ಅವರು ನಮ್ರತೆಯಿಂದ ಯೆಹೋವನ ಸೇವೆಮಾಡಿದರು
“ನೀವು ಎಲ್ಲಿ ಸೇವೆಮಾಡುತ್ತೀರೆಂಬುದು ಹೆಚ್ಚು ಪ್ರಾಮುಖ್ಯವಲ್ಲ, ಬದಲಾಗಿ ನೀವು ಯಾರ ಸೇವೆಮಾಡುತ್ತೀರೆಂಬುದು ನಿಜವಾಗಿಯೂ ಪ್ರಾಮುಖ್ಯವಾಗಿದೆ.” ಜಾನ್ ಬೂತ್ ಈ ಮಾತುಗಳನ್ನು ಹೇಳಲು ತುಂಬಾ ಇಷ್ಟಪಡುತ್ತಿದ್ದರು, ಮತ್ತು ಅವರು ಅವುಗಳಿಗನುಸಾರ ಜೀವಿಸಿದರು. 1996, ಜನವರಿ 8ರ ಸೋಮವಾರದಂದು ಕೊನೆಗೊಂಡ ಅವರ ಭೂಮಿಯ ಮೇಲಿನ ಜೀವನಪಥವು, ಅವರು ಯಾರ ಸೇವೆಮಾಡಲು ಆರಿಸಿಕೊಂಡರು ಎಂಬುದನ್ನು ಸ್ಪಷ್ಟವಾಗಿ ತೋರಿಸಿತು.
1921ರಷ್ಟು ಹಿಂದೆ ಒಬ್ಬ ಯೌವನಸ್ಥರೋಪಾದಿ ಜಾನ್ ಬೂತ್, ಜೀವಿತದಲ್ಲಿನ ಉದ್ದೇಶಕ್ಕಾಗಿ ಅನ್ವೇಷಿಸುತ್ತಿದ್ದರು. ಡಚ್ ರಿಫಾರ್ಮ್ಡ್ ಚರ್ಚಿನ ಸಂಡೇ ಸ್ಕೂಲ್ನಲ್ಲಿ ಅವರು ಕಲಿಸಿದರಾದರೂ, ವೈದಿಕರು ಸ್ವಾರ್ಥ ಜೀವಿತಗಳನ್ನು ಜೀವಿಸಿದರೆಂದು ಅವರಿಗನಿಸಿದ ಕಾರಣದಿಂದ, ಒಬ್ಬ ಶುಶ್ರೂಷಕನಾಗಲು ತರಬೇತಿಯನ್ನು ಪಡೆಯುವ ವಿಚಾರವನ್ನು ಅವರು ಪ್ರತಿರೋಧಿಸಿದರು. “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಶಿರೋನಾಮವುಳ್ಳ ಭಾಷಣವೊಂದರ ಸುತ್ತೋಲೆಯನ್ನು ಅವರು ಕಂಡಾಗ, ಆ ಸುತ್ತೋಲೆಯು ಜಾಹೀರುಪಡಿಸಿದ ಸಾಹಿತ್ಯಕ್ಕಾಗಿ ಅವರು ಆ ಕೂಡಲೆ ಆರ್ಡರನ್ನು ಕಳುಹಿಸಿದರು. ತಾವು ಓದಿದ ವಿಷಯದಿಂದ ಮನಸೆಳೆಯಲ್ಪಟ್ಟು, ಬೈಬಲ್ ವಿದ್ಯಾರ್ಥಿಗಳ—ಆಗ ಯೆಹೋವನ ಸಾಕ್ಷಿಗಳು ಹಾಗೆಂದು ವಿದಿತರಾಗಿದ್ದರು—ಕೂಟಗಳಿಗೆ ಹೋಗಲಿಕ್ಕಾಗಿ ಬೇಗನೆ ಅವರು 24 ಕಿಲೊಮೀಟರ್ಗಳಷ್ಟು ದೂರ ಸೈಕಲ್ ಮೂಲಕ ಪ್ರಯಾಣಿಸುತ್ತಿದ್ದರು. 1923ರಲ್ಲಿ ಅವರು ದೀಕ್ಷಾಸ್ನಾನಿತರಾಗಿ, ತಮ್ಮ ಕುಟುಂಬದ ಹೈನಿನ ಫಾರ್ಮ್ ಇದ್ದಂತಹ ಸ್ಥಳವಾದ, ನ್ಯೂ ಯಾರ್ಕ್, ವಾಲ್ಕಿಲ್ನ ಪ್ರಾಂತದಲ್ಲಿ, ಮನೆಯಿಂದ ಮನೆಗೆ ಸಾರುವುದನ್ನು ಆರಂಭಿಸಿದರು.
1928ರ ಎಪ್ರಿಲ್ ತಿಂಗಳಿನಲ್ಲಿ ಸಹೋದರ ಬೂತ್ ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಿದರು. ಆಹಾರ ಹಾಗೂ ವಸತಿಗಾಗಿ ಬೈಬಲ್ ಸಾಹಿತ್ಯವನ್ನು ವಿನಿಮಯಮಾಡಿಕೊಳ್ಳುತ್ತಾ, ಅವರು ತಮ್ಮ ಸ್ವದೇಶದ ಟೆರಿಟೊರಿಯಲ್ಲಿ ಹಾಗೂ ಅಮೆರಿಕದ ದಕ್ಷಿಣ ಭಾಗದ ಗ್ರಾಮೀಣ ಸ್ಥಳಗಳಲ್ಲಿ ಸಾರಿದರು. ಕಳ್ಳಭಟ್ಟಿ ಕಾರಖಾನೆಯ ಒಡೆಯರಿಂದ ಬಂದೂಕಿನ ಝಳಪಿಸುವಿಕೆಯಂತಹ ಅಪಾಯಗಳನ್ನು ಅವರಿಗೆ ತಾಳ್ಮೆಯಿಂದ ಎದುರಿಸಬೇಕಾಗಿತ್ತು; ಅವರಲ್ಲಿ ಒಬ್ಬನು ಜಾನ್ ಬೂತ್ರ ಪಯನೀಯರ್ ಸಹಭಾಗಿಗೆ ಗುಂಡಿಕ್ಕಿ, ಗಾಯಗೊಳಿಸಿದ್ದನು. 1935ರಲ್ಲಿ, ಸಹೋದರ ಬೂತ್ ಒಬ್ಬ ಸಂಚಾರ ಮೇಲ್ವಿಚಾರಕರಾಗಿ ನೇಮಿಸಲ್ಪಟ್ಟು, ದೇಶದಾದ್ಯಂತ ಇರುವ ಸಭೆಗಳನ್ನೂ ಚಿಕ್ಕ ಗುಂಪುಗಳನ್ನೂ ಸಂದರ್ಶಿಸಲಾರಂಭಿಸಿದರು. ಅವರು ಸಮ್ಮೇಳನಗಳನ್ನು ವ್ಯವಸ್ಥಾಪಿಸಿದರು ಹಾಗೂ ವಿರೋಧದ ಹೊರತೂ ಪಟ್ಟುಹಿಡಿಯುವವರಾಗಿರುವಂತೆ ಸಹೋದರರು ಮತ್ತು ಸಹೋದರಿಯರಿಗೆ ಸಹಾಯ ಮಾಡಿದರು. ಕುಪಿತಗೊಂಡ ಗಲಭೆಯ ಗುಂಪುಗಳನ್ನು ಎದುರಿಸುವುದು, ಕೋರ್ಟಿನಲ್ಲಿ ಒಂದು ನಿಲುವನ್ನು ತೆಗೆದುಕೊಳ್ಳುವುದು, ಹಾಗೂ ಸೆರೆಮನೆವಾಸವನ್ನು ಅನುಭವಿಸುವುದು—ಇವೆಲ್ಲವೂ ಸಹೋದರ ಬೂತ್ರಿಗೆ ಸಾಮಾನ್ಯ ಸಂಭವಗಳಾಗಿ ಪರಿಣಮಿಸಿದವು. “ಆ ರೋಮಾಂಚಕ ಸಮಯಗಳ ಕುರಿತಾದ ವಿವರಗಳನ್ನು ಕೊಡಲು, ಒಂದು ಪುಸ್ತಕವು ತಗಲೀತು” ಎಂದು ಅವರು ಒಮ್ಮೆ ಬರೆದರು.
1941ರಲ್ಲಿ, ವಾಚ್ ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾದ ಜೋಸೆಫ್ ಎಫ್. ರದರ್ಫರ್ಡರು, ಸಹೋದರ ಬೂತ್ರನ್ನು, ನ್ಯೂ ಯಾರ್ಕ್, ಇತಾಕದ ಬಳಿಯಿರುವ ಕಿಂಗ್ಡಮ್ ಫಾರ್ಮ್ನಲ್ಲಿ ಕೆಲಸ ಮಾಡಲು ನೇಮಿಸಿದರು. ಅಲ್ಲಿ ಅವರು 28 ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಶುಶ್ರೂಷೆಯ ಕುರಿತಾದ ಅವರ ಪ್ರೀತಿಯು ಕಳೆಗುಂದಲಿಲ್ಲ, 1961ರ ವರೆಗೆ ಕಿಂಗ್ಡಮ್ ಫಾರ್ಮ್ನಲ್ಲಿ ನೆಲೆಸಿದ್ದ, ಮಿಷನೆರಿಗಳನ್ನು ತರಬೇತುಮಾಡಲಿಕ್ಕಾಗಿ ಸ್ಥಾಪಿಸಲ್ಪಟ್ಟಿದ್ದ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಅನೇಕ ವರ್ಷಗಳಲ್ಲಿ ಸಹವಾಸಿಸಲು ಅವರು ಹರ್ಷಚಿತ್ತರಾಗಿದ್ದರು. 1970ರಲ್ಲಿ, ನ್ಯೂ ಯಾರ್ಕ್, ವಾಲ್ಕಿಲ್ನಲ್ಲಿನ ವಾಚ್ಟವರ್ ಫಾರ್ಮ್ಸ್ನಲ್ಲಿ ಸೇವೆ ಮಾಡುವಂತೆ ಸಹೋದರ ಬೂತ್ರನ್ನು ಕೇಳಿಕೊಳ್ಳಲಾಯಿತು, ಮತ್ತು ಹೀಗೆ 45 ವರ್ಷಗಳ ಮುಂಚೆ ಅವರು ಎಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದ್ದರೋ ಅದೇ ಕ್ಷೇತ್ರದಲ್ಲಿ ಅವರು ನೆಲೆಸಲ್ಪಟ್ಟರು.
1974ರಲ್ಲಿ, ಸಹೋದರ ಬೂತ್ರು, ನ್ಯೂ ಯಾರ್ಕ್, ಬ್ರೂಕ್ಲಿನ್ನಲ್ಲಿನ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ನೇಮಿಸಲ್ಪಟ್ಟರು. 93 ವರ್ಷ ಪ್ರಾಯದಲ್ಲಿ, ತಮ್ಮ ಮರಣದ ವರೆಗೆ ಅವರು ಆ ಸ್ಥಾನದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡಿದರು. ಜಾನ್ ಬೂತ್ ತಮ್ಮ ಗಾಢವಾದ ನಮ್ರತೆ ಹಾಗೂ ದಯಾಪರ ಕ್ರೈಸ್ತ ವ್ಯಕ್ತಿತ್ವಕ್ಕಾಗಿ ಪ್ರಿಯರಾಗಿದ್ದರು. ಅವರ ಆರೋಗ್ಯ ಹಾಗೂ ಬಲವು ಅವರನ್ನು ಕುಗ್ಗಿಸುವ ವರೆಗೆ, ಅವರು ಮನೆಯಿಂದ ಮನೆಗೆ ಹಾಗೂ ನಗರದ ಬೀದಿಗಳಲ್ಲಿ ನಂಬಿಗಸ್ತಿಕೆಯಿಂದ ಸಾರುತ್ತಿದ್ದರು.
ಅವರೊಂದಿಗೆ ಸೇವೆಮಾಡಿದವರು ಅವರ ಮರಣಕ್ಕಾಗಿ ದುಃಖಿಸುವುದಾದರೂ, ಅವರು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುತ್ತಾರೆ ಮತ್ತು “ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುವವು” ಎಂಬಂತಹ, ಅಭಿಷಿಕ್ತ ಕ್ರೈಸ್ತರ ಕುರಿತಾದ ಬೈಬಲಿನ ವಾಗ್ದಾನದಲ್ಲಿ ಅವರು ಸಾಂತ್ವನವನ್ನು ಕಂಡುಕೊಳ್ಳುತ್ತಾರೆ. (ಪ್ರಕಟನೆ 14:13; 1 ಕೊರಿಂಥ 15:51-54) ನಿಶ್ಚಯವಾಗಿಯೂ ಸ್ವರ್ಗವು ಒಂದು ಹೊಸ ಪರಿಸರವಾಗಿದೆ, ಆದರೆ ಜಾನ್ ಬೂತ್ರು ಸದಾಕಾಲಕ್ಕೂ ಯೆಹೋವನ ಸೇವೆಮಾಡಲು ಶಕ್ತರಾಗುವ ಒಂದು ಪರಿಸರವು ಅದಾಗಿದೆ!
[ಪುಟ 32 ರಲ್ಲಿರುವ ಚಿತ್ರ]
ಜಾನ್ ಬೂತ್ 1903-1996
[ಪುಟ 32 ರಲ್ಲಿರುವ ಚಿತ್ರ]
HERALD-AMERICAN, ANDOVER 1234
76 Jehovites Jailed in Joliet
[ಕೃಪೆ]
Chicago Herald-American