ಯೆಹೋವನಲ್ಲಿನ ನನ್ನ ಭರವಸೆಯಿಂದ ಪೋಷಿಸಲ್ಪಟ್ಟದ್ದು
ಆಸೆನೋರ್ ಡಾ ಪೈಶಾವು ಅವರು ಹೇಳಿದಂತೆ
ನಮ್ಮ ಏಕಮಾತ್ರ ಪುತ್ರನಾದ ಪೌಲೂ, ಕೇವಲ 11 ತಿಂಗಳುಗಳ ಪ್ರಾಯದವನಾಗಿದ್ದಾಗ ಬ್ರಾಂಕೈಟಿಸ್ (ಶ್ವಾಸನಾಳಗಳ ಉರಿಯೂತ)ನಿಂದ ಮೃತಪಟ್ಟನು. ಮೂರು ತಿಂಗಳುಗಳ ಬಳಿಕ, ಆಗಸ್ಟ್ 15, 1945ರಂದು, ನನ್ನ ಅತಿಪ್ರೀತಿಯ ಹೆಂಡತಿಯು ನ್ಯುಮೋನಿಯದಿಂದ ಮೃತಪಟ್ಟಳು. ನಾನು 28 ವರ್ಷ ಪ್ರಾಯದವನಾಗಿದ್ದೆ, ಮತ್ತು ಈ ಹೊಡೆತಗಳು ನನ್ನನ್ನು ದುಃಖಿತನನ್ನಾಗಿ ಮಾಡಿ, ಕಡುಸಂಕಟಕ್ಕೆ ಈಡುಮಾಡಿದವು. ಆದರೂ ಯೆಹೋವನ ಹಾಗೂ ಆತನ ವಾಗ್ದಾನಗಳಲ್ಲಿನ ಭರವಸೆಯು ನನ್ನನ್ನು ಪೋಷಿಸಿತು. ನನ್ನಲ್ಲಿ ಈ ಭರವಸೆಯು ಹೇಗೆ ಬಂತೆಂಬುದನ್ನು ನಾನು ವಿವರಿಸುತ್ತೇನೆ.
ಬ್ರೆಸಿಲ್ನ ಬಾಈಅ ರಾಜ್ಯದ ಸಾಲ್ವಡರ್ನಲ್ಲಿ, ಜನವರಿ 5, 1917ರಲ್ಲಿ ನನ್ನ ಜನನವಾದ ಸಮಯದಂದಿನಿಂದ, ನನ್ನ ತಾಯಿ ನನಗೆ ಕ್ಯಾಥೊಲಿಕ್ ಚರ್ಚಿನ “ಸಂತರನ್ನು” ಆರಾಧಿಸುವಂತೆ ಕಲಿಸಿದರು. ನಾವು ಒಟ್ಟಿಗೆ ಪ್ರಾರ್ಥಿಸಲು ಸಾಧ್ಯವಾಗುವಂತೆ, ಅವರು ನನ್ನ ಅಣ್ಣಂದಿರನ್ನೂ ನನ್ನನ್ನೂ ಮುಂಜಾನೆಯೇ ಎಬ್ಬಿಸುತ್ತಿದ್ದರು ಸಹ. ಆದರೂ, ನನ್ನ ಹೆತ್ತವರು, ಆಫ್ರಿಕನ್-ಬ್ರೆಸಿಲಿಯನ್ ವೂಡೂ ಮತಾಚರಣೆಯಾದ ಕಾಂಡೋಂಬ್ಲೆಯ ಸೆಶನ್ಗಳಿಗೂ ಹಾಜರಾಗುತ್ತಿದ್ದರು. ನಾನು ಈ ನಂಬಿಕೆಗಳನ್ನು ಗೌರವದಿಂದ ಕಂಡೆನಾದರೂ, ಕ್ಯಾಥೊಲಿಕ್ಮತದ ಸಂತರೆಂದು ಕರೆಸಿಕೊಳ್ಳುವವರಲ್ಲಿ ಅಥವಾ ಕಾಂಡೋಂಬ್ಲೆಯಲ್ಲಿ ನನಗೆ ಭರವಸೆಯಿರಲಿಲ್ಲ. ನನಗೆ ವಿಶೇಷವಾಗಿ ಆಶಾಭಂಗವನ್ನು ಉಂಟುಮಾಡಿದ ವಿಷಯವು ಯಾವುದಾಗಿತ್ತೆಂದರೆ, ಈ ಧರ್ಮಗಳೊಳಗೆ ಪ್ರದರ್ಶಿಸಲ್ಪಡುತ್ತಿದ್ದ ಕುಲಸಂಬಂಧವಾದ ಪೂರ್ವಕಲ್ಪಿತ ಅಭಿಪ್ರಾಯವೇ.
ಸಮಯಾನಂತರ ನನ್ನ ಇಬ್ಬರು ಅಣ್ಣಂದಿರು ಕೆಲಸವನ್ನು ಹುಡುಕಲಿಕ್ಕಾಗಿ ಮನೆಯನ್ನು ಬಿಟ್ಟುಹೋದರು. ತದನಂತರ ನನ್ನ ತಂದೆಯವರು ಕುಟುಂಬವನ್ನು ತೊರೆದರು. ಆದುದರಿಂದ, ಒಂಬತ್ತು ವರ್ಷ ಪ್ರಾಯದಲ್ಲಿಯೇ, ನನ್ನ ತಾಯಿಗೂ ನನ್ನ ತಂಗಿಗೂ ಸಹಾಯ ಮಾಡಲಿಕ್ಕಾಗಿ ನಾನು ಕೆಲಸವನ್ನು ಹುಡುಕಬೇಕಾಯಿತು. ಸುಮಾರು 16 ವರ್ಷಗಳ ಬಳಿಕ, ಕಾರ್ಖಾನೆಯ ಒಬ್ಬ ಸಹಕಾರ್ಮಿಕನೊಂದಿಗೆ ನಡೆಸಿದ ಸಂಭಾಷಣೆಗಳು, ನನ್ನ ಜೀವಿತದಲ್ಲಿ ತಿರುಗು ಬಿಂದುವಾಗಿ ಪರಿಣಮಿಸಿದವು.
ಯೆಹೋವನಲ್ಲಿ ಭರವಸೆಯನ್ನು ಪಡೆದುಕೊಳ್ಳುವುದು
ನಾನು 1942ರಲ್ಲಿ ಫರ್ನಾಂಡೂ ಟೆಲಿಸ್ನನ್ನು ಭೇಟಿಯಾದೆ. “ಸಂತರನ್ನು” ಆರಾಧಿಸುವುದು ತಪ್ಪಾಗಿತ್ತೆಂದು ಅವನು ಅನೇಕವೇಳೆ ಹೇಳಿದನು. (1 ಕೊರಿಂಥ 10:14; 1 ಯೋಹಾನ 5:21) ಮೊದಮೊದಲು ಅವನು ಹೇಳಿದ ವಿಷಯಕ್ಕೆ ನಾನು ಗಮನಹರಿಸಲಿಲ್ಲ. ಆದರೆ ಅವನ ಪ್ರಾಮಾಣಿಕತೆ ಹಾಗೂ ಜನರ ಬಣ್ಣವು ಯಾವುದೇ ಆಗಿರಲಿ ಅವರಲ್ಲಿ ಅವನು ತೋರಿಸುವ ಆಸಕ್ತಿಯು ನನ್ನನ್ನು ಆಕರ್ಷಿಸಿತು. ಮತ್ತು ನಾನು ಅವನ ಬೈಬಲ್ ಜ್ಞಾನವನ್ನು, ವಿಶೇಷವಾಗಿ ದೇವರ ರಾಜ್ಯ ಹಾಗೂ ಒಂದು ಪ್ರಮೋದವನ ಭೂಮಿಯ ಕುರಿತಾಗಿ ಅವನು ಹೇಳಿದ ವಿಷಯವನ್ನು ಮೆಚ್ಚಲಾರಂಭಿಸಿದೆ. (ಯೆಶಾಯ 9:6, 7; ದಾನಿಯೇಲ 2:44; ಪ್ರಕಟನೆ 21:3, 4) ನನ್ನ ಆಸಕ್ತಿಯನ್ನು ಗಮನಿಸಿ, ಅವನು ಒಂದು ಬೈಬಲನ್ನೂ ಕೆಲವು ಬೈಬಲ್ ಸಾಹಿತ್ಯವನ್ನೂ ನನಗೆ ಕೊಟ್ಟನು.
ಕೆಲವೊಂದು ವಾರಗಳ ಬಳಿಕ, ನಾನು ಸಭಾ ಪುಸ್ತಕಾಭ್ಯಾಸಕ್ಕೆ ಹೋಗುವ ಒಂದು ಆಮಂತ್ರಣವನ್ನು ಅಂಗೀಕರಿಸಿದೆ. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಧರ್ಮ (ಇಂಗ್ಲಿಷ್) ಎಂಬ ಪುಸ್ತಕವನ್ನು ಆ ಗುಂಪು ಅಭ್ಯಾಸಿಸುತ್ತಿತ್ತು. ನಾನು ಆ ಅಭ್ಯಾಸದಲ್ಲಿ ಆನಂದಿಸಿದೆ, ಮತ್ತು ಯೆಹೋವನ ಸಾಕ್ಷಿಗಳ ಎಲ್ಲಾ ಸಭಾ ಕೂಟಗಳಿಗೆ ಹಾಜರಾಗಲಾರಂಭಿಸಿದೆ. ನನ್ನನ್ನು ವಿಶೇಷವಾಗಿ ಪ್ರಭಾವಿಸಿದ ವಿಷಯವು, ಪೂರ್ವಕಲ್ಪಿತ ಅಭಿಪ್ರಾಯದ ಇಲ್ಲದಿರುವಿಕೆ ಮತ್ತು ನಾನು ತತ್ಕ್ಷಣವೇ ಅವರಿಂದ ಅಂಗೀಕರಿಸಲ್ಪಟ್ಟ ರೀತಿಯಾಗಿತ್ತು. ಆ ಸಮಯದಷ್ಟಕ್ಕೆ ನಾನು ಲೀಂಡಾವ್ರಳೊಂದಿಗೆ ಪ್ರಣಯಾಚರಣೆ ನಡೆಸಲಾರಂಭಿಸಿದೆ. ನಾನು ಕಲಿಯುತ್ತಿದ್ದ ವಿಷಯಗಳ ಕುರಿತಾಗಿ ಅವಳೊಂದಿಗೆ ಮಾತಾಡಿದಾಗ, ಅವಳು ನನ್ನೊಂದಿಗೆ ಕೂಟಗಳಿಗೆ ಹಾಜರಾಗಲಾರಂಭಿಸಿದಳು.
ಕೂಟಗಳಲ್ಲಿ ನನ್ನನ್ನು ಪ್ರಭಾವಿಸಿದ ಇನ್ನೊಂದು ವಿಷಯವು, ಸಾರುವ ಕೆಲಸದ ಮೇಲೆ ಹಾಕಲ್ಪಟ್ಟ ಮಹತ್ವವೇ ಆಗಿತ್ತು. (ಮತ್ತಾಯ 24:14; ಅ. ಕೃತ್ಯಗಳು 20:20) ಪಯನೀಯರರಿಂದ—ಪೂರ್ಣ ಸಮಯದ ಶುಶ್ರೂಷಕರನ್ನು ಹೀಗೆ ಕರೆಯಲಾಗುತ್ತದೆ—ಪ್ರೋತ್ಸಾಹಿತನಾಗಿ, ನಾನು ಕೆಲಸಕ್ಕೆ ಹೋಗಲು ಹಾಗೂ ಬರಲು ಪ್ರಯಾಣಿಸುತ್ತಿದ್ದಾಗ, ನಾನು ರೈಲಿನಲ್ಲಿ ಇತರರೊಂದಿಗೆ ಅನೌಪಚಾರಿಕವಾಗಿ ಮಾತಾಡಲು ಆರಂಭಿಸಿದೆ. ಆಸಕ್ತರಾಗಿದ್ದ ಯಾರಾದರೊಬ್ಬರನ್ನು ನಾನು ಕಂಡುಕೊಂಡಾಗ, ನಾನು ಅವನ ವಿಳಾಸವನ್ನು ಪಡೆದುಕೊಂಡು, ಆ ಆಸಕ್ತಿಯನ್ನು ಬೆಳೆಸಲು ಪ್ರಯತ್ನಿಸಲಿಕ್ಕಾಗಿ ಅವನಿಗೆ ಭೇಟಿನೀಡುತ್ತಿದ್ದೆ.
ಈ ಮಧ್ಯೆ, ಯೆಹೋವನಲ್ಲಿ ಹಾಗೂ ಆತನು ಉಪಯೋಗಿಸುತ್ತಿರುವ ಸಂಸ್ಥೆಯಲ್ಲಿನ ನನ್ನ ಭರವಸೆಯು ಬೆಳೆಯುತ್ತಾ ಹೋಯಿತು. ಹೀಗೆ, ಕ್ರೈಸ್ತ ಸಮರ್ಪಣೆಯ ಕುರಿತಾದ ಬೈಬಲ್ ಭಾಷಣವೊಂದನ್ನು ಕೇಳಿಸಿಕೊಂಡ ಬಳಿಕ, ನಾನು ಎಪ್ರಿಲ್ 19, 1943ರಂದು, ಅಟ್ಲಾಂಟಿಕ್ ಮಹಾಸಾಗರದಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ. ಅದೇ ದಿನದಲ್ಲಿ, ನಾನು ಮೊದಲ ಬಾರಿಗೆ ಕ್ರಮವಾದ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪಾಲ್ಗೊಂಡೆ.
ಎರಡು ವಾರಗಳ ಬಳಿಕ, ಮೇ 5ರಂದು ಲೀಂಡಾವ್ರ ಹಾಗೂ ನಾನು ವಿವಾಹಿತರಾದೆವು. ತದನಂತರ, ಆಗಸ್ಟ್ 1943ರಲ್ಲಿ, ಸಾಲ್ವಡರ್ ನಗರದಲ್ಲಿ ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಟ್ಟ ಪ್ರಥಮ ಸಮ್ಮೇಳನದಲ್ಲಿ ಅವಳು ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಆ ಸಮ್ಮೇಳನದ ಕುರಿತಾಗಿ 1973 ಯೆಹೋವನ ಸಾಕ್ಷಿಗಳ ವರ್ಷಪುಸ್ತಕ (ಇಂಗ್ಲಿಷ್)ವು ಹೇಳಿದ್ದು: “ವೈದಿಕರ ಕಾರ್ಯಾಚರಣೆಯು, ಸಾಲ್ವಡರ್ನಲ್ಲಿನ ಬಹಿರಂಗ ಭಾಷಣವನ್ನು ನಿಲ್ಲಿಸುವುದರಲ್ಲಿ ಸಫಲವಾಯಿತಾದರೂ, ಸ್ವಲ್ಪ ಸಮಯದಲ್ಲಿಯೇ ಅದು ಬಹಳ ಮಹತ್ತರವಾದ ಪ್ರಚಾರವನ್ನು . . . ಪಡೆದಿತ್ತು.” ತೀವ್ರ ಹಿಂಸೆಯನ್ನು ಅನುಭವಿಸುತ್ತಿರುವಾಗ ಯೆಹೋವನ ಮಾರ್ಗದರ್ಶನದ ಪುರಾವೆಯು, ಆತನಲ್ಲಿದ್ದ ನನ್ನ ಭರವಸೆಯನ್ನು ಬಲಪಡಿಸಿತು.
ನಾನು ಆರಂಭದಲ್ಲಿ ತಿಳಿಸಿದಂತೆ, ಲೀಂಡಾವ್ರಳ ದೀಕ್ಷಾಸ್ನಾನವಾಗಿ ಎರಡೇ ವರ್ಷಗಳ ಬಳಿಕ—ಮತ್ತು ನಮ್ಮ ಮಗನು ಮೃತಪಟ್ಟು ಮೂರು ತಿಂಗಳುಗಳಾದ ನಂತರ—ನನ್ನ ಪ್ರಿಯ ಹೆಂಡತಿಯು ಮೃತಪಟ್ಟಳು. ಅವಳು ಕೇವಲ 22 ವರ್ಷ ಪ್ರಾಯದವಳಾಗಿದ್ದಳು. ಆದರೆ ಯೆಹೋವನಲ್ಲಿ ನನಗಿದ್ದಂತಹ ಭರವಸೆಯು, ಆ ಕಷ್ಟಮಯ ತಿಂಗಳುಗಳಲ್ಲಿ ನನ್ನನ್ನು ಪೋಷಿಸಿತು.
ಆತ್ಮಿಕ ಚಟುವಟಿಕೆಯಿಂದ ಬಲಪಡಿಸಲ್ಪಟ್ಟದ್ದು
ನನ್ನ ಹೆಂಡತಿ ಹಾಗೂ ಮಗನನ್ನು ಕಳೆದುಕೊಂಡ ಒಂದು ವರ್ಷದ ನಂತರ, 1946ರಲ್ಲಿ, ಆಗ ಸಾಲ್ವಡರ್ನಲ್ಲಿದ್ದ ಒಂದು ಸಭೆಯಲ್ಲಿ ನಾನು ಬೈಬಲ್ ಅಭ್ಯಾಸ ಸೇವಕನಾಗಿ ನೇಮಿಸಲ್ಪಟ್ಟೆ. ಅದೇ ವರ್ಷ ಬ್ರೆಸಿಲ್ನ ಸಭೆಗಳಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯು ಆರಂಭವಾಯಿತು. ಮತ್ತು ನಾನು ಬಾಈಅ ರಾಜ್ಯದಲ್ಲಿನ ಪ್ರಪ್ರಥಮ ಶಾಲಾ ನಿರ್ವಾಹಕನಾದೆ. ತದನಂತರ, ಅಕ್ಟೋಬರ್ 1946ರಲ್ಲಿ, ಸಾವ್ ಪಾವ್ಲೂ ನಗರದಲ್ಲಿ “ಹರ್ಷಭರಿತ ಜನಾಂಗಗಳು” ದೇವಪ್ರಭುತ್ವ ಸಮ್ಮೇಳನವು ನಡೆಯಿತು. ಹತ್ತು ವರ್ಷಗಳಿಂದ ನನ್ನ ಧಣಿಯಾಗಿದ್ದವನು, ತನಗೆ ನನ್ನ ಆವಶ್ಯಕತೆಯಿದೆಯೆಂದು ಹೇಳಿ, ನಾನು ಹೋಗದಿರುವಂತೆ ನನ್ನನ್ನು ಒತ್ತಾಯಿಸಿದನು. ಆದರೂ, ನಾನು ಸಮ್ಮೇಳನಕ್ಕೆ ಹಾಜರಾಗುವುದು ನನಗೆ ಎಷ್ಟು ಮಹತ್ವಾರ್ಥವುಳ್ಳದ್ದಾಗಿದೆ ಎಂಬುದನ್ನು ನಾನು ಅವನಿಗೆ ವಿವರಿಸಿದ ಬಳಿಕ, ಅವನು ನನಗೆ ಉದಾರವಾದ ಉಡುಗೊರೆಯನ್ನು ನೀಡಿ, ನನ್ನ ಪ್ರಯಾಣಕ್ಕೆ ಶುಭಕೋರಿದನು.
ಸಾವ್ ಪಾವ್ಲೂವಿನ ಮುನಿಸಿಪಲ್ ಥಿಯೇಟರ್ನಲ್ಲಿ ನಡೆದ ಸಮ್ಮೇಳನದ ಸೆಶನ್ಗಳು, ಬ್ರೆಸಿಲ್ನ ಭಾಷೆಯಾದ ಪೋರ್ಟ್ಯುಗೀಸ್ನಲ್ಲಿ, ಹಾಗೂ ಇಂಗ್ಲಿಷ್, ಜರ್ಮನ್, ಪೋಲಿಷ್, ರಷ್ಯನ್, ಮತ್ತು ಹಂಗೆರಿಯನ್ ಭಾಷೆಗಳಲ್ಲಿ ನಡೆಸಲ್ಪಟ್ಟವು. ಆ ಸಮ್ಮೇಳನದಲ್ಲಿ ಪೋರ್ಟ್ಯುಗೀಸ್ ಭಾಷೆಯಲ್ಲಿ ಎಚ್ಚರ! ಪತ್ರಿಕೆಯನ್ನು ಬಿಡುಗಡೆಮಾಡಲಾಯಿತು. ಬಹಿರಂಗ ಭಾಷಣಕ್ಕೆ ಸುಮಾರು 1,700 ಮಂದಿ ಹಾಜರಾಗಿದ್ದ ಈ ಸಮ್ಮೇಳನದಿಂದ ನಾನೆಷ್ಟು ಪ್ರಚೋದಿತನಾಗಿದ್ದೆನೆಂದರೆ, ನವೆಂಬರ್ 1, 1946ರಂದು ಪಯನೀಯರ್ ಸೇವೆಯನ್ನು ಆರಂಭಿಸಲಿಕ್ಕಾಗಿ ನಾನು ಒಂದು ಅರ್ಜಿಯನ್ನು ಭರ್ತಿಮಾಡಿದೆ.
ಆ ಸಮಯದಲ್ಲಿ ನಮ್ಮ ಪಯನೀಯರ್ ಕೆಲಸದಲ್ಲಿ ನಾವು ಫೋನೋಗ್ರಾಫನ್ನು ವ್ಯಾಪಕವಾಗಿ ಉಪಯೋಗಿಸಿದೆವು. ಅನೇಕವೇಳೆ ಮನೆಯವರಿಗೆ ಹಾಡಿಸಿ ತೋರಿಸಿದಂತಹ ಭಾಷಣಗಳಲ್ಲಿ, “ಸಂರಕ್ಷಣೆ” ಎಂಬ ಭಾಷಣವು ಒಂದಾಗಿತ್ತು. ತದನಂತರ ನಾವು ಹೇಳಿದ್ದು: “ಒಬ್ಬ ಅದೃಶ್ಯ ವೈರಿಯಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ, ನಾವು ಅದೃಶ್ಯನೇ ಆಗಿರುವ ಒಬ್ಬ ಸ್ನೇಹಿತನಿಗೆ ಅಂಟಿಕೊಳ್ಳಬೇಕು. ಯೆಹೋವನು ನಮ್ಮ ಅತ್ಯಂತ ಆಪ್ತ ಸ್ನೇಹಿತನಾಗಿದ್ದಾನೆ, ಮತ್ತು ಆತನು ನಮ್ಮ ವೈರಿಯಾದ ಸೈತಾನನಿಗಿಂತಲೂ ಅತಿ ಹೆಚ್ಚು ಬಲಾಢ್ಯನಾಗಿದ್ದಾನೆ. ಆದುದರಿಂದ ಅವನಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ ನಾವು ಯೆಹೋವನಿಗೆ ನಿಕಟವಾಗಿ ಅಂಟಿಕೊಳ್ಳಬೇಕು.” ನಂತರ ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸಿದ ಸಂರಕ್ಷಣೆ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ನಾವು ನೀಡಿದೆವು.
ನಾನು ಒಂದು ವರ್ಷಕ್ಕಿಂತಲೂ ಕಡಿಮೆ ಸಮಯ ಪಯನೀಯರ್ ಸೇವೆ ಮಾಡಿದ್ದೆ. ಆಗಲೇ ರೀಯೊ ಡೆ ಸನೀರೋದಲ್ಲಿನ ಕಾರೀಯೋಕ ಸಭೆಯೊಂದಿಗೆ ವಿಶೇಷ ಪಯನೀಯರನಾಗಿ ಸೇವೆಮಾಡಲಿಕ್ಕಾಗಿರುವ ಒಂದು ಆಹ್ವಾನವನ್ನು ನಾನು ಪಡೆದೆ. ಅಲ್ಲಿ ನಾವು ಕೆಲವೊಮ್ಮೆ ಬಲವಾದ ವಿರೋಧವನ್ನು ಎದುರಿಸಿದೆವು. ನನ್ನ ಸಹಭಾಗಿಯಾದ ಈವಾನ್ ಬ್ರೆನರ್, ಒಮ್ಮೆ ಒಬ್ಬ ಮನೆಯವನಿಂದ ವಾಸ್ತವವಾಗಿ ಆಕ್ರಮಣಕ್ಕೊಳಗಾದನು. ನೆರೆಹೊರೆಯವರು ಪೊಲೀಸರನ್ನು ಕರೆಸಿದರು, ಮತ್ತು ನಮ್ಮೆಲ್ಲರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ವಿಚಾರಣೆಯ ಸಮಯದಲ್ಲಿ, ರೋಷಗೊಂಡಿದ್ದ ಮನೆಯವನು ನಮ್ಮನ್ನು, ಶಾಂತಿಗೆ ಭಂಗ ತಂದವರೆಂಬುದಾಗಿ ಬಯ್ದನು. ಪೊಲೀಸರ ಮುಖ್ಯಸ್ಥನು ಅವನಿಗೆ ಸುಮ್ಮನಿರುವಂತೆ ಆಜ್ಞೆಯನ್ನಿತ್ತನು. ತದನಂತರ ಪೊಲೀಸರ ಮುಖ್ಯಸ್ಥನು ನಮ್ಮ ಕಡೆಗೆ ತಿರುಗಿ, ನಾವು ಇಲ್ಲಿಂದ ಹೊರಟುಹೋಗಲು ಸ್ವತಂತ್ರರು ಎಂದು ಮೃದುವಾದ ಸ್ವರದಲ್ಲಿ ಹೇಳಿದನು. ಅವನು ನಮಗೆ ಬಯ್ದವನನ್ನು ಬಂಧಿಸಿ, ಹಲ್ಲೆಯ ಆಪಾದನೆ ಹೊರಿಸಿದನು. ಅಂತಹ ಸನ್ನಿವೇಶಗಳು, ಯೆಹೋವನಲ್ಲಿದ್ದ ನನ್ನ ಭರವಸೆಯನ್ನು ಪೋಷಿಸಿದವು.
ವಿಸ್ತೃತವಾದ ಪೂರ್ಣ ಸಮಯದ ಶುಶ್ರೂಷೆ
ಜುಲೈ 1, 1949ರಂದು, ಬೆತೆಲ್—ಒಂದು ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಪ್ರಮುಖ ಸೌಕರ್ಯಗಳನ್ನು ಹೀಗೆಂದು ಕರೆಯಲಾಗುತ್ತದೆ—ನಲ್ಲಿ ಸೇವೆಮಾಡಲು ಆಹ್ವಾನಿಸಲ್ಪಟ್ಟದ್ದಕ್ಕಾಗಿ ನಾನು ರೋಮಾಂಚನಗೊಂಡಿದ್ದೆ. ಬ್ರೆಸಿಲ್ನ ಬೆತೆಲ್ ಆಗ, ರೀಯೊ ಡೆ ಸನೀರೋದ 330 ಲೀಸೀನ್ಯೊ ಕಾರ್ಡೋಸೂ ಸ್ಟ್ರೀಟ್ನಲ್ಲಿ ಸ್ಥಾಪಿತವಾಗಿತ್ತು. ಆ ಸಮಯದಲ್ಲಿ, ಇಡೀ ಬೆತೆಲ್ ಕುಟುಂಬದಲ್ಲಿ 17 ಜನರು ಮಾತ್ರ ಇದ್ದರು. ಸ್ವಲ್ಪ ಸಮಯದ ವರೆಗೆ ನಾನು ಸ್ಥಳಿಕವಾಗಿದ್ದ ಎಲ್ಸೆನ್ಯೊ ಡೆ ಡೆಂಟ್ರೂ ಸಭೆಗೆ ಹಾಜರಾದೆ. ಆದರೆ ತದನಂತರ ರೀಯೊ ಡೆ ಸನೀರೋದಿಂದ ಕೆಲವಾರು ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ ಒಂದು ನಗರವಾದ ಬೆಲ್ಫರ್ ರೋಶೂದಲ್ಲಿದ್ದ ಒಂದೇ ಒಂದು ಸಭೆಯಲ್ಲಿ ನಾನು ಅಧ್ಯಕ್ಷ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆ.
ವಾರಾಂತ್ಯಗಳು ತುಂಬ ಕಾರ್ಯೋದ್ಯುಕ್ತವಾಗಿದ್ದವು. ಶನಿವಾರಗಳಂದು ನಾನು ರೈಲಿನಲ್ಲಿ ಬೆಲ್ಫರ್ ರೋಶೂಗೆ ಪ್ರಯಾಣಿಸಿದೆ, ಮಧ್ಯಾಹ್ನದ ಸಮಯದಲ್ಲಿ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲ್ಗೊಂಡು, ನಂತರ ಸಾಯಂಕಾಲದಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟಕ್ಕೆ ಹೋದೆ. ಆ ರಾತ್ರಿ ನಾನು ಸಹೋದರರೊಂದಿಗೆ ಉಳಿದುಕೊಂಡು, ಮರುದಿನ ಬೆಳಗ್ಗೆ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸಿದೆ. ಆ ದಿನ ಮಧ್ಯಾಹ್ನ ನಾನು ಬಹಿರಂಗ ಬೈಬಲ್ ಭಾಷಣ ಮತ್ತು ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾಗಿ, ರಾತ್ರಿ ಸುಮಾರು ಒಂಬತ್ತೂವರೆಗೆ ಬೆತೆಲ್ಗೆ ಹಿಂದಿರುಗಿದೆ. ಇಂದು ಬೆಲ್ಫರ್ ರೋಶೂನಲ್ಲಿ 18 ಸಭೆಗಳಿವೆ.
ಆ ಕಾರ್ಯತಖ್ತೆಯು ಇದ್ದ ಮೂರೂವರೆ ವರ್ಷಗಳ ಬಳಿಕ, 1954ರಲ್ಲಿ, ಸಾವ್ ಕ್ರಿಸ್ಟಾವಾವ್ ಸಭೆಯಲ್ಲಿ ಅಧ್ಯಕ್ಷ ಮೇಲ್ವಿಚಾರಕನೋಪಾದಿ ಕಾರ್ಯನಡಿಸಲಿಕ್ಕಾಗಿ ರೀಯೊ ಡೆ ಸನೀರೋಗೆ ಪುನಃ ನೇಮಿಸಲ್ಪಟ್ಟೆ. ಮುಂದಿನ ಹತ್ತು ವರ್ಷಗಳ ವರೆಗೆ ನಾನು ಆ ಸಭೆಯೊಂದಿಗೆ ಕಾರ್ಯನಡಿಸಿದೆ.
ನನ್ನ ಬೆತೆಲ್ ನೇಮಕಗಳು
ಬೆತೆಲ್ನಲ್ಲಿ ನನ್ನ ಮೊಟ್ಟಮೊದಲ ನೇಮಕವು, ಸೊಸೈಟಿಯ 1949ರ ಡಾಜ್ ಎಂಬ ಹೆಸರಿನ—ಈ ವ್ಯಾನಿಗೆ ಕಂದು ಬಣ್ಣವಿದ್ದ ಕಾರಣ, ಚಾಕೊಲೆಟ್ ಎಂಬ ಅಡ್ಡಹೆಸರು ಕೊಡಲ್ಪಟ್ಟಿತ್ತು—ಏಕಮಾತ್ರ ವಾಹನಕ್ಕೆ ಒಂದು ಗ್ಯಾರೆಜನ್ನು ಕಟ್ಟುವುದಾಗಿತ್ತು. ಗ್ಯಾರೆಜನ್ನು ಸಂಪೂರ್ಣವಾಗಿ ಕಟ್ಟಿಮುಗಿಸಿದಾಗ, ನಾನು ಅಡಿಗೆಮನೆಯಲ್ಲಿ ಕೆಲಸಮಾಡುವಂತೆ ನೇಮಿಸಲ್ಪಟ್ಟೆ. ಅಲ್ಲಿ ನಾನು ಮೂರು ವರ್ಷಗಳ ವರೆಗೆ ಉಳಿದೆ. ಬಳಿಕ ನಾನು ಜಾಬ್ ಪ್ರೆಸ್ ಡಿಪಾರ್ಟ್ಮೆಂಟ್ಗೆ ವರ್ಗಾಯಿಸಲ್ಪಟ್ಟೆ. ಈಗ 40 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ನಾನು ಅಲ್ಲಿಯೇ ಕೆಲಸ ಮಾಡುತ್ತಿದ್ದೇನೆ.
ನಮ್ಮಲ್ಲಿದ್ದ ಹೆಚ್ಚಿನ ಮುದ್ರಣ ಸಲಕರಣೆಯು, ಈಗಾಗಲೇ ಬಳಸಿದ್ದ ಸಲಕರಣೆಯಾಗಿತ್ತು. ಉದಾಹರಣೆಗಾಗಿ, ಅನೇಕ ವರ್ಷಗಳಿಂದ ನಮ್ಮ ಬಳಿ ಒಂದು ಹಳತಾದ ಪ್ಲ್ಯಾಟೆನ್ ಪ್ರೆಸ್ ಇತ್ತು. ಅಬ್ರಹಾಮನ ಹೆಂಡತಿಯ ಸೂಚಕವಾಗಿ, ಅದನ್ನು ನಾವು ಪ್ರೀತಿಯಿಂದ ಸಾರಾ ಎಂದು ಕರೆಯುತ್ತಿದ್ದೆವು. ನ್ಯೂ ಯಾರ್ಕ್, ಬ್ರೂಕ್ಲಿನ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಮುಖ್ಯಕಾರ್ಯಾಲಯದ ಫ್ಯಾಕ್ಟರಿಯಲ್ಲಿ ಅದು ಅನೇಕ ವರ್ಷಗಳ ವರೆಗೆ ಉಪಯೋಗಿಸಲ್ಪಟ್ಟಿತ್ತು. ಬಳಿಕ 1950ಗಳಲ್ಲಿ ಅದು ಬ್ರೆಸಿಲ್ಗೆ ರವಾನಿಸಲ್ಪಟ್ಟಿತು. ಇಲ್ಲಿ, ಅಬ್ರಹಾಮನ ಹೆಂಡತಿಯಂತೆ, ಅದು ತನ್ನ ವೃದ್ಧಾಪ್ಯದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ರೂಪದಲ್ಲಿ ಫಲವನ್ನು ಉತ್ಪಾದಿಸಿತು.
ಬ್ರೆಸಿಲ್ನ ಮುದ್ರಣ ಸ್ಥಾವರದಲ್ಲಿ ಉತ್ಪಾದಿಸಲ್ಪಟ್ಟ ಪ್ರಕಾಶನಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಕಂಡು ಆಶ್ಚರ್ಯಪಡುವುದನ್ನು ನಾನೆಂದೂ ನಿಲ್ಲಿಸಿಲ್ಲ. 1953ರ ಇಡೀ ವರ್ಷದಲ್ಲಿ, ನಾವು 3,24,400 ಪತ್ರಿಕೆಗಳನ್ನು ಮುದ್ರಿಸಿದೆವಾದರೂ, ಪ್ರತಿ ತಿಂಗಳಿನ ಈಗಿನ ಉತ್ಪಾದನೆಯು 30 ಲಕ್ಷಗಳಿಗಿಂತಲೂ ಹೆಚ್ಚಾಗಿದೆ!
ನಮ್ಮ ಬೆತೆಲ್ ಸೌಕರ್ಯಗಳು
ಗತ ವರ್ಷಗಳಲ್ಲಿ, ಬ್ರೆಸಿಲ್ನಲ್ಲಿನ ನಮ್ಮ ಬೆತೆಲ್ ಸೌಕರ್ಯಗಳ ವಿಸ್ತರಣೆಯನ್ನು ವೀಕ್ಷಿಸುವುದು ರೋಮಾಂಚಕರವಾಗಿದೆ. 1952ರಲ್ಲಿ ರೀಯೊ ಡೆ ಸನೀರೋದಲ್ಲಿನ ನಮ್ಮ ಬೆತೆಲ್ ಗೃಹದ ಹಿಂದೆ, ಎರಡು ಮಹಡಿಗಳ ಫ್ಯಾಕ್ಟರಿಯನ್ನು ನಾವು ಕಟ್ಟಿದೆವು. ಅನಂತರ 1968ರಲ್ಲಿ, ಸಾವ್ ಪಾವ್ಲೂವಿನ ನಗರದಲ್ಲಿನ ಹೊಸ ಕಟ್ಟಡವೊಂದಕ್ಕೆ ಬೆತೆಲ್ ಸ್ಥಳಾಂತರವಾಯಿತು. ನಾವು ಅಲ್ಲಿಗೆ ಸ್ಥಳಾಂತರಮಾಡಿದಾಗ, 42 ಮಂದಿ ಸದಸ್ಯರಿಂದ ಕೂಡಿದ್ದ ನಮ್ಮ ಬೆತೆಲ್ ಕುಟುಂಬಕ್ಕೆ, ಎಲ್ಲ ಸೌಕರ್ಯವು ದೊಡ್ಡದೂ ಹೆಚ್ಚು ಸ್ಥಳಾವಕಾಶವುಳ್ಳದ್ದೂ ಆಗಿ ಕಂಡುಬಂತು. ನಮ್ಮ ಭವಿಷ್ಯತ್ತಿನ ಎಲ್ಲ ಬೆಳವಣಿಗೆಗಾಗಿ ಈ ಕಟ್ಟಡವು ಕಾರ್ಯನಡಿಸುವುದೆಂದು ನಾವು ನಿಜವಾಗಿಯೂ ನೆನಸಿದೆವು. ಆದರೂ, 1971ರಲ್ಲಿ ಐದು ಮಹಡಿಗಳ ಇನ್ನೂ ಎರಡು ಕಟ್ಟಡಗಳನ್ನು ಕಟ್ಟಲಾಯಿತು. ಮತ್ತು ಇದರ ಮಗ್ಗುಲಲ್ಲಿದ್ದ ಫ್ಯಾಕ್ಟರಿಯನ್ನು ಖರೀದಿಸಿ, ಪುನಃ ಸರಿಪಡಿಸಿ, ಈ ಕಟ್ಟಡ ಸಂಕೀರ್ಣಕ್ಕೆ ಕೂಡಿಸಲಾಯಿತು. ಆದರೆ ಕೆಲವಾರು ವರ್ಷಗಳೊಳಗೆ, ರಾಜ್ಯ ಘೋಷಕರ ಸತತವಾದ ಹೆಚ್ಚಳವು—1975ರಲ್ಲಿ ನಾವು 1,00,000 ಸಂಖ್ಯೆಯನ್ನೂ ಮೀರಿದ್ದೆವು—ಇನ್ನೂ ಹೆಚ್ಚಿನ ಸ್ಥಳವನ್ನು ಅಗತ್ಯಪಡಿಸಿತು.
ಆದುದರಿಂದ, ಸಾವ್ ಪಾವ್ಲೂವಿನಿಂದ 140 ಕಿಲೊಮೀಟರ್ಗಳಷ್ಟು ದೂರದಲ್ಲಿ, ಕಸಾರೀಯೊ ಲಾಂಸೇಯ ಚಿಕ್ಕ ಪಟ್ಟಣದ ಸಮೀಪದಲ್ಲಿ, ಕಟ್ಟಡಗಳ ಹೊಸ ಸಂಕೀರ್ಣವೊಂದನ್ನು ಕಟ್ಟಲಾಯಿತು. 1980ರಲ್ಲಿ, 170 ಮಂದಿ ಸದಸ್ಯರ ನಮ್ಮ ಬೆತೆಲ್ ಕುಟುಂಬವು, ಈ ಹೊಸ ಸೌಕರ್ಯಗಳಿಗೆ ಸ್ಥಳಾಂತರಿಸಲ್ಪಟ್ಟಿತು. ಅಂದಿನಿಂದ ರಾಜ್ಯ ಕೆಲಸವು ಎದ್ದುಕಾಣುವಂತಹ ರೀತಿಯಲ್ಲಿ ಬೆಳೆದಿದೆ. ಈಗ ಬ್ರೆಸಿಲ್ನಲ್ಲಿನ ಸಾರುವ ಕೆಲಸದಲ್ಲಿ 4,10,000ಕ್ಕೂ ಹೆಚ್ಚು ಜನರು ಕ್ರಮವಾಗಿ ಪಾಲ್ಗೊಳ್ಳುತ್ತಿದ್ದಾರೆ! ಈ ಎಲ್ಲ ರಾಜ್ಯ ಘೋಷಕರ ಆತ್ಮಿಕ ಆವಶ್ಯಕತೆಗಳನ್ನು ನೋಡಿಕೊಳ್ಳಲಿಕ್ಕಾಗಿ, ಬೈಬಲ್ ಸಾಹಿತ್ಯವನ್ನು ಮುದ್ರಿಸಲು ನಾವು ಹೊಸ ಫ್ಯಾಕ್ಟರಿಗಳನ್ನು ಮತ್ತು ಬೆತೆಲ್ ಸ್ವಯಂಸೇವಕರಿಗೆ ಸ್ಥಳಾವಕಾಶಮಾಡಿಕೊಡಲಿಕ್ಕಾಗಿ ಹೊಸ ನಿವಾಸಗಳನ್ನು ಕಟ್ಟುತ್ತಾ ಇರಬೇಕಾಯಿತು. ಸದ್ಯಕ್ಕೆ ನಮ್ಮಲ್ಲಿ ಸುಮಾರು 1,100 ಬೆತೆಲ್ ಕುಟುಂಬ ಸದಸ್ಯರಿದ್ದಾರೆ!
ಅಪೂರ್ವವಾದ ಸುಯೋಗಗಳು
ನಾನು ಬೆತೆಲ್ ಸೇವೆಯನ್ನು ಒಂದು ಅಮೂಲ್ಯ ಸುಯೋಗವಾಗಿ ಪರಿಗಣಿಸುತ್ತೇನೆ. ಹೀಗೆ, ಆರಂಭದ ವರ್ಷಗಳಲ್ಲಿ ನಾನು ಪುನರ್ವಿವಾಹ ಮಾಡಿಕೊಳ್ಳಬೇಕೆಂದು ಭಾವಿಸಿದ್ದೆನಾದರೂ, ಬೆತೆಲ್ನಲ್ಲಿನ ನನ್ನ ಸುಯೋಗಗಳ ಮೇಲೆ ಮತ್ತು ಸಾರುವ ಕೆಲಸದ ಮೇಲೆ ಸಂಪೂರ್ಣವಾಗಿ ಮನಸ್ಸನ್ನು ಕೇಂದ್ರೀಕರಿಸುವ ಆಯ್ಕೆಯನ್ನು ನಾನು ಮಾಡಿದೆ. ಮುದ್ರಣ ವ್ಯವಸ್ಥೆಯಲ್ಲಿ ಅಸಂಖ್ಯಾತ ಯುವ ಜನರ ಜೊತೆಯಲ್ಲಿ ಕಾರ್ಯನಡಿಸುವ ಹಾಗೂ ಅವರ ನೇಮಕಗಳಲ್ಲಿ ಅವರನ್ನು ತರಬೇತುಗೊಳಿಸುವ ಸಂತೋಷವನ್ನು ನಾನು ಇಲ್ಲಿ ಪಡೆದುಕೊಂಡಿದ್ದೇನೆ. ಅವರು ನನ್ನ ಪುತ್ರರೋ ಎಂಬಂತೆ ಅವರೊಂದಿಗೆ ವ್ಯವಹರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಅವರ ಹುರುಪು ಹಾಗೂ ನಿಸ್ವಾರ್ಥ ಮನೋಭಾವವು, ನನಗೆ ಮಹತ್ತರವಾದ ಪ್ರೋತ್ಸಾಹದ ಮೂಲವಾಗಿದೆ.
ಗತ ವರ್ಷಗಳಲ್ಲಿ ಅತ್ಯುತ್ತಮ ಜೊತೆವಾಸಿ (ರೂಮ್ಮೇಟ್)ಗಳ ಸಹವಾಸದಲ್ಲಿ ಆನಂದಿಸಿರುವುದು ಇನ್ನೊಂದು ಸುಯೋಗವಾಗಿದೆ. ವ್ಯಕ್ತಿತ್ವದಲ್ಲಿನ ಭಿನ್ನತೆಗಳು ಆಗಿಂದಾಗ್ಗೆ ಒಂದು ಪಂಥಾಹ್ವಾನವನ್ನೊಡ್ಡಿವೆ ಎಂಬುದು ನಿಜ. ಆದರೂ ಇತರರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸಬಾರದೆಂಬುದನ್ನು ನಾನು ಕಲಿತೆ. ಅಲ್ಪವಿಷಯವನ್ನು ವಿಪರೀತ ಮಾಡುವುದರಿಂದ ಅಥವಾ ಸ್ವತಃ ತೀರ ಸ್ವಪ್ರಾಮುಖ್ಯ ಮನೋಭಾವವನ್ನು ತೋರಿಸುವುದರಿಂದ ದೂರವಿರಲು ನಾನು ಹೆಣಗಾಡಿದ್ದೇನೆ. ನನ್ನನ್ನು ತೀರ ಗಂಭೀರವಾಗಿ ಪರಿಗಣಿಸದಿರುವುದು, ಇತರರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳುವಂತೆ ನನಗೆ ಸಹಾಯ ಮಾಡಿದೆ.
ನಾನು ಆನಂದಿಸಿದ ಇನ್ನೊಂದು ಅಮೂಲ್ಯ ಸುಯೋಗವು ಯಾವುದಾಗಿತ್ತೆಂದರೆ, ಅಮೆರಿಕದಲ್ಲಿ ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನಗಳನ್ನು ಹಾಜರಾಗಲು ಶಕ್ತನಾಗಿರುವುದೇ. 1963ರಲ್ಲಿ, ನ್ಯೂ ಯಾರ್ಕಿನ ಯಾಂಕಿ ಸ್ಟೇಡಿಯಮ್ನಲ್ಲಿ ನಡೆದ, “ನಿತ್ಯವಾದ ಸುವಾರ್ತೆ” ಸಮ್ಮೇಳನವು ಇವುಗಳಲ್ಲಿ ಒಂದಾಗಿತ್ತು. ಮತ್ತು ಇನ್ನೊಂದು, 1969ರಲ್ಲಿ ಅದೇ ಸ್ಥಳದಲ್ಲಿ ನಡೆದ “ಭೂಮಿಯ ಮೇಲೆ ಶಾಂತಿ” ಅಂತಾರಾಷ್ಟ್ರೀಯ ಸಮ್ಮೇಳನವಾಗಿತ್ತು. ನಾನು ಅಲ್ಲಿದ್ದಾಗ, ಸಮೀಪದಲ್ಲಿದ್ದ, ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯವನ್ನು ಭೇಟಿಮಾಡುವ ಆನಂದ ನನಗಿತ್ತು!
ಬೆತೆಲ್ ಕುಟುಂಬದ ಬೆಳಗಿನ ಆರಾಧನೆಯ ಮೇಲ್ವಿಚಾರಣೆಯಲ್ಲಿ, ಹತ್ತು ವರ್ಷಗಳಿಂದ ಇತರ ಹಿರಿಯರೊಂದಿಗೆ ಸರದಿ ಪ್ರಕಾರವಾಗಿ ಪಾಲ್ಗೊಳ್ಳುವುದು ಸಹ ನನ್ನ ಸುಯೋಗವಾಗಿತ್ತು. ಆದರೂ, ನನಗೆ ಬಹಳ ಆನಂದವನ್ನೂ ಪ್ರೋತ್ಸಾಹವನ್ನೂ ತಂದಿರುವ ಅತ್ಯಂತ ದೊಡ್ಡ ಸುಯೋಗವು, ನಮ್ಮ ಗುರುವಾದ ಯೇಸು ಕ್ರಿಸ್ತನು ರಾಜ್ಯ ಸಂದೇಶವನ್ನು ಕೊಂಡೊಯ್ದಂತೆಯೇ, ಪ್ರಾಮಾಣಿಕ ಹೃದಯದ ಜನರಿಗೆ ರಾಜ್ಯ ಸಂದೇಶವನ್ನು ಕೊಂಡೊಯ್ಯುವ ಸುಯೋಗವೇ ಆಗಿದೆ.
ಈಚಿನ ವರ್ಷಗಳಲ್ಲಿ, ಪಾರ್ಕಿನ್ಸನ್ ರೋಗದೊಂದಿಗೆ ಜೀವಿಸುವ ಪಂಥಾಹ್ವಾನವನ್ನು ನಾನು ಎದುರಿಸಿದ್ದೇನೆ. ಬೆತೆಲ್ನ ಇನ್ಫರ್ಮರಿ (ಚಿಕಿತ್ಸಾಲಯ)ಯಲ್ಲಿರುವ ಸಹೋದರಸಹೋದರಿಯರ ಪ್ರೀತಿಪೂರ್ಣ ಕಾಳಜಿಯು, ನನಗೆ ಸತತವಾದ ಸಹಾಯ ಹಾಗೂ ಸಂತೈಸುವಿಕೆಯ ಮೂಲವಾಗಿದೆ. ಸಂಪೂರ್ಣ ಭರವಸೆಯಿಂದ, ಯೆಹೋವನ ಸತ್ಯಾರಾಧನೆಯ ಪರವಾಗಿ ನನ್ನಿಂದಾದಷ್ಟನ್ನು ಮಾಡುತ್ತಾ ಮುಂದುವರಿಯಲಿಕ್ಕಾಗಿ ಆತನು ನನಗೆ ಬಲವನ್ನು ಕೊಡುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.
[ಪುಟ 23 ರಲ್ಲಿರುವ ಚಿತ್ರ]
ನಾನು ಈಗ ವಾಸಿಸುತ್ತಿರುವ ಬ್ರೆಸಿಲ್ ಬ್ರಾಂಚ್
[ಪುಟ 23 ರಲ್ಲಿರುವ ಚಿತ್ರ]
ನನ್ನ ಹೆಂಡತಿಯೊಂದಿಗೆ, ಆಕೆ 1945ರಲ್ಲಿ ಮೃತಪಟ್ಟಳು