ಕುಟುಂಬ—ತುರ್ತು ಪರಿಸ್ಥಿತಿಯಲ್ಲಿದೆ!
“ಅಂದಿನಿಂದ ಅವರು ಸುಖವಾಗಿ ಜೀವಿಸಿದರು.” ಆ ದಂತಕಥೆಯ ಸಮಾಪ್ತಿಯು, ಇಂದಿನ ದಿವಸಗಳಲ್ಲಿ ತೀರ ಕಡಿಮೆ ವಿವಾಹಗಳಿಗೆ ಅನ್ವಯವಾಗುತ್ತದೆ. ‘ತಾವು ಬದುಕಿರುವಷ್ಟು ಸಮಯದ ವರೆಗೆ, ಕಷ್ಟದಲ್ಲೂ ಸುಖದಲ್ಲೂ’ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವ ಮದುವೆಯ ವಾಗ್ದಾನವು, ಅನೇಕವೇಳೆ ಬರಿಯ ಉತ್ಪ್ರೇಕ್ಷೆಯಾಗಿರುತ್ತದೆ. ಸಂತೋಷಕರವಾದ ಒಂದು ಕುಟುಂಬವಿರುವುದರ ಸಾಧ್ಯತೆಯು, ನಷ್ಟಕರ ಸಾಹಸಕ್ಕೆ ಕೈಹಾಕುವಂತೆ ತೋರಿಬರುತ್ತದೆ.
ಅಧಿಕಾಂಶ ಪಾಶ್ಚಿಮಾತ್ಯ ಔದ್ಯೋಗೀಕೃತ ದೇಶಗಳಲ್ಲಿ, 1960 ಮತ್ತು 1990ರ ನಡುವೆ, ವಿವಾಹವಿಚ್ಛೇದ ಪ್ರಮಾಣಗಳು ಇಮ್ಮಡಿಗಿಂತಲೂ ಹೆಚ್ಚಾದವು. ಕೆಲವು ದೇಶಗಳಲ್ಲಿ ಅವು ನಾಲ್ಕರಷ್ಟು ಹೆಚ್ಚಿದವು. ಉದಾಹರಣೆಗಾಗಿ, ಸ್ವೀಡನ್ನಲ್ಲಿ ಪ್ರತಿ ವರ್ಷ ಸುಮಾರು 35,000 ವಿವಾಹಗಳು ಔಪಚಾರಿಕವಾಗಿ ನಿಶ್ಚಯಿಸಲ್ಪಡುತ್ತವೆ, ಮತ್ತು ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ವಿವಾಹಗಳು ಒಡೆದು ಕೊನೆಗೊಳ್ಳುತ್ತವೆ—ಇವುಗಳಲ್ಲಿ 45,000ಕ್ಕಿಂತಲೂ ಹೆಚ್ಚು ಮಕ್ಕಳು ಒಳಗೂಡಿರುತ್ತಾರೆ. ವಿವಾಹವಿಲ್ಲದೆ ಗಂಡಹೆಂಡತಿಯರಂತೆ ಜೀವಿಸುತ್ತಿರುವ ಜೋಡಿಗಳು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಂಗಡವಾಗುತ್ತಿವೆ. ಇದು ಇನ್ನೂ ಹತ್ತಾರು ಸಾವಿರ ಮಕ್ಕಳನ್ನು ಬಾಧಿಸುತ್ತಿದೆ. ತದ್ರೀತಿಯ ಒಂದು ಪ್ರವೃತ್ತಿಯು ಲೋಕವ್ಯಾಪಕವಾಗಿರುವ ದೇಶಗಳಲ್ಲೆಲ್ಲ ಕಂಡುಬರುತ್ತಿದೆ. ಇದನ್ನು 5ನೆಯ ಪುಟದಲ್ಲಿರುವ ರೇಖಾಚೌಕದಲ್ಲಿ ನೋಡಸಾಧ್ಯವಿದೆ.
ಒಡೆದ ಕುಟುಂಬಗಳು ಮತ್ತು ವಿವಾಹಗಳ ಕೊನೆಗೊಳ್ಳುವಿಕೆಯು ಇತಿಹಾಸದಲ್ಲಿ ಹೊಸದೇನೂ ಅಲ್ಲವೆಂಬುದು ನಿಜ. ಸಾ.ಶ.ಪೂ. 18ನೆಯ ಶತಮಾನದ ಹಮ್ಮುರಾಬಿ ನಿಬಂಧನೆಯು, ಬ್ಯಾಬಿಲೋನಿಯದಲ್ಲಿ ವಿವಾಹವಿಚ್ಛೇದವನ್ನು ಅನುಮತಿಸಿದ ನಿಯಮಗಳನ್ನು ಒಳಗೊಂಡಿತು. ಸಾ.ಶ.ಪೂ. 16ನೆಯ ಶತಮಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮೋಶೆಯ ಧರ್ಮಶಾಸ್ತ್ರವು ಸಹ, ಇಸ್ರಾಯೇಲ್ನಲ್ಲಿ ವಿವಾಹವಿಚ್ಛೇದವನ್ನು ಅನುಮತಿಸಿತು. (ಧರ್ಮೋಪದೇಶಕಾಂಡ 24:1) ಆದರೂ, ಈ 20ನೆಯ ಶತಮಾನದಲ್ಲಿ ಕುಟುಂಬ ಬಂಧಗಳು ದುರ್ಬಲಗೊಂಡಿರುವಷ್ಟು ಹೆಚ್ಚು ಅವು ಹಿಂದೆಂದೂ ದುರ್ಬಲಗೊಂಡಿರಲಿಲ್ಲ. ಒಂದು ದಶಕಕ್ಕಿಂತಲೂ ಹೆಚ್ಚು ಸಮಯದ ಹಿಂದೆ, ವಾರ್ತಾಪತ್ರಿಕೆಯ ಅಂಕಣಕಾರನೊಬ್ಬನು ಬರೆದುದು: “ಇಂದಿನಿಂದ ಐವತ್ತು ವರ್ಷಗಳಲ್ಲಿ, ಸಾಂಪ್ರದಾಯಿಕ ಅರ್ಥದಲ್ಲಿ ಕುಟುಂಬಗಳು ಇಲ್ಲದೇ ಹೋಗಬಹುದು. ಅವು ವಿಭಿನ್ನ ರೀತಿಯ ಗುಂಪುಗಳಿಂದ ಸ್ಥಾನಾಂತರಿಸಲ್ಪಟ್ಟಿರಬಹುದು.” ಮತ್ತು ಅಂದಿನಿಂದ ಈ ಸಮಯದ ವರೆಗಿನ ಪ್ರವೃತ್ತಿಯು ಅವನ ಕಲ್ಪನೆಯನ್ನು ದೃಢಪಡಿಸುವಂತೆ ತೋರುತ್ತದೆ. ಕುಟುಂಬದ ಏರ್ಪಾಡು ಎಷ್ಟು ತೀವ್ರವಾಗಿ ಕ್ಷಯಿಸಿಹೋಗಿದೆಯೆಂದರೆ, “ಅದು ಪಾರಾಗಿ ಉಳಿಯುವುದೊ?” ಎಂಬ ಪ್ರಶ್ನೆಯು ಹೆಚ್ಚೆಚ್ಚು ಸುಸಂಬದ್ಧವಾಗುತ್ತಿದೆ.
ಬಹಳಷ್ಟು ದಂಪತಿಗಳಿಗೆ, ಪರಸ್ಪರ ಅಂಟಿಕೊಂಡಿದ್ದು, ಒಂದು ಐಕ್ಯ ಕುಟುಂಬವನ್ನು ಕಾಪಾಡಿಕೊಳ್ಳುವುದು ಏಕೆ ಇಷ್ಟೊಂದು ಕಷ್ಟಕರವಾಗಿದೆ? ಒಂದು ದೀರ್ಘ ಜೀವಿತಾವಧಿಯಲ್ಲಿ ಒಬ್ಬರಿಗೊಬ್ಬರು ಅಂಟಿಕೊಂಡಿದ್ದು, ತಮ್ಮ ಬೆಳ್ಳಿ ಹಾಗೂ ಸುವರ್ಣ ವಿವಾಹ ವಾರ್ಷಿಕೋತ್ಸವಗಳನ್ನು ಸಂತೋಷಕರವಾಗಿ ಆಚರಿಸುತ್ತಿರುವವರ ರಹಸ್ಯವೇನಾಗಿದೆ? ಸಂಭವನೀಯವಾಗಿ, ಅಸೆರ್ಬೈಜಾನನ ಹಿಂದಣ ಸೋವಿಯಟ್ ರಿಪಬ್ಲಿಕ್ನಲ್ಲಿ, ಒಬ್ಬ ಪುರುಷನು ಮತ್ತು ಅವನ ಹೆಂಡತಿಯು—ಒಬ್ಬರು 126ರ ಪ್ರಾಯದಲ್ಲಿ ಮತ್ತು ಇನ್ನೊಬ್ಬರು 116ರ ಪ್ರಾಯದಲ್ಲಿ—ತಮ್ಮ 100ನೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರೆಂದು 1983ರಲ್ಲಿ ವರದಿಮಾಡಲ್ಪಟ್ಟಿತು.
ಯಾವುದು ಅಪಾಯವಾಗಿದೆ?
ಅನೇಕ ದೇಶಗಳಲ್ಲಿ, ಶಾಸನಬದ್ಧವಾದ ವಿವಾಹವಿಚ್ಛೇದಕ್ಕಾಗಿರುವ ಆಧಾರಗಳಲ್ಲಿ ಕೆಲವು, ವ್ಯಭಿಚಾರ, ಮಾನಸಿಕ ಅಥವಾ ಶಾರೀರಿಕ ಕ್ರೌರ್ಯ, ಪರಿತ್ಯಾಗ, ಮದ್ಯಪಾನ ಚಟ, ನಪುಂಸಕತೆ, ಬುದ್ಧಿಭ್ರಮಣೆ, ದ್ವಿಪತ್ನೀತ್ವ, ಮತ್ತು ಅಮಲೌಷಧ ಚಟಗಳಾಗಿವೆ. ಆದರೂ, ಹೆಚ್ಚು ಸರ್ವಸಾಮಾನ್ಯವಾದ ಕಾರಣವು ಯಾವುದೆಂದರೆ, ವಿಶೇಷವಾಗಿ ಇತ್ತೀಚಿಗಿನ ದಶಕಗಳಲ್ಲಿ, ವಿವಾಹ ಹಾಗೂ ಸಾಂಪ್ರದಾಯಿಕ ಕುಟುಂಬ ಜೀವನದ ಕಡೆಗಿನ ಮೂಲಭೂತ ಮನೋಭಾವವು ಸಂಪೂರ್ಣವಾಗಿ ಬದಲಾಗಿಹೋಗಿರುವುದೇ ಆಗಿದೆ. ಬಹಳ ದೀರ್ಘ ಸಮಯದಿಂದಲೂ ಪವಿತ್ರವಾಗಿ ಪರಿಗಣಿಸಲ್ಪಟ್ಟ ವಿವಾಹ ಏರ್ಪಾಡಿಗಾಗಿರುವ ಗೌರವವು, ಈಗ ಶಿಥಿಲಗೊಂಡಿದೆ. ಸಂಗೀತ, ಚಲನ ಚಿತ್ರಗಳು, ಟಿವಿ ಸೋಪ್ ಆಪೆರಗಳ ಲೋಭಿ ಉತ್ಪಾದಕರು, ಮತ್ತು ಜನಪ್ರಿಯ ಸಾಹಿತ್ಯವು, ಲೈಂಗಿಕ ಸ್ವಾತಂತ್ರ್ಯ, ಅನೈತಿಕತೆ, ಸಡಿಲು ನಡತೆ, ಮತ್ತು ಸ್ವಾರ್ಥಮಗ್ನ ಜೀವನ ಶೈಲಿಯೆಂದು ಕರೆಯಲ್ಪಡುವ ವಿಷಯಗಳನ್ನು ವೈಭವೀಕರಿಸಿದೆ. ಆಬಾಲವೃದ್ಧರ ಹೃದಮನಗಳನ್ನು ಮಲಿನಗೊಳಿಸಿರುವ ಒಂದು ಸಂಸ್ಕೃತಿಯನ್ನು ಅವು ಪ್ರವರ್ಧಿಸಿವೆ.
ವಿವಾಹಬಾಹಿರ ಸಂಬಂಧವು ಕೆಲವೊಮ್ಮೆ ಒಂದು ವಿವಾಹಕ್ಕೆ ಪ್ರಯೋಜನಕರವಾಗಿರಸಾಧ್ಯವಿದೆ ಎಂಬುದಾಗಿ 22 ಪ್ರತಿಶತದಷ್ಟು ಅಮೆರಿಕನರು ಹೇಳಿದರೆಂದು, 1996ರ ಮತಚಲಾವಣೆಯೊಂದು ತೋರಿಸಿತು. ಸ್ವೀಡನ್ನ ಅತಿ ದೊಡ್ಡ ವಾರ್ತಾಪತ್ರಿಕೆಗಳಲ್ಲಿ ಒಂದಾದ ಆಫ್ಟನ್ಬ್ಲಾಡೆಟ್ ವಾರ್ತಾಪತ್ರಿಕೆಯ ವಿಶೇಷ ಸಂಚಿಕೆಯೊಂದು, ವಿವಾಹವಿಚ್ಛೇದವನ್ನು ಪಡೆದುಕೊಳ್ಳುವಂತೆ ಸ್ತ್ರೀಯರನ್ನು ಪ್ರಚೋದಿಸಿತು; “ಅದು ಮಾತ್ರ ನಿಮ್ಮ ಸನ್ನಿವೇಶವನ್ನು ಉತ್ತಮಗೊಳಿಸಸಾಧ್ಯ” ಎಂಬ ಕಾರಣದಿಂದಲೇ. ಕೆಲವು ವರ್ಷಗಳಿಗೊಮ್ಮೆ ವಿವಾಹ ಸಂಗಾತಿಗಳನ್ನು ಬದಲಾಯಿಸಿಕೊಳ್ಳುವಂತೆ ಮನುಷ್ಯನು ವಿಕಾಸದಿಂದಲೇ “ಯೋಜಿಸಲ್ಪಟ್ಟಿ”ದ್ದಾನೆಂದು, ಕೆಲವು ಜನಪ್ರಿಯ ಮನಶ್ಶಾಸ್ತ್ರಜ್ಞರು ಹಾಗೂ ಮನುಷ್ಯಶಾಸ್ತ್ರಜ್ಞರು ಪರ್ಯಾಲೋಚಿಸಿದ್ದಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವಿವಾಹಬಾಹಿರ ಸಂಬಂಧಗಳು ಹಾಗೂ ವಿವಾಹವಿಚ್ಛೇದಗಳು ಸ್ವಾಭಾವಿಕವಾಗಿವೆಯೆಂದು ಅವರು ಸೂಚಿಸುತ್ತಿದ್ದಾರೆ. ಹೆತ್ತವರ ವಿವಾಹವಿಚ್ಛೇದವು, ಯಾವುದಾದರೊಂದು ದಿನ ಮಕ್ಕಳು ತಮ್ಮ ಸ್ವಂತ ವಿವಾಹವಿಚ್ಛೇದದೊಂದಿಗೆ ಹೆಣಗಾಡುವಂತೆ ಅವರನ್ನು ಸಿದ್ಧಪಡಿಸುತ್ತದಾದ್ದರಿಂದ, ವಿವಾಹವಿಚ್ಛೇದವು ಮಕ್ಕಳ ಒಳಿತಿಗಾಗಿರಬಹುದೆಂದು ಸಹ ಕೆಲವರು ವಾಗ್ವಾದಿಸುತ್ತಾರೆ!
ಅನೇಕ ಯುವ ಜನರು ಇನ್ನುಮುಂದೆ, ತಂದೆ, ತಾಯಿ, ಮತ್ತು ಮಕ್ಕಳನ್ನೊಳಗೊಂಡಿರುವ ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ಜೀವಿಸಲು ಬಯಸುವುದಿಲ್ಲ. “ನನ್ನ ಇಡೀ ಜೀವಿತವನ್ನು ಒಂದೇ ಸಂಗಾತಿಯೊಂದಿಗೆ ಜೀವಿಸುವುದನ್ನು ನಾನು ಊಹಿಸಿಕೊಳ್ಳುವುದೂ ಅಸಾಧ್ಯ” ಎಂಬುದು ಒಂದು ಜನಪ್ರಿಯ ನೋಟವಾಗಿದೆ. “ವಿವಾಹವು ಕ್ರಿಸ್ಮಸ್ನಂತೆ ಕೇವಲ ಒಂದು ಕಟ್ಟುಕಥೆಯಾಗಿದೆ. ನಾನು ಅದನ್ನು ನಂಬುವುದೇ ಇಲ್ಲ” ಎಂದು 18 ವರ್ಷ ಪ್ರಾಯದ ಡೇನಿಷ್ ತರುಣನೊಬ್ಬನು ಹೇಳಿದನು. “ಏಕೆ [ಪುರುಷ]ರೊಂದಿಗೆ ಜೀವಿಸಿ, ಅವರ ಕಾಲುಚೀಲಗಳನ್ನು ತೊಳೆಯಲು ಸಂಕಟಪಡಬೇಕು ಎಂಬುದೇ ಒಂದು ಭಾವನೆಯಾಗಿದೆ” ಎಂದು, ಐರ್ಲೆಂಡ್ನಲ್ಲಿನ ರಾಷ್ಟ್ರೀಯ ಮಹಿಳಾ ಮಂಡಲಿಯ ನೊರೀನ್ ಬರ್ನ್ ಹೇಳಿದಳು. “ಪುರುಷರೊಂದಿಗೆ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳದೆ, ಸುಮ್ಮನೆ ಅವರೊಂದಿಗೆ ಮಜಾಮಾಡಿರಿ . . . ಬದುಕಲಿಕ್ಕಾಗಿ ತಮಗೆ ಪುರುಷರ ಅಗತ್ಯವಿಲ್ಲವೆಂದು ಅನೇಕ ಸ್ತ್ರೀಯರು ನಿರ್ಧರಿಸುತ್ತಿದ್ದಾರೆ.”
ಒಂಟಿ ಹೆತ್ತವರ ಮನೆವಾರ್ತೆಗಳು ಅಧಿಕಗೊಳ್ಳುತ್ತಿವೆ
ಯೂರೋಪಿನಾದ್ಯಂತ ಈ ಮನೋಭಾವವು, ಒಂಟಿ ತಾಯ್ತನದಲ್ಲಿ ತೀವ್ರಗತಿಯ ಹೆಚ್ಚಳಕ್ಕೆ ಮುನ್ನಡೆಸಿದೆ. ಈ ಒಂಟಿ ಹೆತ್ತವರಲ್ಲಿ ಕೆಲವರು, ಹದಿಪ್ರಾಯದವರಾಗಿದ್ದು, ಅನಪೇಕ್ಷಿತ ಗರ್ಭಧಾರಣೆಯು ಒಂದು ತಪ್ಪಾಗಿರುವುದಿಲ್ಲವೆಂಬ ಅನಿಸಿಕೆಯುಳ್ಳವರಾಗಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ತಾವೊಬ್ಬರೇ ಬೆಳೆಸುವ ಬಯಕೆಯುಳ್ಳ ಸ್ತ್ರೀಯರಾಗಿದ್ದಾರೆ. ಅಧಿಕಾಂಶ ತಾಯಂದಿರು, ಸ್ವಲ್ಪ ಸಮಯದ ವರೆಗೆ ತಂದೆಯೊಂದಿಗೆ ವಿವಾಹವಿಲ್ಲದೆ—ಅವನನ್ನು ವಿವಾಹವಾಗುವ ಯಾವುದೇ ಯೋಜನೆಗಳಿಲ್ಲದೆ—ಒಟ್ಟಾಗಿ ಜೀವಿಸುವವರಾಗಿದ್ದಾರೆ. ಕಳೆದ ವರ್ಷ ನ್ಯೂಸ್ವೀಕ್ ಪತ್ರಿಕೆಯು, “ವಿವಾಹದ ಅವನತಿಯೊ?” ಎಂಬ ಪ್ರಶ್ನೆಯ ಕುರಿತು ಮುಖಪುಟದ ಕಥೆಯೊಂದನ್ನು ಪ್ರಕಟಿಸಿತ್ತು. ಯೂರೋಪಿನಲ್ಲಿ ವಿವಾಹಬಾಹಿರ ಮಕ್ಕಳ ಜನನದ ಪ್ರತಿಶತವು ತೀವ್ರವಾಗಿ ಹೆಚ್ಚುತ್ತಿದೆ, ಮತ್ತು ಯಾರೊಬ್ಬರೂ ಅದರ ಕುರಿತು ಚಿಂತಿಸುವ ಹಾಗೆ ಕಾಣುತ್ತಿಲ್ಲವೆಂದು ಅದು ತಿಳಿಸಿತು. ಸ್ವೀಡನ್ನಲ್ಲಿ ಜನಿಸುವ ಎಲ್ಲ ಶಿಶುಗಳಲ್ಲಿ ಅರ್ಧದಷ್ಟು ಶಿಶುಗಳು ವಿವಾಹದ ಹೊರಗೆ ಜನಿಸಿದ್ದು, ಅದು ಈ ಪಟ್ಟಿಯಲ್ಲಿ ಅಗ್ರಗಣ್ಯವಾದದ್ದಾಗಿರಬಹುದು. ಡೆನ್ಮಾರ್ಕಿನಲ್ಲಿ ಹಾಗೂ ನಾರ್ವೆಯಲ್ಲಿ ಇದು ಬಹುಮಟ್ಟಿಗೆ ಐವತ್ತು ಪ್ರತಿಶತಕ್ಕೆ ಸಮೀಪಿಸಿದೆ, ಮತ್ತು ಫ್ರಾನ್ಸ್ ಹಾಗೂ ಇಂಗ್ಲೆಂಡ್ನಲ್ಲಿ ಆ ಜನನಗಳು ಸುಮಾರು 3ರಲ್ಲಿ 1ರಷ್ಟಿವೆ.
ಅಮೆರಿಕದಲ್ಲಿ, ಕಳೆದ ಕೆಲವು ದಶಕಗಳಲ್ಲಿ, ಇಬ್ಬರು ಹೆತ್ತವರುಳ್ಳ ಕುಟುಂಬಗಳು ನಾಟಕೀಯವಾಗಿ ಇಳಿಮುಖವಾಗಿವೆ. ಒಂದು ವರದಿಯು ಹೇಳುವುದು: “1960ರಲ್ಲಿ, . . . ಎಲ್ಲ ಮಕ್ಕಳಲ್ಲಿ 9 ಪ್ರತಿಶತ ಮಕ್ಕಳು ಒಂಟಿ ಹೆತ್ತವರ ಮನೆಗಳಲ್ಲಿ ಜೀವಿಸಿದರು. 1990ರಷ್ಟಕ್ಕೆ, ಆ ಸಂಖ್ಯೆಯು 25 ಪ್ರತಿಶತಕ್ಕೇರಿತ್ತು. ಇಂದು, ಅಮೆರಿಕದ ಎಲ್ಲ ಮಕ್ಕಳಲ್ಲಿ 27.1 ಪ್ರತಿಶತ ಮಕ್ಕಳು, ಒಂಟಿ ಹೆತ್ತವರ ಮನೆಗಳಲ್ಲಿ ಜನಿಸಿರುತ್ತಾರೆ—ಈ ಸಂಖ್ಯೆಯು ಏರುತ್ತಾ ಇದೆ. . . . 1970ರಂದಿನಿಂದ, ಒಂಟಿ ಹೆತ್ತವರ ಕುಟುಂಬಗಳ ಸಂಖ್ಯೆಯು ಇಮ್ಮಡಿಗಿಂತಲೂ ಹೆಚ್ಚಾಗಿದೆ. ಇಂದು ಸಾಂಪ್ರದಾಯಿಕ ಕುಟುಂಬವು ಎಷ್ಟು ಅಪಾಯಕ್ಕೊಳಗಾಗಿದೆಯೆಂದರೆ, ಅದು ನಿರ್ಮೂಲನದ ಅಂಚಿನಲ್ಲಿರಸಾಧ್ಯವಿದೆಯೆಂದು ಕೆಲವು ಸಂಶೋಧಕರು ಹೇಳುತ್ತಾರೆ.”
ಎಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚು ತನ್ನ ನೈತಿಕ ಅಧಿಕಾರದಲ್ಲಿ ಹೆಚ್ಚಿನದ್ದನ್ನು ಕಳೆದುಕೊಂಡಿದೆಯೋ ಆ ದೇಶಗಳಲ್ಲಿ, ಒಂಟಿ ಹೆತ್ತವರ ಕುಟುಂಬಗಳು ಅಧಿಕಗೊಳ್ಳುತ್ತಿವೆ. ಇಟಾಲಿಯನ್ ಮನೆವಾರ್ತೆಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಮನೆವಾರ್ತೆಗಳು, ತಾಯಿ, ತಂದೆ, ಮತ್ತು ಮಕ್ಕಳನ್ನು ಒಳಗೊಂಡಿವೆ, ಹಾಗೂ ಸಾಂಪ್ರದಾಯಿಕ ಕುಟುಂಬಗಳು, ಮಕ್ಕಳಿಲ್ಲದ ದಂಪತಿಗಳು ಮತ್ತು ಒಂಟಿ ಹೆತ್ತವರ ಮನೆವಾರ್ತೆಗಳಿಂದ ಸ್ಥಾನಾಂತರಿಸಲ್ಪಡುತ್ತಿವೆ.
ಕೆಲವು ದೇಶಗಳಲ್ಲಿರುವ ಜನಹಿತ ವ್ಯವಸ್ಥೆಯು, ವಾಸ್ತವವಾಗಿ ಜನರಿಗೆ ವಿವಾಹಮಾಡಿಕೊಳ್ಳದಿರುವಂತೆ ಉತ್ತೇಜಿಸುತ್ತದೆ. ಪರಿಹಾರ ಧನವನ್ನು ಪಡೆದುಕೊಳ್ಳುವ ಒಂಟಿ ತಾಯಂದಿರು ವಿವಾಹವಾದಲ್ಲಿ, ಅವರಿಗೆ ಆ ಸಹಾಯವು ದೊರಕದೇ ಹೋಗಸಾಧ್ಯವಿದೆ. ಡೆನ್ಮಾರ್ಕಿನಲ್ಲಿರುವ ಒಂಟಿ ತಾಯಂದಿರು, ಮಗುವಿನ ಆರೈಕೆಗಾಗಿರುವ ಹೆಚ್ಚಿನ ಸಹಾಯದ್ರವ್ಯಗಳನ್ನು ಪಡೆದುಕೊಳ್ಳುತ್ತಾರೆ, ಮತ್ತು ಕೆಲವು ಸಮುದಾಯಗಳಲ್ಲಿ, ಚಿಕ್ಕ ಪ್ರಾಯದ ತಾಯಂದಿರಿಗೆ ಹೆಚ್ಚಿನ ಹಣವು ದೊರಕುತ್ತದಲ್ಲದೆ, ಅವರಿಗೋಸ್ಕರ ಮನೆಬಾಡಿಗೆಯೂ ತೆರಲ್ಪಡುತ್ತದೆ. ಹೀಗೆ, ಇದರಲ್ಲಿ ಹಣವು ಒಳಗೂಡಿದೆ. ಸ್ವೀಡನ್ನಲ್ಲಿ ಒಂದು ವಿವಾಹವಿಚ್ಛೇದವು, ತೆರಿಗೆ ಸಂದಾಯಮಾಡುವವರಿಗೆ, ಸಹಾಯದ್ರವ್ಯಗಳು, ವಸತಿ ಸಂಭಾವನೆಗಳು, ಹಾಗೂ ಸಾರ್ವಜನಿಕ ಸಹಾಯದ ರೂಪದಲ್ಲಿ 250 ಸಾವಿರ ಮತ್ತು 375 ಸಾವಿರ ಡಾಲರ್ಗಳಷ್ಟು ವೆಚ್ಚವನ್ನು ತಂದೊಡ್ಡುತ್ತದೆ ಎಂದು ಆ್ಯಲ್ಫ್ ಬಿ. ಸ್ವೆನ್ಸ್ನ್ ಪ್ರತಿಪಾದಿಸುತ್ತಾರೆ.
ಕ್ರೈಸ್ತಪ್ರಪಂಚದ ಚರ್ಚುಗಳು, ಕುಟುಂಬಗಳ ನಡುವೆಯಿರುವ ಈ ವಿಧ್ವಂಸಕ ಪ್ರವೃತ್ತಿಯನ್ನು ತದ್ವಿರುದ್ಧಗೊಳಿಸಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲವೆಂಬಂತೆ ತೋರುತ್ತದೆ. ಅನೇಕ ಪಾಸ್ಟರ್ಗಳು ಹಾಗೂ ವೈದಿಕರು ತಮ್ಮ ಸ್ವಂತ ಕುಟುಂಬ ಬಿಕ್ಕಟ್ಟುಗಳೊಂದಿಗೆ ಹೋರಾಡುತ್ತಿದ್ದಾರೆ. ಇದರಿಂದಾಗಿ ಇತರರಿಗೆ ಸಹಾಯ ಮಾಡಲು ತಾವು ಅಸಮರ್ಥರೆಂಬ ಅನಿಸಿಕೆಯುಳ್ಳವರಾಗಿದ್ದಾರೆ. ಕೆಲವರು ವಿವಾಹವಿಚ್ಛೇದವನ್ನು ಬಹಿರಂಗವಾಗಿ ಜಾಹೀರುಪಡಿಸುವಂತೆಯೂ ತೋರುತ್ತದೆ. ಏಪ್ರಿಲ್ 15, 1996ರ ಆಫ್ಟನ್ಬ್ಲಾಡೆಟ್ ವಾರ್ತಾಪತ್ರಿಕೆಯು ವರದಿಸಿದ್ದೇನೆಂದರೆ, ಇಂಗ್ಲೆಂಡ್, ಬ್ರಾಡ್ಫೋರ್ಡ್ನ ಪಾಸ್ಟರ್ ಸ್ಟೀವನ್ ಆ್ಯಲನ್ ಅವರು ಒಂದು ವಿಶೇಷ ವಿವಾಹವಿಚ್ಛೇದ ವ್ರತಾಚರಣೆಯನ್ನು ಸ್ಥಾಪಿಸಿದರು. ಎಲ್ಲ ಬ್ರಿಟಿಷ್ ಚರ್ಚುಗಳಲ್ಲಿ ಅದು ಅಧಿಕೃತ ವಿವಾಹವಿಚ್ಛೇದ ನಿಬಂಧನೆಯಾಗಿ ಕಾರ್ಯನಡಿಸಬೇಕೆಂದು ಅವರು ಸೂಚಿಸಿದರು. “ಇದು, ಯಾರಾದರೊಬ್ಬರಿಗೆ ಏನಾದರೂ ಸಂಭವಿಸಿರುವಲ್ಲಿ, ಅದನ್ನು ಅವರು ಅಂಗೀಕರಿಸಿ, ಅದಕ್ಕೆ ಹೊಂದಿಕೊಳ್ಳುವಂತೆ ಸಹಾಯ ಮಾಡುವ ಒಂದು ವಾಸಿಮಾಡುವಿಕೆಯ ಸೇವೆಯಾಗಿದೆ. ದೇವರು ಅವರನ್ನು ಇನ್ನೂ ಪ್ರೀತಿಸುತ್ತಾನೆ ಮತ್ತು ಆ ನೋವಿನಿಂದ ಅವರನ್ನು ವಿಮುಕ್ತಿಗೊಳಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದು ಅವರಿಗೆ ಸಹಾಯ ಮಾಡುತ್ತದೆ.”
ಆದುದರಿಂದ, ಕುಟುಂಬ ಏರ್ಪಾಡು ಎತ್ತ ಸಾಗುತ್ತಿದೆ? ಅದು ಪಾರಾಗಿ ಉಳಿಯುತ್ತದೆಂಬುದಕ್ಕೆ ಏನಾದರೂ ನಿರೀಕ್ಷೆಯಿದೆಯೊ? ಅಂತಹ ಅಧಿಕ ಪ್ರಮಾಣದ ಅಪಾಯದ ಕೆಳಗಿರುವಾಗ, ಒಂದೊಂದು ಕುಟುಂಬಗಳು ತಮ್ಮ ಐಕ್ಯಭಾವವನ್ನು ಕಾಪಾಡಿಕೊಳ್ಳಸಾಧ್ಯವಿದೆಯೊ? ದಯವಿಟ್ಟು ಮುಂದಿನ ಲೇಖನವನ್ನು ಪರಿಗಣಿಸಿರಿ.
[ಪುಟ 5 ರಲ್ಲಿರುವ ಚಿತ್ರ]
ಕೆಲವು ದೇಶಗಳಲ್ಲಿ ವಿವಾಹವಿಚ್ಛೇದಗಳೊಂದಿಗೆ ಹೋಲಿಸಲ್ಪಟ್ಟಿರುವ ವಾರ್ಷಿಕ ವಿವಾಹಗಳು
ದೇಶ ವರ್ಷ ವಿವಾಹಗಳು ವಿವಾಹವಿಚ್ಛೇದಗಳು
ಅಮೆರಿಕ 1993 23,34,000 11,87,000
ಆಸ್ಟ್ರೇಲಿಯ 1993 1,13,255 48,324
ಎಸ್ಟೋನಿಯ 1993 7,745 5,757
ಕ್ಯೂಬ 1992 1,91,837 63,432
ಕೆನಡ 1992 1,64,573 77,031
ಚೆಕ್ ರಿಪಬ್ಲಿಕ್ 1993 66,033 30,227
ಜಪಾನ್ 1993 7,92,658 1,88,297
ಜರ್ಮನಿ 1993 4,42,605 1,56,425
ಡೆನ್ಮಾರ್ಕ್ 1993 31,507 12,991
ನಾರ್ವೆ 1993 19,464 10,943
ಪೋರ್ಟರೀಕೊ 1992 34,222 14,227
ಫ್ರಾನ್ಸ್ 1991 2,80,175 1,08,086
ಮಾಲ್ಡೀವ್ಸ್ 1991 4,065 2,659
ಯುನೈಟೆಡ್ ಕಿಂಗ್ಡಮ್ 1992 3,56,013 1,74,717
ರಷ್ಯನ್ ಫೆಡರೇಷನ್ 1993 11,06,723 6,63,282
ಸ್ವೀಡನ್ 1993 34,005 21,673
(1994 ಡೆಮೊಗ್ರ್ಯಾಫಿಕ್ ಯಿಯರ್ಬುಕ್, ವಿಶ್ವಸಂಸ್ಥೆ, ನ್ಯೂ ಯಾರ್ಕ್ 1996ರ ಮೇಲಾಧಾರಿತ)