ಮೌಖಿಕ ನಿಯಮ—ಇದು ಬರಹರೂಪದಲ್ಲಿ ಏಕೆ ನಮೂದಿಸಲ್ಪಟ್ಟಿತು?
ಪ್ರಥಮ ಶತಮಾನದ ಅನೇಕ ಯೆಹೂದ್ಯರು ಯೇಸುವನ್ನು ಮೆಸ್ಸೀಯನೋಪಾದಿ ಅಂಗೀಕರಿಸಲು ಏಕೆ ತಪ್ಪಿಹೋದರು? ಒಬ್ಬ ಪ್ರತ್ಯಕ್ಷ ಸಾಕ್ಷಿಯು ವರದಿಸುವುದು: ‘ತರುವಾಯ ಆತನು [ಯೇಸು] ದೇವಾಲಯಕ್ಕೆ ಬಂದು ಬೋಧಿಸುತ್ತಿರಲಾಗಿ ಮಹಾಯಾಜಕರೂ ಪ್ರಜೆಯ ಹಿರಿಯರೂ ಆತನ ಬಳಿಗೆ ಬಂದು—ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ಎಂದು ಕೇಳಿದರು.’ (ಮತ್ತಾಯ 21:23) ಅವರ ದೃಷ್ಟಿಯಲ್ಲಿ, ಸರ್ವಶಕ್ತನು ಯೆಹೂದಿ ಜನಾಂಗಕ್ಕೆ ಟೋರಾ (ಧರ್ಮಶಾಸ್ತ್ರ)ವನ್ನು ಕೊಟ್ಟಿದ್ದನು ಮತ್ತು ಅದು ಕೆಲವೊಂದು ವ್ಯಕ್ತಿಗಳಿಗೆ ಮಾತ್ರ ದೇವದತ್ತ ಅಧಿಕಾರವನ್ನು ಕೊಟ್ಟಿತು. ಅಂತಹ ಅಧಿಕಾರವು ಯೇಸುವಿಗೆ ಇತ್ತೊ?
ಟೋರಾಕ್ಕೆ ಮತ್ತು ಅದು ಯಾರಿಗೆ ನಿಜವಾದ ಅಧಿಕಾರವನ್ನು ಕೊಟ್ಟಿತ್ತೋ ಅವರಿಗೆ ಯೇಸು ತುಂಬ ಗೌರವವನ್ನು ತೋರಿಸಿದನು. (ಮತ್ತಾಯ 5:17-20; ಲೂಕ 5:14; 17:14) ಆದರೆ ದೇವರ ಆಜ್ಞೆಗಳನ್ನು ಮೀರಿ ನಡೆದವರನ್ನು ಅವನು ಬಹಿರಂಗವಾಗಿ ಖಂಡಿಸಿದನು. (ಮತ್ತಾಯ 15:3-9; 23:2-28) ಅಂತಹ ಜನರು, ಮೌಖಿಕ ನಿಯಮವೆಂದು ಪ್ರಸಿದ್ಧವಾದ ಸಂಪ್ರದಾಯಗಳನ್ನು ಅನುಸರಿಸಿದರು. ಯೇಸು ಈ ಮೌಖಿಕ ನಿಯಮದ ಅಧಿಕಾರವನ್ನು ತಿರಸ್ಕಾರಭಾವದಿಂದ ಕಂಡನು. ಇದಕ್ಕೆ ಪ್ರತಿಯಾಗಿ ಅನೇಕರು ಅವನನ್ನು ಮೆಸ್ಸೀಯನೆಂದು ಅಂಗೀಕರಿಸಲಿಲ್ಲ. ಆ ಜನರಲ್ಲಿ ಯಾರು ಅಧಿಕಾರ ಸ್ಥಾನದಲ್ಲಿದ್ದಾರೋ ಅವರು ಸ್ಥಾಪಿಸಿರುವ ಸಂಪ್ರದಾಯಗಳನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ಮಾತ್ರ ದೇವರ ಬೆಂಬಲವಿದೆ ಎಂದು ಅವರು ನಂಬಿದ್ದರು.
ಈ ಮೌಖಿಕ ನಿಯಮವು ಎಲ್ಲಿಂದ ಬಂತು? ಶಾಸ್ತ್ರಗಳಲ್ಲಿ ದಾಖಲಿಸಲ್ಪಟ್ಟಿರುವ ಲಿಖಿತ ನಿಯಮಕ್ಕೆ ಇರುವಷ್ಟೇ ಅಧಿಕಾರ ಈ ಮೌಖಿಕ ನಿಯಮಕ್ಕೂ ಇದೆಯೆಂದು ಯೆಹೂದ್ಯರು ಹೇಗೆ ಪರಿಗಣಿಸತೊಡಗಿದರು? ಮತ್ತು ಅದು ಒಂದು ಮೌಖಿಕ ಸಂಪ್ರದಾಯವಾಗಿಯೇ ಇರಬೇಕಾಗಿದ್ದಲ್ಲಿ, ಕಾಲಕ್ರಮೇಣ ಅದು ಏಕೆ ಬರಹರೂಪದಲ್ಲಿ ನಮೂದಿಸಲ್ಪಟ್ಟಿತು?
ಈ ಸಂಪ್ರದಾಯಗಳು ಎಲ್ಲಿಂದ ಬಂದವು?
ಸಾ.ಶ.ಪೂ. 1513ರಲ್ಲಿ ಸೀನಾಯಿ ಪರ್ವತದ ಬಳಿ, ಇಸ್ರಾಯೇಲ್ಯರು ಯೆಹೋವ ದೇವರೊಂದಿಗೆ ಒಂದು ಒಡಂಬಡಿಕೆಯನ್ನು ಸ್ಥಾಪಿಸಿಕೊಂಡರು. ಮೋಶೆಯ ಮೂಲಕ ಅವರು ಆ ಒಡಂಬಡಿಕೆಯ ಲಿಖಿತ ಶಾಸನಗಳನ್ನು ಪಡೆದುಕೊಂಡರು. (ವಿಮೋಚನಕಾಂಡ 24:3) ಈ ನಿಬಂಧನೆಗಳನ್ನು ಅನುಸರಿಸುವುದರಿಂದ, ‘ಯೆಹೋವನು ಪರಿಶುದ್ಧನಾಗಿರುವದರಿಂದ ತಾವೂ ಪರಿಶುದ್ಧರಾಗಿದ್ದೇವೆ’ ಎಂಬುದನ್ನು ಅವರು ರುಜುಪಡಿಸಲು ಸಾಧ್ಯವಾಗುತ್ತಿತ್ತು. (ಯಾಜಕಕಾಂಡ 11:44) ನಿಯಮದೊಡಂಬಡಿಕೆಯ ಕೆಳಗೆ, ಯೆಹೋವನಿಗೆ ಸಲ್ಲಿಸುವಂತಹ ಆರಾಧನೆಯು, ನಿಯಮಿತ ಯಾಜಕವರ್ಗದ ಮೂಲಕ ಯಜ್ಞಗಳನ್ನು ಅರ್ಪಿಸುವುದನ್ನು ಒಳಗೂಡಿತ್ತು. ಆರಾಧನೆಗಾಗಿ ಒಂದು ಕೇಂದ್ರಸ್ಥಾನದ ಅಗತ್ಯವಿತ್ತು. ಕಟ್ಟಕಡೆಗೆ ಈ ಸ್ಥಳವು ಯೆರೂಸಲೇಮಿನಲ್ಲಿರುವ ದೇವಾಲಯವಾಗಿತ್ತು.—ಧರ್ಮೋಪದೇಶಕಾಂಡ 12:5-7; 2 ಪೂರ್ವಕಾಲವೃತ್ತಾಂತ 6:4-6.
ಒಂದು ಜನಾಂಗದೋಪಾದಿ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುವುದಕ್ಕಾಗಿ, ಮೋಶೆಯ ಧರ್ಮಶಾಸ್ತ್ರವು ಎಲ್ಲ ರೀತಿಯ ವಿವರಗಳನ್ನು ಒದಗಿಸಿತು. ಆದರೂ, ಕೆಲವು ವಿವರಗಳು ಸ್ಪಷ್ಟವಾಗಿ ಕೊಡಲ್ಪಟ್ಟಿರಲಿಲ್ಲ. ದೃಷ್ಟಾಂತಕ್ಕಾಗಿ, ಧರ್ಮಶಾಸ್ತ್ರವು ಸಬ್ಬತ್ತಿನಂದು ಕೆಲಸಮಾಡುವುದನ್ನು ನಿಷೇಧಿಸಿತ್ತು, ಆದರೆ ಕೆಲಸ ಹಾಗೂ ಇತರ ಚಟುವಟಿಕೆಗಳ ನಡುವಿನ ಸ್ಪಷ್ಟವಾದ ಭಿನ್ನತೆಯನ್ನು ಅದು ತಿಳಿಸಲಿಲ್ಲ.—ವಿಮೋಚನಕಾಂಡ 20:10.
ಹಾಗೆ ಮಾಡುವುದು ಸೂಕ್ತವಾದದ್ದೆಂದು ಯೆಹೋವನು ಎಣಿಸುತ್ತಿದ್ದಲ್ಲಿ, ಏಳಸಾಧ್ಯವಿರುವ ಪ್ರತಿಯೊಂದು ಪ್ರಶ್ನೆಗೆ ಉತ್ತರವನ್ನು ಕೊಡುವ ಸವಿವರವಾದ ನಿಬಂಧನೆಗಳನ್ನು ಆತನು ಒದಗಿಸಿದ್ದಿರಸಾಧ್ಯವಿತ್ತು. ಆದರೆ ಆತನು ಮಾನವರನ್ನು ಸೃಷ್ಟಿಸುವಾಗ ಅವರಿಗೆ ಮನಸ್ಸಾಕ್ಷಿಯನ್ನು ಕೊಟ್ಟಿದ್ದನು, ಮತ್ತು ತನ್ನ ಲಿಖಿತ ಶಾಸನಗಳ ಚೌಕಟ್ಟಿನೊಳಗೇ ಇದ್ದುಕೊಂಡು, ಸ್ವಲ್ಪ ನಮ್ಯತೆಯಿಂದ ತನ್ನನ್ನು ಸೇವಿಸುವಂತೆ ಅನುಮತಿ ನೀಡಿದ್ದನು. ನ್ಯಾಯತೀರ್ಮಾನದ ವಿದ್ಯಮಾನಗಳು, ಯಾಜಕರು, ಲೇವಿಯರು, ಮತ್ತು ನ್ಯಾಯಾಧಿಪತಿಗಳಿಂದ ನಿರ್ವಹಿಸಲ್ಪಡುವಂತೆ ಧರ್ಮಶಾಸ್ತ್ರವು ಏರ್ಪಾಡನ್ನು ಮಾಡಿತ್ತು. (ಧರ್ಮೋಪದೇಶಕಾಂಡ 17:8-11) ಸಮಸ್ಯೆಗಳು ಹೆಚ್ಚಿದಂತೆ, ಕೆಲವೊಂದು ಪೂರ್ವನಿದರ್ಶನಗಳು ಇಡಲ್ಪಟ್ಟವು, ಮತ್ತು ಇವುಗಳಲ್ಲಿ ಕೆಲವು ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ದಾಟಿಸಲ್ಪಟ್ಟಿದ್ದವು. ಯೆಹೋವನ ಆಲಯದಲ್ಲಿ ಯಾಜಕಸಂಬಂಧಿತ ಕರ್ತವ್ಯಗಳನ್ನು ನಿರ್ವಹಿಸುವ ವಿಧಾನಗಳು ಸಹ ತಂದೆಯಿಂದ ಮಗನಿಗೆ ತಿಳಿಸಲ್ಪಡುತ್ತಿದ್ದವು. ಈ ಜನಾಂಗದ ಅನುಭವವು ಹೆಚ್ಚಿದಂತೆ, ಹೆಚ್ಚೆಚ್ಚು ಸಂಪ್ರದಾಯಗಳು ಸಂಗ್ರಹಿತವಾದವು.
ಆದರೂ, ಇಸ್ರಾಯೇಲ್ಯರ ಆರಾಧನೆಯು ಲಿಖಿತ ಧರ್ಮಶಾಸ್ತ್ರದ ಮೇಲೆ ಆಧಾರಿತವಾಗಿದ್ದು, ಇದು ಮೋಶೆಯ ಮೂಲಕ ಕೊಡಲ್ಪಟ್ಟಿತ್ತು. ವಿಮೋಚನಕಾಂಡ 24:3, 4 ಹೇಳುವುದು: “ಮೋಶೆ ಜನರ ಬಳಿಗೆ ಬಂದು ಯೆಹೋವನ ಎಲ್ಲಾ ಮಾತುಗಳನ್ನೂ ನ್ಯಾಯವಿಧಿಗಳನ್ನೂ ವಿವರಿಸಲು ಜನರೆಲ್ಲರು—ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು ಎಂದು ಒಕ್ಕಟ್ಟಾಗಿ ಉತ್ತರಕೊಟ್ಟರು. ಮೋಶೆಯು ಯೆಹೋವನ ಆಜ್ಞೆಗಳನ್ನೆಲ್ಲಾ ಬರೆದನು.” (ಓರೆಅಕ್ಷರಗಳು ನಮ್ಮವು.) ಈ ಲಿಖಿತ ಆಜ್ಞೆಗಳಿಗೆ ಅನುಸಾರವಾಗಿ, ದೇವರು ಇಸ್ರಾಯೇಲ್ಯರೊಂದಿಗಿನ ತನ್ನ ಒಡಂಬಡಿಕೆಯನ್ನು ಮುಕ್ತಾಯಗೊಳಿಸಿದನು. (ವಿಮೋಚನಕಾಂಡ 34:27) ನಿಜವಾಗಿಯೂ ಶಾಸ್ತ್ರವಚನಗಳಲ್ಲಿ ಎಲ್ಲಿಯೂ ಮೌಖಿಕ ನಿಯಮದ ಬಗ್ಗೆ ಉಲ್ಲೇಖಿಸಲಾಗಿಲ್ಲ.
“ನಿಮಗೆ ಯಾರು ಈ ಅಧಿಕಾರವನ್ನು ಕೊಟ್ಟರು?”
ಮೋಶೆಯ ಧರ್ಮಶಾಸ್ತ್ರವು, ಪ್ರಾಥಮಿಕ ಧಾರ್ಮಿಕ ಅಧಿಕಾರ ಹಾಗೂ ಬೋಧನೆಯನ್ನು ಆರೋನನ ವಂಶಸ್ಥರಾದ ಯಾಜಕರ ಕೈಗೆ ಒಪ್ಪಿಸಿತ್ತು. (ಯಾಜಕಕಾಂಡ 10:8-11; ಧರ್ಮೋಪದೇಶಕಾಂಡ 24:8; 2 ಪೂರ್ವಕಾಲವೃತ್ತಾಂತ 26:16-20; ಮಲಾಕಿಯ 2:7) ಶತಮಾನಗಳು ಕಳೆದಂತೆ, ಕೆಲವು ಯಾಜಕರು ಅಪನಂಬಿಗಸ್ತರಾದರು ಮತ್ತು ಭ್ರಷ್ಟರಾದರು. (1 ಸಮುವೇಲ 2:12-17, 22-29; ಯೆರೆಮೀಯ 5:31; ಮಲಾಕಿಯ 2:8, 9) ಗ್ರೀಕ್ ಆಧಿಪತ್ಯವು ಅಸ್ತಿತ್ವದಲ್ಲಿದ್ದಾಗ, ಅನೇಕ ಯಾಜಕರು ಧಾರ್ಮಿಕ ವಾದಾಂಶಗಳನ್ನು ಪರಸ್ಪರ ರಾಜಿಮಾಡಿಕೊಂಡರು. ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ಯೆಹೂದಿಮತದಲ್ಲಿದ್ದರೂ ಯಾಜಕತ್ವದಲ್ಲಿ ಭರವಸವಿಡದಿದ್ದ ಒಂದು ಹೊಸ ಗುಂಪು, ಅಂದರೆ ಫರಿಸಾಯರು ಸಂಪ್ರದಾಯಗಳನ್ನು ಜಾರಿಗೆ ತರಲು ಆರಂಭಿಸಿದರು; ಈ ಸಂಪ್ರದಾಯಗಳಿಂದ ಸಾಮಾನ್ಯ ಮನುಷ್ಯನೊಬ್ಬನು ತಾನೂ ಯಾಜಕರಷ್ಟೇ ಪವಿತ್ರನೆಂದು ಸ್ವತಃ ಪರಿಗಣಿಸಿಕೊಳ್ಳಸಾಧ್ಯವಿತ್ತು. ಈ ಸಂಪ್ರದಾಯಗಳು ಅನೇಕರಿಗೆ ಹಿಡಿಸಿದವು, ಆದರೆ ಇವು ಧರ್ಮಶಾಸ್ತ್ರಕ್ಕೆ ಅನಂಗೀಕೃತವಾದ ವಿಷಯಗಳಾಗಿದ್ದವು.—ಧರ್ಮೋಪದೇಶಕಾಂಡ 4:2; 12:32 (13:1 ಯೆಹೂದಿ ಮುದ್ರಣಗಳಲ್ಲಿ).
ಯಾಜಕರು ಮಾಡದಿರುವಂತಹ ಕೆಲಸವನ್ನು ತಾವು ಮಾಡುತ್ತಿದ್ದೇವೆ ಎಂದು ಭಾವಿಸುತ್ತಾ, ಫರಿಸಾಯರು ಧರ್ಮಶಾಸ್ತ್ರದ ಹೊಸ ವಿದ್ವಾಂಸರಂತೆ ವರ್ತಿಸಲಾರಂಭಿಸಿದರು. ಮೋಶೆಯ ಧರ್ಮಶಾಸ್ತ್ರವು ಅವರ ಅಧಿಕಾರವನ್ನು ಅನುಮತಿಸದಿದ್ದ ಕಾರಣ, ಅವರು ರಹಸ್ಯವಾದ ಅಪ್ರತ್ಯಕ್ಷ ಸೂಚನೆಗಳ ಮೂಲಕ ಮತ್ತು ತಮ್ಮ ದೃಷ್ಟಿಕೋನಗಳನ್ನು ಬೆಂಬಲಿಸುವಂತೆ ತೋರುವ ಇನ್ನಿತರ ವಿಧಾನಗಳನ್ನು ಉಪಯೋಗಿಸುವ ಮೂಲಕ ಶಾಸ್ತ್ರವಚನಗಳ ಅರ್ಥವನ್ನು ನಿರೂಪಿಸುವ ಹೊಸ ವಿಧಗಳನ್ನು ಕಂಡುಹಿಡಿದರು.a ಈ ಸಂಪ್ರದಾಯಗಳ ಉಸ್ತುವಾರಿ ನೋಡಿಕೊಳ್ಳುವವರೋಪಾದಿ ಅವರು ಇಸ್ರಾಯೇಲ್ನಲ್ಲಿ ಅಧಿಕಾರದ ಹೊಸ ತಳಹದಿಯನ್ನು ಸೃಷ್ಟಿಸಿದರು. ಸಾ.ಶ. ಪ್ರಥಮ ಶತಮಾನದಷ್ಟಕ್ಕೆ, ಯೆಹೂದಿಮತದಲ್ಲಿ ಫರಿಸಾಯರದೇ ಮೇಲುಗೈಯಾಯಿತು.
ಫರಿಸಾಯರು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಮೌಖಿಕ ಸಂಪ್ರದಾಯಗಳನ್ನು ಸಂಗ್ರಹಿಸಿ, ತಮ್ಮ ಸ್ವಂತ ಸಂಪ್ರದಾಯಗಳನ್ನು ಜಾರಿಗೆ ತರಲಿಕ್ಕಾಗಿ ಶಾಸ್ತ್ರೀಯ ಆಧಾರಗಳನ್ನು ಹುಡುಕಿದಾಗ, ತಮ್ಮ ಚಟುವಟಿಕೆಗೆ ಇನ್ನೂ ಹೆಚ್ಚಿನ ಅಧಿಕಾರವನ್ನು ಕೊಡುವ ಅಗತ್ಯವಿದೆ ಎಂಬ ಅನಿಸಿಕೆ ಅವರಿಗಾಯಿತು. ಈ ಸಂಪ್ರದಾಯಗಳ ಮೂಲದ ಕುರಿತು ಒಂದು ಹೊಸ ಸಿದ್ಧಾಂತವು ಹುಟ್ಟಿಕೊಂಡಿತು. ರಬ್ಬಿಗಳು ಹೀಗೆ ಬೋಧಿಸಲು ಆರಂಭಿಸಿದರು: “ಮೋಶೆಗೆ ಸೀನಾಯಿ ಪರ್ವತದಲ್ಲಿ ಟೋರಾವು ಕೊಡಲ್ಪಟ್ಟಿತು, ಅವನು ಅದನ್ನು ಯೆಹೋಶುವನಿಗೆ ಕೊಟ್ಟನು, ಯೆಹೋಶುವನು ಹಿರಿಯರಿಗೆ ಕೊಟ್ಟನು ಮತ್ತು ಹಿರಿಯರು ಪ್ರವಾದಿಗಳಿಗೆ ಕೊಟ್ಟರು. ಮತ್ತು ಪ್ರವಾದಿಗಳು ಇದನ್ನು ಜನರ ಒಂದು ದೊಡ್ಡ ಸಮೂಹಕ್ಕೆ ಕೊಟ್ಟರು.”—ಏವೋಟ್ 1:1, ಮಿಷ್ನಾ.
“ಮೋಶೆಗೆ ಸೀನಾಯಿ ಪರ್ವತದಲ್ಲಿ ಟೋರಾವು ಕೊಡಲ್ಪಟ್ಟಿತು” ಎಂದು ಹೇಳುವಾಗ, ರಬ್ಬಿಗಳು ಕೇವಲ ಲಿಖಿತ ನಿಯಮಗಳನ್ನು ಮಾತ್ರವಲ್ಲ ತಮ್ಮ ಮೌಖಿಕ ಸಂಪ್ರದಾಯಗಳನ್ನು ಸಹ ಸೂಚಿಸಿ ಮಾತಾಡುತ್ತಿದ್ದರು. ಮನುಷ್ಯರಿಂದ ಕಂಡುಹಿಡಿಯಲ್ಪಟ್ಟು, ಜಾರಿಗೆ ತರಲ್ಪಟ್ಟ ಈ ಸಂಪ್ರದಾಯಗಳು, ಸೀನಾಯಿ ಪರ್ವತದಲ್ಲಿ ದೇವರಿಂದ ಮೋಶೆಗೆ ಕೊಡಲ್ಪಟ್ಟವು ಎಂದು ಅವರು ವಾದಿಸಿದರು. ಮತ್ತು ಟೋರಾದಲ್ಲಿ ಯಾವ ವಿಚಾರವು ಕೊಡಲ್ಪಟ್ಟಿಲ್ಲವೋ ಅದನ್ನು ಅರ್ಥಮಾಡಿಕೊಳ್ಳುವ ಅಧಿಕಾರವನ್ನು ದೇವರು ಮನುಷ್ಯರಿಗೆ ಕೊಟ್ಟಿಲ್ಲ, ಆದರೆ ಲಿಖಿತ ಧರ್ಮಶಾಸ್ತ್ರದಲ್ಲಿ ಯಾವ ವಿಚಾರಗಳು ತಿಳಿಸಲ್ಪಟ್ಟಿರಲಿಲ್ಲವೋ ಅದನ್ನು ದೇವರು ಬಾಯಿಮಾತಿನಿಂದ ವಿವರಿಸಿದ್ದನು ಎಂದು ಅವರು ಕಲಿಸಿದರು. ಅವರಿಗನುಸಾರ, ಮೋಶೆಯು ಈ ಮೌಖಿಕ ನಿಯಮವನ್ನು ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ದಾಟಿಸಿದನು, ಆದರೆ ಅವನು ಅದನ್ನು ಯಾಜಕರಿಗೆ ಕೊಡಲಿಲ್ಲ, ಬದಲಾಗಿ ಇನ್ನಿತರ ಧಾರ್ಮಿಕ ಮುಖಂಡರಿಗೆ ದಾಟಿಸಿದನು. ಅಧಿಕಾರದ ಈ “ಅಖಂಡ” ಸರಣಿಯ ಸಹಜ ಹಕ್ಕುದಾರರು ತಾವೇ ಎಂದು ಸ್ವತಃ ಫರಿಸಾಯರು ಪ್ರತಿಪಾದಿಸಿದರು.
ಧರ್ಮಶಾಸ್ತ್ರವು ಬಿಕ್ಕಟ್ಟಿನಲ್ಲಿದೆ—ಒಂದು ಹೊಸ ಪರಿಹಾರ
ಯಾರ ದೇವದತ್ತ ಅಧಿಕಾರವು ಯೆಹೂದಿ ಧಾರ್ಮಿಕ ಮುಖಂಡರಿಂದ ಪ್ರಶ್ನಿಸಲ್ಪಟ್ಟಿತ್ತೋ ಆ ಯೇಸು, ದೇವಾಲಯದ ನಾಶನದ ಕುರಿತು ಮುಂತಿಳಿಸಿದ್ದನು. (ಮತ್ತಾಯ 23:37-24:2) ಸಾ.ಶ. 70ರಲ್ಲಿ ರೋಮನರು ದೇವಾಲಯವನ್ನು ನಾಶಪಡಿಸಿದ ಬಳಿಕ, ಯಜ್ಞಾರ್ಪಣೆಗಳು ಹಾಗೂ ಯಾಜಕಸಂಬಂಧಿತ ಸೇವೆಗಳನ್ನು ಒಳಗೊಂಡಿದ್ದ ಮೋಶೆಯ ಧರ್ಮಶಾಸ್ತ್ರದ ಆವಶ್ಯಕತೆಗಳನ್ನು ಪೂರೈಸುವ ಅಗತ್ಯವಿರಲಿಲ್ಲ. ಯೇಸುವಿನ ಪ್ರಾಯಶ್ಚಿತ ಯಜ್ಞದ ಆಧಾರದ ಮೇಲೆ ದೇವರು ಒಂದು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದ್ದನು. (ಲೂಕ 22:20) ಮೋಶೆಯ ಧರ್ಮಶಾಸ್ತ್ರದೊಡಂಬಡಿಕೆಯು ಕೊನೆಗಾಣಿಸಲ್ಪಟ್ಟಿತ್ತು.—ಇಬ್ರಿಯ 8:7-13.
ಸ್ವತಃ ಯೇಸುವೇ ಮೆಸ್ಸೀಯನಾಗಿದ್ದನು ಎಂಬುದಕ್ಕೆ ಈ ಘಟನೆಗಳನ್ನು ಪುರಾವೆಯೋಪಾದಿ ಪರಿಗಣಿಸುವುದಕ್ಕೆ ಬದಲಾಗಿ, ಫರಿಸಾಯರು ಇನ್ನೊಂದು ಪರಿಹಾರವನ್ನು ಕಂಡುಕೊಂಡರು. ಇಷ್ಟರಲ್ಲಾಗಲೇ ಅವರು ಯಾಜಕತ್ವದ ಅಧಿಕಾರದಲ್ಲಿ ಹೆಚ್ಚಿನದ್ದನ್ನು ಅತಿಕ್ರಮಿಸಿದ್ದರು. ಈಗ ದೇವಾಲಯವು ನಾಶಪಡಿಸಲ್ಪಟ್ಟಿದ್ದರಿಂದ, ಅವರು ಇನ್ನೂ ಒಂದು ಹೆಜ್ಜೆ ಮುಂದುವರಿಯಸಾಧ್ಯವಿತ್ತು. ಜಾಬ್ನೆಹ್ದಲ್ಲಿರುವ ರಬ್ಬೀಯ ವಿದ್ಯಾಸಂಸ್ಥೆಯು, ಅಂಗೀಕೃತ ಸಭಾಮಂದಿರದ ಸನ್ಹೆದ್ರಿನ್ನ ಕೇಂದ್ರವಾಗಿ, ಅಂದರೆ ಯೆಹೂದಿ ಹಿರೀಸಭೆಯಾಗಿ ಪರಿಣಮಿಸಿತು. ಜಾಬ್ನೆಹ್ದಲ್ಲಿ, ಯೋಹಾನಾನ್ ಬೆನ್ ಸಾಕೈ ಹಾಗೂ IIನೆಯ ಗಮಲಿಯೆಲನ ನೇತೃತ್ವದ ಕೆಳಗೆ, ಯೆಹೂದಿಮತವು ಸಂಪೂರ್ಣವಾಗಿ ಪುನಃ ಕಟ್ಟಲ್ಪಟ್ಟಿತು. ದೇವಾಲಯದಲ್ಲಿ ಯಾಜಕರ ಮೇಲ್ವಿಚಾರಣೆಯ ಕೆಳಗೆ ನಡೆಸಲ್ಪಡುತ್ತಿದ್ದ ಆರಾಧನೆಗೆ ಬದಲಾಗಿ, ಸಭಾಮಂದಿರದ ಕಾರ್ಯಕಲಾಪಗಳು ರಬ್ಬಿಗಳ ಮೇಲ್ವಿಚಾರಣೆಯ ಕೆಳಗೆ ನಡೆಸಲ್ಪಟ್ಟವು. ಪ್ರಾರ್ಥನೆಗಳು, ವಿಶೇಷವಾಗಿ ದೋಷಪರಿಹಾರಕ ದಿನದಂದು ಮಾಡಲ್ಪಡುವ ಪ್ರಾರ್ಥನೆಗಳು, ಯಜ್ಞಗಳಿಗೆ ಬದಲಿಯಾಗಿ ಬಂದವು. ಸೀನಾಯಿ ಪರ್ವತದಲ್ಲಿ ಮೋಶೆಗೆ ಕೊಡಲ್ಪಟ್ಟಿದ್ದ ಮೌಖಿಕ ನಿಯಮವು, ಈ ವಿಷಯಗಳನ್ನು ಮೊದಲೇ ಮುಂಗಂಡಿತ್ತು ಮತ್ತು ಇದಕ್ಕಾಗಿ ಸಿದ್ಧತೆಗಳನ್ನು ಸಹ ಮಾಡಿತ್ತು ಎಂದು ಫರಿಸಾಯರು ತರ್ಕಿಸಿದರು.
ರಬ್ಬಿಗಳ ವಿದ್ಯಾಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದವು. ತೀವ್ರ ವಾಗ್ವಾದ, ಬಾಯಿಪಾಠಮಾಡುವುದು, ಮತ್ತು ಮೌಖಿಕ ನಿಯಮವನ್ನು ಅನ್ವಯಿಸುವುದು ಅವರ ಪ್ರಮುಖ ವ್ಯಾಸಂಗಕ್ರಮವಾಗಿತ್ತು. ಈ ಮುಂಚೆ ಮೌಖಿಕ ನಿಯಮದ ಆಧಾರವು ಶಾಸ್ತ್ರವಚನಗಳ ಅರ್ಥನಿರೂಪಣೆ—ಮಿಡ್ರ್ಯಾಷ್—ಯೊಂದಿಗೆ ಜೋಡಿಸಲ್ಪಟ್ಟಿತ್ತು. ಆದರೆ ಈಗ, ಹೆಚ್ಚುತ್ತಲೇ ಇರುವ ಸಂಪ್ರದಾಯಗಳನ್ನು ಸಂಗ್ರಹಿಸಿ, ಅವುಗಳನ್ನು ಕಲಿಸಲು ಆರಂಭಿಸಲಾಯಿತು ಮತ್ತು ಪ್ರತ್ಯೇಕವಾಗಿ ವ್ಯವಸ್ಥಾಪಿಸಲಾಯಿತು. ಮೌಖಿಕ ನಿಯಮದ ಪ್ರತಿಯೊಂದು ನಿಬಂಧನೆಯು, ಸಂಗೀತದ ತಾಳಕ್ಕೆ ಅನುಗುಣವಾಗಿ ಚಿಕ್ಕದಾದ, ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂತಹ ವಾಕ್ಸರಣಿಗಳೋಪಾದಿ ಬರೆದಿಡಲ್ಪಟ್ಟಿತು.
ಮೌಖಿಕ ನಿಯಮವನ್ನು ಬರಹರೂಪದಲ್ಲಿ ಏಕೆ ನಮೂದಿಸಲಾಯಿತು?
ದಿನೇದಿನೇ ರಬ್ಬಿಗಳ ವಿದ್ಯಾಸಂಸ್ಥೆಗಳು ಹೆಚ್ಚುತ್ತಿದ್ದು, ರಬ್ಬಿಗಳ ನಿಯಮಗಳು ಅಧಿಕಗೊಂಡಿದ್ದರಿಂದ, ಒಂದು ಹೊಸ ಸಮಸ್ಯೆಯು ಉಂಟಾಯಿತು. ರಬ್ಬಿ ವಿದ್ವಾಂಸನಾದ ಏಡನ್ ಸ್ಟೈನ್ಸಾಲ್ಟ್ಸ್ ವಿವರಿಸುವುದು: “ಪ್ರತಿಯೊಬ್ಬ ಶಿಕ್ಷಕನಿಗೆ ತನ್ನದೇ ಆದ ಪಾಠಕ್ರಮವಿತ್ತು ಮತ್ತು ತನ್ನ ಮೌಖಿಕ ನಿಯಮಗಳನ್ನು ಅವನು ತನ್ನದೇ ಆದ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದನು. . . . ಒಬ್ಬ ವಿದ್ಯಾರ್ಥಿಯು ತನ್ನ ಸ್ವಂತ ಶಿಕ್ಷಕನ ಬೋಧನೆಗಳನ್ನು ಮಾತ್ರ ಕಲಿತರೆ ಸಾಕಾಗುತ್ತಿರಲಿಲ್ಲ, ಬದಲಾಗಿ ಇನ್ನಿತರ ವಿದ್ವಾಂಸರ ಬೋಧನೆಗಳನ್ನು ಸಹ ಕಲಿತುಕೊಳ್ಳುವ ಹಂಗು ಅವನಿಗಿತ್ತು . . . ಈ ರೀತಿಯ ‘ಜ್ಞಾನದ ಹೆಚ್ಚಳ’ದ ಕಾರಣದಿಂದ ವಿದ್ಯಾರ್ಥಿಗಳು ಬಹಳಷ್ಟು ವಿಷಯಗಳನ್ನು ಬಾಯಿಪಾಠಮಾಡುವ ಒತ್ತಡಕ್ಕೊಳಗಾಗಿದ್ದರು.” ಈ ಅಸ್ತವ್ಯಸ್ತ ಬೋಧನೆಗಳ ಸಾಗರದಲ್ಲಿ ಮುಳುಗಿದವರಾಗಿದ್ದು, ವಿದ್ಯಾರ್ಥಿಗಳ ಜ್ಞಾಪಕಶಕ್ತಿಯು ಕುಸಿಯುವ ವರೆಗೂ ಒತ್ತಡವು ಹೇರಲ್ಪಡುತ್ತಿತ್ತು.
ಸಾ.ಶ. ಎರಡನೆಯ ಶತಮಾನದಲ್ಲಿ, ಬಾರ್ ಕೋಕ್ಬಾನ ನೇತೃತ್ವದ ಕೆಳಗೆ ಯೆಹೂದ್ಯರು ರೋಮ್ನ ಮೇಲೆ ಆಕ್ರಮಣ ಮಾಡಿದರು. ಇದು ರಬ್ಬಿ ವಿದ್ವಾಂಸರ ವಿರುದ್ಧ ತೀವ್ರ ಹಿಂಸೆಯನ್ನು ಉಂಟುಮಾಡಿತು. ಅಗ್ರಗಣ್ಯ ರಬ್ಬಿಯಾಗಿದ್ದು, ಬಾರ್ ಕೋಕ್ಬಾನಿಗೆ ಬೆಂಬಲ ನೀಡಿದ ಆಕಿವಾನನ್ನೂ ಹಾಗೂ ಇನ್ನಿತರ ಪ್ರಮುಖ ವಿದ್ವಾಂಸರನ್ನೂ ಕೊಲ್ಲಲಾಯಿತು. ಈ ಹೊಸ ಹಿಂಸೆಯು, ನಮ್ಮ ಮೌಖಿಕ ನಿಯಮಗಳ ಅಸ್ತಿತ್ವಕ್ಕೇ ಅಪಾಯವನ್ನು ತಂದೊಡ್ಡಸಾಧ್ಯವಿದೆ ಎಂದು ರಬ್ಬಿಗಳು ಭಯಪಟ್ಟರು. ಸಂಪ್ರದಾಯಗಳು ಗುರುವಿನಿಂದ ಶಿಷ್ಯನಿಗೆ ಬಾಯಿಮಾತಿನಲ್ಲಿ ದಾಟಿಸಲ್ಪಡುವುದು ಅತ್ಯುತ್ತಮವಾದ ಮಾರ್ಗವೆಂದು ಅವರು ನಂಬಿದ್ದರು. ಆದರೆ ಬದಲಾಗುತ್ತಿರುವ ಪರಿಸ್ಥಿತಿಗಳ ಕಾರಣದಿಂದ, ಜ್ಞಾನಿಗಳ ಬೋಧನೆಗಳು ಎಂದೆಂದಿಗೂ ಮರೆತುಹೋಗದಂತೆ ಸಂರಕ್ಷಿಸಲಿಕ್ಕಾಗಿ, ಒಂದು ವ್ಯವಸ್ಥಾಪಿತ ರಚನೆಯನ್ನು ರೂಪಿಸಲು ಅತ್ಯಧಿಕ ಪ್ರಯತ್ನವನ್ನು ಮಾಡಲಾಯಿತು.
ತದನಂತರ ಸ್ವಲ್ಪ ಸಮಯದ ವರೆಗೆ ಅವರು ರೋಮ್ನೊಂದಿಗೆ ಸ್ವಲ್ಪಮಟ್ಟಿಗೆ ಶಾಂತಿಯಿಂದಿದ್ದರು. ಆಮೇಲೆ ಸಾ.ಶ. ಎರಡನೆಯ ಶತಮಾನದ ಕೊನೆಯಲ್ಲಿ ಹಾಗೂ ಮೂರನೆಯ ಶತಮಾನಗಳ ಆರಂಭದಲ್ಲಿ ಪ್ರಮುಖ ರಬ್ಬಿಯಾಗಿದ್ದ ಜೂಡಾ ಹನಸೀಯು, ಅನೇಕ ವಿದ್ವಾಂಸರನ್ನು ಒಟ್ಟುಗೂಡಿಸಿ, ಆರು ಭಾಗಗಳಿಂದ ಕೂಡಿದ ಒಂದು ವ್ಯವಸ್ಥಿತ ಕ್ರಮದಲ್ಲಿ ಎಲ್ಲ ಮೌಖಿಕ ಸಂಪ್ರದಾಯಗಳನ್ನು ಬರೆಸಿಬಿಟ್ಟನು. ಇದರಲ್ಲಿ ಪ್ರತಿಯೊಂದು ಭಾಗವನ್ನು ಇನ್ನೂ ವಿಭಾಗಿಸಿ, ಚಿಕ್ಕ ಚಿಕ್ಕ ವಿಭಾಗಗಳನ್ನಾಗಿ ಮಾಡಲಾಯಿತು. ಒಟ್ಟಿಗೆ 63 ವಿಭಾಗಗಳಿದ್ದವು. ಈ ಕಾರ್ಯವನ್ನು ಮಿಷ್ನಾ ಎಂದು ಕರೆಯಲಾಯಿತು. ಮೌಖಿಕ ನಿಯಮದ ಅಧಿಕಾರಿಯಾಗಿದ್ದ ಎಫ್ರಾಯಿಮ್ ಊರ್ಬಾಕ್ ಹೇಳುವುದು: “ಮಿಷ್ನಾಕ್ಕೆ . . . ಎಂತಹ ಅಂಗೀಕಾರ ಹಾಗೂ ಅಧಿಕಾರವು ಕೊಡಲ್ಪಟ್ಟಿತೆಂದರೆ, ಟೋರಾವನ್ನು ಬಿಟ್ಟು ಇಷ್ಟರ ತನಕ ಬೇರೆ ಯಾವ ಪುಸ್ತಕಕ್ಕೂ ಇಂತಹ ಅಧಿಕಾರವು ಎಂದೂ ಕೊಡಲ್ಪಟ್ಟಿರಲಿಲ್ಲ.” ಮೆಸ್ಸೀಯನನ್ನು ತಿರಸ್ಕರಿಸಲಾಗಿತ್ತು, ದೇವಾಲಯವು ನಾಶಗೊಳಿಸಲ್ಪಟ್ಟಿತ್ತು, ಆದರೆ ಮೌಖಿಕ ನಿಯಮವು ಮಿಷ್ನಾದ ರೂಪದಲ್ಲಿ ಬರವಣಿಗೆಯಲ್ಲಿ ನಮೂದಿಸಲ್ಪಟ್ಟು ಸಂರಕ್ಷಿಸಲ್ಪಟ್ಟಿದ್ದರಿಂದ, ಯೆಹೂದಿಮತದಲ್ಲಿ ಒಂದು ಹೊಸ ಯುಗವು ಆರಂಭವಾಯಿತು.
[ಪಾದಟಿಪ್ಪಣಿ]
a ಶಾಸ್ತ್ರವಚನಗಳ ಈ ರೀತಿಯ ಅರ್ಥನಿರೂಪಣೆಯನ್ನು ಮಿಡ್ರ್ಯಾಷ್ ಎಂದು ಕರೆಯಲಾಗುತ್ತದೆ.
[ಪುಟ 26 ರಲ್ಲಿರುವ ಚಿತ್ರ]
ಅನೇಕ ಯೆಹೂದ್ಯರು ಯೇಸುವಿನ ಅಧಿಕಾರವನ್ನು ಏಕೆ ತಿರಸ್ಕರಿಸಿದರು?