ವಾಚಕರಿಂದ ಪ್ರಶ್ನೆಗಳು
ಇಂದು ಭೂನಿರೀಕ್ಷೆಯಿರುವ ದೇವರ ಸೇವಕರು, ಆತ್ಮಾಭಿಷಿಕ್ತ ಕ್ರೈಸ್ತರಷ್ಟೇ ಹೆಚ್ಚು ದೇವರಾತ್ಮವನ್ನು ಹೊಂದಿದ್ದಾರೆಂದು ನಾವು ಹೇಳಸಾಧ್ಯವಿದೆಯೊ?
ಈ ಪ್ರಶ್ನೆಯು ಒಂದು ಹೊಸ ಪ್ರಶ್ನೆಯಾಗಿಲ್ಲ. ಎಪ್ರಿಲ್ 15, 1952ರ ದ ವಾಚ್‌ಟವರ್ ಪತ್ರಿಕೆಯಲ್ಲಿನ “ವಾಚಕರಿಂದ ಪ್ರಶ್ನೆಗಳು” ಲೇಖನದಲ್ಲಿ, ಇದೇ ವಿಷಯವು ಸಂಬೋಧಿಸಲ್ಪಟ್ಟಿತ್ತು. ಅಂದಿನಿಂದ ಅನೇಕರು ಯೆಹೋವನ ಸಾಕ್ಷಿಗಳಾಗಿ ಪರಿಣಮಿಸಿದ್ದಾರೆ, ಆದುದರಿಂದ ನಾವು ಈ ಪ್ರಶ್ನೆಯನ್ನು ಪುನಃ ಪರಿಗಣಿಸಸಾಧ್ಯವಿದೆ ಮತ್ತು ಅದನ್ನು ಪರಿಗಣಿಸುವ ಮೂಲಕ, ಆ ಆರಂಭದ ವಸ್ತುವಿಷಯವು ಏನು ಹೇಳಿತೆಂಬುದನ್ನು ಪುನರ್ವಿಮರ್ಶಿಸಸಾಧ್ಯವಿದೆ.
ಮೂಲಭೂತವಾಗಿ, ಉತ್ತರವು ಹೌದಾಗಿದೆ, ದೇವರ ಪವಿತ್ರಾತ್ಮವನ್ನು ಪಡೆದುಕೊಳ್ಳುವುದರಲ್ಲಿ, ಬೇರೆ ಕುರಿಗಳ ವರ್ಗದ ನಂಬಿಗಸ್ತ ಸಹೋದರರೂ ಸಹೋದರಿಯರೂ, ಅಭಿಷಿಕ್ತರೊಂದಿಗೆ ಸಮಾನವಾಗಿ ಪಾಲಿಗರಾಗಬಲ್ಲರು.—ಯೋಹಾನ 10:16.
ಖಂಡಿತವಾಗಿ, ಆತ್ಮವು ಎಲ್ಲಾ ವ್ಯಕ್ತಿಗಳ ಮೇಲೆ ಏಕಪ್ರಕಾರವಾಗಿ ಕಾರ್ಯನಡಿಸುತ್ತದೆಂಬುದನ್ನು ಇದು ಅರ್ಥೈಸುವುದಿಲ್ಲ. ನಿಶ್ಚಯವಾಗಿಯೂ ದೇವರಾತ್ಮವನ್ನು ಪಡೆದುಕೊಂಡ, ಕ್ರೈಸ್ತಪೂರ್ವ ಸಮಯಗಳಲ್ಲಿನ ನಂಬಿಗಸ್ತ ಸೇವಕರನ್ನು ಜ್ಞಾಪಿಸಿಕೊಳ್ಳಿರಿ. ಆತ್ಮದಿಂದ ಬಂದ ಬಲದೊಂದಿಗೆ, ಅವರಲ್ಲಿ ಕೆಲವರು ಭಯಂಕರವಾದ ಕಾಡುಮೃಗಗಳನ್ನು ಸಂಹರಿಸಿದರು, ಅಸ್ವಸ್ಥರನ್ನು ವಾಸಿಮಾಡಿದರು, ಸತ್ತವರನ್ನು ಎಬ್ಬಿಸಿದರು ಕೂಡ. ಮತ್ತು ಬೈಬಲಿನ ಪ್ರೇರಿತ ಪುಸ್ತಕಗಳನ್ನು ಬರೆಯಲು ಅವರಿಗೆ ಆತ್ಮದ ಅಗತ್ಯವಿತ್ತು. (ನ್ಯಾಯಸ್ಥಾಪಕರು 13:24, 25; 14:5, 6; 1 ಅರಸುಗಳು 17:17-24; 2 ಅರಸುಗಳು 4:17-37; 5:1-14) ದ ವಾಚ್‌ಟವರ್ ಹೇಳಿದ್ದು: “ಇವರು ಅಭಿಷಿಕ್ತರ ವರ್ಗದವರಾಗಿಲ್ಲದಿದ್ದರೂ, ಪವಿತ್ರಾತ್ಮದಿಂದ ಭರಿತರಾಗಿದ್ದರು.”
ಇನ್ನೊಂದು ದೃಷ್ಟಿಕೋನದಿಂದ, ಅವರು ಪವಿತ್ರಾತ್ಮದಿಂದ ಅಭಿಷಿಕ್ತರಾಗಿದ್ದು, ಸ್ವರ್ಗೀಯ ನಿರೀಕ್ಷೆಯೊಂದಿಗೆ ದೇವರ ಆತ್ಮಿಕ ಪುತ್ರರಾಗಿ ಪರಿಣಮಿಸಿದ, ಪ್ರಥಮ ಶತಮಾನದಲ್ಲಿನ ಸ್ತ್ರೀಪುರುಷರನ್ನು ಪರಿಗಣಿಸಿರಿ. ಅವರೆಲ್ಲರೂ ಅಭಿಷಿಕ್ತರಾಗಿದ್ದರು, ಆದರೆ ತದನಂತರ ಆತ್ಮವು ಅವರೆಲ್ಲರ ಮೇಲೆ ಏಕಪ್ರಕಾರವಾಗಿ ಕಾರ್ಯನಡಿಸಿತೆಂಬುದನ್ನು ಅದು ಅರ್ಥೈಸುವುದಿಲ್ಲ. 1 ಕೊರಿಂಥ 12ನೆಯ ಅಧ್ಯಾಯದಿಂದ ಅದು ಸ್ಪಷ್ಟಗೊಳಿಸಲ್ಪಟ್ಟಿದೆ. ಅಲ್ಲಿ ಅಪೊಸ್ತಲ ಪೌಲನು, ಆತ್ಮದ ವರದಾನಗಳನ್ನು ಚರ್ಚಿಸಿದ್ದಾನೆ. 8, 9, ಮತ್ತು 11ನೆಯ ವಚನಗಳಲ್ಲಿ ನಾವು ಓದುವುದು: “ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು, ಒಬ್ಬನಿಗೆ ಆ ಆತ್ಮನಿಗೆ ಅನುಗುಣವಾಗಿ ವಿದ್ಯಾವಾಕ್ಯವು, ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು, ಒಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು, . . . ಈ ವರಗಳನ್ನೆಲ್ಲಾ ಆ ಒಬ್ಬ ಆತ್ಮನೇ ತನ್ನ ಚಿತ್ತಕ್ಕೆ ಬಂದ ಹಾಗೆ ಒಬ್ಬೊಬ್ಬನಿಗೆ ಹಂಚಿಕೊಟ್ಟು ನಡಿಸುತ್ತಾನೆ.”
ಗಮನಾರ್ಹವಾಗಿ, ಆಗ ಇದ್ದ ಎಲ್ಲಾ ಅಭಿಷಿಕ್ತರಿಗೆ ಆತ್ಮದ ಅದ್ಭುತಕರವಾದ ವರದಾನಗಳಿರಲಿಲ್ಲ. 1 ಕೊರಿಂಥ 14ನೆಯ ಅಧ್ಯಾಯದಲ್ಲಿ, ಒಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರದಾನವಿದ್ದ, ಆದರೆ ಹಾಜರಿದ್ದ ಯಾರಲ್ಲಿಯೂ ಭಾಷಾಂತರದ ವರದಾನವಿರದಿದ್ದ, ಒಂದು ಸಭಾ ಕೂಟವನ್ನು ಪೌಲನು ಪ್ರಸ್ತಾಪಿಸಿದನು. ಆದರೂ, ಆರಂಭದ ಯಾವುದೋ ಒಂದು ಸಂದರ್ಭದಲ್ಲಿ, ಅವರಲ್ಲಿ ಪ್ರತಿಯೊಬ್ಬರೂ ಆತ್ಮದಿಂದ ಅಭಿಷಿಕ್ತರಾಗುವುದನ್ನು ಅನುಭವಿಸಿದ್ದರು. ಹಾಜರಿದ್ದ ಇತರರಿಗಿಂತಲೂ, ವಿವಿಧ ಭಾಷೆಗಳನ್ನಾಡುವ ವರದಾನವಿರುವ ಆ ಸಹೋದರನಿಗೆ ಆತ್ಮದ ಹೆಚ್ಚಿನ ಅಂಶವು ಇತ್ತೆಂದು ಹೇಳುವುದು ಸಮಂಜಸವಾಗಿರುವುದೊ? ಇಲ್ಲ. ಆ ಒಬ್ಬನಂತೆ ಬೈಬಲನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆಗಳನ್ನು ಎದುರಿಸಲು ಅಶಕ್ತರೋ ಎಂಬಂತೆ, ಆ ಇತರ ಅಭಿಷಿಕ್ತರು ಅಪ್ರಯೋಜಕರಾಗಿರಲಿಲ್ಲ. ವಿವಿಧ ಭಾಷೆಗಳಲ್ಲಿ ಮಾತಾಡಸಾಧ್ಯವಿದ್ದ ಆ ಸಹೋದರನ ಮೇಲೆ, ಆತ್ಮವು ವಿಶೇಷವಾದ ಒಂದು ರೀತಿಯಲ್ಲಿ ಕಾರ್ಯನಡಿಸಿತು. ಆದರೂ, ಪೌಲನು ಬರೆದಂತೆ, ಅವನು ಹಾಗೂ ಅವರು ಯೆಹೋವನಿಗೆ ಆಪ್ತರಾಗಿ ಉಳಿಯುವ ಮತ್ತು “ಆತ್ಮಭರಿತರಾಗುತ್ತಾ ಇರುವ” ಅಗತ್ಯವಿತ್ತು.—ಎಫೆಸ 5:18, NW.
ಇಂದಿನ ಉಳಿಕೆಯವರ ಕುರಿತಾಗಿ ಹೇಳುವುದಾದರೆ, ನಿಶ್ಚಯವಾಗಿಯೂ ಅವರು ದೇವರ ಆತ್ಮವನ್ನು ಪಡೆದುಕೊಂಡಿದ್ದಾರೆ. ಒಂದು ಸಂದರ್ಭದಲ್ಲಿ—ಅವರು ಆತ್ಮಿಕ ಪುತ್ರರಾಗಿ ಅಭಿಷೇಕಿಸಲ್ಪಟ್ಟು, ದತ್ತುಸ್ವೀಕಾರಮಾಡಲ್ಪಟ್ಟ ಸಮಯದಲ್ಲಿ—ಅದು ಅವರ ಮೇಲೆ ಒಂದು ವಿಶೇಷವಾದ ರೀತಿಯಲ್ಲಿ ಕಾರ್ಯನಡಿಸಿತು. ತದನಂತರದಿಂದ ಅವರು ಬೈಬಲನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ, ಸಾರುವ ಕೆಲಸದಲ್ಲಿ ಮುಂದಾಳುತ್ವವನ್ನು ತೆಗೆದುಕೊಳ್ಳುವಾಗ, ಅಥವಾ ವೈಯಕ್ತಿಕವಾಗಿ ಅಥವಾ ಸಂಸ್ಥೆಯ ಪರವಾಗಿ ಪರೀಕ್ಷೆಗಳನ್ನು ಎದುರಿಸುವಾಗ, ಅದರ ಸಹಾಯವನ್ನು ಪಡೆದುಕೊಂಡವರಾಗಿದ್ದು, ‘ಆತ್ಮಭರಿತರಾಗುತ್ತಾ ಇರುತ್ತಾರೆ.’
ಅಭಿಷಿಕ್ತರಾಗುವಂತಹ ಅನುಭವವಿಲ್ಲದಿದ್ದರೂ, “ಬೇರೆ ಕುರಿಗಳ” ಸದಸ್ಯರು, ಬೇರೆ ವಿಷಯಗಳಲ್ಲಿ ನಿಶ್ಚಯವಾಗಿ ಪವಿತ್ರಾತ್ಮವನ್ನು ಪಡೆದುಕೊಳ್ಳುತ್ತಾರೆ. ಎಪ್ರಿಲ್ 15, 1952ರ ದ ವಾಚ್‌ಟವರ್ ಪತ್ರಿಕೆಯು ಹೀಗೆ ಗಮನಿಸಿತು:
“ಉಳಿಕೆಯವರಂತೆ ‘ಬೇರೆ ಕುರಿಗಳು’ ಇಂದು ಅದೇ ರೀತಿಯ ಸಾರುವ ಕೆಲಸವನ್ನು, ಅದೇ ರೀತಿಯ ಕಷ್ಟಕರ ಪರಿಸ್ಥಿತಿಗಳ ಕೆಳಗೆ ನಿರ್ವಹಿಸುತ್ತಾರೆ, ಮತ್ತು ಅದೇ ರೀತಿಯ ನಂಬಿಗಸ್ತಿಕೆ ಹಾಗೂ ಸಮಗ್ರತೆಯನ್ನು ಪ್ರದರ್ಶಿಸುತ್ತಾರೆ. ಅವರು ಒಂದೇ ಆತ್ಮಿಕ ಮೇಜಿನಲ್ಲಿ ಊಟ ಮಾಡುತ್ತಾರೆ, ಒಂದೇ ಆಹಾರವನ್ನು ತಿನ್ನುತ್ತಾ, ಅದೇ ರೀತಿಯ ಸತ್ಯಗಳನ್ನು ಅಂತರ್ಗತಮಾಡಿಕೊಳ್ಳುತ್ತಿದ್ದಾರೆ. ಭೂವರ್ಗದವರಾಗಿದ್ದುಕೊಂಡು, ಭೂನಿರೀಕ್ಷೆಗಳು ಹಾಗೂ ಭೂವಿಷಯಗಳಲ್ಲಿ ತೀವ್ರವಾದ ಅಭಿರುಚಿಯೊಂದಿಗೆ, ಅವರು ಹೊಸ ಲೋಕದಲ್ಲಿನ ಭೂಪರಿಸ್ಥಿತಿಗಳಿಗೆ ಸಂಬಂಧಿಸುವ ಶಾಸ್ತ್ರವಚನಗಳಲ್ಲಿ ತಮ್ಮನ್ನು ಹೆಚ್ಚು ಅಭಿರುಚಿಯುಳ್ಳವರನ್ನಾಗಿ ಮಾಡಿಕೊಳ್ಳಬಹುದು; ಅಭಿಷಿಕ್ತ ಉಳಿಕೆಯವರಾದರೋ, ಸ್ವರ್ಗೀಯ ನಿರೀಕ್ಷೆಗಳು ಹಾಗೂ ಆತ್ಮದ ವಿಚಾರಗಳಲ್ಲಿ ಬಲವಾದ ವೈಯಕ್ತಿಕ ಅಭಿರುಚಿಯೊಂದಿಗೆ, ದೇವರ ವಾಕ್ಯದಲ್ಲಿನ ಆತ್ಮದ ವಿಚಾರಗಳನ್ನು ಹೆಚ್ಚು ಶ್ರದ್ಧಾಪೂರ್ವಕರಾಗಿ ಅಭ್ಯಾಸಿಸಬಹುದು. . . . ಆದರೂ ಎರಡೂ ವರ್ಗಗಳವರಿಗೆ ಒಂದೇ ರೀತಿಯ ಸತ್ಯಗಳು ಹಾಗೂ ಒಂದೇ ರೀತಿಯ ತಿಳಿವಳಿಕೆಯು ದೊರೆಯುತ್ತದೆ ಎಂಬುದು ವಾಸ್ತವಾಂಶವಾಗಿದೆ, ಮತ್ತು ತಾವು ಪಡೆದುಕೊಳ್ಳುವ ಸ್ವರ್ಗೀಯ ಮತ್ತು ಭೂವಿಷಯಗಳ ಕುರಿತಾದ ಗ್ರಹಿಕೆಯನ್ನು ನಿರ್ಧರಿಸುವಂತಹದ್ದು, ಅಭ್ಯಾಸದಲ್ಲಿ ಅವರು ತಮ್ಮನ್ನು ವೈಯಕ್ತಿಕವಾಗಿ ಹೇಗೆ ಅನ್ವಯಿಸಿಕೊಳ್ಳುತ್ತಾರೆ ಎಂಬುದೇ. ಎರಡೂ ವಿದ್ಯಮಾನಗಳಲ್ಲಿ ಕರ್ತನ ಆತ್ಮವು ಎರಡೂ ವರ್ಗಗಳಿಗೆ ಸಮಾನವಾದ ಭಾಗಗಳಲ್ಲಿ ದೊರೆಯುತ್ತದೆ, ಮತ್ತು ಜ್ಞಾನ ಹಾಗೂ ತಿಳಿವಳಿಕೆಗಳು, ಅವುಗಳನ್ನು ಅಂತರ್ಗತಮಾಡಿಕೊಳ್ಳಲಿಕ್ಕಾಗಿ ಕೊಡಲ್ಪಡುವ ಸಮಾನವಾದ ಸಂದರ್ಭಗಳೊಂದಿಗೆ, ಇಬ್ಬರಿಗೂ ಸಮಾನವಾಗಿ ನೀಡಲ್ಪಡುತ್ತವೆ.”