ಆಧುನಿಕ ಆರಾಧನೆಯಲ್ಲಿ ಸಂಗೀತದ ಸ್ಥಾನ
ಹಾಡುವಿಕೆಯು ದೇವರಿಂದ ಬಂದ ಕೊಡುಗೆಯಾಗಿದೆ. ಹಾಡಿನಲ್ಲಿ ಧ್ವನಿಯನ್ನೆತ್ತುವುದು ನಮಗೂ ನಮ್ಮ ಸೃಷ್ಟಿಕರ್ತನಿಗೂ ಆಹ್ಲಾದವನ್ನು ತರಬಲ್ಲದು. ಅದರ ಮೂಲಕ ನಾವು ನಮ್ಮ ಭಾವಾವೇಶಗಳನ್ನು, ಶೋಕ, ಹರ್ಷ—ಇವೆರಡನ್ನೂ ವ್ಯಕ್ತಪಡಿಸಬಲ್ಲೆವು. ಅದಕ್ಕಿಂತಲೂ ಹೆಚ್ಚಾಗಿ, ನಾವು ಹಾಡಿನ ಮೂಲಕರ್ತನಾದ ಯೆಹೋವನಿಗೆ ನಮ್ಮ ಪ್ರೀತಿ, ಆರಾಧನೆ ಮತ್ತು ಸ್ತುತಿಯನ್ನು ಧ್ವನಿಸಬಲ್ಲೆವು.
ಬೈಬಲಿನಲ್ಲಿ ಸಂಗೀತಕ್ಕಿರುವ ಸುಮಾರು ಮುನ್ನೂರು ನಿರ್ದೇಶನೆಗಳಲ್ಲಿ ಹೆಚ್ಚಿನವು, ಯೆಹೋವನ ಆರಾಧನೆಗೆ ಸಂಬಂಧಪಟ್ಟವುಗಳು. ಹಾಡುವಿಕೆ ಆನಂದ—ಕೇವಲ ಹಾಡುಗರ ಆನಂದವಷ್ಟೇಯಲ್ಲ, ಯೆಹೋವನ ಕಡೆಯಿಂದಲೂ ಆನಂದದೊಂದಿಗೆ ಜೊತೆಗೂಡಿಸಲ್ಪಡುತ್ತದೆ. ಕೀರ್ತನೆಗಾರನು ಬರೆದುದು: “ಅವರು ಆತನಿಗೆ ರಾಗ ಹಾಡಲಿ. ಏಕೆಂದರೆ ಯೆಹೋವನು ತನ್ನ ಜನರಲ್ಲಿ ಸಂತೋಷಿಸುತ್ತಿದ್ದಾನೆ.”—ಕೀರ್ತನೆ 149:3, 4, NW.
ಆದರೆ ಆಧುನಿಕ ಆರಾಧನೆಯಲ್ಲಿ ಹಾಡುವಿಕೆಯು ಎಷ್ಟು ಪ್ರಾಮುಖ್ಯ? ಯೆಹೋವನ ಜನರು ಹಾಡಿನಲ್ಲಿ ತಮ್ಮ ಧ್ವನಿಯನ್ನೆತ್ತುತ್ತ ಆತನನ್ನು ಇಂದು ಹೇಗೆ ಮೆಚ್ಚಿಸಬಲ್ಲರು? ಸತ್ಯಾರಾಧನೆಯಲ್ಲಿ ಸಂಗೀತಕ್ಕೆ ಯಾವ ಸ್ಥಾನವಿರಬೇಕು? ಆರಾಧನೆಯಲ್ಲಿ ಸಂಗೀತದ ಇತಿಹಾಸದ ಪರಿಶೋಧನೆಯು ಈ ಪ್ರಶ್ನೆಗಳಿಗೆ ಉತ್ತರ ನೀಡಲು ಸಹಾಯಮಾಡುವುದು.
ಆರಾಧನೆಯಲ್ಲಿ ಸಂಗೀತಕ್ಕಿರುವ ಐತಿಹಾಸಿಕ ಸ್ಥಾನ
ಬೈಬಲಿನಲ್ಲಿ ಸಂಗೀತಕ್ಕಿರುವ ಪ್ರಥಮ ನಿರ್ದೇಶನೆಯು, ನಿರ್ದಿಷ್ಟವಾಗಿ ಯೆಹೋವನ ಆರಾಧನೆಯ ಸಂಬಂಧದಲ್ಲಿ ಬರೆಯಲ್ಪಟ್ಟಿರುವುದಿಲ್ಲ. ಆದಿಕಾಂಡ 4:21ರಲ್ಲಿ, ಯಾವುದು ಸಂಗೀತೋಪಕರಣಗಳ ಕಂಡುಹಿಡಿತವಾಗಿರಬಹುದೊ ಅಥವಾ ಒಂದು ವಿಧದ ಸಂಗೀತವೃತ್ತಿಯ ಸ್ಥಾಪನೆಯಾಗಿರಬಹುದೊ ಅದಕ್ಕಾಗಿ ಯೂಬಾಲನಿಗೆ ಪ್ರಶಸ್ತಿಯನ್ನು ಕೊಡಲಾಗಿದೆ. ಆದರೂ, ಮಾನವರ ಸೃಷ್ಟಿಗೂ ಮೊದಲೇ, ಸಂಗೀತವು ಯೆಹೋವನ ಆರಾಧನೆಯ ಒಂದು ಭಾಗವಾಗಿತ್ತು. ಅನೇಕ ಬೈಬಲ್ ಭಾಷಾಂತರಗಳು, ದೇವದೂತರನ್ನು ಹಾಡುತ್ತಿರುವವರಾಗಿ ವರ್ಣಿಸುತ್ತವೆ. ಯೋಬ 38:6 ದೇವದೂತರ ಕುರಿತು, ಅವರು ಆನಂದಘೋಷ ಮಾಡುತ್ತ “ಉತ್ಸಾಹಧ್ವನಿ” ಎತ್ತುವುದರ ಕುರಿತು ಹೇಳುತ್ತದೆ. ಹೀಗೆ, ಮನುಷ್ಯನು ಸೃಷ್ಟಿಸಲ್ಪಡುವುದಕ್ಕೆ ಬಹಳ ಹಿಂದೆಯೇ, ಹಾಡುವುದು ಯೆಹೋವನ ಆರಾಧನೆಯಲ್ಲಿ ಒಂದು ಪದ್ಧತಿಯಾಗಿತ್ತೆಂದು ನಂಬಲು ಶಾಸ್ತ್ರೀಯ ಕಾರಣವಿದೆ.
ಪುರಾತನ ಹೀಬ್ರು ಸಂಗೀತವೆಲ್ಲ ರಾಗವಿನ್ಯಾಸವಾಗಿತ್ತು, ಅದಕ್ಕೆ ಬೆಂಬಲಿಸುವ ಸ್ವರಮೇಳನವಿರಲಿಲ್ಲವೆಂದು ಕೆಲವು ಇತಿಹಾಸಕಾರರು ವಾದಿಸುತ್ತಾರೆ. ಆದರೂ, ಬೈಬಲಿನಲ್ಲಿ ಪ್ರಮುಖವಾಗಿ ಹೇಳಲಾಗಿರುವ ಉಪಕರಣವಾದ ಕಿನ್ನರಿ (ಹಾರ್ಪ್)ಯಲ್ಲಿ ಒಂದಕ್ಕಿಂತ ಹೆಚ್ಚು ಸ್ವರಚಿಹ್ನೆಗಳನ್ನು ನುಡಿಸಸಾಧ್ಯವಿತ್ತು. ಆ ಕಿನ್ನರಿ ವಾದ್ಯಗಾರರು ಆ ಉಪಕರಣದಲ್ಲಿ ಸ್ವರ ಸಂಯೋಗಗಳ ಮೂಲಕ ಉತ್ಪಾದಿಸಸಾಧ್ಯವಿದ್ದ ಸ್ವರಮೇಳನವನ್ನು ಗಮನಿಸಿದ್ದಿರಬೇಕು. ಅದು ಅಸಂಸ್ಕೃತವಾಗಿರುವ ಬದಲಿಗೆ, ಅವರ ಸಂಗೀತವು ಹೆಚ್ಚು ಸುಧಾರಣೆ ಹೊಂದಿದ್ದಾಗಿತ್ತೆಂಬುದು ನಿಸ್ಸಂದೇಹ. ಮತ್ತು ಹೀಬ್ರು ಶಾಸ್ತ್ರಗಳ ಪದ್ಯ ಮತ್ತು ಗದ್ಯಗಳಿಂದ ತೀರ್ಮಾನಿಸುವಾಗ, ಇಸ್ರಾಯೇಲ್ಯ ಸಂಗೀತವು ಶ್ರೇಷ್ಠ ಗುಣಮಟ್ಟದ್ದಾಗಿತ್ತು ಎಂದು ನಾವು ನಿರ್ಣಯಿಸಸಾಧ್ಯವಿದೆ. ಸಂಗೀತ ರಚನೆಗಿದ್ದ ಪ್ರೇರಣೆಯು ನೆರೆರಾಷ್ಟ್ರಗಳದ್ದಕ್ಕಿಂತ ಉಚ್ಚಮಟ್ಟದ್ದಾಗಿತ್ತು ಎಂಬುದು ನಿಶ್ಚಯ.
ಪುರಾತನ ದೇವಾಲಯ ವ್ಯವಸ್ಥೆಯು, ದೇವಾಲಯದ ಆರಾಧನೆಯಲ್ಲಿ ಗೀತವಾಕ್ಯ ಹೊಂದಿಕೆ ಮತ್ತು ಸ್ವರಗಳ ಜಟಿಲ ಏರ್ಪಾಡುಗಳಿರುವಂತೆ ಸಾಧ್ಯಮಾಡಿತು. (2 ಪೂರ್ವಕಾಲವೃತ್ತಾಂತ 29:27, 28) ಅದರಲ್ಲಿ “ಗಾಯನ ನಾಯಕರು,” “ಗಾಯನ ಪ್ರವೀಣರು,” “ಶಿಷ್ಯರು” ಮತ್ತು ‘ಗುರುಗಳು’ ಇದ್ದರು. (1 ಪೂರ್ವಕಾಲವೃತ್ತಾಂತ 15:21; 25:7, 8; ನೆಹೆಮೀಯ 12:46) ಅವರ ಸುಧಾರಣೆಹೊಂದಿದ್ದ ಸಂಗೀತ ಕೌಶಲಗಳ ಕುರಿತು ಮಾತಾಡುತ್ತ ಇತಿಹಾಸಕಾರ ಕರ್ಟ್ ಸ್ಯಾಕ್ಸ್ ಬರೆದುದು: “ಯೆರೂಸಲೇಮಿನ ದೇವಾಲಯದೊಂದಿಗೆ ಜೊತೆಗೊಂಡಿದ್ದ ಮೇಳಗೀತಗಳು ಮತ್ತು ವಾದ್ಯಮೇಳಗಳು ಸಂಗೀತ ವಿದ್ಯೆ, ಕೌಶಲ ಮತ್ತು ಜ್ಞಾನದ ಸಂಬಂಧದಲ್ಲಿ ಉಚ್ಚ ಮಟ್ಟವನ್ನು ಸೂಚಿಸುತ್ತವೆ. . . . ಆ ಪುರಾತನ ಸಂಗೀತವು ಹೇಗೆ ಕೇಳಿಸಿತೆಂದು ನಮಗೆ ಗೊತ್ತಿಲ್ಲವಾದರೂ, ಅದರ ಬಲ, ಘನತೆ ಮತ್ತು ಯಾಜಮಾನ್ಯದ ಕುರಿತ ಸಾಕಷ್ಟು ಸಾಕ್ಷ್ಯ ನಮ್ಮಲ್ಲಿದೆ.” (ಪುರಾತನ ಜಗತ್ತಿನಲ್ಲಿ ಸಂಗೀತೋದಯ: ಪೂರ್ವ ಮತ್ತು ಪಶ್ಚಿಮ, [ಇಂಗ್ಲಿಷ್], 1943, ಪುಟಗಳು 48, 101-2) ಹೀಬ್ರು ಸಂಗೀತರಚನೆಗಳ ಸೃಜನಶೀಲತೆ ಮತ್ತು ಗುಣಮಟ್ಟಕ್ಕೆ ಸೊಲೊಮೋನನ ಪರಮಗೀತ ಒಂದು ದೃಷ್ಟಾಂತ. ಅದು ಸಂಗೀತ ನಾಟಕದ ಲಿಬ್ರೆಟೊ ಅಥವಾ ಪಾಠದಂತಿರುವ ಸಂಗೀತ ಕಥೆಯಾಗಿದೆ. ಹೀಬ್ರು ಗ್ರಂಥಪಾಠದಲ್ಲಿ ಆ ಗೀತವನ್ನು “ಗೀತಾಧಿಗೀತ,” ಅಂದರೆ, ಪರಮೋತ್ಕೃಷ್ಟ ಗೀತ ಎಂದು ಕರೆಯಲಾಗಿದೆ. ಪುರಾತನ ಇಬ್ರಿಯರಿಗೆ, ಹಾಡುವಿಕೆಯು ಆರಾಧನೆಯ ಒಂದು ಸಂಯೋಜಿತ ಭಾಗವಾಗಿತ್ತು. ಮತ್ತು ಯೆಹೋವನ ಅವರ ಸ್ತುತಿಯಲ್ಲಿ ಇತ್ಯಾತ್ಮಕ ಭಾವಪೂರ್ಣ ಅಭಿವ್ಯಕ್ತಿಯನ್ನು ಅದು ಅನುಮತಿಸಿತು.
ಒಂದನೆಯ ಶತಮಾನದ ಕ್ರೈಸ್ತರ ಹಾಡುವಿಕೆ
ಸಂಗೀತವು ಆದಿಕ್ರೈಸ್ತರ ಮಧ್ಯೆ ಆರಾಧನೆಯ ನಿಯತಕ್ರಮದ ಭಾಗವಾಗಿ ಮುಂದುವರಿಯಿತು. ಪ್ರೇರಿತ ಕೀರ್ತನೆಗಳಿಗೆ ಹೆಚ್ಚುವರಿಯಾಗಿ, ಅವರು ಆರಾಧನೆಗಾಗಿ ತಮ್ಮ ಸ್ವಂತ ಸಂಗೀತ ಮತ್ತು ಭಾವಗೀತೆಗಳನ್ನು ರಚಿಸಿದರೆಂದು ಕಾಣುತ್ತದೆ. ಹೀಗೆ ಅವು ಕ್ರೈಸ್ತ ಹಾಡುಗಳ ಆಧುನಿಕ ದಿನದ ರಚನೆಗೆ ಪೂರ್ವನಿದರ್ಶನವನ್ನಿಟ್ಟವು. (ಎಫೆಸ 5:19) ವಾಲ್ಡೊ ಸೆಲ್ಡನ್ ಪ್ರ್ಯಾಟ್ ಎಂಬವರಿಂದ ಬರೆಯಲ್ಪಟ್ಟ, ಸಂಗೀತದ ಇತಿಹಾಸ (ಇಂಗ್ಲಿಷ್) ಎಂಬ ಪುಸ್ತಕವು ವಿವರಿಸುವುದು: “ಸಾರ್ವಜನಿಕ ಮತ್ತು ಖಾಸಗಿ ಆರಾಧನೆಯಲ್ಲಿ ಹಾಡುವಿಕೆಯು ಆದಿಕ್ರೈಸ್ತರಿಗೆ ಸಾಮಾನ್ಯ ಪದ್ಧತಿಯಾಗಿತ್ತು. ಯೆಹೂದಿ ಮತಾಂತರಿತರಿಗಾದರೊ, ಇದು ಸಿನಗಾಗ್ ಪದ್ಧತಿಯ ಮುಂದುವರಿಕೆಯಾಗಿತ್ತು. . . ಹೀಬ್ರು ಕೀರ್ತನೆಗಳಿಗೆ ಹೆಚ್ಚುವರಿಯಾಗಿ . . . , ಈ ಹೊಸ ನಂಬಿಕೆಯು ಸತತವಾಗಿ ಹೊಸ ಸ್ತೋತ್ರಗೀತಗಳನ್ನು, ಪ್ರಥಮವಾಗಿ ಆಡಂಬರ ಶೈಲಿಯ ಸಂಗೀತ (ರ್ಯಾಪ್ಸೊಡಿ)ದ ರೂಪದಲ್ಲಿ, ಉಂಟುಮಾಡುವ ಪ್ರವೃತ್ತಿಯುಳ್ಳದ್ದಾಗಿತ್ತು.”a
ಹಾಡುವ ಮೌಲ್ಯವನ್ನು ಎತ್ತಿಹೇಳುತ್ತ, ಕರ್ತನ ಸಂಧ್ಯಾ ಭೋಜನವನ್ನು ಯೇಸು ಸ್ಥಾಪಿಸಿದಾಗ, ಅವನೂ ಅಪೊಸ್ತಲರೂ ಪ್ರಾಯಶಃ ಹ್ಯಾಲೆಲ್ ಗೀತಗಳನ್ನು ಹಾಡಿದರು. (ಮತ್ತಾಯ 26:26-30) ಇವು ಕೀರ್ತನೆಗಳಲ್ಲಿ ದಾಖಲೆಯಾಗಿರುವಂತಹ ಯೆಹೋವನ ಸ್ತುತಿಗೀತಗಳಾಗಿದ್ದು, ಪಸ್ಕಾಚರಣೆಯ ಸಂಬಂಧದಲ್ಲಿ ಹಾಡಲ್ಪಟ್ಟವು.—ಕೀರ್ತನೆ 113-118.
ಮಿಥ್ಯಾರಾಧನೆಯ ಪ್ರಭಾವ
ಅಂಧಕಾರ ಯುಗಗಳೆಂಬವುಗಳು ಬರುವುದರೊಳಗೆ ಧಾರ್ಮಿಕ ಸಂಗೀತವು ಶೋಕಗೀತ ಪಠನವಾಗಿ ಪರಿಣಮಿಸಿತ್ತು. ಸುಮಾರು ಸಾ.ಶ. 200ರಲ್ಲಿ, ಅಲೆಗ್ಸಾಂಡ್ರಿಯದ ಕ್ಲೆಮೆಂಟನು ಹೇಳಿದ್ದು: “ನಮಗೆ ಒಂದು ಉಪಕರಣ ಅಗತ್ಯ: ಕಿನ್ನರಿ, ನಗಾರಿ, ವಾದ್ಯ ಅಥವಾ ತುತೂರಿಗಳಲ್ಲ; ಆರಾಧನೆಯ ಶಾಂತಿಯುತ ಮಾತು.” ಚರ್ಚ್ ಸಂಗೀತವನ್ನು ಬಾಯಿಗೀತಕ್ಕೆ ಸೀಮಿತವಾಗಿಸಿ, ನಿರ್ಬಂಧಗಳನ್ನು ಹಾಕಲಾಯಿತು. ಈ ಶೈಲಿಯು ಗೀತ ಪಠನ ಅಥವಾ ಸರಳಗೀತವಾಗಿ ಜ್ಞಾತವಾಯಿತು. “ಕಾನ್ಸೆಂಟಿನೋಪಲನ್ನು ಕಟ್ಟಿದ ಬಳಿಕ ನಲ್ವತ್ತಕ್ಕೂ ಕಡಮೆ ವರುಷಗಳೊಳಗೆ, ಲವೊದಿಕ್ಯ ಮಂಡಲಿ (ಕ್ರಿ.ಶ. 367)ಯು, ಪೂಜಾವಿಧಾನದಲ್ಲಿ ಉಪಕರಣಗಳ ಮತ್ತು ಸಭೆಗಳ—ಎರಡರ—ಭಾಗವಹಿಸುವಿಕೆಯನ್ನು ನಿಷೇಧಿಸಿತು. ಸಂಪ್ರದಾಯಬದ್ಧ ಸಂಗೀತವು ಶುದ್ಧ ಬಾಯಿಗೀತವಾಯಿತು” ಎಂದು, ನಮ್ಮ ಸಂಗೀತ ಪರಂಪರೆ (ಇಂಗ್ಲಿಷ್, ಓರೆ ಅಕ್ಷರಗಳು ನಮ್ಮವು.) ಎಂಬ ಪುಸ್ತಕವು ಹೇಳುತ್ತದೆ. ಈ ನಿರ್ಬಂಧಗಳಿಗೆ ಆದಿ ಕ್ರೈಸ್ತತ್ವದಲ್ಲಿ ಯಾವ ಆಧಾರವೂ ಇರಲಿಲ್ಲ.
ಅಂಧಕಾರ ಯುಗಗಳಲ್ಲಿ, ಬೈಬಲು ಜನಸಾಮಾನ್ಯರಿಗೆ ಅಜ್ಞಾತ ಪುಸ್ತಕವಾಗಿತ್ತು. ಬೈಬಲನ್ನು ಪಡೆಯಲು ಅಥವಾ ಓದಲು ಧೈರ್ಯ ಮಾಡಿದ ಕ್ರೈಸ್ತರು ಹಿಂಸಿಸಲ್ಪಟ್ಟರು, ಕೊಲ್ಲಲ್ಪಟ್ಟರು ಕೂಡ. ಆದುದರಿಂದ ಆ ಅಂಧಕಾರದ ಅವಧಿಯಲ್ಲಿ ದೇವರ ಸ್ತುತಿಯನ್ನು ಹಾಡುವ ಪದ್ಧತಿಯು ಹೆಚ್ಚಾಗಿ ಕಾಣದೆ ಹೋದದ್ದರಲ್ಲಿ ಆಶ್ಚರ್ಯವಿಲ್ಲ. ಎಷ್ಟೆಂದರೂ, ಸಾಮಾನ್ಯ ಜನರಿಗೆ ಶಾಸ್ತ್ರದೊಳಕ್ಕೆ ಪ್ರವೇಶ ದೊರೆಯದಿದ್ದರೆ, ಇಡೀ ಬೈಬಲಿನ ಹತ್ತನೆಯ ಒಂದಂಶವು ಹಾಡೆಂದು ಅವರಿಗೆ ತಿಳಿಯುವುದಾದರೂ ಹೇಗೆ? ದೇವರು ತನ್ನ ಆರಾಧಕರಿಗೆ ಅವರು, “ಯೆಹೋವನಿಗೆ ನೂತನಕೀರ್ತನೆಯನ್ನು ಹಾಡಿರಿ; ಭಕ್ತಸಭೆಯಲ್ಲಿ ಆತನನ್ನು ಸ್ತುತಿಸಿರಿ,” ಎಂದು ಆಜ್ಞಾಪಿಸಿದನೆಂಬುದನ್ನು ಅವರಿಗೆ ತಿಳಿಸುವವರಾದರೂ ಯಾರು?—ಕೀರ್ತನೆ 149:1.
ಆರಾಧನೆಯಲ್ಲಿ ಸಂಗೀತವನ್ನು ಅದರ ತಕ್ಕ ಸ್ಥಾನಕ್ಕೆ ಭರ್ತಿ ಮಾಡುವುದು
ಆರಾಧನೆಯಲ್ಲಿ ಸಂಗೀತ ಮತ್ತು ಹಾಡುವಿಕೆಯನ್ನು ಅವುಗಳ ಸೂಕ್ತವಾದ ಸ್ಥಾನಕ್ಕೆ ಭರ್ತಿಮಾಡಲು ಯೆಹೋವನ ಸಂಸ್ಥೆಯು ಬಹಳಷ್ಟನ್ನು ಮಾಡಿದೆ. ಉದಾಹರಣೆಗೆ, ಸೈಅನ್ಸ್ ವಾಚ್ ಟವರ್ನ ಫೆಬ್ರವರಿ 1, 1896ರ ಸಂಚಿಕೆಯಲ್ಲಿ ಕೇವಲ ಹಾಡುಗಳಿದ್ದವು. ಅದರ ಶಿರೋನಾಮವು “ಚೀಯೋನಿನ ಗೆಲವಿನ ಪ್ರಾತಃಕಾಲದ ಹಾಡುಗಳು” (ಇಂಗ್ಲಿಷ್) ಎಂದಾಗಿತ್ತು.
1938ರಲ್ಲಿ, ಸಭಾಕೂಟಗಳಲ್ಲಿ ಹಾಡುವುದು ಹೆಚ್ಚಾಗಿ ವರ್ಜಿಸಲ್ಪಟ್ಟಿತ್ತು. ಆದರೂ ಶೀಘ್ರವೇ, ಅಪೊಸ್ತಲಿಕ ಮಾದರಿ ಮತ್ತು ನಿರ್ದೇಶನವನ್ನು ಅನುಸರಿಸುವುದರಲ್ಲಿರುವ ವಿವೇಕವು ಜಯಗಳಿಸಿತು. 1944ರ ಜಿಲ್ಲಾ ಅಧಿವೇಶನದಲ್ಲಿ, ಎಫ್. ಡಬ್ಲ್ಯೂ. ಫ್ರಾನ್ಸ್, “ರಾಜ್ಯ ಸೇವಾ ಗೀತ” ಎಂಬ ಭಾಷಣವನ್ನು ಕೊಟ್ಟರು. ಮನುಷ್ಯನ ಸೃಷ್ಟಿಗೆ ದೀರ್ಘಕಾಲ ಮೊದಲೇ ದೇವರ ಸ್ವರ್ಗೀಯ ಜೀವಿಗಳು ಯೆಹೋವನಿಗೆ ಸ್ತುತಿಗೀತಗಳನ್ನು ಹಾಡಿದರೆಂದು ತೋರಿಸಿ ಅವರು ಹೇಳಿದ್ದು: “ತನ್ನ ಭೂಸೇವಕರು ಅಕ್ಷರಾರ್ಥದ ಹಾಡಿನಲ್ಲಿ ತಮ್ಮ ಧ್ವನಿಗಳನ್ನೆತ್ತುವುದು ಯೋಗ್ಯವಾದದ್ದೂ ದೇವರಿಗೆ ಮೆಚ್ಚುಗೆಯಾದದ್ದೂ ಆಗಿದೆ.” ಅವರು ಆರಾಧನೆಯಲ್ಲಿ ಹಾಡುವುದರ ಪರವಾಗಿ ವಾದವನ್ನು ವಿಕಸಿಸಿದ ಬಳಿಕ, ಸಾಪ್ತಾಹಿಕ ಸೇವಾ ಕೂಟಗಳಲ್ಲಿ ಉಪಯೋಗಿಸುವರೆ, ರಾಜ್ಯ ಸೇವೆಯ ಗೀತ ಪುಸ್ತಕ (ಇಂಗ್ಲಿಷ್)ವನ್ನು ಬಿಡುಗಡೆಮಾಡಿದರು.b ಬಳಿಕ 1944ರ ಡಿಸೆಂಬರ್ ತಿಳಿಸುವಿಕೆ (ಈಗ ನಮ್ಮ ರಾಜ್ಯದ ಸೇವೆ ಎಂದು ಕರೆಯಲ್ಪಡುತ್ತದೆ), ಇತರ ಕೂಟಗಳೂ ಆರಂಭದ ಮತ್ತು ಮುಕ್ತಾಯದ ಗೀತಗಳನ್ನೊಳಗೊಳ್ಳುವುವು ಎಂದು ಪ್ರಕಟಿಸಿತು. ಹಾಡುವಿಕೆಯು ಪುನಃ ಯೆಹೋವನ ಆರಾಧನೆಯ ಭಾಗವಾಗಿ ಪರಿಣಮಿಸಿತು.
‘ಯೆಹೋವನಿಗೆ ನಮ್ಮ ಹೃದಯಗಳಲ್ಲಿ ಹಾಡುವುದು’
ಹೃತ್ಪೂರ್ವಕವಾದ ಹಾಡುವಿಕೆಯ ಮೌಲ್ಯವು ಅನೇಕ ವರ್ಷಗಳ ವಿರೋಧ ಮತ್ತು ಹಿಂಸೆಯನ್ನು ಅನುಭವಿಸಿರುವ ಪೂರ್ವ ಯೂರೋಪ್ ಮತ್ತು ಆಫ್ರಿಕದ ನಮ್ಮ ಸಹೋದರರಿಂದ ಚಿತ್ರಿಸಲ್ಪಡುತ್ತದೆ. ಲೋಟಾರ್ ವಾಗ್ನರ್ ಏಳು ವರ್ಷಗಳನ್ನು ಏಕಾಂತ ಸೆರೆಯಲ್ಲಿ ಕಳೆದರು. ಅವರು ಹೇಗೆ ಸಹಿಸಿಕೊಂಡರು? ಅವರು ಹೇಳುವುದು: “ಅನೇಕ ವಾರಗಳನ್ನು ನಾನು ರಾಜ್ಯ ಸಂಗೀತಗಳ ಸ್ಮರಣೆಯನ್ನು ಭರ್ತಿಮಾಡುವುದರಲ್ಲಿ ಕೇಂದ್ರೀಕರಿಸಿದೆ. ನನಗೆ ಅದರ ಮಾತುಗಳು ಚೆನ್ನಾಗಿ ಜ್ಞಾಪಕಕ್ಕೆ ಬರದೆ ಹೋದಾಗ, ನಾನೇ ಒಂದೆರಡು ಚರಣಗಳನ್ನು ಕಟ್ಟಿದೆ. . . . ನಮ್ಮ ರಾಜ್ಯ ಸಂಗೀತಗಳಲ್ಲಿ ಎಷ್ಟು ಸಮೃದ್ಧಿಯಾದ ಪ್ರೋತ್ಸಾಹಕರ ಹಾಗೂ ಭಕ್ತಿವೃದ್ಧಿಕರ ಯೋಚನೆಗಳು ಅಡಕವಾಗಿವೆ!”—ಯೆಹೋವನ ಸಾಕ್ಷಿಗಳ 1974ರ ವರ್ಷಪುಸ್ತಕ, ಪುಟಗಳು 226-8.
ತನ್ನ ನಂಬಿಗಸ್ತಿಕೆಯ ನಿಲುವಿನ ಕಾರಣಕ್ಕಾಗಿ ಏಕಾಂತ ಸೆರೆಯನ್ನು ಅನುಭವಿಸಿದ ಐದು ವರುಷಗಳಲ್ಲಿ, ಹ್ಯಾರಲ್ಡ್ ಕಿಂಗ್ ಯೆಹೋವನ ಸ್ತುತಿಗಾಗಿ ಹಾಡುಗಳನ್ನು ರಚಿಸಿ, ಹಾಡುವುದರಲ್ಲಿ ಸಾಂತ್ವನವನ್ನು ಕಂಡುಕೊಂಡರು. ಅವರ ರಚನೆಗಳಲ್ಲಿ ಅನೇಕ ಕೃತಿಗಳನ್ನು ಈಗ ಯೆಹೋವನ ಸಾಕ್ಷಿಗಳು ತಮ್ಮ ಆರಾಧನೆಯಲ್ಲಿ ಉಪಯೋಗಿಸುತ್ತಾರೆ. ಹಾಡುವಿಕೆಗೆ ಸಂಬಂಧಿಸಿದ ಆನಂದವು ಪೋಷಕ ವಿಷಯವಾಗಿದೆ. ಆದರೆ ದೇವರಿಗೆ ಸ್ತುತಿಯನ್ನು ಹಾಡುವುದರ ಮೌಲ್ಯವನ್ನು ನಮಗೆ ದೃಢೀಕರಿಸಲು ಹಿಂಸೆಯು ಬರಲೇಬೇಕೆಂದಿಲ್ಲ.
ಯೆಹೋವನ ಜನರೆಲ್ಲರೂ ಹಾಡಿನಿಂದ ಆನಂದವನ್ನು ಕಂಡುಕೊಳ್ಳಬಲ್ಲರು. ಬಾಯಿಮಾತಿನಿಂದ ನಮ್ಮನ್ನು ವ್ಯಕ್ತಪಡಿಸಿಕೊಳ್ಳುವ ವಿಷಯದಲ್ಲಿ ನಮಗೆ ತುಸು ಹಿಂಜರಿಯುವ ಪ್ರವೃತ್ತಿಗಳು ಇರಬಹುದಾದರೂ, ನಾವು ಗೀತದಲ್ಲಿ ಧ್ವನಿಯೆತ್ತುವಾಗ ಯೆಹೋವನ ಕಡೆಗಿರುವ ನಮ್ಮ ಅನಿಸಿಕೆಗಳು ಮುಕ್ತವಾಗಿರಬಲ್ಲವು. ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದ ಹೇಳಿದಾಗ, ಸ್ತುತಿಗಳನ್ನು ಹಾಡುವುದರಲ್ಲಿ ನಾವು ಹೇಗೆ ಆನಂದವನ್ನು ಕಂಡುಕೊಳ್ಳಬಲ್ಲೆವೆಂಬುದನ್ನು ಸೂಚಿಸಿದನು: “ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ” ಇರ್ರಿ. (ಎಫೆಸ 5:19) ನಮ್ಮ ಹೃದಯಗಳು ಆತ್ಮಿಕ ವಿಷಯಗಳಿಂದ ತುಂಬಿರುವಾಗ, ಹಾಡಿನಲ್ಲಿ ಪ್ರಬಲವಾದ ಅಭಿವ್ಯಕ್ತಿಯನ್ನು ನಾವು ಕಂಡುಕೊಳ್ಳುತ್ತೇವೆ. ಹೀಗೆ, ಸರಿಯಾದ ಹೃದಯ ಮನೋಭಾವವು ಉತ್ತಮಗೊಳ್ಳುವ ಹಾಡುವಿಕೆಗೆ ಕೀಲಿ ಕೈ.
ಯೆಹೋವನೊಂದಿಗಿರುವ ಸುಸಂಬಂಧವು ಆನಂದಕರವಾದ ಆತ್ಮಕ್ಕೆ ನೆರವನ್ನು ನೀಡಿ, ನಾವು ಮಾತನಾಡುವಂತೆ, ಹಾಡುವಂತೆ ಮತ್ತು ಯೆಹೋವನ ಸ್ತುತಿಯನ್ನು ಆರ್ಭಟಿಸುವಂತೆ ಪ್ರಚೋದಿಸುತ್ತದೆ. (ಕೀರ್ತನೆ 146:2, 5) ನಾವು ಆನಂದಿಸುವ ವಿಷಯಗಳ ಕುರಿತು ಹೃತ್ಪೂರ್ವಕವಾಗಿ ಹಾಡುತ್ತೇವೆ. ಮತ್ತು ನಾವು ಹಾಡನ್ನು ಅಥವಾ ಆ ಹಾಡಿನ ರಸಭಾವವನ್ನು ಇಷ್ಟಪಡುವುದಾದರೆ, ನಾವು ಅದನ್ನು ನಿಜ ಭಾವನೆಯಿಂದ ಹಾಡುವುದು ಹೆಚ್ಚು ಸಂಭವನೀಯ.
ಭಾವನೆಯಿಂದ ಹಾಡುವುದಕ್ಕೆ ಒಬ್ಬನು ಗಟ್ಟಿಯಾಗಿ ಹಾಡಬೇಕೆಂದಿಲ್ಲ. ಗಟ್ಟಿ ಹಾಡುವಿಕೆಯು ಉತ್ತಮ ಹಾಡುವಿಕೆಗೆ ಸಮಾನಾರ್ಥಕವಾಗಬೇಕೆಂದಿಲ್ಲ; ಕೇಳಿಸದಿರುವ ಹಾಡುವಿಕೆಯೂ ಹಾಗೆಯೇ. ಸ್ವಾಭಾವಿಕ ಅನುರಣನವಿರುವ ಕೆಲವು ಸ್ವರಗಳು, ಹಾಡುವಿಕೆಯು ಮೃದುವಾಗಿರುವಾಗಲೂ ಎದ್ದುಕೇಳಿಬರಬಹುದು. ಒಂದು ಗುಂಪಿನೊಂದಿಗೆ ಹಾಡುವಾಗ ಉತ್ತಮವಾಗಿ ಹಾಡುವ ಪಂಥಾಹ್ವಾನದ ಅಂಶವು, ಮೇಳೈಸಲು ಕಲಿಯುವುದೇ ಆಗಿದೆ. ನೀವು ಸ್ವರಮೇಳನದಲ್ಲಿ ಹಾಡುತ್ತಿರಲಿ, ಶ್ರುತಿಗೂಡಿಸಿ ಹಾಡುತ್ತಿರಲಿ, ನಿಮ್ಮ ಸಮೀಪವಿರುವವರಿಗೆ ಸಮಾನವಾದ ಧ್ವನಿಯಲ್ಲಿ ಹಾಡುವುದು ಹಿತಕರವಾದ ಹಾಗೂ ಏಕೀಕರಿಸಿದ ಹಾಡಿನಲ್ಲಿ ಪರಿಣಮಿಸುವುದು. ಕ್ರೈಸ್ತ ಮಿತತ್ವ ಹಾಗೂ ಆಲಿಸುವ ಕಿವಿಯು, ಒಬ್ಬನು ಕಟ್ಟಾಸಕ್ತಿಯಿಂದ ಹಾಡಿದರೂ ತನ್ನ ಸ್ವರವು ಇತರ ಸ್ವರಗಳನ್ನು ಅದುಮಿಬಿಡದಂತಹ ಸಮತೆಯನ್ನು ಪಡೆಯುವಂತೆ ಸಹಾಯಮಾಡುತ್ತದೆ. ಆದರೂ, ಕೌಶಲದಿಂದ ಹಾಡುವವರನ್ನು ಅಥವಾ ವಿಶೇಷವಾಗಿ ಉತ್ತಮವಾದ ಸ್ವರವಿರುವವರನ್ನು, ಅವರು ಗಟ್ಟಿಯಾಗಿ ಹಾಡದಂತೆ ಎಂದಿಗೂ ನಿರುತ್ತೇಜನಗೊಳಿಸಬಾರದು. ಒಂದು ಸೊಗಸಾದ ಸ್ವರವು, ಯೆಹೋವನಿಗೆ ಸ್ತುತಿಗಳನ್ನು ಹಾಡುವ ಸಭೆಗೆ ಬಲವಾದ ಬೆಂಬಲವನ್ನು ಒದಗಿಸಬಲ್ಲದು.
ನಮ್ಮ ಕೂಟಗಳಲ್ಲಿ ಹಾಡುವುದು, ರಾಗವಿನ್ಯಾಸಗಳಿಗೆ ಸ್ವರಮೇಳನದ (ಹಾರ್ಮನಿ) ಭಾಗಗಳನ್ನು ಕೂಡಿಸಿ ಹಾಡುವುದಕ್ಕೂ ತಕ್ಕದಾದ ಹಿನ್ನೆಲೆಯನ್ನು ಒದಗಿಸುತ್ತದೆ. ಸ್ವರಮೇಳನಾಭಿರುಚಿಯಿರುವವರು ಅಥವಾ ಗೀತ ಪುಸ್ತಕದಲ್ಲಿರುವ ಸ್ವರಮೇಳನದ ಚಿಹ್ನೆಗಳನ್ನು ಓದಸಾಧ್ಯವಿದ್ದು, ಹಾಡಸಾಧ್ಯವಿರುವವರು, ಹಾಡುವಿಕೆಯೊಂದಿಗೆ ಮೇಳೈಸಿ, ಸಂಗೀತ ಸೌಂದರ್ಯಕ್ಕೆ ಹೆಚ್ಚನ್ನು ಕೂಡಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ.c
‘ನಾನು ಶ್ರುತಿಯನ್ನು ಸರಿಯಾಗಿ ಹಾಡಲಾರೆ’ ಅಥವಾ ‘ನನ್ನ ಸ್ವರ ಭಯಂಕರ; ಉಚ್ಚಸ್ವರ ಹಾಡುವಾಗ ಒಡೆಯುತ್ತದೆ,’ ಎಂದು ಕೆಲವರು ವಾದಿಸಬಹುದು. ಆದಕಾರಣ, ಅವರು ರಾಜ್ಯ ಸಭಾಗೃಹದಲ್ಲಿ ಹಾಡುವಾಗಲೂ ಹೆದರುತ್ತಾರೆ. ಸತ್ಯ ವಿಷಯವೇನಂದರೆ, ಯೆಹೋವನ ಸ್ತುತಿಗಾಗಿ ಎತ್ತಲಾದ ಯಾವುದೇ ಸ್ವರವು, ಆತನ ದೃಷ್ಟಿಕೋನದಲ್ಲಿ “ಭಯಂಕರ”ವಾಗಿರುವುದಿಲ್ಲ. ಅಭ್ಯಾಸದಿಂದಾಗಿ ಮತ್ತು ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಕೊಡಲ್ಪಡುವ ಸಹಾಯಕರವಾದ ಸೂಚನೆಗಳನ್ನು ಅನುಸರಿಸುವುದರಿಂದಾಗಿ ಒಬ್ಬನು ಮಾತಾಡುವ ಸ್ವರವನ್ನು ಉತ್ತಮಗೊಳಿಸಸಾಧ್ಯವಿರುವಂತೆಯೇ, ಒಬ್ಬನ ಹಾಡುವಿಕೆಯನ್ನೂ ಉತ್ತಮಗೊಳಿಸಸಾಧ್ಯವಿದೆ. ಚಿಕ್ಕಪುಟ್ಟ ಕೆಲಸಗಳನ್ನು ಮಾಡುವಾಗ, ಕೇವಲ ತುಟಿಮುಚ್ಚಿ ಹಾಡಿಯೇ ಕೆಲವರು ತಮ್ಮ ಸ್ವರಗಳನ್ನು ಉತ್ತಮಗೊಳಿಸಿಕೊಂಡಿದ್ದಾರೆ. ತುಟಿಮುಚ್ಚಿ ಹಾಡುವುದು ಸ್ವರದ ನಾದವನ್ನು ಸರಾಗವಾಗಿಸುತ್ತದೆ. ಮತ್ತು ತಕ್ಕ ಸಮಯಗಳಲ್ಲಿ, ನಾವು ಒಬ್ಬರಾಗಿರುವಾಗ ಅಥವಾ ಕೆಲಸದಲ್ಲಿ ಇತರರಿಗೆ ಶಾಂತಿಭಂಗಮಾಡದಿರುವಾಗ, ಕಿಂಗ್ಡಮ್ ಮೆಲಡೀಸ್ಗಳನ್ನು ಹಾಡುವುದು ನಮ್ಮ ಸ್ವರಕ್ಕೆ ಉತ್ಕೃಷ್ಟ ವ್ಯಾಯಾಮವಾಗಿದೆ ಮತ್ತು ಅದು ಒಬ್ಬನನ್ನು ಆನಂದಕರವಾದ, ಸಡಿಲ ಮನೋಭಾವದಲ್ಲಿಡುವ ಸಾಧನವೂ ಆಗಿರುತ್ತದೆ.
ಒಟ್ಟುಗೂಡುವಿಕೆಗಳಲ್ಲಿ ಕೆಲವು ರಾಜ್ಯ ಗೀತಗಳನ್ನು ಹಾಡುವಂತೆಯೂ ಪ್ರೋತ್ಸಾಹಿಸಸಾಧ್ಯವಿದೆ. ಇಂತಹ ಹಾಡುವಿಕೆ, ಗಿಟಾರ್ ಅಥವಾ ಪಿಯಾನೊದಂತಹ ಒಂದು ಉಪಕರಣವನ್ನು ಅಥವಾ ಸೊಸೈಟಿಯ ಪಿಯಾನೊ ರೆಕಾರ್ಡಿಂಗನ್ನು ಜೊತೆಗೂಡುವುದಾದರೆ, ಅದು ನಮ್ಮ ನೆರವಿಗಳಿಗೆ ಒಂದು ಆತ್ಮಿಕ ನಾದವನ್ನು ಕೊಡುತ್ತದೆ. ಹಾಡುಗಳನ್ನು ಕಲಿಯಲು ಮತ್ತು ಅವುಗಳನ್ನು ಸಭಾಕೂಟಗಳಲ್ಲಿ ಉತ್ತಮವಾಗಿ ಹಾಡಲು ಅದು ಸಹಾಯವನ್ನೂ ಕೊಡುತ್ತದೆ.
ಕೂಟಗಳಲ್ಲಿ ಸಭೆಗಳು, ಹಾಡುವ ಹುಮ್ಮಸ್ಸಿಗಿಳಿಯುವಂತೆ, ಸೊಸೈಟಿಯು ರೆಕಾರ್ಡ್ ಮಾಡಿದ ಸಂಗೀತ ಹಿಮ್ಮೇಳವನ್ನು ಒದಗಿಸಿದೆ. ಅವು ನುಡಿಸಲ್ಪಡುವಾಗ, ಧ್ವನಿ ಸಲಕರಣೆಯನ್ನು ನೋಡಿಕೊಳ್ಳುವವನು ಧ್ವನಿಯ ಏರುತಗ್ಗಿನ ವಿಷಯದಲ್ಲಿ ಲಕ್ಷ್ಯವಹಿಸಬೇಕು. ಅದರ ಧ್ವನಿ ಸಾಕಷ್ಟಿಲ್ಲದಿದ್ದರೆ, ಗಟ್ಟಿಯಾಗಿ ಹಾಡುವ ವಿಷಯದಲ್ಲಿ ಸಭೆ ಗಾಬರಿಗೊಳ್ಳಬಹುದು. ಧ್ವನಿವರ್ಧಕವನ್ನು ನಿಯಂತ್ರಿಸುವ ಸಹೋದರನು ಸಭೆಯೊಂದಿಗೆ ಹಾಡುವಾಗ, ಸಂಗೀತವು ಸಹಾಯಕ ಮಾರ್ಗದರ್ಶನವನ್ನು ಕೊಡುತ್ತದೊ ಇಲ್ಲವೊ ಎಂದು ನಿರ್ಧರಿಸಶಕ್ತನಾಗುವನು.
ಯೆಹೋವನಿಗೆ ರಾಗ ಹಾಡಿರಿ
ನಮ್ಮ ಸೃಷ್ಟಿಕರ್ತನ ಕಡೆಗೆ ನಮಗಿರುವ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶವನ್ನು ಹಾಡುವಿಕೆಯು ನಮಗೆ ಕೊಡುತ್ತದೆ. (ಕೀರ್ತನೆ 149:1, 3) ಇದೊಂದು ಭಾವಾವೇಶದ ಸ್ಫೋಟನೆಯಾಗಿರುವುದಿಲ್ಲ, ಬದಲಿಗೆ ನಮ್ಮ ಸ್ತುತಿಯ ನಿಯಂತ್ರಿತ, ನ್ಯಾಯಸಮ್ಮತವಾದ ಮತ್ತು ಆನಂದಕರ ಅಭಿವ್ಯಕ್ತಿಯಾಗಿದೆ. ಸಭಾ ಹಾಡುವಿಕೆಯಲ್ಲಿ ನಮ್ಮ ಹೃದಯವನ್ನು ತೋಡಿಕೊಳ್ಳುತ್ತಾ ಹಾಡುವುದು, ನಮ್ಮನ್ನು ಮುಂಬರುವ ಕಾರ್ಯಕ್ರಮಕ್ಕೆ ತಕ್ಕ ಮನೋವೃತ್ತಿಯುಳ್ಳವರಾಗಿರುವಂತೆ ಮಾಡಿ, ಯೆಹೋವನ ಆರಾಧನೆಯಲ್ಲಿ ಹೆಚ್ಚಿನ ಪಾಲನ್ನು ವಹಿಸಿಕೊಳ್ಳುವಂತೆ ಹುರಿದುಂಬಿಸಸಾಧ್ಯವಿದೆ. ಹಾಡುವಿಕೆಗೆ ಭಾವಾತ್ಮಕ ಪರಿಣಾಮವಿದೆಯಾದರೂ, ಆ ಮಾತುಗಳು ನಮ್ಮನ್ನು ಉಪದೇಶಿಸಲೂ ಬಲ್ಲವು. ಹೀಗೆ ಶ್ರುತಿಗೂಡಿಸಿ ಮತ್ತು ಸ್ವರಮೇಳೈಸಿ ನಮ್ಮನ್ನು ವ್ಯಕ್ತಪಡಿಸಿಕೊಳ್ಳುವ ಮೂಲಕ, ನಾವು ಸಭೆಗೂಡಿದ ಜನರಾಗಿ ಒಟ್ಟುಗೂಡಿ ಕಲಿಯುವಂತೆ ನಮ್ರತೆಯಿಂದಲೂ ದೈನ್ಯದಿಂದಲೂ ನಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳುತ್ತೇವೆ.—ಹೋಲಿಸಿ ಕೀರ್ತನೆ 10:17.
ಹಾಡುವುದು ಯಾವಾಗಲೂ ಯೆಹೋವನ ಆರಾಧನೆಯ ಭಾಗವಾಗಿ ಇರುವುದು. ಆದಕಾರಣ ಕೀರ್ತನೆಗಾರನ ರಸಭಾವದಲ್ಲಿ ಸದಾ ಭಾಗಿಗಳಾಗುವ ಪ್ರತೀಕ್ಷೆ ನಮಗಿದೆ: “ಪ್ರಾಣವಿರುವ ವರೆಗೂ ಯೆಹೋವನನ್ನು ಸ್ತುತಿಸುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.”—ಕೀರ್ತನೆ 146:2.
[ಅಧ್ಯಯನ ಪ್ರಶ್ನೆಗಳು]
a ರ್ಯಾಪ್ಸೊಡಿಯೆಂದರೆ ಅದರ ವಿವಿಧ ವಿಭಾಗಗಳಲ್ಲಿ ಸ್ವತಂತ್ರ ಚಿತ್ತವೃತ್ತಿಯ ಲಕ್ಷಣವಿರುವ ಒಂದು ಸಂಗೀತ ಕೃತಿ. ಈ ರ್ಯಾಪ್ಸೊಡಿಗಳು ಅನೇಕ ವೇಳೆ ವೀರೋಚಿತ ಘಟನೆಗಳನ್ನು ಅಥವಾ ವೀರರನ್ನು ಕೊಂಡಾಡಿದವು.
b ಒಂದನೆಯ ಕೊರಿಂಥ 14:15, ಒಂದನೆಯ ಶತಮಾನದ ಕ್ರೈಸ್ತ ಆರಾಧನೆಯಲ್ಲಿ ಹಾಡುವಿಕೆಯು ಕ್ರಮದ ಅಂಶವಾಗಿತ್ತೆಂದು ಸೂಚಿಸುತ್ತದೆಂದು ತೋರುತ್ತದೆ.
c ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಇಂಗ್ಲಿಷ್) ಎಂಬ ನಮ್ಮ ಪ್ರಚಲಿತ ಗೀತ ಪುಸ್ತಕದಲ್ಲಿರುವ ಕೆಲವು ಹಾಡುಗಳು, ಸ್ವರಮೇಳನ ಭಾಗಗಳನ್ನು ಹಾಡಲು ಆನಂದಿಸುವವರ ಪ್ರಯೋಜನಕ್ಕಾಗಿ ನಾಲ್ಕು ಭಾಗಗಳ ಸ್ವರಮೇಳನ ಶೈಲಿಯನ್ನು ಇಟ್ಟುಕೊಂಡಿವೆ. ಆದರೂ, ಅನೇಕ ಹಾಡುಗಳನ್ನು ಪಿಯಾನೊ ಪಕ್ಕವಾದ್ಯದೊಂದಿಗೆ ನುಡಿಸಲಿಕ್ಕಾಗುವಂತೆ ಏರ್ಪಡಿಸಲಾಗಿದ್ದು, ಸ್ವರಗಳ ಅಂತಾರಾಷ್ಟ್ರೀಯ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಂತಹ ಒಂದು ಸಂಗೀತದ ರಚನೆಯು ಕೊಡಲ್ಪಟ್ಟಿದೆ. ಕಟ್ಟುನಿಟ್ಟಾದ ನಾಲ್ಕು ಭಾಗದ ಸ್ವರಮೇಳನಗಳಿಲ್ಲದೆ ಬರೆಯಲ್ಪಟ್ಟ ಹಾಡುಗಳಿಗೆ ಸ್ವರಮೇಳನ ಚಿಹ್ನೆಗಳ ಆಶುರಚನೆಯನ್ನು ಮಾಡುವುದು, ಕೂಟಗಳಲ್ಲಿ ನಮ್ಮ ಹಾಡುವಿಕೆಗೆ ಹಿತಕರವಾದ ವರ್ಧನವನ್ನು ಒದಗಿಸೀತು.
[ಪುಟ 27 ರಲ್ಲಿರುವ ಚೌಕ]
ಹೆಚ್ಚು ಉತ್ತಮವಾದ ಹಾಡುವಿಕೆಗೆ ಕೆಲವು ಸೂಚನೆಗಳು
1. ಹಾಡುವಾಗ ಗೀತ ಪುಸ್ತಕವನ್ನು ಮೇಲೆತ್ತಿ ಹಿಡಿಯಿರಿ. ಇದು ಒಬ್ಬನು ಹೆಚ್ಚು ಸ್ವಾಭಾವಿಕವಾಗಿ ಉಸಿರಾಡುವಂತೆ ಸಹಾಯಮಾಡುವುದು.
2. ಪ್ರತಿಯೊಂದು ಗೀತಾಂಗಭಾಗದ ಆರಂಭದಲ್ಲಿ ದೀರ್ಘಶ್ವಾಸವನ್ನೆಳೆದುಕೊಳ್ಳಿರಿ.
3. ಮೊದಲಲ್ಲಿ, ಹಾಯಾಗಿರುವುದಕ್ಕಿಂತಲೂ ತುಸು ಹೆಚ್ಚು ಬಾಯಿ ತೆರೆಯೋಣವು, ಸ್ವಾಭಾವಿಕವಾಗಿ ಧ್ವನಿಯನ್ನು ಮತ್ತು ಧ್ವನಿಯ ಅನುರಣನವನ್ನು ವರ್ಧಿಸುವುದು.
4. ಎಲ್ಲಕ್ಕಿಂತ ಮಿಗಿಲಾಗಿ, ಹಾಡಲ್ಪಡುತ್ತಿರುವ ಹಾಡಿನ ರಸಭಾವದ ಮೇಲೆ ಕೇಂದ್ರೀಕರಿಸಿರಿ.