ಸೆರೆಮನೆಯಲ್ಲಿರುವವರಿಗೆ ಆತ್ಮಿಕ ಸ್ವಾತಂತ್ರ್ಯವನ್ನು ತರುವುದು
“ನಾವು ನಿಮಗಾಗಿ ಕಾಯುತ್ತಾ ಇದ್ದೇವೆ.” “ಕಳೆದ ಕೆಲವು ರಾತ್ರಿಗಳಲ್ಲಿ, ನಿಮ್ಮ ಬರುವಿಕೆಯ ಕನಸನ್ನು ನಾನು ಕಂಡಿದ್ದೆ.” “ನಮ್ಮನ್ನು ಕ್ರಮವಾಗಿ ಸಂದರ್ಶಿಸುವಂತೆ ಯಾರಾದರೊಬ್ಬರನ್ನು ನೇಮಿಸುತ್ತಿರುವುದಕ್ಕಾಗಿ ನಿಮಗೆ ಉಪಕಾರ.” “ಯೆಹೋವನಿಂದ ಹಾಗೂ ಆತನ ಸಂಸ್ಥೆಯಿಂದ ನಾವು ಅಪಾತ್ರವಾಗಿ ಪಡೆದುಕೊಳ್ಳುವ ಪ್ರತಿಯೊಂದು ಆರ್ಶೀವಾದಕ್ಕಾಗಿಯೂ, ತಕ್ಕ ಸಮಯಕ್ಕೆ ಕೊಡಲ್ಪಟ್ಟಿರುವ ಆತ್ಮಿಕಾಹಾರಕ್ಕಾಗಿಯೂ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ.”
ಕೃತಜ್ಞತೆಯ ಈ ಅಭಿವ್ಯಕ್ತಿಗಳಿಗೆ ಕಾರಣವು ಏನಾಗಿತ್ತು? ಇವು, ಮೆಕ್ಸಿಕೊದಲ್ಲಿನ ವಿವಿಧ ಸೆರೆಮನೆಗಳಲ್ಲಿರುವ ಸಹನಿವಾಸಿಗಳ ಕೆಲವು ಅಭಿವ್ಯಕ್ತಿಗಳಾಗಿವೆ. ಸೆರೆಮನೆಯಲ್ಲಿದ್ದಾಗಲೂ ತಮಗೆ ಆತ್ಮಿಕ ಸ್ವಾತಂತ್ರ್ಯವನ್ನು ತಂದಿರುವ, ಯೆಹೋವನ ಸಾಕ್ಷಿಗಳಿಂದ ತಾವು ಪಡೆಯುತ್ತಿರುವ ಗಮನವನ್ನು ಅವರು ಗಣ್ಯಮಾಡುತ್ತಾರೆ. ಮೆಕ್ಸಿಕೊದಲ್ಲಿ, ಸಹನಿವಾಸಿಗಳ ಆತ್ಮಿಕ ಅಗತ್ಯಗಳನ್ನು ಪೂರೈಸಲು, ಯೆಹೋವನ ಸಾಕ್ಷಿಗಳು ಕ್ರಮವಾಗಿ ಶುಶ್ರೂಷೆ ಮಾಡುವ 42 ಕಾರಾಗೃಹಗಳಿವೆ. ಈ ಸ್ಥಳಗಳನ್ನು, ಸೆಂಟ್ರೊ ರೇಆಡಾಪ್ಟಾಸ್ಯಾನ್ ಸೋಸ್ಯಾಲ್ (ಸೋಷಲ್ ರೀಹಬಿಲಿಟೇಷನ್ ಸೆಂಟರ್) ಎಂದು ಕರೆಯಲಾಗುತ್ತದೆ. ಇಂತಹ ಕೆಲವು ಸೆರೆಮನೆಗಳಲ್ಲಿ, ಕ್ರಿಸ್ತೀಯ ಕೂಟಗಳೂ, ಒಳ್ಳೇ ಫಲಿತಾಂಶಗಳೊಂದಿಗೆ ಕ್ರಮವಾಗಿ ಜರಗುತ್ತಿವೆ. ಉದಾಹರಣೆಗಾಗಿ, ಇತ್ತೀಚಿನ ಒಂದು ಗಣನೆಗನುಸಾರ, ಈ ಸ್ಥಳಗಳಲ್ಲಿ ಸುಮಾರು 380 ವ್ಯಕ್ತಿಗಳು ಕೂಟಗಳಿಗೆ ಹಾಜರಾಗುತ್ತಿದ್ದರು. ಆ ಸಮಯದಲ್ಲಿ, ಸರಾಸರಿ 350 ಬೈಬಲ್ ಅಧ್ಯಯನಗಳು ನಡಿಸಲ್ಪಡುತ್ತಿದ್ದವು. ಮೂವತ್ತೇಳು ಮಂದಿ ಸಾರುವ ಕೆಲಸವನ್ನು ಆರಂಭಿಸಲು ಅರ್ಹರಾಗಿದ್ದರು, ಮತ್ತು 32 ಮಂದಿ ತಮ್ಮ ಜೀವಿತಗಳನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದು, ಇದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದರು.
ಕೆಲಸವು ಮಾಡಲ್ಪಡುವ ವಿಧ
ಈ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ಸಾರುವ ಕೆಲಸವನ್ನು ಹೇಗೆ ಮುಂದುವರಿಸುತ್ತಾರೆ? ಮೊದಲಾಗಿ ಅವರು ಜವಾಬ್ದಾರರಾದ ಅಧಿಕಾರಿಗಳೊಡನೆ, ಸೆರೆಮನೆಯನ್ನು ಪ್ರವೇಶಿಸಲು ಲಿಖಿತ ಅಧಿಕಾರ ಪತ್ರಕ್ಕಾಗಿ ವಿನಂತಿಸಿಕೊಳ್ಳುತ್ತಾ, ಭೇಟಿಗಳ ಉದ್ದೇಶವನ್ನು ವಿವರಿಸುತ್ತಾರೆ—ಸೆರೆವಾಸಿಗಳು ತಮ್ಮ ಜೀವಿತದ ಗುಣಮಟ್ಟವನ್ನು ಹೇಗೆ ಉತ್ತಮಗೊಳಿಸಿಕೊಳ್ಳುವುದು ಮತ್ತು ದೇವರಿಗೆ ಮೆಚ್ಚಿಕೆಯಾಗುವಂತಹ ರೀತಿಯಲ್ಲಿ ಆತನನ್ನು ಹೇಗೆ ಸೇವಿಸುವುದೆಂಬುದನ್ನು ಅವರಿಗೆ ಕಲಿಸುವುದೇ.
ಪ್ರತಿಯೊಂದು ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಅನುಮತಿಯನ್ನು ಕೊಟ್ಟಿದ್ದಾರೆ. ಸಹನಿವಾಸಿಗಳಿಗೆ ಕೊಡಲ್ಪಡುತ್ತಿರುವ ಬೈಬಲ್ ಬೋಧನೆಯನ್ನು ಈ ಅಧಿಕಾರಿಗಳು ಗಣ್ಯಮಾಡುತ್ತಾರೆ. ಈ ಸ್ಥಳಗಳಿಗೆ ವಿಧಿಸಲ್ಪಟ್ಟಿರುವ ಭದ್ರತಾ ಕಟ್ಟುಪಾಡುಗಳಿಗೆ ಯೆಹೋವನ ಸಾಕ್ಷಿಗಳು ವಿಧೇಯರಾಗುತ್ತಾರೆಂಬುದನ್ನು ಸೆರೆಮನೆಯ ಅಧಿಕಾರಿಗಳು ಗಮನಿಸಿದ್ದಾರೆ. ಈ ಭೇಟಿ ನೀಡುವ ಶುಶ್ರೂಷಕರು ತಮ್ಮ ಕೂಟಗಳನ್ನು ನಡಿಸಲು, ಆಫೀಸುಗಳನ್ನು, ಊಟದ ಕೊಠಡಿಗಳನ್ನು, ಹಾಗೂ ಕೆಲಸದ ಕೊಠಡಿಗಳನ್ನು ಉಪಯೋಗಿಸುವಂತೆ ಅವರು ಅನುಮತಿಸಿದ್ದಾರೆ. ಆಗ್ನೇಯ ಮೆಕ್ಸಿಕೊದಲ್ಲಿರುವ ಸಂಚಾರ ಮೇಲ್ವಿಚಾರಕನೊಬ್ಬನಿಂದ ತಿಳಿಸಲ್ಪಟ್ಟ ಈ ಮುಂದಿನ ಅನುಭವದಲ್ಲಿ ತೋರಿಸಲ್ಪಟ್ಟಂತೆ, ಒಂದು ಸೆರೆಮನೆಯಲ್ಲಿ, ಚಿಕ್ಕ ರಾಜ್ಯ ಸಭಾಗೃಹವೊಂದನ್ನು ಕಟ್ಟುವ ಅನುಮತಿಯನ್ನೂ ಸಾಕ್ಷಿಗಳಿಗೆ ನೀಡಲಾಗಿತ್ತು.
“1991ರ ಮೊದಲಲ್ಲಿ ಬಹಳ ಆತ್ಮಿಕ ಹಸಿವು ಕಂಡುಬಂದ, ಟುವಾನ್ಟಿಪ್ಕ್, ವಹಾಕದಲ್ಲಿನ ಸೆರೆಮನೆಯನ್ನು ನಾವು ಸಂದರ್ಶಿಸಲಾರಂಭಿಸಿದೆವು. ಬೇಗನೆ ನಾವು 27 ಬೈಬಲ್ ಅಧ್ಯಯನಗಳನ್ನು ಆರಂಭಿಸಿದೆವು. ಸೆರೆವಾಸಿಗಳ ಆಸಕ್ತಿಯನ್ನು ಗಮನಿಸಿ, ಐದು ಸಭಾ ಕೂಟಗಳನ್ನು ಏರ್ಪಡಿಸಲಾಯಿತು. ಯೆಹೋವನಿಗಾಗಿ ಬಹಳಷ್ಟು ಪ್ರೀತಿಯನ್ನು ತೋರಿಸಿದ ಸೆರೆವಾಸಿಗಳಲ್ಲಿ ಒಬ್ಬನು, ಕೂಟಗಳನ್ನು ನಡಿಸಲು ಒಂದು ಸ್ಥಳವನ್ನು ಪಡೆಯಲಿಕ್ಕಾಗಿ, ಸೆರೆಮನೆಯ ಆವರಣದೊಳಗೆ ಒಂದು ಚಿಕ್ಕ ರಾಜ್ಯ ಸಭಾಗೃಹವನ್ನು ಕಟ್ಟಲು ನಿರ್ಧರಿಸಿದನು. ಅವನು ಸೆರೆಮನೆಯ ಮುಖ್ಯಾಧಿಕಾರಿಯ ಬಳಿಗೆ ಹೋಗಿ ಅನುಮತಿಯನ್ನು ಕೇಳಿದನು, ಮತ್ತು ಅಧಿಕಾರಿಗಳು ಬಹಳ ಸಹಕಾರವನ್ನು ತೋರಿಸಿದರು. ಡಿಸೆಂಬರ್ 1992ರ ಆರಂಭದಲ್ಲಿ, ಆರು ಸೆರೆವಾಸಿಗಳು ಸುವಾರ್ತೆಯ ಪ್ರಚಾರಕರಾಗಿ ಅರ್ಹರಾದರು. ತೋರಿಸಲ್ಪಟ್ಟ ಪ್ರಗತಿಯ ಕಾರಣ, ಸೆರೆಮನೆಯೊಳಗೆ ಜ್ಞಾಪಕದಿನವನ್ನು ನಡೆಸಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು. ನಾವು ಸೆರೆಮನೆಯ ಮುಖ್ಯಾಧಿಕಾರಿಯಲ್ಲಿ, ಕುರುಹುಗಳಾದ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತರಲು ಅನುಮತಿಗಾಗಿ ಕೇಳಿದೆವು. ಮತ್ತು ನಾಲ್ಕು ತಾಸಿನ ಚರ್ಚೆಯ ಬಳಿಕ ಅನುಮತಿಯು ಕೊಡಲ್ಪಟ್ಟಿತು.
“ಅದು ಹೀಗೆ ಸಂಭವಿಸಿತು, ಎಪ್ರಿಲ್ 3, 1993ರಂದು (ಜ್ಞಾಪಕಾಚರಣೆಯ ಮೂರು ದಿನಗಳ ಮುಂಚೆ), ಕೆಲವು ಸೆರೆವಾಸಿಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರಚಾರಕನಾಗಿದ್ದ ಒಬ್ಬನಿಗೆ ಬಿಡುಗಡೆಯ ಪತ್ರಗಳು ಸಿಕ್ಕಿದಾಗ, ಅವನು ಜ್ಞಾಪಕಾಚರಣೆಯ ತನಕ ಉಳಿದುಕೊಳ್ಳಲು ಅನುಮತಿಯನ್ನು ಪಡೆದುಕೊಳ್ಳಲಿಕ್ಕಾಗಿ ಸೆರೆಮನೆಯ ಮುಖ್ಯಾಧಿಕಾರಿಯೊಂದಿಗೆ ಮಾತಾಡಲು ಕೇಳಿಕೊಂಡನು. ಇದು ಒಂದು ಬಹು ಸಾಮಾನ್ಯವಾದ ಬೇಡಿಕೆಯಾಗಿರಲಿಲ್ಲವಾದುದರಿಂದ, ಇದು ನಿಜವಾಗಿಯೂ ಮುಖ್ಯಾಧಿಕಾರಿಯನ್ನು ಆಶ್ಚರ್ಯಗೊಳಿಸಿತು. ಆದರೆ ಸೆರೆಮನೆಯಲ್ಲಿಯೇ ಜ್ಞಾಪಕಾಚರಣೆಗೆ ಹಾಜರಾಗಬೇಕೆಂಬ ಈ ಸೆರೆವಾಸಿಯ ಅತ್ಯಾಸಕ್ತಿಯನ್ನು ಗಮನದಲ್ಲಿಟ್ಟು, ಅವನು ಅನುಮತಿ ಕೊಟ್ಟನು. ಕಾರ್ಯಕ್ರಮದ ಕೊನೆಯಲ್ಲಿ ಸಂತೋಷದ ಕಣ್ಣೀರನ್ನು ಸುರಿಸಿದ ಆ 53 ವ್ಯಕ್ತಿಗಳಿಂದ ಜ್ಞಾಪಕಾಚರಣೆಯು ಹಾಜರಾಗಲ್ಪಟ್ಟಿತ್ತು. ನಾವು ಈ ಗುಂಪನ್ನು ‘ಫ್ರೀಡಂ ಸೆರೆಸೋ’ (ಸ್ವಾತಂತ್ರ್ಯ ಸೆರೆಸೋ) ಎಂದು ಕರೆಯಲು ಒಪ್ಪಿದ್ದೇವೆ, ಏಕೆಂದರೆ ಅವರು ಆತ್ಮಿಕ ಅರ್ಥದಲ್ಲಿ ಸ್ವತಂತ್ರರಾಗಿದ್ದಾರೆ.”
ಈ ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳ ಕೆಲಸವು ಬಹಳವಾಗಿ ಗಣ್ಯಮಾಡಲ್ಪಡುತ್ತದೆ. ಈ ಶಿಕ್ಷಣ ಕಾರಾಗೃಹಗಳಲ್ಲೊಂದರಲ್ಲಿ ಜವಾಬ್ದಾರಿಯುತನಾದ ಒಬ್ಬ ವ್ಯಕ್ತಿಯು, ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುವುದು, ಸಹನಿವಾಸಿಗಳ ತ್ವರಿತ ಪುನರ್ವಸತಿಗಾಗಿರುವ “ಚಿಕಿತ್ಸೆ” ಎಂದು ಬಹಿರಂಗವಾಗಿ ಶಿಫಾರಸ್ಸು ಮಾಡುತ್ತಾನೆ.
ಒಂದು ಪರಿಣಾಮಕಾರಿ ಪುನರ್ವಸತಿ ಕಾರ್ಯಕ್ರಮ
ಯೆಹೋವನ ಸಾಕ್ಷಿಗಳ ಚಟುವಟಿಕೆಯು, ಅನೇಕ ಸೆರೆವಾಸಿಗಳ ಸಂಪೂರ್ಣ ಪುನರ್ವಸತಿಯಲ್ಲಿ ಪರಿಣಮಿಸಿದೆ. ಸೆರೆಮನೆಯಲ್ಲಿದ್ದವರು ಒಮ್ಮೆ ಬಿಡುಗಡೆಯಾದಾಗ, ಪುನಃ ಅಪರಾಧದ ಜೀವಿತಕ್ಕೆ ಹಿಂದಿರುಗುತ್ತಾರೆಂಬುದು ಅನೇಕ ವೇಳೆ ಸತ್ಯವಾಗಿರುವಾಗ, ದೇವರ ವಾಕ್ಯದ ಸಂದೇಶವನ್ನು ನಿಜವಾಗಿಯೂ ಸ್ವೀಕರಿಸಿರುವವರು ಸಂಪೂರ್ಣವಾಗಿ ಬದಲಾಗಿದ್ದಾರೆ. ಅವರ ಪರಿವರ್ತನೆಯು ನಮಗೆ ಅಪೊಸ್ತಲ ಪೌಲನ ಮಾತುಗಳನ್ನು ನೆನಪಿಸುತ್ತದೆ: “ವ್ಯಭಿಚಾರಿಗಳು . . . ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.”—1 ಕೊರಿಂಥ 6:9-11.
ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ, ಅವರ ವ್ಯಕ್ತಿತ್ವದಲ್ಲಿನ ಎದ್ದುಕಾಣುವ ಬದಲಾವಣೆಯು ಸ್ಪಷ್ಟವಾಗುತ್ತದೆ. ಕ್ಯಾಂಪೀಚೀ ನಗರದಲ್ಲಿನ ಕ್ಯಾಂಪೀಚೀ ಸೆರೆಮನೆಯಲ್ಲಿರುವ ಮೀಗೆಲ್, ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “2 ಪೇತ್ರ 3:13 ಹಾಗೂ ಮತ್ತಾಯ 5:5ರಲ್ಲಿ ದಾಖಲಾಗಿರುವ ನಿರೀಕ್ಷೆಯನ್ನು ಹೊಂದಿರುವ ಬೇರೆ ಕುರಿಗಳೊಂದಿಗೆ ನನ್ನನ್ನು ನಾನು ಗುರುತಿಸಿಕೊಳ್ಳುತ್ತೇನೆ ಎಂದು, ಇಂದು ನಾನು ಸಂತೋಷದಿಂದ ಹೇಳಸಾಧ್ಯವಿದೆ.” ಕೋಬೆನ್ನ ಕ್ಯಾಂಪೀಚೀ ಸೆರೆಮನೆಯಲ್ಲಿರುವ ಹೋಸೇ ಹೇಳಿದ್ದು: “ನಾನು ಒಬ್ಬ ಸೆರೆವಾಸಿಯಾಗಿರುವುದಾದರೂ, ನನ್ನ ಅಪರಾಧವು ಬಹಳ ಗಂಭೀರವಾಗಿರಬಹುದಾದರೂ, ಯೆಹೋವನು ಬಹಳ ಕರುಣಾಮಯಿ ಮತ್ತು ನನ್ನ ಪ್ರಾರ್ಥನೆಗಳನ್ನೂ ವಿಜ್ಞಾಪನೆಗಳನ್ನೂ ಆಲಿಸುತ್ತಾನೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಅವನು ನನ್ನ ಪಾಪಗಳನ್ನು ಕ್ಷಮಿಸಬಲ್ಲನು ಹಾಗೂ ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಹಂಚುವುದರಲ್ಲಿ ನನ್ನ ಉಳಿದ ಜೀವಿತವನ್ನು ಕಳೆಯುವಂತೆ ನನಗೆ ಅವಕಾಶವನ್ನು ಕೊಡಬಲ್ಲನು. ದೇವರ ರಾಜ್ಯದ ವಾಗ್ದಾನಗಳಿಂದ ನಾವು ಪ್ರಯೋಜನ ಪಡೆಯಲಾಗುವಂತೆ, ನಮ್ಮನ್ನು ಸೆರೆಮನೆಯಲ್ಲಿ ಭೇಟಿಮಾಡಲು ಸಮಯವನ್ನು ಅವರು ತೆಗೆದುಕೊಂಡದ್ದಕ್ಕಾಗಿ ನಾವು ನಮ್ಮ ಹಿರಿಯರಿಗೆ ಆಭಾರಿಗಳಾಗಿದ್ದೇವೆ. ಎಂತಹ ಹಿತಕರ ಆಶೀರ್ವಾದಗಳು! ನಾನು ಒಬ್ಬ ಸೆರೆವಾಸಿ ಎಂದು ಹೇಳಸಾಧ್ಯವಿದೆಯೆ? ಇಲ್ಲ, ಯೆಹೋವನು ನನಗೆ ಅಗತ್ಯವಿದ್ದ ಆತ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ.”
ಕೊಲೆಗಾರರು, ಬಲಾತ್ಕಾರಿಗಳು, ಅಗ್ನಿಸ್ಪರ್ಶಕರು, ಕಳ್ಳರು, ಮತ್ತು ಇತರರು, ಸರಿಯಾದ ಜೀವಿತವನ್ನು ನಡೆಸುವ ಕ್ರೈಸ್ತರಾಗಿ ಬದಲಾಗುವಂತೆ ಯಾವುದು ಮಾಡುತ್ತದೆ? ಈ ಪುರುಷರಿಗನುಸಾರ, ಅದು ದೇವರ ವಾಕ್ಯದ ರೂಪಾಂತರಿಸುವ ಶಕ್ತಿ ಹಾಗೂ ನಿಜವಾಗಿಯೂ ಭಕ್ತರಾಗಿರುವ ಜನರೊಂದಿಗಿನ ಒಳ್ಳೆಯ ಸಹವಾಸವೇ ಆಗಿದೆ. ಈ ಪುನರ್ವಸತಿಯ ಕಾರ್ಯಕ್ರಮದ ಸಾಫಲ್ಯವನ್ನು, ಸಿನಾಲೋವ್, ಮಾಸಟ್ಲಾನ್ ಶಿಕ್ಷಣ ಕಾರಾಗೃಹಕ್ಕೆ ಒಪ್ಪಿಸಿದ ಟೀಬುರ್ಸಿಯೋನ ವಿದ್ಯಮಾನವು ದೃಷ್ಟಾಂತಿಸುತ್ತದೆ. ಅವನು ಸಿನಾಲೋವ್, ಕಾನ್ಕಾರ್ಡ್ಯಾದ ಸೆರೆಮನೆಯಲ್ಲಿ ಇದ್ದನು. ಅಲ್ಲಿ ಅವನಿಗೆ ಹಿಂಸಾತ್ಮಕ ಸಿಡುಕಿನ ಕಾರಣ ಸಮಸ್ಯೆಗಳಿದ್ದವು. ಅವನ ಹೆಂಡತಿಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಳು ಮತ್ತು ಅವಳು ಸೆರೆಮನೆಯಲ್ಲಿ ಅವನನ್ನು ಭೇಟಿಯಾಗಲು ಬಂದಾಗ ಸಹ, ಅವನು ಅವಳೊಂದಿಗೆ ಒರಟಾಗಿ ವರ್ತಿಸುತ್ತಿದ್ದನು. ಅವಳು ತಾಳ್ಮೆಯಿಂದಿದ್ದಳು ಹಾಗೂ ಅವನನ್ನು ಭೇಟಿಯಾಗಲು ಬರುತ್ತಾ ಇದ್ದಳು. ಆದಕಾರಣ ಅವನು, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ತರುವಂತೆ ಅವಳನ್ನು ಕೇಳಿಕೊಂಡನು. ಅವನು ಅದನ್ನು ತಾನಾಗಿಯೇ ಅಭ್ಯಾಸಿಸಲು ಆರಂಭಿಸಿದನು.a ಆಮೇಲೆ ಅವನು ತನ್ನೊಂದಿಗೆ ಅಭ್ಯಾಸಿಸಲು ಯಾರಾದರು ಸೆರೆಮನೆಗೆ ಬರುವಂತೆ ಕೇಳಿಕೊಂಡನು. ಅವನು ಆತ್ಮಿಕ ಪ್ರಗತಿಯನ್ನು ಮಾಡಲು ಆರಂಭಿಸಿದನು ಮತ್ತು ಇತರರೊಂದಿಗಿನ ಅವನ ಸಂಬಂಧವು, ಉತ್ತಮಸ್ಥಿತಿಗೆ ಬದಲಾಗಲು ಆರಂಭವಾಯಿತು. ಅವನನ್ನು ಮಾಸಟ್ಲಾನ್ನ ಸೆರೆಮನೆಗೆ ವರ್ಗಾಯಿಸಲಾಯಿತು; ಅಲ್ಲಿ ಬೈಬಲನ್ನು ಅಭ್ಯಾಸಿಸುತ್ತಿರುವ ಒಂದು ಗುಂಪಿದೆ. ಮತ್ತು ಈಗ ಅವನು ಒಬ್ಬ ಪ್ರಚಾರಕನಾಗಿದ್ದಾನೆ. ಅವನು ಹೇಳುವುದು: “ಈಗ, ನನ್ನ ಹೆಂಡತಿ, ಮಕ್ಕಳು ಹಾಗೂ ನನ್ನ ಸಹನಿವಾಸಿಗಳೊಂದಿಗೆ, ಈ ಸ್ಥಳದಲ್ಲಿ ಬೈಬಲ್ ಸತ್ಯಗಳಿಗೆ ಕಿವಿಗೊಡಲು ನನಗೆ ಸಾಧ್ಯವಾಗಿರುವುದಕ್ಕಾಗಿ ಮತ್ತು ಸಮೀಪ ಭವಿಷ್ಯತ್ತಿನಲ್ಲಿ ಬಿಡುಗಡೆಹೊಂದಿ, ಎಲ್ಲ ಸಮ್ಮೇಳನಗಳಿಗೆ ಮತ್ತು ಸಭಾ ಕೂಟಗಳಿಗೆ ಹಾಜರಾಗುವ ನಿರೀಕ್ಷೆಯಿರುವುದಕ್ಕಾಗಿ ನಾನು ತುಂಬ ಕೃತಜ್ಞನು.”
ತನ್ನ ಜೀವಿತದಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯವಾದುದಕ್ಕಾಗಿ ಕಾನ್ರಾಡೋ ಕೂಡ ಬಹಳ ಕೃತಜ್ಞನಾಗಿದ್ದಾನೆ. ಅವನಿಗೆ ಎಂತಹ ವೈವಾಹಿಕ ಸಮಸ್ಯೆಗಳಿದ್ದವೆಂದರೆ, ಅವನ ಹೆಂಡತಿಯು ಅವನನ್ನು ಬಿಟ್ಟುಹೋದಳು. ಆದುದರಿಂದ ಅವನು ಮಾದಕಪದಾರ್ಥಗಳಲ್ಲಿ ನೆಮ್ಮದಿಯನ್ನು ಪಡೆದುಕೊಳ್ಳಲು ಪ್ರಯತ್ನಿಸಿದನು. ಸಮಯಾನಂತರ ಅವನು ಒಬ್ಬ ಮಾದಕಪದಾರ್ಥಗಳ ವ್ಯಾಪಾರಿಯಾದನು. ಮಾರಿವಾನ ಹಾಗೂ ಕೊಕೇನ್ ಸರಕನ್ನು ಸಾಗಿಸುತ್ತಿದ್ದ ಕಾರಣ ಅವನನ್ನು ಬಂಧಿಸಲಾಯಿತು ಹಾಗೂ ಸೆರೆಮನೆ ಶಿಕ್ಷೆ ವಿಧಿಸಲಾಯಿತು. ಸೆರೆಮನೆಯಲ್ಲಿ ಒಂದು ಗುಂಪು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಮಾಡುತ್ತಿತ್ತು ಹಾಗೂ ಅವರೊಂದಿಗೆ ಅಭ್ಯಾಸಮಾಡುವಂತೆ ಅವನು ಆಮಂತ್ರಿಸಲ್ಪಟ್ಟನು. ಅವನು ತನ್ನ ಅನಿಸಿಕೆಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ: “ಕೂಟಗಳು ಸುವ್ಯವಸ್ಥಿತವಾದ ರೀತಿಯಲ್ಲಿ ನಡಿಸಲ್ಪಡುತ್ತಿದ್ದುದ್ದರಿಂದ, ಸಾಹಿತ್ಯಗಳ ಮೂಲಕ ಬೈಬಲನ್ನು ಪರೀಕ್ಷಿಸುವ ಕಾರ್ಯಕ್ರಮದಿಂದ, ಮತ್ತು ಪ್ರತಿಯೊಂದೂ ಬೈಬಲಿನ ಮೇಲೆ ಆಧರಿತವಾಗಿದೆ ಎಂಬ ನಿಜತ್ವದಿಂದ ನಾನು ಪ್ರಭಾವಿತನಾದೆ. ಕೂಡಲೆ ನಾನು ಒಂದು ಬೈಬಲ್ ಅಭ್ಯಾಸವನ್ನು ನಡಿಸುವಂತೆ ಕೇಳಿಕೊಂಡೆ ಹಾಗೂ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದೆ.” ಅದು, ಜನವರಿ 1993ರಲ್ಲಾಗಿತ್ತು. ಈಗ ಕಾನ್ರಾಡೋ ಸೆರೆಮನೆಯಿಂದ ಬಿಡುಗಡೆಯಾಗಿದ್ದಾನೆ ಮತ್ತು ಕ್ರೈಸ್ತ ಸಭೆಯಲ್ಲಿ ಪ್ರಗತಿಮಾಡುವುದನ್ನು ಮುಂದುವರಿಸಿದ್ದಾನೆ.
ಈಸ್ಲಾಸ್ ಮಾರೀಆಸ್
ಮೆಕ್ಸಿಕೊದಲ್ಲಿ ಈಸ್ಲಾಸ್ ಮಾರೀಆಸ್ ಎಂದು ಕರೆಯಲ್ಪಡುವ, ನಾಲ್ಕು ದ್ವೀಪಗಳುಳ್ಳ ಒಂದು ಭಯಂಕರ ಸೆರೆಮನೆಯಿದೆ. ತಾವು ಬಂಧಿಸಲ್ಪಟ್ಟಿರುವ ದಂಡನೀಯ ದ್ವೀಪಗಳಾದ್ಯಂತ ಸೆರೆವಾಸಿಗಳು ಸಂಚರಿಸಸಾಧ್ಯವಿದೆ. ಕೆಲವರು ಅಲ್ಲಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಜೀವಿಸುತ್ತಾರೆ.
ಒಂದು ಚಿಕ್ಕ ಸಭೆಯನ್ನು ಸ್ಥಾಪಿಸಲಾಗಿದೆ. ಕೂಟಗಳನ್ನು ನಡಿಸುವಂತೆ ಸಹಾಯ ಮಾಡಲು, ಸಾಹಿತ್ಯವನ್ನು ಒದಗಿಸಲು, ಹಾಗೂ ಉತ್ತೇಜನ ಕೊಡಲು, ಮಾಸಟ್ಲಾನ್ನಿಂದ ಮೂವರು ಸಹೋದರರು ತಿಂಗಳಿಗೊಮ್ಮೆ ಅಲ್ಲಿಗೆ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಸಂಚಾರ ಮೇಲ್ವಿಚಾರಕರು ಅವರನ್ನು ಸಂದರ್ಶಿಸಲು ಹೋಗುತ್ತಾರೆ. ಸರಾಸರಿ ಹಾಜರಿಯು, 20ರಿಂದ 25ರಷ್ಟಿರುತ್ತದೆ. ಅಲ್ಲಿ ನಾಲ್ಕು ಸ್ನಾನಿತ ಹಾಗೂ ಎರಡು ಅಸ್ನಾನಿತ ಪ್ರಚಾರಕರಿದ್ದಾರೆ. “ಕೆಲವರು ಆದಿತ್ಯವಾರ ಕೂಟಗಳಿಗೆ ಹಾಜರಾಗಲು, 17 ಕಿಲೊಮೀಟರ್ಗಳಷ್ಟು [10 ಮೈಲುಗಳು] ನಡಿಯುತ್ತಾರೆ ಮತ್ತು ಹಾಜರಿ ಕರೆಯುವ ಮುನ್ನ ಹಿಂದಿರುಗಲು, ಕೂಟ ಮುಗಿದೊಡನೆ ಅವಸರದಿಂದ ಹೋಗಬೇಕು” ಎಂದು ಸಂಚಾರ ಮೇಲ್ವಿಚಾರಕರು ವರದಿಸುತ್ತಾರೆ. “ಬೇಗ ನಡೆದರೂ, ಹಿಂದಿರುಗಿ ಸೇರಲು ಎರಡು ತಾಸುಗಳಿಗಿಂತ ಹೆಚ್ಚು ಸಮಯ ಹಿಡಿಯುತ್ತದೆ.” ಆ ಸೆರೆಮನೆಯಲ್ಲಿ ಸತ್ಯವನ್ನು ಕಲಿತ ಸಹೋದರರಲ್ಲೊಬ್ಬರು, ಇತ್ತೀಚೆಗೆ ಹೇಳಿದ್ದು: “ಬೇಗನೆ ಬಿಡುಗಡೆಹೊಂದಬೇಕು ಎಂಬ ಆಸಕ್ತಿ ನನಗಿರುತ್ತಿತ್ತು, ಆದರೆ ಈಗ ಯೆಹೋವನು ಯಾವಾಗ ಇಚ್ಛಿಸುತ್ತಾನೋ ಆಗ ಅದು ಆಗಸಾಧ್ಯವಿದೆ, ಹೇಗೂ ನನಗೆ ಸೆರೆಮನೆಯಲ್ಲಿ ಮಾಡಲು ತುಂಬ ಕೆಲಸವಿದೆ.”
ಯೆಹೋವನನ್ನು ಮೆಚ್ಚಿಸುವ ವಿಧವನ್ನು ಹುಡುಕುತ್ತಿರುವ ಪ್ರಾಮಾಣಿಕ ಜನರನ್ನು ಬಿಡುಗಡೆ ಮಾಡಲು, ಸತ್ಯವು ತನ್ನ ಶಕ್ತಿಯನ್ನು ಪ್ರಯೋಗಿಸುತ್ತಿರುವುದನ್ನು ನೋಡಲು ನಮಗೆ ಬಹಳ ಸಂತೋಷವಾಗುತ್ತದೆ. ಸೆರೆಮನೆಯಲ್ಲಿ ಸತ್ಯವನ್ನು ಕಲಿತವರಲ್ಲಿ ಹನ್ನೆರಡಕ್ಕಿಂತಲೂ ಹೆಚ್ಚು ಮಂದಿ ಬಿಡುಗಡೆಯನ್ನು ಹೊಂದಿ, ದೀಕ್ಷಾಸ್ನಾನ ಪಡೆದುಕೊಂಡು, ಈಗ ದೇವರ ಸೇವಕರಾಗಿ ಒಂದು ಗೌರವದ ಜೀವಿತವನ್ನು ನಡೆಸುತ್ತಿದ್ದಾರೆ. ಕೆಲವರು ಸಭೆಯ ಹಿರಿಯರೂ ಆಗಿದ್ದಾರೆ. ಹೃದಯಗಳನ್ನು ಗುಣಪಡಿಸಲು ಹಾಗೂ ಜನರನ್ನು ಪರಿವರ್ತಿಸಲು ಬೈಬಲಿಗಿರುವ ಶಕ್ತಿಯು, ನಾಟಕೀಯವಾಗಿ ಪ್ರದರ್ಶಿಸಲ್ಪಟ್ಟಿದೆ. ತಪ್ಪು ಕೃತ್ಯಗಳನ್ನು ಮಾಡಿದ ಕಾರಣ ಬಂಧಿಸಲ್ಪಟ್ಟಿದ್ದ ಈ ಪುರುಷರು, ದೇವರ ವಾಕ್ಯದ ಬೆಳಕಿನ ದಾರಿಯನ್ನು ಸೇರಿದ ಕೂಡಲೆ, ಯೇಸು ವಾಗ್ದಾನಿಸಿದ ನಿಜ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಅವನು ಹೇಳಿದ್ದು: ‘ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.’—ಯೋಹಾನ 8:32; ಕೀರ್ತನೆ 119:105.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.
[ಪುಟ 23 ರಲ್ಲಿರುವ ಚಿತ್ರ]
ಅನೇಕರು, ತಾವು ಸೆರೆಮನೆಯಲ್ಲಿ ಕಲಿತ ಕ್ರೈಸ್ತ ಸತ್ಯಗಳಿಂದ ಪ್ರಯೋಜನ ಪಡೆದರು