ರೋಗಿಗಳ ಹಕ್ಕುಗಳು ಗೌರವಿಸಲ್ಪಡುತ್ತವೆ
‘ರಕ್ತವಿಲ್ಲದೆ ಈ ಶಸ್ತ್ರಕ್ರಿಯೆಯನ್ನು ನಡಸುವುದು ನನಗೆ ಅಸಾಧ್ಯ. ಶಸ್ತ್ರಕ್ರಿಯೆಯು ನಡೆಯಬೇಕೆಂದು ನೀವು ಬಯಸುವಲ್ಲಿ, ನೀವು ನನ್ನ ಚಿಕಿತ್ಸಾ ವಿಧಾನಕ್ಕೆ ಸಮ್ಮತಿ ನೀಡಬೇಕಾಗುವುದು. ಇಲ್ಲವಾದರೆ, ನೀವು ಇನ್ನೊಬ್ಬ ವೈದ್ಯನನ್ನು ಕಂಡುಹಿಡಿಯಬೇಕಾಗುವುದು.’
ವೈದ್ಯರ ಮಾತುಗಳು, ಥಾಯ್ಲೆಂಡ್ನಲ್ಲಿ ಜೀವಿಸುತ್ತಿರುವ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಜೆಂಗ್ ಸಾ ಜೂ ಇವಳ ನಂಬಿಕೆಯನ್ನು ಕದಲಿಸಲಿಲ್ಲ. ಒಂದು ವಿಧದ ಮಿದುಳಿನ ಗೆಡ್ಡೆ (ಟ್ಯೂಮರ್), ಮೆನಿನ್ಜ್ಯೋಮಾ ಇದೆಯೆಂದು ರೋಗ ನಿರ್ಣಯ ಮಾಡಲ್ಪಟ್ಟ ಜೆಂಗ್, ಶಸ್ತ್ರಕ್ರಿಯೆಯ ತೀವ್ರ ಅಗತ್ಯದಲ್ಲಿದ್ದಳು. ಆದರೆ ಅವಳು “ರಕ್ತವನ್ನೂ . . . ವಿಸರ್ಜಿ”ಸಿರಿ ಎಂಬ ಬೈಬಲಿನ ಆಜ್ಞೆಗೆ ವಿಧೇಯಳಾಗಿರಲು ದೃಢನಿಶ್ಚಯದಿಂದಿದ್ದಳು.—ಅ. ಕೃತ್ಯಗಳು 15:28, 29.
ಸಾಧ್ಯವಿರುವಲ್ಲಿ ತನ್ನ ಸ್ವಂತ ದೇಶದಲ್ಲಿ ಚಿಕಿತ್ಸೆ ಪಡೆಯಲು ಇಷ್ಟಪಡುತ್ತಾ, ಜೆಂಗ್ ಇತರ ಎರಡು ಆಸ್ಪತ್ರೆಗಳನ್ನು ಸಂದರ್ಶಿಸಿದಳು. ಅವಳಿಗೆ ನಿರಾಶೆ ಮಾಡುತ್ತಾ, ಅಲ್ಲಿನ ವೈದ್ಯರು ಸಹ ರಕ್ತವಿಲ್ಲದೆ ಶಸ್ತ್ರಕ್ರಿಯೆಯನ್ನು ನಡಸಲು ನಿರಾಕರಿಸಿದರು. ಕೊನೆಗೆ, ಥಾಯ್ಲೆಂಡ್ನಲ್ಲಿರುವ ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸಸ್ (ಎಚ್ಐಎಸ್) ಮೂಲಕ ಜೆಂಗ್ಳನ್ನು ಟೊಕ್ಯೊ ವಿಮೆನ್ಸ್ ಮೆಡಿಕಲ್ ಕಾಲೇಜಿನ ನ್ಯುರೋಲೊಜಿಕಲ್ ಇನ್ಸ್ಟಿಟ್ಯೂಟ್ನೊಂದಿಗೆ ಸಂಪರ್ಕ ಮಾಡಿಸಲಾಯಿತು. ಆ ಆಸ್ಪತ್ರೆಯು ಗಾಮಾ ನೈಫನ್ನು—ವಿಕಿರಣ ಚಿಕಿತ್ಸೆಯ ಅತೀ ನವೀನ ಬೆಳವಣಿಗೆಗಳಲ್ಲಿ ಒಂದು—ಉಪಯೋಗಿಸಿ 200ಕ್ಕಿಂತಲೂ ಹೆಚ್ಚಿನ ಮಿದುಳು ಗೆಡ್ಡೆ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿತ್ತು.
ಆಸ್ಪತ್ರೆಯ ಹತ್ತಿರ ಜೀವಿಸುತ್ತಿದ್ದ ಜಪಾನಿ ಸಾಕ್ಷಿಗಳೊಂದಿಗೆ ಜೆಂಗ್ ತಂಗಲಿಕ್ಕಾಗಿ ಏರ್ಪಾಡುಗಳನ್ನು ಮಾಡಲಾಯಿತು. ಥಯಿ ಭಾಷೆಯನ್ನು ಮಾತಾಡುವ ಇಬ್ಬರು ಯೆಹೋವನ ಸಾಕ್ಷಿಗಳು ಮತ್ತು ಒಬ್ಬ ಎಚ್ಐಎಸ್ ಪ್ರತಿನಿಧಿಯನ್ನು ಸೇರಿಸಿ, ಸಾಕ್ಷಿಗಳ ಒಂದು ಗುಂಪು ಅವಳನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಯಿತು. ಸುಮಾರು ಒಂದು ವಾರದ ಪರೀಕ್ಷೆಗಳ ಬಳಿಕ, ಅವಳು ಎಲ್ಲಿ ಗಾಮಾ ನೈಫ್ನ ಚಿಕಿತ್ಸೆಯನ್ನು ಪಡೆದಳೊ ಆ ಆಸ್ಪತ್ರೆಗೆ ಜೆಂಗ್ ಸೇರಿಸಲ್ಪಟ್ಟಳು. ಆ ಕಾರ್ಯವಿಧಾನಕ್ಕೆ ಸುಮಾರು ಒಂದು ಗಂಟೆ ಮಾತ್ರ ತಗಲಿತು. ಮರುದಿನ ಆಸ್ಪತ್ರೆಯಿಂದ ಹೊರಬಂದು, ಅದರ ಮರುದಿನ ಜೆಂಗ್ ಥಾಯ್ಲೆಂಡ್ಗೆ ವಾಪಸ್ಸು ಹೋದಳು.
“ಈ ಏರ್ಪಾಡಿನ ಮೂಲಕ ಇಷ್ಟೊಂದು ಸಹಾಯ ನೀಡಲ್ಪಡಸಾಧ್ಯವಿದೆಯೆಂದು ನಾನು ಎಂದೂ ಊಹಿಸಿರಲಿಲ್ಲ,” ಎಂದಳು ಜೆಂಗ್. “ತೋರಿಸಲ್ಪಟ್ಟಂತಹ ಪ್ರೀತಿ ಹಾಗೂ ಒಳಗೂಡಿದ್ದಂತಹ ಅನೇಕ ಸಹಭಾಗಿಗಳ ನಡುವಿನ ಸಹಕಾರದಿಂದ ನಾನು ನಿಜವಾಗಿಯೂ ಪ್ರಭಾವಿಸಲ್ಪಟ್ಟೆ.”
ಈ ವಾರ್ತಾ ವಿಷಯವನ್ನು ವರದಿಸುತ್ತಾ, ಜಪಾನಿ ವಾರ್ತಾಪತ್ರ ಮೈನೀಚಿ ಶಿಂಬೂನ್ ವ್ಯಾಖ್ಯಾನಿಸಿದ್ದು: “ಇಷ್ಟರ ವರೆಗೆ, ರಕ್ತ ಪೂರಣಗಳ ನಿರಾಕರಣೆಗಾಗಿ ಧಾರ್ಮಿಕ ಕಾರಣಗಳು ಎತ್ತಿತೋರಿಸಲ್ಪಟ್ಟಿದ್ದವು. ಆದಾಗಲೂ, ರಕ್ತ ಪೂರಣಗಳಿಗೆ, ಏಯ್ಡ್ಸ್ನಂತಹ ಅಡ್ಡ ಪರಿಣಾಮಗಳು, ಹೆಪಟೈಟಿಸ್ ಸಿ ಅಂತಹ ವೈರಲ್ ಸೋಂಕುಗಳು ಮತ್ತು ಅಲರ್ಜಿಗಳಿವೆ. ಈ ಕಾರಣದಿಂದ, ತಮ್ಮ ಧಾರ್ಮಿಕ ನಂಬಿಕೆಗಳ ಪರಿವೆಯೇ ಇಲ್ಲದೆ ರಕ್ತ ಪೂರಣಗಳನ್ನು ಬಯಸದಂತಹ ರೋಗಿಗಳಿದ್ದಾರೆ.”
ವಾರ್ತಾಪತ್ರವು ಮುಂದುವರಿಸಿ ತಿಳಿಸಿದ್ದು: “ರಕ್ತ ಪೂರಣಗಳನ್ನು ನಿರಾಕರಿಸಿದ ಅನೇಕ ರೋಗಿಗಳು ಆಸ್ಪತ್ರೆಗಳನ್ನು ಬದಲಾಯಿಸಲು ಒತ್ತಾಯಿಸಲ್ಪಟ್ಟಿದ್ದಾರೆ, ಆದರೆ ರೋಗಿಯ ಇಷ್ಟವನ್ನು ಗೌರವಿಸುವ ಕಡೆಗೆ ವೈದ್ಯಕೀಯ ಸಂಸ್ಥಾಪನೆಗಳ ವತಿಯಿಂದ ಬದಲಾವಣೆಯ ಅಗತ್ಯವಿದೆ. ತಿಳುವಳಿಕೆಯ ಸಮ್ಮತಿ (ಒಬ್ಬ ರೋಗಿಯು, ಚಿಕಿತ್ಸೆಯಲ್ಲಿ ಏನು ಒಳಗೂಡಿದೆಯೋ ಅದರ ಕುರಿತಾಗಿ ಪೂರ್ಣವಾದ ವಿವರಣೆಯನ್ನು ಪಡೆದು ಅನಂತರ ಒಪ್ಪಿಕೊಳ್ಳುವುದು) ಆವಶ್ಯಕವಾಗಿದೆ, ಮತ್ತು ರಕ್ತ ಪೂರಣಗಳ ವಿದ್ಯಮಾನಗಳು ಇದಕ್ಕೆ ಹೊರತಾಗಿಲ್ಲ. ಇದು ಕೇವಲ ಒಂದು ನಿರ್ದಿಷ್ಟ ಧರ್ಮವನ್ನು ಒಳಗೂಡಿರುವ ವಿವಾದಾಂಶವಲ್ಲವೆಂಬುದನ್ನು ಅಂಗೀಕರಿಸತಕ್ಕದ್ದು.”
ಜೆಂಗ್ ಸಾ ಜೂಳಂತೆ, ರಕ್ತವಿಲ್ಲದೆ ಚಿಕಿತ್ಸೆಯನ್ನು ಇಷ್ಟಪಡುವ ಅನೇಕರು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕಾಗುತ್ತದೆ. ಹಾಗಿದ್ದರೂ, ತಮ್ಮ ರೋಗಿಗಳ ಹಕ್ಕುಗಳನ್ನು ಗೌರವಿಸಲು ಸಿದ್ಧರಾಗಿರುವ ವೈದ್ಯರ ಪ್ರಯತ್ನಗಳನ್ನು ಅವರು ಗಣ್ಯಮಾಡುತ್ತಾರೆ.
ತಮ್ಮ ನಂಬಿಕೆಗಳನ್ನು ಗೌರವಿಸುವ ವೈದ್ಯರುಗಳ ಸಹಕಾರವನ್ನು ಹುಡುಕಲು ವಾಚ್ಟವರ್ ಸೊಸೈಟಿಯ ಬ್ರಾಂಚುಗಳಲ್ಲಿರುವ ಯೆಹೋವನ ಸಾಕ್ಷಿಗಳಿಂದ, ಹಾಸ್ಪಿಟಲ್ ಇನ್ಫರ್ಮೇಷನ್ ಸರ್ವಿಸಸ್, ಸ್ಥಾಪಿಸಲ್ಪಟ್ಟಿತು. ಲೋಕದಾದ್ಯಂತ, ಆಸ್ಪತ್ರೆಗಳು, ವೈದ್ಯರು, ಆರೋಗ್ಯಾರೈಕೆಯ ಕಾರ್ಮಿಕರು, ವಕೀಲರು, ಮತ್ತು ನ್ಯಾಯಾಧೀಶರುಗಳೊಂದಿಗೆ ಎಚ್ಐಎಸ್ ಸಹಕಾರದ ಸಂಬಂಧಗಳನ್ನು ಕಟ್ಟುತ್ತದೆ.