ಚಿನ್ನಕ್ಕಿಂತಲೂ ಮಿಗಿಲಾದದ್ದು ನನಗೆ ಸಿಕ್ಕಿತು
ಚಾರ್ಲ್ಸ್ ಮಿಲ್ಟನ್ ಅವರು ಹೇಳಿದಂತೆ
ಒಂದು ದಿನ ತಂದೆಯವರು ಹೇಳಿದ್ದು: “ನಾವು ಚಾರ್ಲಿಯನ್ನು ಅಮೆರಿಕಕ್ಕೆ ಕಳುಹಿಸೋಣ. ಅಲ್ಲಿ ತುಂಬ ಹಣ ಸಿಗುತ್ತದೆ ಮತ್ತು ಅಲ್ಲಿ ಹಣವನ್ನು ಸಂಪಾದಿಸುವುದು ಸಹ ಸುಲಭವಾಗಿದೆ. ಅವನೂ ಒಂದಿಷ್ಟು ಹಣಮಾಡಿಕೊಂಡು, ನಮಗೂ ಸ್ವಲ್ಪ ಕಳುಹಿಸಸಾಧ್ಯವಿದೆ!”
ಅಮೆರಿಕದ ರಸ್ತೆಗಳು ಕೂಡ ಚಿನ್ನದಿಂದ ಹೊದಿಸಲ್ಪಟ್ಟಿರುತ್ತವೆ ಎಂದು ಜನರು ನಂಬಿದ್ದರು. ಆ ದಿನಗಳಲ್ಲಿ ಪೂರ್ವ ಯೂರೋಪಿನಲ್ಲಿ ಜೀವಿಸುವುದು ಅತ್ಯಂತ ಕಷ್ಟಕರವಾಗಿತ್ತು. ನನ್ನ ಹೆತ್ತವರಿಗೆ ಒಂದು ಚಿಕ್ಕ ಜಮೀನು ಇತ್ತು, ಮತ್ತು ಕೆಲವು ಹಸುಗಳನ್ನು ಹಾಗೂ ಕೋಳಿಗಳನ್ನು ಸಾಕಿದ್ದರು. ನಮಗೆ ವಿದ್ಯುಚ್ಛಕ್ತಿಯಾಗಲಿ ಒಳಗಡೆ ಬರುವ ನಲ್ಲಿ ನೀರಾಗಲಿ ಇರಲಿಲ್ಲ. ನಮಗೆ ಮಾತ್ರವಲ್ಲ, ಸಮೀಪದಲ್ಲಿ ವಾಸಿಸುತ್ತಿದ್ದ ಯಾರಿಗೂ ಆ ಸೌಕರ್ಯವಿರಲಿಲ್ಲ.
ನಾನು 1893ರ ಜನವರಿ 1ರಂದು—ಸುಮಾರು 106 ವರ್ಷಗಳ ಹಿಂದೆ—ಹೊಸೊಚೆಕ್ನಲ್ಲಿ ಜನಿಸಿದೆ. ನಮ್ಮ ಹಳ್ಳಿಯು, ಆಗ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಒಂದು ಭಾಗವಾಗಿದ್ದ ಗಲಿಸಿಯ ಪ್ರಾಂತದಲ್ಲಿತ್ತು. ಈಗ ಹೊಸೊಚೆಕ್, ಸ್ಲೊವಾಕಿಯ ಹಾಗೂ ಯುಕ್ರೇನ್ನ ಸಮೀಪದಲ್ಲಿರುವ ಪೂರ್ವ ಪೋಲೆಂಡ್ನಲ್ಲಿ ಇದೆ. ಅಲ್ಲಿ ಚಳಿಗಾಲದಲ್ಲಿ ತುಂಬ ಚಳಿಯಿರುತ್ತದೆ ಮತ್ತು ತುಂಬ ಹಿಮವು ಬೀಳುತ್ತದೆ. ನಾನು ಸುಮಾರು ಏಳು ವರ್ಷ ಪ್ರಾಯದವನಾಗಿದ್ದಾಗ, ಸುಮಾರು ಅರ್ಧ ಕಿಲೊಮೀಟರಿನಷ್ಟು ದೂರ ನಡೆದು, ಒಂದು ತೊರೆಯ ಬಳಿಗೆ ಹೋಗಿ, ಹಿಮವನ್ನು ಕೊಡಲಿಯಿಂದ ಕೊರೆದು, ತೂತುಮಾಡಿ ಕೆಳಗಿರುವ ನೀರನ್ನು ತರುತ್ತಿದ್ದೆ. ನಾನು ಅದನ್ನು ಮನೆಗೆ ಕೊಂಡೊಯ್ಯುತ್ತಿದ್ದೆ, ಮತ್ತು ತಾಯಿಯವರು ಆ ನೀರನ್ನು ಅಡಿಗೆಮಾಡಲು ಹಾಗೂ ಪಾತ್ರೆತೊಳೆಯಲು ಉಪಯೋಗಿಸುತ್ತಿದ್ದರು. ತೊರೆಯ ಬಳಿಗೆ ಹೋಗಿ, ಹಿಮದ ದೊಡ್ಡ ತುಂಡನ್ನು ಬಟ್ಟೆಒಗೆಯುವ ಕಲ್ಲನ್ನಾಗಿ ಉಪಯೋಗಿಸುತ್ತಾ, ಅವರು ಬಟ್ಟೆಗಳನ್ನು ಒಗೆಯುತ್ತಿದ್ದರು.
ಹೊಸೊಚೆಕ್ನಲ್ಲಿ ಶಾಲೆಗಳಿರಲಿಲ್ಲ. ಆದರೆ ನಾನು ಪೊಲಿಷ್, ರಷ್ಯನ್, ಸ್ಲೊವಾಕ್, ಹಾಗೂ ಯುಕ್ರೇನಿಯನ್ ಭಾಷೆಗಳನ್ನು ಮಾತಾಡಲು ಕಲಿತೆ. ನಾವು ಗ್ರೀಕ್ ಆರ್ತೊಡಕ್ಸರೋಪಾದಿ ಬೆಳೆಸಲ್ಪಟ್ಟೆವು, ಮತ್ತು ನಾನು ಪಾದ್ರಿಗೆ ಸಹಾಯಕನಾಗಿ ಕೆಲಸಮಾಡುತ್ತಿದ್ದೆ. ಆದರೆ ನಾನು ತುಂಬ ಚಿಕ್ಕವನಿದ್ದಾಗಲೇ, ಪಾದ್ರಿಗಳ ಮೇಲೆ ಕೋಪಗೊಂಡಿದ್ದೆ. ಏಕೆಂದರೆ ನಾವು ಶುಕ್ರವಾರದಂದು ಮಾಂಸವನ್ನು ತಿನ್ನಬಾರದು ಎಂದು ಅವರು ಹೇಳಿದ್ದರು, ಆದರೆ ಅವರು ಮಾತ್ರ ಶುಕ್ರವಾರದಂದು ಸಹ ಮಾಂಸವನ್ನು ತಿನ್ನುತ್ತಿದ್ದರು.
ನಮ್ಮ ಸ್ನೇಹಿತರಲ್ಲಿ ಕೆಲವರು ಅಮೆರಿಕದಲ್ಲಿನ ತಮ್ಮ ಉದ್ಯೋಗದಿಂದ ಹಿಂದಿರುಗಿದ್ದರು. ಅವರು ಸಾಕಷ್ಟು ಹಣವನ್ನು ಸಂಪಾದಿಸಿ, ತಮ್ಮ ಮನೆಗಳನ್ನು ನವೀಕರಿಸಲು ಹಾಗೂ ಜಮೀನಿನ ಯಂತ್ರಗಳನ್ನು ಕೊಂಡುಕೊಳ್ಳಲು ಬಂದಿದ್ದರು. ಅದು ತಾನೇ ತಂದೆಯವರನ್ನು, ಪುನಃ ಒಮ್ಮೆ ಅಲ್ಲಿಗೆ ಪ್ರಯಾಣಿಸಲು ಯೋಜಿಸುತ್ತಿರುವ ಕೆಲವು ನೆರೆಹೊರೆಯವರೊಂದಿಗೆ ನನ್ನನ್ನು ಅಮೆರಿಕಕ್ಕೆ ಕಳುಹಿಸುವುದರ ಬಗ್ಗೆ ಮಾತಾಡುವಂತೆ ಪ್ರಚೋದಿಸಿತು. ಅದು 1907ರಲ್ಲಾಗಿತ್ತು; ಆಗ ನಾನು 14 ವರ್ಷದವನಾಗಿದ್ದೆ.
ಅಮೆರಿಕದಲ್ಲಿ ತಬ್ಬಿಬ್ಬಾದದ್ದು
ಸ್ವಲ್ಪದರಲ್ಲೇ ನಾನು ಒಂದು ಹಡಗನ್ನು ಹತ್ತಿದ್ದೆ, ಮತ್ತು ಎರಡು ವಾರಗಳಲ್ಲಿ ನಾವು ಅಟ್ಲಾಂಟಿಕನ್ನು ದಾಟಿದ್ದೆವು. ಆಗ 20 ಡಾಲರ್ಗಳು ಇಲ್ಲದಿದ್ದರೆ, ಅವರು ನಿಮ್ಮನ್ನು ಸ್ವದೇಶಕ್ಕೆ ಹಿಂದಿರುಗಿ ಕಳುಹಿಸುವ ಸಾಧ್ಯತೆಯಿತ್ತು. ನನ್ನ ಬಳಿ 20 ಡಾಲರ್ಗಳಷ್ಟು ಬೆಲೆಬಾಳುವ ಬೆಳ್ಳಿಯ ನಾಣ್ಯವಿತ್ತು. ಹೀಗೆ ನಾನು ಅಮೆರಿಕದ ಪ್ರವೇಶದ್ವಾರವಾಗಿದ್ದ ನ್ಯೂ ಯಾರ್ಕಿನ ಎಲಿಸ್ ಐಲೆಂಡನ್ನು ದಾಟಿಹೋದ ಲಕ್ಷಾಂತರ ಮಂದಿಯಲ್ಲಿ ಒಬ್ಬನಾದೆ. ಖಂಡಿತವಾಗಿಯೂ ಅಲ್ಲಿ ಹಣವು ಸುಲಭವಾಗಿ ಸಿಗುತ್ತಿರಲಿಲ್ಲ, ಹಾಗೂ ರಸ್ತೆಗಳು ಸಹ ಚಿನ್ನದಿಂದ ಹೊದಿಸಲ್ಪಟ್ಟಿರಲಿಲ್ಲ. ವಾಸ್ತವದಲ್ಲಿ, ಅನೇಕ ರಸ್ತೆಗಳಿಗೆ ಗಾರೆ ಕೂಡ ಹಾಕಲ್ಪಟ್ಟಿರಲಿಲ್ಲ!
ನಾವು ಪೆನ್ಸಿಲ್ವೇನಿಯದ ಜಾನ್ಸ್ಟೌನ್ಗೆ ಹೋಗುವ ರೈಲನ್ನು ಹತ್ತಿದೆವು. ನನ್ನ ಜೊತೆಯಿದ್ದ ಪುರುಷರು ಈ ಮುಂಚೆ ಅಲ್ಲಿಗೆ ಹೋಗಿದ್ದರಿಂದ ಅವರಿಗೆ ಒಂದು ಭೋಜನಗೃಹದ ಪರಿಚಯವಿತ್ತು. ನಾನು ಅಲ್ಲಿ ಉಳಿದುಕೊಳ್ಳಸಾಧ್ಯವಿತ್ತು. ಕಾರಣವೇನೆಂದರೆ, ಪೆನ್ಸಿಲ್ವೇನಿಯದ ಜರೋಮ್ನಲ್ಲಿ ವಾಸಿಸುತ್ತಿದ್ದ ನನ್ನ ಅಕ್ಕನನ್ನು ನಾನು ಹುಡುಕಬೇಕಿತ್ತು. ಅದು ಸುಮಾರು 25 ಕಿಲೊಮೀಟರುಗಳಷ್ಟೆ ದೂರದಲ್ಲಿದೆ ಎಂಬುದು ತದನಂತರ ನನಗೆ ಗೊತ್ತಾಯಿತು. ಆದರೆ ನಾನು ಜರೋಮ್ ಎಂದು ಹೇಳುವುದಕ್ಕೆ ಬದಲಾಗಿ, ಯಾರೋಮ್ ಎಂದು ಹೇಳುತ್ತಿದ್ದೆ. ಯಾಕೆಂದರೆ ನನ್ನ ಮಾತೃಭಾಷೆಯಲ್ಲಿ “ಜೆ” ಅಕ್ಷರವನ್ನು “ವೈ” ಎಂಬುದಾಗಿ ಉಚ್ಚರಿಸಲಾಗುತ್ತಿತ್ತು. ಯಾರೊಬ್ಬರಿಗೂ ಯಾರೋಮ್ ಎಂಬುದು ಗೊತ್ತೇ ಇರಲಿಲ್ಲ, ಆದುದರಿಂದ ನಾನು ಒಂದು ವಿಚಿತ್ರ ದೇಶದಲ್ಲಿದ್ದೆ, ಒಂದು ಕಡೆ ಇಂಗ್ಲಿಷ್ ಮಾತಾಡಲು ಬರುತ್ತಿರಲಿಲ್ಲ, ಇನ್ನೊಂದು ಕಡೆ ಹೆಚ್ಚು ಹಣವೂ ಇರಲಿಲ್ಲ.
ಪ್ರತಿ ದಿನ ಬೆಳಗ್ಗೆ ನಾನು ಕೆಲಸವನ್ನು ಹುಡುಕುವುದರಲ್ಲಿ ಸಮಯವನ್ನು ಕಳೆಯುತ್ತಿದ್ದೆ. ಎಂಪ್ಲಾಯ್ಮೆಂಟ್ ಆಫೀಸಿನಲ್ಲಿ, ಅದರ ಹೊರಗೆ ಕಾದುನಿಂತಿರುವ ದೊಡ್ಡ ಸಮೂಹದಲ್ಲಿ ಕೇವಲ ಇಬ್ಬರು ಮೂವರಿಗೆ ಮಾತ್ರ ಕೆಲಸವು ಕೊಡಲ್ಪಡುತ್ತಿತ್ತು. ಆದುದರಿಂದ, ಪ್ರತಿ ದಿನ ನಾನು ಭೋಜನಗೃಹಕ್ಕೆ ಹಿಂದಿರುಗುತ್ತಿದ್ದೆ, ಮತ್ತು ಸ್ವಸಹಾಯ ನೀಡುವ ಪುಸ್ತಕಗಳ ಸಹಾಯದಿಂದ ಇಂಗ್ಲಿಷನ್ನು ಕಲಿಯುತ್ತಿದ್ದೆ. ಕೆಲವೊಮ್ಮೆ ನಾನು ಚಿಕ್ಕಪುಟ್ಟ ಕೆಲಸಗಳನ್ನು ಕಂಡುಕೊಳ್ಳುತ್ತಿದ್ದೆ, ಆದರೆ ಅನೇಕ ತಿಂಗಳುಗಳು ಕಳೆದವು, ಹಾಗೂ ನನ್ನ ಹಣವು ಬಹುಮಟ್ಟಿಗೆ ಖರ್ಚಾಗಿಹೋಯಿತು.
ಒಡಹುಟ್ಟಿದವರೊಂದಿಗೆ ಪುನರ್ಮಿಲನ
ಒಂದು ದಿನ ರೈಲು ನಿಲ್ದಾಣದ ಸಮೀಪದಲ್ಲಿಯೇ ಒಂದು ಬಾರ್ ಇದ್ದ ಹೋಟೇಲಿನ ಮುಂದಿನಿಂದ ನಾನು ಹಾದುಹೋಗುತ್ತಿದ್ದೆ. ಹೋಟೇಲಿನಲ್ಲಿ ತಯಾರಿಸುತ್ತಿದ್ದ ಆಹಾರದ ಪರಿಮಳವು ಮೂಗಿಗೆ ಬಡಿಯಿತು! ಒಬ್ಬನು ಬಿಯರನ್ನು—ಒಂದು ದೊಡ್ಡ ಗ್ಲಾಸಿಗೆ ಐದು ಸೆಂಟ್ಸ್—ಕೊಂಡುಕೊಳ್ಳುವಲ್ಲಿ, ಬಾರ್ನಲ್ಲಿದ್ದ ಸ್ಯಾಂಡ್ವಿಚ್ಗಳು, ಹಾಟ್ಡಾಗ್ಗಳು, ಮತ್ತು ಇನ್ನಿತರ ಆಹಾರಪದಾರ್ಥಗಳು ಉಚಿತವಾಗಿದ್ದವು. ಕಾನೂನಿಗನುಸಾರ ನಾನು ಚಿಕ್ಕ ಪ್ರಾಯದವನಾಗಿದ್ದರೂ, ಬಾರ್ನ ಪರಿಚಾರಕನು ನನಗೆ ಅನುಕಂಪ ತೋರಿಸಿ, ಬಿಯರನ್ನು ಕೊಟ್ಟನು.
ನಾನು ಅಲ್ಲಿ ಊಟಮಾಡುತ್ತಿರುವಾಗ, “ಬೇಗನೆ ಕುಡಿದು ಮುಗಿಸಿರಿ! ಜರೋಮ್ಗೆ ಹೋಗುವ ಗಾಡಿ ಬರುತ್ತಿದೆ” ಎಂದು ಹೇಳುತ್ತಾ, ಕೆಲವು ಪುರುಷರು ಒಳಗೆ ಬಂದರು.
“ಅಂದರೆ ಯಾರೋಮ್ಗೆ ಹೋಗುವ ಗಾಡಿ ಬರುತ್ತಿದೆಯೆ?” ಎಂದು ನಾನು ಕೇಳಿದೆ.
“ಇಲ್ಲ, ಜರೋಮ್ಗೆ ಹೋಗುವ ಗಾಡಿ ಬರುತ್ತಿದೆ” ಎಂದು ಅವರು ಹೇಳಿದರು. ನನ್ನ ಅಕ್ಕ ವಾಸಿಸುತ್ತಿರುವುದು ಅಲ್ಲಿಯೇ ಎಂಬುದು ಆಗ ನನಗೆ ಗೊತ್ತಾಯಿತು. ಇದಲ್ಲದೆ, ಆ ಬಾರಿನಲ್ಲಿ, ನನ್ನ ಅಕ್ಕ ವಾಸಿಸುತ್ತಿದ್ದ ಬೀದಿಯಲ್ಲೇ ಇದ್ದ ಒಬ್ಬ ವ್ಯಕ್ತಿಯನ್ನು ನಾನು ಭೇಟಿಯಾದೆ! ನಾನು ರೈಲಿನ ಟಿಕೆಟನ್ನು ತಂದು, ಜರೋಮಿಗೆ ಹೋಗಿ, ನನ್ನ ಅಕ್ಕನನ್ನು ಕಂಡುಕೊಂಡೆ.
ನನ್ನ ಅಕ್ಕ ಹಾಗೂ ಅವಳ ಗಂಡನು, ಕಲ್ಲಿದ್ದಲಿನ ಗಣಿಯಲ್ಲಿ ಕೆಲಸಮಾಡುವವರಿಗಾಗಿ ಒಂದು ಭೋಜನಗೃಹವನ್ನು ನಡೆಸುತ್ತಿದ್ದರು, ಮತ್ತು ನಾನು ಅವರೊಂದಿಗೆ ವಾಸಿಸುತ್ತಿದ್ದೆ. ಗಣಿಯಿಂದ ನೀರನ್ನು ಹೊರಹಾಕುವಂತಹ ಒಂದು ಪಂಪನ್ನು ನೋಡಿಕೊಳ್ಳುವಂತಹ ಕೆಲಸವನ್ನು ಅವರು ನನಗೆ ಕೊಡಿಸಿದರು. ಆ ಪಂಪು ಯಾವುದೇ ಸಮಯದಲ್ಲಿ ನಿಂತುಹೋಗುವಲ್ಲಿ, ನಾನು ಒಬ್ಬ ಮೆಕಾನಿಕ್ನನ್ನು ಕರೆಯಬೇಕಿತ್ತು. ಆ ಕೆಲಸದಿಂದ ನನಗೆ ಪ್ರತಿ ದಿನ 15 ಸೆಂಟ್ಸ್ ದೊರಕುತ್ತಿದ್ದವು. ತದನಂತರ ನಾನು ರೈಲು ಇಲಾಖೆಯಲ್ಲಿ, ಇಟ್ಟಿಗೆ ಕಣದಲ್ಲಿ, ಮತ್ತು ಜೀವವಿಮೆಯ ಏಜೆಂಟಾಗಿ ಸಹ ಕೆಲಸಮಾಡಿದೆ. ಆ ಬಳಿಕ ನಾನು ಪಿಟ್ಸ್ಬರ್ಗ್ಗೆ ಹಿಂದಿರುಗಿದೆ. ಅಲ್ಲಿ ನನ್ನ ಅಣ್ಣ ಸ್ಟೀವ್ ವಾಸಿಸುತ್ತಿದ್ದನು. ಅಲ್ಲಿ ನಾವು ಸ್ಟೀಲ್ ಮಿಲ್ಗಳಲ್ಲಿ ಕೆಲಸಮಾಡಿದೆವು. ನಾನು ಮನೆಗೆ ಕಳುಹಿಸುವಷ್ಟು ಹಣವನ್ನು ಎಂದೂ ಸಂಪಾದಿಸಲೇ ಇಲ್ಲ.
ಒಂದು ಕುಟುಂಬ ಹಾಗೂ ಒಂದು ಶವಸಂಸ್ಕಾರ
ಒಂದು ದಿನ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ, ಒಂದು ಮನೆಯ ಮುಂದೆ ನಿಂತುಕೊಂಡಿದ್ದ ಒಬ್ಬ ಮನೆಗೆಲಸದವಳನ್ನು ನಾನು ನೋಡಿದೆ. ಅವಳು ಆ ಮನೆಯಲ್ಲಿ ಕೆಲಸಮಾಡುತ್ತಿದ್ದಳು. ‘ಒಹ್, ಇವಳೆಷ್ಟು ಸೌಂದರ್ಯವತಿ’ ಎಂದು ನಾನು ಮನಸ್ಸಿನಲ್ಲಿ ಆಲೋಚಿಸಿದೆ. ಮೂರು ವಾರಗಳ ಬಳಿಕ, 1917ರಲ್ಲಿ, ಹೆಲೆನ್ ಹಾಗೂ ನಾನು ವಿವಾಹವಾದೆವು. ಮುಂದಿನ ಹತ್ತು ವರ್ಷಗಳಲ್ಲಿ, ನಮಗೆ ಆರು ಮಕ್ಕಳಾದವು, ಅವರಲ್ಲಿ ಒಂದು ಶಿಶುವಾಗಿದ್ದಾಗಲೇ ತೀರಿಹೋಯಿತು.
1918ರಲ್ಲಿ, ಪಿಟ್ಸ್ಬರ್ಗ್ ರೈಲ್ವೇಸ್ ಎಂಬ ಕಂಪೆನಿಯು, ನನ್ನನ್ನು ಸ್ಟ್ರೀಟ್ಕಾರ್ನ ಡ್ರೈವರ್ನನ್ನಾಗಿ ಕೆಲಸಕ್ಕೆ ಇಟ್ಟುಕೊಂಡಿತು. ಸ್ಟ್ರೀಟ್ಕಾರ್ ಡಿಪೋದ ಸಮೀಪದಲ್ಲೇ ಒಂದು ಕಾಫಿಯಂಗಡಿ ಇತ್ತು; ಅಲ್ಲಿ ಕಾಫಿ ಸಿಕ್ಕುತ್ತಿತ್ತು. ಅಲ್ಲಿ ಇಬ್ಬರು ಗ್ರೀಕರು ಆ ಕಾಫಿಯಂಗಡಿಯನ್ನು ನಡೆಸುತ್ತಿದ್ದರು. ಯಾರು ಏನೇ ಆರ್ಡರ್ ಮಾಡಲಿ ಅವರು ಅದಕ್ಕೆ ಲಕ್ಷ್ಯಕೊಡುತ್ತಿರಲಿಲ್ಲ; ಬದಲಾಗಿ ಅವರು ಇತರರಿಗೆ ಬೈಬಲಿನ ವಿಷಯಗಳನ್ನು ಸಾರುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. ನಾನು ಅವರಿಗೆ ಹೀಗೆ ಹೇಳುತ್ತಿದ್ದೆ: “ಲೋಕದವರೆಲ್ಲ ಹೇಳುವುದು ತಪ್ಪು, ನೀವಿಬ್ಬರು ಹೇಳುವುದು ಮಾತ್ರ ಸರಿ ಎಂದು ನೀವು ನನಗೆ ಹೇಳುತ್ತಿದ್ದೀರೊ?”
“ಅದನ್ನು ಬೈಬಲಿನಲ್ಲೇ ಪರೀಕ್ಷಿಸಿ ನೋಡು!” ಎಂದು ಅವರು ನನಗೆ ಹೇಳುತ್ತಿದ್ದರು. ಆದರೆ ಆ ಸಮಯದಲ್ಲಿ ಅವರು ನನಗೆ ಅದನ್ನು ಮನಗಾಣಿಸಲು ಅಸಮರ್ಥರಾಗಿದ್ದರು.
ದುಃಖಕರವಾಗಿ, 1928ರಲ್ಲಿ, ನನ್ನ ಪ್ರೀತಿಯ ಹೆಲೆನ್ ಅಸ್ವಸ್ಥಳಾದಳು. ಮಕ್ಕಳಿಗೆ ಹೆಚ್ಚಿನ ಆರೈಕೆ ಸಿಗಲಿ ಎಂಬ ಕಾರಣದಿಂದ, ನಾನು ಅವರನ್ನು ಜರೋಮ್ನಲ್ಲಿದ್ದ ನನ್ನ ಅಕ್ಕ ಹಾಗೂ ಅವಳ ಗಂಡನ ಬಳಿಗೆ ಕರೆದೊಯ್ದೆ. ಇಷ್ಟರೊಳಗೆ ಅವರು ಒಂದು ಜಮೀನನ್ನು ಕೊಂಡುಕೊಂಡಿದ್ದರು. ನಾನು ಆಗಾಗ್ಗೆ ಮಕ್ಕಳನ್ನು ನೋಡಿಕೊಂಡು ಬರುತ್ತಿದ್ದೆ ಮತ್ತು ಅವರ ಆಹಾರಕ್ಕಾಗಿ ಪ್ರತಿ ತಿಂಗಳು ಹಣವನ್ನು ಕಳುಹಿಸುತ್ತಿದ್ದೆ. ಅವರಿಗೆ ಬಟ್ಟೆಗಳನ್ನೂ ಕಳುಹಿಸುತ್ತಿದ್ದೆ. ದುಃಖಕರವಾಗಿ, ಹೆಲೆನಳ ಆರೋಗ್ಯವು ತುಂಬ ಹದಗೆಟ್ಟಿತು, ಮತ್ತು 1930ರ ಆಗಸ್ಟ್ 27ರಂದು ಅವಳು ಮೃತಪಟ್ಟಳು.
ನನಗೆ ಒಂಟಿಯಾದ ಹಾಗೂ ಕಂಗೆಟ್ಟುಹೋದ ಅನಿಸಿಕೆಯಾಯಿತು. ಶವಸಂಸ್ಕಾರದ ಏರ್ಪಾಡುಗಳನ್ನು ಮಾಡಲಿಕ್ಕಾಗಿ ನಾನು ಪಾದ್ರಿಯ ಬಳಿಗೆ ಹೋದಾಗ, ಅವನು ಹೇಳಿದ್ದು: “ನೀನು ಇನ್ನುಮುಂದೆ ಈ ಚರ್ಚಿಗೆ ಸೇರಿದವನಾಗಿಲ್ಲ. ಏಕೆಂದರೆ ನೀನು ಚರ್ಚಿಗೆ ಸಂದಾಯ ಮಾಡಬೇಕಾದ ಹಣವನ್ನು ಒಂದು ವರ್ಷದಿಂದಲೂ ಪಾವತಿಮಾಡಿಲ್ಲ.”
ಬಹಳ ಸಮಯದಿಂದ ನನ್ನ ಹೆಂಡತಿಯು ಅಸ್ವಸ್ಥಳಿದ್ದಳು ಮತ್ತು ಜರೋಮ್ನಲ್ಲಿರುವ ಚರ್ಚಿಗೆ ದಾನಮಾಡುವಂತೆ, ನನ್ನ ಬಳಿ ಇದ್ದ ಹೆಚ್ಚಿನ ಹಣವನ್ನು ನನ್ನ ಮಕ್ಕಳಿಗೆ ಕೊಟ್ಟೆ ಎಂದು ನಾನು ವಿವರಿಸಿದೆ. ಆದರೂ ಪಾದ್ರಿಯು ಶವಸಂಸ್ಕಾರವನ್ನು ಮಾಡಲು ಒಪ್ಪಿಕೊಳ್ಳುವ ಮುಂಚೆ, ನಾನು 50 ಡಾಲರುಗಳನ್ನು ಸಾಲಮಾಡಿ, ಚರ್ಚಿನ ಹಣ ಸಂದಾಯವನ್ನು ತೀರಿಸಬೇಕಾಯಿತು. ಅಷ್ಟುಮಾತ್ರವಲ್ಲ, ಹೆಲೆನಳಿಗೆ ಅಂತಿಮ ನಮನಗಳನ್ನು ಸಲ್ಲಿಸಲಿಕ್ಕಾಗಿ, ಎಲ್ಲಿ ನನ್ನ ಸ್ನೇಹಿತರು ಹಾಗೂ ಕುಟುಂಬವು ಒಟ್ಟುಗೂಡುವ ಯೋಜನೆಯನ್ನು ಮಾಡಲಾಗಿತ್ತೋ, ಆ ನನ್ನ ನಾದಿನಿಯ ಮನೆಯಲ್ಲಿ ಮಾಸ್ ಅನ್ನು ನಡೆಸಲಿಕ್ಕಾಗಿ ಆ ಪಾದ್ರಿಯು ಇನ್ನೂ 15 ಡಾಲರ್ಗಳನ್ನು ಕೇಳಿದನು. ಆ 15 ಡಾಲರ್ಗಳನ್ನು ಕೊಡುವುದು ನನ್ನಿಂದ ಅಸಾಧ್ಯವಾಗಿತ್ತು, ಆದರೆ ನನ್ನ ಸಂಬಳದ ದಿನದಂದು ಆ ಹಣವನ್ನು ಕೊಡುವಲ್ಲಿ, ತಾನು ಮಾಸ್ ಅನ್ನು ನಡೆಸಲು ಒಪ್ಪಿಕೊಳ್ಳುತ್ತೇನೆಂದು ಪಾದ್ರಿಯು ಹೇಳಿದನು.
ಸಂಬಳದ ದಿನ ಬಂದಾಗ, ನನ್ನ ಮಕ್ಕಳ ಶಾಲಾ ಆವಶ್ಯಕತೆಗಾಗಿ ಷೂಗಳು ಹಾಗೂ ಬಟ್ಟೆಗಳನ್ನು ಕೊಂಡುಕೊಳ್ಳಲು ನಾನು ಆ ಹಣವನ್ನು ಉಪಯೋಗಿಸಬೇಕಾಗಿತ್ತು. ಸುಮಾರು ಎರಡು ವಾರಗಳ ಬಳಿಕ, ಆ ಪಾದ್ರಿಯು ನನ್ನ ಸ್ಟ್ರೀಟ್ ಕಾರನ್ನು ಹತ್ತಿದನು. “ನೀನು ನನಗೆ 15 ಡಾಲರ್ಗಳನ್ನು ಕೊಡಲಿಕ್ಕಿದೆ” ಎಂದು ಅವನು ಹೇಳಿದನು. ತದನಂತರ ತಾನು ಇಳಿಯಬೇಕಾಗಿದ್ದ ಸ್ಥಳ ಬಂದಾಗ, “ನಾನು ನಿನ್ನ ಬಾಸ್ನ ಹತ್ತಿರ ಹೋಗಿ, ನಿನ್ನ ಸಂಬಳದಿಂದ ಹಣವನ್ನು ಕೊಡುವಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿ ಹೋದನು.
ಆ ದಿನ ಸಂಜೆ, ನಾನು ನನ್ನ ಬಾಸ್ನ ಬಳಿಗೆ ಹೋಗಿ, ನಡೆದ ವಿಚಾರವನ್ನು ತಿಳಿಸಿದೆ. ಅವನು ಒಬ್ಬ ಕ್ಯಾಥೊಲಿಕನಾಗಿದ್ದರೂ, “ಆ ಪಾದ್ರಿಯು ಇಲ್ಲಿಗೆ ಬರಲಿ, ಅವನು ನಡೆದುಕೊಂಡ ರೀತಿಯ ಬಗ್ಗೆ ನನ್ನ ಮನಸ್ಸಿಗೆ ಏನನಿಸುತ್ತೋ ಅದನ್ನು ಹೇಳಿಬಿಡುತ್ತೇನೆ” ಎಂದು ಹೇಳಿದನು. ಆ ಹೇಳಿಕೆಯು, ‘ಪಾದ್ರಿಗಳಿಗೆ ಕೇವಲ ನಮ್ಮ ಹಣ ಬೇಕು, ಆದರೆ ಅವರು ನಮಗೆ ಎಂದೂ ಬೈಬಲಿನ ಕುರಿತು ಯಾವ ವಿಷಯವನ್ನೂ ಕಲಿಸುವುದಿಲ್ಲ’ ಎಂದು ನಾನು ಆಲೋಚಿಸುವಂತೆ ಮಾಡಿತು.
ಸತ್ಯವನ್ನು ಕಲಿಯುವುದು
ಆ ಇಬ್ಬರು ಗ್ರೀಕರಿಂದ ನಡೆಸಲ್ಪಡುತ್ತಿದ್ದ ಕಾಫಿಯಂಗಡಿಗೆ ನಾನು ಪುನಃ ಹೋದಾಗ, ಪಾದ್ರಿಯೊಂದಿಗಿನ ನನ್ನ ಅನುಭವವನ್ನು ನಾವು ಚರ್ಚಿಸಿದೆವು. ಫಲಿತಾಂಶವಾಗಿ, ನಾನು ಬೈಬಲ್ ವಿದ್ಯಾರ್ಥಿಗಳೊಂದಿಗೆ—ಈಗ ಅವರನ್ನು ಯೆಹೋವನ ಸಾಕ್ಷಿಗಳು ಎಂದು ಕರೆಯಲಾಗುತ್ತದೆ—ಅಭ್ಯಾಸಿಸಲು ಆರಂಭಿಸಿದೆ. ನಾನು ಇಡೀ ರಾತ್ರಿ ಬೈಬಲನ್ನು ಹಾಗೂ ಬೈಬಲ್ ಸಾಹಿತ್ಯವನ್ನು ಓದುತ್ತಾ ಇರುತ್ತಿದ್ದೆ. ಪಾದ್ರಿಯು ಹೇಳಿದ್ದ ಹಾಗೆ ಹೆಲೆನಳು ಪರ್ಗೆಟರಿಯಲ್ಲಿ ನರಳುತ್ತಾ ಇರಲಿಲ್ಲ, ಬದಲಾಗಿ ಅವಳು ಮರಣದಲ್ಲಿ ನಿದ್ರಿಸುತ್ತಿದ್ದಳು ಎಂಬುದನ್ನು ನಾನು ಕಲಿತುಕೊಂಡೆ. (ಯೋಬ 14:13, 14; ಯೋಹಾನ 11:11-14) ನಿಜವಾಗಿಯೂ, ಚಿನ್ನಕ್ಕಿಂತಲೂ ಮಿಗಿಲಾದದ್ದು ನನಗೆ ಸಿಕ್ಕಿತ್ತು—ಅದು ಸತ್ಯವಾಗಿತ್ತು!
ಕೆಲವು ವಾರಗಳ ಬಳಿಕ, ಪಿಟ್ಸ್ಬರ್ಗಿನ ಗಾರ್ಡನ್ ಥಿಯೇಟರ್ನಲ್ಲಿ ನಡೆದ ಬೈಬಲ್ ವಿದ್ಯಾರ್ಥಿಗಳೊಂದಿಗಿನ ಪ್ರಪ್ರಥಮ ಕೂಟದಲ್ಲಿ, ನಾನು ನನ್ನ ಕೈಯನ್ನೆತ್ತಿ ಹೀಗೆ ಹೇಳಿದೆ, “ನಾನು ಚರ್ಚಿನಲ್ಲಿ ಬೈಬಲಿನ ಕುರಿತು ಇಷ್ಟೆಲ್ಲ ವರ್ಷಗಳಲ್ಲಿ ಕಲಿತಿರುವುದಕ್ಕಿಂತಲೂ ಹೆಚ್ಚಿನ ವಿಷಯಗಳನ್ನು ಈ ಕೂಟದಲ್ಲಿ ಕಲಿತಿದ್ದೇನೆ.” ಕೂಟದ ನಂತರ, ಮರುದಿನ ಕ್ಷೇತ್ರ ಸೇವೆಯಲ್ಲಿ ಯಾರು ಭಾಗವಹಿಸಲು ಬಯಸುತ್ತೀರೆಂಬ ಪ್ರಶ್ನೆಯು ಕೇಳಲ್ಪಟ್ಟಾಗ, ನಾನು ಪುನಃ ಕೈಯೆತ್ತಿದೆ.
1931ರ ಅಕ್ಟೋಬರ್ 4ರಂದು, ನೀರಿನ ದೀಕ್ಷಾಸ್ನಾನದ ಮೂಲಕ ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ. ಈ ಮಧ್ಯೆ ನಾನು ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು, ನನ್ನ ಮಕ್ಕಳನ್ನು ನನ್ನ ಬಳಿಯೇ ಇರಿಸಿಕೊಳ್ಳಲು ಕರೆತಂದಿದ್ದೆ. ಅವರನ್ನು ನೋಡಿಕೊಳ್ಳಲಿಕ್ಕಾಗಿ ಒಬ್ಬ ಹೆಂಗಸನ್ನು ಕೆಲಸಕ್ಕಿಟ್ಟುಕೊಂಡೆ. ನನಗೆ ಕೌಟುಂಬಿಕ ಜವಾಬ್ದಾರಿಗಳಿದ್ದವಾದರೂ, 1932ರ ಜನವರಿ ತಿಂಗಳಿನಿಂದ 1933ರ ಜೂನ್ ತಿಂಗಳಿನ ವರೆಗೆ ನಾನು ಆಕ್ಸಿಲಿಯರಿ ಸೇವೆ ಎಂದು ಕರೆಯಲ್ಪಡುವ ವಿಶೇಷ ಸೇವೆಯಲ್ಲಿ ಪಾಲ್ಗೊಂಡು, ಬೈಬಲಿನ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ಪ್ರತಿ ತಿಂಗಳು 50ರಿಂದ 60 ತಾಸುಗಳನ್ನು ವ್ಯಯಿಸಿದೆ.
ಈ ಸಮಯದಲ್ಲಿಯೇ, ಸುಂದರ ಯುವತಿಯೊಬ್ಬಳು ಕೆಲಸಕ್ಕೆ ಹೋಗುವಾಗ ಮತ್ತು ಬರುವಾಗ ಯಾವಾಗಲೂ ನನ್ನ ಸ್ಟ್ರೀಟ್ಕಾರನ್ನೇ ಹತ್ತುವುದನ್ನು ನಾನು ಗಮನಿಸಿದೆ. ನನ್ನ ಕಾರಿನ ಕನ್ನಡಿಯಲ್ಲಿ ನಾವು ಪರಸ್ಪರ ನೋಡಿಕೊಳ್ಳುತ್ತಿದ್ದೆವು. ನನ್ನ ಹಾಗೂ ಮೇರಿಯ ಭೇಟಿಯಾದದ್ದು ಹೀಗೆಯೇ. ನಾವು ಪ್ರಣಯಾಚರಣೆ ನಡೆಸಿ, 1936ರ ಆಗಸ್ಟ್ ತಿಂಗಳಿನಲ್ಲಿ ವಿವಾಹವಾದೆವು.
1949ರಲ್ಲಿ, ನನ್ನ ಸೀನಿಯಾರಿಟಿ ಪ್ರಕಾರ ಶಿಫ್ಟ್ ಕೆಲಸ ಮಾಡುವ ಸಂದರ್ಭವು ದೊರಕಿತು. ಇದರಿಂದ ನಾನು ಪಯನೀಯರ್—ಪೂರ್ಣಸಮಯದ ಶುಶ್ರೂಷೆಯನ್ನು ಹೀಗೆ ಕರೆಯಲಾಗುತ್ತದೆ—ಸೇವೆಯನ್ನು ಮಾಡಸಾಧ್ಯವಾಯಿತು. ನನ್ನ ಕೊನೆಯ ಮಗಳಾದ ಜೀನಳು, 1945ರಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದ್ದಳು, ಮತ್ತು ನಾವು ಒಟ್ಟಿಗೆ ಪಯನೀಯರ್ ಸೇವೆಯನ್ನು ಮಾಡಿದೆವು. ತದನಂತರ, ಜೀನಳು ಸ್ಯಾಮ್ ಫ್ರೆಂಡ್ನನ್ನು ಸಂಧಿಸಿದಳು. ಅವನು ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ, ಅಂದರೆ ಬೆತೆಲ್ನಲ್ಲಿ ಸೇವೆಮಾಡುತ್ತಿದ್ದನು.a 1952ರಲ್ಲಿ ಅವರು ವಿವಾಹವಾದರು. ನಾನು ಪಿಟ್ಸ್ಬರ್ಗಿನಲ್ಲೇ ಪಯನೀಯರ್ ಸೇವೆಯನ್ನು ಮುಂದುವರಿಸಿದೆ ಮತ್ತು ಅನೇಕ ಬೈಬಲ್ ಅಭ್ಯಾಸಗಳನ್ನು—ಒಂದೊಮ್ಮೆ ಪ್ರತಿ ವಾರ 14 ಬೇರೆ ಬೇರೆ ಕುಟುಂಬಗಳೊಂದಿಗೆ—ನಡಿಸಿದೆ. 1958ರಲ್ಲಿ, ಸ್ಟ್ರೀಟ್ಕಾರ್ ಉದ್ಯೋಗದಿಂದ ನಾನು ನಿವೃತ್ತನಾದೆ. ನಿವೃತ್ತನಾದ ಬಳಿಕ ಪಯನೀಯರ್ ಸೇವೆಯನ್ನು ಮಾಡುವುದು ತುಂಬ ಸುಲಭವಾಗಿತ್ತು, ಏಕೆಂದರೆ ಈಗ ನಾನು ಐಹಿಕವಾಗಿ ದಿನವೊಂದಕ್ಕೆ ಎಂಟು ತಾಸುಗಳಷ್ಟು ಕೆಲಸಮಾಡುವ ಅಗತ್ಯವಿರಲಿಲ್ಲ.
1983ರಲ್ಲಿ, ಮೇರಿ ಅಸ್ವಸ್ಥಳಾದಳು. ಸುಮಾರು 50 ವರ್ಷಗಳ ವರೆಗೆ ಮೇರಿ ಅಷ್ಟು ಚೆನ್ನಾಗಿ ನನ್ನ ಆರೈಕೆಮಾಡಿದ್ದರಿಂದ, ನಾನು ಸಹ ಅವಳ ಆರೈಕೆಮಾಡಲು ಪ್ರಯತ್ನಿಸಿದೆ. ಕೊನೆಗೆ, 1986ರ ಸೆಪ್ಟೆಂಬರ್ 14ರಂದು ಅವಳು ಮೃತಪಟ್ಟಳು.
ನನ್ನ ಜನ್ಮಸ್ಥಳವನ್ನು ಕಂಡುಕೊಳ್ಳುವುದು
1989ರಲ್ಲಿ, ಜೀನ್ ಹಾಗೂ ಸ್ಯಾಮ್ ನನ್ನನ್ನು ಪೋಲೆಂಡ್ನಲ್ಲಿನ ಅಧಿವೇಶನಗಳಿಗೆ ಕರೆದುಕೊಂಡುಹೋದರು. ನಾನು ಎಲ್ಲಿ ಬೆಳೆದಿದ್ದೆನೋ ಆ ಸ್ಥಳವನ್ನೂ ನಾವು ಸಂದರ್ಶಿಸಿದೆವು. ಲೋಕದ ಆ ಭಾಗವನ್ನು ರಷ್ಯದವರು ವಶಪಡಿಸಿಕೊಂಡಾಗ, ಅವರು ಆ ಪಟ್ಟಣಗಳ ಹೆಸರನ್ನು ಬದಲಾಯಿಸಿದರು ಮತ್ತು ಜನರನ್ನು ಬೇರೆ ದೇಶಗಳಿಗೆ ಗಡೀಪಾರುಮಾಡಿದರು. ನನ್ನ ಅಣ್ಣಂದಿರಲ್ಲಿ ಒಬ್ಬನನ್ನು ಇಸ್ತಾಮ್ಬುಲ್ಗೆ ಹಾಗೂ ಅಕ್ಕನನ್ನು ರಷ್ಯಕ್ಕೆ ಗಡೀಪಾರುಮಾಡಲಾಗಿತ್ತು. ಮತ್ತು ನಾನು ಯಾರ ಬಳಿ ವಿಚಾರಿಸಿದೆನೋ ಅವರಿಗೆ ನನ್ನ ಹಳ್ಳಿಯ ಹೆಸರು ಅಪರಿಚಿತವಾಗಿತ್ತು.
ಆಗ ದೂರದಲ್ಲಿದ್ದ ಕೆಲವು ಪರ್ವತಗಳು ನನಗೆ ಚಿರಪರಿಚಿತವಾಗಿ ಕಂಡವು. ನಾವು ಆ ಊರಿಗೆ ಹೆಚ್ಚೆಚ್ಚು ಸಮೀಪವಾದಂತೆ, ಇನ್ನಿತರ ಹೆಗ್ಗುರುತುಗಳನ್ನು—ಒಂದು ಪರ್ವತ, ರಸ್ತೆಯಲ್ಲಿನ ಕವಲು, ಒಂದು ಚರ್ಚು, ನದಿಯ ಮೇಲಿನ ಸೇತುವೆ—ಗುರುತಿಸಲು ಸಾಧ್ಯವಾಯಿತು. ಇದ್ದಕ್ಕಿದ್ದಂತೆ, ನಮಗೆ ಆಶ್ಚರ್ಯವಾಗುವಂತೆ, “ಹೊಸೊಚೆಕ್” ಎಂದು ಬರೆದಿದ್ದ ಒಂದು ಹೆಸರುಕಂಬವನ್ನು ನಾವು ನೋಡಿದೆವು! ಇತ್ತೀಚೆಗೆ, ಕಮ್ಯೂನಿಸ್ಟರ ಅಧಿಕಾರವು ಇಲ್ಲವಾಗಿದ್ದು, ಆ ಹಳ್ಳಿಗಳ ಮೂಲ ಹೆಸರುಗಳು ಪುನಃ ಉಪಯೋಗಿಸಲ್ಪಡುತ್ತಿದ್ದವು.
ನಮ್ಮ ಮನೆಯು ಅಲ್ಲಿರಲಿಲ್ಲ, ಆದರೆ ಮನೆಯ ಹೊರಗೆ ಅಡುಗೆಗಾಗಿ ಉಪಯೋಗಿಸಲ್ಪಡುತ್ತಿದ್ದ, ನೆಲದಲ್ಲಿ ಸ್ವಲ್ಪ ಹೂಳಲ್ಪಟ್ಟಿದ್ದ ಗೂಡು ಒಲೆಯು ಅಲ್ಲಿತ್ತು. ಬಳಿಕ ನಾನು ದೊಡ್ಡ ಮರವೊಂದರ ಕಡೆಗೆ ಕೈತೋರಿಸುತ್ತಾ ಹೇಳಿದ್ದು: “ಅಗೋ, ಆ ಮರವನ್ನು ನೋಡಿ. ಅಮೆರಿಕಕ್ಕೆ ಹೋಗುವ ಮೊದಲು ನಾನು ಅದನ್ನು ನೆಟ್ಟಿದ್ದೆ. ಈಗ ಎಷ್ಟು ದೊಡ್ಡದಾಗಿದೆ ನೋಡಿ!” ತದನಂತರ ನಾವು ಕುಟುಂಬದ ಸದಸ್ಯರ ಹೆಸರುಗಳನ್ನು ಹುಡುಕುತ್ತಾ ಸಮಾಧಿಗಳನ್ನು ಸಂದರ್ಶಿಸಿದೆವು, ಆದರೆ ನಮಗೆ ಯಾವ ಹೆಸರುಗಳೂ ಸಿಕ್ಕಲಿಲ್ಲ.
ಸತ್ಯವನ್ನು ಪ್ರಥಮ ಸ್ಥಾನದಲ್ಲಿಡುವುದು
1993ರಲ್ಲಿ ಜೀನಳ ಗಂಡನು ಮೃತಪಟ್ಟಾಗ, ನನ್ನ ಆರೈಕೆಮಾಡಲಿಕ್ಕಾಗಿ ತಾನು ಬೆತೆಲನ್ನು ಬಿಟ್ಟುಬರಲೋ ಎಂದು ಅವಳು ನನ್ನನ್ನು ಕೇಳಿದಳು. ನೀನು ಹಾಗೆ ಮಾಡುವುದು ತಪ್ಪು ಎಂದು ನಾನು ಅವಳಿಗೆ ಹೇಳಿದೆ, ಮತ್ತು ನನ್ನ ಅನಿಸಿಕೆಗಳು ಇನ್ನೂ ಅವೇ ಆಗಿವೆ. 102 ವರ್ಷದವನಾಗುವ ವರೆಗೆ ನನ್ನ ಆರೈಕೆಯನ್ನು ನಾನೇ ಮಾಡಿಕೊಳ್ಳುತ್ತಿದ್ದೆ. ಆದರೆ ಆ ಬಳಿಕ ನಾನು ನರ್ಸಿಂಗ್ ಹೋಮ್ಗೆ ಹೋಗಬೇಕಾಯಿತು. ಈಗಲೂ ನಾನು ಪಿಟ್ಸ್ಬರ್ಗ್ನಲ್ಲಿರುವ ಬೆಲ್ವ್ಯೂ ಸಭೆಯಲ್ಲಿ ಹಿರಿಯನಾಗಿದ್ದೇನೆ, ಮತ್ತು ಆದಿತ್ಯವಾರಗಳಂದು ಸಹೋದರರು ಬಂದು ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ನನ್ನನ್ನು ಕರೆದೊಯ್ಯುತ್ತಾರೆ. ಈಗ ನನ್ನ ಸಾರುವ ಚಟುವಟಿಕೆಯು ತೀರ ಸೀಮಿತವಾಗಿರುವುದಾದರೂ, ನಾನು ಇನ್ಫರ್ಮ್ (ಅಶಕ್ತರ) ಪಯನೀಯರ್ ಪಟ್ಟಿಯಲ್ಲೇ ಇದ್ದೇನೆ.
ಗತ ವರ್ಷಗಳಲ್ಲಿ, ಮೇಲ್ವಿಚಾರಕರ ತರಬೇತಿಗಾಗಿ ವಾಚ್ ಟವರ್ ಸೊಸೈಟಿಯಿಂದ ಏರ್ಪಡಿಸಲ್ಪಟ್ಟ ವಿಶೇಷ ಶಾಲೆಗಳಲ್ಲಿ ನಾನು ಆನಂದಿಸಿದ್ದೇನೆ. ಕಳೆದ ಡಿಸೆಂಬರ್ನಲ್ಲಿ, ಸಭಾ ಹಿರಿಯರಿಗಾಗಿದ್ದ ರಾಜ್ಯ ಶುಶ್ರೂಷಾ ಶಾಲೆಯ ಸೆಶನ್ಗಳಲ್ಲಿ ಕೆಲವನ್ನು ಹಾಜರಾದೆ. ಮತ್ತು ಕಳೆದ ಏಪ್ರಿಲ್ 11ರಂದು ಜೀನ್ ನನ್ನನ್ನು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಕರೆದೊಯ್ದಳು; 1931ರಿಂದ ಪ್ರತಿ ವರ್ಷ ಆ ಆಚರಣೆಯಲ್ಲಿ ಭಾಗಿಯಾಗುವ ಸುಯೋಗವನ್ನು ನಾನು ಅಮೂಲ್ಯವಾದದ್ದಾಗಿ ಎಣಿಸುತ್ತೇನೆ.
ನಾನು ಯಾರೊಂದಿಗೆ ಬೈಬಲಭ್ಯಾಸವನ್ನು ನಡಿಸಿದ್ದೇನೋ ಅವರಲ್ಲಿ ಕೆಲವರು, ಈಗ ಹಿರಿಯರಾಗಿ, ಇನ್ನಿತರರು ದಕ್ಷಿಣ ಆಫ್ರಿಕದಲ್ಲಿ ಮಿಷನೆರಿಗಳಾಗಿ, ಮತ್ತು ಕೆಲವರು ಅಜ್ಜಅಜ್ಜಿಯರಾಗಿದ್ದು, ತಮ್ಮ ಮಕ್ಕಳೊಂದಿಗೆ ದೇವರ ಸೇವೆಮಾಡುತ್ತಿದ್ದಾರೆ. ನನ್ನ ಸ್ವಂತ ಮಕ್ಕಳಲ್ಲಿ ಮೂವರು—ಮೇರಿ ಜೇನ್, ಜಾನ್, ಹಾಗೂ ಜೀನ್—ಹಾಗೂ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು, ಯೆಹೋವ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುತ್ತಿದ್ದಾರೆ. ಎಂದಾದರೂ ನನ್ನ ಇನ್ನೊಬ್ಬ ಮಗಳು ಹಾಗೂ ನನ್ನ ಮೊಮ್ಮಕ್ಕಳು ಹಾಗೂ ಮರಿಮಕ್ಕಳಲ್ಲಿ ಉಳಿದವರು, ಅದೇ ರೀತಿಯ ನಿಲುವನ್ನು ತೆಗೆದುಕೊಳ್ಳಲಿ ಎನ್ನುವುದೇ ನನ್ನ ಪ್ರಾರ್ಥನೆಯಾಗಿದೆ.
ಈಗ ನನ್ನ 105ನೆಯ ಪ್ರಾಯದಲ್ಲಿ, ಬೈಬಲನ್ನು ಅಭ್ಯಾಸಿಸುವಂತೆ ಹಾಗೂ ತಾವು ಕಲಿತಿರುವ ವಿಷಯದ ಕುರಿತು ಇತರರೊಂದಿಗೆ ಮಾತಾಡುವಂತೆ ನಾನು ಪ್ರತಿಯೊಬ್ಬರನ್ನೂ ಉತ್ತೇಜಿಸುತ್ತೇನೆ. ಹೌದು, ನೀವು ಯೆಹೋವನಿಗೆ ಆಪ್ತರಾಗಿ ಉಳಿಯುವಲ್ಲಿ, ನೀವು ಎಂದಿಗೂ ಆಶಾಭಂಗಗೊಳ್ಳುವುದಿಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ. ಆಗ, ನಶಿಸಿಹೋಗುವ ಚಿನ್ನಕ್ಕಿಂತಲೂ ಮಿಗಿಲಾದುದರಲ್ಲಿ ನೀವು ಆನಂದಿಸಸಾಧ್ಯವಿದೆ. ಅದು ಜೀವದಾತನಾದ ಯೆಹೋವ ದೇವರೊಂದಿಗೆ ಒಂದು ಅಮೂಲ್ಯವಾದ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಮಾಡುವ ಸತ್ಯವೇ ಆಗಿದೆ.
[ಅಧ್ಯಯನ ಪ್ರಶ್ನೆಗಳು]
a ಸ್ಯಾಮ್ ಫ್ರೆಂಡ್ನ ಕುರಿತಾದ ಜೀವನ ಕಥೆಯು, ಆಗಸ್ಟ್ 1, 1986ರ ದ ವಾಚ್ಟವರ್ ಸಂಚಿಕೆಯ, 22-6ನೆಯ ಪುಟಗಳಲ್ಲಿ ಕಂಡುಬರುತ್ತದೆ.
[ಪುಟ 26 ರಲ್ಲಿರುವ ಚಿತ್ರ]
ನಾನು ನನ್ನ ಸ್ಟ್ರೀಟ್ ಕಾರನ್ನು ನಡೆಸುತ್ತಿದ್ದಾಗ
[ಪುಟ 26 ರಲ್ಲಿರುವ ಚಿತ್ರ]
ನಾನು ಈಗ ವಾಸಿಸುತ್ತಿರುವ ನರ್ಸಿಂಗ್ ಹೋಮ್ನಲ್ಲಿ
[ಪುಟ 27 ರಲ್ಲಿರುವ ಚಿತ್ರ]
1989ರಲ್ಲಿ ನಾವು ಕಂಡುಕೊಂಡ ಒಂದು ರಸ್ತೆಯ ಹೆಸರುಕಂಬ