“ನಮ್ಮಂಥ ಅನಿಸಿಕೆಗಳುಳ್ಳ” ಮನುಷ್ಯರು
ಅವನೊಬ್ಬ ರಾಜನೂ ಪ್ರವಾದಿಯೂ ಆಗಿದ್ದದ್ದು ಮಾತ್ರವಲ್ಲ, ಒಬ್ಬ ಪ್ರೀತಿಯ ತಂದೆಯೂ ಆಗಿದ್ದನು. ಅವನ ಪುತ್ರರಲ್ಲಿ ಒಬ್ಬನು, ನಿಷ್ಪ್ರಯೋಜಕನೂ ಅಹಂಕಾರಿಯೂ ಆಗಿ ಬೆಳೆದನು. ಸಿಂಹಾಸನವನ್ನು ಕಸಿದುಕೊಳ್ಳುವ ಒಂದು ದೃಢಸಂಕಲ್ಪದ ಪ್ರಯತ್ನದಲ್ಲಿ ಈ ಮಗನು ತನ್ನ ತಂದೆಯ ಮರಣದಲ್ಲಿ ಆಸಕ್ತನಾಗಿದ್ದು ಒಂದು ಆಂತರಿಕ ಯುದ್ಧವನ್ನು ಆರಂಭಿಸಿದನು. ಆದರೆ ನಡೆದಂತಹ ಹೋರಾಟದಲ್ಲಿ, ಕೊಲ್ಲಲ್ಪಟ್ಟವನು ಆ ಮಗನೇ. ತನ್ನ ಮಗನ ಮರಣದ ಕುರಿತಾಗಿ ತಂದೆಗೆ ಗೊತ್ತಾದಾಗ, ಅವನು ಮೇಲಿರುವ ಕೋಣೆಗೆ ಒಬ್ಬನೇ ಹೋಗಿ, ಹೀಗೆ ಅತ್ತನು: “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು.” (2 ಸಮುವೇಲ 18:33) ಆ ತಂದೆಯು ರಾಜ ದಾವೀದನಾಗಿದ್ದನು. ಯೆಹೋವನ ಇತರ ಪ್ರವಾದಿಗಳಂತೆ, ಅವನು “ನಮ್ಮಂಥ ಅನಿಸಿಕೆಗಳುಳ್ಳ ಮನುಷ್ಯ” (NW)ನಾಗಿದ್ದನು.—ಯಾಕೋಬ 5:17.
ಬೈಬಲ್ ಸಮಯಗಳಲ್ಲಿ, ಯೆಹೋವನಿಗಾಗಿ ಮಾತಾಡುತ್ತಿದ್ದ ಸ್ತ್ರೀಪುರುಷರು, ಸಾಮಾನ್ಯ ಜನರಾಗಿದ್ದರು. ನಮ್ಮಂತೆ, ಅವರಿಗೂ ಸಮಸ್ಯೆಗಳಿದ್ದವು ಮತ್ತು ಅವರು ಅಪರಿಪೂರ್ಣತೆಗಳಿಂದಾಗಿ ಕಷ್ಟಾನುಭವಿಸಿದರು. ಈ ಪ್ರವಾದಿಗಳಲ್ಲಿ ಕೆಲವರು ಯಾರು, ಮತ್ತು ಅವರಿಗೆ ನಮ್ಮಂಥ ಅನಿಸಿಕೆಗಳಿದ್ದದ್ದು ಹೇಗೆ?
ಆತ್ಮವಿಶ್ವಾಸಾಧಿಕ್ಯವಿದ್ದ ಮೋಶೆಯು ದೀನನಾದನು
ಕ್ರೈಸ್ತ ಪೂರ್ವ ಸಮಯಗಳ ಒಬ್ಬ ಪ್ರಮುಖ ಪ್ರವಾದಿಯು ಮೋಶೆಯಾಗಿದ್ದನು. ಆದರೆ 40 ವರ್ಷ ಪ್ರಾಯದಲ್ಲೂ, ಅವನು ಯೆಹೋವನ ವದನಕನಾಗಿ ಸೇವೆಮಾಡಲು ಸಿದ್ಧನಾಗಿರಲಿಲ್ಲ. ಯಾಕೆ? ಅವನ ಸಹೋದರರು ಐಗುಪ್ತದ ಫರೋಹನಿಂದ ಪೀಡಿಸಲ್ಪಡುತ್ತಿದ್ದಾಗ, ಮೋಶೆಯು ಫರೋಹನ ಮನೆತನದಲ್ಲಿ ಬೆಳೆಸಲ್ಪಟ್ಟನು ಮತ್ತು “ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾ”ಗಿದ್ದನು. ದಾಖಲೆಯು ನಮಗನ್ನುವುದು: ಅವನು “ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬದು ತನ್ನ ಸಹೋದರರಿಗೆ ತಿಳಿದುಬರುವದೆಂದು ಭಾವಿಸಿದನು.” ಅವನು ಅತ್ಮವಿಶ್ವಾಸಾಧಿಕ್ಯದಿಂದ ಒಬ್ಬ ಇಬ್ರಿಯ ದಾಸನ ರಕ್ಷಣೆಗೋಸ್ಕರ ಆಕ್ರಮಣಕಾರಿಯಾಗಿ ಕ್ರಿಯೆಗೈದಾಗ ಒಬ್ಬ ಐಗುಪ್ತ್ಯನನ್ನು ಕೊಂದನು.—ಅ. ಕೃತ್ಯಗಳು 7:22-25; ವಿಮೋಚನಕಾಂಡ 2:11-14.
ಈಗ ಮೋಶೆ ಓಡಿಹೋಗುವಂತೆ ಒತ್ತಾಯಿಸಲ್ಪಟ್ಟನು, ಮತ್ತು ಅವನು ಮುಂದಿನ ನಾಲ್ಕು ದಶಕಗಳನ್ನು ದೂರದ ಮಿದ್ಯಾನ್ ದೇಶದಲ್ಲಿ ಒಬ್ಬ ಕುರುಬನೋಪಾದಿ ಕಳೆದನು. (ವಿಮೋಚನಕಾಂಡ 2:15) ಆ ಸಮಯದ ಅಂತ್ಯದಲ್ಲಿ, ಮೋಶೆ 80 ವರ್ಷ ಪ್ರಾಯದವನಾಗಿದ್ದಾಗ, ಅವನು ಯೆಹೋವನಿಂದ ಒಬ್ಬ ಪ್ರವಾದಿಯಾಗಿ ನೇಮಿಸಲ್ಪಟ್ಟನು. ಆದರೆ ಮೋಶೆ ಈಗ ಆತ್ಮವಿಶ್ವಾಸಾಧಿಕ್ಯವುಳ್ಳವನಾಗಿರಲಿಲ್ಲ. ಅವನಿಗೆ ಎಷ್ಟು ಅನರ್ಹತೆಯ ಭಾವನೆಯಾಯಿತೆಂದರೆ, “ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ . . . ನಾನು ಎಷ್ಟರವನು”? ಮತ್ತು “ನಾನೇನು ಉತ್ತರಕೊಡಬೇಕು”? ಎಂಬಂತಹ ಅಭಿವ್ಯಕ್ತಿಗಳನ್ನು ಉಪಯೋಗಿಸುತ್ತಾ, ತನ್ನನ್ನು ಪ್ರವಾದಿಯಾಗಿ ಯೆಹೋವನು ನೇಮಿಸುತ್ತಿರುವುದನ್ನು ಅವನು ಸಂದೇಹಿಸಿದನು. (ವಿಮೋಚನಕಾಂಡ 3:11, 13) ಯೆಹೋವನ ಪ್ರೀತಿಯ ಪುನರಾಶ್ವಾಸನೆ ಮತ್ತು ನೆರವಿನಿಂದ, ಮೋಶೆಯು ತನ್ನ ನೇಮಕವನ್ನು ತುಂಬ ಯಶಸ್ವಿಕರವಾಗಿ ಪೂರೈಸಿದನು.
ಮೋಶೆಯಂತೆ, ಮೂರ್ಖತನವಾಗಿ ಪರಿಣಮಿಸಿರುವ ವಿಷಯಗಳನ್ನು ಮಾಡಲು ಅಥವಾ ಹೇಳಲು ಆತ್ಮವಿಶ್ವಾಸಾಧಿಕ್ಯವು ನಿಮ್ಮನ್ನು ನಡಿಸುವಂತೆ ನೀವೆಂದಾದರೂ ಬಿಟ್ಟಿದ್ದೀರೊ? ಹಾಗಿರುವಲ್ಲಿ, ನಮ್ರಭಾವದಿಂದ ಹೆಚ್ಚಿನ ತರಬೇತಿಯನ್ನು ಸ್ವೀಕರಿಸಿರಿ. ಅಥವಾ ನಿರ್ದಿಷ್ಟ ಕ್ರೈಸ್ತ ಜವಾಬ್ದಾರಿಗಳನ್ನು ನಡಿಸಲು ನಿಮಗೆ ಅನರ್ಹತೆಯ ಅನಿಸಿಕೆಯಾಗಿದೆಯೊ? ಅವುಗಳನ್ನು ನಿರಾಕರಿಸುವ ಬದಲಿಗೆ, ಯೆಹೋವ ಮತ್ತು ಆತನ ಸಂಸ್ಥೆಯಿಂದ ನೀಡಲ್ಪಡುವ ಸಹಾಯವನ್ನು ಸ್ವೀಕರಿಸಿರಿ. ಮೋಶೆಗೆ ಸಹಾಯಮಾಡಿದಾತನು ನಿಮಗೂ ನೆರವನ್ನು ನೀಡಬಲ್ಲನು.
ಶಿಸ್ತನ್ನು ನೀಡುವ ಸಮಯದಲ್ಲಿ ಎಲೀಯನಿಗೆ ನಮ್ಮಂಥ ಅನಿಸಿಕೆಗಳಿದ್ದವು
“ಎಲೀಯನು ನಮ್ಮಂಥ ಸ್ವಭಾವವುಳ್ಳ [“ಅನಿಸಿಕೆಗಳುಳ್ಳ,” NW]ವನಾಗಿದ್ದನು; ಅವನು ಮಳೆಬರಬಾರದೆಂದು ಬಹಳವಾಗಿ ಪ್ರಾರ್ಥಿಸಲು ಮೂರು ವರುಷ ಆರು ತಿಂಗಳ ವರೆಗೂ ಮಳೆಬೀಳಲಿಲ್ಲ.” (ಯಾಕೋಬ 5:17) ಎಲೀಯನ ಪ್ರಾರ್ಥನೆಯು, ಯೆಹೋವನಿಂದ ವಿಮುಖಗೊಂಡಿದ್ದ ಒಂದು ಜನಾಂಗಕ್ಕೆ ಶಿಸ್ತನ್ನು ನೀಡುವ ಆತನ ಚಿತ್ತಕ್ಕೆ ಹೊಂದಿಕೆಯಲ್ಲಿತ್ತು. ಆದರೂ ಅವನು ಯಾವುದಕ್ಕಾಗಿ ಪ್ರಾರ್ಥಿಸುತ್ತಿದ್ದನೊ ಆ ಅನಾವೃಷ್ಟಿಯು ಮಾನವ ಕಷ್ಟಾನುಭವವನ್ನು ತರಲಿತ್ತೆಂದು ಎಲೀಯನಿಗೆ ತಿಳಿದಿತ್ತು. ಇಸ್ರಾಯೇಲ್, ಬಹ್ವಂಶ ಬೇಸಾಯಸಂಬಂಧಿತ ಜನಾಂಗವಾಗಿತ್ತು; ಮಂಜು ಮತ್ತು ಮಳೆ ಜನರ ಜೀವನಾಧಾರವಾಗಿತ್ತು. ಸತತವಾದ ಅನಾವೃಷ್ಟಿಯು ವಿಪರೀತ ಸಂಕಷ್ಟವನ್ನು ತರಲಿತ್ತು. ಸಸ್ಯಗಳು ಒಣಗಿಹೋಗಲಿತ್ತು; ಬೆಳೆಗಳು ವ್ಯರ್ಥವಾಗಲಿದ್ದವು. ಕೆಲಸ ಮಾಡಲಿಕ್ಕಾಗಿ ಮತ್ತು ಆಹಾರಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಸಾಕುಪ್ರಾಣಿಗಳು ಸಾಯಲಿದ್ದವು, ಮತ್ತು ಕೆಲವು ಕುಟುಂಬಗಳಿಗೆ ಹೊಟ್ಟೆ ಹಸಿವೆಯ ಅಪಾಯವಿತ್ತು. ತೀರ ಹೆಚ್ಚಾಗಿ ಕಷ್ಟಾನುಭವಿಸಲಿದ್ದವರು ಯಾರು? ಸಾಮಾನ್ಯ ಜನರೇ. ತದನಂತರ ಒಬ್ಬ ವಿಧವೆಯು ಎಲೀಯನಿಗೆ, ತನ್ನಲ್ಲಿ ಕೇವಲ ಕೊಂಚ ಹಿಟ್ಟು ಮತ್ತು ಸ್ವಲ್ಪ ಎಣ್ಣೆ ಉಳಿದಿದೆಯೆಂದು ಹೇಳಿದಳು. ತಾನೂ ತನ್ನ ಮಗನೂ ಬೇಗನೆ ಹಸಿವಿನಿಂದ ಸಾಯುವೆವೆಂಬುದು ಅವಳಿಗೆ ನಿಶ್ಚಿತವಿತ್ತು. (1 ಅರಸುಗಳು 17:12) ಎಲೀಯನು ಆ ರೀತಿಯಲ್ಲಿ ಪ್ರಾರ್ಥಿಸಲಿಕ್ಕಾಗಿ, ಸತ್ಯಾರಾಧನೆಯನ್ನು ತೊರೆಯದಿದ್ದ ತನ್ನ—ಶ್ರೀಮಂತ ಅಥವಾ ಬಡ—ಸೇವಕರನ್ನು ಯೆಹೋವನು ಪರಾಮರಿಸುವನು ಎಂಬ ದೃಢ ನಂಬಿಕೆಯಿರಬೇಕಿತ್ತು. ದಾಖಲೆಯು ತೋರಿಸುವಂತೆ, ಎಲೀಯನಿಗೆ ಆಶಾಭಂಗವಾಗಲಿಲ್ಲ.—1 ಅರಸುಗಳು 17:13-16; 18:3-5.
ಮೂರು ವರ್ಷಗಳ ಬಳಿಕ, ಯೆಹೋವನು ತಾನು ಬೇಗನೆ ಮಳೆಯನ್ನು ತರುವೆನೆಂದು ಸೂಚಿಸಿದಾಗ, ಅನಾವೃಷ್ಟಿಯು ಅಂತ್ಯಗೊಳ್ಳುವುದನ್ನು ನೋಡಲಿಕ್ಕಾಗಿ ಎಲೀಯನಿಗಿದ್ದ ತೀವ್ರ ಬಯಕೆಯು, ಅವನು “ನೆಲದ ಮೇಲೆ ಬಿದ್ದುಕೊಂಡು ಮೊಣಕಾಲಿನ ಮೇಲೆ ತಲೆಯನ್ನಿಟ್ಟು” ಪದೇಪದೇ ಮಾಡಿದ ಶ್ರದ್ಧಾಪೂರ್ವಕ ಪ್ರಾರ್ಥನೆಗಳಲ್ಲಿ ಕಾಣುತ್ತದೆ. (1 ಅರಸುಗಳು 18:42) ಪದೇಪದೇ, ಅವನು ತನ್ನ ಸೇವಕನಿಗೆ ಪ್ರೇರಿಸಿದ್ದು: “ನೀನು ಮೇಲೆ ಹೋಗಿ ಸಮುದ್ರದ ಕಡೆಗೆ”—ಯೆಹೋವನು ತನ್ನ ಪ್ರಾರ್ಥನೆಗಳನ್ನು ಕೇಳಿದ್ದಾನೆಂಬ ಯಾವುದೇ ಸೂಚನೆಗಾಗಿ—“ನೋಡು.” (1 ಅರಸುಗಳು 18:43) ಕೊನೆಗೆ ಅವನ ಪ್ರಾರ್ಥನೆಗಳಿಗೆ ಉತ್ತರವಾಗಿ, ‘ಆಕಾಶವು ಮಳೆಗರೆದು, ಭೂಮಿಯು ಬೆಳೆ’ದಾಗ ಅವನಿಗೆಷ್ಟು ಆನಂದವಾಗಿರಬೇಕು!—ಯಾಕೋಬ 5:18.
ನೀವು ಒಬ್ಬ ಹೆತ್ತವರು ಅಥವಾ ಕ್ರೈಸ್ತ ಸಭೆಯಲ್ಲಿ ಒಬ್ಬ ಹಿರಿಯರಾಗಿರುವಲ್ಲಿ, ತಿದ್ದುಪಾಟನ್ನು ಕೊಡುವಾಗ ನೀವು ಗಾಢವಾದ ಅನಿಸಿಕೆಗಳೊಂದಿಗೆ ಸೆಣೆಸಾಡಬೇಕಾಗಬಹುದು. ಆದರೂ, ಅಂತಹ ಮಾನವ ಭಾವನೆಗಳು, ಕೆಲವೊಮ್ಮೆ ಶಿಸ್ತು ಆವಶ್ಯಕ ಮತ್ತು ಅದು ಪ್ರೀತಿಯಿಂದ ಕೊಡಲ್ಪಡುವಾಗ, “ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂಬ ನಿಶ್ಚಿತಾಭಿಪ್ರಾಯದೊಂದಿಗೆ ತಗ್ಗಿಸಲ್ಪಡಬೇಕು. (ಇಬ್ರಿಯ 12:11) ಯೆಹೋವನ ನಿಯಮಗಳಿಗೆ ವಿಧೇಯರಾಗುವುದರಿಂದ ಬರುವ ಫಲಿತಾಂಶಗಳು ಯಾವಾಗಲೂ ಅಪೇಕ್ಷಣೀಯವಾಗಿರುತ್ತವೆ. ಎಲೀಯನಂತೆ, ನಾವು ಅವುಗಳಿಗನುಸಾರ ನಡೆಯುವಂತೆ ನಾವು ಹೃದಯದಾಳದಿಂದ ಪ್ರಾರ್ಥಿಸುತ್ತೇವೆ.
ನಿರುತ್ತೇಜನದ ಎದುರಿನಲ್ಲೂ ಯೆರೆಮೀಯನು ಧೈರ್ಯವನ್ನು ತೋರಿಸಿದನು
ಬೈಬಲ್ ಲೇಖಕರಲ್ಲೇ, ತನ್ನ ವೈಯಕ್ತಿಕ ಅನಿಸಿಕೆಗಳ ಕುರಿತಾಗಿ ತೀರ ಹೆಚ್ಚು ಬರೆದವನು ಯೆರೆಮೀಯನೇ ಆಗಿದ್ದಿರಬೇಕು. ಒಬ್ಬ ಯುವಕನಾಗಿರಲಾಗಿ, ಅವನು ತನ್ನ ನೇಮಕವನ್ನು ಸ್ವೀಕರಿಸಲು ಹಿಂಜರಿದನು. (ಯೆರೆಮೀಯ 1:6) ಹಾಗಿದ್ದರೂ, ಅವನು ದೇವರ ವಾಕ್ಯವನ್ನು ತುಂಬ ಧೈರ್ಯದಿಂದ ಪ್ರಕಟಿಸುತ್ತಾ ಮುಂದುವರಿದನು. ಆದರೆ ಇದರಿಂದಾಗಿ, ಅವನಿಗೆ ಜೊತೆ ಇಸ್ರಾಯೇಲ್ಯರಿಂದ—ರಾಜನಿಂದ ಹಿಡಿದು ಶ್ರೀಸಾಮಾನ್ಯನ ವರೆಗೆ—ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಆ ವಿರೋಧವು ಕೆಲವೊಮ್ಮೆ ಅವನಿಗೆ ಕೋಪವನ್ನು ಮತ್ತು ಕಣ್ಣೀರನ್ನು ಬರಿಸಿತು. (ಯೆರೆಮೀಯ 9:3; 18:20-23; 20:7-18) ವಿಭಿನ್ನ ಸಂದರ್ಭಗಳಲ್ಲಿ ಅವನು ದೊಂಬಿಗೊಳಗಾದನು, ಹೊಡೆಯಲ್ಪಟ್ಟನು, ಕೈಕೊಳ ಹಾಕಲಾಯಿತು, ಸೆರೆಗೆ ಹಾಕಲಾಯಿತು, ಮರಣದ ಬೆದರಿಕೆಗೊಳಗಾದನು ಮತ್ತು ಒಂದು ಖಾಲಿ ಕೊಳದ ತಳದಲ್ಲಿದ್ದ ಕೆಸರಿನಲ್ಲಿ ಸಾಯಲಿಕ್ಕಾಗಿ ಅವನನ್ನು ಬಿಡಲಾಯಿತು. “ಹಾ, ನನ್ನ ಕರುಳು! ಕರುಳು! ಯಾತನೆಪಡುತ್ತೇನೆ; ಆಹಾ, ನನ್ನ ಗುಂಡಿಗೆಯ ಪಕ್ಕಗಳು!” ಎಂಬ ಯೆರೆಮೀಯನ ಈ ಮಾತುಗಳಿಂದ ದೃಷ್ಟಾಂತಿಸಲ್ಪಟ್ಟಂತೆ, ಯೆಹೋವನ ಸಂದೇಶವೂ ಕೆಲವೊಮ್ಮೆ ಅವನಿಗೆ ಸಂಕಟವನ್ನುಂಟುಮಾಡುತ್ತಿತ್ತು.—ಯೆರೆಮೀಯ 4:19.
ಆಗಲೂ ಅವನು ಯೆಹೋವನ ವಾಕ್ಯವನ್ನು ಪ್ರೀತಿಸಿದನು. ಅವನು ಹೇಳಿದ್ದು: “ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು.” (ಯೆರೆಮೀಯ 15:16) ಅದೇ ಸಮಯದಲ್ಲಿ, ಅವನು ಯೆಹೋವನಿಗೆ ಹೀಗೆ ಕೂಗಿಕೊಳ್ಳುವಂತೆ ಹತಾಶೆಯು ನಡಿಸಿತು: “ನೀನು ನನಗೆ ನೀರು ಬತ್ತುವ ಕಳ್ಳ ತೊರೆಯಂತಿರಬೇಕೊ?” (ಯೆರೆಮೀಯ 15:18) ಹಾಗಿದ್ದರೂ, ಯೆಹೋವನು ಅವನ ಪರಸ್ಪರ ವಿರುದ್ಧವಾದ ಅನಿಸಿಕೆಗಳನ್ನು ಅರ್ಥಮಾಡಿಕೊಂಡನು ಮತ್ತು ಅವನು ತನ್ನ ನೇಮಕವನ್ನು ಪೂರೈಸಲು ಸಾಧ್ಯವಾಗುವಂತೆ ಅವನಿಗೆ ಬೆಂಬಲ ಕೊಡುತ್ತಾ ಹೋದನು.—ಯೆರೆಮೀಯ 15:20; 20:7-9ನ್ನು ಸಹ ನೋಡಿರಿ.
ಯೆರೆಮೀಯನಂತೆ, ನಿಮ್ಮ ಶುಶ್ರೂಷೆಯನ್ನು ಮುಂದುವರಿಸುತ್ತಿರುವಾಗ ನೀವು ಹತಾಶೆ ಅಥವಾ ವಿರೋಧವನ್ನು ಎದುರಿಸುತ್ತೀರೊ? ಯೆಹೋವನೆಡೆಗೆ ನೋಡಿರಿ. ಆತನ ಮಾರ್ಗದರ್ಶನವನ್ನು ಅನುಸರಿಸುವುದನ್ನು ಮುಂದುವರಿಸಿರಿ, ಮತ್ತು ಯೆಹೋವನು ನಿಮ್ಮ ಪ್ರಯತ್ನಗಳಿಗೂ ಬಹುಮಾನವನ್ನು ನೀಡುವನು.
ಯೇಸುವಿಗೆ ನಮ್ಮಂಥ ಅನಿಸಿಕೆಗಳಿದ್ದವು
ಎಲ್ಲ ಸಮಯದ ಅತಿ ಮಹಾನ್ ಪ್ರವಾದಿಯು, ದೇವರ ಸ್ವಂತ ಮಗನಾದ ಯೇಸು ಕ್ರಿಸ್ತನಾಗಿದ್ದನು. ಅವನೊಬ್ಬ ಪರಿಪೂರ್ಣ ಮನುಷ್ಯನಾಗಿದ್ದರೂ, ಅವನು ತನ್ನ ಭಾವನೆಗಳನ್ನು ಅದುಮಿಡಲಿಲ್ಲ. ಅನೇಕಸಲ ನಾವು ಅವನ ಆಂತರಿಕ ಅನಿಸಿಕೆಗಳ ಕುರಿತಾಗಿ ಓದುತ್ತೇವೆ. ಅದು ಅವನ ಮುಖದ ಮೇಲೆ ಮತ್ತು ಇತರರೊಂದಿಗಿನ ಅವನ ಪ್ರತಿಕ್ರಿಯೆಯಲ್ಲಿ ವ್ಯಕ್ತವಾಗುತ್ತಿದ್ದಿರಬಹುದು. ಯೇಸು ಅನೇಕಸಲ “ಕನಿಕರಪಟ್ಟನು” ಮತ್ತು ತನ್ನ ದೃಷ್ಟಾಂತಗಳಲ್ಲಿನ ಪಾತ್ರಗಳನ್ನು ವರ್ಣಿಸುವಾಗ ಅದೇ ಅಭಿವ್ಯಕ್ತಿಯನ್ನು ಉಪಯೋಗಿಸಿದನು.—ಮಾರ್ಕ 1:41; 6:34; ಲೂಕ 10:33.
ದೇವಾಲಯದಿಂದ ಅವನು ವ್ಯಾಪಾರಿಗಳನ್ನೂ, ಪ್ರಾಣಿಗಳನ್ನೂ ಹೊರಗಟ್ಟಿದಾಗ, ಈ ಮಾತುಗಳೊಂದಿಗೆ ಅವನು ತನ್ನ ಧ್ವನಿಯನ್ನು ಎತ್ತರಿಸಿದ್ದಿರಬೇಕು: “ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ”! (ಯೋಹಾನ 2:14-16) “ಸ್ವಾಮೀ, ದೇವರು ನಿನ್ನನ್ನು ಕಾಯಲಿ” ಎಂಬ ಪೇತ್ರನ ಸಲಹೆಯು, ಅವನಿಂದ ಈ ಬಲವಾದ ಪ್ರತಿಕ್ರಿಯೆಯನ್ನು ಹೊರತಂದಿತು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ”!—ಮತ್ತಾಯ 16:22, 23.
ವಿಶೇಷವಾಗಿ ತನ್ನೊಂದಿಗೆ ಆಪ್ತರಾಗಿದ್ದ ನಿರ್ದಿಷ್ಟ ವ್ಯಕ್ತಿಗಳಿಗಾಗಿ ಯೇಸುವಿನಲ್ಲಿ ವಿಶೇಷವಾದ ಮಮತೆಯಿತ್ತು. ಅಪೊಸ್ತಲ ಯೋಹಾನನನ್ನು “ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು” ಎಂದು ವರ್ಣಿಸಲಾಗಿದೆ. (ಯೋಹಾನ 21:7, 20) ಮತ್ತು ನಾವು ಓದುವುದು: “ಮಾರ್ಥಳಲ್ಲಿಯೂ ಆಕೆಯ ತಂಗಿಯಲ್ಲಿಯೂ ಲಾಜರನಲ್ಲಿಯೂ ಯೇಸುವಿಗೆ ಪ್ರೀತಿ ಇತ್ತು.”—ಯೋಹಾನ 11:5.
ಯೇಸುವಿಗೆ ನೋವಿನ ಅನಿಸಿಕೆಯೂ ಆಗುತ್ತಿತ್ತು. ಲಾಜರನ ಮರಣದ ದುರಂತವನ್ನು ಅನುಭವಿಸುತ್ತಾ, “ಯೇಸು ಕಣ್ಣೀರು ಬಿಟ್ಟನು.” (ಯೋಹಾನ 11:32-36) ಇಸ್ಕಾರಿಯೋತ ಯೂದನ ವಿಶ್ವಾಸಘಾತುಕತನದಿಂದ ಉಂಟಾದ ಹೃದಯದ ನೋವನ್ನು ಪ್ರಕಟಪಡಿಸುತ್ತಾ, ಯೇಸು ಕೀರ್ತನೆಗಳಿಂದ ಒಂದು ಮನೋವೇದಕ ಅಭಿವ್ಯಕ್ತಿಯನ್ನು ಉಲ್ಲೇಖಿಸಿದನು: “ನನ್ನ ಕೂಡ ಊಟಮಾಡುವವನೇ ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.”—ಯೋಹಾನ 13:18; ಕೀರ್ತನೆ 41:9.
ವಧಾಸ್ತಂಭದ ಮೇಲೆ ಯಾತನಾಮಯ ನೋವನ್ನು ಅನುಭವಿಸುತ್ತಿರುವಾಗಲೂ, ಯೇಸು ತನ್ನ ಅನಿಸಿಕೆಯ ಆಳವನ್ನು ತೋರಿಸಿದನು. ಕೋಮಲತೆಯಿಂದ ಅವನು ತನ್ನ ತಾಯಿಯನ್ನು “ತನ್ನ ಪ್ರೀತಿಯ ಶಿಷ್ಯ”ನಿಗೆ ಒಪ್ಪಿಸಿಕೊಟ್ಟನು. (ಯೋಹಾನ 19:26, 27) ತನ್ನ ಪಕ್ಕದಲ್ಲಿ ವಧಾಸ್ತಂಭಕ್ಕೇರಿಸಲ್ಪಟ್ಟಿದ್ದ ಕಳ್ಳರಲ್ಲಿ ಒಬ್ಬನಲ್ಲಿ ಅವನು ಪಶ್ಚಾತ್ತಾಪದ ಪುರಾವೆಯನ್ನು ನೋಡಿದಾಗ, ಯೇಸು ಕರುಣೆಯಿಂದ ಹೇಳಿದ್ದು: “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ.” (ಲೂಕ 23:43, NW) ಅವನ ಈ ಕೂಗಿನಲ್ಲಿ ನಮಗೆ ಭಾವನೆಯ ಹೊರಹೊಮ್ಮುವಿಕೆಯ ಅನಿಸಿಕೆಯಾಗಬಲ್ಲದು: “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ”? (ಮತ್ತಾಯ 27:46) ಮತ್ತು ಅವನು ಸಾಯುತ್ತಿರುವಾಗ ಹೇಳಿದಂತಹ ಮಾತುಗಳು, ಹೃತ್ಪೂರ್ವಕ ಪ್ರೀತಿ ಮತ್ತು ಭರವಸೆಯನ್ನು ಪ್ರಕಟಿಸುತ್ತವೆ: “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ.”—ಲೂಕ 23:46.
ಇದೆಲ್ಲವೂ ನಮಗೆ ಎಂತಹ ಪುನರಾಶ್ವಾಸನೆಯನ್ನು ಕೊಡುತ್ತದೆ! “ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು.”—ಇಬ್ರಿಯ 4:15.
ಯೆಹೋವನ ಭರವಸೆ
ವದನಕರ ವಿಷಯದಲ್ಲಿ ತಾನು ಮಾಡಿದ ಆಯ್ಕೆಯನ್ನು ಯೆಹೋವನು ಎಂದೂ ವಿಷಾದಿಸಲಿಲ್ಲ. ತನ್ನ ಕಡೆಗಿನ ಅವರ ನಿಷ್ಠೆಯು ಆತನಿಗೆ ತಿಳಿದಿತ್ತು, ಮತ್ತು ಯಾರು ಅಪರಿಪೂರ್ಣರಾಗಿದ್ದಾರೊ ಅವರ ಬಲಹೀನತೆಗಳನ್ನು ಆತನು ಕರುಣೆಯಿಂದ ಅಲಕ್ಷಿಸಿದನು. ಆದರೂ ಅವರು ತಮ್ಮ ನೇಮಕವನ್ನು ಪೂರೈಸುವಂತೆ ಆತನು ನಿರೀಕ್ಷಿಸಿದನು. ಆತನ ಸಹಾಯದೊಂದಿಗೆ ಅವರು ಹಾಗೆ ಮಾಡಲು ಶಕ್ತರಾಗಿದ್ದರು.
ನಮ್ಮ ನಿಷ್ಠಾವಂತ ಸಹೋದರ ಸಹೋದರಿಯರಲ್ಲಿ ನಾವು ತಾಳ್ಮೆಯಿಂದ ಭರವಸೆಯನ್ನು ತೋರಿಸೋಣ. ಈ ವಿಷಯಗಳ ವ್ಯವಸ್ಥೆಯಲ್ಲಿ ಅವರು ಯಾವಾಗಲೂ ನಮ್ಮಂತೆಯೇ ಅಪರಿಪೂರ್ಣರಾಗಿರುವರು. ಆದರೂ, ನಮ್ಮ ಸಹೋದರರು ನಮ್ಮ ಪ್ರೀತಿ ಮತ್ತು ಗಮನಕ್ಕೆ ಅನರ್ಹರಾಗಿದ್ದಾರೆಂದು ನಾವೆಂದೂ ತೀರ್ಮಾನಿಸಬಾರದು. ಪೌಲನು ಬರೆದುದು: “ದೃಢವಾದ ನಂಬಿಕೆಯುಳ್ಳ ನಾವು ನಮ್ಮ ಸುಖವನ್ನು ನೋಡಿಕೊಳ್ಳದೆ ದೃಢವಿಲ್ಲದವರ ಅನುಮಾನಗಳನ್ನು ಸಹಿಸಿಕೊಳ್ಳಬೇಕು.”—ರೋಮಾಪುರ 15:1; ಕೊಲೊಸ್ಸೆ 3:13, 14.
ಯೆಹೋವನ ಪ್ರವಾದಿಗಳು ನಾವು ಅನುಭವಿಸುವಂತಹ ಎಲ್ಲ ಭಾವನೆಗಳನ್ನು ಅನುಭವಿಸಿದರು. ಹಾಗಿದ್ದರೂ, ಅವರು ಯೆಹೋವನಲ್ಲಿ ಭರವಸೆಯಿಟ್ಟರು, ಮತ್ತು ಯೆಹೋವನು ಅವರನ್ನು ಪೋಷಿಸಿದನು. ಅದಕ್ಕಿಂತಲೂ ಹೆಚ್ಚಾಗಿ, ಯೆಹೋವನು ಅವರಿಗೆ ಆನಂದಕ್ಕಾಗಿ ಕಾರಣಗಳನ್ನು ಕೊಟ್ಟನು—ಒಂದು ಒಳ್ಳೆಯ ಮನಸ್ಸಾಕ್ಷಿ, ಆತನ ಅನುಗ್ರಹದ ತಿಳಿವಳಿಕೆ, ಅವರನ್ನು ಬೆಂಬಲಿಸಿದಂತಹ ನಿಷ್ಠಾವಂತ ಸಂಗಾತಿಗಳು, ಮತ್ತು ಒಂದು ಸಂತೋಷದ ಭವಿಷ್ಯತ್ತಿನ ಆಶ್ವಾಸನೆ. (ಇಬ್ರಿಯ 12:1-3) “ನಮ್ಮಂಥ ಅನಿಸಿಕೆಗಳುಳ್ಳ” ವ್ಯಕ್ತಿಗಳಾದ ಪ್ರಾಚೀನಕಾಲದ ಪ್ರವಾದಿಗಳ ನಂಬಿಕೆಯನ್ನು ನಾವು ಅನುಕರಿಸುತ್ತಿರುವಾಗ, ನಾವು ಕೂಡ ಯೆಹೋವನಿಗೆ ಪೂರ್ಣ ಭರವಸೆಯೊಂದಿಗೆ ಅಂಟಿಕೊಂಡಿರೋಣ.