ಗ್ರೀಸ್ನಲ್ಲಿ ಸಾಕ್ಷಿಕೊಡುವಿಕೆಯ ಒಂದು ಯಶಸ್ವಿ ಕಾರ್ಯಾಚರಣೆ
ಯೆಹೋವನ ಸಾಕ್ಷಿಗಳು ಗ್ರೀಸ್ನಲ್ಲಿ ದೀರ್ಘ ಸಮಯದಿಂದ ವಿರೋಧವನ್ನು ಎದುರಿಸಿದ್ದಾರೆ. ಕೆಲವು ಪೊಲೀಸ್, ನ್ಯಾಯಾಲಯ, ಮತ್ತು ಸರಕಾರಿ ಅಧಿಕಾರಿಗಳು ಸಾಕ್ಷಿಗಳನ್ನು ಹಿಂಸಿಸಿದ್ದಾರೆ, ಹೆಚ್ಚಾಗಿ ಗ್ರೀಕ್ ಆರ್ತೊಡಾಕ್ಸ್ ವೈದಿಕರಿಂದ ಒತ್ತಡದ ಕಾರಣದಿಂದಾಗಿ. ಕೆಲವೊಮ್ಮೆ ಗ್ರೀಸಿನ ಮತಪರಿವರ್ತನಾ ವಿರೋಧಿ ನಿಯಮವು, ಬೇರೆ ಸಮಯಗಳಲ್ಲಿ ಯುದ್ಧಕ್ಕೆ ಹೋಗಲು ಅಥವಾ ರಕ್ತಪೂರಣಗಳನ್ನು ಸ್ವೀಕರಿಸಲು ಸಾಕ್ಷಿಗಳ ಬೈಬಲಾಧರಿತ ನಿರಾಕರಣೆಯು ನೆವನವಾಗಿರುತ್ತದೆ.—ಯೆಶಾಯ 2:2-5; ಅ. ಕೃತ್ಯಗಳು 15:28, 29.
ಗ್ರೀಸ್ನಲ್ಲಿರುವ ಪ್ರಾಮಾಣಿಕ ಹೃದಯದ ಅಧಿಕಾರಿಗಳ ನಡುವೆ ಹೆಚ್ಚಿನ ತಿಳಿವಳಿಕೆಯನ್ನು ಪ್ರವರ್ಧಿಸುವ ಒಂದು ಪ್ರಯತ್ನದಲ್ಲಿ, ಗ್ರೀಕ್ ಸರಕಾರವು ಯಾರನ್ನು ಧಾರ್ಮಿಕ ಶುಶ್ರೂಷಕರೆಂದು ಗುರುತಿಸುತ್ತದೊ, ಆ ಸುಮಾರು 200 ಸಾಕ್ಷಿಗಳು ಹಾಗೂ ನ್ಯಾಯಶಾಸ್ತ್ರದ ವೃತ್ತಿಯ ಸದಸ್ಯರಾಗಿರುವ ಕೆಲವರು, ಇತ್ತೀಚೆಗೆ ದೇಶಾದ್ಯಂತವಾದ ಒಂದು ಕಾರ್ಯಾಚರಣೆಯಲ್ಲಿ ತೊಡಗಿದರು. ಅವರು ಗ್ರೀಸ್ನಲ್ಲಿ ಯೆಹೋವನ ಸಾಕ್ಷಿಗಳು (ಇಂಗ್ಲಿಷ್) ಎಂಬ ಶಿರೋನಾಮವಿರುವ, ವಿಶೇಷವಾಗಿ ರಚಿಸಲ್ಪಟ್ಟ ಬ್ರೋಷರನ್ನು ಹಾಗೂ, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕವನ್ನೂ ನೀಡಿದರು. ಯೆಹೋವನ ಸಾಕ್ಷಿಗಳ ಹಿಂಸೆಗೆ ಯಾವುದೇ ಸಪ್ರಮಾಣದ ಕಾನೂನುಬದ್ಧ ಆಧಾರವಿಲ್ಲವೆಂಬುದನ್ನು ಪ್ರದರ್ಶಿಸುವ ದಸ್ತೈವಜುಗಳ ಒಂದು ಪ್ಯಾಕೆಟನ್ನೂ ಅವರು ಒದಗಿಸಿದರು. ಸಾಕ್ಷಿಗಳು ಪೊಲೀಸ್ ಮುಖ್ಯಾಧಿಕಾರಿಗಳು, ಪೌರ ಸಭಾಧ್ಯಕ್ಷರುಗಳು, ಸಾರ್ವಜನಿಕ ಫಿರ್ಯಾದಿಗಳು, ಮತ್ತು ಇತರ ಅಧಿಕಾರಿಗಳನ್ನು ಭೇಟಿಮಾಡಿದರು.
ಪ್ರತಿಕ್ರಿಯೆಯು ಏನಾಗಿತ್ತು? ನೂರಾರು ಒಳ್ಳೆಯ ಅನುಭವಗಳು. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಪಶ್ಚಿಮ ಮೆಸಡೋನಿಯದಲ್ಲಿನ ಪೊಲೀಸ್ ಠಾಣೆಯೊಂದರ ಕಮಾಂಡರ್, ಸಹೋದರರನ್ನು ಸ್ವಾಗತಿಸಿ ಹೇಳಿದ್ದು: “ತುಂಬ ದೀರ್ಘ ಸಮಯದಿಂದ ನನಗೆ ನಿಮ್ಮ ಪರಿಚಯವಿದೆ, . . . ಮತ್ತು ನಾನು ನಿಮ್ಮ ಶಿಸ್ತನ್ನು ಮೆಚ್ಚುತ್ತೇನೆ. . . . ಮತಪರಿವರ್ತನೆಯ ನಿಯಮವನ್ನು ನಾನು ಅಸಮ್ಮತಿಸುತ್ತೇನೆ, ಮತ್ತು ನನಗೆ ಅಧಿಕಾರವಿರುತ್ತಿದ್ದಲ್ಲಿ ನಾನು ಅದನ್ನು ತೆಗೆದುಹಾಕುತ್ತಿದ್ದೆ.”
ಹಲವಾರು ನಗರಗಳಲ್ಲಿನ ವಿವಿಧ ಪೊಲೀಸ್ ಠಾಣೆಗಳ ಕಮಾಂಡರುಗಳು ಇವುಗಳಂತಹ ಹೇಳಿಕೆಗಳನ್ನು ಕೊಟ್ಟರು: “ನೀವು ನಡಿಸುವ ಸಮಾಜ ಸೇವೆಗಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ.” “ನಿಮ್ಮ ಸಮುದಾಯವು ಪೊಲೀಸರಿಗಾಗಿ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ; ನೀವು ಒಂದು ಸಾಮಾಜಿಕ ಕೆಲಸವನ್ನು ಪೂರೈಸುತ್ತೀರಿ.” “ನಮಗೆ ನಿಮ್ಮೊಂದಿಗೆ ಯಾವುದೇ ಸಮಸ್ಯೆಯಿಲ್ಲ. ನಾವು ನಿಮ್ಮನ್ನು ಗೌರವಿಸುತ್ತೇವೆ ಮತ್ತು ಗಣ್ಯಮಾಡುತ್ತೇವೆ.”
ಯೇಸು ಕ್ರಿಸ್ತನ ಮೂಲಕ ಯೆಹೋವ ದೇವರಿಗೆ ಹೆಸರಿನಿಂದ ಪ್ರಾರ್ಥಿಸಲು ತನಗೆ ತಿಳಿದಿದೆಯೆಂದು, ಪೈರಿಯಸ್ನಲ್ಲಿನ ಭದ್ರತಾ ಪೊಲೀಸ್ ದಳದ ಒಬ್ಬ ಉಚ್ಚ ಅಧಿಕಾರಿಯು ಕಣ್ಣೀರು ತುಂಬಿದವನಾಗಿ ಸಹೋದರರಿಗೆ ಹೇಳಿದನು. ಅರ್ಮಗೆದೋನಿನ ಮುಂಚೆ ಅವರು ಸ್ವಲ್ಪ ಹಿಂಸೆಯನ್ನು ನಿರೀಕ್ಷಿಸುತ್ತಾರೆಂದೂ, ಆ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ದೇವರು ತನ್ನನ್ನು ಉಪಯೋಗಿಸುವುದನ್ನು ತಾನು ನಿರೀಕ್ಷಿಸುತ್ತೇನೆಂದೂ ಅವನು ಅವರಿಗೆ ಹೇಳಿದಾಗ, ಅವನು ಸಾಕ್ಷಿಗಳನ್ನು ಮತ್ತಷ್ಟು ಹೆಚ್ಚು ಆಶ್ಚರ್ಯಗೊಳಿಸಿದನು! ಇನ್ನೂ ಹೆಚ್ಚಿನ ಚರ್ಚೆಗಳನ್ನು ನಡೆಸಲು ಸಹೋದರರು ನೀಡಿದ ಆಮಂತ್ರಣವನ್ನು ಅವನು ಸ್ವೀಕರಿಸಿದನು.
ಸರಕಾರಿ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ
ಘೋಷಕರು ಪುಸ್ತಕದ ಕುರಿತಾಗಿ ಥೆಸಲಿಯಲ್ಲಿನ ಒಬ್ಬ ಪೌರ ಸಭಾಧ್ಯಕ್ಷನು ಹೇಳಿದ್ದು: “ಅದು ನಗರಪಾಲಿಕೆಯ ಗ್ರಂಥಾಲಯದಲ್ಲಿ ಒಂದು ಸ್ಥಾನ—ಪ್ರಥಮ ಸ್ಥಾನ—ಕ್ಕೆ ಅರ್ಹವಾಗಿದೆ!” ತದನಂತರ ಅವನು ಒಂದು ಅಂತಸ್ತು ಹಲಗೆಯಿಂದ ಪುಸ್ತಕಗಳನ್ನು ತೆಗೆದುಹಾಕಿ, ಅದರ ಮುಖಪುಟವನ್ನು ನೋಡಸಾಧ್ಯವಾಗುವಂತೆ ಘೋಷಕರು ಪುಸ್ತಕವನ್ನು ಅಲ್ಲಿಟ್ಟನು.
ಉತ್ತರ ಗ್ರೀಸ್ನಲ್ಲಿ, ಒಬ್ಬ ಪೌರ ಸಭಾಧ್ಯಕ್ಷನು ಸಹೋದರರನ್ನು ಹೃದಯೋಲ್ಲಾಸದಿಂದ ಸ್ವಾಗತಿಸಿ ಹೇಳಿದ್ದು: “ನನ್ನ ನಗರಪಾಲಿಕೆಯಲ್ಲಿ ನಾನು ಪಡೆದಿರಲು ಬಯಸುವಂತಹ ಅತ್ಯುತ್ತಮವಾದ ಜನರು ನೀವಾಗಿದ್ದೀರಿ.” ನಾರ್ತ್ ಯುಬೀಯಾದಲ್ಲಿ ಒಬ್ಬ ದಯಾಪರ ಪೌರ ಸಭಾಧ್ಯಕ್ಷನು ಸಹೋದರರಿಗೆ ಹೇಳಿದ್ದು: “ನಾನು ಒಬ್ಬ ಮಾಜಿ ಸೇನಾಧಿಕಾರಿಯಾಗಿದ್ದೇನೆ. ಆದರೆ ನಿಮ್ಮನ್ನು—ನಿಮ್ಮನ್ನು ನಾನು ತುಂಬ ಗಣ್ಯಮಾಡುತ್ತೇನೆ.” ಸಾಕ್ಷಿಗಳು ಸಾದರಪಡಿಸಿದ ಮಾಹಿತಿಯೊಂದಿಗೆ ಅವನು ಉತ್ಸಾಹದಿಂದ ಸಮ್ಮತಿಸಿದನು. ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಪುಸ್ತಕಗಳ ಒಂದು ಸಂಗ್ರಹವನ್ನು ಅವರು ತೋರಿಸಿದಾಗ, ಅವನು ಹೇಳಿದ್ದು: “ನಾನು ಅವುಗಳೆಲ್ಲವನ್ನೂ ಓದುವ ಮಾತುಕೊಟ್ಟರೆ, ಅವುಗಳನ್ನು ನೀವು ನನಗೆ ಕೊಡುವಿರೋ?” ಅವರು ಉತ್ತರಿಸಿದ್ದು: “ನಿಶ್ಚಯವಾಗಿಯೂ—ಅವು ನಿಮ್ಮದಾಗಿವೆ!” ಅವನು ಹರ್ಷಿತನಾಗಿದ್ದನು ಮತ್ತು ಸಹೋದರರು ಹೊರಟುಹೋಗುವಂತೆ ಬಯಸಲಿಲ್ಲ.
ಆಟಿಕ್ಕಾದ ಒಂದು ಉಪನಗರದಲ್ಲಿ, ಒಬ್ಬ ಪೌರ ಸಭಾಧ್ಯಕ್ಷನು ಸಹೋದರರು ನೀಡಿದ ಸಾಹಿತ್ಯವನ್ನು ಸಂತೋಷದಿಂದ ಸ್ವೀಕರಿಸಿದನು ಮತ್ತು ಸಂಸ್ಥೆಯ ಪ್ರಕಾಶನಗಳನ್ನು ಅವನಿಗಾಗಿ ತರುತ್ತಾ ಇರುವಂತೆ ಅವರನ್ನು ಕೇಳಿಕೊಂಡನು. ಅವರು ಹೊರಡುತ್ತಿದ್ದಂತೆ, ಅವನು ಅವರಿಗೆ ಹೇಳಿದ್ದು: “ಜನರು ರಾಜಕಾರಣಿಗಳಿಂದ ತುಂಬ ನಿರಾಶಿತರಾಗಿದ್ದಾರೆ ಮತ್ತು ನಿಜವಾದ ಸತ್ಯಕ್ಕಾಗಿ ಬೇರೆಲ್ಲಿಯೊ ಹುಡುಕುತ್ತಾರೆ. ಈ ಸಮಯದಂದಿನಿಂದ ನೀವು ತುಂಬ ಕಾರ್ಯಮಗ್ನರಾಗಿರುವಿರಿ ಎಂದು ನನಗೆ ನಿಶ್ಚಯವಿದೆ, ಯಾಕಂದರೆ ನಿಮ್ಮಲ್ಲಿ ಸತ್ಯವಿದೆ.”
ಸಾರ್ವಜನಿಕ ಫಿರ್ಯಾದಿಗಳು ಪ್ರತಿಕ್ರಿಯಿಸುತ್ತಾರೆ
ಉತ್ತರ ಗ್ರೀಸ್ನಲ್ಲಿ ಒಬ್ಬ ಡಿಪ್ಯೂಟಿ ಸಾರ್ವಜನಿಕ ಫಿರ್ಯಾದಿಯನ್ನು ಭೇಟಿಮಾಡಿದ ಸಹೋದರರು ಜ್ಞಾಪಿಸಿಕೊಂಡದ್ದು: “ನಮ್ಮ ಪ್ರಕಾಶನಗಳಿಂದ ಮತ್ತು ನಿರೂಪಣೆಯಿಂದ ಹಾಗೂ ರಕ್ತಪೂರಣದ ಗಂಭೀರ ವಿವಾದಾಂಶವನ್ನು ಎದುರಿಸುತ್ತಿರುವಾಗ ನಮ್ಮ ಜನರು ಅಸಹಾಯಕರಾಗಿರದೆ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವು ಮಾಡುವಂತಹ ಪ್ರಯತ್ನಗಳಿಂದ ಅವನು ಪ್ರಭಾವಿತನಾದನು. ಕೊನೆಗೆ ಅವನು ನಮಗೆ ಉಪಕಾರ ಹೇಳಿ, ಅವನನ್ನು ಭೇಟಿಯಾಗಿ ಅವನಿಗೆ ತಿಳಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಂಡದಕ್ಕಾಗಿ ನಮ್ಮನ್ನು ಹೃದಯೋಲ್ಲಾಸದಿಂದ ಪ್ರಶಂಸಿಸಿದನು. ಅನಂತರ ನಮಗೆ ತಿಳಿದುಬಂದದ್ದೇನಂದರೆ, ನಾಲ್ಕು ವರ್ಷಗಳ ಹಿಂದೆ ಅವನು ಪೊಲೀಸರನ್ನು ಕರೆದು, ಕ್ಷೇತ್ರ ಸೇವೆಯಲ್ಲಿ ತೊಡಗುತ್ತಿದ್ದ ಇಬ್ಬರು ಸಹೋದರರ ದಸ್ತಗಿರಿಯನ್ನು ಆಜ್ಞಾಪಿಸಿದ್ದನು ಎಂಬುದಾಗಿ.”
ಅಥೆನ್ಸ್ನಲ್ಲಿರುವ ಸಾರ್ವಜನಿಕ ಫಿರ್ಯಾದಿಗಳ ಆಫೀಸುಗಳನ್ನು ಭೇಟಿಮಾಡಿದ ಇಬ್ಬರು ಸಾಕ್ಷಿ ವಕೀಲರು, ಒಬ್ಬ ಪ್ರಸಿದ್ಧ ಮತ್ತು ವ್ಯಾಪಕವಾಗಿ ಗೌರವಿಸಲ್ಪಟ್ಟಿರುವ ಹಿರಿಯ ಸಾರ್ವಜನಿಕ ಫಿರ್ಯಾದಿಯು ಅವರನ್ನು ಸಮೀಪಿಸುತ್ತಿರುವುದನ್ನು ನೋಡಿ ಆಶ್ಚರ್ಯಗೊಂಡರು. ಅವನು ಅವರನ್ನು ಪಕ್ಕಕ್ಕೆ ಕರೆದೊಯ್ದು, ಮತಪರಿವರ್ತನೆಯ ವಿರುದ್ಧವಾದ ನಿಯಮಕ್ಕೆ ಯಾವುದೇ ಆಧಾರವಿಲ್ಲ ಮತ್ತು ಗ್ರೀಕ್ ನ್ಯಾಯಾಲಯದ ವ್ಯವಸ್ಥೆಯಲ್ಲಿ ಗಲಿಬಿಲಿಯನ್ನು ಉಂಟುಮಾಡುತ್ತದೆಂದು ಅವರಿಗೆ ಹೇಳಿದನು. ಒಂದು ಹೃದಯೋಲ್ಲಾಸದ ಕೈಕುಲುಕುವಿಕೆಯೊಂದಿಗೆ ಅವನು ಅವರಿಗೆ ಉಪಕಾರ ಹೇಳಿದನು.
ಗ್ರೀಸ್ನ ಉತ್ತರ ಭಾಗದಲ್ಲಿ, ಒಬ್ಬ ಸಾರ್ವಜನಿಕ ಫಿರ್ಯಾದಿಯು ತುಂಬಾ ಸ್ನೇಹಮಯಿಯಾಗಿದ್ದು, ಸಾಹಿತ್ಯವನ್ನು ಸ್ವೀಕರಿಸಿದನು. ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕದ ಪುಟಗಳನ್ನು ಅವನು ತಿರುವಿದಂತೆ, ವಿಷಯಸೂಚಿಯಲ್ಲಿರುವ ಅಧ್ಯಾಯಗಳ ವೈವಿಧ್ಯವನ್ನು ನೋಡಿ ಸ್ತಬ್ಧನಾದನು. ಅವನು ಹೇಳಿದ್ದು: “ಈ ಪುಸ್ತಕವು ಆವರಿಸುವಂತಹ ವಿಷಯಗಳನ್ನು ನಾನು ಇಡೀ ಗ್ರೀಕ್ ಆರ್ತೊಡಾಕ್ಸ್ ಚರ್ಚಿನಲ್ಲಿ ನೋಡಿಲ್ಲ.”
ಬಿಯೊಶೀಆದಲ್ಲಿ ಒಬ್ಬ ಸಾರ್ವಜನಿಕ ಫಿರ್ಯಾದಿಯು, ತಾನು ಗತ ಸಮಯದಲ್ಲಿ, ಸಾಕ್ಷಿಗಳಿಗೆ ಅವರ ಇಷ್ಟದ ವಿರುದ್ಧ ರಕ್ತಪೂರಣಗಳನ್ನು ಕೊಡುವುದಕ್ಕಾಗಿ ಆಜ್ಞೆಗಳನ್ನು ಹೊರಡಿಸುತ್ತಿದ್ದೆನೆಂದು ಒಪ್ಪಿಕೊಂಡನು. ಆದರೆ ಸಹೋದರರು ಆ ವಿಷಯದ ಕುರಿತಾಗಿ ಅವನೊಂದಿಗೆ ವಿವೇಚಿಸಿದ ನಂತರ, ಅವನು ಪ್ರಕಟಿಸಿದ್ದು: “ಭವಿಷ್ಯತ್ತಿನಲ್ಲಿ ನಾನು ಎಂದೂ ಅಂತಹ ಒಂದು ಆಜ್ಞೆಯನ್ನು ಹೊರಡಿಸೆನು!” ರಕ್ತಕ್ಕಾಗಿರುವ ಎಲ್ಲಾ ಬದಲಿಗಳನ್ನು ಪರಿಶೋಧಿಸಲಾಗುವಂತೆ, ಯೆಹೋವನ ಸಾಕ್ಷಿಗಳ ಸ್ಥಳಿಕ ಹಾಸ್ಪಿಟಲ್ ಲೈಏಸನ್ ಕಮಿಟಿಯನ್ನು ವಿಚಾರಿಸಲಾಗುವುದೆಂದು ಅವನು ನಿರ್ಣಯಿಸಿದನು. ಅವನು ಯುವ ಜನರು ಕೇಳುವ ಪ್ರಶ್ನೆಗಳು ಎಂಬ ಪುಸ್ತಕವನ್ನು ಸಂತೋಷದಿಂದ ಸ್ವೀಕರಿಸಿದನು.
ಗ್ರಂಥಾಲಯ ಅಧಿಕಾರಿಗಳು ಪ್ರತಿಕ್ರಿಯಿಸುತ್ತಾರೆ
ವಸ್ತುವಿಷಯವು ಅನೇಕ ಗ್ರಂಥಾಲಯ ಅಧಿಕಾರಿಗಳಿಗೂ ನೀಡಲ್ಪಟ್ಟಿತು. ಅಥೆನ್ಸ್ನ ಒಂದು ಗ್ರಂಥಾಲಯದಲ್ಲಿ, ಒಬ್ಬ ವಿನಯಶೀಲ ಗ್ರಂಥಾಲಯ ಅಧಿಕಾರಿಯು, ಸಾಹಿತ್ಯವನ್ನು ಸ್ವೀಕರಿಸಿ ಹೇಳಿಕೆಯನ್ನಿತ್ತದ್ದು: “ನೀವು ನಮಗೆ ನಿಮ್ಮ ಪುಸ್ತಕಗಳನ್ನು ತಂದದ್ದು ತುಂಬ ಒಳ್ಳೆಯದು, ಯಾಕಂದರೆ ನಮ್ಮ ಗ್ರಂಥಾಲಯದಲ್ಲಿರುವ ಪುಸ್ತಕಗಳಲ್ಲಿ ಹೆಚ್ಚಿನವು ನಿಮ್ಮ ವಿರುದ್ಧವಾಗಿವೆ. . . . ಗ್ರಂಥಾಲಯದಲ್ಲಿ ನಿಮ್ಮ ಪುಸ್ತಕಗಳನ್ನು ನೋಡಿ ಒಬ್ಬ ಪಾದ್ರಿಯು ತುಂಬಾ ಕ್ಷೋಭೆಗೊಂಡನು. . . . ಪರವಾಗಿಲ್ಲ. ಎಲ್ಲರ ಅಭಿಪ್ರಾಯಗಳು ಕೇಳಲ್ಪಡಬೇಕು.”
ಒಂದು ಮಿಲಿಟರಿ ಶಿಬಿರದಲ್ಲಿ ಯೆಹೋವನ ಸಾಕ್ಷಿಗಳ ಪರಿಚಯವಾಗಿದ್ದ, ಕ್ರೀಟ್ನಲ್ಲಿರುವ ಒಂದು ನಗರಪಾಲಿಕಾ ಗ್ರಂಥಾಲಯದಲ್ಲಿನ ಒಬ್ಬ ಅಧಿಕಾರಿಯು, ಯುದ್ಧದಲ್ಲಿ ಭಾಗವಹಿಸಲು ಸಾಕ್ಷಿಗಳ ನಿರಾಕರಣೆಯಿಂದ ಪ್ರಭಾವಿತನಾಗಿದ್ದನೆಂದು ಸಹೋದರರಿಗೆ ಹೇಳಿದನು. ಅವನು ತನ್ನನ್ನೇ ಕೇಳಿಕೊಳ್ಳುತ್ತಿದ್ದದ್ದು, ‘ಈ ಜನರು ಯಾಕೆ ಕಷ್ಟಾನುಭವಿಸಬೇಕು?’ ಅವನು ಸಹೋದರರಿಂದ ಸಾಹಿತ್ಯವನ್ನು ಸ್ವೀಕರಿಸಿ, ಅವರ ಸದ್ಯದ ಕಾರ್ಯಾಚಾರಣೆಯ ಕುರಿತಾಗಿ ಹೇಳಿದ್ದು: “ನೀವು ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದೀರಿ ಮತ್ತು ಇದನ್ನು ವರ್ಷಗಳ ಹಿಂದೆಯೇ ಮಾಡಬೇಕಿತ್ತು. . . . ಗ್ರೀಸ್ನಲ್ಲಿ ತುಂಬಾ ಪೂರ್ವಾಗ್ರಹವಿದೆ.” ತನ್ನನ್ನು ಪುನಃ ಬೇಗನೆ ಸಂದರ್ಶಿಸುವಂತೆ ಅವನು ಸಹೋದರರನ್ನು ಕೇಳಿಕೊಂಡನು.
ಈ ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ, ಸಹೋದರರು 1,000ಕ್ಕಿಂತಲೂ ಹೆಚ್ಚಿನ ಘೋಷಕರು ಎಂಬ ಪುಸ್ತಕಗಳು, 1,600 ಗ್ರೀಸ್ನಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬ್ರೋಷರ್ಗಳು ಹಾಗೂ ನೂರಾರು ಪುಸ್ತಕಗಳು ಮತ್ತು ಪತ್ರಿಕೆಗಳನ್ನು ನೀಡಿದರು. ಇನ್ನೂ ಹೆಚ್ಚು ಉತ್ತಮವಾಗಿ, ಅವರು ನೂರಾರು ಗ್ರೀಕ್ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗಿ ಮಾತಾಡಿದರು. ಈಗ ಗ್ರೀಸ್ನಲ್ಲಿರುವ ಪ್ರಾಮಾಣಿಕ ಹೃದಯದ ಅಧಿಕಾರಿಗಳು ಯೆಹೋವನ ಸಾಕ್ಷಿಗಳ ಕುರಿತಾಗಿ ಹೆಚ್ಚು ನಿಷ್ಪಕ್ಷಪಾತದ ದೃಷ್ಟಿಕೋನವನ್ನು ತೆಗೆದುಕೊಳ್ಳುವರೆಂದು, ಗ್ರೀಸ್ನಲ್ಲಿರುವ ಮತ್ತು ಲೋಕದ ಸುತ್ತಲೂ ಇರುವ ಯೆಹೋವನ ನಂಬಿಗಸ್ತ ಸೇವಕರ ನಿರೀಕ್ಷೆಯಾಗಿದೆ.