಳನ್ನು ಅನುಸರಿಸಿ ನಡಿಯುವಂತೆ ತನ್ನ ಕಾಲದ ಕ್ರೈಸ್ತರನ್ನು ಪ್ರೋತ್ಸಾಹಿಸಿದನು: “ನೀವು . . . ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು [“ಸಂಪ್ರದಾಯಗಳನ್ನು,” NW] ಅನುಸರಿಸಿ ನಡಿಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.”—1 ಕೊರಿಂಥ 11:2; 2 ಥೆಸಲೊನೀಕ 2:15; 3:6ನ್ನು ಸಹ ನೋಡಿ.
“ಸಂಪ್ರದಾಯಗಳು” ಎಂಬುದರಿಂದ ಪೌಲನು ಅರ್ಥೈಸಿದ್ದೇನು? ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಸಂಪುಟ 2, ಪುಟ 1118 ತಿಳಿಸುವುದೇನಂದರೆ, “ಸಂಪ್ರದಾಯ”ಕ್ಕಾಗಿ ಅವನು ಬಳಸಿದ ಗ್ರೀಕ್ ಪದ ಪಾರಾಡೊಸಿಸ್ನ ಅರ್ಥವು, “ಬಾಯಿಮಾತಿನಿಂದ ಅಥವಾ ಬರೆಯುವಿಕೆಯಿಂದ ತಿಳಿಸಿದ” ಒಂದು ವಿಷಯವಾಗಿದೆ. ಇಂಗ್ಲಿಷ್ ಪದದ ಅರ್ಥವು, “ಹೆತ್ತವರಿಂದ ಮಕ್ಕಳಿಗೆ ಸಾಗಿಸಲ್ಪಟ್ಟಿರುವ, ಅಥವಾ ನೆಲೆಗೊಳಿಸಲ್ಪಟ್ಟಂತಹ ಯೋಚನೆ ಅಥವಾ ಕ್ರಿಯೆನಡಿಸುವ ರೀತಿಯಾಗಿ ಪರಿಣಮಿಸಿರುವ ಮಾಹಿತಿ, ಬೋಧನೆಗಳು ಅಥವಾ ಪದ್ಧತಿಗಳು ಆಗಿದೆ.”a ಅಪೊಸ್ತಲ ಪೌಲನು ತಿಳಿಸಿಕೊಟ್ಟ ಸಂಪ್ರದಾಯಗಳು ಒಂದು ಉತ್ತಮ ಮೂಲದಿಂದ ಬಂದದರ್ದಿಂದ ಅದನ್ನು ದೃಢವಾಗಿ ಹಿಡಿದುಕೊಳ್ಳುವುದು ಕ್ರೈಸ್ತರಿಗೆ ಸಮರ್ಪಕವಾಗಿತ್ತು.
ಆದರೆ ಸಂಪ್ರದಾಯವು ಸತ್ಯ ಅಥವಾ ಸುಳ್ಳು, ಒಳ್ಳೆಯದು ಅಥವಾ ಕೆಟ್ಟದ್ದು ಆಗಿರಬಲ್ಲದೆಂಬುದು ಸ್ಫುಟ. ಉದಾಹರಣೆಗೆ, ಬ್ರಿಟಿಷ್ ತತ್ವಜ್ಞಾನಿ ಬಟ್ರೆಂಡ್ ರಸಲ್, ಸಾಂಪ್ರದಾಯಿಕ ನಂಬಿಕೆಗಳನ್ನು ಸಂದೇಹಿಸುವ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಹೊಂದಿದ್ದ 16ನೆಯ ಶತಕದ ಕೊಪರ್ನಿಕಸನಂತಹ ಜನರನ್ನು ಹೊಗಳುತ್ತಾನೆ. “ಪುರಾತನ ಕಾಲದಿಂದ ಏನು ನಂಬಲ್ಪಟ್ಟಿದೆಯೋ ಅದು ಸುಳ್ಳಾಗಿರಬಹುದು ಎಂಬ ಮನವರಿಕೆಯನ್ನು” ಅವರು ವಿಕಸಿಸಿದರು. ಸಂಪ್ರದಾಯವನ್ನು ಕುರುಡಾಗಿ ಅನುಸರಿಸದೆ ಇರುವುದರಲ್ಲಿರುವ ವಿವೇಕವನ್ನು ನೀವು ಸಹ ಕಾಣುತ್ತೀರೋ?—ಹೋಲಿಸಿ ಮತ್ತಾಯ 15:1-9, 14.
ಹಾಗಾದರೆ, ಧಾರ್ಮಿಕ ನಂಬಿಕೆಗಳು ಮತ್ತು ಪದ್ಧತಿಗಳ ಕುರಿತೇನು? ಅವು ಸರಿಯಾಗಿವೆ ಮತ್ತು ನಿರಪಾಯಕರವಾಗಿವೆ ಎಂದು ನಾವು ಊಹಿಸಸಾಧ್ಯವಿದೆಯೇ? ನಾವು ಹೇಗೆ ತಿಳಿಯಬಲ್ಲೆವು? ಧಾರ್ಮಿಕ ಸಂಪ್ರದಾಯಗಳು ಕಾರ್ಯತಃ ಸತ್ಯದೊಂದಿಗೆ ಸಂಘರ್ಷಿಸುತ್ತವೆಂಬುದನ್ನು ಕಂಡುಕೊಳ್ಳುವಲ್ಲಿ ನಾವೇನು ಮಾಡಬೇಕು? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಪರೀಕ್ಷಿಸುವುದು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಇವರಿಂದ ಪ್ರಕಾಶಿತ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Cover: Jean-Leon Huens © National Geographic Society
[ಪುಟ 3 ರಲ್ಲಿರುವ ಚಿತ್ರ ಕೃಪೆ]
Universität Leipzig