ಜೀವನೀತಿ ನಿಯಮಾವಳಿ ಮತ್ತು ರಕ್ತರಹಿತ ಶಸ್ತ್ರಕ್ರಿಯೆ
ಇತ್ತೀಚಿನ ವರ್ಷಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ಕಂಡಿವೆ. ಆದರೂ, ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಕೆಲವು ಪ್ರಗತಿಗಳು ನೈತಿಕ ಸಮಸ್ಯೆಗಳನ್ನೆಬ್ಬಿಸಿವೆ.
ಡಾಕ್ಟರರಿಗೆ ಈ ಕೆಳಗಿನವುಗಳಂತಹ ಉಭಯಸಂಕಟಗಳ ಕುರಿತು ಯೋಚಿಸಬೇಕಾಗುತ್ತದೆ: ರೋಗಿಯು ಘನತೆಯಿಂದ ಸಾಯಶಕ್ತನಾಗುವ ಹಾಗೆ, ಕೆಲವು ಬಾರಿ ಆಕ್ರಮಣಕಾರಕ ವೈದ್ಯಕೀಯ ಚಿಕಿತ್ಸೆಯನ್ನು ತ್ಯಜಿಸಬೇಕೊ? ಒಬ್ಬ ಡಾಕ್ಟರನು ರೋಗಿಯ ಹಿತಾಸಕ್ತಿಯಿಂದ ತಾನು ಅದನ್ನು ಮಾಡುತ್ತೇನೆಂದೆಣಿಸಿದರೆ, ರೋಗಿಯ ತೀರ್ಮಾನವನ್ನು ತಳ್ಳಿಹಾಕಬೇಕೊ? ದುಬಾರಿ ಚಿಕಿತ್ಸೆಯು ಎಲ್ಲರಿಗೂ ದೊರೆಯದಿರುವಾಗ, ಆರೋಗ್ಯಾರೈಕೆಯು ನ್ಯಾಯಸಮ್ಮತವಾಗಿ ಹೇಗೆ ಹಂಚಿಕೊಳ್ಳಲ್ಪಡಬೇಕು?
ಇಂತಹ ಜಟಿಲ ವಿವಾದಾಂಶಗಳು, ಜೀವನೀತಿ ನಿಯಮಾವಳಿಯೆಂಬ ವೈದ್ಯಕೀಯ ವಿಧಾನ (ಡಿಸ್ಲಿಪಿನ್)ವನ್ನು ಚರ್ಚಾಸ್ಥಾನಕ್ಕೆ ತಂದಿವೆ. ಈ ವಿಶೇಷ ವಿಧಾನದ ಉದ್ದೇಶವು, ಡಾಕ್ಟರರು ಮತ್ತು ವಿಜ್ಞಾನಿಗಳು, ಜೀವಶಾಸ್ತ್ರೀಯ ಸಂಶೋಧನೆ ಮತ್ತು ವೈದ್ಯಕೀಯ ಪ್ರಗತಿಗಳ ನೈತಿಕ ತೊಡಕುಗಳೊಂದಿಗೆ ವ್ಯವಹರಿಸುವಂತೆ ಸಹಾಯಮಾಡುವುದೇ ಆಗಿದೆ. ಅತಿ ಕಷ್ಟಕರವಾದ ನಿರ್ಣಯಗಳಲ್ಲಿ ಹೆಚ್ಚಿನವು ಆಸ್ಪತ್ರೆಗಳಲ್ಲಿ ಏಳುವುದರಿಂದ, ಅನೇಕ ಆಸ್ಪತ್ರೆಗಳು ಜೀವನೀತಿ ನಿಯಮಾವಳಿ (ಬಯೋಎಥಿಕಲ್) ಕಮಿಟಿಗಳನ್ನು ಸ್ಥಾಪಿಸಿವೆ. ಸಾಧಾರಣವಾಗಿ, ಡಾಕ್ಟರರು ಮತ್ತು ವಕೀಲರು ಸೇರಿರುವ ಆ ಕಮಿಟಿಯ ಸದಸ್ಯರು, ಎಲ್ಲಿ ಔಷಧದಲ್ಲಿನ ನೈತಿಕ ಸಮಸ್ಯೆಗಳು ವಿಶ್ಲೇಷಿಸಲ್ಪಡುತ್ತವೋ ಅಂತಹ ಜೀವನೀತಿ ನಿಯಮಾವಳಿ ಚರ್ಚಾಗೋಷ್ಠಿಗಳಿಗೆ ಹಾಜರಾಗುತ್ತಾರೆ.
ಅಂತಹ ಚರ್ಚಾಗೋಷ್ಠಿಗಳಲ್ಲಿ ಪದೇ ಪದೇ ಎಬ್ಬಿಸಲ್ಪಟ್ಟಿರುವ ಕೆಲವು ಪ್ರಶ್ನೆಗಳು ಯಾವುವೆಂದರೆ, ಪ್ರಧಾನವಾಗಿ ಧಾರ್ಮಿಕ ಕಾರಣಗಳಿಂದಾಗಿ ರಕ್ತಪೂರಣಗಳನ್ನು ತೆಗೆದುಕೊಳ್ಳಲು ನಿರಾಕರಿಸುವ ಯೆಹೋವನ ಸಾಕ್ಷಿಗಳ ನಂಬಿಕೆಯನ್ನು ಡಾಕ್ಟರರು ಎಷ್ಟರ ಮಟ್ಟಿಗೆ ಗೌರವಿಸಬೇಕು? ಅದು ವೈದ್ಯಕೀಯವಾಗಿ “ಸೂಕ್ತ”ವೆಂದು ತೋರಿಬರುವಲ್ಲಿ, ಒಬ್ಬ ಡಾಕ್ಟರನು ರೋಗಿಗೆ, ರೋಗಿಯ ಇಷ್ಟಕ್ಕೆ ಪ್ರತಿಕೂಲವಾಗಿ ರಕ್ತಪೂರಣವನ್ನು ಮಾಡಬೇಕೊ? ‘ರೋಗಿಗೆ ತಿಳಿದಿರದ ವಿಷಯವು ಅವನಿಗೆ ಹಾನಿಮಾಡದು’ ಎಂಬಂತೆ, ರೋಗಿಗೆ ತಿಳಿಯದೇ ಹಾಗೆ ಮಾಡುವುದು ನೈತಿಕವಾಗಿರುವುದೊ?
ಅಂತಹ ವಾದಾಂಶಗಳನ್ನು ಯೋಗ್ಯವಾಗಿ ನಿರ್ವಹಿಸಲು, ಡಾಕ್ಟರರಿಗೆ ಸಾಕ್ಷಿಗಳ ದೃಷ್ಟಿಕೋನದ ವಸ್ತುನಿಷ್ಠೆಯ ತಿಳಿವಳಿಕೆ ಅಗತ್ಯ. ಯೆಹೋವನ ಸಾಕ್ಷಿಗಳಾದರೋ, ಪರಸ್ಪರ ಅರ್ಥಮಾಡಿಕೊಳ್ಳುವಿಕೆಯು ಮುಖಾಬಿಲೆಯನ್ನು ತಪ್ಪಿಸಲು ಸಹಾಯಮಾಡಬಲ್ಲದೆಂದು ಗ್ರಹಿಸಿದವರಾಗಿ, ತಮ್ಮ ಸ್ಥಾನವನ್ನು ಡಾಕ್ಟರರಿಗೆ ವಿವರಿಸಲು ಆತುರಪಡುತ್ತಾರೆ.
ದೃಷ್ಟಿಕೋನಗಳ ವಿನಿಮಯ
ಜೀವನೀತಿ ನಿಯಮಾವಳಿಯ ಪ್ರಮುಖ ಸ್ಪ್ಯಾನಿಷ್ ತಜ್ಞರಾದ ಪ್ರೊಫೆಸರ್ ಡ್ಯೇಗೊ ಗ್ರಾಸ್ಯಾ, ತಮ್ಮ ತರಗತಿಯಲ್ಲಿ ಇಂತಹ ಮಾತುಕತೆ ನಡೆಯುವಂತೆ ಬಯಸಿದರು. “ನಿಮಗೆ [ಯೆಹೋವನ ಸಾಕ್ಷಿಗಳಿಗೆ], ರಕ್ತಪೂರಣಗಳ ಸಂಬಂಧದಲ್ಲಿ ಕಷ್ಟಗಳು ಬಂದಿರುವುದರಿಂದ . . . ನಿಮ್ಮ ಚಿಂತೆಗಳನ್ನು ವ್ಯಕ್ತಪಡಿಸುವಂತೆ ಸಂದರ್ಭವನ್ನು ಕೊಡುವುದು ಯೋಗ್ಯ” ಎಂದರು ಪ್ರೊಫೆಸರರು.
ಹೀಗೆ, ಜೂನ್ 5, 1996ರಂದು, ಯೆಹೋವನ ಸಾಕ್ಷಿಗಳ ಮೂವರು ಪ್ರತಿನಿಧಿಗಳನ್ನು, ಅವರು ತಮ್ಮ ದೃಷ್ಟಿಕೋನವನ್ನು ವಿವರಿಸಲಾಗುವಂತೆ, ಸ್ಪೆಯ್ನ್ನ ಮಡ್ರಿಡ್ನ ಕಾಂಪ್ಲೂಟೆನ್ಸ್ ವಿಶ್ವವಿದ್ಯಾನಿಲಯಕ್ಕೆ ಆಮಂತ್ರಿಸಲಾಯಿತು. ಸುಮಾರು 40 ಮಂದಿ ಡಾಕ್ಟರರೂ ಇತರ ವೃತ್ತಿಪರರೂ ಅಲ್ಲಿ ಉಪಸ್ಥಿತರಿದ್ದರು.
ಸಾಕ್ಷಿಗಳು ಒಂದು ಸಂಕ್ಷಿಪ್ತ ಭಾಷಣವನ್ನು ಕೊಟ್ಟ ತರುವಾಯ, ಆ ಕಾರ್ಯಕ್ರಮವನ್ನು ಪ್ರಶ್ನೆಗಳಿಗಾಗಿ ತೆರೆಯಲಾಯಿತು. ಒಂದು ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವ ಹಕ್ಕು, ಒಬ್ಬ ವಯಸ್ಕ ರೋಗಿಗಿರಬೇಕು ಎಂಬುದನ್ನು ಹಾಜರಿದ್ದ ಎಲ್ಲರೂ ಸಮ್ಮತಿಸಿದರು. ರೋಗಿಯ ತಿಳಿವಳಿಕೆಯ ಸಮ್ಮತಿಯಿಲ್ಲದೆ ರಕ್ತಪೂರಣವನ್ನು ಎಂದಿಗೂ ಮಾಡಬಾರದೆಂದೂ ತರಗತಿಯು ಅಭಿಪ್ರಯಿಸಿತು. ಆದರೂ, ಸಾಕ್ಷಿಗಳ ನಿಲುವಿನ ಕುರಿತಾದ ಕೆಲವು ಅಂಶಗಳು ಅವರಿಗೆ ಚಿಂತೆಯನ್ನುಂಟುಮಾಡಿದವು.
ಒಂದು ಪ್ರಶ್ನೆ ಹಣದ ಸಂಬಂಧದಲ್ಲಿತ್ತು. ಕೆಲವು ಬಾರಿ ರಕ್ತರಹಿತ ಶಸ್ತ್ರಕ್ರಿಯೆಯಲ್ಲಿ, ಲೇಸರ್ ಸರ್ಜರಿಯಂತಹ ವಿಶೇಷ ಉಪಕರಣಗಳು ಹಾಗೂ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸುವ ಇರಿತ್ರೋಪಾಯಿಟಿನ್ನಂತಹ ದುಬಾರಿ ಔಷಧಗಳು ಸೇರಿರುತ್ತವೆ. ಕಡಮೆ ಖರ್ಚಿನ ಮಾರ್ಗ (ಅನುರೂಪವಾದ ಹೊಮಾಲಗಸ್ ರಕ್ತ)ವನ್ನು ನಿರಾಕರಿಸುವುದರಿಂದ, ಸಾರ್ವಜನಿಕಾರೋಗ್ಯ ಖಾತೆಯು ತಮಗೆ ವಿಶೇಷ ಹಕ್ಕುಗಳನ್ನು ಕೊಡುವಂತೆ ಸಾಕ್ಷಿಗಳು ನಿರೀಕ್ಷಿಸುತ್ತಾರೊ ಎಂದು ಒಬ್ಬ ಡಾಕ್ಟರರು ಕುತೂಹಲಪಟ್ಟರು.
ಹಣವು, ಡಾಕ್ಟರರು ಪರಿಗಣಿಸಲೇಬೇಕಾಗಿರುವಂತಹ ಒಂದು ಅವಶ್ಯ ವಿಷಯವಾಗಿದೆ ಎಂಬುದನ್ನು ಗ್ರಹಿಸುತ್ತ, ಒಬ್ಬ ಸಾಕ್ಷಿ ಪ್ರತಿನಿಧಿಯು, ಹೊಮಾಲಗಸ್ ರಕ್ತಪೂರಣಗಳನ್ನು ಮಾಡುವುದರಲ್ಲಿ ಕಂಡುಬರದಿರುವ ಖರ್ಚುಗಳನ್ನು ವಿಶ್ಲೇಷಿಸುವ ಪ್ರಕಟಿತ ಅಧ್ಯಯನಗಳನ್ನು ಸೂಚಿಸಿ ಮಾತನಾಡಿದರು. ಇದರಲ್ಲಿ ಪೂರಣ ಸಂಬಂಧಿತ ತೊಡಕುಗಳಿಗೆ ಚಿಕಿತ್ಸೆಮಾಡುವ ಖರ್ಚು ಹಾಗೂ ಇಂತಹ ತೊಡಕುಗಳಿಂದಾಗಿ ಪರಿಣಮಿಸುವ ಆದಾಯನಷ್ಟವು ಸೇರಿರುತ್ತದೆ. ಅಮೆರಿಕದಲ್ಲಿ ಮಾಡಿದ ಒಂದು ವ್ಯಾಪಕ ಅಧ್ಯಯನವನ್ನು ಅವರು ಉಲ್ಲೇಖಿಸಿದರು. ಸಾಮಾನ್ಯವಾದ ಒಂದು ಯೂನಿಟ್ ರಕ್ತಕ್ಕೆ, ಆರಂಭದಲ್ಲಿ ಕೇವಲ 250 ಡಾಲರ್ಗಳಷ್ಟು ಬೆಲೆಯಿದ್ದರೂ, ಅದು ಕಾರ್ಯತಃ 1,300 ಡಾಲರ್ಗಳಷ್ಟು—ಮೊದಲ ಮೊತ್ತಕ್ಕಿಂತ ಐದಕ್ಕೂ ಹೆಚ್ಚು ಪಟ್ಟು—ಖರ್ಚನ್ನು ಉತ್ಪಾದಿಸಿತೆಂದು ಅದು ಸೂಚಿಸಿತು. ಹೀಗೆ, ಎಲ್ಲ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ, ರಕ್ತರಹಿತ ಶಸ್ತ್ರಕ್ರಿಯೆಯು ಕಡಮೆ ಖರ್ಚಿನದ್ದಾಗಿದೆ ಎಂದು ಅವರು ಸೂಚಿಸಿದರು. ಅಲ್ಲದೆ, ರಕ್ತರಹಿತ ಶಸ್ತ್ರಕ್ರಿಯೆಯ ಹೆಚ್ಚುವರಿಯ ಖರ್ಚೆಂದು ಕರೆಯಲ್ಪಡುವಂತಹದ್ದು, ಪುನರುಪಯೋಗಿಸಸಾಧ್ಯವಿರುವ ಸಾಧನ ಸಲಕರಣೆಯೇ.
ಅನೇಕ ಡಾಕ್ಟರುಗಳ ಮನಸ್ಸಿನಲ್ಲಿದ್ದ ಇನ್ನೊಂದು ಪ್ರಶ್ನೆಯು, ಸಮುದಾಯ ಒತ್ತಡಕ್ಕೆ ಸಂಬಂಧಪಟ್ಟದ್ದೇ. ಒಬ್ಬ ಸಾಕ್ಷಿಯು ಚಂಚಲನಾಗಿ ರಕ್ತಪೂರಣವನ್ನು ತೆಗೆದುಕೊಳ್ಳುವಲ್ಲಿ ಏನಾಗುವುದೆಂದು ಅವರು ಕುತೂಹಲಪಟ್ಟರು. ಅವನು ಸಾಕ್ಷಿ ಸಮುದಾಯದಿಂದ ಬಹಿಷ್ಕರಿಸಲ್ಪಡುವನೊ?
ಪ್ರತಿವರ್ತನೆಯು ವಾಸ್ತವಿಕ ಸನ್ನಿವೇಶದ ಮೇಲೆ ಹೊಂದಿಕೊಂಡಿರುವುದು. ಏಕೆಂದರೆ ದೇವರ ನಿಯಮಕ್ಕೆ ಅವಿಧೇಯತೆಯು, ನಿಜವಾಗಿಯೂ ಗಂಭೀರವಾದ, ಸಭಾ ಹಿರಿಯರು ಪರೀಕ್ಷಿಸಬೇಕಾದ ವಿಷಯವಾಗಿದೆ. ಜೀವಾಪಾಯವಿದ್ದ ಶಸ್ತ್ರಕ್ರಿಯೆಯ ಸಂಕಟಕರವಾದ ಅನುಭವಕ್ಕೊಳಗಾಗಿ, ರಕ್ತಪೂರಣವನ್ನು ಸ್ವೀಕರಿಸಿದ ಯಾವನೇ ವ್ಯಕ್ತಿಗೂ ಸಾಕ್ಷಿಗಳು ಸಹಾಯಮಾಡಬಯಸುತ್ತಾರೆ. ಅಂತಹ ಸಾಕ್ಷಿಯು ತೀರ ಪೇಚಾಟಕ್ಕೊಳಗಾಗಿ, ದೇವರೊಂದಿಗಿನ ತನ್ನ ಸಂಬಂಧದ ಕುರಿತು ಚಿಂತಿತನಾಗುವುದು ನಿಸ್ಸಂದೇಹ. ಅಂತಹ ವ್ಯಕ್ತಿಗೆ, ಸಹಾಯವೂ ಅವನ ಸ್ಥಿತಿಯ ಅರ್ಥಮಾಡಿಕೊಳ್ಳುವಿಕೆಯೂ ಅಗತ್ಯವಾಗಿರಬಹುದು. ಕ್ರೈಸ್ತತ್ವದ ಅಸ್ತಿವಾರವು ಪ್ರೀತಿಯಾಗಿರುವುದರಿಂದ, ಹಿರಿಯರು ಎಲ್ಲ ನ್ಯಾಯನಿರ್ಣಾಯಕ ಸಂದರ್ಭಗಳಲ್ಲಿ ಮಾಡುವಂತೆ, ಸ್ಥಿರತೆಯನ್ನು ಕರುಣೆಯಿಂದ ಮೃದುಗೊಳಿಸಲು ಬಯಸುವರು.—ಮತ್ತಾಯ 9:12, 13; ಯೋಹಾನ 7:24.
“ನಿಮ್ಮ ನೈತಿಕ ಸ್ಥಾನವನ್ನು ಸ್ವಲ್ಪ ಸಮಯದೊಳಗೆ ನೀವು ಪುನಃ ಮೌಲ್ಯಮಾಪನ ಮಾಡಲಿಕ್ಕಿಲ್ಲವೊ?” ಎಂದು ಅಮೆರಿಕದಿಂದ ಭೇಟಿಮಾಡುತ್ತಿದ್ದ ಜೀವನೀತಿ ನಿಯಮಾವಳಿಯ ಪ್ರೊಫೆಸರರೊಬ್ಬರು ಕೇಳಿದರು. “ಇತ್ತೀಚಿನ ವರುಷಗಳಲ್ಲಿ ಬೇರೆ ಧರ್ಮಗಳು ಹಾಗೆ ಮಾಡಿವೆ.”
ರಕ್ತದ ಪವಿತ್ರತೆಯ ಕುರಿತಾದ ಸಾಕ್ಷಿಗಳ ಸ್ಥಾನವು, ನಿಯತಕಾಲಿಕವಾಗಿ ಪುನರ್ವಿಮರ್ಶಿಸಲ್ಪಡುವ ನೈತಿಕ ದೃಷ್ಟಿಕೋನವಾಗಿರುವ ಬದಲು, ತಾತ್ತ್ವಿಕ ನಂಬಿಕೆಯಾಗಿದೆ ಎಂದು ಅವರಿಗೆ ಹೇಳಲಾಯಿತು. ಸ್ಪಷ್ಟವಾದ ಬೈಬಲಿನ ಆಜ್ಞೆಯು, ಯಾವ ರಾಜಿಗೂ ಅವಕಾಶವನ್ನು ಕೊಡುವುದಿಲ್ಲ. (ಅ. ಕೃತ್ಯಗಳು 15:28, 29) ಒಬ್ಬ ಸಾಕ್ಷಿಗೆ ಅಂತಹ ದೈವಿಕ ನಿಯಮೋಲ್ಲಂಘನೆಯು, ವಿಗ್ರಹಾರಾಧನೆ ಅಥವಾ ಹಾದರವನ್ನು ಮನ್ನಿಸುವಷ್ಟೇ ಅನಂಗೀಕೃತವಾಗಿರುವುದು.
ಮಡ್ರಿಡ್ನ ಜೀವನೀತಿ ನಿಯಮಾವಳಿ ಚರ್ಚಾಗೋಷ್ಠಿಯಲ್ಲಿ ಹಾಜರಿದ್ದ ಡಾಕ್ಟರರಂತೆ, ತಮ್ಮ ಬೈಬಲಾಧಾರಿತ ದೃಢಸಂಕಲ್ಪಗಳಿಗೆ ಹೊಂದಿಕೊಳ್ಳುವ, ಅನ್ಯರೀತಿಯ ಚಿಕಿತ್ಸೆಗಾಗಿ ಪ್ರಯತ್ನಿಸುವ ತಮ್ಮ ನಿರ್ಣಯವನ್ನು ಗೌರವಿಸುವ ಡಾಕ್ಟರುಗಳ ಸಮ್ಮತಿಯನ್ನು ಯೆಹೋವನ ಸಾಕ್ಷಿಗಳು ಬಹಳವಾಗಿ ಗಣ್ಯಮಾಡುತ್ತಾರೆ. ಜೀವನೀತಿ ನಿಯಮಾವಳಿಯು, ಡಾಕ್ಟರ್-ರೋಗಿ ಸಂಬಂಧಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಮತ್ತು ರೋಗಿಯ ಬಯಕೆಗಳಿಗೆ ಹೆಚ್ಚು ಗೌರವವನ್ನು ಪ್ರವರ್ಧಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದೆಂಬುದು ನಿಸ್ಸಂಶಯ.
ಒಬ್ಬ ಪ್ರಸಿದ್ಧ ಸ್ಪ್ಯಾನಿಷ್ ವೈದ್ಯರು ಹೇಳಿದರೆಂದು ವರದಿಯಾಗಿರುವಂತೆ, ತಾವು “ಅಪರಿಪೂರ್ಣ ಉಪಕರಣಗಳು ಮತ್ತು ವಿಶ್ವಾಸಾರ್ಹವಲ್ಲದ ಮಾಧ್ಯಮಗಳೊಂದಿಗೆ” ಕೆಲಸಮಾಡುತ್ತೇವೆಂಬುದನ್ನು, ಡಾಕ್ಟರರು ಯಾವಾಗಲೂ ಜ್ಞಾಪಿಸಿಕೊಳ್ಳಬೇಕು. ಆದಕಾರಣ ಅವರಿಗೆ, “ವಿಶೇಷವಾಗಿ ಜ್ಞಾನದ ಕೊರತೆಯಿರುವಲ್ಲಿ ಪ್ರೀತಿಯು ಸದಾ ವ್ಯಕ್ತಪಡಿಸಲ್ಪಡಬೇಕೆಂಬ ನಿಶ್ಚಿತಾಭಿಪ್ರಾಯವು” ಅಗತ್ಯ.