ದೇವರನ್ನು ಪ್ರೀತಿಸುವಂತೆ ನಮ್ಮ ಹೆತ್ತವರು ನಮಗೆ ಕಲಿಸಿಕೊಟ್ಟರು
ಎಲಿಸಬೆತ್ ಟ್ರೇಸಿ ಹೇಳಿದಂತೆ
ನಮ್ಮ ಮೇಲೆ ಆಕ್ರಮಣ ಮಾಡಿದ್ದ ಶಸ್ತ್ರಸಜ್ಜಿತ ಪುರುಷರು, ತಂದೆ ಹಾಗೂ ತಾಯಿಯನ್ನು ಕಾರಿನಿಂದ ಕೆಳಗಿಳಿಯುವಂತೆ ಒತ್ತಾಯಿಸಿದರು. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ನನ್ನ ಅಕ್ಕ ಮತ್ತು ನಾನು, ನಮ್ಮ ಹೆತ್ತವರನ್ನು ಪುನಃ ಜೀವಂತವಾಗಿ ನೋಡುವೆವೊ ಎಂದು ಯೋಚಿಸುತ್ತಾ ಇದ್ದೆವು. 1914ರಲ್ಲಿ, ಅಮೆರಿಕದ ಅಲಬಾಮದಲ್ಲಿರುವ ಸೆಲ್ಮದ ಹತ್ತಿರ ನಡೆದ ಈ ಭಯಂಕರ ಘಟನೆಯನ್ನು ಯಾವುದು ಪ್ರಚೋದಿಸಿತು? ಮತ್ತು ನಾವು ನಮ್ಮ ಹೆತ್ತವರಿಂದ ಪಡೆದುಕೊಂಡ ಶಿಕ್ಷಣವು ಈ ಘಟನೆಗೆ ಹೇಗೆ ಸಂಬಂಧಿಸಿತ್ತು?
ನನ್ನ ತಂದೆಯವರಾದ ಡೂಯಿ ಫೌಂಟನ್, ಶಿಶುವಾಗಿದ್ದಾಗಲೇ ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದರು. ಆದಕಾರಣ, ಟೆಕ್ಸಸ್ನಲ್ಲಿ ಹೊಲಗದ್ದೆಗಳಿದ್ದ ತಮ್ಮ ಅಕ್ಕ ಹಾಗೂ ಭಾವನವರಿಂದ ಬೆಳೆಸಲ್ಪಟ್ಟರು. ತರುವಾಯ ತಂದೆಯವರು ಖನಿಜ ತೈಲ ದೊರೆಯುವ ಪ್ರದೇಶಗಳಲ್ಲಿ ಕೆಲಸಮಾಡಲಿಕ್ಕಾಗಿ ಹೋದರು. 1922ರಲ್ಲಿ ಅವರು 23 ವರ್ಷ ಪ್ರಾಯದವರಾಗಿದ್ದಾಗ, ಟೆಕ್ಸಸ್ನ ಒಬ್ಬ ಸುಂದರ ಯುವತಿ ವಿನ್ನೀಯನ್ನು ವಿವಾಹವಾಗಿ, ಕುಟುಂಬವೃದ್ಧಿಸುವ ಯೋಜನೆಗಳನ್ನು ಮಾಡತೊಡಗಿದರು.
ಅವರು ಪೂರ್ವ ಟೆಕ್ಸಸ್ನ ಗ್ಯಾರಿಸನ್ ಎಂಬ ಚಿಕ್ಕ ಪಟ್ಟಣದ ಹತ್ತಿರದ ಮರಗಳಿಂದಾವೃತವಾದ ಪ್ರದೇಶದಲ್ಲಿ ಒಂದು ಮನೆಯನ್ನು ಕಟ್ಟಿದರು. ಅಲ್ಲಿ ಅವರು ಹತ್ತಿ ಮತ್ತು ಮುಸುಕಿನ ಜೋಳದೊಂದಿಗೆ, ವಿವಿಧ ಪೈರುಗಳನ್ನು ಬೆಳೆಸಿದರು. ಅವರು ಎಲ್ಲ ರೀತಿಯ ಸಾಕು ಪ್ರಾಣಿಗಳನ್ನು ಸಹ ಬೆಳೆಸಿದರು. ಸಕಾಲದಲ್ಲಿ, ಮಕ್ಕಳಾದ ನಾವು, ಅಂದರೆ ಮೇ 1924ರಲ್ಲಿ ಡೂಯಿ ಜೂನಿಯರ್, ಡಿಸೆಂಬರ್ 1925ರಲ್ಲಿ ಎಡ್ವೀನ ಹುಟ್ಟಿದರು, ಮತ್ತು ಜೂನ್ 1929ರಲ್ಲಿ ನಾನು ಹುಟ್ಟಿದೆ.
ಬೈಬಲ್ ಸತ್ಯವನ್ನು ಕಲಿತುಕೊಳ್ಳುವುದು
ತಂದೆತಾಯಿ ಚರ್ಚ್ ಆಫ್ ಕ್ರೈಸ್ಟ್ ಎಂಬ ಗುಂಪಿಗೆ ಸೇರಿದವರಾಗಿದ್ದ ಕಾರಣ, ತಮಗೆ ಸಾಕಷ್ಟು ಬೈಬಲಿನ ಜ್ಞಾನವಿದೆ ಎಂದು ಭಾವಿಸಿದರು. ಆದರೆ 1932ರಲ್ಲಿ, ಜಿ. ಡಬ್ಲ್ಯೂ. ಕುಕ್ ಎಂಬವರು, ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಬಿಡುಗಡೆ (ಇಂಗ್ಲಿಷ್) ಮತ್ತು ಸರಕಾರ (ಇಂಗ್ಲಿಷ್) ಎಂಬ ಪುಸ್ತಕಗಳನ್ನು, ತಂದೆಯ ಅಣ್ಣನಾದ ಮನ್ರೊ ಫೌಂಟನ್ ಅವರಲ್ಲಿ ಬಿಟ್ಟುಹೋದರು. ತಾವು ಕಲಿತುಕೊಳ್ಳುತ್ತಿದ್ದ ವಿಷಯಗಳನ್ನು ಮನ್ರೊ ದೊಡ್ಡಪ್ಪ ನನ್ನ ಹೆತ್ತವರೊಂದಿಗೆ ಹಂಚಿಕೊಳ್ಳಲು ತೀರ ಆಸಕ್ತರಾಗಿದ್ದ ಕಾರಣ, ಬೆಳಗ್ಗಿನ ಉಪಾಹಾರದ ಸಮಯದಲ್ಲಿ ನಮ್ಮ ಮನೆಗೆ ಬಂದು, ದ ವಾಚ್ಟವರ್ ಪತ್ರಿಕೆಯಿಂದ ಒಂದು ಲೇಖನವನ್ನು ಓದಿ, ಅದನ್ನು “ಆಕಸ್ಮಿಕವಾಗಿ” ಅಲ್ಲಿಯೇ ಬಿಟ್ಟುಹೋಗುತ್ತಿದ್ದರು. ತದನಂತರ, ತಂದೆತಾಯಿ ಅದನ್ನು ಓದುತ್ತಿದ್ದರು.
ಒಂದು ರವಿವಾರ ಬೆಳಗ್ಗೆ, ದೊಡ್ಡಪ್ಪ ತಂದೆಯವರನ್ನು ಬೈಬಲ್ ಅಧ್ಯಯನಕ್ಕಾಗಿ ನೆರೆಯವರ ಮನೆಗೆ ಆಮಂತ್ರಿಸಿದರು. ತಂದೆಯವರ ಎಲ್ಲ ಪ್ರಶ್ನೆಗಳಿಗೆ ಮಿಸ್ಟರ್ ಕುಕ್ ಬೈಬಲಿನಿಂದ ಉತ್ತರಗಳನ್ನು ಕೊಡುವರೆಂದು ಅವರು ತಿಳಿಸಿದರು. ಅಧ್ಯಯನದಿಂದ ಹಿಂದಿರುಗಿ ಬಂದ ತಂದೆಯವರು ಅತ್ಯುತ್ಸಾಹದಿಂದ ನಮಗೆಲ್ಲ ಹೇಳಿದ್ದು: “ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರವು ಸಿಕ್ಕಿತಲ್ಲದೆ, ಇನ್ನೂ ಹೆಚ್ಚಿನ ಮಾಹಿತಿಯು ನನಗೆ ನೀಡಲ್ಪಟ್ಟಿತು! ಬೈಬಲಿನ ಬಗ್ಗೆ ನನಗೆ ಎಲ್ಲ ತಿಳಿದಿದೆ ಎಂದು ನಾನು ಭಾವಿಸಿದ್ದೆ. ಆದರೆ ಮಿಸ್ಟರ್ ಕುಕ್ ಅವರು, ನರಕ, ಪ್ರಾಣ, ಭೂಮಿಗಾಗಿರುವ ದೇವರ ಉದ್ದೇಶ, ಮತ್ತು ದೇವರ ರಾಜ್ಯವು ಅದನ್ನು ಯಾವ ವಿಧದಲ್ಲಿ ನೆರವೇರಿಸುವುದೆಂಬ ವಿಷಯಗಳನ್ನು ವಿವರಿಸತೊಡಗಿದಾಗ, ಬೈಬಲಿನ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲವೆಂಬುದು ಗೊತ್ತಾಯಿತು!”
ನಮ್ಮ ಮನೆಯು ಸಂತೋಷಕೂಟಗಳಿಗೆ ಮುಖ್ಯಕೇಂದ್ರವಾಗಿತ್ತು. ಸಂಬಂಧಿಕರು ಮತ್ತು ಮಿತ್ರರು ಆಗಾಗ ಭೇಟಿನೀಡಿ, ಫಡ್ಜ್ ಮತ್ತು ಸಿಹಿಯಾದ ಪಾಪ್ಕಾರ್ನ್ ಅನ್ನು ತಯಾರಿಸುತ್ತಿದ್ದರು ಮತ್ತು ತಾಯಿಯು ಪಿಯಾನೊವನ್ನು ನುಡಿಸಿದಂತೆ ಜೊತೆಗೆ ಹಾಡುತ್ತಿದ್ದರು. ಕ್ರಮೇಣ, ಇಂತಹ ಸಂದರ್ಭಗಳು ಬೈಬಲ್ ವಿಷಯಗಳ ಚರ್ಚೆಗೆ ನಡೆಸಿದವು. ಚರ್ಚಿಸಲ್ಪಟ್ಟ ಎಲ್ಲ ವಿಷಯಗಳು ಮಕ್ಕಳಾದ ನಮಗೆ ಅರ್ಥವಾಗದೆ ಇದ್ದರೂ, ದೇವರಿಗಾಗಿ ಮತ್ತು ಬೈಬಲಿಗಾಗಿ ನಮ್ಮ ಹೆತ್ತವರಲ್ಲಿದ್ದ ಬಲವಾದ ಪ್ರೀತಿಯು ಎಷ್ಟು ಸ್ಪಷ್ಟವಾಗಿತ್ತೆಂದರೆ, ದೇವರು ಮತ್ತು ಆತನ ವಾಕ್ಯಕ್ಕಾಗಿ ಮಕ್ಕಳಾದ ನಮ್ಮಲ್ಲಿ ಪ್ರತಿಯೊಬ್ಬರೂ ತದ್ರೀತಿಯ ಪ್ರೀತಿಯನ್ನು ಬೆಳೆಸಿಕೊಂಡೆವು.
ಸಾಪ್ತಾಹಿಕ ಬೈಬಲ್ ಚರ್ಚೆಗಳನ್ನು ತಮ್ಮ ಮನೆಗಳಲ್ಲೂ ನಡೆಸುವಂತೆ, ಇತರ ಕುಟುಂಬಗಳು ಕೇಳಿಕೊಂಡವು. ಇಂತಹ ಚರ್ಚೆಗಳು ಸಾಮಾನ್ಯವಾಗಿ ಹೊಸದಾಗಿ ದೊರಕಿದ್ದ ವಾಚ್ಟವರ್ ಪತ್ರಿಕೆಯಲ್ಲಿರುವ ಒಂದು ವಿಷಯದ ಮೇಲೆ ನಡೆಸಲ್ಪಟ್ಟವು. ಇದು ಹತ್ತಿರದ ಪಟ್ಟಣಗಳಾದ ಆ್ಯಪಲ್ಬೀ ಮತ್ತು ನ್ಯಾಕಡೋಚಸ್ಗಳಲ್ಲಿದ್ದ ಕುಟುಂಬಗಳ ಮನೆಯಲ್ಲಿ ನಡೆಸಲ್ಪಟ್ಟಾಗ, ಮಳೆಬಿಸಿಲೆನ್ನದೆ ನಾವು ನಮ್ಮ ಮಾಡೆಲ್ ಏ ಫೋರ್ಡ್ ಕಾರಿನಲ್ಲಿ ಅಲ್ಲಿಗೆ ಪ್ರಯಾಣಿಸುತ್ತಿದ್ದೆವು.
ತಾವು ಕಲಿತುಕೊಂಡ ವಿಷಯಗಳಿಗನುಸಾರ ಕ್ರಿಯೆಗೈಯುವುದು
ಕ್ರಿಯೆಗೈಯುವುದರ ಅಗತ್ಯವನ್ನು ಮನಗಾಣಲು ನಮ್ಮ ಹೆತ್ತವರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ತಾವು ಕಲಿಯುತ್ತಿದ್ದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ದೇವರ ಪ್ರೀತಿಯು ಅಗತ್ಯಪಡಿಸಿತು. (ಅ. ಕೃತ್ಯಗಳು 20:35) ಆದರೆ, ನಮ್ಮ ಹೆತ್ತವರು ಸಂಕೋಚ ಸ್ವಭಾವದವರೂ ನಮ್ರರೂ ಆಗಿದ್ದ ಕಾರಣ, ಅವರಿಗೆ ತಮ್ಮ ನಂಬಿಕೆಯನ್ನು ಬಹಿರಂಗಪಡಿಸುವುದೇ ಒಂದು ಸವಾಲಾಗಿತ್ತು. ಆದರೂ, ದೇವರಿಗಾಗಿದ್ದ ಪ್ರೀತಿಯು ಅವರನ್ನು ಪ್ರಚೋದಿಸಿತು, ಮತ್ತು ಹೀಗೆ ಯೆಹೋವನಲ್ಲಿ ಆಳವಾದ ಭರವಸೆಯನ್ನು ಇಡುವಂತೆ ನಮಗೆ ಕಲಿಸಿಕೊಡಲು ಇದು ಅವರಿಗೆ ಸಹಾಯಮಾಡಿತು. ತಂದೆಯವರು ಇದನ್ನು ಹೀಗೆ ವ್ಯಕ್ತಪಡಿಸಿದರು: “ಯೆಹೋವನು ರೈತರಿಂದ ಪ್ರಚಾರಕರನ್ನು ಉಂಟುಮಾಡುತ್ತಿದ್ದಾನೆ!” 1933ರಲ್ಲಿ, ತಂದೆತಾಯಿ ಯೆಹೋವನಿಗೆ ತಾವು ಮಾಡಿದ್ದ ಸಮರ್ಪಣೆಯನ್ನು, ಟೆಕ್ಸಸ್ನ ಹೆಂಡರ್ಸನ್ನ ಬಳಿಯಿದ್ದ ಕೊಳದಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವ ಮೂಲಕ ಸಂಕೇತಿಸಿದರು.
ಇಸವಿ 1935ರ ಆದಿಭಾಗದಲ್ಲಿ, ತಂದೆಯವರು ವಾಚ್ ಟವರ್ ಸೊಸೈಟಿಗೆ ಪತ್ರ ಬರೆದು, ಕ್ರೈಸ್ತ ನಿರೀಕ್ಷೆಯಾದ ನಿತ್ಯಜೀವದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದರು. (ಯೋಹಾನ 14:2; 2 ತಿಮೊಥೆಯ 2:11, 12; ಪ್ರಕಟನೆ 14:1, 3; 20:6) ಅವರಿಗೆ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡ್ ಅವರಿಂದಲೇ ಉತ್ತರವು ಸಿಕ್ಕಿತು. ತಂದೆಯವರ ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಬದಲು, ಮೇ ತಿಂಗಳಿನಲ್ಲಿ ವಾಷಿಂಗ್ಟನ್ ಡಿ. ಸಿಯಲ್ಲಿ ನಡೆಯಲಿದ್ದ ಯೆಹೋವನ ಸಾಕ್ಷಿಗಳ ಅಧಿವೇಶನಕ್ಕೆ ಹಾಜರಾಗುವ ಆಮಂತ್ರಣವನ್ನು ಸಹೋದರ ರದರ್ಫರ್ಡ್ ನೀಡಿದರು.
‘ಅಸಾಧ್ಯ!’ ಎಂದು ತಂದೆಯವರು ನೆನಸಿದರು. ‘65 ಎಕ್ರೆ ಜಮೀನಿನಲ್ಲಿ ತರಕಾರಿಗಳನ್ನು ನೆಟ್ಟಿರುವ ಬೇಸಾಯಗಾರರು ನಾವಾಗಿದ್ದೇವೆ. ಆ ಸಮಯವು ಕೊಯ್ಲಿನ ಸಮಯವಾಗಿದ್ದು, ತರಕಾರಿಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಬೇಕಾಗಿರುವುದು.’ ಇದಾದ ಸ್ವಲ್ಪದರಲ್ಲೇ, ನೆರೆನೀರು ಬಂದು, ತಂದೆಯವರ ಎಲ್ಲ ನೆಪಗಳನ್ನು ಅಂದರೆ, ಪೈರುಗಳು, ಬೇಲಿಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡುಹೋಯಿತು. ಹೀಗೆ ನಾವು ಬೇರೆ ಸಾಕ್ಷಿಗಳೊಂದಿಗೆ ಸೇರಿ, 1,600 ಕಿಲೊಮೀಟರುಗಳ ದೂರದಲ್ಲಿ ನಡೆಯಲಿದ್ದ ಅಧಿವೇಶನಕ್ಕೆ ಬಾಡಿಗೆಗೆ ಗೊತ್ತುಮಾಡಿದ್ದ ಒಂದು ಬಸ್ಸಿನಲ್ಲಿ ಹೋದೆವು.
“ಮಹಾ ಸಂಕಟ”ದಿಂದ ಬದುಕಿ ಉಳಿಯುವ “ಮಹಾ ಸಮೂಹ”ದವರ ಗುರುತಿನ ಬಗ್ಗೆ ಅಧಿವೇಶನದಲ್ಲಿ ನೀಡಲ್ಪಟ್ಟ ಸ್ಪಷ್ಟವಾದ ವಿವರಣೆಯಿಂದ ತಂದೆತಾಯಿ ರೋಮಾಂಚಿತರಾದರು. (ಪ್ರಕಟನೆ 7:9, 14, ಕಿಂಗ್ ಜೇಮ್ಸ್ ವರ್ಷನ್) ಅವರು ಬದುಕಿದ್ದಷ್ಟೂ ಕಾಲ, ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನದ ನಿರೀಕ್ಷೆಯು ತಂದೆತಾಯಿಯನ್ನು ಪ್ರಚೋದಿಸಿತು, ಮತ್ತು ಮಕ್ಕಳಾದ ನಾವು “ವಾಸ್ತವವಾದ ಜೀವವನ್ನು” ಬಿಗಿಯಾಗಿ ಹಿಡಿದುಕೊಳ್ಳುವಂತೆ ಅವರು ನಮಗೆ ಉತ್ತೇಜನ ನೀಡಿದರು. ಇದು ಭೂಮಿಯ ಮೇಲೆ ಯೆಹೋವನು ನೀಡುವ ನಿತ್ಯಜೀವವನ್ನು ಅರ್ಥೈಸಿತು. (1 ತಿಮೊಥೆಯ 6:19; ಕೀರ್ತನೆ 37:29; ಪ್ರಕಟನೆ 21:3, 4) ನಾನು ಕೇವಲ ಐದು ವರ್ಷದವಳಾಗಿದ್ದರೂ, ಈ ಸಂತೋಷದ ಸಂದರ್ಭದಲ್ಲಿ ನನ್ನ ಕುಟುಂಬದೊಂದಿಗಿರುವುದರಲ್ಲಿ ಬಹಳವಾಗಿ ಆನಂದಿಸಿದೆ.
ಅಧಿವೇಶನದಿಂದ ಹಿಂದಿರುಗಿದ ಬಳಿಕ, ನಾವು ಪುನಃ ಬೀಜವನ್ನು ಬಿತ್ತಿದೆವು, ಮತ್ತು ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧವಾದ ಬೆಳೆಯನ್ನು ಪಡೆದೆವು. ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡುವುದು ಖಂಡಿತವಾಗಿಯೂ ಪ್ರತಿಫಲದಾಯಕವಾಗಿರುವುದು ಎಂಬ ಮನವರಿಕೆಯನ್ನು ಇದು ತಂದೆತಾಯಿಯಲ್ಲಿ ಉಂಟುಮಾಡಿತು. ಅವರು ಪ್ರತಿ ತಿಂಗಳು ಶುಶ್ರೂಷೆಯಲ್ಲಿ 52 ತಾಸುಗಳನ್ನು ವ್ಯಯಿಸಲು ನಿರ್ಧರಿಸಿ, ವಿಶೇಷವಾದೊಂದು ರೀತಿಯ ಸಾರುವ ಕೆಲಸವನ್ನು ಕೈಗೊಂಡರು. ಮತ್ತು ಮುಂದಿನ ನೆಡುವ ಕಾಲ ಬಂದಾಗ, ತಮ್ಮಲ್ಲಿದ್ದ ಹೊಲಗದ್ದೆಗಳನ್ನು ಪೂರ್ತಿ ಮಾರಿಬಿಟ್ಟರು! ತಂದೆಯವರು ನಮಗಾಗಿ 20 x 8 ಅಡಿ ಟ್ರೇಲರ್ ಅನ್ನು ನಿರ್ಮಿಸಿ, ಅದನ್ನು ಎಳೆದುಕೊಂಡು ಹೋಗಲು ಎರಡು ಬಾಗಿಲುಗಳುಳ್ಳ ಹೊಸದಾದ ಫೋರ್ಡ್ ಕಾರನ್ನು ಖರೀದಿಸಿದರು. ಮನ್ರೊ ದೊಡ್ಡಪ್ಪ ಸಹ ಹಾಗೆಯೇ ಮಾಡಿದರು. ಮತ್ತು ಅವರೂ ತಮ್ಮ ಕುಟುಂಬದೊಂದಿಗೆ ಒಂದು ಟ್ರೇಲರ್ನಲ್ಲಿ ವಾಸಿಸತೊಡಗಿದರು.
ನಮಗೆ ಸತ್ಯವನ್ನು ಕಲಿಸಿಕೊಟ್ಟದ್ದು
ತಂದೆತಾಯಿ ಅಕ್ಟೋಬರ್ 1936ರಲ್ಲಿ ಪೂರ್ಣ ಸಮಯದ ಸೇವೆಯನ್ನು ಅಂದರೆ ಪಯನೀಯರ್ ಸೇವೆಯನ್ನು ಆರಂಭಿಸಿದರು. ರಾಜ್ಯ ಸಂದೇಶವು ತಲಪಿರದಿದ್ದ ಪೂರ್ವ ಟೆಕ್ಸಸ್ನ ಪ್ರಾಂತಗಳಲ್ಲಿ ನಾವು ಕುಟುಂಬವಾಗಿ ಸಾರಲಾರಂಭಿಸಿದೆವು. ಸುಮಾರು ಒಂದು ವರ್ಷ ನಾವು ಒಂದು ಸ್ಥಳದಿಂದ ಮತ್ತೊಂದಕ್ಕೆ ಸ್ಥಳಾಂತರಿಸಿದೆವು, ಆದರೆ ಒಟ್ಟಿನಲ್ಲಿ ಇಂತಹ ಜೀವನ ರೀತಿಯಲ್ಲಿ ಬಹಳವಾಗಿ ಆನಂದಿಸಿದೆವು. ಬೈಬಲ್ ಸತ್ಯವನ್ನು ಇತರರಿಗೆ ಹಂಚಲು ತಮ್ಮನ್ನು ಸಮರ್ಪಿಸಿಕೊಂಡಿದ್ದ ಆದಿ ಕ್ರೈಸ್ತರನ್ನು ನಾವು ಅನುಸರಿಸುವಂತೆ ತಂದೆತಾಯಿ ತಮ್ಮ ನಡೆನುಡಿಯಿಂದ ನಮಗೆ ಕಲಿಸಿಕೊಟ್ಟರು.
ಮಕ್ಕಳಾದ ನಾವು ವಿಶೇಷವಾಗಿ ತಾಯಿಯನ್ನು ಬಹಳವಾಗಿ ಮೆಚ್ಚಿಕೊಂಡೆವು. ಮನೆಯನ್ನು ಬಿಟ್ಟುಬರುವುದರೊಂದಿಗೆ ಅವರು ಅನೇಕ ತ್ಯಾಗಗಳನ್ನು ಮಾಡಿದ್ದರು. ಆದರೆ ಒಂದು ವಸ್ತುವನ್ನು ಮಾತ್ರ ಅವರು ಮಾರಲು ತಯಾರಿರಲಿಲ್ಲ. ಅದು ಅವರ ಹೊಲಿಗೆಯ ಯಂತ್ರವಾಗಿತ್ತು. ಅದೊಂದು ಒಳ್ಳೆಯ ನಿರ್ಣಯವೇ ಆಗಿತ್ತು. ಅವರಿಗೆ ಬಟ್ಟೆಗಳನ್ನು ಹೊಲಿಯುವುದಕ್ಕೆ ಗೊತ್ತಿದ್ದ ಕಾರಣ, ಅವರು ನಮಗೆ ಒಳ್ಳೊಳ್ಳೇ ಉಡುಪುಗಳನ್ನು ಹೊಲಿದುಕೊಡುತ್ತಿದ್ದರು. ಪ್ರತಿಯೊಂದು ಅಧಿವೇಶನದಲ್ಲಿ, ನಾವು ಆಕರ್ಷಕವಾದ ಹೊಸ ಉಡುಪುಗಳನ್ನು ಧರಿಸುತ್ತಿದ್ದೆವು.
ಹರ್ಮನ್ ಜಿ. ಹೆನ್ಷಲ್ ತಮ್ಮ ಕುಟುಂಬದೊಂದಿಗೆ ವಾಚ್ ಟವರ್ ಸೊಸೈಟಿಯ ಲೌಡ್ಸ್ಪೀಕರ್-ಸಜ್ಜಿತ ಟ್ರಕ್ನಲ್ಲಿ ನಮ್ಮ ಕ್ಷೇತ್ರಕ್ಕೆ ಬಂದದ್ದು ನನಗೆ ಚೆನ್ನಾಗಿ ಜ್ಞಾಪಕವಿದೆ. ಅವರು ಟ್ರಕ್ಕನ್ನು ಜನನಿಬಿಡವಾದ ಕ್ಷೇತ್ರದಲ್ಲಿ ನಿಲ್ಲಿಸಿ, ರೆಕಾರ್ಡ್ ಮಾಡಲಾದ ಚಿಕ್ಕ ಭಾಷಣವನ್ನು ನುಡಿಸಿ, ಹೆಚ್ಚಿನ ಮಾಹಿತಿಯನ್ನು ಜನರಿಗೆ ನೀಡಲು ವ್ಯಕ್ತಿಗತ ಭೇಟಿಗಳನ್ನು ಮಾಡಿದರು. ಆ ಸಮಯದಲ್ಲಿ ಹರ್ಮನ್ ಅವರ ಹದಿಹರೆಯದ ಮಗನಾದ ಮಿಲ್ಟನ್ನ ಸಹವಾಸದಲ್ಲಿ ಡೂಯಿ ಜೂನಿಯರ್ ಬಹಳವಾಗಿ ಆನಂದಿಸಿದನು. ಈಗ ಮಿಲ್ಟನ್ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ.
ಒಹಾಯೋದ ಕೊಲಂಬಸ್ನಲ್ಲಿ, 1937ರಲ್ಲಿ ನಡೆದ ಒಂದು ಅಧಿವೇಶನದಲ್ಲಿ ಎಡ್ವೀನ ದೀಕ್ಷಾಸ್ನಾನ ಪಡೆದುಕೊಂಡಳು, ಮತ್ತು ತಂದೆತಾಯಿಗೆ ವಿಶೇಷ ಪಯನೀಯರರಾಗುವ ಸುಯೋಗವು ನೀಡಲ್ಪಟ್ಟಿತು. ಆ ಸಮಯದಲ್ಲಿ ವಿಶೇಷ ಪಯನೀಯರರು, ಸಾರುವ ಕಾರ್ಯದಲ್ಲಿ ಪ್ರತಿ ತಿಂಗಳು ಕಡಿಮೆಯೆಂದರೆ 200 ತಾಸುಗಳನ್ನು ವ್ಯಯಿಸಬೇಕಿತ್ತು. ನಾನು ಹಿನ್ನೋಟ ಬೀರುವಾಗ, ನನ್ನ ತಾಯಿಯ ಉತ್ತಮ ಮಾದರಿಯು, ನಾನು ನನ್ನ ಪತಿಗೆ ಅವರ ನೇಮಕಗಳಲ್ಲಿ ಅಗತ್ಯವಾದ ಬೆಂಬಲವನ್ನು ನೀಡಲು ಸಹಾಯ ಮಾಡಿದೆ ಎಂಬುದನ್ನು ತಿಳಿದುಕೊಂಡಿದ್ದೇನೆ.
ತಂದೆಯವರು ಒಂದು ಕುಟುಂಬದೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದಾಗ, ಆ ಕುಟುಂಬದ ಮಕ್ಕಳಿಗೆ ಒಳ್ಳೆಯ ಮಾದರಿಯನ್ನು ಒದಗಿಸಲು ಮಕ್ಕಳಾದ ನಮ್ಮನ್ನು ಕರೆದೊಯ್ಯುತ್ತಿದ್ದರು. ಬೈಬಲ್ ವಚನಗಳನ್ನು ತೆರೆದು ಓದುವಂತೆ ಹೇಳುತ್ತಿದ್ದರು, ಮತ್ತು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿ ನಮ್ಮಿಂದ ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದರು. ಈ ಕಾರಣ, ನಾವು ಅಭ್ಯಾಸಿಸಿದ ಯುವ ಜನರಲ್ಲಿ ಅನೇಕರು, ಈ ದಿನದ ವರೆಗೂ ಯೆಹೋವನಿಗೆ ನಂಬಿಗಸ್ತರಾಗಿ ಸೇವೆಸಲ್ಲಿಸುತ್ತಿದ್ದಾರೆ. ಅಲ್ಲದೆ ನಾವು ದೇವರನ್ನು ನಿರಂತರವಾಗಿ ಪ್ರೀತಿಸುತ್ತಾ ಇರುವಂತೆ ನಮಗಾಗಿ ಒಂದು ದೃಢವಾದ ಅಸ್ತಿವಾರವು ಸಹ ಹಾಕಲ್ಪಟ್ಟಿತು.
ಡೂಯಿ ಜೂನಿಯರ್ ದೊಡ್ಡವನಾದಂತೆ, ಇಬ್ಬರು ತಂಗಿಯರೊಂದಿಗೆ ಟ್ರೇಲರ್ನ ಇಕ್ಕಟ್ಟಾದ ಸ್ಥಳದಲ್ಲಿ ವಾಸಿಸುವುದು ಕಷ್ಟಕರವೆಂದು ಕಂಡುಕೊಂಡನು. ಆದಕಾರಣ, 1940ರಲ್ಲಿ ಅವನು ಮನೆಯಿಂದ ಹೊರಗೆ ಹೋಗಿ, ಇನ್ನೊಬ್ಬ ಸಾಕ್ಷಿಯೊಂದಿಗೆ ಪಯನೀಯರ್ ಶುಶ್ರೂಷೆಯನ್ನು ಆರಂಭಿಸಲು ನಿರ್ಧರಿಸಿದನು. ತರುವಾಯ ಅವನು ಆಡ್ರಿ ಬ್ಯಾರನ್ಳನ್ನು ವಿವಾಹವಾದನು. ಹೀಗೆ ಆಡ್ರಿಯು ಸಹ ನಮ್ಮ ಹೆತ್ತವರಿಂದ ಅನೇಕ ವಿಷಯಗಳನ್ನು ಕಲಿತುಕೊಂಡಳು, ಮತ್ತು ತಂದೆತಾಯಿಯನ್ನು ಅವಳು ಬಹಳವಾಗಿ ಪ್ರೀತಿಸತೊಡಗಿದಳು. ಡೂಯಿ ಜೂನಿಯರ್ ಅವನ ತಟಸ್ಥ ನಿಲುವಿನ ಕಾರಣ 1944ರಲ್ಲಿ ಸೆರೆಮನೆಗೆ ಹೋದಾಗ, ಅವಳು ನಮ್ಮ ಇಕ್ಕಟ್ಟಾದ ಟ್ರೇಲರ್ನಲ್ಲಿ ನಮ್ಮೊಂದಿಗೆ ವಾಸಿಸತೊಡಗಿದಳು.
ಮಿಸೂರಿಯ ಸೆಂಟ್ ಲೂಯಿಸ್ನಲ್ಲಿ 1941ರಲ್ಲಿ ಒಂದು ದೊಡ್ಡ ಅಧಿವೇಶನವು ನಡೆದಾಗ, ಸಭಾಂಗಣದ ಮುಂಭಾಗದಲ್ಲಿ ಕುಳಿತುಕೊಂಡಿದ್ದ 5-18ರ ಪ್ರಾಯದ ಮಕ್ಕಳನ್ನು ಸಹೋದರ ರದರ್ಫರ್ಡ್ ಸಂಬೋಧಿಸಿ ಮಾತಾಡಿದರು. ಅವರ ಶಾಂತವಾದ ಸ್ಪಷ್ಟ ಮಾತುಗಳಿಗೆ ಎಡ್ವೀನ ಮತ್ತು ನಾನು ಕಿವಿಗೊಟ್ಟೆವು. ಅವರು ಮನೆಯಲ್ಲಿ ತಮ್ಮ ಸ್ವಂತ ಮಕ್ಕಳಿಗೆ ಉಪದೇಶ ನೀಡುತ್ತಿರುವ ಪ್ರೀತಿಪರ ತಂದೆಯಂತೆ ಕಂಡುಬಂದರು. ಅವರು ಹೆತ್ತವರಿಗೆ ಉತ್ತೇಜನ ನೀಡಿದ್ದು: “ಇಂದು ಕ್ರಿಸ್ತ ಯೇಸು ತನ್ನ ಒಡಂಬಡಿಕೆಯ ಜನರನ್ನು ತನ್ನ ಮುಂದೆ ಒಟ್ಟುಗೂಡಿಸಿದ್ದಾನೆ. ಮತ್ತು ನೀತಿಯ ಮಾರ್ಗದಲ್ಲಿ ತಮ್ಮ ಮಕ್ಕಳಿಗೆ ಉಪದೇಶ ನೀಡುವಂತೆ ಪ್ರಬಲವಾಗಿ ಅವರಿಗೆ ಹೇಳುತ್ತಿದ್ದಾನೆ.” ಅವರು ಕೂಡಿಸಿ ಹೇಳಿದ್ದು: “ಮಕ್ಕಳನ್ನು ಮನೆಯಲ್ಲಿ ಬೆಳೆಸಿ ಅವರಿಗೆ ಸತ್ಯವನ್ನು ಕಲಿಸಿರಿ!” ನಮ್ಮ ಹೆತ್ತವರು ಅದನ್ನೇ ಮಾಡಿದರು!
ಆ ಅಧಿವೇಶನದಲ್ಲಿ, ಯೆಹೋವನ ಸೇವಕರು ಸಮರ್ಥಿಸಲ್ಪಟ್ಟದ್ದು (ಇಂಗ್ಲಿಷ್) ಎಂಬ ಹೊಸ ಪುಸ್ತಿಕೆಯನ್ನು ನಾವು ಪಡೆದುಕೊಂಡೆವು. ಅಮೆರಿಕದ ಉಚ್ಚ ನ್ಯಾಯಾಲಯದಲ್ಲಿ ನಡೆದ ಕೇಸ್ನ ಜೊತೆಗೆ, ಯೆಹೋವನ ಸಾಕ್ಷಿಗಳು ಜಯಿಸಿದಂತಹ ಕೇಸುಗಳ ಪುನರ್ವಿಮರ್ಶೆ ಅದರಲ್ಲಿತ್ತು. ತಂದೆಯವರು ಕುಟುಂಬವಾಗಿ ಅದನ್ನು ನಮ್ಮೊಂದಿಗೆ ಅಭ್ಯಸಿಸಿದರು. ಕೆಲವೇ ವಾರಗಳ ನಂತರ, ಅಲಬಾಮದ ಸೆಲ್ಮದಲ್ಲಿ ಏನು ಸಂಭವಿಸಿತೋ ಆ ಘಟನೆಗೆ ನಮ್ಮನ್ನು ಸಿದ್ಧಪಡಿಸಲಾಗುತ್ತಿತ್ತು ಎಂಬುದು ನಮಗೆ ಗೊತ್ತೇ ಇರಲಿಲ್ಲ.
ಸೆಲ್ಮದಲ್ಲಿ ದೊಂಬಿ ಆಕ್ರಮಣ
ಆ ಭಯಂಕರವಾದ ಘಟನೆಯು ಸಂಭವಿಸಿದ ದಿನ ಬೆಳಗ್ಗೆ, ಕಾನೂನಿನ ರಕ್ಷಣೆಯ ಕೆಳಗೆ ನಮ್ಮ ಶುಶ್ರೂಷೆಯನ್ನು ನೆರವೇರಿಸುವ ಹಕ್ಕು ಸಂವಿಧಾನದಲ್ಲಿದೆ ಎಂದು ವಿವರಿಸಿದ ಒಂದು ಪತ್ರದ ಪ್ರತಿಗಳನ್ನು, ಷೆರಿಫ್, ಮೇಯರ್ ಮತ್ತು ಪೋಲಿಸ್ ಮುಖ್ಯಾಧಿಕಾರಿಗೆ ತಂದೆಯವರು ಕೊಟ್ಟಿದ್ದರು. ಹಾಗಿದ್ದರೂ, ಆ ಪಟ್ಟಣದಿಂದ ನಮ್ಮನ್ನು ಹೊರಹಾಕಲು ಅವರು ನಿರ್ಣಯಿಸಿದರು.
ಸಂಜೆಯ ಹೊತ್ತು, ಐವರು ಶಸ್ತ್ರಸಜ್ಜಿತ ಪುರುಷರು ನಮ್ಮ ಟ್ರೇಲರಿಗೆ ಬಂದು, ನನ್ನ ತಾಯಿ, ಅಕ್ಕ, ಮತ್ತು ನನ್ನನ್ನು ಒತ್ತೆಯಾಳುಗಳಾಗಿ ಮಾಡಿಕೊಂಡರು. ಸರಕಾರದ ವಿರುದ್ಧ ದಾಖಲೆಗಳೇನಾದರೂ ಸಿಗಬಹುದೊ ಎಂಬ ಆಲೋಚನೆಯಿಂದ, ಅವರು ಟ್ರೇಲರನ್ನು ಜಾಲಾಡಿಸಿ ನೋಡಿದರು. ಹೊರಗಿದ್ದ ನಮ್ಮ ತಂದೆಯನ್ನು ಕರೆಸಿ, ಅವರ ಕಡೆಗೆ ಪಿಸ್ತೂಲನ್ನು ಗುರಿಮಾಡಿ, ಟ್ರೇಲರನ್ನು ಕಾರಿಗೆ ಜೋಡಿಸುವಂತೆ ಆರ್ಡರ್ ಮಾಡಿದರು. ಆ ಕ್ಷಣದಲ್ಲಿ ನನಗೆ ಭಯವಾಗಲಿಲ್ಲ. ಈ ಪುರುಷರು ನಮ್ಮನ್ನು ಅಪಾಯಕಾರಿ ಜನರೆಂದು ಭಾವಿಸಿದ್ದು ಎಷ್ಟು ಹಾಸ್ಯಾಸ್ಪದವಾಗಿತ್ತೆಂದರೆ, ನನ್ನ ಅಕ್ಕ ಮತ್ತು ನಾನು ಮುಸಿಮುಸಿ ನಗತೊಡಗಿದೆವು. ಆದರೆ ತಂದೆಯವರು ಬೀರಿದ ಬಿರುಸಾದ ನೋಟದಿಂದ ನಾವು ಸುಮ್ಮನಾಗಿಬಿಟ್ಟೆವು.
ನಾವು ಅಲ್ಲಿಂದ ಹೊರಡಲು ಸಿದ್ಧರಾದಾಗ, ತಮ್ಮ ಕಾರಿನಲ್ಲಿ ನಾನು ಮತ್ತು ಎಡ್ವೀನಳು ಪ್ರಯಾಣಿಸುವಂತೆ ಆ ಪುರುಷರು ಬಯಸಿದರು. ಆದರೆ ತಂದೆಯವರು, “ನನ್ನ ಉಸಿರಿರುವ ತನಕ ಅದು ಸಾಧ್ಯವಿಲ್ಲ!” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಒಂದಿಷ್ಟು ಚರ್ಚೆಯ ತರುವಾಯ, ನಾವು ಕುಟುಂಬವಾಗಿ ಒಟ್ಟಿಗೆ ಪ್ರಯಾಣಿಸುವಂತೆ ಅನುಮತಿಸಲ್ಪಟ್ಟೆವು. ನಮ್ಮನ್ನು ಆ ಶಸ್ತ್ರಸಜ್ಜಿತ ಪುರುಷರು ತಮ್ಮ ಕಾರಿನಲ್ಲಿ ಹಿಂಬಾಲಿಸಿದರು. ಪಟ್ಟಣದಿಂದ 25 ಕಿಲೊಮೀಟರುಗಳಷ್ಟು ದೂರ ಬಂದ ಮೇಲೆ, ಹೆದ್ದಾರಿಯ ಪಕ್ಕದಲ್ಲಿ ಕಾರನ್ನು ನಿಲ್ಲಿಸಿ, ತಂದೆತಾಯಿಯನ್ನು ದೂರ ಕರೆದುಕೊಂಡು ಹೋದರು. “ಆ ಧರ್ಮವನ್ನು ಬಿಟ್ಟುಬಿಡಿ. ನಿಮ್ಮ ಹೊಲಗದ್ದೆಗೆ ಹಿಂದಿರುಗಿ, ನಿಮ್ಮ ಹುಡುಗಿಯರನ್ನು ಚೆನ್ನಾಗಿ ಬೆಳೆಸಿ!” ಎಂಬುದಾಗಿ ಅವರಲ್ಲಿ ಪ್ರತಿಯೊಬ್ಬರೂ ತಂದೆತಾಯಿಯ ಮನವೊಪ್ಪಿಸಲು ಪ್ರಯತ್ನಿಸಿದರು. ಅವರಿಗೆ ವಿವರಣೆಯನ್ನು ನೀಡಲು ತಂದೆಯವರು ಪ್ರಯತ್ನಿಸಿದರಾದರೂ, ಯಾವ ಪ್ರಯೋಜನವೂ ಆಗಲಿಲ್ಲ.
ಕೊನೆಗೆ, ಒಬ್ಬ ಪುರುಷನು ಹೇಳಿದ್ದು: “ಇಲ್ಲಿಂದ ಹೊರಟುಹೋಗಿ, ಡ್ಯಾಲಸ್ ಜಿಲ್ಲೆಗೆ ಎಂದಾದರೂ ಹಿಂದಿರುಗಿ ಬಂದರೆ, ನಿಮ್ಮೆಲ್ಲರನ್ನೂ ಕೊಂದುಬಿಡುವೆವು!”
ಈ ಸಂಕಟದಿಂದ ಪಾರಾಗಿ, ಮತ್ತೆ ಒಟ್ಟುಸೇರಿದ ನಾವು, ಹಲವಾರು ತಾಸುಗಳ ವರೆಗೆ ಪ್ರಯಾಣಿಸಿದ ಬಳಿಕ, ರಾತ್ರಿ ಸಮಯದಲ್ಲಿ ಕಾರನ್ನು ನಿಲ್ಲಿಸಿ ವಿಶ್ರಾಮವನ್ನು ತೆಗೆದುಕೊಂಡೆವು. ಆ ಪುರುಷರ ವಾಹನದ ಲೈಸನ್ಸ್ ನಂಬರ್ ಅನ್ನು ನಾವು ಬರೆದಿಟ್ಟುಕೊಂಡಿದ್ದೆವು. ತಂದೆ ಕೂಡಲೇ ಎಲ್ಲ ವಿಷಯವನ್ನು ವಾಚ್ ಟವರ್ ಸೊಸೈಟಿಗೆ ತಿಳಿಸಿದರು ಮತ್ತು ಕೆಲವು ತಿಂಗಳುಗಳ ನಂತರ ಆ ಪುರುಷರನ್ನು ಗುರುತುಹಿಡಿದು ಬಂಧಿಸಲಾಯಿತು.
ಗಿಲ್ಯಡ್ ಮಿಷನೆರಿ ಶಾಲೆಗೆ
ನ್ಯೂ ಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 7ನೆಯ ತರಗತಿಗೆ ಹಾಜರಾಗುವ ಆಮಂತ್ರಣವು ಎಡ್ವೀನಳಿಗೆ 1946ರಲ್ಲಿ ಸಿಕ್ಕಿತು. ಶಿಕ್ಷಕರಲ್ಲಿ ಒಬ್ಬರಾಗಿದ್ದ ಆ್ಯಲ್ಬರ್ಟ್ ಶ್ರೋಡರ್, ಆಕೆಯ ಒಳ್ಳೆಯ ಗುಣಗಳನ್ನು ತನ್ನ ಮಾಜಿ ಪಯನೀಯರ್ ಸಂಗಾತಿಯಾಗಿದ್ದ ಬಿಲ್ ಎಲ್ರಾಡ್ಗೆ ತಿಳಿಸಿದರು. ಆ ಸಮಯದಲ್ಲಿ ಇವರು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ, ಅಂದರೆ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿದ್ದರು.a ಎಡ್ವೀನ ಮತ್ತು ಬಿಲ್ ಪರಸ್ಪರ ಪರಿಚಯಿಸಲ್ಪಟ್ಟರು, ಮತ್ತು ಗಿಲ್ಯಡ್ನಿಂದ ಅವಳು ಪದವಿಯನ್ನು ಪಡೆದುಕೊಂಡ ಒಂದು ವರ್ಷದ ಬಳಿಕ ಅವರು ವಿವಾಹವಾದರು. ಅನೇಕ ವರ್ಷಗಳ ವರೆಗೆ ಅವರು ಪೂರ್ಣ ಸಮಯದ ಸೇವೆಯಲ್ಲಿ ಉಳಿದರು. ಬೆತೆಲ್ನಲ್ಲಿ ಐದು ವರ್ಷಗಳ ಕಾಲ ಒಟ್ಟಿಗೆ ಸೇವೆಸಲ್ಲಿಸಿದರು. ಅನಂತರ ಒಂದು ದಿನ 1959ರಲ್ಲಿ, ತನ್ನ ಪ್ರಿಯ ಮಿತ್ರನು ಅವಳಿಜವಳಿ ಮಕ್ಕಳಿಗೆ, ಒಂದು ಗಂಡು ಮತ್ತು ಇನ್ನೊಂದು ಹೆಣ್ಣು ಮಗುವಿಗೆ ತಂದೆಯಾಗಿದ್ದಾನೆಂದು ಸಹೋದರ ಶ್ರೋಡರ್ ಗಿಲ್ಯಡ್ನ 34ನೆಯ ತರಗತಿಗೆ ಘೋಷಿಸಿದರು.
ನಾನು ನನ್ನ ಹೆತ್ತವರೊಂದಿಗೆ ಮಿಸಿಸಿಪಿಯ ಮೆರಿಡೀಯನ್ನಲ್ಲಿ 1947ರ ಕೊನೆಯ ಭಾಗದಲ್ಲಿ ಸೇವೆಸಲ್ಲಿಸುತ್ತಿದ್ದಾಗ, ಗಿಲ್ಯಡ್ನ 11ನೆಯ ತರಗತಿಗೆ ಹಾಜರಾಗುವಂತೆ ನಾವು ಮೂವರೂ ಆಮಂತ್ರಿಸಲ್ಪಟ್ಟೆವು. ನಾವು ಬಹಳ ಆಶ್ಚರ್ಯಪಟ್ಟೆವು, ಏಕೆಂದರೆ ಆವಶ್ಯಕತೆಗಳ ದೃಷ್ಟಿಯಲ್ಲಿ ನಾನು ತೀರ ಚಿಕ್ಕ ಪ್ರಾಯದವಳಾಗಿದ್ದೆ, ಮತ್ತು ತಂದೆತಾಯಿ ಬಹಳ ಪ್ರಾಯಸ್ಥರಾಗಿದ್ದರು. ಆದರೆ ನಮಗೆ ವಿನಾಯಿತಿಯನ್ನು ನೀಡಲಾಯಿತು ಮತ್ತು ಪ್ರೌಢ ಬೈಬಲ್ ಶಿಕ್ಷಣದ ಅಪಾತ್ರ ಸುಯೋಗವು ನಮಗೆ ದೊರಕಿತು.
ಹೆತ್ತವರೊಂದಿಗೆ ಮಿಷನೆರಿ ಸೇವೆ
ನಮ್ಮ ಮಿಷನೆರಿ ನೇಮಕವು, ದಕ್ಷಿಣ ಅಮೆರಿಕದ ಕೊಲಂಬಿಯ ಆಗಿತ್ತು. ಪದವಿಪ್ರಾಪ್ತಿಯ ನಂತರ ಒಂದು ವರ್ಷವಾದ ಮೇಲೆಯೇ, ಅಂದರೆ ಡಿಸೆಂಬರ್ 1949ರಲ್ಲಿಯೇ ನಾವು ಬೋಗಟಾದ ಮಿಷನೆರಿ ಮನೆಗೆ ಆಗಮಿಸಿದೆವು. ಅಲ್ಲಿ ಈಗಾಗಲೇ ಮೂವರು ವಾಸಿಸುತ್ತಿದ್ದರು. ತಾವು ಸ್ಪ್ಯಾನಿಷ್ ಭಾಷೆಯನ್ನು ಕಲಿತುಕೊಳ್ಳುವ ಬದಲು ಅಲ್ಲಿನ ಜನರಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವುದೇ ಸುಲಭವೆಂದು ತಂದೆಯವರು ಮೊದಮೊದಲು ನೆನಸಿದರು! ಹೌದು, ಕಷ್ಟಗಳಿದ್ದವು, ಆದರೆ ಆಶೀರ್ವಾದಗಳು ಎಷ್ಟೋ ಅಧಿಕವಾಗಿದ್ದವು! 1949ರಲ್ಲಿ ಕೊಲಂಬಿಯದಲ್ಲಿದ್ದ ಸಾಕ್ಷಿಗಳ ಸಂಖ್ಯೆ ನೂರಕ್ಕಿಂತಲೂ ಕಡಿಮೆಯಾಗಿತ್ತು, ಆದರೆ ಈಗ 1,00,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು ಅಲ್ಲಿದ್ದಾರೆ!
ಬೋಗಟಾದಲ್ಲಿ ಐದು ವರ್ಷಗಳ ಕಾಲ ಸೇವೆಸಲ್ಲಿಸಿದ ಬಳಿಕ, ತಂದೆತಾಯಿಯವರನ್ನು ಕಾಲೀ ನಗರಕ್ಕೆ ಕಳುಹಿಸಲಾಯಿತು. ಈ ಮಧ್ಯೆ ನಾನು 1952ರಲ್ಲಿ ಕೊಲಂಬಿಯದಲ್ಲಿದ್ದ ಒಬ್ಬ ಜೊತೆ ಮಿಷನೆರಿಯಾದ ರಾಬರ್ಟ್ ಟ್ರೇಸಿಯನ್ನು ವಿವಾಹವಾದೆ.b 1982ರ ವರೆಗೆ ನಾವು ಕೊಲಂಬಿಯದಲ್ಲೇ ಉಳಿದೆವು, ನಂತರ ನಮ್ಮನ್ನು ಮೆಕ್ಸಿಕೊಗೆ ನೇಮಿಸಲಾಯಿತು, ಆ ಸಮಯದಿಂದ ನಾವು ಇಲ್ಲಿಯೇ ಇದ್ದೇವೆ. ಕೊನೆಗೆ, 1968ರಲ್ಲಿ ಆರೋಗ್ಯಾರೈಕೆಗಾಗಿ ನನ್ನ ಹೆತ್ತವರು ಅಮೆರಿಕಕ್ಕೆ ಹಿಂದಿರುಗಬೇಕಾಯಿತು. ಪುನಃ ಆರೋಗ್ಯವಂತರಾದ ಮೇಲೆ, ಅವರು ವಿಶೇಷ ಪಯನೀಯರರಾಗಿ ಅಲಬಾಮದ ಮೋಬೀಲ್ ಕ್ಷೇತ್ರದ ಬಳಿ ಸೇವೆಸಲ್ಲಿಸಲಾರಂಭಿಸಿದರು.
ನಮ್ಮ ಹೆತ್ತವರ ಆರೈಕೆಮಾಡುವುದು
ವರ್ಷಗಳು ಗತಿಸಿದಂತೆ, ತಂದೆತಾಯಿಯವರಿಗೆ ಸೇವೆಯಲ್ಲಿ ಮೊದಲಿನಷ್ಟು ಮಾಡಲಿಕ್ಕೆ ಆಗಲಿಲ್ಲ, ಮತ್ತು ಅವರಿಗೆ ಹೆಚ್ಚೆಚ್ಚು ಬೆಂಬಲ ಹಾಗೂ ಗಮನದ ಅಗತ್ಯವಿತ್ತು. ವಿನಂತಿಯ ಮೇರೆಗೆ, ಎಡ್ವೀನ ಮತ್ತು ಬಿಲ್ ಬಳಿ ಅಂದರೆ ಅಲಬಾಮದ ಆ್ಯಥೆನ್ಸ್ ಕ್ಷೇತ್ರದಲ್ಲಿ ಪಯನೀಯರ್ ಸೇವೆಯನ್ನು ಮಾಡುವಂತೆ ಅವರು ನೇಮಿಸಲ್ಪಟ್ಟರು. ಇಡೀ ಕುಟುಂಬವು ಸೌತ್ ಕ್ಯಾರಲೈನದಲ್ಲಿ ಒಟ್ಟಿಗೆ ವಾಸಿಸುವುದೇ ಉತ್ತಮವೆಂದು ನನ್ನ ಅಣ್ಣನಾದ ಡೂಯಿ ಜೂನಿಯರ್ ನೆನಸಿದನು. ಆದಕಾರಣ, ತಂದೆತಾಯಿಯ ಜೊತೆಗೆ ಬಿಲ್ ತಮ್ಮ ಕುಟುಂಬವನ್ನು ಗ್ರೀನ್ವುಡ್ಗೆ ಸ್ಥಳಾಂತರಿಸಿದರು. ಈ ಪ್ರೀತಿಪರ ಹೊಂದಾಣಿಕೆಯಿಂದಾಗಿ ನನ್ನ ಹೆತ್ತವರ ಪರಾಮರಿಕೆ ಚೆನ್ನಾಗಿ ಆಗುತ್ತಿದೆ ಎಂಬ ಅರಿವು ತಾನೇ, ರಾಬರ್ಟ್ ಮತ್ತು ನಾನು ಕೊಲಂಬಿಯದಲ್ಲಿ ನಮ್ಮ ಮಿಷನೆರಿ ಸೇವೆಯನ್ನು ಮುಂದುವರಿಸುವಂತೆ ಸಹಾಯಮಾಡಿತು.
ನಂತರ 1985ರಲ್ಲಿ, ಪಾರ್ಶ್ವವಾಯುವಿನ ಕಾರಣ ತಂದೆಯವರಿಗೆ ಮಾತು ನಿಂತುಹೋಯಿತು ಮತ್ತು ಅವರು ಹಾಸಿಗೆ ಹಿಡಿದರು. ನಮ್ಮ ಹೆತ್ತವರಿಗೆ ಎಷ್ಟು ಉತ್ತಮವಾದ ಆರೈಕೆಯನ್ನು ನೀಡಬಲ್ಲೆವೆಂಬುದನ್ನು ಚರ್ಚಿಸಲು ನಾವು ಕುಟುಂಬವಾಗಿ ಕೂಡಿಬಂದೆವು. ತಂದೆಯ ಆರೈಕೆಮಾಡುವವರಲ್ಲಿ ಆಡ್ರಿ ಮುಖ್ಯಸ್ಥಾನವನ್ನು ವಹಿಸುವಳೆಂದು ತೀರ್ಮಾನಿಸಲಾಯಿತು, ಮತ್ತು ರಾಬರ್ಟ್ ಹಾಗೂ ನಾನು ಪ್ರತಿ ವಾರ ಉತ್ತೇಜನದಾಯಕ ಅನುಭವಗಳುಳ್ಳ ಪತ್ರವನ್ನು ಬರೆಯುವ ಮೂಲಕ ಮತ್ತು ಸಾಧ್ಯವಾದಷ್ಟು ಬಾರಿ ಭೇಟಿನೀಡುವ ಮೂಲಕ ಸಹಾಯ ಮಾಡಬೇಕೆಂದು ತೀರ್ಮಾನಿಸಲಾಯಿತು.
ತಂದೆಯವರಿಗೆ ನೀಡಿದ ಕೊನೆಯ ಭೇಟಿಯು ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರು ಸಾಧಾರಣವಾಗಿ ಮಾತಾಡುತ್ತಿರಲಿಲ್ಲ, ಆದರೆ ನಾವು ಮೆಕ್ಸಿಕೊಗೆ ಹಿಂದಿರುಗುತ್ತಿದ್ದೇವೆಂದು ಹೇಳಿದಾಗ, “ಅಡಿಯೋಸ್!” ಎಂಬ ಒಂದೇ ಒಂದು ಮಾತನ್ನು ಬಹಳಷ್ಟು ಪ್ರಯಾಸಪಟ್ಟು, ಭಾವುಕತೆಯಿಂದ ನುಡಿದರು. ನಮ್ಮ ಮಿಷನೆರಿ ಸೇವೆಯಲ್ಲಿ ಮುಂದುವರಿಯಬೇಕೆಂಬ ನಿರ್ಧಾರವನ್ನು ಅವರು ಬೆಂಬಲಿಸುತ್ತಿರುವುದಾಗಿ ನಮಗೆ ತಿಳಿದುಬಂತು. ಅವರು ಜುಲೈ 1987ರಲ್ಲಿ ತೀರಿಹೋದರು, ಒಂಬತ್ತು ತಿಂಗಳುಗಳ ತರುವಾಯ ತಾಯಿ ಸಹ ತೀರಿಕೊಂಡರು.
ನಮ್ಮ ಹೆತ್ತವರಿಗಾಗಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಇರುವ ಗಣ್ಯತೆಯನ್ನು ನನ್ನ ವಿಧವೆ ಅಕ್ಕನಿಂದ ಬಂದ ಈ ಪತ್ರವು ಸಾರಾಂಶಿಸುತ್ತದೆ. “ನನ್ನ ಸಮೃದ್ಧವಾದ ಕ್ರೈಸ್ತ ಪರಂಪರೆಯನ್ನು ನಾನು ಅಮೂಲ್ಯವೆಂದೆಣಿಸುತ್ತೇನೆ ಮತ್ತು ನಮ್ಮ ಹೆತ್ತವರು ನಮ್ಮನ್ನು ಭಿನ್ನವಾಗಿ ಬೆಳೆಸಿದ್ದರೆ ನಾನು ಹೆಚ್ಚು ಸಂತೋಷಿತಳಾಗಿರುತ್ತಿದ್ದೆ ಎಂಬ ಯೋಚನೆಯು ನನ್ನ ಮನಸ್ಸಿನಲ್ಲಿ ಒಮ್ಮೆಯಾದರೂ ಸುಳಿಯುವುದಿಲ್ಲ. ಬಲವಾದ ನಂಬಿಕೆ, ಸ್ವತ್ಯಾಗ, ಮತ್ತು ಯೆಹೋವನಲ್ಲಿ ಪೂರ್ಣ ಭರವಸೆಯ ವಿಷಯದಲ್ಲಿ ಅವರ ಮಾದರಿಯು, ಜೀವಿತದ ಕಷ್ಟಕರ ಸನ್ನಿವೇಶಗಳನ್ನು ತಾಳಿಕೊಳ್ಳುವಂತೆ ನನಗೆ ಸಹಾಯ ಮಾಡಿದೆ.” ಎಡ್ವೀನ ಕೊನೆಗೊಳಿಸಿದ್ದು: “ನಮ್ಮ ಪ್ರೀತಿಯ ದೇವರಾದ ಯೆಹೋವನನ್ನು ಸೇವಿಸುವುದರ ಸುತ್ತಲೂ ನಮ್ಮ ಜೀವಿತವನ್ನು ಕಟ್ಟುವಾಗ, ನಾವು ಸಂತೋಷವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಮ್ಮ ನಡೆನುಡಿಯಿಂದ ತೋರಿಸಿಕೊಟ್ಟ ಹೆತ್ತವರಿಗಾಗಿ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ.”
[ಅಧ್ಯಯನ ಪ್ರಶ್ನೆಗಳು]
a ಮಾರ್ಚ್ 1, 1988ರ ದ ವಾಚ್ಟವರ್ ಪ್ರತಿಕೆಯ, 11-12ನೆಯ ಪುಟಗಳನ್ನು ನೋಡಿರಿ.
b ಮಾರ್ಚ್ 15, 1960ರ ದ ವಾಚ್ಟವರ್ ಪತ್ರಿಕೆಯ 189-91ನೆಯ ಪುಟಗಳನ್ನು ನೋಡಿರಿ.
[ಪುಟ 22,23 ರಲ್ಲಿರುವಚಿತ್ರಗಳು]
ಫೌಂಟನ್ ಕುಟುಂಬ: (ಎಡದಿಂದ ಬಲಕ್ಕೆ) ಡೂಯಿ, ಎಡ್ವೀನ, ವಿನ್ನೀ, ಎಲಿಸಬೆತ್, ಡೂಯಿ ಜೂನಿಯರ್; ಬಲಕ್ಕೆ: ಹೆನ್ಷಲ್ ಅವರ ಲೌಡ್ಸ್ಪೀಕರ್-ಸಜ್ಜಿತ ಟ್ರಕ್ಕಿನ ಬಂಪರಿನ ಮೇಲೆ ಎಲಿಸಬೆತ್ ಮತ್ತು ಡೂಯಿ ಜೂನಿಯರ್ (1937); ಕೆಳಗೆ ಬಲಕ್ಕೆ: 16ನೆಯ ವಯಸ್ಸಿನಲ್ಲಿ ಪ್ಲ್ಯಾಕಾರ್ಡ್ ಕೆಲಸವನ್ನು ಮಾಡುತ್ತಿರುವ ಎಲಿಸಬೆತ್