ಸಂಪ್ರದಾಯವು ಸತ್ಯದೊಂದಿಗೆ ಸಂಘರ್ಷಿಸುವಾಗ
ಅಪಾಯ—ಈ ನೀರು ಕುಡಿಯಲು ಯೋಗ್ಯವಲ್ಲ. ಅಂತಹ ಎಚ್ಚರಿಕೆಗಳನ್ನು ಕಾಣುವುದು ನಮಗೆ ಅಭ್ಯಾಸವಾಗಿರಬಹುದು. ಅನೇಕ ಕ್ಷೇತ್ರಗಳಲ್ಲಿ ಜನರು ತಾವೇನನ್ನು ಕುಡಿಯುತ್ತಾರೋ ಅದರ ವಿಷಯವಾಗಿ ಜಾಗ್ರತೆಯಿಂದಿದ್ದಾರೆ, ಯಾಕೆಂದರೆ ನೀರಿನ ಕೆಲವು ಸರಬರಾಯಿಗಳು “ಮಾಟಗಾರ್ತಿಯ ಕಷಾಯ” ಎಂದು ಕರೆಯಲ್ಪಡುವ ವಿಷಭರಿತ ಕೊಳೆಯಿಂದ ಕಲಬೆರಕೆಯಾಗಿವೆಯೆಂದು ಅವರಿಗೆ ತಿಳಿದಿದೆ. ಈ ಮಾಲಿನ್ಯದ ಪರಿಣಾಮವಾಗಿ, ನೀರು “ಜೀವ ಪೋಷಕವೂ ಸಂರಕ್ಷಕವೂ” ಆಗಿರುವುದಕ್ಕೆ ಬದಲಾಗಿ “ರೋಗಾಣುಗಳ ಮತ್ತು . . . ರಾಸಾಯನಿಕ ಕಲಬೆರಕೆಗಳ ವಾಹಕ” ಆಗಬಲ್ಲದು, ಎಂದು ಒಂದು ಅಧ್ಯಯನವು ಹೇಳುತ್ತದೆ.—ಜಲ ಮಾಲಿನ್ಯ (ಇಂಗ್ಲಿಷ್).
ಸತ್ಯದ ಜಲವನ್ನು ಮಲಿನಗೊಳಿಸುವುದು
ಸತ್ಯದೊಂದಿಗೆ ಸಂಘರ್ಷಿಸುವ ಸಂಪ್ರದಾಯಗಳು ಮಲಿನಗೊಂಡ ನೀರಿನ ಸರಬರಾಯಿಯಂತಿವೆ. ಯಾವುವು ವಾಸ್ತವಿಕವಾಗಿ ಸುಳ್ಳಾದ, ದಾರಿತಪ್ಪಿಸುವ ವಿಚಾರ ಮತ್ತು ತತ್ವಜ್ಞಾನಗಳೆಂಬ “ಮಾಟಗಾರ್ತಿಯ ಕಷಾಯ”ದಿಂದ ಕಲಬೆರಕೆಯಾಗಿವೆಯೋ, ಆ ಒಂದು ಸಂತತಿಯಿಂದ ಮುಂದಿನದಕ್ಕೆ ದಾಟಿಸಲ್ಪಡುವ ಸಂಪ್ರದಾಯಗಳಿಗೆ—ಮಾಹಿತಿ, ಅಭಿಪ್ರಾಯಗಳು, ನಂಬಿಕೆಗಳು, ಅಥವಾ ಪದ್ಧತಿಗಳಿಗೆ ನಾವು ನಿಷ್ಕಾಪಟ್ಯದಿಂದ ಅಂಟಿಕೊಂಡಿರಬಹುದು. ಕಲುಷಿತವಾಗಿರುವ ನೀರಿನಂತೆಯೇ ಇವು ನಮಗೆ ಅಗಣಿತ ಹಾನಿಯನ್ನು—ಆತ್ಮಿಕ ಹಾನಿಯನ್ನು ತಂದಾವು.
ನಮ್ಮ ಸಾಂಪ್ರದಾಯಿಕ ಧಾರ್ಮಿಕ ನಂಬಿಕೆಗಳು ಬೈಬಲಿನ ಮೇಲೆ ಆಧಾರಿತವಾಗಿವೆಯೆಂದು ಒಂದುವೇಳೆ ನಮಗನಿಸಿದರೂ, ಅವನ್ನು ಜಾಗ್ರತೆಯಿಂದ ಪರೀಕ್ಷಿಸಲು ನಾವೆಲ್ಲರೂ ಸಮಯವನ್ನು ತೆಗೆದುಕೊಳ್ಳಬೇಕು. ಜ್ಞಾಪಿಸಿಕೊಳ್ಳಿರಿ, ಮಾರ್ಟಿನ್ ಲೂತರನು ತನ್ನ ಕಾಲದ ಸಾಂಪ್ರದಾಯಿಕ ನಂಬಿಕೆಗೆ ಅಂಟಿಕೊಂಡು ಕೊಪರ್ನಿಕಸನನ್ನು ಖಂಡಿಸಿದಾಗ, ಬೈಬಲಿನ ಬೆಂಬಲವು ತನಗಿತ್ತು ಎಂದವನು ನಂಬಿದ್ದನು. ಆದರೂ, ‘ಸದ್ಗುಣಿಗಳಾಗಿದ್ದು ವಿಷಯಗಳು ಹಾಗಿವೆಯೋ ಎಂದು ನೋಡುವಂತೆ ಶಾಸ್ತ್ರಗ್ರಂಥಗಳನ್ನು ಜಾಗ್ರತೆಯಿಂದ ಪರೀಕ್ಷಿಸಿದ’ ಆ ಪುರಾತನ ಬೆರೋಯದವರ ಉತ್ತಮ ಮಾದರಿಯನ್ನು ಅನುಸರಿಸಲು ಲೂತರನು ತಪ್ಪಿಹೋದನು.—ಅ. ಕೃತ್ಯಗಳು 17:10, 11.
ಯೇಸುವಿನ ಕಾಲದ ಕೆಲವು ಯೆಹೂದ್ಯರಿಗೆ ಸಾಂಪ್ರದಾಯಿಕ ನಂಬಿಕೆಗಳು ಉಂಟುಮಾಡಿದ ಹಾನಿಯ ಕುರಿತು ಯೋಚಿಸಿರಿ. ತಮ್ಮ ಸಂಪ್ರದಾಯಗಳು ಸತ್ಯವಾಗಿದ್ದವೆಂದು ಅವರು ಕಟ್ಟಾಸಕ್ತಿಯಿಂದ ನಂಬಿದರು. ಯೇಸುವಿನ ಶಿಷ್ಯರು ಸಂಪ್ರದಾಯಗಳನ್ನು ಅನುಸರಿಸುತ್ತಿರಲಿಲ್ಲವೆಂದು ಅವರು ಆಕ್ಷೇಪಿಸಿದಾಗ, ಯೇಸು ಈ ಪ್ರಶ್ನೆಯಿಂದ ಅವರನ್ನು ಎದುರಿಸಿದನು: “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ಆಜ್ಞೆಯನ್ನು ಯಾಕೆ ಮೀರುತ್ತೀರಿ?” (ಮತ್ತಾಯ 15:1-3) ತಪ್ಪೇನಾಗಿತ್ತು? ಪ್ರವಾದಿಯಾದ ಯೆಶಾಯನ ಮಾತುಗಳನ್ನು ಉದ್ಧರಿಸಿದಾಗ ಯೇಸು ಸಮಸ್ಯೆಯನ್ನು ಗುರುತಿಸಿದನು: “ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ [ದೇವರಿಗೆ] ಭಕ್ತಿ ತೋರಿಸುವದು ವ್ಯರ್ಥ.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 15:9; ಯೆಶಾಯ 29:13.
ಹೌದು, ದೈವಿಕ ಮೂಲದಿಂದ ಬಂದ ಸತ್ಯಗಳ ಸ್ಥಳದಲ್ಲಿ ಮನುಷ್ಯ ಮೂಲದ ಅಥವಾ ಅದಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿ, ದೆವ್ವಗಳ ಮೂಲದ ವಿಚಾರಗಳನ್ನು ಅವರು ಬದಲಿಯಾಗಿಟ್ಟರು. ಉದಾಹರಣೆಗೆ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 506, ವಿವರಿಸುವುದು: “ಒಬ್ಬ ವ್ಯಕ್ತಿಯು ಒಮ್ಮೆ ತನ್ನ ಸ್ವತ್ತುಗಳನ್ನು ‘ಕೊರ್ಬಾನ್’ ಆಗಿ ಅಥವಾ ದೇವರಿಗೆ ಸಮರ್ಪಿತವಾದ ಒಂದು ಕೊಡುಗೆಯಾಗಿ ಘೋಷಿಸಿದಾಗ, ತನ್ನ ಹೆತ್ತವರು ಎಷ್ಟೇ ಕೊರತೆಯಲ್ಲಿರಲಿ, ಅವರ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಅವನ್ನು ಅವನು ಉಪಯೋಗಿಸಸಾಧ್ಯವಿಲ್ಲ, ಆದರೂ ಅಂತಹ ಸ್ವತ್ತುಗಳನ್ನು ತನಗೆ ಬೇಕಾದಲ್ಲಿ ತನ್ನ ಸ್ವಂತ ಮರಣದ ತನಕ ಅವನು ಬಳಸಸಾಧ್ಯವಿತ್ತು ಎಂದು ಆ ಕಾಲದಲ್ಲಿನ ಫರಿಸಾಯರು ಕಲಿಸಿದರು.” ಸತ್ಯದ ಜಲವನ್ನು ಕಲುಷಿತಗೊಳಿಸಿದ ಮಾನವ ವಿವೇಕವು ಯೆಹೂದ್ಯರ ಮೇಲೆ ಆತ್ಮಿಕವಾಗಿ ಕೆಟ್ಟ ಪರಿಣಾಮಗಳನ್ನು ಬೀರಿತ್ತು. ಅಧಿಕತಮ ಜನರು ದೀರ್ಘಕಾಲದಿಂದ ನಿರೀಕ್ಷಿಸುತ್ತಲಿದ್ದ ತಮ್ಮ ಮೆಸ್ಸೀಯನನ್ನೂ ತಿರಿಸ್ಕರಿಸಿದರು.
ಕ್ರೈಸ್ತಪ್ರಪಂಚ ಮಾಲಿನ್ಯಕ್ಕೆ ಕೂಡಿಸುತ್ತದೆ
ತದ್ರೀತಿಯ ಆತ್ಮಿಕ ಹಾನಿಯು ಯೇಸುವಿನ ಮರಣದ ಬಳಿಕ ಉಂಟಾಯಿತು. ಆತನ ಹಿಂಬಾಲಕರೆಂದು ಹೇಳಿಕೊಂಡ ಅನೇಕರು, ಬಾಯಿಮಾತಿನ ಸಂಪ್ರದಾಯವನ್ನು ಹೊಸ ಬೋಧನೆಗಳಿಗೆ ಆಧಾರವಾಗಿಟ್ಟರು. ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ ಇವರ ಸೈಕೊಪ್ಲೀಡಿಯ ಆಫ್ ಬಿಬ್ಲಿಕಲ್, ತಿಯೊಲಾಜಿಕಲ್, ಆ್ಯಂಡ್ ಎಕ್ಲೀಸಿಯಾಸಿಕ್ಟಲ್ ಲಿಟರೇಚರ್ಗೆ ಅನುಸಾರವಾಗಿ, ಅಂತಹ ಸಂಪ್ರದಾಯವು “ಮೊದಲನೆಯ ಕ್ರೈಸ್ತ ಚರ್ಚಿಗೆ ಅಪೊಸ್ತಲರ ಬಾಯಿಯಿಂದ ದೊರೆತ ಉಪದೇಶವಾಗಿದ್ದು, ಅಪೊಸ್ತಲರ ಕಾಲದಿಂದ ರವಾನಿಸಲ್ಪಟ್ಟದ್ದೂ, ಮತ್ತು ತಮ್ಮ ಸ್ವಂತ ಕಾಲದ ತನಕ ಶುದ್ಧತೆಯಲ್ಲಿ ಕಾಪಾಡಲ್ಪಟ್ಟದ್ದೂ” ಆಗಿತ್ತೆಂದು ಕ್ರೈಸ್ತರೆನಿಸಿಕೊಂಡ ಕೆಲವರು ನಂಬಿದರು.—ಓರೆಅಕ್ಷರಗಳು ನಮ್ಮವು.
ವಾಸ್ತವಿಕವಾಗಿ ಈ ಸಂಪ್ರದಾಯಗಳಲ್ಲಿ ಹೆಚ್ಚಿನವು ಅಶುದ್ಧವಾಗಿದ್ದವು, ತಪ್ಪಾದ ವಿಚಾರಗಳಾಗಿದ್ದವು. ಸೈಕೊಪ್ಲೀಡಿಯ ವಿವರಿಸುವಂತೆ, ಈ ಹೊಸ ತತ್ವಜ್ಞಾನಗಳು “ಬೇರೆ ಸಂಪ್ರದಾಯಗಳಿಗೆ ಮಾತ್ರವಲ್ಲ, ಸ್ವತಃ ಅಪೊಸ್ತಲರು ಬರೆದ, ಅವರಿಗೆ ಲಭ್ಯವಿದ್ದ ಬರಹಗಳಿಗೇ ಭಿನ್ನತೆಯಲ್ಲಿದ್ದವು.” ಇದು ಪೂರ್ಣವಾಗಿ ಅನಿರೀಕ್ಷಿತವಾಗಿರಲಿಲ್ಲ. ಅಪೊಸ್ತಲ ಪೌಲನು ಕ್ರೈಸ್ತರನ್ನು ಎಚ್ಚರಿಸಿದ್ದನು: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”—ಕೊಲೊಸ್ಸೆ 2:8.
ಇಂದು ಸಹ ಅನೇಕ ಸಾಂಪ್ರದಾಯಿಕ ನಂಬಿಕೆಗಳು ‘ಸ್ವತಃ ಅಪೊಸ್ತಲರು ಬರೆದ ಬರಹಗಳಿಗೆ ಭಿನ್ನತೆಯಲ್ಲಿವೆ.’ ತ್ರಯೈಕ್ಯ, ನರಕಾಗ್ನಿ, ಮಾನವ ಪ್ರಾಣದ ಅಮರತ್ವ, ರಾಷ್ಟ್ರೀಯತೆ ಮತ್ತು ಮೂರ್ತಿಪೂಜೆಗಳಂತಹ ಹಲವಾರು ದೆವ್ವ-ಪ್ರೇರಿತ ವಿಚಾರಗಳಿಂದ ಕ್ರೈಸ್ತಪ್ರಪಂಚವು ಸತ್ಯದ ಜಲವನ್ನು ವಿಷಭರಿತವನ್ನಾಗಿ ಮಾಡಿದೆ.a (1 ತಿಮೊಥೆಯ 4:1-3) ಕ್ರೈಸ್ತಪ್ರಪಂಚದ ಸಾಂಪ್ರದಾಯಿಕ ಬೋಧನೆಗಳಾಗಿ ಪರಿಣಮಿಸಿದ ಈ ಪೈಶಾಚಿಕ ಬೋಧನೆಗಳಿಗೆ ಬಲಿಬಿದ್ದ ಜನರನ್ನು ಹಿಡಿದಿರುವ ಆತ್ಮಿಕ ಅನಾರೋಗ್ಯಕ್ಕೆ ಇತಿಹಾಸವು ಸಾಕ್ಷಿಕೊಡುತ್ತದೆ.—ಹೋಲಿಸಿ ಯೆಶಾಯ 1:4-7.
ಸತ್ಯದ ಇಂತಹ ಕಲಬೆರಕೆಯು, ವಾಸ್ತವಿಕವಾಗಿ, ಮನುಷ್ಯನ ಆರಂಭದಿಂದಲೂ ನಡಿಯುತ್ತಾ ಇದೆ. ಸುಳ್ಳುಗಳಿಂದ ಮತ್ತು ಏದೆನಿನಲ್ಲಿ ತಾನು ಆರಂಭಿಸಿದ ಮೋಸದಿಂದ ಜನರ ಮನಸ್ಸನ್ನು ಕೆಡಿಸುವ, ಈ ಕಾರ್ಯವಿಧಾನವನ್ನು ಸೈತಾನನು ಮುಂದುವರಿಸಿದ್ದಾನೆ. (ಯೋಹಾನ 8:44; 2 ಕೊರಿಂಥ 11:3) ನೋಹನ ದಿನಗಳ ಜಲಪ್ರಳಯವನ್ನು ಹಿಂಬಾಲಿಸಿ ಮಾನವ ಕುಟುಂಬವು ಭೂಮಿಯಾದ್ಯಂತ ಹರಡಿಕೊಂಡಂತೆ, ದೆವ್ವ-ಪ್ರೇರಿತ ತತ್ವಜ್ಞಾನ ಮತ್ತು ವಿಚಾರಗಳಿಂದ ಮಾನವ ಜ್ಞಾನದ ಜಲಾಶಯಗಳ ಬುದ್ಧಿಪೂರ್ವಕ ಕೆಡಿಸುವಿಕೆಗೆ ಸಕಲ ಸಂಸ್ಕೃತಿಗಳ ಜನರು ಬಲಿಪಶುಗಳಾದರು.
ಆತ್ಮಿಕ ಮಾಲಿನ್ಯದ ಪರಿಣಾಮಗಳು
ಅಂತಹ ಆತ್ಮಿಕ ಕಲಬೆರಕೆಯು ಯಾವ ಹಾನಿಯನ್ನು ಉಂಟುಮಾಡಬಲ್ಲದು? ಅದನ್ನು ನಾವು ಕಲುಷಿತ ನೀರು ನಮ್ಮ ಶಾರೀರಿಕ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳಿಗೆ ಹೋಲಿಸಬಲ್ಲೆವು. ಒಂದು ಅಧಿಕೃತ ಮೂಲವು ಹೇಳುವುದು: “ಸುಮಾರು 20 ಕೋಟಿ ಜನರು ಶಿಷ್ಟಸೊಮಾಯಸಿಸ್ (ಬಿಲ್ಹಾರ್ಸಿಯ) [ರಕ್ತಹೀನತೆ, ಅಸ್ವಸ್ಥತೆ, ಸಾಮಾನ್ಯ ಅನಾರೋಗ್ಯ, ಮತ್ತು ಮರಣವನ್ನೂ ಉಂಟುಮಾಡುವ ಸ್ನೇಲ್ ಜ್ವರ] ರೋಗವು, ಕಲುಷಿತ ನೀರು ಚರ್ಮವನ್ನು ಸೋಂಕಿದಾಗ ಬರುತ್ತದೆ. ಐವತ್ತು ಕೋಟಿ ಜನರಿಗೆ ಕುರುಡುತನದ ಮುಖ್ಯ ಕಾರಣಗಳಲ್ಲಿ ಒಂದಾದ ಕಣ್ಣಿನ ರವೆ ರೋಗ (ಟ್ರಾಕೋಮಾ)ವು, ಕೊಳಕು ನೀರಿನಿಂದ ತೊಳೆಯುವ ಮೂಲಕ ಬರುತ್ತದೆ. . . . ಮಾನವಜಾತಿಯ ಸುಮಾರು 200 ಕೋಟಿ ಸದಸ್ಯರಿಗೆ ಸುರಕ್ಷಿತವಾದ ಕುಡಿಯುವ ನೀರಿಲ್ಲ.” (ಅವರ್ ಕಂಟ್ರಿ, ದ ಪ್ಲ್ಯಾನೆಟ್) ಸುಳ್ಳಾದ, ಪೈಶಾಚಿಕ ಬೋಧನೆಗಳಿಂದ ಕಲುಷಿತಗೊಳಿಸಲ್ಪಟ್ಟ ಸಂಪ್ರದಾಯಗಳನ್ನು ಅನುಸರಿಸುವ ಪರಿಣಾಮವಾಗಿ ಕೋಟ್ಯಂತರ ಜನರು ಆತ್ಮಿಕವಾಗಿ ಉಡುಗಿಸಲ್ಪಟ್ಟಿದ್ದಾರೆ, ಅಂಧರಾಗಿ ಮಾಡಲ್ಪಟ್ಟಿದ್ದಾರೆ, ಕೊಲ್ಲಲ್ಪಟ್ಟಿದ್ದಾರೆ ಸಹ.—1 ಕೊರಿಂಥ 10:20, 21; 2 ಕೊರಿಂಥ 4:3, 4.
ಉದಾಹರಣೆಗಾಗಿ, ಯೇಸು ಕ್ರಿಸ್ತನ ಮತ್ತು ಆತನ ತಂದೆಯಾದ ಯೆಹೋವ ದೇವರ ನಡುವಣ ಸಂಬಂಧದ ವಿಷಯದಲ್ಲಿ ಅನೇಕರು ಗಲಿಬಿಲಿಗೊಂಡಿದ್ದಾರೆ ಅಥವಾ ಅಂಧರಾಗಿ ಮಾಡಲ್ಪಟ್ಟಿದ್ದಾರೆ. ಕ್ರೈಸ್ತರೆನಿಸಿಕೊಳ್ಳುವ ಕೆಲವರಲ್ಲಿ ಯೆಹೋವ ಎಂಬ ದೇವರ ಪವಿತ್ರ ನಾಮವನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗಳಿಂದ ತೆಗೆದುಬಿಡುವುದು ಪದ್ಧತಿಯಾಗಿ ಪರಿಣಮಿಸಿತು. ಜರ್ನಲ್ ಆಫ್ ಬಿಬ್ಲಿಕಲ್ ಲಿಟರೇಚರ್ನಲ್ಲಿ ಜಾರ್ಜ್ ಹವರ್ಡ್ ಹೇಳುವುದು: “ನಮ್ಮ ಅಭಿಪ್ರಾಯದಲ್ಲಿ ದೇವರ ಈ ಪವಿತ್ರ ನಾಮದ ತೆಗೆದುಹಾಕುವಿಕೆಯು, ‘ಕರ್ತನಾದ ದೇವರು’ ಮತ್ತು ‘ಕರ್ತನಾದ ಕ್ರಿಸ್ತ’ ಇವರ ನಡುವಣ ಸಂಬಂಧದ ಕುರಿತು ಆರಂಭದ ಅನ್ಯ ಕ್ರೈಸ್ತರ ಮನಸ್ಸುಗಳಲ್ಲಿ ಒಂದು ಗಲಿಬಿಲಿಯನ್ನು ಉಂಟುಮಾಡಿತು.”
ಮನುಷ್ಯ ಪ್ರಾಣವು ಅಮರವಾಗಿದೆ ಎಂಬ ಅಶಾಸ್ತ್ರೀಯ ಸಂಪ್ರದಾಯದಿಂದ ಉಂಟುಮಾಡಲ್ಪಟ್ಟಿರುವ ಗಲಿಬಿಲಿ, ಮೂಢನಂಬಿಕೆ, ಮತ್ತು ಭಯದ ಕುರಿತೂ ಯೋಚಿಸಿರಿ. (ಹೋಲಿಸಿ ಪ್ರಸಂಗಿ 9:5; ಯೆಹೆಜ್ಕೇಲ 18:4.) ಪೂರ್ವಜರ ಆರಾಧನೆಯ ಬಂಧನದಲ್ಲಿ ಅಥವಾ ಮೃತರು ತಮಗೆ ಹಾನಿಮಾಡಲು ಹಿಂದೆರಳುತ್ತಾರೆಂಬ ನಿತ್ಯ ಭಯದಲ್ಲಿ ಜೀವಿಸುವ ಜನರೆಷ್ಟು ಮಂದಿ ಇದ್ದಾರೆ? ಈ ನಂಬಿಕೆಯು ತಮ್ಮನ್ನು ಮತ್ತು ಇತರರನ್ನು ಕೊಲ್ಲಲು ಸಹ ಜನರನ್ನು ಪ್ರೋತ್ಸಾಹಿಸಿದೆ.
ಮರಣದಲ್ಲಿ ತಮ್ಮನ್ನು ಅಗಲಿದ ಆತ್ಮಗಳು ಆಚಿನ ಲೋಕದಲ್ಲಿ ತಮ್ಮನ್ನು ಭೇಟಿಯಾಗುವವು ಎಂದು ಅನೇಕ ಜಪಾನೀಯರು ಭಾವಿಸುತ್ತಾರೆ. ಆದುದರಿಂದ, ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಕೆಲವು ಹೆತ್ತವರು ತಮ್ಮ ಮಕ್ಕಳನ್ನು ಸಹ ಕೊಂದುಬಿಡುವುದು ಉತ್ತಮವೆಂದೆಣಿಸಿದ್ದಾರೆ. ಆ್ಯನ್ ಇಂಗ್ಲಿಷ್ ಡಿಕ್ಷನರಿ ಆಫ್ ಜ್ಯಾಪನೀಸ್ ವೇಸ್ ಆಫ್ ತಿಂಕಿಂಗ್ ವಿವರಿಸುವುದು: “ಜಪಾನಿನಲ್ಲಿ ಆತ್ಮಹತ್ಯೆಯು ಯಾವಾಗಲೂ ಖಂಡಿಸಲ್ಪಡುವುದಿಲ್ಲ, ಬದಲಿಗೆ ಅನೇಕಾವರ್ತಿ, ಒಬ್ಬನ ಗಂಭೀರ ತಪ್ಪಿಗಾಗಿ ಕ್ಷಮೆಬೇಡುವ ಒಂದು ಸ್ವೀಕರಣೀಯ ಮಾರ್ಗವಾಗಿ ವೀಕ್ಷಿಸಲ್ಪಡುತ್ತದೆ . . . ಕುಟುಂಬ ಆತ್ಮಹತ್ಯೆಗಳು ಸಹ ಸಹಾನುಭೂತಿಯ ನುಡಿಗಳಿಂದ ವರದಿಸಲ್ಪಡುವುದು ಸಂಭವನೀಯ.”
ಸಂಪ್ರದಾಯಗಳನ್ನು ಪರೀಕ್ಷಿಸಿರಿ
ಸಾಂಪ್ರದಾಯಿಕ ನಂಬಿಕೆಗಳನ್ನು ಮತ್ತು ಪದ್ಧತಿಗಳನ್ನು ಅಂಧರಾಗಿ ಅನುಸರಿಸುವುದರಲ್ಲಿ ಒಳಗೂಡಿರುವ ಅಪಾಯಗಳ ನೋಟದಲ್ಲಿ, ನಾವೇನು ಮಾಡಬೇಕು? ಒಂದನೆಯ ಶತಮಾನದ ಅಂತ್ಯದಲ್ಲಿ, ಅಪೊಸ್ತಲ ಯೋಹಾನನು ತನ್ನ ಜೊತೆ ಕ್ರೈಸ್ತರಿಗೆ ಈ ಸಲಹೆಯನ್ನು ಕೊಟ್ಟನು: “ಪ್ರಿಯರೇ, ಅನೇಕ ಮಂದಿ ಸುಳ್ಳುಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು [ನೀರನ್ನು ಶುದ್ಧತೆಗಾಗಿ ನೀವು ಪರೀಕ್ಷಿಸುವಂತೆಯೇ] ಅವುಗಳನ್ನು ಪರೀಕ್ಷಿಸಬೇಕು.” (1 ಯೋಹಾನ 4:1; 1 ಥೆಸಲೊನೀಕ 5:21ನ್ನು ಸಹ ನೋಡಿ.) ಒಂದು ಸಂಪ್ರದಾಯವು ಹಾನಿಕರವೆಂದು ನಿಮಗೆ ತಿಳಿಯುವುದು ಹೇಗೆ? ನೀವೇನನ್ನು ನಂಬುತ್ತೀರೋ ಅದನ್ನು ಪರೀಕ್ಷಿಸಲು, ಒಂದು ರೀತಿಯ ಪ್ರಮಾಣ ಗ್ರಂಥವು, ಶುದ್ಧತೆಯ ಒಂದು ಮಟ್ಟವು ನಿಮಗೆ ಅಗತ್ಯವಿದೆ.
ಬೈಬಲು ಅಂತಹ ಒಂದು ಪ್ರಮಾಣ ಗ್ರಂಥವಾಗಿದೆ. ಯೇಸು ಕ್ರಿಸ್ತನು ಹೇಳಿದ್ದು: “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಅವನು ಮತ್ತೂ ಅಂದದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ.” (ಯೋಹಾನ 4:23) ದೇವರ ಪ್ರೇರಿತ ವಾಕ್ಯವನ್ನು ಉಪಯೋಗಿಸುವ ಮೂಲಕ, ಮನುಷ್ಯ ಮತ್ತು ಪೈಶಾಚಿಕ ತತ್ವಜ್ಞಾನದ ಕಲುಷಿತ ನೀರಿನ ಬದಲಿಗೆ, ಸತ್ಯದ ಶುದ್ಧ ಜಲವನ್ನು ನೀವು ದೊರಕಿಸಿಕೊಳ್ಳುತ್ತೀರಿ.—ಯೋಹಾನ 8:31, 32; 2 ತಿಮೊಥೆಯ 3:16.
ಅತಿ ಚಿಕ್ಕ ಮಲಿನಕಾರಕಗಳು ಸಹ ವಿಪತ್ಕಾರಕ ಪರಿಣಾಮಗಳನ್ನು ಉಂಟುಮಾಡಬಲ್ಲವು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಪರಿಣಾಮಗಳು ತೋರಿಬರುವುದಕ್ಕೆ ಕೆಲವು ಸಲ ವರ್ಷಗಳು ಹಿಡಿಯುತ್ತವೆ. ವರ್ಲ್ಡ್ ಕಾನ್ಸರ್ವೇಷನ್ ಯೂನಿಯನ್ನ ಮಾಜಿ ಅಧ್ಯಕ್ಷರಾಗಿದ್ದ ಶ್ರೀದಾತ್ ರಾಂಫಲ್ ಹೇಳುವುದು: “ಕೊಳಕು ನೀರು ಲೋಕದ ಅತ್ಯಂತ ಹೆಚ್ಚು ಅಪಾಯಕರ ಕೊಲೆಗಾರನಾಗಿ ಪರಿಣಮಿಸಿದೆ. ಅದರ ಉಪಯೋಗದಿಂದಾಗಿ ಕಡಿಮೆಪಕ್ಷ ಇಪ್ಪತ್ತೈದು ಸಾವಿರ ಜನರು ಪ್ರತಿ ದಿನ ಸಾಯುತ್ತಾರೆ.” ಆತ್ಮಿಕವಾಗಿ ಕಲುಷಿತಗೊಂಡ ಸಂಪ್ರದಾಯಗಳು ಇನ್ನೂ ಹೆಚ್ಚು ಅಪಾಯಕರವಾಗಿವೆ.
ಅವು ಸತ್ಯದೊಂದಿಗೆ ಸಂಘರ್ಷಿಸುತ್ತಿವೆಯೆಂದು ಕಂಡುಬಂದಲ್ಲಿ, ನೀವು ವರ್ಷಗಳಿಂದ ಅನುಸರಿಸಿರಬಹುದಾದ ಸಾಂಪ್ರದಾಯಿಕ ನಂಬಿಕೆಗಳಿಂದ ಬಿಡಿಸಿಕೊಳ್ಳುವ ಧೈರ್ಯವು ನಿಮಗಿದೆಯೇ? ಎಚ್ಚರಿಕೆಗಳನ್ನು ಪಾಲಿಸಿರಿ. ನಿಮ್ಮ ಸಂಪ್ರದಾಯಗಳು ದೇವರ ಶುದ್ಧವಾದ ಸತ್ಯ ವಾಕ್ಯದೊಂದಿಗೆ ಹೊಂದಿಕೆಯಲ್ಲಿವೆಯೆಂದು ಖಚಿತಪಡಿಸಿಕೊಳ್ಳುವ ಮೂಲಕ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಕಾಪಾಡಿಕೊಳ್ಳಿರಿ.—ಕೀರ್ತನೆ 19:8-11; ಜ್ಞಾನೋಕ್ತಿ 14:15; ಅ. ಕೃತ್ಯಗಳು 17:11.
[ಪಾದಟಿಪ್ಪಣಿ]
a ಅಂತಹ ಬೋಧನೆಗಳಿಗೆ ಬೈಬಲಿನಲ್ಲಿ ಯಾವುದೇ ಆಧಾರವಿಲವ್ಲೆಂಬ ಪುರಾವೆಗಾಗಿ, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್ ಪುಸ್ತಕವನ್ನು ನೋಡಿ. ಈ ಪುಸ್ತಕವು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.
[ಪುಟ 7 ರಲ್ಲಿರುವ ಚಿತ್ರ]
ದೇವರ ಸತ್ಯ ವಾಕ್ಯವು ಶುದ್ಧವೂ ನಿರ್ಮಲವೂ ಆದ ನೀರಿನ ಒಂದು ನದಿಯಂತಿದೆ