ವಾಚಕರಿಂದ ಪ್ರಶ್ನೆಗಳು
ಮತ್ತಾಯ 17:20ಕ್ಕನುಸಾರ, ‘ನಂಬಿಕೆ ಕಡಿಮೆಯಾಗಿರುವ ಕಾರಣ’ ಅಪೊಸ್ತಲರು ಒಬ್ಬ ಪೀಡಿತ ಹುಡುಗನನ್ನು ವಾಸಿಮಾಡಲು ಅಶಕ್ತರಾದರು. ಆದರೆ ಮಾರ್ಕ 9:29ರಲ್ಲಿ ಅವರ ಅಶಕ್ತತೆಯು ಪ್ರಾರ್ಥನೆಗಾಗಿರುವ ಅಗತ್ಯದೊಂದಿಗೆ ಹೆಣೆಯಲ್ಪಟ್ಟಿದೆ. ವ್ಯತ್ಯಾಸವಾದ ಸುವಾರ್ತಾ ದಾಖಲೆಗಳಲ್ಲಿ ಬೇರೆ ಬೇರೆ ಕಾರಣಗಳು ಏಕೆ ಕೊಡಲ್ಪಟ್ಟಿವೆ?
ವಾಸ್ತವವಾಗಿ, ಆ ಎರಡು ದಾಖಲೆಗಳು ವಿರೋಧೋಕ್ತಿಗಳಲ್ಲ, ಸಂಪೂರಕವಾಗಿವೆ. ಮೊದಲಾಗಿ, ಮತ್ತಾಯ 17:14-20ನ್ನು ನೋಡಿರಿ. ಒಬ್ಬ ಮನುಷ್ಯನು ತನ್ನ ಮಗನು ಒಬ್ಬ ಮೂರ್ಛೆರೋಗದವನಾಗಿದ್ದು, ಯೇಸುವಿನ ಶಿಷ್ಯರು ಆ ಹುಡುಗನನ್ನು ವಾಸಿಮಾಡಲಾಗಲಿಲ್ಲವೆಂದು ವರದಿಸಿದನು. ಅನಂತರ ಯೇಸು, ಅವನನ್ನು ಪೀಡಿಸುತ್ತಿದ್ದ ಒಂದು ದೆವ್ವವನ್ನು ಬಿಡಿಸುವ ಮೂಲಕ ಆ ಹುಡುಗನನ್ನು ವಾಸಿಮಾಡಿದನು. ಆ ಶಿಷ್ಯರು ಏಕೆ ತಮಗೆ ಆ ದೆವ್ವವನ್ನು ಬಿಡಿಸಲಾಗಲಿಲ್ಲವೆಂದು ಕೇಳಿದರು. ಮತ್ತಾಯನ ದಾಖಲೆಗನುಸಾರ, ಯೇಸು ಉತ್ತರಿಸಿದ್ದು: “ನಿಮ್ಮ ನಂಬಿಕೆ ಕಡಿಮೆಯಾಗಿರುವದರಿಂದಲೇ ಆಗಲಿಲ್ಲ; ನಿಮಗೆ ಸತ್ಯವಾಗಿ ಹೇಳುತ್ತೇನೆ, ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ—ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ.” (ಓರೆ ಅಕ್ಷರಗಳು ನಮ್ಮವು.)
ನಾವು ಇನ್ನೂ ಹೆಚ್ಚಿನ ವಿವರಗಳನ್ನು ಕಂಡುಕೊಳ್ಳುವ ಮಾರ್ಕ 9:14-29ಕ್ಕೆ ಈಗ ತಿರುಗಿಸಿರಿ. ಉದಾಹರಣೆಗೆ, ಈ ವಿಷಯದಲ್ಲಿ ಮೂರ್ಛೆರೋಗವು ದುಷ್ಟಾತ್ಮದಿಂದಾಗಿತ್ತು ಎಂಬ ವಿವರಣೆಯನ್ನು ಮಾರ್ಕ 9:17 ನೀಡುತ್ತದೆ. ಯೇಸು ಮೂರ್ಛೆರೋಗವನ್ನು ಮತ್ತು ದೆವ್ವಹಿಡಿದ ಜನರನ್ನು ವಾಸಿಮಾಡಿದನು ಎಂದು ಬೈಬಲಿನ ಬೇರೆಕಡೆಯಲ್ಲಿಯೂ ಇರುವ ಉಲ್ಲೇಖನವು ಗಮನಿಸಬೇಕಾದ ವಿಷಯವಾಗಿದೆ. (ಮತ್ತಾಯ 4:24) ಈ ಅಸಾಧಾರಣವಾದ ಪರಿಸ್ಥಿತಿಯಲ್ಲಿ, ಈ ರೋಗವು “ಮೂಗದೆವ್ವ”ದಿಂದ ಆಗಿತ್ತು, ಅಂದರೆ ವೈದ್ಯನಾದ ಲೂಕನು ದೃಢೀಕರಿಸುವಂತೆ ಅದು ಒಂದು ದುಷ್ಟಾತ್ಮವಾಗಿದೆ. (ಲೂಕ 9:38; ಕೊಲೊಸ್ಸೆ 4:14) ಮಾರ್ಕ 9:18ರಲ್ಲಿರುವ “ಅದು [ದೆವ್ವ] ಎಲ್ಲಿ ಅವನ ಮೇಲೆ ಬಂದರೂ” ಎಂಬ ವಾಕ್ಸರಣಿಯನ್ನು ಗಮನಿಸಿರಿ. ಆದುದರಿಂದ ಆ ಹುಡುಗನು ಆ ದೆವ್ವದಿಂದ ನಿರಂತರವಾಗಿ ಅಲ್ಲ; ಸಾಂದರ್ಭಿಕವಾಗಿ ಮಾತ್ರ ಪೀಡಿಸಲ್ಪಡುತ್ತಿದ್ದನು. ಆದರೂ ಶಿಷ್ಯರಿಗೆ ಆ ದೆವ್ವವನ್ನು ಬಿಡಿಸಿ, ಆ ಹುಡುಗನನ್ನು ವಾಸಿಮಾಡಲಾಗಲಿಲ್ಲ. ಅವರು ಏಕೆಂದು ಕೇಳಿದಾಗ ಯೇಸು ಉತ್ತರಿಸಿದ್ದು: “ಈ ಜಾತಿಯು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟು ಹೋಗುವದಿಲ್ಲ.”
ಮಾರ್ಕನ ದಾಖಲೆಯ ಜಾಗರೂಕವಾದ ಓದುವಿಕೆಯು, ಮತ್ತಾಯನ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ವಿಷಯದೊಂದಿಗೆ ಯಾವುದೇ ಅಸಂಗತೆಯಿರುವುದಿಲ್ಲವೆಂಬುದನ್ನು ತೋರಿಸುತ್ತದೆ. ಮಾರ್ಕ 9:19ರಲ್ಲಿ ಯೇಸು ಆ ಸಂತತಿಯ ಅಪನಂಬಿಗಸ್ತಿಕೆಯನ್ನು ನೋಡಿ ಮರುಗಿದನು ಎಂದು ನಾವು ಓದುತ್ತೇವೆ. ಮತ್ತು 23ನೇ ವಚನದಲ್ಲಿ, ಅವನು ಆ ಹುಡುಗನ ತಂದೆಗೆ ಹೀಗೆ ಹೇಳಿದ್ದು ದಾಖಲಿಸಲ್ಪಟ್ಟಿದೆ: “ಒಬ್ಬನಿಗೆ ನಂಬಿಕೆಯಿರುವಲ್ಲಿ ಎಲ್ಲ ವಿಷಯಗಳು ಶಕ್ಯವಾಗಿರುತ್ತವೆ” (NW). ಹೀಗೆ ಮಾರ್ಕನು ಸಹ ನಂಬಿಕೆಯ ಮಹತ್ತ್ವವನ್ನು ಒತ್ತಿಹೇಳುತ್ತಾನೆ. 29ನೇ ವಚನದಲ್ಲಿ ಮಾರ್ಕನು ಇನ್ನೂ ಹೆಚ್ಚಿನ ವಿವರಣೆಯನ್ನು ನೀಡುತ್ತಾನೆ ಅಷ್ಟೆ. ಮತ್ತಾಯನು ಇಲ್ಲವೇ ಲೂಕನು ಯಾವ ವಿಷಯವನ್ನು ಸೇರಿಸಲಿಲ್ಲವೋ ಆ ಪ್ರಾರ್ಥನೆಯ ಕುರಿತಾಗಿ ಯೇಸು ಹೇಳಿದಂಥ ವಿಷಯವನ್ನು ಮಾರ್ಕನು ಸೇರಿಸುತ್ತಾನೆ.
ಹಾಗಾದರೆ ನಾವೇನು ಹೇಳಸಾಧ್ಯವಿದೆ? ಬೇರೆ ಸಂದರ್ಭಗಳಲ್ಲಿ 12 ಮಂದಿ ಅಪೊಸ್ತಲರು ಮತ್ತು 70 ಮಂದಿ ಶಿಷ್ಯರು ದುಷ್ಟಾತ್ಮಗಳನ್ನು ಬಿಡಿಸಿದರು. (ಮಾರ್ಕ 3:15; 6:13; ಲೂಕ 10:17) ಆದರೆ ಈ ಸಂದರ್ಭದಲ್ಲಿ ಶಿಷ್ಯರಿಗೆ ದೆವ್ವವನ್ನು ಬಿಡಿಸಲಾಗಲಿಲ್ಲ. ಏಕೆ? ವಿವಿಧ ದಾಖಲೆಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿವರಗಳನ್ನು ಒಟ್ಟುಸೇರಿಸುವಲ್ಲಿ, ಈ ಸಂದರ್ಭದಲ್ಲಿ ಅವರು ಹಾಗೆ ಮಾಡಲು ಸಿದ್ಧರಾಗಿರಲಿಲ್ಲವೆಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ. ಬಹುಶಃ ಒಂದಷ್ಟು ಸಮಸ್ಯೆಯು, ಒಳಗೊಂಡಂತಹ ದೆವ್ವದ ಕಾರಣವಾಗಿದ್ದಿರಬಹುದು. ಏಕೆಂದರೆ ದೆವ್ವಗಳಿಗೆ ವಿಭಿನ್ನ ವ್ಯಕ್ತಿತ್ವಗಳು, ಅಭಿರುಚಿಗಳು ಹಾಗೂ ಸಾಮರ್ಥ್ಯಗಳು ಸಹ ಇರಬಹುದೆಂದು ತೋರುತ್ತದೆ. ಇದರ ವಿಷಯದಲ್ಲಿ, ದೇವರ ಸಹಾಯಕ್ಕಾಗಿ ವಿಶೇಷವಾಗಿ ಬಲವಾದ ನಂಬಿಕೆ ಮತ್ತು ತೀವ್ರವಾದ ಪ್ರಾರ್ಥನೆಯ ಅಗತ್ಯವಿತ್ತು. ಯೇಸುವಿಗೆ ಅಂಥ ನಂಬಿಕೆಯಿತ್ತು ನಿಶ್ಚಯ. ಪ್ರಾರ್ಥನೆಯ ಕೇಳುಗನಾದ ಅವನ ತಂದೆಯ ಬೆಂಬಲವು ಸಹ ಅವನಿಗಿತ್ತು. (ಕೀರ್ತನೆ 65:2) ಆ ದೆವ್ವವನ್ನು ಬಿಡಿಸುವ ಮೂಲಕ ಆ ಪೀಡಿತ ಹುಡುಗನನ್ನು ಯೇಸು ವಾಸಿಮಾಡಸಾಧ್ಯವಿತ್ತು ಮಾತ್ರವಲ್ಲ ಅವನು ಹಾಗೆ ಮಾಡಿದನು.