ಕುಟುಂಬ—ಒಂದು ಮಾನವ ಆವಶ್ಯಕತೆ!
ಯಾವಾಗ ಕುಟುಂಬಗಳು ಏಳಿಗೆ ಹೊಂದುತ್ತವೋ ಆಗ ಮಾತ್ರ ಮಾನವ ಸಮಾಜವು ಏಳಿಗೆ ಹೊಂದುತ್ತದೆಂದು ಪ್ರತಿಪಾದಿಸಲಾಗಿದೆ. ಕುಟುಂಬ ಏರ್ಪಾಡು ಶಿಥಿಲವಾದಂತೆ, ಸಮುದಾಯಗಳು ಹಾಗೂ ದೇಶಗಳ ಬಲವು ದುರ್ಬಲಗೊಳ್ಳುತ್ತದೆ ಎಂದು ಇತಿಹಾಸವು ತೋರಿಸುತ್ತದೆ. ಪುರಾತನ ಗ್ರೀಸ್‌ನಲ್ಲಿ ನೈತಿಕ ಅವನತಿಯು ಕುಟುಂಬಗಳನ್ನು ನಾಶಪಡಿಸಿದಾಗ, ಅದರ ನಾಗರಿಕತೆಯು ಪ್ರತ್ಯೇಕ ಭಾಗಗಳಾಗಿ ಒಡೆದುಹೋದಾಗ, ರೋಮನರು ಅದನ್ನು ಸುಲಭವಾಗಿ ವಶಪಡಿಸಿಕೊಂಡರು. ರೋಮನ್ ಚಕ್ರಾಧಿಪತ್ಯದ ಕುಟುಂಬಗಳು ಸುದೃಢವಾಗಿ ಉಳಿದಷ್ಟು ಸಮಯ ಆ ಚಕ್ರಾಧಿಪತ್ಯವು ಪ್ರಬಲವಾಗಿ ಉಳಿಯಿತು. ಆದರೆ ಶತಮಾನಗಳು ಗತಿಸಿದಂತೆ, ಕುಟುಂಬ ಜೀವಿತವು ದುರ್ಬಲಗೊಂಡಿತು, ಮತ್ತು ಚಕ್ರಾಧಿಪತ್ಯದ ಬಲವು ಸೊರಗಿಹೋಯಿತು. “ಕುಟುಂಬ ಹಾಗೂ ಕುಟುಂಬ ಜೀವಿತದ ಭದ್ರತೆ ಹಾಗೂ ಉಚ್ಚ ಸ್ಥಾನಮಾನಗಳು ನಾಗರಿಕತೆಯ ಪ್ರಮುಖ ಹೇತುಗಳಾಗಿವೆ, ಮತ್ತು ಸರ್ವ ಉದ್ಯಮದ ಅಂತಿಮ ಲಕ್ಷ್ಯಗಳಾಗಿವೆ” ಎಂದು, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮಾಜಿ ಅಧ್ಯಕ್ಷರಾದ ಚಾರ್ಲ್ಸ್ ಡಬ್ಲ್ಯೂ. ಈಲಿಯಟ್ ಹೇಳಿದರು.
ಹೌದು, ಕುಟುಂಬವು ಒಂದು ಮಾನವ ಆವಶ್ಯಕತೆಯಾಗಿದೆ. ಸಮಾಜದ ಸ್ಥಿರತೆಯ ಮೇಲೆ ಮತ್ತು ಮಕ್ಕಳ ಹಾಗೂ ಭಾವೀ ಸಂತತಿಗಳ ಹಿತಕ್ಷೇಮದ ಮೇಲೆ ಅದು ನೇರವಾದ ಪರಿಣಾಮವನ್ನು ಹೊಂದಿದೆ. ನಿಸ್ಸಂದೇಹವಾಗಿಯೂ, ಉತ್ತಮ ದರ್ಜೆಯ ಮಕ್ಕಳನ್ನು ಬೆಳೆಸಲಿಕ್ಕಾಗಿ ತುಂಬ ಕಷ್ಟಪಟ್ಟು ಕಾರ್ಯನಡಿಸುವ ಅನೇಕಾನೇಕ ಒಂಟಿ ತಾಯಂದಿರಿದ್ದಾರೆ ಮತ್ತು ಅವರ ಶ್ರದ್ಧಾಪೂರ್ವಕವಾದ ಕೆಲಸಕ್ಕಾಗಿ ಅವರನ್ನು ಪ್ರಶಂಸಿಸಬೇಕಾಗಿದೆ. ಆದರೆ, ಇಬ್ಬರೂ ಹೆತ್ತವರಿರುವ ಒಂದು ಕುಟುಂಬದಲ್ಲಿ ಮಕ್ಕಳು ಜೀವಿಸುವುದಾದರೆ, ಅವರು ಸಾಮಾನ್ಯವಾಗಿ ಇನ್ನೂ ಹೆಚ್ಚು ಚೆನ್ನಾಗಿ ಬಾಳುತ್ತಾರೆಂದು ಅಧ್ಯಯನಗಳು ತೋರಿಸುತ್ತವೆ.
2,100ಕ್ಕಿಂತಲೂ ಹೆಚ್ಚು ಮಂದಿ ಹದಿಹರೆಯದವರ ಕುರಿತಾದ ಒಂದು ಆಸ್ಟ್ರೇಲಿಯನ್ ಅಧ್ಯಯನವು ಕಂಡುಕೊಂಡಿದ್ದೇನೆಂದರೆ, “ಒಡೆದ ಕುಟುಂಬಗಳಿಂದ ಬಂದ ಹದಿವಯಸ್ಕರಿಗೆ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳು ಅಧಿಕವಾಗಿದ್ದವು, ಅವರು ಭಾವನಾತ್ಮಕ ಸಮಸ್ಯೆಗಳ ಲಕ್ಷಣಗಳನ್ನು ತೋರಿಸುವುದು ಹೆಚ್ಚು ಸಂಭವನೀಯವಾಗಿತ್ತು, ಮತ್ತು ಅಖಂಡವಾಗಿರುವ ಕುಟುಂಬಗಳಿಂದ ಬಂದ ಮಕ್ಕಳಿಗಿಂತ ಈ ಮಕ್ಕಳು ಲೈಂಗಿಕವಾಗಿ ಕ್ರಿಯಾಶೀಲರಾಗಿರುವುದು ಹೆಚ್ಚು ಸಂಭವನೀಯವಾಗಿತ್ತು.” ಆರೋಗ್ಯ ಸಂಖ್ಯಾಸಂಗ್ರಹಣದ ಯು.ಎಸ್. ರಾಷ್ಟ್ರೀಯ ಸಂಸ್ಥೆಗಳಿಂದ ನಡೆಸಲ್ಪಟ್ಟ ಒಂದು ಅಧ್ಯಯನವು ಪ್ರಕಟಪಡಿಸಿದ್ದೇನೆಂದರೆ, ಒಡೆದ ಕುಟುಂಬಗಳಿಂದ ಬಂದ ಮಕ್ಕಳಿಗೆ, “ಅಪಘಾತವು ಸಂಭವಿಸುವ ಸಂಭವನೀಯತೆಯು 20-30 ಪ್ರತಿಶತದಷ್ಟು ಹೆಚ್ಚಿತ್ತು, ಶಾಲೆಯಲ್ಲಿ ಒಂದು ಕ್ಲಾಸನ್ನು ಪುನರಾವರ್ತಿಸುವ ಸಂಭವನೀಯತೆಯು 40-75 ಪ್ರತಿಶತದಷ್ಟು ಹೆಚ್ಚಿತ್ತು, ಮತ್ತು ಶಾಲೆಯಿಂದ ಹೊರಹಾಕಲ್ಪಡುವ ಸಂಭವನೀಯತೆಯು 70 ಪ್ರತಿಶತದಷ್ಟು ಹೆಚ್ಚಿತ್ತು.” ಮತ್ತು ಕಾರ್ಯನೀತಿ ವಿಶ್ಲೇಷಕನೊಬ್ಬನು ವರದಿಸುವುದೇನೆಂದರೆ, “ಸಾಂಪ್ರದಾಯಿಕ ಮನೆಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗಿಂತಲೂ, ಒಂಟಿ ಹೆತ್ತವರ ಮನೆಗಳಿಂದ ಬರುವ ಮಕ್ಕಳು ದುಷ್ಕೃತ್ಯದಲ್ಲಿ ಒಳಗೂಡುವ ಸಾಧ್ಯತೆ ಹೆಚ್ಚಾಗಿರುತ್ತದೆ.”
ಮನೆಯು ವಿಶ್ರಮಸ್ಥಾನ
ಕುಟುಂಬದ ಏರ್ಪಾಡು ಎಲ್ಲರಿಗೂ ಒಂದು ಸಂತೋಷಕರವಾದ, ಭಕ್ತಿವೃದ್ಧಿಯನ್ನು ಉಂಟುಮಾಡುವ, ಹಾಗೂ ಸುಖಾನುಭವದ ಮನೆಯನ್ನು ಒದಗಿಸುತ್ತದೆ. “ಸಂತೋಷ ಹಾಗೂ ಸುಖಕ್ಷೇಮದ ಅತ್ಯಂತ ಪ್ರಮುಖ ಮೂಲವು, ಜೀವನೋಪಾಯವಾಗಲಿ ವಸ್ತುಗಳಾಗಲಿ ಹವ್ಯಾಸಗಳಾಗಲಿ ಸ್ನೇಹಿತರಾಗಲಿ ಅಲ್ಲ, ಬದಲಾಗಿ ಕುಟುಂಬವಾಗಿದೆ” ಎಂದು ಸ್ವೀಡಿಷ್ ಅಧಿಕಾರಿಯೊಬ್ಬನು ಪ್ರತಿಪಾದಿಸುತ್ತಾನೆ.
ಭೂಮಿಯಲ್ಲಿರುವ ಪ್ರತಿಯೊಂದು ಕುಟುಂಬವೂ ತನ್ನ ಹೆಸರಿಗಾಗಿ, ಕುಟುಂಬಗಳ ಮಹಾ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಚಿರಋಣಿಯಾಗಿದೆ. ಏಕೆಂದರೆ ಕುಟುಂಬದ ಏರ್ಪಾಡನ್ನು ಆರಂಭಿಸಿದಾತನು ಆತನೇ ಆಗಿದ್ದಾನೆ ಎಂದು ಬೈಬಲು ತೋರಿಸುತ್ತದೆ. (ಆದಿಕಾಂಡ 1:27, 28; 2:23, 24; ಎಫೆಸ 3:14, 15) ಹಾಗಿದ್ದರೂ, ಪ್ರೇರಿತ ಶಾಸ್ತ್ರವಚನಗಳಲ್ಲಿ ಅಪೊಸ್ತಲ ಪೌಲನು, ಕ್ರೈಸ್ತ ಸಭೆಯ ಹೊರಗೆ ನೈತಿಕತೆಯ ಹಾಗೂ ಮಾನವ ಸಮಾಜದ ಕುಸಿತದಲ್ಲಿ ಫಲಿಸುವ, ಕುಟುಂಬದ ಮೇಲಿನ ದುಷ್ಟ ಆಕ್ರಮಣವನ್ನು ಮುಂತಿಳಿಸಿದನು. “ಕಡೇ ದಿವಸಗಳು,” ‘ಭಕ್ತಿಯ ವೇಷವಿರುವವರ’ ಮಧ್ಯದಲ್ಲಿಯೂ, ನಿಷ್ಠಾರಾಹಿತ್ಯ, “ಸ್ವಾಭಾವಿಕ ಮಮತೆ”ಯ (NW) ಇಲ್ಲದಿರುವಿಕೆ, ಹಾಗೂ ಹೆತ್ತವರಿಗೆ ಅವಿಧೇಯತೆ ತೋರಿಸುವಂತಹ ಗುಣಗಳಿಂದ ಗುರುತಿಸಲ್ಪಡುವವು ಎಂದು ಅವನು ಹೇಳಿದನು. ಅಂತಹವರಿಂದ ವಿಮುಖರಾಗುವಂತೆ ಅವನು ಕ್ರೈಸ್ತರನ್ನು ಪ್ರಚೋದಿಸಿದನು. ದೇವರ ಸತ್ಯಕ್ಕೆ ವಿರೋಧವು, ಕುಟುಂಬಗಳನ್ನು ವಿಭಾಗಿಸುವುದೆಂದು ಯೇಸು ಮುಂತಿಳಿಸಿದನು.—2 ತಿಮೊಥೆಯ 3:1-5; ಮತ್ತಾಯ 10:32-37.
ಆದರೂ, ದೇವರು ನಮಗೆ ಯಾವ ಸಹಾಯವನ್ನೂ ಒದಗಿಸದೆ ಬಿಟ್ಟಿಲ್ಲ. ಆತನ ವಾಕ್ಯದಲ್ಲಿ ಕುಟುಂಬ ಸಂಬಂಧಗಳ ಕುರಿತು ಹೆಚ್ಚು ಉಪದೇಶವು ಕೊಡಲ್ಪಟ್ಟಿದೆ. ಒಂದು ಕುಟುಂಬವನ್ನು ಹೇಗೆ ಯಶಸ್ವಿಗೊಳಿಸಸಾಧ್ಯವಿದೆ ಮತ್ತು ಒಂದು ಮನೆಯನ್ನು, ಎಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಇನ್ನೊಬ್ಬ ಸದಸ್ಯನ ಕಡೆಗಿನ ಒಂದು ಜವಾಬ್ದಾರಿಯನ್ನು ಪೂರೈಸಲಿಕ್ಕಿದೆಯೋ ಆ ಆನಂದಕರವಾದ ಸ್ಥಳವಾಗಿ ಹೇಗೆ ಮಾಡಸಾಧ್ಯವಿದೆ ಎಂಬುದನ್ನು ಅದು ನಮಗೆ ಹೇಳುತ್ತದೆ.a—ಎಫೆಸ 5:33; 6:1-4.
ಕುಟುಂಬವು ತೀರ ಗಂಭೀರವಾಗಿ ಅಪಾಯಕ್ಕೊಳಗಾಗಿರುವ ಈ ದಿವಸಗಳಲ್ಲಿ, ಅಂತಹ ಒಂದು ಸಂತೋಷಭರಿತ ಸಂಬಂಧವನ್ನು ಸಾಧಿಸಸಾಧ್ಯವಿದೆಯೊ? ಹೌದು, ಖಂಡಿತವಾಗಿಯೂ ಸಾಧ್ಯವಿದೆ! ಈ ಒರಟಾದ, ಮರಳುಗಾಡಿನಂತಹ ಲೋಕದಲ್ಲಿ, ನಿಮ್ಮ ಕುಟುಂಬವನ್ನು ಒಂದು ಆನಂದಭರಿತ, ಚೈತನ್ಯದಾಯಕ ಒಯೇಸಿಸ್‌ನಂತೆ ಮಾಡುವುದರಲ್ಲಿ ನೀವು ಸಫಲರಾಗಸಾಧ್ಯವಿದೆ. ಆದರೆ ಇದು ಕುಟುಂಬ ವೃತ್ತದಲ್ಲಿರುವ ಪ್ರತಿಯೊಬ್ಬರಿಂದ ಯಾವುದೋ ಒಂದು ಕಾರ್ಯವನ್ನು ಅಗತ್ಯಪಡಿಸುತ್ತದೆ. ಕೆಲವು ಸಲಹೆಗಳು ಈ ಕೆಳಗಿನಂತಿವೆ.
ಪಾರಾಗಿ ಉಳಿಯಲು ನಿಮ್ಮ ಕುಟುಂಬಕ್ಕೆ ಸಹಾಯ ಮಾಡುವುದು
ಒಂದ ಕುಟುಂಬವು ಐಕ್ಯವಾಗಿ ಉಳಿಯಸಾಧ್ಯವಿರುವ ಅತ್ಯುತ್ತಮ ವಿಧಗಳಲ್ಲಿ ಒಂದು, ಒಟ್ಟಿಗೆ ಸಮಯವನ್ನು ಕಳೆಯುವುದೇ ಆಗಿದೆ. ಎಲ್ಲ ಸದಸ್ಯರು ತಮ್ಮ ಬಿಡುವಿನ ಸಮಯವನ್ನು ಕುಟುಂಬದೊಂದಿಗೆ ಹಂಚಿಕೊಳ್ಳಬೇಕು. ಅದು ತ್ಯಾಗಗಳನ್ನು ಅರ್ಥೈಸಬಹುದು. ಉದಾಹರಣೆಗಾಗಿ, ಹದಿಪ್ರಾಯದವರಾದ ನೀವು, ಯಾವುದಾದರೊಂದು ಅಚ್ಚುಮೆಚ್ಚಿನ ಟಿವಿ ಕಾರ್ಯಕ್ರಮವನ್ನು, ಕ್ರೀಡೆಯನ್ನು, ಅಥವಾ ಸ್ನೇಹಿತರೊಂದಿಗಿನ ತಿರುಗಾಟವನ್ನು ತ್ಯಾಗಮಾಡಬೇಕಾಗಬಹುದು. ಸಾಮಾನ್ಯವಾಗಿ ಕುಟುಂಬ ಪೋಷಣೆಗಾಗಿ ದುಡಿಯುವವರಲ್ಲಿ ಪ್ರಮುಖರಾದ ತಂದೆಗಳೇ, ನಿಮ್ಮ ಬಿಡುವಿನ ಸಮಯವನ್ನು ಒಂದು ಹವ್ಯಾಸಕ್ಕಾಗಿ ಅಥವಾ ಇನ್ನಿತರ ವೈಯಕ್ತಿಕ ಅಭಿರುಚಿಗಳಿಗಾಗಿ ಮಾತ್ರವೇ ಉಪಯೋಗಿಸಬೇಡಿರಿ. ಚಟುವಟಿಕೆಗಳನ್ನು—ಬಹುಶಃ ವಾರಾಂತ್ಯಗಳನ್ನು ಅಥವಾ ರಜೆಗಳನ್ನು ಒಟ್ಟಿಗೆ ಹೇಗೆ ಕಳೆಯುವುದೆಂಬುದನ್ನು—ಕುಟುಂಬದೊಂದಿಗೆ ಯೋಜಿಸಿರಿ. ನಿಶ್ಚಯವಾಗಿಯೂ, ಪ್ರತಿಯೊಬ್ಬರೂ ಮುನ್ನೋಡಬಹುದಾದ ಹಾಗೂ ಆನಂದಿಸಬಹುದಾದ ಏನನ್ನಾದರೂ ಯೋಜಿಸಿರಿ.
ಯಾವುದು ಗುಣಮಟ್ಟದ ಸಮಯವೆಂದು ಕರೆಯಲ್ಪಡುತ್ತದೋ—ಅಂದರೆ, ಮಕ್ಕಳೊಂದಿಗೆ ನಿಯತಕಾಲಿಕವಾಗಿ ಅರ್ಧ ತಾಸು ಅಥವಾ ಒಂದು ತಾಸನ್ನು ಕಳೆಯುವುದು—ಅದಕ್ಕಿಂತಲೂ ಹೆಚ್ಚಿನದ್ದರ ಆವಶ್ಯಕತೆ ಮಕ್ಕಳಿಗಿದೆ. ಅವರಿಗೆ ಅಧಿಕ ಪ್ರಮಾಣದ ಸಮಯದ ಅಗತ್ಯವಿದೆ. ಸ್ವೀಡನ್‌ನ ದಿನಪತ್ರಿಕೆಯೊಂದರಲ್ಲಿ ಒಬ್ಬ ಅಂಕಣಕಾರನು ಬರೆಯುವುದು: “ಒಬ್ಬ ವರದಿಗಾರನೋಪಾದಿ ನಾನು ಕಳೆದ 15 ವರ್ಷಗಳ ಸಮಯದಲ್ಲಿ, ನಾನು ಅನೇಕ ಬಾಲ ಅಪರಾಧಿಗಳನ್ನು ನೋಡಿದ್ದೇನೆ . . . ಒಂದು ಸಾಮಾನ್ಯ ಅಂಶವೇನೆಂದರೆ, ಆ ಅಪರಾಧಿಗಳು ತಮ್ಮ ಹೆತ್ತವರೊಂದಿಗೆ ಬಹಳಷ್ಟು ಸಮಯವನ್ನಲ್ಲ, ಬದಲಾಗಿ ಪರಿಮಿತ ಸಮಯವನ್ನು ಕಳೆದಿದ್ದರೆಂದು ತೋರಿಬರುತ್ತದೆ: ‘ನನ್ನ ಹೆತ್ತವರಿಗೆ ಸಮಯವಿರಲಿಲ್ಲ.’ ‘ಅವರು ಎಂದೂ ಕಿವಿಗೊಡಲಿಲ್ಲ.’ ‘ನನ್ನ ತಂದೆ ಯಾವಾಗಲೂ ಪ್ರಯಾಣಿಸುತ್ತಾ ಇದ್ದರು.’ . . . ಒಬ್ಬ ಹೆತ್ತವರೋಪಾದಿ, ನೀವು ನಿಮ್ಮ ಮಗುವಿಗೆ ಎಷ್ಟು ಸಮಯವನ್ನು ಕೊಡುವಿರೆಂಬುದನ್ನು ನೀವೇ ಆರಿಸಿಕೊಳ್ಳಸಾಧ್ಯವಿದೆ. 15 ವರ್ಷಗಳ ಬಳಿಕ, 15 ವರ್ಷ ಪ್ರಾಯದ ಒಬ್ಬ ನಿರ್ದಯಿಯಿಂದ ನಿಮ್ಮ ಆಯ್ಕೆಗೆ ಬೆಲೆಕಟ್ಟಲ್ಪಡುತ್ತದೆ.”
ಹಣದ ಕುರಿತಾದ ಸೂಕ್ತ ನೋಟ
ಎಲ್ಲ ಸದಸ್ಯರು ಹಣದ ಕುರಿತು ಸೂಕ್ತವಾದ ನೋಟವನ್ನು ಸಹ ಬೆಳೆಸಿಕೊಳ್ಳಬೇಕು. ಕುಟುಂಬದ ಸಾಮಾನ್ಯ ವೆಚ್ಚಗಳನ್ನು ಭರ್ತಿಮಾಡಲಿಕ್ಕಾಗಿ, ತಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಹಂಚಿಕೊಳ್ಳಲು ಅವರು ಸಿದ್ಧರಾಗಿರಬೇಕು. ಜೀವನೋಪಾಯವನ್ನು ಒದಗಿಸಲಿಕ್ಕಾಗಿ ಅನೇಕ ಸ್ತ್ರೀಯರು ಒಂದು ಉದ್ಯೋಗವನ್ನು ದೊರಕಿಸಿಕೊಳ್ಳಬೇಕಾಗಿದೆ, ಆದರೆ ನೀವು ಎದುರಿಸಬಹುದಾದ ಅಪಾಯಗಳು ಹಾಗೂ ಶೋಧನೆಗಳ ವಿಷಯದಲ್ಲಿ ಪತ್ನಿಯರಾದ ನೀವು ಅರಿವುಳ್ಳವರಾಗಿರಬೇಕು. ಈ ಲೋಕವು ನಿಮಗೆ, ನಿಮ್ಮನ್ನು “ಸಂತೃಪ್ತಿಪಡಿಸಿ”ಕೊಳ್ಳುವಂತೆ ಮತ್ತು “ನೀವು ಮಾಡಲು ಬಯಸುವುದನ್ನು ಮಾಡುವಂತೆ” ಪ್ರಚೋದಿಸುತ್ತದೆ. ಇದು ನಿಮ್ಮನ್ನು ಸ್ವತಂತ್ರರೂ ಒಬ್ಬ ತಾಯಿಯೋಪಾದಿ ಹಾಗೂ ಗ್ರಹಿಣಿಯೋಪಾದಿ ನಿಮ್ಮ ದೇವದತ್ತ ಪಾತ್ರದಿಂದ ಅಸಂತೃಪ್ತರೂ ಆಗುವಂತೆ ಮಾಡಬಹುದು.—ತೀತ 2:4, 5.
ತಾಯಂದಿರಾದ ನೀವು ಮನೆಯಲ್ಲಿದ್ದು, ನಿಮ್ಮ ಮಕ್ಕಳಿಗೆ ಒಬ್ಬ ಮಾರ್ಗದರ್ಶಿಯೂ ಮಿತ್ರಳೂ ಆಗಿರಸಾಧ್ಯವಿದ್ದಲ್ಲಿ, ಸುಖದುಃಖದಲ್ಲಿ ನಿಮ್ಮ ಕುಟುಂಬವನ್ನು ಒಟ್ಟಾಗಿರಿಸುವಂತಹ ಬಲವಾದ ಬಂಧಗಳನ್ನು ನಿರ್ಮಿಸುವುದರಲ್ಲಿ ಅದು ನಿಶ್ಚಯವಾಗಿಯೂ ಸಹಾಯ ಮಾಡುವುದು. ಮನೆಯೊಂದನ್ನು ಸಂತೋಷಕರವೂ, ಸುಭದ್ರವೂ, ಕಾರ್ಯತತ್ಪರವೂ ಆದದ್ದಾಗಿ ಮಾಡುವುದರಲ್ಲಿ ಒಬ್ಬ ಸ್ತ್ರೀಯು ಅತ್ಯಧಿಕವಾಗಿ ನೆರವನ್ನೀಯಬಲ್ಲಳು. “ಒಂದು ಶಿಬಿರವನ್ನು ಕಟ್ಟಲು ಸುಮಾರು ನೂರು ಪುರುಷರು ಬೇಕಾಗುತ್ತಾರೆ, ಆದರೆ ಒಬ್ಬ ಸ್ತ್ರೀಯು ಒಂದು ಮನೆಯನ್ನು ನಿರ್ಮಿಸಬಲ್ಲಳು” ಎಂದು, 19ನೆಯ ಶತಮಾನದ ರಾಜಕಾರಣಿಯೊಬ್ಬನು ಹೇಳಿದನು.
ಕುಟುಂಬದಲ್ಲಿರುವವರೆಲ್ಲರೂ ಕುಟುಂಬದ ಒಟ್ಟು ಆದಾಯದೊಳಗೇ ಜೀವಿಸಲು ಸಹಕರಿಸುವುದಾದರೆ, ಅದು ಕುಟುಂಬವನ್ನು ಅನೇಕ ಸಮಸ್ಯೆಗಳಿಂದ ತಪ್ಪಿಸುವುದು. ದಂಪತಿಗಳು ಜೀವನವನ್ನು ಸರಳವಾಗಿಡಲು ಮತ್ತು ಆತ್ಮಿಕ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಲು ಒಪ್ಪಿಕೊಳ್ಳಬೇಕು. ಕುಟುಂಬದ ಆಯವ್ಯಯಕ್ಕೆ ಹೊರೆಯಾಗಿರುವ ವಸ್ತುಗಳನ್ನು ಒತ್ತಾಯಪೂರ್ವಕವಾಗಿ ಕೇಳದಿರುವ ಮೂಲಕ, ಮಕ್ಕಳು ಸಂತೃಪ್ತರಾಗಿರಲು ಕಲಿಯಬೇಕು. ಕಣ್ಣಿನಾಶೆಯ ವಿಷಯದಲ್ಲಿ ಜಾಗರೂಕರಾಗಿರಿ! ನೀವು ಕೊಂಡುಕೊಳ್ಳಸಾಧ್ಯವಿರದ ವಸ್ತುಗಳನ್ನು ಕೊಂಡುಕೊಳ್ಳಲಿಕ್ಕಾಗಿರುವ ಶೋಧನೆಯು, ಸಾಲದಲ್ಲಿ ಸಿಕ್ಕಿಕೊಳ್ಳುವುದು, ಅನೇಕ ಕುಟುಂಬಗಳನ್ನು ವಿಧ್ವಂಸಕ್ಕೆ ನಡೆಸಿದೆ. ಒಟ್ಟಾಗಿ ಕೈಕೊಂಡ ಯೋಜನೆ—ಚೈತನ್ಯದಾಯಕವಾದ ಒಂದು ಪ್ರಯಾಣ, ಮನೆಗಾಗಿ ಉಪಯುಕ್ತಕರವಾದ ಹಾಗೂ ಆನಂದಕರವಾದ ಯಾವುದೋ ಒಂದು ಸಾಧನ, ಅಥವಾ ಕ್ರೈಸ್ತ ಸಭೆಯನ್ನು ಬೆಂಬಲಿಸಲಿಕ್ಕಾಗಿ ನೀಡುವ ಕಾಣಿಕೆ—ಗಾಗಿ ಎಲ್ಲರೂ ತಮ್ಮ ಹಣಸಹಾಯವನ್ನು ಮಾಡುವುದಾದರೆ, ಅದು ಕುಟುಂಬದ ಐಕ್ಯಭಾವಕ್ಕೆ ಒಳ್ಳೆಯದಾಗಿರಬಹುದು.
ಒಂದು ಸಂತೋಷಕರವಾದ ಕುಟುಂಬ ಮನೋಭಾವಕ್ಕೆ “ನೆರವು” ನೀಡಲಿಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ಹಂಚಿಕೊಳ್ಳಸಾಧ್ಯವಿರುವ ಸಹಾಯದ ಇನ್ನೊಂದು ರೂಪವು, ಶುಚಿಮಾಡುವ ಹಾಗೂ ದುರಸ್ತಿಯ ಕೆಲಸದಲ್ಲಿ ಪಾಲ್ಗೊಳ್ಳುವುದು, ಮನೆ, ತೋಟ, ಕಾರು, ಇನ್ನು ಮುಂತಾದವುಗಳನ್ನು ನೋಡಿಕೊಳ್ಳುವುದೇ ಆಗಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ, ಎಳೆಯರಿಗೆ ಕೂಡ, ಒಂದಿಷ್ಟು ಕೆಲಸವನ್ನು ನೇಮಿಸಸಾಧ್ಯವಿದೆ. ಮಕ್ಕಳೇ ನಿಮ್ಮ ಸಮಯವನ್ನು ಹಾಳುಮಾಡದಿರಲು ಪ್ರಯತ್ನಿಸಿ. ಅದಕ್ಕೆ ಬದಲಾಗಿ, ಸಹಾಯ ಮಾಡುವ ಹಾಗೂ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಿರಿ; ಇದು ಕುಟುಂಬ ಐಕ್ಯವನ್ನು ಕಟ್ಟುವಂತಹ ಒಂದು ನೈಜವಾದ ಗೆಳೆತನ ಹಾಗೂ ಸಹಭಾವದಲ್ಲಿ ಫಲಿಸುವುದು.
ಬೈಬಲ್ ಶಿಕ್ಷಣದ ಮೌಲ್ಯ
ಒಂದು ಐಕ್ಯ ಕ್ರೈಸ್ತ ಕುಟುಂಬದಲ್ಲಿ, ಕ್ರಮವಾದ ಬೈಬಲ್ ಅಧ್ಯಯನದ ಪ್ರಾಮುಖ್ಯವು ಸಹ ಒತ್ತಿಹೇಳಲ್ಪಡುತ್ತದೆ. ಬೈಬಲ್ ವಚನಗಳ ದೈನಂದಿನ ಚರ್ಚೆ ಹಾಗೂ ಪವಿತ್ರ ಶಾಸ್ತ್ರಗಳ ಸಾಪ್ತಾಹಿಕ ಅಭ್ಯಾಸವು, ಒಂದು ಐಕ್ಯ ಕುಟುಂಬಕ್ಕೆ ಆಧಾರವನ್ನು ಒದಗಿಸುತ್ತದೆ. ಕುಟುಂಬದಲ್ಲಿರುವ ಎಲ್ಲರ ಹೃದಯಗಳನ್ನು ಪ್ರಭಾವಿಸುವಂತಹ ರೀತಿಯಲ್ಲಿ, ಮೂಲಭೂತ ಬೈಬಲ್ ಸತ್ಯತೆಗಳು ಹಾಗೂ ಮೂಲತತ್ವಗಳನ್ನು ಒಟ್ಟಾಗಿ ಚರ್ಚಿಸಬೇಕು.
ಅಂತಹ ಕುಟುಂಬ ಸಮಯಾವಧಿಗಳು ಶೈಕ್ಷಣಿಕವಾದವುಗಳಾಗಿರಬೇಕು, ಆದರೆ ಅದೇ ಸಮಯದಲ್ಲಿ ಅವು ಆನಂದದಾಯಕವೂ ಉತ್ತೇಜನದಾಯಕವೂ ಆಗಿರಬೇಕು. ಸ್ವೀಡನ್‌ನ ಉತ್ತರ ಭಾಗದಲ್ಲಿದ್ದ ಕುಟುಂಬವೊಂದು, ವಾರದಲ್ಲಿ ಏಳುತ್ತಿದ್ದ ಪ್ರಶ್ನೆಗಳನ್ನು ಮಕ್ಕಳು ಬರೆದಿಡುವಂತೆ ಕೇಳಿಕೊಂಡಿತು. ತದನಂತರ ವಾರದ ಬೈಬಲ್ ಅಭ್ಯಾಸದಲ್ಲಿ ಆ ಪ್ರಶ್ನೆಗಳು ಚರ್ಚಿಸಲ್ಪಟ್ಟವು. ಅನೇಕವೇಳೆ ಆ ಪ್ರಶ್ನೆಗಳು ಬಹಳ ಅಗಾಧವಾದವುಗಳೂ ಆಲೋಚನಾಪ್ರೇರಕವಾದವುಗಳೂ ಆಗಿರುತ್ತಿದ್ದವು. ಮತ್ತು ಅವು ಮಕ್ಕಳ ಆಲೋಚನಾ ಸಾಮರ್ಥ್ಯಗಳು ಹಾಗೂ ಬೈಬಲ್ ಬೋಧನೆಗಳ ಕಡೆಗಿನ ಗಣ್ಯತೆಯ ಪ್ರತಿಫಲನವಾಗಿ ರುಜುವಾದವು. ಕೆಲವು ಪ್ರಶ್ನೆಗಳು ಹೀಗಿದ್ದವು: “ಯೆಹೋವನು ಪ್ರತಿಯೊಂದನ್ನೂ ಎಲ್ಲ ಸಮಯದಲ್ಲಿ ಬೆಳೆಯುವಂತೆ ಮಾಡುತ್ತಾನೋ ಅಥವಾ ಆತನು ಕೇವಲ ಒಂದೇ ಒಂದು ಸಾರಿ ಹಾಗೆ ಮಾಡಿದನೋ?” “ದೇವರು ಮನುಷ್ಯನಾಗಿಲ್ಲದಿರುವುದರಿಂದ, ದೇವರು ಮನುಷ್ಯನನ್ನು ‘ತನ್ನ ಹೋಲಿಕೆಯ ಮೇರೆಗೆ’ ಸೃಷ್ಟಿಸಿದನೆಂದು ಬೈಬಲು ಏಕೆ ಹೇಳುತ್ತದೆ?” “ಆದಾಮಹವ್ವರು ಬರಿಗಾಲಿನಲ್ಲಿದ್ದುದರಿಂದ, ಮತ್ತು ಯಾವುದೇ ಬಟ್ಟೆಯನ್ನು ಧರಿಸಿರಲಿಲ್ಲವಾದುದರಿಂದ, ಪ್ರಮೋದವನದಲ್ಲಿದ್ದಾಗ ಚಳಿಗಾಲದಲ್ಲಿ ಅವರು ಚಳಿಯಿಂದ ಹಿಮಗಟ್ಟಿಹೋಗಲಿಲ್ಲವೊ?” “ರಾತ್ರಿಯಲ್ಲಿ ಕತ್ತಲೆಯಿರಬೇಕಾಗಿರುವಾಗ, ನಮಗೆ ಚಂದ್ರನ ಆವಶ್ಯಕತೆ ಏಕೆ ಇದೆ?” ಈ ಮಕ್ಕಳು ಈಗ ದೊಡ್ಡವರಾಗಿದ್ದಾರೆ ಮತ್ತು ಪೂರ್ಣ ಸಮಯದ ಶುಶ್ರೂಷಕರಾಗಿ ದೇವರ ಸೇವೆಸಲ್ಲಿಸುತ್ತಿದ್ದಾರೆ.
ಕುಟುಂಬದ ಸಮಸ್ಯೆಗಳನ್ನು ನಿರ್ವಹಿಸುವಾಗ, ಹೆತ್ತವರಾದ ನೀವು ಸಕಾರಾತ್ಮವುಳ್ಳವರೂ ಹಸನ್ಮುಖರೂ ಆಗಿರಲು ಶ್ರಮಿಸುವುದು ಒಳ್ಳೇದಾಗಿರುವುದು. ಪರಿಗಣನೆಯನ್ನು ತೋರಿಸುವವರೂ ಮಣಿಯುವವರೂ ಆಗಿರಿ, ಆದರೆ ಪ್ರಮುಖವಾದ ಮೂಲತತ್ವಗಳನ್ನು ಪಾಲಿಸುವ ವಿಷಯದಲ್ಲಿ ದೃಢರಾಗಿರಿ. ದೇವರಿಗಾಗಿ ಮತ್ತು ಆತನ ನೀತಿಯ ಮೂಲತತ್ವಗಳಿಗಾಗಿರುವ ಪ್ರೀತಿಯು ಯಾವಾಗಲೂ ನಿಮ್ಮ ನಿರ್ಣಯಗಳ ಮೇಲ್ವಿಚಾರಣೆಮಾಡುತ್ತದೆ ಎಂಬುದನ್ನು ಮಕ್ಕಳು ನೋಡಲಿ. ಶಾಲೆಯ ವಾತಾವರಣವು ಅನೇಕವೇಳೆ ತುಂಬ ಒತ್ತಡಭರಿತವೂ ಖಿನ್ನತೆಯನ್ನುಂಟುಮಾಡುವಂತಹದ್ದೂ ಆಗಿರುತ್ತದೆ, ಮತ್ತು ಅಂತಹ ಪ್ರಭಾವವನ್ನು ಸಮತೂಕವಾಗಿರಿಸಲಿಕ್ಕಾಗಿ ಮಕ್ಕಳಿಗೆ ಮನೆಯಲ್ಲಿ ಅತ್ಯಧಿಕ ಪ್ರೋತ್ಸಾಹವನ್ನು ನೀಡುವ ಅಗತ್ಯವಿದೆ.
ಹೆತ್ತವರೇ, ನೀವು ಪರಿಪೂರ್ಣರೋ ಎಂಬಂತೆ ತೋರಿಸಿಕೊಳ್ಳಬೇಡಿರಿ. ತಪ್ಪುಗಳನ್ನು ಒಪ್ಪಿಕೊಳ್ಳಿರಿ ಮತ್ತು ಅಗತ್ಯವಿರುವಾಗ ನಿಮ್ಮ ಮಕ್ಕಳ ಬಳಿ ಕ್ಷಮೆಯಾಚಿಸಿರಿ. ಯುವ ಜನರೇ, ಅಮ್ಮ ಹಾಗೂ ಅಪ್ಪನವರು ಒಂದು ತಪ್ಪನ್ನು ಒಪ್ಪಿಕೊಳ್ಳುವಾಗ, ಅವರಿಗಾಗಿ ಇನ್ನೂ ಹೆಚ್ಚಿನ ಪ್ರೀತಿಯನ್ನು ಬೆಳೆಸಿಕೊಳ್ಳಿರಿ.—ಪ್ರಸಂಗಿ 7:16.
ಹೌದು, ಒಂದು ಐಕ್ಯ ಕುಟುಂಬವು ಶಾಂತಿ, ಸುಭದ್ರತೆ, ಹಾಗೂ ಸಂತೋಷದ ಮನೆಯನ್ನು ಒದಗಿಸುತ್ತದೆ. ಗೋಥ್ ಎಂಬ ಜರ್ಮನ್ ಕವಿಯು ಒಮ್ಮೆ ಹೇಳಿದ್ದು: “ರಾಜನಾಗಲಿ ರೈತನಾಗಲಿ, ಮನೆಯಲ್ಲಿ ತನ್ನ ಸಂತೋಷವನ್ನು ಕಂಡುಕೊಳ್ಳುವವನೇ ಅತಿ ಸಂತೋಷಭರಿತ ವ್ಯಕ್ತಿಯಾಗಿದ್ದಾನೆ.” ಗಣ್ಯತಾಭಾವವುಳ್ಳ ಹೆತ್ತವರು ಹಾಗೂ ಮಕ್ಕಳಿಗೆ, ಮನೆಯೇ ಅತ್ಯುತ್ತಮವಾದ ಸ್ಥಳವಾಗಿರಬೇಕು.
ಇಂದು ನಾವು ಜೀವಿಸುತ್ತಿರುವ ಲೋಕದ ಒತ್ತಡಗಳಿಂದ ನಮ್ಮ ಕುಟುಂಬವು ಬಹಳ ಗಂಭೀರವಾಗಿ ಅಪಾಯಕ್ಕೊಳಗಾಗಿದೆ ಎಂಬುದು ನಿಜ. ಆದರೆ ಕುಟುಂಬವು ದೇವರಿಂದ ಬಂದಿರುವುದರಿಂದ, ಅದು ಪಾರಾಗಿ ಉಳಿಯುವುದು. ಸಂತೋಷಕರ ಕುಟುಂಬ ಜೀವಿತಕ್ಕಾಗಿರುವ ದೇವರ ನೀತಿಯ ಮಾರ್ಗದರ್ಶನೆಗಳನ್ನು ಅನುಸರಿಸುವುದಾದರೆ, ನಿಮ್ಮ ಕುಟುಂಬವು ಮತ್ತು ನೀವು ಕೂಡ ಪಾರಾಗಿ ಉಳಿಯುವಿರಿ.
[ಪಾದಟಿಪ್ಪಣಿ]
a ಈ ವಿಷಯದ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಕುಟುಂಬ ಸಂತೋಷದ ರಹಸ್ಯ ಎಂಬ 192 ಪುಟದ ಪುಸ್ತಕವನ್ನು ನೋಡಿರಿ.