ರಾಜ್ಯ ಘೋಷಕರು ವರದಿಮಾಡುತ್ತಾರೆ
ನಮೀಬಿಯದಲ್ಲಿ ದೇವಪ್ರಭುತ್ವದ ವಿಸ್ತರಣೆ
ದೇವರ ರಾಜ್ಯದ ಸುವಾರ್ತೆಯು 1920ರ ಕೊನೆಯ ಭಾಗದಲ್ಲಿ ನಮೀಬಿಯ ದೇಶವನ್ನು ಪ್ರಪ್ರಥಮ ಬಾರಿ ತಲಪಿತು. ಆ ಸಮಯದಂದಿನಿಂದ ನೂರಾರು ಪ್ರಾಮಾಣಿಕ ಜನರು ದೇವರ ರಕ್ಷಣಾ ಸಂದೇಶಕ್ಕೆ ಕಿವಿಗೊಟ್ಟಿದ್ದಾರೆ. ಯೆಹೋವನು ಇಂತಹ ಇಷ್ಟವಸ್ತುಗಳನ್ನು ತನ್ನ ಹಟ್ಟಿಯೊಳಗೆ ಹೇಗೆ ಒಟ್ಟುಗೂಡಿಸುತ್ತಿದ್ದಾನೆಂಬುದನ್ನು ಈ ಮುಂದಿನ ಅನುಭವಗಳು ತೋರಿಸುತ್ತವೆ.—ಹಗ್ಗಾಯ 2:7.
◻ ಈಶಾನ್ಯ ನಮೀಬಿಯದಲ್ಲಿ, ಜೀವನೋಪಾಯಕ್ಕಾಗಿ ರೈತನಾಗಿ ಕೆಲಸಮಾಡುತ್ತಿದ್ದ ಪೋಲಸ್, ರಾಜಧಾನಿ ನಗರವಾದ ವಿಂಟ್ಹುಕ್ ಅನ್ನು ಸಂದರ್ಶಿಸಿದಾಗ, ಪ್ರಥಮ ಬಾರಿ ಯೆಹೋವನ ಸಾಕ್ಷಿಗಳನ್ನು ಭೇಟಿಯಾದನು. ತಾನು ಸತ್ಯವನ್ನು ಕಂಡುಕೊಂಡಿದ್ದೇನೆ ಎಂಬ ವಿಷಯದಲ್ಲಿ ಪೋಲಸನಿಗೆ ಸಂದೇಹವಿರಲಿಲ್ಲ. ಮನೆಗೆ ಹಿಂದಿರುಗುವಾಗ, ಅವನ ಬಳಿ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ ಎಂಬ ಪುಸ್ತಕವಿತ್ತು. ತರುವಾಯ, ರಾಜ್ಯ ಸಭಾಗೃಹವಿರುವ ಅತ್ಯಂತ ಸಮೀಪದ ಪಟ್ಟಣವಾದ ರೂನ್ಡೂಗೆ ಪೋಲಸ್ ಹೋದಾಗ, ಅಲ್ಲಿ ಸಾಕ್ಷಿಗಳನ್ನು ಕಂಡುಕೊಂಡು, ತನ್ನನ್ನು ಭೇಟಿಮಾಡುವಂತೆ ಅವರ ಬಳಿ ಕೇಳಿಕೊಂಡನು.
ಆದರೆ, ಪೋಲಸ್ನೊಂದಿಗೆ ಪ್ರತಿವಾರ ಬೈಬಲ್ ಅಧ್ಯಯನವನ್ನು ನಡೆಸಲಿಕ್ಕಾಗಿ ಅವನ ಬಳಿಗೆ ಹೋಗುವುದು ಸಾಕ್ಷಿಗಳಿಗೆ ಸಾಧ್ಯವಿರಲಿಲ್ಲ, ಏಕೆಂದರೆ ಅವನ ಮನೆಯು ತುಂಬ ದೂರವಿತ್ತು. ಇದರಿಂದ ಎದೆಗುಂದದ ಪೋಲಸ್, ಸ್ವತಃ ಬೈಬಲನ್ನು ಅಭ್ಯಾಸಿಸಲು ತೊಡಗಿದನು. ಮತ್ತು ತಾನು ಕಲಿತುಕೊಳ್ಳುತ್ತಿದ್ದ ವಿಷಯಗಳನ್ನು ಹುರುಪಿನಿಂದ ಇತರರಿಗೆ ಸಾರಿದನು. ಫಲಸ್ವರೂಪವಾಗಿ ಒಂದು ಬೈಬಲ್ ಅಧ್ಯಯನ ಗುಂಪು ಆರಂಭವಾಯಿತು. ಯೆಹೋವನ ಸಾಕ್ಷಿಗಳ ಸಮ್ಮೇಳನವು ರೂನ್ಡೂ ಪಟ್ಟಣದಲ್ಲಿ ಜರುಗಲಿದೆ ಎಂಬುದಾಗಿ ರೇಡಿಯೊದಲ್ಲಿ ಪ್ರಸಾರವಾದ ಪ್ರಕಟನೆಯನ್ನು ಈ ಚಿಕ್ಕ ಗುಂಪು ಕೇಳಿಸಿಕೊಂಡಾಗ, ತಮ್ಮ ಅತ್ಯಲ್ಪವಾದ ಸಂಪಾದನೆಗಳನ್ನು ಒಟ್ಟುಗೂಡಿಸಿ, ಹಾಜರಾಗಲಿಕ್ಕಾಗಿ ವಾಹನಸೌಕರ್ಯದ ಏರ್ಪಾಡನ್ನು ಮಾಡಿತು.
ಪ್ರಪ್ರಥಮ ಬಾರಿಗೆ ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುವುದು, ಅವರಿಗೆ ಎಂತಹ ಒಂದು ರೋಮಾಂಚಕರ ಅನುಭವವಾಗಿತ್ತು! ಅರ್ಹರಾದ ಸಹೋದರರು ಕ್ರಮವಾಗಿ ಈ ಚಿಕ್ಕ ಗುಂಪನ್ನು ಸಂದರ್ಶಿಸುವಂತೆ ಬೇಗನೆ ಏರ್ಪಾಡುಗಳು ಮಾಡಲ್ಪಟ್ಟವು. ಇಂದು, ಪೋಲಸನು ವಾಸಿಸುವ ಹಳ್ಳಿಯಲ್ಲಿ ಆರು ಮಂದಿ ಪ್ರಚಾರಕರಿದ್ದಾರೆ.
◻ ಯಾರೊ ಒಬ್ಬರು ಯೆಹೋವನ ಸಾಕ್ಷಿಗಳ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿರುವುದನ್ನು ಯೊಹಾನಾಳು ಕೇಳಿಸಿಕೊಂಡಾಗ, ದೇವರ ನಾಮದ ವಿಷಯದಲ್ಲಿ ಅವಳಿಗಿದ್ದ ಅಭಿರುಚಿಯು ಚಿಗುರೊಡೆಯಿತು. ಅವಳು ಜ್ಞಾಪಿಸಿಕೊಳ್ಳುವುದು: “ನಾನು ಯೆಹೋವ ಎಂಬ ನಾಮವನ್ನು ಪ್ರಪ್ರಥಮ ಬಾರಿ ಕೇಳಿಸಿಕೊಂಡಾಗ, ಅದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಮತ್ತು ಈ ಯೆಹೋವನು ಯಾರಾಗಿರಸಾಧ್ಯವೆಂದು ನಾನು ಯೋಚಿಸಲಾರಂಭಿಸಿದೆ. ನಾನು ಹಾಗೂ ನನ್ನ ಪತಿ, ನಮೀಬಿಯದ ಕಡಲ ತೀರದಲ್ಲಿರುವ ವಾಲ್ವಿಸ್ ಕೊಲ್ಲಿಯ ಬಳಿ ವಾಸಿಸುತ್ತಿದ್ದೆವು. ಒಮ್ಮೆ ನಾವು ಪಟ್ಟಣಕ್ಕೆ ಹೋದಾಗ, ಕೆಲವು ಸಾಕ್ಷಿಗಳು ಬೀದಿಯಲ್ಲಿ ವಾಚ್ಟವರ್ ಪತ್ರಿಕೆಯನ್ನು ವಿತರಿಸುತ್ತಿರುವುದನ್ನು ಕಂಡೆ. ನಾನು ಅವರಿಂದ ಒಂದು ಪತ್ರಿಕೆಯನ್ನು ಪಡೆದೆ ಮತ್ತು ನನಗೆ ಅನೇಕ ಪ್ರಶ್ನೆಗಳಿದ್ದ ಕಾರಣ ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿಕೊಂಡೆ. ತಮ್ಮ ವಾಹನವು ಕೆಟ್ಟುಹೋಗಿದ್ದ ಕಾರಣ, ಅಲ್ಲಿಗೆ ಬರಲು ತಮಗೆ ಸಾಧ್ಯವಿಲ್ಲವೆಂದು ಸಾಕ್ಷಿಗಳು ಹೇಳಿದಾಗ, ನಾನು ಅತ್ತುಬಿಟ್ಟೆ. ಇದಾದ ಸ್ವಲ್ಪದರಲ್ಲೇ ನನ್ನ ಪತಿಯು ತೀರಿಕೊಂಡರು, ಮತ್ತು ನಾನು ಕೇಟ್ಮಾನ್ಶೋಪ್ ಎಂಬ ಪಟ್ಟಣಕ್ಕೆ ಸ್ಥಳಾಂತರಿಸಿದೆ. ಆ ಕ್ಷೇತ್ರಕ್ಕೆ ಒಬ್ಬ ವಿಶೇಷ ಪಯನೀಯರ (ಪೂರ್ಣ ಸಮಯದ ಸೌವಾರ್ತಿಕ)ನನ್ನು ನೇಮಿಸಲಾಗಿತ್ತು, ಮತ್ತು ಅವನಿಂದ ನಾನು ನಿತ್ಯಜೀವಕ್ಕೆ ನಡೆಸುವ ಸತ್ಯ ಎಂಬ ಪುಸ್ತಕವನ್ನು ಪಡೆದುಕೊಂಡೆ. ಸತ್ಯವು ಇದೇ ಎಂಬುದನ್ನು ನಾನು ಬಹಳ ಬೇಗನೆ ಗ್ರಹಿಸಿದೆ.
“ಕಟ್ಟಕಡೆಗೆ, ಸಾರುವ ಕೆಲಸದಲ್ಲಿ ಭಾಗವಹಿಸುವಂತೆ ನಾನು ಆಮಂತ್ರಿಸಲ್ಪಟ್ಟೆ, ಆದರೆ ಮನುಷ್ಯ ಭಯವು ನನಗೆ ಒಂದು ತಡೆಯಾಗಿತ್ತು. ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುವ ದಾರಿಯಲ್ಲಿ, ಸಾರುವುದಕ್ಕಿಂತಲೂ ನಾನು ಸತ್ತರೆ ಎಷ್ಟೋ ಚೆನ್ನಾಗಿರುತ್ತದೆ ಎಂದು ಯೆಹೋವನಿಗೆ ಪ್ರಾರ್ಥಿಸಿದೆ. ಬೀದಿ ಸಾಕ್ಷಿಕಾರ್ಯದಲ್ಲಿ ನಾನು ಪ್ರಥಮ ಬಾರಿ ಪಾಲ್ಗೊಂಡಾಗ, ನನ್ನನ್ನು ಯಾರೊಬ್ಬರೂ ನೋಡಬಾರದೆಂಬ ಕಾರಣಕ್ಕಾಗಿ ಒಂದು ಚಿಕ್ಕ ಗಲ್ಲಿಯಲ್ಲಿ ಅವಿತುಕೊಂಡೆ. ಕೊನೆಗೆ, ಒಬ್ಬ ದಾರಿಹೋಕನಿಗೆ ಒಂದು ಪತ್ರಿಕೆಯನ್ನು ನೀಡುವಷ್ಟು ಧೈರ್ಯವನ್ನು ಒಟ್ಟುಗೂಡಿಸಿಕೊಂಡು, ಏನನ್ನೊ ಹೇಳಲು ಶಕ್ತಳಾದೆ. ಆ ದಿನ, ಯೆಹೋವನ ಸಹಾಯದಿಂದ ನಾನು ಹಲವಾರು ಜನರೊಂದಿಗೆ ನನ್ನ ಬೈಬಲ್ ಆಧಾರಿತ ನಿರೀಕ್ಷೆಯನ್ನು ಹಂಚಿಕೊಂಡೆ.
“ಇಂದು, 12 ವರ್ಷಗಳ ತರುವಾಯ, ನಾನು ಭೌತಿಕವಾಗಿ ಬಡವಳಾಗಿರುವುದಾದರೂ, ಪಯನೀಯರ್ ಸೇವೆಯ ಸುಯೋಗವನ್ನು ಅಮೂಲ್ಯವೆಂದೆಣಿಸುತ್ತೇನೆ ಮತ್ತು ಇತರರೊಂದಿಗೆ ರಾಜ್ಯದ ಸತ್ಯವನ್ನು ಹಂಚಿಕೊಳ್ಳುವುದರಿಂದ ಬರುವ ಅಪರಿಮಿತ ಆನಂದವನ್ನು ನಿರಂತರವಾಗಿ ಅನುಭವಿಸುತ್ತಿದ್ದೇನೆ.”