ವೈದ್ಯರು, ನ್ಯಾಯಾಧೀಶರು, ಮತ್ತು ಯೆಹೋವನ ಸಾಕ್ಷಿಗಳು
ಮಾರ್ಚ್ 1995ರಷ್ಟು ಹಿಂದೆ, ಯೆಹೋವನ ಸಾಕ್ಷಿಗಳು ಬ್ರಸಿಲ್ನಲ್ಲಿ ಎರಡು ಸೆಮಿನಾರ್ಗಳನ್ನು ಪ್ರಾಯೋಜಿಸಿದರು. ಅದರ ಉದ್ದೇಶವೇನಾಗಿತ್ತು? ಆಸ್ಪತ್ರೆಯಲ್ಲಿನ ರೋಗಿಯೊಬ್ಬನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದು, ಒಂದು ರಕ್ತಪೂರಣವನ್ನು ಸ್ವೀಕರಿಸಲು ಸಾಧ್ಯವಿಲ್ಲದಿರುವಾಗ, ವೈದ್ಯಕೀಯ ಮತ್ತು ಕಾನೂನುಸಂಬಂಧಿತ ಸಿಬ್ಬಂದಿಯ ಸಹಕಾರವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದೇ.—ಅ. ಕೃತ್ಯಗಳು 15:29.
ವಿಷಾದಕರವಾಗಿ, ಕೆಲವು ಸಂದರ್ಭಗಳಲ್ಲಿ ವೈದ್ಯರು ಸಾಕ್ಷಿ ರೋಗಿಗಳ ಇಷ್ಟಗಳನ್ನು ಅಸಡ್ಡೆಮಾಡಿದ್ದರು ಮತ್ತು ಒಂದು ರಕ್ತಪೂರಣವನ್ನು ಒತ್ತಾಯಿಸಿ ಕೊಡಲಿಕ್ಕಾಗಿ ನ್ಯಾಯಾಲಯದ ಆಜ್ಞೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದರು. ಅಂತಹ ಪರಿಸ್ಥಿತಿಗಳಲ್ಲಿ, ಸಾಕ್ಷಿಗಳು ತಮ್ಮನ್ನು ಸಂರಕ್ಷಿಸಿಕೊಳ್ಳಲು ಲಭ್ಯವಿದ್ದ ಯಾವುದೇ ಕಾನೂನುಸಂಬಂಧಿತ ಮಾಧ್ಯಮವನ್ನು ಉಪಯೋಗಿಸಿದರು. ಹಾಗಿರುವುದಾದರೂ, ಅವರು ಮುಖಾಬಿಲೆಗಿಂತ, ಸಹಕಾರವನ್ನು ಇಷ್ಟಪಟ್ಟರು. ಹೀಗಿರುವುದರಿಂದ, ಹೊಮೋಲೊಗಸ್ ರಕ್ತಪೂರಣ ಚಿಕಿತ್ಸೆಗೆ ಅನೇಕ ಬದಲಿಗಳಿವೆ ಮತ್ತು ಯೆಹೋವನ ಸಾಕ್ಷಿಗಳು ಇವುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾರೆ ಎಂಬ ವಿಷಯವನ್ನು ಸೆಮಿನಾರ್ಗಳು ಒತ್ತಿಹೇಳಿದವು.a
ಸಾಪೌಲೂ ಪ್ರಾದೇಶಿಕ ಮೆಡಿಕಲ್ ಕೌನ್ಸಿಲ್ನ ಒಂದು ಕೂಟವು ಈಗಾಗಲೇ ಸಾಕ್ಷಿಗಳ ನಿಲುವನ್ನು ಬೆಂಬಲಿಸಿದೆ. ವೈದ್ಯನೊಬ್ಬನ ಶಿಫಾರಸ್ಸು ಮಾಡಲ್ಪಟ್ಟ ಚಿಕಿತ್ಸೆಗೆ ಆಕ್ಷೇಪಣೆಯಿರುವಲ್ಲಿ, ರೋಗಿಗೆ ಅದನ್ನು ನಿರಾಕರಿಸಲು ಮತ್ತು ಇನ್ನೊಬ್ಬ ವೈದ್ಯನನ್ನು ಆರಿಸಿಕೊಳ್ಳುವ ಹಕ್ಕಿದೆಯೆಂದು ಅದು ಜನವರಿ 1995ರಲ್ಲಿ ನಿರ್ಧರಿಸಿತು.
ಪ್ರಶಂಸನೀಯವಾಗಿ, ಬ್ರಸಿಲ್ನ ವೈದ್ಯಕೀಯ ಸಮುದಾಯದೊಳಗೆ ಈಗ, ರಕ್ತರಹಿತವಾದ ಚಿಕಿತ್ಸೆಯನ್ನು ಕೇಳಿಕೊಳ್ಳುವ ತಮ್ಮ ರೋಗಿಗಳಿಗೆ ಅಂತಹ ಚಿಕಿತ್ಸೆಯನ್ನು ಕೊಡಲು ಸಿದ್ಧರಿರುವ ನೂರಾರು ವ್ಯಕ್ತಿಗಳಿದ್ದಾರೆ. ಮಾರ್ಚ್ 1995ರ ಸೆಮಿನಾರ್ಗಳಂದಿನಿಂದ, ಬ್ರಸಿಲ್ನಲ್ಲಿರುವ ವೈದ್ಯರ, ನ್ಯಾಯಾಧೀಶರ ಮತ್ತು ಯೆಹೋವನ ಸಾಕ್ಷಿಗಳ ನಡುವಿನ ಸಹಕಾರವು ಗಮನಾರ್ಹವಾಗಿ ಉತ್ತಮಗೊಂಡಿದೆ. 1997ರಲ್ಲಿ ಆಂಬೀಟೂ ಆಸ್ಪೀಟಾಲಾರ್ ಎಂಬ ಬ್ರಸಿಲ್ನ ವೈದ್ಯಕೀಯ ಪತ್ರಿಕೆಯು, ರಕ್ತದ ವಿಷಯದಲ್ಲಿ ತಮ್ಮ ನಿಲುವು ಗೌರವಿಸಲ್ಪಡಬೇಕೆಂಬ ಯೆಹೋವನ ಸಾಕ್ಷಿಗಳ ಹಕ್ಕುಗಳನ್ನು ಅಂಗೀಕರಿಸಲೇಬೇಕೆಂದು ಪಟ್ಟುಹಿಡಿದ ಒಂದು ಲೇಖನವನ್ನು ಪ್ರಕಟಿಸಿತು. ರೀಯೊ ಡೆ ಸನೀರೋ ಮತ್ತು ಸಾಪೌಲೂ ರಾಜ್ಯಗಳ ಪ್ರಾದೇಶಿಕ ಮೆಡಿಕಲ್ ಕೌನ್ಸಿಲ್ಗಳಿಂದ ತಿಳಿಸಲ್ಪಟ್ಟಿರುವಂತೆ, “ತನ್ನ ರೋಗಿಯ ಜೀವವನ್ನು ಸಂರಕ್ಷಿಸುವ ವೈದ್ಯನೊಬ್ಬನ ಕರ್ತವ್ಯವು, ರೋಗಿಯ ಆಯ್ಕೆಯ ಹಕ್ಕನ್ನು ಸಮರ್ಥಿಸುವ ತನ್ನ ಕರ್ತವ್ಯವನ್ನು ಮೀರಬಾರದು” ಎಂಬ ವಿಷಯವು ಈಗ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ.
[ಪಾದಟಿಪ್ಪಣಿ]
a ಹೆಚ್ಚಿನ ಮಾಹಿತಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರನ್ನು ನೋಡಿರಿ.