ಯೆಹೋವನನ್ನು ಅನುಕರಿಸಿರಿ—ನ್ಯಾಯ ಮತ್ತು ನೀತಿಯನ್ನು ಆಚರಿಸಿರಿ
“ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಕರ್ತ [“ಯೆಹೋವ,” NW]ನಾಗಿರುವೆನು . . . ಪ್ರೀತಿನೀತಿನ್ಯಾಯಗಳೇ ನನಗೆ ಆನಂದ.”—ಯೆರೆಮೀಯ 9:24.
1. ಯೆಹೋವನು ಯಾವ ಅದ್ಭುತಕರವಾದ ಪ್ರತೀಕ್ಷೆಯನ್ನು ನೀಡಿದನು?
ಪ್ರತಿಯೊಬ್ಬರೂ ತನ್ನನ್ನು ತಿಳಿದುಕೊಳ್ಳುವ ದಿನವು ಬರುವುದೆಂದು ಯೆಹೋವನು ವಾಗ್ದಾನಿಸಿದನು. ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಆತನು ತಿಳಿಸಿದ್ದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ಅದು ಎಂತಹ ಒಂದು ಅದ್ಭುತಕರವಾದ ಪ್ರತೀಕ್ಷೆಯಾಗಿದೆ!
2. ಯೆಹೋವನನ್ನು ತಿಳಿದುಕೊಳ್ಳುವುದರಲ್ಲಿ ಏನು ಒಳಗೂಡಿರುತ್ತದೆ? ಏಕೆ?
2 ಆದರೆ ಯೆಹೋವನನ್ನು ತಿಳಿದುಕೊಳ್ಳುವುದರ ಅರ್ಥವೇನು? ಅತಿ ಪ್ರಾಮುಖ್ಯವಾಗಿರುವ ಸಂಗತಿಯನ್ನು ಯೆಹೋವನು ಯೆರೆಮೀಯನಿಗೆ ಪ್ರಕಟಿಸಿದನು: “ನನ್ನನ್ನು ತಿಳಿದು ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಕರ್ತ (“ಯೆಹೋವ,” NW)ನಾಗಿರುವೆನು ಎಂದು ಗ್ರಹಿಸಿಕೊಂಡಿದ್ದೇನೆ . . . ಪ್ರೀತಿನೀತಿನ್ಯಾಯಗಳೇ ನನಗೆ ಆನಂದ.” (ಯೆರೆಮೀಯ 9:24) ಹೀಗೆ, ಯೆಹೋವನನ್ನು ತಿಳಿದುಕೊಳ್ಳುವುದು, ಆತನು ನ್ಯಾಯ ಮತ್ತು ನೀತಿಯನ್ನು ಆಚರಿಸುವ ವಿಧವನ್ನು ತಿಳಿದುಕೊಳ್ಳುವುದನ್ನು ಒಳಗೂಡುತ್ತದೆ. ನಾವು ಆ ಗುಣಗಳನ್ನು ಆಚರಿಸುವಲ್ಲಿ, ಆತನು ನಮ್ಮ ವಿಷಯದಲ್ಲಿ ಸಂತೋಷಪಡುವನು. ನಾವದನ್ನು ಹೇಗೆ ಮಾಡಬಲ್ಲೆವು? ಯೆಹೋವನು, ತನ್ನ ವಾಕ್ಯವಾದ ಬೈಬಲಿನಲ್ಲಿ, ಯುಗಗಳಾದ್ಯಂತ ಅಪರಿಪೂರ್ಣ ಮಾನವರೊಂದಿಗಿನ ಆತನ ವ್ಯವಹಾರಗಳ ಒಂದು ದಾಖಲೆಯನ್ನು ಸಂರಕ್ಷಿಸಿದ್ದಾನೆ. ಅದನ್ನು ಅಭ್ಯಾಸಿಸುವ ಮೂಲಕ, ನಾವು ಯೆಹೋವನ ನ್ಯಾಯ ಮತ್ತು ನೀತಿಯ ಮಾರ್ಗವನ್ನು ತಿಳಿದುಕೊಳ್ಳಬಹುದು ಮತ್ತು ಹೀಗೆ ಆತನನ್ನು ಅನುಕರಿಸಬಲ್ಲೆವು.—ರೋಮಾಪುರ 15:4.
ನ್ಯಾಯವಂತನಾದರೂ ಕನಿಕರವುಳ್ಳವನು
3, 4. ಸೊದೋಮ್ ಗೊಮೋರವನ್ನು ಯೆಹೋವನು ನಾಶಮಾಡಿದ್ದರಲ್ಲಿ ನ್ಯಾಯಸಮ್ಮತನಾಗಿದ್ದನು ಏಕೆ?
3 ಸೊದೋಮ್ ಗೊಮೋರದ ಮೇಲಿನ ದೈವಿಕ ನ್ಯಾಯತೀರ್ಪು, ಯೆಹೋವನ ನ್ಯಾಯದ ಹಲವಾರು ಅಂಶಗಳನ್ನು ದೃಷ್ಟಾಂತಿಸುವ ಒಂದು ಅತ್ಯುತ್ಕೃಷ್ಟ ಉದಾಹರಣೆಯಾಗಿದೆ. ಯೆಹೋವನು ಆವಶ್ಯಕವಾಗಿದ್ದ ಶಿಕ್ಷೆಯನ್ನು ವಿಧಿಸಿದನು ಮಾತ್ರವಲ್ಲ, ಅರ್ಹರಾದ ವ್ಯಕ್ತಿಗಳಿಗೆ ಆತನು ರಕ್ಷಣೆಯನ್ನೂ ಒದಗಿಸಿದನು. ಆ ಪಟ್ಟಣಗಳ ನಾಶನವು ನಿಜವಾಗಿ ನ್ಯಾಯಯುತವಾಗಿತ್ತೊ? ಸೊದೊಮಿನ ದುಷ್ಟತನದ ಮಟ್ಟದ ಕುರಿತಾಗಿ ಸ್ವಲ್ಪವೇ ತಿಳಿದಿದ್ದ ಅಬ್ರಹಾಮನು, ಮೊದಲು ಹಾಗೆ ನೆನಸಲಿಲ್ಲ. ಕೇವಲ ಹತ್ತು ನೀತಿವಂತ ಜನರು ಕಂಡುಕೊಳ್ಳಲ್ಪಡುವಲ್ಲಿ, ತಾನು ಆ ಊರನ್ನು ಉಳಿಸುವೆನೆಂದು ಯೆಹೋವನು ಅಬ್ರಹಾಮನಿಗೆ ಅಶ್ವಾಸನೆಯನ್ನಿತ್ತನು. ಸ್ಪಷ್ಟವಾಗಿ, ಯೆಹೋವನು ನ್ಯಾಯವು ಎಂದೂ ದುಡುಕಿನದ್ದಲ್ಲ ಅಥವಾ ಕರುಣೆಯಿಲ್ಲದ್ದಾಗಿರುವುದಿಲ್ಲ.—ಆದಿಕಾಂಡ 18:20-32.
4 ಎರಡು ದೇವದೂತರಿಂದ ನಡೆಸಲ್ಪಟ್ಟ ತನಿಖೆಯು, ಸೊದೋಮಿನ ನೈತಿಕ ಅವನತಿಯ ಒಂದು ಸವಿವರವಾದ ಸಾಕ್ಷ್ಯವನ್ನು ಒದಗಿಸಿತು. ಇಬ್ಬರು ಪುರುಷರು ಲೋಟನ ಮನೆಯಲ್ಲಿ ತಂಗಲು ಬಂದಿದ್ದಾರೆಂದು ಆ ಊರಿನ ಮನುಷ್ಯರಿಗೆ, “ಹುಡುಗರು ಮುದುಕರು ಸಹಿತವಾಗಿ” ತಿಳಿದುಬಂದಾಗ, ಸಾಮೂಹಿಕ ಸಲಿಂಗಿಕಾಮಿ ಅತ್ಯಾಚಾರವನ್ನು ನಡೆಸುವ ಉದ್ದೇಶದಿಂದ ಅವರು ಲೋಟನ ಮನೆಯನ್ನು ಆಕ್ರಮಿಸಿದರು. ಅವರ ಭ್ರಷ್ಟತೆಯು ನಿಜವಾಗಿಯೂ ತೀರ ಕೆಳಮಟ್ಟಕ್ಕೆ ಹೋಗಿತ್ತು! ನಿಸ್ಸಂದೇಹವಾಗಿ, ಆ ಊರಿನ ಮೇಲೆ ಯೆಹೋವನ ನ್ಯಾಯತೀರ್ಪು ಒಂದು ನೀತಿಯ ನ್ಯಾಯತೀರ್ಪಾಗಿತ್ತು.—ಆದಿಕಾಂಡ 19:1-5, 24, 25.
5. ದೇವರು ಲೋಟನನ್ನು ಮತ್ತು ಅವನ ಕುಟುಂಬವನ್ನು ಸೊದೋಮಿನಿಂದ ಹೇಗೆ ರಕ್ಷಿಸಿದನು?
5 ಸೊದೋಮ್ ಗೊಮೋರದ ನಾಶನವನ್ನು ಒಂದು ಎಚ್ಚರಿಕೆಯ ಉದಾಹರಣೆಯೋಪಾದಿ ಉಲ್ಲೇಖಿಸಿದ ಬಳಿಕ, ಅಪೊಸ್ತಲ ಪೇತ್ರನು ಬರೆದುದು: “ಕರ್ತನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ . . . ಬಲ್ಲವನಾಗಿದ್ದಾನೆ.” (2 ಪೇತ್ರ 2:6-9) ನೀತಿವಂತ ಲೋಟ ಮತ್ತು ಅವನ ಕುಟುಂಬವು, ಸೊದೋಮಿನ ಭಕ್ತಿಹೀನ ಜನರೊಂದಿಗೆ ನಾಶವಾಗುತ್ತಿದ್ದಲ್ಲಿ ನ್ಯಾಯವು ಈಡೇರುತ್ತಿರಲಿಲ್ಲ. ಹೀಗಿರುವುದರಿಂದ, ಯೆಹೋವನ ದೇವದೂತರು ಲೋಟನಿಗೆ ಸನ್ನಿಹಿತವಾದ ನಾಶನದ ಕುರಿತಾಗಿ ಎಚ್ಚರಿಸಿದರು. ಲೋಟನು ತಡಮಾಡುತ್ತಿದ್ದಾಗ, “ಯೆಹೋವನು ಕನಿಕರಿಸಿದ್ದರಿಂದ” ದೇವದೂತರು ಅವನನ್ನು, ಅವನ ಹೆಂಡತಿ ಮತ್ತು ಅವನ ಪುತ್ರಿಯರ ಕೈಹಿಡಿದು ಅವರನ್ನು ಆ ಊರಿನಿಂದ ಹೊರಗೆ ತಂದರು. (ಆದಿಕಾಂಡ 19:12-16) ಈ ದುಷ್ಟ ವ್ಯವಸ್ಥೆಯ ಬರುತ್ತಿರುವ ನಾಶನದಲ್ಲಿ ಯೆಹೋವನು ನೀತಿವಂತರಿಗಾಗಿ ತದ್ರೀತಿಯ ಚಿಂತೆಯನ್ನು ತೋರಿಸುವನೆಂದು ನಾವು ನಿಶ್ಚಿತರಾಗಿರಬಲ್ಲೆವು.
6. ದುಷ್ಟ ವಿಷಯಗಳ ವ್ಯವಸ್ಥೆಯ ಬರಲಿರುವ ಅಂತ್ಯದ ಕುರಿತಾಗಿ ನಾವು ಅನಗತ್ಯವಾಗಿ ಚಿಂತಿತರಾಗಿರಬಾರದೇಕೆ?
6 ಈ ವ್ಯವಸ್ಥೆಯ ಅಂತ್ಯವು “ನ್ಯಾಯವನ್ನು ವಿಧಿಸಲಿಕ್ಕಾಗಿ” (NW) ಒಂದು ಸಮಯವಾಗಿರುವುದಾದರೂ, ನಾವು ಅನಗತ್ಯವಾಗಿ ಚಿಂತಿತರಾಗಿರಲು ಯಾವುದೇ ಕಾರಣವಿಲ್ಲ. (ಲೂಕ 21:22) ಅರ್ಮಗೆದೋನಿನಲ್ಲಿ ಯೆಹೋವನು ಜಾರಿಗೊಳಿಸಲಿರುವ ನ್ಯಾಯತೀರ್ಪು, “ಕೇವಲ ನ್ಯಾಯವಾಗಿ” ರುಜುವಾಗುವುದು. (ಕೀರ್ತನೆ 19:9) ಅಬ್ರಹಾಮನು ಕಲಿತಂತೆ, ನಮ್ಮ ನ್ಯಾಯಕ್ಕಿಂತಲೂ ಹೆಚ್ಚು ಉನ್ನತ ಸ್ಥಾನದಲ್ಲಿರುವ ಯೆಹೋವನ ನ್ಯಾಯದಲ್ಲಿ ಮಾನವರಾದ ನಾವು ಸಂಪೂರ್ಣ ಭರವಸೆಯನ್ನಿಡಬಲ್ಲೆವು. ಅಬ್ರಹಾಮನು ಕೇಳಿದ್ದು: “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ”? (ಆದಿಕಾಂಡ 18:25; ಹೋಲಿಸಿರಿ ಯೋಬ 34:10.) ಅಥವಾ ಯೆಶಾಯನು ಅದನ್ನು ಸೂಕ್ತವಾಗಿ ಹೇಳಿದಂತೆ, “ಯಾವನು [ಯೆಹೋವನಿಗೆ] ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು?”—ಯೆಶಾಯ 40:14.
ಮಾನವಕುಲವನ್ನು ರಕ್ಷಿಸಲಿಕ್ಕಾಗಿ ಒಂದು ನೀತಿ ಕೃತ್ಯ
7. ದೇವರ ನ್ಯಾಯ ಮತ್ತು ಆತನ ಕರುಣೆಯ ನಡುವೆ ಯಾವ ಸಂಬಂಧವಿದೆ?
7 ದೇವರ ನ್ಯಾಯವು ಆತನು ತಪ್ಪಿತಸ್ಥರನ್ನು ಶಿಕ್ಷಿಸುವ ವಿಧದಲ್ಲಿ ಮಾತ್ರ ವ್ಯಕ್ತವಾಗುವುದಿಲ್ಲ. ಯೆಹೋವನು ತನ್ನನ್ನು “ನೀತಿವಂತ ದೇವರು ಮತ್ತು ರಕ್ಷಕ”ನಾಗಿ (NW) ತಾನೇ ವರ್ಣಿಸಿಕೊಳ್ಳುತ್ತಾನೆ. (ಯೆಶಾಯ 45:21) ಸುವ್ಯಕ್ತವಾಗಿ, ದೇವರ ನೀತಿ ಅಥವಾ ನ್ಯಾಯ ಮತ್ತು ಪಾಪದ ಪರಿಣಾಮಗಳಿಂದ ಮಾನವಕುಲವನ್ನು ರಕ್ಷಿಸಲಿಕ್ಕಾಗಿರುವ ಆತನ ಬಯಕೆಯ ನಡುವೆ ಒಂದು ನಿಕಟವಾದ ಸಂಬಂಧವಿದೆ. ಈ ವಚನದ ಕುರಿತು ಹೇಳಿಕೆ ನೀಡುತ್ತಾ, ದಿ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ 1982ರ ಆವೃತ್ತಿಯು ತೋರಿಸುವುದೇನೆಂದರೆ, “ದೇವರ ನ್ಯಾಯವು, ಆತನ ಕರುಣೆಯನ್ನು ವ್ಯಕ್ತಪಡಿಸಲು ಮತ್ತು ಆತನ ರಕ್ಷಣೆಯನ್ನು ಸಾಧಿಸಲು ವ್ಯಾವಹಾರಿಕ ಮಾರ್ಗಗಳನ್ನು ಹುಡುಕುತ್ತದೆ.” ದೇವರ ನ್ಯಾಯವು ಕರುಣೆಯೊಂದಿಗೆ ತಗ್ಗಿಸಲ್ಪಡಬೇಕೆಂದಿಲ್ಲ, ಬದಲಾಗಿ ಕರುಣೆಯು ದೇವರ ನ್ಯಾಯದ ಒಂದು ಅಭಿವ್ಯಕ್ತಿಯಾಗಿದೆ. ಮಾನವಕುಲದ ರಕ್ಷಣೆಗಾಗಿ ಪ್ರಾಯಶ್ಚಿತ್ತದ ದೇವರ ಒದಗಿಸುವಿಕೆಯು, ದೈವಿಕ ನ್ಯಾಯದ ಈ ಅಂಶದ ಅತಿ ಗಮನಾರ್ಹವಾದ ಉದಾಹರಣೆಯಾಗಿದೆ.
8, 9. (ಎ) “ಒಂದು ನೀತಿಯ ಕೃತ್ಯ” ಎಂಬ ವರ್ಣನೆಯಲ್ಲಿ ಏನು ಒಳಗೊಂಡಿತ್ತು? ಏಕೆ? (ಬಿ) ಯೆಹೋವನು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆ?
8 ಪ್ರಾಯಶ್ಚಿತ್ತ ಬೆಲೆ ತಾನೇ—ದೇವರ ಏಕಮಾತ್ರ ಪುತ್ರನಾದ ಯೇಸು ಕ್ರಿಸ್ತನ ಅಮೂಲ್ಯ ಜೀವ—ಒಂದು ದೊಡ್ಡ ಬೆಲೆಯಾಗಿತ್ತು. ಯಾಕಂದರೆ ಯೆಹೋವನ ಮಟ್ಟಗಳು ಸಾರ್ವತ್ರಿಕವಾಗಿದ್ದು, ಆತನೇ ಅವುಗಳನ್ನು ಪಾಲಿಸುತ್ತಾನೆ. (ಮತ್ತಾಯ 20:28) ಆದಾಮನು ಪರಿಪೂರ್ಣ ಜೀವವನ್ನು ಕಳೆದುಕೊಂಡಿದ್ದನು. ಆದುದರಿಂದ ಆದಾಮನ ಸಂತತಿಯವರಿಗೆ ಜೀವವನ್ನು ಪುನಃ ಪಡೆಯಲು ಪರಿಪೂರ್ಣ ಜೀವದ ಅಗತ್ಯವಿತ್ತು. (ರೋಮಾಪುರ 5:19-21) ಅಪೊಸ್ತಲ ಪೌಲನು, ಪ್ರಾಯಶ್ಚಿತ್ತದ ತೆರುವಿಕೆಯನ್ನು ಸೇರಿಸಿ ಯೇಸುವಿನ ಸಮಗ್ರತೆಯ ಮಾರ್ಗಕ್ರಮವನ್ನು “ಒಂದು ನೀತಿ ಕೃತ್ಯ” ಎಂದು ವರ್ಣಿಸುತ್ತಾನೆ. (ರೋಮಾಪುರ 5:18, NW ಪಾದಟಿಪ್ಪಣಿ) ಅದು ಯಾಕೆ? ಯಾಕಂದರೆ ಯೆಹೋವನ ದೃಷ್ಟಿಕೋನದಿಂದ, ತಾನು ಭಾರಿ ವೆಚ್ಚವನ್ನು ತೆರಬೇಕಾಗಿದ್ದರೂ, ಮಾನವಕುಲವನ್ನು ಬಿಡುಗಡೆಗೊಳಿಸುವುದು ಯುಕ್ತ ಮತ್ತು ನ್ಯಾಯವಾದ ಸಂಗತಿಯಾಗಿತ್ತು. ಆದಾಮನ ಸಂತತಿಯು, ದೇವರು ಸದೆಬಡಿಯಲು ಬಯಸದಿದ್ದ ‘ಜಜ್ಜಿದ ದಂಟಿ’ನಂತೆ ಅಥವಾ ಆತನು ನಂದಿಸಲು ಬಯಸದಿದ್ದ ‘ಆರಿಹೋಗುತ್ತಿರುವ ದೀಪ’ದಂತೆ ಇತ್ತು. (ಮತ್ತಾಯ 12:20) ಆದಾಮನ ಸಂತತಿಯೊಳಗಿಂದ ಅನೇಕ ನಂಬಿಗಸ್ತ ಪುರುಷರು ಸ್ತ್ರೀಯರು ಇರುವರೆಂದು ದೇವರಿಗೆ ಭರವಸೆಯಿತ್ತು.—ಮತ್ತಾಯ 25:34ನ್ನು ಹೋಲಿಸಿರಿ.
9 ಪ್ರೀತಿ ಮತ್ತು ನ್ಯಾಯದ ಈ ಸರ್ವಶ್ರೇಷ್ಠ ಕೃತ್ಯಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಯೆಹೋವನು ನಮ್ಮಿಂದ ಅಪೇಕ್ಷಿಸುವ ವಿಷಯಗಳಲ್ಲಿ ಒಂದು ನಾವು “ನ್ಯಾಯವನ್ನು ಆಚರಿಸ”ಬೇಕೆಂಬುದೇ. (ಮೀಕ 6:8) ನಾವಿದನ್ನು ಹೇಗೆ ಮಾಡಸಾಧ್ಯವಿದೆ?
ನ್ಯಾಯಕ್ಕಾಗಿ ಹುಡುಕಿರಿ, ನೀತಿಯನ್ನು ಬೆನ್ನಟ್ಟಿರಿ
10. (ಎ) ನಾವು ನ್ಯಾಯವನ್ನು ಆಚರಿಸುವ ಒಂದು ವಿಧವು ಯಾವದಾಗಿದೆ? (ಬಿ) ನಾವು ದೇವರ ನೀತಿಯನ್ನು ಪ್ರಥಮವಾಗಿ ಹುಡುಕುವುದು ಹೇಗೆ?
10 ಎಲ್ಲಕ್ಕಿಂತಲೂ ಪ್ರಥಮವಾಗಿ, ನಾವು ದೇವರ ನೈತಿಕ ಮಟ್ಟಗಳಿಗನುಸಾರವಾಗಿ ನಡೆಯಬೇಕು. ದೇವರ ಮಟ್ಟಗಳು ನ್ಯಾಯವಾದವುಗಳು ಮತ್ತು ನೀತಿಯುಳ್ಳವುಗಳಾಗಿರುವುದರಿಂದ, ನಾವು ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸುವಾಗ ನಾವು ನ್ಯಾಯವನ್ನು ಆಚರಿಸುವವರಾಗಿರುತ್ತೇವೆ. ತನ್ನ ಜನರಿಂದ ಯೆಹೋವನು ಇದನ್ನೇ ಅಪೇಕ್ಷಿಸುತ್ತಾನೆ. “ಸದಾಚಾರವನ್ನು ಅಭ್ಯಾಸಮಾಡಿರಿ; ನ್ಯಾಯನಿರತರಾಗಿರಿ” ಎಂದು ಯೆಹೋವನು ಇಸ್ರಾಯೇಲ್ಯರಿಗೆ ಹೇಳಿದನು. (ಯೆಶಾಯ 1:17) “ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ”ಪಡುವಂತೆ ಅವರನ್ನು ಉಪದೇಶಿಸುತ್ತಾ, ಯೇಸು ಪರ್ವತ ಪ್ರಸಂಗದಲ್ಲಿ ತನ್ನ ಕೇಳುಗರಿಗೆ ತದ್ರೀತಿಯ ಸಲಹೆಯನ್ನು ಕೊಟ್ಟನು. (ಮತ್ತಾಯ 6:33) “ನೀತಿಯನ್ನು ಬೆನ್ನಟ್ಟುವಂತೆ” (NW) ಪೌಲನು ತಿಮೊಥೆಯನಿಗೆ ಉತ್ತೇಜಿಸಿದನು. (1 ತಿಮೊಥೆಯ 6:11) ನಡವಳಿಕೆಗಾಗಿರುವ ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ನಾವು ಜೀವಿಸುವಾಗ, ಮತ್ತು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವಾಗ, ನಾವು ನಿಜ ನ್ಯಾಯ ಮತ್ತು ನೀತಿಯನ್ನು ಬೆನ್ನಟ್ಟುತ್ತಿದ್ದೇವೆ. (ಎಫೆಸ 4:23, 24) ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ದೇವರ ವಿಧದಲ್ಲಿ ವಿಷಯಗಳನ್ನು ಮಾಡುವ ಮೂಲಕ ನಾವು ನ್ಯಾಯಕ್ಕಾಗಿ ಹುಡುಕುತ್ತೇವೆ.
11. ಪಾಪದ ಅಧಿಪತ್ಯದ ವಿರುದ್ಧ ನಾವು ಏಕೆ ಮತ್ತು ಹೇಗೆ ಹೋರಾಡಬೇಕು?
11 ನಮಗೆ ಚೆನ್ನಾಗಿ ತಿಳಿದಿರುವಂತೆ, ನ್ಯಾಯವೂ ಯುಕ್ತವೂ ಆದದ್ದನ್ನು ಅಪರಿಪೂರ್ಣ ಮಾನವರು ಮಾಡುವುದು ಯಾವಾಗಲೂ ಸುಲಭವಾಗಿರುವುದಿಲ್ಲ. (ರೋಮಾಪುರ 7:14-20) ಪಾಪದ ಆಧಿಪತ್ಯದ ವಿರುದ್ಧ ಹೋರಾಡುವಂತೆ ಪೌಲನು ರೋಮಿನ ಕ್ರೈಸ್ತರನ್ನು ಉತ್ತೇಜಿಸಿದನು. ಹೀಗೆ ಮಾಡುವುದರಿಂದ ಅವರು ತಮ್ಮ ಸಮರ್ಪಿತ ದೇಹಗಳನ್ನು, ದೇವರಿಗೆ “ನೀತಿಕೃತ್ಯಗಳನ್ನು ನಡಿಸುವ ಸಾಧನಗಳಾಗಿ” ಸಾದರಪಡಿಸಸಾಧ್ಯವಿತ್ತು. ಮತ್ತು ಇವು ದೇವರಿಗೆ ತನ್ನ ಉದ್ದೇಶವನ್ನು ಪೂರೈಸುವುದರಲ್ಲಿ ಉಪಯುಕ್ತವಾಗಿರುವುದು. (ರೋಮಾಪುರ 6:12-14) ತದ್ರೀತಿಯಲ್ಲಿ, ದೇವರ ವಾಕ್ಯವನ್ನು ಕ್ರಮವಾಗಿ ಅಭ್ಯಾಸಮಾಡಿ, ಅನ್ವಯಿಸಿಕೊಳ್ಳುವ ಮೂಲಕ, ನಾವು ‘ಯೆಹೋವನ ಮಾನಸಿಕ ಕ್ರಮಪಡಿಸುವಿಕೆ’ (NW)ಯನ್ನು ಹೀರಿಕೊಳ್ಳಬಲ್ಲೆವು ಮತ್ತು ‘ನೀತಿಯಲ್ಲಿ ಶಿಕ್ಷಿಸಲ್ಪಡ’ (NW)ಬಲ್ಲೆವು.—ಎಫೆಸ 6:4; 2 ತಿಮೊಥೆಯ 3:16, 17.
12. ಯೆಹೋವನು ನಮ್ಮನ್ನು ಯಾವ ರೀತಿಯಲ್ಲಿ ಉಪಚರಿಸಬೇಕೆಂದು ನಾವು ಬಯಸುತ್ತೇವೊ ಅದೇ ರೀತಿಯಲ್ಲಿ ನಾವು ಇತರರನ್ನು ಉಪಚರಿಸಬೇಕಾದರೆ ನಾವೇನನ್ನು ಮಾಡಬಾರದು?
12 ಎರಡನೆಯದಾಗಿ, ಯೆಹೋವನು ನಮ್ಮನ್ನು ಯಾವ ರೀತಿಯಲ್ಲಿ ಉಪಚರಿಸಬೇಕೆಂದು ನಾವು ಬಯಸುತ್ತೇವೊ, ನಾವು ಕೂಡ ಅದೇ ರೀತಿಯಲ್ಲಿ ಇತರರನ್ನು ಉಪಚರಿಸುವಾಗ ನ್ಯಾಯವನ್ನು ಆಚರಿಸುತ್ತೇವೆ. ಇಬ್ಬಗೆಯ ಮಟ್ಟವನ್ನು ಇಟ್ಟುಕೊಳ್ಳುವುದು ಸುಲಭ. ಅಂದರೆ, ನಮಗಾಗಿ ಸಲಿಗೆಕೊಡುವ ಒಂದು ಮಟ್ಟ ಮತ್ತು ಇತರರಿಗಾಗಿ ಒಂದು ಕಟ್ಟುನಿಟ್ಟಾದ ಮಟ್ಟ. ನಮ್ಮ ಸ್ವಂತ ತಪ್ಪುಗಳಿಗಾಗಿ ನಾವು ಸುಲಭವಾಗಿ ನೆವಗಳನ್ನು ಕೊಡುತ್ತೇವೆ, ಆದರೆ ಇತರರ ತಪ್ಪುಗಳನ್ನು—ಅವು ನಮ್ಮ ಕುಂದುಗಳಿಗೆ ಹೋಲಿಸುವಾಗ ಅಲ್ಪವಾಗಿರಬಹುದಾದರೂ—ಬೇಗನೆ ಟೀಕಿಸುತ್ತೇವೆ. ಯೇಸು ನೇರವಾಗಿ ಕೇಳುವುದು: “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?” (ಮತ್ತಾಯ 7:1-3) ಯೆಹೋವನು ನಮ್ಮ ತಪ್ಪುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಲ್ಲಿ ನಮ್ಮಲ್ಲಿ ಯಾರೊಬ್ಬರೂ ಆತನ ಮುಂದೆ ನಿಲ್ಲಸಾಧ್ಯವಿರಲಿಲ್ಲವೆಂಬುದನ್ನು ನಾವು ಎಂದಿಗೂ ಮರೆಯಬಾರದು. (ಕೀರ್ತನೆ 130:3, 4) ಯೆಹೋವನ ನ್ಯಾಯವು ಆತನು ನಮ್ಮ ಸಹೋದರರ ಬಲಹೀನತೆಗಳನ್ನು ಕಡೆಗಣಿಸುವಂತೆ ಅನುಮತಿಸುವುದಾದರೆ, ಅವರನ್ನು ಪ್ರತಿಕೂಲವಾಗಿ ತೀರ್ಪುಮಾಡಲು ನಾವ್ಯಾರು?—ರೋಮಾಪುರ 14:4, 10.
13. ರಾಜ್ಯದ ಸುವಾರ್ತೆಯನ್ನು ಸಾರಲು ಒಬ್ಬ ನೀತಿಯ ಮನುಷ್ಯನಿಗೆ ಹಂಗಿನ ಅನಿಸಿಕೆಯಾಗುವುದು ಹೇಗೆ?
13 ಮೂರನೆಯದಾಗಿ, ನಾವು ಸಾರುವ ಚಟುವಟಿಕೆಯಲ್ಲಿ ಶ್ರದ್ಧಾಪೂರ್ವಕವಾಗಿ ಪಾಲ್ಗೊಳ್ಳುವಾಗ, ನಾವು ದೈವಿಕ ನ್ಯಾಯವನ್ನು ಪ್ರದರ್ಶಿಸುತ್ತೇವೆ. “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ” ಎಂದು ಯೆಹೋವನು ನಮಗೆ ಸಲಹೆಕೊಡುತ್ತಾನೆ. (ಜ್ಞಾನೋಕ್ತಿ 3:27) ದೇವರು ಇಷ್ಟೊಂದು ಉದಾರಭಾವದಿಂದ ನಮಗೆ ದಯಪಾಲಿಸಿರುವ ಜೀವದಾಯಕ ಜ್ಞಾನವನ್ನು ನಮ್ಮಲ್ಲಿಯೇ ಇಟ್ಟುಕೊಳ್ಳುವುದು ಯುಕ್ತವಾದದ್ದಲ್ಲ. ಅನೇಕ ಜನರು ನಮ್ಮ ಸಂದೇಶವನ್ನು ತಿರಸ್ಕರಿಸಬಹುದು ನಿಜ, ಆದರೆ ದೇವರು ಅವರಿಗೆ ತನ್ನ ಕರುಣೆಯನ್ನು ತೋರಿಸುವಷ್ಟು ಸಮಯ, ‘ಪಶ್ಚಾತ್ತಾಪಪಡಲು’ ಅವಕಾಶವನ್ನು ಕೊಡುತ್ತಾ ಇರಲು ಸಿದ್ಧರಾಗಿರಬೇಕು. (2 ಪೇತ್ರ 3:9) ಮತ್ತು ಯೇಸುವಿನಂತೆ, ಯಾವುದೇ ವ್ಯಕ್ತಿಯು ನ್ಯಾಯ ಮತ್ತು ನೀತಿಗೆ ತಿರುಗುವಂತೆ ಸಹಾಯ ಮಾಡಲು ನಾವು ಶಕ್ತರಾಗುವಲ್ಲಿ ನಮಗೆ ಆನಂದವಾಗುತ್ತದೆ. (ಲೂಕ 15:7) ‘ನೀತಿಯ ಬೀಜವನ್ನು ಬಿತ್ತಲು’ ಅನುಕೂಲವಾದ ಸಮಯ ಇದಾಗಿದೆ.—ಹೋಶೇಯ 10:12.
‘ನ್ಯಾಯದ ಅಧಿಪತಿಗಳು’
14. ನ್ಯಾಯದ ವಿಷಯದಲ್ಲಿ ಹಿರಿಯರು ಯಾವ ಪಾತ್ರವನ್ನು ವಹಿಸುತ್ತಾರೆ?
14 ನಾವೆಲ್ಲರೂ ನೀತಿಯ ಮಾರ್ಗದಲ್ಲಿ ನಡೆಯಬೇಕು, ಆದರೆ ಕ್ರೈಸ್ತ ಸಭೆಯಲ್ಲಿರುವ ಹಿರಿಯರಿಗೆ ಈ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ. ಯೇಸುವಿನ ವೈಭವಯುಕ್ತ ಆಳ್ವಿಕೆಯು ‘ನೀತಿನ್ಯಾಯಗಳ ಮೂಲಕ ಸ್ಥಾಪಿಸ’ಲ್ಪಟ್ಟಿದೆ. ಅದಕ್ಕನುಸಾರವಾಗಿ, ಹಿರಿಯರಿಗಿರುವ ಮಟ್ಟವು ದೈವಿಕ ನ್ಯಾಯವಾಗಿದೆ. (ಯೆಶಾಯ 9:7) ಯೆಶಾಯ 32:1ರಲ್ಲಿ ಪ್ರವಾದನಾತ್ಮಕವಾಗಿ ವರ್ಣಿಸಲ್ಪಟ್ಟಿರುವ ವಿಷಯವನ್ನು ಅವರು ಮನಸ್ಸಿನಲ್ಲಿಡುತ್ತಾರೆ: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.” ಆತ್ಮ ನೇಮಿತ ಮೇಲ್ವಿಚಾರಕರೋಪಾದಿ, ಅಥವಾ ‘ದೇವರ ಮನೆವಾರ್ತೆಯ’ವರಾಗಿ ಹಿರಿಯರು ದೇವರ ರೀತಿಯಲ್ಲಿ ವಿಷಯಗಳನ್ನು ಮಾಡಬೇಕು.—ತೀತ 1:7.
15, 16. (ಎ) ಯೇಸುವಿನ ದೃಷ್ಟಾಂತದಲ್ಲಿನ ನಂಬಿಗಸ್ತ ಕುರುಬನನ್ನು ಹಿರಿಯರು ಹೇಗೆ ಅನುಕರಿಸುತ್ತಾರೆ? (ಬಿ) ಆತ್ಮಿಕವಾಗಿ ಕಳೆದುಹೋಗಿರುವವರ ಕುರಿತಾಗಿ ಹಿರಿಯರಿಗೆ ಹೇಗನಿಸುತ್ತದೆ?
15 ಯೆಹೋವನ ನ್ಯಾಯವು ಕನಿಕರವುಳ್ಳದ್ದೂ, ಕರುಣಾಜನಕವೂ, ವಿವೇಚನಾಯುಕ್ತವೂ ಆಗಿದೆಯೆಂದು ಯೇಸು ತೋರಿಸಿದನು. ಎಲ್ಲಕ್ಕಿಂತಲೂ ಹೆಚ್ಚಾಗಿ ಅವನು ಸಮಸ್ಯೆಗಳಿರುವವರಿಗೆ ಸಹಾಯಮಾಡಲು ಪ್ರಯತ್ನಿಸಿದನು ಮತ್ತು “ಕೆಟ್ಟುಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು.” (ಲೂಕ 19:10) ಯೇಸುವಿನ ದೃಷ್ಟಾಂತದಲ್ಲಿ, ಕಳೆದುಹೋಗಿದ್ದ ಕುರಿಯನ್ನು ಕಂಡುಕೊಳ್ಳುವ ತನಕ ದಣಿಯದೆ ಹುಡುಕಿದ ಕುರುಬನಂತೆ, ಹಿರಿಯರು ಆತ್ಮಿಕವಾಗಿ ದಾರಿತಪ್ಪಿರುವವರನ್ನು ಹುಡುಕಿ, ಅವರು ಮಂದೆಗೆ ಹಿಂದಿರುಗುವಂತೆ ಮಾರ್ಗದರ್ಶಿಸಲು ಪ್ರಯತ್ನಿಸುತ್ತಾರೆ.—ಮತ್ತಾಯ 18:12, 13.
16 ಗಂಭೀರವಾದ ಪಾಪಗಳನ್ನು ಮಾಡಿರಬಹುದಾದವರನ್ನು ಖಂಡಿಸುವ ಬದಲಿಗೆ, ಹಿರಿಯರು ಅವರನ್ನು ಗುಣಪಡಿಸಲು ಮತ್ತು ಸಾಧ್ಯವಿರುವಲ್ಲಿ ಪಶ್ಚಾತ್ತಾಪಪಡುವಂತೆ ನಡಿಸಲು ಪ್ರಯತ್ನಿಸುತ್ತಾರೆ. ದಾರಿತಪ್ಪಿಹೋಗಿರುವ ವ್ಯಕ್ತಿಯೊಬ್ಬನಿಗೆ ಅವರು ಸಹಾಯಮಾಡಲು ಶಕ್ತರಾಗುವಾಗ, ಅವರು ಹರ್ಷಿಸುತ್ತಾರೆ. ಆದರೆ ಒಬ್ಬ ತಪ್ಪಿತಸ್ಥನು ಪಶ್ಚಾತ್ತಾಪಪಡಲು ತಪ್ಪಿಹೋಗುವಾಗ ಅವರು ದುಃಖಪಡುತ್ತಾರೆ. ಆಗ ದೇವರ ನೀತಿಯ ಮಟ್ಟಗಳು ಅವರು ಆ ಪಶ್ಚಾತ್ತಾಪರಹಿತ ವ್ಯಕ್ತಿಯನ್ನು ಬಹಿಷ್ಕರಿಸುವಂತೆ ಅವಶ್ಯಪಡಿಸುತ್ತದೆ. ಆಗಲೂ, ದುಂದುಗಾರ ಮಗನ ತಂದೆಯಂತೆ, ತಪ್ಪುಮಾಡಿದ ಆ ವ್ಯಕ್ತಿಗೆ ಯಾವುದಾದರೊಂದು ದಿನ ‘ಬುದ್ಧಿಬರುವುದೆಂದು’ ಅವರು ನಿರೀಕ್ಷಿಸುತ್ತಾರೆ. (ಲೂಕ 15:17, 18) ಈ ಕಾರಣದಿಂದ, ಹಿರಿಯರು ನಿರ್ದಿಷ್ಟ ಬಹಿಷ್ಕೃತ ವ್ಯಕ್ತಿಗಳು ಯೆಹೋವನ ಸಂಸ್ಥೆಗೆ ಹೇಗೆ ಹಿಂದಿರುಗಸಾಧ್ಯವಿದೆಯೆಂಬುದನ್ನು ಅವರಿಗೆ ಜ್ಞಾಪಕಹುಟ್ಟಿಸಲಿಕ್ಕಾಗಿ ಅವರನ್ನು ಸಂದರ್ಶಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ.a
17. ತಪ್ಪುಮಾಡುವಿಕೆಯ ಒಂದು ಕೇಸನ್ನು ನಿರ್ವಹಿಸುತ್ತಿರುವಾಗ ಹಿರಿಯರಿಗೆ ಯಾವ ಗುರಿಯಿರುತ್ತದೆ ಮತ್ತು ಆ ಗುರಿಯನ್ನು ಸಾಧಿಸಲು ಅವರಿಗೆ ಯಾವ ಗುಣವು ಸಹಾಯಮಾಡುವುದು?
17 ತಪ್ಪುಮಾಡುವಿಕೆಯ ವಿದ್ಯಮಾನಗಳನ್ನು ನಿರ್ವಹಿಸುವಾಗ, ಹಿರಿಯರು ವಿಶೇಷವಾಗಿ ಯೆಹೋವನ ನ್ಯಾಯವನ್ನು ಅನುಕರಿಸುವ ಅಗತ್ಯವಿದೆ. ಯೇಸು ತಮ್ಮನ್ನು ಅರ್ಥಮಾಡಿಕೊಂಡು, ತಮಗೆ ಸಹಾಯಮಾಡುವನೆಂದು ಪಾಪಿಗಳಿಗೆ ಅನಿಸಿದ್ದರಿಂದ ಅವರು ಯೇಸುವಿನ “ಬಳಿಗೆ ಬರುತ್ತಾ” ಇದ್ದರು. (ಲೂಕ 15:1; ಮತ್ತಾಯ 9:12, 13) ಖಂಡಿತವಾಗಿಯೂ ಯೇಸು ತಪ್ಪುಮಾಡುವಿಕೆಯನ್ನು ಮನ್ನಿಸಲಿಲ್ಲ. ಯೇಸುವಿನೊಂದಿಗೆ ಕಳೆದ ಒಂದು ಭೋಜನದ ಸಂದರ್ಭವು, ಒಬ್ಬ ಕುಖ್ಯಾತ ಸುಲಿಗೆಗಾರನಾದ ಜಕ್ಕಾಯನನ್ನು, ಪಶ್ಚಾತ್ತಾಪಮಾಡಲು ಮತ್ತು ಅವನು ಇತರರ ಮೇಲೆ ತಂದಿದ್ದ ಎಲ್ಲ ಕಷ್ಟಾನುಭವಕ್ಕೆ ಪರಿಹಾರವನ್ನು ಮಾಡಲು ಪ್ರಚೋದಿಸಿತು. (ಲೂಕ 19:8-10) ಇಂದು ಹಿರಿಯರಿಗೂ ತಮ್ಮ ನ್ಯಾಯನಿರ್ಣಾಯಕ ವಿಚಾರಣೆಗಳಲ್ಲಿ ಅದೇ ಗುರಿಯಿದೆ—ತಪ್ಪುಮಾಡಿದವನನ್ನು ಪಶ್ಚಾತ್ತಾಪಕ್ಕೆ ನಡಿಸುವುದು. ಅವರು ಯೇಸು ಇದ್ದಷ್ಟು ಸ್ನೇಹಶೀಲರಾಗಿರುವಲ್ಲಿ, ಅನೇಕ ತಪ್ಪಿತಸ್ಥರು ಅವರ ಸಹಾಯವನ್ನು ಸುಲಭವಾಗಿ ಕೋರುವರು.
18. ಹಿರಿಯರು ‘ಗಾಳಿಯಿಂದ ಮರೆ’ಯಂತಿರಲು ಯಾವುದು ಸಹಾಯಮಾಡುವುದು?
18 ಒಂದು ಸೂಕ್ಷ್ಮಗ್ರಾಹಿ ಹೃದಯವನ್ನು ಹೊಂದುವುದು, ಹಿರಿಯರು ಕಠೋರವೂ ಕ್ರೂರವೂ ಆಗಿರದ ದೈವಿಕ ನ್ಯಾಯವನ್ನು ತೋರಿಸಲು ಸಹಾಯಮಾಡುವುದು. ಆಸಕ್ತಿಕರವಾಗಿ ಎಜ್ರನು, ಇಸ್ರಾಯೇಲ್ಯರಿಗೆ ನ್ಯಾಯವನ್ನು ಕಲಿಸಲಿಕ್ಕೋಸ್ಕರ ತನ್ನ ಮನಸ್ಸನ್ನಲ್ಲ, ಬದಲಿಗೆ ತನ್ನ ಹೃದಯವನ್ನು ತಯಾರಿಸಿದನು. (ಎಜ್ರ 7:10) ಒಂದು ತಿಳಿವಳಿಕೆಯುಳ್ಳ ಹೃದಯವು, ಉಚಿತವಾದ ಶಾಸ್ತ್ರೀಯ ಮೂಲತತ್ವಗಳನ್ನು ಅನ್ವಯಿಸಿಕೊಳ್ಳಲು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಗಳನ್ನು ಪರಿಗಣಿಸುವಂತೆ ಹಿರಿಯರಿಗೆ ಶಕ್ಯವನ್ನಾಗಿ ಮಾಡುವುದು. ರಕ್ತಕುಸುಮ ರೋಗವಿದ್ದ ಸ್ತ್ರೀಯನ್ನು ಯೇಸು ಗುಣಪಡಿಸಿದಾಗ, ನಿಯಮದ ಭಾವಾರ್ಥ ಹಾಗೂ ಶಬ್ದಾರ್ಥವನ್ನು ಅರ್ಥಮಾಡಿಕೊಳ್ಳುವುದನ್ನು ಯೆಹೋವನ ನ್ಯಾಯ ಅರ್ಥೈಸುತ್ತದೆಂಬುದನ್ನು ಅವನು ತೋರಿಸಿದನು. (ಲೂಕ 8:43-48) ಕನಿಕರದಿಂದ ನ್ಯಾಯವನ್ನು ತೋರಿಸುವ ಹಿರಿಯರು, ತಮ್ಮ ಸ್ವಂತ ಬಲಹೀನತೆಗಳ ಅಥವಾ ನಾವು ಜೀವಿಸುತ್ತಿರುವ ಈ ದುಷ್ಟ ವ್ಯವಸ್ಥೆಯ ಹೊಡೆತವನ್ನು ಅನುಭವಿಸುವವರಿಗೆ “ಗಾಳಿಯಿಂದ ಅವಿತುಕೊಳ್ಳುವ ಸ್ಥಳ”ಕ್ಕೆ (NW) ಹೋಲಿಸಲ್ಪಟ್ಟಿದ್ದಾರೆ.—ಯೆಶಾಯ 32:2.
19. ದೈವಿಕ ನ್ಯಾಯದ ಅನ್ವಯಕ್ಕೆ ಒಬ್ಬ ಸಹೋದರಿಯು ಹೇಗೆ ಪ್ರತಿಕ್ರಿಯಿಸಿದಳು?
19 ಒಂದು ಗಂಭೀರವಾದ ಪಾಪವನ್ನು ಮಾಡಿದ್ದ ಒಬ್ಬ ಸಹೋದರಿಯು ದೈವಿಕ ನ್ಯಾಯವನ್ನು ಸಾಕ್ಷಾತ್ತಾಗಿ ಗಣ್ಯಮಾಡಲಾರಂಭಿಸಿದಳು. “ಮುಚ್ಚುಮರೆಯಿಲ್ಲದೆ ಹೇಳುವುದಾದರೆ ನಾನು ಹಿರಿಯರ ಬಳಿ ಹೋಗಲು ಭಯಪಡುತ್ತಿದ್ದೆ” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. “ಆದರೆ ಅವರು ನನ್ನನ್ನು ಕನಿಕರ ಮತ್ತು ಘನತೆಯಿಂದ ಉಪಚರಿಸಿದರು. ಹಿರಿಯರು, ನಿಷ್ಠುರ ನ್ಯಾಯಾಧೀಶರಂತಿರುವ ಬದಲಿಗೆ ತಂದೆಗಳಂತಿದ್ದರು. ನಾನು ನನ್ನ ಮಾರ್ಗಗಳನ್ನು ಸರಿಪಡಿಸಲು ದೃಢನಿಶ್ಚಯ ಮಾಡುವಲ್ಲಿ ಯೆಹೋವನು ನನ್ನನ್ನು ತಿರಸ್ಕರಿಸದಿರುವನೆಂದು ನಾನು ಅರ್ಥಮಾಡಿಕೊಳ್ಳುವಂತೆ ಅವರು ಸಹಾಯಮಾಡಿದರು. ಒಬ್ಬ ಪ್ರೀತಿಪರ ತಂದೆಯಂತೆಯೇ ಆತನು ನಮ್ಮನ್ನು ಶಿಸ್ತುಗೊಳಿಸುವ ವಿಧವನ್ನು ನಾನು ನೇರವಾಗಿ ಕಲಿತೆ. ಯೆಹೋವನು ನನ್ನ ಭಿನ್ನಹವನ್ನು ಕೇಳುವನೆಂಬ ಭರವಸೆಯೊಂದಿಗೆ ನಾನು ಆತನಿಗೆ ನನ್ನ ಅಂತರಂಗವನ್ನು ತೋಡಿಕೊಳ್ಳಲು ಶಕ್ತಳಾದೆ. ಹಿಂದೆ ನೋಡುವಾಗ, ಏಳು ವರ್ಷಗಳ ಹಿಂದೆ ನಡೆದ ಹಿರಿಯರೊಂದಿಗಿನ ಆ ಕೂಟವು, ಯೆಹೋವನಿಂದ ಬಂದ ಒಂದು ಆಶೀರ್ವಾದವಾಗಿತ್ತೆಂದು ನಾನು ನಿಜವಾಗಿಯೂ ಹೇಳಬಲ್ಲೆ. ಅಂದಿನಿಂದ ಹಿಡಿದು, ಆತನೊಂದಿಗಿನ ನನ್ನ ಸಂಬಂಧವು ಹೆಚ್ಚು ಬಲವಾಗಿರುತ್ತದೆ.”
ನ್ಯಾಯವನ್ನು ಪಾಲಿಸಿ, ನೀತಿಯ ಕಾರ್ಯಗಳನ್ನು ಮಾಡಿರಿ
20. ತಿಳಿವಳಿಕೆ, ಮತ್ತು ನ್ಯಾಯ ಹಾಗೂ ನೀತಿಯನ್ನು ಆಚರಿಸುವುದರ ಪ್ರಯೋಜನಗಳು ಯಾವುವು?
20 ದೈವಿಕ ನ್ಯಾಯವು, ಪ್ರತಿಯೊಬ್ಬ ಮನುಷ್ಯನು ಯಾವುದಕ್ಕೆ ಅರ್ಹನಾಗಿದ್ದಾನೊ ಅದನ್ನು ಕೊಡುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ. ನಂಬಿಕೆಯನ್ನಿಡುವವರೆಲ್ಲರಿಗೂ ನಿತ್ಯಜೀವವನ್ನು ದಯಪಾಲಿಸುವಂತೆ ಯೆಹೋವನ ನ್ಯಾಯವು ಅವನನ್ನು ಪ್ರಚೋದಿಸಿದೆ. (ಕೀರ್ತನೆ 103:10; ರೋಮಾಪುರ 5:15, 18) ದೇವರು ನಮ್ಮೊಂದಿಗೆ ಈ ರೀತಿಯಲ್ಲಿ ವ್ಯವಹರಿಸುತ್ತಾನೆ ಏಕಂದರೆ ಆತನ ನ್ಯಾಯವು ನಮ್ಮ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ನಮ್ಮನ್ನು ಖಂಡಿಸುವ ಬದಲಿಗೆ ರಕ್ಷಿಸಲು ಪ್ರಯತ್ನಿಸುತ್ತದೆ. ನಿಜವಾಗಿಯೂ, ಯೆಹೋವನ ನ್ಯಾಯದ ವ್ಯಾಪ್ತಿಯ ಕುರಿತಾದ ಹೆಚ್ಚು ಉತ್ತಮವಾದ ತಿಳಿವಳಿಕೆಯು, ನಮ್ಮನ್ನು ಆತನ ಹೆಚ್ಚು ಸಮೀಪಕ್ಕೆ ಸೆಳೆಯುತ್ತದೆ. ಮತ್ತು ಆತನ ವ್ಯಕ್ತಿತ್ವದ ಈ ಗುಣವನ್ನು ನಾವು ಅನುಕರಿಸಲು ಪ್ರಯತ್ನಿಸಿದಂತೆ, ನಮ್ಮ ಹಾಗೂ ಇತರರ ಜೀವಿತಗಳು ಹೇರಳವಾಗಿ ಆಶೀರ್ವದಿಸಲ್ಪಡುವವು. ನ್ಯಾಯದ ನಮ್ಮ ಬೆನ್ನಟ್ಟುವಿಕೆಯು, ನಮ್ಮ ಸ್ವರ್ಗೀಯ ತಂದೆಯಿಂದ ಗಮನಿಸಲ್ಪಡದೆ ಹೋಗದು. ಯೆಹೋವನು ನಮಗೆ ವಾಗ್ದಾನಿಸುವುದು: “ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ; ಏಕಂದರೆ ನನ್ನ ವಿಮೋಚನಕ್ರಿಯೆಯು ಬೇಗನೆ ಬರುವದು, ನನ್ನ ರಕ್ಷಣಧರ್ಮದ ಕಾರ್ಯವು ಶೀಘ್ರವಾಗಿ ವ್ಯಕ್ತವಾಗುವದು. ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು.”—ಯೆಶಾಯ 56:1, 2.
[ಪಾದಟಿಪ್ಪಣಿ]
a ಏಪ್ರಿಲ್ 15, 1991ರ ದ ವಾಚ್ಟವರ್ ಪತ್ರಿಕೆಯ 22-3ನೆಯ ಪುಟಗಳನ್ನು ನೋಡಿರಿ.
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಸೊದೋಮ್ ಗೊಮೋರದ ನಾಶನವು ಯೆಹೋವನ ನ್ಯಾಯದ ಕುರಿತಾಗಿ ನಮಗೆ ಏನನ್ನು ಕಲಿಸುತ್ತದೆ?
◻ ಪ್ರಾಯಶ್ಚಿತ್ತವು ದೇವರ ನ್ಯಾಯ ಮತ್ತು ಪ್ರೀತಿಯ ಒಂದು ಗಮನಾರ್ಹ ಅಭಿವ್ಯಕ್ತಿಯಾಗಿದೆ ಏಕೆ?
◻ ನಾವು ನ್ಯಾಯವನ್ನು ಆಚರಿಸಬಲ್ಲ ಮೂರು ವಿಧಗಳಾವುವು?
◻ ಹಿರಿಯರು ಯಾವ ವಿಶೇಷ ವಿಧದಲ್ಲಿ ದೈವಿಕ ನ್ಯಾಯವನ್ನು ಅನುಕರಿಸಬಲ್ಲರು?
[ಪುಟ 15 ರಲ್ಲಿರುವ ಚಿತ್ರ]
ನಮ್ಮ ಸಾರುವ ಚಟುವಟಿಕೆಯ ಮೂಲಕ ನಾವು ದೈವಿಕ ನ್ಯಾಯವನ್ನು ಪ್ರದರ್ಶಿಸುತ್ತೇವೆ
[ಪುಟ 16 ರಲ್ಲಿರುವ ಚಿತ್ರ]
ಹಿರಿಯರು ದೈವಿಕ ನ್ಯಾಯವನ್ನು ಪ್ರದರ್ಶಿಸುವಾಗ, ಸಮಸ್ಯೆಗಳಿರುವವರು ಹೆಚ್ಚು ಸುಲಭವಾಗಿ ಅವರಿಂದ ಸಹಾಯವನ್ನು ಕೋರುವರು