ಅವರು ಯೆಹೋವನ ಚಿತ್ತವನ್ನು ಮಾಡಿದರು
ಯೇಸು 70 ಮಂದಿ ಶಿಷ್ಯರನ್ನು ಕಳುಹಿಸುತ್ತಾನೆ
ಸಾಮಾನ್ಯ ಶಕ 32ರ ಶರತ್ಕಾಲವಾಗಿತ್ತು. ಯೇಸುವಿನ ಮರಣಕ್ಕೆ ಕೇವಲ ಆರು ತಿಂಗಳುಗಳಿದ್ದವು. ಈ ಕಾರಣದಿಂದ, ಸಾರುವ ಕೆಲಸವನ್ನು ತ್ವರಿತಗೊಳಿಸಲು ಮತ್ತು ತನ್ನ ಹಿಂಬಾಲಕರಲ್ಲಿ ಕೆಲವರ ತರಬೇತಿಯನ್ನು ಮುಂದುವರಿಸಲು, ಅವನು 70 ಮಂದಿ ಶಿಷ್ಯರನ್ನು ನೇಮಿಸಿ “ಅವರನ್ನು ಇಬ್ಬಿಬ್ಬರಾಗಿ ತಾನು ಹೋಗಬೇಕೆಂದಿದ್ದ ಪ್ರತಿಯೊಂದೂರಿಗೂ ಪ್ರತಿಯೊಂದು ಸ್ಥಳಕ್ಕೂ ಮುಂದಾಗಿ ಕಳುಹಿಸಿದನು.”—ಲೂಕ 10:1.a
ಸ್ವತಃ ಯೇಸು ತದನಂತರ ಆಗಮಿಸಿದಾಗ ಜನರು, ತಾವು ಮೆಸ್ಸೀಯನ ಪರವಾಗಿದ್ದೇವೊ ಅಥವಾ ಅವನಿಗೆ ವಿರೋಧವಾಗಿದ್ದೇವೊ ಎಂಬುದನ್ನು ಅವರು ಹೆಚ್ಚು ಬೇಗನೆ ನಿರ್ಣಯಿಸಲು ಶಕ್ತರಾಗುವಂತೆ, ಯೇಸು ತನ್ನ ಶಿಷ್ಯರನ್ನು ತನಗಿಂತ “ಮುಂದಾಗಿ ಕಳುಹಿಸಿದನು.” ಆದರೆ ಅವನು ಅವರನ್ನು “ಇಬ್ಬಿಬ್ಬರಾಗಿ” ಕಳುಹಿಸಿದ್ದೇಕೆ? ವಿರೋಧವನ್ನು ಎದುರಿಸುತ್ತಿರುವಾಗ, ಪರಸ್ಪರರಿಗೆ ಉತ್ತೇಜನವಾಗಿರಲಿಕ್ಕಾಗಿ ಎಂಬುದು ಸುವ್ಯಕ್ತ.
ಅವರ ಸಾರುವ ಕೆಲಸದ ತುರ್ತನ್ನು ಒತ್ತಿಹೇಳುತ್ತಾ, ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ [“ಕೊಯ್ಲಿನ,” NW] ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಲೂಕ 10:2) ಕೊಯ್ಲಿಗೆ ಮಾಡಲ್ಪಟ್ಟ ಹೋಲಿಕೆಯು ಸೂಕ್ತವಾಗಿತ್ತು, ಯಾಕಂದರೆ ಕೊಯ್ಲಿನ ಸಮಯದಲ್ಲಿನ ಯಾವುದೇ ತಡಮಾಡುವಿಕೆಯು, ಬೆಲೆಯುಳ್ಳ ಪೈರುಗಳ ಹಾಳಾಗುವಿಕೆಯಲ್ಲಿ ಫಲಿಸಸಾಧ್ಯವಿದೆ. ತದ್ರೀತಿಯಲ್ಲಿ, ಶಿಷ್ಯರು ತಮ್ಮ ಸಾರುವ ನೇಮಕವನ್ನು ಅಲಕ್ಷಿಸಿದ್ದಲ್ಲಿ, ಅಮೂಲ್ಯ ಜೀವಗಳು ನಷ್ಟವಾಗಸಾಧ್ಯವಿತ್ತು!—ಯೆಹೆಜ್ಕೇಲ 33:6.
ಅನಪಕರ್ಷಿತ ಶುಶ್ರೂಷಕರು
ಯೇಸು ತನ್ನ ಶಿಷ್ಯರಿಗೆ ಮುಂದೆ ಈ ಉಪದೇಶವನ್ನು ಕೊಟ್ಟನು: “ಹಣದ ಚೀಲವನ್ನಾಗಲಿ ಹಸಿಬೆಯನ್ನಾಗಲಿ ಕೆರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ; ದಾರಿಯಲ್ಲಿ ಯಾರಿಗೂ ವಂದಿಸಬೇಡಿರಿ [“ವಂದಿಸುವಾಗ ಆಲಿಂಗಿಸಬೇಡಿರಿ, NW].” (ಲೂಕ 10:4) ಒಬ್ಬ ಪ್ರಯಾಣಿಕನು ತನ್ನೊಂದಿಗೆ, ಒಂದು ಚೀಲ ಮತ್ತು ಆಹಾರವನ್ನು ಮಾತ್ರವಲ್ಲ, ಕೆರಗಳ ಒಂದು ಹೆಚ್ಚಿನ ಜೋಡಿಯನ್ನೂ ಒಯ್ಯುವುದು ರೂಢಿಯಾಗಿತ್ತು, ಯಾಕಂದರೆ ಅಟ್ಟೆಗಳು ಸವೆದುಹೋಗಸಾಧ್ಯವಿತ್ತು ಮತ್ತು ಅವುಗಳ ದಾರಗಳು ತುಂಡಾಗಸಾಧ್ಯವಿತ್ತು. ಆದರೆ ಯೇಸುವಿನ ಶಿಷ್ಯರು ಅಂತಹ ವಿಷಯಗಳ ಕುರಿತಾಗಿ ಚಿಂತಿಸಬೇಕಾಗಿರಲಿಲ್ಲ. ಬದಲಿಗೆ, ಯಾರ ನಡುವೆ ಅತಿಥಿಸತ್ಕಾರವು ಒಂದು ಪದ್ಧತಿಯಾಗಿತ್ತೊ ಆ ಜೊತೆ ಇಸ್ರಾಯೇಲ್ಯರ ಮೂಲಕ ಯೆಹೋವನು ಅವರನ್ನು ಪರಾಮರಿಸುವನೆಂಬ ಭರವಸೆ ಅವರಿಗಿರಬೇಕಿತ್ತು.
ಆದರೆ ತನ್ನ ಶಿಷ್ಯರು ಯಾರನ್ನಾದರೂ ವಂದಿಸುವಾಗ ಆಲಿಂಗಿಸಬಾರದೆಂದು ಯೇಸು ಹೇಳಿದ್ದೇಕೆ? ಅವರು ಸ್ನೇಹರಹಿತರೂ, ಒರಟುಸ್ವಭಾವದವರೂ ಆಗಿರಬೇಕಿತ್ತೊ? ಖಂಡಿತವಾಗಿಯೂ ಇಲ್ಲ! ವಂದಿಸುವಾಗ ಆಲಿಂಗಿಸುವುದು ಎಂಬ ಅರ್ಥವುಳ್ಳ ಆ್ಯಸ್ಪಾಸೊಮೈ ಎಂಬ ಗ್ರೀಕ್ ಪದವು, ಒಂದು ವಿನಯಶೀಲ “ನಮಸ್ಕಾರ” ಅಥವಾ “ಶುಭವಾಗಲಿ” ಎಂದು ಹೇಳುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸಬಹುದು. ಅದು ರೂಢಿಗತವಾದ ಮುತ್ತುಗಳು, ಆಲಿಂಗನಗಳು, ಇಬ್ಬರು ಪರಿಚಯಸ್ಥರು ಸಂಧಿಸುವಾಗ ಹಿಂಬಾಲಿಸುವಂತಹ ದೀರ್ಘವಾದ ಸಂಭಾಷಣೆಯನ್ನು ಸಹ ಒಳಗೊಂಡಿರಬಹುದು. ಒಬ್ಬ ವ್ಯಾಖ್ಯಾನಕಾರನು ಗಮನಿಸುವುದು: “ಪೌರಸ್ತ್ಯರ ನಡುವೆ ಅಭಿವಂದನೆಗಳು, ನಮ್ಮಲ್ಲಿ ಇರುವಂತೆ ಕೊಂಚ ತಲೆಬಾಗಿಸುವುದು, ಅಥವಾ ಹಸ್ತವನ್ನು ನೀಡುವುದನ್ನು ಒಳಗೊಂಡಿರಲಿಲ್ಲ, ಬದಲಿಗೆ ಅನೇಕ ಆಲಿಂಗನಗಳು ಮತ್ತು ತಲೆಬಾಗುವಿಕೆಗಳು, ಮತ್ತು ನೆಲದ ಮೇಲೆ ದೇಹವನ್ನು ಸಾಷ್ಟಾಂಗಗೊಳಿಸುವುದರ ಮೂಲಕವೂ ನಡೆಸಲ್ಪಡುತ್ತಿತ್ತು. ಇದೆಲ್ಲದಕ್ಕೆ ತುಂಬ ಸಮಯ ಬೇಕಾಗುತ್ತಿತ್ತು.” (2 ಅರಸುಗಳು 4:29ನ್ನು ಹೋಲಿಸಿರಿ.) ಈ ರೀತಿಯಲ್ಲಿ ವಾಡಿಕೆಯದ್ದಾಗಿರುವುದಾದರೂ, ಅನಾವಶ್ಯಕವಾದಂತಹ ಅಪಕರ್ಷಣೆಗಳನ್ನು ದೂರಮಾಡಲು ಯೇಸು ತನ್ನ ಹಿಂಬಾಲಕರಿಗೆ ಸಹಾಯಮಾಡಿದನು.
ಕೊನೆಯಲ್ಲಿ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದೇನೆಂದರೆ, ಅವರು ಒಂದು ಮನೆಯನ್ನು ಪ್ರವೇಶಿಸಿ, ಸ್ವಾಗತಿಸಲ್ಪಟ್ಟಾಗ ಅವರು ‘ಆ ಮನೆಯಲ್ಲಿಯೇ ಇದ್ದುಕೊಂಡು ಅವರು ಕೊಡುವಂಥದನ್ನು ಊಟಮಾಡಿ, ಕುಡಿ’ಯಬೇಕು. ಆದರೆ ಅವರು ಒಂದು ಊರನ್ನು ಪ್ರವೇಶಿಸಿ, ಒಳ್ಳೆಯ ರೀತಿಯಲ್ಲಿ ಸ್ವಾಗತಿಸಲ್ಪಡದಿದ್ದಲ್ಲಿ, ಅವರು “ಆ ಊರ ಬೀದಿಗಳಿಗೆ ಬಂದು—ನಿಮ್ಮ ಊರಿಂದ ನಮ್ಮ ಕಾಲುಗಳಿಗೆ ಹತ್ತಿದ ಧೂಳನ್ನೂ ಒರಸಿಬಿಡುತ್ತೇವೆ . . . ಎಂಬದಾಗಿ” ಹೇಳಬೇಕು. (ಲೂಕ 10:7, 10, 11) ಒಬ್ಬನ ಕಾಲುಗಳಿಗೆ ಹತ್ತಿದ ಧೂಳನ್ನು ಒರಸಿಬಿಡುವುದು ಅಥವಾ ಜಾಡಿಸಿಬಿಡುವುದು, ಆ ಶಿಷ್ಯರನ್ನು ಸ್ವಾಗತಿಸದಿದ್ದ ಮನೆ ಅಥವಾ ಊರನ್ನು ಕಟ್ಟಕಡೆಗೆ ದೇವರಿಂದ ಬರುವಂತಹ ಫಲಿತಾಂಶಗಳಿಗೆ ಶಾಂತಿಪೂರ್ವಕವಾಗಿ ಬಿಟ್ಟುಬಿಡುತ್ತಿದ್ದರೆಂಬುದನ್ನು ಸೂಚಿಸುತ್ತಿತ್ತು. ಆದರೆ ಯೇಸುವಿನ ಶಿಷ್ಯರನ್ನು ದಯೆಯಿಂದ ಸ್ವಾಗತಿಸಿದಂತಹವರು, ಆಶೀರ್ವಾದಗಳಿಗಾಗಿ ತಮ್ಮನ್ನು ತಾವೇ ಅರ್ಹರನ್ನಾಗಿ ಮಾಡಿಕೊಳ್ಳುವರು. ಇನ್ನೊಂದು ಸಂದರ್ಭದಲ್ಲಿ ಯೇಸು ತನ್ನ ಅಪೊಸ್ತಲರಿಗೆ ಹೇಳಿದ್ದು: “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ. ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”—ಮತ್ತಾಯ 10:40, 42.
ನಮಗಾಗಿ ಪಾಠಗಳು
ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಿಯೋಗವು ಈಗ ಲೋಕವ್ಯಾಪಕವಾಗಿ 50,00,000ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುತ್ತಾ ಇದೆ. (ಮತ್ತಾಯ 24:14; 28:19, 20) ಅವರು ತಮ್ಮ ಸಂದೇಶವು ತುರ್ತಿನದ್ದಾಗಿದೆಯೆಂಬುದನ್ನು ಗ್ರಹಿಸುತ್ತಾರೆ. ಆದುದರಿಂದ, ಅವರು ತಮ್ಮ ಪ್ರಮುಖ ನೇಮಕಕ್ಕೆ ಪೂರ್ಣ ಗಮನವನ್ನು ಕೊಡುವುದರಿಂದ ತಮ್ಮನ್ನು ತಡೆಗಟ್ಟಬಹುದಾದ ಅಪಕರ್ಷಣೆಗಳಿಂದ ದೂರವಿರುತ್ತಾ, ಸಮಯವನ್ನು ಅತ್ಯುತ್ತಮವಾಗಿ ವಿನಿಯೋಗಿಸುತ್ತಾರೆ.
ಯೆಹೋವನ ಸಾಕ್ಷಿಗಳು, ತಾವು ಭೇಟಿಯಾಗುವವರೆಲ್ಲರೊಂದಿಗೆ ಸ್ನೇಹಪರರಾಗಿರಲು ಪ್ರಯಾಸಪಡುತ್ತಾರೆ. ಹಾಗಿದ್ದರೂ, ಅವರು ಸುಮ್ಮನೆ ಕೆಲಸಕ್ಕೆ ಬಾರದ ಹರಟೆಯಲ್ಲಿ ಒಳಗೊಳ್ಳುವುದಿಲ್ಲ, ಅಥವಾ ಸಾಮಾಜಿಕ ವಿಷಯಗಳ ಅಥವಾ ಅನ್ಯಾಯಗಳನ್ನು ಸರಿಪಡಿಸಲಿಕ್ಕಾಗಿ ಈ ಲೋಕದ ವಿಫಲವಾಗುತ್ತಿರುವ ಪ್ರಯತ್ನಗಳ ಕುರಿತ ವಾಗ್ವಾದಗಳಲ್ಲಿ ಸಿಕ್ಕಿಬೀಳುವುದಿಲ್ಲ. (ಯೋಹಾನ 17:16) ಬದಲಿಗೆ, ಅವರು ತಮ್ಮ ಚರ್ಚೆಯನ್ನು, ಮನುಷ್ಯನ ಸಮಸ್ಯೆಗಳಿಗೆ ಏಕಮಾತ್ರ ಶಾಶ್ವತ ಪರಿಹಾರವಾಗಿರುವ ದೇವರ ರಾಜ್ಯದ ಮೇಲೆ ತಮ್ಮ ಚರ್ಚೆಯನ್ನು ಕೇಂದ್ರೀಕರಿಸುತ್ತಾರೆ.
ಸಾಮಾನ್ಯವಾಗಿ, ಯೆಹೋವನ ಸಾಕ್ಷಿಗಳು ಇಬ್ಬಿಬ್ಬರಾಗಿ ಕೆಲಸಮಾಡುತ್ತಿರುವುದನ್ನು ಕಾಣಲಾಗುತ್ತದೆ. ಅವರಲ್ಲಿ ಪ್ರತಿಯೊಬ್ಬರೂ ಒಂಟಿಯಾಗಿ ಕೆಲಸಮಾಡಿದ್ದಲ್ಲಿ ಹೆಚ್ಚನ್ನು ಸಾಧಿಸಲು ಸಾಧ್ಯವಿದೆಯಲ್ಲವೊ? ಸಾಧ್ಯವಿರಬಹುದು. ಆದರೂ, ಒಬ್ಬ ಜೊತೆ ವಿಶ್ವಾಸಿಯ ಪಕ್ಕದಲ್ಲಿ ಕೆಲಸಮಾಡುವ ಮೂಲಕ ಸಿಗುವ ಪ್ರಯೋಜನವನ್ನು ಇಂದು ಕ್ರೈಸ್ತರು ಅರಿತುಕೊಳ್ಳುತ್ತಾರೆ. ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಸಾಕ್ಷಿಯನ್ನು ನೀಡುತ್ತಿರುವಾಗ ಅದು ಸ್ವಲ್ಪ ಮಟ್ಟಿಗಿನ ಸಂರಕ್ಷಣೆಯನ್ನು ಒದಗಿಸುತ್ತದೆ. ಒಬ್ಬ ಜೊತೆಗಾರನೊಂದಿಗೆ ಕೆಲಸಮಾಡುವುದು, ಹೊಸಬರಿಗೆ, ಸುವಾರ್ತೆಯ ಹೆಚ್ಚು ಅನುಭವಸ್ಥ ಪ್ರಚಾರಕರ ಕೌಶಲದಿಂದ ಪ್ರಯೋಜನಪಡೆದುಕೊಳ್ಳಲು ಕೂಡ ಶಕ್ತರನ್ನಾಗಿ ಮಾಡುತ್ತದೆ. ನಿಜವಾಗಿಯೂ, ಇಬ್ಬರೂ ಉತ್ತೇಜನದ ಪರಸ್ಪರ ವಿನಿಮಯಕ್ಕೆ ನೆರವನ್ನು ನೀಡಸಾಧ್ಯವಿದೆ.—ಜ್ಞಾನೋಕ್ತಿ 27:17.
ನಿಸ್ಸಂದೇಹವಾಗಿ, ಸಾರುವ ಕೆಲಸವು ಈ “ಕಡೇ ದಿವಸಗಳಲ್ಲಿ” ಮಾಡಲ್ಪಡುತ್ತಿರುವ ಕೆಲಸಗಳಲ್ಲಿಯೇ ಅತ್ಯಂತ ತುರ್ತಿನದ್ದಾಗಿದೆ. (2 ತಿಮೊಥೆಯ 3:1) “ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ” ಕೆಲಸಮಾಡುತ್ತಿರುವ ಲೋಕವ್ಯಾಪಕವಾದ ಸಹೋದರತ್ವದ ಬೆಂಬಲವನ್ನು ಪಡೆದಿರುವುದಕ್ಕಾಗಿ ಯೆಹೋವನ ಸಾಕ್ಷಿಗಳು ಸಂತೋಷವುಳ್ಳವರಾಗಿದ್ದಾರೆ.—ಫಿಲಿಪ್ಪಿ 1:27.
[ಪಾದಟಿಪ್ಪಣಿ]
a ಯೇಸು “ಎಪ್ಪತ್ತೆರಡು” ಶಿಷ್ಯರನ್ನು ಕಳುಹಿಸಿದನೆಂದು ಕೆಲವು ಬೈಬಲ್ಗಳು ಮತ್ತು ಪುರಾತನ ಗ್ರೀಕ್ ಹಸ್ತಪ್ರತಿಗಳು ಹೇಳುತ್ತವೆ. ಆದರೆ, “ಎಪ್ಪತ್ತು ಮಂದಿ” ಎಂಬ ಪಾಠಾಂತರಕ್ಕಾಗಿ ಹೇರಳವಾದ ಹಸ್ತಪ್ರತಿಗಳ ಬೆಂಬಲವಿದೆ. ಈ ಪಾರಿಭಾಷಿಕ ನಿರೂಪಣೆಯು, ಯೇಸು ತನ್ನ ಶಿಷ್ಯರ ದೊಡ್ಡ ಗುಂಪನ್ನು ಸಾರಲಿಕ್ಕಾಗಿ ಕಳುಹಿಸಿದನೆಂಬ ಮುಖ್ಯ ವಿಷಯದಿಂದ ನಮ್ಮನ್ನು ಅಪಕರ್ಷಿಸಬಾರದು.