ಪವಿತ್ರ ಸೇವೆಯ ಸುಯೋಗಗಳಿಗೆ ಉಚ್ಚಮಾನ್ಯತೆಯನ್ನು ಕೊಡುವುದು
ಪವಿತ್ರ ಸೇವೆಯ ನೇಮಕಗಳು ಅಲ್ಪವಾಗಿ ಎಣಿಸಲ್ಪಡಬಾರದು. ಪುರಾತನ ಯೆಹೂದದಲ್ಲಿದ್ದ ಯಾಜಕರು ಯೆಹೋವನ ಮಂದಿರದ ಸಂಬಂಧದಲ್ಲಿದ್ದ ತಮ್ಮ ಸುಯೋಗಗಳ ಕಡೆಗೆ ಉದಾಸೀನಭಾವವನ್ನು ತೋರಿಸಿದಾಗ, ಆತನು ಅವರನ್ನು ತೀಕ್ಷ್ಣವಾಗಿ ಖಂಡಿಸಿದನು. (ಮಲಾಕಿಯ 1:6-14) ಮತ್ತು ತಮ್ಮ ಪವಿತ್ರ ಸೇವೆಯ ಸಂಬಂಧದಲ್ಲಿ ನಾಜೀರರು ಸ್ವೀಕರಿಸಿದ್ದ ಜವಾಬ್ದಾರಿಗಳನ್ನು ಲಘುವಾಗಿ ಎಣಿಸುವಂತೆ ಕೆಲವು ಇಸ್ರಾಯೇಲ್ಯರು ಪ್ರಚೋದಿಸಿದಾಗ, ಆ ಪಾಪಿಗಳಾದ ಇಸ್ರಾಯೇಲ್ಯರನ್ನು ಯೆಹೋವನು ಗದರಿಸಿದನು. (ಆಮೋಸ 2:11-16) ನಿಜ ಕ್ರೈಸ್ತರು ಸಹ ಪವಿತ್ರ ಸೇವೆಯಲ್ಲಿ ಒಳಗೂಡುತ್ತಾರೆ ಮತ್ತು ಅದನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. (ರೋಮಾಪುರ 12:1) ಈ ಪವಿತ್ರ ಸೇವೆಗೆ ಅನೇಕ ಮುಖಗಳಿವೆ ಮತ್ತು ಅವುಗಳೆಲ್ಲ ಮಹತ್ವದ್ದಾಗಿವೆ.
ಯೇಸು ತನ್ನ ಹಿಂಬಾಲಕರೊಂದಿಗೆ ಇನ್ನೂ ಭೂಮಿಯಲ್ಲಿದ್ದಾಗ, ಅವನು ಅವರನ್ನು ದೇವರ ರಾಜ್ಯದ ಘೋಷಕರನ್ನಾಗಿ ತರಬೇತುಗೊಳಿಸಿದನು. ಸಕಾಲದಲ್ಲಿ, ಅವರ ಸಂದೇಶವು ಭೂಮಿಯ ಕಟ್ಟಕಡೆಯ ವರೆಗೂ ತಲಪಲಿತ್ತು. (ಮತ್ತಾಯ 28:19, 20; ಅ. ಕೃತ್ಯಗಳು 1:8) ಈ ಸಾರುವಿಕೆಯು ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯ ದಿನಗಳಲ್ಲಿ ಇನ್ನೂ ಹೆಚ್ಚು ಜರೂರಿಯದ್ದಾಗಿ ಪರಿಣಮಿಸಿದೆ.
ಈ ಕೆಲಸದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಾರೆ. ಪಯನೀಯರರಾಗಿ ಈ ಕಾರ್ಯವನ್ನು ಮಾಡಶಕ್ತರಾಗಿರುವುದರಲ್ಲಿ ಲಕ್ಷಾಂತರ ಮಂದಿ ಆನಂದವನ್ನು ಕಂಡುಕೊಳ್ಳುತ್ತಾರೆ. ಲೋಕವ್ಯಾಪಕ ಕೆಲಸದಲ್ಲಿ ಅತಿ ಮಹತ್ವದ ಅಗತ್ಯಗಳನ್ನು ಪೂರೈಸಲಿಕ್ಕಾಗಿ, ಸಾವಿರಾರು ಮಂದಿ ಬೆತೆಲಿನಲ್ಲಿ ಸರ್ಕಿಟ್ ಮತ್ತು ಜಿಲ್ಲಾ ಮೇಲ್ವಿಚಾರಕರೋಪಾದಿ ಸಂಚರಣ ಕಾರ್ಯದಲ್ಲಿ, ಅಥವಾ ಮಿಷನೆರಿ ಸೇವೆಯಲ್ಲಿ, ವಿಶೇಷ ಪೂರ್ಣಸಮಯದ ಸೇವೆಗಾಗಿ ತಮ್ಮನ್ನು ನೀಡಿಕೊಂಡಿದ್ದಾರೆ. ಅಂಥ ವಿಶೇಷ ಸೇವೆಯಲ್ಲಿ ಮುಂದುವರಿಯಲು ಇಷ್ಟಪಡುವವರ ವತಿಯಿಂದ ಇದು ಯಾವುದನ್ನು ಒಳಗೊಳ್ಳಬಹುದು?
ಕುಟುಂಬದಲ್ಲಿ ತುಂಬ ಮಹತ್ವದ ಅಗತ್ಯಗಳಿರುವಾಗ
ವಿಶೇಷ ಪೂರ್ಣಸಮಯದ ಸೇವೆಯನ್ನು ಆರಂಭಿಸುವ ಮುನ್ನ, ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ತನ್ನ ಪರಿಸ್ಥಿತಿಗಳಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕು. ಆದರೆ, ಪ್ರತಿಯೊಬ್ಬರೂ ಈ ರೀತಿ ಮಾಡಸಾಧ್ಯವಿಲ್ಲ. ಒಬ್ಬ ವ್ಯಕ್ತಿಗೆ ಈಗಾಗಲೇ ಇರುವ ಶಾಸ್ತ್ರೀಯ ಹಂಗುಗಳು ಅದನ್ನು ಅಸಾಧ್ಯವನ್ನಾಗಿ ಮಾಡಬಹುದು. ವೃದ್ಧ ಹೆತ್ತವರನ್ನು ಒಳಗೊಂಡಿರಬಹುದಾದ, ಅತಿ ಜರೂರಾದ ಕುಟುಂಬ ಅಗತ್ಯಗಳು ಈಗಾಗಲೇ ವಿಶೇಷ ಸೇವೆಯಲ್ಲಿರುವವರನ್ನು ಎದುರಾಗುವಾಗಲಾದರೊ ಏನು ಆಗುತ್ತದೆ? ಮುಂದೆ ಕೊಡಲ್ಪಟ್ಟಿರುವಂಥ ಬೈಬಲ್ ತತ್ವಗಳು ಮತ್ತು ಸಲಹೆಗಳು, ಬೇಕಾಗಿರುವ ಮಾರ್ಗದರ್ಶನವನ್ನು ನೀಡುತ್ತವೆ.
ನಮ್ಮ ಇಡೀ ಜೀವಿತವು ಯೆಹೋವನೊಂದಿಗಿರುವ ನಮ್ಮ ಸಂಬಂಧದ ಸುತ್ತಲೂ ಕಟ್ಟಲ್ಪಡಬೇಕು. (ಪ್ರಸಂಗಿ 12:13; ಮಾರ್ಕ 12:28-30) ನಮಗೆ ಒಪ್ಪಿಸಲ್ಪಟ್ಟಿರುವ ಪವಿತ್ರ ವಿಷಯಗಳು ಬಹಳ ಮಾನ್ಯವೆಂದೆಣಿಸಲ್ಪಡಬೇಕು. (ಲೂಕ 1:74, 75; ಇಬ್ರಿಯ 12:16) ಒಂದು ಸಂದರ್ಭದಲ್ಲಿ, ತನ್ನ ಆದ್ಯತೆಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದ್ದ ಒಬ್ಬ ಮನುಷ್ಯನಿಗೆ, ದೇವರ ರಾಜ್ಯವನ್ನು ಘೋಷಿಸುವುದರಲ್ಲಿ ಪೂರ್ಣವಾಗಿ ಒಳಗೂಡುವಂತೆ ಯೇಸು ಹೇಳಿದನು. ಸುವ್ಯಕ್ತವಾಗಿಯೇ, ತನ್ನ ತಂದೆಯು ಸಾಯುವವರೆಗೂ ಅಂಥ ಚಟುವಟಿಕೆಯನ್ನು ಆ ಮನುಷ್ಯನು ಮುಂದೂಡುವ ಸಂಕಲ್ಪವುಳ್ಳವನಾಗಿದ್ದನು. (ಲೂಕ 9:59, 60) ಮತ್ತೊಂದು ಕಡೆಯಲ್ಲಿ, ದೇವರಿಗೆ ಪ್ರತಿಯೊಂದನ್ನೂ ಸಮರ್ಪಿಸಿದ್ದೇವೆ ಎಂದು ಪ್ರತಿಪಾದಿಸಿ, “ತನ್ನ ತಂದೆ ಅಥವಾ ತಾಯಿಗೆ ಏನೊಂದನ್ನೂ” (NW) ಮಾಡದಿರುವವರ ತಪ್ಪಾಲೋಚನೆಯನ್ನು ಯೇಸು ಬಯಲುಪಡಿಸಿದನು. (ಮಾರ್ಕ 7:9-13) ಹೆತ್ತವರು ಮತ್ತು ಅಜ್ಜಅಜ್ಜಿಯಂದಿರನ್ನು ಒಳಗೊಂಡ ‘ಸ್ವಂತ ಜನರಿಗೆ’ ಒದಗಿಸುವ ಗಂಭೀರವಾದ ಜವಾಬ್ದಾರಿಯನ್ನು ಅಪೊಸ್ತಲ ಪೌಲನು ಸಹ ತೋರಿಸಿದನು.—1 ತಿಮೊಥೆಯ 5:3-8.
ಜರೂರಾದ ಅಗತ್ಯಗಳು ಏಳುವಾಗ ವಿಶೇಷ ಸೇವೆಯಲ್ಲಿರುವವರು ನೋಡಿಕೊಳ್ಳುವುದಕ್ಕಾಗಿ ತಮ್ಮ ನೇಮಕಗಳನ್ನು ಬಿಟ್ಟುಬಿಡಬೇಕು ಎಂಬುದನ್ನು ಇದು ಅರ್ಥೈಸುತ್ತದೋ? ಇದರ ಉತ್ತರವು ಅನೇಕ ಅಂಶಗಳ ಮೇಲೆ ಆಧಾರಿತವಾಗಿರುತ್ತದೆ. ನಿರ್ಣಯವು ವೈಯಕ್ತಿಕವಾದುದ್ದಾಗಿದೆ. (ಗಲಾತ್ಯ 6:5) ಹೀಗೆ ಅನೇಕರು ತಮ್ಮ ನೇಮಕವನ್ನು ಅಮೂಲ್ಯವೆಂದೆಣಿಸಿದರೂ, ತಮ್ಮ ಹೆತ್ತವರಿಗೆ ಅಗತ್ಯವಿರುವ ಸಹಾಯವನ್ನು ನೀಡಲಿಕ್ಕಾಗಿ ಅವರೊಂದಿಗಿರುವುದು ವಿವೇಕವುಳ್ಳದ್ದಾಗಿ ನೆನಸಿದ್ದಾರೆ. ಏಕೆ? ಅಗತ್ಯವು ತುಂಬ ತುರ್ತಿನದ್ದಾಗಿದ್ದಿರಬಹುದು. ಸಹಾಯಮಾಡಸಾಧ್ಯವಿರುವ ಇತರ ಯಾವುದೇ ಕುಟುಂಬ ಸದಸ್ಯರು ಇಲ್ಲದಿದ್ದಿರಬಹುದು ಇಲ್ಲವೇ ಅಗತ್ಯವಿದ್ದ ವಿಷಯವನ್ನು ಮಾಡಲು ಸ್ಥಳಿಕ ಸಭೆಯು ಶಕ್ತವಾಗಿರದೇ ಇದ್ದಿರಬಹುದು. ಕೆಲವರು ಅಂಥ ಸಹಾಯವನ್ನು ನೀಡುತ್ತಾ ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೆ. ಇತರರು ಕುಟುಂಬ ಸನ್ನಿವೇಶವು ಸುಧಾರಿಸಿದ ಅನಂತರ ಪುನಃ ವಿಶೇಷ ಪೂರ್ಣಸಮಯ ಸೇವೆಯನ್ನು ಆರಂಭಿಸಲು ಶಕ್ತರಾಗಿದ್ದಾರೆ. ಆದರೂ, ಅನೇಕ ಸಂದರ್ಭಗಳಲ್ಲಿ ಸನ್ನಿವೇಶವನ್ನು ಇತರ ವಿಧಗಳಲ್ಲಿ ನಿರ್ವಹಿಸಲು ಸಾಧ್ಯವಾಗಿದೆ.
ತಮ್ಮ ಜವಾಬ್ದಾರಿಯನ್ನು ಹೊರುವುದು
ತುಂಬ ಮಹತ್ವದ ಅಗತ್ಯಗಳು ಎದ್ದಿರುವಾಗ, ವಿಶೇಷ ಪೂರ್ಣಸಮಯದ ಸೇವೆಯಲ್ಲಿರುವ ಕೆಲವರು ತಮ್ಮ ನೇಮಕಗಳನ್ನು ಬಿಡದೆ ಆ ಅಗತ್ಯಗಳಿಗೆ ಗಮನವನ್ನು ಕೊಡಶಕ್ತರಾಗಿದ್ದಾರೆ. ಅನೇಕ ಉದಾಹರಣೆಗಳಲ್ಲಿ ಕೆಲವೊಂದನ್ನು ಪರಿಗಣಿಸಿರಿ.
ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ದಂಪತಿಗಳು, ಸರ್ಕಿಟ್ ಮತ್ತು ಜಿಲ್ಲಾ ಕೆಲಸದಲ್ಲಿ ಪಾಲ್ಗೊಂಡ ಅನಂತರ, 1978ರಲ್ಲಿ ಬೆತೆಲ್ ಸೇವೆಯನ್ನು ಪ್ರವೇಶಿಸಿದರು. ಆ ಸಹೋದರನ ನೇಮಕವು, ದೇವಪ್ರಭುತ್ವ ಸಂಸ್ಥೆಯಲ್ಲಿ ಜವಾಬ್ದಾರಿಯ ಹೆಚ್ಚಿನ ಹೊರೆಯನ್ನು ಒಳಗೊಳ್ಳುತ್ತದೆ. ಆದರೆ ಅವನ ಹೆತ್ತವರಿಗೂ ಸಹಾಯದ ಅಗತ್ಯವಿತ್ತು. ಈ ಬೆತೆಲ್ ದಂಪತಿಗಳು ಹೆತ್ತವರನ್ನು ನೋಡಿಕೊಳ್ಳುವುದಕ್ಕಾಗಿ, ಪ್ರತಿ ವರ್ಷ ಮೂರು ಅಥವಾ ನಾಲ್ಕು ಭೇಟಿಗಳನ್ನು—ಹೋಗಿ ಬರಲು ಸುಮಾರು 3,500 ಕಿಲೋಮೀಟರ್ ದೂರದ ಪ್ರಯಾಣವನ್ನು—ಮಾಡಿದ್ದಾರೆ. ಹೆತ್ತವರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಅವರೇ ಸ್ವತಃ ಮನೆಯೊಂದನ್ನು ಕಟ್ಟಿದರು. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನೋಡಿಕೊಳ್ಳಲಿಕ್ಕಾಗಿ ಅನೇಕ ಸಲ ಹೋಗಬೇಕಾಯಿತು. ಸುಮಾರು 20 ವರ್ಷಗಳ ವರೆಗೆ ಅವರು ಕಾರ್ಯತಃ ತಮ್ಮ ಎಲ್ಲ ರಜೆಯನ್ನು ಈ ಜವಾಬ್ದಾರಿಯನ್ನು ಪರಾಮರಿಸಲಿಕ್ಕಾಗಿ ಉಪಯೋಗಿಸಿದ್ದಾರೆ. ಅವರು ಹೆತ್ತವರನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ, ಆದರೆ ಅವರು ಪವಿತ್ರ ಸೇವೆಯ ತಮ್ಮ ಸುಯೋಗಗಳನ್ನು ಸಹ ಅಮೂಲ್ಯವೆಂದೆಣಿಸುತ್ತಾರೆ.
ಮತ್ತೊಬ್ಬ ಸಹೋದರನು ಸುಮಾರು 36 ವರ್ಷಗಳ ವರೆಗೆ ಸಂಚರಣ ಕೆಲಸದಲ್ಲಿದ್ದನು. ಆಗ ಅವನು ಏನನ್ನು ಎದುರಿಸಿದನೋ ಅದನ್ನು ಅವನು ತನ್ನ ಜೀವಿತದಲ್ಲಿ ಅತ್ಯಂತ ಪಂಥಾಹ್ವಾನದಾಯಕ ಪರಿಸ್ಥಿತಿಗಳಲ್ಲಿ ಒಂದೆಂದು ವರ್ಣಿಸುತ್ತಾನೆ. ಯೆಹೋವನ ಒಬ್ಬ ನಂಬಿಗಸ್ತ ಸೇವಕಿಯಾದ ಅವನ 85 ವರ್ಷ ಪ್ರಾಯದ ಅತ್ತೆಗೆ ಸಹಾಯಮಾಡಸಾಧ್ಯವಿರುವ ಯಾರಾದರೊಬ್ಬರೊಡನೆ ವಾಸಿಸುವ ಅಗತ್ಯವಿತ್ತು. ಆಗ, ಅವರ ಮಕ್ಕಳಲ್ಲಿ ಹೆಚ್ಚಿನವರು ಅವರು ತಮ್ಮೊಂದಿಗೆ ಇರುವುದಾದರೆ ಅನುಕೂಲಕರವಾಗಿರುವುದಿಲ್ಲ ಎಂದು ಭಾವಿಸಿದರು. ಆ ಸಂಚರಣ ಮೇಲ್ವಿಚಾರಕನು ಮತ್ತು ಅವನ ಹೆಂಡತಿ, ತಾಯಿಯನ್ನು ನೋಡಿಕೊಳ್ಳಲು, ಆ ಸೇವೆಯನ್ನು ಬಿಡಲೇಬೇಕೆಂದು, ಸಂಬಂಧಿಕರಲ್ಲಿ ಒಬ್ಬನು ಕುಟುಂಬದ ಪರವಾಗಿ ಹೇಳಿದನು. ಆದರೆ ಆ ದಂಪತಿಗಳು ತಮ್ಮ ಅತ್ಯಮೂಲ್ಯವಾದ ಸೇವೆಯನ್ನು ಬಿಟ್ಟುಕೊಡಲಿಲ್ಲ ಮತ್ತು ಅವರು ತಾಯಿಯ ಅಗತ್ಯಗಳನ್ನು ಲಘುವಾಗಿ ಎಣಿಸಲಿಲ್ಲ. ಮುಂದಿನ ಒಂಬತ್ತು ವರ್ಷಗಳ ತನಕ ತಾಯಿಯು ಹೆಚ್ಚಿನ ಸಮಯ ಅವರೊಂದಿಗಿದ್ದರು. ಮೊದಮೊದಲು ಅವರು ಮೊಬೈಲ್ ಮನೆಯಲ್ಲಿ ವಾಸಿಸಿದರು, ಅನಂತರ ಸರ್ಕಿಟ್ಗಳಿಂದ ಒದಗಿಸಲ್ಪಟ್ಟ ಹಲವಾರು ಅಪಾರ್ಟ್ಮೆಂಟ್ಗಳಲ್ಲಿ ವಾಸಿಸಿದರು. ಆಗ ಜಿಲ್ಲಾ ಮೇಲ್ವಿಚಾರಕನಾಗಿದ್ದ ಆ ಸಹೋದರನು ತನ್ನ ನೇಮಕಗಳನ್ನು ನೋಡಿಕೊಳ್ಳುವುದಕ್ಕಾಗಿ ದೀರ್ಘ ಸಮಯಾವಧಿಗಳ ವರೆಗೆ ಪ್ರಯಾಣಿಸುತ್ತಾ ಇದ್ದನು. ಅದೇ ಸಮಯದಲ್ಲಿ ಅವನ ಹೆಂಡತಿಯು ಪ್ರೀತಿಪರ ಪೂರ್ಣ ಸಮಯದ ಆರೈಕೆಯನ್ನು ನೀಡಲು ತನ್ನ ತಾಯಿಯೊಂದಿಗೆ ಉಳಿದಳು. ಪ್ರತಿ ಭಾನುವಾರದ ಕೂಟಗಳ ಅನಂತರ, ಅವರಿಗೆ ಸಹಾಯಮಾಡುವುದಕ್ಕಾಗಿ ಹಿಂದಿರುಗಿ ಬರಲು ಪತಿಯು ದೀರ್ಘ ಪ್ರಯಾಣಗಳನ್ನು ಮಾಡಿದನು. ಈ ಪರಿಸ್ಥಿತಿಯ ಕುರಿತು ತಿಳಿದಿದ್ದ ಅನೇಕ ಮಂದಿ, ಈ ದಂಪತಿಗಳು ಏನು ಮಾಡುತ್ತಿದ್ದರೋ ಅದಕ್ಕಾಗಿ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸಿದರು. ಸಕಾಲದಲ್ಲಿ, ಕುಟುಂಬದ ಇತರ ಸದಸ್ಯರು ಅಲ್ಪಸ್ವಲ್ಪ ಸಹಾಯವನ್ನು ಮಾಡಲು ಸಹ ಪ್ರಚೋದಿಸಲ್ಪಟ್ಟರು. ಆ ಸ್ವತ್ಯಾಗಿ ದಂಪತಿಗಳು ತಮ್ಮ ವಿಶೇಷ ಪೂರ್ಣಸಮಯದ ಸೇವೆಯ ಸುಯೋಗವನ್ನು ಬಿಗಿಯಾಗಿ ಹಿಡಿದುಕೊಂಡದ್ದರಿಂದ, ಅವರ ಸೇವೆಯಿಂದ ಸಾವಿರಾರು ಯೆಹೋವನ ಸಾಕ್ಷಿಗಳು ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಇದ್ದಾರೆ.
ಕುಟುಂಬ ಸಹಕಾರದೊಂದಿಗೆ
ವಿಶೇಷ ಪೂರ್ಣಸಮಯದ ಸೇವೆಯ ಮೌಲ್ಯವನ್ನು ಕುಟುಂಬದ ವಿವಿಧ ಸದಸ್ಯರು ಗಣ್ಯಮಾಡುವಾಗ, ಅವರಲ್ಲಿ ಕಡಿಮೆಪಕ್ಷ ಕೆಲವರಾದರೂ ಅದರಲ್ಲಿ ಪಾಲ್ಗೊಳ್ಳಸಾಧ್ಯವಾಗುವಂತೆ ಅವರು ಸಹಕರಿಸಬಹುದು.
ಕುಟುಂಬ ಸಹಕಾರದ ಅಂಥ ಒಂದು ಮನೋಭಾವವು ಪಶ್ಚಿಮ ಆಫ್ರಿಕದಲ್ಲಿ ಮಿಷನೆರಿಗಳಾಗಿ ಕೆಲಸಮಾಡುವ ಒಬ್ಬ ಕೆನಡದ ದಂಪತಿಗಳಿಗೆ ಸಹಾಯಕಾರಿಯಾಗಿದೆ. ಏನೂ ಆಗುವುದಿಲ್ಲವೆಂದು ಸುಮ್ಮನೆ ಆಶಿಸುತ್ತಾ, ಅವರು ಒಂದು ತುರ್ತು ಪರಿಸ್ಥಿತಿಯು ಏಳುವ ವರೆಗೆ ಕಾಯಲಿಲ್ಲ. ವಿದೇಶ ಸೇವೆಗಾಗಿ ತಯಾರಿಯಲ್ಲಿ ಅವರು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಹೋಗುವ ಮುನ್ನ, ಒಂದು ಪಕ್ಷ ತಾಯಿಗೆ ಅನಾರೋಗ್ಯವಾದರೆ ಅಥವಾ ಅಶಕ್ತರಾದರೆ, ಅವರನ್ನು ನೋಡಿಕೊಳ್ಳುವ ವಿಷಯದಲ್ಲಿ ಪತಿಯು ತನ್ನ ತಮ್ಮನೊಂದಿಗೆ ಚರ್ಚಿಸಿದನು. ಅವರ ತಾಯಿಗೆ ಪ್ರೀತಿಯನ್ನು ತೋರಿಸುತ್ತಾ ಮತ್ತು ಮಿಷನೆರಿ ಕೆಲಸದ ಮೌಲ್ಯಕ್ಕಾಗಿ ಗಣ್ಯತೆಯನ್ನು ತೋರಿಸುತ್ತಾ, ಆ ತಮ್ಮನು ಹೇಳಿದ್ದು: “ನನಗೆ ಈಗ ಕುಟುಂಬ ಮತ್ತು ಮಕ್ಕಳಿವೆ. ನಾನು ತುಂಬ ದೂರ ಹೋಗಿ, ನೀವು ಮಾಡಸಾಧ್ಯವಿರುವ ವಿಷಯಗಳನ್ನು ಮಾಡಸಾಧ್ಯವಿಲ್ಲ. ಆದುದರಿಂದ ಅಮ್ಮನಿಗೆ ಏನಾದರೂ ಆದರೆ ನಾನು ಅವರನ್ನು ನೋಡಿಕೊಳ್ಳುತ್ತೇನೆ.”
ದಕ್ಷಿಣ ಅಮೆರಿಕದಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ದಂಪತಿಗಳಿಗೆ ಹೆಂಡತಿಯ ಕಡೆಯ ಕುಟುಂಬದಿಂದ ಅವಳ ವೃದ್ಧರಾಗುತ್ತಿರುವ ತಾಯಿಯನ್ನು ನೋಡಿಕೊಳ್ಳುವುದಕ್ಕಾಗಿ ತುಂಬ ಸಹಕಾರವು ದೊರೆಯಿತು. ಅವಳ ಅಕ್ಕಂದಿರಲ್ಲಿ ಒಬ್ಬಳು ಮತ್ತು ಅವಳ ಪತಿಯು ತಾಯಿಯ ಶುಶ್ರೂಷೆಯನ್ನು, ಆ ಅಕ್ಕಳು ಮಾರಕ ರೋಗಕ್ಕೆ ತುತ್ತಾಗುವ ತನಕ ಮಾಡಿದರು. ಮುಂದೇನಾಯಿತು? ಚಿಂತೆಯನ್ನು ತಗ್ಗಿಸಲು, ಆ ಭಾವನು ಬರೆದುದು: “ನಾನು ಮತ್ತು ಮಕ್ಕಳು ಜೀವಂತವಿರುವ ತನಕವೂ ನೀವು ನಿಮ್ಮ ಮಿಷೆನೆರಿ ಸೇವೆಯನ್ನು ಎಂದೂ ಬಿಡಬೇಕಾದುದಿಲ್ಲ.” ಮುಂದೆ ಮತ್ತೊಬ್ಬ ತಂಗಿಯು ಮತ್ತು ಅವಳ ಪತಿಯು ತಮ್ಮ ಮನೆಯನ್ನು ಬಿಟ್ಟು, ತಾಯಿಯನ್ನು ನೋಡಿಕೊಳ್ಳುವ ಸಲುವಾಗಿ ಅವರು ವಾಸಿಸುವ ಸ್ಥಳಕ್ಕೆ ಹೋಗುವ ಮೂಲಕ ಸಹಾಯಮಾಡಿದರು. ಮತ್ತು ಅವರು ಅಲ್ಲಿ ತಾಯಿಯು ಸಾಯುವ ತನಕವೂ ಇದ್ದರು. ಸಹಕಾರದ ಎಂಥ ಒಂದು ಉತ್ತಮ ಮನೋಭಾವ! ಅವರೆಲ್ಲರೂ ಮಿಷೆನೆರಿ ಸೇವೆಯನ್ನು ಬೆಂಬಲಿಸಲು ಸಹಾಯಮಾಡುತ್ತಿದ್ದರು.
ಯೆಹೋವನಿಗೆ ಉದಾರವಾಗಿ ನೀಡುವ ಹೆತ್ತವರು
ಪವಿತ್ರ ಸೇವೆಗಾಗಿರುವ ಗಮನಾರ್ಹವಾದ ಗಣ್ಯತೆಯು ಅನೇಕವೇಳೆ ಹೆತ್ತವರಿಂದ ತೋರಿಸಲ್ಪಡುತ್ತದೆ. ಯೆಹೋವನನ್ನು ಗೌರವಿಸಸಾಧ್ಯವಿರುವ ಅವರ ಸ್ವತ್ತುಗಳಲ್ಲಿ ಅತ್ಯಂತ ಅಮೂಲ್ಯವಾದದ್ದು ಅವರ ಸ್ವಂತ ಮಕ್ಕಳೇ ಆಗಿದ್ದಾರೆ. (ಜ್ಞಾನೋಕ್ತಿ 3:9) ಅನೇಕ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ಪೂರ್ಣಸಮಯದ ಸೇವೆಯನ್ನು ಆರಂಭಿಸುವಂತೆ ಪ್ರೋತ್ಸಾಹಿಸುತ್ತಾರೆ. ಮತ್ತು ಅವರಲ್ಲಿ ಕೆಲವರಿಗೆ ಹನ್ನಳಂತೆ ಅನಿಸುತ್ತದೆ. ಅವಳು ತನ್ನ ಪುತ್ರನಾದ ಸಮುವೇಲನನ್ನು ಯೆಹೋವನ ಸೇವೆಗಾಗಿ, “ಯಾವಾಗಲೂ ಅಲ್ಲಿಯೇ ಇರುವ ಹಾಗೆ” ಅಂದರೆ, “ಜೀವದಿಂದರುವ ತನಕ” ಇರುವಂತೆ ಒಪ್ಪಿಸಿದಳು.—1 ಸಮುವೇಲ 1:22, 28.
ಆಫ್ರಿಕದಲ್ಲಿರುವ ತನ್ನ ಮಗಳಿಗೆ ಅಂಥ ಹೆತ್ತವಳು ಬರೆದುದು: “ನಿನಗಿರುವ ಅದ್ಭುತಕರವಾದ ಸುಯೋಗಕ್ಕಾಗಿ ನಾವು ಯೆಹೋವನಿಗೆ ಉಪಕಾರವನ್ನು ಹೇಳುತ್ತೇವೆ. ನಾವು ಇದಕ್ಕಿಂತ ಹೆಚ್ಚು ಒಳ್ಳೆಯದಾದ ಇನ್ನೇನನ್ನೂ ಆಶಿಸಸಾಧ್ಯವಿಲ್ಲ.” ಮತ್ತೊಂದು ಸಂದರ್ಭದಲ್ಲಿ ಅವರು ಹೇಳಿದ್ದು: “ದೂರ ದೂರವಾಗಿರುವ ಮೂಲಕ ನಾವು ತ್ಯಾಗವನ್ನು ಮಾಡಬೇಕೇ ನಿಜ, ಆದರೆ ನಿನ್ನ ಬಗ್ಗೆ ಯೆಹೋವನು ಹೇಗೆ ಕಾಳಜಿವಹಿಸುತ್ತಾನೆ ಎಂಬುದನ್ನು ನೋಡುವುದು ಎಂಥ ಒಂದು ಆನಂದದಾಯಕ ವಿಷಯ!”
ತನ್ನ ವೃದ್ಧ ಹೆತ್ತವರನ್ನು ನೋಡಿಕೊಳ್ಳುವುದಕ್ಕಾಗಿ ಅಗತ್ಯವಿದ್ದುದನ್ನು ಒದಗಿಸುವುದರಲ್ಲಿ ಎದ್ದಿದ್ದ ಹಲವಾರು ಪರಿಸ್ಥಿತಿಗಳನ್ನು ಪುನರ್ವಿಮರ್ಶಿಸಿದ ಅನಂತರ, ಈಕ್ವಡಾರ್ನಲ್ಲಿರುವ ಒಬ್ಬ ಮಿಷೆನೆರಿಯು ಬರೆದುದು: “ನನ್ನ ಹೆಂಡತಿ ಮತ್ತು ನಾನು ಪಡೆದುಕೊಂಡಿರಬಹುದಾದ ಅತಿ ಹೆಚ್ಚಿನ ಸಹಾಯವೆಂದರೆ ನನ್ನ ತಂದೆಯ ಪ್ರಾರ್ಥನೆಗಳೇ ಎಂದು ನಾನು ನೆನಸುತ್ತೇನೆ. ಅವರ ಮರಣದ ಅನಂತರ ನನ್ನ ತಾಯಿಯು ನಮಗೆ ಹೇಳಿದ್ದು: ‘ನೀವಿಬ್ಬರೂ ನಿಮ್ಮ ನೇಮಕದಲ್ಲಿ ಉಳಿಯುವಂತೆ ಯೆಹೋವನು ಅನುಮತಿಸಲಿ ಎಂದು ನಿನ್ನ ತಂದೆಯು ಪ್ರಾರ್ಥನೆ ಮಾಡದ ದಿನವೇ ಇರಲಿಲ್ಲ.’”
ಅಮೆರಿಕದ ಕ್ಯಾಲಿಫೊರ್ನಿಯದಲ್ಲಿರುವ ಒಬ್ಬ ವೃದ್ಧ ದಂಪತಿಗಳು ತಮ್ಮ ಪುತ್ರರಲ್ಲಿ ಒಬ್ಬನು ಪೂರ್ಣಸಮಯದ ಸೇವೆಯಲ್ಲಿರುವುದಕ್ಕೆ ಸಂತೋಷಿಸಿದರು. ತಾಯಿಯು ತೀರಿಕೊಂಡಾಗ ಆ ಪುತ್ರನು ಮತ್ತು ಅವನ ಹೆಂಡತಿಯು ಸ್ಪೆಯ್ನ್ನಲ್ಲಿದ್ದರು. ತಂದೆಯನ್ನು ನೋಡಿಕೊಳ್ಳುವದಕ್ಕಾಗಿ ಏರ್ಪಾಡುಗಳನ್ನು ಮಾಡಬೇಕೆಂದು ಕುಟುಂಬದ ಇತರ ಸದಸ್ಯರು ನೆನಸಿದರು. ಏಕೆಂದರೆ ಅವರು ಐಹಿಕ ಕೆಲಸದಲ್ಲಿ ಮತ್ತು ತಮ್ಮ ಮಕ್ಕಳನ್ನು ಬೆಳೆಸುವುದರಲ್ಲಿ ಕಾರ್ಯನಿರತರಾಗಿದ್ದರು. ಅವರು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಸಾಧ್ಯವಿಲ್ಲವೆಂದು ಭಾವಿಸಿದರು. ಅದಕ್ಕೆ ಬದಲಾಗಿ, ವಿಶೇಷ ಪೂರ್ಣಸಮಯದ ಸೇವೆಯಲ್ಲಿದ್ದ ಆ ದಂಪತಿಗಳು ಮನೆಗೆ ಹಿಂದಿರುಗಿ, ತಂದೆಯನ್ನು ನೋಡಿಕೊಳ್ಳುವಂತೆ ಅವರು ಬಲವಾಗಿ ಪ್ರಚೋದಿಸಿದರು. ಆದರೆ ಆ ತಂದೆಯು 79 ವರ್ಷ ಪ್ರಾಯದವರಾಗಿದ್ದರೂ ಇನ್ನೂ ಒಳ್ಳೆಯ ಆರೋಗ್ಯದಲ್ಲಿದ್ದರು ಮತ್ತು ಅವರಿಗೆ ಸ್ಪಷ್ಟವಾದ ಆತ್ಮಿಕ ದೂರದೃಷ್ಟಿಯು ಸಹ ಇತ್ತು. ಕುಟುಂಬದೊಂದಿಗೆ ಚರ್ಚಿಸುವಾಗ, ಅನೇಕ ಮಂದಿ ತಮ್ಮ ಅಭಿಪ್ರಾಯವನ್ನು ಹೇಳಿದ ಮೇಲೆ, ಆ ತಂದೆಯು ಎದ್ದುನಿಂತುಕೊಂಡು, ದೃಢವಾಗಿ ಹೇಳಿದ್ದು: “ಅವರು ಸ್ಪೆಯ್ನ್ಗೆ ಹಿಂದಿರುಗಿ, ಕೆಲಸವನ್ನು ಮುಂದುವರಿಸುವುದನ್ನು ನಾನು ಬಯಸುತ್ತೇನೆ.” ಅವರು ಹಾಗೆಯೇ ಮಾಡಿದರು ಆದರೆ ಅವರು ತಂದೆಗೆ ಉಪಯುಕ್ತ ವಿಧಗಳಲ್ಲಿ ಸಹಾಯವನ್ನು ಸಹ ಮಾಡಿದರು. ಅವರ ಪ್ರಸ್ತುತ ನೇಮಕವು ಸ್ಪೆಯ್ನ್ನಲ್ಲಿ ಸರ್ಕಿಟ್ ಕೆಲಸವಾಗಿದೆ. ಆ ಕುಟುಂಬ ಚರ್ಚೆಯ ಸಮಯದಂದಿನಿಂದ ವಿದೇಶಿ ಸೇವೆಯಲ್ಲಿ ಆ ದಂಪತಿಗಳು ಏನು ಮಾಡುತ್ತಿದ್ದಾರೋ ಅದಕ್ಕೆ ಕುಟುಂಬದ ಇತರ ಸದಸ್ಯರು ಗಣ್ಯತೆಯನ್ನು ತೋರಿಸಿದ್ದಾರೆ. ಅನೇಕ ವರ್ಷಗಳ ಅನಂತರ, ಅವರಲ್ಲಿ ಇನ್ನೊಬ್ಬ ಪುತ್ರನು, ತಂದೆಯು ಸಾಯುವ ತನಕ ಅವರನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡನು.
ಅಮೆರಿಕದ ಪೆನ್ಸಿಲ್ವೇನಿಯದಲ್ಲಿ ಸುಮಾರು 40 ವರ್ಷಗಳಿಂದ ಪಯನೀಯರ್ ಸೇವೆಯನ್ನು ಮಾಡಿದ್ದ ಒಬ್ಬ ಅಭಿಷಿಕ್ತ ಸಹೋದರನ ಹೆಂಡತಿಯು ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ, ಸತ್ತುಹೋದಾಗ, ಅವರಿಗೆ 90ಕ್ಕಿಂತಲೂ ಹೆಚ್ಚು ವರ್ಷ ಪ್ರಾಯವಾಗಿತ್ತು. ಅವರಿಗೆ ಆಗ ಜೀವಿಸುತ್ತಿದ್ದ ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರಿದ್ದರು. ಅದರ ಜೊತೆಗೆ ಅವರಿಗೆ ಅನೇಕ ಆತ್ಮಿಕ ಮಕ್ಕಳಿದ್ದರು. ಅವರ ಪುತ್ರಿಯರಲ್ಲಿ ಒಬ್ಬಳು 40ಕ್ಕಿಂತಲೂ ಹೆಚ್ಚಿನ ವರ್ಷಗಳ ವರೆಗೆ ಪೂರ್ಣಸಮಯದ ಸೇವೆಯಲ್ಲಿದ್ದಳು. ಅವಳು ತನ್ನ ಪತಿಯೊಂದಿಗೆ ಮಿಷೆನೆರಿಯಾಗಿ, ಸಂಚರಣ ಕೆಲಸದಲ್ಲಿ ಮತ್ತು ಬೆತೆಲಿನಲ್ಲಿ ಕಾರ್ಯಸಲ್ಲಿಸಿದಳು. ಅವಳು ತನ್ನ ತಂದೆಗೆ ತಕ್ಕ ಶುಶ್ರೂಷೆಯನ್ನು ನೀಡಲಾಗುವಂತೆ ಏರ್ಪಾಡುಗಳನ್ನು ಮಾಡಲು ಸಹಾಯಮಾಡಿದಳು. ಅವರನ್ನು ರಾಜ್ಯ ಸಭಾಗೃಹದಲ್ಲಿ ನಡೆಯುವ ಕೂಟಗಳಿಗೆ ಕರೆದುಕೊಂಡು ಹೋಗಲು ಸಹ ಸ್ಥಳಿಕ ಸಹೋದರರು ಸಹಾಯಮಾಡಿದರು. ಅನಂತರ ತನ್ನ ಪತಿಯು ಸತ್ತುಹೋದಾಗ, ಅವಳು ತನ್ನ ತಂದೆಗೆ ಅವರನ್ನು ನೋಡಿಕೊಳ್ಳುವ ಸಲುವಾಗಿ ತಾನು ಬೆತೆಲನ್ನು ಬಿಡುವುದು ಇಷ್ಟವೋ ಎಂದು ಕೇಳಿದಳು. ಅವರು ಪವಿತ್ರ ವಿಷಯಗಳನ್ನು ಉಚ್ಚಮಟ್ಟದಿಂದ ನೋಡುತ್ತಾರೆ ಮತ್ತು ಅವರು ತಮ್ಮ ಅಗತ್ಯಗಳು ಇತರ ವಿಧಗಳಲ್ಲಿ ಪರಾಮರಿಸಲ್ಪಡಸಾಧ್ಯವಿದೆ ಎಂದು ಭಾವಿಸಿದರು. ಆದುದರಿಂದ ಅವರು ಉತ್ತರಿಸಿದ್ದು: “ನೀನು ಮಾಡಸಾಧ್ಯವಿರುವ ಅತಿ ಕೀಳ್ಮಟ್ಟದ ವಿಷಯವು ಅದಾಗಿರುವುದು, ಮತ್ತು ನೀನು ಹಾಗೆ ಮಾಡುವಂತೆ ನಾನು ಅನುಮತಿಸುವಲ್ಲಿ ಅದು ಇನ್ನೂ ತೀರ ಕೆಟ್ಟದ್ದಾಗಿರುವುದು.”
ಬೆಂಬಲಿಸುವ ಸಭೆಗಳು
ವಿಶೇಷ ಪೂರ್ಣಸಮಯದ ಸೇವೆಯಲ್ಲಿರುವವರ ವೃದ್ಧ ಹೆತ್ತವರಿಗಾಗಿ ಆರೈಕೆ ಮಾಡುವುದರಲ್ಲಿ ಕೆಲವು ಸಭೆಗಳು ತುಂಬ ಸಹಾಯ ಮಾಡಿವೆ. ಅಂಥ ಸೇವೆಗಾಗಿ ಅನೇಕ ವರ್ಷಗಳಿಂದ ಮುಡಿಪಾಗಿಟ್ಟುಕೊಂಡಿರುವವರನ್ನು ಅವರು ವಿಶೇಷವಾಗಿ ಗಣ್ಯಮಾಡುತ್ತಾರೆ. ಅವರ ಶಾಸ್ತ್ರೀಯ ಜವಾಬ್ದಾರಿಗಳಿಂದ ಅವರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲವಾದರೂ, ಮಕ್ಕಳು ತಮ್ಮ ವಿಶೇಷ ನೇಮಕಗಳನ್ನು ಬಿಟ್ಟುಬಿಡುವ ಅಗತ್ಯವಾಗದಂತೆ, ಈ ಸಭೆಗಳು ಸಾಕಷ್ಟು ಹೊರೆಯನ್ನು ಹಗುರಗೊಳಿಸಲು ಹೆಚ್ಚನ್ನು ಮಾಡುತ್ತವೆ.
ಜರ್ಮನಿಯಲ್ಲಿರುವ ಒಬ್ಬ ದಂಪತಿಗಳು ತಮ್ಮ ವಿದೇಶಿ ನೇಮಕದಲ್ಲಿ ಸುಮಾರು 17 ವರ್ಷಗಳ ವರೆಗೆ ಬಹುಪಾಲು ಸಮಯವನ್ನು ಸಂಚರಣ ಕೆಲಸದಲ್ಲಿ ಕಳೆದರು. ಆಗ ಅವನ ವೃದ್ಧ ತಾಯಿಯ ಅಗತ್ಯಗಳು ಹೆಚ್ಚಾದವು. ಅವರು ಪ್ರತಿ ವರ್ಷ ತಮ್ಮ ರಜೆಯನ್ನು ಅವರಿಗೆ ಸಹಾಯಮಾಡಲಿಕ್ಕಾಗಿ ಉಪಯೋಗಿಸಿದರು. ಸಾಕ್ಷಿ ನೆರೆಹೊರೆಯವರು ಸಹ ಪ್ರೀತಿಪರ ನೆರವನ್ನು ಒದಗಿಸಿದರು. ಅನಂತರ ಒಂದು ನಿರ್ಣಾಯಕ ಅವಧಿಯಲ್ಲಿ ಪೂರ್ಣಸಮಯದ ಸೇವೆಯಲ್ಲಿರುವ ಆ ದಂಪತಿಗಳು ತಾಯಿಯೊಂದಿಗಿದ್ದಾಗ, ಅವರನ್ನು ಸಂಧಿಸಲು ಸ್ಥಳಿಕ ಸಭೆಯ ಹಿರಿಯರು ಏರ್ಪಾಡು ಮಾಡಿದರು. ಆ ದಂಪತಿಗಳು ತಾಯಿಯ ಶುಶ್ರೂಷೆಯನ್ನು ಕ್ರಮವಾಗಿ ಮಾಡುತ್ತಿದ್ದರು ಎಂಬುದರ ಕುರಿತಾಗಿ ಅವರಿಗೆ ಚೆನ್ನಾಗಿ ತಿಳಿದಿತ್ತು. ಆ ದಂಪತಿಗಳು ಪಾಲ್ಗೊಳ್ಳುತ್ತಿದ್ದ ಆ ವಿಶೇಷ ಸೇವೆಯ ಮೌಲ್ಯವನ್ನು ಸಹ ಅವರು ಗಣ್ಯಮಾಡಿದರು. ಆದುದರಿಂದ ತಾಯಿಯನ್ನು ನೋಡಿಕೊಳ್ಳಲು ಒಂದು ಯೋಜಿತ ಕಾರ್ಯಕ್ರಮವನ್ನು ಹಿರಿಯರು ರೇಖಿಸಿ, ಅನಂತರ ಹೇಳಿದ್ದು: “ನೀವು ಏನು ಮಾಡುತ್ತಿದ್ದೀರೋ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ನಿಮಗೆ ಅವರನ್ನು ನೋಡಿಕೊಳ್ಳಲು ಆಗುತ್ತಿಲ್ಲ, ಆದುದರಿಂದ ನಾವು ನಿಮಗೆ ಸಹಾಯಮಾಡುವೆವು, ಹೀಗೆ ನೀವು ಸ್ಪೆಯ್ನ್ನ ನಿಮ್ಮ ನೇಮಕದಲ್ಲಿ ಉಳಿಯಸಾಧ್ಯವಿದೆ.” ಕಳೆದ ಏಳು ವರ್ಷಗಳಿಂದ ಈ ಹಿರಿಯರು ಸಹಾಯಮಾಡುತ್ತಲೇ ಇದ್ದಾರೆ.
ತದ್ರೀತಿಯಲ್ಲಿ, 1967ರಿಂದ ಸೆನಿಗಲ್ನಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ಸಹೋದರನು ತನ್ನ ತಂದೆಯಿದ್ದ ಸ್ಥಳದಲ್ಲಿದ್ದ ಸಭೆಯಿಂದ ತುಂಬ ಪ್ರೀತಿಪರ ಬೆಂಬಲವನ್ನು ಪಡೆದುಕೊಂಡನು. ಬಿಕ್ಕಟ್ಟು ತಲೆದೋರಿದಾಗ, ಆ ಪತಿಯು ತನ್ನ ಪ್ರಿಯ ಹೆಂಡತಿಯ ಸಿದ್ಧಮನಸ್ಸಿನ ಸಹಕಾರದಿಂದ ತನ್ನ ಹೆತ್ತವರಿಗೆ ಸಹಾಯಮಾಡಲು ಒಬ್ಬನೇ ಅಮೆರಿಕಕ್ಕೆ ಪ್ರಯಾಣಿಸಿದನು. ಅಲ್ಲಿ ಅವನು ಹಲವಾರು ತಿಂಗಳುಗಳ ವರೆಗೆ ಉಳಿಯುವ ಅಗತ್ಯವನ್ನು ಕಂಡುಕೊಂಡನು. ಪರಿಸ್ಥಿತಿಯು ಬಹಳ ಕಷ್ಟಕರವಾಗಿತ್ತು. ಆದರೆ ತನ್ನ ಕೈಲಾದುದೆಲ್ಲವನ್ನೂ ಅವನು ಮಾಡಿದ್ದಾಗ, ಅವನು ತನ್ನ ಮಿಷೆನೆರಿ ಸೇವೆಯನ್ನು ಮುಂದುವರಿಸಲು ಶಕ್ತನಾಗುವಂತೆ ಸಭೆಯು ಮುಂದೆ ಬಂದು ಸಹಾಯಮಾಡಿತು. ಸುಮಾರು 18 ವರ್ಷಗಳ ಅವಧಿಯಲ್ಲಿ, ಎಣಿಸಲಾರದ ವಿಧಗಳಲ್ಲಿ ಸಭೆಯು ಪ್ರೀತಿಪರ ಸಹಾಯವನ್ನು ನೀಡಿತು. ಮೊದಲು ಅವನ ತಂದೆಗೆ (ಅವರಲ್ಲಿ ಅನೇಕರನ್ನು ಅವರು ಗುರುತಿಸಲಾರದವರಾಗಿದ್ದರು ಕೂಡ) ಮತ್ತು ಅನಂತರ ತಾಯಿಗೆ ಸಹಾಯಮಾಡಿದರು. ಅದು ಪುತ್ರನನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿತೋ? ಇಲ್ಲ, ಅವನು ಆಗಾಗ್ಗೆ ಸೆನಿಗಲ್ನಿಂದ ಪ್ರಯಾಣಿಸಿದನು ಮತ್ತು ತನ್ನ ಕೈಲಾದ ಸಹಾಯವನ್ನು ಮಾಡಲು ತನ್ನ ರಜೆಯನ್ನು ಉಪಯೋಗಿಸಿದನು. ಆದರೆ ಆ ಸಭೆಯಲ್ಲಿನ ಅನೇಕರು, ಸೆನಿಗಲ್ನಲ್ಲಿ ಶ್ರಮಪಟ್ಟು ದುಡಿಯುವ ಈ ದಂಪತಿಗಳನ್ನು ವಿಶೇಷ ಪೂರ್ಣಸಮಯದ ಸೇವೆಯಲ್ಲಿ ಮುಂದುವರಿಯುವಂತೆ ಮಾಡುವುದರಲ್ಲಿ ಪಾಲನ್ನು ಹೊಂದಿದ್ದರೆಂಬುದನ್ನು ತಿಳಿದುಕೊಳ್ಳುವುದರಲ್ಲಿ ಆನಂದಿಸಿದರು.
ಸುವಾರ್ತೆಯ ನಿಮಿತ್ತವಾಗಿ ಎಲ್ಲವನ್ನು ಬಿಟ್ಟುಬಂದವರಿಗೆ ನೂರುಪಟ್ಟು ಸಹೋದರರು, ಸಹೋದರಿಯರು, ತಾಯಂದಿರು ಮತ್ತು ಮಕ್ಕಳಿರುವರು ಎಂದು ಯೇಸು ಹೇಳಿದನು. (ಮಾರ್ಕ 10:29, 30) ಅದು ನಿಜವಾಗಿಯೂ ಯೆಹೋವನ ಸೇವಕರ ನಡುವೆಯೂ ಸತ್ಯವಾಗಿದೆ. ಈಗ ಪಶ್ಚಿಮ ಆಫ್ರಿಕದ ಬೆನಿನ್ನಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ದಂಪತಿಗಳು ಒಂದು ವಿಶೇಷವಾದ ವಿಧದಲ್ಲಿ ಇದನ್ನು ಅನುಭವಿಸಿದರು. ಅವರ ಹೆತ್ತವರ ಸಭೆಯಲ್ಲಿರುವ ಇಬ್ಬರು ಸಾಕ್ಷಿಗಳು ಅವರ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದು ಅವರಿಗೆ ಹೇಳಿದರು. ಅವರು ಕೂಡಿಸಿದ್ದು: “ನಿಮ್ಮ ಹೆತ್ತವರು ನಮ್ಮ ಹೆತ್ತವರೂ ಆಗಿದ್ದಾರೆ.”
ಹೌದು, ನಾವು ಪವಿತ್ರ ಸೇವೆಯ ಸುಯೋಗಗಳಿಗೆ ಉಚ್ಚಮಾನ್ಯತೆಯನ್ನು ಕೊಡುತ್ತೇವೆ ಎಂಬುದನ್ನು ತೋರಿಸಲಿಕ್ಕೆ ಅನೇಕ ವಿಧಗಳಿವೆ. ಇದನ್ನು ಇನ್ನೂ ಪೂರ್ಣವಾಗಿ ನೀವು ಮಾಡಸಾಧ್ಯವಿರುವ ಯಾವುದಾದರೂ ವಿಧಗಳಿವೆಯೋ?
[ಪುಟ 26 ರಲ್ಲಿರುವ ಚಿತ್ರ]
ಅವರು ವಿಶೇಷ ಪೂರ್ಣಸಮಯದ ಸೇವೆಗಾಗಿ ತಮ್ಮನ್ನು ನೀಡಿಕೊಂಡಿದ್ದಾರೆ