ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 12/1 ಪು. 24-28
  • ಯೆಹೋವನು ನನ್ನ ಶರಣನಾಗಿದ್ದಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನನ್ನ ಶರಣನಾಗಿದ್ದಾನೆ
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಪ್ರಮುಖ ಭೇಟಿ
  • ಬೈಬಲ್‌ ಸತ್ಯಕ್ಕಾಗಿ ನಮ್ಮ ನಿಲುವು
  • ಬಲವಾದ ವಿರೋಧವನ್ನು ಸಹಿಸಿಕೊಳ್ಳುವುದು
  • ಕಠಿನ ದೈಹಿಕ ದೌರ್ಬಲ್ಯಗಳೊಂದಿಗೆ ಹೋರಾಡುವುದು
  • ವಿರೋಧದ ಹೊರತೂ ಪೂರ್ಣ ಸಮಯದ ಸೇವೆಮಾಡುವುದು
  • ಪ್ರತಿಫಲದಾಯಕವಾದೊಂದು ಅನುಭವ
  • ಯೆಹೋವನು ನನಗೆ ಉಪಕಾರಿಯಾಗಿದ್ದಾನೆ
  • ಆಸ್ಟ್ರೇಲಿಯದಲ್ಲಿ ನಾನು ನಿಜವಾದ ಸಂಪತ್ತನ್ನು ಕಂಡುಕೊಂಡೆ
    ಎಚ್ಚರ!—1994
  • ಎಂಟು ಮಕ್ಕಳನ್ನು ಯೆಹೋವನ ಮಾರ್ಗಗಳಲ್ಲಿ ಬೆಳೆಸುವುದು ಪಂಥಾಹ್ವಾನಕರವೂ ಆನಂದದಾಯಕವೂ ಆಗಿತ್ತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ‘ಮುನ್ನಡಿಯಿಟ್ಟ’ 50ಕ್ಕೂ ಹೆಚ್ಚಿನ ವರುಷಗಳು
    ಕಾವಲಿನಬುರುಜು—1996
  • ತ್ಯಜಿಸಲ್ಪಟ್ಟ ತಬ್ಬಲಿಯೊಬ್ಬನು ಪ್ರೀತಿಭರಿತ ತಂದೆಯನ್ನು ಕಂಡುಕೊಳ್ಳುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು—1996
w96 12/1 ಪು. 24-28

ಯೆಹೋವನು ನನ್ನ ಶರಣನಾಗಿದ್ದಾನೆ

ಪೆನಲಪಿ ಮಾಕ್ರೀಸ್‌ ಹೇಳಿರುವಂತೆ

ನನ್ನ ತಾಯಿ ನನ್ನೊಂದಿಗೆ ಹೃತ್ಪೂರ್ವಕವಾಗಿ ಹೀಗೆ ಬೇಡಿಕೊಂಡರು: “ನಿನ್ನ ಗಂಡನನ್ನು ಬಿಟ್ಟುಬಿಡು; ನಿನ್ನ ಸೋದರರು ಒಬ್ಬ ಹೆಚ್ಚು ಉತ್ತಮ ವ್ಯಕ್ತಿಯನ್ನು ನಿನಗಾಗಿ ಕಂಡುಹಿಡಿಯುವರು.” ನನ್ನ ಪ್ರಿಯ ತಾಯಿ ನಾನು ನನ್ನ ಮದುವೆಯನ್ನು ಮುರಿಯುವಂತೆ ಏಕೆ ಬಯಸಿದರು? ಯಾವುದು ಅವರನ್ನು ಅಷ್ಟು ತಳಮಳಗೊಳಿಸಿತ್ತು?

ನಾನು ಸೇಮಾಸ್‌ ಎಂಬ ಗ್ರೀಕ್‌ ದ್ವೀಪದ ಆಂಬೀಲೋಸ್‌ ಎಂಬ ಚಿಕ್ಕ ಹಳ್ಳಿಯಲ್ಲಿ 1897ರಲ್ಲಿ ಹುಟ್ಟಿದೆ. ನಮ್ಮ ಕುಟುಂಬದವರು ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನ ಧರ್ಮನಿಷ್ಠ ಸದಸ್ಯರಾಗಿದ್ದರು. ನನ್ನ ಜನನಕ್ಕೆ ತುಸು ಮೊದಲು ನನ್ನ ತಂದೆ ಸತ್ತಿದ್ದರು ಮತ್ತು ನನ್ನ ತಾಯಿ, ಮೂವರು ಸೋದರರು ಮತ್ತು ನಾನು ಆ ದಿನಗಳ ಕಡು ಬಡತನದ ಮಧ್ಯೆ ಕೇವಲ ಪಾರಾಗಲು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು.

ಒಂದನೆಯ ಲೋಕಯುದ್ಧವು 1914ರಲ್ಲಿ ಆರಂಭಗೊಂಡಿತು, ಮತ್ತು ಸ್ವಲ್ಪದರಲ್ಲಿ ನನ್ನ ಇಬ್ಬರು ಅಣ್ಣಂದಿರನ್ನು ಸೈನ್ಯಕ್ಕೆ ಸೇರುವಂತೆ ಆಜ್ಞಾಪಿಸಲಾಯಿತು. ಆದರೆ ಹಾಗೆ ಮಾಡುವುದರಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಅವರು ನನ್ನನ್ನು ಮತ್ತು ನನ್ನ ತಮ್ಮನನ್ನು ತಾಯಿಯೊಂದಿಗೆ ಮನೆಯಲ್ಲಿ ಬಿಟ್ಟು, ಅಮೆರಿಕಕ್ಕೆ ಹೊರಟುಹೋದರು. ಕೆಲವು ವರುಷಗಳಾನಂತರ, 1920ರಲ್ಲಿ ನಮ್ಮ ಹಳ್ಳಿಯ ಯುವ ಅಧ್ಯಾಪಕನಾಗಿದ್ದ ದೀಮೀಟ್ರೀಸ್‌ನನ್ನು ನಾನು ಮದುವೆಯಾದೆ.

ಒಂದು ಪ್ರಮುಖ ಭೇಟಿ

ನಾನು ಮದುವೆಯಾಗಿ ಸ್ವಲ್ಪದರಲ್ಲಿ ನನ್ನ ತಾಯಿಯ ಅಣ್ಣ ನಮ್ಮನ್ನು ಭೇಟಿಮಾಡಲು ಅಮೆರಿಕದಿಂದ ಬಂದರು. ಅವರು ಅಕಸ್ಮಾತ್ತಾಗಿ ತಮ್ಮೊಂದಿಗೆ ಚಾರ್ಲ್ಸ್‌ ಟೇಸ್‌ ರಸಲ್‌ ಬರೆದಿದ್ದ ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಸಂಪುಟಗಳಲ್ಲಿ ಒಂದನ್ನು ತಂದಿದ್ದರು. ಅದು ಈಗ ಯೆಹೋವನ ಸಾಕ್ಷಿಗಳೆಂದು ಜ್ಞಾತರಾಗಿರುವ ಬೈಬಲ್‌ ವಿದ್ಯಾರ್ಥಿಗಳ ಪ್ರಕಾಶನವಾಗಿತ್ತು.

ದೀಮೀಟ್ರೀಸ್‌ ಆ ಪುಸ್ತಕವನ್ನು ತೆರೆದಾಗ, ತಾನು ಚಿಕ್ಕಂದಿನಿಂದಲೂ ಕುತೂಹಲಪಟ್ಟಿದ್ದ ಒಂದು ವಿಷಯವನ್ನು, “ಸತ್ತಾಗ ಮನುಷ್ಯನಿಗೆ ಏನು ಸಂಭವಿಸುತ್ತದೆ?” ಎಂಬ ವಿಷಯವನ್ನು ಗಮನಿಸಿದರು. ಪ್ರೌಢ ಶಾಲೆಯಲ್ಲಿದ್ದಾಗ ಇದೇ ವಿಷಯದ ಮೇಲೆ ಅವರು ಒಬ್ಬ ಗ್ರೀಕ್‌ ಆರ್ತೊಡಾಕ್ಸ್‌ ದೇವತಾಶಾಸ್ತ್ರಜ್ಞನನ್ನು ವಿಚಾರಿಸಿದ್ದರೂ ಅವರಿಗೆ ತೃಪ್ತಿಕರವಾದ ಉತ್ತರವು ದೊರೆತಿರಲಿಲ್ಲ. ಆ ಪ್ರಕಾಶನದಲ್ಲಿ ಒದಗಿಸಿದ್ದ ಸ್ಪಷ್ಟವಾದ ಹಾಗೂ ತರ್ಕಬದ್ಧವಾದ ಉತ್ತರವು ದೀಮೀಟ್ರೀಸ್‌ರನ್ನು ಎಷ್ಟು ಹರ್ಷಗೊಳಿಸಿತೆಂದರೆ, ಅವರು ನೇರವಾಗಿ ಗ್ರೀಸ್‌ನ ಪುರುಷರು ರೂಢಿಯಾಗಿ ಕೂಡಿಬರುವ ಹಳ್ಳಿಯ ಕಾಫಿಹೌಸ್‌ಗೆ ಹೋದರು. ಅಲ್ಲಿ ಅವರು ಬೈಬಲಿನಿಂದ ಕಲಿತಿದ್ದ ವಿಷಯಗಳನ್ನು ಹೇಳತೊಡಗಿದರು.

ಬೈಬಲ್‌ ಸತ್ಯಕ್ಕಾಗಿ ನಮ್ಮ ನಿಲುವು

ಸಾಧಾರಣ ಈ ಸಮಯದಲ್ಲಿ—1920ಗಳ ಆದಿಭಾಗದಲ್ಲಿ—ಗ್ರೀಸ್‌ ಇನ್ನೊಂದು ಯುದ್ಧದ ಮಧ್ಯೆ ಸಿಕ್ಕಿಕೊಂಡಿತು. ದೀಮೀಟ್ರೀಸ್‌ರನ್ನು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿ, ಏಷಿಯ ಮೈನರಿನ ಟರ್ಕಿಷ್‌ ಭೂಭಾಗಕ್ಕೆ ಕಳುಹಿಸಲಾಯಿತು. ಅಲ್ಲಿ ಅವರು ಗಾಯಗೊಂಡು ಮನೆಗೆ ಕಳುಹಿಸಲ್ಪಟ್ಟರು. ಅವರು ಮತ್ತೆ ಆರೋಗ್ಯಹೊಂದಿದ ಮೇಲೆ, ನಾನು ಅವರ ಜೊತೆಯಲ್ಲಿ ಏಷಿಯ ಮೈನರ್‌ನ ಸ್ಮರ್ನ (ಈಗ ಟರ್ಕಿಯ ಇಸ್ಮಿಅರ್‌)ಕ್ಕೆ ಹೋದೆ. ಯುದ್ಧವು 1922ರಲ್ಲಿ ಅನಿರೀಕ್ಷಿತವಾಗಿ ಅಂತ್ಯಗೊಂಡಾಗ, ನಮಗೆ ಪಲಾಯನ ಮಾಡಬೇಕಾಯಿತು. ವಾಸ್ತವವಾಗಿ, ನಾವು ತೀರ ಹಾನಿಗೊಂಡಿದ್ದ ದೋಣಿಯೊಂದರಲ್ಲಿ ಸೇಮಾಸ್‌ಗೆ ಹೋಗಿ ಕಷ್ಟದಿಂದ ತಪ್ಪಿಸಿಕೊಂಡೆವು. ಮನೆ ತಲಪಿದಾಗ, ನಾವು ಮೊಣಕಾಲೂರಿ ದೇವರಿಗೆ—ಯಾರ ಕುರಿತು ಇನ್ನೂ ನಮ್ಮಲ್ಲಿ ಕೇವಲ ಅಲ್ಪ ಜ್ಞಾನವೇ ಇತ್ತೊ ಆ ದೇವರಿಗೆ—ಉಪಕಾರವನ್ನು ಹೇಳಿದೆವು.

ಸ್ವಲ್ಪದರಲ್ಲಿ ದೀಮೀಟ್ರೀಸ್‌ರನ್ನು ಆ ದ್ವೀಪದ ರಾಜಧಾನಿಯಾದ ವಾಥೀಯ ಒಂದು ಶಾಲೆಯಲ್ಲಿ ಕಲಿಸಲು ನೇಮಿಸಲಾಯಿತು. ಅವರು ಬೈಬಲ್‌ ವಿದ್ಯಾರ್ಥಿಗಳ ಸಾಹಿತ್ಯವನ್ನು ಓದುತ್ತ ಮುಂದುವರಿದರು ಮತ್ತು ಮಳೆಬೀಳುತ್ತಿದ್ದ ಒಂದು ರಾತ್ರಿಯಂದು, ಅವರಲ್ಲಿ ಇಬ್ಬರು, ದ್ವೀಪವಾದ ಕೈಆಸ್‌ನಿಂದ ನಮಗೆ ಭೇಟಿಕೊಟ್ಟರು. ಅವರು ಅಮೆರಿಕದಿಂದ, ಆಗ ಪೂರ್ಣ ಸಮಯದ ಸೌವಾರ್ತಿಕರನ್ನು ಏನೆಂದು ಕರೆಯಲಾಗುತ್ತಿತ್ತೊ ಆ ಕಾಲ್ಪೋರ್ಟರರಾಗಿ ಸೇವೆ ಮಾಡಲು ಹಿಂದೆ ಬಂದಿದ್ದರು. ನಾವು ಅವರಿಗೆ ಆ ರಾತ್ರಿ ಉಳಿದುಕೊಳ್ಳಲು ಸ್ಥಳಕೊಟ್ಟೆವು ಮತ್ತು ಅವರು ದೇವರ ಉದ್ದೇಶಗಳ ಕುರಿತು ಅನೇಕ ವಿಷಯಗಳನ್ನು ನಮ್ಮೊಂದಿಗೆ ಮಾತಾಡಿದರು.

ಅದಾದ ಬಳಿಕ ದೀಮೀಟ್ರೀಸ್‌ ನನಗೆ ಹೇಳಿದ್ದು: “ಪೆನಲಪಿ, ಇದು ಸತ್ಯವೆಂದು ನಾನು ಮನಗಾಣುತ್ತೇನೆ ಮತ್ತು ನಾನದನ್ನು ಅನುಸರಿಸಲೇಬೇಕು. ಇದರ ಅರ್ಥವು, ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನಲ್ಲಿ ನಾನು ಹಾಡುವುದನ್ನು ನಿಲ್ಲಿಸಬೇಕು, ಮತ್ತು ಇದರಿಂದಾಗಿ ಶಾಲಾ ಮಕ್ಕಳೊಂದಿಗೆ ನಾನು ಚರ್ಚಿಗೆ ಹಾಜರಾಗಲಾರೆ.” ಯೆಹೋವನ ಕುರಿತಾದ ನಮ್ಮ ಜ್ಞಾನವು ಪರಿಮಿತವಾಗಿದ್ದರೂ ಆತನನ್ನು ಸೇವಿಸುವ ನಮ್ಮ ಬಯಕೆಯು ಬಲವಾಗಿತ್ತು. ಆದಕಾರಣ ನಾನು ಉತ್ತರಕೊಟ್ಟದ್ದು: “ನಾನು ನಿಮಗೆ ತಡೆಯಾಗಿರುವುದಿಲ್ಲ. ಮುಂದಕ್ಕೆ ಸಾಗಿ.”

ಅವರು ತುಸು ಹಿಂಜರಿಯುತ್ತ ಹೇಳಿದ್ದು: “ಅದು ಸರಿ, ಆದರೆ ನಮ್ಮ ಉದ್ದೇಶವು ಪ್ರತ್ಯಕ್ಷವಾಗುವಾಗ, ನಾನು ನನ್ನ ಕೆಲಸ ಕಳೆದುಕೊಳ್ಳುವೆ.”

“ಚಿಂತಿಲ್ಲ,” ಎಂದೆ ನಾನು. “ಎಲ್ಲರೂ ಕಲಿಸುವ ವೃತ್ತಿಯಿಂದಲೇ ಜೀವನ ನಡೆಸುತ್ತಾರೊ? ನಾವು ಯುವ ಜನರೂ ಗಟ್ಟಿಮುಟ್ಟಾದವರೂ ಆಗಿದ್ದೇವೆ, ಮತ್ತು ದೇವರ ಸಹಾಯದಿಂದ, ನಾವು ಬೇರೆ ಕೆಲಸವನ್ನು ಕಂಡುಕೊಳ್ಳಬಲ್ಲೆವು.”

ಸುಮಾರು ಈ ಸಮಯದಲ್ಲಿ, ಇನ್ನೊಬ್ಬ ಬೈಬಲ್‌ ವಿದ್ಯಾರ್ಥಿ ಸೇಮಾಸ್‌ಗೆ ಬಂದಿದ್ದನೆಂದು ನಮಗೆ ತಿಳಿದುಬಂತು. ಅವನೂ ಕಾಲ್ಪೋರ್ಟರ್‌ ಆಗಿದ್ದನು. ಅವನು ಒಂದು ಸಾರ್ವಜನಿಕ ಭಾಷಣ ಕೊಡಲು ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಾಗ, ನಾವು ಅವನನ್ನು ಹುಡುಕಿಕೊಂಡು ಹೋದೆವು. ಅವನು ಒಂದು ಅಂಗಡಿಯಲ್ಲಿ ಇಬ್ಬರು ಗ್ರೀಕ್‌ ಆರ್ತೊಡಾಕ್ಸ್‌ ದೇವತಾಶಾಸ್ತ್ರಜ್ಞರೊಂದಿಗೆ ಸಂಭಾಷಿಸುತ್ತಿರುವುದನ್ನು ನಾವು ಕಂಡೆವು. ತಮ್ಮ ನಂಬಿಕೆಗಳನ್ನು ಬೈಬಲಿನಿಂದ ಸಮರ್ಥಿಸಿಕೊಳ್ಳಲಿಕ್ಕಾಗಿದ್ದ ತಮ್ಮ ಅಶಕ್ಯತೆಯಿಂದ ನಾಚಿಕೆಪಟ್ಟು, ಆ ದೇವತಾಶಾಸ್ತ್ರಜ್ಞರು ಬೇಗನೆ ಹೊರಟುಹೋದರು. ಆ ಕಾಲ್ಪೋರ್ಟರನ ಜ್ಞಾನದಿಂದ ಮನಮುಟ್ಟಿದವರಾಗಿ ನನ್ನ ಗಂಡ ಅವನೊಡನೆ, “ನೀವು ಬೈಬಲನ್ನು ಅಷ್ಟು ಸರಾಗವಾಗಿ ಹೇಗೆ ಉಪಯೋಗಿಸುತ್ತೀರಿ?” ಎಂದು ಕೇಳಿದರು.

“ನಾವು ಬೈಬಲನ್ನು ಕ್ರಮಪ್ರಕಾರವಾಗಿ ಅಭ್ಯಸಿಸುತ್ತೇವೆ,” ಎಂದು ಅವನು ಉತ್ತರ ಕೊಟ್ಟನು. ತನ್ನ ಚೀಲವನ್ನು ತೆರೆದು ಅವನು ದೇವರ ವೀಣೆ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಹೊರಗೆತೆಗೆದು, ನಾವು ಈ ಪುಸ್ತಕವನ್ನು ಅಂತಹ ಅಭ್ಯಾಸದಲ್ಲಿ ಹೇಗೆ ಉಪಯೋಗಿಸಬಹುದೆಂದು ತೋರಿಸಿದನು. ನಾವು ಕಲಿಯಲು ಎಷ್ಟು ಕಟ್ಟಾಸೆಯವರಾಗಿದ್ದೆವೆಂದರೆ, ಆ ಕೂಡಲೆ ನನ್ನ ಗಂಡ ಮತ್ತು ನಾನು, ಆ ಕಾಲ್ಪೋರ್ಟರ್‌ ಮತ್ತು ಇನ್ನಿಬ್ಬರು ಪುರುಷರು ಆ ಅಂಗಡಿಗಾರನ ಜೊತೆಗೆ ಅವನ ಮನೆಗೆ ಹೋದೆವು. ಆ ಕಾಲ್ಪೋರ್ಟರ್‌ ನಮ್ಮಲ್ಲಿ ಪ್ರತಿಯೊಬ್ಬನಿಗೆ ದೇವರ ವೀಣೆ ಪುಸ್ತಕದ ಒಂದೊಂದು ಪ್ರತಿಯನ್ನು ಕೊಟ್ಟನು ಮತ್ತು ನಾವು ಒಡನೆ ಅಭ್ಯಸಿಸಲು ಆರಂಭಿಸಿದೆವು. ನಾವು ನಮ್ಮ ಅಭ್ಯಾಸವನ್ನು ಮಧ್ಯರಾತ್ರಿಗೂ ಹೆಚ್ಚು ಸಮಯದ ತನಕ ಮುಂದುವರಿಸಿ, ಅರುಣೋದಯ ಸಮೀಪಿಸಿದಾಗ ಬೈಬಲ್‌ ವಿದ್ಯಾರ್ಥಿಗಳು ಹಾಡುತ್ತಿದ್ದ ಹಾಡುಗಳನ್ನು ಕಲಿಯತೊಡಗಿದೆವು.

ಆ ಸಮಯದಿಂದ ಹಿಡಿದು, ನಾನು ದಿನಕ್ಕೆ ಅನೇಕ ತಾಸುಗಳ ತನಕ ಬೈಬಲನ್ನು ಅಭ್ಯಾಸಿಸತೊಡಗಿದೆ. ಪರದೇಶದ ಬೈಬಲ್‌ ವಿದ್ಯಾರ್ಥಿಗಳು ಬೈಬಲ್‌ ಅಧ್ಯಯನ ಸಹಾಯಕಗಳನ್ನು ನಮಗೆ ಒದಗಿಸಿಕೊಡುತ್ತಾ ಬಂದರು. ಜನವರಿ 1926ರಲ್ಲಿ, ನಾನು ದೇವರಿಗೆ ಪ್ರಾರ್ಥನೆಯಲ್ಲಿ, ಆತನ ಚಿತ್ತವನ್ನು ಷರತ್ತುಗಳಿಲ್ಲದೆ ಮಾಡುವೆನೆಂದು ಹೇಳಿ ಸಮರ್ಪಿಸಿಕೊಂಡೆ. ಆ ಬೇಸಗೆಯ ಕೊನೆಗೆ ನನ್ನ ಗಂಡನೂ ನಾನೂ ನೀರಿನ ದೀಕ್ಷಾಸ್ನಾನದ ಮೂಲಕ ನಮ್ಮ ಸಮರ್ಪಣೆಯನ್ನು ಸಂಕೇತಿಸಿಕೊಂಡೆವು. ನಾವು ಕಲಿಯುತ್ತಿದ್ದ ವಿಷಯಗಳ ಕುರಿತು ಇತರರೊಂದಿಗೆ ಮಾತಾಡುವ ಬಲವಾದ ಬಯಕೆ ನಮಗಿದ್ದ ಕಾರಣ, ನಾವು ನಿರೀಕ್ಷೆಯ ಸಂದೇಶ (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯೊಂದಿಗೆ ಮನೆಮನೆಯ ಶುಶ್ರೂಷೆಯಲ್ಲಿ ತೊಡಗಿದೆವು.

ಬಲವಾದ ವಿರೋಧವನ್ನು ಸಹಿಸಿಕೊಳ್ಳುವುದು

ಒಂದು ದಿನ ಒಬ್ಬ ಯುವ ಸ್ತ್ರೀಯು, ಒಂದು ಚಿಕ್ಕ ಗ್ರೀಕ್‌ ಆರ್ತೊಡಾಕ್ಸ್‌ ಚ್ಯಾಪಲ್‌ನಲ್ಲಿ ಒಂದು ಪೂಜಾ ವಿಧಾನ ಕೂಟವನ್ನು ಹಾಜರಾಗಲು ನನ್ನನ್ನು ಆಮಂತ್ರಿಸಿದಳು. “ನಾನು ಆ ರೀತಿಯಲ್ಲಿ ದೇವರನ್ನು ಆರಾಧಿಸುವುದನ್ನು ನಿಲ್ಲಿಸಿದ್ದೇನೆ. ಬೈಬಲ್‌ ಕಲಿಸುವಂತೆ, ನಾನೀಗ ಆತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತೇನೆ,” ಎಂದು ನಾನು ವಿವರಿಸಿದೆ. (ಯೋಹಾನ 4:23, 24) ಅವಳು ಬೆರಗಾಗಿ, ನಡೆದ ಸಂಗತಿಯನ್ನು ವ್ಯಾಪಕವಾಗಿ ವರದಿಸಿ, ನನ್ನ ಗಂಡನನ್ನೂ ದೋಷಾರೋಪಣೆಯಲ್ಲಿ ಸಿಕ್ಕಿಸಿದಳು.

ಕಾರ್ಯತಃ ಪ್ರತಿಯೊಬ್ಬರೂ ವಿರೋಧಿಸಲಾರಂಭಿಸಿದರು. ನಮಗೆ ಎಲ್ಲಿಯೂ—ನಮ್ಮ ಮನೆಯಲ್ಲಾಗಲಿ, ನಾವು ದ್ವೀಪದಲ್ಲಿ ಕೆಲವು ಆಸಕ್ತ ವ್ಯಕ್ತಿಗಳೊಂದಿಗೆ ನಡೆಸುತ್ತಿದ್ದ ಕೂಟಗಳಲ್ಲಿಯಾಗಲಿ—ಶಾಂತಿಯು ದೊರೆಯಲಿಲ್ಲ. ಆರ್ತೊಡಾಕ್ಸ್‌ ಪಾದ್ರಿಗಳ ಪ್ರೇರೇಪಣೆಯಿಂದ, ನಮ್ಮ ಕೂಟದ ಸ್ಥಳದ ಹೊರಗಡೆ ಜನರ ಗುಂಪು, ಕಲ್ಲು ಬಿಸಾಡುತ್ತ, ಅವಮರ್ಯಾದೆಯ ಮಾತುಗಳನ್ನು ಕಿರಿಚುತ್ತ ಸೇರಿಬಂತು.

ನಾವು ನಿರೀಕ್ಷೆಯ ಸಂದೇಶ ಎಂಬ ಕಿರುಹೊತ್ತಗೆಯನ್ನು ಹಂಚಿದಾಗ, ಮಕ್ಕಳು ನಮ್ಮ ಸುತ್ತಲೂ ಸೇರಿಬಂದು, “ಸಹಸ್ರವರ್ಷವಾದಿಗಳು” ಎಂಬ ಮತ್ತು ಇತರ ಅಲ್ಪೀಕರಿಸುವ ಹೆಸರುಗಳನ್ನು ಹೇಳಿ ಕೂಗಾಡಿದರು. ನನ್ನ ಗಂಡನ ಸಹೋದ್ಯೋಗಿಗಳು ಸಹ ಅವರಿಗೆ ತೊಂದರೆ ಕೊಡಲಾರಂಭಿಸಿದರು. 1926ರ ಅಂತ್ಯಭಾಗದಲ್ಲಿ, ಸಾರ್ವಜನಿಕ ಶಾಲೆಯ ಅಧ್ಯಾಪಕನಾಗಿರಲು ಅಯೋಗ್ಯನೆಂಬ ಆರೋಪವನ್ನು ಹಾಕಿ, ಅವರನ್ನು ನ್ಯಾಯ ವಿಚಾರಣೆಗೆ ಒಳಪಡಿಸಿ, ಅವರಿಗೆ 15 ದಿನಗಳ ಸೆರೆಮನೆ ಶಿಕ್ಷೆಯನ್ನು ವಿಧಿಸಲಾಯಿತು.

ತಾಯಿಗೆ ಇದು ತಿಳಿದುಬಂದಾಗ, ನಾನು ನನ್ನ ಗಂಡನನ್ನು ಬಿಟ್ಟುಬಿಡುವಂತೆ ಅವರು ಬುದ್ಧಿ ಹೇಳಿದರು. “ನನ್ನ ಪ್ರಿಯ ಅಮ್ಮಾ, ನೋಡಿ, ನಾನು ನಿಮ್ಮನ್ನು ಎಷ್ಟು ಪ್ರೀತಿಸಿ ಸನ್ಮಾನಿಸುತ್ತೇನೆಂದು ನನಗೆ ತಿಳಿದಿರುವಷ್ಟು ನಿಮಗೂ ತಿಳಿದದೆ. ಆದರೆ ಸತ್ಯ ದೇವರಾದ ಯೆಹೋವನನ್ನು ನಾವು ಆರಾಧಿಸುವುದರ ಮಧ್ಯೆ ನೀವು ಅಡ್ಡಬರುವಂತೆ ನಾನು ಖಂಡಿತ ಬಿಡಲಾರೆ,” ಎಂದು ನಾನು ಉತ್ತರಿಸಿದೆ. ಅವರು ತುಂಬ ನಿರಾಶೆಯಿಂದ ತಮ್ಮ ಹಳ್ಳಿಗೆ ಹಿಂದೆರಳಿದರು.

1927ರಲ್ಲಿ ಬೈಬಲ್‌ ವಿದ್ಯಾರ್ಥಿಗಳ ಒಂದು ಸಮ್ಮೇಳನವು ಆ್ಯಥೆನ್ಸ್‌ನಲ್ಲಿ ನಡೆಯಿತು, ಮತ್ತು ನಾವು ಹಾಜರಾಗುವಂತೆ ಯೆಹೋವನು ದಾರಿ ತೆರೆದನು. ಹತ್ತಾರು ಜನ ಜೊತೆವಿಶ್ವಾಸಿಗಳೊಂದಿಗೆ ಕೂಡಿಬರುವ ಮೂಲಕ ನಾವು ಪುಳಕಿತರೂ ಆತ್ಮಿಕವಾಗಿ ಬಲಗೊಂಡವರೂ ಆದೆವು. ಸೇಮಾಸ್‌ಗೆ ಹಿಂದಿರುಗಿದಾಗ, ಲೋಕದ ಪ್ರಭುಗಳಿಗೊಂದು ಸಾಕ್ಷ್ಯ (ಇಂಗ್ಲಿಷ್‌) ಎಂಬ ಕಿರುಹೊತ್ತಗೆಯ 5,000 ಪ್ರತಿಗಳನ್ನು ನಾವು ನಮ್ಮ ದ್ವೀಪದ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಹಂಚಿದೆವು.

ಆ ಸಮಯಕ್ಕೆ ಸುಮಾರಾಗಿ ದೀಮೀಟ್ರೀಸ್‌ರನ್ನು ಅವರ ಕಲಿಸುವ ಹುದ್ದೆಯಿಂದ ತೆಗೆದುಹಾಕಲಾಯಿತು ಮತ್ತು ನಮ್ಮ ವಿರುದ್ಧವಾದ ಪೂರ್ವಕಲ್ಪಿತಾಭಿಪ್ರಾಯದ ಕಾರಣ, ಕೆಲಸವನ್ನು ಕಂಡುಹಿಡಿಯುವುದು ಹೆಚ್ಚುಕಡಮೆ ಅಸಾಧ್ಯವಾಗಿತ್ತು. ಆದರೆ, ನನಗೆ ಹೊಲಿಯಲು ಗೊತ್ತಿದ್ದುದರಿಂದ ಮತ್ತು ದೀಮೀಟ್ರೀಸ್‌ ಒಬ್ಬ ಕೌಶಲವುಳ್ಳ ಪೆಯಿಂಟರ್‌ ಆಗಿದ್ದುದರಿಂದ, ನಮ್ಮ ಆವಶ್ಯಕತೆಗಳಿಗೆ ಸಾಕಷ್ಟನ್ನು ನಮಗೆ ಸಂಪಾದಿಸಲು ಸಾಧ್ಯವಾಯಿತು. 1928ರಲ್ಲಿ, ನನ್ನ ಗಂಡನಿಗೂ ಸೇಮಾಸ್‌ನ ಇತರ ನಾಲ್ವರು ಕ್ರೈಸ್ತ ಸಹೋದರರಿಗೂ, ಸುವಾರ್ತೆಯನ್ನು ಸಾರಿದುದಕ್ಕಾಗಿ ಎರಡು ತಿಂಗಳುಗಳ ಸೆರೆವಾಸವನ್ನು ವಿಧಿಸಲಾಯಿತು. ಸೆರೆಮನೆಯ ಹೊರಗಿದ್ದ ಒಬ್ಬಳೇ ಬೈಬಲ್‌ ವಿದ್ಯಾರ್ಥಿನಿ ನಾನಾಗಿದ್ದುದರಿಂದ, ನಾನು ಅವರಿಗೆ ಸೆರೆಮನೆಯಲ್ಲಿ ಆಹಾರವನ್ನು ಒದಗಿಸಲು ಶಕ್ತಳಾದೆ.

ಕಠಿನ ದೈಹಿಕ ದೌರ್ಬಲ್ಯಗಳೊಂದಿಗೆ ಹೋರಾಡುವುದು

ಒಮ್ಮೆ ನಾನು, ಆ ವರೆಗೆ ಅಜ್ಞಾತವಾಗಿದ್ದ ಅಸ್ಥಿಗತ ರೋಗವಾದ ಕ್ಷಯಗಂತಿ ಬೆನ್ನೆಲುಬುರಿತ (ಟ್ಯೂಬರ್‌ಕ್ಯುಲರ್‌ ಸ್ಪಾಂಡಿಲೈಟಿಸ್‌)ದಿಂದ ಕಾಯಿಲೆ ಬಿದ್ದೆ. ನನಗೆ ಹಸಿವು ನಷ್ಟವಾಗಿ, ಬಿಡದೆ ಬಂದ ತೀಕ್ಷ್ಣ ಜ್ವರವನ್ನು ಅನುಭವಿಸಿದೆ. ನನ್ನ ಕುತ್ತಿಗೆಯಿಂದ ತೊಡೆಗಳ ತನಕ ಪಳಾಸ್ತ್ರಿ ಅಚ್ಚಿನಲ್ಲಿ ಹಾಕುವುದು ಚಿಕಿತ್ಸೆಯಾಗಿತ್ತು. ಆರ್ಥಿಕವಾಗಿ ನಿಭಾಯಿಸಿ ಚಿಕಿತ್ಸೆಯನ್ನು ಮುಂದುವರಿಸುವರೆ, ನನ್ನ ಗಂಡ ಒಂದು ತುಂಡು ಜಮೀನನ್ನು ಮಾರಿದರು. ವ್ಯಥೆಗೀಡಾಗಿದ್ದ ನಾನು, ಪ್ರತಿದಿನ ಬಲಕ್ಕಾಗಿ ದೇವರಿಗೆ ಪ್ರಾರ್ಥಿಸಿದೆ.

ನನ್ನನ್ನು ಭೇಟಿಮಾಡುತ್ತಿದ್ದಾಗ, ಸಂಬಂಧಿಗಳು ಸತತವಾಗಿ ವಿರೋಧವನ್ನು ಕೆರಳಿಸುತ್ತ ಹೋದರು. ನಮ್ಮ ಧರ್ಮವನ್ನು ಬದಲಾಯಿಸಿದ ಕಾರಣ ನಾವು ಈ ತೊಂದರೆಗಳನ್ನೆಲ್ಲ ಅನುಭವಿಸುತ್ತಿದ್ದೇವೆಂದು ತಾಯಿ ಹೇಳಿದರು. ಚಲಿಸಲು ಅಶಕ್ತಳಾಗಿದ್ದ ನಾನು, ಸಹಿಸಿಕೊಳ್ಳಲಿಕ್ಕಾಗಿ ನನಗೆ ತಾಳ್ಮೆ ಮತ್ತು ಧೈರ್ಯವನ್ನು ಕೊಡುವಂತೆ ನಮ್ಮ ಸ್ವರ್ಗೀಯ ಪಿತನೊಡನೆ ಬೇಡುತ್ತ, ನನ್ನ ತಲೆದಿಂಬನ್ನು ಕಣ್ಣೀರಿನಿಂದ ತೋಯಿಸಿದೆ.

ನನ್ನ ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲೆ ನಾನು ನನ್ನ ಬೈಬಲನ್ನು ಮತ್ತು ಭೇಟಿಕಾರರಿಗಾಗಿ ಪುಸ್ತಿಕೆಗಳು ಮತ್ತು ಕಿರುಹೊತ್ತಗೆಗಳ ಸಂಗ್ರಹವನ್ನಿಟ್ಟೆ. ನಮ್ಮ ಚಿಕ್ಕ ಸಭೆಯ ಕೂಟಗಳು ನಮ್ಮ ಮನೆಯಲ್ಲಿಯೇ ನಡೆಯುತ್ತಿದ್ದುದು ಸಂತೋಷದ ಸಂಗತಿಯಾಗಿತ್ತು. ಅದರಿಂದಾಗಿ ನಾನು ಕ್ರಮವಾಗಿ ಆತ್ಮಿಕ ಪ್ರೋತ್ಸಾಹನೆಯನ್ನು ಪಡೆಯಸಾಧ್ಯವಿತ್ತು. ಆ್ಯಥೆನ್ಸ್‌ನ ಒಬ್ಬ ಡಾಕ್ಟರರಿಂದ ವೈದ್ಯಕೀಯ ಚಿಕಿತ್ಸೆಗಾಗಿ ತೆರಲು ನಮಗೆ ಇನ್ನೊಂದು ತುಂಡು ಜಮೀನನ್ನು ಮಾರಬೇಕಾಯಿತು.

ಇದಾಗಿ ಸ್ವಲ್ಪದರಲ್ಲಿ, ಸಂಚರಣ ಮೇಲ್ವಿಚಾರಕರು ನಮಗೆ ಭೇಟಿಕೊಟ್ಟರು. ನನ್ನನ್ನು ಈ ಸ್ಥಿತಿಯಲ್ಲಿ ಮತ್ತು ದೀಮೀಟ್ರೀಸ್‌ ಕೆಲಸವಿಲ್ಲದೆ ಇರುವುದನ್ನು ನೋಡಿ ಅವರು ಬಹಳ ವ್ಯಸನಪಟ್ಟರು. ಅವರು ದಯೆಯಿಂದ, ನಾವು ದ್ವೀಪವಾದ ಲೆಸ್ಬಾಸ್‌ನ ಮಿಟಲೀನ್‌ನಲ್ಲಿ ವಾಸಿಸುವರೆ ಏರ್ಪಾಡುಗಳನ್ನು ಮಾಡಲು ಸಹಾಯಮಾಡಿದರು. ನಾವು 1934ರಲ್ಲಿ ಅಲ್ಲಿಗೆ ಹೋದೆವು, ಮತ್ತು ದೀಮೀಟ್ರೀಸ್‌ಗೆ ಕೆಲಸವನ್ನು ಪಡೆಯುವುದು ಸಾಧ್ಯವಾಯಿತು. ಅಲ್ಲಿ ನಾವು, ನನ್ನ ಕಾಯಿಲೆಯಲ್ಲಿ ನನ್ನ ಆರೈಕೆ ಮಾಡಿದ ಮೆಚ್ಚುಗೆಯ ಕ್ರೈಸ್ತ ಸಹೋದರ ಸಹೋದರಿಯರನ್ನು ಸಹ ಕಂಡುಕೊಂಡೆವು. ಕ್ರಮೇಣ, ಐದು ವರ್ಷಗಳ ಚಿಕಿತ್ಸೆಯಾದ ಮೇಲೆ ನಾನು ಪೂರ್ತಿ ಚೇತರಿಸಿಕೊಂಡೆ.

ಆದರೂ, 1946ರಲ್ಲಿ, IIನೆಯ ಲೋಕಯುದ್ಧವಾಗಿ ಸ್ವಲ್ಪದರಲ್ಲಿ, ನಾನು ಪುನಃ ಗುರುತರವಾಗಿ ಕಾಯಿಲೆ ಬಿದ್ದೆ. ಈ ಬಾರಿ ಕ್ಷಯಗಂತಿ ಪೆರಿಟೊನೈಟಿಸ್‌ನಿಂದ. ನಾನು ಐದು ತಿಂಗಳುಗಳ ವರೆಗೆ ಉಚ್ಚತಾಪದ ಜ್ವರ ಮತ್ತು ತೀಕ್ಷ್ಣ ನೋವಿನಿಂದ ಮಲಗಿದ್ದಲ್ಲಿದ್ದೆ. ಆದರೆ, ಹಿಂದಿನಂತೆ, ಯೆಹೋವನ ಕುರಿತು ನನ್ನ ಭೇಟಿಕಾರರಿಗೆ ಮಾತಾಡುವುದನ್ನು ನಾನೆಂದೂ ನಿಲ್ಲಿಸಲಿಲ್ಲ. ಸಕಾಲದಲ್ಲಿ, ನಾನು ಪುನಃ ಆರೋಗ್ಯವನ್ನು ಪಡೆದೆ.

ವಿರೋಧದ ಹೊರತೂ ಪೂರ್ಣ ಸಮಯದ ಸೇವೆಮಾಡುವುದು

ಯುದ್ಧಾನಂತರದ ವರ್ಷಗಳಲ್ಲಿ, ನಿಷ್ಕರುಣವಾದ ವಿರೋಧವು ಗ್ರೀಸ್‌ನ ಯೆಹೋವನ ಸಾಕ್ಷಿಗಳ ಪಾಲಾಗಿತ್ತು. ಮನೆಮನೆಯ ಶುಶ್ರೂಷೆಯಲ್ಲಿ ಭಾಗವಹಿಸುತ್ತಿದ್ದಾಗ ನಮ್ಮನ್ನು ಹತ್ತಾರು ಬಾರಿ ದಸ್ತಗಿರಿ ಮಾಡಲಾಯಿತು. ನನ್ನ ಗಂಡ ಸೆರೆಮನೆಯಲ್ಲಿ ಬಹುಮಟ್ಟಿಗೆ ಒಟ್ಟು ಒಂದು ವರ್ಷವನ್ನು ಕಳೆದರು. ನಾವು ಶುಶ್ರೂಷೆಗೆ ಹೊರಟಾಗ, ಸಾಮಾನ್ಯವಾಗಿ ನಾವು ರಾತ್ರಿಯನ್ನು ದಸ್ತಗಿರಿಯಾಗಿ ಪೊಲೀಸ್‌ ಸ್ಟೇಶನ್ನಿನಲ್ಲಿ ಕಳೆಯಲು ಯೋಜಿಸಿದೆವು. ಆದರೂ ಯೆಹೋವನು ನಮ್ಮನ್ನು ಎಂದಿಗೂ ತ್ಯಜಿಸಿದ್ದಿಲ್ಲ. ಆತನು ಸದಾ ಸಹಿಸಲು ಬೇಕಾದ ಧೈರ್ಯ ಮತ್ತು ಬಲವನ್ನು ಒದಗಿಸಿದನು.

1940ಗಳಲ್ಲಿ, ನಾನು ತಿಳಿಸುವಿಕೆ (ಈಗ ನಮ್ಮ ರಾಜ್ಯದ ಸೇವೆ)ಯಲ್ಲಿ ರಜಾದಿನಗಳ ಪಯನೀಯರ್‌ ಸೇವೆ ಮಾಡುವ ಏರ್ಪಾಡಿನ ಕುರಿತು ಓದಿದೆ. ಈ ಶುಶ್ರೂಷೆಯಲ್ಲಿ ತಿಂಗಳಿಗೆ 75 ತಾಸುಗಳನ್ನು ಮೀಸಲಾಗಿಡಲು ಕೇಳಿಕೊಳ್ಳುವ ಸೇವೆಯ ಈ ಅಂಶದಲ್ಲಿ ಭಾಗವಹಿಸುವರೆ ಪ್ರಯತ್ನಿಸಲು ನಾನು ನಿರ್ಣಯಿಸಿದೆ. ಇದರ ಪರಿಣಾಮವಾಗಿ, ನನ್ನ ಪುನರ್ಭೇಟಿಗಳು ಮತ್ತು ಬೈಬಲ್‌ ಅಧ್ಯಯನಗಳು ಹೆಚ್ಚಿದವು—ಸ್ವಲ್ಪ ಸಮಯ ನಾನು 17 ಸಾಪ್ತಾಹಿಕ ಅಭ್ಯಾಸಗಳನ್ನು ನಡೆಸುತ್ತಿದ್ದೆ. ಮಿಟಲೀನ್‌ನ ವ್ಯಾಪಾರ ಕ್ಷೇತ್ರದಲ್ಲಿ ನಾನು ಒಂದು ಪತ್ರಿಕಾ ಪಥವನ್ನೂ ವಿಕಸಿಸಿ, ಅಲ್ಲಿ ನಾನು ಕ್ರಮವಾಗಿ ಅಂಗಡಿ, ಆಫೀಸು ಮತ್ತು ಬ್ಯಾಂಕ್‌ಗಳಿಗೆ ಸುಮಾರು 300 ಪ್ರತಿಗಳನ್ನು ವಿತರಿಸಿದೆ.

ಒಬ್ಬ ಸಂಚರಣ ಮೇಲ್ವಿಚಾರಕರು 1964ರಲ್ಲಿ ನಮ್ಮನ್ನು ಸಂದರ್ಶಿಸಿದಾಗ, ಅವರು ಹೇಳಿದ್ದು: “ಸಹೋದರಿ ಪೆನಲಪಿ, ನಿಮ್ಮ ಪ್ರಚಾರಕರ ರೆಕಾರ್ಡ್‌ ಕಾರ್ಡಿನಿಂದ, ನಿಮ್ಮ ಶುಶ್ರೂಷೆಯಲ್ಲಿ ನೀವು ಎಷ್ಟು ಅದ್ಭುತಕರವಾದ ಫಲಿತಾಂಶಗಳನ್ನು ಪಡೆಯುತ್ತಿದ್ದೀರೆಂಬುದನ್ನು ನಾನು ನೋಡಿದೆ. ಕ್ರಮದ ಪಯನೀಯರ್‌ ಸೇವೆ ಮಾಡಲು ನೀವು ಒಂದು ಅರ್ಜಿಯನ್ನು ಏಕೆ ತುಂಬಿಸುವುದಿಲ್ಲ?” ಅವರ ಪ್ರೋತ್ಸಾಹಕ್ಕಾಗಿ ನಾನು ಸದಾ ಆಭಾರಿಯಾಗಿರುವೆ. ಪೂರ್ಣ ಸಮಯದ ಶುಶ್ರೂಷೆಯು ಮೂರಕ್ಕೂ ಹೆಚ್ಚು ದಶಕಗಳಿಂದಲೂ ನನ್ನ ಆನಂದವಾಗಿದೆ.

ಪ್ರತಿಫಲದಾಯಕವಾದೊಂದು ಅನುಭವ

ಮಿಟಲೀನ್‌ನಲ್ಲಿ ಲಾಂಗಾಡಾವೆಂಬ ಜನನಿಬಿಡವಾದ ನೆರೆಹೊರೆಯೊಂದಿದೆ. ಇಲ್ಲಿ ಗ್ರೀಕ್‌ ನಿರಾಶ್ರಿತರು ಜೀವಿಸುತ್ತಿದ್ದರು. ನಾವು ಮತಾಂಧ ವಿರೋಧವನ್ನು ಎದುರಿಸಿದ್ದ ಕಾರಣ ಅಲ್ಲಿ ಮನೆಯಿಂದ ಮನೆಗೆ ಹೋಗುವುದನ್ನು ತಪ್ಪಿಸಿದ್ದೆವು. ಆದರೂ ನನ್ನ ಗಂಡ ಸೆರೆಮನೆಯಲ್ಲಿದ್ದಾಗ, ಅವರನ್ನು ಭೇಟಿಯಾಗಲು ನಾನು ಈ ಪ್ರದೇಶವನ್ನು ದಾಟಿಹೋಗಬೇಕಿತ್ತು. ಮಳೆ ಬರುತ್ತಿದ್ದ ಒಂದು ದಿನ, ನನ್ನ ಗಂಡ ಸೆರೆಮನೆಯಲ್ಲಿ ಏಕೆ ಇದ್ದಾರೆಂದು ಕೇಳಲು ಒಬ್ಬ ಸ್ತ್ರೀ ನನ್ನನ್ನು ಅವಳ ಮನೆಯೊಳಕ್ಕೆ ಕರೆದಳು. ದೇವರ ರಾಜ್ಯದ ಸುವಾರ್ತೆಯನ್ನು ಸಾರಿದ್ದಕ್ಕಾಗಿ ಹಾಗಾಯಿತೆಂದೂ, ಕ್ರಿಸ್ತನು ಬಾಧೆಪಟ್ಟ ಹಾಗೆಯೇ ಅವರೂ ಬಾಧೆಪಡುತ್ತಿದ್ದಾರೆಂದೂ ನಾನು ವಿವರಿಸಿದೆ.

ಸಕಾಲದಲ್ಲಿ, ಇನ್ನೊಬ್ಬ ಸ್ತ್ರೀಯು ನನಗೆ, ತನ್ನ ಮನೆಯಲ್ಲಿ ನಿಂತು ಮಾತಾಡುವಂತೆ ಏರ್ಪಡಿಸಿದಳು. ನಾನು ಬಂದಾಗ, ಒಟ್ಟಿಗೆ 12 ಮಂದಿ ಸ್ತ್ರೀಯರನ್ನು ಆಕೆ ಆಮಂತ್ರಿಸಿದ್ದಳೆಂದು ನಾನು ಕಂಡುಕೊಂಡೆ. ವಿರೋಧದ ಸಾಧ್ಯತೆಯನ್ನು ನಾನು ನಿರೀಕ್ಷಿಸಿದ್ದರಿಂದ, ಏನು ಸಂಭವಿಸಿದರೂ ಅದನ್ನು ಎದುರಿಸಲಿಕ್ಕಾಗಿ ನನಗೆ ವಿವೇಕ ಮತ್ತು ಧೈರ್ಯವನ್ನು ಕೊಡುವಂತೆ ನಾನು ದೇವರಿಗೆ ಪ್ರಾರ್ಥಿಸಿದೆ. ಆ ಸ್ತ್ರೀಯರಿಗೆ ಅನೇಕ ಪ್ರಶ್ನೆಗಳಿದ್ದವು, ಮತ್ತು ಕೆಲವರು ಆಕ್ಷೇಪಣೆಗಳನ್ನೆತ್ತಿದರು. ಆದರೆ ನಾನು ಶಾಸ್ತ್ರೀಯ ಉತ್ತರಗಳನ್ನು ಒದಗಿಸಲು ಶಕ್ತಳಾದೆ. ನಾನು ಹೊರಟುಹೋಗಲು ಎದ್ದಾಗ, ಮನೆಯಾಕೆಯು ನಾನು ಮರುದಿನ ಬರುವಂತೆ ಕೇಳಿಕೊಂಡಳು. ಸಂತೋಷದಿಂದ, ನಾನು ಆ ಆಮಂತ್ರಣವನ್ನು ಅಂಗೀಕರಿಸಿದೆ. ಮರುದಿನ ಒಬ್ಬ ಸಂಗಾತಿಯೂ ನಾನೂ ಬಂದಾಗ, ಆ ಸ್ತ್ರೀಯರು ಆಗಲೇ ಬಂದು ಕಾಯುತ್ತಿದ್ದುದನ್ನು ನಾವು ಕಂಡುಕೊಂಡೆವು.

ಆ ಬಳಿಕ ಶಾಸ್ತ್ರೀಯ ಚರ್ಚೆಗಳು ಕ್ರಮವಾಗಿ ಮುಂದುವರಿದು ಅನೇಕ ಬೈಬಲ್‌ ಅಧ್ಯಯನಗಳು ಆರಂಭಗೊಂಡವು. ಅನೇಕ ಸ್ತ್ರೀಯರು ನಿಷ್ಕೃಷ್ಟ ಜ್ಞಾನದಲ್ಲಿ ಪ್ರಗತಿ ಹೊಂದಿದರು; ಅವರ ಕುಟುಂಬಗಳು ಸಹ ಪ್ರಗತಿ ಮಾಡಿದವು. ಈ ಗುಂಪು ಅನಂತರ ಮಿಟಲೀನ್‌ನ ಯೆಹೋವನ ಸಾಕ್ಷಿಗಳ ಹೊಸ ಸಭೆಯ ಕೇಂದ್ರಬಿಂದುವಾಯಿತು.

ಯೆಹೋವನು ನನಗೆ ಉಪಕಾರಿಯಾಗಿದ್ದಾನೆ

ಗತ ವರುಷಗಳಲ್ಲಿ, ಯೆಹೋವನು ತನ್ನನ್ನು ಸೇವಿಸುವ ನನ್ನ ಗಂಡನ ಮತ್ತು ನನ್ನ ಪ್ರಯತ್ನಗಳಿಗೆ ಪ್ರತಿಫಲ ನೀಡಿದ್ದಾನೆ. 1920ಗಳಲ್ಲಿ ಸೇಮಾಸ್‌ನಲ್ಲಿದ್ದ ಕೆಲವೇ ಪ್ರಚಾರಕರು, ಎರಡು ಸಭೆಗಳು ಮತ್ತು ಒಂದು ಗುಂಪಾಗಿರುವ ಸುಮಾರು 130 ಮಂದಿ ಪ್ರಚಾರಕರಾಗಿ ಬೆಳೆದಿದ್ದಾರೆ. ಮತ್ತು ಲೆಸ್ಬಾಸ್‌ ದ್ವೀಪದಲ್ಲಿ, ಸುಮಾರು 430 ಮಂದಿ ರಾಜ್ಯ ಘೋಷಕರಿರುವ ನಾಲ್ಕು ಸಭೆಗಳೂ ಐದು ಗುಂಪುಗಳೂ ಇವೆ. ನನ್ನ ಗಂಡ 1977ರಲ್ಲಿ ಅವರ ಮರಣದ ಪರ್ಯಂತ ಕ್ರಿಯಾಶೀಲತೆಯಿಂದ ದೇವರ ರಾಜ್ಯವನ್ನು ಘೋಷಿಸಿದರು. ನಾವು ಯಾರಿಗೆ ಸಹಾಯ ಮಾಡಿದೆವೋ ಅವರು, ಶುಶ್ರೂಷೆಯಲ್ಲಿ ಇನ್ನೂ ಹುರುಪಿನಲ್ಲಿರುವುದನ್ನು ನೋಡುವುದು ಎಂತಹ ಸುಯೋಗ! ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳ ಜೊತೆಗೆ ಅವರು ಯೆಹೋವನನ್ನು ಐಕ್ಯದಿಂದ ಆರಾಧಿಸುವ ಒಂದು ಮಹಾ ಸಮೂಹವನ್ನು ನಿರ್ಮಿಸುತ್ತಾರೆ!

ಈಗ 70ಕ್ಕೂ ಹೆಚ್ಚು ವರ್ಷಕಾಲದ ವ್ಯಾಪ್ತಿಯಿರುವ ನನ್ನ ಕ್ರೈಸ್ತ ಸೇವಾಮಾರ್ಗವು ಸುಲಭ ಮಾರ್ಗವಾಗಿರಲಿಲ್ಲ. ಆದರೂ ಯೆಹೋವನು ಅತುಲ್ಯ ದುರ್ಗವಾಗಿದ್ದಾನೆ. ಮುಪ್ಪಿನ ವಯಸ್ಸು ಮತ್ತು ಕೆಡುತ್ತಿರುವ ಆರೋಗ್ಯದ ಕಾರಣ ನಾನು ಹಾಸಿಗೆ ಹಿಡಿದಿದ್ದೇನೆ ಮತ್ತು ಸಾರುವುದರಲ್ಲಿ ನನಗೆ ಮಾಡಸಾಧ್ಯವಿರುವುದು ತೀರ ಪರಿಮಿತ. ಆದರೆ ಕೀರ್ತನೆಗಾರನು ಹೇಳಿದಂತೆ, ನಾನು ಯೆಹೋವನಿಗೆ “ನೀನೇ ನನ್ನ ಶರಣನು ನನ್ನ ದುರ್ಗವು ನಾನು ಭರವಸವಿಟ್ಟಿರುವ ನನ್ನ ದೇವರು,” ಎಂದು ಹೇಳಬಲ್ಲೆ.—ಕೀರ್ತನೆ 91:2.

(ಈ ಲೇಖನವು ತಯಾರಿಸಲ್ಪಡುತ್ತಿರುವಾಗ, ಸಹೋದರಿ ಮಾಕ್ರೀಸ್‌ ಮೃತಪಟ್ಟರು. ಅವರಿಗೆ ಸ್ವರ್ಗೀಯ ನಿರೀಕ್ಷೆಯಿತ್ತು.)

[ಪುಟ 26 ರಲ್ಲಿರುವ ಚಿತ್ರ]

1955ರಲ್ಲಿ ಅವರ ಗಂಡನೊಂದಿಗೆ

[ಪುಟ 26 ರಲ್ಲಿರುವ ಚಿತ್ರ]

ಜನವರಿ 1997ರಷ್ಟಕ್ಕೆ, ಸಹೋದರಿ ಮಾಕ್ರೀಸ್‌ಗೆ 100 ವರ್ಷಪ್ರಾಯವಾಗುತ್ತಿತ್ತು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ