ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು
“ಯಾವುದು ದೇವರ ಇಷ್ಟಾನುಸಾರ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟಿತೊ ಆ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”—ಎಫೆಸ 4:24, NW.
1. ನಾವು ಯೆಹೋವ ದೇವರಿಗೆ ಏಕೆ ನಿಷ್ಠೆಯನ್ನು ಸಲ್ಲಿಸಬೇಕು?
ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು, ಅನೇಕ ವಿಷಯಗಳನ್ನು ಒಳಗೊಂಡಿದೆ. ಅತ್ಯಂತ ಪ್ರಾಮುಖ್ಯವಾದದ್ದು, ಯೆಹೋವ ದೇವರಿಗೆ ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು ಆಗಿದೆ. ನಿಜವಾಗಿಯೂ, ಯೆಹೋವನು ಯಾರಾಗಿದ್ದಾನೊ ಅದರ ಮತ್ತು ನಮಗಾಗಿ ಆತನು ಮಾಡಿರುವ ವಿಷಯದ ನೋಟದಲ್ಲಿ, ಹಾಗೂ ಆತನಿಗೆ ನಮ್ಮ ಸಮರ್ಪಣೆಯಿಂದಾಗಿ, ನಾವು ಆತನಿಗೆ ನಿಷ್ಠೆಯನ್ನು ತೋರಿಸಲು ಹಂಗಿಗರು. ಯೆಹೋವ ದೇವರಿಗೆ ನಾವು ನಿಷ್ಠೆಯನ್ನು ಹೇಗೆ ಪ್ರದರ್ಶಿಸುತ್ತೇವೆ? ಒಂದು ಪ್ರಧಾನ ವಿಧವು, ಯೆಹೋವನ ನೀತಿಯ ತತ್ವಗಳಿಗೆ ನಿಷ್ಠಾವಂತರಾಗಿರುವುದರ ಮೂಲಕವೇ.
2, 3. ನಿಷ್ಠೆ ಮತ್ತು ನೀತಿಯ ನಡುವೆ ಯಾವ ಸಂಬಂಧವಿದೆ?
2 ಆ ಪಂಥಾಹ್ವಾನವನ್ನು ಎದುರಿಸಲು, 1 ಪೇತ್ರ 1:15, 16ರಲ್ಲಿ ಕಂಡುಕೊಳ್ಳಲ್ಪಡುವ ಮಾತುಗಳಿಗೆ ನಾವು ಗಮನ ಕೊಡಬೇಕು: “ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.” ಯೆಹೋವ ದೇವರಿಗೆ ತೋರಿಸುವ ನಿಷ್ಠೆಯು, ನಮ್ಮ ಆಲೋಚನೆಗಳು, ಮಾತುಗಳು, ಮತ್ತು ಕ್ರಿಯೆಗಳನ್ನು ಆತನ ಪವಿತ್ರ ಚಿತ್ತದೊಂದಿಗೆ ಹೊಂದಿಕೆಯಲ್ಲಿ ತರುತ್ತಾ, ಎಲ್ಲ ಸಮಯಗಳಲ್ಲಿ ನಾವು ಆತನಿಗೆ ವಿಧೇಯರಾಗುವಂತೆ ಮಾಡುವುದು. ಅದರ ಅರ್ಥವು, 1 ತಿಮೊಥೆಯ 1:3-5(NW)ರಲ್ಲಿ ನಮಗೆ ಆಜ್ಞಾಪಿಸಲ್ಪಟ್ಟಿರುವಂತೆ, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡುವುದಾಗಿದೆ: “ನಿಜವಾಗಿಯೂ, ಈ ಆಜ್ಞೆ [ಬೇರೆ ಬೋಧನೆಗಳನ್ನು ಕಲಿಸಬಾರದು ಅಥವಾ ಸುಳ್ಳು ಕಥೆಗಳಿಗೆ ಗಮನಕೊಡಬಾರದು] ಯಾ ಉದ್ದೇಶವು ಶುದ್ಧಹೃದಯದಿಂದ, ಶುದ್ಧ ಮನಸ್ಸಾಕ್ಷಿಯಿಂದ ಮತ್ತು ಕಪಟರಹಿತವಾದ ನಂಬಿಕೆಯಿಂದ ಬರುವ ಪ್ರೀತಿಯೇ.” ನಮ್ಮಲ್ಲಿ ಯಾರೂ ಪರಿಪೂರ್ಣರಾಗಿರುವುದಿಲ್ಲ ನಿಜ, ಆದರೆ ನಮ್ಮಿಂದ ಸಾಧ್ಯವಾಗುವ ಅತಿ ಅತ್ಯುತ್ತಮವಾದದ್ದನ್ನು ಮಾಡಲು ನಾವು ಪ್ರಯತ್ನಿಸುತ್ತಿರಬೇಕು, ಅಲ್ಲವೆ?
3 ಯೆಹೋವನಿಗೆ ತೋರಿಸುವ ನಿಷ್ಠೆಯು, ಸ್ವಾರ್ಥದಿಂದ ನೀತಿಯ ತತ್ವಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ ನಮ್ಮನ್ನು ತಡೆಯುವುದು. ನಿಶ್ಚಯವಾಗಿಯೂ, ನಿಷ್ಠೆಯು ನಮ್ಮನ್ನು ಕಪಟಿಗಳಾಗಿರುವುದರಿಂದ ತಡೆಯುವುದು. ಕೀರ್ತನೆಗಾರನು ಹೀಗೆ ಹಾಡಿದಾಗ, ಅವನ ಮನಸ್ಸಿನಲ್ಲಿ ನಿಷ್ಠೆಯಿತ್ತು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.” (ಕೀರ್ತನೆ 86:11) ನಿಷ್ಠೆಯು, ಯಾವುದನ್ನು “ಮಾನವರು ಜಾರಿಗೆ ತರಸಾಧ್ಯವಾಗದ ನಿಯಮಗಳು ಅಥವಾ ತತ್ವಗಳಿಗೆ ವಿಧೇಯತೆ”ಯೆಂದು ಚೆನ್ನಾಗಿ ವರ್ಣಿಸಲಾಗಿದೆಯೊ, ಅದನ್ನು ಕೇಳಿಕೊಳ್ಳುತ್ತದೆ.
4, 5. ಯಾವ ತಪ್ಪಾದ ಕ್ರಿಯೆಯನ್ನು ಗೈಯುವುದರಿಂದ ನಿಷ್ಠೆಯು ನಮ್ಮನ್ನು ತಡೆಯುವುದು?
4 ಯೆಹೋವ ದೇವರಿಗೆ ನಿಷ್ಠೆಯು, ಆತನ ನಾಮ ಮತ್ತು ರಾಜ್ಯದ ಮೇಲೆ ನಿಂದೆಯನ್ನು ತರಬಹುದಾದ ಯಾವ ವಿಷಯವನ್ನು ಮಾಡುವುದರಿಂದಲೂ ನಮ್ಮನ್ನು ತಡೆಯುವುದು. ಉದಾಹರಣೆಗೆ, ಒಮ್ಮೆ ಇಬ್ಬರು ಕ್ರೈಸ್ತರು ಪರಸ್ಪರ ಎಂತಹ ಒಂದು ಕಷ್ಟದೊಳಗೆ ಸಿಕ್ಕಿಕೊಂಡರೆಂದರೆ, ಅವರು ಅಯೋಗ್ಯವಾಗಿ ಒಂದು ಲೌಕಿಕ ನ್ಯಾಯಾಲಯವನ್ನು ಆಶ್ರಯಿಸಿದರು. ನ್ಯಾಯಾಧೀಶನು ಕೇಳಿದ್ದು, ‘ನೀವಿಬ್ಬರೂ ಯೆಹೋವನ ಸಾಕ್ಷಿಗಳೊ?’ ಅವರು ನ್ಯಾಯಾಲಯದಲ್ಲಿ ಏಕೆ ಇದ್ದರೆಂಬುದನ್ನು ಅವನಿಗೆ ಗ್ರಹಿಸಸಾಧ್ಯವಾಗಿರಲಿಲ್ಲವೆಂಬುದು ಸ್ಪಷ್ಟ. ಅದು ಎಂತಹ ಒಂದು ನಿಂದೆಯಾಗಿತ್ತು! ಯೆಹೋವ ದೇವರಿಗೆ ನಿಷ್ಠೆಯು, ಆ ಸಹೋದರರು ಅಪೊಸ್ತಲ ಪೌಲನ ಸಲಹೆಗೆ ಗಮನ ಕೊಡುವಂತೆ ಮಾಡಿರುತ್ತಿತ್ತು: “ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂಬದಕ್ಕೆ ಗುರುತು. ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?” (1 ಕೊರಿಂಥ 6:6ಬಿ, 7) ನಿಶ್ಚಯವಾಗಿಯೂ, ಯೆಹೋವ ದೇವರ ಕಡೆಗೆ ನಿಷ್ಠೆಯ ಮಾರ್ಗವು, ಯೆಹೋವನ ಮತ್ತು ಆತನ ಸಂಸ್ಥೆಯ ಮೇಲೆ ನಿಂದೆಯನ್ನು ತರುವ ಬದಲು ವೈಯಕ್ತಿಕ ನಷ್ಟವನ್ನು ಅನುಭವಿಸುವುದೇ ಆಗಿದೆ.
5 ಯೆಹೋವ ದೇವರಿಗೆ ನಿಷ್ಠೆಯು, ಮನುಷ್ಯನ ಭಯಕ್ಕೆ ಬಗ್ಗದಿರುವುದನ್ನು ಸಹ ಒಳಗೊಳ್ಳುತ್ತದೆ. “ಮನುಷ್ಯನ ಭಯ ಉರುಲು; ಯೆಹೋವನ ಭರವಸ ಉದ್ಧಾರ.” (ಜ್ಞಾನೋಕ್ತಿ 29:25) ಹೀಗೆ, ಹಿಂಸೆಯನ್ನು ಎದುರಿಸುವಾಗ ನಾವು ಸಂಧಾನ ಮಾಡಿಕೊಳ್ಳುವುದಿಲ್ಲ, ಬದಲಿಗೆ ಹಿಂದಿನ ಸೋವಿಯಟ್ ಯೂನಿಯನ್, ಮಲಾವಿ, ಇಥಿಯೋಪಿಯ, ಮತ್ತು ಇತರ ಹಲವಾರು ದೇಶಗಳಲ್ಲಿನ ಯೆಹೋವನ ಸಾಕ್ಷಿಗಳಿಂದ ಇಡಲ್ಪಟ್ಟ ಮಾದರಿಯನ್ನು ನಾವು ಅನುಕರಿಸುತ್ತೇವೆ.
6. ಯಾರೊಂದಿಗೆ ಸಹವಸಿಸುವುದರಿಂದ ನಿಷ್ಠೆಯು ನಮ್ಮನ್ನು ತಡೆಯುವುದು?
6 ನಾವು ಯೆಹೋವ ದೇವರಿಗೆ ನಿಷ್ಠಾವಂತರಾಗಿರುವುದಾದರೆ, ಆತನ ವೈರಿಗಳಾಗಿರುವವರೆಲ್ಲರೊಂದಿಗೆ ಸ್ನೇಹಿತರಾಗುವುದನ್ನು ತೊರೆಯುವೆವು. ಆ ಕಾರಣದಿಂದಲೇ ಶಿಷ್ಯನಾದ ಯಾಕೋಬನು ಬರೆದುದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ರಾಜ ದಾವೀದನು ಹೀಗೆ ಹೇಳಿದಾಗ, ತೋರಿಸಿದ ನಿಷ್ಠೆಯನ್ನು ಪಡೆದಿರಲು ನಾವು ಬಯಸಬೇಕು: “ಯೆಹೋವನೇ, ನಿನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸುತ್ತೇನಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವದಿಲ್ಲವೋ? ನಾನು ಅವರನ್ನು ಸಂಪೂರ್ಣವಾಗಿ ಹಗೆಮಾಡುತ್ತೇನೆ; ಅವರು ನನಗೂ ವೈರಿಗಳೇ ಆಗಿದ್ದಾರೆ.” (ಕೀರ್ತನೆ 139:21, 22) ಯಾವುದೇ ಉದ್ದೇಶಪೂರ್ವಕ ಪಾಪಿಗಳೊಂದಿಗೆ ನಾವು ಸ್ನೇಹ ಬೆಳೆಸಲು ಬಯಸುವುದಿಲ್ಲ, ಏಕೆಂದರೆ ನಮಗೆ ಅವರೊಂದಿಗೆ ಸಾಮಾನ್ಯವಾದ ಯಾವ ವಿಷಯವೂ ಇರುವುದಿಲ್ಲ. ದೇವರಿಗೆ ನಿಷ್ಠೆಯು, ವ್ಯಕ್ತಿಗತವಾಗಿ ಅಥವಾ ಟೆಲಿವಿಷನ್ನ ಮಾಧ್ಯಮದ ಮೂಲಕ ಯೆಹೋವನ ಅಂತಹ ಯಾವುದೇ ವೈರಿಗಳೊಂದಿಗೆ ಸ್ನೇಹ ಬೆಳೆಸುವುದರಿಂದ ನಮ್ಮನ್ನು ತಡೆಯದೊ?
ಯೆಹೋವನ ಸಮರ್ಥನೆಗೆ ಬರುವುದು
7. ಯೆಹೋವನ ವಿಷಯದಲ್ಲಿ ಏನನ್ನು ಮಾಡುವಂತೆ ನಿಷ್ಠೆಯು ನಮಗೆ ಸಹಾಯ ಮಾಡುವುದು, ಮತ್ತು ಎಲೀಹು ಇದನ್ನು ಹೇಗೆ ಮಾಡಿದನು?
7 ಯೆಹೋವ ದೇವರ ಸಮರ್ಥನೆಗೆ ಬರುವಂತೆ ನಿಷ್ಠೆಯು ನಮ್ಮನ್ನು ಪ್ರೇರೇಪಿಸುವುದು. ಎಲೀಹುವಿನಲ್ಲಿ ನಮಗೆ ಅದರ ಎಂತಹ ಒಂದು ಉತ್ತಮ ಮಾದರಿಯಿದೆ! ಯೋಬ 32:2, 3 ನಮಗೆ ಹೇಳುವುದು: “ಆ ಮೇಲೆ . . . ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟುಹತ್ತಿತು. ಇದಲ್ಲದೆ ಅವನ ಮೂವರು ಸ್ನೇಹಿತರು ಯೋಬನನ್ನು ಖಂಡಿಸತಕ್ಕ ಉತ್ತರವನ್ನು ಹೇಳಲಾರದೆ ಹೋದದರಿಂದ ಅವನು ಅವರ ಮೇಲೆಯೂ ಕೋಪಿಸಿಕೊಂಡನು.” ಯೋಬನ ಪುಸ್ತಕದಲ್ಲಿ, 32ರಿಂದ 37ನೆಯ ಅಧ್ಯಾಯಗಳ ವರೆಗೂ, ಎಲೀಹು ಯೆಹೋವನ ಸಮರ್ಥನೆಗೆ ಬರುತ್ತಾನೆ. ಉದಾಹರಣೆಗೆ, ಅವನು ಅಂದದ್ದು: “ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪಕ್ಷವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವುಂಟು. . . . ನನ್ನ ಸೃಷ್ಟಿಕರ್ತನು ಧರ್ಮಸ್ವರೂಪನೆಂದು ಹೊಗಳುವೆನು. . . . ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸ”ನು.—ಯೋಬ 36:2-7.
8. ನಾವು ಯೆಹೋವನ ಸಮರ್ಥನೆಗೆ ಬರುವ ಅಗತ್ಯ ಏಕೆ ಇದೆ?
8 ಯೆಹೋವನ ಸಮರ್ಥನೆಗೆ ಬರುವ ಅಗತ್ಯ ಏಕೆ ಇದೆ? ಇಂದು, ನಮ್ಮ ದೇವರಾದ ಯೆಹೋವನು ಹಲವಾರು ವಿಧಗಳಲ್ಲಿ ದೂಷಿಸಲ್ಪಟ್ಟಿದ್ದಾನೆ. ಆತನು ಅಸ್ತಿತ್ವದಲ್ಲಿಲ್ಲವೆಂದು, ಆತನು ಒಂದು ತ್ರಯೈಕ್ಯದ ಭಾಗವೆಂದು, ಸುಡುತ್ತಿರುವ ನರಕವೊಂದರಲ್ಲಿ ಆತನು ಜನರನ್ನು ನಿತ್ಯವಾಗಿ ಹಿಂಸಿಸುತ್ತಾನೆಂದು, ಲೋಕವನ್ನು ಮತಾಂತರಿಸುವ ಒಂದು ಬಲಹೀನ ಪ್ರಯತ್ನವನ್ನು ಆತನು ಮಾಡುತ್ತಿದ್ದಾನೆಂದು, ಮಾನವಜಾತಿಯ ಕುರಿತು ಆತನು ಕಾಳಜಿ ವಹಿಸುವುದಿಲ್ಲವೆಂದು, ಇತ್ಯಾದಿ ವಾದಿಸಲಾಗಿದೆ. ಆತನ ಸಮರ್ಥನೆಗೆ ಬರುವ ಮೂಲಕ ಮತ್ತು ಯೆಹೋವನು ಖಂಡಿತವಾಗಿ ಅಸ್ತಿತ್ವದಲ್ಲಿದ್ದಾನೆಂದು, ಆತನು ವಿವೇಕಯುತ, ನ್ಯಾಯವಂತ, ಸರ್ವಶಕ್ತ ಹಾಗೂ ಪ್ರೀತಿಯ ದೇವರಾಗಿದ್ದಾನೆಂದು; ಎಲ್ಲ ವಿಷಯಗಳಿಗಾಗಿ ಆತನಿಗೊಂದು ಸಮಯವಿದೆಯೆಂದು; ಮತ್ತು ಆತನ ಕ್ಲುಪ್ತ ಸಮಯವು ಬಂದಾಗ, ಆತನು ಎಲ್ಲ ದುಷ್ಟತನಕ್ಕೆ ಅಂತ್ಯವನ್ನು ತರುವನೆಂದು ಹಾಗೂ ಇಡೀ ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡುವನೆಂದು ರುಜುಪಡಿಸುವ ಮೂಲಕ, ಆತನಿಗೆ ನಮ್ಮ ನಿಷ್ಠೆಯನ್ನು ನಾವು ಪ್ರದರ್ಶಿಸುತ್ತೇವೆ. (ಪ್ರಸಂಗಿ 3:1) ಇದು ಯೆಹೋವನ ನಾಮಕ್ಕೆ ಮತ್ತು ರಾಜ್ಯಕ್ಕೆ ಸಾಕ್ಷಿಯನ್ನು ನೀಡುವ ಪ್ರತಿಯೊಂದು ಅವಕಾಶದ ಉಪಯೋಗವನ್ನು ನಾವು ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತದೆ.
ಯೆಹೋವನ ಸಂಸ್ಥೆಗೆ ನಿಷ್ಠೆ
9. ಯಾವ ವಿವಾದಾಂಶಗಳ ವಿಷಯದಲ್ಲಿ ಕೆಲವರು ನಿಷ್ಠೆಯ ಕೊರತೆಯನ್ನು ವ್ಯಕ್ತಪಡಿಸಿದ್ದಾರೆ?
9 ಈಗ ನಾವು, ಯೆಹೋವನ ದೃಶ್ಯ ಸಂಸ್ಥೆಗೆ ನಿಷ್ಠಾವಂತರಾಗಿರುವ ವಿಷಯಕ್ಕೆ ಬರುತ್ತೇವೆ. ಕ್ರೈಸ್ತ ಸಭೆಯನ್ನು ಆತ್ಮಿಕವಾಗಿ ಉಣಿಸುವ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ಸೇರಿಸಿ, ನಾವು ಖಂಡಿತವಾಗಿ ಅದಕ್ಕೆ ನಿಷ್ಠೆತೋರಿಸಲು ಹಂಗಿಗರಾಗಿದ್ದೇವೆ. (ಮತ್ತಾಯ 24:45-47) ವಾಚ್ ಟವರ್ ಪ್ರಕಾಶನಗಳಲ್ಲಿ, ಅದೇ ಕ್ಷಣದಲ್ಲಿ ನಮಗೆ ಅರ್ಥವಾಗದ ಅಥವಾ ನಾವು ಒಪ್ಪದೆ ಇರುವ ಯಾವುದೊ ವಿಷಯವು ಕಾಣಿಸಿಕೊಳ್ಳುತ್ತದೆ ಎಂದಿಟ್ಟುಕೊಳ್ಳಿರಿ. ನಾವೇನು ಮಾಡುವೆವು? ಮನನೊಂದು, ಸಂಸ್ಥೆಯನ್ನು ಬಿಟ್ಟುಬಿಡುವೆವೊ? ಅನೇಕ ವರ್ಷಗಳ ಹಿಂದೆ, ದ ವಾಚ್ ಟವರ್, ಹೊಸ ಒಡಂಬಡಿಕೆಯನ್ನು ಸಹಸ್ರ ವರ್ಷಗಳ ಸಮಯಕ್ಕೆ ಅನ್ವಯಿಸಿದಾಗ, ಕೆಲವರು ಅದನ್ನೇ ಮಾಡಿದರು. ಒಮ್ಮೆ, ತಾಟಸ್ಥ್ಯದ ವಿವಾದಾಂಶದ ಕುರಿತು ದ ವಾಚ್ಟವರ್ ಹೇಳಿದ ವಿಷಯದಿಂದ ಇತರರು ರೇಗಿಸಲ್ಪಟ್ಟರು. ಈ ವಿಷಯಗಳ ಕುರಿತು ಎಡವಿದವರು, ಸಂಸ್ಥೆಗೆ ಮತ್ತು ತಮ್ಮ ಸಹೋದರರಿಗೆ ನಿಷ್ಠಾವಂತರಾಗಿ ಉಳಿದಿದ್ದರೆ, ಈ ವಿಷಯಗಳನ್ನು ಯೆಹೋವನು ಸ್ಪಷ್ಟೀಕರಿಸುವಂತೆ—ಯಾವುದನ್ನು ಆತನು ತನ್ನ ಕ್ಲುಪ್ತ ಸಮಯದಲ್ಲಿ ಮಾಡಿದನೊ, ಅದಕ್ಕಾಗಿ—ಕಾಯುತ್ತಿದ್ದರು. ಹೀಗೆ, ನಿಷ್ಠೆಯು, ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೂಲಕ ಹೆಚ್ಚಿನ ತಿಳಿವಳಿಕೆಯು ಪ್ರಕಾಶಿಸಲ್ಪಡುವ ತನಕ, ತಾಳ್ಮೆಯಿಂದ ಕಾದುಕೊಂಡಿರುವುದನ್ನು ಒಳಗೊಳ್ಳುತ್ತದೆ.
10. ನಿಷ್ಠೆಯು ಯಾವ ವಿಷಯದ ಕುರಿತು ಕುತೂಹಲವುಳ್ಳವರಾಗಿರುವುದರಿಂದ ನಮ್ಮನ್ನು ತಡೆಯುವುದು?
10 ಯೆಹೋವನ ದೃಶ್ಯ ಸಂಸ್ಥೆಗೆ ನಿಷ್ಠೆಯು, ಧರ್ಮಭ್ರಷ್ಟರನ್ನು ತಿರಸ್ಕರಿಸುವುದನ್ನೂ ಅರ್ಥೈಸುತ್ತದೆ. ಧರ್ಮಭ್ರಷ್ಟರಿಗೆ ಏನು ಹೇಳಲಿಕ್ಕಿದೆ ಎಂಬುದರ ಕುರಿತು ನಿಷ್ಠಾವಂತ ಕ್ರೈಸ್ತರು ಕುತೂಹಲವುಳ್ಳವರಾಗಿರುವುದಿಲ್ಲ. ಭೂಮಿಯ ಮೇಲೆ ತನ್ನ ಕೆಲಸವನ್ನು ನಿರ್ದೇಶಿಸಲು ಯೆಹೋವ ದೇವರ ಮೂಲಕ ಉಪಯೋಗಿಸಲ್ಪಡುತ್ತಿರುವವರು ಪರಿಪೂರ್ಣರಲ್ಲ, ನಿಜ. ಆದರೆ ನಾವು ಏನು ಮಾಡಬೇಕೆಂದು ದೇವರ ವಾಕ್ಯವು ಹೇಳುತ್ತದೆ? ದೇವರ ಸಂಸ್ಥೆಯನ್ನು ಬಿಟ್ಟುಬಿಡಬೇಕೆಂದೊ? ಇಲ್ಲ. ಸಹೋದರ ವಾತ್ಸಲ್ಯವು ನಮ್ಮನ್ನು ಅದಕ್ಕೆ ನಿಷ್ಠಾವಂತರನ್ನಾಗಿ ಇಡಬೇಕು, ಮತ್ತು ನಾವು “ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ . . . ಪ್ರೀತಿ”ಸುತ್ತಾ ಮುಂದುವರಿಯಬೇಕು.—1 ಪೇತ್ರ 1:22.
ನಿಷ್ಠಾವಂತ ಹಿರಿಯರಿಗೆ ನಿಷ್ಠೆ
11. ಯಾವ ನಕಾರಾತ್ಮಕ ಯೋಚನೆಯ ವಿರುದ್ಧ ಕಾಪಾಡಿಕೊಳ್ಳುವಂತೆ ನಿಷ್ಠೆಯು ನಮಗೆ ಸಹಾಯ ಮಾಡುವುದು?
11 ನಮಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರುವ ಯಾವುದೊ ವಿಷಯವನ್ನು ಸಭೆಯಲ್ಲಿ ಹೇಳಲಾದಾಗ ಅಥವಾ ಮಾಡಲಾದಾಗ, ನಿಷ್ಠೆಯು ನಮ್ಮನ್ನು ವಿಮರ್ಶಾತ್ಮಕರಾಗಿರುವುದರಿಂದ ತಡೆಯುವುದು ಮತ್ತು ಅದು ಬಹುಶಃ ವಿಮರ್ಶಾಶಕ್ತಿಯ ವಿಷಯವೆಂಬ ಸ್ಥಾನವನ್ನು ತೆಗೆದುಕೊಳ್ಳುವಂತೆ ನಮಗೆ ಸಹಾಯ ಮಾಡುವುದು. ನೇಮಿತ ಹಿರಿಯರ ಮತ್ತು ಇತರ ಜೊತೆ ವಿಶ್ವಾಸಿಗಳ ಕುಂದು ಕೊರತೆಗಳಿಗಿಂತ ಅವರ ಒಳ್ಳೆಯ ಗುಣಗಳ ಮೇಲೆ ಗಮನವಿಡುವುದು ಹೆಚ್ಚು ಉತ್ತಮವಲ್ಲವೊ? ಹೌದು, ಅಂತಹ ಎಲ್ಲ ನಕಾರಾತ್ಮಕ ಯೋಚನೆಯ ವಿರುದ್ಧ ಎಚ್ಚರವಾಗಿರಲು ನಾವು ಬಯಸುತ್ತೇವೆ, ಏಕೆಂದರೆ ಅದು ನಿಷ್ಠಾದ್ರೋಹಕ್ಕೆ ಸಂಬಂಧಿಸಿದೆ! ನಿಷ್ಠೆಯು, “ಯಾರನ್ನೂ ದೂಷಿಸ”ಬಾರದೆಂಬ ಪೌಲನ ಆದೇಶಕ್ಕೆ ವಿಧೇಯರಾಗುವಂತೆಯೂ ನಮಗೆ ಸಹಾಯ ಮಾಡುವುದು.—ತೀತ 3:1, 2.
12, 13. ಯಾವ ವಿಶೇಷವಾದ ಪಂಥಾಹ್ವಾನಗಳನ್ನು ಹಿರಿಯರು ಎದುರಿಸಬೇಕು?
12 ನಿಷ್ಠೆಯು, ಹಿರಿಯರಿಗೆ ನಿರ್ದಿಷ್ಟ ಪಂಥಾಹ್ವಾನಗಳನ್ನು ಒಡ್ಡುತ್ತದೆ. ಈ ಪಂಥಾಹ್ವಾನಗಳಲ್ಲಿ ಒಂದು, ಗೋಪ್ಯತೆಯ ವಿಷಯವಾಗಿದೆ. ಸಭೆಯ ಸದಸ್ಯನೊಬ್ಬನು ಒಬ್ಬ ಹಿರಿಯನಲ್ಲಿ ಗುಟ್ಟನ್ನು ಹೇಳಬಹುದು. ಆ ವ್ಯಕ್ತಿಯ ಕಡೆಗೆ ನಿಷ್ಠೆಯು, ಗೋಪ್ಯತೆಯ ಮೂಲತತ್ವವನ್ನು ಉಲ್ಲಂಘಿಸುವುದರಿಂದ ಹಿರಿಯನನ್ನು ತಡೆಯುವುದು. ಜ್ಞಾನೋಕ್ತಿ 25:9ರಲ್ಲಿರುವ ಸಲಹೆಗೆ ಅವನು ಲಕ್ಷ್ಯಕೊಡುವನು: “ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ.” ಅದರ ಅರ್ಥ, ತನ್ನ ಸ್ವಂತ ಹೆಂಡತಿಗೂ ವಿಷಯವನ್ನು ತಿಳಿಸದಿರುವುದೆಂದೇ!
13 ಹಿರಿಯರಿಗೆ ನಿಷ್ಠೆಯ ಇತರ ಪರೀಕ್ಷೆಗಳನ್ನು ಸಹ ಎದುರಿಸಲಿಕ್ಕಿದೆ. ಅವರು ಮನುಷ್ಯರನ್ನು ಮೆಚ್ಚಿಸುವವರಾಗಿರುವರೊ ಅಥವಾ ತಿದ್ದುಪಾಟಿನ ಅಗತ್ಯವಿದ್ದವರಿಗೆ—ಅವರು ಸಂಬಂಧಿಕರು ಅಥವಾ ಆಪ್ತ ಮಿತ್ರರೂ ಆಗಿರುವಲ್ಲಿ—ಧೈರ್ಯದಿಂದ ಹಾಗೂ ಸೌಮ್ಯವಾಗಿ ಸಹಾಯ ಮಾಡುವರೊ? ಯೆಹೋವನ ಸಂಸ್ಥೆಗೆ ನಿಷ್ಠೆಯು, ನಮ್ಮಲ್ಲಿ ಹಿರಿಯರಾಗಿರುವವರನ್ನು, ಆತ್ಮಿಕ ನೆರವಿನ ಅಗತ್ಯವಿರುವ ಯಾವುದೇ ವ್ಯಕ್ತಿಗೆ ಅವರು ಸಹಾಯ ಮಾಡುವಂತೆ ಪ್ರೇರೇಪಿಸುವುದು. (ಗಲಾತ್ಯ 6:1, 2) ಅಪೊಸ್ತಲ ಪೌಲನು ಅಪೊಸ್ತಲ ಪೇತ್ರನೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡಿದಂತೆ, ನಮ್ಮ ಜೊತೆ ಹಿರಿಯನೊಂದಿಗೆ ನಾವು ದಯಾಪರರಾಗಿರುವೆವು ಆದರೂ, ಮುಚ್ಚುಮರೆಯಿಲ್ಲದೆ ಮಾತಾಡುವಂತೆ ನಿಷ್ಠೆಯು ಮಾಡುವುದು. (ಗಲಾತ್ಯ 2:11-14) ಇನ್ನೊಂದು ಪಕ್ಕದಲ್ಲಿ, ಮೇಲ್ವಿಚಾರಕರು ಜಾಗರೂಕರಾಗಿರುವ ಅಗತ್ಯವಿದೆ, ಇಲ್ಲದಿದ್ದರೆ ಬುದ್ಧಿಹೀನವಾಗಿ ವರ್ತಿಸುವ ಮೂಲಕ ಅಥವಾ ಪಕ್ಷಪಾತವನ್ನು ತೋರಿಸುವ ಮೂಲಕ ಅಥವಾ ಬೇರೆ ಯಾವ ವಿಧದಲ್ಲಾದರೂ ತಮ್ಮ ಅಧಿಕಾರವನ್ನು ಅಪಪ್ರಯೋಗಿಸುವ ಮೂಲಕ, ತಮ್ಮ ಆರೈಕೆಯಲ್ಲಿರುವವರಿಗೆ ದೇವರ ಸಂಸ್ಥೆಗೆ ನಿಷ್ಠಾವಂತರಾಗಿರಲು ಕಷ್ಟಕರವಾಗಿ ಮಾಡುವರು.—ಫಿಲಿಪ್ಪಿ 4:5.
14, 15. ಯಾವ ಅಂಶಗಳು ಸಭೆಯ ಸದಸ್ಯರ ನಿಷ್ಠೆಯನ್ನು ಪರೀಕ್ಷಿಸಬಹುದು?
14 ಸಭೆಗೆ ಮತ್ತು ಅದರ ಹಿರಿಯರಿಗೆ ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವ ವಿಷಯಕ್ಕೆ ಇತರ ಅಂಶಗಳಿವೆ. ಸಭೆಯಲ್ಲಿ ಒಂದು ವೇಳೆ ತೊಂದರೆಯುಕ್ತ ಪರಿಸ್ಥಿತಿಗಳಿರುವುದಾದರೆ, ಯೆಹೋವನಿಗೆ ಮತ್ತು ಆತನನ್ನು ಪ್ರತಿನಿಧಿಸುತ್ತಿರುವವರಿಗೆ ನಿಷ್ಠೆಯನ್ನು ಪ್ರದರ್ಶಿಸುವ ಅವಕಾಶವನ್ನು ಇದು ನಮಗೆ ಕೊಡುತ್ತದೆ. (ದ ವಾಚ್ಟವರ್, ಜೂನ್ 15, 1987, ಪುಟಗಳು 15-17ನ್ನು ನೋಡಿರಿ.) ಒಂದು ಬಹಿಷ್ಕಾರವು ಸಂಭವಿಸಿರುವಲ್ಲಿ, ನಾವು ಹಿರಿಯರನ್ನು ಬೆಂಬಲಿಸುವಂತೆ, ತೆಗೆದುಕೊಳ್ಳಲ್ಪಟ್ಟ ಕ್ರಮಕ್ಕೆ ಸಾಕಷ್ಟು ಕಾರಣಗಳಿದ್ದವೊ ಎಂದು ಮತ್ತೆ ಊಹಿಸಲು ಪ್ರಯತ್ನಿಸದೆ ಇರುವಂತೆ ನಿಷ್ಠೆಯು ಕೇಳಿಕೊಳ್ಳುತ್ತದೆ.
15 ಸಭೆಗೆ ನಿಷ್ಠೆಯು, ನಮ್ಮ ಪರಿಸ್ಥಿತಿಗಳು ಮತ್ತು ಸಾಮರ್ಥ್ಯಕ್ಕೆ ಸಾಧ್ಯವಾಗುವ ಮಟ್ಟಿಗೆ, ವಾರದ ಎಲ್ಲ ಐದು ಕೂಟಗಳನ್ನು ಬೆಂಬಲಿಸುವುದನ್ನು ಕೇಳಿಕೊಳ್ಳುತ್ತದೆ. ಅವುಗಳನ್ನು ನಾವು ಕ್ರಮವಾಗಿ ಹಾಜರಾಗುವುದು ಮಾತ್ರವಲ್ಲ, ಅವುಗಳಿಗಾಗಿ ತಯಾರಿಸಿ, ಅವಕಾಶವು ಒದಗಿಬಂದಂತೆ ಆತ್ಮೋನ್ನತಿ ಮಾಡುವ ಹೇಳಿಕೆಗಳನ್ನು ಮಾಡುವಂತೆಯೂ ನಿಷ್ಠೆಯು ಕೇಳಿಕೊಳ್ಳುತ್ತದೆ.—ಇಬ್ರಿಯ 10:24, 25.
ವೈವಾಹಿಕ ನಿಷ್ಠೆ
16, 17. ನಿಷ್ಠೆಯ ಕಡೆಗೆ ಯಾವ ಪಂಥಾಹ್ವಾನಗಳನ್ನು ವಿವಾಹಿತ ಕ್ರೈಸ್ತರು ಎದುರಿಸಬೇಕು?
16 ಮತ್ತಾರಿಗೆ ಸಹ ನಾವು ನಿಷ್ಠೆಯನ್ನು ಸಲ್ಲಿಸಬೇಕು? ನಾವು ವಿವಾಹಿತರಾಗಿರುವುದಾದರೆ, ನಮ್ಮ ವಿವಾಹದ ಪ್ರತಿಜ್ಞೆಗಳ ನೋಟದಲ್ಲಿ, ನಮ್ಮ ವಿವಾಹದ ಸಂಗಾತಿಗೆ ನಿಷ್ಠಾವಂತರಾಗಿರುವ ಪಂಥಾಹ್ವಾನವನ್ನು ನಾವು ಎದುರಿಸಬೇಕು. ನಮ್ಮ ಸ್ವಂತ ಹೆಂಡತಿ ಅಥವಾ ಗಂಡನಿಗೆ ಸ್ನೇಹಪರರಾಗಿರುವುದಕ್ಕಿಂತ ಹೆಚ್ಚು ಇತರ ಸ್ತ್ರೀಯರು ಅಥವಾ ಪುರುಷರಿಗೆ ಸ್ನೇಹಪರರಾಗಿರುವ ತಪ್ಪನ್ನು ಮಾಡುವುದರಿಂದ, ನಮ್ಮ ಸಂಗಾತಿಯ ಕಡೆಗಿನ ನಿಷ್ಠೆಯು ನಮ್ಮನ್ನು ತಡೆಯುವುದು. ನಮ್ಮ ಸಂಗಾತಿಗೆ ನಿಷ್ಠೆಯು, ಹೊರಗಿನವರಿಗೆ ನಮ್ಮ ಸಂಗಾತಿಯ ಬಲಹೀನತೆಗಳನ್ನು ಅಥವಾ ಕುಂದು ಕೊರತೆಗಳನ್ನು ತಿಳಿಯಪಡಿಸದಿರುವಂತೆ ಸಹ ಕೇಳಿಕೊಳ್ಳುತ್ತದೆ. ನಮ್ಮ ಸಂಗಾತಿಯೊಂದಿಗೆ ಸಂವಾದ ಮಾರ್ಗಗಳನ್ನು ತೆರೆದಿಡಲು—ಸುವರ್ಣ ನಿಯಮಕ್ಕನುಗುಣವಾಗಿ ನಾವು ಮಾಡಲೇಬೇಕಾದದ್ದು—ಕಷ್ಟಪಟ್ಟು ಕೆಲಸಮಾಡುವುದಕ್ಕಿಂತ ಇತರರಿಗೆ ದೂರು ಹೇಳುವುದು ಹೆಚ್ಚು ಸುಲಭ. (ಮತ್ತಾಯ 7:12) ವಾಸ್ತವದಲ್ಲಿ, ವೈವಾಹಿಕ ಸ್ಥಿತಿಯು ನಮ್ಮ ಕ್ರೈಸ್ತ ನಿಷ್ಠೆಗೆ ನಿಜವಾದೊಂದು ಪಂಥಾಹ್ವಾನವನ್ನು ಒಡ್ಡುತ್ತದೆ.
17 ನಿಷ್ಠೆಯ ಈ ಪಂಥಾಹ್ವಾನವನ್ನು ಎದುರಿಸಲು, ಘೋರವಾದ ದುರ್ನಡತೆಯ ವಿಷಯದಲ್ಲಿ ಕಳಂಕಿತರಾಗಿರುವುದನ್ನು ನಾವು ತೊರೆಯಬೇಕು ಮಾತ್ರವಲ್ಲ, ನಮ್ಮ ಆಲೋಚನೆಗಳನ್ನೂ ಅನಿಸಿಕೆಗಳನ್ನೂ ನಾವು ಕಾಪಾಡಿಕೊಳ್ಳತಕ್ಕದ್ದು. (ಕೀರ್ತನೆ 19:14) ದೃಷ್ಟಾಂತಕ್ಕೆ, ನಮ್ಮ ಮೋಸಕರ ಹೃದಯಗಳು ಸುಖಾನುಭವ ಮತ್ತು ಸಂಭ್ರಮಕ್ಕೆ ಅತ್ಯಾಶೆ ಪಡುವುದಾದರೆ, ನಾವು ಮೆಚ್ಚುವುದರಿಂದ ಬಯಸುವ ಮಟ್ಟಿಗೆ ಸ್ವಾರ್ಥಪರವಾಗಿ ಮುಂದೆ ಹೋಗುವುದು ಬಹಳ ಸುಲಭವಾಗಿದೆ. ವೈವಾಹಿಕ ನಿಷ್ಠೆಯನ್ನು ಪ್ರೇರೇಪಿಸುತ್ತಾ, ರಾಜ ಸೊಲೊಮೋನನು ಗಂಡಂದಿರಿಗೆ ಸಾಂಕೇತಿಕವಾಗಿ ‘ಸ್ವಂತ ಕೊಳದ ನೀರನ್ನು ಮಾತ್ರ ಕುಡಿ’ಯುವ ಸಲಹೆ ನೀಡುತ್ತಾನೆ. (ಜ್ಞಾನೋಕ್ತಿ 5:15) ಮತ್ತು ಯೇಸು ಹೇಳಿದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28) ಲಂಪಟ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಗಂಡಂದಿರು, ವ್ಯಭಿಚಾರವನ್ನು ಮಾಡುವಂತೆ ಪ್ರೇರಿಸಲ್ಪಡುವ ಗಂಡಾಂತರಕ್ಕೆ ಒಳಗಾಗುತ್ತಾರೆ, ಹೀಗೆ ತಮ್ಮ ಹೆಂಡತಿಯರಿಗೆ ಮೋಸಮಾಡುತ್ತಾರೆ ಮತ್ತು ಅವರಿಗೆ ನಿಷ್ಠಾದ್ರೋಹಿಗಳಾಗಿರುತ್ತಾರೆ. ಅದೇ ಕಾರಣಕ್ಕಾಗಿ, ವ್ಯಾಭಿಚಾರಿಕ ಉಪಕಥೆಗಳನ್ನು ನಿರ್ವಹಿಸುವ ಟೀವೀ ಧಾರಾವಾಹಿಗಳ ಆತ್ಮದಲ್ಲಿ ಸಿಕ್ಕಿಕೊಂಡಿರುವ ಹೆಂಡತಿಯೊಬ್ಬಳು, ತನ್ನ ಗಂಡನ ಕಡೆಗೆ ನಿಷ್ಠಾದ್ರೋಹಿಯಾಗಲು ಶೋಧಿಸಲ್ಪಡಸಾಧ್ಯವಿದೆ. ಆದರೆ, ನಿಜವಾಗಿಯೂ ನಮ್ಮ ಸಂಗಾತಿಗೆ ನಿಷ್ಠಾವಂತರಾಗಿರುವ ಮೂಲಕ, ನಾವು ವಿವಾಹದ ಬಂಧವನ್ನು ಬಲಪಡಿಸುತ್ತೇವೆ, ಮತ್ತು ಯೆಹೋವ ದೇವರನ್ನು ಮೆಚ್ಚಿಸುವ ನಮ್ಮ ಪ್ರಯತ್ನಗಳಲ್ಲಿ ಪರಸ್ಪರ ಸಹಾಯ ಮಾಡುತ್ತೇವೆ.
ನಿಷ್ಠಾವಂತರಾಗಿರಲು ಸಹಾಯಕಗಳು
18. ಯಾವ ವಿಷಯದ ಗಣ್ಯತೆಯು ನಿಷ್ಠಾವಂತರಾಗಿರುವಂತೆ ನಮಗೆ ಸಹಾಯ ಮಾಡುವುದು?
18 ಈ ನಾಲ್ಕು ಕ್ಷೇತ್ರಗಳಲ್ಲಿ—ಯೆಹೋವನಿಗೆ, ಆತನ ಸಂಸ್ಥೆಗೆ, ಸಭೆಗೆ, ಮತ್ತು ನಮ್ಮ ವಿವಾಹ ಸಂಗಾತಿಗೆ—ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವಂತೆ ನಮಗೆ ಯಾವುದು ಸಹಾಯ ಮಾಡುವುದು? ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕೆ ನಿಕಟವಾಗಿ ಸಂಬಂಧಿಸಲ್ಪಟ್ಟಿದೆ ಎಂಬುದನ್ನು ಗಣ್ಯಮಾಡುವುದೇ ಒಂದು ಸಹಾಯವಾಗಿದೆ. ಹೌದು, ನಿಷ್ಠಾವಂತರಾಗಿ ಉಳಿಯುವ ಮೂಲಕ ನಾವು ಯೆಹೋವನನ್ನು ವಿಶ್ವದ ಪರಮಾಧಿಕಾರಿಯೋಪಾದಿ ವೀಕ್ಷಿಸುತ್ತೇವೆಂಬುದನ್ನು ತೋರಿಸುತ್ತೇವೆ. ಹೀಗೆ ನಮಗೆ ಆತ್ಮ ಗೌರವವೂ ಯೆಹೋವನ ಹೊಸ ಲೋಕದಲ್ಲಿ ನಿತ್ಯ ಜೀವದ ನಿರೀಕ್ಷೆಯೂ ಇರಸಾಧ್ಯವಿದೆ. ಯೆಹೋವನಿಂದ ಆರಂಭಿಸುತ್ತಾ, ಬೈಬಲಿನಲ್ಲಿ ಮತ್ತು ನಮ್ಮ ವಾಚ್ ಟವರ್ ಪ್ರಕಾಶನಗಳಲ್ಲಿ—ವರ್ಷಪುಸ್ತಕದ ವೃತ್ತಾಂತಗಳನ್ನು ಸೇರಿಸಿ—ಉಲ್ಲೇಖಿಸಲ್ಪಟ್ಟ ನಿಷ್ಠೆಯ ಉತ್ತಮ ಮಾದರಿಗಳನ್ನು ಪರಿಗಣಿಸುವ ಮೂಲಕ, ನಿಷ್ಠಾವಂತರಾಗಿ ಉಳಿಯಲು ಸ್ವತಃ ಸಹಾಯ ಮಾಡಿಕೊಳ್ಳಸಾಧ್ಯವಿದೆ.
19. ನಾವು ನಿಷ್ಠಾವಂತರಾಗಿರುವುದರಲ್ಲಿ ನಂಬಿಕೆಯು ಯಾವ ಪಾತ್ರವನ್ನು ವಹಿಸುತ್ತದೆ?
19 ಯೆಹೋವ ದೇವರಲ್ಲಿ ಬಲವಾದ ನಂಬಿಕೆ ಮತ್ತು ಆತನನ್ನು ಅಪ್ರಸನ್ನಗೊಳಿಸುವ ಭಯವು, ನಿಷ್ಠೆಯ ಪಂಥಾಹ್ವಾನವನ್ನು ಎದುರಿಸಲು ನಮಗೆ ಸಹಾಯ ಮಾಡುವುದು. ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಸಿಸುವ ಮೂಲಕ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ತೊಡಗುವ ಮೂಲಕ ನಾವು ಯೆಹೋವನಲ್ಲಿ ನಮ್ಮ ನಂಬಿಕೆಯನ್ನು ಮತ್ತು ಭಯವನ್ನು ಬಲಪಡಿಸುತ್ತೇವೆ. ಇದು ಎಫೆಸ 4:23, 24(NW)ರಲ್ಲಿ ದಾಖಲಿಸಲಾದ ಪೌಲನ ಸಲಹೆಯೊಂದಿಗೆ ಹೊಂದಾಣಿಕೆಯಲ್ಲಿ ವರ್ತಿಸಲು ನಮಗೆ ಸಹಾಯ ಮಾಡುವುದು: “ನೀವು ನಿಮ್ಮ ಮನಸ್ಸನ್ನು ಪ್ರೇರಿಸುವ ಶಕ್ತಿಯಲ್ಲಿ ಹೊಸಬರಾಗಿ, ಯಾವುದು ದೇವರ ಇಷ್ಟಾನುಸಾರ ನಿಜ ನೀತಿ ಮತ್ತು ನಿಷ್ಠೆಯಲ್ಲಿ ಸೃಷ್ಟಿಸಲ್ಪಟ್ಟಿತೊ ಆ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”
20. ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವನಿಗೆ ಮತ್ತು ನಾವು ನಿಷ್ಠೆಯನ್ನು ಸಲ್ಲಿಸಬೇಕಾದವರೆಲ್ಲರಿಗೆ ನಿಷ್ಠಾವಂತರಾಗಿರಲು ಯಾವ ಗುಣವು ನಮಗೆ ಸಹಾಯ ಮಾಡುವುದು?
20 ಯೆಹೋವನ ಗುಣಗಳ ವಿಷಯವಾಗಿ ಗಣ್ಯತೆಯು, ನಿಷ್ಠಾವಂತರಾಗಿರುವಂತೆ ನಮಗೆ ಸಹಾಯ ಮಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಸ್ವರ್ಗೀಯ ತಂದೆಗಾಗಿರುವ ನಿಸ್ವಾರ್ಥ ಪ್ರೀತಿಯು ಮತ್ತು ನಮಗಾಗಿ ಆತನು ಮಾಡಿರುವ ಎಲ್ಲ ವಿಷಯಕ್ಕಾಗಿ ಕೃತಜ್ಞತೆಯು, ಆತನನ್ನು ನಮ್ಮೆಲ್ಲ ಹೃದಯ, ಪ್ರಾಣ, ಮನಸ್ಸು, ಮತ್ತು ಬಲದಿಂದ ಪ್ರೀತಿಸುವುದು, ಆತನಿಗೆ ನಿಷ್ಠಾವಂತರಾಗಿರಲು ನಮಗೆ ಸಹಾಯ ಮಾಡುವುದು. ಇನ್ನೂ ಹೆಚ್ಚಾಗಿ, ತನ್ನ ಹಿಂಬಾಲಕರನ್ನು ಗುರುತಿಸುವುದೆಂದು ಯೇಸು ಹೇಳಿದ ಪ್ರೀತಿಯನ್ನು ಪಡೆದಿರುವುದು, ಸಭೆಯಲ್ಲಿ ಮತ್ತು ನಮ್ಮ ಕುಟುಂಬದಲ್ಲಿರುವ ಎಲ್ಲ ಕ್ರೈಸ್ತರಿಗೆ ನಿಷ್ಠಾವಂತರಾಗಿರಲು ಸಹಾಯ ಮಾಡುವುದು. ಬೇರೆ ಮಾತುಗಳಲ್ಲಿ, ಅದು ನಿಜವಾಗಿಯೂ ಸ್ವಾರ್ಥ ಅಥವಾ ನಿಸ್ವಾರ್ಥರಾಗಿರುವ ಒಂದು ವಿಷಯವಾಗಿದೆ. ನಿಷ್ಠಾದ್ರೋಹವು ಸ್ವಾರ್ಥರಾಗಿರುವುದನ್ನು ಅರ್ಥೈಸುತ್ತದೆ. ನಿಷ್ಠೆಯು ನಿಸ್ವಾರ್ಥರಾಗಿರುವುದನ್ನು ಅರ್ಥೈಸುತ್ತದೆ.—ಮಾರ್ಕ 12:30, 31; ಯೋಹಾನ 13:34, 35.
21. ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವ ವಿಷಯವನ್ನು ಹೇಗೆ ಸಾರಾಂಶಿಸಸಾಧ್ಯವಿದೆ?
21 ವಿಷಯವನ್ನು ಸಾರಾಂಶಿಸುವುದಾದರೆ: ನಿಷ್ಠೆಯು, ಯೆಹೋವ ದೇವರ ಮೂಲಕ, ಯೇಸು ಕ್ರಿಸ್ತನ ಮೂಲಕ, ಮತ್ತು ಯೆಹೋವನ ಎಲ್ಲ ನಿಜ ಸೇವಕರ ಮೂಲಕ ಪ್ರದರ್ಶಿಸಲ್ಪಡುವ ಅತ್ಯುತ್ತಮವಾದ ಗುಣವಾಗಿದೆ. ಯೆಹೋವ ದೇವರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪಡೆದಿರಲು, ಆತನ ನೀತಿಯ ಆವಶ್ಯಕತೆಗಳಿಗನುಗುಣವಾಗಿ ಜೀವಿಸುವ ಮೂಲಕ, ಆತನ ವೈರಿಗಳೊಂದಿಗೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳದೆ ಇರುವ ಮೂಲಕ, ಮತ್ತು ಔಪಚಾರಿಕವಾಗಿ ಹಾಗೂ ಅನೌಪಚಾರಿಕವಾಗಿ ಸಾಕ್ಷಿನೀಡುವುದರಲ್ಲಿ ಯೆಹೋವನ ಸಮರ್ಥನೆಗೆ ಬರುವ ಮೂಲಕ, ಆತನ ಕಡೆಗೆ ನಿಷ್ಠೆಯ ಪಂಥಾಹ್ವಾನವನ್ನು ನಾವು ಎದುರಿಸಬೇಕು. ಯೆಹೋವನ ದೃಶ್ಯ ಸಂಸ್ಥೆಗೆ ನಿಷ್ಠಾವಂತರಾಗಿರುವ ಪಂಥಾಹ್ವಾನವನ್ನು ಸಹ ನಾವು ಎದುರಿಸಬೇಕು. ನಮ್ಮ ಸಭೆಗಳಿಗೆ ಮತ್ತು ನಮ್ಮ ವಿವಾಹ ಸಂಗಾತಿಗಳಿಗೆ ನಾವು ನಿಷ್ಠಾವಂತರಾಗಿರಬೇಕು. ನಿಷ್ಠೆಯ ಪಂಥಾಹ್ವಾನವನ್ನು ಸಫಲವಾಗಿ ಎದುರಿಸುವ ಮೂಲಕ, ನಾವು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಭಾಗವಹಿಸುತ್ತಿರುವೆವು, ಮತ್ತು ವಿವಾದಾಂಶದ ಆತನ ಪಕ್ಷವನ್ನು ವಹಿಸುವೆವು. ಹೀಗೆ, ನಾವು ಆತನ ಅನುಗ್ರಹವನ್ನು ಗಳಿಸಿ ನಿತ್ಯ ಜೀವದ ಬಹುಮಾನವನ್ನು ಪಡೆಯುವೆವು. ಅಪೊಸ್ತಲ ಪೌಲನು ದಿವ್ಯ ಭಕ್ತಿಯ ಕುರಿತು ಹೇಳಿದ್ದನ್ನು, ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವ ವಿಷಯಕ್ಕೂ ಹೇಳಸಾಧ್ಯವಿದೆ. ಅದು ಈಗಿನ ಮತ್ತು ಭಾವೀ ಜೀವಿತ—ಇವೆರಡಕ್ಕೂ—ಪ್ರಯೋಜನಕಾರಿಯಾಗಿದೆ.—ಕೀರ್ತನೆ 18:25; 1 ತಿಮೊಥೆಯ 4:8.
ನೀವು ಹೇಗೆ ಉತ್ತರಿಸುವಿರಿ?
◻ ದೇವರಿಗೆ ನಿಷ್ಠೆಯ ಪಂಥಾಹ್ವಾನವನ್ನು ನಾವು ಯಾವ ವಿಧಗಳಲ್ಲಿ ಎದುರಿಸಸಾಧ್ಯವಿದೆ?
◻ ಯೆಹೋವನ ಸಂಸ್ಥೆಗೆ ನಿಷ್ಠೆಯು, ನಮ್ಮಿಂದ ಏನನ್ನು ಕೇಳಿಕೊಳ್ಳುತ್ತದೆ?
◻ ನಿಷ್ಠೆಯ ಪಂಥಾಹ್ವಾನವನ್ನು ಹಿರಿಯರು ಹೇಗೆ ಎದುರಿಸಬಲ್ಲರು?
◻ ನಿಷ್ಠೆಯನ್ನು ಒಳಗೂಡುವ ಯಾವ ಪಂಥಾಹ್ವಾನವನ್ನು ವಿವಾಹಿತ ಕ್ರೈಸ್ತರು ಎದುರಿಸಬೇಕು?
◻ ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವಂತೆ ಯಾವ ಗುಣಗಳು ನಮಗೆ ಸಹಾಯ ಮಾಡುವವು?
[ಪುಟ 17 ರಲ್ಲಿರುವ ಚಿತ್ರ]
ಸಭೆಯ ಸದಸ್ಯರಿಗೆ ನಿಷ್ಠೆಯು, ಗೋಪ್ಯವಾದ ವಿಷಯಗಳನ್ನು ಪ್ರಕಟಪಡಿಸುವುದರಿಂದ ಹಿರಿಯರನ್ನು ತಡೆಯುವುದು
[ಪುಟ 18 ರಲ್ಲಿರುವ ಚಿತ್ರಗಳು]
ಒಬ್ಬನ ಸಂಗಾತಿಗೆ ನಿಷ್ಠೆಯು, ವಿವಾಹದ ಬಂಧವನ್ನು ಬಲಪಡಿಸುತ್ತದೆ