ಸುವಾರ್ತೆಯು ಮುಂದಿದೆ!
ವೈಯಕ್ತಿಕ ತೆರದ ದುರ್ವಾರ್ತೆಯನ್ನು ನಾವು ಪಡೆದಾಗಲೆಲ್ಲ, ನಮ್ಮಲ್ಲಿ ಎಲ್ಲರೂ ದುಃಖಿತರಾಗುತ್ತೇವೆ. ಇನ್ನೊಂದು ಕಡೆಯಲ್ಲಿ, ಸುವಾರ್ತೆಯು—ನಮಗಾಗಿ ಅಥವಾ ನಮ್ಮ ಪ್ರಿಯರಿಗಾಗಿ ಆನಂದದ ಸುದ್ದಿಯು—ಬರುವಾಗ, ನಾವು ಹರ್ಷಿಸುತ್ತೇವೆ. ಆದರೆ ದುರ್ವಾರ್ತೆಯು ನಮ್ಮನ್ನಲ್ಲ, ಇತರರನ್ನು ಬಾಧಿಸುವಾಗ, ಅನೇಕ ವೇಳೆ ಕುತೂಹಲದ ಅಂಶವು ಅಲ್ಲಿರುತ್ತದೆ; ಕೆಲವರು ಇತರರ ದುರದೃಷ್ಟದ ಕುರಿತು ಅರಿಯುವುದರಲ್ಲಿಯೂ ಆನಂದಿಸುತ್ತಾರೆ. ಇದು ದುರ್ವಾರ್ತೆಯು ಅಷ್ಟು ಚೆನ್ನಾಗಿ ಏಕೆ ಮಾರಾಟವಾಗುತ್ತದೆಂಬುದನ್ನು ಭಾಗಶಃ ವಿವರಿಸಬಹುದು!
IIನೆಯ ಜಾಗತಿಕ ಯುದ್ಧದ ಆದಿ ಭಾಗದಲ್ಲಿ, ಕೆಲವು ಜನರಿಗಿರುವ ಆಪತ್ತಿನ ಕಡೆಗಿನ ವಿಕಾರಾಸಕ್ತಿಯ ಸುಸ್ಪಷ್ಟ ಉದಾಹರಣೆಯೊಂದಿತ್ತು. 1939ರಲ್ಲಿ, ಗ್ರಾಫ್ ಷ್ಪೇ ಎಂಬ 10,000 ಟನ್ ತೂಕದ ಸಣ್ಣ ಯುದ್ಧನೌಕೆಯು, ಜರ್ಮನ್ ನೌಕಾ ಬಲದ ಪ್ರತಿಷ್ಠೆಯಾಗಿತ್ತು. ಅನೇಕ ವಾರಗಳ ವರೆಗೆ ಈ ಯುದ್ಧನೌಕೆಯು, ದಕ್ಷಿಣ ಅಟ್ಲಾಂಟಿಕ್ ಮತ್ತು ಹಿಂದೂ ಮಹಾಸಾಗರಗಳಲ್ಲಿದ್ದ ಮಿತ್ರರಾಜ್ಯಗಳ ವ್ಯಾಪಾರಿ ಹಡಗುಗಳೊಳಗೆ ಹಾವಳಿಯನ್ನುಂಟುಮಾಡುತ್ತಾ ಇತ್ತು. ಅಂತಿಮವಾಗಿ ಮೂರು ಬ್ರಿಟಿಷ್ ಕಾವಲು ಹಡಗುಗಳು, ಗ್ರಾಫ್ ಷ್ಪೇ ನೌಕೆಯನ್ನು ಬೆನ್ನುಹತ್ತಿ, ಆಕ್ರಮಿಸಿ, ಜೀವನಷ್ಟಗೈದವು ಮತ್ತು ದುರಸ್ತಿಗಾಗಿ ಯುರುಗ್ವೇ ಬಂದರಾದ ಮಾನ್ಟೇವೆಡೆಯೊದಲ್ಲಿ ಹಡಗು ಕುಂಟುತ್ತಾ ಸೇರುವಂತೆ ನಿರ್ಬಂಧಿಸಿದವು. ಆ ಯುದ್ಧನೌಕೆಯು ಕೂಡಲೆ ಸಮುದ್ರಕ್ಕೆ ಹಿಂದಿರುಗುವಂತೆ ಯುರುಗ್ವೇ ಸರಕಾರವು ಆಜ್ಞೆ ನೀಡಿತು, ಇಲ್ಲದಿದ್ದರೆ ಅದು ನಿರ್ಬಂಧಗೊಳಿಸಲ್ಪಡಲಿತ್ತು. ಆದುದರಿಂದ ಉಗ್ರವಾದ, ಆದರೆ ಒಕ್ಕಡೆಯ ಯುದ್ಧವು ಸನ್ನಿಹಿತವಾಗಿರುವಂತೆ ತೋರಿತು.
ಇದರ ಕುರಿತು ಕೇಳುತ್ತಾ, ಅಮೆರಿಕದ ಧನಿಕ ವ್ಯಾಪಾರಿಗಳ ಒಂದು ಗುಂಪು, ಆ ರಕ್ತಮಯ ಯುದ್ಧವನ್ನು ನೋಡಲು, ಯುರುಗ್ವೇಗೆ ವಿಮಾನಯಾತ್ರೆ ಮಾಡಲಿಕ್ಕಾಗಿ, ಪ್ರತಿಯೊಬ್ಬನಿಗೆ ಸುಮಾರು 2,500 ಡಾಲರುಗಳ ವೆಚ್ಚದಲ್ಲಿ ಒಂದು ವಿಮಾನವನ್ನು ಬಾಡಿಗೆಗೆ ಗೊತ್ತುಮಾಡಿಕೊಂಡಿತು. ಅವರ ಆಶಾಭಂಗಕ್ಕೆ, ಆ ಯುದ್ಧವು ಎಂದೂ ಸಂಭವಿಸಲಿಲ್ಲ. ಗ್ರಾಫ್ ಷ್ಪೇ ನೌಕೆಯಲ್ಲಿ ಕಂಡಿ ಕೊರೆದು ಮುಳುಗಿಸುವ ಆಜ್ಞೆಯನ್ನು ಆ್ಯಡಾಲ್ಫ್ ಹಿಟ್ಲರ್ ಕೊಟ್ಟನು. ಒಂದು ಉಗ್ರವಾದ ಸಮುದ್ರ ಯುದ್ಧದ ದೃಶ್ಯವನ್ನು ನೋಡಲು ಅಪೇಕ್ಷಿಸುತ್ತಾ, ಮಾನ್ಟೇವೆಡೆಯೊ ಬಂದರಿನಲ್ಲಿ ನೆರೆದು ಬಂದಿದ್ದ ಸಾವಿರಾರು ಪ್ರೇಕ್ಷಕರು, ಪ್ರತಿಯಾಗಿ ತನ್ನ ಸ್ವಂತ ನಾವಿಕ ತಂಡದ ಮೂಲಕ ಕಂಡಿ ಕೊರೆದು, ಗ್ರಾಫ್ ಷ್ಪೇ ನೌಕೆಯನ್ನು ಮುಳುಗಿಸಿದ ಕಿವುಡುಗೊಳಿಸುವ ಸ್ಫೋಟನೆಯ ಶಬ್ದವನ್ನು ನೋಡಿದರು ಮತ್ತು ಕೇಳಿದರು. ಯುದ್ಧನೌಕಾಧಿಪತಿಯು ತನ್ನ ತಲೆಗೆ ಬಂದೂಕಿನ ಹೊಡೆತದೊಂದಿಗೆ ಆತ್ಮಹತ್ಯೆ ಮಾಡಿಕೊಂಡನು.
ಕೆಲವು ಜನರಲ್ಲಿರುವ ಕೊಂಚ ಮಟ್ಟಿಗಿನ ಭೀಭತ್ಸ ಎಳೆಯ ಹೊರತೂ, ದುರ್ವಾರ್ತೆಗಿಂತ ತಾವು ಸುವಾರ್ತೆಯನ್ನು ಇಷ್ಟಪಡುತ್ತೇವೆಂದು ಹೆಚ್ಚಿನ ಜನರು ಒಪ್ಪಿಕೊಳ್ಳುವರು. ನಿಮಗೆ ಆ ರೀತಿ ಅನಿಸುವುದಿಲ್ಲವೊ? ಹಾಗಾದರೆ, ಇತಿಹಾಸವು ಇಷ್ಟೊಂದು ದುರ್ವಾರ್ತೆಯನ್ನು ಮತ್ತು ತುಂಬ ಕಡಮೆ ಸುವಾರ್ತೆಯನ್ನು ಏಕೆ ದಾಖಲಿಸುತ್ತದೆ? ಸನ್ನಿವೇಶವನ್ನು ಎಂದಾದರೂ ವಿಪರ್ಯಸ್ತಗೊಳಿಸಸಾಧ್ಯವಿದೆಯೊ?
ಸಕಲ ದುರ್ವಾರ್ತೆಯ ಕಾರಣಗಳು
ಸುವಾರ್ತೆಯು ಮಾತ್ರ ಇದ್ದಂತಹ ಸಮಯದ ಕುರಿತು ಬೈಬಲು ಹೇಳುತ್ತದೆ. ದುರ್ವಾರ್ತೆಯು ತಿಳಿಯದ, ಕೇಳಿ ಅರಿಯದ ವಿಷಯವಾಗಿತ್ತು. ಯೆಹೋವ ದೇವರು ತನ್ನ ಸೃಷ್ಟಿಶೀಲ ಕಾರ್ಯಗಳನ್ನು ಮುಗಿಸಿದಾಗ, ಭೂಗ್ರಹವು ಮನುಷ್ಯ ಮತ್ತು ಪ್ರಾಣಿಗಾಗಿ ಅನುಭೋಗಿಸಲು ಸಿದ್ಧವಾಗಿತ್ತು. ಆದಿಕಾಂಡದ ವೃತ್ತಾಂತವು ನಮಗೆ ಹೇಳುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:31.
ದುರ್ವಾರ್ತೆಯ ಇಲ್ಲದಿರುವಿಕೆಯು, ಮನುಷ್ಯನ ಸೃಷ್ಟಿಯ ನಂತರ ಬಹಳ ದೀರ್ಘ ಸಮಯದ ವರೆಗೆ ಉಳಿಯಲಿಲ್ಲ. ಆದಾಮ ಮತ್ತು ಹವ್ವರಿಗೆ ಯಾವುದೇ ಸಂತಾನವು ಹುಟ್ಟುವ ಮೊದಲು, ದೇವರ ಮತ್ತು ಒಳ್ಳೆಯದರ ಕುರಿತಾದ ಆತನ ಕ್ರಮಬದ್ಧವಾದ ವಿಶ್ವ ಏರ್ಪಾಡಿನ ವಿರುದ್ಧವಾದ ದಂಗೆಯ ದುರ್ವಾರ್ತೆಯು ವರದಿಸಲ್ಪಟ್ಟಿತು. ಉಚ್ಚ ದರ್ಜೆಯ ಒಬ್ಬ ಆತ್ಮ ಪುತ್ರನು, ನಂಬಿ ಕೊಟ್ಟ ಅವನ ಸ್ಥಾನಕ್ಕೆ ವಿಶ್ವಾಸಘಾತುಕನಾದನು ಮತ್ತು ತನ್ನ ದಂಗೆಕೋರ, ವಿಶ್ವಾಸಘಾತುಕ ಮಾರ್ಗದಲ್ಲಿ ತನ್ನನ್ನು ಸೇರುವಂತೆ ಪ್ರಥಮ ಮಾನವ ಜೋಡಿಯನ್ನು ಪ್ರೇರಿಸುವುದರಲ್ಲಿ ಸಫಲನಾದನು.—ಆದಿಕಾಂಡ 3:1-6.
ಮಾನವಕುಲದಿಂದ ಸಾಕ್ಷ್ಯವಾಗಿರುವ ದುರ್ವಾರ್ತೆಯ ಸಮೃದ್ಧಿಯು, ಆ ಸಮಯದಲ್ಲಿ ತನ್ನ ಆರಂಭವನ್ನು ಕಂಡುಕೊಂಡಿತ್ತು. ಅಂದಿನಿಂದ ಲೋಕವನ್ನು ತುಂಬಿರುವ ದುರ್ವಾರ್ತೆಯಲ್ಲಿ, ಒಳಸಂಚು, ಮೋಸ, ಸುಳ್ಳು, ಅಸತ್ಯಗಳು ಮತ್ತು ಅರೆಸತ್ಯಗಳು ಬಹು ಪ್ರಾಮುಖ್ಯವಾಗಿ ಪ್ರದರ್ಶಿಸಲ್ಪಟ್ಟಿರುವುದು ಆಶ್ಚರ್ಯಕರವಲ್ಲ. “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ; ಅವನಲ್ಲಿ ಸತ್ಯವು ಇಲ್ಲವೇ ಇಲ್ಲ. ಅವನು ಸುಳ್ಳಾಡುವಾಗ ಸ್ವಭಾವಾನುಸಾರವಾಗಿ ಆಡುತ್ತಾನೆ; ಅವನು ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ ಆಗಿದ್ದಾನೆ,” ಎಂದು ಯೇಸು ಕ್ರಿಸ್ತನು ತನ್ನ ದಿನದ ಧಾರ್ಮಿಕ ಮುಖಂಡರಿಗೆ ಹೇಳುತ್ತಾ, ದುರ್ವಾರ್ತೆಯ ಮೂಲಪ್ರವರ್ತಕನೋಪಾದಿ ಪಿಶಾಚನಾದ ಸೈತಾನನ ಮೇಲೆ ನ್ಯಾಯವಾಗಿ ಆರೋಪಹೊರಿಸಿದನು.—ಯೋಹಾನ 8:44.
ಮಾನವ ಜನಸಂಖ್ಯೆಯು ಸಂಖ್ಯೆಯಲ್ಲಿ ಹೆಚ್ಚಾದಂತೆ, ದುರ್ವಾರ್ತೆಯು ಅದರೊಂದಿಗೆ ಹೆಚ್ಚಾಯಿತು. ಆನಂದ ಮತ್ತು ಸಂತೋಷದ ಸಮಯಗಳೇ ಇರಲಿಲ್ಲವೆಂಬುದನ್ನು ಇದು ನಿಶ್ಚಯವಾಗಿಯೂ ಅರ್ಥೈಸುವುದಿಲ್ಲ, ಏಕೆಂದರೆ ಜೀವನದಲ್ಲಿ ಆನಂದದ ಕಾರಣಗಳಾಗಿದ್ದ ಅನೇಕ ವಿಷಯಗಳಿದ್ದವು. ಆದರೂ, ತೊಂದರೆ ಮತ್ತು ದುಃಖದ ಮೋಡಗಳು ಮಾನವಜಾತಿಯ ಪ್ರತಿಯೊಂದು ಸಂತತಿಯ ಉದ್ದಕ್ಕೂ, ಈಗಿನ ತನಕ ಸುವ್ಯಕ್ತವಾಗಿವೆ.
ಈ ದುಃಖಕರ ಸನ್ನಿವೇಶಕ್ಕೆ ಮತ್ತೊಂದು ಮೂಲಭೂತ ಕಾರಣವಿದೆ. ಅದು ತಪ್ಪುಮಾಡುವಿಕೆ ಮತ್ತು ಆಪತ್ತಿನ ಕಡೆಗಿನ ನಮ್ಮ ಪಿತ್ರಾರ್ಜಿತವಾಗಿ ಪಡೆದ ಒಲವಾಗಿದೆ. “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು,” ಎಂದು ಹೇಳುವ ಮೂಲಕ, ದುರ್ವಾರ್ತೆಗಾಗಿರುವ ಈ ಅನಿವಾರ್ಯ ಕಾರಣವನ್ನು ಸ್ವತಃ ಯೆಹೋವನೇ ಗುರುತಿಸುತ್ತಾನೆ.—ಆದಿಕಾಂಡ 8:21.
ದುರ್ವಾರ್ತೆಯ ಹೆಚ್ಚಿಕೆ ಏಕೆ?
ಹಾಗಿದ್ದರೂ, ಈ 20ನೆಯ ಶತಮಾನದಲ್ಲಿ ದುರ್ವಾರ್ತೆಯು ಏಕೆ ಹೆಚ್ಚಾಗಿದೆ ಎಂಬುದಕ್ಕೆ ಕಾರಣವೊಂದಿದೆ. ಈ ಕಾರಣವು ಬೈಬಲಿನಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. 20ನೆಯ ಶತಮಾನದಲ್ಲಿನ ಮಾನವಜಾತಿಯು, “ಕಡೇ ದಿವಸ”ಗಳು ಅಥವಾ “ಅಂತ್ಯ ಕಾಲ”ವೆಂದು ವಿಧಿತವಾಗಿರುವ ಅಪೂರ್ವವಾದ ಒಂದು ಸಮಯಾವಧಿಯನ್ನು ಪ್ರವೇಶಿಸುವುದೆಂಬುದನ್ನು ಅದು ಮುಂತಿಳಿಸಿತು. (2 ತಿಮೊಥೆಯ 3:1; ದಾನಿಯೇಲ 12:4) ಬೈಬಲ್ ಪ್ರವಾದನೆ ಮತ್ತು ಬೈಬಲ್ ಸಂಬಂಧಿತ ಕಾಲಗಣನಶಾಸ್ತ್ರವು, ಈ “ಅಂತ್ಯ ಕಾಲ”ವನ್ನು 1914ರಲ್ಲಿ ಆರಂಭವಾಗುವುದಾಗಿ ಗುರುತಿಸುತ್ತವೆ. ಇದರ ವಿಸ್ತೃತವಾದ ಶಾಸ್ತ್ರೀಯ ಪುರಾವೆಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಇವರಿಂದ ಪ್ರಕಾಶಿತವಾದ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 11ನೆಯ ಅಧ್ಯಾಯವನ್ನು ದಯವಿಟ್ಟು ನೋಡಿರಿ.
ಭೂಮಿಯ ಮೇಲೆ ದುರ್ವಾರ್ತೆಯು ಸ್ವಯಂಚಾಲಿತವಾಗಿ ಹೆಚ್ಚಾಗುವಂತೆ ಮಾಡುವ ಒಂದು ಘಟನೆಯೊಂದಿಗೆ ಕಡೇ ದಿವಸಗಳು ಆರಂಭವಾಗಲಿದ್ದವು. ಅದು ಏನಾಗಿತ್ತು? ಅದು ಸ್ವರ್ಗದಿಂದ ಪಿಶಾಚನಾದ ಸೈತಾನನ ಮತ್ತು ಅವನ ದೆವ್ವ ಸಮೂಹದವರ ದೊಬ್ಬುವಿಕೆಯಾಗಿತ್ತು. ದುರ್ವಾರ್ತೆಯ ಈ ಅನಿವಾರ್ಯ ವೃದ್ಧಿಯ ಸುಸ್ಪಷ್ಟ ವರ್ಣನೆಯನ್ನು ನೀವು ಪ್ರಕಟನೆ 12:9, 12ರಲ್ಲಿ ಓದಬಹುದು: “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. . . . ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.”
ಹೀಗೆ, ಕಡೇ ದಿವಸಗಳು ತಮ್ಮ ಸಮಾಪ್ತಿಗೆ ಬರುವ ವರೆಗೆ, ಇನ್ನೆಷ್ಟು ಸಮಯವು ಇನ್ನೂ ಉಳಿದಿರುತ್ತದೊ, ಅದರಲ್ಲಿ ದುರ್ವಾರ್ತೆಯು ಮುಂದುವರಿಯುವಂತೆ ಮತ್ತು ತನ್ನ ಪ್ರಮಾಣ ಹಾಗೂ ತೀವ್ರತೆಯಲ್ಲಿ ವೃದ್ಧಿಯಾಗುವಂತೆ ಸಹ ನಾವು ಅಪೇಕ್ಷಿಸಸಾಧ್ಯವಿದೆ.
ಅದು ಸದಾ ಹಾಗಿರದು
ಸಂತೋಷಕರವಾಗಿ ಭೂಮಿಯ ನಿವಾಸಿಗಳಿಗೆ, ಇಂದಿನ ದುರ್ವಾರ್ತೆಯ ಸಾಂಕ್ರಾಮಿಕವನ್ನು ಉತ್ಪಾದಿಸುತ್ತಿರುವ ವಿಷಯಗಳ ಈ ಶೋಚನೀಯ ಸ್ಥಿತಿಯು ಸದಾ ಅಸ್ತಿತ್ವದಲ್ಲಿರದು. ವಾಸ್ತವದಲ್ಲಿ, ನಿರಂತರವಾದ ದುರ್ವಾರ್ತೆಯ ದಿನಗಳು ಮುಗಿಯುತ್ತಾ ಬರುತ್ತಿವೆ ಎಂಬುದಾಗಿ ನಾವು ಭರವಸೆಯಿಂದ ಹೇಳಸಾಧ್ಯವಿದೆ. ವಿಷಯವು ನಿರೀಕ್ಷಾಹೀನವಾಗಿ ತೋರಬಹುದಾದರೂ, ಸನ್ನಿವೇಶವು ಹಾಗಿರುವುದಿಲ್ಲ. ಎಲ್ಲ ದುರ್ವಾರ್ತೆಯ ಅಂತ್ಯವು ಸಮೀಪವಾಗಿದೆ ಮತ್ತು ದೇವರ ಕ್ಲುಪ್ತ ಸಮಯದಲ್ಲಿ ತಪ್ಪದೆ ಬರುವುದು.
ಇದರ ಕುರಿತು ನಾವು ಖಚಿತವಾಗಿರಸಾಧ್ಯವಿದೆ ಏಕೆಂದರೆ, ಕಡೇ ದಿವಸಗಳು ದೇವರ ನಾಶನ ಮತ್ತು ದುರ್ವಾರ್ತೆಯ ಸಕಲ ಕಾರಣಗಳ ತೆಗೆದುಹಾಕುವಿಕೆಯೊಂದಿಗೆ ಪರಮಾವಧಿಗೇರುವಂತೆ ಅಥವಾ ಸಮಾಪ್ತಿಗೊಳ್ಳುವಂತೆ ಪ್ರವಾದಿಸಲ್ಪಟ್ಟಿವೆ. ತಮ್ಮ ತಪ್ಪಾದ ಮಾರ್ಗದಿಂದ ಬದಲಾಗಲು ಮತ್ತು ತಿರುಗಿಕೊಳ್ಳಲು ನಿರಾಕರಿಸುವ, ಕಲಹದ ದುಷ್ಟ ಮಾನವ ಉತ್ತೇಜಕರನ್ನು ಆತನು ತೆಗೆದುಹಾಕುವನು. ಇದು, ಅರ್ಮಗೆದೋನ್ ಯುದ್ಧವೆಂದು ಸಾಮಾನ್ಯವಾಗಿ ವಿಧಿತವಾದ ಸರ್ವಶಕ್ತ ದೇವರ ಮಹಾ ದಿನದ ಯುದ್ಧದಲ್ಲಿ ಪರಮಾವಧಿಗೇರುತ್ತದೆ. (ಪ್ರಕಟನೆ 16:16) ಅದಾದ ಕೂಡಲೇ, ಪಿಶಾಚನಾದ ಸೈತಾನನು ಮತ್ತು ಅವನ ದುರಾತ್ಮ ಸೇನೆಯು ನಿಷ್ಕ್ರಿಯೆಗೊಳಿಸಲ್ಪಡುವುದು. ಸಕಲ ದುರ್ವಾರ್ತೆಯ ಮೂಲಪ್ರವರ್ತಕನಾದ ಸೈತಾನನ ಬಂಧಿಸುವಿಕೆಯನ್ನು ಪ್ರಕಟನೆ 20:1-3 ವರ್ಣಿಸುತ್ತದೆ: “ಆಗ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಪರಲೋಕದಿಂದ ಇಳಿದು ಬರುವದನ್ನು ಕಂಡೆನು. ಅವನು ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನನ್ನು ಹಿಡಿದು ಸಾವಿರ ವರುಷ ಬಂಧನದಲ್ಲಿಟ್ಟನು. ಆ ಸಾವಿರ ವರುಷ ತೀರುವ ತನಕ ಸೈತಾನನು ಇನ್ನೂ ಜನಗಳನ್ನು ಮರುಳುಗೊಳಿಸಿದ ಹಾಗೆ ದೇವದೂತನು ಅವನನ್ನು ಅಧೋಲೋಕದಲ್ಲಿ ದೊಬ್ಬಿ ಬಾಗಿಲು ಮುಚ್ಚಿ ಅದಕ್ಕೆ ಮುದ್ರೆಹಾಕಿದನು.”
ಈ ನಾಟಕೀಯ ಘಟನೆಗಳನ್ನು ಅನುಸರಿಸಿ, ಭೂಮಿ ಮತ್ತು ಅದರ ನಿವಾಸಿಗಳಿಗಾಗಿ ಸುವಾರ್ತೆಯ ಒಂದು ಅಭೂತಪೂರ್ವ ಸಮಯವು ಬರುವುದು. ಈ ನಿವಾಸಿಗಳಲ್ಲಿ, ಅರ್ಮಗೆದೋನಿನ ಅಂತಿಮ ಯುದ್ಧವನ್ನು ಪಾರಾಗಿರುವ ಲಕ್ಷಾಂತರ ಜನರು ಮತ್ತು ಸಮಾಧಿಗಳಲ್ಲಿ ಮರಣದ ತಮ್ಮ ನಿದ್ರೆಯಿಂದ ಪುನರುತ್ಥಾನಗೊಳಿಸಲ್ಪಡುವ ಕೋಟ್ಯಂತರ ಜನರು ಸೇರಿರುವರು. ಎಲ್ಲ ಸುವಾರ್ತೆಗಿಂತ ಉತ್ತಮವಾದ ಈ ಸುವಾರ್ತೆಯು ಬೈಬಲಿನ ಕೊನೆಯ ಪುಸ್ತಕದಲ್ಲಿ ವರ್ಣಿಸಲ್ಪಟ್ಟಿದೆ: “ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:3, 4.
ಆ ಸಂತೋಷಕರವಾದ ಸಮಯವನ್ನು ನೀವು ಕಲ್ಪಿಸಿಕೊಳ್ಳಸಾಧ್ಯವೊ? ನಿಶ್ಚಯವಾಗಿಯೂ ದುರ್ವಾರ್ತೆಯು ಇನ್ನು ಮುಂದೆ ಅಸ್ತಿತ್ವದಲ್ಲಿರದ ಒಂದು ಮಹಿಮಾಭರಿತ ಭವಿಷ್ಯತ್ತು. ಹೌದು, ಸಕಲ ದುರ್ವಾರ್ತೆಯು ಕೊನೆಗೊಂಡಿರುವುದು ಮತ್ತು ಪುನಃ ಕೇಳಿಸಲ್ಪಡದು. ಸುವಾರ್ತೆಯು ಆಗ ಪರಮಪ್ರಧಾನವಾಗಿರುವುದು, ಮತ್ತು ಅದು ಎಲ್ಲ ನಿತ್ಯತೆಯ ವರೆಗೂ ತುಂಬಿತುಳುಕುವುದು.