ಮರಿಯಳು ಸ್ವಾಭಾವಿಕ ಕಾರಣಗಳಿಂದ ಮೃತಹೊಂದಿದಳೋ?
ಲಾಸ್ಸೇರ್ವಾಟೋರೇ ರೋಮಾನೋ ಎಂಬ ವ್ಯಾಟಿಕನ್ ವಾರ್ತಾಪತ್ರಿಕೆಗನುಸಾರ, ಸ್ವರ್ಗಾರೋಹಣದ ಕುರಿತ ಕ್ಯಾಥೊಲಿಕ್ ಸಿದ್ಧಾಂತವು ಹೇಳುವುದು: “ಮೂಲ ಪಾಪದ ಎಲ್ಲ ಕಳಂಕದಿಂದ ಮುಕ್ತಗೊಳಿಸಲ್ಪಟ್ಟು ರಕ್ಷಿಸಲ್ಪಟ್ಟ, ಆ ನಿಷ್ಕಳಂಕ ಕನ್ಯೆಯ ಪಾರ್ಥಿವ ಜೀವನವು ಅಂತ್ಯಗೊಂಡಾಗ ಅವಳ ದೇಹ ಮತ್ತು ಪ್ರಾಣವು ಸ್ವರ್ಗೀಯ ಮಹಿಮೆಯೊಳಗೆ ಕೊಂಡೊಯ್ಯಲ್ಪಟ್ಟಿತು.” ಈ ಬೋಧನೆಯು ಕೆಲವು ಕ್ಯಾಥೊಲಿಕ್ ಮತಧರ್ಮಶಾಸ್ತ್ರದ ಪರಿಣತರು, ಮರಿಯಳು “ಸಾಯಲಿಲ್ಲ ಮತ್ತು ತಕ್ಷಣವೇ ಅವಳು ಪಾರ್ಥಿವ ಜೀವಿತದಿಂದ ಸ್ವರ್ಗೀಯ ಮಹಿಮೆಗೆ ಕೊಂಡೊಯ್ಯಲ್ಪಟ್ಟಳು” ಎಂದು ಪ್ರತಿಪಾದಿಸಲು ನಡೆಸಿದೆ ಎಂದು, ಆ ವಾರ್ತಾಪತ್ರಿಕೆಯು ಹೇಳುತ್ತದೆ.a
ಇತ್ತೀಚೆಗೆ, ಪೋಪ್ ಜಾನ್ ಪಾಲ್ II ಆ ವಿಷಯದ ಮೇಲೆ ಒಂದು ವಿಭಿನ್ನವಾದ ಬೆಳಕನ್ನು ಚೆಲ್ಲಿದರು. 1997, ಜೂನ್ 25ರಂದು ವ್ಯಾಟಿಕನ್ನಲ್ಲಿ ಸಾಮಾನ್ಯ ಸಭಿಕರಿಗೆ ಅವರು ಹೇಳಿದ್ದು: “ಮರಿಯಳ ಮೃತ್ಯುವಿನ ಸಂದರ್ಭಗಳ ಕುರಿತಾಗಿ ಯಾವುದೇ ಮಾಹಿತಿಯನ್ನು ಹೊಸ ಒಡಂಬಡಿಕೆಯು ಒದಗಿಸುವುದಿಲ್ಲ. ಈ ಮೌನವು ವಿಶೇಷವಾಗಿ ಉಲ್ಲೇಖಿಸಲ್ಪಡಲಿಕ್ಕೆ ಯೋಗ್ಯವಾದ ಯಾವುದೇ ವಿವರವಿಲ್ಲದೆ ಅದು ಸ್ವಾಭಾವಿಕವಾಗಿ ಸಂಭವಿಸಿತೆಂದು ಒಬ್ಬನು ಭಾವಿಸುವಂತೆ ನಡೆಸುತ್ತದೆ. . . . ಸ್ವಾಭಾವಿಕವಾಗಿ ಅವಳು ಸತ್ತಳೆಂಬ ವಿಚಾರವನ್ನು ತೆಗೆದುಹಾಕಲಿಕ್ಕಾಗಿ ಬಯಸುವವರ ಅಭಿಪ್ರಾಯಗಳು ನಿರಾಧಾರವಾದದ್ದೆಂದು ತೋರಿಬರುತ್ತದೆ.”
ಪೋಪ್ ಜಾನ್ ಪಾಲರ ಹೇಳಿಕೆಯು, ನಿಷ್ಕಳಂಕ ಗರ್ಭಧಾರಣೆ ವಿಚಾರದ ಸಿದ್ಧಾಂತದಲ್ಲಿ ಒಂದು ದೊಡ್ಡ ಬಿರುಕನ್ನು ಉಂಟುಮಾಡುತ್ತದೆ. ಯೇಸುವಿನ ತಾಯಿ “ಮೂಲ ಪಾಪದ ಎಲ್ಲ ಕಳಂಕದಿಂದ ಮುಕ್ತಗೊಳಿಸಲ್ಪಟ್ಟು ರಕ್ಷಿಸಲ್ಪಟ್ಟಿ”ರುವಲ್ಲಿ, ಪಾಪಭರಿತ ಆದಾಮನಿಂದ ದಾಟಿಸಲ್ಪಟ್ಟ ಪಾಪದಿಂದ ಉಂಟಾಗುವ ‘ಸ್ವಾಭಾವಿಕ ಕಾರಣಗಳಿಂದ’ ಅವಳು ಹೇಗೆ ಮೃತ್ಯುಹೊಂದಸಾಧ್ಯವಿದೆ? (ರೋಮಾಪುರ 5:12) ಈ ದೇವತಾಶಾಸ್ತ್ರ ಉಭಯಸಂಕಟವು, ಯೇಸುವಿನ ತಾಯಿಯ ಬಗ್ಗೆ ಕ್ಯಾಥೊಲಿಕ್ ಚರ್ಚಿನ ಅಪಾರ್ಥಮಾಡಿಕೊಳ್ಳಲ್ಪಟ್ಟ ದೃಷ್ಟಿಕೋನದಿಂದಲೇ ಆಗಿದೆ. ಈ ವಿಷಯದ ಬಗ್ಗೆ ಕ್ಯಾಥೊಲಿಕ್ ಚರ್ಚೊಳಗೆ ಒಡಕು ಹಾಗೂ ಗಲಿಬಿಲಿಯು ಎದ್ದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಬೈಬಲು ಮರಿಯಳನ್ನು ಒಬ್ಬಾಕೆ ನಮ್ರ, ನಂಬಿಗಸ್ತ ಮತ್ತು ಧರ್ಮಶ್ರದ್ಧಾಳುವಾಗಿ ವರ್ಣಿಸುತ್ತದಾದರೂ, ಅದು ಈ ಗುಣಗಳನ್ನು “ನಿಷ್ಕಳಂಕ ಗರ್ಭಧಾರಣೆ”ಗೆ ಅಧ್ಯಾರೋಪಿಸುವುದಿಲ್ಲ. (ಲೂಕ 1:38; ಅ. ಕೃತ್ಯಗಳು 1:13, 14) ಬೈಬಲು ಸರಳವಾಗಿ ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಹೌದು, ಬೇರೆ ಮಾನವರಂತೆ ಮರಿಯಳು ಪಾಪ ಮತ್ತು ಅಪರಿಪೂರ್ಣತೆಯನ್ನು ಪೂರ್ವಜರಿಂದ ಪಡೆದುಕೊಂಡಳು ಮತ್ತು ಸ್ವಾಭಾವಿಕ ಕಾರಣಗಳಿಂದಲ್ಲದೇ ಹೊರತು ಬೇರೆ ಇನ್ನಾವ ಕಾರಣದಿಂದಲೂ ಅವಳು ಮೃತ್ಯುವಶವಾದುದಕ್ಕೆ ಯಾವುದೇ ಪುರಾವೆಯಿರುವುದಿಲ್ಲ.—1 ಯೋಹಾನ 1:8-10ನ್ನು ಹೋಲಿಸಿರಿ.
[ಪಾದಟಿಪ್ಪಣಿ]
a 1994, ಫೆಬ್ರವರಿ 15ರ ಕಾವಲಿನಬುರುಜು, 26-9 ಪುಟಗಳಲ್ಲಿರುವ, “ಸ್ವರ್ಗಾರೋಹಣ—ದೇವರಿಂದ ಪ್ರಕಟಿತವಾದ ತತ್ವವೋ?” ಎಂಬ ಲೇಖನವನ್ನು ನೋಡಿರಿ.