ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಇರಿ!
ನಮ್ಮ ದೀಕ್ಷಾಸ್ನಾನದ ದಿನವು, ನಾವು ಯಾವಾಗಲೂ ಆದರಿಸಬೇಕಾದ ಹಾಗೂ ಜ್ಞಾಪಿಸಿಕೊಳ್ಳಬೇಕಾದ ಒಂದು ದಿನವಾಗಿದೆ. ಎಷ್ಟೆಂದರೂ, ದೇವರನ್ನು ಸೇವಿಸುವ ಸಮರ್ಪಣೆಯನ್ನು ನಾವು ಮಾಡಿದ್ದೇವೆ ಎಂಬುದನ್ನು ನಾವು ಅದೇ ದಿನದಂದು ಸಾರ್ವಜನಿಕವಾಗಿ ಘೋಷಿಸುತ್ತೇವೆ.
ಅನೇಕ ವ್ಯಕ್ತಿಗಳಿಗೆ ಈ ಹಂತವನ್ನು ತಲಪಲು ಅತ್ಯಧಿಕ ಪ್ರಯತ್ನವನ್ನು ಮಾಡಬೇಕಾಗುತ್ತದೆ, ಅಂದರೆ, ದೀರ್ಘಕಾಲದಿಂದ ಇರುವ ದುರಭ್ಯಾಸಗಳನ್ನು ಬಿಟ್ಟುಬಿಡುವುದು, ಕೆಟ್ಟ ಸಹವಾಸಿಗಳನ್ನು ದೂರಮಾಡುವುದು, ಆಳವಾಗಿ ಬೇರೂರಿರುವ ಆಲೋಚನಾ ವಿಧಾನಗಳನ್ನು ಹಾಗೂ ವರ್ತನೆಗಳನ್ನು ಬದಲಾಯಿಸುವುದಾಗಿದೆ.
ಕ್ರೈಸ್ತನೊಬ್ಬನ ಜೀವಿತದಲ್ಲಿ ದೀಕ್ಷಾಸ್ನಾನವು ಸಂತೋಷಕರವಾದ ಹಾಗೂ ಅರ್ಥಗರ್ಭಿತ ಘಟನೆಯಾಗಿರುವುದಾದರೂ, ಅದು ಕೇವಲ ಒಂದು ಆರಂಭವಾಗಿದೆ. ಯೂದಾಯದಲ್ಲಿರುವ ದೀಕ್ಷಾಸ್ನಾನಿತ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೇಳಿದ್ದು: “ನಾವು ಈಗ ಕ್ರಿಸ್ತನ ಕುರಿತಾದ ಮೂಲಭೂತ ಸಿದ್ಧಾಂತವನ್ನು ಬಿಟ್ಟುಬಿಟ್ಟಿರುವುದರಿಂದ, ನಾವು ಪ್ರೌಢತೆಯ ಕಡೆಗೆ ಸಾಗೋಣ.” (ಇಬ್ರಿಯ 6:1, NW) ಹೌದು, ಎಲ್ಲ ಕ್ರೈಸ್ತರು “ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ”ವರಾಗಬೇಕು. (ಎಫೆಸ 4:13) ಪ್ರೌಢತೆಯ ಹಂತವನ್ನು ತಲಪುವ ವರೆಗೆ ಪ್ರಗತಿಮಾಡುತ್ತಾ ಇರುವ ಮೂಲಕವಾಗಿ ಮಾತ್ರ, ನಾವು ನಿಜವಾಗಿಯೂ “ನಂಬಿಕೆಯಲ್ಲಿ ನೆಲೆಗೊಂಡಿ”ರಸಾಧ್ಯವಿದೆ.—ಕೊಲೊಸ್ಸೆ 2:7.
ಗತಿಸಿದ ಕೆಲವು ವರ್ಷಗಳಲ್ಲಿ, ಸಮರ್ಪಣೆಮಾಡಿಕೊಂಡಿರುವ ಸಾವಿರಾರು ಮಂದಿ ಹೊಸ ಆರಾಧಕರು ಕ್ರೈಸ್ತ ಸಭೆಗೆ ಬಂದಿದ್ದಾರೆ. ನೀವು ಸಹ ಅವರಲ್ಲಿ ಒಬ್ಬರಾಗಿರಬಹುದು. ನಿಮ್ಮ ಪ್ರಥಮ ಶತಮಾನದ ಸಹೋದರರಂತೆ, ನೀವು ಆತ್ಮಿಕ ಶೈಶವಾವಸ್ಥೆಯಲ್ಲಿಯೇ ಉಳಿಯಲು ಬಯಸುವುದಿಲ್ಲ. ಬೆಳೆಯಲು, ಪ್ರಗತಿಮಾಡಲು ನೀವು ಬಯಸುತ್ತೀರಿ! ಆದರೆ ಹೇಗೆ? ಮತ್ತು ನೀವು ಅಂತಹ ಪ್ರಗತಿಯನ್ನು ಮಾಡಸಾಧ್ಯವಿರುವ ಕೆಲವು ವಿಧಗಳು ಯಾವುವು?
ವೈಯಕ್ತಿಕ ಅಧ್ಯಯನದ ಮೂಲಕ ಪ್ರಗತಿಮಾಡುವುದು
ಪೌಲನು ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಹೇಳಿದ್ದು: “ಮತ್ತು ನಾನು ದೇವರನ್ನು ಪಾರ್ಥಿಸಿ—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ [ನಿಷ್ಕೃಷ್ಟ ಜ್ಞಾನದಿಂದ] ಕೂಡಿ ಉತ್ತಮ ಕಾರ್ಯಗಳು ಯಾವವೆಂದು ನೀವು ವಿವೇಚಿಸುವವರಾಗಬೇಕೆಂತಲೂ . . . ಬೇಡಿಕೊಳ್ಳುತ್ತೇನೆ.” (ಫಿಲಿಪ್ಪಿ 1:9, 10) “ನಿಷ್ಕೃಷ್ಟ ಜ್ಞಾನ”ದಲ್ಲಿ ಬೆಳೆಯುವುದು, ನಿಮ್ಮ ಆತ್ಮಿಕ ಪ್ರಗತಿಗೆ ಅತ್ಯಗತ್ಯವಾಗಿದೆ. ‘ಯೆಹೋವನ ಹಾಗೂ ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು,’ ದೀಕ್ಷಾಸ್ನಾನದ ಬಳಿಕ ನಿಂತುಹೋಗದ ವಿಷಯವಾಗಿರದೆ, ಮುಂದುವರಿಯುತ್ತಾ ಇರುವ ಕಾರ್ಯಗತಿಯಾಗಿದೆ.—ಯೋಹಾನ 17:3.
ಆ್ಯಲೆಕ್ಸಾಂಡ್ರಿಯ ಎಂಬ ಹೆಸರಿನ ಒಬ್ಬ ಕ್ರೈಸ್ತ ಸಹೋದರಿಯು, ತನ್ನ 16 ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದುಕೊಂಡರೂ, ಇದನ್ನು ಹತ್ತು ವರ್ಷಗಳ ಬಳಿಕ ಅರ್ಥಮಾಡಿಕೊಂಡಳು. ಅವಳು ಸತ್ಯದಲ್ಲೇ ಬೆಳೆದಿದ್ದಳು ಮತ್ತು ಯಾವಾಗಲೂ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಳು ಹಾಗೂ ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದಳು. ಅವಳು ಬರೆಯುವುದು: “ಕಳೆದ ಕೆಲವು ತಿಂಗಳುಗಳಲ್ಲಿ, ಏನೋ ತಪ್ಪನ್ನು ಮಾಡುತ್ತಿದ್ದೇನೆ ಎಂಬುದನ್ನು ನಾನು ಗ್ರಹಿಸಿದೆ. ನನ್ನನ್ನು ಕೂಲಂಕಷವಾಗಿ, ಅಂದರೆ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಲು ನಿರ್ಧರಿಸಿದೆ. ಸತ್ಯದ ಕುರಿತು ನನ್ನ ಅನಿಸಿಕೆ ಏನು, ಮತ್ತು ನಾನೇಕೆ ಇನ್ನೂ ಸತ್ಯದಲ್ಲಿದ್ದೇನೆ ಎಂದು ಪ್ರಶ್ನಿಸಿಕೊಂಡೆ.” ಅವಳು ಏನನ್ನು ಕಂಡುಕೊಂಡಳು? ಅವಳು ಹೀಗೆ ಮುಂದುವರಿಸುತ್ತಾಳೆ: “ನಾನು ಸತ್ಯದಲ್ಲಿರುವುದರಿಂದ ನನ್ನನ್ನು ಕಾಡುತ್ತಿದ್ದ ಕಾರಣಗಳನ್ನು ನಾನು ಕಂಡುಕೊಂಡೆ. ನಾನು ದೊಡ್ಡವಳಾಗುತ್ತಿದ್ದಾಗ, ಕೂಟಗಳು ಹಾಗೂ ಕ್ಷೇತ್ರ ಸೇವೆಗೆ ಹೆಚ್ಚು ಒತ್ತನ್ನು ಕೊಡಲಾಗುತ್ತಿತ್ತು ಎಂಬುದನ್ನು ನಾನು ಜ್ಞಾಪಿಸಿಕೊಂಡೆ. ಇದರಿಂದ ವೈಯಕ್ತಿಕ ಅಭ್ಯಾಸ ಹಾಗೂ ಪ್ರಾರ್ಥನೆ ಮಾಡುವಂತಹ ಹವ್ಯಾಸಗಳು ತಾವಾಗಿಯೇ ರೂಢಿಯಾಗುತ್ತವೆ ಎಂದು ನೆನಸಲಾಗಿತ್ತು. ಆದರೆ ನನ್ನ ಸನ್ನಿವೇಶವನ್ನು ನಾನು ವಿಶ್ಲೇಷಿಸಿದಾಗ, ಇದು ಸಂಭವಿಸಲಿಲ್ಲ ಎಂಬುದನ್ನು ನಾನು ಕಂಡುಕೊಂಡೆ.”
ಅಪೊಸ್ತಲ ಪೌಲನು ಬುದ್ಧಿವಾದ ಹೇಳುವುದು: “ಆದರೆ ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ [“ನಿಯತಕ್ರಮವನ್ನೇ,” NW] ಅನುಸರಿಸಿ ನಡೆಯೋಣ.” (ಫಿಲಿಪ್ಪಿ 3:16) ಒಂದು ನಿಯತಕ್ರಮವು, ಮುನ್ನಡಿಯಿಡುವ ಮಾರ್ಗಕ್ರಮವನ್ನು ಸ್ಥಾಪಿಸುತ್ತದೆ. ನಿಮ್ಮ ದೀಕ್ಷಾಸ್ನಾನಕ್ಕೆ ಮೊದಲು, ಒಬ್ಬ ಅರ್ಹ ಶಿಕ್ಷಕನೊಂದಿಗೆ ನೀವು ಬೈಬಲ್ ಅಭ್ಯಾಸದ ಸಾಪ್ತಾಹಿಕ ನಿಯತಕ್ರಮವನ್ನು ನಡೆಸುತ್ತಿದ್ದಿರಿ ಎಂಬುದು ನಿಸ್ಸಂಶಯ. ಅದಕ್ಕಾಗಿರುವ ನಿಮ್ಮ ಗಣ್ಯತೆಯು ಬೆಳೆದಂತೆ, ಪ್ರತಿ ವಾರದ ಪಾಠಕ್ಕಾಗಿ ಮುಂದಾಗಿಯೇ ತಯಾರಿಸುವುದು, ಬೈಬಲಿನಲ್ಲಿ ಉಲ್ಲೇಖಿತ ವಚನಗಳನ್ನು ತೆರೆದು ನೋಡುವುದು ಇನ್ನು ಮುಂತಾದವುಗಳನ್ನು ನೀವು ಈ ನಿಯತಕ್ರಮದಲ್ಲಿ ಒಳಗೂಡಿಸಿದಿರಿ. ಈಗ ನೀವು ದೀಕ್ಷಾಸ್ನಾನ ಪಡೆದುಕೊಂಡಿರುವುದರಿಂದ, ‘ಅದೇ ನಿಯತಕ್ರಮವನ್ನು ಅನುಸರಿಸಿ ನಡೆ’ಯುತ್ತಿದ್ದೀರೊ?
ಇಲ್ಲದಿರುವಲ್ಲಿ, ನೀವು ನಿಮ್ಮ ಆದ್ಯತೆಗಳನ್ನು ಪುನಃ ಪರೀಕ್ಷಿಸಿ, ‘ಉತ್ತಮ ಕಾರ್ಯಗಳು ಯಾವವೆಂದು ವಿವೇಚಿಸುವ’ ಅಗತ್ಯವಿರಬಹುದು. (ಫಿಲಿಪ್ಪಿ 1:10) ನಮ್ಮ ಕಾರ್ಯಮಗ್ನ ಜೀವಿತಗಳಲ್ಲಿ, ವೈಯಕ್ತಿಕ ಬೈಬಲ್ ವಾಚನ ಹಾಗೂ ಅಧ್ಯಯನಕ್ಕಾಗಿ ಸಮಯವನ್ನು ಬದಿಗಿರಿಸಲು, ಆತ್ಮನಿಯಂತ್ರಣದ ಅಗತ್ಯವಿದೆ. ಆದರೆ ಅದರ ಪ್ರಯೋಜನಗಳು, ಅಂತಹ ಪ್ರಯತ್ನಕ್ಕೆ ಸಾರ್ಥಕವಾಗಿವೆ. ಪುನಃ ಆ್ಯಲೆಕ್ಸಾಂಡ್ರಿಯಳ ಅನುಭವವನ್ನು ಪರಿಗಣಿಸಿರಿ. “ನಾನು ಕಳೆದ 20 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳಿಂದ ಸತ್ಯದಲ್ಲೇ ಇದ್ದೇನೆ, ಆದರೆ ನಾನು ಸುಮ್ಮನೆ ಕೂಟಗಳಿಗೆ ಹೋಗುತ್ತೇನೆ ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತೇನೆ ಎಂದು ನಾನು ಹೇಳಬೇಕಾಗಿದೆ” ಎಂದು ಅವಳು ಒಪ್ಪಿಕೊಳ್ಳುತ್ತಾಳೆ. ಆದರೂ, ಅವಳು ಹೀಗೆ ಮುಂದುವರಿಸುತ್ತಾಳೆ, “ಈ ವಿಷಯಗಳು ಹೆಚ್ಚು ಪ್ರಾಮುಖ್ಯವಾಗಿವೆಯಾದರೂ, ಕಷ್ಟಗಳು ಎದುರಾಗುವಾಗ ಕೇವಲ ಇವುಗಳು ಮಾತ್ರ ನನ್ನನ್ನು ಕಾಪಾಡಲು ಸಾಧ್ಯವಿಲ್ಲ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಇದೆಲ್ಲವೂ ಸ್ಪಷ್ಟವಾಗಿ ಕಂಡುಬರಲು ಕಾರಣವೇನೆಂದರೆ, ನನ್ನ ವೈಯಕ್ತಿಕ ಅಭ್ಯಾಸದ ಹವ್ಯಾಸಗಳು ಕಾರ್ಯತಃ ಅಸ್ತಿತ್ವದಲ್ಲಿರಲಿಲ್ಲ, ಮತ್ತು ನನ್ನ ಪ್ರಾರ್ಥನೆಗಳು ಅನಿರ್ದಿಷ್ಟವಾಗಿದ್ದವು ಹಾಗೂ ಅಂತರಾಳದಿಂದ ಬಂದವುಗಳಾಗಿರಲಿಲ್ಲ. ನಾನು ನನ್ನ ಆಲೋಚನೆಯನ್ನು ಸರಿಪಡಿಸಬೇಕು ಮತ್ತು ಅರ್ಥಭರಿತವಾದ ಒಂದು ಅಭ್ಯಾಸ ಕಾರ್ಯಕ್ರಮವನ್ನು ಆರಂಭಿಸಬೇಕು ಎಂಬುದನ್ನು ಈಗ ನಾನು ಅರ್ಥಮಾಡಿಕೊಳ್ಳುತ್ತೇನೆ. ಇದರಿಂದ ನಾನು ನಿಜವಾಗಿಯೂ ಯೆಹೋವನ ಬಗ್ಗೆ ತಿಳಿದುಕೊಳ್ಳಸಾಧ್ಯವಿದೆ ಮತ್ತು ಆತನನ್ನು ಪ್ರೀತಿಸಸಾಧ್ಯವಿದೆ ಹಾಗೂ ಆತನ ಮಗನು ನಮಗೆ ಏನನ್ನು ಕೊಟ್ಟಿದ್ದಾನೋ ಅದಕ್ಕಾಗಿ ಗಣ್ಯತೆಯನ್ನು ತೋರಿಸಸಾಧ್ಯವಿದೆ.”
ವೈಯಕ್ತಿಕ ಅಧ್ಯಯನದ ಪ್ರಯೋಜನಕರವಾದ ನಿಯತಕ್ರಮವನ್ನು ಸ್ಥಾಪಿಸುವುದರಲ್ಲಿ ನಿಮಗೆ ಸಹಾಯವು ಬೇಕಾಗಿರುವುದಾದರೆ, ನಿಮ್ಮ ಸಭೆಯಲ್ಲಿರುವ ಹಿರಿಯರು ಹಾಗೂ ಇನ್ನಿತರ ಪ್ರೌಢ ಕ್ರೈಸ್ತರು ನಿಮಗೆ ಸಹಾಯ ಮಾಡಲು ಸಂತೋಷಪಡುವರು. ಇದಲ್ಲದೆ, ಕಾವಲಿನಬುರುಜು ಪತ್ರಿಕೆಯ, ಮೇ 1, 1995; ಆಗಸ್ಟ್ 15, 1993; ಮತ್ತು ಮೇ 15, 1986 (ಇಂಗ್ಲಿಷ್)ರ ಸಂಚಿಕೆಗಳಲ್ಲಿ ಅನೇಕ ಸಹಾಯಕಾರಿ ಸಲಹೆಗಳಿವೆ.
ದೇವರಿಗೆ ನಿಕಟವಾಗಿರುವ ಅಗತ್ಯ
ನೀವು ಪ್ರಗತಿಯನ್ನು ಮಾಡಲು ಶ್ರಮಿಸಬೇಕಾಗಿರುವ ಇನ್ನೊಂದು ಕ್ಷೇತ್ರವು, ದೇವರೊಂದಿಗಿನ ನಿಮ್ಮ ಸಂಬಂಧವಾಗಿದೆ. ಕೆಲವು ಸಂದರ್ಭಗಳಲ್ಲಿ, ಈ ವಿಚಾರದಲ್ಲಿ ತೀವ್ರವಾದ ಅಗತ್ಯವು ಸಹ ಇರಬಹುದು. ಆ್ಯಂಟನಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಅವನು ಬಹಳ ಚಿಕ್ಕ ಪ್ರಾಯದಲ್ಲಿಯೇ ದೀಕ್ಷಾಸ್ನಾನ ಪಡೆದುಕೊಂಡಿದ್ದನು. “ನಮ್ಮ ಕುಟುಂಬದಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಮಕ್ಕಳಲ್ಲಿ ನಾನು ಮೊದಲಿಗನಾಗಿದ್ದೆ” ಎಂದು ಅವನು ಹೇಳುತ್ತಾನೆ. “ನನ್ನ ದೀಕ್ಷಾಸ್ನಾನದ ಬಳಿಕ, ನನ್ನ ತಾಯಿ ನನ್ನನ್ನು ಪ್ರೀತಿಯಿಂದ ತಬ್ಬಿಕೊಂಡರು. ಈ ಹಿಂದೆ ಅವರು ಇಷ್ಟು ಸಂತೋಷಗೊಂಡಿದ್ದನ್ನು ನಾನು ಎಂದೂ ನೋಡಿರಲಿಲ್ಲ. ತುಂಬ ಸಂತೋಷದ ವಾತಾವರಣವಿತ್ತು, ಮತ್ತು ನನಗೆ ಆತ್ಮಿಕವಾಗಿ ಬಲವಾದ ಅನಿಸಿಕೆಯಾಯಿತು.” ಆದರೂ, ಇದೇ ಚಿತ್ರಣಕ್ಕೆ ಇನ್ನೊಂದು ಸನ್ನಿವೇಶವಿತ್ತು. “ಸ್ವಲ್ಪ ಸಮಯದ ವರೆಗೆ, ನಮ್ಮ ಸಭೆಯಲ್ಲಿ ಯಾವ ಯುವ ಜನರೂ ದೀಕ್ಷಾಸ್ನಾನ ಪಡೆದುಕೊಳ್ಳಲಿಲ್ಲ” ಎಂದು ಆ್ಯಂಟನಿ ಮುಂದುವರಿಸುತ್ತಾನೆ. “ಆದುದರಿಂದ ನಾನು ನನ್ನ ಬಗ್ಗೆ ತುಂಬ ಹೆಮ್ಮೆಪಟ್ಟೆ. ಕೂಟಗಳಲ್ಲಿ ನಾನು ನೀಡುವ ಹೇಳಿಕೆಗಳು ಹಾಗೂ ಭಾಷಣಗಳಲ್ಲಿಯೂ ನಾನು ಆನಂದವನ್ನು ಕಂಡುಕೊಂಡೆ. ಯೆಹೋವನಿಗೆ ಸ್ತುತಿಯನ್ನು ತರುವುದಕ್ಕಿಂತಲೂ, ಜನರ ಹೊಗಳಿಕೆ ಹಾಗೂ ಮೆಚ್ಚುಗೆಯನ್ನು ಪಡೆದುಕೊಳ್ಳುವುದು ನನಗೆ ಹೆಚ್ಚು ಪ್ರಾಮುಖ್ಯವಾದದ್ದಾಗಿ ಪರಿಣಮಿಸಿತು. ನಿಜ ಹೇಳಬೇಕೆಂದರೆ ಆತನೊಂದಿಗೆ ನನಗೆ ಒಂದು ಆಪ್ತ ಸಂಬಂಧವು ಇರಲಿಲ್ಲ.”
ಆ್ಯಂಟನಿಯಂತೆ, ಕೆಲವರು ಯೆಹೋವನನ್ನು ಸಂತೋಷಪಡಿಸುವ ಅಪೇಕ್ಷೆಯಿಂದಲ್ಲ, ಇತರರನ್ನು ಸಂತೋಷಪಡಿಸುವ ಹೆಚ್ಚಿನ ಅಪೇಕ್ಷೆಯಿಂದ ಸಮರ್ಪಣೆಯನ್ನು ಮಾಡಿಕೊಂಡಿದ್ದಾರೆ. ಹಾಗಿದ್ದರೂ, ಅಂತಹವರು ಆತನನ್ನು ಸೇವಿಸುವ ತಮ್ಮ ವಚನಕ್ಕನುಸಾರ ಜೀವಿಸುವಂತೆ ದೇವರು ನಿರೀಕ್ಷಿಸುತ್ತಾನೆ. (ಪ್ರಸಂಗಿ 5:4ನ್ನು ಹೋಲಿಸಿರಿ.) ಆದರೂ, ದೇವರೊಂದಿಗೆ ವೈಯಕ್ತಿಕ ಸಂಬಂಧವನ್ನು ಇಟ್ಟುಕೊಳ್ಳದಿದ್ದರೆ, ಹಾಗೆ ಮಾಡುವುದು ಅನೇಕವೇಳೆ ಅವರಿಗೆ ಕಷ್ಟಕರವಾಗಿರುತ್ತದೆ. ಆ್ಯಂಟನಿ ಜ್ಞಾಪಿಸಿಕೊಳ್ಳುವುದು: “ನನ್ನ ದೀಕ್ಷಾಸ್ನಾನದ ಸಮಯದಲ್ಲಿ ನನಗಿದ್ದಂತಹ ತೀವ್ರ ಆನಂದವು, ಸ್ವಲ್ಪ ಕಾಲ ಮಾತ್ರ ಉಳಿಯಿತು. ನನ್ನ ದೀಕ್ಷಾಸ್ನಾನವಾಗಿ ಒಂದು ವರ್ಷ ಮುಗಿಯುವುದರೊಳಗೆ, ನಾನು ಗಂಭೀರವಾದ ತಪ್ಪನ್ನು ಮಾಡಿದೆ, ಮತ್ತು ಸಭೆಯಲ್ಲಿರುವ ಹಿರಿಯರು ನನಗೆ ತಿದ್ದುಪಾಟು ನೀಡಬೇಕಾಯಿತು. ಪುನಃ ಪುನಃ ನಾನು ತಪ್ಪು ನಡತೆಯಲ್ಲಿ ಒಳಗೂಡಿದ್ದರಿಂದ, ಸಭೆಯಿಂದ ನನ್ನನ್ನು ಬಹಿಷ್ಕರಿಸಲಾಯಿತು. ನಾನು ಯೆಹೋವನಿಗೆ ನನ್ನ ಸಮರ್ಪಣೆಯನ್ನು ಮಾಡಿಕೊಂಡ ಆರು ವರ್ಷಗಳ ತರುವಾಯ, ಕೊಲೆಯನ್ನು ಮಾಡಿದ್ದಕ್ಕಾಗಿ ನಾನು ಸೆರೆಹಿಡಿಯಲ್ಪಟ್ಟು, ಜೈಲಿಗೆ ಹಾಕಲ್ಪಟ್ಟೆ.”
ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದು
ನಿಮ್ಮ ಸ್ವಂತ ಸನ್ನಿವೇಶವು ಏನೇ ಆಗಿರಲಿ, ಎಲ್ಲ ಕ್ರೈಸ್ತರು ಬೈಬಲಿನ ಈ ಕರೆಗೆ ಪ್ರತಿಕ್ರಿಯಿಸಬಲ್ಲರು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ನೀವು ಮೊತ್ತಮೊದಲ ಬಾರಿ ಬೈಬಲನ್ನು ಅಭ್ಯಾಸಿಸಿದಾಗ, ದೇವರೊಂದಿಗೆ ಸ್ವಲ್ಪ ಮಟ್ಟಿಗಿನ ಆಪ್ತತೆಯನ್ನು ಬೆಳೆಸಿಕೊಂಡಿರಿ ಎಂಬುದರಲ್ಲಿ ಸಂಶಯವಿಲ್ಲ. ದೇವರು, ಕ್ರೈಸ್ತಪ್ರಪಂಚದಲ್ಲಿ ಆರಾಧಿಸಲ್ಪಡುವ ವ್ಯಕ್ತಿಸ್ವರೂಪವಿಲ್ಲದ ದೇವರಾಗಿಲ್ಲ, ಬದಲಾಗಿ ಯೆಹೋವ ಎಂಬ ಹೆಸರಿರುವ ಒಬ್ಬ ವ್ಯಕ್ತಿಯಾಗಿದ್ದಾನೆ ಎಂಬುದನ್ನು ನೀವು ಕಲಿತುಕೊಂಡಿರಿ. ಆತನಲ್ಲಿ ಆಕರ್ಷಕವಾದ ಗುಣಗಳಿವೆ, ಅಂದರೆ, ಆತನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳ”ವನಾಗಿದ್ದಾನೆ ಎಂಬುದನ್ನು ಸಹ ನೀವು ಕಲಿತುಕೊಂಡಿರಿ.—ವಿಮೋಚನಕಾಂಡ 34:6.
ಆದರೆ ದೇವರನ್ನು ಸೇವಿಸಲು ನೀವು ಮಾಡಿದ ಸಮರ್ಪಣೆಗನುಸಾರವಾಗಿ ಜೀವಿಸಲು, ನೀವು ಆತನೊಂದಿಗೆ ಮತ್ತಷ್ಟು ಹೆಚ್ಚು ನಿಕಟವಾದ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು! ಹೇಗೆ? ಕೀರ್ತನೆಗಾರನು ಪ್ರಾರ್ಥಿಸಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು.” (ಕೀರ್ತನೆ 25:4) ಬೈಬಲಿನ ಹಾಗೂ ಸಂಸ್ಥೆಯ ಪ್ರಕಾಶನಗಳ ವೈಯಕ್ತಿಕ ಅಧ್ಯಯನವು, ಯೆಹೋವನೊಂದಿಗೆ ಚಿರಪರಿಚಿತರಾಗಲು ನಿಮಗೆ ಸಹಾಯ ಮಾಡಬಲ್ಲದು. ಕ್ರಮವಾದ ರೀತಿಯಲ್ಲಿ ಹೃತ್ಪೂರ್ವಕವಾಗಿ ಪ್ರಾರ್ಥಿಸುವುದು ಸಹ ಪ್ರಾಮುಖ್ಯವಾದ ವಿಷಯವಾಗಿದೆ. “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ” ಎಂದು ಕೀರ್ತನೆಗಾರನು ಉತ್ತೇಜಿಸುತ್ತಾನೆ. (ಕೀರ್ತನೆ 62:8) ನಿಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವುದನ್ನು ಸ್ವತಃ ಅನುಭವದಿಂದ ಕಂಡುಕೊಳ್ಳುವಾಗ, ನಿಮ್ಮಲ್ಲಿ ದೇವರಿಗಿರುವ ವೈಯಕ್ತಿಕ ಆಸಕ್ತಿಯನ್ನು ನೀವು ಗ್ರಹಿಸುವಿರಿ. ನೀವು ಆತನೊಂದಿಗೆ ಹೆಚ್ಚು ಆಪ್ತರಾಗಲು ಇದು ನಿಮಗೆ ಸಹಾಯ ಮಾಡುವುದು.
ಪರೀಕ್ಷೆಗಳು ಮತ್ತು ಸಮಸ್ಯೆಗಳು, ದೇವರೊಂದಿಗೆ ಹೆಚ್ಚು ಆಪ್ತರಾಗಲು ಇನ್ನೊಂದು ಸಂದರ್ಭವನ್ನು ಒದಗಿಸುತ್ತವೆ. ಅನಾರೋಗ್ಯ, ಶಾಲೆಯಲ್ಲಿ ಹಾಗೂ ಕೆಲಸಮಾಡುವ ಸ್ಥಳಗಳಲ್ಲಿ ಬರುವ ಒತ್ತಡಗಳು, ಅಥವಾ ಆರ್ಥಿಕ ಸಂಕಷ್ಟದಂತಹ ಪಂಥಾಹ್ವಾನಗಳನ್ನು ಹಾಗೂ ನಂಬಿಕೆಯ ಪರೀಕ್ಷೆಗಳನ್ನು ನೀವು ಎದುರಿಸಬಹುದು. ಇಲ್ಲವೆ ಶುಶ್ರೂಷೆಯಲ್ಲಿ ಭಾಗವಹಿಸುವುದು, ಕೂಟಗಳಿಗೆ ಹಾಜರಾಗುವುದು, ಅಥವಾ ನಿಮ್ಮ ಮಕ್ಕಳೊಂದಿಗೆ ಬೈಬಲನ್ನು ಅಭ್ಯಾಸಿಸುವಂತಹ ಸಾಮಾನ್ಯವಾದ ದೇವಪ್ರಭುತ್ವ ನಿಯತಕ್ರಮವು ನಿಮಗೆ ಕಷ್ಟಕರವಾದದ್ದಾಗಿ ಕಂಡುಬರಬಹುದು. ಅಂತಹ ಸಮಸ್ಯೆಗಳನ್ನು ಒಬ್ಬರೇ ಎದುರಿಸಬೇಡಿ! ದೇವರ ಸಹಾಯಕ್ಕಾಗಿ ಮೊರೆಯಿಡಿರಿ, ಮಾರ್ಗದರ್ಶನವನ್ನು ಒದಗಿಸುವಂತೆ ಆತನ ಬಳಿ ಬೇಡಿಕೊಳ್ಳಿರಿ. (ಜ್ಞಾನೋಕ್ತಿ 3:5, 6) ಆತನ ಪವಿತ್ರಾತ್ಮಕ್ಕಾಗಿ ಆತನಲ್ಲಿ ಬೇಡಿಕೊಳ್ಳಿರಿ! (ಲೂಕ 11:13) ದೇವರ ಪ್ರೀತಿಪೂರ್ಣ ಸಹಾಯವನ್ನು ನೀವು ಅನುಭವಿಸಿದಂತೆ, ನೀವು ಆತನ ಸಮೀಪಕ್ಕೆ ಇನ್ನೂ ಹೆಚ್ಚು ಸೆಳೆಯಲ್ಪಡುವಿರಿ. ಕೀರ್ತನೆಗಾರನಾದ ದಾವೀದನು ಅದನ್ನು ಹೀಗೆ ಹೇಳುತ್ತಾನೆ: “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು ನೋಡಿರಿ; ಆತನನ್ನು ಆಶ್ರಯಿಸಿಕೊಂಡವರು ಎಷ್ಟೋ ಧನ್ಯರು.”—ಕೀರ್ತನೆ 34:8.
ಆ್ಯಂಟನಿಯ ಕುರಿತಾಗಿ ಏನು? “ಯೆಹೋವನ ಚಿತ್ತವನ್ನು ಮಾಡುವುದರ ಸುತ್ತಲೂ ಕೇಂದ್ರೀಕೃತವಾಗಿದ್ದ ಅನೇಕ ಆತ್ಮಿಕ ಗುರಿಗಳನ್ನು ಇಟ್ಟುಕೊಂಡಿದ್ದ ಸಮಯದ ಕುರಿತು ನಾನು ಆಲೋಚಿಸತೊಡಗಿದೆ” ಎಂದು ಅವನು ಜ್ಞಾಪಿಸಿಕೊಳ್ಳುತ್ತಾನೆ. “ಇದು ವೇದನಾಭರಿತವಾಗಿತ್ತು. ಆದರೆ ಎಲ್ಲ ವೇದನೆ ಹಾಗೂ ನಿರುತ್ಸಾಹಗಳ ಎದುರಿನಲ್ಲಿಯೂ ನಾನು ಯೆಹೋವನ ಪ್ರೀತಿಯನ್ನು ನೆನಪಿಗೆ ತಂದುಕೊಂಡೆ. ನಾನು ಯೆಹೋವನಿಗೆ ಪ್ರಾರ್ಥಿಸಲು ಶಕ್ತನಾಗಲಿಕ್ಕಾಗಿ ಸ್ವಲ್ಪ ಸಮಯ ಹಿಡಿಯಿತು, ಆದರೂ ನಾನು ಪ್ರಾರ್ಥಿಸಿದೆ. ಮತ್ತು ಕ್ಷಮೆಯನ್ನು ಬೇಡುತ್ತಾ, ನನ್ನ ಹೃದಯವನ್ನು ಆತನ ಬಳಿ ತೋಡಿಕೊಂಡೆ. ನಾನು ಬೈಬಲನ್ನು ಸಹ ಓದಲು ಆರಂಭಿಸಿದೆ. ಮತ್ತು ನಾನು ಎಷ್ಟೆಲ್ಲ ವಿಷಯಗಳನ್ನು ಮರೆತಿದ್ದೇನೆ, ನಾನು ಯೆಹೋವನ ಬಗ್ಗೆ ಸ್ವಲ್ಪವೇ ವಿಷಯವನ್ನು ತಿಳಿದಿದ್ದೇನೆ ಎಂಬುದನ್ನು ಗ್ರಹಿಸಿ ನಾನು ಆಶ್ಚರ್ಯಗೊಂಡೆ.” ತನ್ನ ದುಷ್ಕೃತ್ಯಕ್ಕಾಗಿ ಆ್ಯಂಟನಿಯು ಇನ್ನೂ ಸೆರೆವಾಸವನ್ನು ಅನುಭವಿಸಬೇಕಾಗಿರುವುದಾದರೂ, ಅವನು ಸ್ಥಳಿಕ ಸಾಕ್ಷಿಗಳಿಂದ ಸಹಾಯವನ್ನು ಪಡೆದುಕೊಳ್ಳುತ್ತಾನೆ ಮತ್ತು ಆತ್ಮಿಕವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಕೃತಜ್ಞತಾಭಾವದಿಂದ ಆ್ಯಂಟನಿಯು ಹೇಳುವುದು: “ಯೆಹೋವನ ಹಾಗೂ ಆತನ ಸಂಸ್ಥೆಯ ಸಹಾಯದಿಂದ, ನಾನು ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಲು ಶಕ್ತನಾಗಿದ್ದೇನೆ, ಮತ್ತು ಪ್ರತಿ ದಿನ ಹೊಸ ವ್ಯಕ್ತಿತ್ವವನ್ನು ಧರಿಸಲು ಪ್ರಯತ್ನಿಸುತ್ತಿದ್ದೇನೆ. ಈಗ ನನಗೆ, ಯೆಹೋವನೊಂದಿಗಿನ ನನ್ನ ಸಂಬಂಧವು, ಅತ್ಯಂತ ಪ್ರಾಮುಖ್ಯವಾದದ್ದಾಗಿದೆ.”
ನಿಮ್ಮ ಶುಶ್ರೂಷೆಯಲ್ಲಿ ಆತ್ಮಿಕ ಪ್ರಗತಿ
ನೀವು “ರಾಜ್ಯದ ಈ ಸುವಾರ್ತೆ”ಯನ್ನು ಸಾರುವವರಾಗಿರಬೇಕು ಎಂದು ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು. (ಮತ್ತಾಯ 24:14) ಸುವಾರ್ತೆಯ ಒಬ್ಬ ಹೊಸ ಪ್ರಚಾರಕರಾಗಿದ್ದು, ಶುಶ್ರೂಷೆಯಲ್ಲಿನ ನಿಮ್ಮ ಅನುಭವವು ತುಂಬ ಸೀಮಿತವಾಗಿರಬಹುದು. ಹಾಗಾದರೆ, ‘ನಿಮಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿ’ಸಸಾಧ್ಯವಾಗುವಂತೆ ನೀವು ಹೇಗೆ ಪ್ರಗತಿಯನ್ನು ಮಾಡಬಲ್ಲಿರಿ?—2 ತಿಮೊಥೆಯ 4:5.
ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಒಂದು ವಿಧವಾಗಿದೆ. ಸಾರುವ ಕೆಲಸವನ್ನು ಒಂದು “ನಿಕ್ಷೇಪ”ದೋಪಾದಿ, ಅಂದರೆ, ಒಂದು ಸುಯೋಗದೋಪಾದಿ ಪರಿಗಣಿಸಲು ಕಲಿಯಿರಿ. (2 ಕೊರಿಂಥ 4:7) ಯೆಹೋವನಿಗಾಗಿರುವ ನಮ್ಮ ಪ್ರೀತಿ, ನಿಷ್ಠೆ, ಹಾಗೂ ಯಥಾರ್ಥತೆಯನ್ನು ತೋರಿಸಲು ಇದು ಒಂದು ಅವಕಾಶವಾಗಿದೆ. ಅದು ನಮ್ಮ ನೆರೆಯವರಿಗಾಗಿ ನಾವು ಚಿಂತೆಯನ್ನೂ ತೋರಿಸುವಂತೆ ಮಾಡುತ್ತದೆ. ಈ ವಿಷಯದಲ್ಲಿ ನಾವು ನಮ್ಮನ್ನು ನಿಸ್ವಾರ್ಥಭಾವದಿಂದ ನೀಡಿಕೊಳ್ಳುವುದು, ನಿಜ ಸಂತೋಷದ ಮೂಲವಾಗಿರಸಾಧ್ಯವಿದೆ.—ಅ. ಕೃತ್ಯಗಳು 20:35.
ಸಾರುವ ಕೆಲಸದ ಕುರಿತು ಸ್ವತಃ ಯೇಸುವಿಗೆ ಸಕಾರಾತ್ಮಕವಾದ ದೃಷ್ಟಿಕೋನವಿತ್ತು. ಬೈಬಲ್ ಸತ್ಯತೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅವನಿಗೆ “ಆಹಾರ”ದಂತಿತ್ತು. (ಯೋಹಾನ 4:34) ಆದುದರಿಂದ, ಇತರರಿಗೆ ಸಹಾಯ ಮಾಡುವುದಕ್ಕಾಗಿರುವ ಅವನ ಪ್ರಚೋದನೆಯನ್ನು “ನನಗೆ ಮನಸ್ಸುಂಟು” ಎಂಬ ಅವನ ಮಾತುಗಳಲ್ಲಿ ಸಾರಾಂಶಿಸುವುದು ಅತ್ಯುತ್ತಮವಾಗಿರಬಹುದು. (ಮತ್ತಾಯ 8:3) ಜನರ ವಿಷಯದಲ್ಲಿ—ವಿಶೇಷವಾಗಿ ಸೈತಾನನ ಲೋಕದಿಂದ “ತೊಳಲಿ ಬಳಲಿ ಹೋಗಿ”ದ್ದವರ ಕಡೆಗೆ—ಯೇಸುವಿಗೆ ಸಹಾನುಭೂತಿಯಿತ್ತು. (ಮತ್ತಾಯ 9:35, 36) ತದ್ರೀತಿಯಲ್ಲಿ, ಆತ್ಮಿಕವಾಗಿ ಅಂಧಕಾರದಲ್ಲಿರುವವರಿಗೆ ಹಾಗೂ ದೇವರ ವಾಕ್ಯದ ಜ್ಞಾನೋದಯದ ಅಗತ್ಯವಿರುವವರಿಗೆ ನೀವು ಸಹ ಸಹಾಯ ಮಾಡಲು “ಮನಸ್ಸು” ಮಾಡುತ್ತೀರೊ? ಹಾಗಿರುವಲ್ಲಿ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಗೆ ಪ್ರತಿಕ್ರಿಯಿಸುವಂತೆ ಪ್ರಚೋದಿಸಲ್ಪಡುವಿರಿ. (ಮತ್ತಾಯ 28:19) ನಿಜವಾಗಿಯೂ, ನಿಮ್ಮ ಆರೋಗ್ಯ ಹಾಗೂ ಪರಿಸ್ಥಿತಿಗಳು ನಿಮ್ಮನ್ನು ಅನುಮತಿಸುವಷ್ಟರ ಮಟ್ಟಿಗೆ, ಈ ಕೆಲಸದಲ್ಲಿ ಸಾಧ್ಯವಿರುವಷ್ಟು ಪಾಲ್ಗೊಳ್ಳುವಂತೆ ನೀವು ಪ್ರೇರಿಸಲ್ಪಡುವಿರಿ.
ಶುಶ್ರೂಷೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು—ಸಾಧ್ಯವಿರುವಲ್ಲಿ ಪ್ರತಿ ವಾರ—ಪ್ರಗತಿಯ ಇನ್ನೊಂದು ಕೀಲಿ ಕೈಯಾಗಿದೆ. ಹಾಗೆ ಮಾಡುವುದು, ಯಾರು ಕೆಲವೊಮ್ಮೆ ಮಾತ್ರ ಸಾರುತ್ತಾರೋ ಅಂತಹವರಿಗೆ ಅಡ್ಡಿಯನ್ನು ಉಂಟುಮಾಡುವಂತಹ ಸಂಶಯ ಹಾಗೂ ಭಯವನ್ನು ಕಡಿಮೆಗೊಳಿಸಲು ಸಹಾಯ ಮಾಡಬಲ್ಲದು. ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವುದು, ಇನ್ನಿತರ ವಿಧಗಳಲ್ಲಿ ಸಹ ನಿಮಗೆ ಪ್ರಯೋಜನವನ್ನು ತರುವುದು. ಅದು ಸತ್ಯಕ್ಕಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸುವುದು, ಯೆಹೋವನ ಹಾಗೂ ನೆರೆಯವರ ಕಡೆಗಿನ ನಿಮ್ಮ ಪ್ರೀತಿಯನ್ನು ಬೆಳೆಸುವುದು, ಮತ್ತು ರಾಜ್ಯದ ನಿರೀಕ್ಷೆಯ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುವುದು.
ನಿಮ್ಮ ಸದ್ಯದ ಸನ್ನಿವೇಶವು, ಸಾರುವ ಕೆಲಸದಲ್ಲಿನ ನಿಮ್ಮ ಭಾಗವಹಿಸುವಿಕೆಯನ್ನು ತುಂಬ ಸೀಮಿತಗೊಳಿಸುತ್ತಿರುವುದಾದರೆ ಆಗೇನು? ಹೊಂದಾಣಿಕೆಗಳನ್ನು ಮಾಡುವುದು ಅಸಾಧ್ಯವಾಗಿರುವಲ್ಲಿ, ನೀವು ಏನನ್ನು ಮಾಡಲು ಶಕ್ತರಾಗಿದ್ದೀರೋ, ನೀವು ಎಷ್ಟರ ತನಕ ನಿಮ್ಮ ಸೇವೆಯಲ್ಲಿ ಪೂರ್ಣ ಮನಸ್ಸಿನವರಾಗಿರುತ್ತೀರೋ ಅಷ್ಟರ ತನಕ ದೇವರು ಅದನ್ನು ಅಂಗೀಕರಿಸುತ್ತಾನೆಂಬುದನ್ನು ತಿಳಿಯುವುದರಲ್ಲಿ ಸಾಂತ್ವನವನ್ನು ಪಡೆದುಕೊಳ್ಳಿರಿ. (ಮತ್ತಾಯ 13:23) ಬಹುಶಃ ನೀವು ನಿಮ್ಮ ಸಾರುವ ಕೌಶಲಗಳನ್ನು ಉತ್ತಮಗೊಳಿಸುವ ಮೂಲಕ, ಇನ್ನಿತರ ವಿಧಗಳಲ್ಲಿ ಪ್ರಗತಿಯನ್ನು ಮಾಡಸಾಧ್ಯವಿದೆ. ಸಭೆಯಲ್ಲಿ, ದೇವಪ್ರಭುತ್ವ ಶುಶ್ರೂಷಾ ಶಾಲೆ ಹಾಗೂ ಸೇವಾ ಕೂಟವು ಈ ವಿಷಯದಲ್ಲಿ ಅತ್ಯಧಿಕ ತರಬೇತಿಯನ್ನು ಒದಗಿಸುತ್ತದೆ. ನಾವು ಶುಶ್ರೂಷೆಯಲ್ಲಿ ಎಷ್ಟು ಹೆಚ್ಚು ದಕ್ಷರಾಗಿರುತ್ತೇವೋ ಅಷ್ಟು ಹೆಚ್ಚು ಅದರಲ್ಲಿ ಆನಂದವನ್ನೂ ಫಲಪ್ರಾಪ್ತಿಯನ್ನೂ ಪಡೆದುಕೊಳ್ಳುತ್ತೇವೆ.
ಆದುದರಿಂದ, ಆತ್ಮಿಕ ಪ್ರಗತಿಯು, ಒಬ್ಬನು ದೀಕ್ಷಾಸ್ನಾನ ಪಡೆದುಕೊಂಡ ದಿನದಂದೇ ನಿಂತುಹೋಗಬಾರದೆಂಬುದು ಸ್ಪಷ್ಟ. ಸ್ವರ್ಗದಲ್ಲಿನ ಅಮರ ಜೀವನವನ್ನು ಪಡೆಯುವ ತನ್ನ ನಿರೀಕ್ಷೆಯ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ. ನಮ್ಮಲ್ಲಿ ಪ್ರವೀಣರಾದವರು ಇದೇ ಅಭಿಪ್ರಾಯವುಳ್ಳವರಾಗಿರೋಣ. ಯಾವದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನೂ ದೇವರು ನಿಮಗೆ ತೋರಿಸಿಕೊಡುವನು.”—ಫಿಲಿಪ್ಪಿ 3:13-15.
ಹೌದು, ಅವರ ನಿರೀಕ್ಷೆಯು ಸ್ವರ್ಗದಲ್ಲಿನ ಅಮರತ್ವವಾಗಿರಲಿ ಅಥವಾ ಭೂಮಿಯ ಮೇಲಿನ ಪ್ರಮೋದವನದಲ್ಲಿ ಜೀವಿಸುವುದಾಗಿರಲಿ, ಎಲ್ಲ ಕ್ರೈಸ್ತರು ಜೀವಿತದ ಗುರಿಯನ್ನು ಸಾಧಿಸಲಿಕ್ಕಾಗಿ ‘ಎದೆಬೊಗ್ಗಿದವರಾಗಿ’ರಬೇಕು, ಅಂದರೆ ಸಾಂಕೇತಿಕವಾಗಿ ತಮ್ಮನ್ನು ದಣಿಸಿಕೊಳ್ಳಬೇಕು! ನಿಮ್ಮ ದೀಕ್ಷಾಸ್ನಾನವು ಅತ್ಯುತ್ತಮವಾದ ಒಂದು ಆರಂಭವಾಗಿದೆ, ಆದರೆ ಅದು ಕೇವಲ ಪ್ರಾರಂಭದ ಹಂತವಾಗಿದೆ. ಆತ್ಮಿಕ ಪ್ರಗತಿಯನ್ನು ಮಾಡಲು ಶ್ರಮಿಸುವುದನ್ನು ಮುಂದುವರಿಸಿರಿ. ಕೂಟಗಳು ಹಾಗೂ ವೈಯಕ್ತಿಕ ಅಭ್ಯಾಸದ ಮೂಲಕ, “ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥ”ರಾಗಿ ಪರಿಣಮಿಸಿರಿ. (1 ಕೊರಿಂಥ 14:20) “ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು [ಸತ್ಯದ] ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು” ಗ್ರಹಿಸಲು ಶಕ್ತರಾಗಿರಿ. (ಎಫೆಸ 3:18) ನೀವು ಮಾಡುವ ಪ್ರಗತಿಯು, ಈಗ ನೀವು ಸಂತೋಷವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದು ಮಾತ್ರವಲ್ಲ, ದೇವರ ನೂತನ ಲೋಕದಲ್ಲಿ ಒಂದು ಭದ್ರವಾದ ನೆಲೆಯನ್ನು ಪಡೆದುಕೊಳ್ಳಲು ಸಹ ಸಹಾಯ ಮಾಡುವುದು. ಅಲ್ಲಿ, ಆತನ ಸ್ವರ್ಗೀಯ ರಾಜ್ಯದ ಆಳ್ವಿಕೆಯ ಕೆಳಗೆ, ನೀವು ಸದಾಕಾಲವೂ ಪ್ರಗತಿಯನ್ನು ಮಾಡಲು ಶಕ್ತರಾಗುವಿರಿ!
[ಪುಟ 29 ರಲ್ಲಿರುವ ಚಿತ್ರ]
ವೈಯಕ್ತಿಕ ಅಭ್ಯಾಸಕ್ಕಾಗಿ ಸಮಯವನ್ನು ಬದಿಗಿರಿಸುವುದು ಶಿಸ್ತನ್ನು ಅಗತ್ಯಪಡಿಸುತ್ತದೆ
[ಪುಟ 31 ರಲ್ಲಿರುವ ಚಿತ್ರ]
ಸಕಾರಾತ್ಮಕ ಮನೋಭಾವವನ್ನು ಹೊಂದಿರುವುದು, ಶುಶ್ರೂಷೆಯಲ್ಲಿ ಆನಂದವನ್ನು ಕಂಡುಕೊಳ್ಳಲು ನಮಗೆ ಸಹಾಯ ಮಾಡಬಲ್ಲದು